Sunday, December 29, 2013

ವಿದೇಶಗಳಲ್ಲಿ ಅಹಿಂದ ಚಳವಳಿಯ ಬಗ್ಗೆ ಅಧ್ಯಯನ ಮಾಡಲಿದ್ದೇವೆ...

 ವಾರ್ತಾ ಭಾರತಿ ದೈನಿಕದಲ್ಲಿ ರವಿವಾರ 29 ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ  

‘ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರಿ ಶಾಸಕರ ಪ್ರವಾಸಕ್ಕೆ ಜಯವಾಗಲಿ’ ಎಂದು ಎಲ್ಲರೂ ವಿಮಾನನಿಲ್ದಾಣದೆಡೆಗಿನ ಬಸ್ ಹತ್ತುತ್ತಿದ್ದಾಗ, ಅವರೆಡೆ ಯಲ್ಲೇ ನುಸುಳಿ ಪತ್ರಕರ್ತ ಎಂಜಲು ಕಾಸಿಯೂ ಬಸ್ ಹತ್ತಿ ಬಿಟ್ಟ. ಪತ್ರಕರ್ತ ಎಂಜಲು ಕಾಸಿಯನ್ನು ಕಂಡದ್ದೇ, ಎಲ್ಲ ಶಾಸಕರು ಬೆಕ್ಕು ಕಂಡವರಂತೆ ಆಡಿ, ಜೋತಿಷಿಗಳು ಕೊಟ್ಟ ಲಿಂಬೆ ಹುಳಿಯನ್ನು ಕೈಯಲ್ಲಿ ಹಿಡಿದುಕೊಂಡರು. ‘‘ಸಾರ್ ಪ್ರವಾಸಕ್ಕೆ ಹೋಗುತ್ತಿದ್ದೀರಾ’’ ಎಂಜಲು ಕಾಸಿ ಹಲ್ಲುಗಿಂಜಿ ಕೇಳಿ ಬಿಟ್ಟ. ಶಾಸಕರಿಗೆ ಸಿಟ್ಟು ಬುರ್ರೆಂದು ಬಂತು. ಪ್ರವಾಸ ಹೋಗುತ್ತಿದ್ದವರನ್ನು ಪ್ರವಾಸ ಹೋಗುತ್ತಿದ್ದೀರಾ ಎಂದು ಕೇಳಿದರೆ ಅಪಶಕುನವಲ್ಲವೆ? ಯಾರೂ ಉತ್ತರ ಕೊಡಲಿಲ್ಲ.

‘‘ಈ ಪ್ರವಾಸದಲ್ಲಿ ಅಹಿಂದ ಶಾಸಕರಿಗೆ ಪ್ರತ್ಯೇಕ ಮೀಸಲಾತಿ ಇದೆಯಂತೆ ಹೌದಾ?’’ ಕಾಸಿ ಕೇಳಿ ಬಿಟ್ಟ. ‘‘ಅದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ. ನಾವು ರಾಜಕಾರಣಿಗಳೆಲ್ಲ ಒಂದೇ ಜಾತಿ...’’ ಮುಂದೆ ಕೂತಿದ್ದ ಶಾಸಕ ಹೇಳಿದ. ‘‘ರಾಜ್ಯದಲ್ಲಿ ಬರ ಇದೆ. ರಾಜ್ಯಪಾಲರು ಸಿಟ್ಟಾಗಿದ್ದಾರೆ. ಹೀಗಿರುವಾಗ ನೀವು ವಿದೇಶಕ್ಕೆ ಹೋಗಿ ಅದೇನು ಮಾಡ್ತೀರೀ?’’ ಕಾಸಿ ಕೇಳಿದ. ‘‘ನೋಡ್ರಿ. ಇದೊಂದು ರೀತಿ ಸಾಮಾಜಿಕ ನ್ಯಾಯ ಕೊಟ್ಟ ಹಾಗೆ. ನಾವು ಪ್ರಾಥಮಿಕ ಶಾಲೆಗೆ ಹೋಗು ತ್ತಿದ್ದಾಗ ನಮಗೆ ಪ್ರವಾಸದ ಸೌಲಭ್ಯ ಇರಲಿಲ್ಲ. ಪ್ರವಾಸಕ್ಕೆ ಮೀಸಲಾತಿ ಇರಲಿಲ್ಲ. ಇದೀಗ ಆ ಮೀಸಲಾತಿಯನ್ನು ಪಡೆದುಕೊಂಡು ಪ್ರವಾಸಗೈದು, ಅಲ್ಲಿ ವಿವಿಧ ಹೊಟೇಲ್‌ಗಳಲ್ಲಿ ಕುಳಿತು ಆ ದೇಶದ ರೈತರ ಕುರಿತಂತೆ ಅಧ್ಯಯನ ಮಾಡಲಿದ್ದೇವೆ...’’

‘‘ಸಾರ್ ಹೊಟೇಲ್‌ಗಳಲ್ಲಿ ಕುಳಿತು ಆ ದೇಶದ ರೈತರ ಅಧ್ಯಯನ ಹೇಗೆ ನಡೆಸಲಿದ್ದೀರಿ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೊಟೇಲ್‌ಗಳಲ್ಲಿ ವಿವಿಧ ಬಗೆಯ ಆಹಾರಗಳು ಒಂದೆಡೆ ಸಿಗುತ್ತದೆ. ರೈತರ ಬೆಳೆದ ಬೆಳೆಯಿಂದ ತಾನೆ ಹೊಟೇಲ್‌ನಲ್ಲಿ ಆಹಾರ ತಯಾರು ಮಾಡುವುದು. ಆ ಆಹಾರದ ರುಚಿಯನ್ನು ಸವಿದು, ಅಲ್ಲಿನ ರೈತರ ಕುರಿತಂತೆ ನಾವು ವರದಿಯನ್ನು ತಯಾರಿಸಲಿದ್ದೇವೆ...’’ ಅಷ್ಟರಲ್ಲಿ ಇನ್ನೊಬ್ಬ ಶಾಸಕ ನುಡಿದ ‘‘ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡಿ ಅಲ್ಲಿನ ನೀರಿನ ಬಗ್ಗೆ ಅಧ್ಯಯನ ಮಾಡಲಿದ್ದೇವೆ...’’

‘‘ಚಿಕನ್ ಸುಕ್ಕಾ, ಚಿಕನ್ ತಂದೂರಿ ತಿಂದು ಅಲ್ಲಿನ ಕೋಳಿ ಉದ್ಯಮಗಳ ಬಗ್ಗೆ ಅಧ್ಯಯನ ನಡೆಸಲಿ ದ್ದೇವೆ...’’ ‘‘ವಿವಿಧ ಮಾಲ್‌ಗಳಲ್ಲಿ ಶಾಪಿಂಗ್ ಮಾಡಿ, ಅಲ್ಲಿನ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ವರದಿ ತರಲಿದ್ದೇವೆ...’’ ತಮ್ಮ ಶಾಸಕರ ಅಧ್ಯಯನ ಕಂಡು ರೋಮಾಂಚನ ಗೊಡ ಕಾಸಿ. ಅಷ್ಟರಲ್ಲಿ ಕರಾವಳಿ ಶಾಸಕರೊಬ್ಬರು ಎದ್ದು ನಿಂತು ‘‘ಸಾರ್...ನಾನು ಕಡಲು ಕೊರೆತದ ಅಧ್ಯಯನಕ್ಕೆ ಹೋಗಲಿ ದ್ದೇನೆ....ಅಲ್ಲಿ ಕಡಲಿಗೆ ಹಾಕಿದ ಕಲ್ಲು ಗಳನ್ನು ಪರಿಶೀಲಿಸಿ, ಅದೇ ಕಲ್ಲುಗಳನ್ನು ಕರಾವಳಿಯ ಜನರ ತಲೆಗೂ ಹಾಕುವು ದರ ಬಗ್ಗೆ ಅಧ್ಯಯನ ನಡೆಸಲಿದ್ದೇನೆ....’’ ಎಂದರು.

ಕಾಸಿಗೆ ಸಂತೋಷವಾಯಿತು. ಕಡಲಿಗೆ ಕಲ್ಲು ಹಾಕಿ ವ್ಯರ್ಥ ಮಾಡುವುದರ ಬದಲು, ಜನರ ತಲೆಗೆ ಕಲ್ಲು ಹಾಕುವುದರೊಂದಿಗೆ ಜನರ ಸಮಸ್ಯೆಯನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಅರ್ಥಪೂರ್ಣವಾಗಿದೆ ಎಂದು ಅನ್ನಿಸಿತು. ‘‘ಸಾರ್, ಮತ್ತೇನೇನು ಅಧ್ಯಯನ ಮಾಡಲಿ ದ್ದೀರಿ...’’ ಕಾಸಿ ಇನ್ನಷ್ಟು ಆಸಕ್ತಿಯಿಂದ ಕೇಳಿದ. ‘‘ವಿದೇಶಗಳಲ್ಲಿ ಅಹಿಂದ ಚಳವಳಿ ಎನ್ನುವ ಕುರಿತಂತೆ ಅಧ್ಯಯನ ಮಾಡಲಿದ್ದೇವೆ ಕಣ್ರೀ...’’ ನೋಡಿದರೆ ಯಾರೋ ಹಿಂದುಳಿದ ಶಾಸಕನಂತೆ ಕಾಣುತ್ತಿದ್ದ. ‘‘ಆದರೆ ಅಲ್ಲಿ ಜಾತಿಗಳು ಇಲ್ಲವಲ್ಲ ಸಾರ್?’’ ಕಾಸಿ ಪ್ರಶ್ನಿಸಿದ.

‘‘ಕರ್ನಾಟಕದ ರಾಜಕಾರಣಿಗಳು ಕಾಲಿಟ್ಟಲ್ಲೆಲ್ಲ ಜಾತಿಗಳು ತನ್ನಷ್ಟಕ್ಕೆ ಸೃಷ್ಟಿಯಾಗಿ ಬಿಡುತ್ತವೆ ಕಣ್ರೀ...ಜಾತಿಗಳು ಸೃಷ್ಟಿಯಾದಾಕ್ಷಣ ಅಲ್ಲಿನ ರಾಜಕಾರಣಿಗಳಿಗೆ ನಾವು ಜಾತಿ ರಾಜಕಾರಣದ ಬಗ್ಗೆ ಒಂದು ಸುದೀರ್ಘ ಉಪನ್ಯಾಸ ನೀಡಿ, ಜಾತಿಗಳನ್ನು ರಾಜಕೀಯವಾಗಿ ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದರ ಕುರಿತಂತೆ ಮಾರ್ಗದರ್ಶನ ನೀಡುತ್ತೇವೆ... ಕರ್ನಾಟಕದ ಅಹಿಂದ ಚಳವಳಿಗೆ ವಿದೇಶಿ ಅಹಿಂದ ಚಳವಳಿಯ ಜೊತೆಗೆ ಸಂಪರ್ಕವನ್ನು ಬೆಸೆಯುತ್ತೇವೆ...’’

ಕಾಸಿ ರೋಮಾಂಚನ ಗೊಂಡ. ಇದೊಂದು ಅತ್ಯುತ್ತಮವಾದ ಪ್ರವಾಸ ಎನ್ನಿಸಿತು. ಕಾಸಿಗೆ ಇನ್ನೊಂದು ನೆನಪಾಯಿತು ‘‘ಸಾರ್...ಈಗ ವಿದೇಶ ಗಳಲ್ಲಿ ತಪಾಸಣೆ ಜಾಸ್ತಿ. ಅಲ್ಲಿ ನಿಮ್ಮನ್ನು ಬಟ್ಟೆ ಬಿಚ್ಚಿ ತಪಾಸಣೆ ಮಾಡಿದರೆ ಅದು ಅವಮಾನವಲ್ಲವೆ?’’
ಶಾಸಕರು ಪಕಪಕ ನಗತೊಡಗಿದರು ‘‘ಬಟ್ಟೆ ಬಿಚ್ಚುವುದಕ್ಕೆ ಅವರಿಗೆ ಸಾಧ್ಯವೇ ಇಲ್ಲ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ...’’ ಒಕ್ಕೊರಲಲ್ಲಿ ಹೇಳಿದರು. ಕಾಸಿಗೆ ಹೆಮ್ಮೆಯೆನಿಸಿತು ‘‘ಅದು ಹೇಗೆ ಸಾರ್? ಅವರಿಗೆ ನಿಮ್ಮ ಬಗ್ಗೆ ಅಷ್ಟು ಗೌರವ?’’

ಶಾಸಕನೊಬ್ಬ ಕಾಸಿಯನ್ನು ಎಳೆದು ತನ್ನ ಸೀಟಿನ ಪಕ್ಕ ಕೂರಿಸಿ ಹೇಳಿದ ‘‘ನೋಡಿ, ವಿದೇಶಗಳಲ್ಲಿ ಬಟ್ಟೆ ಬಿಚ್ಚಿಸುವುದು ಈಗೀಗ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾವು ಬಟ್ಟೆ ಹಾಕಿದರೆ ತಾನೆ ಅವರು ಬಟ್ಟೆ ಬಿಚ್ಚಿಸುವುದು. ವಿದೇಶಗಳಲ್ಲಿ ವಿಮಾನದಿಂದ ಇಳಿದದ್ದೇ ನಾವೇ ನಮ್ಮ ನಮ್ಮ ಬಟ್ಟೆಗಳನ್ನು ಬಿಚ್ಚಿ ಬ್ಯಾಗಿನೊಳಗೆ ಹಾಕಿಕೊಳ್ಳುತ್ತೇವೆ. ಇದರಿಂದಾಗಿ ಅವರಿಗೂ ರಗಳೆಯಿಲ್ಲ.

ನಮಗೂ ಬಟ್ಟೆ ಬಿಚ್ಚಿಸಿದ ಅವಮಾನವಾಗುವುದಿಲ್ಲ...ಆಗಾಗ ಈ ನಾಡಿನ ಪತ್ರಕರ್ತರೇ ನಮ್ಮ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಿರುವಾಗ, ನಾವೇಕೆ ವಿದೇಶಗಳಲ್ಲಿ ನಗ್ನರಾಗುವುದಕ್ಕೆ ಹೆದರಬೇಕು...ಇಷ್ಟಕ್ಕೂ ಶ್ರವಣಬೆಳಗೊಳದ ಬೆತ್ತಲೆ ಗೋಮಟನನ್ನು ನೋಡಲು ಇದೇ ವಿದೇಶಿಯರು ಬರುತ್ತಾರೆ. ನಾವು ಶ್ರವಣಬೆಳಗೊಳದವರು ಎಂದರೆ, ತಕ್ಷಣ ನಮ್ಮನ್ನು ಬಿಟ್ಟು ಬಿಡುತ್ತಾರೆ...’’

ಮತ್ತೊಬ್ಬ ಶಾಸಕ ಧ್ವನಿಗೂಡಿಸಿದ ‘‘ನೋಡಿ, ವಿದೇಶದಲ್ಲಿ ಬಟ್ಟೆ ಬಿಚ್ಚಿಸುವುದರ ಕುರಿತಂತೆ ಅನಗತ್ಯ ವಿವಾದ ಮಾಡುವುದು ತಪ್ಪು. ನಾವೇ ಬಟ್ಟೆಯನ್ನು ಸ್ವತಃ ಬಿಚ್ಚಿದರೆ ಅವರು ಬಿಚ್ಚಿಸುವ ಕೆಲಸವೂ ಉಳಿಯುತ್ತದೆ. ಉಭಯ ದೇಶಗಳ ನಡುವೆ ಸಂಬಂಧ ಹೆಚ್ಚುತ್ತದೆ....’’ ‘‘ನೀವು ವಿದೇಶಕ್ಕೆ ಹೋದರೆ ಕರ್ನಾಟಕದ ಜನತೆಗೆ ಬೇರೇನು ಲಾಭ ಸಾರ್?’’ ಕಾಸಿ ಇನ್ನಷ್ಟು ಕೆದಕಿದ.

‘‘ನೋಡ್ರಿ...ರಾಜ್ಯದೊಳಗೆ ಶಾಸಕರಿದ್ದರೆ ಅವರು ಆ ಅವ್ಯವಹಾರ ಈ ಅವ್ಯವಹಾರ ಎಂದೂ ಸಿಕ್ಕಿಹಾಕಿ ಕೊಂಡು ಸರಕಾರಕ್ಕೂ, ಜನರಿಗೂ ತಲೆನೋವು ಆಗುತ್ತಾರೆ. ಜನಪ್ರತಿನಿಧಿಗಳು ಓಡಾಡುವಾಗ ಅನವಶ್ಯಕ ಟ್ರಾಫಿಕ್ ಸಮಸ್ಯೆ. ನಾವು ವಿದೇಶಗಳಲ್ಲಿ ಅಧ್ಯಯನ ಮಾಡುತ್ತಾ ಇದ್ದರೆ ಜನರೂ ಒಂದಿಷ್ಟು ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗುತ್ತದೆ. ಸರಕಾರವೂ ಯಾವುದೇ ಅವ್ಯವಹಾರದಲ್ಲಿ ಸಿಲುಕಿಕೊಳ್ಳದೆ ನೆಮ್ಮದಿಯಿಂದ ಇರುತ್ತದೆ...’’ ಬೆಂಗಳೂರಿನ ಶಾಸಕನೊಬ್ಬ ವಿವರಿಸಿದ.

 ಎಂಜಲು ಕಾಸಿಗೆ ಸರಿ ಅನ್ನಿಸಿತು ‘‘ರಾಜ್ಯಪಾಲರು ನಿಮ್ಮ ಪ್ರವಾಸದಿಂದ ಸಿಟ್ಟಾಗಿದ್ದಾರಂತಲ್ಲ...’’ ಕೇಳಿದ.
‘‘ಪಾಪ...ಅವರನ್ನೂ ಯಾವುದಾದರೂ ವಿದೇಶಿ ರಾಯಭಾರಿಯಾಗಿ ರೆಕಮಂಡ್ ಮಾಡಿದ್ದಿದ್ರೆ ಅವರೂ ಪ್ರವಾಸಕ್ಕೆ ಬೆಂಬಲ ನೀಡುತ್ತಿದ್ದರೋ ಏನೋ...’’ ಶಾಸಕರು ಬೇಜಾರು ವ್ಯಕ್ತಪಡಿಸಿದರು. ಅಷ್ಟರಲ್ಲಿ ಸಿದ್ದರಾಮಯ್ಯ ಕೈಯಲ್ಲಿ ಬೆತ್ತ ಹಿಡಿದುಕೊಂಡು ಬಸ್ಸನ್ನೇರಿದರು ‘‘ಚುನಾವಣೆ ಹತ್ತಿರಬಂತು...ರಾಜ್ಯದ ಗ್ರಾಮ ಗ್ರಾಮಕ್ಕೆ ಪ್ರವಾಸ ಮಾಡಿ ಎಂದರೆ ನೀವಿಲ್ಲಿ....ವಿದೇಶ ಪ್ರವಾಸಕ್ಕೆ ಹೊರಟಿದ್ದೀರ...ಇಳೀರಿ ಕೆಳಗೆ’’ ಎಂದು ಸಿದ್ದರಾಮಯ್ಯನವರು ಉಗ್ರವಾಗಿ ಬೆತ್ತ ಬೀಸಿದರು.
ಶಾಸಕರೆಲ್ಲ ‘ಬದುಕಿದೆಯಾ ಬಡಜೀವ’ ಎಂದು ಕಿಟಕಿಯಿಂದ ಹಾರಿ, ಸಿಎಂ ವಿರುದ್ಧ ದೂರು ಹೇಳಲು ದಿಲ್ಲಿ ವಿಮಾನ ಹತ್ತಿದರು.
ರವಿವಾರ - ಡಿಸೆಂಬರ್-29-2013

Tuesday, December 24, 2013

ಮಕ್ಕಳು ಶಾಲೆಯಲ್ಲಿ ಕುಡಿದು ತೂರಾಡಿದರೆ?

 2010ರಲ್ಲಿ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಜೊತೆ ಸೇರಿ ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಖುಷಿಯಿಂದ ತೂರಾಡುತ್ತಾ ಪತ್ರಕರ್ತ ಎಂಜಲು ಕಾಸಿ ಮಾಡಿದ ಮಲ್ಯರ ಸಂದರ್ಶನವನ್ನು ಯಥಾವತ್ ನೀಡಲಾಗಿದೆ. ಜೂನ್20, 2010ರ ವಾರ್ತಾಭಾರತಿ ಪತ್ರಿಕೆಯ ಸಂಚಿಕೆಯಲ್ಲಿ ಇದು ಪ್ರಕಟವಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ವಿಜಯಮಲ್ಯ ಗೆದ್ದ ಸುದ್ದಿ ಕೇಳಿದ್ದೆ ಪತ್ರಕರ್ತ ಎಂಜಲು ಕಾಸಿ ಖುಷಿಯಿಂದ ತೂರಾಡತೊಡಗಿದ. ಕೊನೆಗೂ ನಮ್ಮ ನಾಯಕರು ‘ಪಕ್ಷ ಬೇರೆಯಾದರೇನು, ನಾವು ಕುಡಿಯುವ ಬಿಯರ್‌ನ ಬಣ್ಣ ಒಂದೇ ಅಲ್ಲವೇ ಎನ್ನುವ ಮಲ್ಯಾಧಾರಿತ ವೌಲ್ಯಗಳಿಗೆ ಶರಣಾದುದನ್ನು ಕಂಡು ಕಾಸಿ ಭಾವೋದ್ವೇಗಗೊಂಡ. ನೇರವಾಗಿ ವಿಜಯ ಮಲ್ಯ ಅವರ ನಿವಾಸದ ಬಾಗಿಲು ತಟ್ಟಿದರೆ, ಅಲ್ಲಿ ಹತ್ತು ಹಲವು ಗೋಪಿಕೆಯರ ನಡುವೆ ಅವರು ಬೆಳಗ್ಗೆ ಬೆಳಗ್ಗೆಯೇ ದೇಶಸೇವೆ ಮಾಡುತ್ತಿದ್ದರು.
 ಪತ್ರಕರ್ತ ಕಾಸಿಯನ್ನು ಕಂಡದ್ದೇ ‘‘ಬನ್ನಿ ಪತ್ರಕರ್ತರೇ ಬನ್ನಿ. ನಮ್ಮ ದೇಶ ಸೇವೆಗೆ ಕೈ ಜೋಡಿಸಿ’’ ಎಂದು ಕರೆದರು.
ಕಾಸಿ ಸಂಕೋಚಗೊಂಡ ಇಷ್ಟು ಬೆಳಗ್ಗೆ ಬೆಳಗ್ಗೆ ದೇಶಸೇವೆ ಮಾಡುವುದು ಪತ್ರಕರ್ತರಿಗೆ ಒಗ್ಗುವುದಿಲ್ಲ. ಸಾಧಾರಣವಾಗಿ ಈ ತರಹದ ದೇಶಸೇವೆಯನ್ನು ಪತ್ರಕರ್ತರು ಮಾಡುವುದು ಸಂಜೆಯ ಬಳಿಕ.
ಕಾಸಿ ಸಂಕೋಚದಿಂದ ನುಲಿಯುತ್ತಿರುವುದನ್ನು ಕಂಡ ಮಲ್ಯರು ‘‘ಸಂಕೋಚ ಬೇಡ. ದೇಶಸೇವೆಯಲ್ಲಿ ಎಲ್ಲರೂ ಒಂದಾಗಿ ಕೈ ಜೋಡಿಸಬೇಕು ಹೇಳಿ. ನಿಮಗೆ ಯಾವ ಬ್ರಾಂಡ್‌ನದ್ದು ಬೇಕು...’’
 ಕಾಸಿ ಕಷ್ಟದಿಂದ ನುಡಿದ ‘‘ದೇಶವನ್ನು ನೀವು ಚೀಲದಲ್ಲಿ ಹಾಕಿಕೊಟ್ಟರೆ, ಅದನ್ನು ನಾವು ಕೊಂಡು ಹೋಗಿ ಸಂಜೆ ಉಪ್ಪಿನ ಕಾಯಿಯ ಜೊತೆಗೆ ಸೇವೆ ಮಾಡುತ್ತೇವೆ.
 ಮಲ್ಯರಿಗೆ ಅರ್ಥವಾಯಿತು. ಕಾಸಿ ಹೇಳಿದ ‘‘ಸಾರ್, ನಿಮ್ಮ ಇಂಟರ್ಯೂ ಮಾಡ್ಲಿಕ್ಕೆ ಬಂದಿದ್ದೇನೆ....
 ಮಲ್ಯರು ಆರಾಮ ಕುರ್ಚಿಯಲ್ಲಿ ಸರಿಯಾಗಿ ಒರಗಿದರು. ಗೋಪಿಕೆಯರೆಲ್ಲ ಹಿಂದೆ ಸರಿದರು. ಕಾಸಿ ಕೇಳಿದ ‘‘ಸಾರ್, ಚುನಾವಣೆಯಲ್ಲಿ ನಿಮ್ಮನ್ನು ಜೆಡಿಎಸ್, ಬಿಜೆಪಿ ಜೊತೆಗೂಡಿ ಗೆಲ್ಲಿಸಿತಲ್ಲ...?’’
ಮಲ್ಯ ನಕ್ಕರು. ‘‘ನೋಡಿ... ಇದು ಸೆಕ್ಯುಲರ್ ದೇಶ. ಮದ್ಯ, ಬಿಯರ್‌ಗಳು ಜಾತ್ಯತೀತತೆಯ ಪ್ರತೀಕವಾಗಿದೆ. ಒಂದು ಬಾಟಲ್ ಬಿಯರ್‌ನ್ನು ಯಾವ ಜಾತಿಯವನೇ ಸೇವಿಸಲಿ, ಯಾವ ಧರ್ಮದವನೇ ಸೇವಿಸಲಿ... ಪರಿಣಾಮ ಮಾತ್ರ ಒಂದೇ, ಮದ್ಯ ಜಾತಿ ಭೇದ ಮಾಡುವುದಿಲ್ಲ. ಬ್ರಾಹ್ಮಣನಿಗೆ ಜಾಸ್ತಿ ಕಿಕ್, ಶೂದ್ರನಿಗೆ ಕಡಿಮೆ ಕಿಕ್ ಎಂಬ ವ್ಯತ್ಯಾಸವಿಲ್ಲ. ಯಾವ ಪಕ್ಷದವನೇ ಸೇವಿಸಲಿ, ಯಾವ ಧರ್ಮದವನೇ ಸೇವಿಸಲಿ ಬಿಯರ್‌ನ ಬಣ್ಣ ಮಾತ್ರ ಒಂದೇ ಅಲ್ಲವೇ.... ಆದುದರಿಂದ ನನ್ನ ಸೆಕ್ಯುಲರ್ ಪಕ್ಷವಾದ ಜೆಡಿಎಸ್ ಬೆಂಬಲಿಸಿತು.
ಕಾಸಿಗೆ ತುಂಬಾ ಖುಷಿಯಾಯಿತು. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ ‘‘ಸಾರ್...ಬಿಜೆಪಿ ಕೂಡ ನಿಮ್ಮನ್ನು ಬೆಂಬಲಿಸಿತಲ್ಲ...?
 ಮಲ್ಯರು ಒಂದು ಪೆಗ್ ಸೆಕ್ಯೂಲರ್ ಮದ್ಯವನ್ನು ಸುರಿದುಕೊಂಡು ಉತ್ತರಿಸಿದರು‘‘ನೋಡ್ರೀ...ಬಿಜೆಪಿ ರಾಮ್ ರಾಮ್ ಎನ್ನುತ್ತದೆ. ರಾಮ್ ಹೆಸರಿನಲ್ಲಿ ಮತಯಾಚಿಸುತ್ತದೆ. ನಾವು ರಮ್ ರಮ್ ಎನ್ನುತ್ತೇವೆ. ರಮ್ ಮತ್ತು ರಾಮ್ ನಡುವೆ ಒಂದು ‘ಎ’ ವ್ಯತ್ಯಾಸವಷ್ಟೇ ಇರುವುದು. ಆದುದರಿಂದ ಬಿಜೆಪಿಯ ನಿಲುವುಗಳಿಗೆ ತುಂಬಾ ಹತ್ತಿರವಿದ್ದೇವೆ ಎನ್ನುವ ದೃಷ್ಟಿಯಿಂದ ಬಿಜೆಪಿ ನಮ್ಮನ್ನು ಬೆಂಬಲಿಸಿತು. ಅಲ್ಲದೇ ಅಮಲಿಗೂ ಬಿಜೆಪಿಗೂ ಹತ್ತಿರದ ನಂಟು. ನಮ್ಮದು ಮದ್ಯದ ಅಮಲು, ಬಿಜೆಪಿಯದ್ದು ಧರ್ಮದ ಅಮಲು. ಎರಡೂ ಅಮಲು ತಾನೆ. ಎರಡನ್ನು ಸೇವಿಸಿದ ಮನುಷ್ಯರು ತಮ್ಮ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕನೆಂಬ ಕಾರಣದಿಂದ ಬಿಜೆಪಿ ನನ್ನನ್ನು ಬೆಂಬಲಿಸಿದೆ’’
ಮಲ್ಯರ ಉತ್ತರದಿಂದ ಒಂದು ಪೆಗ್ ವಿಸ್ಕಿಯನ್ನು ಹೊಟ್ಟೆಗೆ ಸುರಿದಂತಾಗಿ ಕಾಸಿ ಕೇಳಿದ ‘‘ಸಾರ್...ದೇಶಕ್ಕಾಗಿ ನೀವು ಏನೇನು ಸೇವೆ ಮಾಡಲಿದ್ದೀರಿ....’’
‘‘ತುಂಬಾ ಉತ್ತಮವಾದ ಪ್ರಶ್ನೆ’’ ಎನ್ನುತ್ತಾ ಮಲ್ಯರು ಕಾಸಿಯ ಬೆನ್ನು ತಟ್ಟಿದರು ‘‘ನೋಡಿ... ನಮ್ಮ ದೇಶದ ಬಡವರು ಒಂದು ಗುಟುಕು ಬಿಯರ್‌ಗಾಗಿ ಒದ್ದಾಡುತ್ತಿದ್ದಾರೆ. ಅವರೆಲ್ಲಾ ಸಾರಾಯಿ ಕುಡಿದು ಸರ್ವನಾಶವಾಗುತ್ತಿದ್ದಾರೆ. ಈ ದೇಶದ ಬಡ ಜನತೆ, ದುಡಿಯುವ ಜನತೆ ಎಲ್ಲಿಯವರೆಗೆ ತಣ್ಣಗೆ ಬಿಯರ್ ಕುಡಿದು ಚಿಪ್ಸ್ ತಿನ್ನುವ ಕಾಲ ಬರುವುದಿಲ್ಲವೋ ಅಲ್ಲಿಯವರೆಗೆ ನಾನು ನಿದ್ದೆ ಮಾಡುವುದಿಲ್ಲ. ಬಡಜನರಿಗೆ ಬಿಯರ್‌ನ್ನು ತಲುಪಿಸುವುದೇ ನನ್ನ ಸುವರ್ಣ ಭಾರತದ ಕನಸು...’’ ಎನ್ನುತ್ತಾ ಮಲ್ಯರು ಭಾವುಕರಾದರು. ಕಾಸಿಯು ಕಣ್ಣಲ್ಲೂ ಒಂದು ಹನಿ ಒಸರಿತು. ಮಲ್ಯ ಒಂದು ಕ್ಷಣ ತಡೆದು, ಮತ್ತೆ ಮುಂದುವರಿಸಿದರು ‘‘ರೇಷನ್ ಕಾರ್ಡ್‌ನಲ್ಲಿ ಸೀಮೆ ಎಣ್ಣೆ, ಸಕ್ಕರೆಯ ಜೊತೆಗೆ ಬಿಯರ್‌ನ್ನೂ ಪೂರೈಸಬೇಕು ಎನ್ನುವುದು ನನ್ನ ಬಹುದಿನದ ಕನಸು. ಹಸಿರು ಕಾರ್ಡ್‌ನವರಿಗೆ ಬಿಯರ್‌ನ್ನು ಅಕ್ಕಿಯ ಜೊತೆಗೆ ಪುಕ್ಕಟೆಯಾಗಿ ವಿತರಿಸಬೇಕು. ಉಳಿದ ಹಳದಿ ಕಾರ್ಡ್‌ನ ಬಡವರಿಗೆ ಕಡಿಮೆ ದರದಲ್ಲಿ ಬಿಯರ್‌ಗಳನ್ನು, ಮದ್ಯವನ್ನು ಪೂರೈಸುವುದು ನನ್ನ ದೊಡ್ಡ ಕನಸಾಗಿದೆ. ಈ ಕನಸಿಗೆ ದೇಶ ನನ್ನ ಜೊತೆ ಕೈ ಜೋಡಿಸಬೇಕು. ಸಾರ್ವಜನಿಕ ನಳ್ಳಿಗಳ ಮಾದರಿಯಲ್ಲೇ...ವಿವಿಧ ಗ್ರಾಮಪಂಚಾಯತ್‌ಗಳಲ್ಲಿ ಟ್ಯಾಂಕ್‌ಗಳ ಮೂಲಕ ಮದ್ಯವನ್ನು ಸಂಗ್ರಹಿಸಿ ಹಳ್ಳಿ ಹಳ್ಳಿಗಳಿಗೆ ಬಿಯರ್‌ಗಳನ್ನು ಪೂರೈಸುವ ಯೋಜನೆಯೂ ಇದೆ. ಆದರೆ ಅದಕ್ಕಾಗಿ ನಾನು ರಾಜ್ಯಸಭಾ ಸದಸ್ಯನಾದರೆ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ಮುಖ್ಯಮಂತ್ರಿಯಾದರೂ ಆಗಬೇಕು. ಆಗ ಆ ವ್ಯವಸ್ಥೆ ಮಾಡುವ ಉದ್ದೇಶ ಹೋದಿದ್ದೇನೆ...’’
ನಳ್ಳಿಯನ್ನು ತಿರುಗಿಸಿ, ಬಿಯರ್‌ನಲ್ಲಿ ಮುಖತೊಳೆಯುವ ಕನಸು ಕಾಣತ್ತಾ ಎಂಜಲು ಕಾಸಿ ಪ್ರಶ್ನಿಸಿದ ‘‘ಸಾರ್...ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು ನೀವು ಏನು ಮಾಡುತ್ತೀರಿ ಸಾರ್...’’
ಮಲ್ಯ ಗಂಭೀರರಾದರು ‘‘ಒಳ್ಳೆಯ ಪ್ರಶ್ನೆ. ಹಳ್ಳಿ ಹಳ್ಳಿಯ ಮಕ್ಕಳು ಶಾಲೆಗೆ ಹೋಗಬೇಕು. ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಅದಕ್ಕಾಗಿ ನಾನೂ ಕೆಲವು ಯೋಜನೆಗಳನ್ನು ಹಾಕಿದ್ದೇನೆ. ಮುಖ್ಯವಾಗಿ, ಮಕ್ಕಳಿಗೆ ಬಿಸಿಯೂಟ ಜೊತೆಗೆ ಒಂದು ಬಾಟಲ್ ಬಿಯರ್‌ನ್ನು ಉಚಿತವಾಗಿ ನೀಡಬೇಕು ಎಂಬ ಸಲಹೆಯನ್ನು ಕೇಂದ್ರ ಸರಕಾರಕ್ಕೂ, ರಾಜ್ಯ ಸರಕಾರಕ್ಕೂ ನೀಡಬೇಕೆಂದಿದ್ದೇನೆ...’’
ಕಾಸಿಗೆ ಸಂತೋಷದಿಂದ ಭೂಮಿ ಗರ ಗರ ತಿರುಗುತ್ತಿದೆ ಎಂದೆನ್ನಿಸಿತು. ‘‘ಸಾರ್...ಮಕ್ಕಳು ಶಾಲೆಯಲ್ಲಿ ಕುಡಿದು ತೂರಾಡಿದರೇ?’’ ಅನುಮಾನದಿಂದ ಕೇಳಿದ.
ಮಲ್ಯ ಹೇಳಿದರು‘‘ನೋಡ್ರಿ...ಬಿಸಿಯೂಟ ಕೊಟ್ರೆ ಮಕ್ಕಳ ಹೊಟ್ಟೆ ತುಂಬುತ್ತದೆ. ಆದರೆ ಇದರಲ್ಲಿ ಪಾಲಕರಿಗೆ ಆಕರ್ಷಣೆ ಏನಿದೆ? ಅದಕ್ಕೆ ಬಿಯರ್ ಬಾಟಲ್‌ಗಳನ್ನು ಕೊಟ್ರೆ , ಅದನ್ನು ಮಕ್ಕಳು ತಗೊಂಡು ಹೋಗಿ ತಮ್ಮ ತಂದೆ ತಾಯಿಗಳಿಗೆ ಕೊಡುತ್ತವೆ. ಕನಿಷ್ಠ ಬಿಯರ್‌ನ ಆಸೆಗಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಅಲ್ಲವೇ?’’
ಕಾಸಿಗೆ ಅಹುದಹುದೆನಿಸಿತು ‘‘ಆದರೆ ಸಾರ್.. ಮಕ್ಕಳೇ ಬಿಯರ್ ಬಾಟಲ್‌ನ್ನು ಓಪನ್ ಮಾಡಿದ್ರೆ...’’
 ಮಲ್ಯರು ನಕ್ಕರು ‘‘ಕಾಸಿಯವ್ರೆ...ನಮ್ಮ ಮಕ್ಕಳು ಎಳವೆಯಲ್ಲೇ ಸಾಕ್ಷರರಾದಂತೆ, ಬಿಯರ್‌ಗಳನ್ನು ಸೇವಿಸಿದರೆ ಅವರು ಹೆಚ್ಚು ಹೆಚ್ಚು ಜಾತ್ಯತೀತರಾಗುತ್ತಾ ಹೋಗುತ್ತಾರೆ. ಮೊದಲೇ ಹೇಳಿದ ಹಾಗೆ ಮದ್ಯಕ್ಕೆ ಜಾತಿ ಧರ್ಮ ಭೇದವಿಲ್ಲ. ಶಾಲೆಯಲ್ಲಿ ಮೇಷ್ಟ್ರುಗಳು ಇದನ್ನೇ ತಾವೇ ಕಲಿಸುವುದು. ನಮ್ಮ ಮದ್ಯ ಮತ್ತು ಬಿಯರ್ ಬಾಟಲ್‌ಗಳೂ ಇದನ್ನೇ ತಾನೇ ಕಲಿಸುವುದು. ನಮ್ಮ ಮದ್ಯ ಮತ್ತು ಬಿಯರ್ ಬಾಟಲ್‌ಗಳೂ ಇದನ್ನೇ ಕಲಿಸುವುದು ಕಾಸಿಯವ್ರೇ... ಹೇಗೂ ಬಿಸಿಯೂಟ ಸಂದರ್ಭದಲ್ಲಿ ಮೊಟ್ಟೆಯನ್ನು ಕೊಡುತ್ತಾರೆ. ಮೊಟ್ಟೆ ಮತ್ತು ಬಿಯರ್ ಒಳ್ಳೆ ಕಾಂಬಿನೆಷನ್ ಕಣ್ರೀ...’’
ಕಾಸಿ ಕೇಳಿದ ‘‘ಸಾರ್...ಕಾವೇರಿ ಸಮಸ್ಯೆಯನ್ನು ಕೇಂದ್ರದಲ್ಲಿ ಹೇಗೆ ಪರಿಹರಿಸುತ್ತೀರಿ ಸಾರ್...’’
   ಮಲ್ಯ ಒಂದು ಕ್ಷಣ ಯೋಚಿಸಿ, ಬಳಿಕ ನುಡಿದರು ‘‘ಬಹಳ ಸುಲಭ ಕಣ್ರೀ... ಕಾವೇರಿ ನೀರನ್ನು ರೈತರು ಕೃಷಿ ಬೆಳೆಯೋದಕ್ಕೆ ತಾನೇ ಕೇಳೋದು. ರೈತರ ಭೂಮಿಯನ್ನು ಬೃಹತ್ ಉದ್ಯಮಿಗಳಿಗೆ ಕೊಟ್ಟು ಬಿಡೋಣ. ಪರಿಹಾರ ಹಣಾಂತ ಒಂದಿಷ್ಟು ಕೋಟಿ ಕೊಟ್ರೆ... ಉಭಯ ರಾಜ್ಯಗಳ ರೈತರು ಕಾವೇರಿ ತಂಟೆಗೆ ಬರದೆ ಬಿಯರ್ ಕುಡ್ಕೊಂಡು ಆರಾಮವಾಗಿರ್ತಾರೆ. ನಾನು ಬೇಕಾದ್ರೆ ಕಾವೇರಿ ಹೆಸರಿನಲ್ಲಿ ಹೊಸ ಬ್ರಾಂಡ್‌ನ್ನು ಮಾರುಕಟ್ಟೆ ಬಿಡುತ್ತೇನೆ. ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡೋಣ...’’
‘ಅರೇ! ಕಾವೇರಿ ಸಮಸ್ಯೆಗೆ ಇಷ್ಟು ಸುಲಭವಾದ ಪರಿಹಾರವೇ!’ ಕಾಸಿ ರೋಮಂಚನಗೊಂಡು ಎಲ್ಲವನ್ನು ನೋಟ್ ಮಾಡ್ಕೊಂಡ.
ಅಷ್ಟರಲ್ಲಿ ಗೋಪಿಕೆಯೊಬ್ಬಳು ಒಂದು ದೊಡ್ಡ ಪ್ಯಾಕೆಟ್‌ನ್ನು ತಂದು ಎಂಜಲು ಕಾಸಿಯ ಜೋಳಿಗೆಯೊಳಗೆ ಹಾಕಿದರು. ಮಲ್ಯ ಹೇಳಿದರು ನೋಡಿ ಕಾಸಿಯವ್ರೆ... ಅದರಲ್ಲಿ ನಾನು ಈ ದೇಶವನ್ನು ಹಾಕಿದ್ದೇನೆ. ಸಂಜೆ ಹೋಗಿ ಸೇವೆ ಮಾಡಿ...’’
ಕಾಸಿ ಜೋಳಿಗೆಯೊಳಗೆ ಇಣುಕಿದ ನೋಡಿದರೆ ‘ವಿವಿಧ ಬ್ರಾಂಡ್‌ಗಳ ದೇಶಗಳಿದ್ದವು. ಕಾಸಿ ಸಂತೋಷದಿಂದ ‘‘ದೇಶ ಸೇವೆಯ ಮಾಡೋಣ... ದೇಶ ಸೇವೆಯ ಮಾಡೋಣ...’’ ಎಂಬ ಹಾಡು ಹಾಡುತ್ತಾ ಅಲ್ಲಿಂದ ಹೊರಟ.
ರವಿವಾರ ಜೂನ್ 20, 2010

Sunday, December 22, 2013

ಎರಡು ಶಾಲು ಜಾಸ್ತಿ ಉಂಟಂತೆ...ಬರ್ತೀರಾ ಮೂಡುಬಿದಿರೆಗೆ?

 ನುಡಿಸಿರಿ ಸಾಹಿತಿಗಳನ್ನು ಪತ್ರಕರ್ತ ಎಂಜಲು ಕಾಸಿ  ವಿಶೇಷ ಸಂದರ್ಶನವೊಂದನ್ನು ಮಾಡಿದ್ದಾರೆ.  ಇದು ಚೇಳಯ್ಯ ಅವರ  ವಾರ್ತಾಭಾರತಿಯ ಇಂದಿನ  ಬುಡಬುಡಿಕೆ ಅಂಕಣ

ಕರ್ನಾಟಕದ ಸಾಯಿತಿಗಳೆಲ್ಲ ತಲೆಗೆ ಮುಂಡಾಸು ಕಟ್ಟಿ, ಮೂಡುಬಿದಿರೆಯ ಬಸ್ ಹತ್ತುವುದನ್ನು ಕಂಡು ಪತ್ರಕರ್ತ ಎಂಜಲು ಕಾಸಿ ಚುರುಕಾದ. ಎಲ್ಲರ ಬಾಯಲ್ಲೂ ಸಿರಿ, ಸಿರಿ... ಕೇಳಿ ಬರುತ್ತಿತ್ತು. ಕುತೂಹಲದಿಂದ ಅವನೂ ಬಸ್ಸೇರಿದ. ಸಾಯಿತಿಗಳೆಲ್ಲ ಗರಿ ಗರಿ ಬಟ್ಟೆ ಹಾಕಿಕೊಂಡು, ಸ್ವರಚಿತ ಕವಿತೆಗಳನ್ನು ವಾಚಿಸುತ್ತಿದ್ದರು. ‘‘ಸಾಗುವ ಸಾಗುವ
ಮುಂದೆ ಮುಂದೆ ಸಾಗುವ
ಆಳ್ವರ ನುಡಿಸಿರಿಯಲ್ಲಿ
ಒಟ್ಟಾಗಿ ಸೇರುವ
ಶಾಲು ಹೊದಿಸಿಕೊಂಡು
ಸನ್ಮಾನ ಸ್ವೀಕರಿಸುವ
ಭೂರಿ ಭೋಜನವನ್ನು ಉಂಡು
ಆಳ್ವರನ್ನು ಭಜಿಸುವ’’
ನೋಡಿದರೆ ಯಾರೋ ಬಂಡಾಯ ಕವಿ. ಕಾಸಿಗೆ ಕುತೂಹಲವಾಯಿತು ‘‘ಸಾರ್, ನೀವು ಬಂಡಾಯ ಕವಿಯಲ್ವ...ಇದು ಯಾವ ಪ್ರಾಕಾರಕ್ಕೆ ಸೇರಿದ ಕವಿತೆ ಸಾರ್’’ ಬಂಡಾಯ ಕವಿಗಳು ಒಮ್ಮೆ ಬಸ್ಸಿನ ಹೊರಗಿರುವ ಆಕಾಶ ನೋಡಿ ಹೇಳಿದರು ‘‘ಇದು ಬಂಡಾಯ ಕವಿತೆ ಕಣ್ರೀ...ಮೂಡುಬಿದಿರೆಯಲ್ಲಿ ಮೋಹನ್ ಆಳ್ವರು ನಡೆಸುವ ಬಂಡಾಯ ಸಾಹಿತ್ಯಕ್ಕೆ ನಾವು ಕೈ ಜೋಡಿಸಲು ಹೊರಟಿದ್ದೇವೆ....ಮೇಲಿನ ಕವಿತೆ ಯನ್ನು ನಾನು ವಾಚಿಸಲಿದ್ದೇನೆ...’’

ಕಾಸಿಗೆ ತಲೆ ಬಿಸಿಯಾಯಿತು ‘‘ಸಾರ್ ಇದರಲ್ಲಿ ಬಂಡಾಯವೇನಿದೆ?’’ ‘‘ಸಾಹಿತಿಗಳ ಬಂಡಾಯ ಕಣ್ರೀ...ಬಂಡಾಯ ಸಾಹಿತ್ಯದ ವಿರುದ್ಧ ನಮ್ಮ ಬಂಡಾಯ... ಆದುದರಿಂದ ಇದೂ ಒಂದು ರೀತಿಯಲ್ಲಿ ಬಂಡಾಯವೇ....ಈ ಬಂಡಾಯದ ನೇತೃತ್ವವನ್ನು ಆಳ್ವರು ವಹಿಸಿಕೊಳ್ಳಲಿದ್ದಾರೆ...ಆಳ್ವರ ಕ್ರಾಂತಿ ಚಿರಾಯುವಾಗಲಿ...’’
‘‘ಸಾರ್...ಈ ಆಳ್ವರು ಯಾವ ವರ್ಗದ ಸಾಹಿತಿ ಸಾರ್...ಅವರೇನಾದ್ರೂ ಸಾಹಿತ್ಯ ಬರೆದಿದ್ದಾರಾ...’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ಪಂಪ ವಿಕ್ರಮಾರ್ಜುನ ವಿಜಯ ಬರೆದ ಹಾಗೆ...ರತ್ನಾಕರ ವರ್ಣಿ ಭರತೇಶ ವೈಭವ ಬರೆದ ಹಾಗೆ ನಾನು ಆಳ್ವೇಶ ವೈಭವ ಎನ್ನುವ ಕಾವ್ಯವನ್ನು ಬರೆಯಲಿದ್ದೇನೆ...ಒಂದಾನೊಂದು ಕಾಲದಲ್ಲಿ ಆಳ್ವರು ಬರೆದಿದ್ದಾರೆನ್ನಲಾದ ಕಾವ್ಯಗಳಿಗಾಗಿ ಸಂಶೋಧನೆ ನಡೆಯಲಿದೆ...ಹಾಗೆಯೇ ಆಳ್ವಾಸ್ ನುಡಿಸಿರಿ ಮತ್ತು ಬಂಡಾಯ ಹೊಸ ಒಲವುಗಳು ಎಂಬುದರ ಕುರಿತಂತೆ ವಿದ್ಯಾರ್ಥಿಗಳು ಥೀಸಿಸ್ ಬರೆಯಲಿದ್ದಾರೆ....’’

‘‘ಸಾರ್ ಆಳ್ವರಿಗೆ ಸಂಘಪರಿವಾರದ ಜೊತೆಗೆ ನಂಟಿದೆಯಂತೆ ಹೌದಾ?’’ ಕಾಸಿ ಕೇಳಿದ.
ಬಂಡಾಯ ಸಾಹಿತಿ ಅದರ ಸೂಕ್ಷ್ಮಗಳನ್ನು ವಿವರಿಸಿದರು ‘‘ಅದು ಸಾಹಿತ್ಯಕ ನಂಟು ಕಣ್ರಿ. ಸಂತುಲಿತವಾದ ಸಮಾಜದಲ್ಲಿ ಸೂಕ್ಷ್ಮಜ್ಞರಾಗಿರು ವಾಗ ಇದೆಲ್ಲ ಅತ್ಯಗತ್ಯ ಕಣ್ರೀ...’’

ಕಾಸಿ ಬೆಚ್ಚಿ ಬಿದ್ದ ‘‘ಸಂತುಲಿತವಾದ ಸಮಾಜದಲ್ಲಿ ಸೂಕ್ಷ್ಮಜ್ಞರಾಗಿರುವಾಗ ಅಂದರೆ ಏನು ಸಾರ್... ಅದನ್ನು ಕನ್ನಡಕ್ಕೆ ಅನುವಾದಿಸಿ ಸಾರ್...’’‘‘ನಿಮಗೆ ಅದೆಲ್ಲ ಅರ್ಥ ಆಗುವುದಿಲ್ಲ. ಅದು ಸಾಹಿತ್ಯಕ ನೆಲೆಯ ಭಾಷೆ. ಅದು ಆಳ್ವರಿಗೆ ಅರ್ಥವಾಗುತ್ತದೆ. ನೀವು ನುಡಿಸಿರಿಯಲ್ಲಿ ಭಾಗವಹಿಸಿ. ಬೇಕಾದರೆ ನಿಮಗೂ ಒಂದು ಸನ್ಮಾನ ಮಾಡುತ್ತಾರೆ... ಎರಡು ಶಾಲು ಜಾಸ್ತಿ ಬಿದ್ದಿದೆಯಂತೆ. ನಿಮಗೂ ಹೊದಿಸುತ್ತಾರೆ...ಆದರೆ ಆಳ್ವರನ್ನು ವರ್ಣಿಸಿ, ಬಣ್ಣಿಸಿ ಒಂದು ಲೇಖನವನ್ನು ಬರೆದು ನಿಮ್ಮ ಬರಹವನ್ನು ಮೊದಲು ಸಾರ್ಥಕ ಪಡಿಸಿಕೊಳ್ಳಬೇಕು...’’ ‘‘ಸಾರ್...ನರೇಂದ್ರ ಮೋದಿ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ನುಡಿಸಿರಿಯಲ್ಲಿ ಭಾಗವಹಿಸಿದ್ದಾರಲ್ಲ...’’

‘‘ಉಪನ್ಯಾಸದ ಸಂದರ್ಭದಲ್ಲಿ ನಿದ್ದೆ ಹೋಗಿರುವ ಜನರನ್ನು ಎಬ್ಬಿಸುವುದಕ್ಕಾಗಿ ಸೂಲಿಬೆಲೆಯವರನ್ನು ಕರೆಸಲಾಗಿದೆ. ಮುಖ್ಯವಾಗಿ ಸೂಲಿಬೆಲೆಯವರು ‘ಜಾಗೋ ಭಾರತ್’ ಚಳವಳಿ ಮಾಡಿ ನಿದ್ದೆ ಹೋದ ಹಲವರನ್ನು ಸಭೆಗಳಲ್ಲಿ ಎಬ್ಬಿಸಿದ್ದಾರೆ. ಸಮ್ಮೇಳನದಲ್ಲಿ ನಿದ್ದೆ ಮಾಡುವುದಕ್ಕಾಗಿಯೇ ಸಾಕಷ್ಟು ಜನ ಬರುತ್ತಾರೆ. ಅವರನ್ನು ‘ಜಾಗೋ’ ಎಂದು ಮೈಕ್‌ನಲ್ಲಿ ಕರೆದು ಎಬ್ಬಿಸುವ ಕೆಲಸವನ್ನು ಸೂಲಿಬೆಲೆಯವರಿಗೆ ಒಪ್ಪಿಸಲಾಗಿದೆ. ಇದನ್ನೇ ಅಪಾರ್ಥ ಮಾಡಿಕೊಂಡು ಪಾಪ, ನಮ್ಮ ಆಳ್ವರ ಮಗುವಿನಂತಹ ಮನಸ್ಸನ್ನು ನೋಯಿಸು ತ್ತಿದ್ದಾರೆ...’’

ಕಾಸಿಗೆ ನಿಜಕ್ಕೂ ಬೇಜಾರಾಯಿತು. ‘‘ಸಾರ್...ಈ ಬಾರಿ ಸಾಹಿತಿಗಳೆಲ್ಲಾ ಆಳ್ವಾಸ್ ನುಡಿಸಿರಿಯಲ್ಲಿ ಯಾವ ನಿರ್ಣಯಗಳನ್ನು ಮಾಡಲಿದ್ದಾರೆ?’’ ಕುತೂಹಲದಿಂದ ಕೇಳಿದ. ‘‘ನಿರ್ಣಯಗಳನ್ನು ಈಗಾಗಲೇ ನಾವು ಮಾಡಿ ಆಗಿದೆ. ನೋಡಿ ಇಲ್ಲಿದೆ...’’ ಎಂದು ಸಾಹಿತಿಗಳು ನಿರ್ಣಯಗಳ ಪಟ್ಟಿಯನ್ನು ಕೊಟ್ಟರು. ಎಂಜಲು ಕಾಸಿ ಓದತೊಡಗಿದ.
1. ಆಳ್ವರು ಈಗಾಗಲೇ ಕನ್ನಡ ನಾಡು ನುಡಿಗಾಗಿ ದುಡಿದು 80 ಕೋಟಿ ರೂಪಾಯಿ ಸಾಲದಲ್ಲಿದ್ದಾರೆ. ಸಾಹಿತಿಗಳಿಗಾಗಿ ಸಾಲ ಮಾಡಿರುವ ಅವರ ಸಾಲ ವನ್ನು ಸರಕಾರ ತಕ್ಷಣ ಮನ್ನಾ ಮಾಡಬೇಕು.
2. ಕನ್ನಡದ ಮನೆಗಾಗಿ ತಾವು ಸಾಲ ಸೋಲ ಮಾಡಿ ಬಾಡಿಗೆ ಮನೆಯಲ್ಲಿರುವುದರಿಂದ ತಕ್ಷಣ ಅವರಿಗೆ ಹತ್ತು ಎಕರೆ ಭೂಮಿಯಲ್ಲಿ ದೊಡ್ಡದೊಂದು ಜನತಾ ಮನೆಯನ್ನು ಕಟ್ಟಿಕೊಡ ಬೇಕು.
3. ನುಡಿಸಿರಿಗಾಗಿ ಜನರು ವಿಶೇಷ ಕಂದಾಯವನ್ನು ಆಳ್ವರಿಗೆ ಪ್ರತಿ ವರ್ಷ ಸಲ್ಲಿಸಬೇಕು.
4. ನುಡಿಸಿರಿಯನ್ನು ನಾಡಹಬ್ಬವಾಗಿ ಪರಿವರ್ತಿಸಿ, ದಸರಾದಂತೆ ಆಳ್ವರನ್ನು ಜಂಬೂ ಸವಾರಿಯಲ್ಲಿ ಮೆರವಣಿಗೆ ಮಾಡಿಸಬೇಕು.
5. ಸಾಹಿತಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅವರನ್ನು ಹೊರಲು ಸರಕಾರವು ನೂರು ಹೊಸ ಪಲ್ಲಕ್ಕಿಯನ್ನು ಕೊಡುಗೆಯಾಗಿ ನೀಡಬೇಕು.
6. ಆಳ್ವರು ಬಿಟ್ಟ ಎಂಜಲೆಲೆಯಲ್ಲಿ ನಾಡಿನ ಎಲ್ಲ ಸಾಹಿತಿಗಳೂ ಕಡ್ಡಾಯವಾಗಿ ಮಡೆಸ್ನಾನ ಮಾಡಬೇಕು. ಹಾಗೆ ಮಾಡದವರನ್ನು ಸಾಹಿತ್ಯವಲಯದಿಂದ ದೂರವಿಡಬೇಕು.
7. ಆಳ್ವರ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿಯನ್ನು ನೀಡಬೇಕು.
ಹೀಗೆ....ಎಂಜಲು ಕಾಸಿ ಒಂದೊಂದಾಗಿ ಓದುತ್ತಿರಲಾಗಿ ಬಸ್‌ನ ಕಂಡಕ್ಟರ್ ‘‘ರೈಟ್...ಪೋಯಿ...ಮೂಡುಬಿದಿರೆ...’’ ಎಂದು ವಿಸಿಲ್ ಊದಿದ.
ಬದುಕಿದೆಯಾ ಬಡ ಜೀವ ಎಂದು ಪತ್ರಕರ್ತ ಎಂಜಲು ಕಾಸಿ ಬಸ್ಸಿನ ಕಿಟಕಿಯಿಂದ ಹಾರಿ ಓಡತೊಡಗಿದ.

ರವಿವಾರ - ಡಿಸೆಂಬರ್-22-2013

Saturday, December 21, 2013

ಇಡೀ ಭಾರತವನ್ನು ಗುಜರಾತ್ ಮಾಡ್ತೀನಿ ಕಣ್ರೀ....

ಕಳೆದ ನವೆಂಬರ್ ತಿಂಗಳಲ್ಲಿ ನರೇಂದ್ರ ಮೋದಿ ಕರ್ನಾಟಕಕ್ಕೇ ಬಂದ ಸಂದರ್ಭದಲ್ಲಿ ಬರೆದ ಬುಡಬುಡಿಕೆ ಇದು.

ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರು ತಪ್ಪು ತಪ್ಪು ಇತಿಹಾಸಗಳನ್ನು ಹೇಳುತ್ತಿರುವುದು ಬಿಜೆಪಿಗೆ ಭಾರೀ ತಲೆನೋವಿನ ಸಮಸ್ಯೆಯಾಯಿತು.ಆರೆಸ್ಸೆಸ್ ಶಾಖೆಯಲ್ಲಿ ಕಲಿಸಿದ ಇತಿಹಾಸವನ್ನೇ ನರೇಂದ್ರ ಮೋದಿ, ಭಾಷಣದಲ್ಲೂ ಹೇಳುತ್ತಿರುವುದರಿಂದ ಈ ತಪ್ಪುಗಳಾಗುವುದು ಸಹಜವೇ ಆದರೂ, ಮುಂದಿನ ಪ್ರಧಾನಿ ಅಭ್ಯರ್ಥಿಯ ಭಾಷಣ ಹೀಗೆ ನಗೆಪಾಟಲಿಗೀಡಾದರೆ ಹೇಗೆ? ಎನ್ನುವುದು ಬಿಜೆಪಿಯನ್ನು ಕಾಡತೊಡಗಿತು. ಕರ್ನಾಟಕದ ಬೆಂಗಳೂರಿನಲ್ಲಿ ಇನ್ನು ಏನೋ ಹೇಳಲು ಹೋಗಿ ಇನ್ನೇನೋ ಆವಾಂತರ ಮಾಡಿದರೆ ಹೇಗೆ? ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆಗೂಡಿ ಚಿಂತನ ಶಿಬಿರ ನಡೆಸಿ, ನರೇಂದ್ರ ಮೋದಿಗೆ ಒಬ್ಬ ಇತಿಹಾಸ ಶಿಕ್ಷಕನನ್ನು ನೇಮಿಸುವುದೆಂದು ತೀರ್ಮಾನಿಸಲಾಯಿತು. ಕೊನೆಗೂ ಬೆಂಗಳೂರಿನ ಒಬ್ಬ ಬಡ ಇತಿಹಾಸ ಶಿಕ್ಷಕನನ್ನು ಆರಿಸಿ ನರೇಂದ್ರ ಮೋದಿಯಲ್ಲಿಗೆ ಕಳುಹಿಸಲಾಯಿತು.
ಬಡ ಇತಿಹಾಸ ಶಿಕ್ಷಕನೋ, ಹಸಿದ ತೋಳನ ಮುಂದೆ ಹೋಗುವ ಕುರಿಮರಿಯಂತೆ ನಡುಗುತ್ತಾ ನಡುಗುತ್ತಾ ಹೋದ.
ಮೋದಿ ತಲೆಯೆತ್ತಿದರು ‘‘ಹಾಂ...ಬೈಟಿಯೇ...ನನಗೆ ಇತಿಹಾಸ ಕಲಿಸಲು ಬಂದಿರುವ ಹೊಸ ಶಿಕ್ಷಕ ನೀನೇಯೋ? ಮೋದಿ ಗೊತ್ತಾ ನಿನಗೆ?’’
ಇತಿಹಾಸ ಶಿಕ್ಷಕ ತಕ್ಷಣ ಬಾಯಿ ತೆರೆದ ‘‘ಗೊತ್ತು ಸಾರ್..ಕರ್ನಾಟಕದ ಮನೆ ಮನೆಗೂ ಮೋದಿ ಗೊತ್ತು ಸಾರ್...’’
ನರೇಂದ್ರ ಮೋದಿ ರೋಮಾಂಚನಗೊಂಡರು. ಪ್ರಧಾನಿಯಾಗಿಯೇ ಬಿಟ್ಟೆ ಎನ್ನುವಂತೆ ಶಿಕ್ಷಕನನ್ನು ತಬ್ಬಿಕೊಂಡರು ‘‘ಕರ್ನಾಟಕದ ಮನೆ ಮನೆಗೂ ಗೊತ್ತಾ?ನಾನು ಅಷ್ಟೂ ಫೇಮಸ್ಸಾ?’’
ಶಿಕ್ಷಕ ಕಂಗಾಲಾದ...‘‘ಸಾರ್ ನಾನು ನೇತ್ರ ತಜ್ಞ ಮೋದಿಯ ಬಗ್ಗೆ ಮಾತನಾಡುತ್ತಾ ಇದ್ದೇನೆ ಸಾರ್...ಅವರು ಕರ್ನಾಟಕದಲ್ಲಿ ತುಂಬಾ ಫೇಮಸ್ಸು. ನೂರಾರು ಬಡವರಿಗೆ ಕಣ್ಣು ಕೊಟ್ಟಿದ್ದಾರೆ ಸಾರ್...’’
ನರೇಂದ್ರ ಮೋದಿ ಸಿಟ್ಟಾದರು ‘‘ರೀ...ನಿಮಗೆ ಕರ್ನಾಟಕದ ಇತಿಹಾಸ ಗೊತ್ತಿಲ್ಲರೀ...ಅವರು ಮಾತಡ್ತಾ ಇರುವುದು ನರೇಂದ್ರ ಮೋದಿಯ ಕುರಿತು. ಗುಜರಾತ್‌ನಲ್ಲಿ ಅಭಿವೃದ್ಧಿ ಮಾಡಿ ಜನರಿಗೆ ಕಣ್ಣು ನೀಡಿದ್ದೇನೆ. ನನ್ನ ಮಾತು ಕೇಳದವರ ಕಣ್ಣು ಕಿತ್ತಿದ್ದೇನೆ...ಇಡೀ ದೇಶದಲ್ಲಿ ಇರುವುದು ಒಬ್ಬನೇ ಮೋದಿ. ಅದು ನಾನು. ನರೇಂದ್ರಮೋದಿ...ಕರ್ನಾಟಕದ ಜನರು ನನ್ನನ್ನು ಮನೆಮನೆಯಲ್ಲಿ ನೆನೆದುಕೊಳ್ಳುತ್ತಾ ಇದ್ದಾರೆ...’’
‘‘ಸಾರ್ ಅವರು ಡಾಕ್ಟರ್ ಮೋದಿ ಸಾರ್. ನೀವು....ಆ್ಯಕ್ಟರ್ ಮೋದಿ ಸಾರ್...’’
‘‘ನನಗೂ ವಿದೇಶದ ದೊಡ್ಡ ದೊಡ್ಡ ಕಂಪೆನಿಗಳು ಡಾಕ್ಟರೇಟ್ ನೀಡಲು ಮುಂದೆ ಬಂದಿವೆ. ಚುನಾವಣೆ ಘೋಷಣೆಯಾದ ಬಳಿಕ ಅದನ್ನು ಕೊಡಿ ಎಂದಿದ್ದೇನೆ...ಇವನ್ಯಾವನೋ ನನ್ನ ಹೆಸರನ್ನಿಟ್ಚುಕೊಂಡು ಕರ್ನಾಟಕದಲ್ಲಿ ಪ್ರಚಾರ ಪಡೆದಿದ್ದಾನೆ ಅಷ್ಟೇ...’’ ಎಂದು ಹೂಂಕರಿಸಿದರು. ಇತಿಹಾಸ ಶಿಕ್ಷಕರು ತಲೆಯಾಡಿಸಿದರು.

‘‘ಇನ್ನು ಮುಂದೆ ಮೋದಿ ಅಂದ್ರೆ ಕರ್ನಾಟಕದಲ್ಲಿ ನಾನೇ...’’ ಘೋಷಿಸಿದರು ಮೋದಿ. ಶಿಕ್ಷಕ ತಲೆಯಾಡಿಸಿದ. ಶಿಕ್ಷಕ ಪಾಠ ಆರಂಭಿಸಿದ ‘‘ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು...’’
ಮೋದಿ ಅರ್ಧದಲ್ಲೇ ತಡೆದರು ‘‘ಗೊತ್ತು ಗೊತ್ತು... ತಾಳಿಕೋಟೆ ಕದನದಲ್ಲಿ ಹೊಯ್ಸಳರು ಅಲೆಕ್ಸಾಂಡರ್‌ನನ್ನು ಸೋಲಿಸಿದರು ಅಲ್ಲವೆ... ಯುದ್ಧದಲ್ಲಿ ಸೋತ ಅಲೆಕ್ಸಾಂಡರ್ ತುಂಗ ಭದ್ರಾ ನದಿಯ ತಟ್ಟದಲ್ಲಿ ಸತ್ತು ಬಿದ್ದ...’’
ಶಿಕ್ಷಕನಿಗೆ ಲಘು ಹೃದಯಾಘಾತವಾಗಿ ಬಿಟ್ಟಿತು ‘‘ಸಾರ್...ಹೂಂಕಾರ ರ್ಯಾಲಿಯಲ್ಲಿ ನೀವೇ ಹೇಳಿದ್ರಲ್ಲಾ ಸಾರ್...ಅಲೆಕ್ಸಾಂಡರ್‌ನನ್ನು ಬಿಹಾರಿಗಳು ಸೋಲಿಸಿದರು ಅಂತಾ...’’
ಮೋದಿಗೆ ಸಿಟ್ಟು ಬಂತು ‘‘ಏನ್ರೀ ನೀವು? ಇತಿಹಾಸ ಶಿಕ್ಷಕರು ಅಂತ ಹೇಳ್ತೀರಿ...ಇಷ್ಟು ಗೊತ್ತಿಲ್ವಾ? ಬಿಹಾರದಲ್ಲಿ ಬಿಹಾರಿಗಳು ಸೋಲಿಸಿದ್ರು, ಕರ್ನಾಟಕದಲ್ಲಿ ಕನ್ನಡಿಗರು ಸೋಲಿಸಿದ್ರು. ಇನ್ನು ಆಂಧ್ರಕ್ಕೆ ಹೋದಾಗ ಆಂಧ್ರದವರೂ ಸೋಲಿಸಲಿಕ್ಕಿದ್ದಾರೆ. ನನಗೆ ಓಟು ಹಾಕುವ ಮತದಾರರಿಗೆ ಮೋದಿಯ ಕೊಡುಗೆ ಇದು. ಹಾಗೆಯೇ ಚಂಗೇಸ್‌ಖಾನ್‌ನನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು....’’
‘‘ಸಾರ್...’’ ಶಿಕ್ಷಕ ಚೀರಿದ.
ಮೋದಿ ಬೆಚ್ಚಿ ಬಿದ್ದರು ‘‘ಏನಾಯ್ತು? ಸಿಬಿಐ ನೋರು ಬಂದ್ರಾ?’’
‘‘ಇಲ್ಲಾ ಸಾರ್...ಎಲ್ಲಿಯ ಚಂಗೇಸ್‌ಖಾನ್...ಎಲ್ಲಿಯ ಕಿತ್ತೂರು ಚೆನ್ನಮ್ಮ ಸಾರ್...’’ ಶಿಕ್ಷಕ ಅಳುತ್ತಾ ಕೇಳಿದ.
‘‘ನನಗೆ ಭಾಷಣ ಬರ್ದುಕೊಟ್ಟಿರೋ ಕಂಪೆನಿಯೋರು ಅದನ್ನೇ ಹೇಳಿದ್ದಾರೆ. ಹಾಗೆಯೇ ಸ್ವಾತಂತ್ರ ಹೋರಾಟಗಾರ ಹೊ. ವೆ. ಶೇಷಾದ್ರಿ ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುತ್ತಾ ಹುತಾತ್ಮರಾದರು....’’
ಮೋದಿಯ ಇತಿಹಾಸ ಪ್ರಜ್ಞೆಗೆ ಶಿಕ್ಷಕಕರು ಮೂಕ ವಿಸ್ಮಿತರಾದರು. ‘‘ಸಾರ್...ನೀವು ಇತಿಹಾಸವನ್ನು ಬದಲಿಸ್ತಾ ಇದ್ದೀರಾ’’
ನರೇಂದ್ರ ಮೋದಿ ಹಸನ್ಮುಖರಾದರು ‘‘ಹೂಂ. ಇತಿಹಾಸವನ್ನು ಬದಲಿಸುವುದಕ್ಕಾಗಿಯೇ ನಾನು ಪ್ರಧಾನಿಯಾಗಲು ಹೊರಟಿದ್ದೇನೆ....ಇಡೀ ಭಾರತವನ್ನೇ ನಾನು ಗುಜರಾತ್ ಮಾಡುತ್ತೇನೆ...’’
‘‘ಗುಜರಾತ್‌ನ್ನು ಭಾರತ ಮಾಡುವುದು ಯಾವಾಗ ಸಾರ್?’’
ಮೋದಿ ಸಿಟ್ಟಾದರು ‘‘ಏನ್ರೀ ಹೇಳುತ್ತಾ ಇದ್ದೀರಾ? ಗುಜರಾತ್‌ನೊಳಗೆ ಭಾರತ ಇದೆಯೇ ಹೊರತು, ಭಾರತದೊಳಗೆ ಗುಜರಾತ್ ಇಲ್ಲ. ಇಡೀ ಭಾರತ ನಮ್ಮನ್ನು ಗುಜರಾತ್ ಮಾಡಿ ಎಂದು ಅಳುತ್ತಾ ಇದೆ...ಅದಕ್ಕಾಗಿ ಒಂದು ಯೋಜನೆ ಹಾಕ್ತಾ ಇದ್ದೇನೆ.... ಭಾರತದ ಅಲ್ಲಲ್ಲಿ ಗುಜರಾತ್‌ನಲ್ಲಿ ನಡೆದಂತಹ ಹತ್ಯಾಕಾಂಡವನ್ನು ಹಮ್ಮಿಕೊಂಡು ಜನರ ಸ್ವಾಭೀಮಾನವನ್ನು ಎಚ್ಚರಿಸುತ್ತೇನೆ....ಭಾರತದ ಪ್ರತಿ ರೈಲುಗಳನ್ನು ಗೋದ್ರ ಮಾಡಿ...ಬಳಿಕ ಭಾರತವನ್ನು ಗೋಧ್ರೋತ್ತರ ಮಾಡುತ್ತೇನೆ...’’
‘‘ಕರ್ನಾಟಕದಲ್ಲಿ ಏನು ಮಾಡುತ್ತೀರಿ ಸಾರ್?’’
 ‘‘ಕರ್ನಾಟಕದಲ್ಲಿ ನನಗಾಗಿ ಈಗಾಗಲೇ ಇಲ್ಲಿನ ಪತ್ರಿಕೆಗಳು, ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇಡೀ ಕರ್ನಾಟಕದ ಇತಿಹಾಸವನ್ನು ಬದಲಿಸುತ್ತೇನೆ....ತಕ್ಷಶಿಲೆಯನ್ನು ಕರ್ನಾಟಕಕ್ಕೆ ತರುವೆ. ತಾಜ್‌ಮಹಲ್ ಆಗ್ರದಲ್ಲಿರುವುದಲ್ಲ, ಕರ್ನಾಟಕದಲ್ಲಿ ಎಂದು ಘೋಷಿಸುವೆ. ಶೇಕ್ಸ್‌ಪಿಯರ್ ಹುಟ್ಟಿದ್ದು ಕರ್ನಾಟಕದಲ್ಲಿ ಎಂದು ನಕಲಿ ಎನ್‌ಕೌಂಟರ್ ಮಾಡಿಸುವೆ....ಕರ್ನಾಟಕವನ್ನು ಅತಿಬೇಗದಲ್ಲಿ ಗುಜರಾತ್‌ನ ಹಾಗೆ ಅಭಿವೃದ್ಧಿಗೊಳಿಸುವೆ...ಗುಜರಾತ್‌ನಲ್ಲಿ 2000 ಮಂದಿ ಸತ್ತಿದ್ದರೆ, ಕರ್ನಾಟಕದಲ್ಲಿ ನಡೆಸುವ ಐತಿಹಾಸಿಕ ಹತ್ಯಾಕಾಂಡದಲ್ಲಿ....’’
‘‘ಸಾರ್...ನಿಲ್ಲಿಸಿ...’’ ಶಿಕ್ಷಕ ಚೀರಿದ. ‘‘ಇತಿಹಾಸ ಬದಲಿಸುವ ನಿಮ್ಮನ್ನೇ ಜನರು ಬದಲಿಸಿದರೆ ಏನು ಮಾಡುತ್ತೀರಿ...?’’
ಮೋದಿ ಸಿಟ್ಟಾದರು ‘‘ಏನ್ರೀ...ನಕಲಿ ಎನ್‌ಕೌಂಟರ್‌ನಲ್ಲಿ ಸಾಯ್ಬೇಕು ಅಂತ ಇದ್ದೀರೇನು...ನಾನೇ ಈ ಬಾರಿಯ ಪ್ರಧಾನಿ ಎಂದು ವಿದೇಶಿ ಕಂಪೆನಿಗಳು ಘೋಷಿಸಿ ಬಿಟ್ಟಿವೆ...’’
‘‘ಆದ್ರೆ ನಮ್ಮ ಪ್ರಜಾಸತ್ತೆ ಇನ್ನೂ ಘೋಷಿಸಿಲ್ಲ ಸಾರ್...’’
ಮೋದಿ ಕೆಂಡವಾದರು ‘‘ಯಾರ್ರಿ ನೀವು...ನಿಮ್ಮ ಹೆಸರೇನ್ರೀ?’’
‘‘ನನ್ನ ಹೆಸರು ಎಂಜಲು ಕಾಸಿ ಸಾರ್...ಕರ್ನಾಟಕದ ಬಡಪಾಯಿ ಪತ್ರಕರ್ತ...ನಿಮ್ಮ ಇಂಟರ್ಯೂ ಮಾಡೋದಕ್ಕೆ ಈ ವೇಷದಲ್ಲಿ ಬರಬೇಕಾಯಿತು...’’ ಎನ್ನುತ್ತಲೇ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ.

Wednesday, December 18, 2013

ಸಾಬರ ಹೋರಿ, ಹಿಂದೂ ಗೋವುಗಳನ್ನು ಚುಡಾಯಿಸಿದರೆ?

 
2008ರಲ್ಲಿ ಪ್ರಪ್ರಥಮ ಬಾರಿ ಬಿಜೆಪಿ ಸರಕಾರ ಅಧಿಕಾರ ಹಿಡಿದ ಸಂದರ್ಭದ ಯಡಿಯೂರಪ್ಪ ಸ್ಥಿತಿಯನ್ನು ಈ ಬುಡಬುಡಿಕೆ ಹೇಳುತ್ತದೆ. ಪತ್ರಕರ್ತ ಎಂಜಲು ಕಾಸಿ ಅದನ್ನು ಇಲ್ಲಿ ಮತ್ತೊಮ್ಮೆ ನಿಮ್ಮೆಂದಿಗೆ ಹಂಚಿಕೊಂಡಿದ್ದಾನೆ.

ಹೊಸ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದದ್ದೇ, ಎಲ್ಲ ಪತ್ರಕರ್ತರಂತೆ ಎಂಜಲು ಕಾಸಿಯೂ ಅತ್ಯುತ್ಸಾಹದಿಂದ ಕುಣಿಯ ಹತ್ತಿದ. ನೂತನ ಸಚಿವ ಸಂಪುಟ ಪ್ರಮಾಣವಚನ ದಿನ ಹೊಸ ಬಟ್ಟೆ ಹಾಕಿ, ಮದುಮಗನಂತೆ ಓಡಾಡಿದ. ಇಂದಿನ ಮುಂಜಾವಿನ ಸೂರ್ಯನ ಬಣ್ಣ ಕೇಸರಿಯಾಗಿರುವುದನ್ನು ‘ಸ್ಕೂಪ್’ ವರದಿಯಾಗಿ ಬರೆದ. ಎಲ್ಲರ ಮನೆಗಳಲ್ಲಿ ಗೋವು ಎರಡು ಸೇರು ಹಾಲು ಜಾಸ್ತಿಕೊಟ್ಟವು ಎಂದು ಕೊರೆದ. ಆ ಹಾಲು ಬಿಳಿಯಾಗಿರದೆ, ಕೇಸರಿಯಾಗಿತ್ತು ಎನ್ನುವುದನ್ನು ಜೊತೆಗೆ ಸೇರಿಸಿದ. ಗೋಮಾತೆಗಳೆಲ್ಲ ಬೆಳಗ್ಗೆ ಬೇಗನೇ ಎದ್ದು, ಸ್ನಾನ ಮಾಡಿ, ಚಡ್ಡಿ ಹಾಕಿ ‘ಸದಾ ವತ್ಸಲೇ...’ ಎಂದು ಆರೆಸ್ಸೆಸ್ ರಾಷ್ಟ್ರಗೀತೆಯನ್ನು ಹಾಡಿ, ಬಿಜೆಪಿ ಸರಕಾರಕ್ಕೆ ಶುಭ ಕೋರಿದವು ಎನ್ನುವುದನ್ನು ಬಾಕ್ಸ್ ಮಾಡಿದ. ರಾಜ್ಯದ ಎಲ್ಲ ಬಡವರ ಮನೆಗಳಲ್ಲಿ ಪ್ರಮಾಣ ವಚನದ ದಿನ ‘ಕೇಸರಿ’ ಬಾತ್‌ನ್ನೇ ಮಾಡುವ ಮೂಲಕ ಹೊಸ ಸರಕಾರವನ್ನ ಸ್ವಾಗತಿಸಲಾಯಿತು ಎಂದು ಸೈಡ್ ಹೆಡ್ಡಿಂಗ್ ಕೊಟ್ಟ. ಹೀಗೆ ಎಂಜಲು ಕಾಸಿ ಸೇವೆ ಮಾಡುತ್ತಿರಲಾಗಿ, ಖಾತೆಗಾಗಿ ಬಿಜೆಪಿಯೊಳಗೆ ಕೆಲವರು ಕ್ಯಾತೆ ತೆಗೆಯಲು ಶುರು ಮಾಡಿದ್ದೇ ಕಂಗಾಲಾಗಿ ಬಿಟ್ಟ. ನೇರವಾಗಿ ಯಡಿಯೂರಪ್ಪರ ಬಳಿಗೆ ಓಡಿ ‘‘ಸಾರ್... ಇದೇನು ಸಾರ್... ಹೀಗೆಲ್ಲ ಸರಕಾರದ ಆರಂಭದಲ್ಲೇ ಜಗಳ ಮಾಡಿದ್ರೆ... ನಾವು ಪತ್ರಕರ್ತರ ಮಾರ್ಯಾದೆ ಏನಾಗಬೇಕು ಸಾರ್... ಹೇಗಾದ್ರು ಮಾಡಿ... ಜಗಳ ನಿಲ್ಲಿಸಿ ಸಾರ್...’’ ಎಂದ. ಯಡಿಯೂರಪ್ಪ ಹಣೆಯನ್ನು ಒರೆಸುತ್ತಾ ಹೇಳಿದರು. ‘‘ಅವಸರ ಮಾಡಬ್ಯಾಡ್ರಿ ಎಂಜಲು ಕಾಸಿ. ನಮ್ಮ ಪಕ್ಷದಲ್ಲಿ ಎಷ್ಟು ಜನ ಶಾಸಕರಿದ್ದಾರೋ ಅವರೆಲ್ಲರಿಗೂ ಸಚಿವ ಸ್ಥಾನ ಕೊಟ್ಟು ಬಿಡ್ತೀವಿ. ಅದಕ್ಕಾಗಿ ಹೊಸ ಖಾತೆಗಳನ್ನು ತೆರ್ದಿದ್ದೀನಿ. ಸ್ಯಾಂಪಲ್ ಬೇಕಾದರೆ ಇಲ್ಲಿದೆ ನೋಡಿ...’’ ಎಂದು ತಾನೇ ಖುದ್ದು ತಯಾರಿಸಿದ ಹೊಸ ಖಾತೆಗಳ ವಿವರಗಳನ್ನು ಎಂಜಲು ಕಾಸಿಗೆ ನೀಡಿದರು. ಅದರ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ.
                ***

ಗ್ರಹ ಸಚಿವ: ಗೃಹ ಸಚಿವರ ಕೆಲಸ ಭದ್ರತೆಗೆ ಸಂಬಂಧ ಪಟ್ಟದ್ದಾದರೆ, ಗ್ರಹ ಸಚಿವರ ಕೆಲಸ ನವಗ್ರಹಗಳನ್ನು ನಿಯಂತ್ರಿಸುವುದು. ರಾಹು-ಕೇತು ಮೊದಲಾದ ಕ್ಷುದ್ರ ಗ್ರಹಗಳಿಂದ ನಾಡಿಗೆ ಬರುವ ಆಪತ್ತುಗಳಿಂದ ರಕ್ಷಿಸಲು ಈ ಖಾತೆಯನ್ನು ತೆರೆಯಲಾಗಿದೆ. ಮಾಟ ಮಂತ್ರಗಳಂತಹ ಅಪರಾಧಗಳನ್ನು ಗ್ರಹ ಖಾತೆಯ ವ್ಯಾಪ್ತಿಗೇ ಸೇರಿಸಲಾಗುತ್ತದೆ. ಮುಖ್ಯವಾಗಿ ದೇವೇಗೌಡರ ಮಾಟ ಮಂತ್ರಗಳ ಪ್ರಭಾವದಿಂದ ರಕ್ಷಿಸಲು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಈ ಗ್ರಹ ಖಾತೆಯ ವತಿಯಿಂದ ನಾಲ್ಕು ಮಂತ್ರವಾದಿಗಳನ್ನು ಅಂಗರಕ್ಷಕರಾಗಿ ನೇಮಕ ಮಾಡಲಾಗುತ್ತದೆ. ಬ್ಲಾಕ್ ಕಮಾಂಡೋಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಇವರಿಗೆ ನೀಡಲಾಗುತ್ತದೆ. ಭಯೋತ್ಪಾದಕರು ಮುಂದಿನ ದಿನಗಳಲ್ಲಿ ಮಾಟ ಮಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸುವ ಸಾಧ್ಯತೆಯಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಮಂತ್ರವಾದಿಗಳನ್ನು ಸೇರಿಸಲಾಗುತ್ತದೆ. ವಿಧಾನಸೌಧಕ್ಕೆ ಮಾಟ ಮಾಡುವ ಸಾಧ್ಯತೆ ಇರುವುದರಿಂದ, ಇಡೀ ವಿಧಾನಸೌಧ ಪರಿಸರವನ್ನು ಮಾಟ ನಿಷೇಧಿತ ವಲಯವಾಗಿ ಪರಿವರ್ತಿಸಲಾಗುವುದು. ಮತ್ತು ಇದರ ಹೊಣೆಗಾರಿಕೆಯನ್ನು ಗ್ರಹ ಸಚಿವರಿಗೆ ನೀಡಲಾಗುವುದು. ಓಂ ಮಿನಿಸ್ಟರ್: ಓಂ ಮಿನಿಸ್ಟರ್ ಕೆಲಸ, ಈ ನಾಡಿನ ಸಂಸ್ಕೃತಿಯನ್ನು ರಕ್ಷಿಸುವುದು. ಈ ಖಾತೆಯ ಮೂಲಕ ನಾಡಿನ ಜನತೆಗೆ ಪುಕ್ಕಟೆಯಾಗಿ ತ್ರಿಶೂಲಗಳನ್ನು ಹಂಚಲಾಗುತ್ತದೆ. ರೇಷನ್ ಅಂಗಡಿಗಳ ಮೂಲಕ ಕುಂಕುಮವನ್ನು ವಿತರಿಸುವ ಕೆಲಸವನ್ನು ಈ ಖಾತೆ ಮಾಡುತ್ತದೆ. ಈ ಖಾತೆಯ ಮೂಲಕ, ಅರ್ಧದಲ್ಲೇ ಶಾಲೆ ತೊರೆದ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ತರಬೇತಿಗಳನ್ನು ನೀಡಲಾಗುತ್ತದೆ. ಹಣೆಗೆ ಕುಂಕುಮ ಧರಿಸಿ, ತ್ರಿಶೂಲಗಳಿಂದ ವಿವಿಧ ರೀತಿಯಲ್ಲಿ ಇರಿಯುವುದನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಯಾವುದೇ ಅನಸ್ತೇಶಿಯಾ ಬಳಸದೇ ತ್ರಿಶೂಲದ ಮೂಲಕ ಗರ್ಭಿಣಿ ಹೆಂಗಸಿನ ಮಗುವನ್ನು ಹೊರಗೆ ತೆಗೆಯುವುದು ಹೇಗೆ ಎನ್ನುವುದನ್ನೂ ತಿಳಿಸಿ ಕೊಡಲಾಗುತ್ತದೆ. ದರೋಡೆ, ಹಲ್ಲೆ, ಕೊಲೆ, ಅತ್ಯಾಚಾರ ಇವುಗಳ ಸಾಂಸ್ಕೃತಿಕ ಆಯಾಮವನ್ನು ಈ ಖಾತೆಯ ಮೂಲಕ ಪರಿಚಯಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಸಾಂಸ್ಕೃತಿಕ ಕಾರ್ಯಕರ್ತರ ಮೂಲಭೂತ ಹಕ್ಕುಗಳ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದರೆ, ಅದನ್ನು ತಡೆಯುವುದು ಓಂ ಮಿನಿಸ್ಟರ್ ಕೆಲಸವಾಗಿದೆ.
 ಗಿಣಿ ಖಾತೆ: ಜೋತಿಷ್ಯ ಭಾರತದ ಪುರಾತನವಾದ ವಿಜ್ಞಾನವಾಗಿದ್ದು, ಇದನ್ನು ಮೇಲೆತ್ತಲು ಗಿಣಿ ಖಾತೆಯನ್ನು ರಚಿಸಲಾಗಿದೆ. ಗಿಣಿ ಶಾಸ್ತ್ರ ಹೇಳುವ ಎಲ್ಲ ಜ್ಯೋತಿಷಿಗಳನ್ನು ಗುರುತಿಸಿ, ಅವರನ್ನು ಅಧಿಕೃತವಾಗಿ ನೇಮಿಸಲಾಗುವುದು. ಕಾಲೇಜುಗಳಲ್ಲಿ ಗಣಿತಶಾಸ್ತ್ರವಿದ್ದಂತೆ ಗಿಣಿಶಾಸ್ತ್ರವನ್ನು ಕಲಿಸಲಾಗುತ್ತದೆ. ಇದಕ್ಕಾಗಿ ಅರ್ಹ ಗಿಣಿಶಾಸ್ತ್ರಜ್ಞ ಜೋತಿಷಿಗಳನ್ನು ಗುರುತಿಸಿ ಅವರನ್ನು ಈ ಗಿಣಿ ಇಲಾಖೆಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಹಸ್ರಾರು ಗಿಣಿಗಳನ್ನು ಹಿಡಿದು ಅವುಗಳಿಗೆ ಗಿಣಿ ಶಾಸ್ತ್ರದ ಕುರಿತಂತೆ ತರಬೇತಿ ನೀಡಲು ಗಿಣಿ ಇಲಾಖೆಯ ಮೂಲಕ ಗಿಣಿ ಶಾಸ್ತ್ರಜ್ಞರನ್ನು ಆಹ್ವಾನಿಸಲಾಗುತ್ತದೆ. ಹಾಗೆಯೇ ಕಳೆದ ಚುನಾವಣೆಯಲ್ಲಿ ಚುನಾವಣಾ ಪೂರ್ವ ಭವಿಷ್ಯ ಹೇಳಿದ ಪ್ರಮುಖ ಪತ್ರಕರ್ತರನ್ನು ಗಿಣಿ ಶಾಸ್ತ್ರ ಪಾಠ ಹೇಳಲು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸಲಾಗುತ್ತದೆ. ಗಿಣಿ ಸಾಕಣೆ ಉದ್ಯಮವನ್ನು ಆರಂಭಿಸಿ, ಗಿಣಿ ವಂಶವನ್ನು ಹೆಚ್ಚಿಸುವುದಕ್ಕೆ ಈ ಇಲಾಖೆಯ ಮೂಲಕ ಪ್ರಯತ್ನಿಸಲಾಗುತ್ತದೆ. ತಜ್ಞ ಗಿಣಿಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಗಿಣಿಯನ್ನು ನಾಡ ಪಕ್ಷಿಯಾಗಿ ಈ ಇಲಾಖೆಯ ಮೂಲಕ ಘೋಷಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಅತ್ಯುತ್ತಮ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದ ಪತ್ರಕರ್ತರಿಗೆ ಈ ಇಲಾಖೆಯ ಮೂಲಕ ‘ಗಿಣಿ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತದೆ.
 ಗೋ ಖಾತೆ: ಈ ವಿಶೇಷ ಖಾತೆಯ ಮೂಲಕ ಗೋ ಅಭಿವೃದ್ಧಿಯನ್ನು ಮಾಡುವುದು ಮುಖ್ಯ ಉದ್ದೇಶ. ಗೋವುಗಳ ಪೂಜನೀಯವಾದದ್ದು. ಆದುದರಿಂದ ಅವುಗಳು ಬೆತ್ತಲೆ ತಿರುಗಬಾರದು. ಯಾಕೆಂದರೆ ನಗ್ನವಾಗಿ ಅವುಗಳು ತಿರುಗಾಡುವುದನ್ನು ಕಲಾವಿದ ಎಂ.ಎಫ್.ಹುಸೇನ್ ಏನಾದರೂ ನೋಡಿದರೆ ಆತ ಅದರ ನಗ್ನ ಚಿತ್ರ ಬಿಡಿಸಿ, ಗೋ ಮಾತೆಗೆ ಅವಮಾನ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ನಾಡಿನ ಎಲ್ಲ ಗೋವುಗಳಿಗೆ ಈ ಖಾತೆಯ ಮೂಲಕ ಚೆಡ್ಡಿಗಳನ್ನು ಹೊಲಿಸಿಕೊಡಲಾಗುವುದು. ಅಷ್ಟೇ ಅಲ್ಲ ಗೋಮಾಂಸ ಭಕ್ಷಕ ರಾಕ್ಷಸರಿಂದ ರಕ್ಷಿಸಿಕೊಳ್ಳಲು ಅವುಗಳಿಗೆ ಲಾಟಿ ಕವಾಯತುಗಳನ್ನು ಹೇಳಿ ಕೊಡಲಾಗುವುದು. ಅದಕ್ಕಾಗಿ ಪ್ರತಿ ಊರಿನಲ್ಲಿ ಶಾಖೆಯನ್ನು ರಚಿಸಲಾಗುವುದು. ಗೋವಿನ ಆರೋಗ್ಯ ಅತಿ ಮುಖ್ಯ. ಅದಕ್ಕಾಗಿ ಗೋವುಗಳಿಗೆ ಯೋಗ ಶಿಕ್ಷಣವನ್ನು ಕಲಿಸಲಾಗುವುದು. ಗೋವನ್ನು ಸಾಕುವವರು ಎಲ್ಲರೂ ಕಡ್ಡಾಯವಾಗಿ ತಮ್ಮ ತಮ್ಮ ಗೋವುಗಳನ್ನು ಯೋಗ ಶಿಕ್ಷಣ ಶಾಲೆಗೆ ಸೇರಿಸತಕ್ಕದ್ದು. ಅದರ ಖರ್ಚನ್ನು ಗೋ ಖಾತೆಯ ಮೂಲಕವೇ ಭರಿಸಲಾಗುತ್ತದೆ. ಗೋವುಗಳು ಯಾವತ್ತೂ ಅಪೌಷ್ಠಿಕತೆಯಿಂದ ನರಳಬಾರದು. ಅದಕ್ಕಾಗಿ ವಿದೇಶದಿಂದ ಹಾಲನ್ನು ಆಮದು ಮಾಡಿ, ಎಲ್ಲ ಗೋವಿಗಳಿಗೆ ಪ್ರತಿ ದಿನ ಒಂದೊಂದು ಲೀಟರ್‌ನಂತೆ ಕುಡಿಸಲಾಗುತ್ತದೆ. ಪ್ರತಿ ದಿನ ಒಂದೊಂದು ಆ್ಯಪಲನ್ನು ಗೋವಿಗೆ ಹಂಚಲಾಗುತ್ತದೆ. ಗೋವು ಸಾಕುವವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಅವರ ಮೇಲೆ ಗೋ ದೌರ್ಜನ್ಯದ ಆರೋಪದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಹಾಗೆಯೇ ಸಾಬರ ಹೋರಿ, ಹಿಂದೂ ಗೋವುಗಳನ್ನು ಚುಡಾಯಿಸಿದರೆ ಅವುಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುವುದು. ಯಾವ ಕಾರಣಕ್ಕೂ ಹಿಂದೂ ಗೋವುಗಳು ಮತ್ತು ಅನ್ಯಮತೀಯರ ಹೋರಿಗಳು ಜೊತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲ ಹಿಂದೂ ಗೋವುಗಳಿಗೆ ಹಣೆಯಲ್ಲಿ ಕೇಸರಿಯನ್ನು ಹಚ್ಚಲು ಸೂಚನೆ ನೀಡಲಾಗುತ್ತದೆ. ಹಾಗೆಯೇ ಎಲ್ಲ ಸಾಬರ ಹೋರಿಗಳಿಗೆ ಕಡ್ಡಾಯವಾಗಿ ಟೊಪ್ಪಿಯನ್ನು ಹಾಕುವ ವ್ಯವಸ್ಥೆ ಮಾಡಲಾಗುತ್ತದೆ. ಅನ್ಯಮತೀಯ ಹೋರಿಗಳ ಸಂಗ ಮಾಡದಂತೆ, ಹಿಂದೂ ಗೋವುಗಳ ಮನವರಿಕೆ ಮಾಡುವ ಕಾರ್ಯಕ್ರಮವನ್ನು ಗೋಖಾತೆ ವಹಿಸಿಕೊಳ್ಳುತ್ತದೆ.
                ***
ಓದುತ್ತಾ ಹೋದಂತೆ ಎಂಜಲು ಕಾಸಿ ರೋಮಾಂಚನಗೊಂಡ. ‘ಸ್ಕೂಪ್’ ‘ಸ್ಕೂಪ್’ ಎನ್ನುತ್ತಾ ಪತ್ರಿಕಾ ಕಚೇರಿಯೆಡೆಗೆ ಓಡತೊಡಗಿದ.
(ಜೂನ್ 1, 2008, ರವಿವಾರ )

Sunday, December 15, 2013

‘‘ಕಸಬರಿಕೆ ಹಿಡಿಯುವುದಕ್ಕೆ ನಿಮ್ಮ ಹಸ್ತ ಬೇಕು....’’

ಡಿಸೆಂಬರ್ 15 ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿರುವ ಬುಡಬುಡಿಕೆ

ಹಿಡಿಸೂಡಿಯ ಅಥವಾ ಕಸಬರಿಕೆಯ ಚಿಹ್ನೆಯನ್ನು ಇಟ್ಟುಕೊಂಡು ಕೇಜ್ರಿವಾಲ್ ಗೆದ್ದಿರುವುದು ಕಾಂಗ್ರೆಸ್‌ಗೆ ಚಿಂತೆಗೀಡು ಮಾಡಿತು. ‘‘ಹಿಡಿಸೂಡಿ ದೊಡ್ಡದೋ ಅದನ್ನು ಹಿಡಿಯುವ ಕೈ ದೊಡ್ಡದೋ...ನಮ್ಮ ಜನರಿಗೆ ಇಷ್ಟು ಗೊತ್ತಾಗುವುದಿಲ್ಲವೆಂದರೆ ಹೇಗೆ? ಇದು ನಿಜಕ್ಕೂ ಪ್ರಜಾಸತ್ತೆಯ ದುರಂತವೇ ಸರಿ’’ ಎಂದು ಕಾಂಗ್ರೆಸ್‌ನ ಚಿಂತನಾಶಿಬಿರದಲ್ಲಿ ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕೂತಿದ್ದರು.

ಕಸದ ಬುಟ್ಟಿಯೊಳಗೆ ಕೂತಿದ್ದ ಶೀಲಾ ದೀಕ್ಷಿತ್ ಅಲ್ಲಿಂದಲೇ ಕೂಗಿ ಹೇಳಿದರು ‘‘ನಮ್ಮ ಚಿಹ್ನೆಯನ್ನೇ ಬದಲಿಸಬೇಕು...ಹಿಡಿಸೂಡಿಯ ಹಾಗೆಯೇ ಇರುವ ಇನ್ನೊಂದು ಚಿಹ್ನೆಯನ್ನು ನಾವು ಬಳಸಬೇಕು...’’ ಎಂದು ಸಲಹೆ ನೀಡಿದರು.

ಇಡೀ ಕಾಂಗ್ರೆಸ್ ಕಸದಬುಟ್ಟಿಯೊಳಗೆ ಕೂತು ‘‘ಹೌದು ಹೌದು’’ ಎಂದಿತು.

‘‘ಈಗಿನ ಕಾಲದಲ್ಲಿ ಹಿಡಿಸೂಡಿಯಿಂದ ಕಸಗುಡಿ ಸುವ ಕಾಲ ಹೋಯಿತು...ನಾವು...ವ್ಯಾಕ್ಯುಂ ಕ್ಲೀನರ್ ಮಶಿನ್‌ನ್ನು ಚಿಹ್ನೆ ಮಾಡಿದ್ದಿದ್ದರೆ ಗೆಲ್ಲುತ್ತಿದ್ದೆವು. ನನ್ನ ಮನೆಯಲ್ಲೂ ಅಂತಹದೊಂದು ಕ್ಲೀನರ್ ಇದೆ. ಅದು ಎಲ್ಲವನ್ನೂ ಪೂರ್ತಿಯಾಗಿ ಕ್ಲೀನ್ ಮಾಡುತ್ತದೆ...ಒಂದು ಸಣ್ಣ ಧೂಳನ್ನೂ ಬಿಡುವುದಿಲ್ಲ’’ ಎಂದು ಶೀಲಾ ದೀಕ್ಷಿತ್ ಸಲಹೆ ನೀಡಿದರು.

‘‘ಹಿಡಿಸೂಡಿಯ ಬದಲು ವ್ಯಾಕ್ಯುಂ ಕ್ಲೀನರ್‌ನ್ನು ಚಿಹ್ನೆಯಾಗಿ ಇಟ್ಟುಕೊಂಡಿದ್ದರೆ ಕಾಂಗ್ರೆಸ್‌ನ ಆ ಎಂಟು ಸ್ಥಾನವೂ ಕಸದ ಬುಟ್ಟಿ ಸೇರಬೇಕಾಗುತ್ತಿತ್ತು. ದಿಲ್ಲಿ ಸಂಪೂ ರ್ಣ ಕ್ಲೀನ್ ಆಗಿ ಬಿಡುತ್ತಿತ್ತು. ಆಮ್ ಆದ್ಮಿ ಪಕ್ಷ ಹಿಡಿಸೂಡಿಯಿಂದ ಗುಡಿಸಿಯೇ ಇಷ್ಟೆಲ್ಲ ಅನಾಹುತ ಆಯಿತು. ಇನ್ನು ಆ ಮಶಿನ್ ಬಳಸಿದ್ದಿದ್ದರೆ ಕಾಂಗ್ರೆಸ್‌ನ ಸ್ಥಿತಿ ಏನಾಗಿ ಬಿಡುತ್ತಿತ್ತು ಗೊತ್ತೆ?’’ ಕಪಿಲ್ ಸಿಬಲ್ ಕೇಳಿದರು. ಶೀಲಾದೀಕ್ಷಿತ್ ನಡುಗಿದರು.

‘‘ನಾನೇ ಗುಡಿಸಿ ಹೋದ ಮೇಲೆ ಉಳಿದವರು ಇದ್ದರೆಷ್ಟು ಬಿಟ್ಟರೆಷ್ಟು...?’’ ಎಂದು ಕಸದ ಬುಟ್ಟಿಯೊಳಗೇ ನಿಟ್ಟುಸಿರಿಟ್ಟರು. ಅಷ್ಟರಲ್ಲಿ ವೀರಪ್ಪ ಮೊಯ್ಲಿ ಸಲಹೆ ನೀಡಿದರು ‘‘ನಾವು ಚುನಾವಣಾ ಆಯೋಗದ ಮೊರೆ ಹೋಗಬೇಕು. ಅವರು ಹಿಡಿಸೂಡಿಯನ್ನು ಚಿಹ್ನೆಯಾಗಿ ಬಳಸಿದ್ದೇನೋ ಸರಿ. ಆದರೆ ಅದನ್ನು ಬಳಸುವುದಕ್ಕೆ ಹಸ್ತವಿಲ್ಲದೇ ಸಾಧ್ಯವಿಲ್ಲ. ನಮ್ಮ ಹಸ್ತವನ್ನು ಬಳಸಿಕೊಂಡು ಅವರು ದಿಲ್ಲಿಯನ್ನು ಗುಡಿಸಿದ್ದು ಅಕ್ಷಮ್ಯ.

ಹಸ್ತವಿಲ್ಲದೆ ಹಿಡಿಸೂಡಿಯನ್ನು ಬಳಸಲು ಸಾಧ್ಯವೇ ಇಲ್ಲ. ಆದುದರಿಂದ ಆಮ್ ಆದ್ಮಿ ಪಕ್ಷ ನಮ್ಮ ಚಿಹ್ನೆಯಾದ ಹಸ್ತವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಬೇಕು. ಆಮ್ ಆದ್ಮಿ ಪಕ್ಷ ಪಡೆದಿರುವ ಅಷ್ಟು ಸ್ಥಾನಗಳು ಹಸ್ತಕ್ಕೆ ಸೇರಬೇಕು. ಆದುದರಿಂದ ಬಹುಮತವನ್ನು ಪಡೆದಿರುವುದು ನಾವೇ ಎಂದು ರಾಜ್ಯಪಾಲರಿಗೆ ಅರ್ಜಿ ನೀಡಬೇಕು...ನಾವೇ ದಿಲ್ಲಿಯನ್ನು ಆಳಬೇಕು...’’ ಎಂದು ಹೇಳಿ, ಮೆಚ್ಚುಗೆ ಗಾಗಿ ರಾಹುಲ್ ಗಾಂಧಿಯ ಮುಖ ನೋಡಿದರು.

ಆದರೆ ರಾಹುಲ್‌ಗಾಂಧಿಯ ಸಿಟ್ಟು ಇಳಿದಿರಲಿಲ್ಲ. ವೀರಪ್ಪ ಮೊಯ್ಲಿಯನ್ನು ನೋಡಿದವರೇ...‘‘ನಿಮ್ಮನ್ನು ಇಂಧನ ಸಚಿವ ಮಾಡುವ ಬದಲು, ಇದ್ದಿಲು ಸಚಿವ ಮಾಡಬೇಕಾಗಿತ್ತು...’’ ಎಂದು ಹೇಳಿ ಬಿಟ್ಟರು. ಮೊಯ್ಲಿ ಅವರ ಮುಖ ಇದ್ದಿಲಿನಂತೆ ಕಪ್ಪಿಟ್ಟಿತು.

‘‘ಸಾರ್, ನಮ್ಮ ಚಿಹ್ನೆಯನ್ನು ಹಸ್ತದ ಬದಲು ಕಸದ ಬುಟ್ಟಿಯಾಗಿ ಮಾರ್ಪಡಿಸಿದರೆ ಹೇಗೆ? ನಾನಂತು ಕಳೆದ 20 ವರ್ಷಗಳಿಂದ ಕಸದ ಬುಟ್ಟಿಯಲ್ಲೇ ಕೊಳೆ ಯುತ್ತಿದ್ದೇನೆ....ಕಸದ ಬುಟ್ಟಿಯಿಲ್ಲದೆ ನಮ್ಮ ನಾಡು ಶುಚಿಯಾಗುವುದಕ್ಕೆ ಸಾಧ್ಯವಿಲ್ಲ. ಗುಡಿಸಿದರೆ ಸಾಕಾಗು ವುದಿಲ್ಲ.

ಕಸವನ್ನು ಹಾಕಲು ಸರಿಯಾದ ಕಸದ ಬುಟ್ಟಿ ಇಲ್ಲದೆ ಇದ್ದರೆ ನಾಡು ಕೊಳೆತು ನಾರ ತೊಡಗು ತ್ತದೆ...ಬೆಂಗಳೂರನ್ನು ನೋಡಿದರೆ ಗೊತ್ತಾಗುವುದಿಲ್ಲವ? ಮೂಗು ಬಿಡ್ಲಿಕ್ಕೆ ಗೊತ್ತಿಲ್ಲ...’’ ಎಂದು ಹೊರಗೆ ಬಾಗಿಲ ಮರೆಯಲ್ಲಿ ನಿಂತು ಯಾರೋ ಸಲಹೆ ನೀಡಿದರು. ಯಾರಿರಬಹುದು? ಎಂದು ಸೋನಿಯಾಗಾಂಧಿ ಎದ್ದು ಇಣುಕಿ ನೋಡಿದರು. ನೋಡಿದರೆ ಕುದ್ರೋಳಿಯ ಜನಾರ್ದನ ಪೂಜಾರಿ. ಈಗಷ್ಟೇ ಮಂಗಳೂರಿನ ಕಸದ ತೊಟ್ಟಿಯಿಂದ ಎದ್ದು ಬಂದಿದ್ದರು ಅವರು. ದೀರ್ಘ ವಾದ ನಿಟ್ಟುಸಿರಿಟ್ಟು ಸೋನಿಯಾ ಮತ್ತೆ ಆಸನದಲ್ಲಿ ಕುಳಿತುಕೊಂಡರು.

‘‘ಅಮ್ಮ ನನ್ನನ್ನು ನೋಡಿ ಬಿಟ್ಟರು...ಅಮ್ಮ ನನ್ನನ್ನು ಎದ್ದು ನಿಂತು ನೋಡಿ ಬಿಟ್ಟರು’’ ಎಂದು ಬಾಗಿಲಲ್ಲೇ ಜನಾರ್ದನ ಪೂಜಾರಿ ಕುಣಿದಾಡ ತೊಡಗಿದರು. ಇನ್ನು ಅವಕಾಶ ಕೊಟ್ಟರೆ ಅಲ್ಲೇ ಉರುಳು ಸೇವೆ ಮಾಡ ಬಹುದು ಎಂದು ಸೋನಿಯಾಗಾಂಧಿಯವರಿಗೆ ಹೆದ ರಿಕೆಯಾಯಿತು.

ತಕ್ಷಣ ವಾಚ್‌ಮೆನ್‌ಗಳಿಗೆ ಕಣ್ಣಲ್ಲೇ ಸಲಹೆ ನೀಡಿದರು. ಅವರು ಪೂಜಾರಿಯವರನ್ನು ಎತ್ತಿಕೊಂಡು ಹೋಗಿ, ದಿಲ್ಲಿಯ ದೊಡ್ಡ ಕಸದ ತೊಟ್ಟಿಗೆ ಹಾಕಿ ಬಂದರು. ‘‘ಮಂಗಳೂರಿನ ಕಸದ ತೊಟ್ಟಿಗಿಂತ ದಿಲ್ಲಿಯ ಕಸದ ತೊಟ್ಟಿ ಚೆನ್ನಾಗಿದೆ. ಮಲಗುವುದಕ್ಕೆ, ಪತ್ರಿಕಾಗೋಷ್ಠಿ ಮಾಡುವುದಕ್ಕೆ ಇಲ್ಲಿ ಅನುಕೂಲ ಇದೆ...’’ ಎಂದು ಇಂತಹದೊಂದು ಕಸದ ತೊಟ್ಟಿಯಲ್ಲಿ ತನ್ನನ್ನು ಬಿಟ್ಟ ಭಾರತದ ಸ್ವಘೋಷಿತ ಮಾತೆ ಸೋನಿಯಾಗಾಂಧಿಯವರಿಗೆ ಕೃತಜ್ಞರಾದರು.

ಅಷ್ಟರಲ್ಲಿ ದಿಗ್ವಿಜಯ ಸಿಂಗ್ ಒಂದು ಸಲಹೆ ನೀಡಿ ದರು ‘‘ನಾವು ಮೊತ್ತ ಮೊದಲಾಗಿ, ಈ ದೇಶದ ಎಲ್ಲ ಕಸದ ಬುಟ್ಟಿಗಳನ್ನೂ ಆಧುನೀಕರಣಗೊಳಿಸಬೇಕು... ಅದರಿಂದ ಕಾಂಗ್ರೆಸ್‌ಗೆ ಭಾರೀ ಲಾಭವಿದೆ. ಅವರು ಕಸಬರಿಕೆಯಿಂದ ಗುಡಿಸಿ ಹಾಕಿದರೆ, ನಾವು ಆರಾಮ ವಾಗಿ ಕಸದ ಬುಟ್ಟಿಯಲ್ಲಿ ಜೀವನ ಮಾಡಬೇಕಲ್ಲ... ಅದುದರಿಂದ, ದೇಶದ ಎಲ್ಲ ಸಂಸದೀಯ ಕ್ಷೇತ್ರ ಗಳಲ್ಲಿರುವ ಕಸದ ಬುಟ್ಟಿಗಳನ್ನು ಹವಾನಿಯಂತ್ರಿತ ವಾಗಿ ಪರಿವರ್ತಿಸಬೇಕು.

ಅದರಲ್ಲಿ ಎಲ್ಲ ರೀತಿಯ ಆಧುನಿಕ ಸಲಕರಣೆಗಳೂ ಇರಬೇಕು. ಆರಾಮವಾಗಿ ಬದುಕುವ ಅವಕಾಶ ಅಲ್ಲಿ ಇರಬೇಕು...ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿರುವ ಎಲ್ಲ ಅನುಭವ, ಸುಖ, ಸಂತೋಷ, ನೆಮ್ಮದಿ, ನಿದ್ದೆ ಕಸದಬುಟ್ಟಿಯೊಳಗೂ ಸಿಗುವ ಹಾಗಿರಬೇಕು...ಈ ಮುಂಜಾಗ್ರತೆಯನ್ನು ವಹಿಸಿದರೆ ಅದರ ಲಾಭವನ್ನು ಮುಂದೆ ಕಾಂಗ್ರೆಸ್ ಪಡೆದುಕೊಳ್ಳಬಹುದು. ಕಸದಬುಟ್ಟಿಯಲ್ಲಿ ಮುಂದಿನ ಜೀವನವನ್ನು ಸುಖವಾಗಿ ಕಳೆಯಬಹುದು...’’

ರಾಹುಲ್ ಗಾಂಧಿ ರೋಮಾಂಚನಗೊಂಡರು. ‘‘ದಿಗ್ಗು ಅಂಕಲ್ ಹೇಳಿರುವುದು ಸರಿಯಾಗಿದೆ...ತಕ್ಷಣ ಇದನ್ನು ಅಮೇಠಿಯಿಂದಲೇ ಜಾರಿಗೊಳಿಸಬೇಕು....ನನ್ನ ಕಸದ ಬುಟ್ಟಿಯಂತೂ ನನ್ನ ತಾತ ಮೋತಿಲಾಲ್ ನೆಹರೂ ಅವರ ಬಂಗಲೆ ‘ಆನಂದ ಭವನ’ದ ಥರ ಇರಬೇಕು...’’

ಮಗನ ರಾಜಕೀಯ ಮುಂದಾಲೋಚನೆಗೆ ಸೋನಿಯಾಗಾಂಧಿ ಖುಷಿ ಪಟ್ಟರು. ಹೀಗೆ ಆದಲ್ಲಿ ಮುಂದೊಂದು ದಿನ ನಾನು ನನ್ನ ತವರಿಗೆ ಹೋಗಿ ವಿಶ್ರಾಂತಿ ಜೀವನವನ್ನು ಆರಾಮವಾಗಿ ಕಳೆಯಬಹುದು ಎಂಬ ಆತ್ಮವಿಶ್ವಾಸ ಅವರಿಗೆ ಬಂತು. ಅಷ್ಟರಲ್ಲಿ ಪಿಎ ಬಂದು ಹೇಳಿದ ‘‘ಮೇಡಂ..ಯಾರೋ ಬಂದಿದ್ದಾರೆ....ನಿಮ್ಮನ್ನು ಭೇಟಿ ಮಾಡಬೇಕಂತೆ...’’

‘‘ಯಾರು ಬಂದಿರುವುದು?’’ ಇಡೀ ಸಭೆ ಒಕ್ಕೊರ ಲಲ್ಲಿ ಕೇಳಿತು. ಯಾಕೆಂದರೆ ಈ ಸ್ಥಿತಿಯಲ್ಲೂ ನಮ್ಮನ್ನು ಭೇಟಿ ಮಾಡಲು ಬಂದಿರುವ ಮಹಾತ್ಮ ಯಾರು ಎನ್ನುವುದರ ಕುರಿತಂತೆ ಅವರಿಗೆ ಕುತೂಹಲವಿತ್ತು. ‘‘ಯಾರೋ ಗೊತ್ತಿಲ್ಲ. ಆದರೆ ಅವರ ಕೈಯಲ್ಲಿ ಹಿಡಿಸೂಡಿಯಿದೆ...’’ ಪಿಎ ಹೇಳಿದ. ಹಿಡಿಸೂಡಿ ಎನ್ನುವುದು ಕೇಳಿದ್ದೇ ಎಲ್ಲ ಕಾಂಗ್ರೆಸ್ ಸಂಸದರೂ ತಮ್ಮ ತಮ್ಮ ಕಸದಬುಟ್ಟಿಯೊಳಗೆ ಅಡಗಿ ಕೊಂಡರು.

ಸ್ವಲ್ಪ ಹೊತ್ತಾದ ಬಳಿಕ ಹೊರಗಿನಿಂದ ಒಂದು ಜನ ಹಿಡಿಸೂಡಿಯೊಂದಿಗೆ ಬಂತು. ತಲೆಗೆ ಟೋಪಿ ಹಾಕಿ ಕೊಂಡಿತ್ತು. ಕೈಯಲ್ಲಿ ಇನ್ನು ಒಂದಿಷ್ಟು ಟೋಪಿ ಇತ್ತು. ಬಹುಶಃ ಇತರರಿಗೆ ಹಾಕುವುದಕ್ಕಾಗಿ ಅದನ್ನು ಹಿಡಿದುಕೊಂಡಿರಬೇಕು. ‘‘ನಾನು ಮೇಡಂ... ಕೇಜ್ರಿವಾಲ್...’’ ಎಂದು ಬಂದ ವ್ಯಕ್ತಿ ಕೂಗಿ ಹೇಳಿತು. ಇದು ಕೇಳಿ ಅಡಗಿ ಕೂತವರಿಗೆಲ್ಲ ಮುಜುಗರ ವಾಯಿತು.

‘‘ಮೇಡಂ...ದಯವಿಟ್ಟು ಕಸದ ಬುಟ್ಟಿಯಿಂದ ಹೊರಗೆ ಬನ್ನಿ...ಕಸಬರಿಕೆ ಹಿಡಿಯುವುದಕ್ಕೆ ನನಗೆ ನಿಮ್ಮ ಸಹಾಯ ‘ಹಸ್ತ’ ಬೇಕಾಗಿದೆ...ಇಲ್ಲವಾದರೆ ದಿಲ್ಲಿ ಅನಾಥವಾಗುತ್ತದೆ...ನಾವು ಕಸಬರಿಕೆಯ ಜೊತೆಗೆ ಅಧಿಕಾರ ಹಿಡಿಯುತ್ತೇವೆ...ನೀವು ನಿಮ್ಮ ಸಹಾಯ ಹಸ್ತ ನೀಡಿ....’’

ಕೇಜ್ರಿವಾಲ್ ಹೀಗೆ ಹೇಳಿದ್ದೇ ತಡ ‘‘ನನಗೆ ಸಚಿವ ಸ್ಥಾನ...ನನಗೆ ಸಚಿವ ಸ್ಥಾನ...’’ ಎಂದು ಕಸದಬುಟ್ಟಿಯೊಳಗಿಂದ ಕಾಂಗ್ರೆಸ್ ನಾಯಕರು ಎದ್ದು ಓಡಿ ಕೇಜ್ರಿವಾಲ್‌ರನ್ನು ಮುತ್ತಿಕೊಂಡರು.  


Saturday, December 7, 2013

ನರಭಕ್ಷಕ ಹುಲಿಗೆ ಮುಂಜಿ ಆಗಿದೆಯಾ?

 ಇದು ಡಿಸೆಂಬರ್ 8, 2013 ರ ಸಂಚಿಕೆಯ ಬುಡಬುಡಿಕೆ. ನಾಲ್ಕು ಜನರನ್ನು ಕೊಂದ ನರಭಕ್ಷಕ ಹುಲಿಯನ್ನು ಎರಡು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಹಿಡಿದರು. ಆ ಹುಲಿಯ ಹಿನ್ನೆಲೆಯನ್ನು ಪತ್ರಕರ್ತ ಎಂಜಲು ಕಾಸಿ ಸಂಶೋಧಿಸಿ ವರದಿ ನೀಡಿದ್ದಾನೆ

ನಾಲ್ವರನ್ನು ತಿಂದು ಮುಗಿಸಿದ ನರಭಕ್ಷಕ ಹುಲಿಯನ್ನು ಬಂಡೀಪುರದ ಅರಣ್ಯದಂಚಿನಲ್ಲಿ ಹಿಡಿದದ್ದೇ ಪತ್ರಕರ್ತರು ಚುರುಕಾದರು. ತಕ್ಷಣ ಅವರು ಗೃಹ ಸಚಿವರನ್ನು ಸುತ್ತುವರಿದು, ಪ್ರಶ್ನೆಗಳಿಂದ ಫೈರ್ ಮಾಡತೊಡಗಿದರು. ‘‘ಸಾರ್...ಹುಲಿ ಯಾವ ಧರ್ಮಕ್ಕೆ ಸೇರಿದ್ದು ಸಾರ್? ಅದು ಮುಸ್ಲಿಮ್ ಹುಲಿ ಎನ್ನುವುದನ್ನು ಗುಪ್ತಚರ ಇಲಾಖೆಗಳು ಈಗಾಗಲೇ ಪತ್ರಿಕೆಗಳಿಗೆ ತಿಳಿಸಿವೆ. ಆ ಹುಲಿಗೆ ಇಂಡಿಯನ್ ಮುಜಾಹಿದೀನ್ ಜೊತೆಗೆ ಸಂಬಂಧ ಇದೆಯಂತೆ. ಹೌದಾ ಸಾರ್?’’
ಪತ್ರಕರ್ತರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಕನ್ನಡದಲ್ಲಿ ಉತ್ತರಿಸಲಾಗದೆ ಗೃಹ ಸಚಿವ ಜಾರ್ಜ್ ಅವರು ಬೆವರೊರೆಸ ತೊಡಗಿದರು. ‘‘ನೋಡಿ...ಈಗಷ್ಟೇ ಹುಲಿಯನ್ನು ಬಂಧಿಸಲಾಗಿದೆ. ಅದರ ಹೊಟ್ಟೆಯ ಒಳಗೆ ಮನುಷ್ಯನ ತಲೆಯೇನಾದರೂ ಪತ್ತೆಯಾದರೆ ಅದು ಉಗ್ರಗಾಮಿ ಹುಲಿ ಎನ್ನುವುದು ಗೊತ್ತಾಗಿ ಬಿಡುತ್ತದೆ. ಅದಕ್ಕೆ ಯಾರ್ಯಾರೋ ಜೊತೆಗೆ ಸಂಪರ್ಕ ಇದೆ ಎನ್ನುವುದು ಇನ್ನೂ ವಿಚಾರಣೆಯಿಂದಷ್ಟೇ ತಿಳಿಯಬೇಕು...’’
‘‘ಸಾರ್...ಹುಲೀದು ಮುಂಜಿ ಆಗಿದೆಯಾ ಸಾರ್...’’ ಒಂದು ವೇಳೆ ಮುಂಜಿ ಆಗಿದ್ದರೆ ಅದು ಮುಸ್ಲಿಮ್ ಹುಲಿ ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ ಎನ್ನುವುದು ಪತ್ರಕರ್ತರ ಲೆಕ್ಕಾಚಾರ. ‘‘ಅದನ್ನೆಲ್ಲ ಈಗಲೇ ಹೇಳಲಿಕ್ಕೆ ಬರುವುದಿಲ್ಲ. ಒಟ್ಟಿನಲ್ಲಿ ಅದರ ಅಂಗಾಂಗಗಳ ತಪಾಸಣೆ ನಡೆಯುತ್ತಿದೆ. ವೈದ್ಯರು ಹೇಳಿದ ಬಳಿಕವಷ್ಟೇ ಏನನ್ನಾದರೂ ನಿರ್ಧರಿಸಬಹುದು’’
‘‘ಸಾರ್, ಮಂಗಳೂರಿನಲ್ಲಿ ಬಂಧನಕ್ಕೊಳಗಾದ ಆಯಿಷಾಳಿಗೂ ಈ ಹುಲಿಗೂ ನಂಟುಂಟಂತೆ ಹೌದಾ ಸಾರ್...ಆಯಿಷಾಳ ಅಕೌಂಟ್‌ನಿಂದ ಪಾಕಿಸ್ತಾನದ ಮೂಲಕಈ ಹುಲಿಗೆ ಹಣ ಸಂದಾಯವಾಗಿದೆಯಂತೆ ಹೌದಾ ಸಾರ್?’’
ಪತ್ರಕರ್ತರು ಹೇಳಿದ ಮೇಲೆ ಇದ್ದಿರಲೂ ಬಹುದು ಅನ್ನಿಸಿತು ಗೃಹ ಸಚಿವರಿಗೆ. ‘‘ಇನ್ನೂ ಅದರ ವಿವರಗಳು ಸರಿಯಾಗಿ ಗೊತ್ತಿಲ್ಲ. ಹುಲಿಯ ಬ್ಯಾಂಕ್ ಅಕೌಂಟ್‌ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರ ಆಧಾರದಲ್ಲಿ ಅದಕ್ಕೆ ಯಾರ್ಯಾರ ಜೊತೆಗೆ ನಂಟಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ...’’
‘‘ಸಾರ್, ಪಾಟ್ನಾದಲ್ಲಿ ಮೋದಿ ಸಮಾವೇಶದ ಸಂದರ್ಭದಲ್ಲಿ ನಡೆದ ಸ್ಫೋಟಕ್ಕೂ ಈ ಹುಲಿಗೂ ಸಂಬಂಧ ಇರುವ ಕುರಿತಂತೆ ಗುಪ್ತ ಚರ ಇಲಾಖೆ ನಮಗೆ ತಿಳಿಸಿದೆ. ಇದರ ಬಗ್ಗೆ ಏನನ್ನು ಹೇಳುತ್ತೀರಿ...’’ ಪತ್ರಕರ್ತರು ಮತ್ತೆ ತಮ್ಮ ಸಂಶೋಧನೆಗಳನ್ನು ಗೃಹ ಸಚಿವರ ಮುಂದಿಟ್ಟರು.
ಜಾರ್ಜ್ ಮತ್ತೆ ಕಂಗಾಲಾಗಿ ಬಿಟ್ಟರು. ಏನಾದರೂ ಹೇಳಲೇ ಬೇಕು. ‘‘ನೋಡಿ, ಪಾಟ್ನಾದಲ್ಲಿ ಕೆಲವೆಡೆ ಈ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಆದುದರಿಂದ ಇದೇ ಹುಲಿ ಅಲ್ಲಿ ಸ್ಫೋಟ ನಡೆಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ...’’
***
ಮರುದಿನ ವಿವಿಧ ಕನ್ನಡದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಲೆಬರಹಗಳನ್ನು ಕೆಳಗಿನಂತೆ ನೀಡಲಾಗಿದೆ.
1. ನರಭಕ್ಷಕ ಹುಲಿಯ ಬಂಧನ. ಇಂಡಿಯನ್ ಮುಜಾಹಿದ್ ಜೊತೆಗೆ ಸಂಬಂಧ ಪತ್ತೆ.
2. ಉಗ್ರ ಆಯಿಶಾ ಬಂಧನಕ್ಕೆ ನರಭಕ್ಷಕ ಹುಲಿಯಿಂದ ಸೇಡು: ವಿಚಾರಣೆಯಿಂದ ಬಯಲು
3. ನರಭಕ್ಷಕ ಹುಲಿಗೆ ಪಾಕಿಸ್ತಾನದ ಐಎಸ್‌ಐ ನಂಟು-ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಹುಲಿ
4. ನರಭಕ್ಷಕ ಹುಲಿಯ ಬ್ಯಾಂಕ್ ಅಕೌಂಟಿಗೆ ಉಗ್ರ ಆಯಿಷಾಳಿಂದ ಹಣ ವಿತರಣೆ
5. ಪಾಟ್ನಾ ಸ್ಫೋಟ: ಶಂಕಿತ ನರಭಕ್ಷಕ ಹುಲಿಯ ಬಂಧನ
6. ನರಭಕ್ಷಕ ಲಷ್ಕರ್ ತಯ್ಯಬಾ ಉಗ್ರ ಹುಲಿಯ ಬಂಧನ: ಪಾಟ್ನಾ ಪೊಲೀಸರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ
7. ಹೆಡ್ಲೀ ಜೊತೆಗೆ ಬಂಧಿತ ಹುಲಿಗೆ ಸಂಬಂಧ: ವಿಚಾರಣೆಯಲ್ಲಿ ಬಯಲು
8. ಪಶ್ಚಿಮ ಘಟ್ಟದ ನಕ್ಸಲೀಯರೊಂದಿಗೂ ಹುಲಿಗೆ ನಂಟು: ತನಿಖೆಯಿಂದ ಬಹಿರಂಗ
9.ಹುಲಿಯ ಪರವಾಗಿ ಮಾನವಹಕ್ಕು ಹೋರಾಟಗಾರರ ಬೆಂಬಲ: ಬಿಜೆಪಿ ಖಂಡನೆ
10. ಇಸ್ಲಾಂ ಶಾಂತಿಯ ಧರ್ಮ. ಉಗ್ರವಾದಕ್ಕೆ ಇಲ್ಲಿ ಅವಕಾಶವಿಲ್ಲ: ಮುಸ್ಲಿಮ್ ನಾಯಕರ ಹೇಳಿಕೆ
11.ಹುಲಿ ಒಂದು ವೇಳೆ ಮುಸ್ಲಿಮ್ ಆಗಿದ್ದರೆ ಅದಕ್ಕೆ ಮರಣದಂಡನೆಯಾಗಲಿ: ಧಾರ್ಮಿಕ ಮುಖಂಡರ ಸಲಹೆ
12: ಹುಲಿಗೂ ಉಗ್ರರಿಗೂ ಸಂಬಂಧವಿಲ್ಲ: ಮುಸ್ಲಿಂ ಸಂಘಟನೆಯ ಸಮರ್ಥನೆ
***
ಹುಲಿಯನ್ನು ಬಂಧಿಸಿ ಮೈಸೂರು ಮೃಗಾಲಯಕ್ಕೆ ಸೇರಿಸಿದ್ದು, ಅಲ್ಲಿ ಹುಲಿಗೆ ‘ಶಿವ’ ಎಂದು ನಾಮಕರಣ ಮಾಡಿದ್ದು ಬಿಜೆಪಿ ಮುಖಂಡ ಈಶ್ವರಪ್ಪ ಅವರಿಗೆ ತಿಳಿದದ್ದೇ ವ್ಯಗ್ರರಾದರು. ಉಗ್ರಗಾಮಿಗಳೊಂದಿಗೆ ಸಂಬಂಧವಿರುವ ಹುಲಿಗೆ ‘ಶಿವ’ ಎಂದು ಹೆಸರಿಡುವುದೆ? ತಕ್ಷಣ ಪತ್ರಿಕಾಗೋಷ್ಠಿ ಕರೆದರು. ಪತ್ರಕರ್ತ ಮಾಡಿದ ಆ ವರದಿಯನ್ನು ಯಥಾವತ್ತಾಗಿ ಇಲ್ಲಿ ದಾಖಲಿಸಲಾಗಿದೆ.
‘‘ಹುಲಿಗೆ ಶಿವ ಎಂದು ಹೆಸರಿಟ್ಟಿರುವುದನ್ನು ನಾನು ಖಂಡಿಸುತ್ತೇನೆ. ನನ್ನ ಹೆಸರು ಈಶ್ವರಪ್ಪ. ನನ್ನ ಹೆಸರೂ, ಶಿವ ಹೆಸರಿಗೂ ಒಂದೇ ಅರ್ಥ. ಆದುದರಿಂದ ಆ ಉಗ್ರ ನರಭಕ್ಷಕ ಹುಲಿಗೆ ನನ್ನ ಹೆಸರಿಟ್ಟು ನನಗೆ ಅವಮಾನಿಸಲಾಗಿದೆ. ಇದರಲ್ಲಿ ನಿಸ್ಸಂಶಯವಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯರ ಕೈವಾಡವಿದೆ. ಧೈರ್ಯವಿದ್ದರೆ ಆ ಹುಲಿಗೆ ಯಡಿಯೂರಪ್ಪ ಅಥವಾ ಸಿದ್ದರಾಮಯ್ಯರ ಹೆಸರು ಇಡಲಿ ಎಂದು ಬಿಜೆಪಿಯ ಮುಖಂಡ ಈಶ್ವರ ಉಗ್ರವಾಗಿ ಶಿವತಾಂಡವವಾಡಿದ್ದಾರೆ.
ಹುಲಿ ಸಂಪೂರ್ಣ ಮುಸ್ಲಿಮನನ್ನೇ ಹೋಲುತ್ತಿದ್ದು, ಶಿವಮೊಗ್ಗ, ದಕ್ಷಿಣಕನ್ನಡಾದ್ಯಂತ ಕಾಣೆಯಾಗುತ್ತಿರುವ ಹಿಂದೂ ತರುಣಿಯರ ನಾಪತ್ತೆ ಪ್ರಕರಣದಲ್ಲಿ ಈ ಹುಲಿಗೆ ನೇರ ಸಂಬಂಧವಿದೆ. ‘ಲವ್ ಜಿಹಾದ್’ಗೆ ಈ ಹುಲಿ ಸಹಾಯ ಮಾಡುತ್ತಿತ್ತು’’ ಎಂದು ಈಶ್ವರ ಆರೋಪಿಸಿದ್ದು, ‘‘ತಕ್ಷಣ ಈ ಹುಲಿ ಅಪಹರಿಸಿದ ತರುಣಿಯರ ಕುರಿತಂತೆ ವಿಚಾರಣೆ ನಡೆಯಬೇಕು. ಎಷ್ಟು ತರುಣಿಯರನ್ನು ತಿಂದಿದೆ ಮತ್ತು ಎಷ್ಟು ತರುಣಿಯರನ್ನು ಮತಾಂತರಗೊಳಿಸಿದೆ ಎನ್ನುವುದರ ತನಿಖೆಯನ್ನು ನಡೆಸಬೇಕು’’ ಈಶ್ವರಪ್ಪ ಒತ್ತಾಯಿಸಿದ್ದಾರೆ.
‘‘ಹುಲಿಗೆ ಕಾಂಗ್ರೆಸ್ ಸರಕಾರ ದುರುದ್ದೇಶ ಪೂರ್ವಕವಾಗಿ ಶಿವ ಎಂಬ ಹೆಸರನ್ನು ಇಟ್ಟಿದೆ. ಇದು ನಿಜಕ್ಕೂ ಅವಮಾನಕಾರಿಯಾಗಿದೆ. ನಮ್ಮ ಧರ್ಮವನ್ನು ಹೀಯಾಲಿಸುವ ಉದ್ದೇಶವನ್ನು ಹೊಂದಿದೆ. ಆದುದರಿಂದ, ತಕ್ಷಣ ಈ ಹೆಸರನ್ನು ಬದಲಿಸಿ, ಅದಕ್ಕೆ ಉಸಾಮ ಬಿನ್ ಲಾದೆನ್ ಅಥವಾ ದಾವೂದ್ ಇಬ್ರಾಹಿಂ ಎಂಬ ಹೆಸರಿಡಬೇಕು’’ ಎಂದು ಅವರು ಆಗ್ರಹಿಸಿದರು.
‘‘ಈಗಾಗಲೇ ಹುಲಿ ಅಧಿಕೃತವಾಗಿ ನಾಲ್ವರನ್ನು ತಿಂದಿದೆ. ಆ ನಾಲ್ವರೂ ನರೇಂದ್ರ ಉತ್ಕಟ ಅಭಿಮಾನಿಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದ್ದರು. ಈ ಕಾರಣದಿಂದ ಅವರ ಮೇಲೆ ದಾಳಿ ನಡೆಸಿ ಹುಲಿ ತಿಂದು ಹಾಕಿದೆ. ಇದು ಖಂಡನೀಯವಾಗಿದೆ. ಕೇಂದ್ರ ಸರಕಾರ ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಇದರ ಹಿಂದೆ ಇದ್ದಾರೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬಾರದು ಎಂಬ ಉದ್ದೇಶದಿಂದ ಮೋದಿ ಅಭಿಮಾನಿಗಳ ಮೇಲೆ ಹುಲಿಯನ್ನು ಛೂ ಬಿಡಲಾಗಿದೆ. ಹುಲಿಗೂ ಇಟಲಿಗೂ ಇರುವ ಸಂಬಂಧವನ್ನು ತಕ್ಷಣ ತನಿಖೆ ಮಾಡಬೇಕು’’ ಎಂದು ಈಶ್ವರಪ್ಪ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪರಲ್ಲದೆ ಇನ್ನಿತರ ನರಿ,ನಾಯಿ, ತೋಳಗಳು ಉಪಸ್ಥಿತರಿದ್ದರು.

(ಡಿಸೆಂಬರ್ 8, 2013)

‘ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ...’

 (ಜನವರಿ, 20, 2008, ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ ಇದು. ಮಂಗಳ ಗ್ರಹದ ಜನ ಕರ್ನಾಟಕಕ್ಕೇ ಬಂದು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಹೋದರು. ಅದರ ಕೆಲವು ವಿವರಗಳು ಇಲ್ಲಿವೆ )

ಮಂಗಳ ಗ್ರಹದ ಜೀವಿಗಳು ಕೊನೆಗೂ ಭೂಮಿಯಲ್ಲಿ ಜೀವಿಗಳಿರುವುದನ್ನು ಪತ್ತೆ ಮಾಡಿದವು. ತಕ್ಷಣ ಮಂಗಳ ಗ್ರಹದ ವಿಜ್ಞಾನಿಗಳು ಸಭೆ ಸೇರಿದರು. ಒಂದು ತಂಡವನ್ನು ಮಾಡಿ ಭೂಮಿಗೆ ಕಳುಹಿಸುವುದೆಂದು ತೀರ್ಮಾನಿಸಲಾಯಿತು. ಭೂಮಿಯ ಬಗೆಗಿನ ವಿವರಗಳನ್ನು, ಅಲ್ಲಿಯ ಜನಜೀವನ, ಬದುಕಿನ ಶೈಲಿಯನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಮಾಡಬೇಕೆಂದು ಈ ತಂಡಕ್ಕೆ ತಿಳಿಸಲಾಯಿತು. ಮಂಗಳ ಗ್ರಹದಿಂದ ಈ ತಂಡ ನೇರವಾಗಿ ಕರ್ನಾಟಕಕ್ಕೇ ಬಂದಿಳಿದು, ಗುಪ್ತವಾಗಿ ಜನರ ನಡುವೆ ಓಡಾಡಿ ಒಂದು ವರದಿಯನ್ನು ಸಿದ್ಧ ಪಡಿಸಿ, ಮರಳಿ ತಮ್ಮ ಗ್ರಹಕ್ಕೆ ತೆರಳಿತು. ಒಂದು ದಿನ ಮುಂಜಾನೆ ಪತ್ರಕರ್ತ ಎಂಜಲು ಕಾಸಿ ಮೂತ್ರ ಮಾಡಲೆಂದು ಎದ್ದಾಗ ಆಕಾಶದಿಂದ ಎನೋ ಬಿದ್ದಂತಾಯಿತು. ನೋಡಿದರೆ ಅದು ಮಂಗಳ ಗ್ರಹದ ಜೀವಿಗಳು ಸಿದ್ಧ ಪಡಿಸಿದ ವರದಿ. ಬಹುಶಃ ಕೈ ಜಾರಿ ಕೆಳಗೆ ಬಿದ್ದಿರಬಹುದು ಎಂದು ಕಾಸಿ ಒಮ್ಮೆ ಆಕಾಶ ನೋಡಿದ. ಮಂಗಳ ಗ್ರಹದ ಜೀವಿಗಳು ತಮ್ಮ ವಿಜ್ಞಾನಿಗಳಿಗೆ ನೀಡಿದ ಆ ಸ್ಕೂಪ್ ವರದಿ ಈ ಕೆಳಗಿನಂತಿದೆ.
                ***
1. ನಾವು ಕರ್ನಾಟಕ ಎಂಬ ಊರಿಗೆ ಮೊದಲು ಇಳಿದೆವು. ಇದು ಸಂಪೂರ್ಣ ಧೂಳಿನಿಂದಾವೃತವಾದ ಒಂದು ಗ್ರಹ. ಇಳಿದಾಕ್ಷಣ ನಾವು ಬೃಹತ್ ಕುಳಿಗಳನ್ನು ಅಥವಾ ಹೊಂಡಗಳನ್ನು ಕಂಡೆವು. ಈ ಕುಳಿಗಳನ್ನು ಇಲ್ಲಿನ ಜನರು ರಸ್ತೆಗಳೆಂದು ಕರೆಯುತ್ತಾರೆ.
2. ನಮ್ಮ ಗ್ರಹದಲ್ಲಿರುವಂತೆ ಭೂಮಿಯಲ್ಲಿಯೂ ಕಳ್ಳರು, ದರೋಡೆಕೋರರು ಇದ್ದಾರೆ. ಆದರೆ ಅವರನ್ನು ಈ ಗ್ರಹದಲ್ಲಿ ರಾಜಕಾರಣಿಗಳು ಎಂಬ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅವರಿಗಾಗಿಯೇ ಭಾರೀ ಸೌಧವೊಂದನ್ನು ಕಟ್ಟಿದ್ದಾರೆ. ಅದನ್ನು ವಿಧಾನ ಸೌಧ ಎಂದು ಕರೆಯುತ್ತಾರೆ. ದರೋಡೆ ಮಾಡುವುದಕ್ಕಾಗಿಯೇ ಇಲ್ಲಿ ಸಭೆಗಳು ಬಹಿರಂಗವಾಗಿ ನಡೆಯುತ್ತವೆ. ಅದನ್ನು ಈ ಗ್ರಹದ ಜನರು ಅಧಿವೇಶನ ಎಂದು ಕರೆಯುತ್ತಾರೆ. ಅತ್ಯುತ್ತಮ ದರೋಡೆಕೋರರನ್ನು ಆಯ್ಕೆ ಮಾಡುವುದಕ್ಕಾಗಿ ಇಲ್ಲಿ ಚುನಾವಣೆಗಳೂ ನಡೆಯುತ್ತವೆ. ಇಲ್ಲಿ ಹೊಟ್ಟೆಗೆ ತಿನ್ನಲು ಏನೂ ಇಲ್ಲದವರನ್ನು ಕಳ್ಳರು, ನಕ್ಸಲೀಯರು ಎಂದು ಕರೆಯುತ್ತಾರೆ. ಅವರನ್ನು ಕೊಂದು ಹಾಕುವುದಕ್ಕಾಗಿಯೇ ಇಲ್ಲಿ ವಿಶೇಷ ಪಡೆಗಳಿವೆ. ಈ ಪಡೆಗಳನ್ನು ಆ ಹೊಟ್ಟೆಗೆ ಇಲ್ಲದವರೇ ದುಡ್ಡುಕೊಟ್ಟು ಸಾಕುತ್ತಾರೆ.
3. ಇದೊಂದು ವಿಚಿತ್ರ ಗ್ರಹ. ಇಲ್ಲಿ ಜನರನ್ನು ಹಿಂಸಿಸುವುದಕ್ಕಾಗಿಯೇ, ಅಮಾಯಕರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ಹೂಡುವುದಕ್ಕಾಗಿಯೇ ಒಂದು ಇಲಾಖೆ ಇದೆ. ಆ ಇಲಾಖೆಯನ್ನು ಅವರು ಪೊಲೀಸ್ ಇಲಾಖೆ ಎಂದು ಕರೆಯುತ್ತಾರೆ. ಕದಿಯದವರನ್ನು ಕದಿಯುವಂತೆ ಮಾಡುವುದು ಇವರ ಮುಖ್ಯ ಕೆಲಸ.
4. ಇಲ್ಲೊಂದು ಉಡುಪಿ ಎನ್ನುವ ಸ್ಥಳ ಇದೆ. ಇದನ್ನೇ ‘ಜಗತ್ತು’ ಎಂದೂ ಇಲ್ಲಿನವರು ಕರೆಯುತ್ತಾರೆ. ಈ ಜಗತ್ತಿಗೆ ಗುರುಗಳೂ ಇದ್ದಾರೆ. ಅವರು ತಮ್ಮನ್ನು ತಾವು ಜಗದ್ಗುರು ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿ ಉಡುಪಿ ಮಾತ್ರ ಜಗತ್ತು ಮತ್ತು ಅದರಾಚೆಗೆ ಜಗತ್ತು ಇಲ್ಲ ಎನ್ನುವ ವಿಷಯದಲ್ಲಿ ಭಾರೀ ಜಗಳವಾಯಿತು. ಒಬ್ಬ ಜಗದ್ಗುರು ಸಮುದ್ರದಾಚೆಗೂ ಜಗತ್ತು ಇದೆ ಎಂದರೆ, ಉಳಿದವರೆಲ್ಲಾ ಸಮುದ್ರದಾಚೆಗೆ ಜಗತ್ತು ಇಲ್ಲ ಎಂದು ವಾದಿಸಿದರು. ಈ ಜಗಳವನ್ನು ಇಲ್ಲಿ ‘ಪರ್ಯಾಯೋತ್ಸವ’ ಎಂದು ಕರೆಯುತ್ತಾರೆ.
5. ಇಲ್ಲಿ ‘ಸಂಸ್ಕೃತಿ’ ಎನ್ನುವ ವಿಚಿತ್ರ ಪದವನ್ನು ಬಳಸುತ್ತಾರೆ. ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅಮಾಯಕರನ್ನು ಬೆತ್ತಲೆ ಮಾಡಿ ಥಳಿಸುವುದು, ಆದಿವಾಸಿಗಳು ಎಂದು ಕರೆಸಿಕೊಳ್ಳುವವರನ್ನು ಯರ್ರಾಬಿರ್ರಿ ಥಳಿಸುವುದು ಹೀಗೆ ಇವರು ತಮ್ಮ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಗುಜರಾತ್ ಎಂಬ ಊರಿನಲ್ಲಿ ಭಾರೀ ಸಾಂಸ್ಕೃತಿಕ ಉತ್ಸವ ಆಚರಣೆಯಾಯಿತಂತೆ. ನರೇಂದ್ರ ಮೋದಿ ಎಂಬ ನಾಯಕನೇ ಆ ಸಾಂಸ್ಕೃತಿಕ ಆಚರಣೆಯ ನೇತೃತ್ವವನ್ನು ವಹಿಸಿದ್ದರಿಂದ, ಜನರು ಆತನನ್ನೇ ಮತ್ತೆ ತಮ್ಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯ ಜನರು ಸಾಂಸ್ಕೃತಿಕ ಪುನರುತ್ಥಾನ ಎಂದೂ ಕರೆಯುತ್ತಾರೆ.
6. ಇಲ್ಲಿ ‘ದನ’ ಎನ್ನುವ ಒಂದು ಪ್ರಾಣಿ ಇದೆ. ಇದು ಹಾಲು ಕೊಡುತ್ತದೆ. ಜೊತೆಗೆ ಇದನ್ನು ಹಾಲಿಗಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳಿಗೆ ಬಳಸಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಜೀವಿಗಳು ಪ್ರಯೋಗ ನಡೆಸುತ್ತಿವೆ. ಕರೆದರೆ ಹಾಲು ಮಾತ್ರ ಅಲ್ಲ, ಅಧಿಕಾರದ ಕುರ್ಚಿ, ರಕ್ತ, ಹಿಂಸೆ ಇತ್ಯಾದಿಗಳು ಬರಲು ಸಾಧ್ಯವೆ ಎಂದು ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಪ್ರಯೋಗ ಭಾಗಶಃ ಯಶಸ್ವಿಯಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈವರೆಗೆ ಈ ದನ ಎನ್ನುವ ಪ್ರಾಣಿ ಬಿಳಿ ಹಾಲನ್ನು ಮಾತ್ರ ಕೊಡುತ್ತಿತ್ತು. ಕೇಸರಿ ಬಣ್ಣದ ಹಾಲನ್ನು ತೆಗೆಯಲು ಸಾಧ್ಯವೆ ಎಂಬ ಕುರಿತಂತೆಯೂ ಭಾರೀ ಪ್ರಯೋಗಗಳು ನಡೆಯುತ್ತಿವೆ.
7. ಇಲ್ಲಿ ಕಾಡುಗಳಿರುವಂತೆಯೇ ಅಲ್ಲಲ್ಲಿ ‘ಹಳ್ಳಿ’ ಎನ್ನುವುದು ಇವೆಯಂತೆ. ಇವುಗಳಲ್ಲಿ ತುಂಬಾ ಹಿಂದೆ ‘ರೈತ’ ಎಂಬ ಜೀವಿ ವಾಸಿಸುತ್ತಿತ್ತಂತೆ. ಇದೊಂದು ಭಯಂಕರ ಜೀವಿಯಾಗಿತ್ತಂತೆ. ಮುಖ್ಯವಾಗಿ ಭಯೋತ್ಪಾದನೆ, ಉಗ್ರವಾದ ಮೊದಲಾದ ಚಟುವಟಿಕೆಗಳನ್ನು ಈ ಜೀವಿ ನಡೆಸುತ್ತಿತ್ತಂತೆ. ಇವುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ‘ನೇಗಿಲು’ ಎಂಬ ಭಯಾನಕ ಆಯುಧವನ್ನು ಬಳಸುತ್ತಿತ್ತಂತೆ. ಆದುದರಿಂದ ಇವುಗಳನ್ನು ಎನ್‌ಕೌಂಟರ್‌ನಿಂದ ಕೊಲ್ಲಲಾಯಿತಂತೆ. ಈಗಲೂ ಈ ‘ರೈತ’ ಎನ್ನುವ ಜೀವಿ ಅಲ್ಲಲ್ಲಿ ಉಳಿದುಕೊಂಡಿದೆಯಂತೆ. ಅದನ್ನು ಹುಡುಕಿ ಹತ್ಯೆಗೈಯುವುದಕ್ಕಾಗಿಯೇ ‘ಸೆಝ್’ ‘ಐಟಿ ಪಾರ್ಕ್’ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆಯಂತೆ. ಇದರ ವಿರುದ್ಧವೂ ಈ ಅಳಿದುಳಿದ ‘ರೈತ’ರು ಎನ್ನುವ ಜೀವಿಗಳು ಭಾರೀ ಸಂಚು ನಡೆಸುತ್ತಿವೆಯಂತೆ.
8. ಇಲ್ಲಿ ಭಾರೀ ಶ್ರೀಮಂತರು ಮುಖ ಒರೆಸಿಕೊಳ್ಳುವುದಕ್ಕೆ ಹಾಗೂ ಟಾಯ್ಲೆಟ್‌ನಲ್ಲಿ ಹೊಲಸನ್ನು ಒರೆಸಿಕೊಳ್ಳುವುದಕ್ಕೆ ಕಾಗದಗಳನ್ನು ಬಳಸುತ್ತಾರೆ. ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ. ಈ ಪತ್ರಿಕೆಗಳನ್ನು ಬಣ್ಣ ಬಣ್ಣವಾಗಿ ಮುದ್ರಿಸುತ್ತಾರೆ. ವಿವಿಧ ಕಂಪೆನಿಗಳು ವಿವಿಧ ಹೆಸರುಗಳಿಂದ ಇವುಗಳನ್ನು ಮುದ್ರಿಸುತ್ತವೆ. ಇಲ್ಲಿ ಮೇಲೆ ಹೇಳಿದ ‘ಸಂಸ್ಕೃತಿ’ಯ ವಕ್ತಾರರು ಎಂದು ಕರೆಸಿಕೊಂಡವರೂ ಈ ಕಾಗದಗಳನ್ನು ಬಳಸುತ್ತಾರೆ. ಅವರು ವಾಂತಿ ಮಾಡಲು ಬಳಸುವುದು ಇದೇ ಕಾಗದಗಳನ್ನು. ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನೇ ಈ ಕೆಲಸಕ್ಕೆ ಹೆಚ್ಚು ಬಳಸುತ್ತಾರೆ. ಹಾಗೆಯೇ ಸಮಾಜದ ಉನ್ನತ ವರ್ಣೀಯರು ಮುದ್ರಿಸುವ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾಕೆಂದರೆ ಅದು ಹೊಲಸನ್ನು ಒರೆಸುವುದಕ್ಕೆ, ವಾಂತಿ ಮಾಡುವುದಕ್ಕೆ ಹೆಚ್ಚು ಕ್ವಾಲಿಟಿ ಹೊಂದಿರುತ್ತದೆ ಎನ್ನುವುದು ಈ ಗ್ರಹದವರ ನಂಬಿಕೆ.
9. ಇಲ್ಲಿ ಕಸದ ತೊಟ್ಟಿ ಎಂಬ ಒಂದು ಪೆಟ್ಟಿಗೆ ಇದೆ. ಇದನ್ನು ಆಗಷ್ಟೇ ಹುಟ್ಟಿದ 

ಅನಾಥ ಮಕ್ಕಳನ್ನು ಎಸೆಯುವುದಕ್ಕೆ, ‘ಹೆಣ್ಣು’ ಎಂಬ ಭಯಾನಕ ಜೀವಿಯೊಂದು ಜನಿಸಿದರೆ ಅದನ್ನು ಕತ್ತು ಹಿಸುಕಿ ಕೊಂದು ಎಸೆಯುವುದಕ್ಕೆ, ಹೊಟ್ಟೆಯೊಳಗಿರುವ ಭ್ರೂಣವನ್ನು ಎಸೆಯುವುದಕ್ಕೆ ಬಳಸುತ್ತಾರೆ. ಇಂತಹ ಕೆಲಸಕ್ಕಾಗಿಯೇ ಈ ಗ್ರಹದಲ್ಲಿ ಚರಂಡಿ, ಗಟಾರ ಮೊದಲಾದವುಗಳನ್ನು ಮಾಡಿದ್ದಾರೆ. ಕಸಗಳನ್ನು ಎಸೆಯುವುದಕ್ಕೆ ಸಾರ್ವಜನಿಕ ಸ್ಥಳ, ಇನ್ನೊಬ್ಬರ ಅಂಗಳ, ರಸ್ತೆ ಇತ್ಯಾದಿಗಳನ್ನು ಬಳಸುತ್ತಾರೆ.
10. ಈ ಎಲ್ಲ ವರದಿಗಳ ಆಧಾರದಲ್ಲಿ ಸಾಬೀತಾಗುವುದೇನೆಂದರೆ, ಈ ಭೂಮಿ ಎಂಬ ಗ್ರಹ ಯಾವ ಕಾರಣಕ್ಕೂ ‘ಮನುಷ್ಯ’ರು ವಾಸ ಮಾಡುವುದಕ್ಕೆ ಯೋಗ್ಯವಾದ ಗ್ರಹ ಅಲ್ಲ. ಆದುದರಿಂದ ಮಂಗಳ ಗ್ರಹದ ಯಾವ ಮನುಷ್ಯರು ಕೂಡ ತಪ್ಪಿಯೂ ಈ ಭೂಮಿ ಎಂಬ ಗ್ರಹದಲ್ಲಿ ವಾಸ ಮಾಡುವ ಕುರಿತು ಯೋಚನೆ ಮಾಡಬಾರದು. ಹಾಗೆ ಯೋಚನೆ ಮಾಡಿದರೆ ಆಗುವ ಅನಾಹುತಕ್ಕೆ ಮಂಗಳ ಗ್ರಹದ ವಿಜ್ಞಾನಿಗಳಾಗಲಿ, ಸರಕಾರವಾಗಲಿ ಹೊಣೆಯಾಗುವುದಿಲ್ಲ.
(ಜನವರಿ, 20, 2008, ರವಿವಾರ)

Thursday, December 5, 2013

ಚುನಾವಣಾ ಹಬ್ಬದ ಹೊಸ ರುಚಿ

 (2008 ರಲ್ಲಿ ಚುನಾವಣೆಯ ಹೊತ್ತಿಗೆ ಬರೆದ ಬುಡಬುಡಿಕೆ ಇದು. ಆಗಿನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಲಿಲ್ಲ. ಪಶ್ಚಿಮಬಂಗಾಳದಲ್ಲಿ ನಂದಿಗ್ರಾಮದ ಗಲಾಟೆ. ಈ ಸಂದರ್ಭದಲ್ಲಿ ಮಾಡಿದ ಪತ್ರಕರ್ತ ಎಂಜಲು ಕಾಸಿ ಮಾಡಿದ ಹೊಸ ರುಚಿಯನ್ನು ಮತ್ತೆ ನಿಮ್ಮ ಮುಂದೆ ಬಡಿಸಲಾಗಿದೆ. ರುಚಿ ಹೇಗಿದೆ, ನೋಡಿ ಹೇಳಿ.)

ರಾಜ್ಯದಲ್ಲಿ ಚುನಾವಣಾ ಹಬ್ಬ ಹತ್ತಿರ ಬಂದಿರುವುದರಿಂದ ವಿವಿಧ ಪಕ್ಷಗಳು ಸಿದ್ಧಪಡಿಸಿರುವ ಹೊಸರುಚಿಗಳನ್ನು ಇಲ್ಲಿ ನೀಡಲಾಗಿದೆ.

ಕಾಂಗ್ರೆಸ್ ಬಿರಿಯಾನಿ
ನೂರು ದಷ್ಟಪುಷ್ಟ ಅಲ್ಪಸಂಖ್ಯಾತ ಕುರಿಗಳನ್ನು ತೆಗೆದುಕೊಂಡು ಕತ್ತರಿಸಿ ಮಾಂಸವನ್ನು ಚೆನ್ನಾಗಿ ಶುದ್ಧಿಗೊಳಿಸಿ ತೆಗೆದಿಟ್ಟುಕೊಳ್ಳಿ. ಈ ಕುರಿಗಳನ್ನು ಕತ್ತರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಸಾಯಿಗಳನ್ನೇ ಬಳಸಿ ಹಲಾಲ್ ಮಾಡಿದರೆ ಒಳ್ಳೆಯದು. ಬಳಿಕ ನೂರು ಕೆಜಿ ‘ಬ್ರಾಹ್ಮಿಣ್’ ಕಂಪೆನಿಯ ಗಂಧಸಾಲೆ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿ. ಇದಾದ ಬಳಿಕ ದಲಿತ, ಶೂದ್ರರನ್ನು ಒಟ್ಟಿಗೆ ಹಾಕಿ ಮಸಾಲೆ ಅರೆಯಿರಿ. ಮಸಾಲೆ ಸಿದ್ಧವಾದ ಬಳಿಕ ಬ್ರಾಹ್ಮಿಣ್ ಅಕ್ಕಿಯನ್ನು ಒಲೆಯ ಮೇಲೆ ಇಟ್ಟು ಕುರಿ ಮಾಂಸ ಮತ್ತು ಮಸಾಲೆಯನ್ನು ಒಟ್ಟಿಗೆ ಸುರಿಯಿರಿ. ಬೇಯುತ್ತಾ ಹೋದ ಹಾಗೆಯೇ ರಾಹುಲ್ ಕಂಪೆನಿಯ ತುಪ್ಪವನ್ನು ಹಾಕಿರಿ. ಈಗ ಬಿರಿಯಾನಿ ನಿಧಾನಕ್ಕೆ ಘಮಘಮಿಸಲಾರಂಭಿಸುತ್ತದೆ.ಬಳಿಕ, 2 ರೂಪಾಯಿ ಬೆಲೆಯ ಒಂದು ಕೆಜಿ ಅಕ್ಕಿಯನ್ನು ಹಾಕಿ ಚೆನ್ನಾಗಿ ತಿರುವಿರಿ. ಬಣ್ಣಕ್ಕೆ ತಕ್ಕಂತೆ ಕಲರ್ ಟಿ.ವಿ.ಗಳನ್ನು ಹಾಕಿ. ಯಾವುದೇ ಕಾರಣಕ್ಕೂ ಕೇಸರಿಯನ್ನು ಬಳಸಬೇಡಿ. ಅಲ್ಪಸಂಖ್ಯಾತ ಕುರಿ ಮಾಂಸಕ್ಕೆ ಕೇಸರಿ ಬೆರೆತರೆ ಅಷ್ಟು ರುಚಿಯಾಗಿರುವುದಿಲ್ಲ. ಆಮೇಲೆ ರೈತನನ್ನು ಕೈಗೆತ್ತಿಕೊಳ್ಳಿ. ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಬಿರಿಯಾನಿಯನ್ನು ಅಲಂಕರಿಸಿ, ಬಡ್ಡಿರಹಿತ ಸಾಲ, ಸಾಲಮನ್ನಾ ಮೊದಲಾದ ಪ್ಯಾಕೆಟ್ ಮಸಾಲೆಗಳನ್ನು ಬಳಸಿದರೂ ತೊಂದರೆಯಿಲ್ಲ. ಬಾಬರೀ ಮಸೀದಿ, ಗುಜರಾತ್ ಹತ್ಯಾಕಾಂಡ ಮೊದಲಾದ ಹಳಸಲು ಮಸಾಲೆಗಳನ್ನು ಹೆಚ್ಚು ಬಳಸಬೇಡಿ. ಹಾಗೆಂದು ಸಂಪೂರ್ಣ ಬಳಸದೇ ಇದ್ದರೆ, ಅಲ್ಪಸಂಖ್ಯಾತ ಕುರಿ ಮಾಂಸದ ಪ್ರಮಾಣಕ್ಕೆ ತಕ್ಕಂತೆ ಈ ಮಸಾಲೆಗಳನ್ನು ಹಾಕಿ ಚೆನ್ನಾಗಿ ಬೆಂದ ಹಾಗೆ, ಬೇಗ ಬೇಗನೆ ಬಡಿಸಿ. ಬಿಸಿಯಿದ್ದಷ್ಟು ರುಚಿ ಹೆಚ್ಚು. ತಣ್ಣಗಾದರೆ, ಬಿರಿಯಾನಿ ಕೆಟ್ಟು ಹೋಗುವ ಸಂಭವವಿದೆ.
               
**

ಬಿಜೆಪಿ ಕೇಸರಿ ಬಾತ್ (ವಿಶೇಷ ಸೂಚನೆ: ಮಾಮೂಲಿ ಕೇಸರಿ ಬಾತ್‌ನ ರುಚಿಗೂ, ಈ ಬಾತ್‌ಗೂ ವ್ಯತ್ಯಾಸವಿದೆ):
"ಮೋದಿ’ ಕಂಪೆನಿಯ ರವೆಯನ್ನು ನೂರು ಕೆಜಿ ಸಿದ್ಧವಾಗಿಟ್ಟುಕೊಳ್ಳಿ. 25 ಕೆಜಿ ಬಾಬಾಬುಡಾನ್‌ಗಿರಿ, 10 ಕೆಜಿ ಹಂಪಿ ದೇವಸ್ಥಾನವನ್ನು ಜೊತೆಗೆ ಸೇರಿಸಿ. ಈಗ ‘ಬ್ರಾಹ್ಮಿಣ್’ ಕಂಪೆನಿಯ ಹರಿತವಾದ ಚೂರಿಯನ್ನು ಕೈಗೆತ್ತಿಕೊಳ್ಳಿ, ಅಲ್ಪಸಂಖ್ಯಾತ ನೀರುಳ್ಳಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಇದೀಗ ‘ಗೋಮಾಂಸ’ವನ್ನು ಚೆನ್ನಾಗಿ ಕೊಚ್ಚಿ, ಅಲ್ಪಸಂಖ್ಯಾತ ನೀರುಳ್ಳಿಗಳ ಜೊತೆಗೆ ಮಿಶ್ರ ಮಾಡಿ. ಆ ಬಳಿಕ ಚೆನ್ನಾಗಿ ಬಲಿತ ಸುಮಾರು ಹತ್ತು ಸಿದ್ದಲಿಂಗಯ್ಯ ಮತ್ತು ಈಶ್ವರಪ್ಪರನ್ನು ತೆಗೆದುಕೊಂಡು ಮೃದುವಾಗಿ ನೋವಾಗದಂತೆ ಅವರಿಗೆ ಇರಿಯಿರಿ. ಅನಂತರ ಅವುಗಳನ್ನು ಚೆನ್ನಾಗಿ ಗೋಮೂತ್ರದಲ್ಲಿ ಕುದಿಸಿ, ಮೋದಿ ರವೆಗೆ ಬೆರೆಸಿ, ಪಾಕ ಒಂದು ಹದಕ್ಕೆ ಬಂದಾಗ, ರವೆಯಷ್ಟೇ ಪ್ರಮಾಣದಲ್ಲಿ ‘ಗಣಿ’ ತುಂಡುಗಳನ್ನು ಹಾಕಿ ತಿರುವಿರಿ.ಬಳಿಕ ಮಂಗಳೂರು ಗಲಭೆ, ಉಳ್ಳಾಲ ಗಲಭೆಯಲ್ಲಿ ಅರೆದಿಟ್ಟ ಮಸಾಲೆಗಳನ್ನು ಹೊರ ತೆಗೆದು ಸುರಿಯಿರಿ. ಪಾಕ ಕುದಿಯುತ್ತ ಹೋದ ಹಾಗೆಯೇ ಪರಿಮಳ ಹೊರ ಚಾಚ ತೊಡಗುತ್ತದೆ. ರುಚಿಗೆ ತಕ್ಕಷ್ಟು ಯಡಿಯೂರಪ್ಪ ಕಂಪೆನಿಯ ಮೊಸಳೆ ಕಣ್ಣೀರನ್ನು ಹಾಕಿ ಬಳಿಕ ಕೆಳಗಿಳಿಸಿ. ಯಾವುದೇ ಕಾರಣಕ್ಕೂ ಬಿಸಿ ಆರಲು ಬಿಡಬೇಡಿ. ಹೊಗೆಯಾಡುತ್ತಾ ಇದ್ದರೆ ರುಚಿ ಜಾಸ್ತಿ. ಆಲಂಕಾರಕ್ಕೆ ನಕ್ವಿ, ನಜ್ಮಾಹೆಪ್ತುಲ್ಲಾ ಗೋಡಂಬಿಗಳನ್ನು ಇಡಬಹುದು. ರುಚಿಗೆ ಬೇಕಾದಷ್ಟು ಜಾತ್ಯತೀತತೆಯನ್ನು ಮೇಲ್ಮೈಗೆ ಹರಡಿದರೆ, ಅದು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.
 ***
 ಸಿಪಿಐ-ಎಂ ಚಿಲ್ಲಿ

ಇದು  ಮಾಮೂಲಿ ಸಿಪಿಐಎಂ ಚಿಲ್ಲಿಯಲ್ಲ. ಹಿಂದೆ ಸಿಪಿಐಎಂ ಚಿಲ್ಲಿಯಲ್ಲಿ ಸೆಝ್ ಮಸಾಲೆ, ಜಾಗತೀಕರಣ ಮೊದಲಾದವುಗಳನ್ನು ಬಳಸುತ್ತಿರಲಿಲ್ಲ. ಆದರೆ ಇದೀಗ ಈ ಚಿಲ್ಲಿಯಲ್ಲಿ ಅವುಗಳನ್ನು ರುಚಿಗೆ ಪೂರಕವಾಗಿ ಬಳಸಲಾಗಿದೆ. ಮೊದಲು ನಂದಿಗ್ರಾಮ ತಳಿಯ ಕೋಳಿಗಳನ್ನು ತೆಗೆದುಕೊಂಡು ಕುಡುಗೋಲಿನಿಂದ ಕತ್ತರಿಸಿ. ಬಳಿಕ ರೈತರು, ಕಾರ್ಮಿಕರನ್ನು ತೆಗೆದು ಮಸಾಲೆ ಮಾಡಿ, ಕತ್ತರಿಸಿಟ್ಟ ನಂದಿಗ್ರಾಮಕ್ಕೆ ಬೆರೆಸಿ ಅನಂತರ ಬಾಣಲೆಗೆ ಸೆಝ್ ಕಂಪೆನಿಯ ಎಣ್ಣೆಯನ್ನು ಸುರಿದು, ಕೆಳಗೆ ಜಾಗತೀಕರಣದ ಬೆಂಕಿಯನ್ನು ಹಚ್ಚಿ ನಿಧಾನಕ್ಕೆ ಒಂದೊಂದೇ ತುಂಡು ಕೋಳಿಯನ್ನು ಎಣ್ಣೆಗೆ ಇಳಿಸಿ. ತುಸು ಹೊತ್ತಲ್ಲೇ ಪರಿಮಳ ಘಮಘಮಿಸತೊಡಗುತ್ತದೆ. ಇದನ್ನು ಅಮೆರಿಕದ ಬುಶ್‌ಗೆ ಬಡಿಸಿದರೆ ಭಾರತದ ಕಮ್ಯುನಿಸ್ಟ್ ಪಕ್ಷದ ಗೌರವ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
* * *
ಜೆ ಡಿಎಸ್ ರಾಗಿಮುದ್ದೆ
ಒಂದಿಷ್ಟು  ದೇವೇಗೌಡ ಕಂಪೆನಿಯ ಕಣ್ಣೀರನ್ನು ಸಂಗ್ರಹಿಸಿಟ್ಟುಕೊಳ್ಳಿ. ಆ ಕಣ್ಣೀರಿಗೆ ನೆಲದ ತಾಜಾ ಮಣ್ಣನ್ನು ಚೆನ್ನಾಗಿ ಬೆರೆಸಿ ಕಲಸಿ ಅಷ್ಟೇ ಪ್ರಮಾಣದಲ್ಲಿ ಒಳಮೀಸಲಾತಿ ಹಿಟ್ಟನ್ನು ಕಲಸಿ ಇಟ್ಟುಕೊಳ್ಳಿ. ಅಲ್ಪಸಂಖ್ಯಾತ ಕುರಿಗಳನ್ನು ಕಡಿದು, ಅದನ್ನು ದೇವೇಗೌಡ ಕಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಮಾಂಸವನ್ನು ಚೆನ್ನಾಗಿ ಅರೆಯಿರಿ. ಆ ಬಳಿಕ ಜಾತ್ಯತೀತ ಮಸಾಲೆಯನ್ನು ಮಾಂಸಕ್ಕೆ ಚೆನ್ನಾಗಿ ಬೆರೆಸಿ. ಈ ಹಿಂದೆ ಜಾತ್ಯತೀತ ಮಸಾಲೆಯಿಲ್ಲದೆ ಅಡುಗೆ ಮಾಡಲು ಹೋಗಿ, ಅದು ರುಚಿ ಕೆಟ್ಟಿರುವುದರಿಂದ ಯಾವ ಕಾರಣಕ್ಕೂ ಜಾತ್ಯತೀತ ಮಸಾಲೆ ಉಪಯೋಗಿಸಲು ಮರೆಯಬೇಡಿ. ಆ ಬಳಿಕ ಮೀರಾಜುದ್ದೀನ್ ಸೊಪ್ಪು ಬಳಸಿ ಒಗ್ಗರಣೆಯನ್ನು ಕೊಡಿ. ಖೇಣಿಯನ್ನು ತೆಗೆದು ಚೆನ್ನಾಗಿ ಕೊಯ್ದು, ಪಾತ್ರೆಗೆ ಹಾಕಿ. ಇದೀಗ ರಾಗಿ ಮುದ್ದೆ ಸಿದ್ಧ. ಇದನ್ನು ದೇವೇಗೌಡ ಕಂಪೆನಿಯ ಕಣ್ಣೀರಲ್ಲಿ ಮುಳುಗಿಸಿ ತಿಂದರೆ ರುಚಿ ಹೆಚ್ಚು.
    ***
 ಸ್ರೀರಾಮ್‌ಸೇನಾ ಬಜ್ಜಿ

ಹೊಸ ಖಾದ್ಯವಾದರೂ ಕೂಡಾ ಬಿಜೆಪಿ ಕೇಸರಿ ಬಾತ್‌ನ ರುಚಿಯನ್ನೇ ಹೋಲುತ್ತದೆ. ಬಾಬಾಬುಡಾನ್‌ಗಿರಿ, ಮಂಗಳೂರು ಗಲಭೆ ಮೊದಲಾದ ಮಸಾಲೆಯ ಜೊತೆಗೆ ಗೋಮಾಂಸವನ್ನೇ ಹೆಚ್ಚು ಬಳಸಿ ಸಿದ್ಧಗೊಂಡ ಖಾದ್ಯ. ಇದು ಗೋಮಾಂಸ ಹೆಚ್ಚು ಹೆಚ್ಚು ಹಾಕಿದಷ್ಟು ಇದರ ರುಚಿ ಹೆಚ್ಚುತ್ತದೆ. ರುಚಿಯಾಗಿದೆಯೆಂದು ಇದನ್ನು ಹೆಚ್ಚು ತಿನ್ನುವಂತಿಲ್ಲ. ಇದನ್ನು ಹೆಚ್ಚು ಸೇವಿಸಿದರೆ ಅಲ್ಸರ್, ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಬರಬಹುದು ಎಂದು ಆರೋಗ್ಯ ಸಚಿವ ಅಣ್ಣಾ ಮಣಿ ಈಗಾಗಲೇ ಎಚ್ಚರಿಸಿದ್ದಾರೆ. ಇದನ್ನು ಸ್ಪೂನ್‌ನ ಬದಲು ತ್ರಿಶೂಲವನ್ನು ಬಳಸಿ ತಿಂದರೆ ರುಚಿ ಹೆಚ್ಚು.
(ಎಪ್ರಿಲ್ 13, 2008 ರವಿವಾರ)

Tuesday, December 3, 2013

ರೋಗ ವಾಸಿಯಾಗಬೇಕಾದರೆ ಸಾಯುವುದೊಂದೇ ದಾರಿ...

(ಜನವರಿ, 6, 2008ರಲ್ಲಿ ವಾರ್ತಾಭಾರತಿಗೆ ಬರೆದ ಬುಡಬುಡಿಕೆ. ಬಿಜೆಪಿ ಇನ್ನೇನು ಅಧಿಕಾರ ಹಿಡಿಯುವ ಹೊತ್ತು. ಎಂ.ಪಿ. ಪ್ರಕಾಶ್ ಜೆಡಿಎಸ್‌ನಿಂದ ಹೊರ ಬಿದ್ದ ಸಮಯ. ಸುಗುಣೇಂದ್ರ ಸ್ವಾಮೀಜಿಯ ವಿರುದ್ಧ ಪೇಜಾವರರು ಉಡುಪಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ ಹೊತ್ತು. ಇಂತಹ ಸಂದರ್ಭದಲ್ಲಿ ನಡೆದ ಒಂದು ಆರೋಗ್ಯ ಸಮಾಲೋಚನೆಯನ್ನು ನಿಮ್ಮಿಂದಿಗೆ ಹಂಚಿಕೊಂಡಿದ್ದೇನೆ. )


ಮುಕ್ತ ಸಮಾಲೋಚನೆ.
ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳಿದ್ದಾರೆ. ಇತ್ತೀಚೆಗೆ ವಿವಿಧ ಓದುಗರು ಒಂದು ಮುಕ್ತ ಸಮಾಲೋಚನೆಯನ್ನು ಏರ್ಪಡಿಸಬೇಕು ಎಂದು ಒತ್ತಾಯಿಸಿದ್ದರಿಂದ ಇಲ್ಲಿ ಕೆಲವರ ಸಮಸ್ಯೆಗಳಿಗೆ ಉತ್ತರಿಸಲಾಗಿದೆ.
ಪ್ರಶ್ನೆ:  ಇತ್ತೀಚೆಗೆ ನನಗೆ ಎಲ್ಲರಿಗೂ ವಂಚನೆ ಮಾಡಬೇಕು ಎಂದು ಮನಸ್ಸಾಗುತ್ತದೆ. ನಿನ್ನೆ ಒಂದು ಮಾತನ್ನಾಡಿದರೆ, ನಾಳೆ ಅದಕ್ಕೆ ವಿರುದ್ಧವಾದ ಮಾತನ್ನಾಡುತ್ತೇನೆ. ನಿನ್ನೆ ನೀಡಿದ ಭರವಸೆ ಇವತ್ತು ನನಗೆ ನೆನಪಿಗೆ ಬರುವುದಿಲ್ಲ. ಇದು ಕಳೆದ ಐದು ವರ್ಷಗಳಿಂದ ತೀವ್ರವಾಗಿದೆ. ನನ್ನ ಆತ್ಮೀಯರೆಲ್ಲ ನನ್ನ ಈ ವರ್ತನೆಯಿಂದ ದೂರವಾಗಿದ್ದಾರೆ. ಮಕ್ಕಳೂ ಸಿಟ್ಟಾಗಿದ್ದಾರೆ. ನನ್ನ ವಯಸ್ಸು 80 ದಾಟಿದೆ. ವಯಸ್ಸಿನ ಪರಿಣಾಮದಿಂದ ಹೀಗಾಗಿರಬಹುದೆ? ದಯವಿಟ್ಟು ಪರಿಹಾರ ಸೂಚಿಸಬೇಕು. ನನ್ನ ಕಾಟ ತಡೆಯಲಾರದೆ ನನ್ನ ಕುಟುಂಬ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ಲಾನ್ ಹಾಕುತ್ತಿದ್ದಾರೆ ಎಂದು ಇತ್ತೀಚೆಗೆ ಅನ್ನಿಸುತ್ತಿದೆ. ಇದು ನಿಜವಾಗಿರಬಹುದೇ? ಅಥವಾ ನನ್ನ ಊಹೆಯಾಗಿರಬಹುದೆ?
ವದೇ ಗೌಡ ಹಾಸನ
ಉತ್ತರ: ನಿಮ್ಮ ಕಾಯಿಲೆ ಈಗಾಗಲೇ ಆರಂಭ ಹಂತವನ್ನು ದಾಟಿ, ಉಲ್ಭಣಿಸಿದೆ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಇದು ಸದ್ಯಕ್ಕೆ ಗುಣವಾಗುವ ರೋಗ ಅಲ್ಲ. ಇದೊಂದು ಮಾನಸಿಕ ಕಾಯಿಲೆ. ‘ಸ್ವಾರ್ಥೋ ಫೋಬಿಯಾ’ವೇ ಎಲ್ಲಕ್ಕೂ ಮುಖ್ಯ ಕಾರಣವಾಗಿದೆ. ಆದಷ್ಟು ಕುಟುಂಬದಿಂದ ದೂರವಿರಿ. ಇಲ್ಲವಾದರೆ ಅವರು ನಿಮ್ಮ ಜೀವಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ. ಸ್ವಾರ್ಥೋಫೋಬಿಯಾ ಆರಂಭದಲ್ಲಿ ಕುಟುಂಬದವರಿಗೆ ಹಿತವಾಗಿಯೇ ಕಾಣುತ್ತದೆ. ಆದರೆ ನಿಧಾನಕ್ಕೆ ಅದರಿಂದ ಸಮಸ್ಯೆ ಉಂಟಾದಾಗ ಅವರು ನಿಮ್ಮನ್ನು ದ್ವೇಷಿಸಲು ಆರಂಭಿಸುತ್ತಾರೆ. ನಿಮ್ಮ ರೋಗ ಈಗ ಎರಡನೆ ಹಂತಕ್ಕೆ ಬಂದಿದೆ. ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವ ಅವರ ನಿರ್ಧಾರವನ್ನು ನೀವು ಸರಿಯಾಗಿಯೇ ಊಹಿಸಿದ್ದೀರಿ. ಅಭಿನಂದನೆಗಳು. ಈ ಕಾಯಿಲೆಗೆ ಒಂದೇ ಪರಿಹಾರವೆಂದರೆ, ಪಥ್ಯ. ದಾಹವಾದಾಗ ಅಧಿಕಾರವನ್ನು ಕುಡಿಯುವ ಅಭ್ಯಾಸವನ್ನು ನಿಲ್ಲಿಸಿ. ನೀರನ್ನೇ ಕುಡಿಯಿರಿ. ಕುಟುಂಬ ಮೋಹವನ್ನು ತೊರೆಯಿರಿ. ಜೀವನ ನಶ್ವರ ಎನ್ನುವುದನ್ನು ತಿಳಿಯಿರಿ. ತಮ್ಮ ಕಿರಿಯ ಮಗ ಸುಕುಮಾರ ಸ್ವಾಮಿ ಏನನ್ನು ಕೊಟ್ಟರೂ ತಕ್ಷಣ ತಿನ್ನಬೇಡಿ. ಮೊದಲು ಒಂದು ತುತ್ತನ್ನು ನಿಮ್ಮ ಪ್ರೀತಿಯ ಎಸ್.ವೈ.ದತ್ತಾ ಅಥವಾ ಮಿರಾಜುದ್ದೀನ್ ಪಟೇಲ್‌ರಿಗೆ ಕೊಟ್ಟು, ಅವರಿಗೆ ಏನೂ ಆಗದಿದ್ದರೆ ಬಳಿಕ ನೀವು ತಿನ್ನಿ. ನೀವೇ ಈ ಹಿಂದೆ ಘೋಷಿಸಿದಂತೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ. ಈ ರೋಗ ನಿಮಗೆ ವಾಸಿಯಾಗಬೇಕಾದರೆ ಮಡಿಯುವುದೊಂದೇ ದಾರಿ.
                ***
ಪ್ರಶ್ನೆ: ಇತ್ತೀಚೆಗೆ ನನ್ನ ಕನಸಿನಲ್ಲಿ ಭೀಕರ ಜೀವಿಗಳೆಲ್ಲಾ ಬಂದು ತೊಂದರೆ ಕೊಡುತ್ತಿದ್ದಾರೆ. ಹಿಂಬದಿಯಿಂದ ಯಾರೋ ಚೂರಿಯಿಂದ ಚುಚ್ಚಿದಂತೆ ಅನ್ನಿಸುತ್ತದೆ. ಮೊನ್ನೆ ರಾತ್ರಿ ಒಂದು ಬಾವಿಯನ್ನು ಕಂಡಿದ್ದೆ. ನಿನ್ನೆ ಹಗಲಿನಲ್ಲಿ ಅದೇ ಬಾವಿಗೆ ಹೋಗಿ ಬಿದ್ದಿದ್ದೇನೆ. ಬಾವಿಯನ್ನು ಕಂಡಾಗಲೆಲ್ಲ ಬೀಳಬೇಕೆಂದು ಆಸೆಯಾಗುತ್ತದೆ. ಇನ್ನೊಬ್ಬರ ಕೈಯಲ್ಲಿ ಟೋಪಿ ಹಾಕಿಸುವುದೆಂದರೆ ಬಹಳ ಖುಷಿ. ಜನರು ನನ್ನನ್ನು ನೋಡಿ ನಗುತ್ತಿದ್ದಾರೆ. ಬದುಕುವುದೇ ಬೇಡವೆನ್ನಿಸುತ್ತದೆ. ಆಗಾಗ ಖಿನ್ನತೆ ಆವರಿಸುತ್ತದೆ. ಯಾವ ಬಾವಿಗಾದರೂ ಬಿದ್ದು ಸಾಯೋಣ ಅನ್ನಿಸುತ್ತದೆ. ದಯವಿಟ್ಟು ನನ್ನ ಸಮಸ್ಯೆಯನ್ನು ಪರಿಹರಿಸಿ, ಚುನಾವಣೆ ಬೇರೆ ಹತ್ತಿರ ಬಂದಿದೆ. ಈಗ ನಾನೇನು ಮಾಡಲಿ?
ಯಡಿಯೂರಪ್ಪ, ಹಾಳುಬಾವಿಯೊಳಗಿಂದ, ಶಿವಮೊಗ್ಗ
ಉತ್ತರ: ನೀವು ವಾಸ್ತವವನ್ನೇ ಕನಸು ಎಂದು ಭ್ರಮಿಸುತ್ತಿದ್ದೀರಿ. ನಿಮಗೆ ಭೀಕರ ಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಕನಸಿನಲ್ಲಲ್ಲ. ವಾಸ್ತವದಲ್ಲಿ. ಕುಮಾರಸ್ವಾಮಿ, ದೇವೇಗೌಡರನ್ನು ನೆನೆದು ನೀವು ಬೆಚ್ಚುತ್ತಿದ್ದೀರಿ. ಹಿಂಬದಿಯಿಂದ ಯಾರೋ ಚೂರಿಯಿಂದ ಚುಚ್ಚಿದಂತೆ ಅನ್ನಿಸುತ್ತದೆ ಎಂದಿದ್ದೀರಿ. ನಿಜಕ್ಕೂ ನಿಮ್ಮ ಹಿಂಬದಿಯಿಂದ ಅನಂತಕುಮಾರ್ ನಿಮಗೆ ಚೂರಿಯಿಂದ ಚುಚ್ಚುತ್ತಿದ್ದಾರೆ. ನೀವು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅಷ್ಟೆ. ನೀವು ಸಾಯಬೇಕೆಂದರೆ ಯಾವುದಾದರೂ ಬಾವಿಗೆ ಬೀಳ ಬೇಕೆಂದೇ ಇಲ್ಲ. ನೀವಿಗ ಇರುವ ಬಿಜೆಪಿಯೇ ದೊಡ್ಡ ಹಾಳು ಬಾವಿ. ಇನ್ನು ಸ್ವಲ್ಪ ಕಾಲ ಅಲ್ಲಿದ್ದರೆ ನೀವು ಖಂಡಿತ ಸತ್ತು ಹೋಗುತ್ತೀರಿ. ಇಲ್ಲವಾದರೆ ಮೇಲಿನಿಂದ ಅನಂತಕುಮಾರ್ ಬಳಗ ಕಲ್ಲು ಎತ್ತಿ ಹಾಕಲು ರೆಡಿಯಾಗಿ ನಿಂತಿವೆ. ಆದುದರಿಂದ ಹೇಗೆ ಸಾಯುವುದೆಂಬ ಚಿಂತೆಯನ್ನು ಬಿಡಿ.
                ***
ಪ್ರಶ್ನೆ: ಸಾರ್ ನನ್ನ ಹೆಸರು ಪಿಂಪಿ ಪ್ರಕಾಶ. ನಾನು ಮಾಜಿ ಪ್ರಧಾನಿಗಳಾದ ವದೇಗೌಡರ ಮನೆಯಲ್ಲಿ ‘ಗೃಹ’ ಕೃತ್ಯಗಳನ್ನು ಮಾಡಿಕೊಂಡಿದ್ದೆ. ಇತ್ತೀಚೆಗೆ ಅವರ ಮಕ್ಕಳಿಗೆ ಬೇಕಾದ ಭಕ್ಷವನ್ನು ಮಾಡಿ ಬಡಿಸಲಿಲ್ಲ ಎಂದು ನನಗೆ ಬೈದರು. ಆದುದರಿಂದ ಸಿಟ್ಟಿನಿಂದ ಹೊರಗೆ ಬಂದೆ. ಸಿಟ್ಟಿನಿಂದ ಕೊಯ್ದ ಮೂಗು ಮರಳಿ ಬರುವುದಿಲ್ಲ ಎಂಬ ಹಾಗೆ ನಾನೀಗ ನಿರುದ್ಯೋಗಿಯಾಗಿದ್ದೇನೆ. ಎಲ್ಲಿಯೂ ನನಗೆ ಕೆಲಸ ಸಿಗುತ್ತಿಲ್ಲ. ನನಗೊಬ್ಬ ಮಗನೂ ಇರುವುದರಿಂದ, ಕೆಲಸವಿಲ್ಲದೆ ತುಂಬ ಕಷ್ಟವಾಗಿದೆ. ಮಗ ಊಟ ಮಾಡದೆ ತುಂಬ ದಿನಗಳಾಗಿವೆ. ದಯವಿಟ್ಟು ಒಂದು ಕೆಲಸ ಹುಡುಕಿಕೊಡುತ್ತೀರ?
ಪಿಂಪಿಪ್ರಕಾಶ, ಕ್ಯಾರ್ ಆಫ್ ಫೂಟ್‌ಪಾತ್, ಬೆಂಗಳೂರು.
ಉತ್ತರ: ನೀವು ಆರೋಗ್ಯ ಕಾಲಂನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಬರೆದಿದ್ದೀರಿ. ಆದರೂ ನಾನು ಉತ್ತರಿಸುತ್ತೇನೆ. ಆರೋಗ್ಯಕ್ಕೂ ಉದ್ಯೋಗಕ್ಕೂ ತುಂಬಾ ಸಂಬಂಧವಿದೆ. ಈಗ ನೀವು ಬಯಸಿದ ಕೆಲಸ ಸಿಗುವುದು ತುಂಬಾ ಕಷ್ಟ. ನೀವು ‘ಗೃಹ’ ಕೃತ್ಯದಲ್ಲಿ ಎಕ್ಸ್‌ಪರ್ಟ್ ಆಗಿದ್ದರೂ ಬೇರೆ ಕಡೆ ಈ ಸಂದರ್ಭದಲ್ಲಿ ಆ ಕೆಲಸ ಸಿಗಲಾರದು. ಯಾಕೆಂದರೆ ಈಗ ಎಲ್ಲರೂ ಉದ್ಯೋಗ ಹುಡುಕುತ್ತಿರುವ ಕಾಲ. ಅದಲ್ಲದೆ ನೀವು ಕಾಂಗ್ರೆಸ್ ಕಂಪೆನಿಯಲ್ಲೇ ಕೆಲಸ ಸಿಗಬೇಕು ಎಂದು ಬಯಸುತ್ತೀರಿ. ನಿಮಗೆ ಬೇರೆ ವಯಸ್ಸಾಗಿದೆ. ವಯಸ್ಸಾದ ಕುಳಗಳು ಅಲ್ಲಿ ತುಂಬಾ ಇರುವುದರಿಂದ, ನಿಮ್ಮ ಬದಲಿಗೆ ನಿಮ್ಮ ಮಗನಿಗೆ ಅಲ್ಲಿ ಕೆಲಸ ಕೊಟ್ಟಾರು. ನಿಮ್ಮ ಮಗನ ಕೆಲಸದ ಅನುಭವದ ಬಗ್ಗೆ ನೀವು ಪತ್ರದಲ್ಲಿ ಬರೆದಿಲ್ಲ. ಪ್ರಾಯ ಪೂರ್ತಿಯಾಗದಿದ್ದರೆ ಕಾಂಗ್ರೆಸ್ ಕಂಪೆನಿಯಲ್ಲಿ ಕೆಲಸ ಮಾಡಲಾಗುವುದಿಲ್ಲ. ಅದರ ಚೇರ್‌ಮೆನ್ ಮೇಡಂ ಮಗ ರಾಹುಲ್‌ಗಾಂಧಿಯನ್ನೇ ಬಾಲಕಾರ್ಮಿಕ ಎಂದು ವಿರೋಧಿ ಕಂಪೆನಿಯವರು ದೂರುತ್ತಿರುವಾಗ, ನಿಮ್ಮ ಮಗನಿಗೆ ಅಲ್ಲಿ ಕೆಲಸ ಸಿಕ್ಕಿತೆಂದು ಅನ್ನಿಸುವುದಿಲ್ಲ. ವಯಸ್ಸು ಪೂರ್ತಿಯಾಗಿದ್ದರೆ, ಕಾಂಗ್ರೆಸ್ ಕಂಪೆನಿಯಲ್ಲಿ ಬಾವುಟ ಹಿಡಿಯುವುದು, ಮೇಜು ಒರೆಸುವುದು ಮೊದಲಾದ ಕೆಲಸ ಬಾಕಿ ಇದೆಯಂತೆ. ಸದ್ಯಕ್ಕೆ ಅದನ್ನು ಮಾಡಲಿ. ಫೂಟ್‌ಫಾತಿನಲ್ಲಿ ಹೆಚ್ಚು ಸಮಯ ಕಾಲ ಕಳೆಯಬೇಡಿ. ಮುನ್ಸಿಪಾಲಿಟಿ ಲಾರಿ ಬಂದರೆ ಕಸದ ಜೊತೆಗೆ ಹಾಕಿಕೊಂಡು ಹೋದಾರು. ಸಾಧ್ಯವಾದರೆ ಮತ್ತೆ ವದೇಗೌಡರ ಮನೆಗೇ ಹೋಗಿ ಸೇರಿ. ಗೃಹಕೃತ್ಯದ ಕೆಲಸ ಮಾಡುತ್ತಾ ವದೇಗೌಡರ ರಾಗಿ ಮುದ್ದೆಯಲ್ಲಿ ವಿಷ ಬೆರೆಸಿಕೊಟ್ಟರೆ, ಅವರ ಮಗ ನಿಮಗೆ ಬಹುಮಾನವಾಗಿ ಯಾವುದಾದರೂ ಒಳ್ಳೆಯ ಹುದ್ದೆಯನ್ನು ಕೊಡಬಹುದು. ನಿಮಗೆ ಒಳ್ಳೆಯದಾಗಲಿ.
                  ***
ಪ್ರಶ್ನೆ:  ನನ್ನ ಹೆಸರು ಪಿ.ಜೇವರ ಸ್ವಾಮಿ ಎಂದು. ನಾನು ಒಂದು ಕುಡುಪಿ ಎಂಬ ಊರಿನ ಒಂದು ಪುರಾತನ ಕಂಪೆನಿಯೊಂದರಲ್ಲಿ ಬಾಸ್ ಆಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ನನ್ನ ಕುತ್ತಿಗೆ ನಡುವೆ ಒಂದು ಕುರ ಎದ್ದು ನಡೆಯುವುದಕ್ಕೆ ಕಷ್ಟವಾಗಿದೆ. ಸಾಗರವನ್ನು ಕಂಡರೆ ನನಗೆ ಭಯ. ಇತ್ತೀಚೆಗೆ ನನ್ನ ಕುತ್ತಿಗೆಯ ಕುರ ಇನ್ನಷ್ಟು ಬಾತಿದೆ. ನೋವಿನಿಂದ ಕತ್ತು ತಿರುಗಿಸುವುದಕ್ಕಾಗುತ್ತಿಲ್ಲ. ಮಾತನಾಡಲೂ ಆಗುತ್ತಿಲ್ಲ. ದಿನಾ ಕೃಷ್ಣ ಕೃಷ್ಣ ಎಂದು ಜಪಿಸಿದರೂ ಇದಕ್ಕೆ ಪರಿಹಾರ ಕಾಣುತ್ತಿಲ್ಲ. ದಯವಿಟ್ಟು ಚಿಕಿತ್ಸೆಯನ್ನು ಸೂಚಿಸಿ.
ಪಿ. ಜೇವರಸ್ವಾಮಿ, ಕುಡುಪಿ (ದಯವಿಟ್ಟು ನನ್ನ ಹೆಸರು ಊರನ್ನು ಪ್ರಕಟಿಸಬೇಡಿ)
ಉತ್ತರ: ಕುತ್ತಿಗೆ ಸುಗುಣೇಂದ್ರಿಯಗಳನ್ನು ನಿಯಂತ್ರಿಸಿದ ಪರಿಣಾಮವಾಗಿ ಈ ಕುರ ಎದ್ದಿದೆ. ಸಾಗರದ ನೀರನ್ನು ನೋಡುವಾಗ ಭಯವಾಗಲೂ ಈ ಕುರವೇ ಕಾರಣ. ಆದುದರಿಂದ ಸಾಧ್ಯವಾದಷ್ಟು ಸಾಗರದಿಂದ ದೂರವಿರಿ. ಈ ಕುರವು ಒಡೆದರೆ ನಿಮ್ಮ ಹುದ್ದೆಗೂ, ಪ್ರಾಣಕ್ಕೂ ಅಪಾಯವಿದೆ. ಆದುದರಿಂದ ಸದ್ಯಕ್ಕೆ ಕುರ ಒಡೆಯದ ಹಾಗೆ ಕಾಪಾಡಿಕೊಳ್ಳಿ. ಸಾಧ್ಯವಾದರೆ, ಶ್ರೀರಾಮ ಜನ್ಮಭೂಮಿ ತೈಲವನ್ನು ಬಳಸಿ, ಅಥವಾ ಬಾಬಾ ಬುಡಾನ್‌ಗಿರಿ ಮುಲಾಮನ್ನು ಈ ಸಂದರ್ಭದಲ್ಲಿ ಬಳಸಬಹುದು. ಆಗ ಈ ಕುರದ ನೋವು ಒಂದಿಷ್ಟು ಕಡಿಮೆಯಾಗಬಹುದು. ಕನಿಷ್ಟ ಅದು ಒಡೆಯುವ ಅಪಾಯವಾದರೂ ತಪ್ಪಬಹುದು. ಮತ್ತೆ ಮತ್ತೆ ಅದೇ ಪುನರೂರು, ಕಲ್ಕೂರ ತೈಲವನ್ನು ಬಳಸುವುದನ್ನು ನಿಲ್ಲಿಸಿ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಆ ಮದ್ದನ್ನು ಬಳಸಿದ್ದೇ ರೋಗ ಇನ್ನಷ್ಟು ಉಲ್ಭಣಿಸಲು ಕಾರಣ. ಸಾಧ್ಯವಾದರೆ, ‘ಗೋವಧಾ’ ಕ್ಯಾಪ್ಸುಲ್‌ಗಳನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ. ಸಾಧ್ಯವಾದರೆ ಕುಡುಪಿಗೆ ಬೆಂಕಿ ಹಚ್ಚಿ ಆ ಬೆಂಕಿಯ ಕಾವಿನಲ್ಲಿ ನಿಮ್ಮ ಕುರ ತನ್ನಷ್ಟಗೆ ಆರಿ ಹೋಗುವ ಸಾಧ್ಯತೆ ಇದೆ. ‘ನರೇಂದ್ರ ಮೋದಿ’ ಮುಲಾಮನ್ನು ಒಮ್ಮೆ ಬಳಸುವುದಕ್ಕೆ ಪ್ರಯತ್ನಿಸಿ.
(ಜನವರಿ, 6, 2008, ರವಿವಾರ)

Monday, December 2, 2013

‘ಏನೋ... ನಿನ್ನ ಮುಖದಲ್ಲೊಂದು ‘ಉಗ್ರ’ನ ಲಕ್ಷಣ ಇದೆ...?’’

(ಫೆಬ್ರವರಿ 3, 2008ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ ಇದು. ಇಂದಿಗೂ ಇದು ಪ್ರಸ್ತುತ ಅನ್ನಿಸಿದರೆ ಅದು ಪತ್ರಕರ್ತ ಎಂಜಲು ಕಾಸಿಯ ಭಾಗ್ಯ)

ಎಂಜಲು ಕಾಸಿಗೆ ಎನಾದರೂ ಸ್ಕೂಪ್ ವರದಿಯನ್ನು ತಯಾರಿಸಬೇಕೆಂದು ಮನಸಾಯಿತು. ಏನಾದರೂ ಸಿಕ್ಕೀತು ಎಂದು ಲೋಕಲ್ ಪೊಲೀಸ್ ಸ್ಟೇಶನ್ ಕಡೆಗೆ ದಾವಿಸಿದ. ಅಲ್ಲಿ ಕಾನ್ಸ್‌ಟೇಬಲ್ ಉಗ್ರಪ್ಪ ಇದ್ದ. ಎಂಜಲು ಕಾಸಿ ತನಗೆ ಯಾವುದೇ ಮಾಹಿತಿ ಬೇಕೆಂದರೂ ಈ ಉಗ್ರಪ್ಪನನ್ನೇ ಸಂಪರ್ಕಿಸುವುದು. ಅವನ ಸುದ್ದಿ ಮೂಲಗಳೆಲ್ಲಾ ಈ ಉಗ್ರಪ್ಪನೇ ಆಗಿದ್ದ. ಪೊಲೀಸ್ ಠಾಣೆಯಲ್ಲಿ ಹೆಚ್ಚಾಗಿ ಕಸ ಗುಡಿಸುವ ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡುವ ಉಗ್ರಪ್ಪ, ತನ್ನ ಸಾಹೇಬರುಗಳು ಆಡುವ ಮಾತುಗಳನ್ನು ಅಷ್ಟಿಷ್ಟು ಕೇಳಿಸಿ, ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಎಂಜಲು ಕಾಸಿಗೆ ಹೇಳುತ್ತಿದ್ದ. ಕಾಸಿಯ ಪತ್ರಿಕೆ ಬದುಕುತ್ತಿದ್ದುದೇ ಈ ಕಾನ್‌ಸ್ಟೇಬಲ್ ನೀಡುತ್ತಿದ್ದ ಸುದ್ದಿಗಳಿಂದ.
ಕಾಸಿ ಠಾಣೆಗೆ ಭೇಟಿ ನೀಡಿದ. ‘‘ಸಾರ್ ಬಿಸಿಯಾಗಿದ್ದೀರಾ ಸಾರ್’’?
ಉಗ್ರಪ್ಪ ಹೇಳಿದ ‘‘ಹೌದು ಒಂದು ಸ್ವಲ್ಪ ಬಿಸಿಯಾಗಿದ್ದೇನೆ. ಸಾಹೇಬರು ಉಂಡ ಊಟದ ತಟ್ಟೆಗಳೆಲ್ಲ ಹಾಗೆ ಉಳ್ಕೊಂಡಿವೆ. ಅವನ್ನೆಲ್ಲ ತೊಳೆದಿಡೋದಕ್ಕೆ ಹೇಳಿದ್ದಾರೆ. ಹಾಗೆಯೇ ಒಂದು ಸುತ್ತು ಠಾಣೆಯನ್ನು ಗುಡಿಸಿ ಸಾಹೇಬರು ಬರುವ ಮೊದಲು, ಅವರ ಬಟ್ಟೆಗಳನ್ನೆಲ್ಲ ಲಾಂಡ್ರಿಗೆ ಕೊಡಬೇಕು... ಸಾಹೇಬ್ರ ಮನೆಗೆ ತರಕಾರಿ ಕೊಂಡು ಹೋಗಿ ಕೊಡಬೇಕು...’’
ಉಗ್ರಪ್ಪ ಹೀಗೆ ಹೇಳುತ್ತಿರುವಾಗ ಕಾಸಿ ಮಧ್ಯದಲ್ಲೇ ಅದರ ಓಘವನ್ನು ಕತ್ತರಿಸಿ ಕೇಳಿದ. ‘‘ಸಾ...ರ್... ಏನಾದ್ರೂ ಉಂಟಾ ಸಾರ್...’’
ಉಗ್ರಪ್ಪನಿಗೆ ಅರ್ಥವಾಯಿತು. ಕಾಸಿ ಟೇಶನಿಗೆ ಬಂದರೆ ಏನಾದರೂ ಸುದ್ದಿ ಹಿಡಿದುಕೊಂಡೇ ಹೋಗುವುದು ಎನ್ನುವುದು ಆತನಿಗೆ ಗೊತ್ತಿತ್ತು. ‘‘ಒಂದು ಆಕ್ಸಿಡೆಂಟ್ ಉಂಟು?’’ ಎಂದ ಉಗ್ರಪ್ಪ.
ಕಾಸಿ ಆಸೆಯಿಂದ ಕೇಳಿದ ‘‘ಯಾರಾದರೂ ಸತ್ತಿದ್ದಾರಾ ಸಾರ್?’’
ಉಗ್ರಪ್ಪ ಸ್ಟೇಷನ್ನಿನ ನೆಲ ಒರೆಸುತ್ತಾ ಹೇಳಿದ ‘‘ಹಾಗೇನೂ ಇಲ್ಲ. ಒಬ್ಬ ಸೀರಿಯಸ್ ಅಂತೆ...’’
ಕಾಸಿಗೆ ಸಖತ್ ಬೇಜಾರಾಯಿತು ಆದರೂ ಆಸೆ ಬಿಡದೇ ಕೇಳಿದ ‘‘ಅವನು ಸಾಯುವ ಚಾನ್ಸ್ ಉಂಟಾ ಸಾರ್...’’
ಉಗ್ರಪ್ಪ ಹೇಳಿದ ‘‘ಡಾಕ್ಟರೇನಾದ್ರೂ ಮನಸ್ಸು ಮಾಡಿದರೆ ಸಾಯುವ ಚಾನ್ಸ್ ಉಂಟು. ಮತ್ತೆ ಒಬ್ಬ ಪಿಕ್‌ಪಾಕೆಟ್ ಮಾಡ್ದೋನು ಸಿಕ್ಕಿದ್ದಾನೆ...?
ಕಾಸಿಗೆ ಅದು ತೀರ ಸಣ್ಣ ಕೇಸು ಅಂತನ್ನಿಸಿತು. ಯಾವಾಗ ನೋಡಿದ್ರೂ ಪಿಕ್‌ಪಾಕೆಟ್ ಕಳ್ಳರ ಸುದ್ದಿಯನ್ನೇ ತರ್ತೀರಲ್ಲಾರೀ... ಒಂದೇ ಒಂದು ಸರ್ತಿಯಾದರೂ ಉಗ್ರರ, ಭಯೋತ್ಪಾದಕರ ಸುದ್ದಿ ತಂದಿದ್ದೀರಾ...’’ ಎಂದು ಸದಾ ಸಂಪಾದಕರು ಕಾಸಿಗೆ ಛೀಮಾರಿ ಹಾಕುತ್ತಿದ್ದರು.
ಕಾಸಿ ತುಸು ಆಸೆಯಿಂದ ಕೇಳಿದ ‘‘ಪಿಕ್‌ಪಾಕೆಟ್ ಕಳ್ಳ ನೋಡಲು ಹೇಗಿದ್ದಾನೆ? ಗಡ್ಡ ಇಟ್ಟಿದ್ದಾನ?’’
ಉಗ್ರಪ್ಪ ಹೇಳಿದ ‘‘ಇಲ್ಲ... ಆದರೆ ಎರಡು ದಿನ ಪೊಲೀಸ್ ಠಾಣೆಯಲ್ಲೇ ಇದ್ರೆ ಗಡ್ಡ ತನ್ನಷ್ಟಕ್ಕೆ ಬಂದು ಬಿಡುತ್ತೆ ಬಿಡಿ...’’
ಕಾಸಿ ತನ್ನ ಪ್ರಯತ್ನ ಮುಂದುವರಿಸಿದ ‘‘ಹೆಸರು ಏನು. ಅಬ್ದುಲ್ ರಹೀಂ ಅಥವಾ ಅಬ್ದುಲ್ ಆಸೀಫ್ ಎಂದಿದ್ದರೆ ಅವನಿಗೆ ಉಗ್ರರ ಜೊತೆಗೆ ನಂಟಿದೆಯಾ ಎಂದು ವಿಚಾರಣೆ ಮಾಡಬಹುದಲ್ಲ?’’
ಉಗಗ್ರಪ್ಪನೂ ನಿರಾಸೆಯಿಂದ ಹೇಳಿದ ‘‘ಅದೇ ಕಷ್ಟ ಬಂದಿರೋದು. ಈ ಬೋ... ಮಗನ ಹೆಸರು.... ರಮೇಶ ಅಂತ...’’
ಕಾಸಿಗೆ ಭಾರೀ ಬೇಜಾರಾಯಿತು. ಅಷ್ಟರಲ್ಲಿ ಉಗ್ರಪ್ಪ ಹೇಳಿದ ‘‘ಇಲ್ಲೊಬ್ಬ.. ಏನೋ ಮನೆ ಸಮಸ್ಯೆ ಕುರಿತಂತೆ ಕಂಪ್ಲೇಟು ಕೊಡ್ಲಿಕ್ಕೆ ಬಂದಿದ್ದಾನೆ. ಅವನೊಬ್ಬ ಸಾಬಿ ಅಂತ ಕಾಣುತ್ತೆ...’’
ಎಂಜಲು ಕಾಸಿ ಎಂಜಲು ಸುರಿಸುತ್ತಾ ಕೇಳಿದ... ‘‘ಹಾಗಾದರೆ ಮತ್ಯಾಕೆ ತಡ. ಅವನನ್ನೊಮ್ಮೆ ಉಗ್ರನ ಸಂಪರ್ಕ ಇದೆಯೋ ಅಂತ ವಿಚಾರಣೆ ಮಾಡಬಹುದಲ್ಲ...’’
ಉಗ್ರಪ್ಪ ಗಡ್ಡ ತುರಿಸುತ್ತಾ ಹೇಳಿದ ‘‘ಅದನ್ನು ನಾವು ಕೇಳೋಕಾಗಲ್ಲ ಅಲ್ವಾ.... ಅದು ಸಾಹೇಬರು ನಿರ್ಧಾರ ಮಾಡ್ಬೇಕು...’’
ಕಾಸಿ ಕೇಳಿದ ‘‘ಅವನ ಹೆಸರೇನಂತೆ...’’
ಉಗ್ರಪ್ಪ ಕಂಪ್ಲೇಟು ಹಿಡಿದುಕೊಂಡವನ ಕಡೆ ನೋಡಿ ‘‘ಸುವ್ವರ್ ನನ್ ಮಗ್ನೆ... ಏನೋ ನಿನ್ನ ಹೆಸರು?’’ ಕೇಳಿದ.
ಕಂಪ್ಲೇಟು ಹಿಡಿದುಕೊಂಡವನು ಗದಗದ ನಡುಗುತ್ತಾ ಹೇಳಿದ ‘‘ಹುಸೇನ್ ಸಾಬಿ ಸಾರ್.. ನನ್ನ ಮನೆಯಲ್ಲಿ ಕಳ್ಳತನ ಆಗಿದೆ... ಅದರ ಬಗ್ಗೆ ಕಂಪ್ಲೇಟು ಕೊಡ್ಬೇಕೂಂತ ಬಂದೆ ಸಾರ್...’’
ಕಾಸಿ ಹೇಳಿದ ‘‘ನನಗ್ಯಾಕೋ ಅವನನ್ನು ನೋಡಿದಾಗ ಉಗ್ರರ ಸಂಪರ್ಕ ಇದ್ದ ಹಾಗೆ ಕಾಣುತ್ತಪ್ಪ?’’
ಉಗ್ರಪ್ಪ ಹುಸೇನ್ ಸಾಬಿಯತ್ತ ದುರುಗುಟ್ಟಿ ನೋಡಿ ಕೇಳಿದ ‘‘ಏನೋ.. ಮುಖದಲ್ಲಿ ಒಂದು ಉಗ್ರನ ಲಕ್ಷಣ ಇದೆ. ಭಯೋತ್ಪಾದನೆ ಕೆಲಸ ಮಾಡುತ್ತಿದ್ದೀಯೇನು...?’’
ಹುಸೇನ್ ಸಾಬಿ ಕಕ್ಕಾಬಿಕ್ಕಿಯಾದ ‘‘ಇಲ್ಲ ಸಾರ್... ಕೂಲಿ ಕೆಲಸ ಮಾಡುತ್ತಿದ್ದೇನೆ... ಮೀನು ಕೂಡಾ ಮಾರ್ತೀನಿ...’’
ಉಗ್ರಪ್ಪ ಬಿಡಲಿಲ್ಲ ‘‘ಮನೆಯ ಆಯುಧಗಳುಂಟೋ...’’
ಹುಸೇನ್ ಸಾಬಿ ತಲೆಯಾಡಿಸಿದ ‘‘ಉಂಟು ಸಾರ್...’’
ಕಾಸಿ ರೋಮಾಂಚನಗೊಂಡ. ಶಂಕಿತ ಉಗ್ರನ ಸೆರೆ.. ಆಯುಧಗಳು ವಶ ಎಂಬ ತಲೆಬರಹ ಕೊಟ್ಟರೆ ಹೇಗೆ ಎಂದು ಯೋಚಿಸತೊಡಗಿದ.
ಉಗ್ರಪ್ಪ ಸಾಬಿಯ ಕೆನ್ನೆಗೊಂದು ಬಾರಿಸಿ ಕೇಳಿದ ‘‘ಏನೆಲ್ಲ ಆಯುಧ ಮಡ್ಗಿದ್ದೀಯ...’’
ಸಾಬಿ ಕಂಗಾಲಾಗಿ ಅಳುತ್ತಾ ಹೇಳಿದ ‘‘ಒಂದು ಪಿಕ್ಕಾಸು, ಹಾರೆ, ಎರಡು ಕುಡುಗೋಲು ಇದೆ ಸಾರ್...’’
 ಉಗ್ರಪ್ಪ ಇನ್ನೊಂದು ಕೆನ್ನೆಗೆ ಬಾರಿಸಿದ ‘‘ಎ.ಕೆ.47 ಪಿಸ್ತೂಲ್ ಎಲ್ಲಿ ಬಚ್ಚಿಟ್ಟಿದ್ದೀಯ?’’ ಸಾಬಿಗೆ ತಲೆಸುತ್ತು ಬಂದಂತಾಯಿತು. ‘‘ಸಾರ್.. ಕೂಲಿ ಕೆಲಸ ಮಾಡೋಕ್ಕೆ ಪಿಸ್ತೂಲ್ ಯಾಕೆ ಸಾರ್?’’ ಕೇಳಿದ.
ಎಂಜಲು ಕಾಸಿ ನಡೆದ ಸಂಭಾಷಣೆಯನ್ನೆಲ್ಲ ನೋಟ್ ಮಾಡಿದ್ದೇ ‘ಸ್ಕೂಪ್’ ಸಿಕ್ಕಿತು ಎಂದು ಕಚೇರಿಯೆಡೆಗೆ ಓಡಿದ.
                ***
ಮರುದಿನ ಪತ್ರಿಕೆಗಳಲ್ಲಿ ಭಾರೀ ಸುದ್ದಿ ಪ್ರಕಟವಾಯಿತು. ‘‘ಶಂಕಿತ ಉಗ್ರನ ಬಂಧನ. ಮುಂದುವರಿದ ವಿಚಾರಣೆ: ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಆತನಿಗೆ ಲಷ್ಕರೆ ತೊಯ್ಯಬಾ ಜೊತೆ ಸಂಬಂಧ ಇದೆಯೆ ಎಂದು ಪ್ರಶ್ನಿಸಲಾಗುತ್ತಿದೆ. ‘‘ಕಾಸಿಯ ಪತ್ರಿಕೆ ಈ ರೀತಿ ಬರೆದರೆ ಇನ್ನೊಂದು ಪತ್ರಿಕೆಯಲ್ಲಿ ಇನ್ನೊಂದು ಪ್ರಕಟವಾಯಿತು. ‘‘ಮಾರಕ ಆಯುಧಗಳಿವೆಯೆಂದು ಒಪ್ಪಿಕೊಂಡ ಶಂಕಿತ ಉಗ್ರ’’ ‘‘ವಲ್ಡ್ ಟ್ರೇಡ್ ಸೆಂಟರ್‌ಗೂ ಬಂಧಿತ ಉಗ್ರನಿಗೂ ಸಂಬಂಧ ಇದೆಯೇ? ಅಮೆರಿಕದ ಪೊಲೀಸರು ಭಾರತಕ್ಕೆ’’
‘‘ಬಂಧಿತನ ಬಳಿ ಎ.ಕೆ.47?’’ ‘‘ಪೊಲೀಸ್ ಪೇದೆಯ ಚಾಕಚಕ್ಯತೆಯಿಂದ ಸಿಕ್ಕಿ ಬಿದ್ದ ಉಗ್ರ’’ ಹೀಗೆ ಬೇರೆ ಬೇರೆ ತಲೆಬರಹಗಳು ಪತ್ರಿಕೆಗಳಲ್ಲಿ ರಾರಾಜಿಸತೊಡಗಿದವು. ಅಂದು ಬೆಳಗ್ಗೆ ಪತ್ರಿಕೆ ನೋಡಿದ್ದೇ ಎಸ್‌ಐ ಕೂಸಪ್ಪ ಬೆಚ್ಚಿ ಬಿದ್ದ. ನನ್ನದೇ ಠಾಣೆಯಲ್ಲಿ ಉಗ್ರನ ಬಂಧನವೇ? ನಾನ್ಯಾರನ್ನೂ ಬಂಧಿಸಿಲ್ಲವಲ್ಲ? ಎಂದೆಲ್ಲ ಯೋಚಿಸುತ್ತಿರುವಾಗ ಐಜಿಪಿ ಫೋನ್ ಬಂತು ‘‘ಏನ್ರಿ? ಕೂಸಪ್ಪ ನನಗೆ ಗೊತ್ತಿಲ್ಲದೆ ಉಗ್ರನನ್ನು ಬಂಧಿಸಿದ್ದೀರಲ್ರೀ... ನನಗೊಂದು ಮಾಹಿತಿ ನೀಡದೆ ನೇರ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದೀರಲ್ಲ... ನೀವೊಬ್ಬರೇ ಬಹುಮಾನ ಕಿತ್ಕೋಬೇಕು ಅನ್ನೋ ಉದ್ದೇಶಾನಾ...’’ ಇತ್ಯಾದಿಗಳು ಕೇಳುತ್ತಿದ್ದ ಹಾಗೆಯೇ ಕೂಸಪ್ಪ ಠಾಣೆಗೆ ಓಡತೊಡಗಿದ.
ಠಾಣೆಯಲ್ಲಿ ಪೇದೆ ಉಗ್ರಪ್ಪ ನೆಲೆ ಒರೆಸುತ್ತಿದ್ದ ಕೂಸಪ್ಪ ಬಂದವನೇ ಆತಂಕದಿಂದ ‘‘ಏನ್ರೀ... ಉಗ್ರಪ್ಪ ಯಾವನೋ ಉಗ್ರನನ್ನು ಹಿಡಿದಿದ್ದೀರಂತಲ್ರೀ...?’’ ಕೇಳಿದ.
ಉಗ್ರಪ್ಪ ಸೆಲ್ಯೂಟ್ ಹೊಡೆದು ಹೇಳಿದ ‘‘ಹಂಗೇನು ಇಲ್ಲ ಸಾರ್... ಈ ಹುಸೇನ್ ಸಾಬಿ ಅದೇನೋ ಕಂಪ್ಲೇಟ್ ಕೊಡೋಕೆ ಬಂದಿದ್ದ. ಅವನಲ್ಲಿ ಅದೇನೋ ಕೇಳಿದೆ ಅಷ್ಟೆ. ಓ ಅಲ್ಲಿ ಕುಂತಿದ್ದಾನೆ....’’
ಕೂಸಪ್ಪ ಅವನನ್ನು ನೋಡಿದ್ದೇ ಬೆಚ್ಚಿ ಬಿದ್ದ ‘‘ಅರೇ ಇದು... ನಮ್ಮ ಮೀನು ಮಾರೋ ಹುಸೇನ್ ಸಾಬಿ ಅಲ್ವಾ? ಪೇಪರ್ನಲ್ಲಿ ಎಲ್ಲ ಬಂದ್ಬಿಟ್ಟಿದೆ. ಹೊರಗಡೆ ಟಿ.ವಿ., ಪತ್ರಿಕೆಯೋರೆಲ್ಲ ಕಾಯ್ತಿದ್ದಾರೆ... ಇದೇನು ಮಾಡಿ ಬಿಟ್ಟೆಯೋ ಉಗ್ರಪ್ಪ....’’ ಕೂಸಪ್ಪ ತಲೆಗೆ ಕೈಹೊತ್ತು ಕೂತ.
ಉಗ್ರಪ್ಪ ಒಂದು ಸಲಹೆ ಕೊಟ್ಟ ‘‘ಸಾರ್... ಹೇಗೂ ಪತ್ರಿಕೆಯೋರು, ಟಿವಿಯೋರು ಮುತ್ತಿಗೆ ಹಾಕಿದ್ದಾರೆ. ಅವರಿಗ್ಯಾಕೆ ಬೇಜಾರು ಮಾಡೋದು. ಹುಸೇನ್ ಸಾಬಿಯನ್ನು ಒಳಗೆ ಕರ್ಕೊಂಡು ಹೋಗಿ ಒಮ್ಮೆ ರಾಟೆಗ್ಹಾಕಿ ಬಿಡೋಣ... ಎಲ್ಲ ಒಪ್ಕೋತ್ತಾನೆ...’’
ಕೂಸಪ್ಪ ತಲೆ ಆಡಿಸಿದ ‘‘ಸರಿ ಹಾಗೆ ಮಾಡು... ಪತ್ರಕರ್ತರನ್ನು ನಾನು ನೋಡ್ಕೋತಿನಿ...’’
ಆರ್ಡರ್ ಸಿಕ್ಕಿದ್ದೆ ಉಗ್ರಪ್ಪ ಸಾಬಿ ಮೇಲೆ ಬಿದ್ದ ‘‘ಬೋ... ಮಗನೆ, ಉಗ್ರ ಚಟುವಟಿಕೆ ಮಾಡ್ತೀಯ... ?’’ ಎಂದು ಧರಧರನೆ ಒಳಗೆ ಎಳೆದುಕೊಂಡು ಹೋದ.
ಸ್ವಲ್ಪ ಹೊತ್ತಿನಲ್ಲೇ ಹುಸೇನ್ ಸಾಬಿ ವಲ್ಡ್‌ಸೆಂಟರ್ ಸ್ಫೋಟಿಸಿದ್ದು, ಅಬ್ರಾಹಾಂ ಲಿಂಕನ್‌ನನ್ನು ಕೊಂದಿದ್ದು, ಇಂದಿರಾಗಾಂಧಿಯನ್ನು ಕೊಂದಿದ್ದು, ಮಹಾತ್ಮಾಗಾಂಧಿಯನ್ನು ಕೊಂದಿದ್ದು, ಮೆಕ್ಕಾ ಮಸ್ಜಿದ್‌ಗೆ ಬಾಂಬಿಟ್ಟದ್ದು ಎಲ್ಲವನ್ನು ಒಪ್ಪಿಕೊಂಡು ಬಿಟ್ಟ.
(ಫೆಬ್ರವರಿ 3, 2008, ರವಿವಾರ)

Saturday, November 30, 2013

‘ಎರಡು ನ್ಯಾನೋ ಕಾರಿದ್ದರೆ ಅವರು ಅತಿ ಬಡವರು’

(ಈ ಬುಡಬುಡಿಕೆ ಜನವರಿ, 13, 2008ರಲ್ಲಿ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪಶ್ಚಿಮಬಂಗಾಳದಲ್ಲಿ ಟಾಟಾ ನ್ಯಾನೋ ಕಾರು ವಿವಾದವೆದ್ದಾಗ, ಭೂಮಿ ಬಿಡಲು ಒಪ್ಪದ ರೈತರ ಮೇಲೆ ಅಲ್ಲಿನ ಕಮ್ಯುನಿಸ್ಟ್ ಸರಕಾರ ಗುಂಡು ಹಾರಿಸಿದಾಗ ಬರೆದದ್ದು. ಸುಮ್ಮಗೆ ಹಳೆಯದನ್ನೊಮ್ಮೆ ನೆನಪಿಸುವುದಕ್ಕಾಗಿ....ಇಲ್ಲಿ ಕಾಗೆ ಹಾರಿಸಿದ್ದೇನೆ....)


‘ಕ್ರಾಂತಿ’ ‘ಕ್ರಾಂತಿ’ ‘ಕ್ರಾಂತಿ’ ಹೀಗೆ ಪತ್ರಿಕೆಗಳಲೆಲ್ಲಾ ಕ್ರಾಂತಿಯ ತಲೆ ಬರಹಗಳು ಕಾಣಿಸಿಕೊಂಡದ್ದೇ ಮಲೆನಾಡಿನ ಕಾಡಿನಲ್ಲಿ ಅವಿತುಕೊಂಡಿದ್ದ ನಕ್ಸಲೀಯರೆಲ್ಲ ಕಂಗಾಲಾದರು. ನಕಲಿ ಎನ್‌ಕೌಂಟರ್ ಭಯದಿಂದ ನಾವಿಲ್ಲಿ ಅಲುಗಾಡದೆ ಕಾಡಿನಲ್ಲಿ ದಿಗ್ಭಂಧನಕ್ಕೊಳಗಾಗಿರುವಾಗ ನಾಡಿನಲ್ಲಿ ಕ್ರಾಂತಿ ಮಾಡುತ್ತಿರುವವರು ಯಾರಾಗಿರಬಹುದು? ನಮ್ಮ ಹೆಸರಿನಲ್ಲಿ ಮತ್ತೆ ಯಾರಾದರೂ ಮನೆಗಳಿಗೆ ನುಗ್ಗಿದರೋ? ಅಥವಾ ನಮ್ಮಿಂದ ಸಿಡಿದವರು ಹೊಸತಾಗಿ ಗುಂಪು ಕಟ್ಟಿ ಬಂಡವಾಳ ಶಾಹಿಗಳ ವಿರುದ್ಧ ಕೋವಿ ಎತ್ತಿರಬಹುದೋ, ನಮ್ಮ ಹೆಸರಿನಲ್ಲಿ ಬೇರೆಯಾರಾದರೂ ಪತ್ರಿಕಾ ಹೇಳಿಕೆ ನೀಡಿರಬಹುದೋ... ಹೀಗೆ ಸಾವಿರಾರು ಪ್ರಶ್ನೆಗಳು ಅವರನ್ನು ಕಾಡಿತು. ಅಷ್ಟರಲ್ಲಿ ಒಬ್ಬಾತ ನುಡಿದ ‘‘ಇದು ಬೇರೆ ಕ್ರಾಂತಿ ಸಂಗಾತಿಗಳೇ... ಪತ್ರಿಕೆಗಳು ಬರೆಯುತ್ತಿರುವುದು ಮಾವೋ ಕ್ರಾಂತಿಯ ಬಗ್ಗೆಯಲ್ಲ...’’
ನಕ್ಸಲ್ ನಾಯಕನಿಗೆ ಅರ್ಥವಾಗಲಿಲ್ಲ. ‘‘ಕಾರ್ಲ್ ಮಾರ್ಕ್ಸ್‌ವಾದಿಗಳ ಕ್ರಾಂತಿಯ ಬಗ್ಗೆ ಬರೆದಿದ್ದಾರೆಯೆ?’’
ಸಂಗಾತಿ ನುಡಿದ ‘‘ಇದು ಕಾರ್ಲ್ ಮಾರ್ಕ್ಸ್‌ವಾದಿಗಳ ಬಗ್ಗೆ ಅಲ್ಲ... ಕಾರ್ ಮಾರ್ಕ್ಸ್‌ವಾದಿಗಳ ಬಗ್ಗೆ....’’
ನಾಯಕನಿಗೆ ತಲೆ ಬಿಸಿಯಾಯಿತು. ‘‘ಅದು ಯಾವುದು ಕಾರ್ ಮಾರ್ಕ್ಸ್‌ವಾದಿಗಳು... ಮಾರ್ಕ್ಸ್‌ವಾದಿಗಳ ಇನ್ನೊಂದು ಗುಂಪೇ ? ಯಾರದರ ನಾಯಕ?’’
ಸಂಗಾತಿ ವಿವರಿಸಿದ ‘‘ ಈ ಗುಂಪು ಕ್ರಾಂತಿ ಮಾಡಲು ಹೊರಟಿರುವುದು ಕೋವಿಯಲ್ಲಲ್ಲ. ಕಾಮ್ರೇಡ್.. ಕಾರ್‌ನಲ್ಲಿ. ಈ ಕಾರ್ ಕ್ರಾಂತಿಗೆ ಕಾರ್ಲ್‌ಮಾಕ್ಸ್ ಬೆಂಬಲವಿದೆಯಂತೆ. ಇನ್ನು ಮುಂದೆ ಕಾರ್ಲ್‌ಮಾಕ್ಸ್ ಎನ್ನುವ ಹೆಸರನ್ನು ಕಾರಲ್ಲಿ ಮಾರ್ಕ್ಸ್ ಎಂದು ತಿದ್ದಿ ಓದಲಾಗುವುದೆಂದು ಪಶ್ಚಿಮಬಂಗಾಳದ ಕಮ್ಯುನಿಷ್ಟ್ ನಾಯಕರು ಹೇಳಿಕೆ ನೀಡಿದ್ದಾರೆ.’’
ನಾಯಕನಿಗೆ ಅರ್ಥವಾಗಲಿಲ್ಲ ‘‘ ರಸ್ತೆ ಅಪಘಾತದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ಗಮನಿಸಿದರೆ, ನಮ್ಮ ಕೋವಿಗಿಂತ ಕಾರೇ ಹಿಂಸೆಗೆ ಹೆಚ್ಚು ಅನುಕೂಲ. ಆದುದರಿಂದ ನಮ್ಮ ಪಶ್ಚಿಮ ಬಂಗಾಳದ ಸಂಗಾತಿಗಳು ಕ್ರಾಂತಿಗೆ ಕಾರನ್ನು ಬಳಸಲು ಹೊರಟಿರಬೇಕು...’’
ಸಂಗಾತಿ ನುಡಿದ ‘‘ಬಡವರ ಕೈಗೆಟಕುವ ದರದಲ್ಲಿ ಕಾರನ್ನು ಉತ್ಪಾದಿಸುತ್ತಿದ್ದಾರಂತೆ. ಈ ಕಾರಿಗೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಬೆಂಬಲ ನೀಡಿದ್ದಾರೆ. ಬಡವರಿಗೆ ಕಾರು ಎಟಕುತ್ತದೆ ಎಂದ ಮೇಲೆ ಅದು ಕ್ರಾಂತಿಯೇ ತಾನೆ... ಇದೀಗ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಬದಲಿಗೆ ಸಿಪಿಐ(ಟಿ) ಎಂದು ಕರೆಯಲಾಗುತ್ತದೆಯಂತೆ...’’
‘‘ಟಿ ಎಂದರೆ?’’
‘‘ಟಿ ಎಂದರೆ ಟಾಟಾ ಅಂತ. ಇನ್ನು ಮುಂದೆ ಸಿಪಿಐಎಂ ಟಾಟಾ...’’
‘‘ಹಾಗಾದರೆ ಮಾರ್ಕ್ಸ್...’’
‘‘ಅವನಿಗೆ ಈಗಾಗಲೇ ಟಾಟಾ ಹೇಳಿಯಾಗಿದೆ...ಅವರ ಸ್ಥಾನದಲ್ಲಿ ಟಾಟಾವನ್ನೇ ಶಾಶ್ವತವಾಗಿ ನಿಲ್ಲಿಸಲಾಗುತ್ತದೆಯಂತೆ...’’
                ***
ರತನ್ ಟಾಟಾ ಬೆಳಗ್ಗೆ ಎದ್ದಾಗ ಅವರ ಪುಟ್ಟ ಮೊಮ್ಮಗಳು ಏನೋ ಬರೆಯುತ್ತಿದ್ದಳು. ಟಾಟಾ ಮೆಲ್ಲಗೆ ಮೊಮ್ಮಗಳ ಹತ್ತಿರ ಹೋಗಿ’’ ಪುಟ್ಟಿ ಏನು ಬರೆಯುತ್ತಿದ್ದೀಯಮ್ಮ...?’’ ಎಂದು ಕೇಳಿದರು.
ಪುಟ್ಟಿ ಹೇಳಿದಳು ‘‘ಕತೆ ಬರೆಯುತ್ತಿದ್ದೇನೆ ತಾತಾ...’’
‘‘ಯಾರ ಕತೆ ಪುಟ್ಟಿ?’’
‘‘ಬಡವರ ಕತೆ ತಾತಾ’’
ಟಾಟಾಗೆ ಖುಷಿಯಾಯಿತು. ತನ್ನ ಹಾಗೆಯೇ ಈಕೆಯೂ ಬಡವರ ಕುರಿತಂತೆ ಆಲೋಚಿಸುವುದು ನೋಡಿದರೆ, ನನ್ನ ಮೊಮ್ಮಗಳು ದೊಡ್ಡ ಉದ್ಯಮಿಯಾಗುವುದು ಗ್ಯಾರಂಟಿ ಅನ್ನಿಸಿತು. ‘‘ಇಲ್ಲಿ ಕೊಡಮ್ಮ ನಾನೊಮ್ಮೆ ಓದಿ ಕೊಡುತ್ತೇನೆ’’ ಎಂದರು. ಪುಟ್ಟಿ ಕೊಟ್ಟಳು.
‘‘ಒಂದಾನೊಂದು ಊರಿನಲ್ಲಿ ಒಬ್ಬ ದಟ್ಟ ದರಿದ್ರ ಬಡವನಿದ್ದ. ಅವನು ಅದೆಷ್ಟು ಬಡವನಾಗಿದ್ದ ಎಂದರೆ ಓಡಾಡುವದಕ್ಕೆ ಅವನಲ್ಲಿ ಒಂದೇ ಒಂದು ‘ನ್ಯಾನೋ’ ಕಾರು ಇತ್ತು. ಅವರ ಮನೆ ಅದೆಷ್ಟು ಸಣ್ಣದಾಗಿತ್ತು ಎಂದರೆ, ಅಲ್ಲಿ ಒಂದು ಹೂವಿನ ಗಾರ್ಡನ್ ಕೂಡಾ ಇದ್ದಿರಲ್ಲಿಲ್ಲ. ಮನೆಗೆ ಎಸಿ ಕೂಡ ಇದ್ದಿರಲಿಲ್ಲ. ಪಾಪ ಅವನ ಮಕ್ಕಳಿಗೆ ಓದುವುದಕ್ಕೆ ಮನೆಯಲ್ಲಿ ರೀಡಿಂಗ್ ರೂಮ್ ಕೂಡಾ ಇದ್ದಿರಲಿಲ್ಲ. ಆ ಬಡವನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಆಳು ಕೂಡಾ ಇದ್ದಿರಲಿಲ್ಲ. ಆದುದರಿಂದ ಬಡವನ ಹೆಂಡತಿಯೇ ಅಡುಗೆ ಕೆಲಸ ಮಾಡಬೇಕಾಗಿತ್ತು....’’
 ಟಾಟಾಗೆ ಕತೆ ಓದುತ್ತಾ ಓದುತ್ತಾ ಕಣ್ಣೀರು ಉಕ್ಕಿ ಬಂತು. ಈ ದೇಶದಲ್ಲಿ ಬಡವರು ಎಷ್ಟು ಕಷ್ಟ ಪಡುತ್ತಿದ್ದಾರೆ ಅನ್ನಿಸಿತು. ತನ್ನ ಮೊಮ್ಮಗಳು ಬಡವರ ಬಗ್ಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ಅಚ್ಚರಿಯೂ ಆಯಿತು. ತನ್ನ ಮೊಮ್ಮಗಳ ಹೆಸರಿನಲ್ಲಿ ಕಡಿಮೆ ದರಕ್ಕೆ ಫ್ರಿಜ್ಜು, ಕಡಿಮೆ ಬೆಲೆಯ ಎಸಿ ಇತ್ಯಾದಿಗಳನ್ನು ಅತಿ ಬಡವರಿಗಾಗಿ ಸಿದ್ಧಗೊಳಿಸುವ ನಿರ್ಧಾರವನ್ನು ಅದಾಗಲೇ ಅವರು ತೆಗೆದುಕೊಂಡಾಗಿತ್ತು.
                ***
ರಾಜ್ಯದಲ್ಲಿ ನ್ಯಾನೋ ಕಾರು ಬಿಡುಗಡೆಯಾದದ್ದೇ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದರು. ಎಂಜಲು ಕಾಸಿ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾದ. ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯ ಮಜಾ ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಸಿಗುತ್ತಿರಲಿಲ್ಲ. ಮುಖ್ಯವಾಗಿ ರಾಜ್ಯಪಾಲರು ತರಿಸುವ ಟೀ ಜೊತೆಗಿರುವ ಇಡ್ಲಿಯ ಚಟ್ನಿ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅದಲ್ಲದೆ, ಮುಖ್ಯಮಂತ್ರಿಗಳಾದರೆ, ಪಕ್ಕಕ್ಕೆ ಕರೆದು ನೂರೋ ಇನ್ನೂರೋ ಕಿಸೆಗೆ ತಳ್ಳಿಬಿಡುತ್ತಿದ್ದರು. ಆ ಸೌಜನ್ಯವೂ ರಾಜ್ಯಪಾಲರಲ್ಲಿರಲಿಲ್ಲ. ಆದರೂ ಸಂಪಾದಕ ಒತ್ತಡದಿಂದಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ. ರಾಜ್ಯಪಾಲರು ಅದಾಗಲೇ ಪತ್ರಿಕಾಗೋಷ್ಠಿಯನ್ನು ಆರಂಭಿಸಿ ಬಿಟ್ಟಿದ್ದರು. ಅವರ ಮುಖದಲ್ಲಿ ಸಂಭ್ರಮ ಕುಣಿಯುತ್ತಿತ್ತು.
‘‘ರಾಜ್ಯದ ಬಡವರ ಪಾಲಿಗೆ ಇದೊಂದು ಸುದಿನ. ನನ್ನ ಆಳ್ವಿಕೆಯಲ್ಲಿ ಇಂತಹ ದಿನವೊಂದು ಬಂದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನ್ಯಾನೋ ಕಾರು ಬಿಡುಗಡೆಗೊಂಡಿರುವುದರಿಂದ ದೂರ ದೂರದ ಹಳ್ಳಿಗಳಿಂದ ಜನತಾದರ್ಶನಕ್ಕೆ ಬರುವ ಬಡವರಿಗೆ ತುಂಬಾ ಅನುಕೂಲವಾಗಲಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಲು ಈ ನ್ಯಾನೋ ಕಾರಿನಲ್ಲೇ ಆಗಮಿಸಬಹುದು. ಹಾಗೆಯೇ ಜನತಾದರ್ಶನಕ್ಕೆಂದು ಬಂದವರು ತಮ್ಮ ಕೆಲಸ ಮುಗಿದ ಬಳಿಕ ಬೆಂಗಳೂರನ್ನು ಸುತ್ತಾಡಿಕೊಂಡೂ ಹೋಗಬಹುದು. ಇನ್ನು ಮುಂದೆ ನ್ಯಾನೋ ಕಾರು ಯಾರೆಲ್ಲಾ ಹೊಂದಿದ್ದಾರೋ ಅವರನ್ನೆಲ್ಲ ಬಡತನ ರೇಖೆಗಿಂತ ಕೆಳಗಿನವರೆಂದು ಗುರುತಿಸಲಾಗುತ್ತದೆ. ಬಡವರೊಂದೂ, ಬಡತನ ರೇಖೆಗಿಂತ ಕೆಳಗಿನವರೆಂದೂ ಗುರುತಿಸಬೇಕಾದರೆ ಅವರು ಕಡ್ಡಾಯವಾಗಿ ‘ನ್ಯಾನೋ’ ಕಾರನ್ನು ಹೊಂದಿರಬೇಕಾಗುತ್ತದೆ. ಯಾರೆಲ್ಲ ನ್ಯಾನೋ ಕಾರು ಹೊಂದಿಲ್ಲವೋ ಅವರ ಹಸಿರು ಕಾರ್ಡನ್ನು ಹಿಂದಕ್ಕೆ ಪಡೆಯಲಾಗುತ್ತದೆ...’’
ಸಾಲ ಸೋಲ ಮಾಡಿಯಾದರೂ ನ್ಯಾನೋ ಕಾರು ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿತು ಎಂಜಲು ಕಾಸಿಗೆ. ಇಲ್ಲವಾದರೆ ಅವನ ಮನೆಯ ಹಸಿರು ಕಾರ್ಡು ವಜಾ ಆಗುವ ಅಪಾಯವಿತ್ತು. ಅದನ್ನು ನೆನೆಸಿಕೊಂಡೇ ಕೇಳಿದ ‘‘ಒಂದು ವೇಳೆ ಕೆಲವರಲ್ಲಿ ಎರಡು ನ್ಯಾನೋ ಕಾರು ಇದ್ದರೆ...’’
ರಾಜ್ಯಪಾಲರಲ್ಲಿ ಉತ್ತರ ಸಿದ್ಧವಿತ್ತು. ‘‘ನೋಡಿ, ಒಂದು ನ್ಯಾನೋ ಕಾರು ಇದ್ದರೆ ಅವರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಎರಡು ನ್ಯಾನೋ ಕಾರು ಇದ್ದರೆ ಅವರನ್ನು ಅತಿ ಬಡವರು ಎಂದು ಗುರುತಿಸಲಾಗುತ್ತದೆ. ಅಂತವರನ್ನು ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ನಾವು ಗುರುತಿಸುತ್ತೇವೆ...’’
‘‘ನ್ಯಾನೋ ಕಾರು ಇಲ್ಲದೇ ಇದ್ದರೆ...’’
ರಾಜ್ಯಪಾಲರು ಕಡ್ಡಿ ಮುರಿದಂತೆ ಹೇಳಿದರು ‘‘ಯಾರಲ್ಲೆಲ್ಲಾ ಬಡವರಿಗಾಗಿ ತಯಾರಿಸಿರುವ ನ್ಯಾನೋ ಕಾರು ಇಲ್ಲವೋ ಅವರನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮತ್ತು ಅವರ ಮೇಲೆ ತೆರಿಗೆಗಳನ್ನು ಹಾಕಲಾಗುತ್ತದೆ. ಆದುದರಿಂದ ಇನ್ನೂ ಎರಡು ತಿಂಗಳ ಒಳಗಾಗಿ ಎಲ್ಲ ಬಡವರು ನ್ಯಾನೋ ಕಾರುಗಳನ್ನು ಕೊಂಡು ತಾವು ಬಡವರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ’’ ಎನ್ನುತ್ತಾ ಎದ್ದು ನಿಂತರು. ಅಷ್ಟರಲ್ಲಿ ಶೀರ, ಉಪ್ಪಿಟ್ಟು ಹಿಡಿದುಕೊಂಡು ಬಂದರು. ಎಂಜಲು ಕಾಸಿ ಎಂಜಲು ಸುರಿಸುತ್ತಾ ಆ ಕಡೆಗೆ ತಿರುಗಿದ.
(ಜನವರಿ, 13, 2008, ರವಿವಾರ)

ನನ್ನವರೇ ನನ್ನನ್ನು ಸದನದ ಬಾವಿಗೆ ನೂಕಿದ್ರೂ....

ಯಾರೋ ಬಾವಿಯೊಳಗಿಂದ ಕಾಪಾಡಿ ಕಾಪಾಡಿ ಎಂದು ಕೂಗಿದಂತಾಯಿತು.
ಅರೇ! ಬಾವಿಯೊಳಗಿಂದ ಯಾರೋ ಕೂಗಿದಂತೆ ಕೇಳುತ್ತಿದೆ. ಯಾರಿದು? ಪರಿಚಿತ ಧ್ವನಿ. ಪತ್ರಕರ್ತ ಎಂಜಲು ಕಾಸಿ ತಲೆಕೆರೆದುಕೊಂಡ. ಅತ್ತಿತ್ತ ನೋಡಿದರೆ, ದೂರದ ಸದನದ ಬಾವಿಯಲ್ಲಿ ಕೂತು ಯಡಿಯೂರಪ್ಪ ‘‘ಕಾಪಾಡಿ ಕಾಪಾಡಿ’ ಎಂದು ಕೂಗುತ್ತಿದ್ದಾರೆ. ಸದನದಲ್ಲೇ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಇದ್ದರೂ ಯಾರೂ ಅವರನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡುತ್ತಿಲ್ಲ.
ಬಾವಿಯ ಮೇಲಿನಿಂದಲೇ ನಿಂತು ಪತ್ರಕರ್ತ ಎಂಜಲು ಕಾಸಿ ಕೇಳಿದ ‘‘ಸಾರ್...ಏನಿದು ನೀವಿಲ್ಲಿ? ಸದನದಲ್ಲಿ ಚರ್ಚೆ ನಡೆಸುವುದು ಬಿಟ್ಟು ಬಾವಿಯೊಳಗೆ ಬಿದ್ದು ಬಿಟ್ಟಿದ್ದೀರಲ್ಲ? ಯಾರು ಸಾರ್ ನೂಕಿದ್ದು?’’
ಯಡಿಯೂರಪ್ಪ ಅಲ್ಲಿಂದಲೇ ಸಿಟ್ಟಾದರು ‘‘ನಾನಿಲ್ಲಿ ಬಾವಿಗೆ ಬಿದ್ದಿದ್ದೇನೆ...ನೀನು ಮೇಲೆ ನಿಂತು ಕಷ್ಟ ಸುಖ ಮಾತನಾಡ್ತಾ ಇದ್ದೀಯ? ಮೊದಲು ನನ್ನನ್ನು ಮೇಲೆತ್ತುವ ಪ್ರಯತ್ನ ಮಾಡು...ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಹೇಳ್ತೇನೆ...’’
‘‘ಬಾವಿಗೆ ಹಗ್ಗ ಇಳಿಸಲಾ ಸಾರ್?’’ ಕಾಸಿ ಅವಸರದಿಂದ ಕೇಳಿದ.
‘‘ಅಂಬರೀಷ್ ಹಗ್ಗ ಇಳಿಸಿದರು. ಆಗಲೇ ನಾನು ಮೇಲೆ ಹತ್ತಲಿಲ್ಲ. ಇನ್ನು ಚಿಲ್ಲರೆ ಪತ್ರಕರ್ತ ನೀನು ಹಗ್ಗ ಇಳಿಸಿದರೆ ಮೇಲೆ ಹತ್ತುತ್ತೀನಾ?’’ ಯಡಿಯೂರಪ್ಪ ಕೇಳಿದರು.
‘‘ಹಾಗಾದರೆ ದೊಡ್ಡ ಪತ್ರಕರ್ತ ತರುಣ್ ತೇಜ್‌ಪಾಲ್‌ರನ್ನು ಕರೆಸ್ಲಾ ಸಾರ್...?’’ ಕಾಸಿ ವ್ಯಂಗ್ಯದಿಂದ ಕೇಳಿದ.
‘‘ಅವನು ನನಗಿಂತ ದೊಡ್ಡ ಬಾವಿಗೆ ಬಿದ್ದಿದ್ದಾನೆ. ನನ್ನನ್ನು ಅವನು ಮೇಲೆತ್ತುವುದು ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಹಗ್ಗ ಇಳಿಸಿದ್ರೆ ಮೇಲೆ ಬರುತ್ತೇನೆ...,’’ ಯಡಿಯೂರಪ್ಪ ಸದನದ ಬಾವಿಯಿಂದಲೇ ಕೂಗಿ ಹೇಳಿದರು.
‘‘ಸಾರ್...ಅದಿರ್ಲಿ, ಬಾವಿಗೆ ಯಾಕೆ ಹಾರಿದ್ರಿ...?’’ ಕಾಸಿ ಕೇಳಿದ.
‘‘ಅದೇರಿ, ಹಳೇ ಸಮಸ್ಯೆ...ಮದುವೆ ಪ್ರಾಬ್ಲೆಮ್ಮು...’’ ಯಡಿಯೂರಪ್ಪ ಹೇಳಿದರು.
‘‘ಶೋಭಕ್ಕ ಏನಾದ್ರು ಅಂದ್ರಾ ಸಾರ್...ಅಥವಾ ವರದಕ್ಷಿಣೆ ಸಮಸ್ಯೆನಾ ಸಾರ್?’’ ಕಾಸಿ ಮೆಲ್ಲಗೆ ಕೇಳಿದ.
‘‘ಏನ್ರಿ ಹಾಗಂದ್ರೆ...?’’
‘‘ಅದೇ ಸಾರ್...ವರದಕ್ಷಿಣೆ ಕಡಿಮೆ ಆಯಿತು ಅಂತ ಸೊಸೆಯನ್ನು ಬಾವಿಗೆ ನೂಕ್ತಾರಲ್ಲ...ಹಂಗೇನಾದ್ರೂ ನೂಕಿದ್ರಾ ಸಾರ್?’’
‘‘ನನ್ನನ್ನು ನನ್ನವರೇ ಬಾವಿಗೆ ನೂಕಿದ್ರು ಕಣ್ರೀ...ಬಿಜೆಪಿ ಎನ್ನೋ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದೇನೆ ಕಣ್ರೀ...’’ ಎನ್ನುತ್ತಾ ಅಳತೊಡಗಿದರು.
‘‘ಜೋರಾಗಿ ಅಳಬೇಡಿ ಸಾರ್...ಬಾವಿಯಲ್ಲಿ ನೀರು ತುಂಬಿ ನೀವು ಮುಳುಗಿ ಬಿಟ್ಟೀರಿ...’’ ಕಾಸಿ ಸಮಾಧಾನ ಮಾಡಿದ.
‘‘ಇದು ಪಾಳು ಬಾವಿ ಕಣ್ರೀ...ಅದಕ್ಕೆ ಹಾರಿದ್ದೇನೆ. ಶಾದಿ ಭಾಗ್ಯದಲ್ಲಿ ಕೆಜೆಪಿಗೂ ಒಂದು ಪಾಲು ಕೊಡ ಬೇಕು ಎಂದು ಬಾವಿಗೆ ಬಿದ್ದಿದ್ದೇನೆ. ಈಗ ನೋಡಿದ್ರೆ... ಯಾರೂ ನನ್ನನ್ನು ಮೇಲೆ ಎತ್ತುತ್ತಾ ಇಲ್ಲ...ಇದು ನ್ಯಾಯವೇನ್ರಿ...’’
‘‘ಪರವಾಗಿಲ್ಲ ಸಾರ್..ಪಾಳು ಬಾವಿ ತಾನೆ... ಅಧಿವೇಶನ ಮುಗಿಯುವವರೆಗೆ ಅದರೊಳಗೆ ನೆಮ್ಮದಿ ಯಿಂದ ನಿದ್ದೆ ಮಾಡಿ. ಯಾರೂ ನೋಡೋಲ್ಲ...’’
‘‘ಆದ್ರೆ ಹೊರಗಡೆ ರೈತನೊಬ್ಬ ನಾನು ಬಾವಿಗೆ ಬಿದ್ದುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಕಣ್ರೀ...ಆದ್ರೂ ಸಿದ್ದರಾಮಯ್ಯ ನನ್ನನ್ನು ಮೇಲೆತ್ತೋದಕ್ಕೆ ಮುಂದೆ ಬಂದಿಲ್ಲ. ನಿರ್ದಯಿ ಕಣ್ರೀ...ಒಂದಿಷ್ಟು ಕರುಣೆ ಇಲ್ಲ ಕಣ್ರೀ...’’ ಎನ್ನುತ್ತಾ ‘‘ದಯೆಯೇ ಧರ್ಮದ ಮೂಲವಯ್ಯ, ನೀನಾರವ ನೀನಾರವ ಎನ್ನದಿರು, ನೀ ನಮ್ಮವ...’’ ಎನ್ನುವ ವಚನವನ್ನು ಬಾವಿಯಲ್ಲಿ ಕೂತು ಹಾಡತೊಡಗಿದರು.
‘‘ಆದರೆ ಹೊರಗಡೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಬ್ಬುಬೆಲೆ ಸರಿಯಾಗಿ ಸಿಗ್ತಾ ಇಲ್ಲ ಎನ್ನುವ ಕಾರಣಕ್ಕಾಗಿ ಸಾರ್...’’ ಎಂಜಲು ಕಾಸಿ ತಿದ್ದಿದ.
ಯಡಿಯೂರಪ್ಪ ಸಿಟ್ಟಾದರು ‘‘ಏನ್ರಿ...ಸಿದ್ದರಾಮಯ್ಯ ಜೊತೆಗೆ ನೀವು ರಾಜಕೀಯ ಮಾಡ್ತಾ ಇದ್ದೀರಾ... ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಅಭಿಮಾನಿ ಕಬ್ಬು ಬೆಳೆಗಾರ...ಎರಡೂ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ...ಒಂದು ಕಬ್ಬಿಗೆ ಬೆಂಬಲ ಬೆಲೆ. ಇನ್ನೊಂದು ಯಡಿಯೂರಪ್ಪಗೆ ಬೆಂಬಲ ಬೆಲೆ....’’
‘‘ನಿಮಗೆ ಕನಿಷ್ಠ ಬೆಂಬಲ ಬೆಲೆ ಎಷ್ಟು ಸಿಗಬೇಕು... ಸಾರ್?’’ ಕಾಸಿ ಕೇಳಿದ.
ಯಡಿಯೂರಪ್ಪ ಆಲೋಚಿಸಿ ಹೇಳಿದರು ‘‘ನೋಡ್ರಿ...ನನ್ನ ಗರಿಷ್ಠ ಬೆಂಬಲ ಬೆಲೆ ಮುಖ್ಯಮಂತ್ರಿ ಸ್ಥಾನ. ಕನಿಷ್ಠ ಬೆಂಬಲ ಬೆಲೆ ವಿರೋಧ ಪಕ್ಷ ಸ್ಥಾನ. ಆದರೆ ಬಿಜೆಪಿಯೋರು ನನ್ನ ದುಡಿಮೆಗೆ ತಕ್ಕ ಬೆಂಬಲ ನೀಡದೆ ನನ್ನನ್ನು ಸದನದ ಬಾವಿಗೆ ತಳ್ಳಿ ಬಿಟ್ಟರು. ಇದರ ಪರಿಣಾಮವಾಗಿ ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ತಾ ಇದ್ದಾರೆ. ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ಳುವುದನ್ನು ತಡೆಯಬೇಕಾದರೆ ಯಡಿಯೂರಪ್ಪ ಅವರಿಗೆ ಕನಿಷ್ಠ ಬೆಂಬಲ ಬೆಲೆಯೊಂದನ್ನು ಎಲ್ಲರೂ ಸೇರಿ ಘೋಷಿಸಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ. ಹಾಗೆಯೇ ನಾನು ಬಾವಿಯಿಂದ ಮೇಲೆ ಬಂದು ಕುರ್ಚಿಯಲ್ಲಿ ಕೂರುವುದಕ್ಕೆ ಸಾಧ್ಯ....’’
‘‘ಸಾರ್...ರೈತರಿಗೆ ಬೆಂಬಲ ಬೆಲೆ ಸಿಗುವ ಸಾಧ್ಯತೆ ಯಿದೆ. ಆದರೆ ನಿಮಗೆ ಅದೇನಾದರೂ ಬೆಂಬಲ ಬೆಲೆ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ...’’ ಕಾಸಿ ಮೆಲ್ಲಗೆ ಯಡಿಯೂರಪ್ಪರನ್ನು ಹೆದರಿಸಿದ.
‘‘ಅದು ಯಾಕೆ ಕೊಡುವುದಿಲ್ಲವಂತೆ? ನನ್ನ ಪರವಾಗಿ ಇಡೀ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟನೆ ಮಾಡ್ತಾರೆ ನೆನಪಿಡಿ....’’
‘‘ಸಾರ್...ನಿಮಗಾಗಿ ರೈತರು ಯಾಕೆ ಪ್ರತಿಭಟನೆ ಮಾಡಬೇಕು? ನೀವು ತಾನೆ ರೈತರಿಗೆ ಗುಂಡಿಟ್ಟಿರು ವುದು...ಅಂತ ಮುಖ್ಯಮಂತ್ರಿ ಕೇಳ್ತಾ ಇದ್ದಾರೆ...’’ ಕಾಸಿ ಮೆಲ್ಲಗೆ ಚಿವುಟಿದ.
‘‘ನಾನು ಗುಂಡಿಕ್ಕುವುದಾದರೆ ರೈತರಿಗಲ್ಲ, ನೇರವಾಗಿ ಸಿದ್ದರಾಮಯ್ಯ, ಈಶ್ವರಪ್ಪ, ಎಲ್. ಕೆ. ಅಡ್ವಾಣಿ ಇವರಿಗೆಲ್ಲ ಗುಂಡಿಕ್ಕುತ್ತಿದ್ದೆ. ಅಂದು ಗುಂಡಿಕ್ಕದ ಫಲವಾಗಿ ಇಂದು ನನ್ನನ್ನು ಈ ಸ್ಥಿತಿಗೆ ತಂದು ಹಾಕಿದ್ದಾರೆ... ಬಿಡುವುದಿಲ್ಲ...ಇಂದು ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...ನಾಳೆ ಭತ್ತ ಬೆಳೆಗಾರ...ನಾಡಿದ್ದು ಅಡಿಕೆ ಬೆಳೆಗಾರ...ಹೀಗೆ ಎಲ್ಲರೂ ನನಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯ ಏನು ಮಾಡುತ್ತಾರೋ ನೋಡೋಣ...’’ ಯಡಿಯೂರಪ್ಪ ಬಾವಿಯೊಳಗಿಂದಲೇ ಶಪಥ ಹಾಕಿದರು.
ಅಷ್ಟರದಲ್ಲಿ ದೂರದಿಂದ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ, ಅನಂತಕುಮಾರ್ ಮೊದಲಾದವರು ಸದನದ ಬಾವಿಯ ಕಡೆಗೆ ಬರುವುದನ್ನು ಕಾಸಿ ನೋಡಿ ಕೂಗಿ ಹೇಳಿದ ‘‘ಸಾರ್ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಎಲ್ಲರೂ ಈ ಬಾವಿಯ ಕಡೆಗೆ ಧಾವಿಸಿ ಬರುತ್ತಿದ್ದಾರೆ....’’
ಯಡಿಯೂರಪ್ಪ ಬಾವಿಯೊಳಗಿಂದಲೇ ಖುಷಿ ಯಾದರು ‘‘ಗೊತ್ತಿತ್ತು. ಬರದೇ ಎಲ್ಲಿಗೆ ಹೋಗುತ್ತಾರೆ? ನನ್ನನ್ನು ಮೇಲೆ ಎತ್ತುವುದಕ್ಕೆ ಬರುತ್ತಿದ್ದಾರೆ ಹ್ಹಹ್ಹ...’’ ಎಂದು ನಗ ತೊಡಗಿದರು.
ಕಾಸಿ ಮತ್ತಷ್ಟು ಗಾಬರಿಯಿಂದ ಹೇಳಿದ ‘‘ಸಾರ್ ಅವರ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲಿದೆ ಸಾರ್...ನೀವು ಬಿದ್ದ ಬಾವಿಗೆ ಕಲ್ಲು ಹಾಕುವುದಕ್ಕೆ ಬರುತ್ತಿರಬೇಕು...’’
ಯಡಿಯೂರಪ್ಪ ‘‘ದ್ರೋಹಿಗಳು... ದ್ರೋಹಿಗಳು... ನಾನು ಬಾವಿಗೆ ಬಿದ್ದಿದ್ದರೆ ಎತ್ತೋದು ಬಿಟ್ಟು ಕಲ್ಲು ಹಾಕೋದಕ್ಕೆ ಬರುತ್ತಿದ್ದಾರೆ...’’ ಎಂದವರೇ ತಾವೇ ತಾವಾಗಿ ಸರಸರನೇ ಬಾವಿ ಏರಿ ಹೋಗಿ, ಸದನದ ಕುರ್ಚಿಯಲ್ಲಿ ಕುಳಿತುಕೊಂಡರು.
‘‘ಛೆ ಸ್ವಲ್ಪದರಲ್ಲಿ ಮಿಸ್ಸಾಗಿ ಹೋಯಿತು...’’ ಎಂದು ಸಿದ್ದರಾಯಮ್ಯ, ಈಶ್ವರಪ್ಪಾದಿಗಳು ಕೈ ಕೈ ಹಿಸುಕಿಕೊಂಡರು.