Tuesday, December 24, 2013

ಮಕ್ಕಳು ಶಾಲೆಯಲ್ಲಿ ಕುಡಿದು ತೂರಾಡಿದರೆ?

 2010ರಲ್ಲಿ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಜೊತೆ ಸೇರಿ ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಖುಷಿಯಿಂದ ತೂರಾಡುತ್ತಾ ಪತ್ರಕರ್ತ ಎಂಜಲು ಕಾಸಿ ಮಾಡಿದ ಮಲ್ಯರ ಸಂದರ್ಶನವನ್ನು ಯಥಾವತ್ ನೀಡಲಾಗಿದೆ. ಜೂನ್20, 2010ರ ವಾರ್ತಾಭಾರತಿ ಪತ್ರಿಕೆಯ ಸಂಚಿಕೆಯಲ್ಲಿ ಇದು ಪ್ರಕಟವಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ವಿಜಯಮಲ್ಯ ಗೆದ್ದ ಸುದ್ದಿ ಕೇಳಿದ್ದೆ ಪತ್ರಕರ್ತ ಎಂಜಲು ಕಾಸಿ ಖುಷಿಯಿಂದ ತೂರಾಡತೊಡಗಿದ. ಕೊನೆಗೂ ನಮ್ಮ ನಾಯಕರು ‘ಪಕ್ಷ ಬೇರೆಯಾದರೇನು, ನಾವು ಕುಡಿಯುವ ಬಿಯರ್‌ನ ಬಣ್ಣ ಒಂದೇ ಅಲ್ಲವೇ ಎನ್ನುವ ಮಲ್ಯಾಧಾರಿತ ವೌಲ್ಯಗಳಿಗೆ ಶರಣಾದುದನ್ನು ಕಂಡು ಕಾಸಿ ಭಾವೋದ್ವೇಗಗೊಂಡ. ನೇರವಾಗಿ ವಿಜಯ ಮಲ್ಯ ಅವರ ನಿವಾಸದ ಬಾಗಿಲು ತಟ್ಟಿದರೆ, ಅಲ್ಲಿ ಹತ್ತು ಹಲವು ಗೋಪಿಕೆಯರ ನಡುವೆ ಅವರು ಬೆಳಗ್ಗೆ ಬೆಳಗ್ಗೆಯೇ ದೇಶಸೇವೆ ಮಾಡುತ್ತಿದ್ದರು.
 ಪತ್ರಕರ್ತ ಕಾಸಿಯನ್ನು ಕಂಡದ್ದೇ ‘‘ಬನ್ನಿ ಪತ್ರಕರ್ತರೇ ಬನ್ನಿ. ನಮ್ಮ ದೇಶ ಸೇವೆಗೆ ಕೈ ಜೋಡಿಸಿ’’ ಎಂದು ಕರೆದರು.
ಕಾಸಿ ಸಂಕೋಚಗೊಂಡ ಇಷ್ಟು ಬೆಳಗ್ಗೆ ಬೆಳಗ್ಗೆ ದೇಶಸೇವೆ ಮಾಡುವುದು ಪತ್ರಕರ್ತರಿಗೆ ಒಗ್ಗುವುದಿಲ್ಲ. ಸಾಧಾರಣವಾಗಿ ಈ ತರಹದ ದೇಶಸೇವೆಯನ್ನು ಪತ್ರಕರ್ತರು ಮಾಡುವುದು ಸಂಜೆಯ ಬಳಿಕ.
ಕಾಸಿ ಸಂಕೋಚದಿಂದ ನುಲಿಯುತ್ತಿರುವುದನ್ನು ಕಂಡ ಮಲ್ಯರು ‘‘ಸಂಕೋಚ ಬೇಡ. ದೇಶಸೇವೆಯಲ್ಲಿ ಎಲ್ಲರೂ ಒಂದಾಗಿ ಕೈ ಜೋಡಿಸಬೇಕು ಹೇಳಿ. ನಿಮಗೆ ಯಾವ ಬ್ರಾಂಡ್‌ನದ್ದು ಬೇಕು...’’
 ಕಾಸಿ ಕಷ್ಟದಿಂದ ನುಡಿದ ‘‘ದೇಶವನ್ನು ನೀವು ಚೀಲದಲ್ಲಿ ಹಾಕಿಕೊಟ್ಟರೆ, ಅದನ್ನು ನಾವು ಕೊಂಡು ಹೋಗಿ ಸಂಜೆ ಉಪ್ಪಿನ ಕಾಯಿಯ ಜೊತೆಗೆ ಸೇವೆ ಮಾಡುತ್ತೇವೆ.
 ಮಲ್ಯರಿಗೆ ಅರ್ಥವಾಯಿತು. ಕಾಸಿ ಹೇಳಿದ ‘‘ಸಾರ್, ನಿಮ್ಮ ಇಂಟರ್ಯೂ ಮಾಡ್ಲಿಕ್ಕೆ ಬಂದಿದ್ದೇನೆ....
 ಮಲ್ಯರು ಆರಾಮ ಕುರ್ಚಿಯಲ್ಲಿ ಸರಿಯಾಗಿ ಒರಗಿದರು. ಗೋಪಿಕೆಯರೆಲ್ಲ ಹಿಂದೆ ಸರಿದರು. ಕಾಸಿ ಕೇಳಿದ ‘‘ಸಾರ್, ಚುನಾವಣೆಯಲ್ಲಿ ನಿಮ್ಮನ್ನು ಜೆಡಿಎಸ್, ಬಿಜೆಪಿ ಜೊತೆಗೂಡಿ ಗೆಲ್ಲಿಸಿತಲ್ಲ...?’’
ಮಲ್ಯ ನಕ್ಕರು. ‘‘ನೋಡಿ... ಇದು ಸೆಕ್ಯುಲರ್ ದೇಶ. ಮದ್ಯ, ಬಿಯರ್‌ಗಳು ಜಾತ್ಯತೀತತೆಯ ಪ್ರತೀಕವಾಗಿದೆ. ಒಂದು ಬಾಟಲ್ ಬಿಯರ್‌ನ್ನು ಯಾವ ಜಾತಿಯವನೇ ಸೇವಿಸಲಿ, ಯಾವ ಧರ್ಮದವನೇ ಸೇವಿಸಲಿ... ಪರಿಣಾಮ ಮಾತ್ರ ಒಂದೇ, ಮದ್ಯ ಜಾತಿ ಭೇದ ಮಾಡುವುದಿಲ್ಲ. ಬ್ರಾಹ್ಮಣನಿಗೆ ಜಾಸ್ತಿ ಕಿಕ್, ಶೂದ್ರನಿಗೆ ಕಡಿಮೆ ಕಿಕ್ ಎಂಬ ವ್ಯತ್ಯಾಸವಿಲ್ಲ. ಯಾವ ಪಕ್ಷದವನೇ ಸೇವಿಸಲಿ, ಯಾವ ಧರ್ಮದವನೇ ಸೇವಿಸಲಿ ಬಿಯರ್‌ನ ಬಣ್ಣ ಮಾತ್ರ ಒಂದೇ ಅಲ್ಲವೇ.... ಆದುದರಿಂದ ನನ್ನ ಸೆಕ್ಯುಲರ್ ಪಕ್ಷವಾದ ಜೆಡಿಎಸ್ ಬೆಂಬಲಿಸಿತು.
ಕಾಸಿಗೆ ತುಂಬಾ ಖುಷಿಯಾಯಿತು. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ ‘‘ಸಾರ್...ಬಿಜೆಪಿ ಕೂಡ ನಿಮ್ಮನ್ನು ಬೆಂಬಲಿಸಿತಲ್ಲ...?
 ಮಲ್ಯರು ಒಂದು ಪೆಗ್ ಸೆಕ್ಯೂಲರ್ ಮದ್ಯವನ್ನು ಸುರಿದುಕೊಂಡು ಉತ್ತರಿಸಿದರು‘‘ನೋಡ್ರೀ...ಬಿಜೆಪಿ ರಾಮ್ ರಾಮ್ ಎನ್ನುತ್ತದೆ. ರಾಮ್ ಹೆಸರಿನಲ್ಲಿ ಮತಯಾಚಿಸುತ್ತದೆ. ನಾವು ರಮ್ ರಮ್ ಎನ್ನುತ್ತೇವೆ. ರಮ್ ಮತ್ತು ರಾಮ್ ನಡುವೆ ಒಂದು ‘ಎ’ ವ್ಯತ್ಯಾಸವಷ್ಟೇ ಇರುವುದು. ಆದುದರಿಂದ ಬಿಜೆಪಿಯ ನಿಲುವುಗಳಿಗೆ ತುಂಬಾ ಹತ್ತಿರವಿದ್ದೇವೆ ಎನ್ನುವ ದೃಷ್ಟಿಯಿಂದ ಬಿಜೆಪಿ ನಮ್ಮನ್ನು ಬೆಂಬಲಿಸಿತು. ಅಲ್ಲದೇ ಅಮಲಿಗೂ ಬಿಜೆಪಿಗೂ ಹತ್ತಿರದ ನಂಟು. ನಮ್ಮದು ಮದ್ಯದ ಅಮಲು, ಬಿಜೆಪಿಯದ್ದು ಧರ್ಮದ ಅಮಲು. ಎರಡೂ ಅಮಲು ತಾನೆ. ಎರಡನ್ನು ಸೇವಿಸಿದ ಮನುಷ್ಯರು ತಮ್ಮ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕನೆಂಬ ಕಾರಣದಿಂದ ಬಿಜೆಪಿ ನನ್ನನ್ನು ಬೆಂಬಲಿಸಿದೆ’’
ಮಲ್ಯರ ಉತ್ತರದಿಂದ ಒಂದು ಪೆಗ್ ವಿಸ್ಕಿಯನ್ನು ಹೊಟ್ಟೆಗೆ ಸುರಿದಂತಾಗಿ ಕಾಸಿ ಕೇಳಿದ ‘‘ಸಾರ್...ದೇಶಕ್ಕಾಗಿ ನೀವು ಏನೇನು ಸೇವೆ ಮಾಡಲಿದ್ದೀರಿ....’’
‘‘ತುಂಬಾ ಉತ್ತಮವಾದ ಪ್ರಶ್ನೆ’’ ಎನ್ನುತ್ತಾ ಮಲ್ಯರು ಕಾಸಿಯ ಬೆನ್ನು ತಟ್ಟಿದರು ‘‘ನೋಡಿ... ನಮ್ಮ ದೇಶದ ಬಡವರು ಒಂದು ಗುಟುಕು ಬಿಯರ್‌ಗಾಗಿ ಒದ್ದಾಡುತ್ತಿದ್ದಾರೆ. ಅವರೆಲ್ಲಾ ಸಾರಾಯಿ ಕುಡಿದು ಸರ್ವನಾಶವಾಗುತ್ತಿದ್ದಾರೆ. ಈ ದೇಶದ ಬಡ ಜನತೆ, ದುಡಿಯುವ ಜನತೆ ಎಲ್ಲಿಯವರೆಗೆ ತಣ್ಣಗೆ ಬಿಯರ್ ಕುಡಿದು ಚಿಪ್ಸ್ ತಿನ್ನುವ ಕಾಲ ಬರುವುದಿಲ್ಲವೋ ಅಲ್ಲಿಯವರೆಗೆ ನಾನು ನಿದ್ದೆ ಮಾಡುವುದಿಲ್ಲ. ಬಡಜನರಿಗೆ ಬಿಯರ್‌ನ್ನು ತಲುಪಿಸುವುದೇ ನನ್ನ ಸುವರ್ಣ ಭಾರತದ ಕನಸು...’’ ಎನ್ನುತ್ತಾ ಮಲ್ಯರು ಭಾವುಕರಾದರು. ಕಾಸಿಯು ಕಣ್ಣಲ್ಲೂ ಒಂದು ಹನಿ ಒಸರಿತು. ಮಲ್ಯ ಒಂದು ಕ್ಷಣ ತಡೆದು, ಮತ್ತೆ ಮುಂದುವರಿಸಿದರು ‘‘ರೇಷನ್ ಕಾರ್ಡ್‌ನಲ್ಲಿ ಸೀಮೆ ಎಣ್ಣೆ, ಸಕ್ಕರೆಯ ಜೊತೆಗೆ ಬಿಯರ್‌ನ್ನೂ ಪೂರೈಸಬೇಕು ಎನ್ನುವುದು ನನ್ನ ಬಹುದಿನದ ಕನಸು. ಹಸಿರು ಕಾರ್ಡ್‌ನವರಿಗೆ ಬಿಯರ್‌ನ್ನು ಅಕ್ಕಿಯ ಜೊತೆಗೆ ಪುಕ್ಕಟೆಯಾಗಿ ವಿತರಿಸಬೇಕು. ಉಳಿದ ಹಳದಿ ಕಾರ್ಡ್‌ನ ಬಡವರಿಗೆ ಕಡಿಮೆ ದರದಲ್ಲಿ ಬಿಯರ್‌ಗಳನ್ನು, ಮದ್ಯವನ್ನು ಪೂರೈಸುವುದು ನನ್ನ ದೊಡ್ಡ ಕನಸಾಗಿದೆ. ಈ ಕನಸಿಗೆ ದೇಶ ನನ್ನ ಜೊತೆ ಕೈ ಜೋಡಿಸಬೇಕು. ಸಾರ್ವಜನಿಕ ನಳ್ಳಿಗಳ ಮಾದರಿಯಲ್ಲೇ...ವಿವಿಧ ಗ್ರಾಮಪಂಚಾಯತ್‌ಗಳಲ್ಲಿ ಟ್ಯಾಂಕ್‌ಗಳ ಮೂಲಕ ಮದ್ಯವನ್ನು ಸಂಗ್ರಹಿಸಿ ಹಳ್ಳಿ ಹಳ್ಳಿಗಳಿಗೆ ಬಿಯರ್‌ಗಳನ್ನು ಪೂರೈಸುವ ಯೋಜನೆಯೂ ಇದೆ. ಆದರೆ ಅದಕ್ಕಾಗಿ ನಾನು ರಾಜ್ಯಸಭಾ ಸದಸ್ಯನಾದರೆ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ಮುಖ್ಯಮಂತ್ರಿಯಾದರೂ ಆಗಬೇಕು. ಆಗ ಆ ವ್ಯವಸ್ಥೆ ಮಾಡುವ ಉದ್ದೇಶ ಹೋದಿದ್ದೇನೆ...’’
ನಳ್ಳಿಯನ್ನು ತಿರುಗಿಸಿ, ಬಿಯರ್‌ನಲ್ಲಿ ಮುಖತೊಳೆಯುವ ಕನಸು ಕಾಣತ್ತಾ ಎಂಜಲು ಕಾಸಿ ಪ್ರಶ್ನಿಸಿದ ‘‘ಸಾರ್...ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು ನೀವು ಏನು ಮಾಡುತ್ತೀರಿ ಸಾರ್...’’
ಮಲ್ಯ ಗಂಭೀರರಾದರು ‘‘ಒಳ್ಳೆಯ ಪ್ರಶ್ನೆ. ಹಳ್ಳಿ ಹಳ್ಳಿಯ ಮಕ್ಕಳು ಶಾಲೆಗೆ ಹೋಗಬೇಕು. ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಅದಕ್ಕಾಗಿ ನಾನೂ ಕೆಲವು ಯೋಜನೆಗಳನ್ನು ಹಾಕಿದ್ದೇನೆ. ಮುಖ್ಯವಾಗಿ, ಮಕ್ಕಳಿಗೆ ಬಿಸಿಯೂಟ ಜೊತೆಗೆ ಒಂದು ಬಾಟಲ್ ಬಿಯರ್‌ನ್ನು ಉಚಿತವಾಗಿ ನೀಡಬೇಕು ಎಂಬ ಸಲಹೆಯನ್ನು ಕೇಂದ್ರ ಸರಕಾರಕ್ಕೂ, ರಾಜ್ಯ ಸರಕಾರಕ್ಕೂ ನೀಡಬೇಕೆಂದಿದ್ದೇನೆ...’’
ಕಾಸಿಗೆ ಸಂತೋಷದಿಂದ ಭೂಮಿ ಗರ ಗರ ತಿರುಗುತ್ತಿದೆ ಎಂದೆನ್ನಿಸಿತು. ‘‘ಸಾರ್...ಮಕ್ಕಳು ಶಾಲೆಯಲ್ಲಿ ಕುಡಿದು ತೂರಾಡಿದರೇ?’’ ಅನುಮಾನದಿಂದ ಕೇಳಿದ.
ಮಲ್ಯ ಹೇಳಿದರು‘‘ನೋಡ್ರಿ...ಬಿಸಿಯೂಟ ಕೊಟ್ರೆ ಮಕ್ಕಳ ಹೊಟ್ಟೆ ತುಂಬುತ್ತದೆ. ಆದರೆ ಇದರಲ್ಲಿ ಪಾಲಕರಿಗೆ ಆಕರ್ಷಣೆ ಏನಿದೆ? ಅದಕ್ಕೆ ಬಿಯರ್ ಬಾಟಲ್‌ಗಳನ್ನು ಕೊಟ್ರೆ , ಅದನ್ನು ಮಕ್ಕಳು ತಗೊಂಡು ಹೋಗಿ ತಮ್ಮ ತಂದೆ ತಾಯಿಗಳಿಗೆ ಕೊಡುತ್ತವೆ. ಕನಿಷ್ಠ ಬಿಯರ್‌ನ ಆಸೆಗಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಅಲ್ಲವೇ?’’
ಕಾಸಿಗೆ ಅಹುದಹುದೆನಿಸಿತು ‘‘ಆದರೆ ಸಾರ್.. ಮಕ್ಕಳೇ ಬಿಯರ್ ಬಾಟಲ್‌ನ್ನು ಓಪನ್ ಮಾಡಿದ್ರೆ...’’
 ಮಲ್ಯರು ನಕ್ಕರು ‘‘ಕಾಸಿಯವ್ರೆ...ನಮ್ಮ ಮಕ್ಕಳು ಎಳವೆಯಲ್ಲೇ ಸಾಕ್ಷರರಾದಂತೆ, ಬಿಯರ್‌ಗಳನ್ನು ಸೇವಿಸಿದರೆ ಅವರು ಹೆಚ್ಚು ಹೆಚ್ಚು ಜಾತ್ಯತೀತರಾಗುತ್ತಾ ಹೋಗುತ್ತಾರೆ. ಮೊದಲೇ ಹೇಳಿದ ಹಾಗೆ ಮದ್ಯಕ್ಕೆ ಜಾತಿ ಧರ್ಮ ಭೇದವಿಲ್ಲ. ಶಾಲೆಯಲ್ಲಿ ಮೇಷ್ಟ್ರುಗಳು ಇದನ್ನೇ ತಾವೇ ಕಲಿಸುವುದು. ನಮ್ಮ ಮದ್ಯ ಮತ್ತು ಬಿಯರ್ ಬಾಟಲ್‌ಗಳೂ ಇದನ್ನೇ ತಾನೇ ಕಲಿಸುವುದು. ನಮ್ಮ ಮದ್ಯ ಮತ್ತು ಬಿಯರ್ ಬಾಟಲ್‌ಗಳೂ ಇದನ್ನೇ ಕಲಿಸುವುದು ಕಾಸಿಯವ್ರೇ... ಹೇಗೂ ಬಿಸಿಯೂಟ ಸಂದರ್ಭದಲ್ಲಿ ಮೊಟ್ಟೆಯನ್ನು ಕೊಡುತ್ತಾರೆ. ಮೊಟ್ಟೆ ಮತ್ತು ಬಿಯರ್ ಒಳ್ಳೆ ಕಾಂಬಿನೆಷನ್ ಕಣ್ರೀ...’’
ಕಾಸಿ ಕೇಳಿದ ‘‘ಸಾರ್...ಕಾವೇರಿ ಸಮಸ್ಯೆಯನ್ನು ಕೇಂದ್ರದಲ್ಲಿ ಹೇಗೆ ಪರಿಹರಿಸುತ್ತೀರಿ ಸಾರ್...’’
   ಮಲ್ಯ ಒಂದು ಕ್ಷಣ ಯೋಚಿಸಿ, ಬಳಿಕ ನುಡಿದರು ‘‘ಬಹಳ ಸುಲಭ ಕಣ್ರೀ... ಕಾವೇರಿ ನೀರನ್ನು ರೈತರು ಕೃಷಿ ಬೆಳೆಯೋದಕ್ಕೆ ತಾನೇ ಕೇಳೋದು. ರೈತರ ಭೂಮಿಯನ್ನು ಬೃಹತ್ ಉದ್ಯಮಿಗಳಿಗೆ ಕೊಟ್ಟು ಬಿಡೋಣ. ಪರಿಹಾರ ಹಣಾಂತ ಒಂದಿಷ್ಟು ಕೋಟಿ ಕೊಟ್ರೆ... ಉಭಯ ರಾಜ್ಯಗಳ ರೈತರು ಕಾವೇರಿ ತಂಟೆಗೆ ಬರದೆ ಬಿಯರ್ ಕುಡ್ಕೊಂಡು ಆರಾಮವಾಗಿರ್ತಾರೆ. ನಾನು ಬೇಕಾದ್ರೆ ಕಾವೇರಿ ಹೆಸರಿನಲ್ಲಿ ಹೊಸ ಬ್ರಾಂಡ್‌ನ್ನು ಮಾರುಕಟ್ಟೆ ಬಿಡುತ್ತೇನೆ. ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡೋಣ...’’
‘ಅರೇ! ಕಾವೇರಿ ಸಮಸ್ಯೆಗೆ ಇಷ್ಟು ಸುಲಭವಾದ ಪರಿಹಾರವೇ!’ ಕಾಸಿ ರೋಮಂಚನಗೊಂಡು ಎಲ್ಲವನ್ನು ನೋಟ್ ಮಾಡ್ಕೊಂಡ.
ಅಷ್ಟರಲ್ಲಿ ಗೋಪಿಕೆಯೊಬ್ಬಳು ಒಂದು ದೊಡ್ಡ ಪ್ಯಾಕೆಟ್‌ನ್ನು ತಂದು ಎಂಜಲು ಕಾಸಿಯ ಜೋಳಿಗೆಯೊಳಗೆ ಹಾಕಿದರು. ಮಲ್ಯ ಹೇಳಿದರು ನೋಡಿ ಕಾಸಿಯವ್ರೆ... ಅದರಲ್ಲಿ ನಾನು ಈ ದೇಶವನ್ನು ಹಾಕಿದ್ದೇನೆ. ಸಂಜೆ ಹೋಗಿ ಸೇವೆ ಮಾಡಿ...’’
ಕಾಸಿ ಜೋಳಿಗೆಯೊಳಗೆ ಇಣುಕಿದ ನೋಡಿದರೆ ‘ವಿವಿಧ ಬ್ರಾಂಡ್‌ಗಳ ದೇಶಗಳಿದ್ದವು. ಕಾಸಿ ಸಂತೋಷದಿಂದ ‘‘ದೇಶ ಸೇವೆಯ ಮಾಡೋಣ... ದೇಶ ಸೇವೆಯ ಮಾಡೋಣ...’’ ಎಂಬ ಹಾಡು ಹಾಡುತ್ತಾ ಅಲ್ಲಿಂದ ಹೊರಟ.
ರವಿವಾರ ಜೂನ್ 20, 2010

No comments:

Post a Comment