Saturday, July 25, 2015

ಎಂಜಲು ಕಾಸಿಗೆ ಸಿಕ್ಕಿತು ರಾಜ್ಯೋತ್ಸವ ಪ್ರಶಸ್ತಿ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ವ್ಯಾಪಕ ಹಸ್ತಕ್ಷೇಪ ನಡೆದ ಸಂದರ್ಭದಲ್ಲಿ ಬರೆದ ಬುಡಬುಡಿಕೆ. ವಾರ್ತಾಭಾರತಿ ದೈನಿಕದ  ಅಕ್ಟೋಬರ್ -31-2010 ರ ಸಂಚಿಕೆಯಲ್ಲಿ ಪ್ರಕಟವಾಗಿದೆ . 

ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಯಿತು. ಎಂಜಲು ಕಾಸಿ ಹಿರಿ ಹಿರಿ ಹಿಗ್ಗಿದ. ಯಾಕೆಂದರೆ ಈ ಬಾರಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಎಂಜಲು ಕಾಸಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪತ್ರಕರ್ತನಾಗಿ ಎಂಜಲು ಕಾಸಿ ರಾಜಕಾರಣಿಗಳಿಗೆ ಸಲ್ಲಿಸಿದ ಸೇವೆ ಮತ್ತು ಜನರನ್ನು ರಂಜಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಉಳಿದಂತೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು:
ಎಚ್. ಡಿ. ಕುಮಾರಸ್ವಾಮಿ: ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬಿತ್ತಿ, ಇಂದು ಅದರ ಫಲವನ್ನು ರಾಜ್ಯದ ಜನರು ಉಣ್ಣುವಂತೆ ಮಾಡಿದ ಅಗ್ರಮಾನ್ಯ ಕಷಿಕ ಮಣ್ಣಿನ ಮೊಮ್ಮಗ ಕುಮಾರಸ್ವಾಮಿಯವರಿಗೆ ಈ ಬಾರಿ ಕೃಷಿ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಎಸ್. ಎಲ್. ಭೈರಪ್ಪ: ಸಾಹಿತ್ಯ ಕೃಷಿಯಲ್ಲಿ ದ್ವೇಷದ ಬೆಳೆಯನ್ನು ಬೆಳೆದು ಅದನ್ನು ಇಂದು ರಾಜ್ಯಾದ್ಯಂತ ಜನರಿಗೆ ಹಂಚಿರುವ ಸಾಧನೆಗಾಗಿ ಕಷಿ ಕ್ಷೇತ್ರದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಬಂಗಾರಪ್ಪ: ರಾಜಕೀಯ ಕೃಷಿ ಕ್ಷೇತ್ರದಲ್ಲಿ ವಿವಿಧ ಪಕ್ಷಗಳನ್ನು ಪ್ರಾಯೋಗಿಕವಾಗಿ ಬೆಳೆದು, ಅದರ ಫಲವನ್ನು ತಾನೊಬ್ಬನೇ ಉಂಡು, ಇಂದು ನಿವತ್ತರಾಗಿರುವ ಮಾಜಿ ರೈತ ಬಂಗಾರಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಬಿಬಿಎಂಪಿಯ ಅಧಿಕಾರಿಗಳಿಗೆ: ರಾಜ್ಯಾದಾದ್ಯಂತ ಕೊಳೆಗೇರಿ ಗಟಾರಗಳಲ್ಲಿ, ಕುಡಿಯುವ ನೀರುಗಳಲ್ಲಿ ವಿವಿಧ ರೀತಿಯಲ್ಲಿ ಸೊಳ್ಳೆಗಳನ್ನು, ಕ್ರಿಮಿಗಳನ್ನು ಸಾಕಿ ಪೋಷಿಸಿ, ಅದನ್ನು ಮನೆ ಮನೆಗೆ ಹಂಚಿದ್ದಕ್ಕಾಗಿ.
ರಾಜ್ಯದ ಎಲ್ಲಾ ಬ್ಯಾಂಕ್ ಮತ್ತು ಫೈನಾನ್ಸ್‌ಗಳಿಗೆ: ರೈತರ ಆತ್ಮಹತ್ಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಕ್ಕಾಗಿ.
ರೇಣುಕಾಚಾರ್ಯ: ಭಿನ್ನಮತಗಳನ್ನು ಬಿತ್ತಿ, ಅದನ್ನು ರಾಜ್ಯದ ಎಲ್ಲಾ ಪಕ್ಷಗಳಿಗೆ ಹಂಚಿದ ಸಾಧನೆಗಾಗಿ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶಸ್ತಿ:
ಜನಾರ್ದನ ರೆಡ್ಡಿ: ಹತ್ತು ಹಲವು ಆಪರೇಷನ್‌ಗಳನ್ನು ಮಾಡಿ ಬಿಜೆಪಿಯೆಂಬ ರೋಗಿಯನ್ನು ಉಳಿಸಿದ ಸಾಧನೆಗಾಗಿ.
ಸಮಾಜ ಸೇವೆ:
ಆರ್. ವಿ. ದೇಶಪಾಂಡೆ: ರಾಜ್ಯಕ್ಕೆ ಹೆಣಭಾರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ ಸಾಧನೆಗಾಗಿ.
ಮಾಜಿ ಸಚಿವ ಸುಧಾಕರ್: ಭಿಕ್ಷುಕರ ಪುನರ್ವಸತಿ ಶಿಬಿರದಲ್ಲಿ ಮಾರಕ ರೋಗ ಹಬ್ಬಿಸಿ ಅಲ್ಲಿನ ಭಿಕ್ಷುಕರನ್ನು ಸಾಮೂಹಿಕವಾಗಿ ಸಾಯಿಸಿ, ರಾಜ್ಯದಲ್ಲಿ ಭಿಕ್ಷುಕರ ಕಾಟವನ್ನು ಕಮ್ಮಿ ಮಾಡಿದ್ದಕ್ಕಾಗಿ.
ಸಂಶೋಧಕ ಚಿದಾನಂದಮೂರ್ತಿ: ಹೊಸದಾಗಿ ಯಾವುದೇ ಸಂಶೋಧನೆ ಮಾಡದೇ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದಕ್ಕಾಗಿ.
ಎಲ್ಲ ದಲಿತ ಸಂಘಟನೆಗಳಿಗೆ: ದಲಿತರ ಒಗ್ಗಟ್ಟನ್ನು ಮುರಿದು, ಅವರನ್ನು ಮತ್ತೆ ಮನುವಿನ ಬಾಯಿಗೆ ತಳ್ಳಿದ್ದಕ್ಕಾಗಿ. ಈ ಮೂಲಕ ದಲಿತರ ನಿವಾರಣೆಗೆ ಕೊಡುಗೆ ನೀಡಿದ್ದಕ್ಕಾಗಿ.
ಸಾಂಸ್ಕೃತಿಕ ಕ್ಷೇತ್ರ:
ಸಿ. ಎಂ. ಇಬ್ರಾಹೀಂ: ರಾಜಕೀಯದಲ್ಲಿ ಜೋಕರ್ ಪಾತ್ರವನ್ನು ನಿರ್ವಹಿಸಿ ಹಾಸ್ಯದ ಹೊನಲನ್ನು ಹರಿಸಿ, ಜನರನ್ನು ರಂಜಿಸಿದ್ದಕ್ಕಾಗಿ.
ಸಿದ್ದರಾಮಯ್ಯ ಮತ್ತು ಮೋಟಮ್ಮ: ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಅಮೋಘವಾಗಿ ನರ್ತಿಸಿದ್ದಕ್ಕಾಗಿ.
ಪ್ರಮೋದ್ ಮುತಾಲಿಕ್: ದರೋಡೆ, ಹಲ್ಲೆ, ಕೊಲೆ ಇತ್ಯಾದಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು, ಅದಕ್ಕಾಗಿ ಹಗಲು ರಾತ್ರಿ ದುಡಿದದ್ದಕ್ಕಾಗಿ. ಹಾಗೂ ಮುಖಕ್ಕೆ ಮಸಿ ಬಳಿಸಿಕೊಂಡದ್ದಕ್ಕಾಗಿ.
ನೀರಾವರಿ ಕ್ಷೇತ್ರ:
ಮುಖ್ಯಮಂತ್ರಿ ಯಡಿಯೂರಪ್ಪ: ಸದಾ ಅಳುತ್ತಾ ರಾಜ್ಯದ ಹಳ್ಳ ಕೊಳ್ಳಗಳನ್ನು ತುಂಬಿಸಿದ್ದಕ್ಕಾಗಿ.
ಎಲ್ಲ ಟಿ. ವಿ. ಧಾರಾವಾಹಿಗಳಿಗೆ: ಸ್ತ್ರೀ ಪ್ರಧಾನ ಧಾರಾವಾಹಿಗಳನ್ನು ಮಾಡಿ, ಎಲ್ಲ ಮಹಿಳೆಯರ ಕಣ್ಣಲ್ಲಿ ಸದಾ ನೀರು ತುಂಬಿ ತುಳುಕುವಂತೆ ಮಾಡಿದುದಕ್ಕಾಗಿ. ರಾಜ್ಯದ ನೀರಿನ ಬರವನ್ನು ಕಡಿಮೆ ಮಾಡಿದುದಕ್ಕಾಗಿ.
ಸಾಹಿತ್ಯಕ್ಷೇತ್ರ:
ವೀರಪ್ಪ ಮೊಯ್ಲಿ: ಇತ್ತೀಚೆಗೆ ಯಾವುದೇ ಕಾದಂಬರಿಗಳನ್ನು ಬರೆಯದೇ ದಿಲ್ಲಿ ರಾಜಕೀಯದಲ್ಲಿ ಮಗ್ನರಾಗಿರುವುದಕ್ಕಾಗಿ.
ವಿಜ್ಞಾನ ಕ್ಷೇತ್ರ:
ಜೋತಿಷ್ಯ, ಪುನರ್ಜನ್ಮ, ಭೂತ, ಪಿಶಾಚಿ ಮೊದಲಾದ ವೈಜ್ಞಾನಿಕ ಸಂಗತಿಗಳನ್ನು ಪಸರಿಸುತ್ತಿರುವುದಕ್ಕಾಗಿ ಎಲ್ಲ ಕನ್ನಡ ಚಾನೆಲ್‌ಗಳಿಗೆ.
ಮಾಟ ಮಂತ್ರಗಳನ್ನು ಮಾಡಿ ಈ ರಾಜ್ಯದ ಕ್ಷೇಮವನ್ನು ಕಾಪಾಡಿದ ಎಲ್ಲ ಮಂತ್ರವಾದಿಗಳಿಗೆ.
ರಾಜಕೀಯ ಕ್ಷೇತ್ರ:
ಕಟ್ಟಾ ಸುಬ್ರಹ್ಮಣ್ಯ ನಾಯ್ಡು: ಹಲವು ಭ್ರಷ್ಟಾಚಾರಗಳನ್ನು ಮಾಡಿಯೂ ಇನ್ನೂ ಸಚಿವ ಸಂಪುಟದಲ್ಲಿ ಉಳಿದು ರಾಜಕಾರಣಿಗಳಿಗೆ ಮಾದರಿಯಾದುದಕ್ಕೆ.
ಬಾಬಾಬುಡಾನ್‌ಗಿರಿಯ ಸೂಫಿ ಹಾಗೂ ದತ್ತ್ತಾತ್ರೇಯರಿಗೆ: ರಾಜಕೀಯದಲ್ಲಿ ಕೆಲವು ರಾಜಕಾರಣಿಗಳಿಗೆ ರಾಜಕೀಯ ಭವಿಷ್ಯವನ್ನು ರೂಪಿಸಿದ್ದಕ್ಕಾಗಿ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮದ ನೇತತ್ವವನ್ನು ವಹಿಸಿ ಇನ್ನಷ್ಟು ರಾಜಕಾರಣಿಗಳ ಹುಟ್ಟಿಗೆ ಕಾರಣವಾಗಲಿರುವುದಕ್ಕಾಗಿ.
ಉದ್ಯಮ ಕ್ಷೇತ್ರ:
ಎಲ್ಲ ಶಾಸಕರಿಗೆ: ರಾಜಕೀಯ ಕ್ಷೇತ್ರದಲ್ಲಿ ಹಲವು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಮಾಡಿ, ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದುದಕ್ಕೆ.
ಸಿನಿಮಾ ಕ್ಷೇತ್ರ:
ನಿರ್ದೇಶಕ ಸಾಯಿ ಪ್ರಕಾಶ್: ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕಾಗಿ.
ದೇವೇಗೌಡ: ಅತ್ಯುತ್ತಮವಾಗಿ ವಿವಿಧ ರಾಜಕೀಯ ಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ. ಹಿರಿಯ ಪೋಷಕ ನಟ ಎಂಬ ಕಾರಣಕ್ಕಾಗಿ.
ಪ್ರೇಕ್ಷಕ ವರ್ಗಕ್ಕೆ: ಕಳಪೆ ಕನ್ನಡ ಚಿತ್ರಗಳನ್ನು ನೋಡದೇ ಇದ್ದುದಕ್ಕೆ ಹಾಗೂ ಪೋಷಿಸದೇ ಇದ್ದುದಕ್ಕೆ.
ರಾಘವೇಂದ್ರ ರಾಜಕುಮಾರ್: ಚಿತ್ರಗಳಲ್ಲಿ ನಟಿಸದೇ ಇದ್ದುದಕ್ಕೆ.
ಯಕ್ಷಗಾನ ಕ್ಷೇತ್ರ:
ಕುಂಬಳೆ ಸುಂದರರಾವ್: ಸುರತ್ಕಲ್ ಗಲಭೆಯಲ್ಲಿ ರಾಕ್ಷಸ ವೇಷವನ್ನು ಧರಿಸಿ, ತಮ್ಮ ಅಪಾರ ಕಲಾ ಪ್ರೌಢಿಮೆಯನ್ನು ಮೆರೆದುದಕ್ಕೆ. ಉಳಿದ ಮರಿ ರಾಕ್ಷಸ ವೇಷಧಾರಿಗಳಿಗೆ ಮಾರ್ಗದರ್ಶಿಯಾದುದಕ್ಕೆ.
ಅಕ್ಟೋಬರ್ -31-2010

Thursday, July 23, 2015

ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿ!

ಯುಪಿಎ ಸರಕಾರ ದೇಶವನ್ನು ಆಳುತ್ತಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಬರೆದ ಬುಡಬುಡಿಕೆ. ಜುಲೈ -11-2010 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗದ್ದೆಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರು. ಪತ್ನಿ ಮನಮೋಹಿನಿ ತಂಬಿಗೆ ತುಂಬಾ ಕೋಕಾಕೋಲಾ ಪಾನೀಯ ಮತ್ತು ನೆಂಜಿಕೊಳ್ಳುವುದಕ್ಕೆ ಪಾಪ್‌ಕಾರ್ನ್ ತಂದು ಕೊಟ್ಟರು.
ಮನಮೋಹಿನಿ ವಯ್ಯರದಿಂದ ಕೇಳಿದಳು ‘‘ಈ ಸರ್ತಿ ಯಾವ ಬೆಳೆ ಹಾಕಿದ್ದೀರಿ....’’
 ‘‘ರಾಗಿ, ಗೋದಿ, ಟೋಮೆಟೋ, ಆಲುಗಡ್ಡೇ ಬೆಳೆದು ಸಾಕಾಯ್ತು. ಅದಕ್ಕೆ ಕೆಳಗಿನ ಗದ್ದೆಯಲ್ಲಿ ಬ್ಯಾಟ್‌ಗಳನ್ನು ನೆಟ್ಟಿದ್ದೇನೆ. ಮೇಲಿನ ಗದ್ದೆಯ ತುಂಬಾ ರನ್‌ಗಳ ಬೀಜವನ್ನು ಬಿತ್ತಿದ್ದೇನೆ...ಈ ಬಾರಿ ಒಳ್ಳೆಯ ಬೆಳೆ ಬರಬಹುದು ಎನ್ನುವುದು. ನಿರೀಕ್ಷೆ...’’ ಶರದ್ ಪವಾರ್ ಟವೆಲ್‌ನಿಂದ ಮುಖ ಒರೆಸಿ ಕೊಳ್ಳುತ್ತಾ ನುಡಿದರು.
ಮನಮೋಹಿನಿ ಕೇಳಿದಳು ‘‘ಬೆಳೆ ಬೆಳೆಸುವುದಕ್ಕೆ ಗೊಬ್ಬರಕ್ಕೇನು ಮಾಡ್ತೀರಿ...’’
ಪವಾರ್ ನುಡಿದರು.‘‘ಈಗಾಗಲೇ ಪೆಪ್ಸಿ, ಕೋಲಾ ಕಂಪೆನಿಗಳೊಂದಿಗೆ ಮಾತನಾಡಿದ್ದೇನೆ. ಒಂದೇ ತಿಂಗಳಲ್ಲಿ ಒಳ್ಳೆಯ ಬ್ಯಾಟ್‌ಗಳ ಫಸಲುಗಳನ್ನು ನೀಡುವ ಹಾಗೆ ಉತ್ತಮ ಗೊಬ್ಬರಗಳನ್ನು ಅವರು ಒದಗಿಸುತ್ತಾರಂತೆ....’’
‘‘ಹೊಲ ಉಳುವುದಕ್ಕೆ ಎತ್ತುಗಳು ಬೇಕಲ್ಲ...ಏನು ಮಾಡುತ್ತೀರಿ...’’ ಮನಮೋಹಿನಿ ಕೇಳಿದಳು.
ಶರದ್ ಪವಾರ್ ಯಾವುದೇ ಆತಂಕವಿಲ್ಲದೆ ನುಡಿದರು ‘‘ಅದಕ್ಕೇನಾಗಬೇಕು. ಎತ್ತುಗಳ ಬದಲಿಗೆ ದೇಶದ ರೈತರನ್ನೇ ಹೂಡಿ ಗದ್ದೆ ಉತ್ತರೆ ಆಯಿತು. ಬೇಕಾದಷ್ಟು ರೈತರು ಇನ್ನೂ ಆತ್ಮಹತ್ಯೆ ಮಾಡದೇ ಉಳಿದಿದ್ದಾರೆ. ಅವರನ್ನು ನೊಗಕ್ಕೆ ಕಟ್ಟಿ ಚಾಟಿಯಿಂದ ಎರಡು ಬಾರಿಸಿದರೆ, ಸಂಜೆಯೊಳಗೆ ಇಡೀ ಗದ್ದೆಯನ್ನು ಅಚ್ಚುಕಟ್ಟಾಗಿ ಉತ್ತು ಕೊಡುತ್ತಾರೆ...’’ ತನ್ನ ಗಂಡನ ಜಾಣತನಕ್ಕೆ ಮನಮೋಹನಿಗೆ ಸಂತೋಷ ಉಕ್ಕಿ ಬಂದು ಜಾನಪದ ಗೀತೆಯನ್ನು ಹಾಡುತ್ತಾ... ರಾಗಿ ಬೀಸುವ ಕಲ್ಲಿಗೆ ಒಂದಿಷ್ಟು ರನ್ನುಗಳನ್ನು ಹಾಕಿ ಬೀಸತೊಡಗಿದಳು...
‘‘ಮುಂಜಾನೆ ಎದ್ದು ಯಾರ್ಯಾರ ನೆನೆಯಲಿ
ತೆಂಡೂಲ್ಕರ ನಿನ್ನ ನೆನೆದೇನಾ! ತೆಂಡೂಲ್ಕರಾ ನಿನ್ನ
ನೆನೆದಾನ ನನ್ನೆಜಮಾನ ಐಸಿಸಿ ಅಧ್ಯಕ್ಷ ಆದಾನ...’’
ಎನ್ನುತ್ತಾ ಒರಳು ಕಲ್ಲಿಗೆ ಒಂದಿಷ್ಟು ಸಿಕ್ಸರ್‌ಗಳನ್ನು, ಫೋರ್‌ಗಳನ್ನು ಹಾಕಿ ಒನಕೆಯಿಂದ ಕುಟ್ಟುತ್ತಾ ಹಾಡತೊಡಗಿದಳು...
‘‘ಇವನೇ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು...
ಈಗ ಮಾತ್ರ ಆಲದ ಮರದಲ್ಲಿ ನೇಣು ಹಾಕಿ ಮಡಿವನು...’’ ಹೀಗೆ ಜಾನಪದ ಗೀತೆಯನ್ನು ಹಾಡುತ್ತಾ ಅಡುಗೆಗೆ ತಯಾರು ಮಾಡಿದಳು.
ಹಿತ್ತಲಿಗೆ ಹೋಗಿ ಬೆಳೆಸಿದ್ದ ಬಗೆ ಬಗೆಯ ತರಕಾರಿಗಳನ್ನು ನೋಡಿದಳು. ಹಸನಾಗಿ ಬೆಳೆದ ಒಂದೆರಡು ಬೌಂಡರಿಗಳನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದು ಅಡುಗೆಗೆ ಸಾಂಬಾರು ಮಾಡಳು ಹೊರಟಳು. ಗಂಡ ಗದ್ದೆಯಲ್ಲಿ ದುಡಿದು ಬಂದಿದ್ದಾನೆ. ಆತನಿಗೆ ಬಿಸಿ ಬಿಸಿ ಅನ್ನ, ಸಾಂಬಾರು ನೀಡಬೇಕಲ್ಲ. ಅದಕ್ಕಾಗಿ ಬೌಂಡರಿಯನ್ನು ಚೆನ್ನಾಗಿ ಹಚ್ಚಿ ಅದನ್ನು ಮಡಕೆಗೆ ಹಾಕಿದಳು. ಪಲ್ಯಕ್ಕೆ ಏನು ಮಾಡುವುದು? ಎಂದು ಯೋಚಿಸಿದಳು. ಆಗಷ್ಟೇ ಮಾರುಕಟ್ಟೆಯಿಂದ ಕೊಂಡು ತಂದಿದ್ದ ಒಂದಿಷ್ಟು ಸ್ಪಿನ್ನರ್‌ಗಳಿದ್ದವು. ಅವುಗಳನ್ನು ಹಚ್ಚಿ, ಪಲ್ಯ ಮಾಡಿ ಬಡಿಸುವುದು ಎಂದು ಮನಮೋಹಿನಿ ಯೋಚಿಸಿದಳು. ಅಂತೂ ತುಸು ಹೊತ್ತಲ್ಲೇ, ರನ್ನುಗಳಿಂದ ಮಾಡಿದ ಬಿಸಿ ಬಿಸಿ ಅನ್ನ ಸಿದ್ಧವಾಯಿತು. ಬೌಂಡರಿಗಳಿಂದ ಮಾಡಿದ ಸಾಂಬಾರ್ ಮತ್ತು ಸ್ಪಿನ್ನರ್‌ಗಳಿಂದ ಮಾಡಿದ ಪಲ್ಯದ ಘಮಘಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ, ಶರದ್ ಪವಾರ್ ಊಟಕ್ಕೆ ಅಣಿಯಾದರು.
ಗಂಡ ಊಟಕ್ಕೆ ಕುಳಿತಾಗ ಪತ್ನಿ ಮನಮೋಹಿನಿ ಮೆಲ್ಲ ಮಾತಿಗೆಳೆದಳು ‘‘ಮನೆಯಲ್ಲಿ ರನ್‌ಗಳ ಸಂಗ್ರಹ ಮುಗಿಯುತ್ತಾ ಬಂದಿದೆ...ಪೇಟೆಯಲ್ಲಿ ಒಳ್ಳೆಯ ಕ್ವಾಲಿಟಿಯ ರನ್‌ಗಳಿದ್ದರೆ ಎರಡು ಮುಡಿ ತೆಗೆದುಕೊಂಡು ಬನ್ನಿ...’’
  ಘಮಘಮಿಸುವ ರನ್‌ಗಳನ್ನು ಉಣ್ಣುತ್ತಾ ಪವಾರ್ ನುಡಿದರು ‘‘ನೋಡು...ಕೃಷಿ ಸಚಿವರ ಮನೆಯಲ್ಲೇ ಊಟಕ್ಕೆ ರನ್‌ಗಳಿಲ್ಲ ಎಂದರೆ ದೇಶ ನಕ್ಕೀತು. ಸಚಿನ್ ತೆಂಡೂಲ್ಕರ್ ಕೈಯಲ್ಲಿ ಹೇಳಿದ್ದೇನೆ....ಅವನು ಈಗಾಗಲೇ ಸಂಗ್ರಹಿಸಿಟ್ಟಿರುವ ರನ್‌ಗಳಿಂದ ಒಂದು ಹತ್ತು ಮುಡಿ ರನ್‌ಗಳನ್ನು ಕಳುಹಿಸುತ್ತಾನಂತೆ... ಹಾಗೆಯೇ ಪದಾರ್ಥಕ್ಕೆ, ಗೊಜ್ಜಿಗೆ ಒಂದಿಷ್ಟು ಸ್ಪಿನ್ನುಗಳನ್ನು, ಗೂಗ್ಲಿಗಳನ್ನು ಕಳುಹಿಸುವುದಕ್ಕೆ ಕುಂಬ್ಳೆ, ಪಠಾಣ್‌ಗಳ ಕೈಯಲ್ಲಿ ಹೇಳಿದ್ದೇನೆ...ಅವರು ಕಳುಹಿಸಬಹುದು....’’
ಅಷ್ಟರಲ್ಲಿ ತಟ್ಟನೆ ನೆನಪಾಗಿ ಮನಮೋಹಿನಿ ನುಡಿದಳು ‘‘ಎಲ್ಲಾದರೂ ಸಿಕ್ಕಿದರೆ ಮಿಡಿ ಸಿಕ್ಸರ್‌ಗಳು ಸಿಕ್ಕಿದರೆ ತನ್ನಿ...ಉಪ್ಪಿನಕಾಯಿ ಹಾಕುವುದಕ್ಕೆ ಆದೀತು...ರನ್‌ಗಳ ಗಂಜಿ ಮಾಡಿದರೆ ಅದನ್ನು ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿಯ ಜೊತೆ ಉಣ್ಣುವುದಕ್ಕೆ ಭಾರೀ ಚೆನ್ನಾಗಿರುತ್ತದೆ...ಸಾಂಬಾರ್, ಪಲ್ಯ ಯಾವುದೂ ಬೇಕಾಗಿಲ್ಲ...ಈ ಉಪ್ಪಿನ ಕಾಯಿ ಇದ್ದರೆ...’’
ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿ! ಶರದ್ ಪವಾರ್ ಅವರ ಬಾಯಿಯಲ್ಲಿ ನೀರೂರಿತು ‘‘ಸರಿ..ಸರಿ...ಹರ್ಬಜನ್ ಸಿಂಗ್‌ಗೆ ಹೇಳುತ್ತೇನೆ...ಅವನತ್ರ ಒಂದಿಷ್ಟು ಸಿಕ್ಸರ್‌ಗಳು ಸ್ಟಾಕಿದೆ ಅಂತ ಕೇಳಿದ್ದೇನೆ.... ಕಳುಹಿಸಬಹುದು...’’
ಮನಮೋಹಿನಿ, ಮನೆಯ ವಿಷಯ ಬಿಟ್ಟು ದೇಶದ ವಿಷಯ ಮಾತನಾಡತೊಡಗಿದಳು ‘‘ಹಗಳಿರುಳೂ ನೀವು ಗದ್ದೆಯಲ್ಲಿ ದುಡಿಯುತ್ತೀರಿ. ಮನೆಯ ಹಿತ್ತಲಿನ ಗದ್ದೆಯಲ್ಲಿ ಬ್ಯಾಟ್‌ಗಳ ನಾಟಿ ಚೆನ್ನಾಗಿ ಆಗಿದೆ. ರನ್‌ಗಳು ಈಗಾಗಲೇ ಮೊಳಕೆ ಬರುವುದಕ್ಕೆ ಆರಂಭಿಸಿವೆ. ಆದರೂ ನೀವು ಕೃಷಿ ಸಚಿವ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಊರವರು ಆಡಿಕೊಳ್ಳುತ್ತಿದ್ದಾರಲ್ಲ....’’
ಶರದ್ ಪವಾರ್ ಒಮ್ಮೆಲೆ ಸಿಟ್ಟಾದರು. ‘‘ಊರವರ ಮಾತಿಗೆ ನೀನೇಕೆ ತಲೆಕೆಡಿಸಿ ಕೊಳ್ಳುತ್ತಿ. ಅವರು ಸಾವಿರ ಆಡುತ್ತಾರೆ....’’ ಎಂದವರೇ ಊಟ ಬಿಟ್ಟು ಎದ್ದರು. ಮನ ಮೋಹಿನಿ ಆತಂಕದಿಂದ ‘‘ಅರೇ! ಊರವರ ಸಿಟ್ಟನ್ನು ಊಟದ ಮೇಲೆ ಯಾಕೆ ತೀರಿಸಿ ಕೊಳ್ಳುತ್ತೀರಿ...ಜನ ಆಡುತ್ತಾರೆ ಎಂದೆ ಅಷ್ಟೇ...’’
ಶರದ್ ಪವಾರ್ ಗಂಭೀರವಾಗಿ ಹೇಳಿದರು ‘‘ಈ ರೈತರು ಕೃಷಿ ಸಚಿವ ಹೇಳಿದ್ದನ್ನು ಯಾವತ್ತಾದರೂ ಸರಿಯಾಗಿ ಪಾಲಿಸಿದ್ದಾರ? ದೂರು ಮಾತ್ರ ನನಗೆ. ಭತ್ತ, ಗೋದಿ, ಟೊಮೆಟೋ ಬೆಳೆಯುವುದನ್ನು ನಿಲ್ಲಿಸಲಿ. ನನ್ನ ಹಾಗೆ ರನ್‌ಗಳನ್ನು ಉತ್ಪಾದಿಸಲಿ. ಗದ್ದೆಗಳಲ್ಲಿ ಬ್ಯಾಟ್ ಗಳನ್ನು ನೆಟ್ಟು ಫಸಲುಗಳನ್ನು ತೆಗೆಯಲಿ. ಅಂತಾರಾಷ್ಟ್ರೀಯ ಮಾರುಕಟ್ಟೆ ಇರುವ ಬೆಳೆಗಳು ಇವು. ಅದು ಬಿಟ್ಟು ಇನ್ನೂ ಓಬಿರಾಯನ ಕಾಲದ ಭತ್ತ, ಗೋದಿ ಬೆಳೆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿ ಯಾಗದೆ ಇನ್ನೇನಾಗುತ್ತದೆ? ಹಳ್ಳಿಗಳಲ್ಲಿ ರೈತರ ಕೈಯಲ್ಲಿ ಭೂಮಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಾ ಇದೆ....ಇಂದು ನಮ್ಮ ಯುವಕರು ಕ್ರಿಕೆಟ್ ಆಡಬೇಕೆಂದರೆ ಒಂದು ಸರಿಯಾದ ಮೈದಾನ ಇಲ್ಲ. ಅವರಿಗೆ ಅನುಕೂಲ ವಾಗುವಂತೆ ಮೈದಾನಗಳನ್ನು ಒದಗಿಸಿಕೊಡುವ ಎಂದರೆ ಅದಕ್ಕೆ ಈ ರೈತರು ಭೂಮಿಯನ್ನು ಕೊಡಬೇಕಲ್ಲ...ದೇಶದ ಹಿತಕ್ಕಾಗಿ...ದೇಶದ ಕೃಷಿಯ ಹಿತಕ್ಕಾಗಿ ಈ ರೈತರ ಕೈಯಿಂದ ಭೂಮಿಯನ್ನು ನಾವು ಪೊಲೀಸರನ್ನು ಮುಂದಿಟ್ಟುಕೊಂಡು ಮನವೊಲಿಸಿ ತೆಗೆದು ಕೊಂಡರೆ ಅದಕ್ಕೆ ಈ ನಕ್ಸಲೈಟರು ಅಡ್ಡಿ ಮಾಡುತ್ತಾರೆ. ನಡು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಹೋಗಲಿ...ಈ ರೈತರ ಕೈಯಲ್ಲಿ ಇಷ್ಟು ಅಮೂಲ್ಯವಾದ ಮೈದಾನಗಳಿವೆಯಲ್ಲ... ತಾವಾದರೂ ಕ್ರಿಕೆಟ್ ಆಡುತ್ತಾರ... ಅದೂ ಇಲ್ಲ. ಹೀಗಾದರೆ ಈ ದೇಶದಲ್ಲಿ ರನ್‌ಗಳ ಉತ್ಪಾದನೆ ಹೆಚ್ಚುವುದು ಹೇಗೆ? ನಿನಗೆ ಗೊತ್ತಾ? ಈ ದೇಶದಲ್ಲಿ ಪ್ರತಿ ದಿನ ಐದು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ...ನಮ್ಮ ರೈತರು ಸೋಮಾರಿಗಳ ಹಾಗೆ ಟೊಮೆಟೋ, ಭತ್ತ ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಅವರು ಈ ಭೂಮಿಯನ್ನೆಲ್ಲ ನಮಗೆ ಕೊಟ್ಟರೆ ನಾವಾದರೂ ರನ್‌ಗಳ ಬೆಳೆ ಬೆಳೆಯುತ್ತಿದ್ದೆವು. ಈ ದೇಶದ ಹಸಿವನ್ನು ನಿವಾರಿಸುತ್ತಿದ್ದೆವು....’’ ಎಂದು ಒಂದೇ ಸಮನೆ ಮಾತನಾಡತೊಡಗಿದರು
ಕೃಷಿಯ ಕುರಿತಂತೆ ತನ್ನ ಗಂಡನ ಕಾಳಜಿಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮನಮೋಹಿನಿಯ ಎದೆ ತುಂಬಿ ಬಂತು. ಕೃಷಿಯ ಕುರಿತಂತೆ ಇಷ್ಟೆಲ್ಲ ತಲೆಕೆಡಿಸಿ ಕೊಂಡರೂ ತನ್ನ ಗಂಡನ ಕುರಿತಂತೆ ಬೇಡದ ಮಾತುಗಳನ್ನಾಡುತ್ತಾರಲ್ಲ ಊರಜನರು ಎಂದು ಸಿಟ್ಟು ಉಕ್ಕಿ ಬಂತು. ಆಕೆ ಗಂಡನನ್ನು ಸಮಾಧಾನಿಸಿದರು. ‘‘ಹೋಗಲಿ...ಊರ ಜನರ ಮಾತು ಕೇಳಿ ನೀವು ತಲೆ ಬಿಸಿ ಮಾಡುವುದು ಬೇಡ...ನಾನು ರಾತ್ರಿ ಅಡುಗೆಗೆ ಸಿದ್ಧತೆ ಮಾಡುತ್ತೇನೆ...ರಾತ್ರಿ ರನ್‌ಗಳ ಬಿರಿಯಾನಿ ಮಾಡೋಣ....’’ ಎಂದರು.
 ಜುಲೈ -11-2010

Wednesday, July 22, 2015

ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!

ಪ್ರಧಾನಿ ನರೇಂದ್ರ ಮೋದಿಯವರು "ಎರಡನೇ ಹಸಿರು ಕ್ರಾಂತಿ ತುರ್ತಾಗಿ ಆಗಬೇಕಾಗಿದೆ" ಎಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ಜುಲೈ -05-2015ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

‘‘ಗ್ರೀನ್ ರೆವಲ್ಯೂಷನ್ ಚಾಹಿಯೇ...ಹಸಿರು ಕ್ರಾಂತಿ ನಡೆಯಲಿ...ತುರ್ತಾಗಿ ಹಸಿರುಕ್ರಾಂತಿ ನಡೆಯಲಿ...’’
ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಕರೆ ಕೊಟ್ಟಿದ್ದೇ ತ್ರಿಶೂಲ ಹಿಡಿದು ನಿಂತಿದ್ದ ಸಂಘಪರಿವಾರದ ಜನರ ಕಿವಿ ನಿಮಿರಿತು. ಅದ್ಯಾವುದೋ ರಕ್ತಕ್ರಾಂತಿಗೆ ಕರೆ ಕೊಡುತ್ತಿದ್ದಾರೆ ಎಂದು ಭಾವಿಸಿ ಅವರು ತಮ್ಮ ತಮ್ಮ ತ್ರಿಶೂಲಗಳನ್ನು ಹರಿತ ಮಾಡಿಕೊಳ್ಳತೊಡಗಿದರು. ಅದ್ಯಾವುದೋ ‘‘ಹಸಿರು..ಹಸಿರು...’’ ಎನ್ನುತ್ತಿರುವುದು ಮುಸ್ಲಿಮರನ್ನುದ್ದೇಶಿಸಿ ಹೇಳುತ್ತಿದ್ದಾರೆ...ಎಂದು ಅವರು ಭಾವಿಸಿದರು. ಹಸಿರು ಮುಸ್ಲಿಮರ ಬಣ್ಣವಾಗಿದ್ದು, ಅವರ ವಿರುದ್ಧ ಕ್ರಾಂತಿ ಮಾಡಿರಿ ಎಂದು ಕರೆ ನೀಡುತ್ತಿದ್ದಾರೆ ಎಂದು ಭಾವಿಸಿದರು. ಆದುದರಿಂದ ಅವರು ತಮ್ಮ ಪೆಟ್ರೋಲ್, ತ್ರಿಶೂಲ, ಕತ್ತಿ ಇತ್ಯಾದಿಗಳ ಜೊತೆಗೆ ಹಸಿರು ಕ್ರಾಂತಿ ಸಿದ್ಧತೆ ನಡೆಸತೊಡಗಿದರು.
ಅಷ್ಟರಲ್ಲಿ ಯಾರೋ ಹೇಳಿದರು ‘‘ಅದು ನಮ್ಮನ್ನುದ್ದೇಶಿಸಿ ಹೇಳಿದ್ದಲ್ಲವಂತೆ...ಅದು ಬೇರೆ ಕ್ರಾಂತಿಯಂತೆ....’’
‘‘ಬೇರೆ ಕ್ರಾಂತಿಯೆಂದರೆ’’...? ಇನ್ನೊಬ್ಬ ಕೇಸರಿ ಕ್ರಾಂತಿಕಾರಿ ಕೇಳಿದ.
‘‘ಅದು ಹೊಲದಲ್ಲಿ ಮಾಡುವ ಕ್ರಾಂತಿಯಂತೆ...ಹೊಲದಲ್ಲಿ ಅಕ್ಕಿ ಬೆಳೀಬೇಕಂತೆ...’’ ಮಗದೊಬ್ಬ ಉತ್ತರಿಸಿದ.
ಸ್ವಯಂ ಸೇವಕರಿಗೆ ತಲೆ ಧಿಂ ಅಂದಿತು ‘ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಹೊಲದಲ್ಲಿ ಅಕ್ಕಿ ಬೆಳೆಯುವುದೇ? ಅದೂ ನಾವು? ಹಿಂದುತ್ವದ ಶೌರ್ಯ, ವೀರ ಪರಾಕ್ರಮಗಳಿಗೆ ಇದು ಅವಮಾನವಲ್ಲವೇ?’’’ ಒಬ್ಬ ಕೇಳಿದ.
‘ಮೊಘಲರ ವಿರುದ್ಧ ಹೋರಾಡಿದ ಶಿವಾಜಿ ಅಕ್ಕಿ ಬೆಳೆದು ಕ್ರಾಂತಿ ಮಾಡಿರುವುದಲ್ಲ...ಹೀಗಿರುವಾಗ ನಾವು ಅಕ್ಕಿ ಬೆಳೆದು ಕ್ರಾಂತಿ ಮಾಡಿದರೆ ಶಿವಾಜಿಗೆ ಅವಮಾನ ಮಾಡಿದಂತಾಗುವುದಿಲ್ಲವೇ?’
‘ಇಷ್ಟಕ್ಕೂ ಅಕ್ಕಿ ಬೆಳೆಯುವುದು ಹೇಗೆ?’ ಮಗದೊಬ್ಬ ಬಜರಂಗಿ ಕೇಳಿದ.
 ‘‘ಅಕ್ಕಿಯನ್ನು ನಾವು ಯಾಕೆ ಬೆಳೆಯಬೇಕು? ಕೋಮುಗಲಭೆ ನಡೆದಾಗ ಅಂಗಡಿಗಳಿಗೆ ನುಗ್ಗಿ ದೋಚಿದರಾಯಿತಲ್ಲವೇ? ಅನಗತ್ಯವಾಗಿ ಇಡೀ ವರ್ಷ ಗದ್ದೆಯಲ್ಲಿ ಕೆಲಸ ಮಾಡಿ ಮೈ ಕೈ ಕೊಳಕು ಮಾಡಿಕೊಳ್ಳುವುದು ಸರಿಯೇ?’’ ಇನ್ನೊಬ್ಬ ಕುಖ್ಯಾತ ತಲೆಕೆಡಿಸಿಕೊಂಡ. ಈತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
‘‘ಇಷ್ಟಕ್ಕೂ ಈಗ ಅಕ್ಕಿ ಯಾಕೆ ಬೇಕು? ದೇಶಕ್ಕೆ ಬೇಕಾಗಿರುವುದು ಅಣುಬಾಂಬು, ಸ್ಫೋಟಕ ತ್ರಿಶೂಲ, ರಾಮಮಂದಿರ ಮೊದಲಾದವುಗಳಲ್ಲವೆ? ಇವೆಲ್ಲ ಇಲ್ಲದೇ ಇದ್ದುದರಿಂದ ಅಲ್ಲವೇ ಈ ದೇಶ ಇಷ್ಟು ಹಿಂದುಳಿದಿರುವುದು. ಅಕ್ಕಿ ಬೆಳೆಯಿರಿ ಎಂದು ಹೇಳುವುದಕ್ಕೆ ಹಿಂದುತ್ವ ಸರಕಾರ ಅಸ್ತಿತ್ವಕ್ಕೆ ಬರಬೇಕಾಗಿತ್ತೇ?’’ ಇನ್ನೊಬ್ಬ ಮುಖಂಡ ಅರ್ಥವಾಗದೆ ತಲೆಕೆರೆದುಕೊಂಡ.
‘‘ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವುದನ್ನೇ ಪರೋಕ್ಷವಾಗಿ ಹಸಿರುಕ್ರಾಂತಿ ಕರೆದಿರಬಹುದೇ?’’ ಇನ್ನೊಬ್ಬ ಹಿರಿಯ ಬಜರಂಗಿ ತಲೆ ಓಡಿಸಿದ.
ಎಲ್ಲರಿಗೂ ಹೌದು ಹೌದೆನಿಸಿತು. ಬಹುಶಃ ಬಹಿರಂಗವಾಗಿ ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ’’ ಎಂದು ಕರೆ ಕೊಟ್ಟರೆ ವಿದೇಶಾಂಗ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆ. ಆದುದರಿಂದ ನರೇಂದ್ರ ಮೋದಿಯವರು ಜಾಣತನದಿಂದ ‘ಹಸಿರು’ ಕ್ರಾಂತಿಗೆ ಕರೆಕೊಟ್ಟು, ಭಾರತೀಯ ಯೋಧರನ್ನು ಬಡಿದೆಬ್ಬಿಸಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ನರೇಂದ್ರ ಮೋದಿಯವರು ಪಾಠ ಕಲಿಸಲಿದ್ದಾರೆ ಎಂದು ಸ್ವಯಂ ಸೇವಕರಲ್ಲ ಹಿರಿಹಿರಿ ಹಿಗ್ಗಿದರು.
***
ಇತ್ತ ಎಲ್ಲ ಆರೆಸ್ಸೆಸ್ ಕಚೇರಿಗಳಲ್ಲೂ ಸಭೆ ಕರೆಯಲಾಯಿತು. ಸಾಕ್ಷಾತ್ ನರೇಂದ್ರ ಮೋದಿಯವರೇ ‘ಹಸಿರು ಕ್ರಾಂತಿ’ಗೆ ಕರೆ ಕೊಟ್ಟಿದ್ದಾರೆ ಎಂದ ಮೇಲೆ ಕೃಷಿಗೆ ತಯಾರು ನಡೆಸಲೇಬೇಕಲ್ಲವೆ? ಎಲ್ಲರೂ ತಮ್ಮ ತಮ್ಮ ಪ್ಯಾಂಟು, ಕಚ್ಚೆಗಳನ್ನು ಕಳಚಿಟ್ಟು ಲಂಗೋಟಿ ಕಾಣುವಂತೆ ದೊಗಳೆ ಚೆಡ್ಡಿಗಳನ್ನು ಧರಿಸಿ ಕೃಷಿ ಕಾರ್ಯಕ್ಕಿಳಿದರು. ಈವರೆಗೆ ಶಾಖೆಯಲ್ಲಿ ಕಬಡ್ಡಿ ಆಡಿ ಮಾತ್ರ ಗೊತ್ತಿದ್ದ ಸರಸಂಘಚಾಲಕರು ಅಕ್ಕಿ ಕ್ರಾಂತಿಯ ಕುರಿತಂತೆ ತಮ್ಮ ಗಣವೇಷಧಾರಿಗಳಿಗೆ ತರಬೇತಿ ನೀಡತೊಡಗಿದರು.
ಮೊದಲು ಗದ್ದೆಯನ್ನು ಉಳಬೇಕು...ಎನ್ನುವುದರಿಂದ ಅವರು ಆರಂಭಿಸಿದರು.
‘‘ಗದ್ದೆಯನ್ನು ಯಾವುದರಿಂದ ಉಳುವುದು?’’ ಎನ್ನುವುದೇ ಅವರ ಸಮಸ್ಯೆಯಾಯಿತು.
‘‘ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!’’ ಎಂದು ಲಾಠಿಯಿಂದ ಸರಸಂಘಚಾಲಕರು ತಲೆ ಚಚ್ಚಿಕೊಂಡರು.
‘‘ಈ ದೇಶದಲ್ಲಿ ಗೋವುಗಳನ್ನು ಪೂಜಿಸುವುದಕ್ಕೋಸ್ಕರ ಸಾಕುತ್ತಿದ್ದರು. ಯಾವಾಗ ಗೋವುಗಳನ್ನು ಇಂತಹ ಕೆಲಸಕ್ಕೆ ಬಳಸಿ ಹಿಂಸೆ ನೀಡಲಾಯಿತೋ ಅಲ್ಲಿಂದ ಭಾರತ ಪತನಗೊಳ್ಳತೊಡಗಿತು...’’ ಎಂದು ಶಾಖೆಯ ಮುಖಂಡರು ಭಾಷಣ ಮಾಡತೊಡಗಿದರು.
‘‘ಆದರೆ ನಮ್ಮ ತಾತ ಗೋವುಗಳಿಂದಲೇ ಗದ್ದೆ ಉಳುತ್ತಿದ್ದರು’’ ಶಾಖೆಗೆ ಸೇರಿದ ಹೊಸ ಹುಡುಗನೊಬ್ಬ ಅನುಮಾನದಿಂದ ಪ್ರಶ್ನಿಸಿದ.
‘‘ಅದೆಲ್ಲ ಮ್ಲೇಚ್ಛರ ಸಂಚು. ಹಿಂದೆಲ್ಲ ದಲಿತರನ್ನು ಬಳಸಿಕೊಂಡು ಗದ್ದೆ ಉಳುತ್ತಿದ್ದೆವು. ಆಗ ಇಡೀ ಭಾರತ ಸುಖ, ಸಂತೋಷದಿಂದ ತುಂಬಿ ತುಳುಕುತ್ತಿದ್ದವು. ದಲಿತರು ಸಂತೋಷದಿಂದ ನೇಗಿಲ ನೊಗವನ್ನು ಹೊತ್ತುಕೊಂಡು ಗದ್ದೆಯನ್ನು ಉಳುತ್ತಿದ್ದರು. ಆಗ ಅವರಿಗೆ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ಆದರೆ ಯಾವಾಗ ಮ್ಲೇಚ್ಛರು, ಬ್ರಿಟಿಷರು ಭಾರತಕ್ಕೆ ಬಂದರೋ ಅವರು ಉಪಾಯವಾಗಿ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದರು. ಅವರ ಉದ್ಯೋಗವನ್ನು ಕಿತ್ತುಕೊಂಡರು. ದೇವತೆಯಾಗಿದ್ದ ಗೋವುಗಳನ್ನು ಗದ್ದೆಯಲ್ಲಿ ಉಳುವುದಕ್ಕೆ ಬಳಸಿದರು. ಇದರಿಂದ ಭಾರತದಲ್ಲಿ ಕೃಷಿ ಇಳುವರಿ ಕಡಿಮೆ ಬರತೊಡಗಿತು. ಇದೀಗ ಹಸಿರುಕ್ರಾಂತಿ ಮಾಡಬೇಕಾದ ಸ್ಥಿತಿ ಬಂದಿದೆ...’’ ಎಂದು ಸರ ಸಂಘಚಾಲಕರು ಗೊಳೋ ಎಂದು ಅಳ ತೊಡಗಿದರು.
***
ನರೇಂದ್ರ ಮೋದಿಯವರು ‘‘ಹಸಿರು ಕ್ರಾಂತಿ...ತಕ್ಷಣ ಹಸಿರು ಕ್ರಾಂತಿ...’’ ಬೊಬ್ಬಿಟ್ಟದ್ದೇ ತಡ, ಸಾಕ್ಷಾತ್ ಶ್ರೀಮತಿ ಇಂದಿರಾಗಾಂಧಿಯೇ ಮೋದಿಯ ರೂಪದಲ್ಲಿ ಅವತಾರ ಎತ್ತಿದ್ದಾರೆ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಮನವರಿಕೆಯಾಯಿತು. ರಾಜಪಥದಲ್ಲಿ ಯೋಗ ಮಾಡಿ ಮರಳುತ್ತಿರುವ ಮೋದಿಯನ್ನು ಅದು ಹೇಗೋ ಅವನು ಭೇಟಿ ಮಾಡಿ, ಸಂದರ್ಶನ ಮಾಡ ತೊಡಗಿದ.
‘‘ಸಾರ್...ಹಸಿರು ಕ್ರಾಂತಿಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ....?’’
‘‘ನೋಡಿ...ರೈತರೆಲ್ಲ ಬಹಳ ಸೋಮಾರಿಗಳಾಗಿದ್ದಾರೆ. ಈ ಕುರಿತಂತೆ ನಾಡಿನ ಚಿಂತಕರು, ಕವಿಗಳು, ಬೃಹತ್ ಕಾದಂಬರಿಕಾರರು, ಜ್ಞಾನಪೀಠಿಗಳು, ಜ್ಞಾನಪೀಠ ವಂಚಿತರು ಎಲ್ಲರೂ ಚಿಂತೆಗೊಳಗಾಗಿದ್ದಾರೆ. ರೈತರು ಸೋಮಾರಿಗಳಾಗಿರುವುದೇ ನಮ್ಮ ಕೃಷಿ ಹಿಂದುಳಿಯಲು ಕಾರಣ. ಆದ್ದರಿಂದ, ರೈತರನ್ನು ಬಡಿದೆಬ್ಬಿಸಲು ಬೇಕಾದ ಎಲ್ಲ ಕ್ರಮಗಳನ್ನು ನಾವು ಮಾಡಿದ್ದೇವೆ...ಈಗಾಗಲೇ ಇದಕ್ಕಾಗಿ ವಿಶೇಷ ಪೊಲೀಸರನ್ನು, ಮಿಲಿಟರಿಯನ್ನು ನೇಮಿಸಬೇಕೆಂದಿದ್ದೇವೆ...ಅವರು ಸೋಮಾರಿಗಳಾಗಿ ಉಂಡು ಮಲಗದಂತೆ ನೋಡಿಕೊಂಡು ಚೆನ್ನಾಗಿ ದುಡಿಸಿ, ದೇಶದಲ್ಲಿ ಹಸಿರು ಕ್ರಾಂತಿಯನ್ನುಂಟು ಮಾಡುವುದು ನಮ್ಮ ಗುರಿ...’’
‘‘ಇದಕ್ಕಾಗಿ ವಿಶೇಷ ಹಣವನ್ನು ಬಿಡುಗಡೆ ಮಾಡಿದ್ದೀರಾ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಮಾಡಿದ್ದೇವೆ. ಈಗಾಗಲೇ ದೇಶದಲ್ಲಿರುವ ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಸಾವಯವ ಕೃಷಿ ಯೋಜನೆಗಾಗಿ ಹಲವಾರು ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಅವರೆಲ್ಲ ಕೃಷಿಕರಿಗೆ ಸಾವಯವ ಗೊಬ್ಬರ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ ಅನಿಲ್ ಅಂಬಾನಿ, ಅಧಾನಿಯಂತಹ ಶ್ರೇಷ್ಠಾತಿಶ್ರೇಷ್ಠ ಕೃಷಿಕರಿಗೆ ಬೇಕಾಗುವ ಭೂಮಿಯನ್ನು ಸೋಮಾರಿ ರೈತರಿಂದ ಕಿತ್ತು ಕೊಡುವ ಯೋಜನೆಯೂ ಇದೆ. ಸೋಮಾರಿ ರೈತರೇ ಭೂಮಿ ಬಿಟ್ಟು ತೊಲಗಿ, ದುಡ್ಡಿದ್ದವನೇ ಭೂಮಿಯ ಒಡೆಯ ಮೊದಲಾದ ಘೋಷಣೆ, ಯೋಜನೆಗಳನ್ನು ಶೀಘ್ರ ಜಾರಿಗೆ ತರಲಿದ್ದೇವೆ...’’ ಎನ್ನುತ್ತಿದ್ದಂತೆಯೇ ಪತ್ರಕರ್ತ ಕಾಸಿಯ ಕಣ್ಣ ಮುಂದೆ ಯಾಕೋ ಹಸಿರಿನ ಬದಲಿಗೆ ಕೆಂಪು ಬಣ್ಣ ಆವರಿಸಿಕೊಳ್ಳತೊಡಗಿತು. ‘‘ಈಗ ಬಂದೆ ಸಾರ್...’’ ಎಂದವನೇ ಅಲ್ಲಿಂದ ನೇರವಾಗಿ ಬೆಂಗಳೂರಿನ ಬಸ್ ಹತ್ತಿದ.
ಜುಲೈ -05-2015