(ಜನವರಿ, 20, 2008, ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ ಇದು. ಮಂಗಳ ಗ್ರಹದ ಜನ ಕರ್ನಾಟಕಕ್ಕೇ ಬಂದು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಹೋದರು. ಅದರ ಕೆಲವು ವಿವರಗಳು ಇಲ್ಲಿವೆ )
ಮಂಗಳ ಗ್ರಹದ ಜೀವಿಗಳು ಕೊನೆಗೂ ಭೂಮಿಯಲ್ಲಿ ಜೀವಿಗಳಿರುವುದನ್ನು ಪತ್ತೆ ಮಾಡಿದವು. ತಕ್ಷಣ ಮಂಗಳ ಗ್ರಹದ ವಿಜ್ಞಾನಿಗಳು ಸಭೆ ಸೇರಿದರು. ಒಂದು ತಂಡವನ್ನು ಮಾಡಿ ಭೂಮಿಗೆ ಕಳುಹಿಸುವುದೆಂದು ತೀರ್ಮಾನಿಸಲಾಯಿತು. ಭೂಮಿಯ ಬಗೆಗಿನ ವಿವರಗಳನ್ನು, ಅಲ್ಲಿಯ ಜನಜೀವನ, ಬದುಕಿನ ಶೈಲಿಯನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಮಾಡಬೇಕೆಂದು ಈ ತಂಡಕ್ಕೆ ತಿಳಿಸಲಾಯಿತು. ಮಂಗಳ ಗ್ರಹದಿಂದ ಈ ತಂಡ ನೇರವಾಗಿ ಕರ್ನಾಟಕಕ್ಕೇ ಬಂದಿಳಿದು, ಗುಪ್ತವಾಗಿ ಜನರ ನಡುವೆ ಓಡಾಡಿ ಒಂದು ವರದಿಯನ್ನು ಸಿದ್ಧ ಪಡಿಸಿ, ಮರಳಿ ತಮ್ಮ ಗ್ರಹಕ್ಕೆ ತೆರಳಿತು. ಒಂದು ದಿನ ಮುಂಜಾನೆ ಪತ್ರಕರ್ತ ಎಂಜಲು ಕಾಸಿ ಮೂತ್ರ ಮಾಡಲೆಂದು ಎದ್ದಾಗ ಆಕಾಶದಿಂದ ಎನೋ ಬಿದ್ದಂತಾಯಿತು. ನೋಡಿದರೆ ಅದು ಮಂಗಳ ಗ್ರಹದ ಜೀವಿಗಳು ಸಿದ್ಧ ಪಡಿಸಿದ ವರದಿ. ಬಹುಶಃ ಕೈ ಜಾರಿ ಕೆಳಗೆ ಬಿದ್ದಿರಬಹುದು ಎಂದು ಕಾಸಿ ಒಮ್ಮೆ ಆಕಾಶ ನೋಡಿದ. ಮಂಗಳ ಗ್ರಹದ ಜೀವಿಗಳು ತಮ್ಮ ವಿಜ್ಞಾನಿಗಳಿಗೆ ನೀಡಿದ ಆ ಸ್ಕೂಪ್ ವರದಿ ಈ ಕೆಳಗಿನಂತಿದೆ.
***
1. ನಾವು ಕರ್ನಾಟಕ ಎಂಬ ಊರಿಗೆ ಮೊದಲು ಇಳಿದೆವು. ಇದು ಸಂಪೂರ್ಣ ಧೂಳಿನಿಂದಾವೃತವಾದ ಒಂದು ಗ್ರಹ. ಇಳಿದಾಕ್ಷಣ ನಾವು ಬೃಹತ್ ಕುಳಿಗಳನ್ನು ಅಥವಾ ಹೊಂಡಗಳನ್ನು ಕಂಡೆವು. ಈ ಕುಳಿಗಳನ್ನು ಇಲ್ಲಿನ ಜನರು ರಸ್ತೆಗಳೆಂದು ಕರೆಯುತ್ತಾರೆ.
2. ನಮ್ಮ ಗ್ರಹದಲ್ಲಿರುವಂತೆ ಭೂಮಿಯಲ್ಲಿಯೂ ಕಳ್ಳರು, ದರೋಡೆಕೋರರು ಇದ್ದಾರೆ. ಆದರೆ ಅವರನ್ನು ಈ ಗ್ರಹದಲ್ಲಿ ರಾಜಕಾರಣಿಗಳು ಎಂಬ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅವರಿಗಾಗಿಯೇ ಭಾರೀ ಸೌಧವೊಂದನ್ನು ಕಟ್ಟಿದ್ದಾರೆ. ಅದನ್ನು ವಿಧಾನ ಸೌಧ ಎಂದು ಕರೆಯುತ್ತಾರೆ. ದರೋಡೆ ಮಾಡುವುದಕ್ಕಾಗಿಯೇ ಇಲ್ಲಿ ಸಭೆಗಳು ಬಹಿರಂಗವಾಗಿ ನಡೆಯುತ್ತವೆ. ಅದನ್ನು ಈ ಗ್ರಹದ ಜನರು ಅಧಿವೇಶನ ಎಂದು ಕರೆಯುತ್ತಾರೆ. ಅತ್ಯುತ್ತಮ ದರೋಡೆಕೋರರನ್ನು ಆಯ್ಕೆ ಮಾಡುವುದಕ್ಕಾಗಿ ಇಲ್ಲಿ ಚುನಾವಣೆಗಳೂ ನಡೆಯುತ್ತವೆ. ಇಲ್ಲಿ ಹೊಟ್ಟೆಗೆ ತಿನ್ನಲು ಏನೂ ಇಲ್ಲದವರನ್ನು ಕಳ್ಳರು, ನಕ್ಸಲೀಯರು ಎಂದು ಕರೆಯುತ್ತಾರೆ. ಅವರನ್ನು ಕೊಂದು ಹಾಕುವುದಕ್ಕಾಗಿಯೇ ಇಲ್ಲಿ ವಿಶೇಷ ಪಡೆಗಳಿವೆ. ಈ ಪಡೆಗಳನ್ನು ಆ ಹೊಟ್ಟೆಗೆ ಇಲ್ಲದವರೇ ದುಡ್ಡುಕೊಟ್ಟು ಸಾಕುತ್ತಾರೆ.
3. ಇದೊಂದು ವಿಚಿತ್ರ ಗ್ರಹ. ಇಲ್ಲಿ ಜನರನ್ನು ಹಿಂಸಿಸುವುದಕ್ಕಾಗಿಯೇ, ಅಮಾಯಕರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ಹೂಡುವುದಕ್ಕಾಗಿಯೇ ಒಂದು ಇಲಾಖೆ ಇದೆ. ಆ ಇಲಾಖೆಯನ್ನು ಅವರು ಪೊಲೀಸ್ ಇಲಾಖೆ ಎಂದು ಕರೆಯುತ್ತಾರೆ. ಕದಿಯದವರನ್ನು ಕದಿಯುವಂತೆ ಮಾಡುವುದು ಇವರ ಮುಖ್ಯ ಕೆಲಸ.
4. ಇಲ್ಲೊಂದು ಉಡುಪಿ ಎನ್ನುವ ಸ್ಥಳ ಇದೆ. ಇದನ್ನೇ ‘ಜಗತ್ತು’ ಎಂದೂ ಇಲ್ಲಿನವರು ಕರೆಯುತ್ತಾರೆ. ಈ ಜಗತ್ತಿಗೆ ಗುರುಗಳೂ ಇದ್ದಾರೆ. ಅವರು ತಮ್ಮನ್ನು ತಾವು ಜಗದ್ಗುರು ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿ ಉಡುಪಿ ಮಾತ್ರ ಜಗತ್ತು ಮತ್ತು ಅದರಾಚೆಗೆ ಜಗತ್ತು ಇಲ್ಲ ಎನ್ನುವ ವಿಷಯದಲ್ಲಿ ಭಾರೀ ಜಗಳವಾಯಿತು. ಒಬ್ಬ ಜಗದ್ಗುರು ಸಮುದ್ರದಾಚೆಗೂ ಜಗತ್ತು ಇದೆ ಎಂದರೆ, ಉಳಿದವರೆಲ್ಲಾ ಸಮುದ್ರದಾಚೆಗೆ ಜಗತ್ತು ಇಲ್ಲ ಎಂದು ವಾದಿಸಿದರು. ಈ ಜಗಳವನ್ನು ಇಲ್ಲಿ ‘ಪರ್ಯಾಯೋತ್ಸವ’ ಎಂದು ಕರೆಯುತ್ತಾರೆ.
5. ಇಲ್ಲಿ ‘ಸಂಸ್ಕೃತಿ’ ಎನ್ನುವ ವಿಚಿತ್ರ ಪದವನ್ನು ಬಳಸುತ್ತಾರೆ. ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅಮಾಯಕರನ್ನು ಬೆತ್ತಲೆ ಮಾಡಿ ಥಳಿಸುವುದು, ಆದಿವಾಸಿಗಳು ಎಂದು ಕರೆಸಿಕೊಳ್ಳುವವರನ್ನು ಯರ್ರಾಬಿರ್ರಿ ಥಳಿಸುವುದು ಹೀಗೆ ಇವರು ತಮ್ಮ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಗುಜರಾತ್ ಎಂಬ ಊರಿನಲ್ಲಿ ಭಾರೀ ಸಾಂಸ್ಕೃತಿಕ ಉತ್ಸವ ಆಚರಣೆಯಾಯಿತಂತೆ. ನರೇಂದ್ರ ಮೋದಿ ಎಂಬ ನಾಯಕನೇ ಆ ಸಾಂಸ್ಕೃತಿಕ ಆಚರಣೆಯ ನೇತೃತ್ವವನ್ನು ವಹಿಸಿದ್ದರಿಂದ, ಜನರು ಆತನನ್ನೇ ಮತ್ತೆ ತಮ್ಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯ ಜನರು ಸಾಂಸ್ಕೃತಿಕ ಪುನರುತ್ಥಾನ ಎಂದೂ ಕರೆಯುತ್ತಾರೆ.
6. ಇಲ್ಲಿ ‘ದನ’ ಎನ್ನುವ ಒಂದು ಪ್ರಾಣಿ ಇದೆ. ಇದು ಹಾಲು ಕೊಡುತ್ತದೆ. ಜೊತೆಗೆ ಇದನ್ನು ಹಾಲಿಗಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳಿಗೆ ಬಳಸಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಜೀವಿಗಳು ಪ್ರಯೋಗ ನಡೆಸುತ್ತಿವೆ. ಕರೆದರೆ ಹಾಲು ಮಾತ್ರ ಅಲ್ಲ, ಅಧಿಕಾರದ ಕುರ್ಚಿ, ರಕ್ತ, ಹಿಂಸೆ ಇತ್ಯಾದಿಗಳು ಬರಲು ಸಾಧ್ಯವೆ ಎಂದು ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಪ್ರಯೋಗ ಭಾಗಶಃ ಯಶಸ್ವಿಯಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈವರೆಗೆ ಈ ದನ ಎನ್ನುವ ಪ್ರಾಣಿ ಬಿಳಿ ಹಾಲನ್ನು ಮಾತ್ರ ಕೊಡುತ್ತಿತ್ತು. ಕೇಸರಿ ಬಣ್ಣದ ಹಾಲನ್ನು ತೆಗೆಯಲು ಸಾಧ್ಯವೆ ಎಂಬ ಕುರಿತಂತೆಯೂ ಭಾರೀ ಪ್ರಯೋಗಗಳು ನಡೆಯುತ್ತಿವೆ.
7. ಇಲ್ಲಿ ಕಾಡುಗಳಿರುವಂತೆಯೇ ಅಲ್ಲಲ್ಲಿ ‘ಹಳ್ಳಿ’ ಎನ್ನುವುದು ಇವೆಯಂತೆ. ಇವುಗಳಲ್ಲಿ ತುಂಬಾ ಹಿಂದೆ ‘ರೈತ’ ಎಂಬ ಜೀವಿ ವಾಸಿಸುತ್ತಿತ್ತಂತೆ. ಇದೊಂದು ಭಯಂಕರ ಜೀವಿಯಾಗಿತ್ತಂತೆ. ಮುಖ್ಯವಾಗಿ ಭಯೋತ್ಪಾದನೆ, ಉಗ್ರವಾದ ಮೊದಲಾದ ಚಟುವಟಿಕೆಗಳನ್ನು ಈ ಜೀವಿ ನಡೆಸುತ್ತಿತ್ತಂತೆ. ಇವುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ‘ನೇಗಿಲು’ ಎಂಬ ಭಯಾನಕ ಆಯುಧವನ್ನು ಬಳಸುತ್ತಿತ್ತಂತೆ. ಆದುದರಿಂದ ಇವುಗಳನ್ನು ಎನ್‌ಕೌಂಟರ್‌ನಿಂದ ಕೊಲ್ಲಲಾಯಿತಂತೆ. ಈಗಲೂ ಈ ‘ರೈತ’ ಎನ್ನುವ ಜೀವಿ ಅಲ್ಲಲ್ಲಿ ಉಳಿದುಕೊಂಡಿದೆಯಂತೆ. ಅದನ್ನು ಹುಡುಕಿ ಹತ್ಯೆಗೈಯುವುದಕ್ಕಾಗಿಯೇ ‘ಸೆಝ್’ ‘ಐಟಿ ಪಾರ್ಕ್’ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆಯಂತೆ. ಇದರ ವಿರುದ್ಧವೂ ಈ ಅಳಿದುಳಿದ ‘ರೈತ’ರು ಎನ್ನುವ ಜೀವಿಗಳು ಭಾರೀ ಸಂಚು ನಡೆಸುತ್ತಿವೆಯಂತೆ.
8. ಇಲ್ಲಿ ಭಾರೀ ಶ್ರೀಮಂತರು ಮುಖ ಒರೆಸಿಕೊಳ್ಳುವುದಕ್ಕೆ ಹಾಗೂ ಟಾಯ್ಲೆಟ್‌ನಲ್ಲಿ ಹೊಲಸನ್ನು ಒರೆಸಿಕೊಳ್ಳುವುದಕ್ಕೆ ಕಾಗದಗಳನ್ನು ಬಳಸುತ್ತಾರೆ. ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ. ಈ ಪತ್ರಿಕೆಗಳನ್ನು ಬಣ್ಣ ಬಣ್ಣವಾಗಿ ಮುದ್ರಿಸುತ್ತಾರೆ. ವಿವಿಧ ಕಂಪೆನಿಗಳು ವಿವಿಧ ಹೆಸರುಗಳಿಂದ ಇವುಗಳನ್ನು ಮುದ್ರಿಸುತ್ತವೆ. ಇಲ್ಲಿ ಮೇಲೆ ಹೇಳಿದ ‘ಸಂಸ್ಕೃತಿ’ಯ ವಕ್ತಾರರು ಎಂದು ಕರೆಸಿಕೊಂಡವರೂ ಈ ಕಾಗದಗಳನ್ನು ಬಳಸುತ್ತಾರೆ. ಅವರು ವಾಂತಿ ಮಾಡಲು ಬಳಸುವುದು ಇದೇ ಕಾಗದಗಳನ್ನು. ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನೇ ಈ ಕೆಲಸಕ್ಕೆ ಹೆಚ್ಚು ಬಳಸುತ್ತಾರೆ. ಹಾಗೆಯೇ ಸಮಾಜದ ಉನ್ನತ ವರ್ಣೀಯರು ಮುದ್ರಿಸುವ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾಕೆಂದರೆ ಅದು ಹೊಲಸನ್ನು ಒರೆಸುವುದಕ್ಕೆ, ವಾಂತಿ ಮಾಡುವುದಕ್ಕೆ ಹೆಚ್ಚು ಕ್ವಾಲಿಟಿ ಹೊಂದಿರುತ್ತದೆ ಎನ್ನುವುದು ಈ ಗ್ರಹದವರ ನಂಬಿಕೆ.
9. ಇಲ್ಲಿ ಕಸದ ತೊಟ್ಟಿ ಎಂಬ ಒಂದು ಪೆಟ್ಟಿಗೆ ಇದೆ. ಇದನ್ನು ಆಗಷ್ಟೇ ಹುಟ್ಟಿದ
ಅನಾಥ ಮಕ್ಕಳನ್ನು ಎಸೆಯುವುದಕ್ಕೆ, ‘ಹೆಣ್ಣು’ ಎಂಬ ಭಯಾನಕ ಜೀವಿಯೊಂದು ಜನಿಸಿದರೆ ಅದನ್ನು ಕತ್ತು ಹಿಸುಕಿ ಕೊಂದು ಎಸೆಯುವುದಕ್ಕೆ, ಹೊಟ್ಟೆಯೊಳಗಿರುವ ಭ್ರೂಣವನ್ನು ಎಸೆಯುವುದಕ್ಕೆ ಬಳಸುತ್ತಾರೆ. ಇಂತಹ ಕೆಲಸಕ್ಕಾಗಿಯೇ ಈ ಗ್ರಹದಲ್ಲಿ ಚರಂಡಿ, ಗಟಾರ ಮೊದಲಾದವುಗಳನ್ನು ಮಾಡಿದ್ದಾರೆ. ಕಸಗಳನ್ನು ಎಸೆಯುವುದಕ್ಕೆ ಸಾರ್ವಜನಿಕ ಸ್ಥಳ, ಇನ್ನೊಬ್ಬರ ಅಂಗಳ, ರಸ್ತೆ ಇತ್ಯಾದಿಗಳನ್ನು ಬಳಸುತ್ತಾರೆ.
10. ಈ ಎಲ್ಲ ವರದಿಗಳ ಆಧಾರದಲ್ಲಿ ಸಾಬೀತಾಗುವುದೇನೆಂದರೆ, ಈ ಭೂಮಿ ಎಂಬ ಗ್ರಹ ಯಾವ ಕಾರಣಕ್ಕೂ ‘ಮನುಷ್ಯ’ರು ವಾಸ ಮಾಡುವುದಕ್ಕೆ ಯೋಗ್ಯವಾದ ಗ್ರಹ ಅಲ್ಲ. ಆದುದರಿಂದ ಮಂಗಳ ಗ್ರಹದ ಯಾವ ಮನುಷ್ಯರು ಕೂಡ ತಪ್ಪಿಯೂ ಈ ಭೂಮಿ ಎಂಬ ಗ್ರಹದಲ್ಲಿ ವಾಸ ಮಾಡುವ ಕುರಿತು ಯೋಚನೆ ಮಾಡಬಾರದು. ಹಾಗೆ ಯೋಚನೆ ಮಾಡಿದರೆ ಆಗುವ ಅನಾಹುತಕ್ಕೆ ಮಂಗಳ ಗ್ರಹದ ವಿಜ್ಞಾನಿಗಳಾಗಲಿ, ಸರಕಾರವಾಗಲಿ ಹೊಣೆಯಾಗುವುದಿಲ್ಲ.
(ಜನವರಿ, 20, 2008, ರವಿವಾರ)

No comments:
Post a Comment