Friday, August 14, 2015

ಭಾರತ ರಮ್ ರಾಜ್ಯವಾಗಲಿ....

ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸ ಬೇಕು ಎನ್ನುವ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ನವೆಂಬರ್ -27-2011ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

‘‘ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸಬೇಕು...ನನ್ನ ದೇಶವಾಗಿರುವ ರಾಲೆಗಾಂವ್‌ನಲ್ಲಿ ನಾನು ಹಾಗೆಯೇ ಮಾಡುವುದು’’ ಅಹಿಂಸಾವಾದಿ, ಗಾಂಧಿವಾದಿ ಅಣ್ಣಾ ಹಝಾರೆಯವರು ಹೀಗೊಂದು ಹೇಳಿಕೆ ನೀಡಿದ್ದೇ, ಅವರ ಸುತ್ತಮುತ್ತ ಹಗಲು ರಾತ್ರಿ ಓಡಾಡುತ್ತಿದ್ದ ಪತ್ರಕರ್ತರೆಲ್ಲ ಓಡ ತೊಡಗಿದರು. ಯಾಕೆಂದರೆ ಅದಾಗಲೇ ಸಂಜೆಯಾಗು ತ್ತಿದ್ದಂತೆಯೇ, ಬಾರ್‌ಗೆ ಹೋಗಿ ಒಂದೊಂದು ಪೆಗ್ ಏರಿಸಿ ಬಂದಿದ್ದರು. ‘ಅರೇ, ಹಗಲು ರಾತ್ರಿ ಅವರು ಉಪವಾಸ ಕೂತಾಗ ನಾವೆಲ್ಲ, ಗುಂಡು ಹಾಕಿ ಅವರ ಸುತ್ತಮುತ್ತ ಓಡಾಡಿ ವರದಿ ಮಾಡಿದ್ದರೆ, ಈಗ ನಮ್ಮ ವಿರುದ್ಧವೇ ಕಾನೂನು ತರಲು ಹೊರಟಿದ್ದಾರಲ್ಲ....ಇದು ಪತ್ರಿಕಾ ಸ್ವಾತಂತ್ರದ ಮೇಲೆ ನಡೆಸುವ ಹಲ್ಲೆ’ ಎಂದು ಪತ್ರಕರ್ತರು ಚೀರಾಡತೊಡಗಿದರು.
ಅಂದು ಸಂಜೆಯೇ ದಿಲ್ಲಿಯ ಕುಖ್ಯಾತ ಬಾರ್‌ನಲ್ಲಿ ಸಭೆ ಸೇರಿದ ಪತ್ರಕರ್ತರು ‘‘ಹೆಂಡ ಮತ್ತು ಶಾಯಿ ಒಂದೇ. ಅದರ ಮೇಲೆ ನಡೆಯುವ ಹಲ್ಲೆ, ಪತ್ರಕರ್ತರ ಸ್ವಾತಂತ್ರದ ಮೇಲೆ ನಡೆಯುವ ಹಲ್ಲೆ. ಆದುದರಿಂದ ಅಣ್ಣಾ ಹಝಾರೆಯವರು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು’’ ಎಂದು ಗುಟ್ಟಾಗಿ ನಿರ್ಣಯವನ್ನು ಮಾಡಿ, ಅದನ್ನು ಆರೆಸ್ಸೆಸ್‌ನ ಸಂಚಾಲಕರಿಗೆ ತಲುಪಿಸಿ ಹಲ್ಲು ಕಿರಿದರು.
ಜನಲೋಕಪಾಲದಲ್ಲಿ ಮಠಗಳನ್ನು ಹೊರಗಿಟ್ಟಂತೆ, ಕುಡುಕರಿಗೆ ಥಳಿಸುವ ವಿಷಯದಲ್ಲಿ ಪತ್ರಕರ್ತರನ್ನು ಹೊರಗಿಟ್ಟರೂ ಸಾಕು ಎಂದು ಆರೆಸ್ಸೆಸ್ ಮುಖಂಡರಲ್ಲಿ ಅಲವತ್ತುಕೊಳ್ಳ ತೊಡಗಿದರು. ತಮ್ಮ ಚೆಡ್ಡಿ ಸರಿಪಡಿಸಿಕೊಂಡ ಆರೆಸ್ಸೆಸ್ ಸಂಚಾಲಕರು ‘ಈ ಬಗ್ಗೆ ಅಣ್ಣಾ ಹಝಾರೆಗೆ ಮನವರಿಕೆ ಮಾಡಲಾಗುವುದು. ಪತ್ರಕರ್ತರಿಗೆ ಕುಡಿಯುವದಕ್ಕಾಗಿ ವಿಶೇಷ ಐಡೆಂಟಿಟಿ ಕಾರ್ಡ್‌ನ್ನು ಅಣ್ಣಾಹಝಾರೆಯವರ ಸಹಿ ಯೊಂದಿಗೆ ನೀಡಲಾಗುವುದು... ಥಳಿಸುವಾಗ ಈ ಕಾರ್ಡ್ ತೋರಿಸಿದರೆ ಅವರು ನಿಮ್ಮನ್ನು ಬಿಟ್ಟು ಬಿಡುತ್ತಾರೆ’’ ಎಂದರು.
ಆರೆಸ್ಸೆಸ್ ಸಂಚಾಲಕರಿಗೆ ಪತ್ರಿಕಾಸ್ವಾತಂತ್ರದ ಕುರಿತಂತೆ ಇರುವ ಗೌರವವನ್ನು ಕಂಡು ಪತ್ರಕರ್ತರೆಲ್ಲ ಹಿರಿ ಹಿರಿ ಹಿಗ್ಗಿ, ಮತ್ತೆ ಬಾರ್‌ನಲ್ಲಿ ಸಭೆ ಸೇರಿ, ಪತ್ರಿಕಾ ಸ್ವಾತಂತ್ರವನ್ನು ಗುಂಡು, ತುಂಡಿನ ಜೊತೆಗೆ ಆಚರಿಸತೊಡಗಿದರು.
***
ಇತ್ತ ದೇಶಾದ್ಯಂತ ಕುಡುಕರು ರಾಮ್‌ಲೀಲಾ ಮೈದಾನದಲ್ಲಿ ಒಂದಾದರು. ಕಿಂಗ್‌ಫಿಶರ್ ಅಮಲು ಇಳಿದ ಮಲ್ಯ, ಗಾಂಧಿವಾದದ ಟೋಪಿಯನ್ನು ತಲೆಗೇರಿಸಿಕೊಂಡು ಪ್ರವೇಶಿಸಿದರು. ಅವರೆಲ್ಲ ಅಣ್ಣಾ ಹಝಾರೆಯವರ ಗೂಂಡಾಗಿರಿಯ ವಿರುದ್ಧ ಅಹಿಂಸಾ ಸತ್ಯಾಗ್ರಹಕ್ಕೆ ಇಳಿದಿದ್ದರು. ಕರ್ನಾಟಕದಿಂದ ಮಲ್ಯ ಬಂದಿರುವುದರಿಂದ ಅವರನ್ನು ಪತ್ರಕರ್ತ ಎಂಜಲು ಕಾಸಿಯೂ ಹಿಂಬಾಲಿಸಿದ್ದ.
ನೋಡಿದರೆ ವಿವಿಧ ರಾಜ್ಯಗಳ ಅಬಕಾರಿ ಸಚಿವರುಗಳು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ರೇಣುಕಾಚಾರ್ಯರು ಹಲ್ಲುಗಿರಿದು ‘‘ಕಾಸಿಯವ್ರೇ...ಒಂದು ಫೋಟೋ ತೆಗೆದು ಕರ್ನಾಟಕದ ಎಲ್ಲ ಪತ್ರಿಕೆಗಳಿಗೆ ಕಲ್ಸಿ ಬಿಡಿ...’’ ಎಂದರು.
ಅಷ್ಟರಲ್ಲಿ ಮಲ್ಯರವರ ನೇತೃತ್ವದಲ್ಲಿ ರಘುಪತಿ ರಾಘವ ರಾಜ ರಮ್ ಎಂದು ಹಾಡು ಆರಂಭವಾಯಿತು. ಬಳಿಕ ಮಲ್ಯ ಅವರು ಎದ್ದು ನಿಂತರು. ಅವರ ಹಿಂದು ಮುಂದು, ಎಡ, ಬಲಗಳಲ್ಲಿ ಅಬಲೆಯರು, ಕಿರುಪ್ರಾಯದ ಮಾತೆಯರು ನಿಂತಿದ್ದರು. ಗಾಂಧೀಜಿಯಂತೆಯೇ ಅವರ ಹೆಗಲನ್ನು ಆಧರಿಸಿ ನಿಂತ ಮಲ್ಯ ಮಾತನಾಡತೊಡಗಿದರು.
‘‘ಕುಡುಕರೆಲ್ಲರೂ ಮೂಲಭೂತವಾಗಿ ಗಾಂಧಿವಾದಿಗಳು. ಯಾಕೆಂದರೆ ಗಾಂಧೀಜಿಯವರು ತಾವು ಸಾಯುವಾಗ ಕೊನೆಯದಾಗಿ ‘ಹೇ ರಮ್’ ಎಂದರು. ಅದರರ್ಥ ಅವರು ಸಾಯುವಾಗ ನೀರು ಕೇಳಲಿಲ್ಲ, ಬದಲಿಗೆ ರಮ್ ಕೇಳಿದರು...ಆದರೆ ಕುಟಿಲ ರಾಜಕಾರಣಿಗಳು ರಮ್ ಶಬ್ದವನ್ನು ರಾಮ್ ಎಂದು ಅಪಭ್ರಂಶಗೊಳಿಸಿ ಕೋಟ್ಯಂತರ ಗಾಂಧಿವಾದಿ ಕುಡುಕರಿಗೆ ಅನ್ಯಾಯ ಮಾಡಿದ್ದಾರೆ....
ಇಷ್ಟೇ ಅಲ್ಲ, ಪ್ರತಿದಿನ ಸಂಜೆ ಅವರು ರಮ್‌ನ ಆರಾಧಕರಾಗಿದ್ದರು. ರಘುಪತಿ ರಾಘವ ರಾಜಾ ರಮ್ ಎಂದು ಹಾಡುತ್ತಿದ್ದರು. ಆದುದರಿಂದ ನಿಜವಾದ ಗಾಂಧಿವಾದಿಗಳು ನಾವು. ಅಣ್ಣಾ ಹಜಾರೆ ಕಪಟ ಗಾಂಧೀವಾದಿಗಳು...’’
ಎಲ್ಲ ಕುಡುಕರೂ ಜೋರಾಗಿ ಚಪ್ಪಾಳೆ ತಟ್ಟಿದರು. ರಾಮ್‌ಲೀಲಾ ಮೈದಾನದಲ್ಲಿ ‘‘ಹೇ ರಮ್’’ ಘೋಷ ಮುಗಿಲು ಮುಟ್ಟಿತು.
‘‘ನಾವಿಂದು ಸತ್ಯಾಗ್ರಹಕ್ಕೆ ಕುಳಿತಿರುವ ಈ ಮೈದಾನದ ಹೆಸರು ಕೂಡ ರಮ್‌ಲೀಲಾ ಎಂದಾಗಿದೆ. ರಮ್‌ಲೀಲೆಯ ಕುರಿತಂತೆ ನಮಗೆ ತಿಳಿದಿರುವಷ್ಟು ಇನ್ಯಾರಿಗೂ ತಿಳಿದಿಲ್ಲ...ಈ ದೇಶವನ್ನು ರಮ್‌ರಾಜ್ಯವನ್ನಾಗಿ ಮಾಡಲು ಗಾಂಧೀಜಿ ಕನಸು ಕಂಡಿದ್ದರು.
ಆದರೆ ಇಂದು ಅಣ್ಣಾ ಹಝಾರೆಯವರು ಕುಡುಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಬೇಕು ಎಂದು ಹೇಳುವ ಮೂಲಕ ಗಾಂಧೀಜಿಯ ರಮ್‌ರಾಜ್ಯಕ್ಕೆ ಕಲ್ಲು ಹಾಕಿದ್ದಾರೆ....ಆದುದರಿಂದ ಗಾಂಧೀ ವಿರೋಧಿ, ಉಗ್ರವಾದಿ ಅಣ್ಣಾ ಹಝಾರೆಯನ್ನು ಬಂಧಿಸಬೇಕು. ಕುಡುಕರಿಗೆ ರಕ್ಷಣೆ ನೀಡಬೇಕು. ಕುಡಿಯಲು ಸಬ್ಸಿಡಿಯಲ್ಲಿ ಸಾಲ ನೀಡಬೇಕು....ಅದಕ್ಕಾಗಿ ಇಂದಿನಿಂದ ನಾವು ಕೇವಲ ಮದ್ಯ ಕುಡಿದು, ಆಮರಣಾಂತ ಉಪವಾಸ ಮಾಡಬೇಕೆಂದು ತೀರ್ಮಾನಿಸಿದ್ದೇವೆ...ನಾಡಿನ ಎಲ್ಲ ಸಿನೆಮಾ ನಟರು ಇದಕ್ಕೆ ಬೆಂಬಲ ನೀಡಿದ್ದಾರೆ...’’
ಮತ್ತೆ ರಮ್‌ಲೀಲಾದಲ್ಲಿ ‘ಹೇ ರಮ್’ ಘೋಷಣೆ ಮುಗಿಲು ಮುಟ್ಟಿತು. ಎಂಜಲು ಕಾಸಿ ಆ ಘೋಷಣೆಗೆ ರೋಮಾಂಚನ ಗೊಂಡು ತೂರಾಡತೊಡಗಿದ. ಕಿಂಗ್ ಫಿಶರ್ ವಿಮಾನ ಹಾರಾಡದಿದ್ದರೂ, ತಮ್ಮ ಭಾಷಣದಲ್ಲಿ ಚೆನ್ನಾಗಿಯೇ ವಿಮಾನ ಹಾರಿಸುತ್ತಿದ್ದಾರೆ ಎಂದು ಖುಷಿ ಪಟ್ಟ.
ಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಜಿನ್ ಲೋಕಪಾನ ಸಮಿತಿಯೊಂದನ್ನು ರಚಿಸಲಾಯಿತು. ಮಲ್ಯ, ಸಲ್ಮಾನ್ ಖಾನ್, ರೇಣುಕಾಚಾರ್ಯ ಮೊದಲಾದ ಗುಂಡು ಪ್ರವೀಣರನ್ನೆಲ್ಲ ಸದಸ್ಯರನ್ನಾಗಿ ಸೇರಿಸಲಾಯಿತು. ತಕ್ಷಣ ಜನಲೋಕಪಾನ ಮಸೂದೆಯೊಂದನ್ನು ಜಾರಿಗೊಳಿಸಲು ಒತ್ತಾಯಪಡಿಸಲಾಯಿತು.
ಜನಲೋಕಪಾನ ಮಸೂದೆಯ ಮುಖ್ಯಾಂಶ ಕೆಳಗಿನಂತಿವೆ.
1. ಗಾಂಧಿ ವಿರೋಧಿ ಅಣ್ಣಾ ಹಜಾರೆ ಮತ್ತು ಅವರ ಬಳಗವನ್ನು ಬಂಧಿಸಬೇಕು.
2. ಅಣ್ಣಾ ಹಜಾರೆಯವರ ಆಡಳಿತದಲ್ಲಿ ನಡೆಯುತ್ತಿರುವ ರಾಳೇಗಾಂವ್ ಸಿದ್ದಿಯನ್ನು ಅವರ ನಿರಂಕುಶ ಆಡಳಿತದಿಂದ ಬಿಡುಗಡೆಗೊಳಿಸಿ, ಅಲ್ಲಿನ ಕುಡುಕರನ್ನು ರಕ್ಷಿಸಬೇಕು. ರಾಳೇಗಾಂವ್ ಭಾರತಕ್ಕೆ ಸೇರಿದ್ದು ಎಂದು ಘೋಷಿಸಿ, ಅಲ್ಲಿ ಪ್ರತಿ ವರ್ಷ ಗುಂಡು ಪಾರ್ಟಿಯ ಜೊತೆಗೆ ಸ್ವಾತಂತ್ರ ಆಚರಣೆ ಮಾಡಲು ಅವಕಾಶ ನೀಡಬೇಕು. ಗಾಂಧಿಯ ರಮ್ ರಾಜ್ಯ ಅಲ್ಲಿ ಸ್ಥಾಪನೆಯಾಗಬೇಕು.
3. ತಕ್ಷಣ ರಾಮ್ ಲೀಲಾ ಮೈದಾನವನ್ನು ರಮ್ ಲೀಲಾ ಮೈದಾನ ಎಂದು ಘೋಷಿಸಬೇಕು.
4. ಗಾಂಧಿ ಹೇಳಿದ್ದು ‘ಹೇ ರಮ್’ ಎಂದು ಇತಿಹಾಸವನ್ನು ತಿದ್ದುಪಡಿ ಮಾಡಬೇಕು.
5. ಕುಡುಕರಿಗೆ ಕುಡಿಯುವುದಕ್ಕೆ ಸಬ್ಸಿಡಿಯಲ್ಲಿ ಸಾಲ ನೀಡಬೇಕು. ವರ್ಷಕ್ಕೊಮ್ಮೆ ಕಿಂಗ್ ಫಿಶರ್ ವಿಮಾನದಲ್ಲಿ ಪುಕ್ಕಟೆ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿ, ಮಲ್ಯರವರ ಕುಡುಕೋದ್ಯಮವನ್ನು ಮೇಲೆತ್ತಬೇಕು.
6. ಕುಡುಕರಿಗೆ ಎಲ್ಲ ರೀತಿಯಲ್ಲೂ ರಕ್ಷಣೆ ನೀಡಬೇಕು. ಪೊಲೀಸ್ ದೌರ್ಜನ್ಯದಿಂದ ಅವರನ್ನು ಕಾಪಾಡಬೇಕು. 7. ಕುಡುಕರ ಮೇಲೆ ಈವರೆಗೆ ನಡೆದ ದೌರ್ಜನ್ಯವನ್ನು ತನಿಖೆ ನಡೆಸಿ, ಒಂದು ವರದಿಯನ್ನು ತಯಾರಿಸಬೇಕು. ಅನ್ಯಾಯಕ್ಕೊಳಗಾದ ಕುಡುಕರಿಗೆ ಪರಿಹಾರವನ್ನು ನೀಡಬೇಕು. 
8. ರೇಷನ್ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಅಕ್ಕಿ, ಬೇಳೆಯ ಜೊತೆಗೆ ವಿಸ್ಕಿ, ರಮ್ ಇತ್ಯಾದಿಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ವಿಶೇಷ ಕಾರ್ಡೊಂದನ್ನು ವ್ಯವಸ್ಥೆ ಮಾಡಬೇಕು.
9. ಕುಡುಕರ ಮೇಲೆ ದಾಳಿ ನಡೆಸಿದವರನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಆರೋಪಿಗಳಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು.
10. ಕುಡುಕರಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯ ಮೀಸಲಾತಿ ನೀಡಬೇಕು.
ರಾಮ್‌ಲೀಲಾ ಮೈದಾನದಲ್ಲಿ ಕುಡುಕರೆಲ್ಲ ಆಮರಣಾಂತ ಉಪವಾಸ ಕೂತದ್ದು ಗೊತ್ತಾದದ್ದೇ....ಪ್ರಧಾನಮಂತ್ರಿಗಳು ಓಡೋಡಿ ಬಂದರು. ತಕ್ಷಣ ಸಭೆ ಸೇರಿ ಜನ ಲೋಕಪಾನ ಮಸೂದೆಯನ್ನು ಜಾರಿಗೆ ತರಲು ಒಪ್ಪಲಾಯಿತು.
ಮಲ್ಯ ಸೇರಿದಂತೆ ಎಲ್ಲ ಗಾಂಧಿವಾದಿಗಳಿಗೆ ಪ್ರಧಾನಿಯವರೇ ಕೈಯಾರೆ ಬಿಯರ್ ಕುಡಿಸಿ, ಉಪವಾಸವನ್ನು ತೊರೆಯುವಂತೆ ಮಾಡಿದರು.
ನವೆಂಬರ್ -27-2011