Sunday, March 30, 2014

ಗುಜರಾತಿನ ಮೊಟ್ಟೆ ನೋಡಿದ್ದೀರಾ....!

ಮಾರ್ಚ್ 30 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

‘‘ಅಭಿವೃದ್ದಿ ನೋಡಿ... ಅಭಿವೃದ್ಧಿ ನೋಡಿ...ಗುಜರಾತ್ ಅಭಿವೃದ್ಧಿ ನೋಡಿ....ಗುಜರಾತ್ ರೈತರನ್ನು ನೋಡಿ...ಗುಜರಾತ್ ಉದ್ಯಮವನ್ನು ನೋಡಿ...ಗುಜರಾತ್ ಸೆಕ್ಯುಲರಿಸಂ ನೋಡಿ...ಗುಜರಾತ್ ತೆಂಗಿನಕಾಯಿ ನೋಡಿ...ಗುಜರಾತ್ ಲಿಂಬೆಹಣ್ಣು ನೋಡಿ...ಬನ್ನಿ....ಬನ್ನಿ...’’

ಚುನಾವಣಾ ಸಂತೆಯಲ್ಲಿ ಮೋದಿ ಬ್ರಿಗೇಡ್‌ನ ನರಕವರ್ತಿ ಬೇಲೆಸೂಲಿಯವರು ತಮ್ಮ ಡಮರುಗವನ್ನು ತಿರುಗಿಸಿ ಜಾಗೋ ಮಾಡುತ್ತಿದ್ದರು. ಎಲ್ಲರೂ ಕುತೂಹಲದಿಂದ ನರಕವರ್ತಿ ಬೇಲಿಸೂಲಿ ಯವರ ಜಾದೂ ನೋಡುವುದಕ್ಕೆ ಸುತ್ತುವರಿದರು.

‘‘ಗುಜರಾತ್ ದೇಶಪ್ರೇಮ ನೋಡಿ...ಗುಜರಾತ್‌ನ ಅಣೆಕಟ್ಟು ನೋಡಿ...ಗುಜರಾತ್ ಬಿಕ್ಕಟ್ಟು ನೋಡಿ...’’ ಎಂದು ಟುರ್ರ್‌ ಟುರ್ರ್‌ ಎಂದು ತಿರುಗಿಸುತ್ತಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು. ‘‘ಸಾರ್ ಗುಜರಾತ್‌ನ ಕೋಳಿ ಮೊಟ್ಟೆಯನ್ನು ತೋರಿಸುತ್ತೀರಾ...’’ ಕನ್ನಡದ ಬಡಪಾಯಿ ಕೋಳಿ ಸಾಕಣೆಗಾರನೊಬ್ಬ ಆಸೆಯಿಂದ ನರಕವರ್ತಿ ಬೇಲೆ ಸೂಲಿಯವರಲ್ಲಿ ಕೇಳಿದ.

‘‘ತೋರಿಸುವೆ...ತೋರಿಸುವೆ...ಸಹನೆ ಯಿಂದಿರಿ...ಮೋದಿಗೆ ಮತ ಹಾಕಿ...ಮೋದಿಯ ಅಭಿವೃದ್ಧಿಯನ್ನು ಕರ್ನಾಟಕಕ್ಕೂ ತರೋಣ...ನೋಡಿ ಗುಜರಾತ್‌ನ ಕೋಳಿಮೊಟ್ಟೆ...’’ ನೋಡಿದರೆ ರುಬ್ಬುವ ಕಲ್ಲಿನಂತೆ ಭಾಸವಾಗುವ ಅದೇನೋ ಅಲ್ಲಿತ್ತು... ‘‘ಸಾರ್...ಅದು ರುಬ್ಬುವ ಕಲ್ಲು ಅಲ್ಲವಾ?’’ ಪತ್ರಕರ್ತ ಎಂಜಲು ಕಾಸಿ ಅನುಮಾನದಿಂದ ಕೇಳಿದ. ‘‘ಅಭಿವೃದ್ಧಿ ಕಣ್ರೀ...ಅಭಿವೃದ್ಧಿ. ಗುಜರಾತ್‌ನಲ್ಲಿ ಕೋಳಿಗಳು ರುಬ್ಬುವ ಕಲ್ಲಿನಷ್ಟು ದೊಡ್ಡ ಮೊಟ್ಟೆಯನ್ನು ಇಡುತ್ತವೆ. ಈ ಒಂದು ಮೊಟ್ಟೆಯಿಂದ ಇಡೀ ಗುಜರಾತ್‌ಗೇ ಆಮ್ಲೆಟ್ ಮಾಡಿ ಬಡಿಸಬಹುದು...ಈ ಕೋಳಿಮೊಟ್ಟೆಗಾಗಿ ಅದೆಷ್ಟೋ ದೇಶಗಳ ಉದ್ಯಮಿಗಳು ಬಂಡವಾಳ ಹೂಡಲು ಗುಜರಾತ್‌ಗೆ ಆಗಮಿಸುತ್ತಿದ್ದಾರೆ...ಗೊತ್ತೇನ್ರೀ.....’’ ‘‘ಸಾರ್...ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬೇಡ?’’ ಕಾಸಿ ಅಚ್ಚರಿ ಯಿಂದ ಕೇಳಿದ.

ಬೇಲೆಸೂಲಿ ತನ್ನ ಜಾಗೋ ಭಾರತ್ ಮುಂದು ವರಿಸಿದ ‘‘ಹೌದು ಕಣ್ರೀ...ಅದು ಗುಜರಾತ್ ಕೋಳಿಗಳು. ದೇಶಪ್ರೇಮಿ ಕೋಳಿಗಳು. ಮೋದಿ ಯಿಂದಾಗಿ ಅವುಗಳು ದೇಶಪ್ರೇಮವನ್ನು ಕಲಿತು ಕೊಂಡಿದೆ. ದೊಡ್ಡ ದೊಡ್ಡ ಮೊಟ್ಟೆಯಿಟ್ಟು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿವೆ...ಆದರೆ ಸಿದ್ದರಾಮಯ್ಯ ಅವರ ರಾಜ್ಯದ ಕೋಳಿಗಳು ಮೊಟ್ಟೆಯನ್ನೇ ಇಡುವುದಕ್ಕೆ ಸೋಮಾರಿತನ ಮಾಡಿವೆ...ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ ದರೆ ನಮ್ಮ ಕೋಳಿಗಳೂ ಇಷ್ಟು ದೊಡ್ಡ ಮೊಟ್ಟೆಯನ್ನು ಹಾಕಿ ದೇಶವನ್ನು ಅಭಿವೃದ್ಧಿಗೊಳಿಸುತ್ತದೆ...’’

ಬೇಲೆಸೂಲಿಯ ಮಾತನ್ನು ಕೇಳಿ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬಹುದು ಸಾರ್...’’ ಕಾಸಿ ಕೇಳಿದ. ‘‘ತುಂಬಾ ಅದ್ಭುತವಾದ, ದೇಶಪ್ರೇಮ ಭರಿತವಾದ ಪ್ರಶ್ನೆಯನ್ನು ಕೇಳಿದಿರಿ. ನಿಮಗೆ ಅಭಿನಂದನೆಗಳು. ಗುಜರಾತ್‌ನ ಕೋಳಿಗಳು ರಾಜಸ್ತಾನದಲ್ಲಿರುವ ಒಂಟೆಯಷ್ಟು ದೊಡ್ಡ ದಿರುತ್ತವೆ...ಕೆಲವು ಹೆಣ್ಣು ಕೋಳಿಗಳು ಹಾಲನ್ನೂ ಕೊಡುತ್ತವೆ...ಗುಜರಾತ್‌ನಲ್ಲಿ ಅಮುಲ್ ಕಂಪೆನಿಗಳಿಗೆ ಈ ಹಾಲು ಪೂರೈಕೆಯಾಗುತ್ತವೆ...ಒಂದು ವೇಳೆ ನರೇಂದ್ರಮೋದಿಯವರು ದೇಶದ ಪ್ರಧಾನಿಯಾದರೆ ಈ ಹಾಲು ಕೊಡುವ ಕೋಳಿ ಗಳಲ್ಲಿ ಕೆಲವನ್ನು ಕರ್ನಾಟಕಕ್ಕೆ ನೀಡುವ ಬಗ್ಗೆ ತುಂಬಾ ಆಸಕ್ತಿ ತಳೆದಿದ್ದಾರೆ...’’ ಬೇಲೆಸೂಲಿ ತನ್ನ ಬೇಳೆ ಬೇಯಿಸುತ್ತಿರುವಾಗ ಕಾಸಿ ಮೆಲ್ಲನೆ ಕೇಳಿದ ‘‘ಅಲ್ಲ ಸಾರ್...ಅದನ್ನೊಮ್ಮೆ ಮುಟ್ಟಿ ನೋಡಬಹುದೆ?’’

ಬೇಲೆ ಸೂಲಿ ಸಿಟ್ಟಾದರು ‘‘ಮುಟ್ಟಿ ನೋಡುವುದಕ್ಕೆ ಅದು ಕಾಂಗ್ರೆಸ್ ಅಭ್ಯರ್ಥಿ ನಗ್ಮಾ ಅವರ ಕೆನ್ನೆಯಲ್ಲ. ಗುಜರಾತ್‌ನ ಅಭಿವೃದ್ಧಿಯ ಸಂಕೇತವಾಗಿರುವ ಮೊಟ್ಟೆ ಅದು. ಅದರೊಳಗೆ ಗುಜರಾತ್‌ನ ಕನಸು ಗಳಿವೆ. ಆ ಕನಸುಗಳು ಮುಂದಿನ ಚುನಾವಣೆಯಲ್ಲಿ ಮರಿ ಹಾಕಲಿವೆ...’’ ಎನ್ನುತ್ತಾ ‘‘ಯಧಾ ಯಧಾಹಿ ಧರ್ಮಸ್ಯ...’’ ಎಂದು ಸಂಸ್ಕೃತ ಶ್ಲೋಕವನ್ನು ಉಗುಳ ತೊಡಗಿದರು. ಕಾಸಿಗೆ ಹೆದರಿಕೆಯಾಯಿತು. ಸಂಸ್ಕೃತದಲ್ಲಿ ಶಾಪ ಹಾಕುತ್ತಿದ್ದಾರೋ ಎಂದು ಹೆದರಿ ವಿಷಯಾಂತರ ಮಾಡಿದ ‘‘ಸಾರ್...ಗುಜರಾತ್‌ನ ಅಭಿವೃದ್ಧಿಗೆ ಉದಾಹರಣೆಯಾಗಿ ಬೇರೇನೇನು ಇದೆ...’’

ಬೇಲೆ ಸೂಲಿಯವರಿಗೆ ಸಂತೋಷವಾಯಿತು ‘‘ನೋಡಿ...ಇವನೇ ಗುಜರಾತಿನ ರೈತ...ಮೈತುಂಬಾ ಚಿನ್ನಾಭರಣಗಳನ್ನು ಧರಿಸಿಕೊಂಡಿದ್ದಾನೆ...ದೇಹ ದಷ್ಟಪುಷ್ಟವಾಗಿದೆ...ಕರ್ನಾಟಕದ ರೈತರು ಪೀಚಲು ಆಗಿದ್ದಾರೆ...ಧರಿಸುವುದಕ್ಕೆ ಬಟ್ಟೆಯೂ ಇಲ್ಲ...ಆದರೆ ಗುಜರಾತ್‌ನ ರೈತರು ಬಹಳ ಶ್ರೀಮಂತರು...’’ ಗುಜರಾತ್‌ನ ರೈತನನ್ನು ಕಾಸಿ ಕಣ್ಣು ಪಿಳುಕಿಸಿ ನೋಡಿದ್ದೇ ಕಾಸಿಗೆ ಅನುಮಾನ ಬಂತು. ಇವನನ್ನು ಎಲ್ಲೋ ನೋಡಿದ್ದೇನಲ್ಲ....‘‘ಸಾರ್...ಇವನು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಥರ ಇದ್ದಾನೆ...ಇವನು ಗುಜರಾತ್‌ನ ರೈತ ಆಗಲು ಹೇಗೆ ಸಾಧ್ಯ...?’’

‘‘ಗುಜರಾತ್‌ನ ರೈತರೆಲ್ಲರೂ ಬಪ್ಪಿ ಲಹರಿ ಥರವೇ ಇರ್ತಾರೆ...ಮೈತುಂಬಾ ಬಂಗಾರ...ಯಾಕೆಂದರೆ ಅವರ ಗದ್ದೆಯಲ್ಲಿ ಅಕ್ಕಿ ಬೆಳೆಯುವುದಿಲ್ಲ. ಬೇರೆ ಬೇರೆ ಥರದ ಚಿನ್ನದ ಸರಗಳನ್ನು ಬೆಳೆಯುತ್ತಾರೆ...ಕೆಲವನ್ನು ಮಾರಿ ಉಳಿದದ್ದನ್ನು ಕತ್ತಿಗೆ, ಸೊಂಟಕ್ಕೆ ಬೆರಳಿಗೆ ಸುತ್ತಿಕೊಳ್ಳುತ್ತಾರೆ...’’ ‘‘ಗುಜರಾತಿನಲ್ಲಿ ಪಿಜ್ಜಾ ತಿನ್ನುತ್ತಾರೆ ಕಣ್ರೀ...ಶ್ರೀಮಂತ ರೈತರಲ್ಲವೆ? ಅವರು ಪಿಜ್ಜಾವನ್ನು ಬೆಳೆದು ಮಾರುತ್ತಾರೆ. ಕರ್ನಾಟಕದಲ್ಲಿರುವ ಪಿಜ್ಜಾ ಹಟ್‌ಗಳಿಗೆ ಪಿಜ್ಜಾ ಸಪ್ಲೈ ಮಾಡೋದೆ ಗುಜರಾತ್‌ನ ರೈತರು ಕಣ್ರೀ...ದೇಶಪ್ರೇಮಿ ರೈತರು ಕಣ್ರೀ...ಮಳೆಗಾಲದಲ್ಲಿ ಗದ್ದೆಯಲ್ಲಿ ಚಿನ್ನ, ಬೆಳ್ಳಿ ಬೆಳೆಯುತ್ತಾರೆ. ಚಳಿಗಾಲದಲ್ಲಿ ತಿನ್ನುವುದಕ್ಕಾಗಿ ಪಿಜ್ಜಾ ಬೆಳೆಯುತ್ತಾರೆ. ಬೇಸಿಗೆ ಗಾಲದಲ್ಲಿ ಗಡಿಯಲ್ಲಿ ಹೋಗಿ ದೇಶ ಕಾಯ್ತಾರೆ....’’
ಕಾಸಿಗೆ ಇಡೀ ಚುನಾವಣಾ ಸಂತೆಯೇ ಗರಗರ ತಿರುಗಿದಂತಾಯಿತು. ‘‘ಆದರೆ ಇವರು ಟಿವಿಯಲ್ಲಿ ಹಾಡು ಹೇಳುವುದನ್ನು ನಾನು ಕೇಳಿದ್ದೇನೆ...ಇವನು ಬಪ್ಪಿ ಲಹರಿ ಸಾರ್...’’ ಕಾಸಿ ಹೇಳಿದ.

ಬೇಲೆಸೂಲಿಗೆ ಸಿಟ್ಟು ಬಂತು ‘‘ದೇಶದ್ರೋಹಿಗಳ ಸಂಚು ಕಣ್ರೀ...ಆದುದರಿಂದ ನರೇಂದ್ರ ಮೋದಿಯ ಸಾಧನೆಯನ್ನು ಮುಚ್ಚಿ ಹಾಕಲು ನಿಮ್ಮಿಂದ ಇಂತಹ ಮಾತನ್ನಾಡಿಸುತ್ತಾರೆ... ಗುಜರಾತ್‌ನ ರೈತರು ಹಾಡನ್ನೂ ಹಾಡುತ್ತಾರೆ ಕಣ್ರೀ....ಅವರು ಹುಟ್ಟು ಸಂಗೀತಗಾರರು...ಅವರು ಬೇಕಾದ್ರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ಗಳಾಗಿಯೂ ಭಾಗವಹಿಸುತ್ತಾರೆ.

ಯಾಕೆಂದರೆ ಗುಜರಾತ್ ಸಂಪೂರ್ಣ ಅಭಿವೃದ್ಧಿ ಹೊಂದಿದೆ....ಗುಜರಾತ್‌ನ ರೈತರು ಹುಟ್ಟು ದೇಶಪ್ರೇಮಿಗಳು...ನೀವು ಬಾಯಿ ಮುಚ್ಚದೇ ಇದ್ದರೆ ಗುಜರಾತಿ ದೇಶಪ್ರೇಮಿ ಯುವಕರು ನಿಮ್ಮ ಬಾಯಿ ಮುಚ್ಚಿಸುತ್ತಾರೆ ಎಚ್ಚರಿಕೆ...’’ ಕಾಸಿ ಬಾಯಿ ಮುಚ್ಚಿದ. ಈಗ ನರಕವರ್ತಿ ಬೇಲೆಸೂಲಿ ತನ್ನ ಜೇಬಿನಿಂದ ಮೊಟ್ಟೆಯಾಕಾರದ ಅದೇನನ್ನೋ ಹೊರಗೆ ತೆಗೆದ ‘‘ಇದೇನು ಹೇಳಿ...’’
ಸಂತೆಯಲ್ಲಿ ಸೇರಿದ್ದ ಎಲ್ಲರೂ ಒಂದಾಗಿ ಹೇಳಿದರು ‘‘ಕೋಳಿ ಮೊಟ್ಟೆ...’’

‘‘ನಾನು ಮೊದಲು ಹಾಗೆ ತಿಳಿದುಕೊಂಡಿದ್ದೆ. ಸತ್ಯ ಗೊತ್ತಾದದ್ದೇ ನಾನು ಮೋದಿಯ ಅಭಿಮಾನಿ ಯಾಗಿ ಬಿಟ್ಟೆ. ಇದು ಮೊಟ್ಟೆ ಅಲ್ಲ ಕಣ್ರೀ...ಗುಜರಾತಿನ ರೈತರು ಬೆಳೆದಿರುವ ಗೋದಿಯ ಕಾಳುಗಳು...ಒಂದು ಕಾಳು ಮೊಟ್ಟೆಯಷ್ಟು ದೊಡ್ಡದು. ಒಂದು ಚಪಾತಿ ಮಾಡಲು ಗುಜರಾತಿ ನಲ್ಲಿ ಬೆಳೆದ ಎರಡು ಗೋದಿ ಕಾಳುಗಳು ಸಾಕು. ಇಂದು ಗುಜರಾತಿನಲ್ಲಿ ಎಲ್ಲರೂ ಹೊಟ್ಟೆ ತುಂಬಾ ತಿಂದು ತೇಗಿ ಸುಖವಾಗಿದ್ದಾರೆ. ಬೇರೇನು ಕೆಲಸ ಇಲ್ಲ ಎಂದು ಹೊಡೆದಾಡಿಕೊಳ್ಳುತ್ತಾರೆ. ಅದನ್ನೇ ದೊಡ್ಡದು ಮಾಡಿ ಕೋಮುಗಲಭೆ ಎಂದು ಕಾಂಗ್ರೆಸ್‌ನೋರು ಗಲಭೆ ಎಬ್ಬಿಸಿದ್ದಾರೆ....’’

‘‘ಗುಜರಾತಿನ ತೆಂಗಿನ ಕಾಯಿ ಗೋಲಗುಮ್ಮಟ ದಷ್ಟು ದೊಡ್ಡದಿರುತ್ತದೆ. ಅಲ್ಲಿ ಒಂದು ತೆಂಗಿನ ಕಾಯಿ ಒಂದು ವರ್ಷಕ್ಕೆ ಸಾಕಾಗತ್ತೆ. ಅದನ್ನು ಹೊತ್ತುಕೊಂಡು ಬರುವುದು ಕಷ್ಟವೆಂದು ಇಲ್ಲಿಗೆ ತರಲಿಲ್ಲ...ಗುಜರಾತಿನ ದನಗಳು ಕೊಡುವ ಹಾಲು ಬೆಣ್ಣೆಯಷ್ಟು ಗಟ್ಟಿಯಾಗಿರುತ್ತೆ....ಅಲ್ಲಿಯ ದನಗಳು ಬೆಳಗ್ಗೆ ಎದ್ದು ವಂದೇಮಾತರಂ ಹಾಡನ್ನು ರಾಗವಾಗಿ ಹಾಡುತ್ತೆ...ಯಾಕೆಂದರೆ ಅವುಗಳು ಗುಜರಾತಿನ ದೇಶ ಪ್ರೇಮಿ ದನಗಳು ಕಣ್ರೀ...ದನಗಳಿಗೆ, ಕೋಳಿ ಗಳಿಗೆ, ತೆಂಗಿನಮರಗಳಿಗೆ ಮೋದಿಯ ಮಹತ್ವ ಗೊತ್ತು. ಆದರೆ ನಮಗೆ ಮಾತ್ರ ಇನ್ನೂ ಗೊತ್ತಾಗಿಲ್ಲ ಕಣ್ರೀ...’’

ಅಷ್ಟರಲ್ಲಿ ಕಾಸಿ ಕೇಳಿದ ‘‘ಸಾರ್...ಗುಜರಾತ್‌ನಲ್ಲಿ ರೈಲುಗಳು ಹಳಿಯಿಲ್ಲದೆಯೇ ಓಡುತ್ತದೆಯಂತೆ ಹೌದಾ...’’
‘‘ಹೌದು ಕಣ್ರೀ...ಹೌದು...’’ ಎಂದು ಬೇಲೆಸೂಲಿ ಏನೋ ಹೇಳಲು ಹೊರಟವನಿಗೆ ಅನುಮಾನ ಬಂದು ಕಾಸಿಯನ್ನು ನೋಡಿದ. ಕಾಸಿ ಹಳಿತಪ್ಪಿದ ರೈಲಿನಂತೆ ಅಲ್ಲಿಂದ ದಡಬಡನೆ ಓಡತೊಡಗಿದ.

Sunday, March 23, 2014

ಅವರು ನಮಸ್ಕಾರ ಮಾಡಿದರು ಅಂತ, ನಾನು ಚೂರಿ ಹಾಕುವುದಾ...

ಮಾರ್ಚ್ 23 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ಮಲೇಶ್ಯಾ ವಿಮಾನ ಕಾಣೆಯಾಗಿರುವುದು ಮತ್ತು ಭಾರತದಲ್ಲಿ ಚುನಾವಣೆ ಘೋಷಣೆಯಾಗಿರುವುದು ಒಟ್ಟೊಟ್ಟಿಗೆ ಆಗಿರುವುದು ಪತ್ರಕರ್ತ ಎಂಜಲು ಕಾಸಿಗೆ ತಲೆ ತುರಿಕೆ ತಂದಿತು. ಚುನಾವಣೆಗೂ ವಿಮಾನಕ್ಕೂ ಸಂಬಂಧ ಇದ್ದರೂ ಇದ್ದೀತು ಎಂದು ಅಭಿಪ್ರಾಯ ಸಂಗ್ರಹಿಸಲು ರಾಜಕೀಯ ಮುಖಂಡರ ಮನೆ ಬಾಗಿಲನ್ನು ತಟ್ಟಲು ಧಾವಿಸಿದ.

ನೇರವಾಗಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಮನೆಯ ಬಾಗಿಲನ್ನು ತಟ್ಟಿದ. ಭದ್ರತೆಯ ಕಾರಣಕ್ಕಾಗಿ ಕಾಸಿಯನ್ನು ಮನೆಯ ಒಳಗೆ ಬಿಡಲಿಲ್ಲ. ಹೊರಗಿನಿಂದಲೇ ಕಾಸಿ ಪ್ರಶ್ನೆ ಕೇಳಿದ ‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾಗಿದೆ...’’ ಎಂದದ್ದೇ ತಡ. ಒಳಗಿನಿಂದ ನರೇಂದ್ರ ಮೋದಿ ಮಾತನಾಡತೊಡಗಿದರು ‘‘ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಇಂದು ಮಲೇಶ್ಯಾ ವಿಮಾನ ಕಾಣೆಯಾಗುತ್ತಲೇ ಇರಲಿಲ್ಲ. ಯುಪಿಎ ಸರಕಾರ ಮತ್ತು ಸೋನಿಯಾಗಾಂಧಿಯೇ ಈ ವಿಮಾನ ಕಾಣೆಯಾಗಲು ಮುಖ್ಯ ಕಾರಣ. ಮುಂದಿನ ಚುನಾವಣೆಯಲ್ಲಿ ನಾನು ಪ್ರಧಾನಮಂತ್ರಿಯಾದರೆ, ಈ ವಿಮಾನವನ್ನು ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಮಾಡಿಕೊಡುತ್ತೇನೆ....’’

ಕಾಸಿ ರೋಮಾಂಚನಗೊಂಡ ‘‘ಸಾರ್ ಈಗ್ಲೇ ಪತ್ತೆ ಮಾಡಿ ಕೊಡಬಹುದಲ್ಲ....ಚುನಾವಣೆಯಲ್ಲಿ ನಿಮ್ಮ ಇಮೇಜು ಹೆಚ್ಚುತ್ತದೆ...’’ ಮೋದಿಗೆ ಸಲಹೆ ನೀಡಿದ. ‘‘ಈಗ ಪತ್ತೆ ಮಾಡಿಕೊಟ್ಟರೆ ಅದರ ಲಾಭವನ್ನೆಲ್ಲ ಯುಪಿಎ ಸರಕಾರ ತನ್ನದಾಗಿಸಿಕೊಳ್ಳುತ್ತದೆ. ಇಂದು ಇಡೀ ವಿಶ್ವ ನಾನು ಪ್ರಧಾನಿಯಾಗುವುದನ್ನು ಕಾಯು ತ್ತಿದೆ. ನಾನು ಪ್ರಧಾನಿಯಾದರೆ ಮಾತ್ರ ಮಲೇಶ್ಯಾ ವಿಮಾನ ಪತ್ತೆಯಾಗಲು ಸಾಧ್ಯ...’’ ಪತ್ರಕರ್ತ ಎಂಜಲು ಕಾಸಿ ವಿಮಾನ ಸಿಕ್ಕಿಯೇ ಬಿಟ್ಟಿತು ಎಂಬಂತೆ ಸಂಭ್ರಮದಿಂದ ನೋಟ್ ಮಾಡಿಕೊಂಡು ಅಲ್ಲಿಂದ ನೇರವಾಗಿ ರಾಹುಲ್‌ಗಾಂಧಿಯ ಮನೆಯ ಬಾಗಿಲು ತಟ್ಟಿದ. ಕಾಸಿಯನ್ನು ಕಂಡದ್ದೇ ವೀರಪ್ಪ ಮೊಯ್ಲಿಯವರು ಗುರಾಯಿಸಿದರು. ಎಲ್ಲಿ, ನೇತ್ರಾವತಿ ನದಿ ತಿರುವು ಬಗ್ಗೆ ಪ್ರಶ್ನೆ ಕೇಳುವುದಕ್ಕೆ ಬಂದಿದ್ದಾನೋ ಎಂದು ಹೆದರಿ ‘‘ಏನಾಗಬೇಕು...ಹೇಳಿ...’’ ಎಂದರು.

‘‘ಅದೇ ಸಾರ್. ಮಲೇಶ್ಯಾದಲ್ಲಿ ವಿಮಾನ ಕಾಣೆಯಾ ಗಿದೆ...’’ ಕಾಸಿ ಪ್ರಶ್ನೆಯನ್ನು ಆರಂಭಿಸಿದ್ದೇ ಮೊಯ್ಲಿ ಮಾತನಾಡತೊಡಗಿದರು ‘‘ಮಲೇಶ್ಯಾದಲ್ಲಿ ವಿಮಾನ ಕಾಣೆಯಾಗಿರುವುದಕ್ಕೂ ನದಿ ತಿರುವಿಗೂ ಯಾವ ಸಂಬಂಧವೂ ಇಲ್ಲ. ನಮ್ಮದು ನೇತ್ರಾವತಿ ತಿರುವು ಯೋಜನೆ ಅಲ್ಲ...ಎತ್ತಿನ ಹೊಳೆ ಯೋಜನೆ....’’ ಕಾಸಿಗೆ ಅರ್ಥವಾಗಲಿಲ್ಲ ‘‘ಅಲ್ಲ ಸಾರ್...ಮಲೇಶ್ಯಾ ದಲ್ಲಿ ವಿಮಾನ ಕಾಣೆಯಾಗಿದೆ ನಿಮ್ಮ ಅಭಿಪ್ರಾಯ...’’ ಮೊಯ್ಲಿ ಮತ್ತಷ್ಟು ಸ್ಪಷ್ಟೀಕರಣ ನೀಡಿದರು ‘‘ನೋಡ್ರಿ...ಬಹುಶಃ ವಿಮಾನದ ಸಿಲಿಂಡರ್‌ನ ಗ್ಯಾಸ್ ಮುಗಿದಿರಬೇಕು. ಆಧಾರ್ ಕಾರ್ಡ್ ಇದ್ದರೆ ನಾವು ಮಲೇಶ್ಯಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುವುದಕ್ಕೆ ಸಿದ್ಧ...’’

ಕಾಸಿಗೆ ಏನೇನೂ ಅರ್ಥವಾಗಲಿಲ್ಲ. ಏನು ಕೇಳಿದರೂ ಅದಕ್ಕೆ ಸಿಲಿಂಡರ್‌ಗಳನ್ನು ಜೋಡಿಸುತ್ತಿದ್ದಾರಲ್ಲ ಎಂದು ಆತ ಕಂಗಾಲಾದ ‘‘ಸಾರ್...ಮಲೇಶ್ಯಾದ ವಿಮಾನ...’’ ಎಂದು ಮತ್ತೆ ಬಾಯಿ ತೆರೆಯುವಷ್ಟರಲ್ಲಿ ಮೊಯ್ಲಿ ಹೇಳತೊಡಗಿದರು ‘‘ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ಒಂದು ಅಧ್ಯಾಯ ಇದೆ....ನಾನು ಇತ್ತೀಚೆಗೆ ಬರೆದ ಕಾವ್ಯದ ಒಂದು ಭಾಗ....’’ ಎಂದು ಕಾವ್ಯ ಓದಲು ಶುರು ಹಚ್ಚುವಷ್ಟರಲ್ಲಿ ಕಾಸಿ ಅಲ್ಲಿಂದ ಓಡಿ ಯಡಿಯೂರಪ್ಪರ ಮನೆಯನ್ನು ಮುಟ್ಟಿದ.

‘‘ಏನ್ರೀ ಓಡ್ಕೊಂಡು ಬರ್ತಾ ಇದ್ದೀರಾ? ಜೆಡಿಎಸ್‌ನೋರು ಟಿಕೆಟ್ ಕೊಡ್ತೇನೆ ಎಂದು ಏನಾದ್ರೂ ಅಟ್ಟಿಸಿಕೊಂಡು ಬಂದ್ರಾ...’’ ಯಡಿಯೂರಪ್ಪ ಕಾಸಿಯನ್ನು ಜೋಕು ಮಾಡಿದರು.
ಎಂಜಲು ಕಾಸಿ ನಾಚಿಕೊಂಡ ‘‘ಸಾರ್...ಮಲೇಶ್ಯಾ ವಿಮಾನ ಕಾಣೆಯಾಗಿರುವುದರ ಬಗ್ಗೆ ನಿಮ್ಮ ಅನ್ನಿಸಿಕೆ...’’
ಯಡಿಯೂರಪ್ಪ ಸಿಟ್ಟಾದರು ‘‘ನಾನು ಕಾಣೆಯಾಗಿರುವ ನನ್ನ ಕೆಜೆಪಿ ವಿಮಾನವನ್ನು ಹುಡುಕ್ತಾ ಇದ್ದೇನೆ...ನೀವು...’’
‘‘ಹಾಗಲ್ಲ ಸಾರ್...ನೀವು ಮಾಜಿ ಮುಖ್ಯಮಂತ್ರಿ. ನಿಮ್ಮ ಅನ್ನಿಸಿಕೆ ಬಹಳ ಮುಖ್ಯ’’ ಕಾಸಿ ಒತ್ತಾಯಿಸಿದ.
‘‘ಮಲೇಶ್ಯಾ ವಿಮಾನ ಏನು ಬಂತು. ನನ್ನನ್ನು ಐದು ವರ್ಷ ಮುಖ್ಯಮಂತ್ರಿ ಮಾಡಿದ್ದಿದ್ದರೆ ವಿಧಾನಸೌಧ ವನ್ನೇ ಮಾಯ ಮಾಡಿ ತೋರಿಸ್ತಿದ್ದೆ. ಇಂದು ವಿಮಾನ ಮಾಯ ಆಗಿರೋದರಿಂದ ಮಲೇಶ್ಯ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ನಾವು ಕೂಡ ಇದೇ ಥರ ಮಾಯ ಮಾಡುವುದಕ್ಕೆ ಕಲಿಯಬೇಕು. ಅದೇನೋ ಒಂದಿಷ್ಟು ಭೂಮಿಯನ್ನು ಮಾಯ ಮಾಡಿದೆ ಎಂದು ಲೋಕಾಯುಕ್ತರು ಏನೇನೋ ಆರೋಪ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಟ್ಟರು. ಈಗ ಮಲೇಶ್ಯದಲ್ಲಿ ವಿಮಾನವೇ ಮಾಯ ಆಗಿದೆ. ಇದ ಕ್ಕಾಗಿ ಅಲ್ಲಿಯ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಅಧಿಕಾರದಿಂದ ಕೆಳಗಿಳಿದ ಸುದ್ದಿಯನ್ನು ನೀವೇನಾದರೂ ಕೇಳಿದ್ದೀರಾ? ಇಲ್ಲವಲ್ಲ?....’’ ಯಡಿಯೂರಪ್ಪರ ಉತ್ತರ ಕೇಳಿದ್ದೇ ಕಾಸಿ ಥಟ್ಟನೆ ಅಲ್ಲಿಂದ ಮಾಯ ಆಗಿ ದೇವೇಗೌಡರ ಮುಂದೆ ಬಂದು ನಿಂತ.
ಕಾಸಿಯನ್ನು ಕಂಡದ್ದೇ ದೇವೇಗೌಡರು ಸಿಟ್ಟಾದರು. ‘‘ಸಿದ್ದರಾಮಯ್ಯನ ಎಂಜಲು ತಿಂದು ನನ್ನ ಬಳಿ ತಲೆಗೆಟ್ಟ ಪ್ರಶ್ನೆ ಕೇಳೋದಕ್ಕೆ ಬಂದಿದ್ದೀಯಾ? ಅದೇನು ಕೇಳಬೇಕೋ ಕೇಳು...’’
‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾ ಗಿದೆ....ಇನ್ನೂ ಸಿಕ್ಕಿಲ್ಲ...’’ ಕಾಸಿ ಕಾಲಿನ ಹೆಬ್ಬೆರಳಲ್ಲಿ ಉಂಗುರ ಬರೆಯುತ್ತಾ ಪ್ರಶ್ನಿಸಿದ.
‘‘ನೋಡ್ರಿ...ನಾನು ಪ್ರಧಾನಿಯಾಗಿದ್ದಿದ್ರೆ ಇಂದು ಮಲೇಶ್ಯಾದ ವಿಮಾನ ಕೆಲವೇ ದಿನಗಳಲ್ಲಿ ಪತ್ತೆಯಾಗಿರುತ್ತಿತ್ತು. ಕೇರಳದ ಹಲವು ಮಂತ್ರವಾದಿಗಳು ನನಗೆ ಗೊತ್ತಿದ್ದಾರೆ. ಅವರನ್ನು ಕಳುಹಿಸಿಕೊಟ್ಟು ಸಮಸ್ಯೆ ಬಗೆ ಹರಿಸುತ್ತಿದ್ದೆ. ನಮ್ಮ ದೇಶದ ಖ್ಯಾತಿಯೂ ಹೆಚ್ಚುತ್ತಿತ್ತು. ಆದರೆ ಇಲ್ಲಿ ನೋಡಿದ್ರೆ ಸಿದ್ದರಾಮಯ್ಯ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರ್ತಾನಂತೆ....ಮಂತ್ರವಾದಿಗಳನ್ನು ಜೈಲಿಗೆ ಹಾಕ್ತಾನಂತೆ...ನನ್ನ ಪ್ರಾಣ ಇರುವವರೆಗೆ ಅದಕ್ಕೆ ಅವಕಾಶ ಕೊಡೋದಿಲ್ಲ.’’
ಕಾಸಿ ಅಲ್ಲಿಂದ ಮೆಲ್ಲನೆ ಎದ್ದು ನೇರವಾಗಿ ವಾಟಾಳ್ ನಾಗರಾಜ್ ಬಳಿಗೆ ಓಡಿದ. ‘‘ಸಾರ್...ವಿಮಾನ ಕಾಣೆಯಾಗಿದೆ...ಇನ್ನೂ ಸಿಕ್ಕಿಲ್ಲ...’’
ವಾಟಾಳ್ ತನ್ನ ಟೋಪಿ ಧರಿಸಿ ಅಣಿಯಾದರು ‘‘ಇದನ್ನು ಇಷ್ಟು ತಡವಾಗಿ ಬಂದು ಹೇಳ್ತೀರಲ್ಲಾರೀ... ನಾಳೇನೇ ಧರಣಿ ಮಾಡ್ತೀನಿ...ವಿಮಾನ ನಿಲ್ದಾಣಕ್ಕೆ ಹೋಗಿ ಧರಣಿ ಮಾಡ್ತೇನೆ....ವಿಮಾನ ಹೋಗದ ಹಾಗೆ ರಸ್ತೆ ತಡೆ ಮಾಡ್ತೇನೆ....’’
ಕಾಸಿ ಅಲ್ಲಿಂದ ನೇರವಾಗಿ ಮಂಗಳೂರಿಗೆ ಧಾವಿಸಿದ. ನೋಡಿದರೆ ಜನಾರ್ದನ ಪೂಜಾರಿ! ‘‘ಸಾರ್...ವಿಮಾನ ಅಪಹರಣ ಆಗಿದೆ...ಇನ್ನೂ ಸಿಕ್ಕಿಲ್ಲ...’’
ಜನಾರ್ದನ ಪೂಜಾರಿ ಬೆಚ್ಚ ಆದರು ‘‘ಎಂತದು ಅದು ಸಿಗಲಿಕ್ಕೆ ಗೋಳಿ ಬಜೆಯ? ಇಷ್ಟರವರೆಗೆ ಹೋದಲ್ಲೆಲ್ಲ ಪ್ರಭಾಕರಭಟ್ಟರು ಅಡ್ಡ ಬರ್ತಾ ಇದ್ದರು. ಅವರು ನಮಸ್ಕಾರ ಮಾಡುವಾಗ ನಾನು ನಮಸ್ಕಾರ ಮಾಡುವುದು ತಪ್ಪಾ? ನಾನೆಂತ ಪ್ರಭಾಕರ ಭಟ್ಟರಿಗೆ ಚೂರಿ ಹಾಕಬೇಕಾ? ನನ್ನ ಬೆನ್ನಿನಲ್ಲಿ ನೋಡಿ? ಇಪ್ಪತ್ತು ಚೂರಿ ಉಂಟು. ಎಲ್ಲ ಚೂರಿ ಕಳೆದ ಬಾರಿ ಎಲೆಕ್ಷನ್‌ನಲ್ಲಿ ನಮ್ಮವರು ಹಾಕಿದ್ದು. ಈ ಬಾರಿ ಚೂರಿ ಹಾಕುವ ಹಾಗೆ ಇಲ್ಲ....’’
‘‘ಯಾಕೆ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಚೂರಿ ಹಾಕಲಿಕ್ಕೆ ಬೆನ್ನಿನಲ್ಲಿ ಜಾಗ ಎಲ್ಲಿ ಉಂಟು? ಈ ಬಾರಿ ಹಾಕುವವರು ಇದ್ದರೆ ಎದೆಗೇ ಹಾಕಬೇಕು. ವಿಮಾನ ಮಾಯ ಆಗುವುದರ ಬಗ್ಗೆ ನೀವು ಮಾತನಾಡ್ತೀರಿ...ನಮ್ಮ ನೇತ್ರಾವತಿ ನದಿ ಮಾಯ ಆಗುವುದರ ತಲೆಬಿಸಿಯಲ್ಲಿ ನಾನಿ ದ್ದೇನೆ....ನಾನು ಓಟಿಗೆ ನಿಲ್ಲಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಮೊಯ್ಲಿಯವರು ನೇತ್ರಾವತಿಯನ್ನು ಮಾಯ ಮಾಡ್ತಾರಂತೆ...ಇಡೀ ಮಂಗಳೂರನ್ನೇ ಮಾಯ ಮಾಡ್ತಾರಂತೆ...ನಾನು ಜೀವದಲ್ಲಿದ್ದರೆ ಬಿಡುವುದಿಲ್ಲ....’’ ಅಷ್ಟರಲ್ಲಿ ಪೂಜಾರಿ ಪಕ್ಕಕ್ಕೆ ದೃಷ್ಟಿ ಹಾಯಿಸಿದ್ದೇ ಓಡ ತೊಡಗಿದರು. ಕಾಸಿಯೂ ಹೆದರಿ ಅವರೊಟ್ಟಿಗೆ ಓಡತೊಡಗಿದ ‘‘ಎಂತಾಯಿತು ಸಾರ್...ಯಾಕೆ ಓಡ್ತಾ ಇದ್ದೀರಿ...’’ ಕಾಸಿ ಗಾಬರಿಯಿಂದ ಕೇಳಿದ.
‘‘ಅದೇ ಕಲ್ಲಡ್ಕದ ಪ್ರಭಾಕರ ಭಟ್ಟರು ಬರುತ್ತಿ ದ್ದಾರೆ. ಅವರು ಬಂದು ಇನ್ನು ನಮಸ್ಕಾರ ಹಾಕಿದರೆ ಮಂಗಳೂರಿನ ಬ್ಯಾರಿಗಳನ್ನು ಸಮಾಧಾನ ಮಾಡುವುದು ಯಾರು? ಇತ್ತೀಚೆಗೆ ಈ ಪ್ರಭಾಕರ ಭಟ್ಟರ ಕಾಟದಿಂದ ಬೀದಿಗಿಳಿಯುವುದೇ ಕಷ್ಟವಾಗಿದೆ ಮಾರ್ರೆ....ಹೋದಲ್ಲೆಲ್ಲ ಅಡ್ಡ ಬಂದು ನನಗೆ ಒಂದು ನಮಸ್ಕಾರ ಹಾಕಿ ಹೋಗುವುದು. ಇದು ಪೆದಂಬಲ್ವಾ....ನಾನು ಏನು ಮಾಡುವುದು? ಅವರು ನಮಸ್ಕಾರ ಹಾಕಿದರು ಅಂತ ಅವರಿಗೆ ಚೂರಿ ಹಾಕ್ಲಿಕ್ಕೆ ಆಗ್ತದಾ? ಅದು ನಮ್ಮ ಸಂಸ್ಕೃತಿಯಾ....’’ ಎಂದು ಏದುಸಿರು ಬಿಡುತ್ತಾ ಕೇಳಿದರು.

Monday, March 17, 2014

ಮೋದಿ ಜೊತೆಗೆ ಜಾಫರ್ ಶರೀಫ್ ಡಿನ್ನರ್!

 
ಮಾರ್ಚ್ ೧೬ ರವಿವಾರ ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ 

ಮಧ್ಯಾಹ್ನದ ಹೊತ್ತಿಗೆ ಪತ್ರಕರ್ತ ಎಂಜಲು ಕಾಸಿಯ ಹೊಟ್ಟೆ ಚುರ್ರ್‌ ಅಂತು. ರಾಜಕೀಯ ರ್ಯಾಲಿಗಳ ಹಿಂದೆ ಹೋಗಿ ಹೋಗಿ ಆತ ಸುಸ್ತಾಗಿದ್ದ. ನೇರವಾಗಿ ಒಂದು ಹೊಟೇಲನ್ನು ಹೊಕ್ಕು, ವೈಟರ್‌ನನ್ನು ಕರೆದು ಊಟಕ್ಕೆ ಆರ್ಡರ್ ಮಾಡಿದ. ಅಷ್ಟರಲ್ಲಿ ವೈಟರ್ ಕೇಳಿದ ‘‘ಸಾರ್...ಯಾರ ಜೊತೆಗೆ...ಮೋದಿ ಜೊತೆಗೆ ಊಟ ಮಾಡ್ತೀರಾ...ಕೇಜ್ರಿವಾಲ್ ಜೊತೆಗೆ ಊಟ ಮಾಡ್ತೀರಾ...ರಾಹುಲ್ ಜೊತೆಗೆ ಊಟ ಮಾಡ್ತೀರಾ?’’ ಕಾಸಿಗೆ ಅರ್ಥವಾಗಲಿಲ್ಲ. ‘‘ಅಂದ್ರೆ...’’ ಎಂದು ಕೇಳಬೇಕೆನ್ನುವಾಗಲೇ ವೈಟರ್ ಉತ್ತರಿಸಿದ ‘‘ಇದೆಲ್ಲ ಚುನಾವಣಾ ಸ್ಪೆಶಲ್ ಸಾರ್.
ಈಗಾಗಲೇ ಬೇರೆ ಬೇರೆ ಪಕ್ಷದ ನಾಯಕರು ಇಷ್ಟು ರೂಪಾಯಿ ಕೊಟ್ರೆ ನಮ್ಮ ನಾಯಕರ ಜೊತೆಗೆ ಊಟ ಮಾಡಬಹುದು...ಕಾಫಿ ಕುಡಿಯಬಹು...ಎಂದು ಘೋಷಣೆ ಮಾಡಿದ್ದಾರೆ. ಇದೀಗ ನಾವೇ ಅವರೆಲ್ಲರಿಂದ ಗುತ್ತಿಗೆ ಪಡೆದಿದ್ದೇವೆ...ನಿಮಗೆ ಯಾರ ಜೊತೆಗೆ ಊಟ ಮಾಡಬೇಕೋ ಅವರ ಜೊತೆಗೆ ನಾವು ವ್ಯವಸ್ಥೆ ಮಾಡು ತ್ತೇವೆ....’’
ಕಾಸಿಗೆ ಕುತೂಹಲವಾಯಿತು. ‘‘ಹಾಗಾದ್ರೆ ರಾಹುಲ್ ಜೊತೆಗೆ ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡ್ತೀರಾ...’’
ವೈಟರ್ ಬರೆದುಕೊಳ್ಳಲಾರಂಭಿಸಿದ ‘‘ಖಂಡಿತಾ ವ್ಯವಸ್ಥೆ ಮಾಡುವ. ಬರೇ ರಾಹುಲ್ ಮಾತ್ರವ, ಅಥವಾ ನೆಂಜಿಕೊಳ್ಳುವುದಕ್ಕೆ ಇತರ ಪುಡಿ ಕಾಂಗ್ರೆಸ್ಸಿಗರೂ ಜೊತೆಗೆ ಬೇಕಾ...’’ ಕಾಸಿಗೆ ಅರ್ಥವಾಗಲಿಲ್ಲ. ಮತ್ತೆ ವೈಟರ್ ವಿವರಿಸಿದ ‘‘ಸಾರ್...ರಾಹುಲ್ ಜೊತೆಗೆ ದಿಗ್ವಿಜಯ್ ಸಿಂಗ್ ಇದ್ದರೆ ಊಟದ ಬಿಲ್ ಜಾಸ್ತಿಯಾಗತ್ತೆ. ಲೋಕಲ್ ಪುಡಿ ರಾಜಕಾರಣಿಗಳಿಗೆ ಯಾವುದೇ ಚಾರ್ಜ್ ಬೀಳಲ್ಲ...’’

‘‘ಬರೇ ರಾಹುಲ್ ಜೊತೆಗೆ ಊಟಕ್ಕೆ ಎಷ್ಟಾಗತ್ತೆ....?’’ ಕಾಸಿ ಮುಗ್ಧವಾಗಿ ಕೇಳಿದ.
‘‘ಸಾರ್ ರಾಹುಲ್ ಜೊತೆಗೆ ಊಟ ಮಾಡುವುದಾದರೆ ನೀವು ಬಿಲ್‌ನ್ನು ಡಾಲರ್ ಮೂಲಕ ಪಾವತಿಸಬೇಕಾಗತ್ತೆ. ಬೇಕಾದ್ರೆ... ಸ್ವಿಸ್‌ನಲ್ಲಿರುವ ಅವರ ಅಕೌಂಟಿಗೆ ಹಾಕಿದರೂ ನಡೆಯುತ್ತದೆ. ಒಂದು ಹೊತ್ತಿನ ಊಟಕ್ಕೆ ಎರಡು ಕೋಟಿ ರೂಪಾಯಿ. ಮೂರು ಹೊತ್ತಿನ ಊಟಕ್ಕೆ ರಿಯಾಯಿತಿ ಇದೆ...’’
ಕಾಸಿಗೆ ತಲೆ ಗಿರ್ರೆಂದು ತಿರುಗಿತು. ಕಿಸೆಯಲ್ಲಿ ಬರೇ 30 ರೂಪಾಯಿ ಇಟ್ಟುಕೊಂಡು ಊಟಕ್ಕೆ ಕುಳಿತವನಲ್ಲಿ ಒಂದು ಊಟಕ್ಕೆ ಎರಡು ಕೋಟಿ ರೂಪಾಯಿ ಎಂದರೆ ಏನಾಗಬಹುದು ಪಾಪ!
‘‘ರೀ...ಬೇಡಾ...ರಾಹುಲ್ ಸಹವಾಸವೇ ಬೇಡ. ನನಗೆ ಆಮ್ ಆದ್ಮಿ ಕೇಜ್ರಿವಾಲ್ ಜೊತೆಗಿನ ಊಟ ಕೊಡಿ...’’ ಮೂವತ್ತು ರೂಪಾಯಿಯ ಪ್ಲೇಟ್ ಊಟ ಇನ್ನಷ್ಟು ಕಡಿಮೆಗೆ ಸಿಗಬಹುದು ಎಂದು ಕಾಸಿ ಭಾವಿಸಿದ. ಆಮ್ ಆದ್ಮಿಯಲ್ವೆ?
ವೈಟರ್ ಸಲಹೆ ನೀಡಿದ ‘‘ಸಾರ್...ಅದು ಆಮ್ ಆದ್ಮಿ ಸಾರ್. ಚುನಾವಣೆಯ ಹೊತ್ತಿನಲ್ಲಿ ಆಮ್ ಆದ್ಮಿಗಳ ಬೆಲೆ ಏಕಾಏಕಿ ಹೆಚ್ಚುತ್ತೆ. ಅವರ ಜೊತೆ ಊಟ ತುಂಬಾ ಕ್ವಾಸ್ಟ್ಲಿ ಸಾರ್. ಮೊನ್ನೆ ಬಿಜೆಪಿಯ ಎಲ್. ಕೆ. ಅಡ್ವಾಣಿಯವರೇ ಕೇಜ್ರಿವಾಲ್ ಊಟಕ್ಕೆ ಬುಕ್ ಮಾಡಿದ್ರು. ಆದರೆ ಈವರೆಗೂ ಕೇಜ್ರಿವಾಲ್ ಅವಕಾಶ ಕೊಟ್ಟಿಲ್ಲ. ಸೋನಿಯಾಗಾಂಧಿಗೂ ಕೇಜ್ರಿವಾಲ್ ಊಟ ಅಂದ್ರೆ ಒಳಗೊಳಗೆ ಇಷ್ಟ. ಆದರೆ ತುಂಬಾ ಡಿಮಾಂಡ್ ಸಾರ್. ನಿಮಗೆ ಅದರ ತಂಟೆ ಬೇಡ’’
ಕಾಸಿಗೆ ಕುತೂಹಲವಾಯಿತು. ‘‘ಅಲ್ಲರೀ... ಎಲ್ಲರೂ ಕೇಜ್ರಿವಾಲ್ ಜೊತೆಗಿನ ಊಟವನ್ನು ಯಾಕೆ ಇಷ್ಟ ಪಡ್ತಾ ಇದ್ದಾರೆ? ಅದರಲ್ಲೇನಿದೆ ವಿಶೇಷ?’’
 ‘‘ಅದು ಹೊಸ ರುಚಿ ಕಾಲಂನಲ್ಲಿ ಬಂದಿರೋ ಸ್ಪೆಶಲ್ ಊಟ. ವಿದೇಶದಿಂದಲೂ ಅದಕ್ಕೆ ಒಳಗೊಳಗೆ ಡಿಮ್ಯಾಂಡ್ ಇದೆಯಂತೆ. ಅಷ್ಟೇ ಅಲ್ಲ, ತೆಳುವಾಗಿ ಆ ಊಟದ ಮೇಲೆ ಕೇಸರಿಯನ್ನು ಸವರಿರುತ್ತಾರೆ. ಒಳಗೆ ದಲಿತ, ಶ್ರೀಸಾಮಾನ್ಯ ಎಂದೆಲ್ಲ ಬೇರೆ ಬೇರೆ ಮಸಾಲೆಗಳಿವೆ. ಸಂಪೂರ್ಣ ಎಸಿ ರೂಂನಲ್ಲೇ ಆಮ್ ಆದ್ಮಿ ಊಟ ನಡೆಯೋದು. ದಲಿತರಿಗಾಗಿ ದೇವನೂರು ಮಸಾಲೆ ಅರೆದು ತಯಾರಿಸಿದ ಊಟ ಅದು. ಐಟಿ ಕಂಪೆನಿಯ ಹುಡುಗರಿಗೆ ಬೇಕಾದ ಫಾಸ್ಟ್‌ಫುಡ್ ಐಟಂಗಳೂ ಅದರಲ್ಲಿವೆ. ರೈತರಿಗೆ ಬೇಕಾದ ಕಡ್ಲೆಕಾಯಿ ಬೀಜಗಳನ್ನೂ ಬರೋಬರಿ ಸೇರಿಸಲಾಗುತ್ತದೆ. ಈ ಕಾರಣದಿಂದ ಕೇಜ್ರಿವಾಲ್ ಊಟಕ್ಕೆ ವಿಶೇಷ ಬೇಡಿಕೆ. ನಿಮಗೆ ಬೇಕಾದರೆ ವ್ಯವಸ್ಥೆ ಮಾಡಿಕೊಡುವ. ಆದರೆ ಬಿಲ್ ನೋಡಿ ಬೆಚ್ಚಿ ಬೀಳಬಾರದು...’’
ಕಾಸಿ ಕುಳಿತಲ್ಲೇ ಹಣೆ ಒರೆಸಿಕೊಂಡ. ವೈಟರ್ ಮತ್ತೊಂದು ಸಲಹೆ ನೀಡಿದ ‘‘ಸಾರ್...ಬೇಕಾದರೆ ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬಹುದು...’’
‘‘ಊಟದ ಹೊತ್ತಲ್ಲಿ ಯಾರಾದರೂ ಚಹಾ ಕುಡೀತಾರ...ಹೋಗ್ಲಿ...ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬೇಕಾದರೆ ಎಷ್ಟಾಗುತ್ತದೆ...’’
‘‘ಬರೇ ಕಡಿಮೆ ಸಾರ್...ಒಂದು ಚಹಾಕ್ಕೆ ಎರಡು ಲಕ್ಷ ರೂಪಾಯಿ ಆಗುತ್ತದೆ. ಅದು ನಿಮ್ಮ ಖಾತೆಗೇ ಹೋಗಿ ಬೀಳುತ್ತದೆ. ಆಮ್ ಆದ್ಮಿ ಅಂದರೆ ನೀವೇ ಅಲ್ಲವೆ? ಅವರು ಪ್ರಧಾನಿಯಾದರೆ ನಿಮಗೇ ಅಲ್ಲವೆ ಲಾಭ?’’ ವೈಟರ್ ಸಮಜಾಯಿಶಿ ಹೇಳಿದ.
ಕಾಸಿ ತನ್ನ ಜೇಬಲ್ಲಿರುವ 30 ರೂಪಾಯಿಯನ್ನು ಮತ್ತೊಮ್ಮೆ ಮುಟ್ಟಿ ನೋಡಿ ಹೇಳಿದ ‘‘ಕೇಜ್ರಿವಾಲ್ ಸಹವಾಸವೇ ಬೇಡ. ನನಗೆ ನರೇಂದ್ರ ಮೋದಿ ಜೊತೆ ಊಟ ಮಾಡಲು ಸಾಧ್ಯವೆ?’’
‘‘ಇಲ್ಲ ಸಾರ್. ನರೇಂದ್ರ ಮೋದಿಯ ಜೊತೆಗೆ ಊಟ ಮಾಡಲು ಜಾಫರ್ ಶರೀಫ್ ಅವರು ಬುಕ್ ಮಾಡಿದ್ದಾರೆ. ಇವತ್ತು ರಾತ್ರಿಯ ಸ್ಪೆಶಲ್ ಬಿರಿಯಾನಿಗಾಗಿ ಈಗಾಗಲೇ ಎರಡು ಕೊಬ್ಬಿದ ಅಲ್ಪಸಂಖ್ಯಾತ ಕುರಿಗಳನ್ನು ಹಲಾಲ್ ಮಾಡಲಾಗಿದೆ. ನರೇಂದ್ರ ಮೋದಿಯ ಜೊತೆಗೆ ಜಾಫರ್ ಶರೀಫ್ ಇಫ್ತಾರ್ ಕೂಟವನ್ನು ಮಾಡಿದ್ದಾರೆ...’’
ಕಾಸಿ ಬೆಚ್ಚಿ ಬಿದ್ದ. ಅರೆ! ರಮಝಾನ್ ತಿಂಗಳೇ ಬಂದಿಲ್ಲ. ಇಫ್ತಾರ್ ಕೂಟವೇ? ‘‘ಇಫ್ತಾರ್ ಕೂಟ ಮಾಡುವುದು ರಮಝಾನ್‌ನ ಉಪವಾಸದ ಸಂದರ್ಭ ದಲ್ಲಿ ಅಲ್ಲವೆ?’’ ತನ್ನ ಪ್ರಶ್ನೆಯನ್ನು ಮುಂದಿಟ್ಟ.
ವೈಟರ್ ಹಲ್ಲು ಕಿರಿದ. ‘‘ಟಿಕೆಟ್ ಕೊಡದೇ ಕಾಂಗ್ರೆಸ್‌ನೋರು ಜಾಫರ್ ಶರೀಫ್ ಅವರನ್ನು ಉಪವಾಸ ಕೆಡವಿದ್ದಾರೆ ಸಾರ್. ಅದರ ಸಿಟ್ಟಿನಲ್ಲಿ ಅವರು ನರೇಂದ್ರ ಮೋದಿ ಜೊತೆಗೆ ಇಫ್ತಾರ್ ಕೂಟ ಇಟ್ಕೊಂಡಿದ್ದಾರೆ ಸಾರ್. ಟಿಕೆಟ್ ಕೊಡದೇ ಇದ್ದರೆ ನಾನು ಮಕ್ಕಾಕ್ಕೆ ಹೋಗ್ತೇನೆ ಎಂದು ಜಾಫರ್ ಶರೀಫ್ ಅನೌನ್ಸ್ ಮಾಡಿದ್ದರು ಸಾರ್. ಕಾಟ ತಪ್ಪಿತು ಎಂದು ಕಾಂಗ್ರೆಸ್‌ನೋರು ಟಿಕೆಟ್ ಕೊಡಲಿಲ್ಲ. ಈಗ ಹೇಳಿದಂತೆ ಮಕ್ಕಾಕ್ಕೆ ಹೋಗದೆ ಗುಜರಾತ್‌ನಲ್ಲಿ ಮೋದಿ ಜೊತೆಗೆ ಊಟ ಮಾಡ್ತೇನೆ ಎಂದು ಕಾಂಗ್ರೆಸ್‌ನೋರಿಗೆ ಬೆದರಿಕೆ ಹಾಕ್ತಾ ಇದ್ದಾರೆ ಸಾರ್...ನಿಮಗೆ ನರೇಂದ್ರ ಮೋದಿ ತಂಟೆ ಬೇಡ ಸಾರ್. ಅಡ್ವಾಣಿಯವರ ಜೊತೆಗೆ ನೀವು ಊಟ ಮಾಡುವುದಾದರೆ ಫ್ರೀಯಾಗಿ ಮಾಡಬಹುದು...ಆದರೆ ಅವರ ಊಟದ ಬಿಲ್‌ನ್ನು ನೀವು ಪಾವತಿಸಬೇಕಾಗುತ್ತದೆ...’’
ಅಡ್ವಾಣಿಯಾದರೂ ಫ್ರೀಯಾಗಿ ಸಿಕ್ಕಿದರಲ್ಲಾ ಎಂದು ಕಾಸಿ ಸಂತೋಷಗೊಂಡ ‘‘ಹಾಗಾದ್ರೆ ಫ್ರೀಯಾಗಿ ಯಾರ್ಯಾರ ಜೊತೆಗೆ ಊಟ ಮಾಡಬಹುದು ಹೇಳಿ...’’
 ವೈಟರ್ ಪಟ್ಟಿಯನ್ನು ಓದಿ ಹೇಳಿದ ‘‘ದೇವೆಗೌಡರ ಜೊತೆಗೆ ಫ್ರೀಯಾಗಿ ರಾಗಿ ಮುದ್ದೆ ತಿನ್ನಬಹುದು. ವಾಟಾಳ್ ನಾಗರಾಜ್ ಜೊತೆಗೆ ಸೇರಿ ಫ್ರೀಯಾಗಿ ಸೆಗಣಿ ತಿನ್ನಬಹುದು. ಕುಮಾರಸ್ವಾಮಿ ಮಣ್ಣಿನ ಮೊಮ್ಮಗನಾಗಿರುವುದರಿಂದ ಅವರ ಜೊತೆಗೆ ಫ್ರೀಯಾಗಿ ಮಣ್ಣು ತಿನ್ನಬಹುದು...ಮೈಸೂರಿನ ಅಭ್ಯರ್ಥಿ ಪತ್ರಕರ್ತ ಪ್ರತಾಪ ಸಿಂಹನ ಜೊತೆಗೆ ಸೇರಿ ಫ್ರೀಯಾಗಿ ನರೇಂದ್ರ ಮೋದಿಯ ಅಭಿವೃದ್ಧಿಯ ಬೂಟು ನೆಕ್ಕಬಹುದು... ಪುತ್ತೂರಿನ ಸದಾನಂದ ಗೌಡರ ಜೊತೆಗೆ ಕುಳಿತು ಫ್ರೀಯಾಗಿ ಸುಬ್ರಹ್ಮಣ್ಯದಲ್ಲಿ ಎಂಜಲು ಸೇವೆ ಮಾಡಬಹುದು...’’
ಹೀಗೆಲ್ಲ ಫ್ರೀ ಐಟಂಗಳನ್ನು ವೈಟರ್ ಹೇಳು ತ್ತಿದ್ದಂತೆಯೇ ಎಂಜಲು ಕಾಸಿ ಅಲ್ಲಿಂದ ಎದ್ದು ಓಡ ತೊಡಗಿದ. ಅವನಿಗೆ ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆಗೆ ಅಂಬಲಿ ಕುಡಿಯುವ ಮನಸ್ಸಾಗಿತ್ತು.

ಕಾರ್ಟೂನ್-ಪಿ ಮಹಮ್ಮದ್-ಕೃಪೆ-ವಿ.ಕ. 

Sunday, March 2, 2014

ಕೋಪ ಬಂದರೆ ಅರಬೀಸಮುದ್ರವನ್ನೇ ತಿರುಗಿಸುತ್ತೇನೆ ಗೊತ್ತುಂಟಾ?

ಶಿವನು ತಲೆಯ ಮೇಲೆ ಗಂಗೆಯನ್ನು ಕಟ್ಟಿಕೊಂಡಂತೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ತಲೆಯ ಮೇಲೆ ನೇತ್ರಾವತಿ ನದಿಯನ್ನು ಕಟ್ಟಿ, ತೊಡೆಯ ಮೇಲೆ ತನ್ನ ಪುತ್ರ ಹರ್ಷ ಮೊಯ್ಲಿಯನ್ನು ಕುಳ್ಳಿರಿಸಿ ತಪಸ್ಸು ಗೈಯುತಿರುವಾಗ ವಿಶ್ವಾಮಿತ್ರನ ಮುಂದೆ ಮೇನಕೆ ಹಾಜರಾಗುವಂತೆ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿ ಹಾಜರಾದ.
‘‘ಸಾರ್, ನೀವು ನೇತ್ರಾವತಿಯನ್ನು ತಿರುಗಿಸುತ್ತೀ ರಂತೆ ಹೌದಾ?’’ ಕೇಳಿದ.

‘‘ಹೌದ್ರಿ...ನಾನೇ ಮಂಗಳೂರಿಗೆ ಬೇಡಚ ಎಂದ ಮೇಲೆ, ನನ್ನೊಟ್ಟಿಗೆ ನೇತ್ರಾವತಿಯನ್ನೂ ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮೂರು ಸರ್ತಿ ಮಂಗಳೂರಿನಲ್ಲಿ ಓಟಿಗೆ ನಿಂತೆ. ಸೋತೆ. ನಾನೆ ಬೇಡ ವೆಂದ ಮೇಲೆ, ನಾನು ಈ ನೇತ್ರಾವತಿಯನ್ನು ಮಂಗಳೂರಿನವರಿಗೆ ಬಿಡುತ್ತೇನ...ಅದಕ್ಕೇ ಅದನ್ನು ನಾನು ನನ್ನ ನೆತ್ತಿಯ ಮೇಲೆ ಕಟ್ಟಿಕೊಂಡು ತಿರುಗಾಡುತ್ತಿದ್ದೇನೆ...’’

‘‘ಸಾರ್...ಈ ನೇತ್ರಾವತಿಯನ್ನು ಮಂಗಳೂರಿಗೆ ಬಿಟ್ಟು ಬಿಡಬೇಕಾದರೆ ಏನು ಮಾಡಬೇಕು ಸಾರ್...’’ ಎಂಜಲು ಕಾಸಿ ರಾಜಿ ಪಂಚಾತಿಗೆಗೆ ಇಳಿದ. ಕೋಪ ತಾಪದಿಂದ ಇದ್ದ ವೀರಪ್ಪ ಮೊಯ್ಲಿಯವರು ಈಗ ಶಾಂತರಾದರು. ಮೆಲ್ಲಗೆ ಹಸನ್ಮುಖರಾಗಿ ತನ್ನ ಸುಪುತ್ರ ಹರ್ಷಮೊಯ್ಲಿಯ ಕಡೆಗೆ ನೋಡಿದರು. ‘‘ಹೋಗಲಿ. ನೀವು ಹೇಳಿದ್ದೀರಿ ಎಂದು ಇನ್ನೊಂದು ಅವಕಾಶ ಕೊಡುವೆ. ನನ್ನ ಬದಲಿಗೆ ಹರ್ಷ ಮೊಯ್ಲಿಯನ್ನು ಗೆಲ್ಲಿಸಿದರೆ ಈ ನೇತ್ರಾವತಿಯನ್ನು ಮಂಗಳೂರಿಗೇ ಬಿಟ್ಟು ಬಿಡುತ್ತೇನೆ. ಇಲ್ಲವಾದರೆ ನನ್ನ ಲುಂಗಿಗೆ ಬೆಲ್ಟಿನಂತೆ ನೇತ್ರಾವತಿಯನ್ನು ಕಟ್ಟಿಕೊಂಡು ಸೀದಾ ದಿಲ್ಲಿಗೆ ಹೋಗುತ್ತೇನೆ ಅಷ್ಟೇ...’’

‘‘ಸಾರ್...ಹರ್ಷ ಮೊಯ್ಲಿ ಏನು ಸಾಧನೆ ಮಾಡಿದ್ದಾ ರೆಂದು ಅವರನ್ನು ಜನರು ಗೆಲ್ಲಿಸಬೇಕು ಸಾರ್...?’’ ಎಂಜಲು ಕಾಸಿ ಕೇಳಿದ.
‘‘ನನ್ನ ಮಗನಾಗಿ ಹುಟ್ಟಿರುವುದು ಸಣ್ಣ ಸಾಧನೆ ಯೇನ್ರಿ...ಆ ಸಾಧನೆಗಾಗಿ ಮಂಗಳೂರಿನ ಜನರು ಈ ನನ್ನ ಸುಪುತ್ರನನ್ನು ಗೆಲ್ಲಿಸಿ ಎಂಪಿ ಮಾಡಿಸಬೇಕು. ಉಳಿ ದಂತೆ ಅವನನ್ನು ಮಿನಿಸ್ಟರ್ ಮಾಡುವ ಹೊಣೆಯನ್ನು ಬೇಕಾದರೆ ನಾನು ಹೊತ್ತುಕೊಳ್ಳುತ್ತೇನೆ...’’ ಮೊಯ್ಲಿ ಭರವಸೆ ನೀಡಿದರು.
‘‘ಸಾರ್...ಅವರನ್ನು ಮಂಗಳೂರಿನ ಜನರು ಆಯ್ಕೆ ಮಾಡಿದರೆ ನದಿ ತಿರುವು ಯೋಜನೆ ಕೈ ಬಿಡುತ್ತೀರಾ ಸಾರ್..?’’ ಕಾಸಿ ಮತ್ತೊಮ್ಮೆ ಖಚಿತ ಪಡಿಸಲು ಕೇಳಿಕೊಂಡ.
‘‘ಖಂಡಿತಾ ಕೈ ಬಿಡುತ್ತೇವೆ ಕಣ್ರೀ...ಬದಲಿಗೆ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳುತ್ತೇವೆ...’’ ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಅದೆರಡೂ ಒಂದೇ ಅಂತಲ್ವಾ ಸಾರ್...ಹೆಸರು ಬೇರೆ ಬೇರೆ...’’
ಮೊಯ್ಲಿ ಸಿಟ್ಟಾದರು. ‘‘ನೇತ್ರಾವತಿ ಹೊಳೆಯನ್ನೂ ಮುಟ್ಟಬೇಡಿ...ಎತ್ತಿನ ಹೊಳೆಯನ್ನೂ ಮುಟ್ಟಬೇಡಿ ಎಂದರೆ ಹೇಗೆ...ಮಂಗಳೂರಿನವರು ಶಾಂತ ಸ್ವಭಾವದವರು. ಹೊಳೆ ಹರಿದು ಸಮುದ್ರಕ್ಕೆ ಸೇರಿ ವೇಸ್ಟ್ ಆಗ್ಬಾರ್ದು ನೋಡಿ...ಅದಕ್ಕಾಗಿ...’’
‘‘ಸಾರ್...ಈ ನದಿ ತಿರುವಿನ ಮೂಲಕ ನೇತ್ರಾವತಿಯ ಮತಗಳನ್ನೆಲ್ಲ ಚಿಕ್ಕ ಬಳ್ಳಾಪುರ ಕಡೆಗೆ ತಿರುಗಿಸುವ ಉಪಾಯ ಏನಾದರೂ ಉಂಟಾ ಸಾರ್...’’ ಕಾಸಿ ಕೇಳಿದ.
‘‘ನೋಡ್ರಿ ಈ ಯೋಜನೆಯ ಮೂಲಕ ಬಿಡುಗಡೆ ಯಾಗುವ ಹಣವನ್ನು ನಾವು ತಿರುವು ಯೋಜನೆಯ ಮೂಲಕ ತಿರುಗಿಸಿ ಎಲ್ಲ ಶಾಸಕರಿಗೆ, ಎಂಪಿಗಳಿಗೆ ಹಂಚುವುದು ನಮ್ಮ ಗುರಿ. ಆಗ ಎಲ್ಲ ಪ್ರದೇಶದ ಜನ ಪ್ರತಿನಿಧಿಗಳಿಗೂ ನ್ಯಾಯ ಸಿಕ್ಕಿದಂತಾಗುತ್ತದೆ. ಇಲ್ಲದಿ ದ್ದರೆ ಎಲ್ಲ ಕಡಲಿಗೆ ಸೇರಿ ವೇಸ್ಟಾಗುತ್ತದೆ...’’ ವೀರಪ್ಪ ಮೊಯ್ಲಿ ಯೋಜನೆಯ ಉದ್ದೇಶವನ್ನು ವಿವರಿಸಿದರು.
‘‘ಸಾರ್...ನೇತ್ರಾವತಿಯನ್ನು ತಿರುಗಿಸುವ ಭರದಲ್ಲಿ ನಿಮ್ಮ ಮಗ ಹರ್ಷಮೊಯ್ಲಿಯ ಭವಿಷ್ಯವೂ ಅದರ ಜೊತೆಗೆ ಕೊಚ್ಚಿ ಸಮುದ್ರ ಸೇರಿದರೆ...’’ ಕಾಸಿ ಅನುಮಾನದಿಂದ ಕೇಳಿದ.
‘‘ಅಪಶಕುನ ಮಾತನಾಡಬೇಡಿ ಕಾಸಿಯವ್ರೆ... ನಾನು ಅದಕ್ಕೆ ಅಲ್ಲವಾ ನೇತ್ರಾವತಿಯನ್ನು ನೆತ್ತಿಗೆ ಕಟ್ಟಿಕೊಂಡು ತಿರುಗಾಡುವುದು. ಅವನನ್ನು ನಾನು ನೇರವಾಗಿ ನದಿಗೆ ಇಳಿಸುವುದಿಲ್ಲ. ನನ್ನ ಹೆಗಲ ಮೇಲೆ ಕುಳ್ಳಿರಿಸಿ ನಾನೇ ಚುನಾವಣೆಯೆಂಬ ನದಿಗೆ ಇಳಿಯು ತ್ತೇನೆ...’’ ಮೊಯ್ಲಿ ಹೇಳಿದರು.
‘‘ಸಾರ್ ತಂದೆ ಮಗ ಒಟ್ಟಿಗೆ ಕೊಚ್ಚಿಕೊಂಡು ಹೋದರೆ...’’ ಕಾಸಿಯ ಅನುಮಾನ ಮುಗಿಯಲಿಲ್ಲ.
‘‘ಕೊಚ್ಚಿಕೊಂಡು ಹೋಗಲಿಕ್ಕೆ...ಈ ನೇತ್ರಾವತಿ ಯಲ್ಲಿ ನೀರು ಎಷ್ಟುಂಟು? ಬರೇ ಮೊಣಕಾಲಿನವರೆಗೆ ಮಾತ್ರವಲ್ಲವ? ನನ್ನನ್ನು ಮೂರು ಬಾರಿ ಸೋಲಿಸಿದ ಮಂಗಳೂರಿನ ಜನರು ಕುಡಿಯುವುದಕ್ಕೆ ನೀರಿಲ್ಲದೆ ನನ್ನ ಹೆಸರು ಕರೆಯಬೇಕು...ಅಷ್ಟು ಮಾಡದಿದ್ದರೆ ನೋಡಿ...’’ ಎಂದು ತನ್ನ ಹೆಗಲಿನ ಶಾಲನ್ನು ಕೊಡವಿ ಕೊಂಡರು.
‘‘ಆದರೆ ಈ ಬಾರಿ ಜನಾರ್ದನ ಪೂಜಾರಿಯನ್ನು ಗೆದ್ದ ಬಳಿಕ ಬಿಜೆಪಿಯನ್ನು ಎದುರಿಸುವಂತಹ ಸ್ಥಿತಿ ಇದೆ. ಪೂಜಾರಿಯ ಎದುರುಗಡೆ ಹರ್ಷ ಮೊಯ್ಲಿ ಗೆಲ್ಲಬಹುದಾ?’’ ಕಾಸಿ ಕೇಳಿದ.
‘‘ನನ್ನ ಮಗ ಹುಷಾರಿದ್ದಾನೆ. ಅವನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿದ್ದಾನೆ ಗೊತ್ತುಂಟಾ...ನಿಮಗೊಂದು ಕತೆ ಹೇಳ್ತೇನೆ. ಒಮ್ಮೆ ನನ್ನ ಮಗನ ಜೊತೆಗೆ ನಾನು ಹೇಳಿದೆ. ನೀನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿ ಬರಬೇಕು ಅಂತಾ...ಆಗ ಅವನೇನು ಹೇಳಿದ ಗೊತ್ತುಂಟಾ? ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವೆ ಎಂದ...’’ ಎನ್ನುತ್ತಾ ತೊಡೆಯ ಮೇಲಿರುವ ಮಗನ ಮುಖನ್ನು ಮೆಚ್ಚುಗೆಯಿಂದ ನೋಡಿದರು.
‘‘ಸಾರ್...ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವುದು ಆಗುವ ಹೋಗುವ ವಿಷಯವಾ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಅದಕ್ಕೆ ಹೇಳಿದ್ದು. ನನ್ನ ಮಗ ಅಮೆರಿಕದಲ್ಲಿ ಓದಿ ಬಂದಿದ್ದರೂ, ಭಾರತದ ಐಡಿಯಾ ಹೊಂದಿದ್ದಾನೆ. ಅವನು ನನಗೆ ಎರಡು ಸುತ್ತು ಬಂದು ಹೇಳಿದ. ‘ತಂದೆಯೇ...ನಿನಗೆ ಎರಡು ಸುತ್ತು ಬಂದರೆ ಇಡೀ ಮಂಗಳೂರು ಸುತ್ತಿದ ಪುಣ್ಯ ಸಿಗುತ್ತದೆ ಎಂದು ಯಾವುದೋ ಮಹಾಕಾವ್ಯದಲ್ಲಿ ಓದಿದ್ದೇ...’ ಎಂದು. ಹಾಗೆ ಎರಡೇ ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬಂದ...’’
ಕಾಸಿಗೆ ತಲೆ ಗಿರ್ರೆಂದಿತು. ‘‘ಹಾಗಾದರೆ ಇಡೀ ದೇಶವನ್ನು ಸುತ್ತಿ ಬರುವುದು ಹೇಗೆ ಸಾರ್?’’ ಕಾಸಿ ತಲೆ ತುರಿಸುತ್ತಾ ಕೇಳಿದ.
ಮೊಯ್ಲಿ ನಗುತ್ತಾ ಉತ್ತರಿಸಿದರು ‘‘ಅದು ಭಾರೀ ಸುಲಭ. ರಾಹುಲ್‌ಗಾಂಧಿಯನ್ನು ಎರಡು ಸುತ್ತು ಸುತ್ತಿದರೆ ಆಯಿತು...’’
ಕಾಸಿ ಈಗ ಬೆಚ್ಚಿ ಬಿದ್ದ ‘‘ಸಾರ್...ಹಾಗಾದರೆ ಇಡೀ ವಿಶ್ವವನ್ನು ಸುತ್ತುವುದು ಹೇಗೆ ಸಾರ್?’’
‘‘ಅದು ಮತ್ತಷ್ಟು ಸುಲಭ. ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಒಟ್ಟಿಗೆ ನಿಲ್ಲಿಸಿ ಎರಡು ಸುತ್ತು ಸುತ್ತಿದರೆ ಇಡೀ ವಿಶ್ವವನ್ನು ಸುತ್ತಿದ ಪುಣ್ಯ ಸಿಗುತ್ತದೆ ಗೊತ್ತುಂಟಾ... ನನ್ನ ಮಗ ಇಡೀ ವಿಶ್ವವನ್ನು ಈಗಾಗಲೇ ಹಲವು ಬಾರಿ ಸುತ್ತಿ ಬಂದಿದ್ದಾನೆ...’’ ಎನ್ನುತ್ತಾ ಮೀಸೆಯ ಮೇಲೆ ಕೈಯಾಡಿಸಿದರು.
‘‘ಸಾರ್...ಹಾಗಾದ್ರೆ...ಮಂಗಳಗ್ರಹಕ್ಕೆ ಒಂದು ಸುತ್ತು ಬರುವುದು ಹೇಗೆ ಸಾರ್...’’ ಕಾಸಿ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ.
‘‘ಮಂಗಳಗ್ರಹಕ್ಕೆ ಸುತ್ತು ಬರುವುದು ಯಂತಕ್ಕೆ? ನಿನ್ನ ಬೊಜ್ಜ ಮಾಡುವುದಕ್ಕಾ? ನನ್ನ ಮಗನನ್ನು ತಮಾಷೆ ಮಾಡಿದರೆ ಉಂಟಲ್ಲಾ....ನಾನು ಸುಮ್ಮನಿರಲಿಕ್ಕಿಲ್ಲ...ನನ್ನ ಮಗನನ್ನು ಮಂಗಳೂರಿನಲ್ಲಿ ಗೆಲ್ಲಿಸದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ. ನೇತ್ರಾವತಿ ಮಾತ್ರವಲ್ಲ, ಇಡೀ ಅರಬೀ ಸಮುದ್ರವನ್ನೇ ತಿರುಗಿಸುವ ಯೋಜನೆ ಹಾಕಿ ಬಿಡುತ್ತೇನೆ....’’ ಮೊಯ್ಲಿ ಶಪಥ ಮಾಡಿದರು.
‘‘ಅರಬೀ ಸಮುದ್ರವನ್ನು ತಿರುಗಿಸುವ ಬದಲು, ಈ ರಾಜಕಾರಣಿಗಳನ್ನೆಲ್ಲ ಮತದಾರರು ಅರಬೀ ಸಮುದ್ರದ ಕಡೆಗೆ ತಿರುಗಿಸಿದರೆ ಏನು ಮಾಡುತ್ತೀರಿ ಸಾರ್?’’ ಕಾಸಿ ಕೇಳಿದ್ದೇ...ಮೊಯ್ಲಿ ಗ್ಯಾಸ್ ಸಿಲಿಂಡರ್‌ನಂತೆ ಒಮ್ಮೆಲೆ ಸ್ಫೋಟಿಸಿದರು ‘‘ಯಾರಲ್ಲಿ...ಇವನನ್ನು ಹಿಡಿದು ಇವನ ಬಾಯಿಗೆ ನೂರರ ಹತ್ತು ನೋಟನ್ನು ತುರುಕಿ ಕಳುಹಿಸಿ. ಇನ್ನು ಮುಂದೆ ಇವನು ಎಲ್ಲಿಯೂ ನನ್ನ ವಿರುದ್ಧ ಬಾಯಿ ತೆರೆಯಬಾರದು’’
ಕಾಸಿ ರೋಮಾಂಚನಗೊಂಡು ಬಾಯಿ ಅಗಲಿಸಿ ಕೂತ.