Saturday, December 7, 2013

ನರಭಕ್ಷಕ ಹುಲಿಗೆ ಮುಂಜಿ ಆಗಿದೆಯಾ?

 ಇದು ಡಿಸೆಂಬರ್ 8, 2013 ರ ಸಂಚಿಕೆಯ ಬುಡಬುಡಿಕೆ. ನಾಲ್ಕು ಜನರನ್ನು ಕೊಂದ ನರಭಕ್ಷಕ ಹುಲಿಯನ್ನು ಎರಡು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಹಿಡಿದರು. ಆ ಹುಲಿಯ ಹಿನ್ನೆಲೆಯನ್ನು ಪತ್ರಕರ್ತ ಎಂಜಲು ಕಾಸಿ ಸಂಶೋಧಿಸಿ ವರದಿ ನೀಡಿದ್ದಾನೆ

ನಾಲ್ವರನ್ನು ತಿಂದು ಮುಗಿಸಿದ ನರಭಕ್ಷಕ ಹುಲಿಯನ್ನು ಬಂಡೀಪುರದ ಅರಣ್ಯದಂಚಿನಲ್ಲಿ ಹಿಡಿದದ್ದೇ ಪತ್ರಕರ್ತರು ಚುರುಕಾದರು. ತಕ್ಷಣ ಅವರು ಗೃಹ ಸಚಿವರನ್ನು ಸುತ್ತುವರಿದು, ಪ್ರಶ್ನೆಗಳಿಂದ ಫೈರ್ ಮಾಡತೊಡಗಿದರು. ‘‘ಸಾರ್...ಹುಲಿ ಯಾವ ಧರ್ಮಕ್ಕೆ ಸೇರಿದ್ದು ಸಾರ್? ಅದು ಮುಸ್ಲಿಮ್ ಹುಲಿ ಎನ್ನುವುದನ್ನು ಗುಪ್ತಚರ ಇಲಾಖೆಗಳು ಈಗಾಗಲೇ ಪತ್ರಿಕೆಗಳಿಗೆ ತಿಳಿಸಿವೆ. ಆ ಹುಲಿಗೆ ಇಂಡಿಯನ್ ಮುಜಾಹಿದೀನ್ ಜೊತೆಗೆ ಸಂಬಂಧ ಇದೆಯಂತೆ. ಹೌದಾ ಸಾರ್?’’
ಪತ್ರಕರ್ತರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಕನ್ನಡದಲ್ಲಿ ಉತ್ತರಿಸಲಾಗದೆ ಗೃಹ ಸಚಿವ ಜಾರ್ಜ್ ಅವರು ಬೆವರೊರೆಸ ತೊಡಗಿದರು. ‘‘ನೋಡಿ...ಈಗಷ್ಟೇ ಹುಲಿಯನ್ನು ಬಂಧಿಸಲಾಗಿದೆ. ಅದರ ಹೊಟ್ಟೆಯ ಒಳಗೆ ಮನುಷ್ಯನ ತಲೆಯೇನಾದರೂ ಪತ್ತೆಯಾದರೆ ಅದು ಉಗ್ರಗಾಮಿ ಹುಲಿ ಎನ್ನುವುದು ಗೊತ್ತಾಗಿ ಬಿಡುತ್ತದೆ. ಅದಕ್ಕೆ ಯಾರ್ಯಾರೋ ಜೊತೆಗೆ ಸಂಪರ್ಕ ಇದೆ ಎನ್ನುವುದು ಇನ್ನೂ ವಿಚಾರಣೆಯಿಂದಷ್ಟೇ ತಿಳಿಯಬೇಕು...’’
‘‘ಸಾರ್...ಹುಲೀದು ಮುಂಜಿ ಆಗಿದೆಯಾ ಸಾರ್...’’ ಒಂದು ವೇಳೆ ಮುಂಜಿ ಆಗಿದ್ದರೆ ಅದು ಮುಸ್ಲಿಮ್ ಹುಲಿ ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ ಎನ್ನುವುದು ಪತ್ರಕರ್ತರ ಲೆಕ್ಕಾಚಾರ. ‘‘ಅದನ್ನೆಲ್ಲ ಈಗಲೇ ಹೇಳಲಿಕ್ಕೆ ಬರುವುದಿಲ್ಲ. ಒಟ್ಟಿನಲ್ಲಿ ಅದರ ಅಂಗಾಂಗಗಳ ತಪಾಸಣೆ ನಡೆಯುತ್ತಿದೆ. ವೈದ್ಯರು ಹೇಳಿದ ಬಳಿಕವಷ್ಟೇ ಏನನ್ನಾದರೂ ನಿರ್ಧರಿಸಬಹುದು’’
‘‘ಸಾರ್, ಮಂಗಳೂರಿನಲ್ಲಿ ಬಂಧನಕ್ಕೊಳಗಾದ ಆಯಿಷಾಳಿಗೂ ಈ ಹುಲಿಗೂ ನಂಟುಂಟಂತೆ ಹೌದಾ ಸಾರ್...ಆಯಿಷಾಳ ಅಕೌಂಟ್‌ನಿಂದ ಪಾಕಿಸ್ತಾನದ ಮೂಲಕಈ ಹುಲಿಗೆ ಹಣ ಸಂದಾಯವಾಗಿದೆಯಂತೆ ಹೌದಾ ಸಾರ್?’’
ಪತ್ರಕರ್ತರು ಹೇಳಿದ ಮೇಲೆ ಇದ್ದಿರಲೂ ಬಹುದು ಅನ್ನಿಸಿತು ಗೃಹ ಸಚಿವರಿಗೆ. ‘‘ಇನ್ನೂ ಅದರ ವಿವರಗಳು ಸರಿಯಾಗಿ ಗೊತ್ತಿಲ್ಲ. ಹುಲಿಯ ಬ್ಯಾಂಕ್ ಅಕೌಂಟ್‌ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರ ಆಧಾರದಲ್ಲಿ ಅದಕ್ಕೆ ಯಾರ್ಯಾರ ಜೊತೆಗೆ ನಂಟಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ...’’
‘‘ಸಾರ್, ಪಾಟ್ನಾದಲ್ಲಿ ಮೋದಿ ಸಮಾವೇಶದ ಸಂದರ್ಭದಲ್ಲಿ ನಡೆದ ಸ್ಫೋಟಕ್ಕೂ ಈ ಹುಲಿಗೂ ಸಂಬಂಧ ಇರುವ ಕುರಿತಂತೆ ಗುಪ್ತ ಚರ ಇಲಾಖೆ ನಮಗೆ ತಿಳಿಸಿದೆ. ಇದರ ಬಗ್ಗೆ ಏನನ್ನು ಹೇಳುತ್ತೀರಿ...’’ ಪತ್ರಕರ್ತರು ಮತ್ತೆ ತಮ್ಮ ಸಂಶೋಧನೆಗಳನ್ನು ಗೃಹ ಸಚಿವರ ಮುಂದಿಟ್ಟರು.
ಜಾರ್ಜ್ ಮತ್ತೆ ಕಂಗಾಲಾಗಿ ಬಿಟ್ಟರು. ಏನಾದರೂ ಹೇಳಲೇ ಬೇಕು. ‘‘ನೋಡಿ, ಪಾಟ್ನಾದಲ್ಲಿ ಕೆಲವೆಡೆ ಈ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಆದುದರಿಂದ ಇದೇ ಹುಲಿ ಅಲ್ಲಿ ಸ್ಫೋಟ ನಡೆಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ...’’
***
ಮರುದಿನ ವಿವಿಧ ಕನ್ನಡದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಲೆಬರಹಗಳನ್ನು ಕೆಳಗಿನಂತೆ ನೀಡಲಾಗಿದೆ.
1. ನರಭಕ್ಷಕ ಹುಲಿಯ ಬಂಧನ. ಇಂಡಿಯನ್ ಮುಜಾಹಿದ್ ಜೊತೆಗೆ ಸಂಬಂಧ ಪತ್ತೆ.
2. ಉಗ್ರ ಆಯಿಶಾ ಬಂಧನಕ್ಕೆ ನರಭಕ್ಷಕ ಹುಲಿಯಿಂದ ಸೇಡು: ವಿಚಾರಣೆಯಿಂದ ಬಯಲು
3. ನರಭಕ್ಷಕ ಹುಲಿಗೆ ಪಾಕಿಸ್ತಾನದ ಐಎಸ್‌ಐ ನಂಟು-ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಹುಲಿ
4. ನರಭಕ್ಷಕ ಹುಲಿಯ ಬ್ಯಾಂಕ್ ಅಕೌಂಟಿಗೆ ಉಗ್ರ ಆಯಿಷಾಳಿಂದ ಹಣ ವಿತರಣೆ
5. ಪಾಟ್ನಾ ಸ್ಫೋಟ: ಶಂಕಿತ ನರಭಕ್ಷಕ ಹುಲಿಯ ಬಂಧನ
6. ನರಭಕ್ಷಕ ಲಷ್ಕರ್ ತಯ್ಯಬಾ ಉಗ್ರ ಹುಲಿಯ ಬಂಧನ: ಪಾಟ್ನಾ ಪೊಲೀಸರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ
7. ಹೆಡ್ಲೀ ಜೊತೆಗೆ ಬಂಧಿತ ಹುಲಿಗೆ ಸಂಬಂಧ: ವಿಚಾರಣೆಯಲ್ಲಿ ಬಯಲು
8. ಪಶ್ಚಿಮ ಘಟ್ಟದ ನಕ್ಸಲೀಯರೊಂದಿಗೂ ಹುಲಿಗೆ ನಂಟು: ತನಿಖೆಯಿಂದ ಬಹಿರಂಗ
9.ಹುಲಿಯ ಪರವಾಗಿ ಮಾನವಹಕ್ಕು ಹೋರಾಟಗಾರರ ಬೆಂಬಲ: ಬಿಜೆಪಿ ಖಂಡನೆ
10. ಇಸ್ಲಾಂ ಶಾಂತಿಯ ಧರ್ಮ. ಉಗ್ರವಾದಕ್ಕೆ ಇಲ್ಲಿ ಅವಕಾಶವಿಲ್ಲ: ಮುಸ್ಲಿಮ್ ನಾಯಕರ ಹೇಳಿಕೆ
11.ಹುಲಿ ಒಂದು ವೇಳೆ ಮುಸ್ಲಿಮ್ ಆಗಿದ್ದರೆ ಅದಕ್ಕೆ ಮರಣದಂಡನೆಯಾಗಲಿ: ಧಾರ್ಮಿಕ ಮುಖಂಡರ ಸಲಹೆ
12: ಹುಲಿಗೂ ಉಗ್ರರಿಗೂ ಸಂಬಂಧವಿಲ್ಲ: ಮುಸ್ಲಿಂ ಸಂಘಟನೆಯ ಸಮರ್ಥನೆ
***
ಹುಲಿಯನ್ನು ಬಂಧಿಸಿ ಮೈಸೂರು ಮೃಗಾಲಯಕ್ಕೆ ಸೇರಿಸಿದ್ದು, ಅಲ್ಲಿ ಹುಲಿಗೆ ‘ಶಿವ’ ಎಂದು ನಾಮಕರಣ ಮಾಡಿದ್ದು ಬಿಜೆಪಿ ಮುಖಂಡ ಈಶ್ವರಪ್ಪ ಅವರಿಗೆ ತಿಳಿದದ್ದೇ ವ್ಯಗ್ರರಾದರು. ಉಗ್ರಗಾಮಿಗಳೊಂದಿಗೆ ಸಂಬಂಧವಿರುವ ಹುಲಿಗೆ ‘ಶಿವ’ ಎಂದು ಹೆಸರಿಡುವುದೆ? ತಕ್ಷಣ ಪತ್ರಿಕಾಗೋಷ್ಠಿ ಕರೆದರು. ಪತ್ರಕರ್ತ ಮಾಡಿದ ಆ ವರದಿಯನ್ನು ಯಥಾವತ್ತಾಗಿ ಇಲ್ಲಿ ದಾಖಲಿಸಲಾಗಿದೆ.
‘‘ಹುಲಿಗೆ ಶಿವ ಎಂದು ಹೆಸರಿಟ್ಟಿರುವುದನ್ನು ನಾನು ಖಂಡಿಸುತ್ತೇನೆ. ನನ್ನ ಹೆಸರು ಈಶ್ವರಪ್ಪ. ನನ್ನ ಹೆಸರೂ, ಶಿವ ಹೆಸರಿಗೂ ಒಂದೇ ಅರ್ಥ. ಆದುದರಿಂದ ಆ ಉಗ್ರ ನರಭಕ್ಷಕ ಹುಲಿಗೆ ನನ್ನ ಹೆಸರಿಟ್ಟು ನನಗೆ ಅವಮಾನಿಸಲಾಗಿದೆ. ಇದರಲ್ಲಿ ನಿಸ್ಸಂಶಯವಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯರ ಕೈವಾಡವಿದೆ. ಧೈರ್ಯವಿದ್ದರೆ ಆ ಹುಲಿಗೆ ಯಡಿಯೂರಪ್ಪ ಅಥವಾ ಸಿದ್ದರಾಮಯ್ಯರ ಹೆಸರು ಇಡಲಿ ಎಂದು ಬಿಜೆಪಿಯ ಮುಖಂಡ ಈಶ್ವರ ಉಗ್ರವಾಗಿ ಶಿವತಾಂಡವವಾಡಿದ್ದಾರೆ.
ಹುಲಿ ಸಂಪೂರ್ಣ ಮುಸ್ಲಿಮನನ್ನೇ ಹೋಲುತ್ತಿದ್ದು, ಶಿವಮೊಗ್ಗ, ದಕ್ಷಿಣಕನ್ನಡಾದ್ಯಂತ ಕಾಣೆಯಾಗುತ್ತಿರುವ ಹಿಂದೂ ತರುಣಿಯರ ನಾಪತ್ತೆ ಪ್ರಕರಣದಲ್ಲಿ ಈ ಹುಲಿಗೆ ನೇರ ಸಂಬಂಧವಿದೆ. ‘ಲವ್ ಜಿಹಾದ್’ಗೆ ಈ ಹುಲಿ ಸಹಾಯ ಮಾಡುತ್ತಿತ್ತು’’ ಎಂದು ಈಶ್ವರ ಆರೋಪಿಸಿದ್ದು, ‘‘ತಕ್ಷಣ ಈ ಹುಲಿ ಅಪಹರಿಸಿದ ತರುಣಿಯರ ಕುರಿತಂತೆ ವಿಚಾರಣೆ ನಡೆಯಬೇಕು. ಎಷ್ಟು ತರುಣಿಯರನ್ನು ತಿಂದಿದೆ ಮತ್ತು ಎಷ್ಟು ತರುಣಿಯರನ್ನು ಮತಾಂತರಗೊಳಿಸಿದೆ ಎನ್ನುವುದರ ತನಿಖೆಯನ್ನು ನಡೆಸಬೇಕು’’ ಈಶ್ವರಪ್ಪ ಒತ್ತಾಯಿಸಿದ್ದಾರೆ.
‘‘ಹುಲಿಗೆ ಕಾಂಗ್ರೆಸ್ ಸರಕಾರ ದುರುದ್ದೇಶ ಪೂರ್ವಕವಾಗಿ ಶಿವ ಎಂಬ ಹೆಸರನ್ನು ಇಟ್ಟಿದೆ. ಇದು ನಿಜಕ್ಕೂ ಅವಮಾನಕಾರಿಯಾಗಿದೆ. ನಮ್ಮ ಧರ್ಮವನ್ನು ಹೀಯಾಲಿಸುವ ಉದ್ದೇಶವನ್ನು ಹೊಂದಿದೆ. ಆದುದರಿಂದ, ತಕ್ಷಣ ಈ ಹೆಸರನ್ನು ಬದಲಿಸಿ, ಅದಕ್ಕೆ ಉಸಾಮ ಬಿನ್ ಲಾದೆನ್ ಅಥವಾ ದಾವೂದ್ ಇಬ್ರಾಹಿಂ ಎಂಬ ಹೆಸರಿಡಬೇಕು’’ ಎಂದು ಅವರು ಆಗ್ರಹಿಸಿದರು.
‘‘ಈಗಾಗಲೇ ಹುಲಿ ಅಧಿಕೃತವಾಗಿ ನಾಲ್ವರನ್ನು ತಿಂದಿದೆ. ಆ ನಾಲ್ವರೂ ನರೇಂದ್ರ ಉತ್ಕಟ ಅಭಿಮಾನಿಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದ್ದರು. ಈ ಕಾರಣದಿಂದ ಅವರ ಮೇಲೆ ದಾಳಿ ನಡೆಸಿ ಹುಲಿ ತಿಂದು ಹಾಕಿದೆ. ಇದು ಖಂಡನೀಯವಾಗಿದೆ. ಕೇಂದ್ರ ಸರಕಾರ ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಇದರ ಹಿಂದೆ ಇದ್ದಾರೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬಾರದು ಎಂಬ ಉದ್ದೇಶದಿಂದ ಮೋದಿ ಅಭಿಮಾನಿಗಳ ಮೇಲೆ ಹುಲಿಯನ್ನು ಛೂ ಬಿಡಲಾಗಿದೆ. ಹುಲಿಗೂ ಇಟಲಿಗೂ ಇರುವ ಸಂಬಂಧವನ್ನು ತಕ್ಷಣ ತನಿಖೆ ಮಾಡಬೇಕು’’ ಎಂದು ಈಶ್ವರಪ್ಪ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪರಲ್ಲದೆ ಇನ್ನಿತರ ನರಿ,ನಾಯಿ, ತೋಳಗಳು ಉಪಸ್ಥಿತರಿದ್ದರು.

(ಡಿಸೆಂಬರ್ 8, 2013)

No comments:

Post a Comment