Sunday, February 2, 2014

ಗುಜರಾತ್ ಚಾಯ್‌ವಾಲಾನ ರೆಡ್ ಲೇಬಲ್ ಟೀ....

ರವಿವಾರ - ಫೆಬ್ರವರಿ -02-2014ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ

 ‘‘ಆಯಿಯೇ... ಆಯಿಯೇ... ಸ್ಪೆಶಲ್ ಗುಜರಾತ್ ರೆಡ್ ಲೇಬಲ್ ಚಾಯ್, ಬ್ಲಾಕ್ ಲೇಬಲ್ ಚಾಯ್, ಗ್ರೀನ್ ಲೇಬಲ್ ಚಾಯ್...’’ ಎಂದು ಚಾಯ್ ವಾಲಾ ಕರೆಯುತ್ತಿದ್ದಂತೆಯೇ ಎಂಜಲು ಕಾಸಿ ಕಿವಿ ನಿಮಿರಿತು. ಗುಜರಾತ್‌ಗೆ ನರೇಂದ್ರ ಮೋದಿಯ ಇಂಟರ್ಯೂಗೆಂದು ಬಂದಿದ್ದ. ಹೇಗಿದ್ದರೂ ಚಾಯ್ ವಾಲಾ ಮುಖ್ಯಮಂತ್ರಿಯಾಗಿರುವ ನಾಡು. ಒಂದು ಚಹಾ ಕುಡಿದು ನೋಡುವ ಎಂದು ಗೂಡಂಗಡಿಗೆ ಕಾಲಿಟ್ಟರೆ, ಅದು ಗುಜರಾತ್‌ನ ಬಿಜೆಪಿ ಕಚೇರಿ ಯಾಗಿತ್ತು. ನೋಡಿದರೆ ನರೇಂದ್ರ
ಮೋದಿ ಸ್ವತಃ ಸ್ಟವ್ ಹೊತ್ತಿಸಿ ಚಹಾ ಮಾಡಿಕೊಡುತ್ತಿದ್ದರು.

ಅವರ ಬೆನ್ನ ಹಿಂದೆ ಬೇರೆ ಬೇರೆ ಲೇಬಲ್‌ನ ಟೀ ಡಬ್ಬಗಳಿದ್ದವು. ಕಾಸಿಯನ್ನು ಕಂಡದ್ದೇ ಮೋದಿ ಖುಷಿಯಾದರು ‘‘ಆಯಿಯೇ ಕಾಸಿ ಸಾಬ್ ಆಯಿಯೆ...ಹೇಗಿದೆ ಕರ್ನಾಟಕ ಮೀಡಿಯಾ... ಎಲ್ಲರಿಗೂ ಪ್ಲಾಸ್ಕ್‌ನಲ್ಲಿ ಚಹಾ ಕಳಿಸಿದ್ದೆ ಅಲ್ವಾ, ಸಿಕ್ಕಿದೆಯೇ? ಕೆಲವರಿಗೆ ಪರ್ಸನಲ್ ಆಗಿ ಬ್ಯಾಂಕ್ ಅಕೌಂಟಿಗೇ ಹಾಕಲು ಹೇಳಿದ್ದೇನೆ...’’ ಎಂದು ನಕ್ಕರು.

ಎಲ್ಲರೆದುರು ಈ ‘ಪರ್ಸನಲ್’ ಮ್ಯಾಟರ್ ಎತ್ತಿದ್ದು ಕಂಡು ಕಾಸಿಗೆ ಮುಜುಗರವಾಯಿತು. ಅವನು ನಾಚಿ ಕೊಂಡ. ‘‘ಬನ್ನಿ, ಬನ್ನಿ, ಗುಜರಾತ್‌ನ ವಿವಿಧ ಲೇಬಲ್ ಟೀ ಕುಡ್ದು ಹೋಗಿ...’’ ಎಂದು ಮೋದಿ ಕಾಸಿಯನ್ನು ಕರೆದರು.
ಕಾಸಿ ಅಂಗಡಿಯೊಳಗೆ ಕಾಲಿಟ್ಟ. ನೋಡಿದರೆ ಕಿಕ್ಕಿರಿದ ಜನ.
ಮೋದಿ, ತನ್ನ ಕೇಸರಿ ಟವೆಲ್‌ನಿಂದ ಹಣೆ ಒರೆಸಿಕೊಂಡು ಕಾಸಿ ಮುಂದೆ ನಿಂತರು. ‘‘ಯಾವ ಲೇಬಲ್ ಬೇಕು? ರೆಡ್ ಲೇಬಲ್ ಟೀ, ಗ್ರೀನ್ ಲೇಬಲ್...ಬ್ಲಾಕ್ ಟೀ...’’ಕೇಳಿದರು. ಕಾಸಿಗೆ ನಾಲಗೆ ಚುರ್ ಅನ್ನಿಸಿತು. ‘‘ಇದೆಲ್ಲ ಗುಜರಾತ್ ಸ್ಪೆಶಲ್ಲಾ ಸಾರ್?’’
‘‘ಹೂಂ ಕಣ್ರೀ... ಇದೆಲ್ಲ ಗುಜರಾತ್ ಸ್ಪೆಶಲ್. ಈ ಚಾಯ್‌ಗಾಗಿ ದೇಶ ವಿದೇಶಗಳಿಂದ ಉದ್ಯಮಿಗಳು ಬರ್ತಾ ಇದ್ದಾರೆ...ಸದ್ಯಕ್ಕೆ ಆರೆಸ್ಸೆಸ್‌ನೋರು ಈ ಬಿಸಿನೆಸ್‌ಗೆ ಸಖತ್ ಇನ್‌ವೆಸ್ಟ್ ಮಾಡಿದ್ದಾರೆ.... ನಿಮಗೆ ರೆಡ್ ಲೇಬಲ್ ಕೊಡ್ತೇನೆ...ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿರುವ ಚಾಯ್ ಅದು...’’
‘‘ಅದೇನು ಸಾರ್ ಅದ್ರಲ್ಲಿ ಸ್ಪೆಶಲ್...’’ ಕಾಸಿ ಕೇಳಿದ.

‘‘ನೋಡ್ರಿ ಈ ಕಾಂಗ್ರೆಸ್‌ನೋರು ನಮ್ಮ ಆಡಳಿತ ದಲ್ಲಿ ಹಸಿರು ಕ್ರಾಂತಿ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳು ತ್ತಾರೆ. ಪಂಜಾಬ್‌ನಲ್ಲಿ ಗ್ರೀನ್ ರೆವೆಲ್ಯೂಶನ್ ಮಾಡಿ ಅಕ್ಕಿ, ಗೋಧಿ ಬೆಳೆದ್ರೆ, ನಾವು ಗುಜರಾತ್‌ನಲ್ಲಿ ರೆಡ್ ರೆವೆಲ್ಯೂಶನ್ ಮಾಡಿ ಟೀ ಬೆಳೆದಿದ್ದೇವೆ... ಗುಜರಾತ್ ಹತ್ಯಾಕಾಂಡದ ಮೂಲಕ 2002ರಲ್ಲಿ ನಾವು ಬೆಳೆಸಿದ ಟೀ ತೋಟದ ಬೆಳೆ ಇನ್ನೂ ಮುಗಿದಿಲ್ಲ ಗೊತ್ತಾ...ಅದೇ ಟೀಯನ್ನು ನಾವಿಂದು ಅಂತಾರಾಷ್ಟ್ರೀಯವಾಗಿ ಎಕ್ಸ್ ಪೋರ್ಟ್ ಮಾಡ್ತಿದ್ದೀವಿ...ಒಂದು ರೆಡ್ ಟೀ ಹಾಕಲಾ?’’ ಎಂದು ಚಾಯ್ ಮಾಡಲು ಸಜ್ಜಾದರು. ಯಾಕೋ ಕಾಸಿಯ ಮೂಗಿಗೆ ಚಾಯ್ ವಾಸನೆಯ ಬದಲಿಗೆ ರಕ್ತದ ವಾಸನೆ ಬಡಿಯಿತು.

‘‘ಸಾರ್ ನನಗೆ ರೆಡ್ ಎಂದರೆ ಅಲರ್ಜಿ. ಅದಿರ್ಲಿ ಸಾರ್ ಈ ಗ್ರೀನ್ ಲೇಬಲ್ ಎಲ್ಲಿ ಬೆಳೆದಿರೋದು...’’
ಮೋದಿ ತನ್ನ ಗಡ್ಡ ಸವರಿಕೊಂಡರು. ‘‘ಈ ಗ್ರೀನ್ ಟೀ ಕೂಡ ನಮ್ಮ ಗುಜರಾತ್‌ನಲ್ಲೇ ಬೆಳೆದಿರೋದು. ಪಂಜಾಬ್‌ನೋರು ತಾವು ಮಾತ್ರ ಮಹಾ ಕೃಷಿಕರು ಎಂದು ತಿಳಿದುಕೊಂಡಿದ್ದರು. ಅವರ ಭೂಮಿಯನ್ನು ಕಿತ್ತುಕೊಂಡು ಅವರ ನ್ನೆಲ್ಲ ಪಂಜಾಬಿಗೆ ಓಡಿಸಿ ಅದರಲ್ಲಿ ನಾವು ಗ್ರೀನ್ ಟೀ ತೋಟ ಮಾಡಿ ದ್ದೇವೆ... ಅಪ್ಪಟ ಗುಜರಾತ್ ಟೀ...’’

ಯಾಕೋ ಗುಜರಾತ್‌ನಲ್ಲಿ ಭೂಮಿ ಕಳೆದುಕೊಂಡ ಪಂಜಾಬ್ ರೈತರು ಕಣ್ಣು ಮುಂದೆ ಬಂದರು. ‘‘ಸಾರ್... ಗ್ರೀನ್ ಟೀಯಲ್ಲಿ ಪಂಜಾಬ್‌ನ ರೈತರ ಕಣ್ಣೀರು ಬಿದ್ದು ಉಪ್ಪು ಜಾಸ್ತಿಯಾಗಿದೆ...ಅದು ನನಗೆ ಅಷ್ಟು ಸೇರಲ್ಲ... ಈ ಬ್ಲಾಕ್ ಟೀ ಎಂದರೆ ಏನ್ರೀ...’’
‘‘ಅದೂ ಅಪ್ಪಟ ಗುಜರಾತ್‌ನ ಚಾಯ್ ಕಣ್ರೀ... ನರ್ಮದಾ ತಟದಲ್ಲಿ ಆದಿವಾಸಿಗಳು ಮತ್ತು ದಲಿತರ ಕಣ್ಣೀರನ್ನು ಕಾಲುವೆಯಾಗಿ ಹರಿಸಿ ಬೆಳೆಸಿದ ಟೀ ತೋಟ ಕಣ್ರೀ... ಬಹಳ ರುಚಿಯಾಗಿರುತ್ತೆ...ಒಂದು ಬ್ಲಾಕ್ ಟೀ ಹಾಕ್ಲಾ...’’ ಮೋದಿ ಕೇಳಿದರು.

ಕಾಸಿಗೆ ಯಾಕೋ ನರ್ಮದಾ ನದಿಯಲ್ಲಿ ಕೊಚ್ಚಿ ಹೋದ ದಲಿತರ, ಆದಿವಾಸಿಗಳ ಬದುಕು ನೆನಪಾ ಯಿತು. ಬೇಡ ಅನ್ನಿಸಿತು. ‘‘ಸಾರ್ ಬೇರೆ ಯಾವುದಾ ದರೂ ಕಂಪೆನಿಯ ಟೀ ಇದೆಯಾ...’’ ಮೋದಿ ತಕ್ಷಣ ಹೇಳಿದರು ‘‘ನೋಡ್ರೀ...ಇದು ಗುಜರಾತ್‌ನಲ್ಲಿ ಇತ್ತೀಚೆಗೆ ಭಾರೀ ಫೇಮಸ್ ಟೀ. ಸದಾ ಈ ಚಾಯ್ ಕುರಿತಂತೆ ಪತ್ರಿಕೆಗಳಲ್ಲಿ ಜಾಹೀರಾತು ಬರ್ತಾ ಇರತ್ತೆ. ಇದರ ಹೆಸರು ‘ಹೆಣ್ಣನ್ ಏ ಒನ್’ ಟೀ ಅಂತ. ಕೊಡ್ಲಾ....’’ ಕಾಸಿಗೆ ಹೆಸರು ಕೇಳಿಯೇ ಹೆದರಿಕೆಯಾಯಿತು ‘‘ಅದೇನು ಸಾರ್ ಹೆಣ್ಣನ್ ಏ ವನ್ ಟೀ ಅಂದ್ರೆ...’’

ಮೋದಿ ಅತ್ಯುತ್ಸಾಹದಿಂದ ವಿವರಿಸಿದರು ‘‘ಹೆಣ್ಣುಗಳ ಹೆಣಗಳನ್ನೇ ಗೊಬ್ಬರವನ್ನಾಗಿಸಿ ಬೆಳೆಸಿದ ಅತ್ಯುತ್ತಮ ಟೀ ಕಣ್ರೀ... ತುಂಬಾ ಹೆಣ್ಣು ಮಕ್ಕಳು ಈ ಟೀ ಪ್ಲಾಂಟೇ ಶನ್‌ಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ...ಹಲವು ಹೆಣ್ಣು ಮಕ್ಕಳು ಬೇಹುಗಾರಿಕೆಗೆ ಬಲಿಯಾಗಿದ್ದಾರೆ... ತುಂಬಾ ರುಚಿಯಾದ ಟೀ ಕಣ್ರೀ ಇದು...ಒಂದು ಕಪ್ ಹೆಣ್ಣನ್ ಏ ವನ್ ಟೀ ಕೊಡ್ಲಾ...?’’
‘‘ಸಾರ್... ಈ ಟೀಯನ್ನು ಮಾಡಲು ಹೇಗೆ ಕಲಿತಿರಿ ಸಾರ್...?’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡ್ರೀ...ತುಂಬಾ ಹಿಂದೆ ಹಿಟ್ಲರ್ ಎಂಬೋರು ಇಂತಹ ಟೀ ಮಾಡೋದರಲ್ಲಿ ಪ್ರವೀಣರಾಗಿದ್ದರು.  ಎಲ್‌ಪಿಜಿ ಗ್ಯಾಸ್ ಉಪಯೋಗವೇ ಇಲ್ಲದ ದಿನಗಳಲ್ಲಿ ಇಂತಹ ಟೀ ಗಳನ್ನು ಮಾಡುವುದಕ್ಕಾಗಿಯೇ ಗ್ಯಾಸ್ ಚೇಂಬರ್ ಗಳನ್ನು ಮಾಡುತ್ತಿದ್ದರು. ಅವರು ಹುತಾತ್ಮರಾದ ಬಳಿಕ ಈ ಟೀಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಆದರೂ ಅಮೆರಿಕದಂತಹ ದೇಶಗಳು ಇರಾಕ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ, ವಿಯೆಟ್ನಾಂನಲ್ಲಿ ಇಂತಹದೇ ಟೀಯನ್ನು ಗುಟ್ಟಾಗಿ ಮಾಡಿ ಮಾರುತ್ತಿದ್ದುದು ಎಲ್ಲರಿಗೂ ಗೊತ್ತಿರುವಂತಹದೇ.

ಇದರ ಲಾಭವನ್ನು ಭಾರತವೂ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ನಾನು ಸ್ವದೇಶಿ ಚಾಯ್ ಆಂದೋಲನವನ್ನು ಶುರು ಮಾಡಿದೆ. ಬಿಜೆಪಿ ಯಲ್ಲಿ ಕಾರ್ಯಕರ್ತನಿದ್ದಾಗ ಇಂತಹ ಚಹಾ ಮಾಡುವು ದನ್ನು ಅಲ್ಲಲ್ಲಿ ಕಲಿತೆ. ಆರೆಸ್ಸೆಸ್‌ನ ಮುಖಂಡರು ನಾನು ಮಾಡಿದ ಚಹಾವನ್ನೇ ಬೆಳಗ್ಗೆ ಎದ್ದು ಕುಡಿಯ ತೊಡಗಿದರು. ಮುಂದೆ ಗುಜರಾತಿನ ಮುಖ್ಯಮಂತ್ರಿ ಯಾದ ಬಳಿಕ ಈ ಟೀಯನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯತೊಡಗಿದೆ.

ಹೀಗೆ ಟೀ ಪ್ಲಾಂಟೇಶನ್ ಮಾಡಿ ಮಾರತೊಡಗಿದೆ. ಇದೀಗ ನಾನು ಸ್ವದೇಶಿ ಟೀ ಪೇಟೆಂಟ್ ಪಡೆದಿರುವುದು ಅಮೆರಿಕಕ್ಕೆ ಅಸೂಯೆಯಾ ಗಿದೆ. ಈ ಮೂಲಕ ಭಾರತ ಸ್ವಾವಲಂಬಿಯಾಗುವುದು ಅದಕ್ಕೆ ಇಷ್ಟವಿಲ್ಲ. ಆದುದರಿಂದ ಅದು ನನ್ನ ಮೇಲೂ ನನ್ನ ಟೀ ಮೇಲೂ ನಿಷೇಧ ಹಾಕಿದೆ. ಇದನ್ನು ಭಾರತೀ ಯರು ಅರಿತಿದ್ದಾರೆ. ಇಂದು ನನ್ನ ಟೀಯಿಂದಾಗಿ ಭಾರತ ಸ್ವಾವಲಂಬಿಯಾಗಿದೆ. ಮುಂದೆ ನಾನು ಪ್ರಧಾನಿ ಯಾದರೆ ಈ ಟೀ ತೋಟವನ್ನು ದೇಶದೆಲ್ಲೆಡೆ ಬೆಳೆಸಿ, ವಿದೇಶಕ್ಕೂ ಟೀ ವಿತರಣೆ ಮಾಡಲಿದ್ದೇನೆ. ವಿಶ್ವದ ಏಕೈಕ ಚಹಾವಾಲಾ ಎಂದು ಹೆಸರು ಪಡೆಯುವ ಗುರಿಯನ್ನು ಹೊಂದಿದ್ದೇನೆ...’’
ಕಾಸಿ ಎಲ್ಲವನ್ನು ನೋಟ್ ಮಾಡಿಕೊಂಡು ಇನ್ನೇನು ಏಳುವುದಕ್ಕೆ ಸಿದ್ಧತೆ ಮಾಡತೊಡಗಿದ. ಅಷ್ಟರಲ್ಲಿ ಮತ್ತೆ ಕೇಳಿದರು ‘‘ಅದಿರಲಿ, ನೀವು ಚಹಾ ಕುಡಿಯಲೇ ಇಲ್ಲ... ಯಾವ ಲೇಬಲ್ ಟೀ ಹಾಕಲಿ, ಹೇಳಿ...’’
ಕಾಸಿ ಅನುಮಾನ, ಭಯದಿಂದ ಕೇಳಿದ ‘‘ನಿಮ್ಮ ಟೀ ನಿಮ್ಮ ಕಾರ್ಯಕರ್ತರಷ್ಟೇ ಕುಡಿದರೆ ಚೆನ್ನಾಗಿರುತ್ತದೆ. ನಾವು ಮನುಷ್ಯರು ನೋಡಿ. ಯಾವುದಾದರೂ ಮನುಷ್ಯರು ಕುಡಿಯುವ ಟೀ ನಿಮ್ಮಲ್ಲಿ ಇದೆಯಾ?’’
ನರೇಂದ್ರ ಮೋದಿ ಸಿಟ್ಟಿನಿಂದ ಕೆಂಪು ಚಹಾದಂತೆ ಕುದಿಯತೊಡಗಿದರು. ಒಂದು ಕ್ಷಣ ವೌನವಾಗಿ ಮತ್ತೆ ಹೇಳಿದರು ‘ಲಾ.... ಟೀ... ಅಂಥ ಇದೆ... ಕುಡೀತೀರಾ...?’’
ಕಾಸಿಗೆ ಅದು ಹೊಸ ಹೆಸರು ‘‘ಅದೆಂಥ ಸಾರ್ ಲಾ...ಟೀ...ಅಂತ?’’
ಮೋದಿ ಸಿಟ್ಟಿನಿಂದ ಹೇಳಿದರು ‘‘ಅದೇರೀ...ಲಾ ಠೀ... ನಮ್ಮ ಪೊಲೀಸರ ಕೈಯಲ್ಲಿರತ್ತಲ್ಲ ಲಾಠಿ. ಅದೇ ಲಾಠಿಯಿಂದ ಮಾಡಿದ ಟೀ....ನನ್ನ ಟೀ ಕುಡಿಯದವರಿ ಗೆಲ್ಲ ಆ ಠೀಯನ್ನು ಕುಡಿಸುತ್ತೇವೆ. ಗುಜರಾತ್ ಪೊಲೀ ಸರು ಕಂಡು ಹಿಡಿದ ಟೀ ಅದು...ಲಾಠಿ...ನನ್ನ ರೆಡ್ ಟೀ ಕುಡೀತೀರಾ? ಇಲ್ಲಾ ಲಾಠೀ ರುಚಿ ನೋಡ್ತೀರಾ...’’
ಕಾಸಿ ಭಯದಿಂದ ನಡುಗಿದ. ಅದೇನನ್ನಿಸಿತೋ ‘‘ನೋಡಿ ಸಾರ್ ಕೇಜ್ರಿವಾಲ್ ಬಂದ್ರು...’’ ಎಂದು ಕೈ ತೋರಿಸಿದ. ಮೋದಿ ಒಮ್ಮೆಲೆ ಕಂಪಿಸಿ ಹೊರಗೆ ಇಣುಕಿದರು. ಅದೇ ಸಮಯವನ್ನು ಬಳಸಿಕೊಂಡು ಎಂಜಲು ಕಾಸಿ ಅಲ್ಲಿಂದ ಓಡತೊಡಗಿದ.