Wednesday, December 18, 2013

ಸಾಬರ ಹೋರಿ, ಹಿಂದೂ ಗೋವುಗಳನ್ನು ಚುಡಾಯಿಸಿದರೆ?

 
2008ರಲ್ಲಿ ಪ್ರಪ್ರಥಮ ಬಾರಿ ಬಿಜೆಪಿ ಸರಕಾರ ಅಧಿಕಾರ ಹಿಡಿದ ಸಂದರ್ಭದ ಯಡಿಯೂರಪ್ಪ ಸ್ಥಿತಿಯನ್ನು ಈ ಬುಡಬುಡಿಕೆ ಹೇಳುತ್ತದೆ. ಪತ್ರಕರ್ತ ಎಂಜಲು ಕಾಸಿ ಅದನ್ನು ಇಲ್ಲಿ ಮತ್ತೊಮ್ಮೆ ನಿಮ್ಮೆಂದಿಗೆ ಹಂಚಿಕೊಂಡಿದ್ದಾನೆ.

ಹೊಸ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದದ್ದೇ, ಎಲ್ಲ ಪತ್ರಕರ್ತರಂತೆ ಎಂಜಲು ಕಾಸಿಯೂ ಅತ್ಯುತ್ಸಾಹದಿಂದ ಕುಣಿಯ ಹತ್ತಿದ. ನೂತನ ಸಚಿವ ಸಂಪುಟ ಪ್ರಮಾಣವಚನ ದಿನ ಹೊಸ ಬಟ್ಟೆ ಹಾಕಿ, ಮದುಮಗನಂತೆ ಓಡಾಡಿದ. ಇಂದಿನ ಮುಂಜಾವಿನ ಸೂರ್ಯನ ಬಣ್ಣ ಕೇಸರಿಯಾಗಿರುವುದನ್ನು ‘ಸ್ಕೂಪ್’ ವರದಿಯಾಗಿ ಬರೆದ. ಎಲ್ಲರ ಮನೆಗಳಲ್ಲಿ ಗೋವು ಎರಡು ಸೇರು ಹಾಲು ಜಾಸ್ತಿಕೊಟ್ಟವು ಎಂದು ಕೊರೆದ. ಆ ಹಾಲು ಬಿಳಿಯಾಗಿರದೆ, ಕೇಸರಿಯಾಗಿತ್ತು ಎನ್ನುವುದನ್ನು ಜೊತೆಗೆ ಸೇರಿಸಿದ. ಗೋಮಾತೆಗಳೆಲ್ಲ ಬೆಳಗ್ಗೆ ಬೇಗನೇ ಎದ್ದು, ಸ್ನಾನ ಮಾಡಿ, ಚಡ್ಡಿ ಹಾಕಿ ‘ಸದಾ ವತ್ಸಲೇ...’ ಎಂದು ಆರೆಸ್ಸೆಸ್ ರಾಷ್ಟ್ರಗೀತೆಯನ್ನು ಹಾಡಿ, ಬಿಜೆಪಿ ಸರಕಾರಕ್ಕೆ ಶುಭ ಕೋರಿದವು ಎನ್ನುವುದನ್ನು ಬಾಕ್ಸ್ ಮಾಡಿದ. ರಾಜ್ಯದ ಎಲ್ಲ ಬಡವರ ಮನೆಗಳಲ್ಲಿ ಪ್ರಮಾಣ ವಚನದ ದಿನ ‘ಕೇಸರಿ’ ಬಾತ್‌ನ್ನೇ ಮಾಡುವ ಮೂಲಕ ಹೊಸ ಸರಕಾರವನ್ನ ಸ್ವಾಗತಿಸಲಾಯಿತು ಎಂದು ಸೈಡ್ ಹೆಡ್ಡಿಂಗ್ ಕೊಟ್ಟ. ಹೀಗೆ ಎಂಜಲು ಕಾಸಿ ಸೇವೆ ಮಾಡುತ್ತಿರಲಾಗಿ, ಖಾತೆಗಾಗಿ ಬಿಜೆಪಿಯೊಳಗೆ ಕೆಲವರು ಕ್ಯಾತೆ ತೆಗೆಯಲು ಶುರು ಮಾಡಿದ್ದೇ ಕಂಗಾಲಾಗಿ ಬಿಟ್ಟ. ನೇರವಾಗಿ ಯಡಿಯೂರಪ್ಪರ ಬಳಿಗೆ ಓಡಿ ‘‘ಸಾರ್... ಇದೇನು ಸಾರ್... ಹೀಗೆಲ್ಲ ಸರಕಾರದ ಆರಂಭದಲ್ಲೇ ಜಗಳ ಮಾಡಿದ್ರೆ... ನಾವು ಪತ್ರಕರ್ತರ ಮಾರ್ಯಾದೆ ಏನಾಗಬೇಕು ಸಾರ್... ಹೇಗಾದ್ರು ಮಾಡಿ... ಜಗಳ ನಿಲ್ಲಿಸಿ ಸಾರ್...’’ ಎಂದ. ಯಡಿಯೂರಪ್ಪ ಹಣೆಯನ್ನು ಒರೆಸುತ್ತಾ ಹೇಳಿದರು. ‘‘ಅವಸರ ಮಾಡಬ್ಯಾಡ್ರಿ ಎಂಜಲು ಕಾಸಿ. ನಮ್ಮ ಪಕ್ಷದಲ್ಲಿ ಎಷ್ಟು ಜನ ಶಾಸಕರಿದ್ದಾರೋ ಅವರೆಲ್ಲರಿಗೂ ಸಚಿವ ಸ್ಥಾನ ಕೊಟ್ಟು ಬಿಡ್ತೀವಿ. ಅದಕ್ಕಾಗಿ ಹೊಸ ಖಾತೆಗಳನ್ನು ತೆರ್ದಿದ್ದೀನಿ. ಸ್ಯಾಂಪಲ್ ಬೇಕಾದರೆ ಇಲ್ಲಿದೆ ನೋಡಿ...’’ ಎಂದು ತಾನೇ ಖುದ್ದು ತಯಾರಿಸಿದ ಹೊಸ ಖಾತೆಗಳ ವಿವರಗಳನ್ನು ಎಂಜಲು ಕಾಸಿಗೆ ನೀಡಿದರು. ಅದರ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ.
                ***

ಗ್ರಹ ಸಚಿವ: ಗೃಹ ಸಚಿವರ ಕೆಲಸ ಭದ್ರತೆಗೆ ಸಂಬಂಧ ಪಟ್ಟದ್ದಾದರೆ, ಗ್ರಹ ಸಚಿವರ ಕೆಲಸ ನವಗ್ರಹಗಳನ್ನು ನಿಯಂತ್ರಿಸುವುದು. ರಾಹು-ಕೇತು ಮೊದಲಾದ ಕ್ಷುದ್ರ ಗ್ರಹಗಳಿಂದ ನಾಡಿಗೆ ಬರುವ ಆಪತ್ತುಗಳಿಂದ ರಕ್ಷಿಸಲು ಈ ಖಾತೆಯನ್ನು ತೆರೆಯಲಾಗಿದೆ. ಮಾಟ ಮಂತ್ರಗಳಂತಹ ಅಪರಾಧಗಳನ್ನು ಗ್ರಹ ಖಾತೆಯ ವ್ಯಾಪ್ತಿಗೇ ಸೇರಿಸಲಾಗುತ್ತದೆ. ಮುಖ್ಯವಾಗಿ ದೇವೇಗೌಡರ ಮಾಟ ಮಂತ್ರಗಳ ಪ್ರಭಾವದಿಂದ ರಕ್ಷಿಸಲು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಈ ಗ್ರಹ ಖಾತೆಯ ವತಿಯಿಂದ ನಾಲ್ಕು ಮಂತ್ರವಾದಿಗಳನ್ನು ಅಂಗರಕ್ಷಕರಾಗಿ ನೇಮಕ ಮಾಡಲಾಗುತ್ತದೆ. ಬ್ಲಾಕ್ ಕಮಾಂಡೋಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಇವರಿಗೆ ನೀಡಲಾಗುತ್ತದೆ. ಭಯೋತ್ಪಾದಕರು ಮುಂದಿನ ದಿನಗಳಲ್ಲಿ ಮಾಟ ಮಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸುವ ಸಾಧ್ಯತೆಯಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಮಂತ್ರವಾದಿಗಳನ್ನು ಸೇರಿಸಲಾಗುತ್ತದೆ. ವಿಧಾನಸೌಧಕ್ಕೆ ಮಾಟ ಮಾಡುವ ಸಾಧ್ಯತೆ ಇರುವುದರಿಂದ, ಇಡೀ ವಿಧಾನಸೌಧ ಪರಿಸರವನ್ನು ಮಾಟ ನಿಷೇಧಿತ ವಲಯವಾಗಿ ಪರಿವರ್ತಿಸಲಾಗುವುದು. ಮತ್ತು ಇದರ ಹೊಣೆಗಾರಿಕೆಯನ್ನು ಗ್ರಹ ಸಚಿವರಿಗೆ ನೀಡಲಾಗುವುದು. ಓಂ ಮಿನಿಸ್ಟರ್: ಓಂ ಮಿನಿಸ್ಟರ್ ಕೆಲಸ, ಈ ನಾಡಿನ ಸಂಸ್ಕೃತಿಯನ್ನು ರಕ್ಷಿಸುವುದು. ಈ ಖಾತೆಯ ಮೂಲಕ ನಾಡಿನ ಜನತೆಗೆ ಪುಕ್ಕಟೆಯಾಗಿ ತ್ರಿಶೂಲಗಳನ್ನು ಹಂಚಲಾಗುತ್ತದೆ. ರೇಷನ್ ಅಂಗಡಿಗಳ ಮೂಲಕ ಕುಂಕುಮವನ್ನು ವಿತರಿಸುವ ಕೆಲಸವನ್ನು ಈ ಖಾತೆ ಮಾಡುತ್ತದೆ. ಈ ಖಾತೆಯ ಮೂಲಕ, ಅರ್ಧದಲ್ಲೇ ಶಾಲೆ ತೊರೆದ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ತರಬೇತಿಗಳನ್ನು ನೀಡಲಾಗುತ್ತದೆ. ಹಣೆಗೆ ಕುಂಕುಮ ಧರಿಸಿ, ತ್ರಿಶೂಲಗಳಿಂದ ವಿವಿಧ ರೀತಿಯಲ್ಲಿ ಇರಿಯುವುದನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಯಾವುದೇ ಅನಸ್ತೇಶಿಯಾ ಬಳಸದೇ ತ್ರಿಶೂಲದ ಮೂಲಕ ಗರ್ಭಿಣಿ ಹೆಂಗಸಿನ ಮಗುವನ್ನು ಹೊರಗೆ ತೆಗೆಯುವುದು ಹೇಗೆ ಎನ್ನುವುದನ್ನೂ ತಿಳಿಸಿ ಕೊಡಲಾಗುತ್ತದೆ. ದರೋಡೆ, ಹಲ್ಲೆ, ಕೊಲೆ, ಅತ್ಯಾಚಾರ ಇವುಗಳ ಸಾಂಸ್ಕೃತಿಕ ಆಯಾಮವನ್ನು ಈ ಖಾತೆಯ ಮೂಲಕ ಪರಿಚಯಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಸಾಂಸ್ಕೃತಿಕ ಕಾರ್ಯಕರ್ತರ ಮೂಲಭೂತ ಹಕ್ಕುಗಳ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದರೆ, ಅದನ್ನು ತಡೆಯುವುದು ಓಂ ಮಿನಿಸ್ಟರ್ ಕೆಲಸವಾಗಿದೆ.
 ಗಿಣಿ ಖಾತೆ: ಜೋತಿಷ್ಯ ಭಾರತದ ಪುರಾತನವಾದ ವಿಜ್ಞಾನವಾಗಿದ್ದು, ಇದನ್ನು ಮೇಲೆತ್ತಲು ಗಿಣಿ ಖಾತೆಯನ್ನು ರಚಿಸಲಾಗಿದೆ. ಗಿಣಿ ಶಾಸ್ತ್ರ ಹೇಳುವ ಎಲ್ಲ ಜ್ಯೋತಿಷಿಗಳನ್ನು ಗುರುತಿಸಿ, ಅವರನ್ನು ಅಧಿಕೃತವಾಗಿ ನೇಮಿಸಲಾಗುವುದು. ಕಾಲೇಜುಗಳಲ್ಲಿ ಗಣಿತಶಾಸ್ತ್ರವಿದ್ದಂತೆ ಗಿಣಿಶಾಸ್ತ್ರವನ್ನು ಕಲಿಸಲಾಗುತ್ತದೆ. ಇದಕ್ಕಾಗಿ ಅರ್ಹ ಗಿಣಿಶಾಸ್ತ್ರಜ್ಞ ಜೋತಿಷಿಗಳನ್ನು ಗುರುತಿಸಿ ಅವರನ್ನು ಈ ಗಿಣಿ ಇಲಾಖೆಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಹಸ್ರಾರು ಗಿಣಿಗಳನ್ನು ಹಿಡಿದು ಅವುಗಳಿಗೆ ಗಿಣಿ ಶಾಸ್ತ್ರದ ಕುರಿತಂತೆ ತರಬೇತಿ ನೀಡಲು ಗಿಣಿ ಇಲಾಖೆಯ ಮೂಲಕ ಗಿಣಿ ಶಾಸ್ತ್ರಜ್ಞರನ್ನು ಆಹ್ವಾನಿಸಲಾಗುತ್ತದೆ. ಹಾಗೆಯೇ ಕಳೆದ ಚುನಾವಣೆಯಲ್ಲಿ ಚುನಾವಣಾ ಪೂರ್ವ ಭವಿಷ್ಯ ಹೇಳಿದ ಪ್ರಮುಖ ಪತ್ರಕರ್ತರನ್ನು ಗಿಣಿ ಶಾಸ್ತ್ರ ಪಾಠ ಹೇಳಲು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸಲಾಗುತ್ತದೆ. ಗಿಣಿ ಸಾಕಣೆ ಉದ್ಯಮವನ್ನು ಆರಂಭಿಸಿ, ಗಿಣಿ ವಂಶವನ್ನು ಹೆಚ್ಚಿಸುವುದಕ್ಕೆ ಈ ಇಲಾಖೆಯ ಮೂಲಕ ಪ್ರಯತ್ನಿಸಲಾಗುತ್ತದೆ. ತಜ್ಞ ಗಿಣಿಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಗಿಣಿಯನ್ನು ನಾಡ ಪಕ್ಷಿಯಾಗಿ ಈ ಇಲಾಖೆಯ ಮೂಲಕ ಘೋಷಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಅತ್ಯುತ್ತಮ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದ ಪತ್ರಕರ್ತರಿಗೆ ಈ ಇಲಾಖೆಯ ಮೂಲಕ ‘ಗಿಣಿ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತದೆ.
 ಗೋ ಖಾತೆ: ಈ ವಿಶೇಷ ಖಾತೆಯ ಮೂಲಕ ಗೋ ಅಭಿವೃದ್ಧಿಯನ್ನು ಮಾಡುವುದು ಮುಖ್ಯ ಉದ್ದೇಶ. ಗೋವುಗಳ ಪೂಜನೀಯವಾದದ್ದು. ಆದುದರಿಂದ ಅವುಗಳು ಬೆತ್ತಲೆ ತಿರುಗಬಾರದು. ಯಾಕೆಂದರೆ ನಗ್ನವಾಗಿ ಅವುಗಳು ತಿರುಗಾಡುವುದನ್ನು ಕಲಾವಿದ ಎಂ.ಎಫ್.ಹುಸೇನ್ ಏನಾದರೂ ನೋಡಿದರೆ ಆತ ಅದರ ನಗ್ನ ಚಿತ್ರ ಬಿಡಿಸಿ, ಗೋ ಮಾತೆಗೆ ಅವಮಾನ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ನಾಡಿನ ಎಲ್ಲ ಗೋವುಗಳಿಗೆ ಈ ಖಾತೆಯ ಮೂಲಕ ಚೆಡ್ಡಿಗಳನ್ನು ಹೊಲಿಸಿಕೊಡಲಾಗುವುದು. ಅಷ್ಟೇ ಅಲ್ಲ ಗೋಮಾಂಸ ಭಕ್ಷಕ ರಾಕ್ಷಸರಿಂದ ರಕ್ಷಿಸಿಕೊಳ್ಳಲು ಅವುಗಳಿಗೆ ಲಾಟಿ ಕವಾಯತುಗಳನ್ನು ಹೇಳಿ ಕೊಡಲಾಗುವುದು. ಅದಕ್ಕಾಗಿ ಪ್ರತಿ ಊರಿನಲ್ಲಿ ಶಾಖೆಯನ್ನು ರಚಿಸಲಾಗುವುದು. ಗೋವಿನ ಆರೋಗ್ಯ ಅತಿ ಮುಖ್ಯ. ಅದಕ್ಕಾಗಿ ಗೋವುಗಳಿಗೆ ಯೋಗ ಶಿಕ್ಷಣವನ್ನು ಕಲಿಸಲಾಗುವುದು. ಗೋವನ್ನು ಸಾಕುವವರು ಎಲ್ಲರೂ ಕಡ್ಡಾಯವಾಗಿ ತಮ್ಮ ತಮ್ಮ ಗೋವುಗಳನ್ನು ಯೋಗ ಶಿಕ್ಷಣ ಶಾಲೆಗೆ ಸೇರಿಸತಕ್ಕದ್ದು. ಅದರ ಖರ್ಚನ್ನು ಗೋ ಖಾತೆಯ ಮೂಲಕವೇ ಭರಿಸಲಾಗುತ್ತದೆ. ಗೋವುಗಳು ಯಾವತ್ತೂ ಅಪೌಷ್ಠಿಕತೆಯಿಂದ ನರಳಬಾರದು. ಅದಕ್ಕಾಗಿ ವಿದೇಶದಿಂದ ಹಾಲನ್ನು ಆಮದು ಮಾಡಿ, ಎಲ್ಲ ಗೋವಿಗಳಿಗೆ ಪ್ರತಿ ದಿನ ಒಂದೊಂದು ಲೀಟರ್‌ನಂತೆ ಕುಡಿಸಲಾಗುತ್ತದೆ. ಪ್ರತಿ ದಿನ ಒಂದೊಂದು ಆ್ಯಪಲನ್ನು ಗೋವಿಗೆ ಹಂಚಲಾಗುತ್ತದೆ. ಗೋವು ಸಾಕುವವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಅವರ ಮೇಲೆ ಗೋ ದೌರ್ಜನ್ಯದ ಆರೋಪದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಹಾಗೆಯೇ ಸಾಬರ ಹೋರಿ, ಹಿಂದೂ ಗೋವುಗಳನ್ನು ಚುಡಾಯಿಸಿದರೆ ಅವುಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುವುದು. ಯಾವ ಕಾರಣಕ್ಕೂ ಹಿಂದೂ ಗೋವುಗಳು ಮತ್ತು ಅನ್ಯಮತೀಯರ ಹೋರಿಗಳು ಜೊತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲ ಹಿಂದೂ ಗೋವುಗಳಿಗೆ ಹಣೆಯಲ್ಲಿ ಕೇಸರಿಯನ್ನು ಹಚ್ಚಲು ಸೂಚನೆ ನೀಡಲಾಗುತ್ತದೆ. ಹಾಗೆಯೇ ಎಲ್ಲ ಸಾಬರ ಹೋರಿಗಳಿಗೆ ಕಡ್ಡಾಯವಾಗಿ ಟೊಪ್ಪಿಯನ್ನು ಹಾಕುವ ವ್ಯವಸ್ಥೆ ಮಾಡಲಾಗುತ್ತದೆ. ಅನ್ಯಮತೀಯ ಹೋರಿಗಳ ಸಂಗ ಮಾಡದಂತೆ, ಹಿಂದೂ ಗೋವುಗಳ ಮನವರಿಕೆ ಮಾಡುವ ಕಾರ್ಯಕ್ರಮವನ್ನು ಗೋಖಾತೆ ವಹಿಸಿಕೊಳ್ಳುತ್ತದೆ.
                ***
ಓದುತ್ತಾ ಹೋದಂತೆ ಎಂಜಲು ಕಾಸಿ ರೋಮಾಂಚನಗೊಂಡ. ‘ಸ್ಕೂಪ್’ ‘ಸ್ಕೂಪ್’ ಎನ್ನುತ್ತಾ ಪತ್ರಿಕಾ ಕಚೇರಿಯೆಡೆಗೆ ಓಡತೊಡಗಿದ.
(ಜೂನ್ 1, 2008, ರವಿವಾರ )

No comments:

Post a Comment