Tuesday, May 19, 2015

ಹಲೋ.....ನಾನು ಯಾರು...ನೀನೇ ಹೇಳು ನೋಡೋಣ?

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಬರೆದ ಬುಡ ಬುಡಿಕೆ. ಸೆಪ್ಟೆಂಬರ್ 18, 2005 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

‘‘ಹಲೋ...’’
‘‘ಹ್ಯಾಂಗಿದ್ದೀಯ ದೇವು....’’
‘‘ಹಲೋ....ಯಾರು ಮಾತಾಡ್ತಾ ಇರೋದು?’’
‘‘ನೀನೇ ಹೇಳು ನೋಡೋಣ...ನಾನ್ಯಾರು?’’
‘‘ಹಿಂಗೆ ನಿದ್ದೆಯಿಂದ ನನ್ನನ್ನು ಎಬ್ಬಿಸಿ ತೊಂದರೆ ಕೊಡೋದು ನೋಡಿದ್ರೆ ನೀನು ಆ ಕುರುಬ ಸಿದ್ಧರಾಮಯ್ಯನೇ ಇರ್ಬೇಕು...’’
‘‘ಛೇಛೇ...ಸಿದ್ಧರಾಮಯ್ಯ ಫೋನ್ ಮಾಡೋದಾಗಿದ್ರೆ ಅಹಿಂದ ಯಾಕೆ ಹುಟ್ತಾ ಇತ್ತು? ಅವರು ಫೋನ್ ಮಾಡ್ತ ಇಲ್ಲ ಅಂತಾ ತಾನೆ ಅವರನ್ನು ನೀವು ಹೊರಗೆ ಹಾಕಿದ್ರಿ. ಸರಿಯಾಗಿ ಯೋಚ್ನೆ ಮಾಡು...ನೀನೇ ಹೇಳು...ನೀನು ನನ್ನನ್ನು ನೋಡಿದೀಯ. ಪ್ರೀತಿಯಿಂದ ಮಾತಾನಾಡಿದ್ದೀಯ...’’
‘‘ಪ್ರೀತಿಯಿಂದ ಮಾತನಾಡಿದ್ದೀನಾ. ಹಂಗಾದ್ರೆ ನೀನು ನನ್ನ ಮಗ ಕುಮಾರ ಸ್ವಾಮೀನೇ ಆಗಿರ್ಬೇಕು?’’
‘‘ಯಾವಾಗ ನೋಡಿದ್ರೂ ಮಕ್ಕಳ ಜಪ ಮಾಡ್ಕಂತೀಯಲ್ಲ. ಜಗತ್ತಿನಲ್ಲಿ ಯಾರಿಗೂ ಹುಟ್ಟದ ಮಕ್ಳು ನಿಂಗೆ ಹುಟ್ಟಿದ್ಯಾ... ಕೆಲವು ಕ್ಲೂ ಕೊಡ್ತೀನಿ ಓಕೇನಾ...?’’
‘‘ಕ್ಲೂ ಕೊಡ್ತೀಯ, ಹಂಗಾದ್ರೆ ನೀನು ಕರೋಡ್ಪತಿ ಅಮಿತಾಬಚ್ಚನ್ನೇ ಇರ್ಬೇಕು...ಕರೆಕ್ಟ್ ತಾನೆ...’’
‘‘ನಿಂಗೆ ಜನರಲ್ ನಾಲೆಜ್ಜು ಇಲ್ಲ ಅನ್ನೋದು ಲೋಕಕ್ಕೇ ಗೊತ್ತು. ಇನ್ನು ಅಮಿತಾಬ್‌ಗೆ ಗೊತ್ತಿರಾಕಿಲ್ವ?ಅವನ್ಯಾಕೆ ಫೋನ್ ಮಾಡ್ತಾನೆ ಬಿಡು’’
‘‘ಸರಿ ಬಿಡು ಹಂಗಾದ್ರೆ ಕ್ಲೂ ಕೊಡು...’’
‘‘ಚುನಾವಣೆ ಹೊತ್ತಲ್ಲಿ ನಾನು ನಿಂಗೆ ಬೇಕೇ ಬೇಕು...’’
‘‘ಹಂಗಾದ್ರೆ ಹಾಸನದ ಯಾವುದೋ ಗಲ್ಲಿಯ ಪುಂಡ ಪಟಾಲಾಂನ ಜನ ಇರ್ಬೇಕು. ಈಗ ಯಾಕೆ ಫೋನ್ ಮಾಡ್ತಿದ್ದೀಯಾ? ಚುನಾವಣೆ ಎನೌನ್ಸ್ ಆಗಿಲ್ವಲ್ಲ. ಹಂಗೇನಾದ್ರು ಎನೌನ್ಸ್ ಆದ್ರೆ ನಾನೇ ಹೇಳಿ ಕಳುಹಿಸ್ತೀನಿ, ಫೋನ್ ಮಡಗು...’’
‘‘ತಥ್ ನಿನ್ನ...ಮಾತೆತ್ತಿದ್ರೆ ನಿನ್ನ ರಾಜಕೀಯ ವರಸೆ ತೋರುಸ್ತೀಯಲ್ಲ... ಅವ್ನಲ್ರೀ ನಾನು...’’
‘‘ಅಲ್ವಾ? ಹಂಗಾರೆ... ಬೇರೇನಾದ್ರೂ ಕ್ಲೂ ಕೊಡು....’’
‘‘ನಾನಿಲ್ಲ ಅಂದ್ರೆ ನೀನಿಲ್ಲ...ಈಗ ಹೇಳು ನೋಡೋಣ ನಾನ್ಯಾರೂ...’’
‘‘ಈಗ ಗೊತ್ತಾಯ್ತು ಬಿಡಿ....ಮೊದಲೇ ಹೇಳೋಕಾಗಲ್ವೇನ್ರಿ....ನೀವು ಬೆಳ್ತಂಗಡಿಯಲ್ಲಿ ಕಳೆದ ಬಾರಿ ಚಂಡಿಕಾ ಹೋಮ ಮಾಡಿದ್ರಲ್ಲಾ...ಆ ಕಡೆ ಭಟ್ರಲ್ವಾ’’
‘‘ಅಲ್ಲರೀ....’’
‘‘ಹಂಗಾದ್ರೆ...ಕಳೆದ ತಿಂಗಳು ಕೊಲ್ಲೂರಿನಲ್ಲಿ ನನಗೆ ಒಂದು ತಾಯತ ಕೊಟ್ರಲ್ಲಾ ಆ ಜೋಯಿಸರಲ್ವಾ...’’
‘‘ಛೆ...ಛೆ..ಛೆ.. ಅಲ್ಲಾರೀ...’’
‘‘ಹಂಗಾದ್ರೆ ಸಾವಿರ ಕಂಟಕಗಳಿವೆ ಅಂತ ಕಳೆದವಾರ ನನ್ನ ಮನೇಲಿ ಹೋಮ ಮಾಡಿದ್ರಲ್ಲಾ... ಆ ಭಟ್ರಲ್ವಾ...’’
‘‘ಊ...ಹುಂ..ಅಲ್ವೇ ಅಲ್ಲಾ...’’
‘‘ಹಂಗಾದ್ರೆ ಕಳೆದ ಬಾರಿ ಸಿದ್ದರಾಮಯ್ಯರಿಗೆ ಮಾಟ ಮಾಡಿ ನನ್ನಿಂದ 1,201 ರೂಪಾಯಿ ಇಸ್ಕೊಂಡ್ರಲ್ಲಾ...ಆ ಮಂತ್ರವಾದಿಯಿರ್ಬೇಕು...’’
‘‘ತಥ್...
‘‘ಅದೂ ಅಲ್ಲಾಂತದ್ರೆ...ಹಾಂ ಗೊತ್ತಾಯ್ತು ಬಿಡಿ, ಮೂರು ದಿನದ ಹಿಂದೆ, ಸಿದ್ಧರಾಮಯ್ಯ, ಜಾಲಪ್ಪ ಸೇರಿ ನನ್ಗೂ ನನ್ನ ಮಕ್ಕಳಿಗೂ ಮಾಟ ಮಾಡಿದ್ದಾರೆ...ತೆಗೀತೀನಿ ಅಂತ ಬಂದ್ರಲ್ಲ ಅವ್ರೇ ತಾನೇ...’’
‘‘ನೀ ಇದೇ ತರ ಮಾತಾಡ್ತಾ ಇದ್ರೆ...ಫೋನ್‌ನಲ್ಲೇ ನಿನ್ಗೆ ಚಚ್ಚಿ ಬಿಡ್ತೀನಿ...’’
‘‘ಅಲ್ರೀ...ನೀವಿಲ್ಲದೇ ಇದ್ರೆ ನಾನಿಲ್ಲ ಅಂತ ಹೇಳ್ತೀರಿ...ಮತ್ತೆ ಜೋಯಿಸರ, ಭಟ್ಟರಾ, ಮಂತ್ರವಾದಿಗಳಾ, ಗಿಣಿಶಾಸ್ತ್ರದೋನಾ ಅಂತ ಕೇಳಿದ್ರೆ ಅಲ್ಲಾಂತ ಹೇಳ್ತೀರಿ... ಇದೇನ್ರಿ ಅನ್ಯಾಯಾ....ಒಳ್ಳೆ...ಆ ಅಹಿಂದದೋರು ಕಾಡಿದ ಹಾಗೆ ಕಾಡ್ತಿದ್ದೀರಲ್ರೀ...’’
‘‘ಇನ್ನೊಂದು ಕ್ಲೂ ಕೊಡ್ತೀನಿ. ನನ್ನ ಅಶೀರ್ವಾದದಿಂದ್ಲೆ ನಿನ್ನ ಸರಕಾರ ನಡೀತಾ ಇದೆ...’’
‘‘ಛೆ...ನಿಮ್ ವಾಯ್ಸು ಸೋನಿಯಾ ಮೇಡಂ ಥರ ಇಲ್ವಲ್ರೀ... ನಿಮ್ದು ಒಳ್ಳೆ... ರಾಜಕುಮಾರ್ ಫಿಲ್ಮಲ್ಲಿ ವಜ್ರಮುನಿ ವಾಯ್ಸು ಕೇಳ್ದಂಗೆ ಕೇಳತ್ತೆ...ಏನ್ ಮೇಡಂ...ವಾಯ್ಸು ಬದಲಾಗಿ ಬಿಟ್ಟಿದೆ... ದಿಲ್ಲೀಲಿ ಹವಾಮಾನ ಚೆನ್ನಾಗಿಲ್ವ... ನನ್ನ ಹಾಗೆ ನಿಮ್ಗೂ ಭಿನ್ನಮತೀಯ ವೈರಸ್ ಕಾಟಾನಾ...’’
‘‘ನಾನು ಸೋನಿಯಾ ಮೇಡಂ ಅಲ್ಲಾರೀ....’’
‘‘ನಿಮ್ ಆಶೀರ್ವಾದದಿಂದ್ಲೇ ಸರಕಾರ ನಡೀತಾ ಇದೆ ಅಂತ ಹೇಳ್ತೀರಿ...ಮತ್ತೆ ಸೋನಿಯಾ ಗಾಂಧಿ ಅಲ್ಲಾಂತ ಹೇಳ್ತೀರಲ್ಲಾ...?’’
‘‘ನನ್ನ ಮನೆಗೆ ಬಂದಿದ್ದೀರಿ. ಹೆಂಗಿದ್ದೀಯ ಅಂತ ನನ್ನ ತಲೆ ಸವರಿದ್ರಿ. ನೆನಪು ಮಾಡ್ಕೊಳ್ಳಿ...ನನ್ನ ಸಣ್ಣ ಮಗನ ಕೆನ್ನೆ ಹಿಂಡಿ ನೂರು ರೂಪಾಯಿ ನೋಟು ಕೊಟ್ರಿ....’’
‘‘ಹಂಗಾದ್ರೆ ನೀನು ರೇವಣ್ಣನ ಬೀಗರ ಕಡೆಯೋನು ಇರ್ಬೇಕು. ಹೆಂಗಿದ್ದೀಯಪ್ಪ... ಮನೇಲೆಲ್ವಾ ಸೌಕ್ಯವೆ? ಮಳೆ ಬೆಳೇಲ್ಲಾ ಹೆಂಗದೆ?’’
‘‘ನಿಮ್ಮ ರೇವಣ್ಣನ ಬೀಗ ನೆಗೆದು ಬಿದ್‌ಹೋದ. ಅಲ್ರೀ...ಇಷ್ಟು ಕ್ಲೂ ಕೊಟ್ರು ನಿಂಗೆ ಗೊತ್ತಾಗ್ಲಿಲ್ಲ ಅಂದ್ರೇನೂ....ನಾನು ಇದ್ದಾದ್ರೂ ಏನು ಪ್ರಯೋಜನ... ಅಯ್ಯೋ...’’
‘‘ರೀ...ಇನ್ನೂ ಒಂದಿಷ್ಟು ಚಾನ್ಸು ಕೊಡ್ರಿ....’’
‘‘ಹಾಂ...ಅದೇ...ನಾನು ಅದೆಷ್ಟು ಚಾನ್ಸು ಕೊಟ್ಟಿದ್ದೀನಿ ಗೊತ್ತ ನಿಮ್ಗೆ...ನಿಮ್ ಪಕ್ಸ ಒಡ್ದು ನುಚ್ಚು ನೂರು ಆದ್ರೂನು ಮತ್ತೆ ಮತ್ತೆ ಚಾನ್ಸು ಕೊಟ್ಟೆ....ನಾನು ಚಾನ್ಸು ಕೊಟ್ಟಿದ್ರಿಂದಾನೇ ಕಳೆದ ಬಾರಿ ಮತ್ತೆ ಗೆದ್ದು ಬಂದ್ರಿ.... ಹೋಗ್ಲಿ.... ದೇಹಲಕ್ಷಣ ಹೇಳ್ತೀನಿ ಕೇಳು...ನೋಡಿ...ನಾನು ಕರ್ರಗಿದ್ದೇನೆ..’’
‘‘ಹಂಗಾದ್ರೆ ನೀವು ಖರ್ಗೇನೆ..’’
‘‘ಬಡಕಲಾಗಿದ್ದೇನ್ರಿ....’’
‘‘ಅರೆ...ಹಂಗಾದ್ರೆ ನೀವು ಎಂ.ಪಿ ಪ್ರಕಾಸು...ನೀವ್ಯಾಕ್ರಿ ಇಷ್ಟೊತ್ನಾಗೆ ಫೋನು ಮಾಡ್ತಿದ್ದೀರಿ....’’
‘‘ಅಲ್ರೀ....ನೀರು ನೀರು ಅಂತ ಸಾಯ್ತ ಇದ್ದೇನ್ರಿ....’’
‘‘ಹಂಗಾದ್ರೆ...ನೀನು ತಮಿಳುನಾಡು ಜಯಲಲಿತಾ ಇರ್ಬೇಕು...ಜೀವ ಹೋದ್ರು ನಿಂಗೆ ಕಾವೇರಿ ನೀರು ಕೊಡಾಕಿಲ್ಲ...’’
‘‘ತಥ್ ನಿನ್ನ...ಇನ್ನೂ ನಿಂಗೆ ಗೊತ್ತಾಗಿಲ್ವಾ...ನೋಡಯ್ಯ ಸಾಲ ಗೀಲಾಂತ ಬಡ್ಡಿ ಕಟ್ಟದೆ ಒದ್ದಾಡ್ತಿದ್ದೀನಿ...’’
‘‘ಬಡ್ಡಿ ಕಟ್ಟೋಕಾಗ್ದೆ ದೇಶ ವಿಶ್ವ ಬ್ಯಾಂಕ್ ಹೇಳಿದಲ್ಲೆಲ್ಲಾ ಸಹಿ ಹಾಕ್ತಾ ಇದೇ. ಹಂಗಾದ್ರೆ ನೀನು ಭಾರತಮಾತೇನೇ ಇರ್ಬೇಕು...ಯಕಮ್ಮ ಈ ಅಪರಾತ್ರೀಲಿ ಫೋನ್ ಮಾಡಿ ಗಂಡಸಿನ ವಾಯ್ಸಲ್ಲಿ ಮಾತಾಡ್ತ ಇದ್ದೀಯ....’’
‘‘ನನ್ ಕರ್ಮ...ಭಾರತಮಾತೆಯ ನಾಲಗೆ ಕತ್ತರಿಸಿ, ಕೈ ಕಾಲು ಕಟ್ಟಿ ವಿದೇಶಿಯರಿಗೆ ಮಾರಿದ ಮೇಲೆ, ಅವಳೆಲ್ಲಿಂದ ಫೋನ್ ಮಾಡ್ಬೇಕು?ಇನ್ನೂ ಗೊತ್ತಾಗಿಲ್ವಾ...’’
‘‘ಇಲ್ಲಾರಿ...’’
‘‘ಗೊತ್ತಾಗ್ಲೇ ಇಲ್ವಾ...’’
‘‘ಊ...ಹುಂ....
‘‘ಮಗ್ನೆ...ಮುಂದಿನ ಚುನಾವಣೆಯ ಹೊತ್ತಿನಲ್ಲಿ ನಮ್ಮೂರಿಗೆ ಬರ್ತೀಯಲ್ಲ, ಆಗ ಗೊತ್ತಾಗತ್ತೆ ನಾನ್ಯಾರೂಂತ...’’
ಫೋನನ್ನು ದಡಾಲ್ಲನೆ ಕುಕ್ಕಿದ ಸದ್ದು. ಯಾರು ಪೋನು ಮಾಡಿರಬಹುದು ಎಂದು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ರು ಗೌಡ್ರು. 
ಸೆಪ್ಟೆಂಬರ್ 18, 2005

Friday, May 15, 2015

ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆ.ಜಿ. ತ್ರಿಶೂಲ...!

2008 ರಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾದಾಗ ಬರೆದ ಬುಡಬುಡಿಕೆ. ಎಪ್ರಿಲ್ 20, 2008 ರವಿವಾರದ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವಿವಿಧ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಇದೀಗ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಸಮಯ. ಇಲ್ಲಿ ಕೆಲವು ‘ಪರದೇಶಿಕ ಪಕ್ಷ’ಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಇಲ್ಲಿದೆ.

ಕರ್ನಾಟಕ ಸಾರಾಯಿ ಪಕ್ಷ
ಉಳಿದ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇದ್ದುದರಿಂದ, ಚುನಾವಣೆಯಲ್ಲಿ ಅಖಿಲ ಕರ್ನಾಟಕ ಸಾರಾಯಿ ಪಕ್ಷವೆಂಬ ಪ್ರಾದೇಶಿಕ ಪಕ್ಷವನ್ನು ರಚಿಸಲಾಗಿದೆ. ಈ ನಾಡಿನ ಶೋಷಿತ ವರ್ಗವಾದ ಕುಡುಕರಿಂದಲೇ ರಚನೆಗೊಂಡಿರುವ ಈ ಪಕ್ಷಕ್ಕೆ ಮಲ್ಯ, ಬಂಗಾರಪ್ಪ, ಹೆ.ಛೆ.ಶೆಟ್ಟಿ ಮೊದಲಾದವರು ದುಡ್ಡು ಹಾಕಿದ್ದಾರೆ ಎನ್ನುವುದು ಬರೇ ಗಾಳಿ ಸುದ್ದಿ ಎನ್ನಲಾಗಿದೆ. ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ.
1.ಅಧಿಕಾರ ಹಿಡಿದಾಕ್ಷಣ ಸಾರಾಯಿ ನಿಷೇಧ ಹಿಂದಕ್ಕೆ.
2. ಎಲ್ಲ ರೇಷನ್ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಸಾರಾಯಿ ವಿತರಣೆ. ಸೇಂದಿಯನ್ನು ಉಚಿತವಾಗಿ ರೇಷನ್ ಅಂಗಡಿಗಳಲ್ಲಿ ವಿತರಿಸಲು ಯೋಜನೆ. ಈ ಯೋಜನೆಗೆ ‘ತಾಳೆಯ ಭಾಗ್ಯ’ ಎಂದು ಹೆಸರಿಡಲಾಗುವುದು.
3.ಈಗಾಗಲೇ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆ ಇದೆ. ಸಂಜೆ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಾರಾಯಿ ತೊಟ್ಟೆಯನ್ನು ನೀಡುವ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಒತ್ತಡ ರಹಿತ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲಾಗುತ್ತದೆ.
4.ವತ್ತಿಪರ ಶಿಕ್ಷಣಕ್ಕೆ ಆದ್ಯತೆ. ಶಾಲೆಗಳಲ್ಲಿ ಸಾರಾಯಿ ತಯಾರಿಕೆ, ಸಾರಾಯಿ ಭಟ್ಟಿ ಇಳಿಸುವುದು ಮೊದಲಾದ ವಿಷಯಗಳ ಕುರಿತಂತೆ ತರಬೇತಿ, ಸಾರಾಯಿ ತರಬೇತಿಗಾಗಿ ರಾಜ್ಯದ ವಿವಿಧೆಡೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ.
5.ಮನೆ ಮನೆಗಳಲ್ಲಿ ಸಾರಾಯಿ ತಯಾರಿಕಾ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಗಳ ನಿವಾರಣೆ.
6.ಜಿ.ಪಿ.ರಾಜರತ್ನಂ ಅವರ ‘ಹೆಂಡ, ಹೆಡ್ತಿ...’ ಪದ್ಯವನ್ನು ನಾಡಗೀತೆಯನ್ನಾಗಿ ಮಾಡಲಾಗುವುದು.

7. ಧರ್ಮದ ಅಮಲು, ಜಾತಿಯ ಅಮಲು ಇತ್ಯಾದಿಗಳನ್ನು ಅಳಿಸಿ ಹಾಕಿ, ಅಮಲನ್ನು ಜಾತ್ಯತೀತಗೊಳಿಸಲಾಗುತ್ತದೆ. ಮದ್ಯತೀತ ನಾಡನ್ನು ಕಟ್ಟಿ, ಎಲ್ಲ ಜಾತಿ, ಧರ್ಮಗಳನ್ನು ಒಂದೇ ಅಮಲಿನಡಿಯಲ್ಲಿ ತರಲಾಗುತ್ತದೆ. ಸಾರಾಯಿ ಪಕ್ಷದಲ್ಲಿ ಟಿಕೆಟ್ ನೀಡಲು ಅರ್ಹತೆಯೇ ಮಾನದಂಡವಾಗಿರುತ್ತದೆ. ಹೆಚ್ಚು ಹೆಚ್ಚು ಸಾರಾಯಿ ಕುಡಿದು ದಾಖಲೆ ಸ್ಥಾಪಿಸಿದವರಿಗೆ ಮೊದಲ ಆದ್ಯತೆ. ಪಕ್ಷದ ಟಿಕೆಟ್‌ಗೆ ಅರ್ಜಿ ಹಾಕುವಾಗ, ತಮ್ಮ ಸುಟ್ಟು ಹೋಗಿರುವ ಕರುಳು, ಗಂಟಲು ಇತ್ಯಾದಿಗಳನ್ನು ಅರ್ಜಿಯ ಜೊತೆಗೆ ಲಗ್ಗತ್ತಿಸಬಹುದು.
****
ಹರಹರಾ ಮಂಕೇಶ್ವರ ಪಕ್ಷ
ತಮ್ಮ ಎನ್ನಡ ಪಕ್ಷದಿಂದ ಓಟಿಗೆ ನಿಂತು ಠೇವಣಿ ಕಳೆದುಕೊಂಡ ಬಳಿಕ ಮಂಕೇಶ್ವರರು ಸ್ಥಾಪಿಸಿದ ನೂತನ ಪಕ್ಷ ಇದು. ಅದರ ಪ್ರಣಾಳಿಕೆ ಕೆಳಗಿನಂತಿದೆ.
1.ಹೊಸ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನು ಮಾರುಕಟ್ಟೆಗೆ ತಂದು, ಪತ್ರಿಕೆಯ ಜೊತೆಗೆ ಓದುಗರಿಗೆ ಒಂದು ರೂಪಾಯಿಯನ್ನು ಕೊಡುವುದು.
2.ಪತ್ರಿಕೆಯನ್ನು ಓದುವುದಕ್ಕಲ್ಲದೆ ಇನ್ನಿತರ ಕೆಲಸಗಳಿಗೂ ಬಳಸಲು ಅನುಕೂಲಾವಾಗುವಂತೆ ರೂಪಿಸಿ, ನಂಬರ್ 1 ಎಂದೆನಿಸಿಕೊಳ್ಳುವುದು. ಮುಖ್ಯವಾಗಿ ನಂ.2 ಮೊದಲಾದ ಬೆಳಗ್ಗಿನ ಕೆಲಸಗಳ ಸಂದರ್ಭದಲ್ಲಿ ಬಳಸಲು ಪತ್ರಿಕೆ ಉಪಯೋಗವಾದರೆ, ಸರ್ಕ್ಯುಲೇಶನ್ ಇನ್ನಷ್ಟು ಹೆಚ್ಚುತ್ತದೆ. ಊಟದ ಬಳಿಕ ಕೈ ಶುಚಿಗೊಳಿಸಲು ಬೆವರೊರೆಸಿಕೊಳ್ಳಲು ಪತ್ರಿಕೆಗಳನ್ನು ಪರಿಣಾಮಕಾರಿಯಾಗಿ ಹೊರತರುವುದು. ಈ ಮೂಲಕ ಕರ್ನಾಟಕದಲ್ಲಿ ಪತ್ರಿಕಾ ಕ್ರಾಂತಿಯನ್ನು ಮಾಡುವುದು.
3.ಮಧ್ಯಾಹ್ನ, ರಾತ್ರಿಯ ಊಟಕ್ಕೆ ಪತ್ರಿಕೆಗಳನ್ನೇ ಬೇಯಿಸಿ ತಿನ್ನುವುದು. ಅದಕ್ಕಾಗಿ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನೇ ಒಂದು ರೂಪಾಯಿಗೆ ಒಂದು ಕೆಜಿಯಂತೆ ನೀಡಲು ಯೋಜನೆ. ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಪತ್ರಿಕೆಗಳನ್ನೇ ಪರ್ಯಾಯವಾಗಿ ಬಳಸಲು ಯೋಜನೆ. ಉರುವಲಾಗಿ ಪತ್ರಿಕೆಗಳನ್ನು ಸಬ್ಸಿಡಿಯಲ್ಲಿ ವಿತರಣೆ.

4. ನಾಡಿನಲ್ಲಿ ‘ಭಯೋತ್ಪಾದನೆ’ಗಾಗಿ ಪತ್ರಿಕೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ. ಹೆಚ್ಚು ಉತ್ಪಾದನೆ ಮಾಡಿ ನಾಡಿನ ಉದ್ದಗಲಕ್ಕೆ ರಫ್ತು ಮಾಡಲು ಅವಕಾಶ. ಇದಕ್ಕಾಗಿ ತನ್ನ ‘ಮಂಕೇಶ್ವರ’ ಪತ್ರಿಕೆಯಿಂದ ವಿಶೇಷ ಕಾರ್ಖಾನೆ. ಭಯ ಉತ್ಪಾದನೆಯ ಕುರಿತಂತೆ ಅರ್ಹ ‘ಜನಿವಾರ’ ಪತ್ರಕರ್ತರಿಗೆ ಸ್ವ ಉದ್ಯೋಗ ತರಬೇತಿ, ಬಳಿಕ ಅವರಿಗೆ ಮಂಕೇಶ್ವರ ಪತ್ರಿಕೆಯಲ್ಲೇ ಕೆಲಸ. ಪಕ್ಷದಲ್ಲಿ ಟಿಕೆಟ್ ಸಿಗಬೇಕಾದರೆ ಅನುಭವ, ಹಿರಿತನ ಮುಖ್ಯವಾಗುತ್ತದೆ. ಮಂಕೇಶ್ವರ ಪತ್ರಿಕೆಯಲ್ಲಿ ಸರ್ಕ್ಯುಲೇಶನ್, ಜಾಹೀರಾತು ವಿಭಾಗದಲ್ಲಿ ಅಧಿಕ ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ಟಿಕೇಟು ನೀಡಲಾಗುತ್ತದೆ. ಚುನಾವಣೆಯಲ್ಲಿ ಸೋತರೂ, ಮಂಕೇಶ್ವರ ಬಸ್‌ಗಳಲ್ಲಿ ಓಡಾಡುವಾಗ ಸೋತ ಅಭ್ಯರ್ಥಿಗಳು ಟಿಕೆಟ್ ತೆಗೆಯ ಬೇಕೆಂದಿಲ್ಲ. ಚುನಾವಣೆಗೆ ನಿಲ್ಲುವುದಕ್ಕೆ ಠೇವಣಿ ಕಟ್ಟಲು ಪಕ್ಷ ಶೇ.5ರ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಠೇವಣಿ ಕಳೆದುಕೊಂಡರೆ ಪಕ್ಷಾಧ್ಯಕ್ಷರು ಜವಾಬ್ದಾರರಲ್ಲ.
***
ಬೇತಾಳ್ ಪಕ್ಷ
 ಖನ್ನಡದ ಉಟ್ಟು ಓರಾಟಗಾರ ಬೇತಾಳ್ ನಾಗರಾಜ್ ಸ್ಥಾಪಿಸಿರುವ ಈ ಪಕ್ಷದ ಪ್ರಣಾಳಿಕೆ ಕೆಳಗಿನಂತಿದೆ.
1.ಸರಕಾರ ಅಸ್ತಿತ್ವಕ್ಕೆ ಬಂದರೆ ಬೆಂಗಳೂರು ನಗರಗಳಲ್ಲಿ ವಾಹನಗಳಿಗೆ ನಿಷೇಧ. ಎಮ್ಮೆ, ಕೋಣಗಳ ಮೂಲಕವೇ ಸಾರಿಗೆ ವ್ಯವಸ್ಥೆ.
2.ವಿವಿಧ ನಾಯಕರ ಪ್ರತಿಕತಿಗಳು ಸಬ್ಸಿಡಿಯಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ. ಪ್ರತಿಕತಿಗಳನ್ನು ಸುಟ್ಟು ಹಾಕಲು ಬೇಕಾದ ಸೀಮೆ ಎಣ್ಣೆಯನ್ನು ಓರಾಟಗಾರಿಗೆ ಪಡಿತರ ಕಾರ್ಡ್‌ಗಳ ಮೂಲಕ ಒದಗಿಸುವ ವ್ಯವಸ್ಥೆ.
3.ಪ್ರತಿದಿನ ಎರಡು ಗಂಟೆಗಳ ಕಾಲ ಎಲ್ಲ ಪ್ರತಿಭಟನೆಗಳಿಗೂ ರಸ್ತೆಗಳು ಮುಕ್ತ.
4.ಪ್ರತಿಭಟನೆಗಳ ಗುತ್ತಿಗೆಯನ್ನು ವಿದೇಶಿ ಕಂಪೆನಿಗಳಿಗೆ ಹರಾಜು ಮೂಲಕ ರಾಜ್ಯ ಬೊಕ್ಕಸಕ್ಕೆ ಹಣ.
5. ಪ್ರತಿ ಜಿಲ್ಲೆಯಲ್ಲಿ ಯುವಕ-ಯುವತಿಯರಿಗೆ ಪ್ರತಿಕತಿಗಳ ತಯಾರಿಕೆ ತರಬೇತಿ. ಈ ಮೂಲಕ ಗುಡಿ ಕೈಗಾರಿಕೆಗಳ ಅಭಿವದ್ಧಿ.
***
ಹೊಡಿ-ಬಡಿ-ಕೊಲ್ಲು ಪಕ್ಷ
ಇತ್ತೀಚೆಗೆ ಸಮಾನ ಮನಸ್ಕರು ಒಂದಾಗಿ ‘ಹೊಡಿಬಡಿಕೊಲ್ಲು ಪಕ್ಷ’ವನ್ನು ಕಟ್ಟಿದ್ದಾರೆ. ಬೇರೆ ಗುಂಪುಗಳಾಗಿ ‘ಹೊ-ಬ-ಕೊ’ ಮಾಡಿದಾಗ ಜನರು ತಿರುಗಿ ತದಕಲು ಶುರು ಮಾಡಿದುದರಿಂದ ಎಲ್ಲ ಹೊಡಿ ಬಡಿ ಕೊಲ್ಲು ಮನಸ್ಕರು ಒಂದಾಗಿ ಈ ಪಕ್ಷವನ್ನು ಕಟ್ಟಿದ್ದಾರೆ. ಅವರ ಪ್ರಣಾಳಿಕೆ ಕೆಳಗಿನಂತಿದೆ.
1. ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆಜಿ ತ್ರಿಶೂಲ, ಕತ್ತಿ, ಚಾಕು ಇತ್ಯಾದಿ ವಿತರಣೆ. ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲು ಗರಿಷ್ಠ ಸೀಮೆ ಎಣ್ಣೆ ನೀಡುವ ವ್ಯವಸ್ಥೆ. ‘ಕೇಸರಿ ಕಾರ್ಡ್’ನವರಿಗೆ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ನೀಡಲಾಗುತ್ತದೆ.
2.ಕನ್ನಡದ ಹೆಸರಿನಲ್ಲಿ ಅತ್ಯಧಿಕ ಅಂಗಡಿಗಳನ್ನು ಲೂಟಿ ಮಾಡಿದಾತನಿಗೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ, ಕರ್ನಾಟಕ ರತ್ನ ಮೊದಲಾದ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.
3. ಕಾರಾಗಹಗಳಲ್ಲಿ ಆಮೂಲಾಗ್ರ ಬದಲಾವಣೆ. ಎಲ್ಲ ಜೈಲು ಕೋಣೆಗಳನ್ನು ಹವಾನಿಂಯತ್ರಿತಗೊಳಿಸಲಾಗುವುದು. ಕೈದಿಗಳಿಗೆ ಉಚಿತ ಮೊಬೈಲ್‌ಗಳ ವ್ಯವಸ್ಥೆ. ಇದಕ್ಕೆ ಬೇಕಾದ ಸಿಮ್ ಕಾರ್ಡ್‌ಗಲಿಗಾಗಿ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಹಣ ಮೀಸಲು.
4.ಕೋಮುಗಲಭೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ, ಕಟ್ಟಡ ಕೆಡವುದು ಹೇಗೆ ಎನ್ನುವುದರ ಕುರಿತಂತೆ ಯುವಕರಿಗೆ ಗೋಡ್ಸೆ ರೋಜ್‌ಗಾರ್ ಯೋಜನೆಯಡಿಯಲ್ಲಿ ತರಬೇತಿ.
5. ಅತ್ಯಂತ ಹೆಚ್ಚು ಕೊಲೆಗಳನ್ನು ಮಾಡಿದಾತನಿಗೆ ಕುಂಬ್ಲೆ ಸುಂದರರಾವ್ ಹೆಸರಿನಲ್ಲಿ ಶ್ರೇಷ್ಠ ಕೊಲಾವಿದ ಪ್ರಶಸ್ತಿ.
         (ಎಪ್ರಿಲ್ 20, 2008 ರವಿವಾರ)

Wednesday, May 13, 2015

‘ಅಯ್ಯೋ... ಇವನೂ ಬಂದಿದ್ದಾನಲ್ಲಪ್ಪ...!’

ಮಂಗಳಗ್ರಹದಲ್ಲಿ ಮಹಿಳೆಯನ್ನು ಹೋಲುವ ಚಿತ್ರವೊಂದನ್ನು ಉಪಗ್ರಹವೊಂದು  ತೆಗೆದಾಗ, "ಮಂಗಳ ಗ್ರಹದಲ್ಲಿ ಮಹಿಳೆ'' ಎಂದು ಮಾಧ್ಯಮಗಳಲ್ಲಿ ಬಾರೀ ಚರ್ಚೆಯಾಯಿತು. ಫೆಬ್ರವರಿ 17, 2008ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ. 

ಮಂಗಳ ಗ್ರಹದಲ್ಲಿ ‘ಮಹಿಳೆ’ಯೊಬ್ಬಳಿದ್ದಾಳೆನ್ನುವ ಸಂಗತಿ ಭೂಮಿಯ ಜನರಿಗೆ ಸಾಕಷ್ಟು ಅಹ್ಲಾದವನ್ನು ನೀಡಿದ್ದು, ಮಂಗಳ ಗ್ರಹದ ಕುರಿತಂತೆ ಆಸಕ್ತಿಯನ್ನು ತೀವ್ರವಾಗುವಂತೆ ಮಾಡಿತು. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಈ ಸುದ್ದಿ ಕೇಳಿದ್ದೇ, ತಕ್ಷಣ ಖಗೋಳ ವಿಜ್ಞಾನಿಗಳಿಗೆ ಫೋನಾಯಿಸಿ, ‘‘ಆಕೆಯ ವಯಸ್ಸೆಷ್ಟಿರಬಹುದು? ಮದುವೆಯಾಗಿದೆಯೇ? ಆಕೆಯ ಮೊಬೈಲ್ ನಂಬರ್ ಸಿಕ್ಕುವ ಚಾನ್ಸ್ ಇದೆಯೇ? ತಕ್ಷಣ ನನಗೆ ಮಂಗಳ ಗ್ರಹಕ್ಕೊಂದು ಟಿಕೆಟ್ ಮಾಡಿ’’ ಎಂದರು.
ಸಿಕ್ಕರೂ ಸಿಕ್ಕಬಹುದು ಎಂದು ಯುವಕರೆಲ್ಲ ಕ್ರಿಕೆಟ್, ಸಿನಿಮಾ ಇತ್ಯಾದಿಗಳನ್ನೆಲ್ಲಾ ಬಿಟ್ಟು ಮಂಗಳಗ್ರಹದ ಅಧ್ಯಯನಕ್ಕೆ ತೊಡಗಿದರು. ಆ ಮಂಗಳಗ್ರಹದ ಹುಡುಗಿಯ ಜೊತೆಗೆ ಚಾಟಿಂಗ್‌ಗೆ ಪ್ರಯತ್ನಿಸಿದರು. ಗೂಗಲ್‌ಗೆ ಹೋಗಿ ‘ಮಂಗಳಾ’ ಎಂದು ಹುಡುಕುವುದಕ್ಕೆ ಶುರು ಹಚ್ಚಿದರು. ಚಾಟಿಂಗ್ ರೂಂಗೆ ಹೋಗಿ, ಮಂಗಳಾ ಎಂದು ಹೆಸರಿರುವ ಹುಡುಗಿಯರನ್ನೆಲ್ಲ ‘ನೀನಿರುವುದು ಮಂಗಳ ಗ್ರಹದಲ್ಲಿಯ?’ ಎಂದು ಆಸೆಯಿಂದ ಕೇಳತೊಡಗಿದರು. ಮಂಗಳದಲ್ಲಿ ‘ಮಹಿಳೆಯ ಚಿತ್ರ’ ಕಂಡುದರಿಂದ ಆ ಗ್ರಹವನ್ನು ನೋಡುವುದಕ್ಕೆ ಕ್ಯೂನಲ್ಲಿ ಜನ ನಿಂತರು. ಅಮೆರಿಕ ಮಂಗಳ ಗ್ರಹವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಿತು.
ಇದೇ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೂ ಆ ಗ್ರಹದ ಮೇಲೆ ಆಸಕ್ತಿ ಹೆಚ್ಚಿತು. ಪೊಟೊದಲ್ಲಿ ಕಂಡ ಮಹಿಳೆ ‘ಬುಡಕಟ್ಟು ಮಹಿಳೆ’ಯ ತರಹ ಕಂಡುದರಿಂದ ಕ್ರಿಶ್ಚಿಯನ್ ಪಾದ್ರಿಗಳು ಶಿಲುಬೆಯ ಜೊತೆಗೆ ಮಂಗಳ ಗ್ರಹಕ್ಕೆ ಹೊರಟರು. ಪಾದ್ರಿಗಳು ಹೊರಟಿರುವುದನ್ನು ಕಂಡದ್ದೇ ಒರಿಸ್ಸಾದ ಸಂಘಪರಿವಾರದ ಕಾರ್ಯಕರ್ತರು ತ್ರಿಶೂಲ ಹಿಡಿದು ಅವರ ಹಿಂದೆಯೇ ಹೊರಟರು.
ಭಾರತದ ಮುಸ್ಲಿಮರೆಲ್ಲ ಹಣ ಸಂಗ್ರಹಿಸಿ ಅಲ್ಲೊಂದು ಮಸೀದಿ ಕಟ್ಟುವುದು ಎಂದು ತೀರ್ಮಾನಿಸಿದರು. ಮಂಗಳ ಗ್ರಹದ ಮಹಿಳೆ ಮಸೀದಿಗೆ ಬರಬಹುದೋ, ಬೇಡವೋ ಎನ್ನುವ ಕುರಿತಂತೆ ಮುಸ್ಲಿಮರೊಳಗೇ ಭಿನ್ನಮತ ಸಷ್ಟಿಯಾಯಿತು. ಕೊನೆಗೂ ಅಮತಶಿಲೆಯನ್ನು ಹಾಸಿ ಒಂದು ಮಸೀದಿಯನ್ನು ಕಟ್ಟಿದರು. ಇನ್ನೇನು ಅದರೊಳಗೆ ಪ್ರಾರ್ಥನೆ ಮಾಡಬೇಕು ಎನ್ನುವಷ್ಟರಲ್ಲಿ ಸಂಘಪರಿವಾರದ ನಾಯಕರು ತಕರಾರು ತೆಗೆದರು. ಈ ಮಸೀದಿಯನ್ನು ಮಂಗಳ ಗ್ರಹದ ಪುರಾತನ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಮಂಗಳ ಗ್ರಹದಾದ್ಯಂತ ರಥಯಾತ್ರೆ ಆರಂಭಿಸಿದರು.
‘‘ಇದಕ್ಕೆ ನಿಮ್ಮಲ್ಲಿ ಸಾಕ್ಷಿಯೇನಿದೆ?’’ ಮುಸ್ಲಿಂ ಮುಖಂಡರು ಕೇಳಿದರು. ಪ್ರಗತಿಪರರು ಅವರ ಜೊತೆ ನಿಂತರು.
‘‘ಸೀತೆ ಹುಟ್ಟಿದ್ದು ಮಂಗಳಗ್ರಹದಲ್ಲಿ. ಉಪಗ್ರಹವೊಂದು ಮೊತ್ತ ಮೊದಲು ತೆಗೆದ ಮಂಗಳಗ್ರಹದ ಮಹಿಳೆಯ ಚಿತ್ರ ರಾಮಾಯಣದ ಸೀತೆಯ ಚಿತ್ರವಾಗಿದೆ’’. ಎಂದು ಸಂಘ ಪರಿವಾರದ ನಾಯಕರು ವಾದಿಸಿದರು.
‘‘ರಾಮಾಯಣಕ್ಕೂ ಮಂಗಳಗ್ರಹಕ್ಕೂ ಏನು ಸಂಬಂಧ’’ ಎಂದು ಕಮ್ಯುನಿಷ್ಟ್ ಇತಿಹಾಸ ತಜ್ಞರು ಕೇಳಿ ತಮಾಷೆ ಮಾಡತೊಡಗಿದ್ದರು.
 ಸಂಘಪರಿವಾರದ ಇತಿಹಾಸ ತಜ್ಞರು ತಕ್ಷಣ ಎಚ್ಚರವಾದರು. ಬೆಂಗಳೂರಿನಿಂದ ತಕ್ಷಣ ಚಿದಾನಂದಮೂರ್ತಿಗೆ ಬುಲಾವ್ ಹೋಯಿತು. ಅವರು ಸಂಶೋಧನೆ ಮಾಡಿದರು. ‘‘ರಾಮಾಯಣ ‘ಮಂಗ’ಗಳಿಂದ ಈ ಗ್ರಹಕ್ಕೆ ‘ಮಂಗ’ಳ ಎಂಬ ಹೆಸರು ಬಂತು. ಮಂಗಗಳ ಗ್ರಹ ಮಂಗಳ ಗ್ರಹ’’ ಎಂದು ಚಿದಾನಂದ ಮೂರ್ತಿ ಕಂಡು ಹಿಡಿದರು. ಸಂಘಪರಿವಾರದ ನಾಯಕರು ಮಂಗಗಳಂತೆ ಕುಣಿದಾಡಿದರು.
‘‘ಹಾಗಾದ್ರೆ ಸೇತು ಸಮುದ್ರಂನ ಕತೆಯೇನು?’’ ಎಂದು ಕೇಳಿದರು ಕೆಲವರು.
‘‘ಮಂಗಗಳು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಸೇತುವೆ ಕಟ್ಟಿದವು. ಈಗಲೂ ಅದರ ಪಳೆಯುಳಿಕೆ ಇದೆ...’’ ಎಂದರು. ‘‘ತೇತ್ರಾಯುಗದಲ್ಲಿ ಮತ್ತು ದ್ವಾಪರಯುಗದಲ್ಲಿ ಮಂಗಳ ಮತ್ತು ಭೂಮಿಯ ನಡುವೆ ಈ ಸೇತುವೆಯಲ್ಲೇ ಎಲ್ಲರೂ ಓಡಾಡುತ್ತಿದ್ದರು...’’
‘‘ಎಲ್ಲಿದೆ ತೋರಿಸಿ... ಅದರ ಪಳೆಯುಳಿಕೆಯನ್ನು...’’ ಎಂದು ಕಮ್ಯುನಿಷ್ಟರು ಕೇಳಿದರು.
‘‘ಅದು ಬರಿ ಕಣ್ಣಿಗೆ ಕಾಣುವುದಿಲ್ಲ. ನಮ್ಮದೇ ವಿಶೇಷ ವಿಜ್ಞಾನಿಯೊಬ್ಬರು ಅದರ ಬಗ್ಗೆ ಅಧ್ಯಯನ ನಡೆಸಿದ್ದಾರೆ...’’ ಎಂದರು.
ಚಿದಾನಂದ ಮೂರ್ತಿ ಮಂಗಳದಲ್ಲಿ ಒಂದು ಸೈಟ್ ಮಾಡಿ ಸೆಟ್ಲಾದದ್ದೇ, ಒಬ್ಬಂಟಿಯಾಗಿ ಬದುಕುವುದಕ್ಕೆ ಬೋರಾಯಿತು. ಒಂದು ಮದುವೆಯಾದರೆ ಏನು? ಎಂದು ಯೋಚಿಸಿದರು. ಮಂಗಳ ಗ್ರಹದಲ್ಲಿ ತಕ್ಕ ಜೋಡಿ ಇಲ್ಲ ಅನ್ನಿಸಿತು. ಕೊನೆಗೆ ಅವರು ಎಸ್.ಎಲ್. ಭೈರಪ್ಪನವರನ್ನು ಆಹ್ವಾನಿಸಿದರು. ಅವರಿಬ್ಬರು ಜೊತೆಯಾಗಿ ಸುಖ ಸಂಸಾರ ನಡೆಸತೊಡಗಿದರು. ಭೈರಪ್ಪರು ಮಂಗಳ ಗ್ರಹಕ್ಕೆ ಬಂದವರೇ, ಅಲ್ಲಿನ ಪ್ರತೀ ಅವಶೇಷವನ್ನು ನೋಡಿ ಕಣ್ಣೀರು ಸುರಿಸತೊಡಗಿದರು. ಅದೆಲ್ಲವೂ ಔರಂಗಜೇಬನ ದಾಳಿಯಿಂದ ಅಳಿದುಳಿದ ಅವಶೇಷದಂತೆ ಅವರಿಗೆ ಕಂಡಿತು. ಅಲ್ಲಿ ಔರಂಗಜೇಬ್ ಏನನ್ನೆಲ್ಲ ಪುಡಿ ಮಾಡಿದ್ದಾನೆ. ಎಷ್ಟು ದೇವಸ್ಥಾನ ಒಡೆದಿದ್ದಾನೆ ಎನ್ನುವುದನ್ನೆಲ್ಲ ‘ಹಧ್ಯಯನ’ ನಡೆಸಿ ಬರೆಯತೊಡಗಿದರು. ಆ ಕಾದಂಬರಿಗೆ ‘ಆ ವಣ’ ಎಂದು ಹೆಸರಿಟ್ಟರು. ಉಪಗಹದಲ್ಲಿ ಕಂಡ ಮಂಗಳಗಹದ ಮೊದಲ ಮಹಿಳೆಯನ್ನೇ ತನ್ನ ಕಥಾನಾಯಕಿಯನ್ನಾಗಿಸಿದರು. ಆ ಮಹಿಳೆ ‘ಮಾಂಸ’ ತಿನ್ನುತ್ತಿರಲಿಲ್ಲ. ಸಾಬರನ್ನು ಮುಟ್ಟುತ್ತಿರಲಿಲ್ಲ...’’ ಎಂದೆಲ್ಲ ವರ್ಣಿಸಿದರು.
‘ಆ ವಣ’ ಮಂಗಳ ಗ್ರಹವನ್ನು ಗಬ್ಬೆಬ್ಬಿಸುತ್ತಿದ್ದ ಹಾಗೆಯೇ, ಕೋಮು ಸೌಹಾರ್ದ ವೇದಿಕೆಯ ತಂಡ ಅತ್ತ ಧಾವಿಸಿತು. ‘ಆ ವಣ’ದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತು. ಅವರನ್ನು ಕಂಡದ್ದೇ ‘ಮಂಗಳಗಹದಲ್ಲಿ ನಕ್ಸಲೈಟ್‌ಗಳು’ ಎಂದು ಪತ್ರಿಕೆಗಳು ಬರೆಯತೊಡಗಿದವು. ತಕ್ಷಣ ಬಿದರಿಗೆ ಬುಲಾವ್ ಹೋಯಿತು. ಬಿದರಿ ತನ್ನ ನಕ್ಸಲ್ ಸ್ಕ್ವಾಡ್ ಜೊತೆಗೆ ಹೊರಟೇ ಬಿಟ್ಟರು. ಬಿದರಿಯ ಹಿಂದೆ ಎಲ್ಲ ಪತ್ರಕರ್ತರು ಹೊರಟು ಬಿಟ್ಟರು.
ಅಷ್ಟರಲ್ಲಿ ಮಂಗಳ ಗಹ ತನ್ನ ಕೈ ತಪ್ಪುತ್ತದೆ ಎನ್ನುವುದು ಅಮೆರಿಕ ಮನಗಂಡಿತು. ‘‘ಮಂಗಳ ಗ್ರಹದಲ್ಲಿ ಉಸಾಮಬಿನ್ ಲಾದೆನ್ ಅಡಗಿದ್ದಾನೆ...’’ ಎಂದು ತನ್ನ ಸೈನ್ಯವನ್ನೆಲ್ಲ ತಂದು ಅಲ್ಲಿ ನಿಲ್ಲಿಸಿತು. ಅಲ್ಲಿಗೆ ಮಂಗಳ ಗ್ರಹದ ‘ಗ್ರಹ’ಚಾರ ಸಂಪೂರ್ಣ ಕೆಟ್ಟಿತು.
***
ಬೆಂಗಳೂರಿನಲ್ಲಿ ಕಂಡ ಕಂಡ ರಾಜಕಾರಣಿಗಳ ಹಿಂದೆ ಸುತ್ತುತ್ತಿದ್ದ ಪತ್ರಕರ್ತ ಎಂಜಲು ಕಾಸಿಯನ್ನು ಸಂಪಾದಕರು ನೇರ ಮಂಗಳಗ್ರಹಕ್ಕೆ ವರ್ಗಾವಣೆ ಮಾಡಿಬಿಟ್ಟರು. ಕಾಸಿ ಮಂಗಳಗ್ರಹದಲ್ಲಿ ‘ಸ್ಕೂಪ’ನ್ನು ಹುಡುಕತೊಡಗಿದ. ಉಪಗ್ರಹ ಮೊತ್ತ ಮೊದಲ ಬಾರಿ ತೆಗೆದ ಮಹಿಳೆಯ ಚಿತ್ರ ಅವನ ನೆನಪಲ್ಲಿತ್ತು. ಆ ಮಹಿಳೆಯನ್ನು ಹುಡುಕಿ ತೆಗೆದು ಆಕೆಯ ಇಂಟರ್ಯೂ ಮಾಡಿದರೆ ಹೇಗೆ? ಎಂದು ಹೊಳೆದದ್ದೇ, ಮಂಗಳ ಗ್ರಹದ, ಗುಡ್ಡ, ಕುಳಿ ಯಾವುದನ್ನೂ ಬಿಡದೇ ಹುಡುಕಾಡ ತೊಡಗಿದ. ಹೀಗೆ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆಯೇ ಗುಡ್ಡದ ಕೊನೆಗೆ ತಲೆಗೆದರಿದ ಒಂದು ಹೆಂಗಸು ಏನನ್ನೋ ಯೋಚಿಸುತ್ತಾ ಕುಳಿತ್ತಿತ್ತು. ನೋಡಿದರೆ, ಅದೇ ಹೆಂಗಸು! ಉಪಗ್ರಹ ತೆಗೆದ ಪೋಟೊದಲ್ಲಿದ್ದ ಹೆಂಗಸು ಅದಾಗಿತ್ತು!
ಕಾಸಿ ಇಂಟರ್ಯೂಗೆ ರೆಡಿಯಾದ. ‘‘ಯಾರಮ್ಮಾ ನೀನು’’!
ಹೆಂಗಸು ಕಾಸಿಯನ್ನು ನೋಡಿದ್ದೇ ‘‘ನೀನು ಇಲ್ಲಿಗೂ ಬಂದೆಯಾ?’’ ಎಂದಿತು.
 ಕಾಸಿಗೆ ಅಚ್ಚರಿ. ‘‘ಅರೆ! ಈ ಹೆಂಗಸಿಗೆ ನನ್ನ ಪರಿಚಯವಿದೆ’’ ‘‘ನಿನಗೆ ನನ್ನ ಪರಿಚಯವಿದೆಯೇ?’’ ಕೇಳಿದ.
‘‘ಇಲ್ಲದೇ ಏನು? ನಿನ್ನದು ಮಾತ್ರ ಅಲ್ಲ. ಭೂಮಿಯಿಂದ ಇಲ್ಲಿಗೆ ಬಂದಿರುವ ಎಲ್ಲರ ಪರಿಚಯವೂ ಇದೆ’’
‘‘ಅದು ಹೇಗೆ?’’
ಮಹಿಳೆ ನಿಟ್ಟುಸಿರಿಟ್ಟು ಹೇಳಿದಳು ‘‘ನಾನು ಕೂಡಾ ಭೂಮಿಯವಳೇ?’’
ಕಾಸಿ ಅಚ್ಚರಿಯಿಂದ ನೋಡತೊಡಗಿದ. ಮಹಿಳೆ ಹೇಳಿದಳು ‘‘ಭೂಮಿಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯದಿಂದ ಪಾರಾಗಿ ಬದುಕಿದೆಯಾ ಬಡ ಜೀವವೇ ಎಂದು ಈ ಮಂಗಳ ಗ್ರಹದಲ್ಲಿ ಬಂದು ಒಂದಿಷ್ಟು ನೆಮ್ಮದಿಯಿಂದ ಇದ್ದೆ. ಆದರೆ ಅಷ್ಟರಲ್ಲಿ ಆ ಬೋ... ಮಗಂದು... ಉಪಗ್ರಹ ನನ್ನ ಚಿತ್ರ ತೆಗೆದು ಕಳುಹಿಸಿತು. ಈಗ ನೋಡಿದರೆ ಇಲ್ಲಿಗೂ ಬಂದು ನನ್ನನ್ನು ಕಾಡುತ್ತಿದ್ದಾರೆ...ಇನ್ನು ಬುಧ ಗ್ರಹವೋ, ಶನಿಗ್ರಹವೋ ಹುಡುಕಬೇಕು... ಈ ಶನಿಗಳಿಂದ ಪಾರಾಗುವುದಕ್ಕೆ...’’
ಕಾಸಿ ಕೇಳಿದ ‘‘ನಿನ್ನ ಹೆಸರೇನಮ್ಮ?’’
ಹೆಂಗಸು ಕಾಸಿಯನ್ನು ದುರುಗುಟ್ಟಿ ನೋಡಿ ಹೇಳಿತು ‘‘ಅದ್ಯಾವ ಸೀಮೆಯ ಪತ್ರಕರ್ತನೋ ನೀನು... ಇನ್ನೂ ಗೊತ್ತಾಗಲಿಲ್ಲವೇ ನಾನು ಯಾರೆಂದು? ನಾನೇ ಭಾರತ ಮಾತೆ. ಅಲ್ಲಿಂದ ಪಾರಾಗಿ ಇಲ್ಲಿ ಮಂಗಳ ಗ್ರಹದಲ್ಲಿ ಸ್ವಲ್ಪ ಸಮಯ ನೆಮ್ಮದಿಯಿಂದ ಇದ್ದೆ. ಇನ್ನು ಅದೂ ಸಾಧ್ಯವಿಲ್ಲ...’’
‘‘ಭಾರತ ಮಾತೆ’’ ಎಂಬ ಶಬ್ದ ಕೇಳಿದ್ದೇ... ಯಾರೋ ಓಡೋಡಿ ಬಂದಂತಾಯ್ತು. ಕಾಸಿ ತಿರುಗಿ ನೋಡಿದರೆ ಚಿತ್ರ ಕಲಾವಿದ ಎಂ.ಎಫ್.ಹುಸೇನರು ಕೈಯಲ್ಲಿ ಕುಂಚ ಹಿಡಿದು ಓಡೋಡಿ ಬರುತ್ತಿದ್ದರು. ಹುಸೇನರನ್ನು ನೋಡಿದ್ದೇ... ‘‘ಅಯ್ಯೋ... ನನ್ನ ಅಳಿದುಳಿದ ಮಾನವನ್ನು ತೆಗೆಯಲು ಇವನೂ ಬಂದಿದ್ದಾನಲ್ಲಪ್ಪ...’’ ಎಂದು ಭಾರತ ಮಾತೆ ಸೆರಗಿನಿಂದ ಎದೆಯನ್ನು ಮುಚ್ಚಿಕೊಂಡು ಓಡತೊಡಗಿದಳು.
(ಫೆಬ್ರವರಿ 17, 2008, ರವಿವಾರ)

Tuesday, May 12, 2015

‘ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ...’

ಇದು ಜನವರಿ, 20, 2008, ರವಿವಾರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ಮಂಗಳ ಗ್ರಹದ ಜೀವಿಗಳು ಕೊನೆಗೂ ಭೂಮಿಯಲ್ಲಿ ಜೀವಿಗಳಿರುವುದನ್ನು ಪತ್ತೆ ಮಾಡಿದವು. ತಕ್ಷಣ ಮಂಗಳ ಗ್ರಹದ ವಿಜ್ಞಾನಿಗಳು ಸಭೆ ಸೇರಿದರು. ಒಂದು ತಂಡವನ್ನು ಮಾಡಿ ಭೂಮಿಗೆ ಕಳುಹಿಸುವುದೆಂದು ತೀರ್ಮಾನಿಸಲಾಯಿತು. ಭೂಮಿಯ ಬಗೆಗಿನ ವಿವರಗಳನ್ನು, ಅಲ್ಲಿಯ ಜನಜೀವನ, ಬದುಕಿನ ಶೈಲಿಯನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಮಾಡಬೇಕೆಂದು ಈ ತಂಡಕ್ಕೆ ತಿಳಿಸಲಾಯಿತು. ಮಂಗಳ ಗ್ರಹದಿಂದ ಈ ತಂಡ ನೇರವಾಗಿ ಕರ್ನಾಟಕಕ್ಕೇ ಬಂದಿಳಿದು, ಗುಪ್ತವಾಗಿ ಜನರ ನಡುವೆ ಓಡಾಡಿ ಒಂದು ವರದಿಯನ್ನು ಸಿದ್ಧ ಪಡಿಸಿ, ಮರಳಿ ತಮ್ಮ ಗ್ರಹಕ್ಕೆ ತೆರಳಿತು. ಒಂದು ದಿನ ಮುಂಜಾನೆ ಪತ್ರಕರ್ತ ಎಂಜಲು ಕಾಸಿ ಮೂತ್ರ ಮಾಡಲೆಂದು ಎದ್ದಾಗ ಆಕಾಶದಿಂದ ಎನೋ ಬಿದ್ದಂತಾಯಿತು. ನೋಡಿದರೆ ಅದು ಮಂಗಳ ಗ್ರಹದ ಜೀವಿಗಳು ಸಿದ್ಧ ಪಡಿಸಿದ ವರದಿ. ಬಹುಶಃ ಕೈ ಜಾರಿ ಕೆಳಗೆ ಬಿದ್ದಿರಬಹುದು ಎಂದು ಕಾಸಿ ಒಮ್ಮೆ ಆಕಾಶ ನೋಡಿದ. ಮಂಗಳ ಗ್ರಹದ ಜೀವಿಗಳು ತಮ್ಮ ವಿಜ್ಞಾನಿಗಳಿಗೆ ನೀಡಿದ ಆ ಸ್ಕೂಪ್ ವರದಿ ಈ ಕೆಳಗಿನಂತಿದೆ.
***
1. ನಾವು ಕರ್ನಾಟಕ ಎಂಬ ಊರಿಗೆ ಮೊದಲು ಇಳಿದೆವು. ಇದು ಸಂಪೂರ್ಣ ಧೂಳಿನಿಂದಾವತವಾದ ಒಂದು ಗ್ರಹ. ಇಳಿದಾಕ್ಷಣ ನಾವು ಬಹತ್ ಕುಳಿಗಳನ್ನು ಅಥವಾ ಹೊಂಡಗಳನ್ನು ಕಂಡೆವು. ಈ ಕುಳಿಗಳನ್ನು ಇಲ್ಲಿನ ಜನರು ರಸ್ತೆಗಳೆಂದು ಕರೆಯುತ್ತಾರೆ.
2. ನಮ್ಮ ಗ್ರಹದಲ್ಲಿರುವಂತೆ ಭೂಮಿಯಲ್ಲಿಯೂ ಕಳ್ಳರು, ದರೋಡೆಕೋರರು ಇದ್ದಾರೆ. ಆದರೆ ಅವರನ್ನು ಈ ಗ್ರಹದಲ್ಲಿ ರಾಜಕಾರಣಿಗಳು ಎಂಬ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅವರಿಗಾಗಿಯೇ ಭಾರೀ ಸೌಧವೊಂದನ್ನು ಕಟ್ಟಿದ್ದಾರೆ. ಅದನ್ನು ವಿಧಾನ ಸೌಧ ಎಂದು ಕರೆಯುತ್ತಾರೆ. ದರೋಡೆ ಮಾಡುವುದಕ್ಕಾಗಿಯೇ ಇಲ್ಲಿ ಸಭೆಗಳು ಬಹಿರಂಗವಾಗಿ ನಡೆಯುತ್ತವೆ. ಅದನ್ನು ಈ ಗ್ರಹದ ಜನರು ಅಧಿವೇಶನ ಎಂದು ಕರೆಯುತ್ತಾರೆ. ಅತ್ಯುತ್ತಮ ದರೋಡೆಕೋರರನ್ನು ಆಯ್ಕೆ ಮಾಡುವುದಕ್ಕಾಗಿ ಇಲ್ಲಿ ಚುನಾವಣೆಗಳೂ ನಡೆಯುತ್ತವೆ. ಇಲ್ಲಿ ಹೊಟ್ಟೆಗೆ ತಿನ್ನಲು ಏನೂ ಇಲ್ಲದವರನ್ನು ಕಳ್ಳರು, ನಕ್ಸಲೀಯರು ಎಂದು ಕರೆಯುತ್ತಾರೆ. ಅವರನ್ನು ಕೊಂದು ಹಾಕುವುದಕ್ಕಾಗಿಯೇ ಇಲ್ಲಿ ವಿಶೇಷ ಪಡೆಗಳಿವೆ. ಈ ಪಡೆಗಳನ್ನು ಆ ಹೊಟ್ಟೆಗೆ ಇಲ್ಲದವರೇ ದುಡ್ಡುಕೊಟ್ಟು ಸಾಕುತ್ತಾರೆ.
3. ಇದೊಂದು ವಿಚಿತ್ರ ಗ್ರಹ. ಇಲ್ಲಿ ಜನರನ್ನು ಹಿಂಸಿಸುವುದಕ್ಕಾಗಿಯೇ, ಅಮಾಯಕರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ಹೂಡುವುದಕ್ಕಾಗಿಯೇ ಒಂದು ಇಲಾಖೆ ಇದೆ. ಆ ಇಲಾಖೆಯನ್ನು ಅವರು ಪೊಲೀಸ್ ಇಲಾಖೆ ಎಂದು ಕರೆಯುತ್ತಾರೆ. ಕದಿಯದವರನ್ನು ಕದಿಯುವಂತೆ ಮಾಡುವುದು ಇವರ ಮುಖ್ಯ ಕೆಲಸ.
4. ಇಲ್ಲೊಂದು ಉಡುಪಿ ಎನ್ನುವ ಸ್ಥಳ ಇದೆ. ಇದನ್ನೇ ‘ಜಗತ್ತು’ ಎಂದೂ ಇಲ್ಲಿನವರು ಕರೆಯುತ್ತಾರೆ. ಈ ಜಗತ್ತಿಗೆ ಗುರುಗಳೂ ಇದ್ದಾರೆ. ಅವರು ತಮ್ಮನ್ನು ತಾವು ಜಗದ್ಗುರು ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿ ಉಡುಪಿ ಮಾತ್ರ ಜಗತ್ತು ಮತ್ತು ಅದರಾಚೆಗೆ ಜಗತ್ತು ಇಲ್ಲ ಎನ್ನುವ ವಿಷಯದಲ್ಲಿ ಭಾರೀ ಜಗಳವಾಯಿತು. ಒಬ್ಬ ಜಗದ್ಗುರು ಸಮುದ್ರದಾಚೆಗೂ ಜಗತ್ತು ಇದೆ ಎಂದರೆ, ಉಳಿದವರೆಲ್ಲಾ ಸಮುದ್ರದಾಚೆಗೆ ಜಗತ್ತು ಇಲ್ಲ ಎಂದು ವಾದಿಸಿದರು. ಈ ಜಗಳವನ್ನು ಇಲ್ಲಿ ‘ಪರ್ಯಾಯೋತ್ಸವ’ ಎಂದು ಕರೆಯುತ್ತಾರೆ.
5. ಇಲ್ಲಿ ‘ಸಂಸ್ಕೃತಿ’ ಎನ್ನುವ ವಿಚಿತ್ರ ಪದವನ್ನು ಬಳಸುತ್ತಾರೆ. ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅಮಾಯಕರನ್ನು ಬೆತ್ತಲೆ ಮಾಡಿ ಥಳಿಸುವುದು, ಆದಿವಾಸಿಗಳು ಎಂದು ಕರೆಸಿಕೊಳ್ಳುವವರನ್ನು ಯರ್ರಾಬಿರ್ರಿ ಥಳಿಸುವುದು ಹೀಗೆ ಇವರು ತಮ್ಮ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಗುಜರಾತ್ ಎಂಬ ಊರಿನಲ್ಲಿ ಭಾರೀ ಸಾಂಸ್ಕೃತಿಕ ಉತ್ಸವ ಆಚರಣೆಯಾಯಿತಂತೆ. ನರೇಂದ್ರ ಮೋದಿ ಎಂಬ ನಾಯಕನೇ ಆ ಸಾಂಸ್ಕೃತಿಕ ಆಚರಣೆಯ ನೇತತ್ವವನ್ನು ವಹಿಸಿದ್ದರಿಂದ, ಜನರು ಆತನನ್ನೇ ಮತ್ತೆ ತಮ್ಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯ ಜನರು ಸಾಂಸ್ಕೃತಿಕ ಪುನರುತ್ಥಾನ ಎಂದೂ ಕರೆಯುತ್ತಾರೆ.
6. ಇಲ್ಲಿ ‘ದನ’ ಎನ್ನುವ ಒಂದು ಪ್ರಾಣಿ ಇದೆ. ಇದು ಹಾಲು ಕೊಡುತ್ತದೆ. ಜೊತೆಗೆ ಇದನ್ನು ಹಾಲಿಗಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳಿಗೆ ಬಳಸಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಜೀವಿಗಳು ಪ್ರಯೋಗ ನಡೆಸುತ್ತಿವೆ. ಕರೆದರೆ ಹಾಲು ಮಾತ್ರ ಅಲ್ಲ, ಅಧಿಕಾರದ ಕುರ್ಚಿ, ರಕ್ತ, ಹಿಂಸೆ ಇತ್ಯಾದಿಗಳು ಬರಲು ಸಾಧ್ಯವೆ ಎಂದು ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಪ್ರಯೋಗ ಭಾಗಶಃಯಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈವರೆಗೆ ಈ ದನ ಎನ್ನುವ ಪ್ರಾಣಿ ಬಿಳಿ ಹಾಲನ್ನು ಮಾತ್ರ ಕೊಡುತ್ತಿತ್ತು. ಕೇಸರಿ ಬಣ್ಣದ ಹಾಲನ್ನು ತೆಗೆಯಲು ಸಾಧ್ಯವೆ ಎಂಬ ಕುರಿತಂತೆಯೂ ಭಾರೀ ಪ್ರಯೋಗಗಳು ನಡೆಯುತ್ತಿವೆ.
7. ಇಲ್ಲಿ ಕಾಡುಗಳಿರುವಂತೆಯೇ ಅಲ್ಲಲ್ಲಿ ‘ಹಳ್ಳಿ’ ಎನ್ನುವುದು ಇವೆಯಂತೆ. ಇವುಗಳಲ್ಲಿ ತುಂಬಾ ಹಿಂದೆ ‘ರೈತ’ ಎಂಬ ಜೀವಿ ವಾಸಿಸುತ್ತಿತ್ತಂತೆ. ಇದೊಂದು ಭಯಂಕರ ಜೀವಿಯಾಗಿತ್ತಂತೆ. ಮುಖ್ಯವಾಗಿ ಭಯೋತ್ಪಾದನೆ, ಉಗ್ರವಾದ ಮೊದಲಾದ ಚಟುವಟಿಕೆಗಳನ್ನು ಈ ಜೀವಿ ನಡೆಸುತ್ತಿತ್ತಂತೆ. ಇವುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ‘ನೇಗಿಲು’ ಎಂಬ ಭಯಾನಕ ಆಯುಧವನ್ನು ಬಳಸುತ್ತಿತ್ತಂತೆ. ಆದುದರಿಂದ ಇವುಗಳನ್ನು ಎನ್‌ಕೌಂಟರ್‌ನಿಂದ ಕೊಲ್ಲಲಾಯಿತಂತೆ. ಈಗಲೂ ಈ ‘ರೈತ’ ಎನ್ನುವ ಜೀವಿ ಅಲ್ಲಲ್ಲಿ ಉಳಿದುಕೊಂಡಿದೆಯಂತೆ. ಅದನ್ನು ಹುಡುಕಿ ಹತ್ಯೆಗೈಯುವುದಕ್ಕಾಗಿಯೇ ‘ಸೆಝ್’ ‘ಐಟಿ ಪಾರ್ಕ್’ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆಯಂತೆ. ಇದರ ವಿರುದ್ಧವೂ ಈ ಅಳಿದುಳಿದ ‘ರೈತ’ರು ಎನ್ನುವ ಜೀವಿಗಳು ಭಾರೀ ಸಂಚು ನಡೆಸುತ್ತಿವೆಯಂತೆ.
8. ಇಲ್ಲಿ ಭಾರೀ ಶ್ರೀಮಂತರು ಮುಖ ಒರೆಸಿಕೊಳ್ಳುವುದಕ್ಕೆ ಹಾಗೂ ಟಾಯ್ಲೆಟ್‌ನಲ್ಲಿ ಹೊಲಸನ್ನು ಒರೆಸಿಕೊಳ್ಳುವುದಕ್ಕೆ ಕಾಗದಗಳನ್ನು ಬಳಸುತ್ತಾರೆ. ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ. ಈ ಪತ್ರಿಕೆಗಳನ್ನು ಬಣ್ಣ ಬಣ್ಣವಾಗಿ ಮುದ್ರಿಸುತ್ತಾರೆ. ವಿವಿಧ ಕಂಪೆನಿಗಳು ವಿವಿಧ ಹೆಸರುಗಳಿಂದ ಇವುಗಳನ್ನು ಮುದ್ರಿಸುತ್ತವೆ. ಇಲ್ಲಿ ಮೇಲೆ ಹೇಳಿದ ‘ಸಂಸ್ಕೃತಿ’ಯ ವಕ್ತಾರರು ಎಂದು ಕರೆಸಿಕೊಂಡವರೂ ಈ ಕಾಗದಗಳನ್ನು ಬಳಸುತ್ತಾರೆ. ಅವರು ವಾಂತಿ ಮಾಡಲು ಬಳಸುವುದು ಇದೇ ಕಾಗದಗಳನ್ನು. ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನೇ ಈ ಕೆಲಸಕ್ಕೆ ಹೆಚ್ಚು ಬಳಸುತ್ತಾರೆ. ಹಾಗೆಯೇ ಸಮಾಜದ ಉನ್ನತ ವರ್ಣೀಯರು ಮುದ್ಸಿುವ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾಕೆಂದರೆ ಅದು ಹೊಲಸನ್ನು ಒರೆಸುವುದಕ್ಕೆ, ವಾಂತಿ ಮಾಡುವುದಕ್ಕೆ ಹೆಚ್ಚು ಕ್ವಾಲಿಟಿ ಹೊಂದಿರುತ್ತದೆ ಎನ್ನುವುದು ಈ ಗ್ರಹದವರ ನಂಬಿಕೆ.
9. ಇಲ್ಲಿ ಕಸದ ತೊಟ್ಟಿ ಎಂಬ ಒಂದು ಪೆಟ್ಟಿಗೆ ಇದೆ. ಇದನ್ನು ಆಗಷ್ಟೇ ಹುಟ್ಟಿದ ಅನಾಥ ಮಕ್ಕಳನ್ನು ಎಸೆಯುವುದಕ್ಕೆ, ‘ಹೆಣ್ಣು’ ಎಂಬ ಭಯಾನಕ ಜೀವಿಯೊಂದು ಜನಿಸಿದರೆ ಅದನ್ನು ಕತ್ತು ಹಿಸುಕಿ ಕೊಂದು ಎಸೆಯುವುದಕ್ಕೆ, ಹೊಟ್ಟೆಯೊಳಗಿರುವ ಭ್ರೂಣವನ್ನು ಎಸೆಯುವುದಕ್ಕೆ ಬಳಸುತ್ತಾರೆ. ಇಂತಹ ಕೆಲಸಕ್ಕಾಗಿಯೇ ಈ ಗ್ರಹದಲ್ಲಿ ಚರಂಡಿ, ಗಟಾರ ಮೊದಲಾದವುಗಳನ್ನು ಮಾಡದ್ದಾರೆ. ಕಸಗಳನ್ನು ಎಸೆಯುವುದಕ್ಕೆ ಸಾರ್ವಜನಿಕ ಸ್ಥಳ, ಇನ್ನೊಬ್ಬರ ಅಂಗಳ, ರಸ್ತೆ ಇತ್ಯಾದಿಗಳನ್ನು ಬಳಸುತ್ತಾರೆ.
10. ಈ ಎಲ್ಲ ವರದಿಗಳ ಆಧಾರದಲ್ಲಿ ಸಾಬೀತಾಗುವುದೇನೆಂದರೆ, ಈ ಭೂಮಿ ಎಂಬ ಗ್ರಹ ಯಾವ ಕಾರಣಕ್ಕೂ ‘ಮನುಷ್ಯ’ರು ವಾಸ ಮಾಡುವುದಕ್ಕೆ ಯೋಗ್ಯವಾದ ಗ್ರಹ ಅಲ್ಲ. ಆದುದರಿಂದ ಮಂಗಳ ಗ್ರಹದ ಯಾವ ಮನುಷ್ಯರು ಕೂಡ ತಪ್ಪಿಯೂ ಈ ಭೂಮಿ ಎಂಬ ಗ್ರಹದಲ್ಲಿ ವಾಸ ಮಾಡುವ ಕುರಿತು ಯೋಜನೆ ಮಾಡಬಾರದು. ಹಾಗೆ ಯೋಚನೆ ಮಾಡಿದರೆ ಆಗುವ ಅನಾಹುತಕ್ಕೆ ಮಂಗಳ ಗ್ರಹದ ವಿಜ್ಞಾನಿಗಳಾಗಲಿ, ಸರಕಾರವಾಗಲಿ ಹೊಣೆಯಾಗುವುದಿಲ್ಲ.
(ಜನವರಿ, 20, 2008, ರವಿವಾರ)

Sunday, May 10, 2015

ನಾನೇ ಮೂತ್ರ ಸುರಿದು ಬೆಳೆಸಿದ ಪಕ್ಷ!


ನನ್ನ ಮೂತ್ರವನ್ನು ತೋಟಕ್ಕೆ ಗೊಬ್ಬರವಾಗಿ ಬಳಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ 10-5-2015ರ ರವಿವಾರ  ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಸಚಿವ ನಿತಿನ್ ಗಡ್ಕರಿಯ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅದಾಗಷ್ಟೇ ಹಿಂದುಗಡೆಯಿರುವ ತೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಒಳ ಬಂದಿದ್ದ ಗಡ್ಕರಿಯವರು ಕಿಟಕಿಯಿಂದ ಇಣುಕಿ ನೋಡಿದರು. ನೋಡಿದರೆ ಪತ್ರಕರ್ತ ಎಂಜಲು ಕಾಸಿ.
ಬಾಗಿಲು ತೆಗೆದದ್ದೇ ‘‘ಏನ್ರೀ...ಇಂಟರ್ಯೂ ಮಾಡಲು ಬಂದಿದ್ದೀರಾ...’’ ಎಂದು ಕೇಳಿದರು.
‘‘ಇಲ್ಲಾ ಸಾರ್...ಮೂತ್ರ ಮಾಡುವುದಕ್ಕೆ ಬಂದಿದ್ದೇನೆ....ನಿಮ್ಮ ತೋಟಕ್ಕೆ ನೀವು ಮೂತ್ರವನ್ನೇ ಬಳಸುತ್ತಿದ್ದೀರಿ ಎಂದು ಗೊತ್ತಾಯಿತು. ಕರ್ನಾಟಕದ ಮಂತ್ರಿಗಳನ್ನು ಇಂಟರ್ಯೂ ಮಾಡಲು ಬಂದಿದ್ದೆ. ಮೂತ್ರ ವಿಸರ್ಜನೆ ಮಾಡಲು ಎಲ್ಲೂ ಶೌಚಾಲಯ ಸಿಗಲಿಲ್ಲ. ಯಾರೋ ನಿಮ್ಮ ಮನೆ ತೋರಿಸಿದರು...’’ ಎಂದು ಹಲ್ಲು ಗಿಂಜಿದ. ‘‘ಬನ್ನಿ...ಬನ್ನಿ...ನನ್ನ ತೋಟ ನಿಮ್ಮನ್ನೇ ಕಾಯುತ್ತಿದೆ...ಇಡೀ ದಿಲ್ಲಿಯ ಜನರೆಲ್ಲ ನನ್ನ ತೋಟವನ್ನೇ ಸುಲಭ ಶೌಚಾಲಯ ಮಾಡಿದ್ದಾರೆ...ಶುಚಿತ್ವಕ್ಕಾಗಿ ಪ್ರಧಾನಿಯವರು ಬಿಡುಗಡೆ ಮಾಡಿದ ಅನುದಾನದಲ್ಲಿ ಒಂದು ಭಾಗವನ್ನು ನಾನು ನನ್ನ ತೋಟಕ್ಕೆ ಹಾಕಿದ್ದೇನೆ...ಸುಲಭ ಶೌಚಾಲಯವೂ ಆಯಿತು...ಸುಲಭದಲ್ಲಿ ತೋಟವೂ ಆಯಿತು...ಇನ್ನು ಮುಂದೆ ಶೌಚಾಲಯಕ್ಕಾಗಿ ಮೀಸಲಿರುವ ಹಣವನ್ನು ಆಯಾ ಊರಿನಲ್ಲಿರುವ ಅಡಿಕೆ ತೋಟದ ಮಾಲಕರಿಗೆ ವಿತರಿಸಲಾಗುತ್ತದೆ. ಆಯಾ ಊರಿನ ಜನರು ಅವರ ತೋಟದಲ್ಲೇ ಮೂತ್ರ ಮತ್ತು ಇನ್ನಿತರ ವಿಸರ್ಜನೆಯನ್ನು ಮಾಡಿ ತೋಟಕ್ಕೆ ಗೊಬ್ಬರ ಒದಗಿಸಬೇಕು. ಹಾಗೆಯೇ ಎರಡೂ ಕಾರ್ಯವೂ ಆದಂತಾಯಿತು. ರೈತರ ಗದ್ದೆಗೆ ಗೊಬ್ಬರ ಪೂರೈಸುವ ಬದಲು ಅವರ ಗದ್ದೆ ತೋಟಗಳನ್ನೆಲ್ಲ ಸುಲಭ ಶೌಚಾಲಯ ಮಾಡುವ ಯೋಜನೆ ನನ್ನ ಬಳಿ ಇದೆ. ಪ್ರಧಾನಿಯವರೂ ಇದಕ್ಕೆ ಸಮ್ಮತಿ ನೀಡಿದ್ದಾರೆ...ಹೀಗೆ ಪ್ರತಿ ಊರಲ್ಲೂ ವಿಶಾಲ ಶೌಚಾಲಯ ನಿರ್ಮಾಣ ಮಾಡಿದಂತಾಗುತ್ತದೆ....’’
ಇದ್ದಕ್ಕಿದ್ದಂತೆಯೇ ಗಡ್ಕರಿಯ ಹಿತ್ತಲಿನಿಂದ ದುರ್ವಾಸನೆ ಮೂಗಿಗೆ ಬಡಿಯಿತು. ಎಂಜಲು ಕಾಸಿ ಮೂಗು ಮುಚ್ಚಿಕೊಂಡೇ ಸಂದರ್ಶನ ಮಾಡತೊಡಗಿದ ‘‘ಸಾರ್...ನಿಮ್ಮ ಮೂತ್ರವನ್ನೇ ಗೊಬ್ಬರವಾಗಿ ಬಳಸುವುದನ್ನು ನೀವು ಕಂಡು ಹಿಡಿದದ್ದು ಹೇಗೆ ಸಾರ್?’’
‘‘ನಾನದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೇ ಪ್ರಯೋಗ ಮಾಡುತ್ತಾ ಬಂದೆ. ಕೊನೆಗೂ ಒಳ್ಳೆಯ ಲಿತಾಂಶ ಸಿಕ್ಕಿತು. ಇದೀಗ ನನ್ನ ಲಿತಾಂಶವನ್ನು ಘೋಷಿಸಿದ್ದೇನೆ.....’’
‘‘ನೀವು ಅದನ್ನು ಹೇಗೆ, ಎಲ್ಲಿ ಪ್ರಯೋಗ ಮಾಡಿದಿರಿ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡ್ರಿ...ನಮ್ಮ ಬಿಜೆಪಿ ಅನ್ನೋ ತೋಟ ಅದೇನು ಗೊಬ್ಬರ ಹಾಕಿದ್ರೂ ಸರಿಯಾಗಿ ಬೆಳೀತಾ ಇರ್ಲಿಲ್ಲ.....ರಾಮಜನ್ಮಭೂಮಿ ಗೊಬ್ಬರ ಹಾಕಿಯಾಯಿತು. ಗುಜರಾತ್ ಹತ್ಯಾಕಾಂಡ ಗೊಬ್ಬರ ಹಾಕಿ ಆಯಿತು...ಮುಂಬಯಿ ಗಲಭೆ ಗೊಬ್ಬರ...ಹೀಗೆ ಹಾಕದ ಗೊಬ್ಬರಗಳೇ ಇಲ್ಲ....ಬಳಿಕ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು ನೋಡಿ. ನಾನು ಹೊಸ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದೆ. ಪ್ರತಿ ದಿನ ನನ್ನ ಮೂತ್ರವನ್ನೆಲ್ಲ ಸಂಗ್ರಹಿಸಿ, ಗೊಬ್ಬರ ರೂಪದಲ್ಲಿ ಬಳಸಿದೆ. ಬರೇ ಒಂದೆರಡು ವರ್ಷಗಳಲ್ಲಿ ಬಿಜೆಪಿ ವಿಶ್ವದೆತ್ತರ ಬೆಳೆದು ನಿಂತು ಇದೀಗ ಮೋದಿ ಪ್ರಧಾನಿಯಾಗಿ, ಕಾಂಗ್ರೆಸ್ ಮೂಲೆಗುಂಪಾಗಿ ಬಿಟ್ಟಿದೆ....’’ ಗಡ್ಕರಿ ಗುಟ್ಟನ್ನು ಬಿಚ್ಚಿಟ್ಟರು.
‘‘ಅಂದರೆ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯುವುದಕ್ಕೆ ನಿಮ್ಮ ಗೊಬ್ಬರವೇ ಕಾರಣ ಎನ್ನುತ್ತೀರಾ?’’ ಕಾಸಿ ಅನುಮಾನದಿಂದ ಮತ್ತೆ ಕೇಳಿದ.
‘‘ಯಾಕ್ರೀ ಅನುಮಾನ?’’ ಗಡ್ಕರಿ ಸಿಟ್ಟಿನಿಂದ ಕೇಳಿದರು.
‘‘ಮತ್ಯಾಕೆ ಸಾರ್ ನಿಮ್ಮನ್ನು ಪಕ್ಷದಿಂದ ಕೆಳಗಿಳಿಸಿದರು? ನಿಮ್ಮನ್ನು ಕೆಳಗಿಳಿಸಿ ರಾಜ್‌ನಾಥ್ ಸಿಂಗ್‌ನನ್ನು ಯಾಕೆ ಪಕ್ಷಾಧ್ಯಕ್ಷ ಮಾಡಿದರು?’’ ಕಾಸಿ ಗೊಂದಲದಿಂದ ಕೇಳಿದ. ‘‘ನೋಡ್ರಿ...ಮೂತ್ರವನ್ನು ಗೊಬ್ಬರವಾಗಿ ಬಳಸುವಾಗ ಒಂದಿಷ್ಟು ದುರ್ವಾಸನೆ ಬರುವುದು ಸಹಜ. ಆದರೆ ಅದನ್ನು ಮುಂದಿಟ್ಟುಕೊಂಡು ‘ನನ್ನ ಅವ್ಯವಹಾರದ ದುರ್ವಾಸನೆ’ ಎಂದು ಆರೋಪಿಸಿದರು. ನಾನು ಮೂತ್ರ ಮಾಡಿ ಬೆಳೆಸಿದ ಪಕ್ಷದ ನಾಯಕ ಸ್ಥಾನದಿಂದ ನನ್ನನ್ನು ಕೆಳಗಿಳಿಸಿಬಿಟ್ಟರು. ಆದರೂ ತೋಟ ತುಂಬಾ ಚೆನ್ನಾಗಿ ಬೆಳೆದು ಇದೀಗ ಆ ತೋಟದ ಲವನ್ನು ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಅನುಭವಿಸುತ್ತಿದ್ದಾರೆ. ಮೂತ್ರ ಮಾಡಿದ ನನ್ನನ್ನು ಕಡೆಗಣಿಸಿದ್ದಾರೆ...’’
ಕಾಸಿಗೆ ತುಂಬಾ ಬೇಜಾರಾಯಿತು. ಆದರೂ ಮೂತ್ರದಿಂದಲೇ ಬಿಜೆಪಿ ಯೆನ್ನುವ ಮರ ಮುಗಿಲೆತ್ತರ ಬೆಳೆದಿದೆ ಎನ್ನುವುದು ಅವನಲ್ಲಿ ರೋಮಾಂಚನವನ್ನು ತರಿಸಿತು ‘‘ಸಾರ್...ಇನ್ನು ಈ ಮೂತ್ರದಿಂದ ಏನೇನು ಬೆಳೆಸುವುದೆಂದು ಮಾಡಿದ್ದೀರಿ?’’
ಗಡ್ಕರಿ ತನ್ನ ಯೋಜನೆಯನ್ನು ಮುಂದಿಟ್ಟರು ‘‘ಈ ದೇಶದ ಗದ್ದೆಗಳಿಗೆ, ತೋಟಗಳಿಗೆ ಮೂತ್ರವನ್ನೇ ಗೊಬ್ಬರವಾಗಿ ವಿತರಿಸಬೇಕು ಎಂದು ಮಾಡಿದ್ದೇವೆ...’’
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಇಡೀ ದೇಶಕ್ಕೆ ನೀವೊಬ್ಬರೇ ಮೂತ್ರವನ್ನು ಪೂರೈಸುತ್ತೀರಾ? ಅಷ್ಟೂ ಮೂತ್ರವನ್ನು ವಿಸರ್ಜಿಸಲು ನಿಮ್ಮಿಂದ ಸಾಧ್ಯವೆ?’’
ಗಡ್ಕರಿ ಸ್ಪಷ್ಟನೆ ನೀಡಿದರು ‘‘ಬರೇ ನನ್ನ ಮೂತ್ರ ಮಾತ್ರವಲ್ಲ....ಇಡೀ ಸಚಿವ ಸಂಪುಟದ ಪ್ರಮುಖರು ಮತ್ತು ಸಂಸದರ ಮೂತ್ರಗಳನ್ನು ಸಂಗ್ರಹಿಸಿ ಅದನ್ನು ದೇಶಕ್ಕೆ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ....’’
‘‘ಇದಕ್ಕೆ ಎಲ್ಲ ಸಂಸದರೂ ಸಮ್ಮತಿಸಿದ್ದಾರಾ ಸಾರ್?’’ ಕಾಸಿಗೆ ಮತ್ತೆ ಅನುಮಾನ ಹತ್ತಿತು.
‘‘ನರೇಂದ್ರ ಮೋದಿಯವರು ತಕ್ಷಣ ಸಮ್ಮತಿಸಿದರು. ಈಗಾಗಲೇ ಬಿಜೆಪಿಯೊಳಗೆ ಕೆಲವು ಸ್ವಾಮೀಜಿಗಳ, ಸಾ್ವಗಳ ವೇಷದಲ್ಲಿರುವ ಸಂಸದರು ಕಂಡ ಕಂಡಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ನರೇಂದ್ರ ಮೋದಿಯವರ ಗಮನಕ್ಕೂ ಬಂದಿದೆ. ಭಾಷಣದ ಹೆಸರಿನಲ್ಲಿ, ಪತ್ರಿಕಾ ಹೇಳಿಕೆಯ ಹೆಸರಿನಲ್ಲಿ ಬಾಯಿಯಿಂದಲೂ ಮೂತ್ರ ವಿಸರ್ಜನೆ ಮಾಡುವ ಸಾಮರ್ಥ್ಯವನ್ನು ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇವರ ಈ ಸಾಮರ್ಥ್ಯ ಬಿಜೆಪಿಯ ಪರಿಸರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವುದರಿಂದ ಎಲ್ಲರೂ ಬಿಜೆಪಿ ಕಾಂಪೌಂಡ್‌ನೊಳಗೆ ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಈ ವಿಸರ್ಜನೆಯನ್ನೆಲ್ಲ ಸಂಗ್ರಹಿಸಿ ದೇಶದಲ್ಲಿರುವ ತೋಟ, ಗದ್ದೆಗಳಿಗೆ ವಿತರಿಸಿದರೆ ಗೊಬ್ಬರಕ್ಕೆ ಗೊಬ್ಬರವೂ ಆಯಿತು. ನಮ್ಮ ಫಸಲೂ ಜಾಸ್ತಿಯಾಗುತ್ತದೆ...’’
‘‘ಸಾರ್...ಹೀಗಾದಲ್ಲಿ ನರೇಂದ್ರ ಮೋದಿಯವರ ಶುಚಿತ್ವದ ಆಂದೋಲನದ ಗತಿ?’’ ಕಾಸಿ ಆತಂಕದಿಂದ ಕೇಳಿದ.
‘‘ಶುಚಿತ್ವ ಆಂದೋಲನ ಯಶಸ್ವಿಯಾಗಿ ನಡೆಯುತ್ತದೆ. ನಾವು ಪೂರೈಸಿದ ಮೂತ್ರಕ್ಕೆ ಬದಲಿಯಾಗಿ ಶುಚಿತ್ವಕ್ಕಾಗಿ ಬಿಡುಗಡೆ ಮಾಡಿದ ಹಣವನ್ನೆಲ್ಲ ಸಮಾನವಾಗಿ ಹಂಚಿಕೊಳ್ಳುತ್ತೇವೆ...ಹಾಗೆಯೇ ಈ ಗೊಬ್ಬರಕ್ಕೆ ‘ದೇಶಪ್ರೇಮಿ’ ಎಂದು ನಾಮಕರಣ ಮಾಡಿದ್ದೇವೆ...ನಮ್ಮ ಆಸಕ್ತಿಯನ್ನು ಕಂಡ ಅಮೆರಿಕದ ಅಧ್ಯಕ್ಷ ಒಬಾಮ ಅವರು ಕೂಡ ತಮ್ಮ ಅಮೂಲ್ಯ ಮೂತ್ರವನ್ನು ಕಳುಹಿಸಿಕೊಡುತ್ತೇನೆ...ಪ್ರತಿಯಾಗಿ ನಿಮ್ಮ ದೇಶದಲ್ಲಿ ವ್ಯರ್ಥವಾಗಿ ಬಿದ್ದಿರುವ ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ನಮಗೆ ಕಳುಹಿಸಿಕೊಡಿ ಎಂದಿದ್ದಾರೆ...ಈ ಒಪ್ಪಂದಕ್ಕೆ ಶೀಘ್ರ ಮೋದಿಯವರು ಸಹಿ ಹಾಕಲಿದ್ದಾರೆ...’’ ಇನ್ನೂ ಇಲ್ಲಿ ನಿಂತರೆ ಒಬಾಮನ ಮೂತ್ರಕ್ಕೆ ಬದಲಿಯಾಗಿ ತನ್ನನ್ನೇ ಕಳುಹಿಸಿಕೊಡಬಹುದು ಎಂದು ಕಾಸಿಗೆ ಭಯವಾಯಿತು. ‘‘ಸಾರ್ ಹೊರಟೆ...’’ ಎಂದ ಕಾಸಿ.
‘‘ನಿಲ್ರೀ...ಎಳೆನೀರು ಕುಡಿದುಕೊಂಡು ಹೋಗಿ. ನನ್ನದೇ ಮನೆಯ ತೋಟದ ಎಳೆನೀರು...ತುಂಬಾ ರುಚಿ ಯಾಗಿದೆ...ನಾನೇ ಗೊಬ್ಬರ ಹಾಕಿ ಸಾಕಿದ ಮರ...’’ ಎನ್ನುತ್ತಿದ್ದಂತೆಯೇ ಕಾಸಿಗೆ ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಓಡ ತೊಡಗಿದ. 
೧೦.೫.೨೦೧೫

Saturday, May 9, 2015

ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ...!

ಈ ಬುಡಬುಡಿಕೆ  ಮೇ 4, 2008 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಈ ಬಾರಿ ಪಿಯುಸಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಫೇಲಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ, ಪಾಲಕರ ಮೇಲೆ ವಿದ್ಯಾರ್ಥಿಗಳು ಸೇಡು ತೀರಿಸಿಕೊಂಡ ವರದಿಯನ್ನು ಓದಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಆತನಿಗೆ ಆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಒಮ್ಮೆ ನೋಡಬೇಕೆನ್ನಿಸಿತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯೊಂದು ಅದು ಹೇಗೋ ಪತ್ರಕರ್ತ ಎಂಜಲು ಕಾಸಿಯ ಕೈ ಸೇರಿತು. ವಿದ್ಯಾರ್ಥಿಯೊಬ್ಬ ಕೆಲವು ಪ್ರಶ್ನೆಗೆ ಉತ್ತರಿಸಿದ ರೀತಿ ಕುತೂಹಲಕರವಾಗಿದ್ದುದರಿಂದ ಅದನ್ನು ಇಲ್ಲಿ ನೀಡಲಾಗಿದೆ.
1. ‘ಕ್ರಿಕೆಟ್’ ಇದರ ಕುರಿತಂತೆ ಐದು ವಾಕ್ಯಗಳಿಗೆ ಮೀರದಂತೆ ಉತ್ತರ ಬರೆಯಿರಿ.
ಕ್ರಿಕೆಟ್ ಒಂದು ಆಕರ್ಷಣೀಯ ಆಟ. ಇದನ್ನು ಬಯಲಿನಲ್ಲಿ ಕ್ಯಾಬರೆ ನರ್ತಕಿಯರು ಆಡುತ್ತಾರೆ. ಅವರಿಗೆ ಚಿಯರ್‌ಗರ್ಲ್ಸ್ ಎಂದು ಕರೆಯಲಾಗುತ್ತದೆ. ಶಾರುಕ್ ಖಾನ್ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ವಿಜಯ್ ಮಲ್ಯ, ಪ್ರೀತಿ ಝಿಂಟಾ ಮೊದಲಾದವರು ಭಾರತದ ಉಳಿದ ಅತ್ಯುತ್ತಮ ಆಟಗಾರರು. ಈ ಆಟಗಾರರು ಪೆವಿಲಿಯನ್‌ನಲ್ಲಿ ಕುಳಿತು ಆಡುತ್ತಿರುವಾಗ ಅದನ್ನು ನೋಡಲೆಂದು ಸಾವಿರಾರು ಜನರು ನೆರೆಯುತ್ತಾರೆ. ವಿರಾಮದ ಸಂದರ್ಭದಲ್ಲಿ ಸಚಿನ್, ಗಂಗುಲಿ ಮೊದಲಾದವರು ಮೈದಾನದ ಮಧ್ಯೆ ಬಾಲ್, ಬ್ಯಾಟ್‌ಗಳ ಮೂಲಕ ಪ್ರೇಕ್ಷಕರಿಗೆ ಬೇಜಾರಾಗದಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಗೆ ಭಾರೀ ಹಣವನ್ನು ಕೊಟ್ಟು ಹರಾಜಿನಲ್ಲಿ ಕೊಂಡುಕೊಳ್ಳಲಾಗಿದೆ.
2. ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವೇನು? ಬೆಲೆಯೇರಿಕೆಯನ್ನು ಹೇಗೆ ತಡೆಯಬಹುದು?
ಇತ್ತೀಚೆಗೆ ಬಡವರು ಹೆಚ್ಚು ಹೆಚ್ಚು ಊಟ ಮಾಡಲು ತೊಡಗಿರುವುದೇ ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವಾಗಿದೆ. ಮೊದಲು ಬಡವರು ಎರಡು ದಿನಕ್ಕೊಮ್ಮೆ ಉಣ್ಣುತ್ತಿದ್ದರು. ಇದೀಗ ಅವರು ದಿನಕ್ಕೊಮ್ಮೆ ಉಣ್ಣುವುದಕ್ಕೆ ತೊಡಗಿದ್ದಾರೆ. ಅವರ ವರಮಾನ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದುದರಿಂದ ಬಡವರ ವರಮಾನ ಹೆಚ್ಚದಂತೆ ನೋಡಿಕೊಂಡರೆ ಬೆಲೆಯೇರಿಕೆಯನ್ನೂ ತಡೆಯಬಹುದಾಗಿದೆ. ಬಡವರು ಆದಷ್ಟು ಕಡಿಮೆ ಊಟ ಮಾಡುವಂತೆ ಅವರಿಗೆ ತಿಳಿ ಹೇಳಬೇಕು. ಉಳಿತಾಯವನ್ನು ಕಲಿಸಬೇಕು. ಕನಿಷ್ಠ ಅವರು ವಾರಕ್ಕೊಮ್ಮೆ ಊಟ ಮಾಡುವಂತಾದರೆ ಬೆಲೆಯಿಳಿಕೆಯಾಗಿ ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ಬರುತ್ತದೆ. ದೇಶ ಅಭಿವದ್ಧಿಯಾಗುತ್ತದೆ. ಅವರು ತಮ್ಮ ಹಣವನ್ನು ಆಹಾರ ಧಾನ್ಯಗಳಿಗೆ ವ್ಯಯ ಮಾಡದೆ, ಉಳಿತಾಯ ಮಾಡಿ ಅದರಿಂದ ನ್ಯಾನೋ ಕಾರುಗಳನ್ನು, ಕಂಪ್ಯೂಟರ್‌ಗಳನ್ನು ಕೊಂಡುಕೊಳ್ಳಬೇಕು. ಮೊಬೈಲ್‌ಗಳನ್ನು ಕೊಳ್ಳಬೇಕು. ಈ ಮೂಲಕ, ದೇಶದ ಮುಖ್ಯ ವಾಹಿನಿಯಲ್ಲಿ ಒಂದಾಗಬೇಕು.
2. ನಕ್ಸಲೀಯರ ಕುರಿತಂತೆ ಐದು ವಾಕ್ಯಗಳನ್ನು ಬರೆಯಿರಿ.
ಉತ್ತರ: ನಕ್ಸಲೀಯರು ಎನ್ನುವುದು ಕಾಡು ಪ್ರಾಣಿಗಳ ಹೆಸರು. ತಲೆಯಲ್ಲಿ ಎರಡು ಕೊಂಬು, ಭೀಕರ ಕೋರೆ ಹಲ್ಲುಗಳಿರುವ ಈ ಕಾಡು ಪ್ರಾಣಿಗಳು ಹುಲಿ, ಚಿರತೆ, ಕರಡಿಗಳಂತೆ ಕಾಡಿನಲ್ಲಿ ಹುಟ್ಟಿ ನಾಡಿದ ಅಮಾಯಕ ಜನರಿಗೆ ತೊಂದರೆ ಕೊಡುತ್ತದೆ. ಆದುದರಿಂದ ಈ ಪ್ರಾಣಿಗಳ ನಿಯಂತ್ರಣಕ್ಕೆ ಸರಕಾರ ಈಗಾಗಲೇ ಕೋಟಿಗಟ್ಟಲೆ ರೂಪಾಯಿಗಳನ್ನು ವೆಚ್ಚ ಮಾಡಿದೆ. ಆದರೂ ಇವುಗಳ ಸಂತಾನೋತ್ಪತ್ತಿ ಅಧಿಕವಾಗುತ್ತಾ ಹೋಗುತ್ತಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ನಕ್ಸಲೀಯ ಪ್ರಾಣಿಗಳು ಡೈನೋಸರ್ ಕಾಲಕ್ಕೆ ಸೇರಿದವುಗಳು ಎನ್ನಲಾಗಿದೆ. ‘ಜುರಾಸಿಕ್ ಪಾರ್ಕ್’ನಿಂದ ತಪ್ಪಿಸಿಕೊಂಡು ಬಂದ ಈ ಕ್ರೂರ ಪ್ರಾಣಿಗಳು ಕಾಡುಗಳನ್ನು ಸೇರಿರಬಹುದು ಎಂದು ಸರಕಾರ ಸಂಶಯ ವ್ಯಕ್ತಪಡಿಸಿದೆ. ಇವುಗಳು ಮಾಂಸಹಾರಿಗಳು. ಶ್ರೀಮಂತ ವ್ಯಕ್ತಿಗಳ ಮಾಂಸವೆಂದರೆ ಇವುಗಳಿಗೆ ಬಹಳ ಇಷ್ಟ. ತುಪ್ಪ, ಬೆಣ್ಣೆ ಮತ್ತು ಬಡವರ ರಕ್ತ ಕುಡಿದ ಈ ಶ್ರೀಮಂತ ವ್ಯಕ್ತಿಗಳ ಮಾಂಸ ತುಂಬಾ ರುಚಿಯಾಗಿರುತ್ತವೆ.
 ಒಮ್ಮೆ ಇದರ ರುಚಿ ಹಿಡಿದ ಈ ಪ್ರಾಣಿಗಳು ಮತ್ತೆ ಮತ್ತೆ ನಾಡಿಗೆ ಬಂದು ಅವರನ್ನು ಎಳೆದುಕೊಂಡು ಹೋಗುತ್ತದೆ ಎನ್ನಲಾಗಿದೆ. ನಾಡಿನಲ್ಲಿರುವ ‘ಬಡವರು’ ಎನ್ನುವ ಕೆಲ ಬಡಕಲು ಪ್ರಾಣಿಗಳ ವರ್ಣಸಂಕರವಾಗಿಯೂ ಈ ನಕ್ಸಲ್ ಪ್ರಾಣಿಗಳು ಹುಟ್ಟಿರಬಹುದು ಎಂದು ಸರಕಾರ ನಂಬಿದೆ. ಇದಕ್ಕಾಗಿ ಈಗಾಗಲೇ ವಿಜ್ಞಾನಿಗಳನ್ನು ಅಧ್ಯಯನಕ್ಕಾಗಿ ನೇಮಿಸಿ ಅದಕ್ಕೊಂದು ಪ್ರಾಧಿಕಾರವನ್ನೂ ರಚಿಸಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಾಧ್ಯವಾದಷ್ಟು ಬಡವರನ್ನು ಬಂಧಿಸಿ ಗುಂಡಿಟ್ಟುಕೊಳ್ಳುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ.
4. ‘ವಿಶೇಷ ಆರ್ಥಿಕ ವಲಯ’ ದೇಶದ ಅಭಿವದ್ಧಿಗೆ ನೀಡುವ ಕಾಣಿಕೆಗಳು ಯಾವುವು?
 ‘ವಿಶೇಷ ಆರ್ಥಿಕ ವಲಯ’ ದೇಶದ ಬಡತನ, ರೈತರ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ. ರೈತನಿಗೆ ಬೀಜಕೊಳ್ಳುವ, ಗೊಬ್ಬರ ಹಾಕುವ, ಗದ್ದೆಗಳಲ್ಲಿ ದುಡಿಯುವ ಶ್ರಮವನ್ನು ಇಲ್ಲವಾಗಿಸುತ್ತದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ಕಿತ್ತುಕೊಂಡ ಮೇಲೆ ರೈತ ಗೊಬ್ಬರ, ಬೀಜಗಳನ್ನು ಕೊಂಡುಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಈ ಮೂಲಕ ಈ ದೇಶದ ರೈತರ ಬಹುದೊಡ್ಡ ಸಮಸ್ಯೆ ಇಲ್ಲವಾಗುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಸೆಝ್ ವಿರುದ್ಧ ಪ್ರತಿಭಟನೆ ಮಾಡಿದರೆ ಸರಕಾರವೇ ರೈತರನ್ನು ಗುಂಡು ಹಾಕಿ ಕೊಲ್ಲುತ್ತದೆ. ಆದುದರಿಂದ ರೈತರ ಆತ್ಮಹತ್ಯೆ ಸಮಸ್ಯೆ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆತ್ಮಹತ್ಯೆಗೆ ಬಳಸುವ ವಿಷಕ್ಕೆ ತೆರಬೇಕಾದ ಹಣ ಉಳಿತಾಯವಾಗಿ ರೈತ ಕುಟುಂಬ ಶ್ರೀಮಂತವಾಗುತ್ತದೆ. ಆಹಾರದ ಬೆಲೆ ಅಧಿಕವಾಗಿ ಬಡವರು ಊಟ ಮಾಡದೇ ಸಾಯಬೇಕಾಗುತ್ತದೆ. ಈ ಮೂಲಕ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗುತ್ತದೆ.

5. ಸಂವಿಧಾನದ ಕುರಿತಂತೆ ಕೆಲವು ವಾಕ್ಯಗಳನ್ನು ಬರೆಯಿರಿ? ಈ ದೇಶದಲ್ಲಿ ಹಲವು ಬಾರಿ ಕೊಲೆಗೀಡಾಗಿರುವ ವ್ಯಕ್ತಿಯ ಹೆಸರು ಸಂವಿಧಾನ. ಈತನಿಗೆ ಇರಿದರೆ, ತದುಕಿದರೆ ಅದು ಅಪರಾಧವಾಗುವುದಿಲ್ಲ. ಆದುದರಿಂದ ಯಾರು ಬೇಕಾದರೂ ಈತನ ಮೇಲೆ ಹಲ್ಲೆ ನಡೆಸಬಹುದಾಗಿದೆ. ಇವನನ್ನು ಮಾರಾಣಾಂತಿಕವಾಗಿ ಇರಿದವರನ್ನು ಈ ದೇಶದ ಉಪಪ್ರಧಾನಿಯಾಗಿ ಮಾಡಿ ಗೌರವಿಸಲಾಗುತ್ತದೆ. ಅಥವಾ ಯಾವುದಾದರೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಈತನ ತಾತನನ್ನು ಗುಂಡಿಟ್ಟು ಕೊಲ್ಲಲಾಯಿತು. ಈತನ ಅಪ್ಪನನ್ನು ಇನ್ನೊಂದು ಧರ್ಮಕ್ಕೆ ಓಡಿಸಲಾಯಿತು. ಈತನ ಮಕ್ಕಳನ್ನು ಇದೀಗ ಹಂತಹಂತವಾಗಿ ಕೊಂದು ಹಾಕುವ ಯೋಜನೆಯೊಂದನ್ನು ರೂಪಿಸಲಾಗಿದೆ.
6. ‘ಗೋವಿನ ಹಾಡು’ ಪದ್ಯದ ನೀತಿಯನ್ನು ಬರೆಯಿರಿ.
 ಗೋವಿನ ಹಾಡು ಪದ್ಯದಲ್ಲಿ ಪುಣ್ಯಕೋಟಿಯ ಒಂದು ಬ್ರಾಹ್ಮಣ ಜಾತಿಯ ಹಸುವಾಗಿರುತ್ತದೆ. ಅದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ದಲಿತ ಜಾತಿಗೆ ಸೇರಿದ ಹುಲಿಯೊಂದು ಎದುರಾಗುತ್ತದೆ. ಹುಲ್ಲು ತಿಂದು ಮಾರ್ಯದೆಯಲ್ಲಿ ಬದುಕಬೇಕಾದ ಹುಲಿ ಈ ಹಸುವನ್ನು ತಿನ್ನುವ ದುರಾಲೋಚನೆಯನ್ನು ಮಾಡುತ್ತದೆ. ದುರಾಲೋಚನೆಗಾಗಿ ಅದು ಸಾವನ್ನಪ್ಪಬೇಕಾಗುತ್ತದೆ. ಬ್ರಾಹ್ಮಣರನ್ನು ಕಾಡಿಸುವ ಎಲ್ಲರ ಸ್ಥಿತಿಯೂ ಇದೇ ಆಗಿರುತ್ತದೆ ಎನ್ನುವುದೇ ಈ ಕವಿತೆಯ ಪಾಠವಾಗಿದೆ.
ಹುಲಿ ಮಾಂಸವನ್ನು ತಿನ್ನುವುದು ತಪ್ಪು. ಅದು ಹುಲ್ಲನ್ನು ತಿನ್ನಬೇಕು. ಒಂದು ವೇಳೆ ಹಸುವನ್ನು ತಿನ್ನುವ ಯೋಚನೆ ಮಾಡಿದರೂ ಅದಕ್ಕಾಗಿ ತನ್ನ ಪ್ರಾಣವನ್ನು ತೆರಬೇಕು. ದನ ಹುಲಿಯ ಪ್ರಾಣವನ್ನು ತೆಗೆದರೆ ಅದರಲ್ಲಿ ತಪ್ಪೇನೂ ಇಲ್ಲ. ಇದೇ ಗೋವಿನ ಹಾಡು ಪದ್ಯದ ನೀತಿ ಪಾಠ.
ಎಲ್ಲವನ್ನು ಓದಿದ ಎಂಜಲು ಕಾಸಿಗೆ ಆಶ್ಚರ್ಯವಾಯಿತು. ‘ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ. ಮತ್ಯಾಕೆ ಈ ವಿದ್ಯಾರ್ಥಿಗಳು ಫೇಲಾದರು ಎಂದು ತಲೆ ತುರಿಸತೊಡಗಿದ.
(ಮೇ 4, 2008 ರವಿವಾರ)