Monday, April 27, 2015

ರಾಹುಲ್ ಗಾಂಧಿ ಕುರಿತು ದುರಂತ ಕಾವ್ಯಮಂ ಬರೆವೆಂ....

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸ್ ನೊಳಗೆ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಸುಪುತ್ರ ಹರ್ಷ ಮೊಯ್ಲಿ ನಡುವೆ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ನಡೆದಾಗ ಬರೆದ ಬುಡಬುಡಿಕೆ. ಫೆಬ್ರವರಿ -23-2014ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

‘ಕೊನೆಗೂ ಚುನಾವಣೆ ಘೋಷಣೆಯಾಯಿತು’ ಎಂದು ಯಾರೋ ಹೇಳಿದ್ದು ಕೇಳಿ ‘ಇಷ್ಟು ಬೇಗವಾ?’ ಎಂದು ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅಷ್ಟರಲ್ಲಿ ಜನಾರ್ದನ ಪೂಜಾರಿಯವರು ಮಂಗಳೂರಿನ ಬೀದಿಯಲ್ಲಿ ಪಾದಯಾತ್ರೆ ಮಾಡುವುದನ್ನು ಟಿವಿಗಳು ಅತ್ಯುತ್ಸಾಹದಿಂದ ತೋರಿಸುತ್ತಿದ್ದವು. ‘‘ಅರೆ! ಪೂಜಾರಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟೂ ಆಯಿತಾ?’’ ಎಂದು ಕಾಸಿ ಮತ್ತೊಮ್ಮೆ ಆಘಾತಕ್ಕೀಡಾದ.
‘‘ಅವರ ಎದುರು ಯಾರು ಚುನಾವಣೆಗೆ ನಿಂತದ್ದು?’’ ಎಂದು ಕಾಸಿ ತನ್ನಷ್ಟಕ್ಕೆ ಕೇಳುತ್ತಿರುವಾಗ ಯಾರೋ ಜೋರಾಗಿ ಹೇಳಿದರು ‘‘ಮೊಯ್ಲಿ ಕಣ್ರೀ...’’ ‘‘ಅಂದರೆ ಈಗ ಕಾಂಗ್ರೆಸ್ ಕ್ಯಾಂಡಿಡೇಟು ಯಾರು? ಬಂಡಾಯ ಯಾರು?’’ ‘‘ಎಲವೋ ಮಂಕೆ...ಇದು ಕಾಂಗ್ರೆಸ್‌ನೊಳಗಿನ ಚುನಾವಣೆ. ಮಂಗಳೂರಿನಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲು ಚುನಾವಣೆ...’’ ಹೀಗೆಂದು ದಾರಿ ಹೋಕರಾರೋ ಕಾಸಿಯ ತಲೆಗೆ ಮೊಟಕಿದರು. ಈಗ ಕಾಸಿಯ ಟ್ಯೂಬ್‌ಲೈಟ್ ಹತ್ತಿಕೊಂಡಿತು. ತಕ್ಷಣ ಪೂಜಾರಿಯವರ ಇಂಟರ್ಯೂ ಮಾಡಿ ಬರೋಣ ಎಂದು ಮಂಗಳೂರು ಕಡೆಯ ಲಾರಿ ಹತ್ತಿದ ಕಾಸಿ.
ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಳಿಯುತ್ತಿರು ವಾಗಲೇ ಜನಾರ್ದನ ಪೂಜಾರಿ ಕೈಕೊಟ್ಟು ಕಾಸಿಯನ್ನು ಇಳಿಸಿದರು ‘‘ಈ ಸಾರಿ ಗೆಲ್ಲುವುದು ನಾನೇ ಗೊತ್ತುಂಟಾ...’’ ಎನ್ನುತ್ತಾ ಪೂಜಾರಿ ಮಾತಿಗೆ ಶುರು ಮಾಡಿದರು. ‘‘ಲೋಕಸಭಾ ಚುನಾವಣೆಯಲ್ಲಿಯಾ...ಅಥವಾ ಮೊಯ್ಲಿ ವಿರುದ್ಧದ ಚುನಾವಣೆಯಲ್ಲಿಯಾ?’’ ಕಾಸಿ ಅರ್ಥವಾಗದೆ ಕೇಳಿದ.
‘‘ಯಾವ ಇಲಿ, ಬೆಕ್ಕು ನಿಂತರೂ ನಾನು ಹೆದರುವುದಿಲ್ಲ. ಅವರು ಇಲಿಯಾದರೆ ನಾನು ಹುಲಿ. ಸ್ವಲ್ಪ ವಯಸ್ಸಾಗಿದೆ. ಹಲ್ಲು, ಉಗುರು ಹೋಗಿದೆ ಅಂತಾ ನನ್ನನ್ನು ಮೂಲೆಗೆ ತಳ್ಳುವುದಾ....ನಾನು ಸುಮ್ಮನಿರುವುದಿಲ್ಲ... ಭರ್ಜರಿ ಪ್ರಚಾರ ಮಾಡಿ ಗೆಲ್ಲುವುದು ಗೆಲ್ಲುವುದೇ...’’
‘‘ಯಾರ ವಿರುದ್ಧ ಸಾರ್....?’’
‘‘ಮೊದಲು ಮೊಯ್ಲಿಯ ವಿರುದ್ಧ ಗೆಲ್ಲುವುದು... ಅನಂತರ ನೋಡುವ...’’ ಪೂಜಾರಿ ತಡವರಿಸಿ ಹೇಳಿದರು.
‘‘ಅಂದರೆ ಅನಂತರ ಗೆಲ್ಲದಿದ್ದರೂ ಪರವಾಗಿಲ್ಲ ಅಂತವಾ?’’ ಕಾಸಿ ಕೇಳಿದ.
‘‘ಬಿಜೆಪಿಯವರೊಟ್ಟಿಗೆ ಗೆಲ್ಲುವುದು ದೊಡ್ಡ ವಿಷಯ ಅಲ್ಲ. ನನ್ನ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಗೆಲ್ಲುವುದು ದೊಡ್ಡ ವಿಷಯ...ನಾನು ಬಿಡುವುದಿಲ್ಲ...ದೊಡ್ಡ ಯುದ್ಧ ಮಾಡುತ್ತೇನೆ...’’ ಪೂಜಾರಿಯವರು ಕಣ್ಣು ತಿರುಗಿಸುತ್ತಾ ಹೇಳಿದರು.
‘‘ಮೊಯ್ಲಿಯವರಿಗೆ ಕೇಂದ್ರದಲ್ಲಿ ಬೆಂಬಲ ಇದೆ. ನಿಮಗೆ ಯಾರು ಯಾರು ಬೆಂಬಲ ನೀಡುತ್ತಾರೆ ಸಾರ್?’’ ಕಾಸಿ ಕೇಳಿದ.
‘‘ಕಲ್ಲಡ್ಕದ ಭಟ್ಟರು ನನಗೆ ಪೂರ್ತಿ ಬೆಂಬಲ ಘೋಷಿಸಿದ್ದಾರೆ....ಈ ಚುನಾವಣೆಯಲ್ಲಿ ಗೆದ್ದರೆ...ಭಟ್ಟರಿಗೆ ಮೀಸಲಾತಿ ಕೊಡುವುದು ಗ್ಯಾರಂಟಿ...’’ ಪೂಜಾರಿ ಹೇಳಿದರು.
‘‘ಸಾರ್... ಬಿಲ್ಲವರಿಗೆ...?’’ ಕಾಸಿ ಆತಂಕದಿಂದ ಕೇಳಿದ.
‘‘ಬಿಲ್ಲವರಿಗೆ ಎಂತಕ್ಕೆ ಕೊಡುವುದು? ಅವರಿಗೆ ಕೊಟ್ಟರೆ ಏನೂ ಫಾಯಿದ ಇಲ್ಲ...ಭಟ್ಟರಿಗೆ ಕೊಟ್ಟರೆ ನಮ್ಮ ಬಿಲ್ಲವರಿಗೆ ಸಂತೋಸ ಆಗ್ತದೆ...’’ ಪೂಜಾರಿ ಹೇಳಿದರು.
‘‘ಕಾಂಗ್ರೆಸ್‌ನಿಂದ ನೀವು ನಿಂತರೆ ಬಿಜೆಪಿಯ ವಿರುದ್ಧ ಗೆಲ್ಲುವ ಚಾನ್ಸ್ ಉಂಟಾ?’’ ಕಾಸಿ ಅನುಮಾನದಿಂದ ಕೇಳಿದ.
‘‘ಈ ಬಾರಿ ಭಟ್ಟರು ನನ್ನ ಕಡೆಗೆ ಕಣ್ಣು ಹೊಡೆದಿದ್ದಾರೆ ಗೊತ್ತುಂಟಾ...’’ ಜನಾರ್ದನ ಪೂಜಾರಿ ನಾಚಿ ಹೇಳಿದರು.
‘‘ಸಾಧಾರಣವಾಗಿ ಕಲ್ಲಡ್ಕದ ಭಟ್ಟರು ಕಲ್ಲು ಹೊಡೆದು ಫೇಮಸು. ನಿಮಗೇಕೆ ಕಣ್ಣು ಹೊಡೆದರು...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಭಟ್ಟರ ಮೇಲೆ ಸುಮ್ಮಸುಮ್ಮಗೆ ಆರೋಪ ಮಾಡಬೇಡಿ...ಈ ಪೇಪರ್‌ನವರಿಗೆ ಕೆಲಸವಿಲ್ಲ...ಹಾಗೆ ನೋಡಿದರೆ ಒಂದೆರಡು ಕಲ್ಲು ಹೊಡೆದರೆ ಏನೂ ನಷ್ಟವಿಲ್ಲ...ಸದ್ಯಕ್ಕೆ ಅವರು ನನ್ನ ಕಡೆ ಕಣ್ಣು ಹೊಡೆದಿದ್ದಾರೆ ಆದುದರಿಂದ ನಾನು ಗೆಲ್ಲುತ್ತೇನೆ...’’
‘‘ಆದರೆ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀರಿ?’’ ಕಾಸಿ ಕೇಳಿದ.
‘‘ಸೋತರೆ ಬಿಡುವುದಿಲ್ಲ....ಭಟ್ಟರು ಭರವಸೆ ಕೊಟ್ಟಿದ್ದಾರೆ... ಕಲ್ಲಡ್ಕವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದಿದ್ದಾರೆ. ನಾನು ಸೋತರೂ ಪರವಾಗಿಲ್ಲ ಮೊಯ್ಲಿಯನ್ನು ಗೆಲ್ಲಲು ಬಿಡುವುದಿಲ್ಲ...’’
‘‘ನೀವು ಕಾಂಗ್ರೆಸನ್ನು ಸೋಲಿಸಲು ಬಂಡಾಯ ನಿಲ್ಲುತ್ತೀರಾ?’’ ಕಾಸಿ ಕೇಳಿದ.
‘‘ಹ್ಹೆ ಹ್ಹೆ...ಹಾಗೆ ಮಾಡುವುದಕ್ಕೆ ಹುಚ್ಚುಂಟ ನನಗೆ. ನಾನು ಹರ್ಷ ಮೊಯ್ಲಿ ಪರವಾಗಿ ಪ್ರಚಾರ ಮಾಡಿದರೆ ಸಾಕು...ಜನ ಬಿಜೆಪಿಗೆ ಓಟು ಹಾಕಿ ಬಿಡ್ತಾರೆ...’’ ಪೂಜಾರಿ ತಮ್ಮ ಮೀಸೆ ತಿರುವಿದರು.
‘‘ಸಾರ್... ಅದಿರಲಿ... ಹರ್ಷ ಮೊಯ್ಲಿಯ ವಿರುದ್ಧ ಸ್ಪರ್ಧೆಗೆ ಪ್ರಚಾರ ಹೇಗೆ ನಡೆದಿದೆ?’’ ಕಾಸಿ ಪ್ರಶ್ನಾಂತರ ಮಾಡಿದ.
‘‘ಭರ್ಜರಿ ಪ್ರಚಾರ ಸಿಕ್ಕಿದೆ ಮಾರ್ರೆ... ಬಿಜೆಪಿ ಯವರು ಫುಲ್ ಸಪೋರ್ಟ್ ಮಾಡಿದ್ದಾರೆ. ಅವರೆಲ್ಲ ಓಟ್ ಹಾಕ್ಲಿಕ್ಕೆ ಬರ್ತೇನೆ ಅಂದಿದ್ದಾರೆ... ಹಾಗೆಯೇ ನನ್ನ ಪರವಾಗಿ ಪ್ರಚಾರ ಮಾಡಲು ಬೇಕಾದರೆ ಮೋದಿ ಯನ್ನು ಗುಜರಾತಿನಿಂದ ಕರೆಸುವ ಎಂದು ಸದಾನಂದ ಗೌಡ ಭರವಸೆ ನೀಡಿದ್ದಾರೆ... ನಳಿನ್ ಕುಮಾರ್ ಕಟೀಲ್ ಕೂಡ ತುಂಬಾ ಸಂತೋ ಷದಿಂದ ನನಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಯವರೇ ನನಗೆ ಬೆಂಬಲ ಘೋಷಿಸಿರುವಾಗ, ಇನ್ನು ಕಾಂಗ್ರೆಸ್‌ನವರು ನನ್ನನ್ನು ಆಯ್ಕೆ ಮಾಡಬೇಕೋ ಬೇಡವೋ? ನನ್ನ ಬೆಲೆ ಬಿಜೆಪಿಯವರಿಗೆ ಗೊತ್ತುಂಟು. ಆದರೆ ದಿಲ್ಲಿಯಲ್ಲಿರುವ ನಾಯಕರಿಗೆ ಗೊತ್ತಿಲ್ಲ. ಎಂಥ ಬೇಜಾರಿನ ವಿಷಯ ಗೊತ್ತುಂಟಾ?’’ ಪೂಜಾರಿ ಯವರು ಬೇಜಾರಿನಲ್ಲಿ ಹೇಳಿದರು.
ಕಾಸಿ ಪೂಜಾರಿಯವರ ಸಂದರ್ಶನವನ್ನು ಭರ್ಜರಿ ಯಾಗಿ ಮಾಡುತ್ತಿರುವುದು ಮೊಯ್ಲಿಯವರಿಗೆ ಗೊತ್ತಾಗಿ ಕಿಡಿಕಿಡಿಯಾದರು. ಇದರ ಬಿಸಿ ಕಾವ್ಯ ರೂಪದಲ್ಲಿ ಕಾಸಿಯ ಮೈಯನ್ನು ಸುಡುತ್ತಿರಲಾಗಿ ‘‘ಈಗ ಬಂದೆ....’’ ಎನ್ನುತ್ತಾ ಮೊಯ್ಲಿಯ ಹೆಬ್ಬಾಗಿಲೊಳು ನಿಂತಿರಲು, ಸ್ಫೋಟಗೊಳ್ಳಲ್ ನಿಂತ ಗ್ಯಾಸ್‌ಸಿಲಿಂಡರ್‌ನಂದದಿ ಮೊಯ್ಲಿಯುಂ ಕಾಸಿಯಂ ನೋಡಿದರು.
‘‘ಸಾರ್...ಲಾರಿಯಿಂದ ಇಳಿದ ಕೂಡಲೇ ಪೂಜಾರಿ ನನ್ನನ್ನು ಕೈ ಹಿಡಿದು ನಿಲ್ಲಿಸಿದರು. ನಾನು ನಿಜಕ್ಕೂ ನಿಮ್ಮ ಸುಪುತ್ರರನ್ನು ಇಂಟರ್ಯೂ ಮಾಡಲು ಬಂದಿರುವುದು...’’ ಎಂದು ಕಾಸಿಯುಂ ವಿನೀತನಾಗಿ ಉಸಿರ್ದಂ.
ಇತ್ತ ತನ್ನ ಕಂಕುಳೊಳ್ ಪುತ್ರನಂ ಇರಿಸಿ, ಬಾಯಿಗೆ ಮೊಲೆಬತ್ತಿಯಂ ಅಂಟಿಸಿ, ದಶರಥಂ ಶ್ರೀರಾಮನಂ ತೂಗುವಂದದಿ ತೂಗುತಿರ್ಪರ್. ಇದಕಂಡು ಕಾಸಿಯುಂ ಇಂತು ಕೇಳ್ವರ್ ‘‘ಸಾರ್....ಹರ್ಷ ಮೊಯ್ಲಿಯವರು ಈ ಬಾರಿ ಪೂಜಾರಿಯ ವಿರುದ್ಧ ಗೆಲ್ಲುವುದು ಖಚಿತವೇ?’’
ಇದ ಕೇಳಿ ಮೊಯ್ಲಿಯುಂ ಸಿಟ್ಟಾಗಿ ‘ಗೆಲ್ವರ್. ಖಂಡಿತಾ ಗೆಲ್ವರ್. ಶ್ರೀರಾಮನಂ ಎದುರಿಸಿ ಲವಕುಶರ್ ಗೆಲ್ಲಲಿಲ್ಲವೆ? ಅಂತಿರ್ಪೊಡೆ ನನ್ನ ಹರ್ಷಕುಮಾರ್ ಬರಿದೇ ಈ ಪೊಳ್ಳುನಾಯಕನಂ ಗೆಲ್ಲದೇ ಇರ್ಪರೇ...ಹಹಹ’’ ಎಂದು ಹಳೆ ಗನ್ನದೊಡಳ್ ವದರಿದರ್.
ಇತ್ತ ಕಾಸಿಯುಂ ಬಿಡದೇ ಮತ್ತೆ ಪ್ರಶ್ನೆ ಕೇಳ್ಪರ್ ‘‘ಸಾರ್...ಪೂಜಾರಿಯವರನ್ನೇನೋ ಗೆಲ್ಲಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನ ಸ್ಥಿತಿ ಚಕ್ರವ್ಯೆಹದೊಳ್ ನುಗ್ಗಿದ ಅಭಿಮನ್ಯುವಿನಂತೆ ದುರ್ಗತಿಯಾದರೆ ಗತಿಯೇನು?’’
ಇದ ಕೇಳಿ, ಮೊಯ್ಲಿಯ ಕಂಕುಳಲ್ಲಿದ್ದ ಹರ್ಷ ಕುಮಾರನ್ ಭಯದಿಂದ ಚೀರಿದನ್. ಮಗು ಬೆಚ್ಚಿ ಬಿದ್ದುದ ಕಂಡು ಕಾಸಿಯಂ ರೋಷದಿಂ ನೋಡಿ ‘‘ಎಲವೋ ಅಧಮಾಧಮ...ಲೋಕಸಭಾ ಚುನಾವಣೆ ಯೊಳ್ ಎನ್ನ ಪುತ್ರನ್ ಗೆದ್ದರೆಷ್ಟು, ಬಿಟ್ಟರೆಷ್ಟು. ಲೋಕ ಸಭೆಯೊಳ್ ಸೋತರೆ ರಾಜ್ಯಸಭೆಯೆಂಬ ಹಿಂಬಾಗಿ ಲೊಳ್ ನನ್ನ ಪುತ್ರನಂ ಕಳುಹಿಸಿ ಕೇಂದ್ರ ಸಚಿವನಾಗಿ ಮಾಳ್ಪೆ...’’
‘‘ಸಾರ್...ಹೀಗೆ ಆದರೆ ನಿಮ್ಮ ಹರ್ಷಕುಮಾರ ಮೋದಿ ಸರಕಾರದಲ್ಲಿ ಕೇಂದ್ರ ಸಚಿವರಾಗುವುದು ಸತ್ಯ. ಆದರೆ ನಿಮ್ಮನ್ನು ನಂಬಿದ ರಾಹುಲ್ ಗಾಂಧಿ ಮಾತ್ರ ಚಕ್ರವ್ಯೆಹದಲ್ಲಿ ಸಿಕ್ಕಿದ ಅಭಿಮನ್ಯು ಆಗುವುದು ಖಚಿತ...’’ ಎಂದು ಓಡಲು ಅಣಿಯಾದ.
ವೀರಪ್ಪ ಮೊಯ್ಲಿ ಸಂತೋಷದಿಂದ ಹೇಳಿದರು ‘‘ಅಭಿಮನ್ಯು ಆದರೇನಂತೆ? ರಾಹುಲ್‌ಗಾಂಧಿಯ ಹೆಸರಿನೊಳ್ ನಾನ್ ದುರಂತ ಕಾವ್ಯಮಂ ಬರೆದು, ಮಹಾಕವಿಯೆಂಬ ಬಿರುದನ್ ಪೇಜಾವರಶ್ರೀ ಮೂಲಕ ಪಡೆವೆಂ’’ ಎಂದು ರಾಹುಲ್‌ಗಾಂಧಿಯ ದುರಂತ ಕಾವ್ಯವನ್ನು ಬರೆಯಲು ಮಡಿಯುಟ್ಟು ಕುಳಿತರು.
ರವಿವಾರ - ಫೆಬ್ರವರಿ -23-2014

No comments:

Post a Comment