Saturday, April 25, 2015

ಕೆಲವು ಜಾಹಿರಾ ‘ಥೂ’ಗಳು

2008ನೇ ಇಸವಿಯಲ್ಲಿ ವಿಧಾನಸಭಾ ಚುನಾವಣೆಯ ಹೊತ್ತು. ಪಕ್ಷಾಂತರದಲ್ಲಿ ಕುಖ್ಯಾತರಾಗಿದ್ದ ಬಂಗಾರಪ್ಪರನ್ನು ಬಿಜೆಪಿ ಹೊರ ಹಾಕಿದ ಸಂದರ್ಭ. ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಸಮಯ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ವರ ಬೇಕಾಗಿದೆ
 ಈಗಾಗಲೇ ಹತ್ತು ಬಾರಿ ಡೈವರ್ಸ್ ಪಡೆದ 70ರ ತಾರುಣ್ಯದ ಯುವತಿಗೆ ಯೋಗ್ಯ ವರ ಬೇಕಾಗಿದೆ. ಯಾವ ಧರ್ಮ, ಜಾತಿ, ವರ್ಗಗಳಿಗೆ ಸೇರಿದ್ದರೂ ಚಿಂತೆಯಿಲ್ಲ. ಈ ಹಿಂದೆ ಡೈವರ್ಸ್ ನೀಡಿದ ಗಂಡಂದಿರಾದರೂ ಆದೀತು. ಈಗಾಗಲೇ ಪೂಜಾರಿಗಳು ಮುಹೂರ್ತ, ಸಮಯ, ಮದುವೆ ಹಾಲ್ ಎಲ್ಲವನ್ನೂ ನಿಗದಿ ಪಡಿಸಿರುವುದರಿಂದ ಅರ್ಜೆಂಟಾಗಿ ಮದುವೆಯಾಗಬೇಕಾಗಿದೆ. ತಾಳಿಯ ಹಣವನ್ನು ವಧುವೇ ಭರಿಸಲಿರುವುದರಿಂದ ವರ ಸೀದಾ ಮಂಟಪಕ್ಕೆ ಬಂದು ತಾಳಿ ಕಟ್ಟಿದರೆ ಆಯಿತು. ಈಡಿಗ ಜಾತಿಗೆ ಸೇರಿರುವ ಈ ಹುಡುಗಿ ಅತಿ ಸುಂದರಿ, ಹಲವು ಮದುವೆಯಾಗಿ ಸಾಕಷ್ಟು ಅನುಭವವಿರುವುದರಿಂದ ವರನಿಗೆ ಅನುಕೂಲ. ವಧುವಿನ ಕೈಯಲ್ಲಿ ಸ್ವಲ್ಪ ಪಿತ್ರಾರ್ಜಿತ ಆಸ್ತಿ ಇದೆ. ಆಸಕ್ತಿ ಇರುವವರು ತಕ್ಷಣ ಮುಖತಃ ಸಂಪರ್ಕಿಸಬೇಕು.
ಬಂಗಾರಮ್ಮ, ಸಮಾಜವಾದಿ ವಿಲ್ಲಾ, ಸಮಯ ಸಾಧಕ ರಸ್ತೆ, ಬಿಜೆಪಿ ಮೊದಲ ತಿರುವು, ಹಳೇ ಕ್ರಾಂತಿರಂಗ ಬೀದಿ, ಕಾಂಗ್ರೆಸ್ ಮುಖ್ಯರಸ್ತೆ, ಶಿವಮೊಗ್ಗ-111 (ಮೊಬೈಲ್ ಫೋನ್‌ನ ಕರೆನ್ಸಿ ಮುಗಿದಿರುವುದರಿಂದ ಹಳೆ ನಂಬರನ್ನು ಸಂಪರ್ಕಿಸಬಾರದಾಗಿ ವಿನಂತಿ)
***

ಕುರಿಗಳು ಮಾರಾಟಕ್ಕಿವೆ
ನಾನೇ ನನ್ನ ದೊಡ್ಡಿಯಲ್ಲಿ ಸಾಕಿದ ದಷ್ಟಪುಷ್ಟ ಅಲ್ಪಸಂಖ್ಯಾಕ ಕುರಿಗಳು ಮಾರಾಟಕ್ಕಿವೆ. ಇರಾಕ್‌ನಿಂದ ತರಿಸಿದ ಸದ್ದಾಂ ಕಂಪೆನಿಯ ಹುಲ್ಲು ಹಾಕಿ ಈ ಕುರಿಗಳನ್ನು ಸಾಕಲಾಗಿದೆ. ಬಲಿ ಕೊಡುವುದಕ್ಕೆ ಯೋಗ್ಯ ಕುರಿಗಳು ಇವು. ನನಗೆ ವಯಸ್ಸಾಗಿರುವುದರಿಂದ ಈ ಕುರಿಗಳನ್ನು ಮಾರಿ, ನನ್ನ ಅಳಿಯ ಮತ್ತು ಮೊಮ್ಮಕ್ಕಳಿಗೆ ಸಲ್ಲಬೇಕಾದುದನ್ನು ಕೊಟ್ಟು, ನಾನು ನಿವತ್ತ ಜೀವನ ಮಾಡಬೇಕೆಂದಿದ್ದೇನೆ. ಆದುದರಿಂದ ಯಾರಾದರೂ ಸರಿ, ಒಳ್ಳೆಯ ದರ ಕೊಟ್ಟರೆ ಈ ಕುರಿಗಳನ್ನು ಮಾರುವುದಕ್ಕೆ ಸಿದ್ಧ. ಕುರಿಗಳ ಜೊತೆಗೆ ಕತ್ತಿಗಳನ್ನು ಪುಕ್ಕಟ್ಟೆಯಾಗಿ ನೀಡಲಾಗುವುದು. ಬಿರಿಯಾನಿ ಮಾಡಲು ಯೋಗ್ಯ ಕುರಿಗಳು. ನನ್ನ ಮಕ್ಕಳು, ಮೊಮ್ಮಕ್ಕಳಿಗಾಗಿಯೇ ಸಾಕಿರುವ ಕುರಿಗಳು ಇವಾಗಿರುವುದರಿಂದ ದರದಲ್ಲಿ ಯಾವುದೇ ರಾಜಿಯಿಲ್ಲ. ಇವನ್ನು ಮಾರಿ ಸಿಕ್ಕಿದ ಲಾಭವನ್ನು ಅಳಿಯ, ಮೊಮ್ಮಕ್ಕಳಿಗೆ ಸಮನಾಗಿ ಹಂಚಿ ಅಲ್ಪಸಂಖ್ಯಾತ ಸಮುದಾಯವನ್ನು ಉದ್ಧಾರ ಮಾಡುವುದು ನನ್ನ ಉದ್ದೇಶ. ಆದುದರಿಂದ ಈ ಕುರಿಗಳನ್ನು ಅತಿ ಹೆಚ್ಚು ದರ ಕೊಟ್ಟು ಖರೀದಿಸಿ ಅಲ್ಪಸಂಖ್ಯಾತರ ಏಳಿಗೆ ಮಾಡಬೇಕೆಂದು ಮನವಿ. ಅಲ್ಪಸಂಖ್ಯಾತ ಕುರಿಗಳಿಂದ ಮಾಡಲ್ಪಟ್ಟ ಚಿಲ್ಲಿ, ಫ್ರೈ, ಸುಕ್ಕ ಇತ್ಯಾದಿಗಳು ಇತ್ತೀಚೆಗೆ ಗುಜರಾತ್‌ನಲ್ಲಿ ಭಾರೀ ಖ್ಯಾತಿಯನ್ನು ಪಡೆದಿದ್ದವು. ಈ ಕುರಿಗಳನ್ನು ಕಡಿದು ಯಾವ ಥರದ ಸುಕ್ಕ, ಫ್ರೈ, ಟಿಕ್ಕಾ ಮಾಡಿ ತಿಂದರೂ ನನ್ನ ಮತ್ತು ನನ್ನ ಮೊಮ್ಮಕ್ಕಳ ಅಭ್ಯಂತರವಿಲ್ಲ. 
ಜೋಕರ್ ಶರೀಫ್, ಅಲ್ಪಸಂಖ್ಯಾತರ ದೊಡ್ಡಿ, ಕಾಂಗ್ರೆಸ್ ವದ್ದಾಶ್ರಮ ರಸ್ತೆ, ಸದ್ದಾಂ ಹುಸೇನ್ ಅಡ್ಡ ಹಾದಿ, ರೈಲ್ವೆ ಹಳಿಗಳ ಸಮೀಪ, ಶಿವಾಜಿನಗರ
*** 

ಕಾಣೆಯಾಗಿದ್ದಾರೆ
ವಾರದ ಹಿಂದೆ ಚುನಾವಣಾ ಸಂತೆಯನ್ನು ನೋಡಿ ಬರುತ್ತೇನೆ ಎಂದು ಹೋದ ಸತ್ಯ, ಆತ್ಮಗೌರವ ಮತ್ತು ಪ್ರಾಮಾಣಿಕತೆ ಎಂಬ ಮೂವರು ಮಕ್ಕಳು ಕಾಣೆಯಾಗಿದ್ದಾರೆ. ಆತ್ಮಸಾಕ್ಷಿ ಎಂಬ ಊರಿನ ನಿವಾಸಿಗಳಾಗಿರುವ ಈ ಮಕ್ಕಳು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಹೊಂದಿದ್ದು, ಹದಯದ ಭಾಷೆಯನ್ನು ಮಾತನಾಡುತ್ತಾರೆ. ಯಾರಾದರೂ ಈ ಮಕ್ಕಳನ್ನು ನೋಡಿದರೆ ದಯವಿಟ್ಟು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಬೇಡಿ. ಯಾಕೆಂದರೆ ಅವರು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವ ಸಾಧ್ಯತೆಯಿದೆ. ಸ್ಥಳೀಯ ರಾಜಕಾರಣಿಗಳಿಗೂ ಒಪ್ಪಿಸಬೇಡಿ. ಅವರು ಚಿಲ್ಲರೆ ಹಣಕ್ಕೆ ಆ ಮಕ್ಕಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಸಿಕ್ಕಿದರೆ ನಿಮ್ಮ ನಿಮ್ಮ ಆತ್ಮ ಸಾಕ್ಷಿಯೊಳಗೆ ಭದ್ರವಾಗಿ ಬಚ್ಚಿಟ್ಟುಕೊಳ್ಳಿ. ಚುನಾವಣೆ ಸಂತೆ ಮುಗಿಯುವವರೆಗೆ ಅವರನ್ನು ಹೊರಗೆ ಬಿಡಬೇಡಿ.
ಪ್ರಜಾಪ್ರಭುತ್ವ, ಕಾಣೆಯಾದ ಮಕ್ಕಳ ನಿರ್ಭಾಗ್ಯ ತಂದೆ
***
ಹರಾಜು ಪ್ರಕಟನೆ
ಅತ್ಯುತ್ತಮ ತಳಿಯ 20 ಕ್ರಿಕೆಟ್ ಆಟಗಾರರು ಹರಾಜಿಗಿದ್ದಾರೆ. ಸ್ಫುರದ್ರೂಪಿಗಳಾಗಿರುವ ಈ ಕ್ರಿಕೆಟ್ ಆಟಗಾರರು ಅತ್ಯಂತ ಚೆಂದ ಹಾಡಬಲ್ಲರು. ಫ್ಯಾಶನ್ ಶೋಗಳಲ್ಲಿ ಮಾರ್ಜಾಲ ನಡಿಗೆಯ ಕುರಿತಂತೆ ವಿಶೇಷ ತರಬೇತಿ ಪಡೆದಿದ್ದಾರೆ. ಬಿಕಿನಿ ಹಾಕಿದ ಹುಡುಗಿಯರೊಂದಿಗೆ ಅದ್ಭುತವಾಗಿ ಕುಣಿಯಬಲ್ಲರು. ಯಾವ ಯಾವ ಸಂದರ್ಭಗಳಲ್ಲಿ ಹೇಗೆ ವಿವಾದಿತರಾಗಿ ಸುದ್ದಿಯಾಗಬೇಕು ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದ್ದಾರೆ. ಬೇಕಾದರೆ ಆಟಕ್ಕೂ ಕೂಡಾ ಇವರನ್ನು ಬಳಸಬಹುದು. ಆದರೆ ಇವರ ಮೇಕಪ್ ಕೆಡದಂತೆ ಜಾಗತೆ ವಹಿಸಬೇಕು. ಬಿಸಿಲಿಗೆ ಹೆಚ್ಚು ಹೊತ್ತು ನಿಲ್ಲಿಸಬಾರದು. ಆಟಗಾರರ ಜೊತೆಗೆ ಅವರ ನಾಚಿಕೆ, ಮಾನ ಮರ್ಯಾದೆ, ಸ್ವಂತಿಕೆ ಇವುಗಳಿಗೆ ಪ್ರತ್ಯೇಕ ದರ ವಿಧಿಸಲಾಗುವುದಿಲ್ಲ. ಅದನ್ನು ಪುಕ್ಕಟೆಯಾಗಿ ನೀಡಲಾಗುತ್ತದೆ.
ಡಾಲರ್ ಕುಮಾರ್, ಆತ್ಮ ಗೌರವವಿಲ್ಲ, ಹಾಕಿ ಆಟದ ಗೋರಿಯ ಎದುರುಗಡೆ, ಬಹುರಾಷ್ಟ್ರೀಯ ಕಂಪೆನಿ, ಭಾರತ
***
ಅನಾಥ ಶವ ಪತ್ತೆ
ಗುಜರಾತ್‌ನ ಗೋಧ್ರಾ ರೈಲು ಹಳಿ ಬಳಿ ಒಂದು ಅನಾಥ ಶವ ಪತ್ತೆಯಾಗಿದೆ. ಮುಖ ಗುರುತು ಸಿಕ್ಕಲಾರದಷ್ಟು ಜಜ್ಜಿ ಹೋಗಿದೆ. ಆತ್ಮಹತ್ಯೆಯೋ, ಕೊಲೆಯೋ ತಿಳಿಯದಾಗಿದೆ. ಮತ ದೇಹದ ಅಂಗಿಯ ಕಾಲರ್ ಬಳಿ ‘ಅಂಬೇಡ್ಕರ್ ಟೈಲರ್ ಶಾಪ್’ ಎನ್ನುವ ಮಾರ್ಕ್ ಇದೆ. ಕಿಸೆಯಲ್ಲೊಂದು ಗುರುತು ಚೀಟಿ ಸಿಕ್ಕಿದ್ದು, ಅದರಲ್ಲಿ ‘ಸಂವಿಧಾನ’ ಎಂಬ ಹೆಸರಿದ್ದು, ಅದು ಮತ ವ್ಯಕ್ತಿಯ ಹೆಸರಾಗಿರಬೇಕೆಂದು ಶಂಕಿಸಲಾಗಿದೆ. ಗುರುತು ಚೀಟಿಯಲ್ಲಿ ತಂದೆಯ ಹೆಸರು ಸ್ವಾತಂತ್ರ, ತಾಯಿಯ ಹೆಸರು ಭಾರತಮಾತೆ ಎಂದು ಬರೆದಿದೆ. ವ್ಯಕ್ತಿಯ ದೇಹದಾದ್ಯಂತ ಚೂರಿಯ ಗಾಯಗಳಿವೆ. ವ್ಯಕ್ತಿಯ ಎದೆ ಭಾಗಕ್ಕಿಂತ ಬೆನ್ನಿನ ಭಾಗಕ್ಕೆ ಹೆಚ್ಚು ಇರಿಯಲಾಗಿದೆ. ಗಾಯದ ಗುರುತು ನೋಡಿದಾಗ ತ್ರಿಶೂಲಗಳಿಂದ ಬೆನ್ನಿಗೆ ಇರಿಯಲಾಗಿದೆ ಎಂಬ ಅನುಮಾನ ಬರುತ್ತದೆ. ಬೆನ್ನಿಗೆ ಇರಿದ ಪರಿಣಾಮವಾಗಿಯೇ ವ್ಯಕ್ತಿ ಸತ್ತಿರಬೇಕೆಂದು ಶಂಕಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ಮೊಕದ್ದಮೆ ಎಂದು ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ ಮತದೇಹವನ್ನು ಕೊಂಡೊಯ್ಯಬಹುದು.
ನರೀಂದ್ರ ಮೊ. ದಿ. ಮುಖ್ಯಸ್ಥರು ಗುಜರಾತ್ ಶವಾಗಾರ ವಿಭಾಗ.
(ಎಪ್ರಿಲ್ 27, 2008, ರವಿವಾರ)

No comments:

Post a Comment