Monday, December 2, 2013

‘ಏನೋ... ನಿನ್ನ ಮುಖದಲ್ಲೊಂದು ‘ಉಗ್ರ’ನ ಲಕ್ಷಣ ಇದೆ...?’’

(ಫೆಬ್ರವರಿ 3, 2008ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ ಇದು. ಇಂದಿಗೂ ಇದು ಪ್ರಸ್ತುತ ಅನ್ನಿಸಿದರೆ ಅದು ಪತ್ರಕರ್ತ ಎಂಜಲು ಕಾಸಿಯ ಭಾಗ್ಯ)

ಎಂಜಲು ಕಾಸಿಗೆ ಎನಾದರೂ ಸ್ಕೂಪ್ ವರದಿಯನ್ನು ತಯಾರಿಸಬೇಕೆಂದು ಮನಸಾಯಿತು. ಏನಾದರೂ ಸಿಕ್ಕೀತು ಎಂದು ಲೋಕಲ್ ಪೊಲೀಸ್ ಸ್ಟೇಶನ್ ಕಡೆಗೆ ದಾವಿಸಿದ. ಅಲ್ಲಿ ಕಾನ್ಸ್‌ಟೇಬಲ್ ಉಗ್ರಪ್ಪ ಇದ್ದ. ಎಂಜಲು ಕಾಸಿ ತನಗೆ ಯಾವುದೇ ಮಾಹಿತಿ ಬೇಕೆಂದರೂ ಈ ಉಗ್ರಪ್ಪನನ್ನೇ ಸಂಪರ್ಕಿಸುವುದು. ಅವನ ಸುದ್ದಿ ಮೂಲಗಳೆಲ್ಲಾ ಈ ಉಗ್ರಪ್ಪನೇ ಆಗಿದ್ದ. ಪೊಲೀಸ್ ಠಾಣೆಯಲ್ಲಿ ಹೆಚ್ಚಾಗಿ ಕಸ ಗುಡಿಸುವ ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡುವ ಉಗ್ರಪ್ಪ, ತನ್ನ ಸಾಹೇಬರುಗಳು ಆಡುವ ಮಾತುಗಳನ್ನು ಅಷ್ಟಿಷ್ಟು ಕೇಳಿಸಿ, ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಎಂಜಲು ಕಾಸಿಗೆ ಹೇಳುತ್ತಿದ್ದ. ಕಾಸಿಯ ಪತ್ರಿಕೆ ಬದುಕುತ್ತಿದ್ದುದೇ ಈ ಕಾನ್‌ಸ್ಟೇಬಲ್ ನೀಡುತ್ತಿದ್ದ ಸುದ್ದಿಗಳಿಂದ.
ಕಾಸಿ ಠಾಣೆಗೆ ಭೇಟಿ ನೀಡಿದ. ‘‘ಸಾರ್ ಬಿಸಿಯಾಗಿದ್ದೀರಾ ಸಾರ್’’?
ಉಗ್ರಪ್ಪ ಹೇಳಿದ ‘‘ಹೌದು ಒಂದು ಸ್ವಲ್ಪ ಬಿಸಿಯಾಗಿದ್ದೇನೆ. ಸಾಹೇಬರು ಉಂಡ ಊಟದ ತಟ್ಟೆಗಳೆಲ್ಲ ಹಾಗೆ ಉಳ್ಕೊಂಡಿವೆ. ಅವನ್ನೆಲ್ಲ ತೊಳೆದಿಡೋದಕ್ಕೆ ಹೇಳಿದ್ದಾರೆ. ಹಾಗೆಯೇ ಒಂದು ಸುತ್ತು ಠಾಣೆಯನ್ನು ಗುಡಿಸಿ ಸಾಹೇಬರು ಬರುವ ಮೊದಲು, ಅವರ ಬಟ್ಟೆಗಳನ್ನೆಲ್ಲ ಲಾಂಡ್ರಿಗೆ ಕೊಡಬೇಕು... ಸಾಹೇಬ್ರ ಮನೆಗೆ ತರಕಾರಿ ಕೊಂಡು ಹೋಗಿ ಕೊಡಬೇಕು...’’
ಉಗ್ರಪ್ಪ ಹೀಗೆ ಹೇಳುತ್ತಿರುವಾಗ ಕಾಸಿ ಮಧ್ಯದಲ್ಲೇ ಅದರ ಓಘವನ್ನು ಕತ್ತರಿಸಿ ಕೇಳಿದ. ‘‘ಸಾ...ರ್... ಏನಾದ್ರೂ ಉಂಟಾ ಸಾರ್...’’
ಉಗ್ರಪ್ಪನಿಗೆ ಅರ್ಥವಾಯಿತು. ಕಾಸಿ ಟೇಶನಿಗೆ ಬಂದರೆ ಏನಾದರೂ ಸುದ್ದಿ ಹಿಡಿದುಕೊಂಡೇ ಹೋಗುವುದು ಎನ್ನುವುದು ಆತನಿಗೆ ಗೊತ್ತಿತ್ತು. ‘‘ಒಂದು ಆಕ್ಸಿಡೆಂಟ್ ಉಂಟು?’’ ಎಂದ ಉಗ್ರಪ್ಪ.
ಕಾಸಿ ಆಸೆಯಿಂದ ಕೇಳಿದ ‘‘ಯಾರಾದರೂ ಸತ್ತಿದ್ದಾರಾ ಸಾರ್?’’
ಉಗ್ರಪ್ಪ ಸ್ಟೇಷನ್ನಿನ ನೆಲ ಒರೆಸುತ್ತಾ ಹೇಳಿದ ‘‘ಹಾಗೇನೂ ಇಲ್ಲ. ಒಬ್ಬ ಸೀರಿಯಸ್ ಅಂತೆ...’’
ಕಾಸಿಗೆ ಸಖತ್ ಬೇಜಾರಾಯಿತು ಆದರೂ ಆಸೆ ಬಿಡದೇ ಕೇಳಿದ ‘‘ಅವನು ಸಾಯುವ ಚಾನ್ಸ್ ಉಂಟಾ ಸಾರ್...’’
ಉಗ್ರಪ್ಪ ಹೇಳಿದ ‘‘ಡಾಕ್ಟರೇನಾದ್ರೂ ಮನಸ್ಸು ಮಾಡಿದರೆ ಸಾಯುವ ಚಾನ್ಸ್ ಉಂಟು. ಮತ್ತೆ ಒಬ್ಬ ಪಿಕ್‌ಪಾಕೆಟ್ ಮಾಡ್ದೋನು ಸಿಕ್ಕಿದ್ದಾನೆ...?
ಕಾಸಿಗೆ ಅದು ತೀರ ಸಣ್ಣ ಕೇಸು ಅಂತನ್ನಿಸಿತು. ಯಾವಾಗ ನೋಡಿದ್ರೂ ಪಿಕ್‌ಪಾಕೆಟ್ ಕಳ್ಳರ ಸುದ್ದಿಯನ್ನೇ ತರ್ತೀರಲ್ಲಾರೀ... ಒಂದೇ ಒಂದು ಸರ್ತಿಯಾದರೂ ಉಗ್ರರ, ಭಯೋತ್ಪಾದಕರ ಸುದ್ದಿ ತಂದಿದ್ದೀರಾ...’’ ಎಂದು ಸದಾ ಸಂಪಾದಕರು ಕಾಸಿಗೆ ಛೀಮಾರಿ ಹಾಕುತ್ತಿದ್ದರು.
ಕಾಸಿ ತುಸು ಆಸೆಯಿಂದ ಕೇಳಿದ ‘‘ಪಿಕ್‌ಪಾಕೆಟ್ ಕಳ್ಳ ನೋಡಲು ಹೇಗಿದ್ದಾನೆ? ಗಡ್ಡ ಇಟ್ಟಿದ್ದಾನ?’’
ಉಗ್ರಪ್ಪ ಹೇಳಿದ ‘‘ಇಲ್ಲ... ಆದರೆ ಎರಡು ದಿನ ಪೊಲೀಸ್ ಠಾಣೆಯಲ್ಲೇ ಇದ್ರೆ ಗಡ್ಡ ತನ್ನಷ್ಟಕ್ಕೆ ಬಂದು ಬಿಡುತ್ತೆ ಬಿಡಿ...’’
ಕಾಸಿ ತನ್ನ ಪ್ರಯತ್ನ ಮುಂದುವರಿಸಿದ ‘‘ಹೆಸರು ಏನು. ಅಬ್ದುಲ್ ರಹೀಂ ಅಥವಾ ಅಬ್ದುಲ್ ಆಸೀಫ್ ಎಂದಿದ್ದರೆ ಅವನಿಗೆ ಉಗ್ರರ ಜೊತೆಗೆ ನಂಟಿದೆಯಾ ಎಂದು ವಿಚಾರಣೆ ಮಾಡಬಹುದಲ್ಲ?’’
ಉಗಗ್ರಪ್ಪನೂ ನಿರಾಸೆಯಿಂದ ಹೇಳಿದ ‘‘ಅದೇ ಕಷ್ಟ ಬಂದಿರೋದು. ಈ ಬೋ... ಮಗನ ಹೆಸರು.... ರಮೇಶ ಅಂತ...’’
ಕಾಸಿಗೆ ಭಾರೀ ಬೇಜಾರಾಯಿತು. ಅಷ್ಟರಲ್ಲಿ ಉಗ್ರಪ್ಪ ಹೇಳಿದ ‘‘ಇಲ್ಲೊಬ್ಬ.. ಏನೋ ಮನೆ ಸಮಸ್ಯೆ ಕುರಿತಂತೆ ಕಂಪ್ಲೇಟು ಕೊಡ್ಲಿಕ್ಕೆ ಬಂದಿದ್ದಾನೆ. ಅವನೊಬ್ಬ ಸಾಬಿ ಅಂತ ಕಾಣುತ್ತೆ...’’
ಎಂಜಲು ಕಾಸಿ ಎಂಜಲು ಸುರಿಸುತ್ತಾ ಕೇಳಿದ... ‘‘ಹಾಗಾದರೆ ಮತ್ಯಾಕೆ ತಡ. ಅವನನ್ನೊಮ್ಮೆ ಉಗ್ರನ ಸಂಪರ್ಕ ಇದೆಯೋ ಅಂತ ವಿಚಾರಣೆ ಮಾಡಬಹುದಲ್ಲ...’’
ಉಗ್ರಪ್ಪ ಗಡ್ಡ ತುರಿಸುತ್ತಾ ಹೇಳಿದ ‘‘ಅದನ್ನು ನಾವು ಕೇಳೋಕಾಗಲ್ಲ ಅಲ್ವಾ.... ಅದು ಸಾಹೇಬರು ನಿರ್ಧಾರ ಮಾಡ್ಬೇಕು...’’
ಕಾಸಿ ಕೇಳಿದ ‘‘ಅವನ ಹೆಸರೇನಂತೆ...’’
ಉಗ್ರಪ್ಪ ಕಂಪ್ಲೇಟು ಹಿಡಿದುಕೊಂಡವನ ಕಡೆ ನೋಡಿ ‘‘ಸುವ್ವರ್ ನನ್ ಮಗ್ನೆ... ಏನೋ ನಿನ್ನ ಹೆಸರು?’’ ಕೇಳಿದ.
ಕಂಪ್ಲೇಟು ಹಿಡಿದುಕೊಂಡವನು ಗದಗದ ನಡುಗುತ್ತಾ ಹೇಳಿದ ‘‘ಹುಸೇನ್ ಸಾಬಿ ಸಾರ್.. ನನ್ನ ಮನೆಯಲ್ಲಿ ಕಳ್ಳತನ ಆಗಿದೆ... ಅದರ ಬಗ್ಗೆ ಕಂಪ್ಲೇಟು ಕೊಡ್ಬೇಕೂಂತ ಬಂದೆ ಸಾರ್...’’
ಕಾಸಿ ಹೇಳಿದ ‘‘ನನಗ್ಯಾಕೋ ಅವನನ್ನು ನೋಡಿದಾಗ ಉಗ್ರರ ಸಂಪರ್ಕ ಇದ್ದ ಹಾಗೆ ಕಾಣುತ್ತಪ್ಪ?’’
ಉಗ್ರಪ್ಪ ಹುಸೇನ್ ಸಾಬಿಯತ್ತ ದುರುಗುಟ್ಟಿ ನೋಡಿ ಕೇಳಿದ ‘‘ಏನೋ.. ಮುಖದಲ್ಲಿ ಒಂದು ಉಗ್ರನ ಲಕ್ಷಣ ಇದೆ. ಭಯೋತ್ಪಾದನೆ ಕೆಲಸ ಮಾಡುತ್ತಿದ್ದೀಯೇನು...?’’
ಹುಸೇನ್ ಸಾಬಿ ಕಕ್ಕಾಬಿಕ್ಕಿಯಾದ ‘‘ಇಲ್ಲ ಸಾರ್... ಕೂಲಿ ಕೆಲಸ ಮಾಡುತ್ತಿದ್ದೇನೆ... ಮೀನು ಕೂಡಾ ಮಾರ್ತೀನಿ...’’
ಉಗ್ರಪ್ಪ ಬಿಡಲಿಲ್ಲ ‘‘ಮನೆಯ ಆಯುಧಗಳುಂಟೋ...’’
ಹುಸೇನ್ ಸಾಬಿ ತಲೆಯಾಡಿಸಿದ ‘‘ಉಂಟು ಸಾರ್...’’
ಕಾಸಿ ರೋಮಾಂಚನಗೊಂಡ. ಶಂಕಿತ ಉಗ್ರನ ಸೆರೆ.. ಆಯುಧಗಳು ವಶ ಎಂಬ ತಲೆಬರಹ ಕೊಟ್ಟರೆ ಹೇಗೆ ಎಂದು ಯೋಚಿಸತೊಡಗಿದ.
ಉಗ್ರಪ್ಪ ಸಾಬಿಯ ಕೆನ್ನೆಗೊಂದು ಬಾರಿಸಿ ಕೇಳಿದ ‘‘ಏನೆಲ್ಲ ಆಯುಧ ಮಡ್ಗಿದ್ದೀಯ...’’
ಸಾಬಿ ಕಂಗಾಲಾಗಿ ಅಳುತ್ತಾ ಹೇಳಿದ ‘‘ಒಂದು ಪಿಕ್ಕಾಸು, ಹಾರೆ, ಎರಡು ಕುಡುಗೋಲು ಇದೆ ಸಾರ್...’’
 ಉಗ್ರಪ್ಪ ಇನ್ನೊಂದು ಕೆನ್ನೆಗೆ ಬಾರಿಸಿದ ‘‘ಎ.ಕೆ.47 ಪಿಸ್ತೂಲ್ ಎಲ್ಲಿ ಬಚ್ಚಿಟ್ಟಿದ್ದೀಯ?’’ ಸಾಬಿಗೆ ತಲೆಸುತ್ತು ಬಂದಂತಾಯಿತು. ‘‘ಸಾರ್.. ಕೂಲಿ ಕೆಲಸ ಮಾಡೋಕ್ಕೆ ಪಿಸ್ತೂಲ್ ಯಾಕೆ ಸಾರ್?’’ ಕೇಳಿದ.
ಎಂಜಲು ಕಾಸಿ ನಡೆದ ಸಂಭಾಷಣೆಯನ್ನೆಲ್ಲ ನೋಟ್ ಮಾಡಿದ್ದೇ ‘ಸ್ಕೂಪ್’ ಸಿಕ್ಕಿತು ಎಂದು ಕಚೇರಿಯೆಡೆಗೆ ಓಡಿದ.
                ***
ಮರುದಿನ ಪತ್ರಿಕೆಗಳಲ್ಲಿ ಭಾರೀ ಸುದ್ದಿ ಪ್ರಕಟವಾಯಿತು. ‘‘ಶಂಕಿತ ಉಗ್ರನ ಬಂಧನ. ಮುಂದುವರಿದ ವಿಚಾರಣೆ: ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಆತನಿಗೆ ಲಷ್ಕರೆ ತೊಯ್ಯಬಾ ಜೊತೆ ಸಂಬಂಧ ಇದೆಯೆ ಎಂದು ಪ್ರಶ್ನಿಸಲಾಗುತ್ತಿದೆ. ‘‘ಕಾಸಿಯ ಪತ್ರಿಕೆ ಈ ರೀತಿ ಬರೆದರೆ ಇನ್ನೊಂದು ಪತ್ರಿಕೆಯಲ್ಲಿ ಇನ್ನೊಂದು ಪ್ರಕಟವಾಯಿತು. ‘‘ಮಾರಕ ಆಯುಧಗಳಿವೆಯೆಂದು ಒಪ್ಪಿಕೊಂಡ ಶಂಕಿತ ಉಗ್ರ’’ ‘‘ವಲ್ಡ್ ಟ್ರೇಡ್ ಸೆಂಟರ್‌ಗೂ ಬಂಧಿತ ಉಗ್ರನಿಗೂ ಸಂಬಂಧ ಇದೆಯೇ? ಅಮೆರಿಕದ ಪೊಲೀಸರು ಭಾರತಕ್ಕೆ’’
‘‘ಬಂಧಿತನ ಬಳಿ ಎ.ಕೆ.47?’’ ‘‘ಪೊಲೀಸ್ ಪೇದೆಯ ಚಾಕಚಕ್ಯತೆಯಿಂದ ಸಿಕ್ಕಿ ಬಿದ್ದ ಉಗ್ರ’’ ಹೀಗೆ ಬೇರೆ ಬೇರೆ ತಲೆಬರಹಗಳು ಪತ್ರಿಕೆಗಳಲ್ಲಿ ರಾರಾಜಿಸತೊಡಗಿದವು. ಅಂದು ಬೆಳಗ್ಗೆ ಪತ್ರಿಕೆ ನೋಡಿದ್ದೇ ಎಸ್‌ಐ ಕೂಸಪ್ಪ ಬೆಚ್ಚಿ ಬಿದ್ದ. ನನ್ನದೇ ಠಾಣೆಯಲ್ಲಿ ಉಗ್ರನ ಬಂಧನವೇ? ನಾನ್ಯಾರನ್ನೂ ಬಂಧಿಸಿಲ್ಲವಲ್ಲ? ಎಂದೆಲ್ಲ ಯೋಚಿಸುತ್ತಿರುವಾಗ ಐಜಿಪಿ ಫೋನ್ ಬಂತು ‘‘ಏನ್ರಿ? ಕೂಸಪ್ಪ ನನಗೆ ಗೊತ್ತಿಲ್ಲದೆ ಉಗ್ರನನ್ನು ಬಂಧಿಸಿದ್ದೀರಲ್ರೀ... ನನಗೊಂದು ಮಾಹಿತಿ ನೀಡದೆ ನೇರ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದೀರಲ್ಲ... ನೀವೊಬ್ಬರೇ ಬಹುಮಾನ ಕಿತ್ಕೋಬೇಕು ಅನ್ನೋ ಉದ್ದೇಶಾನಾ...’’ ಇತ್ಯಾದಿಗಳು ಕೇಳುತ್ತಿದ್ದ ಹಾಗೆಯೇ ಕೂಸಪ್ಪ ಠಾಣೆಗೆ ಓಡತೊಡಗಿದ.
ಠಾಣೆಯಲ್ಲಿ ಪೇದೆ ಉಗ್ರಪ್ಪ ನೆಲೆ ಒರೆಸುತ್ತಿದ್ದ ಕೂಸಪ್ಪ ಬಂದವನೇ ಆತಂಕದಿಂದ ‘‘ಏನ್ರೀ... ಉಗ್ರಪ್ಪ ಯಾವನೋ ಉಗ್ರನನ್ನು ಹಿಡಿದಿದ್ದೀರಂತಲ್ರೀ...?’’ ಕೇಳಿದ.
ಉಗ್ರಪ್ಪ ಸೆಲ್ಯೂಟ್ ಹೊಡೆದು ಹೇಳಿದ ‘‘ಹಂಗೇನು ಇಲ್ಲ ಸಾರ್... ಈ ಹುಸೇನ್ ಸಾಬಿ ಅದೇನೋ ಕಂಪ್ಲೇಟ್ ಕೊಡೋಕೆ ಬಂದಿದ್ದ. ಅವನಲ್ಲಿ ಅದೇನೋ ಕೇಳಿದೆ ಅಷ್ಟೆ. ಓ ಅಲ್ಲಿ ಕುಂತಿದ್ದಾನೆ....’’
ಕೂಸಪ್ಪ ಅವನನ್ನು ನೋಡಿದ್ದೇ ಬೆಚ್ಚಿ ಬಿದ್ದ ‘‘ಅರೇ ಇದು... ನಮ್ಮ ಮೀನು ಮಾರೋ ಹುಸೇನ್ ಸಾಬಿ ಅಲ್ವಾ? ಪೇಪರ್ನಲ್ಲಿ ಎಲ್ಲ ಬಂದ್ಬಿಟ್ಟಿದೆ. ಹೊರಗಡೆ ಟಿ.ವಿ., ಪತ್ರಿಕೆಯೋರೆಲ್ಲ ಕಾಯ್ತಿದ್ದಾರೆ... ಇದೇನು ಮಾಡಿ ಬಿಟ್ಟೆಯೋ ಉಗ್ರಪ್ಪ....’’ ಕೂಸಪ್ಪ ತಲೆಗೆ ಕೈಹೊತ್ತು ಕೂತ.
ಉಗ್ರಪ್ಪ ಒಂದು ಸಲಹೆ ಕೊಟ್ಟ ‘‘ಸಾರ್... ಹೇಗೂ ಪತ್ರಿಕೆಯೋರು, ಟಿವಿಯೋರು ಮುತ್ತಿಗೆ ಹಾಕಿದ್ದಾರೆ. ಅವರಿಗ್ಯಾಕೆ ಬೇಜಾರು ಮಾಡೋದು. ಹುಸೇನ್ ಸಾಬಿಯನ್ನು ಒಳಗೆ ಕರ್ಕೊಂಡು ಹೋಗಿ ಒಮ್ಮೆ ರಾಟೆಗ್ಹಾಕಿ ಬಿಡೋಣ... ಎಲ್ಲ ಒಪ್ಕೋತ್ತಾನೆ...’’
ಕೂಸಪ್ಪ ತಲೆ ಆಡಿಸಿದ ‘‘ಸರಿ ಹಾಗೆ ಮಾಡು... ಪತ್ರಕರ್ತರನ್ನು ನಾನು ನೋಡ್ಕೋತಿನಿ...’’
ಆರ್ಡರ್ ಸಿಕ್ಕಿದ್ದೆ ಉಗ್ರಪ್ಪ ಸಾಬಿ ಮೇಲೆ ಬಿದ್ದ ‘‘ಬೋ... ಮಗನೆ, ಉಗ್ರ ಚಟುವಟಿಕೆ ಮಾಡ್ತೀಯ... ?’’ ಎಂದು ಧರಧರನೆ ಒಳಗೆ ಎಳೆದುಕೊಂಡು ಹೋದ.
ಸ್ವಲ್ಪ ಹೊತ್ತಿನಲ್ಲೇ ಹುಸೇನ್ ಸಾಬಿ ವಲ್ಡ್‌ಸೆಂಟರ್ ಸ್ಫೋಟಿಸಿದ್ದು, ಅಬ್ರಾಹಾಂ ಲಿಂಕನ್‌ನನ್ನು ಕೊಂದಿದ್ದು, ಇಂದಿರಾಗಾಂಧಿಯನ್ನು ಕೊಂದಿದ್ದು, ಮಹಾತ್ಮಾಗಾಂಧಿಯನ್ನು ಕೊಂದಿದ್ದು, ಮೆಕ್ಕಾ ಮಸ್ಜಿದ್‌ಗೆ ಬಾಂಬಿಟ್ಟದ್ದು ಎಲ್ಲವನ್ನು ಒಪ್ಪಿಕೊಂಡು ಬಿಟ್ಟ.
(ಫೆಬ್ರವರಿ 3, 2008, ರವಿವಾರ)

No comments:

Post a Comment