Thursday, April 30, 2015

ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು?

ಯಡಿಯೂರಪ್ಪ ಕೃಪೆಯಿಂದ ಸದಾನಂದ ಗೌಡರು  ಮುಖ್ಯ ಮಂತ್ರಿಯಾಗಿ, ಬಳಿಕ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟು ಕೊಡಲು ಗೌಡರು ನಿರಾಕರಿಸಿದಾಗ ಬರೆದ ಬುಡಬುಡಿಕೆ. ಫೆಬ್ರವರಿ -26-2012ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಶಿಗೆ ಹೋಗಿ ಬಂದ ಸುದ್ದಿ ಕೇಳಿದ್ದೇ ಎಲ್ಲರಿಗೂ ಕುತೂಹಲ. ಸಾಧಾರಣವಾಗಿ ಕಾಶಿಗೆ ಹೋಗಿಬಂದವರು ಗಂಗಾನದಿಯಲ್ಲಿ ಏನನ್ನಾದರೂ ಬಿಟ್ಟು ಬರಲೇ ಬೇಕು. ಯಡಿಯೂರಪ್ಪ ಏನನ್ನು ಬಿಟ್ಟು ಬಂದಿರ ಬಹುದು? ಎಲ್ಲರೂ ತಲೆ ಕೆಡಿಸತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕೂಡ ಈ ಕುರಿತಂತೆ ತಲೆ ಕೆಡಿಸತೊಡಗಿದ. ಏನು ಬಿಟ್ಟು ಬಂದಿರ ಬಹುದು? ಎಲ್ಲಿಯೂ ಯಡಿಯೂರಪ್ಪ ಕೈಗೆ ಸಿಗುತ್ತಿಲ್ಲ. ಪತ್ರಕರ್ತ ಎಂಜಲು ಕಾಸಿ ನೇರ ಈಶ್ವರಪ್ಪನವರಲ್ಲಿಗೆ ಹೋದ.
‘‘ಸಾರ್...ಯಡಿಯೂರಪ್ಪನವರು ಕಾಶಿಗೆ ಹೋದರಂತಲ್ಲ ಸಾರ್. ಏನು ಬಿಟ್ಟು ಬಂದರು?’’
‘‘ಅದೇ ನನಗೂ ಕುತೂಹಲ. ನೀವು ಪತ್ತೆ ಮಾಡಿ ಹೇಳುವುದು ಬಿಟ್ಟು ನನ್ನಲ್ಲಿ ಕೇಳ್ತೀರಲ್ಲ...ಸದನದಲ್ಲಿ ಯಾರ್ಯಾರು ಬ್ಲೂಫಿಲಂ ನೋಡ್ತಾರೆ ಎನ್ನೋದನ್ನು ಕಂಡು ಹಿಡಿಯೋದಕ್ಕಾಗುತ್ತೆ. ಇದು ನಿಮಗೆ ಕಂಡು ಹಿಡಿ ಯೋದಕ್ಕಾಗೋದಿಲ್ವ?’’ ಈಶ್ವರಪ್ಪ ಸಿಟ್ಟಾದರು.
‘‘ಹಾಗಲ್ಲ ಸಾರ್...ಯಡಿಯೂರಪ್ಪರವರ ಅಂತ ರಂಗದ ವಿಷಯ ಇದು. ನಿಮಗೆ ಗೊತ್ತಿರಬಹುದು...’’ ಕಾಸಿ ಹಲ್ಲು ಕಿರಿದ.
‘‘ಅವರ ಅಂತರಂಗದ ವಿಷಯವನ್ನು ಅವರ ಅಂತ ರಂಗಕ್ಕೆ ಹತ್ತಿರವಿರುವವರತ್ರ ಕೇಳ್ರೀ...ನನ್ನತ್ರ ಯಾಕೆ ಕೇಳ್ತೀರಿ...’’ ಈಶ್ವರಪ್ಪ ಮತ್ತೆ ಸಿಡುಕಿದರು.
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ಸಾರ್... ಯಡಿಯೂರಪ್ಪ ಏನನ್ನು ಕಾಶಿಯಲ್ಲಿ ಬಿಟ್ಟು ಬಂದರೆ ಚೆನ್ನಾಗಿತ್ತು...ಅದನ್ನಾದರೂ ಹೇಳಿ’’
ಈಶ್ವರಪ್ಪ ಒಂದು ಕ್ಷಣ ಯೋಚಿಸಿ ಹೇಳಿದರು ‘‘ಗಂಗಾನದಿಯಲ್ಲಿ ಶೋಭಾ ಕರಂದ್ಲಾಜೆಯನ್ನು ಬಿಟ್ಟು ಬಂದಿದ್ದರೆ ರಾಜ್ಯದ ಎಲ್ಲ ಸಮಸ್ಯೆಗಳೂ ಮುಗಿಯು ತ್ತಿತ್ತು...’’
‘‘ಆದರೆ ಶೋಭಾ ಅವರು ಇಲ್ಲೇ ಬೆಂಗಳೂರಿನಲ್ಲಿ ಸುತ್ತಾಡ್ತಾ ಇದ್ದಾರಲ್ಲ ಸಾರ್?’’ ಕಾಸಿ ಕೇಳಿದ.
‘‘ಹೌದೌದು. ಅವರೆಲ್ಲಿ ಬಿಡ್ತಾರೆ. ಒಂದು ವೇಳೆ ಅವರು ನಮಗೆ ಒಪ್ಪಿಗೆ ಕೊಟ್ಟರೂ ಸಾಕು, ನಾವೇ ಶೋಭಾರನ್ನು ಗೋಣಿ ಚೀಲದಲ್ಲಿ ಹಾಕಿ ಗಂಗಾನದಿಗೆ ಎಸೆದು ಬರ್ತೇವೆ...’’ ಎಂದು ಹಣೆ ಒರೆಸಿಕೊಂಡರು.
‘‘ಥ್ಯಾಂಕ್ಯೂ ಸಾರ್ ಬರ್ತೇನೆ’’ ಕಾಸಿ ಹೊರಟ.
‘‘ಹೋಗಿ, ಬರ್ಬೇಡಿ...’’ ಎಂದರು ಈಶ್ವರಪ್ಪ.
***
ಕಾಸಿ ಅಲ್ಲಿಂದ ನೇರ ಸದಾನಂದ ಗೌಡರ ಮನೆಗೆ ಓಡಿದ. ಕಾಸಿಯನ್ನು ಕಂಡದ್ದೇ ‘‘ಬಂದ ಮಂಡೆ ಬೆಚ್ಚ ಮಾಡ್ಲಿಕ್ಕೆ’’ ಎಂದು ಸದಾನಂದರು ತಲೆ ಚಚ್ಚಿಕೊಂಡರು. ಆದರೂ ನಗುನಗುತ್ತಾ ಕೇಳಿದರು ‘‘ಏನು ಕಾಸಿಯವ್ರೇ ಬಂದದ್ದು...?’’
‘‘ಸಾರ್...ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು ಅಂತ ಗೊತ್ತುಂಟಾ...?’’
ಸದಾನಂದ ಗೌಡರ ಹುಬ್ಬು ಗಂಟಿಕ್ಕಿತು, ‘‘ಹೋಗು ವಾಗ, ಬರ್ತೀನೇನ್ರಿ ಕಾಶಿಗೆ ಅಂತ ನನ್ನನ್ನು ಕರೆದರು. ನನಗೆ ಹೋಗಲಿಕ್ಕೆ ಹುಚ್ಚುಂಟಾ? ನಾನು ಬರುವುದಿಲ್ಲ ಎಂದೆ. ನನಗೆ ಗೊತ್ತಿತ್ತು. ಇವರು ನನ್ನನ್ನೇ ಕಾಶಿಯಲ್ಲಿ ಬಿಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಅಂತ. ಏನನ್ನು ಬಿಟ್ಟು ಬರುತ್ತಾರೆ... ಅವರ ಲಂಗೋಟಿಯನ್ನು ಬಿಟ್ಟು ಬರ್ಬೇಕಷ್ಟೇ...ಬೇರೇನು ಬಿಟ್ಟು ಬರುವ ಜಾತಿಯಲ್ಲ ಅದು....’’
‘‘ಹಾಗಲ್ಲ ಸಾರ್...ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಬಿಟ್ಟು ಬಂದಿದ್ದಾರೆ ಅಂತ ಸುದ್ದಿ ಉಂಟು, ಹೌದಾ’’ ಕಾಸಿ ಸುಮ್ಮಗೆ ಒಂದು ತುಂಡು ಬಿಸ್ಕೆಟ್ ಬಿಸಾಡಿದ.
ಸದಾನಂದ ಗೌಡರು ಒಮ್ಮೆಲೆ ಚುರುಕಾಗಿ, ಕಾಸಿಯತ್ತ ಬಾಗಿದರು ‘‘ಹೌದಾ? ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಕಾಸಿಯಲ್ಲಿ ಬಿಟ್ಟು ಬಂದದ್ದು ಹೌದಾ? ಏನಾದರೂ ವಿಷಯ ಉಂಟಾ...ನಾನು ಪುತ್ತೂರಿನ ಸಹಸ್ರಲಿಂಗೇಶ್ವರ ನಲ್ಲಿ ಹರಕೆ ಹೊತ್ತಿದ್ದೆ. ಅವರಿಗೆ ಈ ಕುರ್ಚಿಯ ವ್ಯಾಮೋ ಹ ಒಂದು ಬಿಡಿಸಪ್ಪ ಅಂತ...ಇದು ನಿಜವಾ...ಬಿಟ್ಟದ್ದು ಹೌದಾ?’’ ಗೌಡರು ಮತ್ತೆ ಮತ್ತೆ ಕೇಳಿದರು.
‘‘ಗೊತ್ತಿಲ್ಲ ಸಾರ್, ನಿಮಗೇನಾದರೂ ಗೊತ್ತಾ ಅಂತ ಕೇಳಿದ್ದು...’’ ಕಾಸಿ ಹೇಳಿದ.
‘‘ನೀವು ಸುಮ್ಮನೆ ಏನೇನೆಲ್ಲ ಹೇಳಿ ನನಗೆ ಆಸೆ ಹುಟ್ಟಿಸಬೇಡಿ ಗೊತ್ತಾಯಿತಾ? ಗಂಗಾನದಿಯಲ್ಲಿ ಕುರ್ಚಿಯ ಆಸೆಯನ್ನು ಬಿಡುವುದು ಅಷ್ಟು ಸುಲಭವಲ್ಲ. ಅವರೇ ಗಂಗಾನದಿಯಲ್ಲಿ ಕೊಚ್ಚಿ ಹೋದರೆ, ಆಸೆಯೂ ಅವರ ಜೊತೆಗೇ ಹೋದೀತು. ಅದು ಬಿಟ್ಟು ಅವರು ಕುರ್ಚಿಯ ಆಸೆಯನ್ನು ಬಿಟ್ಟು ಬರ್ಲಿಕ್ಕುಂಟಾ? ಅದರ ಆಸೆ ಅವರ ರಕ್ತದ ಕಣಕಣದಲ್ಲೂ ಉಂಟು ಗೊತ್ತುಂಟಾ?’’
***
ಸರಿ ಕಾಸಿ ನೇರವಾಗಿ ರೇಣುಕಾಚಾರ್ಯರಲ್ಲಿಗೆ ಹೋದ. ‘‘ಯಡಿಯೂರಪ್ಪನವರು ಏನು ಬಿಟ್ಟು ಬಂದಿದ್ದಾರೆ ಅಂತ ನಿಮಗೇನಾದರೂ ಗೊತ್ತಾ?’’
ರೇಣುಕಾಚಾರ್ಯರು ತೇಲುಗಣ್ಣು ಮಾಡುತ್ತಾ ಮಾತನಾಡತೊಡಗಿದರು ‘‘ಯಾಕೆ? ಯಾಕೆ ಬಿಡ ಬೇಕು... ಹಾಗೆಲ್ಲ ಅಷ್ಟು ಸುಲಭದಲ್ಲಿ ಅವರು ಬಿಡು ವುದಿಲ್ಲ ಗೊತ್ತಾಯಿತಲ್ಲ? ವೀರಶೈವರೇ ಯಾಕೆ ಬಿಡಬೇಕು...ಈ ಬ್ರಾಹ್ಮಣರು ಬಿಡಲಿ ನೋಡುವ... ಲಿಂಗಾಯತರಿಗೆ ಈಗಾಗಲೇ ಭಾರೀ ಅನ್ಯಾಯವಾಗಿದೆ. ನಾವು ಬಿಡುವುದಿಲ್ಲ, ಬಿಡಿವುದಿಲ್ಲ... ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ...’’
ಕಾಸಿ ಒಂದೂ ಅರ್ಥವಾಗದೆ ತಲೆ ಕೆರೆದುಕೊಂಡು ಮತ್ತೆ ಹೇಳಿದ ‘‘ಹಾಗಲ್ಲ ಸಾರ್...ಕಾಶಿಗೆ ಹೋದರೆ ನಮ್ಮೆಳಗಿನ ಕೆಡುಕುಗಳಲ್ಲಿ ಒಂದನ್ನು ಗಂಗಾನದಿಯಲ್ಲಿ ಬಿಟ್ಟು ಬರಬೇಕು ಅಂತ ಸಂಪ್ರದಾಯವಿದೆ. ಯಡಿಯೂ ರಪ್ಪ ಯಾವ ಕೆಡುಕು ಬಿಟ್ಟು ಬಂದಿದ್ದಾರೆ...’’
ರೇಣುಕಾಚಾರ್ಯರು ತಕ್ಷಣ ಉತ್ತರಿಸಿದರು ‘‘ಅದರ ಬಗ್ಗೆ ಕೇಳುತ್ತಿದ್ದೀರಾ? ನೋಡಿ ಇವ್ರೆ, ಯಡಿಯೂರಪ್ಪನವರಿಗೆ ಎಲ್ಲ ಕೆಡುಕುಗಳನ್ನು ಗಂಗಾನದಿಯಲ್ಲಿ ಬಿಡಬೇಕು ಅಂತ ಮನಸ್ಸಿತ್ತು. ಅದಕ್ಕಾಗಿ ಈಶ್ವರಪ್ಪ, ಸದಾನಂದ ಗೌಡ, ಅಶೋಕ್ ಎಲ್ಲರನ್ನೂ ಕಾಶಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಡಲು ತೀರ್ಮಾನಿಸಿದ್ದರು. ಆದರೆ ಯಡಿಯೂರಪ್ಪ ನಿಮ್ಮನ್ನು ಗಂಗಾನದಿಯ ಲ್ಲಿ ಬಿಟ್ಟು ಬಿಡುತ್ತಾರೆ ಎನ್ನುವುದನ್ನು ಯಾರೋ ಭಿನ್ನಮತೀಯರು ಅವರಿಗೆ ತಿಳಿಸಿರಬೇಕು. ಎಲ್ಲರೂ ಕೈಕೊಟ್ಟರು. ಪಾಪ ಯಡಿಯೂರಪ್ಪ ನವರು ಏನು ಮಾಡುವುದು? ಬರಿಗೈಯಲ್ಲಿ ಬಂದು ಬಿಟ್ಟರು....’’
***
ಇವರೊಂದಿಗೆಲ್ಲ ಕೇಳಿ ಪ್ರಯೋಜನವಿಲ್ಲವೆಂದು ಎಂಜಲು ಕಾಸಿ ಯಡಿಯೂರಪ್ಪರನ್ನು ಹುಡುಕತೊಡ ಗಿದ. ನೋಡಿದರೆ ಯಾವುದೋ ಒಂದು ಮೂಲೆಯ ಊರಿನಲ್ಲಿರುವ ಸ್ವಾಮಿಯ ಆಶೀರ್ವಾದ ಪಡೆಯುತ್ತಿದ್ದರು.
‘‘ಸಾರ್..ಕಾಶಿಯಲ್ಲಿ ನೀವೇನಾದರು ಬಿಟ್ಟು ಬಂದಿರಾ?’’ ಕಾಸಿ ಯಡಿಯೂರಪ್ಪರಲ್ಲಿ ಕೇಳಿಯೇ ಬಿಟ್ಟ.
‘‘ಹೂಂ..ಬಿಟ್ಟು ಬಂದೆ....’’ಗಂಭೀರವಾಗಿ ನುಡಿದರು ಯಡಿಯೂರಪ್ಪ.
‘‘ಏನನ್ನು ಬಿಟ್ಟು ಬಂದಿರಿ ಸಾರ್?’’
‘‘ನನ್ನೊಳಗಿದ್ದ ಅಳಿದುಳಿದ ಮಾನ, ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ಬಂದೆ. ಈಗ ನಾನು ತುಂಬಾ ಹಗುರವಾಗಿದ್ದೇನೆ. ಇನ್ನು ಮುಖ್ಯಮಂತ್ರಿ ಗಾದಿಗಾಗಿ ನನ್ನ ಹೋರಾಟ ತೀವ್ರವಾಗುತ್ತದೆ....’’
ರವಿವಾರ - ಫೆಬ್ರವರಿ -26-2012

No comments:

Post a Comment