Thursday, April 30, 2015

ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು?

ಯಡಿಯೂರಪ್ಪ ಕೃಪೆಯಿಂದ ಸದಾನಂದ ಗೌಡರು  ಮುಖ್ಯ ಮಂತ್ರಿಯಾಗಿ, ಬಳಿಕ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟು ಕೊಡಲು ಗೌಡರು ನಿರಾಕರಿಸಿದಾಗ ಬರೆದ ಬುಡಬುಡಿಕೆ. ಫೆಬ್ರವರಿ -26-2012ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಶಿಗೆ ಹೋಗಿ ಬಂದ ಸುದ್ದಿ ಕೇಳಿದ್ದೇ ಎಲ್ಲರಿಗೂ ಕುತೂಹಲ. ಸಾಧಾರಣವಾಗಿ ಕಾಶಿಗೆ ಹೋಗಿಬಂದವರು ಗಂಗಾನದಿಯಲ್ಲಿ ಏನನ್ನಾದರೂ ಬಿಟ್ಟು ಬರಲೇ ಬೇಕು. ಯಡಿಯೂರಪ್ಪ ಏನನ್ನು ಬಿಟ್ಟು ಬಂದಿರ ಬಹುದು? ಎಲ್ಲರೂ ತಲೆ ಕೆಡಿಸತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕೂಡ ಈ ಕುರಿತಂತೆ ತಲೆ ಕೆಡಿಸತೊಡಗಿದ. ಏನು ಬಿಟ್ಟು ಬಂದಿರ ಬಹುದು? ಎಲ್ಲಿಯೂ ಯಡಿಯೂರಪ್ಪ ಕೈಗೆ ಸಿಗುತ್ತಿಲ್ಲ. ಪತ್ರಕರ್ತ ಎಂಜಲು ಕಾಸಿ ನೇರ ಈಶ್ವರಪ್ಪನವರಲ್ಲಿಗೆ ಹೋದ.
‘‘ಸಾರ್...ಯಡಿಯೂರಪ್ಪನವರು ಕಾಶಿಗೆ ಹೋದರಂತಲ್ಲ ಸಾರ್. ಏನು ಬಿಟ್ಟು ಬಂದರು?’’
‘‘ಅದೇ ನನಗೂ ಕುತೂಹಲ. ನೀವು ಪತ್ತೆ ಮಾಡಿ ಹೇಳುವುದು ಬಿಟ್ಟು ನನ್ನಲ್ಲಿ ಕೇಳ್ತೀರಲ್ಲ...ಸದನದಲ್ಲಿ ಯಾರ್ಯಾರು ಬ್ಲೂಫಿಲಂ ನೋಡ್ತಾರೆ ಎನ್ನೋದನ್ನು ಕಂಡು ಹಿಡಿಯೋದಕ್ಕಾಗುತ್ತೆ. ಇದು ನಿಮಗೆ ಕಂಡು ಹಿಡಿ ಯೋದಕ್ಕಾಗೋದಿಲ್ವ?’’ ಈಶ್ವರಪ್ಪ ಸಿಟ್ಟಾದರು.
‘‘ಹಾಗಲ್ಲ ಸಾರ್...ಯಡಿಯೂರಪ್ಪರವರ ಅಂತ ರಂಗದ ವಿಷಯ ಇದು. ನಿಮಗೆ ಗೊತ್ತಿರಬಹುದು...’’ ಕಾಸಿ ಹಲ್ಲು ಕಿರಿದ.
‘‘ಅವರ ಅಂತರಂಗದ ವಿಷಯವನ್ನು ಅವರ ಅಂತ ರಂಗಕ್ಕೆ ಹತ್ತಿರವಿರುವವರತ್ರ ಕೇಳ್ರೀ...ನನ್ನತ್ರ ಯಾಕೆ ಕೇಳ್ತೀರಿ...’’ ಈಶ್ವರಪ್ಪ ಮತ್ತೆ ಸಿಡುಕಿದರು.
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ಸಾರ್... ಯಡಿಯೂರಪ್ಪ ಏನನ್ನು ಕಾಶಿಯಲ್ಲಿ ಬಿಟ್ಟು ಬಂದರೆ ಚೆನ್ನಾಗಿತ್ತು...ಅದನ್ನಾದರೂ ಹೇಳಿ’’
ಈಶ್ವರಪ್ಪ ಒಂದು ಕ್ಷಣ ಯೋಚಿಸಿ ಹೇಳಿದರು ‘‘ಗಂಗಾನದಿಯಲ್ಲಿ ಶೋಭಾ ಕರಂದ್ಲಾಜೆಯನ್ನು ಬಿಟ್ಟು ಬಂದಿದ್ದರೆ ರಾಜ್ಯದ ಎಲ್ಲ ಸಮಸ್ಯೆಗಳೂ ಮುಗಿಯು ತ್ತಿತ್ತು...’’
‘‘ಆದರೆ ಶೋಭಾ ಅವರು ಇಲ್ಲೇ ಬೆಂಗಳೂರಿನಲ್ಲಿ ಸುತ್ತಾಡ್ತಾ ಇದ್ದಾರಲ್ಲ ಸಾರ್?’’ ಕಾಸಿ ಕೇಳಿದ.
‘‘ಹೌದೌದು. ಅವರೆಲ್ಲಿ ಬಿಡ್ತಾರೆ. ಒಂದು ವೇಳೆ ಅವರು ನಮಗೆ ಒಪ್ಪಿಗೆ ಕೊಟ್ಟರೂ ಸಾಕು, ನಾವೇ ಶೋಭಾರನ್ನು ಗೋಣಿ ಚೀಲದಲ್ಲಿ ಹಾಕಿ ಗಂಗಾನದಿಗೆ ಎಸೆದು ಬರ್ತೇವೆ...’’ ಎಂದು ಹಣೆ ಒರೆಸಿಕೊಂಡರು.
‘‘ಥ್ಯಾಂಕ್ಯೂ ಸಾರ್ ಬರ್ತೇನೆ’’ ಕಾಸಿ ಹೊರಟ.
‘‘ಹೋಗಿ, ಬರ್ಬೇಡಿ...’’ ಎಂದರು ಈಶ್ವರಪ್ಪ.
***
ಕಾಸಿ ಅಲ್ಲಿಂದ ನೇರ ಸದಾನಂದ ಗೌಡರ ಮನೆಗೆ ಓಡಿದ. ಕಾಸಿಯನ್ನು ಕಂಡದ್ದೇ ‘‘ಬಂದ ಮಂಡೆ ಬೆಚ್ಚ ಮಾಡ್ಲಿಕ್ಕೆ’’ ಎಂದು ಸದಾನಂದರು ತಲೆ ಚಚ್ಚಿಕೊಂಡರು. ಆದರೂ ನಗುನಗುತ್ತಾ ಕೇಳಿದರು ‘‘ಏನು ಕಾಸಿಯವ್ರೇ ಬಂದದ್ದು...?’’
‘‘ಸಾರ್...ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು ಅಂತ ಗೊತ್ತುಂಟಾ...?’’
ಸದಾನಂದ ಗೌಡರ ಹುಬ್ಬು ಗಂಟಿಕ್ಕಿತು, ‘‘ಹೋಗು ವಾಗ, ಬರ್ತೀನೇನ್ರಿ ಕಾಶಿಗೆ ಅಂತ ನನ್ನನ್ನು ಕರೆದರು. ನನಗೆ ಹೋಗಲಿಕ್ಕೆ ಹುಚ್ಚುಂಟಾ? ನಾನು ಬರುವುದಿಲ್ಲ ಎಂದೆ. ನನಗೆ ಗೊತ್ತಿತ್ತು. ಇವರು ನನ್ನನ್ನೇ ಕಾಶಿಯಲ್ಲಿ ಬಿಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಅಂತ. ಏನನ್ನು ಬಿಟ್ಟು ಬರುತ್ತಾರೆ... ಅವರ ಲಂಗೋಟಿಯನ್ನು ಬಿಟ್ಟು ಬರ್ಬೇಕಷ್ಟೇ...ಬೇರೇನು ಬಿಟ್ಟು ಬರುವ ಜಾತಿಯಲ್ಲ ಅದು....’’
‘‘ಹಾಗಲ್ಲ ಸಾರ್...ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಬಿಟ್ಟು ಬಂದಿದ್ದಾರೆ ಅಂತ ಸುದ್ದಿ ಉಂಟು, ಹೌದಾ’’ ಕಾಸಿ ಸುಮ್ಮಗೆ ಒಂದು ತುಂಡು ಬಿಸ್ಕೆಟ್ ಬಿಸಾಡಿದ.
ಸದಾನಂದ ಗೌಡರು ಒಮ್ಮೆಲೆ ಚುರುಕಾಗಿ, ಕಾಸಿಯತ್ತ ಬಾಗಿದರು ‘‘ಹೌದಾ? ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಕಾಸಿಯಲ್ಲಿ ಬಿಟ್ಟು ಬಂದದ್ದು ಹೌದಾ? ಏನಾದರೂ ವಿಷಯ ಉಂಟಾ...ನಾನು ಪುತ್ತೂರಿನ ಸಹಸ್ರಲಿಂಗೇಶ್ವರ ನಲ್ಲಿ ಹರಕೆ ಹೊತ್ತಿದ್ದೆ. ಅವರಿಗೆ ಈ ಕುರ್ಚಿಯ ವ್ಯಾಮೋ ಹ ಒಂದು ಬಿಡಿಸಪ್ಪ ಅಂತ...ಇದು ನಿಜವಾ...ಬಿಟ್ಟದ್ದು ಹೌದಾ?’’ ಗೌಡರು ಮತ್ತೆ ಮತ್ತೆ ಕೇಳಿದರು.
‘‘ಗೊತ್ತಿಲ್ಲ ಸಾರ್, ನಿಮಗೇನಾದರೂ ಗೊತ್ತಾ ಅಂತ ಕೇಳಿದ್ದು...’’ ಕಾಸಿ ಹೇಳಿದ.
‘‘ನೀವು ಸುಮ್ಮನೆ ಏನೇನೆಲ್ಲ ಹೇಳಿ ನನಗೆ ಆಸೆ ಹುಟ್ಟಿಸಬೇಡಿ ಗೊತ್ತಾಯಿತಾ? ಗಂಗಾನದಿಯಲ್ಲಿ ಕುರ್ಚಿಯ ಆಸೆಯನ್ನು ಬಿಡುವುದು ಅಷ್ಟು ಸುಲಭವಲ್ಲ. ಅವರೇ ಗಂಗಾನದಿಯಲ್ಲಿ ಕೊಚ್ಚಿ ಹೋದರೆ, ಆಸೆಯೂ ಅವರ ಜೊತೆಗೇ ಹೋದೀತು. ಅದು ಬಿಟ್ಟು ಅವರು ಕುರ್ಚಿಯ ಆಸೆಯನ್ನು ಬಿಟ್ಟು ಬರ್ಲಿಕ್ಕುಂಟಾ? ಅದರ ಆಸೆ ಅವರ ರಕ್ತದ ಕಣಕಣದಲ್ಲೂ ಉಂಟು ಗೊತ್ತುಂಟಾ?’’
***
ಸರಿ ಕಾಸಿ ನೇರವಾಗಿ ರೇಣುಕಾಚಾರ್ಯರಲ್ಲಿಗೆ ಹೋದ. ‘‘ಯಡಿಯೂರಪ್ಪನವರು ಏನು ಬಿಟ್ಟು ಬಂದಿದ್ದಾರೆ ಅಂತ ನಿಮಗೇನಾದರೂ ಗೊತ್ತಾ?’’
ರೇಣುಕಾಚಾರ್ಯರು ತೇಲುಗಣ್ಣು ಮಾಡುತ್ತಾ ಮಾತನಾಡತೊಡಗಿದರು ‘‘ಯಾಕೆ? ಯಾಕೆ ಬಿಡ ಬೇಕು... ಹಾಗೆಲ್ಲ ಅಷ್ಟು ಸುಲಭದಲ್ಲಿ ಅವರು ಬಿಡು ವುದಿಲ್ಲ ಗೊತ್ತಾಯಿತಲ್ಲ? ವೀರಶೈವರೇ ಯಾಕೆ ಬಿಡಬೇಕು...ಈ ಬ್ರಾಹ್ಮಣರು ಬಿಡಲಿ ನೋಡುವ... ಲಿಂಗಾಯತರಿಗೆ ಈಗಾಗಲೇ ಭಾರೀ ಅನ್ಯಾಯವಾಗಿದೆ. ನಾವು ಬಿಡುವುದಿಲ್ಲ, ಬಿಡಿವುದಿಲ್ಲ... ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ...’’
ಕಾಸಿ ಒಂದೂ ಅರ್ಥವಾಗದೆ ತಲೆ ಕೆರೆದುಕೊಂಡು ಮತ್ತೆ ಹೇಳಿದ ‘‘ಹಾಗಲ್ಲ ಸಾರ್...ಕಾಶಿಗೆ ಹೋದರೆ ನಮ್ಮೆಳಗಿನ ಕೆಡುಕುಗಳಲ್ಲಿ ಒಂದನ್ನು ಗಂಗಾನದಿಯಲ್ಲಿ ಬಿಟ್ಟು ಬರಬೇಕು ಅಂತ ಸಂಪ್ರದಾಯವಿದೆ. ಯಡಿಯೂ ರಪ್ಪ ಯಾವ ಕೆಡುಕು ಬಿಟ್ಟು ಬಂದಿದ್ದಾರೆ...’’
ರೇಣುಕಾಚಾರ್ಯರು ತಕ್ಷಣ ಉತ್ತರಿಸಿದರು ‘‘ಅದರ ಬಗ್ಗೆ ಕೇಳುತ್ತಿದ್ದೀರಾ? ನೋಡಿ ಇವ್ರೆ, ಯಡಿಯೂರಪ್ಪನವರಿಗೆ ಎಲ್ಲ ಕೆಡುಕುಗಳನ್ನು ಗಂಗಾನದಿಯಲ್ಲಿ ಬಿಡಬೇಕು ಅಂತ ಮನಸ್ಸಿತ್ತು. ಅದಕ್ಕಾಗಿ ಈಶ್ವರಪ್ಪ, ಸದಾನಂದ ಗೌಡ, ಅಶೋಕ್ ಎಲ್ಲರನ್ನೂ ಕಾಶಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಡಲು ತೀರ್ಮಾನಿಸಿದ್ದರು. ಆದರೆ ಯಡಿಯೂರಪ್ಪ ನಿಮ್ಮನ್ನು ಗಂಗಾನದಿಯ ಲ್ಲಿ ಬಿಟ್ಟು ಬಿಡುತ್ತಾರೆ ಎನ್ನುವುದನ್ನು ಯಾರೋ ಭಿನ್ನಮತೀಯರು ಅವರಿಗೆ ತಿಳಿಸಿರಬೇಕು. ಎಲ್ಲರೂ ಕೈಕೊಟ್ಟರು. ಪಾಪ ಯಡಿಯೂರಪ್ಪ ನವರು ಏನು ಮಾಡುವುದು? ಬರಿಗೈಯಲ್ಲಿ ಬಂದು ಬಿಟ್ಟರು....’’
***
ಇವರೊಂದಿಗೆಲ್ಲ ಕೇಳಿ ಪ್ರಯೋಜನವಿಲ್ಲವೆಂದು ಎಂಜಲು ಕಾಸಿ ಯಡಿಯೂರಪ್ಪರನ್ನು ಹುಡುಕತೊಡ ಗಿದ. ನೋಡಿದರೆ ಯಾವುದೋ ಒಂದು ಮೂಲೆಯ ಊರಿನಲ್ಲಿರುವ ಸ್ವಾಮಿಯ ಆಶೀರ್ವಾದ ಪಡೆಯುತ್ತಿದ್ದರು.
‘‘ಸಾರ್..ಕಾಶಿಯಲ್ಲಿ ನೀವೇನಾದರು ಬಿಟ್ಟು ಬಂದಿರಾ?’’ ಕಾಸಿ ಯಡಿಯೂರಪ್ಪರಲ್ಲಿ ಕೇಳಿಯೇ ಬಿಟ್ಟ.
‘‘ಹೂಂ..ಬಿಟ್ಟು ಬಂದೆ....’’ಗಂಭೀರವಾಗಿ ನುಡಿದರು ಯಡಿಯೂರಪ್ಪ.
‘‘ಏನನ್ನು ಬಿಟ್ಟು ಬಂದಿರಿ ಸಾರ್?’’
‘‘ನನ್ನೊಳಗಿದ್ದ ಅಳಿದುಳಿದ ಮಾನ, ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ಬಂದೆ. ಈಗ ನಾನು ತುಂಬಾ ಹಗುರವಾಗಿದ್ದೇನೆ. ಇನ್ನು ಮುಖ್ಯಮಂತ್ರಿ ಗಾದಿಗಾಗಿ ನನ್ನ ಹೋರಾಟ ತೀವ್ರವಾಗುತ್ತದೆ....’’
ರವಿವಾರ - ಫೆಬ್ರವರಿ -26-2012

Monday, April 27, 2015

ರಾಹುಲ್ ಗಾಂಧಿ ಕುರಿತು ದುರಂತ ಕಾವ್ಯಮಂ ಬರೆವೆಂ....

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸ್ ನೊಳಗೆ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಸುಪುತ್ರ ಹರ್ಷ ಮೊಯ್ಲಿ ನಡುವೆ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ನಡೆದಾಗ ಬರೆದ ಬುಡಬುಡಿಕೆ. ಫೆಬ್ರವರಿ -23-2014ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

‘ಕೊನೆಗೂ ಚುನಾವಣೆ ಘೋಷಣೆಯಾಯಿತು’ ಎಂದು ಯಾರೋ ಹೇಳಿದ್ದು ಕೇಳಿ ‘ಇಷ್ಟು ಬೇಗವಾ?’ ಎಂದು ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅಷ್ಟರಲ್ಲಿ ಜನಾರ್ದನ ಪೂಜಾರಿಯವರು ಮಂಗಳೂರಿನ ಬೀದಿಯಲ್ಲಿ ಪಾದಯಾತ್ರೆ ಮಾಡುವುದನ್ನು ಟಿವಿಗಳು ಅತ್ಯುತ್ಸಾಹದಿಂದ ತೋರಿಸುತ್ತಿದ್ದವು. ‘‘ಅರೆ! ಪೂಜಾರಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟೂ ಆಯಿತಾ?’’ ಎಂದು ಕಾಸಿ ಮತ್ತೊಮ್ಮೆ ಆಘಾತಕ್ಕೀಡಾದ.
‘‘ಅವರ ಎದುರು ಯಾರು ಚುನಾವಣೆಗೆ ನಿಂತದ್ದು?’’ ಎಂದು ಕಾಸಿ ತನ್ನಷ್ಟಕ್ಕೆ ಕೇಳುತ್ತಿರುವಾಗ ಯಾರೋ ಜೋರಾಗಿ ಹೇಳಿದರು ‘‘ಮೊಯ್ಲಿ ಕಣ್ರೀ...’’ ‘‘ಅಂದರೆ ಈಗ ಕಾಂಗ್ರೆಸ್ ಕ್ಯಾಂಡಿಡೇಟು ಯಾರು? ಬಂಡಾಯ ಯಾರು?’’ ‘‘ಎಲವೋ ಮಂಕೆ...ಇದು ಕಾಂಗ್ರೆಸ್‌ನೊಳಗಿನ ಚುನಾವಣೆ. ಮಂಗಳೂರಿನಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲು ಚುನಾವಣೆ...’’ ಹೀಗೆಂದು ದಾರಿ ಹೋಕರಾರೋ ಕಾಸಿಯ ತಲೆಗೆ ಮೊಟಕಿದರು. ಈಗ ಕಾಸಿಯ ಟ್ಯೂಬ್‌ಲೈಟ್ ಹತ್ತಿಕೊಂಡಿತು. ತಕ್ಷಣ ಪೂಜಾರಿಯವರ ಇಂಟರ್ಯೂ ಮಾಡಿ ಬರೋಣ ಎಂದು ಮಂಗಳೂರು ಕಡೆಯ ಲಾರಿ ಹತ್ತಿದ ಕಾಸಿ.
ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಳಿಯುತ್ತಿರು ವಾಗಲೇ ಜನಾರ್ದನ ಪೂಜಾರಿ ಕೈಕೊಟ್ಟು ಕಾಸಿಯನ್ನು ಇಳಿಸಿದರು ‘‘ಈ ಸಾರಿ ಗೆಲ್ಲುವುದು ನಾನೇ ಗೊತ್ತುಂಟಾ...’’ ಎನ್ನುತ್ತಾ ಪೂಜಾರಿ ಮಾತಿಗೆ ಶುರು ಮಾಡಿದರು. ‘‘ಲೋಕಸಭಾ ಚುನಾವಣೆಯಲ್ಲಿಯಾ...ಅಥವಾ ಮೊಯ್ಲಿ ವಿರುದ್ಧದ ಚುನಾವಣೆಯಲ್ಲಿಯಾ?’’ ಕಾಸಿ ಅರ್ಥವಾಗದೆ ಕೇಳಿದ.
‘‘ಯಾವ ಇಲಿ, ಬೆಕ್ಕು ನಿಂತರೂ ನಾನು ಹೆದರುವುದಿಲ್ಲ. ಅವರು ಇಲಿಯಾದರೆ ನಾನು ಹುಲಿ. ಸ್ವಲ್ಪ ವಯಸ್ಸಾಗಿದೆ. ಹಲ್ಲು, ಉಗುರು ಹೋಗಿದೆ ಅಂತಾ ನನ್ನನ್ನು ಮೂಲೆಗೆ ತಳ್ಳುವುದಾ....ನಾನು ಸುಮ್ಮನಿರುವುದಿಲ್ಲ... ಭರ್ಜರಿ ಪ್ರಚಾರ ಮಾಡಿ ಗೆಲ್ಲುವುದು ಗೆಲ್ಲುವುದೇ...’’
‘‘ಯಾರ ವಿರುದ್ಧ ಸಾರ್....?’’
‘‘ಮೊದಲು ಮೊಯ್ಲಿಯ ವಿರುದ್ಧ ಗೆಲ್ಲುವುದು... ಅನಂತರ ನೋಡುವ...’’ ಪೂಜಾರಿ ತಡವರಿಸಿ ಹೇಳಿದರು.
‘‘ಅಂದರೆ ಅನಂತರ ಗೆಲ್ಲದಿದ್ದರೂ ಪರವಾಗಿಲ್ಲ ಅಂತವಾ?’’ ಕಾಸಿ ಕೇಳಿದ.
‘‘ಬಿಜೆಪಿಯವರೊಟ್ಟಿಗೆ ಗೆಲ್ಲುವುದು ದೊಡ್ಡ ವಿಷಯ ಅಲ್ಲ. ನನ್ನ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಗೆಲ್ಲುವುದು ದೊಡ್ಡ ವಿಷಯ...ನಾನು ಬಿಡುವುದಿಲ್ಲ...ದೊಡ್ಡ ಯುದ್ಧ ಮಾಡುತ್ತೇನೆ...’’ ಪೂಜಾರಿಯವರು ಕಣ್ಣು ತಿರುಗಿಸುತ್ತಾ ಹೇಳಿದರು.
‘‘ಮೊಯ್ಲಿಯವರಿಗೆ ಕೇಂದ್ರದಲ್ಲಿ ಬೆಂಬಲ ಇದೆ. ನಿಮಗೆ ಯಾರು ಯಾರು ಬೆಂಬಲ ನೀಡುತ್ತಾರೆ ಸಾರ್?’’ ಕಾಸಿ ಕೇಳಿದ.
‘‘ಕಲ್ಲಡ್ಕದ ಭಟ್ಟರು ನನಗೆ ಪೂರ್ತಿ ಬೆಂಬಲ ಘೋಷಿಸಿದ್ದಾರೆ....ಈ ಚುನಾವಣೆಯಲ್ಲಿ ಗೆದ್ದರೆ...ಭಟ್ಟರಿಗೆ ಮೀಸಲಾತಿ ಕೊಡುವುದು ಗ್ಯಾರಂಟಿ...’’ ಪೂಜಾರಿ ಹೇಳಿದರು.
‘‘ಸಾರ್... ಬಿಲ್ಲವರಿಗೆ...?’’ ಕಾಸಿ ಆತಂಕದಿಂದ ಕೇಳಿದ.
‘‘ಬಿಲ್ಲವರಿಗೆ ಎಂತಕ್ಕೆ ಕೊಡುವುದು? ಅವರಿಗೆ ಕೊಟ್ಟರೆ ಏನೂ ಫಾಯಿದ ಇಲ್ಲ...ಭಟ್ಟರಿಗೆ ಕೊಟ್ಟರೆ ನಮ್ಮ ಬಿಲ್ಲವರಿಗೆ ಸಂತೋಸ ಆಗ್ತದೆ...’’ ಪೂಜಾರಿ ಹೇಳಿದರು.
‘‘ಕಾಂಗ್ರೆಸ್‌ನಿಂದ ನೀವು ನಿಂತರೆ ಬಿಜೆಪಿಯ ವಿರುದ್ಧ ಗೆಲ್ಲುವ ಚಾನ್ಸ್ ಉಂಟಾ?’’ ಕಾಸಿ ಅನುಮಾನದಿಂದ ಕೇಳಿದ.
‘‘ಈ ಬಾರಿ ಭಟ್ಟರು ನನ್ನ ಕಡೆಗೆ ಕಣ್ಣು ಹೊಡೆದಿದ್ದಾರೆ ಗೊತ್ತುಂಟಾ...’’ ಜನಾರ್ದನ ಪೂಜಾರಿ ನಾಚಿ ಹೇಳಿದರು.
‘‘ಸಾಧಾರಣವಾಗಿ ಕಲ್ಲಡ್ಕದ ಭಟ್ಟರು ಕಲ್ಲು ಹೊಡೆದು ಫೇಮಸು. ನಿಮಗೇಕೆ ಕಣ್ಣು ಹೊಡೆದರು...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಭಟ್ಟರ ಮೇಲೆ ಸುಮ್ಮಸುಮ್ಮಗೆ ಆರೋಪ ಮಾಡಬೇಡಿ...ಈ ಪೇಪರ್‌ನವರಿಗೆ ಕೆಲಸವಿಲ್ಲ...ಹಾಗೆ ನೋಡಿದರೆ ಒಂದೆರಡು ಕಲ್ಲು ಹೊಡೆದರೆ ಏನೂ ನಷ್ಟವಿಲ್ಲ...ಸದ್ಯಕ್ಕೆ ಅವರು ನನ್ನ ಕಡೆ ಕಣ್ಣು ಹೊಡೆದಿದ್ದಾರೆ ಆದುದರಿಂದ ನಾನು ಗೆಲ್ಲುತ್ತೇನೆ...’’
‘‘ಆದರೆ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀರಿ?’’ ಕಾಸಿ ಕೇಳಿದ.
‘‘ಸೋತರೆ ಬಿಡುವುದಿಲ್ಲ....ಭಟ್ಟರು ಭರವಸೆ ಕೊಟ್ಟಿದ್ದಾರೆ... ಕಲ್ಲಡ್ಕವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದಿದ್ದಾರೆ. ನಾನು ಸೋತರೂ ಪರವಾಗಿಲ್ಲ ಮೊಯ್ಲಿಯನ್ನು ಗೆಲ್ಲಲು ಬಿಡುವುದಿಲ್ಲ...’’
‘‘ನೀವು ಕಾಂಗ್ರೆಸನ್ನು ಸೋಲಿಸಲು ಬಂಡಾಯ ನಿಲ್ಲುತ್ತೀರಾ?’’ ಕಾಸಿ ಕೇಳಿದ.
‘‘ಹ್ಹೆ ಹ್ಹೆ...ಹಾಗೆ ಮಾಡುವುದಕ್ಕೆ ಹುಚ್ಚುಂಟ ನನಗೆ. ನಾನು ಹರ್ಷ ಮೊಯ್ಲಿ ಪರವಾಗಿ ಪ್ರಚಾರ ಮಾಡಿದರೆ ಸಾಕು...ಜನ ಬಿಜೆಪಿಗೆ ಓಟು ಹಾಕಿ ಬಿಡ್ತಾರೆ...’’ ಪೂಜಾರಿ ತಮ್ಮ ಮೀಸೆ ತಿರುವಿದರು.
‘‘ಸಾರ್... ಅದಿರಲಿ... ಹರ್ಷ ಮೊಯ್ಲಿಯ ವಿರುದ್ಧ ಸ್ಪರ್ಧೆಗೆ ಪ್ರಚಾರ ಹೇಗೆ ನಡೆದಿದೆ?’’ ಕಾಸಿ ಪ್ರಶ್ನಾಂತರ ಮಾಡಿದ.
‘‘ಭರ್ಜರಿ ಪ್ರಚಾರ ಸಿಕ್ಕಿದೆ ಮಾರ್ರೆ... ಬಿಜೆಪಿ ಯವರು ಫುಲ್ ಸಪೋರ್ಟ್ ಮಾಡಿದ್ದಾರೆ. ಅವರೆಲ್ಲ ಓಟ್ ಹಾಕ್ಲಿಕ್ಕೆ ಬರ್ತೇನೆ ಅಂದಿದ್ದಾರೆ... ಹಾಗೆಯೇ ನನ್ನ ಪರವಾಗಿ ಪ್ರಚಾರ ಮಾಡಲು ಬೇಕಾದರೆ ಮೋದಿ ಯನ್ನು ಗುಜರಾತಿನಿಂದ ಕರೆಸುವ ಎಂದು ಸದಾನಂದ ಗೌಡ ಭರವಸೆ ನೀಡಿದ್ದಾರೆ... ನಳಿನ್ ಕುಮಾರ್ ಕಟೀಲ್ ಕೂಡ ತುಂಬಾ ಸಂತೋ ಷದಿಂದ ನನಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಯವರೇ ನನಗೆ ಬೆಂಬಲ ಘೋಷಿಸಿರುವಾಗ, ಇನ್ನು ಕಾಂಗ್ರೆಸ್‌ನವರು ನನ್ನನ್ನು ಆಯ್ಕೆ ಮಾಡಬೇಕೋ ಬೇಡವೋ? ನನ್ನ ಬೆಲೆ ಬಿಜೆಪಿಯವರಿಗೆ ಗೊತ್ತುಂಟು. ಆದರೆ ದಿಲ್ಲಿಯಲ್ಲಿರುವ ನಾಯಕರಿಗೆ ಗೊತ್ತಿಲ್ಲ. ಎಂಥ ಬೇಜಾರಿನ ವಿಷಯ ಗೊತ್ತುಂಟಾ?’’ ಪೂಜಾರಿ ಯವರು ಬೇಜಾರಿನಲ್ಲಿ ಹೇಳಿದರು.
ಕಾಸಿ ಪೂಜಾರಿಯವರ ಸಂದರ್ಶನವನ್ನು ಭರ್ಜರಿ ಯಾಗಿ ಮಾಡುತ್ತಿರುವುದು ಮೊಯ್ಲಿಯವರಿಗೆ ಗೊತ್ತಾಗಿ ಕಿಡಿಕಿಡಿಯಾದರು. ಇದರ ಬಿಸಿ ಕಾವ್ಯ ರೂಪದಲ್ಲಿ ಕಾಸಿಯ ಮೈಯನ್ನು ಸುಡುತ್ತಿರಲಾಗಿ ‘‘ಈಗ ಬಂದೆ....’’ ಎನ್ನುತ್ತಾ ಮೊಯ್ಲಿಯ ಹೆಬ್ಬಾಗಿಲೊಳು ನಿಂತಿರಲು, ಸ್ಫೋಟಗೊಳ್ಳಲ್ ನಿಂತ ಗ್ಯಾಸ್‌ಸಿಲಿಂಡರ್‌ನಂದದಿ ಮೊಯ್ಲಿಯುಂ ಕಾಸಿಯಂ ನೋಡಿದರು.
‘‘ಸಾರ್...ಲಾರಿಯಿಂದ ಇಳಿದ ಕೂಡಲೇ ಪೂಜಾರಿ ನನ್ನನ್ನು ಕೈ ಹಿಡಿದು ನಿಲ್ಲಿಸಿದರು. ನಾನು ನಿಜಕ್ಕೂ ನಿಮ್ಮ ಸುಪುತ್ರರನ್ನು ಇಂಟರ್ಯೂ ಮಾಡಲು ಬಂದಿರುವುದು...’’ ಎಂದು ಕಾಸಿಯುಂ ವಿನೀತನಾಗಿ ಉಸಿರ್ದಂ.
ಇತ್ತ ತನ್ನ ಕಂಕುಳೊಳ್ ಪುತ್ರನಂ ಇರಿಸಿ, ಬಾಯಿಗೆ ಮೊಲೆಬತ್ತಿಯಂ ಅಂಟಿಸಿ, ದಶರಥಂ ಶ್ರೀರಾಮನಂ ತೂಗುವಂದದಿ ತೂಗುತಿರ್ಪರ್. ಇದಕಂಡು ಕಾಸಿಯುಂ ಇಂತು ಕೇಳ್ವರ್ ‘‘ಸಾರ್....ಹರ್ಷ ಮೊಯ್ಲಿಯವರು ಈ ಬಾರಿ ಪೂಜಾರಿಯ ವಿರುದ್ಧ ಗೆಲ್ಲುವುದು ಖಚಿತವೇ?’’
ಇದ ಕೇಳಿ ಮೊಯ್ಲಿಯುಂ ಸಿಟ್ಟಾಗಿ ‘ಗೆಲ್ವರ್. ಖಂಡಿತಾ ಗೆಲ್ವರ್. ಶ್ರೀರಾಮನಂ ಎದುರಿಸಿ ಲವಕುಶರ್ ಗೆಲ್ಲಲಿಲ್ಲವೆ? ಅಂತಿರ್ಪೊಡೆ ನನ್ನ ಹರ್ಷಕುಮಾರ್ ಬರಿದೇ ಈ ಪೊಳ್ಳುನಾಯಕನಂ ಗೆಲ್ಲದೇ ಇರ್ಪರೇ...ಹಹಹ’’ ಎಂದು ಹಳೆ ಗನ್ನದೊಡಳ್ ವದರಿದರ್.
ಇತ್ತ ಕಾಸಿಯುಂ ಬಿಡದೇ ಮತ್ತೆ ಪ್ರಶ್ನೆ ಕೇಳ್ಪರ್ ‘‘ಸಾರ್...ಪೂಜಾರಿಯವರನ್ನೇನೋ ಗೆಲ್ಲಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನ ಸ್ಥಿತಿ ಚಕ್ರವ್ಯೆಹದೊಳ್ ನುಗ್ಗಿದ ಅಭಿಮನ್ಯುವಿನಂತೆ ದುರ್ಗತಿಯಾದರೆ ಗತಿಯೇನು?’’
ಇದ ಕೇಳಿ, ಮೊಯ್ಲಿಯ ಕಂಕುಳಲ್ಲಿದ್ದ ಹರ್ಷ ಕುಮಾರನ್ ಭಯದಿಂದ ಚೀರಿದನ್. ಮಗು ಬೆಚ್ಚಿ ಬಿದ್ದುದ ಕಂಡು ಕಾಸಿಯಂ ರೋಷದಿಂ ನೋಡಿ ‘‘ಎಲವೋ ಅಧಮಾಧಮ...ಲೋಕಸಭಾ ಚುನಾವಣೆ ಯೊಳ್ ಎನ್ನ ಪುತ್ರನ್ ಗೆದ್ದರೆಷ್ಟು, ಬಿಟ್ಟರೆಷ್ಟು. ಲೋಕ ಸಭೆಯೊಳ್ ಸೋತರೆ ರಾಜ್ಯಸಭೆಯೆಂಬ ಹಿಂಬಾಗಿ ಲೊಳ್ ನನ್ನ ಪುತ್ರನಂ ಕಳುಹಿಸಿ ಕೇಂದ್ರ ಸಚಿವನಾಗಿ ಮಾಳ್ಪೆ...’’
‘‘ಸಾರ್...ಹೀಗೆ ಆದರೆ ನಿಮ್ಮ ಹರ್ಷಕುಮಾರ ಮೋದಿ ಸರಕಾರದಲ್ಲಿ ಕೇಂದ್ರ ಸಚಿವರಾಗುವುದು ಸತ್ಯ. ಆದರೆ ನಿಮ್ಮನ್ನು ನಂಬಿದ ರಾಹುಲ್ ಗಾಂಧಿ ಮಾತ್ರ ಚಕ್ರವ್ಯೆಹದಲ್ಲಿ ಸಿಕ್ಕಿದ ಅಭಿಮನ್ಯು ಆಗುವುದು ಖಚಿತ...’’ ಎಂದು ಓಡಲು ಅಣಿಯಾದ.
ವೀರಪ್ಪ ಮೊಯ್ಲಿ ಸಂತೋಷದಿಂದ ಹೇಳಿದರು ‘‘ಅಭಿಮನ್ಯು ಆದರೇನಂತೆ? ರಾಹುಲ್‌ಗಾಂಧಿಯ ಹೆಸರಿನೊಳ್ ನಾನ್ ದುರಂತ ಕಾವ್ಯಮಂ ಬರೆದು, ಮಹಾಕವಿಯೆಂಬ ಬಿರುದನ್ ಪೇಜಾವರಶ್ರೀ ಮೂಲಕ ಪಡೆವೆಂ’’ ಎಂದು ರಾಹುಲ್‌ಗಾಂಧಿಯ ದುರಂತ ಕಾವ್ಯವನ್ನು ಬರೆಯಲು ಮಡಿಯುಟ್ಟು ಕುಳಿತರು.
ರವಿವಾರ - ಫೆಬ್ರವರಿ -23-2014

Sunday, April 26, 2015

‘ಎರಡು ನ್ಯಾನೋ ಕಾರಿದ್ದರೆ ಅವರು ಅತಿ ಬಡವರು’

ಪಶ್ಚಿಮ ಬಂಗಾಳದಲ್ಲಿ ಬಡವರಿಗಾಗಿ ನ್ಯಾನೋ ಕಾರು ತಯಾರಿಸಲು ಅಲ್ಲಿನ ಕಮ್ಯುನಿಸ್ಟ್ ಸರಕಾರ ರೈತರ ಜಮೀನು ಕಿತ್ತು ಕೊಳ್ಳಲು ಹೊರಟಾಗ 2008ರಲ್ಲಿ ಬರೆದ ಬುಡಬುಡಿಕೆ. ಜನವರಿ, 13, 2008ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

‘ಕ್ರಾಂತಿ’ ‘ಕ್ರಾಂತಿ’ ‘ಕ್ರಾಂತಿ’ ಹೀಗೆ ಪತ್ರಿಕೆಗಳಲ್ಲೆಲ್ಲಾ ಕ್ರಾಂತಿಯ ತಲೆ ಬರಹಗಳು ಕಾಣಿಸಿಕೊಂಡದ್ದೇ ಮಲೆನಾಡಿನ ಕಾಡಿನಲ್ಲಿ ಅವಿತುಕೊಂಡಿದ್ದ ನಕ್ಸಲೀಯರು  ಕಂಗಾಲಾದರು. ನಕಲಿ ಎನ್‌ಕೌಂಟರ್ ಭಯದಿಂದ ನಾವಿಲ್ಲಿ ಕಾಡಿನಲ್ಲಿ ದಿಗ್ಭಂಧನಕ್ಕೊಳಗಾಗಿರುವಾಗ ನಾಡಿನಲ್ಲಿ ಕ್ರಾಂತಿ ಮಾಡುತ್ತಿರುವವರು ಯಾರಾಗಿರಬಹುದು? ನಮ್ಮ ಹೆಸರಿನಲ್ಲಿ ಮತ್ತೆ ಯಾರಾದರೂ ಮನೆಗಳಿಗೆ ನುಗ್ಗಿದರೋ? ಅಥವಾ ನಮ್ಮಿಂದ ಸಿಡಿದವರು ಹೊಸತಾಗಿ ಗುಂಪು ಕಟ್ಟಿ ಬಂಡವಾಳ ಶಾಹಿಗಳ ವಿರುದ್ಧ ಕೋವಿ ಎತ್ತಿರಬಹುದೋ, ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಪತ್ರಿಕಾ ಹೇಳಿಕೆ ನೀಡಿರಬಹುದೋ... ಹೀಗೆ ಸಾವಿರಾರು ಪ್ರಶ್ನೆಗಳು ಅವರನ್ನು ಕಾಡಿತು. ಅಷ್ಟರಲ್ಲಿ ಒಬ್ಬಾತ ನುಡಿದ ‘‘ಇದು ಬೇರೆ ಕ್ರಾಂತಿ ಸಂಗಾತಿಗಳೇ... ಪತ್ರಿಕೆಗಳು ಬರೆಯುತ್ತಿರುವುದು ಮಾವೋ ಕ್ರಾಂತಿಯ ಬಗ್ಗೆಯಲ್ಲ...’’
ನಕ್ಸಲ್ ನಾಯಕನಿಗೆ ಅರ್ಥವಾಗಲಿಲ್ಲ. ‘‘ಕಾರ್ಲ್ ಮಾರ್ಕ್ಸ್‌ವಾದಿಗಳ ಕ್ರಾಂತಿಯ ಬಗ್ಗೆ ಬರೆದಿದ್ದಾರೆಯೆ?’’
ಸಂಗಾತಿ ನುಡಿದ ‘‘ಇದು ಕಾರ್ಲ್ ಮಾರ್ಕ್ಸ್‌ವಾದಿಗಳ ಬಗ್ಗೆ ಅಲ್ಲ... ಕಾರ್ ಮಾರ್ಕ್ಸ್‌ವಾದಿಗಳ ಬಗ್ಗೆ....’’
ನಾಯಕನಿಗೆ ತಲೆ ಬಿಸಿಯಾಯಿತು. ‘‘ಅದು ಯಾವುದು ಕಾರ್ ಮಾರ್ಕ್ಸ್‌ವಾದಿಗಳು... ಮಾರ್ಕ್ಸ್‌ವಾದಿಗಳ ಇನ್ನೊಂದು ಗುಂಪೇ? ಯಾರದರ ನಾಯಕ?’’
ಸಂಗಾತಿ ವಿವರಿಸಿದ ‘‘ ಈ ಗುಂಪು ಕ್ರಾಂತಿ ಮಾಡಲು ಹೊರಟಿರುವುದು ಕೋವಿಯಲ್ಲಲ್ಲ. ಕಾಮ್ರೇಡ್.. ಕಾರ್‌ನಲ್ಲಿ. ಈ ಕಾರ್ ಕ್ರಾಂತಿಗೆ ಕಾರ್ಲ್‌ಮಾಕ್ಸ್ ಬೆಂಬಲವಿದೆಯಂತೆ. ಇನ್ನು ಮುಂದೆ ಕಾರ್ಲ್‌ಮಾಕ್ಸ್ ಎನ್ನುವ ಹೆಸರನ್ನು ಕಾರಲ್ಲಿ ಮಾರ್ಕ್ಸ್ ಎಂದು ತಿದ್ದಿ ಓದಲಾಗುವುದೆಂದು ಪಶ್ಚಿಮಬಂಗಾಳದ ಕಮ್ಯುನಿಷ್ಟ್ ನಾಯಕರು ಹೇಳಿಕೆ ನೀಡಿದ್ದಾರೆ.’’
ನಾಯಕನಿಗೆ ಅರ್ಥವಾಗಲಿಲ್ಲ ‘‘ ರಸ್ತೆ ಅಪಘಾತದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ಗಮನಿಸಿದರೆ, ನಮ್ಮ ಕೋವಿಗಿಂತ ಕಾರೇ ಹಿಂಸೆಗೆ ಹೆಚ್ಚು ಅನುಕೂಲ. ಆದುದರಿಂದ ನಮ್ಮ ಪಶ್ಚಿಮ ಬಂಗಾಳದ ಸಂಗಾತಿಗಳು ಕ್ರಾಂತಿಗೆ ಕಾರನ್ನು ಬಳಸಲು ಹೊರಟಿರಬೇಕು...’’
ಸಂಗಾತಿ ನುಡಿದ ‘‘ಬಡವರ ಕೈಗೆಟಕುವ ದರದಲ್ಲಿ ಕಾರನ್ನು ಉತ್ಪಾದಿಸುತ್ತಿದ್ದಾರಂತೆ. ಈ ಕಾರಿಗೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಬೆಂಬಲ ನೀಡಿದ್ದಾರೆ. ಬಡವರಿಗೆ ಕಾರು ಎಟಕುತ್ತದೆ ಎಂದ ಮೇಲೆ ಅದು ಕ್ರಾಂತಿಯೇ ತಾನೆ... ಇದೀಗ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಬದಲಿಗೆ ಸಿಪಿಐ(ಟಿ) ಎಂದು ಕರೆಯಲಾಗುತ್ತದೆಯಂತೆ...’’
‘‘ಟಿ ಎಂದರೆ?’’
‘‘ಟಿ ಎಂದರೆ ಟಾಟಾ ಅಂತ. ಇನ್ನು ಮುಂದೆ ಸಿಪಿಐಎಂ ಟಾಟಾ...’’
‘‘ಹಾಗಾದರೆ ಮಾರ್ಕ್ಸ್...’’
‘‘ಅವನಿಗೆ ಈಗಾಗಲೇ ಟಾಟಾ ಹೇಳಿಯಾಗಿದೆ...ಅವರ ಸ್ಥಾನದಲ್ಲಿ ಟಾಟಾವನ್ನೇ ಶಾಶ್ವತವಾಗಿ ನಿಲ್ಲಿಸಲಾಗುತ್ತದೆಯಂತೆ...’’
***
ರತನ್ ಟಾಟಾ ಬೆಳಗ್ಗೆ ಎದ್ದಾಗ ಅವರ ಪುಟ್ಟ ಮೊಮ್ಮಗಳು ಏನೋ ಬರೆಯುತ್ತಿದ್ದಳು. ಟಾಟಾ ಮೆಲ್ಲಗೆ ಮೊಮ್ಮಗಳ ಹತ್ತಿರ ಹೋಗಿ’’ ಪುಟ್ಟಿ ಏನು ಬರೆಯುತ್ತಿದ್ದೀಯಮ್ಮ...?’’ ಎಂದು ಕೇಳಿದರು.
ಪುಟ್ಟಿ ಹೇಳಿದಳು ‘‘ಕತೆ ಬರೆಯುತ್ತಿದ್ದೇನೆ ತಾತಾ...’’
‘‘ಯಾರ ಕತೆ ಪುಟ್ಟಿ?’’
‘‘ಬಡವರ ಕತೆ ತಾತಾ’’
ಟಾಟಾಗೆ ಖುಷಿಯಾಯಿತು. ತನ್ನ ಹಾಗೆಯೇ ಈಕೆಯೂ ಬಡವರ ಕುರಿತಂತೆ ಆಲೋಚಿಸುವುದು ನೋಡಿದರೆ, ನನ್ನ ಮೊಮ್ಮಗಳು ದೊಡ್ಡ ಉದ್ಯಮಿಯಾಗುವುದು ಗ್ಯಾರಂಟಿ ಅನ್ನಿಸಿತು. ‘‘ಇಲ್ಲಿ ಕೊಡಮ್ಮ ನಾನೊಮ್ಮೆ ಓದಿ ಕೊಡುತ್ತೇನೆ’’ ಎಂದರು. ಪುಟ್ಟಿ ಕೊಟ್ಟಳು.
‘‘ಒಂದಾನೊಂದು ಊರಿನಲ್ಲಿ ಒಬ್ಬ ದಟ್ಟ ದರಿದ್ರ ಬಡವನಿದ್ದ. ಅವನು ಅದೆಷ್ಟು ಬಡವನಾಗಿದ್ದ ಎಂದರೆ ಓಡಾಡುವದಕ್ಕೆ ಅವನಲ್ಲಿ ಒಂದೇ ಒಂದು ‘ನ್ಯಾನೋ’ ಕಾರು ಇತ್ತು. ಅವರ ಮನೆ ಅದೆಷ್ಟು ಸಣ್ಣದಾಗಿತ್ತು ಎಂದರೆ, ಅಲ್ಲಿ ಒಂದು ಹೂವಿನ ಗಾರ್ಡನ್ ಕೂಡಾ ಇದ್ದಿರಲ್ಲಿಲ್ಲ. ಮನೆಗೆ ಎಸಿ ಕೂಡ ಇದ್ದಿರಲಿಲ್ಲ. ಪಾಪ ಅವನ ಮಕ್ಕಳಿಗೆ ಓದುವುದಕ್ಕೆ ಮನೆಯಲ್ಲಿ ರೀಡಿಂಗ್ ರೂಮ್ ಕೂಡಾ ಇದ್ದಿರಲಿಲ್ಲ. ಆ ಬಡವನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಆಳು ಕೂಡಾ ಇದ್ದಿರಲಿಲ್ಲ. ಆದುದರಿಂದ ಬಡವನ ಹೆಂಡತಿಯೇ ಅಡುಗೆ ಕೆಲಸ ಮಾಡಬೇಕಾಗಿತ್ತು....’’
 ಟಾಟಾಗೆ ಕತೆ ಓದುತ್ತಾ ಓದುತ್ತಾ ಕಣ್ಣೀರು ಉಕ್ಕಿ ಬಂತು. ಈ ದೇಶದಲ್ಲಿ ಬಡವರು ಎಷ್ಟು ಕಷ್ಟ ಪಡುತ್ತಿದ್ದಾರೆ ಅನ್ನಿಸಿತು. ತನ್ನ ಮೊಮ್ಮಗಳು ಬಡವರ ಬಗ್ಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ಅಚ್ಚರಿಯೂ ಆಯಿತು. ತನ್ನ ಮೊಮ್ಮಗಳ ಹೆಸರಿನಲ್ಲಿ ಕಡಿಮೆ ದರಕ್ಕೆ ಫ್ರಿಜ್ಜು, ಕಡಿಮೆ ಬೆಲೆಯ ಎಸಿ ಇತ್ಯಾದಿಗಳನ್ನು ಅತಿ ಬಡವರಿಗಾಗಿ ಸಿದ್ಧಗೊಳಿಸುವ ನಿರ್ಧಾರವನ್ನು ಅದಾಗಲೇ ಅವರು ತೆಗೆದುಕೊಂಡಾಗಿತ್ತು.
***
ರಾಜ್ಯದಲ್ಲಿ ನ್ಯಾನೋ ಕಾರು ಬಿಡುಗಡೆಯಾದದ್ದೇ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದರು. ಎಂಜಲು ಕಾಸಿ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾದ. ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯ ಮಜಾ ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಸಿಗುತ್ತಿರಲಿಲ್ಲ. ಮುಖ್ಯವಾಗಿ ರಾಜ್ಯಪಾಲರು ತರಿಸುವ ಟೀ ಜೊತೆಗಿರುವ ಇಡ್ಲಿಯ ಚಟ್ನಿ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅದಲ್ಲದೆ, ಮುಖ್ಯಮಂತ್ರಿಗಳಾದರೆ, ಪಕ್ಕಕ್ಕೆ ಕರೆದು ನೂರೋ ಇನ್ನೂರೋ ಕಿಸೆಗೆ ತಳ್ಳಿಬಿಡುತ್ತಿದ್ದರು. ಆ ಸೌಜನ್ಯವೂ ರಾಜ್ಯಪಾಲರಲ್ಲಿರಲಿಲ್ಲ. ಆದರೂ ಸಂಪಾದಕ ಒತ್ತಡದಿಂದಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ. ರಾಜ್ಯಪಾಲರು ಅದಾಗಲೇ ಪತ್ರಿಕಾಗೋಷ್ಠಿಯನ್ನು ಆರಂಭಿಸಿ ಬಿಟ್ಟಿದ್ದರು. ಅವರ ಮುಖದಲ್ಲಿ ಸಂಭ್ರಮ ಕುಣಿಯುತ್ತಿತ್ತು.
‘‘ರಾಜ್ಯದ ಬಡವರ ಪಾಲಿಗೆ ಇದೊಂದು ಸುದಿನ. ನನ್ನ ಆಳ್ವಿಕೆಯಲ್ಲಿ ಇಂತಹ ದಿನವೊಂದು ಬಂದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನ್ಯಾನೋ ಕಾರು ಬಿಡುಗಡೆಗೊಂಡಿರುವುದರಿಂದ ದೂರ ದೂರದ ಹಳ್ಳಿಗಳಿಂದ ಜನತಾದರ್ಶನಕ್ಕೆ ಬರುವ ಬಡವರಿಗೆ ತುಂಬಾ ಅನುಕೂಲವಾಗಲಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಲು ಈ ನ್ಯಾನೋ ಕಾರಿನಲ್ಲೇ ಆಗಮಿಸಬಹುದು. ಹಾಗೆಯೇ ಜನತಾದರ್ಶನಕ್ಕೆಂದು ಬಂದವರು ತಮ್ಮ ಕೆಲಸ ಮುಗಿದ ಬಳಿಕ ಬೆಂಗಳೂರನ್ನು ಸುತ್ತಾಡಿಕೊಂಡೂ ಹೋಗಬಹುದು. ಇನ್ನು ಮುಂದೆ ನ್ಯಾನೋ ಕಾರು ಯಾರೆಲ್ಲಾ ಹೊಂದಿದ್ದಾರೋ ಅವರನ್ನೆಲ್ಲ ಬಡತನ ರೇಖೆಗಿಂತ ಕೆಳಗಿನವರೆಂದು ಗುರುತಿಸಲಾಗುತ್ತದೆ. ಬಡವರೊಂದೂ, ಬಡತನ ರೇಖೆಗಿಂತ ಕೆಳಗಿನವರೆಂದೂ ಗುರುತಿಸಬೇಕಾದರೆ ಅವರು ಕಡ್ಡಾಯವಾಗಿ ‘ನ್ಯಾನೋ’ ಕಾರನ್ನು ಹೊಂದಿರಬೇಕಾಗುತ್ತದೆ. ಯಾರೆಲ್ಲ ನ್ಯಾನೋ ಕಾರು ಹೊಂದಿಲ್ಲವೋ ಅವರ ಹಸಿರು ಕಾರ್ಡನ್ನು ಹಿಂದಕ್ಕೆ ಪಡೆಯಲಾಗುತ್ತದೆ...’’
ಸಾಲ ಸೋಲ ಮಾಡಿಯಾದರೂ ನ್ಯಾನೋ ಕಾರು ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿತು ಎಂಜಲು ಕಾಸಿಗೆ. ಇಲ್ಲವಾದರೆ ಅವನ ಮನೆಯ ಹಸಿರು ಕಾರ್ಡು ವಜಾ ಆಗುವ ಅಪಾಯವಿತ್ತು. ಅದನ್ನು ನೆನೆಸಿಕೊಂಡೇ ಕೇಳಿದ ‘‘ಒಂದು ವೇಳೆ ಕೆಲವರಲ್ಲಿ ಎರಡು ನ್ಯಾನೋ ಕಾರು ಇದ್ದರೆ...’’
ರಾಜ್ಯಪಾಲರಲ್ಲಿ ಉತ್ತರ ಸಿದ್ಧವಿತ್ತು. ‘‘ನೋಡಿ, ಒಂದು ನ್ಯಾನೋ ಕಾರು ಇದ್ದರೆ ಅವರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಎರಡು ನ್ಯಾನೋ ಕಾರು ಇದ್ದರೆ ಅವರನ್ನು ಅತಿ ಬಡವರು ಎಂದು ಗುರುತಿಸಲಾಗುತ್ತದೆ. ಅಂತವರನ್ನು ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ನಾವು ಗುರುತಿಸುತ್ತೇವೆ...’’
‘‘ನ್ಯಾನೋ ಕಾರು ಇಲ್ಲದೇ ಇದ್ದರೆ...’’
ರಾಜ್ಯಪಾಲರು ಕಡ್ಡಿ ಮುರಿದಂತೆ ಹೇಳಿದರು ‘‘ಯಾರಲ್ಲೆಲ್ಲಾ ಬಡವರಿಗಾಗಿ ತಯಾರಿಸಿರುವ ನ್ಯಾನೋ ಕಾರು ಇಲ್ಲವೋ ಅವರನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮತ್ತು ಅವರ ಮೇಲೆ ತೆರಿಗೆಗಳನ್ನು ಹಾಕಲಾಗುತ್ತದೆ. ಆದುದರಿಂದ ಇನ್ನೂ ಎರಡು ತಿಂಗಳ ಒಳಗಾಗಿ ಎಲ್ಲ ಬಡವರು ನ್ಯಾನೋ ಕಾರುಗಳನ್ನು ಕೊಂಡು ತಾವು ಬಡವರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ’’ ಎನ್ನುತ್ತಾ ಎದ್ದು ನಿಂತರು. ಅಷ್ಟರಲ್ಲಿ ಶೀರ, ಉಪ್ಪಿಟ್ಟು ಹಿಡಿದುಕೊಂಡು ಬಂದರು. ಎಂಜಲು ಕಾಸಿ ಎಂಜಲು ಸುರಿಸುತ್ತಾ ಆ ಕಡೆಗೆ ತಿರುಗಿದ.
(ಜನವರಿ, 13, 2008, ರವಿವಾರ)

Saturday, April 25, 2015

ಕೆಲವು ಜಾಹಿರಾ ‘ಥೂ’ಗಳು

2008ನೇ ಇಸವಿಯಲ್ಲಿ ವಿಧಾನಸಭಾ ಚುನಾವಣೆಯ ಹೊತ್ತು. ಪಕ್ಷಾಂತರದಲ್ಲಿ ಕುಖ್ಯಾತರಾಗಿದ್ದ ಬಂಗಾರಪ್ಪರನ್ನು ಬಿಜೆಪಿ ಹೊರ ಹಾಕಿದ ಸಂದರ್ಭ. ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಸಮಯ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ವರ ಬೇಕಾಗಿದೆ
 ಈಗಾಗಲೇ ಹತ್ತು ಬಾರಿ ಡೈವರ್ಸ್ ಪಡೆದ 70ರ ತಾರುಣ್ಯದ ಯುವತಿಗೆ ಯೋಗ್ಯ ವರ ಬೇಕಾಗಿದೆ. ಯಾವ ಧರ್ಮ, ಜಾತಿ, ವರ್ಗಗಳಿಗೆ ಸೇರಿದ್ದರೂ ಚಿಂತೆಯಿಲ್ಲ. ಈ ಹಿಂದೆ ಡೈವರ್ಸ್ ನೀಡಿದ ಗಂಡಂದಿರಾದರೂ ಆದೀತು. ಈಗಾಗಲೇ ಪೂಜಾರಿಗಳು ಮುಹೂರ್ತ, ಸಮಯ, ಮದುವೆ ಹಾಲ್ ಎಲ್ಲವನ್ನೂ ನಿಗದಿ ಪಡಿಸಿರುವುದರಿಂದ ಅರ್ಜೆಂಟಾಗಿ ಮದುವೆಯಾಗಬೇಕಾಗಿದೆ. ತಾಳಿಯ ಹಣವನ್ನು ವಧುವೇ ಭರಿಸಲಿರುವುದರಿಂದ ವರ ಸೀದಾ ಮಂಟಪಕ್ಕೆ ಬಂದು ತಾಳಿ ಕಟ್ಟಿದರೆ ಆಯಿತು. ಈಡಿಗ ಜಾತಿಗೆ ಸೇರಿರುವ ಈ ಹುಡುಗಿ ಅತಿ ಸುಂದರಿ, ಹಲವು ಮದುವೆಯಾಗಿ ಸಾಕಷ್ಟು ಅನುಭವವಿರುವುದರಿಂದ ವರನಿಗೆ ಅನುಕೂಲ. ವಧುವಿನ ಕೈಯಲ್ಲಿ ಸ್ವಲ್ಪ ಪಿತ್ರಾರ್ಜಿತ ಆಸ್ತಿ ಇದೆ. ಆಸಕ್ತಿ ಇರುವವರು ತಕ್ಷಣ ಮುಖತಃ ಸಂಪರ್ಕಿಸಬೇಕು.
ಬಂಗಾರಮ್ಮ, ಸಮಾಜವಾದಿ ವಿಲ್ಲಾ, ಸಮಯ ಸಾಧಕ ರಸ್ತೆ, ಬಿಜೆಪಿ ಮೊದಲ ತಿರುವು, ಹಳೇ ಕ್ರಾಂತಿರಂಗ ಬೀದಿ, ಕಾಂಗ್ರೆಸ್ ಮುಖ್ಯರಸ್ತೆ, ಶಿವಮೊಗ್ಗ-111 (ಮೊಬೈಲ್ ಫೋನ್‌ನ ಕರೆನ್ಸಿ ಮುಗಿದಿರುವುದರಿಂದ ಹಳೆ ನಂಬರನ್ನು ಸಂಪರ್ಕಿಸಬಾರದಾಗಿ ವಿನಂತಿ)
***

ಕುರಿಗಳು ಮಾರಾಟಕ್ಕಿವೆ
ನಾನೇ ನನ್ನ ದೊಡ್ಡಿಯಲ್ಲಿ ಸಾಕಿದ ದಷ್ಟಪುಷ್ಟ ಅಲ್ಪಸಂಖ್ಯಾಕ ಕುರಿಗಳು ಮಾರಾಟಕ್ಕಿವೆ. ಇರಾಕ್‌ನಿಂದ ತರಿಸಿದ ಸದ್ದಾಂ ಕಂಪೆನಿಯ ಹುಲ್ಲು ಹಾಕಿ ಈ ಕುರಿಗಳನ್ನು ಸಾಕಲಾಗಿದೆ. ಬಲಿ ಕೊಡುವುದಕ್ಕೆ ಯೋಗ್ಯ ಕುರಿಗಳು ಇವು. ನನಗೆ ವಯಸ್ಸಾಗಿರುವುದರಿಂದ ಈ ಕುರಿಗಳನ್ನು ಮಾರಿ, ನನ್ನ ಅಳಿಯ ಮತ್ತು ಮೊಮ್ಮಕ್ಕಳಿಗೆ ಸಲ್ಲಬೇಕಾದುದನ್ನು ಕೊಟ್ಟು, ನಾನು ನಿವತ್ತ ಜೀವನ ಮಾಡಬೇಕೆಂದಿದ್ದೇನೆ. ಆದುದರಿಂದ ಯಾರಾದರೂ ಸರಿ, ಒಳ್ಳೆಯ ದರ ಕೊಟ್ಟರೆ ಈ ಕುರಿಗಳನ್ನು ಮಾರುವುದಕ್ಕೆ ಸಿದ್ಧ. ಕುರಿಗಳ ಜೊತೆಗೆ ಕತ್ತಿಗಳನ್ನು ಪುಕ್ಕಟ್ಟೆಯಾಗಿ ನೀಡಲಾಗುವುದು. ಬಿರಿಯಾನಿ ಮಾಡಲು ಯೋಗ್ಯ ಕುರಿಗಳು. ನನ್ನ ಮಕ್ಕಳು, ಮೊಮ್ಮಕ್ಕಳಿಗಾಗಿಯೇ ಸಾಕಿರುವ ಕುರಿಗಳು ಇವಾಗಿರುವುದರಿಂದ ದರದಲ್ಲಿ ಯಾವುದೇ ರಾಜಿಯಿಲ್ಲ. ಇವನ್ನು ಮಾರಿ ಸಿಕ್ಕಿದ ಲಾಭವನ್ನು ಅಳಿಯ, ಮೊಮ್ಮಕ್ಕಳಿಗೆ ಸಮನಾಗಿ ಹಂಚಿ ಅಲ್ಪಸಂಖ್ಯಾತ ಸಮುದಾಯವನ್ನು ಉದ್ಧಾರ ಮಾಡುವುದು ನನ್ನ ಉದ್ದೇಶ. ಆದುದರಿಂದ ಈ ಕುರಿಗಳನ್ನು ಅತಿ ಹೆಚ್ಚು ದರ ಕೊಟ್ಟು ಖರೀದಿಸಿ ಅಲ್ಪಸಂಖ್ಯಾತರ ಏಳಿಗೆ ಮಾಡಬೇಕೆಂದು ಮನವಿ. ಅಲ್ಪಸಂಖ್ಯಾತ ಕುರಿಗಳಿಂದ ಮಾಡಲ್ಪಟ್ಟ ಚಿಲ್ಲಿ, ಫ್ರೈ, ಸುಕ್ಕ ಇತ್ಯಾದಿಗಳು ಇತ್ತೀಚೆಗೆ ಗುಜರಾತ್‌ನಲ್ಲಿ ಭಾರೀ ಖ್ಯಾತಿಯನ್ನು ಪಡೆದಿದ್ದವು. ಈ ಕುರಿಗಳನ್ನು ಕಡಿದು ಯಾವ ಥರದ ಸುಕ್ಕ, ಫ್ರೈ, ಟಿಕ್ಕಾ ಮಾಡಿ ತಿಂದರೂ ನನ್ನ ಮತ್ತು ನನ್ನ ಮೊಮ್ಮಕ್ಕಳ ಅಭ್ಯಂತರವಿಲ್ಲ. 
ಜೋಕರ್ ಶರೀಫ್, ಅಲ್ಪಸಂಖ್ಯಾತರ ದೊಡ್ಡಿ, ಕಾಂಗ್ರೆಸ್ ವದ್ದಾಶ್ರಮ ರಸ್ತೆ, ಸದ್ದಾಂ ಹುಸೇನ್ ಅಡ್ಡ ಹಾದಿ, ರೈಲ್ವೆ ಹಳಿಗಳ ಸಮೀಪ, ಶಿವಾಜಿನಗರ
*** 

ಕಾಣೆಯಾಗಿದ್ದಾರೆ
ವಾರದ ಹಿಂದೆ ಚುನಾವಣಾ ಸಂತೆಯನ್ನು ನೋಡಿ ಬರುತ್ತೇನೆ ಎಂದು ಹೋದ ಸತ್ಯ, ಆತ್ಮಗೌರವ ಮತ್ತು ಪ್ರಾಮಾಣಿಕತೆ ಎಂಬ ಮೂವರು ಮಕ್ಕಳು ಕಾಣೆಯಾಗಿದ್ದಾರೆ. ಆತ್ಮಸಾಕ್ಷಿ ಎಂಬ ಊರಿನ ನಿವಾಸಿಗಳಾಗಿರುವ ಈ ಮಕ್ಕಳು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಹೊಂದಿದ್ದು, ಹದಯದ ಭಾಷೆಯನ್ನು ಮಾತನಾಡುತ್ತಾರೆ. ಯಾರಾದರೂ ಈ ಮಕ್ಕಳನ್ನು ನೋಡಿದರೆ ದಯವಿಟ್ಟು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಬೇಡಿ. ಯಾಕೆಂದರೆ ಅವರು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವ ಸಾಧ್ಯತೆಯಿದೆ. ಸ್ಥಳೀಯ ರಾಜಕಾರಣಿಗಳಿಗೂ ಒಪ್ಪಿಸಬೇಡಿ. ಅವರು ಚಿಲ್ಲರೆ ಹಣಕ್ಕೆ ಆ ಮಕ್ಕಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಸಿಕ್ಕಿದರೆ ನಿಮ್ಮ ನಿಮ್ಮ ಆತ್ಮ ಸಾಕ್ಷಿಯೊಳಗೆ ಭದ್ರವಾಗಿ ಬಚ್ಚಿಟ್ಟುಕೊಳ್ಳಿ. ಚುನಾವಣೆ ಸಂತೆ ಮುಗಿಯುವವರೆಗೆ ಅವರನ್ನು ಹೊರಗೆ ಬಿಡಬೇಡಿ.
ಪ್ರಜಾಪ್ರಭುತ್ವ, ಕಾಣೆಯಾದ ಮಕ್ಕಳ ನಿರ್ಭಾಗ್ಯ ತಂದೆ
***
ಹರಾಜು ಪ್ರಕಟನೆ
ಅತ್ಯುತ್ತಮ ತಳಿಯ 20 ಕ್ರಿಕೆಟ್ ಆಟಗಾರರು ಹರಾಜಿಗಿದ್ದಾರೆ. ಸ್ಫುರದ್ರೂಪಿಗಳಾಗಿರುವ ಈ ಕ್ರಿಕೆಟ್ ಆಟಗಾರರು ಅತ್ಯಂತ ಚೆಂದ ಹಾಡಬಲ್ಲರು. ಫ್ಯಾಶನ್ ಶೋಗಳಲ್ಲಿ ಮಾರ್ಜಾಲ ನಡಿಗೆಯ ಕುರಿತಂತೆ ವಿಶೇಷ ತರಬೇತಿ ಪಡೆದಿದ್ದಾರೆ. ಬಿಕಿನಿ ಹಾಕಿದ ಹುಡುಗಿಯರೊಂದಿಗೆ ಅದ್ಭುತವಾಗಿ ಕುಣಿಯಬಲ್ಲರು. ಯಾವ ಯಾವ ಸಂದರ್ಭಗಳಲ್ಲಿ ಹೇಗೆ ವಿವಾದಿತರಾಗಿ ಸುದ್ದಿಯಾಗಬೇಕು ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದ್ದಾರೆ. ಬೇಕಾದರೆ ಆಟಕ್ಕೂ ಕೂಡಾ ಇವರನ್ನು ಬಳಸಬಹುದು. ಆದರೆ ಇವರ ಮೇಕಪ್ ಕೆಡದಂತೆ ಜಾಗತೆ ವಹಿಸಬೇಕು. ಬಿಸಿಲಿಗೆ ಹೆಚ್ಚು ಹೊತ್ತು ನಿಲ್ಲಿಸಬಾರದು. ಆಟಗಾರರ ಜೊತೆಗೆ ಅವರ ನಾಚಿಕೆ, ಮಾನ ಮರ್ಯಾದೆ, ಸ್ವಂತಿಕೆ ಇವುಗಳಿಗೆ ಪ್ರತ್ಯೇಕ ದರ ವಿಧಿಸಲಾಗುವುದಿಲ್ಲ. ಅದನ್ನು ಪುಕ್ಕಟೆಯಾಗಿ ನೀಡಲಾಗುತ್ತದೆ.
ಡಾಲರ್ ಕುಮಾರ್, ಆತ್ಮ ಗೌರವವಿಲ್ಲ, ಹಾಕಿ ಆಟದ ಗೋರಿಯ ಎದುರುಗಡೆ, ಬಹುರಾಷ್ಟ್ರೀಯ ಕಂಪೆನಿ, ಭಾರತ
***
ಅನಾಥ ಶವ ಪತ್ತೆ
ಗುಜರಾತ್‌ನ ಗೋಧ್ರಾ ರೈಲು ಹಳಿ ಬಳಿ ಒಂದು ಅನಾಥ ಶವ ಪತ್ತೆಯಾಗಿದೆ. ಮುಖ ಗುರುತು ಸಿಕ್ಕಲಾರದಷ್ಟು ಜಜ್ಜಿ ಹೋಗಿದೆ. ಆತ್ಮಹತ್ಯೆಯೋ, ಕೊಲೆಯೋ ತಿಳಿಯದಾಗಿದೆ. ಮತ ದೇಹದ ಅಂಗಿಯ ಕಾಲರ್ ಬಳಿ ‘ಅಂಬೇಡ್ಕರ್ ಟೈಲರ್ ಶಾಪ್’ ಎನ್ನುವ ಮಾರ್ಕ್ ಇದೆ. ಕಿಸೆಯಲ್ಲೊಂದು ಗುರುತು ಚೀಟಿ ಸಿಕ್ಕಿದ್ದು, ಅದರಲ್ಲಿ ‘ಸಂವಿಧಾನ’ ಎಂಬ ಹೆಸರಿದ್ದು, ಅದು ಮತ ವ್ಯಕ್ತಿಯ ಹೆಸರಾಗಿರಬೇಕೆಂದು ಶಂಕಿಸಲಾಗಿದೆ. ಗುರುತು ಚೀಟಿಯಲ್ಲಿ ತಂದೆಯ ಹೆಸರು ಸ್ವಾತಂತ್ರ, ತಾಯಿಯ ಹೆಸರು ಭಾರತಮಾತೆ ಎಂದು ಬರೆದಿದೆ. ವ್ಯಕ್ತಿಯ ದೇಹದಾದ್ಯಂತ ಚೂರಿಯ ಗಾಯಗಳಿವೆ. ವ್ಯಕ್ತಿಯ ಎದೆ ಭಾಗಕ್ಕಿಂತ ಬೆನ್ನಿನ ಭಾಗಕ್ಕೆ ಹೆಚ್ಚು ಇರಿಯಲಾಗಿದೆ. ಗಾಯದ ಗುರುತು ನೋಡಿದಾಗ ತ್ರಿಶೂಲಗಳಿಂದ ಬೆನ್ನಿಗೆ ಇರಿಯಲಾಗಿದೆ ಎಂಬ ಅನುಮಾನ ಬರುತ್ತದೆ. ಬೆನ್ನಿಗೆ ಇರಿದ ಪರಿಣಾಮವಾಗಿಯೇ ವ್ಯಕ್ತಿ ಸತ್ತಿರಬೇಕೆಂದು ಶಂಕಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ಮೊಕದ್ದಮೆ ಎಂದು ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ ಮತದೇಹವನ್ನು ಕೊಂಡೊಯ್ಯಬಹುದು.
ನರೀಂದ್ರ ಮೊ. ದಿ. ಮುಖ್ಯಸ್ಥರು ಗುಜರಾತ್ ಶವಾಗಾರ ವಿಭಾಗ.
(ಎಪ್ರಿಲ್ 27, 2008, ರವಿವಾರ)

Thursday, April 23, 2015

ನನ್ನದೂ ಗಾಂಧಿ ಫ್ಯಾಮಿಲೀನೇ ಕಣ್ರೀ...

2013 ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪೂಜಾ ಗಾಂಧೀ ರಾಜಕೀಯ ಪ್ರವೇಶಿಸಿ ಪಕ್ಷಾಂತರದಲ್ಲಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಬುಡಬುಡಿಕೆ. ಮಾರ್ಚ್ -09-2013 ರಲ್ಲಿ ವಾರ್ತಾಭಾರತಿ ದೈನಿಕದಲ್ಲ್ಲಿ ಪ್ರಕಟವಾಗಿದೆ 

ಸಿನಿಮಾ ನಟಿ ಹೂಜಾ ಗಾಂಧಿ ಇನ್ನೊಂದು ಪಕ್ಷಕ್ಕೆ ಸೇರಿದರು ಎಂಬ ಸುದ್ದಿ ಕೇಳಿದ್ದೆ ಪತ್ರಕರ್ತ ಎಂಜಲು ಕಾಸಿಗೆ ಸಿಟ್ಟು ಒತ್ತರಿಸಿ ಬಂತು. ಈಗಷ್ಟೇ ಹೂಜಾ ಗಾಂಧಿ ಪಕ್ಷಾಂತರ ಮಾಡಿದ ಸುದ್ದಿ ಮಾಡಿ ಕಳುಹಿಸಿದ್ದ. ಅಷ್ಟರಲ್ಲೇ ಆಕೆ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಹೀಗೆ ಆದಲ್ಲಿ ಪಕ್ಷಾಂತರ ಮಾಡುವುದರಲ್ಲಿ ನಟಿ ಹೂಜಾಗಾಂಧಿ ಆಸ್ಕರ್ ಅವಾರ್ಡ್ ಪಡೆಯುವುದು ಗ್ಯಾರಂಟಿ ಅನ್ನಿಸಿತು ಎಂಜಲು ಕಾಸಿಗೆ. ನೇರವಾಗಿ ಹೂಜಾ ಗಾಂಧಿಯ ಮನೆಬಾಗಿಲನ್ನು ತಟ್ಟಿ, “ಮೇಡಂ ನಿಮ್ಮ ಇಂಟರ‍್ಯೂಗೆ ಬಂದಿದ್ದೇನೆ” ಎಂದ.
“ನಾನೀಗ ಪಕ್ಷಾಂತರ ಮಾಡುವುದರಲ್ಲಿ ತುಂಬಾ ಬಿಸಿಯಾಗಿದ್ದೇನೆ....ಈಗಾಗ್ಲೇ ಹೊಸ ಪಕ್ಷದೋರು ನನ್ನನ್ನು ಸಂಪರ್ಕಿಸಿದ್ದಾರೆ....ಡೇಟ್ ಕೊಟ್ಟಿದ್ದೇನೆ...ಇನ್ನೇನೂ ಶೂಟಿಂಗ್ ರೆಡಿಯಾಗತ್ತೆ...” ಹೂಜಾಗಾಂಧಿ ಬಳುಕುತ್ತಾ ಕುರ್ಚಿಯಲ್ಲಿ ಕುಳಿತುಕೊಂಡರು.
“ಅಲ್ಲ ಮೇಡಂ ಬೆಳಗ್ಗೆ ಯಡಿಯೂರಪ್ಪ ಪಕ್ಷದಲ್ಲಿ, ಮಧ್ಯಾಹ್ನ ಶ್ರೀರಾಮುಲು ಪಕ್ಷದಲ್ಲಿ ರಾತ್ರಿ... ಕುಮಾರಸ್ವಾಮಿ ಪಕ್ಷದಲ್ಲಿ....ಹೀಗಾದ್ರೆ....ನೀವು ಸಿನಿಮಾ ಶೂಟಿಂಗ್‌ಗೆ ಯಾವಾಗ ಹೋಗ್ತೀರಿ...”
ಹೂಜಾಗಾಂಧಿ ನಕ್ಕಳು “ಇತ್ತೀಚಿನ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಗೋದೆ ಕಡಿಮೆ. ಕಲಾತ್ಮಕ ಚಿತ್ರಗಳಲ್ಲಿ ನಟಿಸೋಣ ಅಂದ್ರೆ ಅದ್ರಲ್ಲಿ ಸಂಭಾವನೆ ಕಡಿಮೆ. ಆದುದರಿಂದ ರಾಜಕೀಯ ಸಿನಿಮಾದಲ್ಲಿ ನಟಿಸುವುದಕ್ಕೆ ಹೊರಟಿದ್ದೇನೆ....ಇದರಲ್ಲಿ ನಟಿಸುವುದಕ್ಕೂ ಸಾಕಷ್ಟು ಅವಕಾಶವಿದೆ. ಹಾಗೆಯೇ ಸಂಭಾವಣೆಯೂ ಕೈತುಂಬಾ ಸಿಗತ್ತೆ...”
“ನಿಮ್ಮ ದಿನಚರಿಯನ್ನು ಸ್ವಲ್ಪ ವಿವರಿಸುತ್ತೀರಾ...” ಕಾಸಿ ಕುತೂಹಲದಿಂದ ಕೇಳಿದ.
“ಬೆಳಗ್ಗೆ ಎದ್ದವಳೇ ಸೀದಾ ಶ್ರೀರಾಮುಲು ಪಕ್ಷಕ್ಕೆ ತೆರಳಿ ಮುಖ ಮತ್ತು ಇತರೆಲ್ಲವನ್ನು ತೊಳೆಯುತ್ತೇನೆ. ಹತ್ತು ಗಂಟೆಗೆ ಯಡಿಯೂರಪ್ಪ ಪಕ್ಷಕ್ಕೆ ಪಕ್ಷಾಂತರ ಮಾಡಿ ಟಿಫಿನ್ ಮುಗಿಸ್ತೇನೆ. ಮಧ್ಯಾಹ್ನ ಒಂದು ಗಂಟೆಗೆ ಕಾಂಗ್ರೆಸ್ ಪಕ್ಷದಲ್ಲಿ ಊಟ. ಸಂಜೆ ಜೆಡಿಎಸ್‌ಗೆ ಪಕ್ಷಾಂತ್ರ ಮಾಡಿ ಕಾಫಿ ತಿಂಡಿ. ರಾತ್ರಿ....ಇನ್ನಿತರ ಹಲವು ಪಕ್ಷಗಳಿಗೆ ಏಕಕಾಲದಲ್ಲಿ ಪಕ್ಷಾಂತರ ಮಾಡುತ್ತೇನೆ...” ಹೂಜಾಗಾಂಧಿಯ ಮಾತು ಕೇಳಿ ಕಾಸಿಗೆ ತಲೆ ತಿರುಗಿತು.
“ಅಲ್ಲಾ ಮೇಡಂ...ಎಲ್ಲರೂ ನಿಮ್ಮ ಹಿಂದೆ ಯಾಕೆ ಬಿದ್ದಿದ್ದಾರೆ....?” ಕಾಸಿ ಕೇಳಿದ.
“ಕಾಂಗ್ರೆಸ್‌ನೋರು ಸೋನಿಯಾಗಾಂಧಿ ಹಿಂದೆ ಬಿದ್ದ ಹಾಗೆ ಕರ್ನಾಟಕದ ಪಕ್ಷದೋರು ಹೂಜಾಗಾಂಧಿಯ ಹಿಂದೆ ಬಿದ್ದಿದ್ದಾರೆ...ಗಾಂಧಿ ಹೆಸರಿನೋರು ಇದ್ದರೆ ಪಕ್ಷಕ್ಕೊಂದು ಮರ್ಯಾದೆ ಅಲ್ವಾ...ಅದಕ್ಕೆ”
“ಆದ್ರೆ ಸೋನಿಯಾ ಗಾಂಧಿ ಫ್ಯಾಮಿಲಿಯೋರು....ನೀವು...?”
ಹೂಜಾಗಾಂಧಿ ಒಮ್ಮೆ ನೊಂದುಕೊಂಡರು. ಅಳುವುದಕ್ಕೆ ಪ್ರಯತ್ನಿಸಿದರು. ಆದರೆ ಪಕ್ಕದಲ್ಲಿ ಗ್ಲಿಸರಿನ್ ಇಲ್ಲದೇ ಇರುವುದರಿಂದ ಅಳುವ ಪ್ರಯತ್ನ ವಿಫಲವಾಯಿತು.
“ನೋಡ್ರಿ...ನನ್ನನ್ನು ಯಾರು ಅಂತ ತಿಳ್ಕೊಂಡಿದ್ದೀರಿ? ನಾನೂ ಗಾಂಧೀ ಫ್ಯಾಮಿಲೀನೇ...ಗೊತ್ತಾ....ನನ್ಗೂ ಗೊತ್ತು ಗಾಂಧಿ ಎಂದ್ರೆ ಯಾರು ಅಂತ...” ಎನ್ನುತ್ತಾ ಕಣ್ಣೊರೆಸುವ ನಟನೆ ಮಾಡಿದರು.
“ಗಾಂಧಿಗೂ ನಿಮಗೂ ಏನು ಸಂಬಂಧ...” ಕಾಸಿ ಕುತೂಹಲದಿಂದ ಕೇಳಿದ.
“ನೋಡ್ರಿ ರಾಹುಲ್‌ಗಾಂಧಿ ಯಾವತ್ತೂ ನನ್ನ ಜೊತೆ ಮಾತಾಡ್ತಾ ಇರ‍್ತಾರೆ...ನಾವೆಲ್ಲ ಒಂದೇ ಫ್ಯಾಮಿಲಿ ಗೊತ್ತಾ...” ಹೂಜಾಗಾಂಧಿ ಮತ್ತೊಮ್ಮೆ ಘೋಷಿಸಿದರು.
“ಅದು ಹ್ಯಾಗೆ ಮೇಡಂ...” ಕಾಸಿ ಕೇಳಿದ.
“ಅದೆಲ್ಲ ಹೇಳೋಕ್ಕಾಗಲ್ಲ....ನನಗೂ ಗಾಂಧಿಗೂ ಹತ್ತಿರದ ಸಂಬಂಧ ಇದೆ....ನನ್ನ ಅಜ್ಜೀನೂ ಸ್ವಾತಂತ್ರ ಓರಾಟದಲ್ಲಿ ಭಾಗವಹಿಸಿದ್ದಾರೆ ಗೊತ್ತಾ...? ಗಾಂಧಿ ನಮಗೂ ದೂ...ರದಿಂದ ಸಂಬಂಧ....ನನ್ನ ಅಜ್ಜಿಯ ಚಿಕ್ಕಪ್ಪನ ಮಗನ ಮಾವನ...ಅತ್ತೆಯ ಎರಡನೆ ಮಗನ ಅಜ್ಜ ಗಾಂಧೀಜಿಯ ದೂರದ ಸಂಬಂಧಿಕರು. ಸೋನಿಯಾಗಾಂಧಿ ನಕಲಿ. ನಾನು ನಿಜವಾದ ಗಾಂಧಿ ಗೊತ್ತಾ?”
ಕಾಸಿ ರೋಮಾಂಚನಗೊಂಡ. ಅಂದರೆ ಮುಂದಿನ ದಿನಗಳಲ್ಲಿ ಈ ರಾಜ್ಯವನ್ನು ಗಾಂಧಿ ಫ್ಯಾಮಿಲಿ ಆಳುತ್ತೆ ಅಂತ ಆಯ್ತು “ಮೇಡಂ...ಗಾಂಧಿ ಫ್ಯಾಮಿಲಿಯವರಾಗಿದ್ದು ನೀವು ಸಿನಿಮಾಕ್ಕೆ ಯಾಕೆ ಬಂದ್ರಿ?”
ಹೂಜಾಗೆ ಮತ್ತೆ ಬೇಜಾರಾಯ್ತು “ಯಾಕೆ ಬರಬಾರದು? ನಮ್ಮ ಗಾಂಧೀನು ಸಿನಿಮಾದಲ್ಲಿ ನಟಿಸಿರಲಿಲ್ವ? ಗಾಂಧಿ ಚಿತ್ರದಲ್ಲಿ ಅವರಿಗೆ ಆಸ್ಕರ್ ಅವಾರ್ಡ್ ಸಿಕ್ಕಿದೆಯಲ್ಲ...ಅದಕ್ಕೆ ನಾನು ಸಿನಿಮಾ ಪ್ರವೇಶಿಸಿ ಮತ್ತೆ ರಾಜಕೀಯ ಪ್ರವೇಶಿಸಿದೆ. ಗಾಂಧಿ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಸ್ವಾತಂತ್ರ ಹೋರಾಟ ಮಾಡಿ ಬ್ರಿಟಿಷರನ್ನು ಓಡಿಸಿದ್ದು. ಹಾಗೆಯೇ ನಾನು ಈಗ ರಾಜಕೀಯಕ್ಕೆ ಕಾಲಿಡುತ್ತಾ ಇದ್ದೇನೆ....”
“ಆದ್ರೆ ಗಾಂಧಿಯನ್ನು ಯಾರೋ ನಾಥೂರಾಂ ಅನ್ನೋನು ಕೊಂದನಲ್ಲಾ...ಹಾಗೆ ನೀವು ಸಾಯೋದಕ್ಕೆ ಇಷ್ಟ ಪಡುತ್ತೀರಾ?” ಕಾಸಿ ಮೆಲ್ಲಗೆ ಕೇಳಿದ.
“ಅದೆಷ್ಟೋ ಸಿನಿಮಾ ಶೂಟಿಂಗ್‌ನಲ್ಲಿ ನಾನು ಸತ್ತಿದ್ದೇನೆ...ಹೂಜಾಗಾಂಧಿ ಅಂತ ಸಿನಿಮಾ ತೆಗಿತೀನಿ. ಅದರಲ್ಲಿ ಒಂದಲ್ಲ ಎರಡು ಬಾರಿ ಸಾಯ್ತೀನಿ...ಮತ್ತೆ ಹುಟ್ಟಿ ಮತ್ತೆ ಬೇರೆ ಬೇರೆ ಪಕ್ಷ ಸೇರ‍್ತೀನಿ...”
“ಮೇಡಂ...ಈ ಬಾರಿ ನೀವು ಶಾಶ್ವತವಾಗಿ ಯಾವ ಪಕ್ಷದಲ್ಲಿ ಉಳ್ಕೊಳ್ಳುತ್ತೀರಿ?” ಕಾಸಿ ಕೇಳಿದ.
“ನಾನು ಶಾಶ್ವತವಾಗಿ ಯಾವ ಪಕ್ಷಕ್ಕೂ ಸೇರುವುದಿಲ್ಲ. ಗಾಂಧೀ ಈ ದೇಶಕ್ಕೆ ಸೇರಿದವರು. ಆದುದರಿಂದ ನಾನು ಎಲ್ಲ ಪಕ್ಷದಲ್ಲೂ ಸ್ವಲ್ಪ ಕಾಲ ನೆಲೆಸಬೇಕೆಂದು ಬಯಸಿದ್ದೇನೆ.  ಚುನಾವಣೆಯ ನಂತರ ಯಾವ ಪಕ್ಷ ನನಗೆ ಹುದ್ದೆ ಕೊಡುತ್ತದೋ ಆ ಪಕ್ಷದಲ್ಲಿ ಐದು ವರ್ಷ ಸೇವೆ ಮಾಡಬೇಕು ಎನ್ನುವಂತಹ ಆಸೆ ನನಗಿದೆ...”
ಅಷ್ಟರಲ್ಲಿ ವೊಬೈಲ್ ರಿಂಗಣಿಸಿತು. “ಹಲೋ....ಯಾರು....ವಾಟಾಳ್ ಅವರಾ...ನಿಮ್ಮ ಪಕ್ಷಕ್ಕೆ ಸೇರೋದಕ್ಕೆ ಆಗೊಲ್ಲಾರಿ....ಊಹುಂ...ನಿಮ್ಮ ಪಕ್ಷಕ್ಕೆ ನಿರ್ಮಾಪಕರು ಹಣ ಹಾಕ್ತಾರೇನ್ರಿ...ವೊದಲು ನನಗೆ ಸಂಭವಾನೆ ಒಳ್ಳೆದಾಗಿ ಕೊಡಬೇಕು. ಚೆಕ್ ಬ್ಯಾಡ ಕ್ಯಾಶ್. ಆ ಬಳಿಕ ಒಳ್ಳೆಯ ಕತೆ ಇರುವ ಸ್ಕ್ರಿಪ್ಟ್ ಬೇಕು. ಹಾಗೆಯೇ ಸಂಭಾಷಣೆ ಒಳ್ಳೆಯ ಕತೆಗಾರರಿಂದಲೇ ಬರೆಸಿ. ಪತ್ರಕರ್ತರಲ್ಲಿ ಹೇಗೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ಯಾಗಿ ಚೆನ್ನಾಗಿರಬೇಕು ಸಂಭಾಷಣೆ....ಇಲ್ಲ...ಇಲ್ಲ ಕಣ್ರೀ...ನಿಮ್ಮ ಎಮ್ಮೆ, ಕತ್ತೆಯ ಜೊತೆಗೆಲ್ಲ ಧರಣಿ ಮಾಡೋದಕ್ಕೆ ನನ್ನಿಂದ ಸಾಧ್ಯವಿಲ್ಲ. ಬೇಕಾದ್ರೆ ಜಗ್ಗೇಶನ್ನು ನಿಮ್ಮ ಪಕ್ಷಕ್ಕೆ ತೆಗೆದುಕೊಳ್ಳಿ....” ಎಂದು ಫೋನ್ ಕಟ್ ಮಾಡಿದರು.
ಎಂಜಲು ಕಾಸಿ ಕೇಳಿದ “ಮೇಡಂ ಯಾರು? ವಾಟಾಳ್ ನಾಗರಾಜ?”
ಹೂಜಾ ಗಾಂಧಿ ಮುಖ ಸಿಂಡರಿಸಿ ಹೇಳಿದರು “ಹೌದು. ನಾಳೆ ಅರ್ಧಗಂಟೆ ಅವರ ಪಕ್ಷ ಸೇರ್ಕೋಬೇಕಂತೆ. ಅರ್ಧಗಂಟೆಗೆ ಹತ್ತು ಲಕ್ಷ ಕೊಡ್ತಾರಂತೆ....ಕಾಂಗ್ರೆಸ್‌ನೋರು ಕರೆದಿದ್ದಾರೆ...ಅರ್ಧಗಂಟೆಗೆ ಒಂದು ಕೋಟಿ ಕೊಡ್ತಾರಂತೆ ಗೊತ್ತಾ....? ಆದ್ರೆ ನಾನು ಸೇರೋದು ಸೋನಿಯಾಗಾಂಧಿಗೆ ಇಷ್ಟ ಇಲ್ಲ. ಕರ್ನಾಟಕದಲ್ಲಿ ಆಕೆಗೆ ಪ್ರತಿಸ್ಪರ್ಧಿಯಾಗಿ  ಒಂದು ಗಾಂಧಿ ಹುಟ್ಟಿ ಬಿಟ್ಟು ಎಲ್ಲಿ ಪ್ರಧಾನಿ ಕುರ್ಚಿ ನಾನು ಕಸಿದುಕೊಳ್ತೇನೋ ಎನ್ನೋ ಭಯ ಆಕೆಗೆ...”
ಅಷ್ಟರಲ್ಲಿ ಮತ್ತೆ ಫೋನ್‌ರಿಂಗಣಿಸಿತು.... “ಹಲೋ... ಯಾವುದು ಹೊಸ ಪಕ್ಷವಾ? ಯಾರೂ ಗೌಡರ... ದೇವೇ ಗೌಡರ ಅಲ್ವಾ.... ಹಾಗಾದ್ರೆ... ಮತ್ಯಾರು? ಸುಳ್ಯದ ಗೌಡ್ರ....ಓಹೋ ಕೇಳಿದ್ದೇನೆ ನಿಮ್ಮ ಹೆಸರು... ನೀವು ದೇವೇಗೌಡ್ರ ಕಿರಿಯ ಮಗ ತಾನೆ? ಅಲ್ವಾ....ನೀವು ಬೇರೆಯೇ ಗೌಡ್ರ...ಹೊಸ ಪಕ್ಷ ಕಟ್ತೀರಾ...ನಿಮ್ಮ ಪಕ್ಷದಲ್ಲಿ ಎಷ್ಟು ನಿಮಿಷ ನಟಿಸಬೇಕು...?” ಎನ್ನುತ್ತಿದ್ದಂತೆಯೇ ಸ್ಕೂಪ್ ಸುದ್ದಿ ಸಿಕ್ಕಿದ ಖುಷಿಯಿಂದ ಎಂಜಲು ಕಾಸಿ ಅಲ್ಲಿಂದ ಪತ್ರಿಕಾಕಚೇರಿ ಕಡೆಗೆ ಓಡತೊಡಗಿದ.
ಮಾರ್ಚ್ -09-2013 

Monday, April 20, 2015

ಆಹಾ...ಮುತಾಲಿಕ್ ಮದುವೆಯಂತೆ...!!

ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹಣ ಪಡೆದು ಗಲಭೆ ನಡೆಸುವ  ಕೃತ್ಯ  ತೆಹಲ್ಕಾ ಕಾರ್ಯಾಚರಣೆಯಲ್ಲಿ ಬಯಲಾದಾಗ ಮೇ -30-2010 ರಲ್ಲಿ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ  ಬುಡಬುಡಿಕೆ. 

ಮುಖಕ್ಕೆ ಮೆತ್ತಿದ ಮಸಿಯನ್ನು ಉಜ್ಜಿ ಉಜ್ಜಿ ಸುಸ್ತಾಗಿ ಬಚ್ಚಲು ಮನೆಯಲ್ಲಿ ಉಸ್ಸೆಂದು ಬಿದ್ದುಕೊಂಡರು ಪ್ರಮೋದ್ ಮುತಾಲಿಕ್. ಇತ್ತೀಚೆಗೆ ತನ್ನ ಯಾರು ಭೇಟಿಯಾಗಲು ಬಂದರೂ ಅವರಲ್ಲಿ ಗುಪ್ತ ಕ್ಯಾಮರಾ ಇರಬಹುದೆಂದು ಭಾವಿಸಿ, ಮಾತನಾಡುವುದಕ್ಕೆ ಭಯ ಪಡುತ್ತಿದ್ದರು. ಒಂದೆಡೆ ಪ್ರಸಾದ್ ಅತ್ತಾವರ ಜೈಲಲ್ಲಿದ್ದಾನೆ. ಮತ್ತೊಂದೆಡೆ ತನ್ನ ಶಿಷ್ಯರೆಲ್ಲ ದರೋಡೆ, ಪಿಕ್‌ಪಾಕೆಟ್ ಮೊದಲಾದ ಆರೋಪದಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ.
ತೆಹಲ್ಕಾ ಸ್ಟಿಂಗ್ ಆಪರೇಷನ್ ಬಳಿಕ, ಯಾವ ಕೆಲಸ ಮಾಡುವುದಕ್ಕೂ ಭಯ. ಮನೆಯಲ್ಲಿ ಕೆಲಸವಿಲ್ಲದೆ ಒಂಟಿಯಾಗಿ ಬಿದ್ದುಕೊಂಡಿದ್ದ ಮುತಾಲಿಕರಿಗೆ ಒಬ್ಬಂಟಿತನ ಕಾಡತೊಡಗಿತು. ನೇರವಾಗಿ ಹೋಗಿ ಕನ್ನಡಿ ಮುಂದೆ ನಿಂತರು. ತೀರಾ ಮುದುಕನಾಗಿಲ್ಲ ಎಂದು ತುಸು ಸಮಾಧಾನವಾಯಿತು. ಒಮ್ಮೆಲೆ ಅವರಿಗೆ ‘ಅರೆ! ನಾನು ಇಲ್ಲಿಯವರೆಗೆ ಮದುವೆಯೇ ಆಗಿಲ್ಲವಲ್ಲ, ಒಂದು ಮದುವೆಯಾದರೆ ಹೇಗೆ?’ ಎಂಬ ಆಲೋಚನೆ ಬಂತು.
ಆದರೆ ಕರ್ನಾಟಕದಲ್ಲಿ ಈಗಾಗಲೇ ಹೆಣ್ಣು ಹೆತ್ತವರ ವಿರೋಧ ಕಟ್ಟಿಕೊಂಡುದರಿಂದ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ಆಲೋಚನೆ ಬಂತು. ಪತ್ರಿಕೆಯಲ್ಲಿ ಒಂದು ಜಾಹೀರಾತು ಕೊಟ್ಟು ನೋಡಿದರೆ ಹೇಗೆ? ಎಂಬ ಆಲೋಚನೆ ಬಂತು. ಮರುದಿನವೇ ‘ಕೇಸರಿ ಲಂಗೋಟಿ’ ಪತ್ರಿಕೆಯಲ್ಲಿ ಜಾಹೀರಾತು ನೀಡಿಯೇ ಬಿಟ್ಟರು.
"ವಧು ಬೇಕಾಗಿದೆ".
ಅಂತಾರಾಷ್ಟ್ರೀಯ ದೇಶಪ್ರೇಮಿ ‘ಯುವಕ’ನಿಗೆ ವಧು ಬೇಕಾಗಿದೆ. ದೇಶಸೇವೆ ಮಾಡುತ್ತಾ ಮದುವೆಯಾಗುವುದನ್ನು ಮರೆತೇ ಹೋಗಿದ್ದ ಯುವಕನೊಬ್ಬನಿಗೆ, ದೇಶಪ್ರೇಮಿ ಯುವತಿಯೊಬ್ಬಳು ಮದುವೆಯಾಗುವುದಕ್ಕೆ ಬೇಕಾಗಿದ್ದಾಳೆ. ಯುವತಿ ದೇಶಪ್ರೇಮಿ ಯಾಗಿರಬೇಕು. 20 ವರ್ಷ ದೊಳಗಿನವಳಾಗಿರಬೇಕು. ಯಾವುದಾದರೂ ಉದ್ಯೋಗದಲ್ಲಿದ್ದರೆ ಒಳ್ಳೆಯದು. ವಿಶೇಷ ವರದಕ್ಷಿಣೆಯ ಅಗತ್ಯವಿಲ್ಲ.
ತಿಂಗಳ ಸಂಬಳದಲ್ಲಿ ಕಂತಿನಲ್ಲಿ ಹಫ್ತಾ ನೀಡಿದರೆ ಸಾಕು. ಅದನ್ನು ರಾಮಸೇನೆಯ ಕಾರ್ಯಕರ್ತರು ಪ್ರತಿ ವಾರ ಬಂದು ವಸೂಲು ಮಾಡಿಕೊಂಡು ಹೋಗುತ್ತಾರೆ. ಮುಖತಃ ಸಂದರ್ಶನದ ಸಂದರ್ಭದಲ್ಲಿ ಇನ್ನಿತರ ವಿವರಗಳನ್ನು ನೀಡಲಾಗುತ್ತದೆ. ವರನನ್ನು ಸಂಪರ್ಕಿಸಬೇಕಾದ ವಿಳಾಸ: ವಿರಾಮಸೇನೆ, ಸೋಮಾರಿ ಕಟ್ಟೆಯ ಬಳಿ, ಕ್ರಿಮಿನಲ್ ವಿಲ್ಲಾ, ಬಳ್ಳಾರಿ ಜೈಲು ಮಾರ್ಗ, ಕರಿ ನಾಟಕ ರಾಜ್ಯ’’
*                               *                          *
ಕೊನೆಗೂ ಮುತಾಲಿಕ್‌ಗೆ ತಕ್ಕ ವಧುವನ್ನು ಹುಡುಕಿಕೊಂಡು ಬಂದ, ಪತ್ರಕರ್ತ ಎಂಜಲು ಕಾಸಿ ಫೋಟೋವನ್ನು ಮುತಾಲಿಕ್ ಮುಂದಿಟ್ಟು ಹೇಳ ತೊಡಗಿದ ‘‘ಸಾರ್, ಹುಡುಗಿಯದು ದೇಶಪ್ರೇಮಿ ಕುಟುಂಬ ಸಾರ್. ಹುಡುಗಿಯ ತಾತ ಸುತ್ತಮುತ್ತಲಿನ ಗಲ್ಲಿಯಲ್ಲೆಲ್ಲ ಫೇಮಸ್ಸು. ಹುಡುಗಿಯರೆಲ್ಲ ಆತನನ್ನು ಕಂಡರೆ ಹೆದರಿ ಮನೆಯಲ್ಲಿ ಅವಿತು ಕೂರ್ತಿದ್ದರಂತೆ. ಹುಡುಗಿಯ ತಂದೆ ಅಕ್ಕಪಕ್ಕದಲ್ಲಿ ದರೋಡೆ ಗಿರೋಡೆ ಮಾಡಿ ಹಲವು ಬಾರಿ ಜೈಲು ಸೇರಿ ದೇಸಪ್ರೇಮಿ ಎಂದು ಗುರುತಿಸ್ಕೊಂಡೋರು ಸಾರ್.
ದುಡ್ಡು ಕೊಟ್ರೆ ಏನು ಮಾಡುವುದಕ್ಕೂ ಸಿದ್ಧ ಅಂತೆ. ಹುಡುಗೀನೂ ಬಜಾರಿಯಂತೆ. ಬಾಯಿ ತೆರೆದರೆ ಸೂ...ಮಗ... ಬೋ...ಮಗ ಎನ್ನುವುದನ್ನು ಸೊಗಸಾಗಿ ಹೇಳ್ತಾಳಂತೆ. ನಿಮಗೆ ಹೊಂದಿಕೆಯಾಗುವ ಮರ್ಯಾದಸ್ಥರ ಕುಟುಂಬ ಸಾರ್. ಮುಂದುವರಿಯೋಣ ಸಾರ್...’’
ಮುತಾಲಿಕರಿಗೆ ಕೊನೆಗೂ ಖುಷಿಯಾಯಿತು. ಒಂದು ದೇಸಪ್ರೇಮಿ ಹುಡುಗಿಗೆ ಲೈಫು ಕೊಟ್ಟಂಗಾಯ್ತು ಎಂದು ಕನ್ನಡಿಯ ಮುಂದೆ ನಿಂತು ಸಿಂಗರಿಸಿ, ಹಣೆಗೆ ಕೆಂಪು ಕುಂಕುಮ ಬಳಿದುಕೊಂಡರು. ಆದರೆ, ಮುಖಕ್ಕೆ ಅಂಟಿದ್ದ ಕಪ್ಪು ಮಸಿಯನ್ನು ಕಂಡು ತುಸು ಖೇದವಾಯ್ತು. ಆದರೆ, ದೇಸಕ್ಕಾಗಿ ಇದೆಲ್ಲ ಅನುಭವಿಸಬೇಕಾಗುತ್ತದೆ ಎಂದು ನಿಟ್ಟುಸಿರಿಟ್ಟು ಪತ್ರಕರ್ತ ಎಂಜಲು ಕಾಸಿಯ ಜೊತೆ ಹೆಣ್ಣು ನೋಡುವುದಕ್ಕೆ ಹೊರಟೇ ಬಿಟ್ಟರು.
*                           *                            *
ಹೆಣ್ಣಿನ ತಂದೆ ಕೇಳಿದರು ‘‘ನಿಮ್ಮ ಜೊತೆಗೆ ನಿಮ್ಮ ಫ್ಯಾಮಿಲಿಯೋರು ಯಾರು ಬರ್ಲಿಲ್ವೆ?’’ ಆ ಪ್ರಶ್ನೆಗೆ ಮುತಾಲಿಕ್ ನಾಚಿ ನೆಲ ನೋಡತೊಡಗಿದರು. ಎಂಜಲು ಕಾಸಿ ಹೇಳಿದ ‘‘ಅವರ ಫ್ಯಾಮಿಲಿ ಎಲ್ಲ ಜೈಲಿನೊಳಗಿದ್ದಾರೆ ಸಾರ್. ಸದ್ಯಕ್ಕೆ ಈಗ ಇವರೊಬ್ಬರೆ’’
ಹೆಣ್ಣಿನ ತಂದೆಗೆ ಅದನ್ನು ಕೇಳಿ ಸಂತೋಷವಾಯಿತು ‘‘ಅಂದರೆ ನಿಮ್ಮದು ಕೂಡ ನಮ್ಮ ಹಾಗೆ ದೇಶಪ್ರೇಮಿ ಫ್ಯಾಮಿಲಿ ಅಂದಂಗಾಯ್ತು. ವರೋಪಚಾರ ಅಂತ ಕೊಡ್ಲಿಕೆ ವಿಶೇಷವಾಗಿ ನನ್ನಲ್ಲೇನೂ ಇಲ್ಲ. ನನ್ನ ಜೀವನವೆಲ್ಲ ದೇಶಸೇವೆಗೆ ಮುಡಿಪಾಗಿದ್ದುದರಿಂದ ನನ್ನಲ್ಲಿರುವ ಸಂಪತ್ತು ಕೂಡ ಅದೇ ಆಗಿದೆ...’’
ಕಾಸಿ ಮಧ್ಯ ಬಾಯಿ ಹಾಕಿದ ‘‘ಪರವಾಗಿಲ್ಲ ಪರವಾಗಿಲ್ಲ...ಎಲ್ಲ ಮದುಮಗನಿಗೆ ಗೊತ್ತಿದೆ...’’ ಹೆಣ್ಣಿನ ತಂದೆ ಮುಂದುವರಿಸಿದರು ‘‘ಆದರೂ ವರದಕ್ಷಿಣೆಯಾಗಿ ಒಂದಿಪ್ಪತ್ತೈದು ಬಾಂಬು, ಒಂದೈವತ್ತು ತಲವಾರು, ನಾಲ್ಕು ಪಿಸ್ತೂಲು ಮತ್ತು ಇಪ್ಪತ್ತೈದು ಚಾಕು, ಚೂರಿಗಳನ್ನು ಕೊಡುವುದಕ್ಕೆ ನನ್ನಿಂದ ಸಾಧ್ಯವಿದೆ’’
ಮುತಾಲಿಕರಿಗೆ ತುಂಬಾ ತುಂಬಾ ಸಂತೋಷವಾಯಿತು. ಎರಡು ಕುಟುಂಬಗಳು ಸೇರಿ ತುಂಬಾ ತುಂಬಾ ದೇಸಸೇವೆ ಮಾಡಬಹುದು ಎನ್ನಿಸಿತು.
ಎಂಜಲು ಕಾಸಿ ಕೇಳಿದ ‘‘ಸಾರ್...ಹುಡುಗಿಗೆ ಏನಾದರೂ ಕೆಲಸ ಇದ್ದರೆ...ಹುಡುಗ ಯಾವ ಅಂಜಿಕೆಯೂ ಇಲ್ಲದೆ ದೇಸ ಸೇವೆ ಮಾಡಬಹುದು. ಹೊತ್ತು ಹೊತ್ತಿಗೆ ಹುಡುಗ ಊಟ ಮಾಡ್ಬೇಕಲ್ಲ....’’
ಹುಡುಗಿಯ ತಂದೆ ಹೇಳಿದರು ‘‘ಹಾಗೇನಿಲ್ಲ...ನಮ್ಮ ಹುಡುಗಿಗೆ ನೂರಾರು ಕೆಲಸ ಇದೆ. ಆಕೆ ಗಲ್ಲಿಯ ನಳ್ಳಿ ಪಕ್ಕ ನಿಂತು ಬಾಯಿ ತೆರೆದರೆ ಉಳಿದೋರೆಲ್ಲ ಓಡಿ ಹೋಗ್ತಾರೆ. ಮಾನ ಮಾರ್ಯದೆಗೆ ತುಂಬಾ ಬೆಲೆ ಕೊಡ್ತಾಳೆ. ಅದಕ್ಕಾಗಿ ಮಾನ ಮರ್ಯಾದೆಯನ್ನೆಲ್ಲ ಮನೆಯ ಪೆಟ್ಟಿಗೆಯೊಳಗೆ ಇಟ್ಟು ಬೀಗ ಹಾಕಿದ್ದಾಳೆ’’
ಅಷ್ಟರಲ್ಲಿ ಹುಡುಗಿ ತಟ್ಟೆಯಲ್ಲಿ ನಾಲ್ಕು ಗ್ಲಾಸ್ ವಿಸ್ಕಿಯನ್ನು ಇಟ್ಟು ನಾಚುತ್ತಾ ಬಂದಳು. ಎಲ್ಲರಿಗೂ ವಿಸ್ಕಿ ಗ್ಲಾಸನ್ನು ಕೊಟ್ಟಳು. ಮುತಾಲಿಕ್ ಹಲ್ಲು ಬಿಟ್ಟು ಹೇಳಿದರು ‘‘ಹಾಡು ಹಾಡುವುದಕ್ಕೆ ಬರುತ್ತೇನಮ್ಮ?’’
ಹುಡುಗಿ ಗಂಟಲು ಸರಿಪಡಿಸಿ ಹಾಡುವುದಕ್ಕೆ ಶುರು ಹಚ್ಚಿದಳು ‘‘ಹೊಡಿ ಮಗ...ಹೊಡಿಮಗ...ಹೊಡಿಮಗ...ಹೊಡಿಮಗ ಬಿಡಬೇಡ ಅವನ್ನ....’’
ಆಕೆಯ ಹಾಡಿನಲ್ಲಿ ಭಾರತೀಯ ಸಂಸ್ಕೃತಿ ತುಂಬಿ ತುಳುಕುತ್ತಿರುವುದನ್ನು ಕಂಡು ಮುತಾಲಿಕ್‌ಗೆ ಭಾರೀ ಭಾರೀ ಸಂತೋಷವಾಯಿತು. ‘‘ಸಂತೋಷ ಸಂತೋಷ’’
ಹುಡುಗಿಯ ತಂದೆ ಹೇಳಿದರು ‘‘ಮದುವೆ ಅದ್ದೂರಿಯಾಗಿ ನಡೀಬೇಕು. ಕನಿಷ್ಠ ನೂರು ಮನೆಗಳಿಗೆ ಬೆಂಕಿ ಬೀಳ್ಬೇಕು. ಇನ್ನೂರು ಅಂಗಡಿಗಳು ಲೂಟಿಯಾಗಬೇಕು. ನನ್ನ ಮಗಳ ಮದುವೆ ಅಂದ ಮೇಲೆ ಒಂದಿಪ್ಪತ್ತು ಮುಸಲರು ಆಸ್ಪತ್ರೆಯಲ್ಲಿ ಮಲಗಿರ್ಬೇಕು....’’
ಮುತಾಲಿಕರ ಸಂತೋಷಕ್ಕೆ ಪಾರವೇ ಇಲ್ಲ ‘‘ಅದಕ್ಕೇನಂತೆ. ನನ್ನ ಕುಟುಂಬದವರನ್ನೆಲ್ಲ ಜೈಲಿನಿಂದ ಜಾಮೀನಿನ ಮೇಲೆ ಬಿಡಿಸ್ಕೋತೀನಿ. ಎಲ್ಲವನ್ನು ಸಾಂಗವಾಗಿ ಮಾಡ್ತಾರೆ. ದೇಸದ ಹೊರಗೂ ಕೆಲವು ಕುಖ್ಯಾತ ದೇಸಪ್ರೇಮಿಗಳು ಇದ್ದಾರೆ. ನನ್ನ ಮದುವೆಗೆ ಅವರನ್ನೂ ಕರೆಸೋಣವಂತೆ...’’
‘‘ಮೀಡಿಯಾದವರು ಮದುವೆಗೆ ಬರೋದು ಬೇಡವೇ...ಅದಕ್ಕೆ ಏನು ವ್ಯವಸ್ಥೆ ಮಾಡುತ್ತೀರಾ?’’ ಹೆಣ್ಣಿನ ತಂದೆ ಕೇಳಿದರು.
ಮುತಾಲಿಕ್ ನಗುತ್ತಾ ಹೇಳಿದರು ‘‘ನನ್ನ ಮದುವೆ ಅಂದ ಮೇಲೆ ಮೀಡಿಯಾದವರನ್ನು ಕರೀಬೇಕೂಂತಿಲ್ಲ. ಅವರಾಗಿಯೇ ಗುಪ್ತ ಕ್ಯಾಮರಾ ಇಟ್ಕೊಂಡು ಬಂದೇ ಬರ್ತಾರೆ. ತೆಹಲ್ಕಾದವರು ಬರುತ್ತಾರೆ, ಟೈಮ್ಸ್‌ನವರು ಬರುತ್ತಾರೆ....’’
‘‘ಅಳಿಯಂದಿರೇ...ಪ್ರಸ್ಥ ಎಲ್ಲಿ ಇಟ್ಕೊಳ್ಳೋಣ...’’ ಮುತಾಲಿಕ್ ಹೇಳಿದರು ‘‘ಒಂದೋ ಬಳ್ಳಾರಿ ಜೈಲಿನಲ್ಲಿ...ಇಲ್ಲಾ ಗುಲ್ಬರ್ಗ ಜೈಲಿನಲ್ಲಿ ಇಟ್ಕೊಳ್ಳೋಣ....ಬಳ್ಳಾರಿ ಜೈಲಿನಲ್ಲಿ ನನ್ನ ಬಂಧುಗಳು ತುಂಬಾ ಇರೋದ್ರಿಂತ ಅಲ್ಲೇ ಪ್ರಸ್ಥ ಇಟ್ಕೊಳ್ಳೋದು ಚೆನ್ನಾಗಿರತ್ತೆ....’’
ಎಲ್ಲರಿಗೂ ಸಂತೃಪ್ತಿಯಾಯಿತು. ಸಾಧಾರಣವಾಗಿ ಪತ್ರಕರ್ತ ಎಂಜಲು ಕಾಸಿ ರಾಜಕಾರಣಿಗಳು ಮತ್ತು ಸನ್ಯಾಸಿಗಳು, ಕ್ರಿಮಿನಲ್‌ಗಳು ಮತ್ತು ರಾಜಕಾರಣಿಗಳ ನಡುವೆ ದಲ್ಲಾಳಿ ಕೆಲಸ ಮಾಡುತ್ತಿದ್ದ. ಇದೀಗ ಮೊದಲ ಬಾರಿ ವಧೂ-ವರರ ನಡುವೆ ದಲ್ಲಾಳಿ ಕೆಲಸ ಮಾಡಿ ಯಶಸ್ವಿಯಾಗಿದ್ದು ಆತನಿಗೆ ಸಂತೋಷ ತಂದಿತ್ತು.
ಮುತಾಲಿಕರ ಬಳಿಗೆ ಬಂದ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್, ನನ್ನ ಕಮಿಶನ್ನೂ....’’ ಮುತಾಲಿಕರು ಹೇಳಿದರು ‘‘ನನ್ನ ಸಿಷ್ಯರು ಬೇಗ ಜೈಲಿಂದ ಹೊರಗೆ ಬರ್ತಾರೆ. ಅವರೇ ನಿನ್ನ ಕಮಿಷನ್ನೂ ಕೊಡ್ತಾರೆ...ಜೈ ಶ್ರೀರಾಂ...’’ ಎಂದು ಮದುಮಗನ ಸಂಭ್ರಮದಲ್ಲಿ ಹೆಣ್ಣಿನ ಮನೆಯಿಂದ ಹೊರಗೆ ಕಾಲಿಟ್ಟರು.
ರವಿವಾರ - ಮೇ -30-2010

Sunday, April 19, 2015

ಲಕ್ಕವ್ವನ ‘ಹೊಸರುಚಿ’ ಸೊಗಡು...

ಮಾರ್ಚ್ -04-2012ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಇತ್ತೀಚೆಗೆ ಟಿವಿಯಲ್ಲಿ ಜ್ಯೋತಿಷ್ಯ ಮತ್ತು ಹೊಸ ರುಚಿ ತುಂಬಾ ಫೇಮಸ್ಸು. ಅದಕ್ಕೆ ಗಿರಾಕಿಗಳು ಜಾಸ್ತಿ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಎಂಜಲು ಕಾಸಿ ಸ್ಥಳೀಯ ಟಿ.ವಿ. ಯೊಂದದರಲ್ಲಿ ಹೊಸ ರುಚಿ ಕಾರ್ಯಕ್ರಮವನ್ನು ನೀಡಲು ಶುರು ಮಾಡಿದ. ಇತ್ತೀಚೆಗಂತೂ ಈತನ ಕಾರ್ಯಕ್ರಮ ತುಂಬ ಜನಪ್ರಿಯ. ಟಿಆರ್‌ಪಿ ಪೆಟ್ರೋಲ್ ಬೆಲೆಯ ಹಾಗೆ ಏರುತ್ತಿತ್ತು. ಹೊಸತನ ಇರಲಿ ಅಂತ ವಿಭಿನ್ನ ಹೊಸರುಚಿ ಯನ್ನು ಚಾನೆಲ್‌ನಲ್ಲಿ ಪ್ರದರ್ಶಿಸುತ್ತಿದ್ದ. ನಗರದ ಹೊಸರುಚಿ ಯನ್ನು ಉಂಡವರಿಗೆ ಒಂದಿಷ್ಟು ಸ್ಪೆಶಲ್ ಇರಲಿ ಎಂದು ಗ್ರಾಮೀಣ ಭಾಗದ ಜನರ ಹೊಸ ರುಚಿಯನ್ನು ಏರ್ಪಡಿಸಿದ. ಗ್ರಾಮೀಣ ಪ್ರದೇಶದಿಂದ ಬಂದಂತಹ ಲಕ್ಕವ್ವ ಟಿ.ವಿಯಲ್ಲಿ ಹೊಸ ರುಚಿಯನ್ನು ಪ್ರದರ್ಶಿಸತೊಡಗಿದರು.
ಎಂಜಲು ಕಾಸಿ ಪ್ರಶ್ನಿಸಿದ ‘‘ನಿನ್ನ ಹೆಸರೇನಮ್ಮ...?’’
‘‘ಅಪ್ಪ ಇಟ್ಟಿರೋ ಹೆಸ್ರು ಲಕ್ಷ್ಮವ್ವ. ಊರವರು ಕರೆಯೋದು ಲಕ್ಕವ್ವ...ನೀವು ಹಂಗೇ ಕರೀರಿ ಧನಿ...’’
‘‘ಗ್ರಾಮೀಣ ಪ್ರದೇಶದಲ್ಲಿ ಮಾಡೋ ಹೊಸ ರುಚಿಯನ್ನು ನೀವೀಗ ನಮ್ಮ ವೀಕ್ಷಕರಿಗೆ ಮಾಡಿ ತೋರಿಸಬೇಕು... ರೆಡಿನಾ?’’
‘‘ಅದ್ರಾಗೆ ಏನೈತೆ ಬುದ್ದಿ, ತಯಾರಾಗೆ ಬಂದೀನಿ...’’ ಲಕ್ಕವ್ವ ಹೊಸ ರುಚಿ ಕಾರ್ಯಕ್ರಮ ವನ್ನು ಪ್ರದರ್ಶಿಸತೊಡಗಿದಳು.
***
‘‘ಮೊದ್ಲು ಒಲೆ ಹೊತ್ತಿಸಿ. ಆದ್ರೆ ಹಸಿ ಸೌದೆ. ಮೊದ್ಲು ಬೆಂಕಿ ಹತ್ತಂಗಿಲ್ಲ. ಸುಮಾರು ಅರ್ಧಗಂಟೆ ಒಲೆಯನ್ನು ಚೆನ್ನಾಗಿ ಊದಿ. ಈಗ ನಿಮ್ಮ ಕಣ್ಣು ಕೆಂಪಾಗತ್ತೆ. ಸರಿ, ಈಗ ಮೆಲ್ಲ ಮಣ್ಣಿನ ಮಡಕೆಯಲ್ಲಿ ಎರಡು ಸೇರು ನೀರು ತುಂಬಿ ಕುದಿಯಾಕೆ ಬಿಡಿ. ಆಮೇಲೆ ನಾಲ್ಕು ಕಲ್ಲು ಉಪ್ಪು, ಒಂದು ಹಿಡಿ ಅಕ್ಕಿ ಹಾಕಿ....ಇನ್ನೂ ಎರಡು ಸೇರು ನೀರನ್ನು ಹಾಕಿ....ಚೆನ್ನಾಗಿ ಕುದೀಲಿ...ಕುದ್ದು ಕುದ್ದು ಅಕ್ಕೀದು ಪರಿಮಳ ಗಮಗಮಾಂತ ಬರತ್ತೆ ಆಮೇಲೆ ಮೆಲ್ಲಗೆ ಕೆಳಗಿಳಿಸಿ...’’
‘‘ಈಗ ಒಂದು ಹಸಿ ಮೆಣಸು ತೆಗೆದುಕೊಳ್ಳಿ... ಮಡಕೆಯಿಂದ ನೀರನ್ನಷ್ಟೇ ಇನ್ನೊಂದು ಮಡಕೆಗೆ ಸುರಿಯಿರಿ. ಬಳಿಕ ಮಕ್ಕಳಿಗೆ ತಲಾ ಒಂದೊಂದು ಗ್ಲಾಸ್ ಗಂಜಿ ನೀರು..ಮತ್ತು ಕಾಯಿ ಮೆಣಸನ್ನು ಕೊಡಿ...ಹೊಟ್ಟೆ ತುಂಬಾ ಹಸಿದಾಗ ಇದನ್ನು ಮಕ್ಕಳಿಗೆ ಬಡಿಸಬೇಕು. ಆಗ ಬಹಳ ರುಚಿಯಾಗಿರುತ್ತದೆ. ರಾತ್ರಿ ಹಸಿವೆಗೆ ಇದು ಒಳ್ಳೆಯದು. ಹಾಗೆಯೇ ಮಡಕೆಯ ತಳದಲ್ಲಿರುವ ಗಂಜಿಯನ್ನು ಯಾವ ಕಾರಣಕ್ಕೂ ಮಕ್ಕಳಿಗೆ ಹಂಚಬೇಡಿ. ಅದಕ್ಕೆ ನೀರು ಹಾಕಿ ಬೆಳಗ್ಗೆ ಮತ್ತೆ ಕುದಿಸಿದರೆ ಬೆಳಗಿನ ಊಟವನ್ನೂ ಆರಾಮವಾಗಿ ಮಾಡಬಹುದು. ಹಳ್ಳಿಗಳಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ...’’
ಲಕ್ಕವ್ವ ಮಾಡಿದ ಹೊಸ ರುಚಿಯನ್ನು ಕಾಸಿ ಮೆಲ್ಲಗೆ ಮೂಗಿನ ಸಮೀಪಕ್ಕೆ ತಂದ. ‘‘ಲಕ್ಕವ್ವ, ಇದಕ್ಕೆ ಪರಿಮಳ...ರುಚಿ ಏನೂ ಇಲ್ಲವಲ್ಲ...’’
ಲಕ್ಕವ್ವ ಅದನ್ನು ಒಂದಿಷ್ಟು ಕುಡಿದು ಹೇಳಿದಳು ‘‘ಯಾಕಿಲ್ಲ? ಅನ್ನದ ಪರಿಮಳ ಗಮಗಮಾಂತ ಮೂಗಿಗೆ ಬಡೀತೈತೆ...ಬುದ್ಯೋರೆ...ಅದನ್ನು ಎಸೀಬೇಡಿ...ಊರಿಗೆ ಹೋಗಾವಾಗ ನಾನು ಹಿಡ್ಕೊಂಡು ಹೋಗ್ತೀನಿ...ನನ್ನ ಮಕ್ಳಿಗಾತು..’’ ಕಾಸಿ ತಲೆಯಾಡಿಸಿದ.
‘‘ನಿಮ್ಮ ಹಳ್ಳಿಯಲ್ಲಿ ಅನ್ನಕ್ಕೆ ಸಾಂಬರೂ, ಗೊಜ್ಜು ಇತ್ಯಾದಿ ಮಾಡಲ್ವ....?’’
‘‘ಮಾಡ್ತರ್ರೀ...ಬುದ್ಯೋರೆ...ಆದ್ರೆ ಒಂದು ಸ್ವಲ್ಪ ಬೇರೆ ತರಾ ಇರತ್ತೆ...’’
ಕಾಸಿಗೆ ಖುಷಿಯಾಯಿತು. ‘‘ಹಾಗಾದ್ರೆ ಅದನ್ನೇ ನಮ್ಮ ವೀಕ್ಷಕರಿಗೆ ಹೊಸರುಚಿ ಹೇಳಿಕೊಡಿ’’
ಲಕ್ಕವ ಶುರು ಮಾಡಿದರು ‘‘ಮೊದ್ಲು ಒಂದು ಕುಂಟೆ ಮೆಣಸನ್ನು ತೆಗೆದುಕೊಳ್ಳಿ. ಆಮೇಲೆ ಅದನ್ನು ಒಲೆಯ ಕೆಂಡದ ಮೇಲೆ ಇಡಿ.... ತುಸು ಹೊತ್ತು ಸುಟ್ಟ ಬಳಿಕ ಹೊರಗಿಡಿ. ಈಗ ಸ್ವಲ್ಪ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಳ್ಳಿ... ಬಳಿಕ ಅದಕ್ಕೆ ಎರಡು ಕಲ್ಲು ಉಪ್ಪು ಮತ್ತು ರುಚಿಗೆ ತಕ್ಕಷ್ಟು ಹುಳಿಯನ್ನು ಹಾಕಿ. ಈಗ ಮೆಲ್ಲಗೆ ಸುಟ್ಟ ಮೆಣಸನ್ನು ನೀರಿಗೆ ಹಾಕಿ ಕೈಯಲ್ಲಿ ಚೆನ್ನಾಗಿ ಹಿಂಡಿ. ಈಗ ಸಾಂಬಾರ್ ರೆಡಿ. ಬಿಸಿ ಬಿಸಿ ಗಂಜಿಯ ಜೊತೆಗೆ ನೆಂಜಿ ಕುಡಿಯುವುದಕ್ಕೆ ಈ ಉಪ್ಪು ನೀರನ್ನು ಬಳಸಿಕೊಳ್ಳಬಹುದು. ನಮ್ಮಲ್ಲಿ ನೆಂಟರು ಬಂದಾಗ ಇದನ್ನೇ ಬಳಸುತ್ತೇವೆ. ಹಸಿವೆ ತುಂಬಾ ಕಾಡುತ್ತಿರುವಾಗ ಈ ಸಾಂಬಾರಿಗೆ ರುಚಿ ಇನ್ನೂ ಜಾಸ್ತಿ...’’
ಕಾಸಿಗೆ ತಲೆ ಬಿಸಿಯಾಯಿತು ‘‘ನೀವು ಹಬ್ಬದೂಟ ಮಾಡುವುದಿಲ್ಲವಾ? ಬಿರಿಯಾನಿ, ಪಾಯಸ...ಇತ್ಯಾದಿ ಗಳನ್ನು ಮಾಡುವುದಿಲ್ಲವ...’’ ಕೇಳಿದ.
ಲಕ್ಕವ್ವ ಬಾಯಿಯಲ್ಲಿ ನೀರಿಳಿಸುತ್ತಾ ಹೇಳಿದರು ‘‘ಮಾಡ್ತೀವಿ...ತಿನ್ತೀವಿ...’’
ಕಾಸಿಗೆ ಸಂತೋಷವಾಯಿತು ‘‘ಹಾಗಾದ್ರೆ...ಅದನ್ನು ಹೊಸರುಚಿ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ವಿವರಿಸಿ...’’
ಲಕ್ಕವ್ವ ಬಿರಿಯಾನಿಯ ಕುರಿತಂತೆ ವಿವರಣೆ ನೀಡತೊಡಗಿದಳು ‘‘ಊರಿನಲ್ಲಿ...ಶ್ರೀಮಂತರ, ಜಮೀನ್ದಾರ ಮದುವೆ, ಮುಂಜಿ ಇದ್ದರೆ ಮೊದಲೇ ನೆನಪಲ್ಲಿಟ್ಕೋ ಬೇಕು. ಬಳಿಕ ಬೆಳಗ್ಗೆನೇ ಜಮೀನ್ದಾರರ ಮನೆಯ ನಾಯಿಗಳಿಗೆ ಗೊತ್ತಾಗದ ಹಾಗೆ ಅವರ ಮನೆಯ ಹಿತ್ತಲಲ್ಲಿ ಹೋಗಿ ನಿಂತ್ಕೋಬೇಕು. ಪಾತ್ರೆಗಳನ್ನು, ಎಲೆಗಳನ್ನು ನಾವೇ ತೆಗೆದುಕೊಂಡು ಹೋಗಬೇಕು. ಸುಮಾರು ನಾಲ್ಕೈದು ಗಂಟೆ ಬಿಸಿಲು ಚೆನ್ನಾಗಿ ಕುದಿಯುವವರೆಗೆ ಹಿತ್ತಲಲ್ಲೇ ಕಾಯ್ತಾ ಇರಬೇಕು. ಹಿತ್ತಲಲ್ಲಿ ಅಮ್ರಾವ್ರನ್ನು ಕಂಡಾಗ ನಗೆ ಬೀರಬೇಕು. ಕಾರ್ಯಕ್ರಮಕ್ಕೆ ಬಂದೋರೆಲ್ಲ ಹೋದ ಬಳಿಕ ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಉಳಿದ ಎಲ್ಲ ಪಾಯಸ, ಬಿರಿಯಾನಿಗಳನ್ನು ನಮ್ಮ ಬಟ್ಟಲಿಗೆ ಸುರೀತಾರೆ. ಸಂಜೆಯ ಹೊತ್ತಿಗೆ ಅದು ಒಂದಿಷ್ಟು ವಾಸ್ನೆ ಬಂದಿರತ್ತೆ. ಅದನ್ನು ರಾತ್ರಿ ತಿಂದು ಉಳಿದುದನ್ನು ಒಲೆಯಲ್ಲಿಟ್ಟು ಬೇಯಿಸಬೇಕು. ಮರುದಿನವೂ ತಿಂದು, ಉಳಿದುದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿಸಿ ಅದನ್ನು ಪಾತ್ರೆಯಲ್ಲಿಟ್ಟು ಬೇಕಾದಾಗ ಬೇಯಿಸಿ ತಿನ್ನಬಹುದು. ಸುಮಾರು ಒಂದು ವಾರ ನಿಮಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಬಹುದು...’’ ಎನ್ನುತ್ತಾ ಲಕ್ಕವ್ವ ಬಿರಿಯಾನಿ ಯನ್ನು ವರ್ಣನೆ ಮಾಡತೊಡಗಿದಳು.
ಈಗ ಕಾಸಿ ವಿಷಯ ಬದಲಿಸಿದನು ‘‘ನೀವು ತುಪ್ಪದಲ್ಲಿ ಯಾವುದೇ ಹೊಸರುಚಿ ಮಾಡೊಲ್ವ...?’’
‘‘ತುಪ್ಪ ಅಂದ್ರೆ ಹೆಂಗಿರ್ತದೆ ಬುದ್ಯೋರಾ?’’ ಲಕ್ಕವ್ವ ಕೇಳಿದರು.
ಕಾಸಿಗೆ ತಲೆಬಿಸಿಯಾಯಿತು ‘‘ಹಾಲಿನಲ್ಲಿ ಏನೂ ತಿಂಡಿ ಮಾಡೋಲ್ವ...’’
‘‘ಮೊಲೆ ಹಾಲು ಬಿಟ್ರೆ ಬೇರೇನು ನಮ್ಮ ಹೈಕ್ಳು ಕುಡಿದಿಲ್ರೀ...’’
‘‘ಸರಿ...ಅಕ್ಕಿಯ ಐಟಂ ಬಿಟ್ರೆ ಇನ್ನು ಬೇರೇನು ಮಾಡ್ತೀರಿ?’’ ಕಾಸಿ ಕೇಳಿದ.
‘‘ಸರ...ಒಂದು ಮಡಕೆಯಲ್ಲಿ ನೀರನ್ನು ಇಡಬೇಕು. ಬಳಿಕ ಐದು ಕಲ್ಲು ಉಪ್ಪು ಹಾಕಬೇಕು. ಆ ಬಳಿಕ ಅದನ್ನು ಚೆನ್ನಾಗಿ ಕುದಿಸಬೇಕು. ಈಗ ಅದನ್ನು ಕೆಳಗಿಳಿಸಿ...ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಕುಡಿಯಬಹುದು. ಮನೆಯಲ್ಲಿ ಅಕ್ಕಿ ಇಲ್ಲದೆ ಇದ್ದರೆ ಇದನ್ನೇ ನಾವು ಮಾಡೋದು...’’
‘‘ಇದರಲ್ಲಿ ರುಚಿ ಎಲ್ಲಿದೆ...?’’ ಕಾಸಿ ಕೇಳಿದ.
‘‘ಹೊಟ್ಟೆ ಹಸಿದಾಗ ಎಲ್ಲಾನೂ ರುಚಿಯಾಗಿರತ್ತೆ ಒಡೆಯಾ? ಎಲ್ಲದಕ್ಕೂ ಮೊದಲು ಹೊಟ್ಟೆ ಹಸಿದಿರಬೇಕು... ಕಲ್ಲು ಮಣ್ಣೂನು ರುಚಿರುಚಿಯಾಗಿರತ್ತೆ.....ಹಾಂ...ಈಗ ನಾವು ಮಣ್ಣಿನಿಂದಲೂ ಹೊಸ ರುಚಿ ಮಾಡ್ತೀವಿ...ಒಂದು ಬೊಗಸೆ ಶುದ್ಧ ಮಣ್ಣನ್ನು ಚೆನ್ನಾಗಿ ನೀರಲ್ಲಿ ನಾದಬೇಕು. ಬಳಿಕ ಒಲೆಯಲ್ಲಿ ಮಡಕೆಯಲ್ಲಿ ನೀರಿಡಬೇಕು...’’ ಕಾಸಿ ತನ್ನ ಎರಡೂ ಕಿವಿಗಳನ್ನು ಮುಚ್ಚಿ ‘‘ಸಾಕು..ಸಾಕು...ಗ್ರಾಮೀಣ ಹೊಸರುಚಿಗಳ ಬಗೆಯನ್ನು ನಾವೀಗ ಅಸ್ವಾದಿಸಿದೆವು... ಲಕ್ಕವ್ವನವ್ವರಿಗೆ ಇದರ ಪ್ರಯುಕ್ತ ಹೊಟ್ಟೆ ತುಂಬಾ ಊಟವನ್ನು ಉಡುಗೊರೆಯಾಗಿ ಕೊಡುತ್ತಿದ್ದೇವೆ...’’ ಎಂದು ಕಾರ್ಯಕ್ರಮ ಮುಗಿಸಿದ.
ಮಾರ್ಚ್ -04-2012

Friday, April 3, 2015

ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರ...

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾನೂನು ಜಾರಿ ಗೊಳಿಸಲು ಹವಣಿಸಿತು. ಈ ಹಿನ್ನೆಲೆಯಲ್ಲಿ ಮಾರ್ಚ್ -28-2010 ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ಬಂದ ಬಳಿಕ ರಾಜ್ಯದ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಪತ್ರಕರ್ತ ಎಂಜಲು ಕಾಸಿ ಗೋಮಾಂಸ ಸವಿಯುತ್ತಾ ಯೋಚಿಸಿದಾಗ ಹೊಳೆದ ಕೆಲವು ಸುದ್ದಿಯ ಹನಿಗಳನ್ನು ಇಲ್ಲಿ ಯಥಾವತ್ ನೀಡಲಾಗಿದೆ.
 ಹನಿ-1
ಗೋಮಾತೆಗೆ ಹಲ್ಲೆ: ರೈತನ ಬಂಧನ
ಹಾಲು ಕರೆಯುವಾಗ ಒದೆಯಿತೆಂದು ಆರೋಪಿಸಿ ರೈತನೊಬ್ಬ ಗೋಮಾತೆಗೆ ಥಳಿಸಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ರೈತನನ್ನು ಕೋಕಾ ಕಾಯ್ದೆಯಲ್ಲಿ ಬಂಧಿಸಲಾಗಿದೆ. ಗೋಮಾತೆಗೆ ಥಳಿಸಲು ಬಳಸಿದ ಬೆತ್ತವನ್ನು ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಗೋಮಾತೆಯನ್ನು ಹತ್ತಿರದ ಖಾಸಗಿ ಮಠವೊಂದರ ಗೋಮಾಳವೊಂದಕ್ಕೆ ಸೇರಿಸಲಾಗಿದ್ದು, ಅದರ ಆರೈಕೆಗಾಗಿ ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಪೇಜಾವರ ಖಂಡನೆ:
 ಗೋಮಾತೆಗೆ ಥಳಿಸಿದ ಬರ್ಬರ ಘಟನೆಯನ್ನು ಪೇಜಾವರ ಶ್ರೀ ತೀವ್ರವಾಗಿ ಖಂಡಿಸಿದ್ದಾರೆ. ಹಾಲು ಕೊಡುವುದು ಅಥವಾ ಕೊಡದೇ ಇರುವುದು ಗೋಮಾತೆಯ ಅಧಿಕಾರವಾಗಿದ್ದು, ಅದರ ಮೇಲೆ ಬಲ ಪ್ರಯೋಗಿಸುವುದು ತಪ್ಪು ಎಂದು ಅವರು ಹೇಳಿಕೆ ನೀಡಿದ್ದಾರೆ.
 ‘‘ಗೋಮಾತೆಯ ಮೇಲೆ ಹಲ್ಲೆ ನಡೆಸಿರುವುದರ ಹಿಂದೆ ಭಯೋತ್ಪಾದಕರ ಪಿತೂರಿ ಇರುವುದರಿಂದ, ಇದನ್ನು ಗಂಭೀರ ತನಿಖೆಗೆ ಒಳಪಡಿಸಬೇಕು. ಥಳಿಸುವುದಕ್ಕೆ ಪ್ರೇರಣೆ ನೀಡಿರುವ ಭಯೋತ್ಪಾಕರನ್ನು ಬಂಧಿಸಬೇಕು’’ ಎಂದು ಆಗ್ರಹಿಸಿದ್ದಾರೆ.
ಪರಿಹಾರ ಘೋಷಣೆ:
 ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದ್ದು, ಇದನ್ನು, ಸ್ಥಳೀಯ ಮಠದ ಸ್ವಾಮೀಜಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಹನಿ-2
ಹತ್ತು ಮನೆಗಳಿಗೆ ದಾಳಿ: ಅಕ್ರಮ ಮಾಂಸ ವಶ
 ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪಡೆಯು ಹಲವು ಮನೆಗಳಿಗೆ ವಿಶೇಷ ದಾಳಿಯನ್ನು ಆಯೋಜಿಸಿದ್ದು, ಅಡುಗೆ ಮನೆಯ ಒಲೆಯಲ್ಲಿ ಬೇಯುತ್ತಿದ್ದ ಅಕ್ರಮ ಮಾಂಸದ ಸಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
 ಈ ಮಾಂಸದ ಸಾರು ಗೋಮಾತೆಯ ಮಾಂಸದಿಂದ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದು, ಅಲ್ಪಸಂಖ್ಯಾತರು ಅದನ್ನು ನಿರಾಕರಿಸಿದ್ದರು. ನಾವು ಒಲೆಯಲ್ಲಿ ಬೇಯಿಸಿರುವುದು ಕೋಳಿಯ ಸಾರು ಎಂದು ಅವರು ಹೇಳಿಕೆ ನೀಡಿದ್ದಾರೆ. ‘‘ನಾವು ಸ್ಥಳೀಯ ಕೋಳಿ ಫಾರಂನಿಂದ ತಂದ ಕೋಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದೇವೆ. ಕೋಳಿಯ ಗರಿಗಳನ್ನು, ಅದರ ಕರುಳು, ಕಾಲು ಮೊದಲಾದ ಅವಶೇಷಗಳನ್ನು ತೋರಿಸಿದ್ದರೂ ಪೊಲೀಸರು ನಮ್ಮ ಮಾಂಸದ ಸಾರುಗಳನ್ನು ವಶಪಡಿಸಿ, ನಮ್ಮ ಮನೆಯ ಯುವಕರ ಮೇಲೆ ಭಯೋತ್ಪಾದಕ ಕೇಸುಗಳನ್ನು ದಾಖಲಿಸಿದ್ದಾರೆ’’ ಎಂದು ದೂರಿದ್ದಾರೆ.
ಆದರೆ ಈ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ್ದು, ಸಾರು ಗೋಮಾತೆಯದ್ದೋ ಅಥವಾ ಕೋಳಿಯದ್ದೋ ಎಂಬುದರ ತನಿಖೆ ನಡೆಯುತ್ತಿದೆ. ಈ ಕುರಿತಂತೆ ಹಲವರನ್ನು ವಶಪಡಿಸಿ ವಿಚಾರಣೆ ನಡೆಸಿದ್ದೇವೆ. ಸ್ಥಳೀಯ ಮಠದ ಎರಡು ಗೋವುಗಳು ಕಾಣೆಯಾಗಿದ್ದು ಆ ಗೋವುಗಳನ್ನೇ ಸಾರು ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಸಾರನ್ನು ಅನ್ನದ ಜೊತೆ ಬೆರೆಸಿ ಅದನ್ನು ತಿಂದು ಪರೀಕ್ಷೆ ನಡೆಸಿದ್ದಾರೆ. ನಿನ್ನೆ ವಶಪಡಿಸಿಕೊಂಡಿರುವ ಎಲ್ಲ ಮನೆಗಳ ಬಿರಿಯಾನಿಯನ್ನು ನಾವು ತಿಂದು ಕೋಳಿಯದ್ದೋ, ಗೋವಿನದ್ದೋ ಎಂದು ಪರೀಕ್ಷೆ ನಡೆಸಿದ್ದೇವೆ. ವರದಿ ಹೊರ ಬೀಳುವುದನ್ನಷ್ಟೇ ಕಾಯುತ್ತಿದ್ದೇವೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮಾಂಸದ ಸಾರಿಗೆ ಸಂಬಂಧಿಸಿ ಈಗಾಗಲೇ 25 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹಲವರ ಮೇಲೆ ಕೋಕಾ ಕಾಯ್ದೆಯನ್ನು ಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಕ್ರಮ ಗೋವಿನ ಸಾರು ವಶಪಡಿಸಿಕೊಂಡ ಪೊಲೀಸರಿಗೆ ಪೊಲೀಸ್ 10 ಸಾವಿರ ರೂ. ಬಹುಮಾನವನ್ನು ಘೋಷಿಸಿದ್ದಾರೆ.
ಹನಿ-3
ಗೋಮಾಳಕ್ಕಾಗಿ ಭೂಮಿ ವಶಹೆಚ್ಚುತ್ತಿರುವ ವೃದ್ಧ ಮತ್ತು ಗೊಡ್ಡು ಗೋವುಗಳಿಂದಾಗಿ ಇರುವ ಗೋಮಾಳಗಳು ತುಂಬಿ ತುಳುಕುತ್ತಿದ್ದು, ಗೋಮಾಳಗಳನ್ನು ವಿಸ್ತರಿಸಲು ಸರಕಾರ ನಿರ್ಧರಿಸಿದೆ. ಈಗಾಗಲೇ ಗೋಮಾಳಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಠಗಳಿಗೆ ಒಂದು ಸಾವಿರ ಎಕರೆ ಭೂಮಿಯನ್ನು ಕೊಡಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಇನ್ನಷ್ಟು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದೆ.ಗೋಮಾಳಕ್ಕೆ ಭೂಮಿ ಕೊಡಲು ವಿರೋಧ ವ್ಯಕ್ತಪಡಿಸುವ ರೈತರನ್ನು ಗೋಹತ್ಯೆ ನಿಷೇಧ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಅಭಿವದ್ಧಿಗಾಗಿ ಭೂಮಿ ಕೊಡಿ: ಮುಖ್ಯಮಂತ್ರಿ ಕರೆ
ಗೋವುಗಳ ಅಭಿವದ್ಧಿಗಾಗಿ ರೈತರು ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಕರೆ ನೀಡಿದ್ದು, ಅಭಿವದ್ಧಿ ವಿರುದ್ಧ ಧ್ವನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗುವುದು ಎಂದು ತಿಳಿಸಿದ್ದಾರೆ.ರೈತರಿಗೆ ಪರಿಹಾರಭೂಮಿಯನ್ನು ಕೊಟ್ಟ ರೈತರಿಗೆ ಪರಿಹಾರವಾಗಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಹನಿ-4
ಗೋಮಾರಾಟ: ಮಠಾಧೀಶರ ಮೇಲೆ ಆರೋಪ
ತಮ್ಮ ಉಸ್ತುವಾರಿಯಲ್ಲಿದ್ದ ಒಂದು ಸಾವಿರ ಗೋವುಗಳು ಕಾಣೆಯಾಗಿವೆ ಎಂದು ಸ್ಥಳೀಯ ಮಠಾಧೀಶರು ಪೊಲೀಸರಿಗೆ ದೂರು ನೀಡಿದ್ದು, ಈ ಒಂದು ಸಾವಿರ ಗೋವುಗಳನ್ನು ಸ್ವಾಮೀಜಿಗಳು ವಿದೇಶಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಠಗಳು ಅಕ್ರಮವಾಗಿ ಗೋಮಾರಾಟ ದಂಧೆಯನ್ನು ಆರಂಭಿಸಿವೆ ಎಂದು ಅವರು ಟೀಕಿಸಿದ್ದಾರೆ.ಆದರೆ ಈ ಆರೋಪವನ್ನು ಎಲ್ಲ ಸ್ವಾಮೀಜಿಗಳು ಒಕ್ಕೊರಲಲ್ಲಿ ವಿರೋಧಿಸಿದ್ದು, ಗೋವುಗಳ ಮಾರಾಟವನ್ನು ಮಾಡಿಲ್ಲ. ಗೋವುಗಳನ್ನು ನಾವು ದಾನ ಮಾಡಿದ್ದೇವೆ. ಅವುಗಳು ವಿದೇಶಿ ಹವಾನಿಯಂತ್ರಿತ ದೊಡ್ಡಿಗಳಲ್ಲಿ ಸುಖವಾಗಿ ಬಾಳುತ್ತಿವೆ ಎಂದು ಹೇಳಿದ್ದಾರೆ.
ಹನಿ-5
ಕುರಿಗಳಿಗೆ ಕೊಂಬುಗಳು
ಗೋವುಗಳನ್ನು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವ ಸಂದರ್ಭದಲ್ಲಿ ಮೂವರು ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಆದರೆ ನಾವು ಮಾಂಸ ಮಾಡುತ್ತಿದ್ದುದು ಗೋವನ್ನಲ್ಲ, ಕುರಿಗಳನ್ನು ಎಂದು ಅವರು ಹೇಳಿದ್ದಾರೆ.ಕುರಿಗಳಿಗೆ ಕೊಂಬು ಇರುವುದಿಲ್ಲ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿದ್ದು, ಅದು ಕೊಂಬುಗಳು ಇರುವ ಕುರಿಗಳು ಎಂದು ಸಂಘಪರಿವಾರದ ಕಾರ್ಯಕರ್ತರು ಸಮರ್ಥಿಸಿದ್ದಾರೆ.
ಆರೆಸ್ಸೆಸ್‌ನ ಕಾರ್ಯಕರ್ತರು ಹೇಳಿರುವುದರಿಂದಾಗಿ, ಆ ಕುರಿಗಳಿಗೆ ಕೊಂಬುಗಳಿವೆ ಎಂದು ಮುಖ್ಯಮಂತ್ರಿ ಸಮರ್ಥಿಸಿದ್ದಾರೆ.
ಹನಿ-6
ಮುಖ್ಯಮಂತ್ರಿ ಆತಂಕ
ಗೋ ಹತ್ಯೆ ನಿಷೇಧ ಜಾರಿಗೆ ಬಂದ ಬಳಿಕ ರೈತರ ಹಟ್ಟಿಗಳಲ್ಲಿ ಗೋವುಗಳು ಗಣನೀಯವಾಗಿ ಕಡಿಮೆಯಾಗಿದ್ದು, ಗೋಮಾಳಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.ಗೋ ಸಾಕಣೆ ದುಬಾರಿಯೆಂದು ಗೋವುಗಳನ್ನು ಸಾಕಲು ಹಿಂಜರಿಯುವ ರೈತರ ಮೇಲೆ ಗೋ ಹತ್ಯೆ ನಿಷೇಧ ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿರುವ ಮುಖ್ಯಮಂತ್ರಿ, ಬ್ಯಾಂಕಿನಿಂದ ಸಾಲ ತೆಗೆದು ಗೋವುಗಳನ್ನು ಕಡ್ಡಾಯವಾಗಿ ಸಾಕತಕ್ಕದ್ದು ಎಂದು ಎಚ್ಚರಿಸಿದ್ದಾರೆ.ಗೋವುಗಳನ್ನು ಸಾಕಿದ ರೈತರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದರೂ, ಗೋಮಾಳಗಳನ್ನಿಟ್ಟು ಗೊಡ್ಡು ದನಗಳನ್ನು ಸಾಕುವ ಸ್ವಾಮೀಜಿಗಳು ದಷ್ಟ ಪುಷ್ಟರಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.ಗೋವುಗಳನ್ನು ಸಾಕುವ ರೈತರಿಗೆ ಅವರ ಭೂಮಿ, ಮನೆಯ ಆಧಾರವಿಟ್ಟು ಇನ್ನಷ್ಟು ಸಾಲವನ್ನು ನೀಡಲಾಗುವುದು.
ಹಾಗೆಯೇ, ಗೊಡ್ಡು ದನಗಳನ್ನು ಗೋಮಾಳದಲ್ಲಿಟ್ಟು ಸಾಕುವ ಮಠಾಧಿಪತಿಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ಒದಗಿಸಲಾಗುವುದು. ಸರಕಾರದ ಕೆಚ್ಚಲಿನಿಂದ ಯಾವಾಗಬೇಕಾದರೂ ಹಾಲು ಕರೆಯಲು ಅವರಿಗೆ ಪೂರ್ಣ ಅವಕಾಶವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರವಿವಾರ - ಮಾರ್ಚ್ -28-2010