Sunday, April 19, 2015

ಲಕ್ಕವ್ವನ ‘ಹೊಸರುಚಿ’ ಸೊಗಡು...

ಮಾರ್ಚ್ -04-2012ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಇತ್ತೀಚೆಗೆ ಟಿವಿಯಲ್ಲಿ ಜ್ಯೋತಿಷ್ಯ ಮತ್ತು ಹೊಸ ರುಚಿ ತುಂಬಾ ಫೇಮಸ್ಸು. ಅದಕ್ಕೆ ಗಿರಾಕಿಗಳು ಜಾಸ್ತಿ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಎಂಜಲು ಕಾಸಿ ಸ್ಥಳೀಯ ಟಿ.ವಿ. ಯೊಂದದರಲ್ಲಿ ಹೊಸ ರುಚಿ ಕಾರ್ಯಕ್ರಮವನ್ನು ನೀಡಲು ಶುರು ಮಾಡಿದ. ಇತ್ತೀಚೆಗಂತೂ ಈತನ ಕಾರ್ಯಕ್ರಮ ತುಂಬ ಜನಪ್ರಿಯ. ಟಿಆರ್‌ಪಿ ಪೆಟ್ರೋಲ್ ಬೆಲೆಯ ಹಾಗೆ ಏರುತ್ತಿತ್ತು. ಹೊಸತನ ಇರಲಿ ಅಂತ ವಿಭಿನ್ನ ಹೊಸರುಚಿ ಯನ್ನು ಚಾನೆಲ್‌ನಲ್ಲಿ ಪ್ರದರ್ಶಿಸುತ್ತಿದ್ದ. ನಗರದ ಹೊಸರುಚಿ ಯನ್ನು ಉಂಡವರಿಗೆ ಒಂದಿಷ್ಟು ಸ್ಪೆಶಲ್ ಇರಲಿ ಎಂದು ಗ್ರಾಮೀಣ ಭಾಗದ ಜನರ ಹೊಸ ರುಚಿಯನ್ನು ಏರ್ಪಡಿಸಿದ. ಗ್ರಾಮೀಣ ಪ್ರದೇಶದಿಂದ ಬಂದಂತಹ ಲಕ್ಕವ್ವ ಟಿ.ವಿಯಲ್ಲಿ ಹೊಸ ರುಚಿಯನ್ನು ಪ್ರದರ್ಶಿಸತೊಡಗಿದರು.
ಎಂಜಲು ಕಾಸಿ ಪ್ರಶ್ನಿಸಿದ ‘‘ನಿನ್ನ ಹೆಸರೇನಮ್ಮ...?’’
‘‘ಅಪ್ಪ ಇಟ್ಟಿರೋ ಹೆಸ್ರು ಲಕ್ಷ್ಮವ್ವ. ಊರವರು ಕರೆಯೋದು ಲಕ್ಕವ್ವ...ನೀವು ಹಂಗೇ ಕರೀರಿ ಧನಿ...’’
‘‘ಗ್ರಾಮೀಣ ಪ್ರದೇಶದಲ್ಲಿ ಮಾಡೋ ಹೊಸ ರುಚಿಯನ್ನು ನೀವೀಗ ನಮ್ಮ ವೀಕ್ಷಕರಿಗೆ ಮಾಡಿ ತೋರಿಸಬೇಕು... ರೆಡಿನಾ?’’
‘‘ಅದ್ರಾಗೆ ಏನೈತೆ ಬುದ್ದಿ, ತಯಾರಾಗೆ ಬಂದೀನಿ...’’ ಲಕ್ಕವ್ವ ಹೊಸ ರುಚಿ ಕಾರ್ಯಕ್ರಮ ವನ್ನು ಪ್ರದರ್ಶಿಸತೊಡಗಿದಳು.
***
‘‘ಮೊದ್ಲು ಒಲೆ ಹೊತ್ತಿಸಿ. ಆದ್ರೆ ಹಸಿ ಸೌದೆ. ಮೊದ್ಲು ಬೆಂಕಿ ಹತ್ತಂಗಿಲ್ಲ. ಸುಮಾರು ಅರ್ಧಗಂಟೆ ಒಲೆಯನ್ನು ಚೆನ್ನಾಗಿ ಊದಿ. ಈಗ ನಿಮ್ಮ ಕಣ್ಣು ಕೆಂಪಾಗತ್ತೆ. ಸರಿ, ಈಗ ಮೆಲ್ಲ ಮಣ್ಣಿನ ಮಡಕೆಯಲ್ಲಿ ಎರಡು ಸೇರು ನೀರು ತುಂಬಿ ಕುದಿಯಾಕೆ ಬಿಡಿ. ಆಮೇಲೆ ನಾಲ್ಕು ಕಲ್ಲು ಉಪ್ಪು, ಒಂದು ಹಿಡಿ ಅಕ್ಕಿ ಹಾಕಿ....ಇನ್ನೂ ಎರಡು ಸೇರು ನೀರನ್ನು ಹಾಕಿ....ಚೆನ್ನಾಗಿ ಕುದೀಲಿ...ಕುದ್ದು ಕುದ್ದು ಅಕ್ಕೀದು ಪರಿಮಳ ಗಮಗಮಾಂತ ಬರತ್ತೆ ಆಮೇಲೆ ಮೆಲ್ಲಗೆ ಕೆಳಗಿಳಿಸಿ...’’
‘‘ಈಗ ಒಂದು ಹಸಿ ಮೆಣಸು ತೆಗೆದುಕೊಳ್ಳಿ... ಮಡಕೆಯಿಂದ ನೀರನ್ನಷ್ಟೇ ಇನ್ನೊಂದು ಮಡಕೆಗೆ ಸುರಿಯಿರಿ. ಬಳಿಕ ಮಕ್ಕಳಿಗೆ ತಲಾ ಒಂದೊಂದು ಗ್ಲಾಸ್ ಗಂಜಿ ನೀರು..ಮತ್ತು ಕಾಯಿ ಮೆಣಸನ್ನು ಕೊಡಿ...ಹೊಟ್ಟೆ ತುಂಬಾ ಹಸಿದಾಗ ಇದನ್ನು ಮಕ್ಕಳಿಗೆ ಬಡಿಸಬೇಕು. ಆಗ ಬಹಳ ರುಚಿಯಾಗಿರುತ್ತದೆ. ರಾತ್ರಿ ಹಸಿವೆಗೆ ಇದು ಒಳ್ಳೆಯದು. ಹಾಗೆಯೇ ಮಡಕೆಯ ತಳದಲ್ಲಿರುವ ಗಂಜಿಯನ್ನು ಯಾವ ಕಾರಣಕ್ಕೂ ಮಕ್ಕಳಿಗೆ ಹಂಚಬೇಡಿ. ಅದಕ್ಕೆ ನೀರು ಹಾಕಿ ಬೆಳಗ್ಗೆ ಮತ್ತೆ ಕುದಿಸಿದರೆ ಬೆಳಗಿನ ಊಟವನ್ನೂ ಆರಾಮವಾಗಿ ಮಾಡಬಹುದು. ಹಳ್ಳಿಗಳಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ...’’
ಲಕ್ಕವ್ವ ಮಾಡಿದ ಹೊಸ ರುಚಿಯನ್ನು ಕಾಸಿ ಮೆಲ್ಲಗೆ ಮೂಗಿನ ಸಮೀಪಕ್ಕೆ ತಂದ. ‘‘ಲಕ್ಕವ್ವ, ಇದಕ್ಕೆ ಪರಿಮಳ...ರುಚಿ ಏನೂ ಇಲ್ಲವಲ್ಲ...’’
ಲಕ್ಕವ್ವ ಅದನ್ನು ಒಂದಿಷ್ಟು ಕುಡಿದು ಹೇಳಿದಳು ‘‘ಯಾಕಿಲ್ಲ? ಅನ್ನದ ಪರಿಮಳ ಗಮಗಮಾಂತ ಮೂಗಿಗೆ ಬಡೀತೈತೆ...ಬುದ್ಯೋರೆ...ಅದನ್ನು ಎಸೀಬೇಡಿ...ಊರಿಗೆ ಹೋಗಾವಾಗ ನಾನು ಹಿಡ್ಕೊಂಡು ಹೋಗ್ತೀನಿ...ನನ್ನ ಮಕ್ಳಿಗಾತು..’’ ಕಾಸಿ ತಲೆಯಾಡಿಸಿದ.
‘‘ನಿಮ್ಮ ಹಳ್ಳಿಯಲ್ಲಿ ಅನ್ನಕ್ಕೆ ಸಾಂಬರೂ, ಗೊಜ್ಜು ಇತ್ಯಾದಿ ಮಾಡಲ್ವ....?’’
‘‘ಮಾಡ್ತರ್ರೀ...ಬುದ್ಯೋರೆ...ಆದ್ರೆ ಒಂದು ಸ್ವಲ್ಪ ಬೇರೆ ತರಾ ಇರತ್ತೆ...’’
ಕಾಸಿಗೆ ಖುಷಿಯಾಯಿತು. ‘‘ಹಾಗಾದ್ರೆ ಅದನ್ನೇ ನಮ್ಮ ವೀಕ್ಷಕರಿಗೆ ಹೊಸರುಚಿ ಹೇಳಿಕೊಡಿ’’
ಲಕ್ಕವ ಶುರು ಮಾಡಿದರು ‘‘ಮೊದ್ಲು ಒಂದು ಕುಂಟೆ ಮೆಣಸನ್ನು ತೆಗೆದುಕೊಳ್ಳಿ. ಆಮೇಲೆ ಅದನ್ನು ಒಲೆಯ ಕೆಂಡದ ಮೇಲೆ ಇಡಿ.... ತುಸು ಹೊತ್ತು ಸುಟ್ಟ ಬಳಿಕ ಹೊರಗಿಡಿ. ಈಗ ಸ್ವಲ್ಪ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಳ್ಳಿ... ಬಳಿಕ ಅದಕ್ಕೆ ಎರಡು ಕಲ್ಲು ಉಪ್ಪು ಮತ್ತು ರುಚಿಗೆ ತಕ್ಕಷ್ಟು ಹುಳಿಯನ್ನು ಹಾಕಿ. ಈಗ ಮೆಲ್ಲಗೆ ಸುಟ್ಟ ಮೆಣಸನ್ನು ನೀರಿಗೆ ಹಾಕಿ ಕೈಯಲ್ಲಿ ಚೆನ್ನಾಗಿ ಹಿಂಡಿ. ಈಗ ಸಾಂಬಾರ್ ರೆಡಿ. ಬಿಸಿ ಬಿಸಿ ಗಂಜಿಯ ಜೊತೆಗೆ ನೆಂಜಿ ಕುಡಿಯುವುದಕ್ಕೆ ಈ ಉಪ್ಪು ನೀರನ್ನು ಬಳಸಿಕೊಳ್ಳಬಹುದು. ನಮ್ಮಲ್ಲಿ ನೆಂಟರು ಬಂದಾಗ ಇದನ್ನೇ ಬಳಸುತ್ತೇವೆ. ಹಸಿವೆ ತುಂಬಾ ಕಾಡುತ್ತಿರುವಾಗ ಈ ಸಾಂಬಾರಿಗೆ ರುಚಿ ಇನ್ನೂ ಜಾಸ್ತಿ...’’
ಕಾಸಿಗೆ ತಲೆ ಬಿಸಿಯಾಯಿತು ‘‘ನೀವು ಹಬ್ಬದೂಟ ಮಾಡುವುದಿಲ್ಲವಾ? ಬಿರಿಯಾನಿ, ಪಾಯಸ...ಇತ್ಯಾದಿ ಗಳನ್ನು ಮಾಡುವುದಿಲ್ಲವ...’’ ಕೇಳಿದ.
ಲಕ್ಕವ್ವ ಬಾಯಿಯಲ್ಲಿ ನೀರಿಳಿಸುತ್ತಾ ಹೇಳಿದರು ‘‘ಮಾಡ್ತೀವಿ...ತಿನ್ತೀವಿ...’’
ಕಾಸಿಗೆ ಸಂತೋಷವಾಯಿತು ‘‘ಹಾಗಾದ್ರೆ...ಅದನ್ನು ಹೊಸರುಚಿ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ವಿವರಿಸಿ...’’
ಲಕ್ಕವ್ವ ಬಿರಿಯಾನಿಯ ಕುರಿತಂತೆ ವಿವರಣೆ ನೀಡತೊಡಗಿದಳು ‘‘ಊರಿನಲ್ಲಿ...ಶ್ರೀಮಂತರ, ಜಮೀನ್ದಾರ ಮದುವೆ, ಮುಂಜಿ ಇದ್ದರೆ ಮೊದಲೇ ನೆನಪಲ್ಲಿಟ್ಕೋ ಬೇಕು. ಬಳಿಕ ಬೆಳಗ್ಗೆನೇ ಜಮೀನ್ದಾರರ ಮನೆಯ ನಾಯಿಗಳಿಗೆ ಗೊತ್ತಾಗದ ಹಾಗೆ ಅವರ ಮನೆಯ ಹಿತ್ತಲಲ್ಲಿ ಹೋಗಿ ನಿಂತ್ಕೋಬೇಕು. ಪಾತ್ರೆಗಳನ್ನು, ಎಲೆಗಳನ್ನು ನಾವೇ ತೆಗೆದುಕೊಂಡು ಹೋಗಬೇಕು. ಸುಮಾರು ನಾಲ್ಕೈದು ಗಂಟೆ ಬಿಸಿಲು ಚೆನ್ನಾಗಿ ಕುದಿಯುವವರೆಗೆ ಹಿತ್ತಲಲ್ಲೇ ಕಾಯ್ತಾ ಇರಬೇಕು. ಹಿತ್ತಲಲ್ಲಿ ಅಮ್ರಾವ್ರನ್ನು ಕಂಡಾಗ ನಗೆ ಬೀರಬೇಕು. ಕಾರ್ಯಕ್ರಮಕ್ಕೆ ಬಂದೋರೆಲ್ಲ ಹೋದ ಬಳಿಕ ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಉಳಿದ ಎಲ್ಲ ಪಾಯಸ, ಬಿರಿಯಾನಿಗಳನ್ನು ನಮ್ಮ ಬಟ್ಟಲಿಗೆ ಸುರೀತಾರೆ. ಸಂಜೆಯ ಹೊತ್ತಿಗೆ ಅದು ಒಂದಿಷ್ಟು ವಾಸ್ನೆ ಬಂದಿರತ್ತೆ. ಅದನ್ನು ರಾತ್ರಿ ತಿಂದು ಉಳಿದುದನ್ನು ಒಲೆಯಲ್ಲಿಟ್ಟು ಬೇಯಿಸಬೇಕು. ಮರುದಿನವೂ ತಿಂದು, ಉಳಿದುದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿಸಿ ಅದನ್ನು ಪಾತ್ರೆಯಲ್ಲಿಟ್ಟು ಬೇಕಾದಾಗ ಬೇಯಿಸಿ ತಿನ್ನಬಹುದು. ಸುಮಾರು ಒಂದು ವಾರ ನಿಮಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಬಹುದು...’’ ಎನ್ನುತ್ತಾ ಲಕ್ಕವ್ವ ಬಿರಿಯಾನಿ ಯನ್ನು ವರ್ಣನೆ ಮಾಡತೊಡಗಿದಳು.
ಈಗ ಕಾಸಿ ವಿಷಯ ಬದಲಿಸಿದನು ‘‘ನೀವು ತುಪ್ಪದಲ್ಲಿ ಯಾವುದೇ ಹೊಸರುಚಿ ಮಾಡೊಲ್ವ...?’’
‘‘ತುಪ್ಪ ಅಂದ್ರೆ ಹೆಂಗಿರ್ತದೆ ಬುದ್ಯೋರಾ?’’ ಲಕ್ಕವ್ವ ಕೇಳಿದರು.
ಕಾಸಿಗೆ ತಲೆಬಿಸಿಯಾಯಿತು ‘‘ಹಾಲಿನಲ್ಲಿ ಏನೂ ತಿಂಡಿ ಮಾಡೋಲ್ವ...’’
‘‘ಮೊಲೆ ಹಾಲು ಬಿಟ್ರೆ ಬೇರೇನು ನಮ್ಮ ಹೈಕ್ಳು ಕುಡಿದಿಲ್ರೀ...’’
‘‘ಸರಿ...ಅಕ್ಕಿಯ ಐಟಂ ಬಿಟ್ರೆ ಇನ್ನು ಬೇರೇನು ಮಾಡ್ತೀರಿ?’’ ಕಾಸಿ ಕೇಳಿದ.
‘‘ಸರ...ಒಂದು ಮಡಕೆಯಲ್ಲಿ ನೀರನ್ನು ಇಡಬೇಕು. ಬಳಿಕ ಐದು ಕಲ್ಲು ಉಪ್ಪು ಹಾಕಬೇಕು. ಆ ಬಳಿಕ ಅದನ್ನು ಚೆನ್ನಾಗಿ ಕುದಿಸಬೇಕು. ಈಗ ಅದನ್ನು ಕೆಳಗಿಳಿಸಿ...ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಕುಡಿಯಬಹುದು. ಮನೆಯಲ್ಲಿ ಅಕ್ಕಿ ಇಲ್ಲದೆ ಇದ್ದರೆ ಇದನ್ನೇ ನಾವು ಮಾಡೋದು...’’
‘‘ಇದರಲ್ಲಿ ರುಚಿ ಎಲ್ಲಿದೆ...?’’ ಕಾಸಿ ಕೇಳಿದ.
‘‘ಹೊಟ್ಟೆ ಹಸಿದಾಗ ಎಲ್ಲಾನೂ ರುಚಿಯಾಗಿರತ್ತೆ ಒಡೆಯಾ? ಎಲ್ಲದಕ್ಕೂ ಮೊದಲು ಹೊಟ್ಟೆ ಹಸಿದಿರಬೇಕು... ಕಲ್ಲು ಮಣ್ಣೂನು ರುಚಿರುಚಿಯಾಗಿರತ್ತೆ.....ಹಾಂ...ಈಗ ನಾವು ಮಣ್ಣಿನಿಂದಲೂ ಹೊಸ ರುಚಿ ಮಾಡ್ತೀವಿ...ಒಂದು ಬೊಗಸೆ ಶುದ್ಧ ಮಣ್ಣನ್ನು ಚೆನ್ನಾಗಿ ನೀರಲ್ಲಿ ನಾದಬೇಕು. ಬಳಿಕ ಒಲೆಯಲ್ಲಿ ಮಡಕೆಯಲ್ಲಿ ನೀರಿಡಬೇಕು...’’ ಕಾಸಿ ತನ್ನ ಎರಡೂ ಕಿವಿಗಳನ್ನು ಮುಚ್ಚಿ ‘‘ಸಾಕು..ಸಾಕು...ಗ್ರಾಮೀಣ ಹೊಸರುಚಿಗಳ ಬಗೆಯನ್ನು ನಾವೀಗ ಅಸ್ವಾದಿಸಿದೆವು... ಲಕ್ಕವ್ವನವ್ವರಿಗೆ ಇದರ ಪ್ರಯುಕ್ತ ಹೊಟ್ಟೆ ತುಂಬಾ ಊಟವನ್ನು ಉಡುಗೊರೆಯಾಗಿ ಕೊಡುತ್ತಿದ್ದೇವೆ...’’ ಎಂದು ಕಾರ್ಯಕ್ರಮ ಮುಗಿಸಿದ.
ಮಾರ್ಚ್ -04-2012

No comments:

Post a Comment