Sunday, May 25, 2014

ಕಾಂಗ್ರೆಸ್ ಆತ್ಮ ಎಲ್ಲಿದೆ? ಹುಡುಕಿ ಕೊಡಿ!

ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ರವಿವಾರ ಮೇ ೨೫ ರಂದು ಪ್ರಕಟವಾದ ಬುಡಬುಡಿಕೆ

ದಿಲ್ಲಿ ಕಾಂಗ್ರೆಸ್‌ನೊಳಗೆ ಕಲರವ. ಸೋತ ಸಂಭ್ರಮವನ್ನು ಆಚರಿಸಿಕೊಳ್ಳಲು ‘ಆತ್ಮಾವಲೋಕನ ಸಭೆ’ಯನ್ನು ಸೋನಿಯಾಗಾಂಧಿ ಕರೆದಿರುವುದು ಗೊತ್ತಾಗಿ, ಮೇಡಂ ಅವರ ಪ್ರಮಾಣ ವಚನ ಸಭೆಯೋ ಎಂಬಂತೆ ಸೋತ ಕಾಂಗ್ರೆಸ್ ಮುಖಂಡರೆಲ್ಲ ಮೀಸೆಯ ಮಣ್ಣನ್ನು ಕೊಡವಿಕೊಂಡು ಸಭೆಗೆ ಹಾಜರಾದರು. ‘ಬಹುಶಃ 50 ಸೀಟ್ ಸಿಕ್ಕಿದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮನ್ನು ಕರೆದಿರಬಹುದು’’ ಎಂದು ದಿಗ್ಗಿ, ಕಪಿಲ್, ಅಝಾದ್ ಮೊದಲಾದವರೆಲ್ಲ ಗರಿಗರಿ ಖಾದಿಯನ್ನು ತೊಟ್ಟು ಹಾಜರಾಗಿದ್ದರು. ರಾಹುಲ್ ಅಂತೂ ಫಲಿತಾಂಶದಿಂದ ರೋಮಾಂಚನಗೊಂಡಿದ್ದರು. ಇಷ್ಟು ಸ್ಥಾನಗಳಾದರೂ ಸಿಕ್ಕಿದೆ ಎಂದರೆ ಅದರ ಅರ್ಥ ಇನ್ನೂ ನಮ್ಮ ಮೇಲೆ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದಲ್ಲವೆ? ಇದನ್ನು ನಾವು ಆಚರಿಸಬೇಕು. ಈ ಆಚರಣೆಗಾಗಿ ಅಮೆರಿಕ, ಲಂಡನ್, ಜರ್ಮನ್, ಫ್ರಾನ್ಸ್ ಪ್ರಧಾನಿಗಳಿಗೆ ಆಹ್ವಾನ ನೀಡಬೇಕು ಎಂದು ತಾಯಿಗೆ ಸಲಹೆ ನೀಡಿದ್ದ. ‘‘ಸುಮ್ಮನೆ ಹಿತ್ತಲಲ್ಲಿ ಹೋಗಿ ಆಟ ಆಡ್ಕೊಂಡಿರು. ಕಿರಿ ಕಿರಿ ಮಾಡ್ಬೇಡ...’’ ಎಂದು ಸೋನಿಯಾ ಮಗನ ತಲೆಗೆ ಎರಡು ಮೊಟಕಿದ್ದರು. ಆಟ ಆಡಲು ಕಾಂಗ್ರೆಸ್‌ನ್ನು ಕೊಡಬಾರದಿತ್ತು...ಎಲ್ಲವನ್ನೂ ಮುರಿದಿಕ್ಕಿದ್ದಾನೆ ಎಂದು ಸೋನಿಯಾ ಗೊಣಗಿದರು.
ಅಂತೂ ಆತ್ಮಾವಲೋಕನ ಸಭೆ ಆರಂಭವಾಯಿತು. ಅಷ್ಟರಲ್ಲಿ ಸೋನಿಯಾಗಾಂಧಿ ಮಾತು ಆರಂಭಿಸಿದರು ‘‘ಕಾಂಗ್ರೆಸ್ ತನ್ನ ಸೋಲಿನ ಕುರಿತಂತೆ ಆತ್ಮ ಅವಲೋಕನ ಮಾಡಲು ಈ ಸಭೆಯನ್ನು ಕರೆದಿದೆ...ಮೊತ್ತ ಮೊದಲು ನಾವು ಕಾಂಗ್ರೆಸ್‌ನ ಆತ್ಮವನ್ನು ಅವಲೋಕನ ಮಾಡಬೇಕು... ಮಿ. ದ್ವಿಗ್ವಿಜಯ್ ಸಿಂಗ್...ಎಲ್ಲಿದೆ ಕಾಂಗ್ರೆಸ್‌ನ ಆತ್ಮ. ಅದನ್ನು ಸಭೆಯ ಮುಂದೆ ತನ್ನಿ...’’
ಆಗಷ್ಟೇ ಹನಿಮೂನ್ ಮುಗಿಸಿಕೊಂಡು ಬಂದಿದ್ದ ದಿಗ್ವಿಜಯ್ ಕಂಗಾಲಾದರು. ‘‘ಆತ್ಮ...ಅದೂ ಅದೂ...ನಾನು ಕಾಂಗ್ರೆಸ್‌ಗೆ ಕಾಲಿಡುವಾಗಲೇ ಅದನ್ನು ರಾಜೀವ್‌ಗಾಂಧಿಯವರ ಕೈಗೆ ಕೊಟ್ಟಿದ್ದೆ. ಅದು ನಿಮ್ಮ ತಿಜೋರಿಯಲ್ಲಿ ಭದ್ರವಾಗಿರಬೇಕು...’’
ಸೋನಿಯಾ ಮೇಡಂ ಸಿಟ್ಟಾದರು ‘‘ನಾನು ಕೇಳುತ್ತಾ ಇರುವುದು ನಿಮ್ಮ ಮೆದುಳಿನ ಬಗ್ಗೆ ಅಲ್ಲ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ ಎಂದು ಕೇಳುತ್ತಿದ್ದೇನೆ. ತಿಜೋರಿಯಲ್ಲಿರುವುದು ನಿಮ್ಮ ಮೆದುಳು ಮಾತ್ರ. ಇಡೀ ಕಾಂಗ್ರೆಸ್ ಮುಖಂಡರ ಮೆದುಳು ನನ್ನ ತಿಜೋರಿಯಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ? ರಾಹುಲ್‌ನ ಕೈಗೆ ಸಿಗದ ಹಾಗೆ ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ಕೊಟ್ಟಿದ್ದೆನಲ್ಲ...ಇದೀಗ ನೋಡಿ...ಆತ್ಮಾವಲೋಕನ ಮಾಡಲು ಕರೆದ ಸಭೆಯಲ್ಲಿ ಕಾಂಗ್ರೆಸ್‌ನ ಆತ್ಮವೇ ಕಾಣುತ್ತಿಲ್ಲ....ಆತ್ಮ ಇಲ್ಲದೆ ಆತ್ಮಾವಲೋಕನ ನಡೆಸುವುದು ಹೇಗೆ?’’
‘‘ಮೇಡಂ...ನನಗೆ ವೀರಪ್ಪ ಮೊಯ್ಲಿಯವರ ಮೇಲೆಯೇ ಡೌಟು. ಕಾಂಗ್ರೆಸ್‌ನ ಆತ್ಮವನ್ನು ಅಂಬಾನಿಗೆ ಮಾರಿ ಅವರು ಚಿಕ್ಕಬಳ್ಳಾಪುರದಲ್ಲಿ ಗೆದ್ದದ್ದು ಅಂತ ನನ್ನ ಗೂಢಚಾರರು ಹೇಳಿದ್ದಾರೆ...’’
‘‘ನೀವು ಯಾರು? ಯಾವ ಲೋಕಸಭೆಯ ಎಂಪಿ ನೀವು?’’
‘‘ಅದೇ ಮೇಡಂ...ಎರಡು ಲಕ್ಷ ಓಟಿನಲ್ಲಿ ಸೋಲಿಸಿದ್ದು...’’
‘‘ಎರಡು ಲಕ್ಷ ಅಂತರದಲ್ಲಿ ಸೋಲಿಸಿದ್ದೇ...ಯಾರನ್ನು ಎಲ್ಲಿ?’’
‘‘ಅದೇ ಮೇಡಂ...ಮಂಗಳೂರಿನಲ್ಲಿ...ಎರಡು ಲಕ್ಷ ಓಟಿಗೆ ಸೋತದ್ದು ನಾನೇ...ಇಂದಿರಾಗಾಂಧಿಯ ಕಾಲದಲ್ಲಿ ನಾನು ಸಾಲಮೇಳಕ್ಕೆ ಫೇಮಸ್...ನಾನೇ ಜನಾರ್ದನಪೂಜಾರಿ...’’
ಸೋನಿಯಾಗೆ ಸಿಟ್ಟು ಒತ್ತರಿಸಿ ಬಂತು ‘‘ಇವರನ್ನು ಯಾರು ಒಳಗೆ ಬಿಟ್ಟದ್ದು...ತಕ್ಷಣ ಹೊರಗೆ ಹಾಕಿ....’’ ಎಂದದ್ದೇ ತಡ....ಭಾರತ ಸೇವಾದಳದ ಕಾರ್ಯಕರ್ತರು ಅವರನ್ನು ಎಳೆದುಕೊಂಡು ಹೋದರು.
‘‘ಆತ್ಮ ಎಲ್ಲಿದೆ...ಆತ್ಮ ಎಲ್ಲಿದೆ...ತಕ್ಷಣ ಉತ್ತರಿಸಿ. ಇಲ್ಲದಿದ್ದರೆ ಎಲ್ಲರನ್ನೂ ವಜಾ ಮಾಡಬೇಕಾಗುತ್ತದೆ...’’
‘‘ಅಣು ಒಪ್ಪಂದದ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಮನಮೋಹನ್ ಸಿಂಗ್ ಕಾಂಗ್ರೆಸ್‌ನ ಆತ್ಮವನ್ನು ಅಲ್ಲೇ ಬಿಟ್ಟು ಬಂದಿರಬೇಕು...ನೀವು ಒಮ್ಮೆ ಒಬಾಮ ಅವರಿಗೆ ಫೋನ್ ಮಾಡಿ ನೋಡಿ....’’ ಯಾರೋ ಆರೋಪಿಸಿದರು.
‘‘ಬಹುಶಃ ಕಲ್ಲಿದ್ದಲು ಗಣಿಯ ಒಳಗೆ ಇಣುಕಿ ನೋಡುವಾಗ ಅದರೊಳಗೆ ಬಿದ್ದಿರುವ ಸಾಧ್ಯತೆಯೇ ಜಾಸ್ತಿ...ಮನಮೋಹನ್ ಸಿಂಗ್ ಅವರನ್ನು ಒಮ್ಮೆ ಗಣಿಯ ಒಳಗೆ ಇಳಿಸಿ ನೋಡಿದರೆ ಸಿಕ್ಕಿದರೂ ಸಿಕ್ಕಬಹುದು...’’ ಅಯ್ಯರ್ ಹೇಳಿದರು.
‘‘ನನಗೆ ತಿಳಿದಿರುವ ಮಟ್ಟಿಗೆ ಅದನ್ನು ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದಲ್ಲಿ ಮುಲಾಯಂ ಜೊತೆ ಸೇರಿ ಬಿರಿಯಾನಿ ಮಾಡಿ ತಿಂದಿರಬೇಕು....’’
ಸಲ್ಮಾನ್ ಖುರ್ಷಿದ್ ಸಿಟ್ಟಾದರು ‘‘ನಾನು ಬಿರಿಯಾನಿ ಮಾಡಿದ್ದು ಮುಝಫ್ಫರ್ ನಗರದ ಅಲ್ಪಸಂಖ್ಯಾತ ಕುರಿಗಳನ್ನು ಕಡಿದು. ಕಾಂಗ್ರೆಸ್ ಆತ್ಮವನ್ನು ಬಿರಿಯಾನಿ ಮಾಡಿ ತಿನ್ನುವಷ್ಟು ಇನ್ನೂ ಕೆಟ್ಟು ಹೋಗಿಲ್ಲ....ಇಂದಿನ ಸಭೆಗೆ ಗೈರು ಹಾಜರಾಗಿದ್ದಾರಲ್ಲ ಚಿದಂಬರಂ...ಅವರಲ್ಲಿ ಕೇಳಿ...ಅವರು ಫೈನಾನ್ಸ್ ಮಿನಿಸ್ಟರಾಗಿದ್ದಾಗ ಕಾಂಗ್ರೆಸ್‌ನ ಆತ್ಮವನ್ನು ಒತ್ತೆಯಿಟ್ಟು ವಿಶ್ವಬ್ಯಾಂಕ್‌ನಿಂದ ಸಾಲ ತಂದಿರುವ ಸಾಧ್ಯತೆಯೂ ಇದೆ...’’
‘‘ಮೇಡಂ...ಅಸ್ಸಾಂನಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಗೊಗೊಯಿ ಶಿಲುಬೇಗೇರಿಸಿರುವ ಬಗ್ಗೆ ದಟ್ಟವಾಗಿ ವದಂತಿ ಹಬ್ಬಿದೆ. ಒಮ್ಮೆ ಅವರಲ್ಲಿ ವಿಚಾರಿಸಿ ನೋಡಿದರೂ ಆಗಬಹುದು...’’ ಇನ್ಯಾರೋ ಇನ್ನೊಂದು ಸಲಹೆ ನೀಡಿದರು.
‘‘ಯಾವುದಕ್ಕೂ ಪ್ರಿಯಾಂಕಾ ಮೇಡಮ್ ಅವರಲ್ಲೂ ವಿಚಾರಿಸುವುದು ಒಳ್ಳೆಯದು. ರಾಬರ್ಟ್ ವಾದ್ರಾ ಅವರ ತಿಜೋರಿಯಲ್ಲಿ ಹುಡುಕಿದರೆ ಕೆಲವೊಮ್ಮೆ ಸಿಕ್ಕಿದರೂ ಸಿಕ್ಕಿತು...’’ ಸೋನಿಯಾಗೆ ಅದು ಯಾರೋ ಭಿನ್ನಮತೀಯ ಎನ್ನುವುದು ಗೊತ್ತಾಗಿ ಬಿಟ್ಟಿತು. ಉತ್ತರಿಸುವುದಕ್ಕೇ ಹೋಗಲಿಲ್ಲ.
‘‘ನಾಡಿದ್ದು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಹುಡುಕೋಣ....ಅಲ್ಲಿ ಸಿಕ್ಕಿದರೂ ಸಿಕ್ಕೀತು...’’ ಇನ್ಯಾರೋ ತಲೆಗೆಟ್ಟ ಸಲಹೆ ನೀಡಿದರು. ವೀರಪ್ಪ ಮೊಯ್ಲಿ ಮಾತ್ರ ಇಂತಹ ಸಲಹೆ ನೀಡಲು ಸಾಧ್ಯ ಎಂದು ಸೋನಿಯಾ ಅರ್ಥ ಮಾಡಿಕೊಂಡರು.
‘‘ಪ್ರಧಾನಿ ಮೋದಿಗೆ ಹುಡುಕಿಕೊಡಲು ಮನವಿ ಸಲ್ಲಿಸೋಣ...’’ ಮಗದೊಬ್ಬ ಸಲಹೆ ನೀಡಿದರು. ಇದು ಮೈಸೂರಿನ ಎಚ್. ವಿಶ್ವನಾಥ್ ಇರಬೇಕು ಎಂದು ಸೋನಿಯಾ ಊಹಿಸಿದರು.
‘‘ಬೇಡ ಮೇಡಂ...ನಾವೆಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡೋಣ....ನಮ್ಮ ಕಾಂಗ್ರೆಸ್‌ನ ಆತ್ಮವನ್ನು ಮೋದಿ ಬಳಗ ಕದ್ದುಕೊಂಡಿದೆ. ಆದುದರಿಂದ ಮೋದಿ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸೋಣ....’’ ಸೋನಿಯಾ ಸಿಟ್ಟಿನಿಂದ ತಲೆಯೆತ್ತಿ ನೋಡಿದರೆ ದಿಗ್ವಿಜಯ್ ಸಿಂಗ್. ಸೋನಿಯಾ ನಿಟ್ಟುಸಿರಿಟ್ಟು.
ಅಷ್ಟರಲ್ಲಿ ‘‘ಮೇಡಂ...’’ ಎಂಬ ಸದ್ದು. ಇಡೀ ಸಭೆ ಬೆಚ್ಚಿ ಬಿದ್ದಿತು. ಮನಮೋಹನ್ ಸಿಂಗ್ ಬಾಯಿ ತೆರೆದಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಅರೆ! ಮನಮೋಹನ್ ಸಿಂಗ್ ಮಾತನಾಡುತ್ತಿದ್ದಾರೆ....ಮೊತ್ತ ಮೊದಲ ಬಾರಿಗೆ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮಾತನಾಡಲು ಬಿಟ್ಟರು ‘‘ಮೇಡಂ...ಕಾಂಗ್ರೆಸ್‌ನ ಆತ್ಮ ಈಗ ಅಲ್ಲ 1992ರಲ್ಲೇ ಕಾಣೆಯಾಗಿದೆ....’’
‘‘ಹೌದಾ...ಹೇಗೆ...’’
‘‘ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೈಯಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಜೋಪಾನ ಮಾಡಲು ನೀವೇ ತಾನೆ ಕೊಟ್ಟದ್ದು? ಆದರೆ ಬಾಬರೀ ಮಸೀದಿ ಆ ಆತ್ಮದ ಮೇಲೆ ಬಿದ್ದು ಬಿಟ್ಟಿತು. ಅದೀಗ ಕಾಣೆಯಾಗಿದೆ. ಬಾಬರೀ ಮಸೀದಿಯ ಧೂಳಿನಲ್ಲಿ ನಾವು ಆ ಆತ್ಮವನ್ನು ಹುಡುಕಬೇಕಾಗಿದೆ...’’

ರವಿವಾರ - ಮೇ -25-2014

Sunday, May 18, 2014

ಅಕ್ಕಿಯನ್ನು ಇನ್ನು ಕಂಪ್ಯೂಟರ್‌ನಲ್ಲೇ ಬೆಳೆಯೋದು....

 ವಾರ್ತಾ ಭಾರತಿ ಕನ್ನಡ ದೈನಿಕದ ಮೇ ೧೮ ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಅಂದು ಪತ್ರಕರ್ತ ಎಂಜಲು ಕಾಸಿ ಎಂದಿಗಿಂತ ತುಸು ಬೇಗ ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಎದ್ದಿದ್ದ. ಅಂದಿನ ಬೆಳಗ್ಗೆ ಎಂದಿನಂತಿಲ್ಲ ಅನ್ನಿಸಿತು. ಅನುಮಾನ ಬಂದು, ಸೀದಾ ಅಂಗಳಕ್ಕೆ ಬಂದ. ಮೇಲೆ ನೋಡಿದರೆ ಮಾವಿನ ಮರದಲ್ಲಿ ಹಲಸಿನ ಗಾತ್ರದಷ್ಟು ದೊಡ್ಡ ಮಾವುಗಳು ನೇತಾಡುತ್ತಿದ್ದವು. ಕಾಸಿ ಬೆಚ್ಚಿ ಬಿದ್ದ. ಅರೆ! ಹಲಸಿನ ಗಾತ್ರ ಮಾವು! ಜೋರಾಗಿ ಹೆಂಡತಿಯನ್ನು ರಕ್ಷಣೆಗೆಂದು ಕೂಗಿದ ‘‘ಸೂಸಿ...ಸೂಸಿ...ಇಲ್ಲಿ ಬಾ...ಬೇಗ ಬಾ...’’
ಸೂಸಿ ಒಳಗಿನಿಂದ ಓಡಿ ಬಂದಳು ‘‘ಏನಾಯ್ತು...?’’ ಅಚ್ಚರಿಯಿಂದ ಕೇಳಿದಳು.
‘‘ಆಗುವುದೇನು, ಮರದಲ್ಲಿ ನೋಡು?’’ ಎಂದು ಕೇಳಿದ.
ಸೂಸಿ ನಿಟ್ಟುಸಿರಿಟ್ಟಳು ‘‘ಅಷ್ಟೇಯ? ನಿಮಗಿನ್ನೂ ಗೊತ್ತಿಲ್ಲವಾ? ಪತ್ರಕರ್ತರಾಗಿ ಹತ್ತು ಗಂಟೆಗೆ ಎದ್ದರೆ ನಿಮಗೆ ಗೊತ್ತಾಗೋದು ಹೇಗೆ? ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ...ಅಭೂತಪೂರ್ವವಾಗಿ ನರೇಂದ್ರ ಮೋದಿ ಗೆದ್ದಿದ್ದಾರೆ. ಆದುದರಿಂದ ಇವತ್ತಿನಿಂದ ಮಾವಿನ ಕಾಯಿಗಳೆಲ್ಲ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ...’’ ಸೂಸಿ ಹೇಳಿದಳು.
‘‘ಅಲ್ಲ ಕಣೆ...ಅದಕ್ಕೂ ಇದಕ್ಕೂ ಏನು ಸಂಬಂಧ...’’ ಕಾಸಿ ಕೇಳಿದ.
‘‘ಅಭಿವೃದ್ಧಿ ಕಣ್ರೀ....ಅಭಿವೃದ್ಧಿ. ಮೋದಿ ಅಧಿಕಾರಕ್ಕೆ ಬಂದದ್ದೇ ಅಭಿವೃದ್ಧಿ ಆಗ್ತಾ ಇದೆ...ಇದೀಗ ಗೆದ್ದದ್ದಷ್ಟೇ. ಅಷ್ಟರಲ್ಲಿ ಮಾವು ಹೆದರಿ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ. ನಮ್ಮ ಹೆಂಟೆ ಪಾಪ ರುಬ್ಬು ಕಲ್ಲಿನಷ್ಟು ದೊಡ್ಡ ಮೊಟ್ಟೆ ಇಟ್ಟು ಸತ್ತೇ ಹೋಗಿದೆ...ಎಲ್ಲ ಮೋದಿ ಮಹಾತ್ಮೆ ಕಣ್ರೀ....’’
ಕಾಸಿ ವಿಸ್ಮಯಗೊಂಡ. ಆಕಾಶವನ್ನು ನೋಡಿದರೆ ಅಲ್ಲಿ ಕೇಸರಿ ಸೂರ್ಯ. ಮನೆಯ ಮುಂದೆ ನೋಡಿದರೆ ವಿಮಾನ ನಿಲ್ದಾಣ...ಮೆಟ್ರೋರೈಲು ಕಣ್ಮುಂದೆಯೇ ಧಡ್ ಧಡ್ ಎಂದು ಹೋಗುತ್ತಿದೆ...’’
ಒಳಗೆ ಬಂದ. ಅಷ್ಟರಲ್ಲಿ ಎಂಟು ವರ್ಷದ ಮಗ ಭಾರತದಲ್ಲಿ 40 ರಾಜ್ಯಗಳಿವೆ....’’ ಎಂದು ಓದುತ್ತಿದ್ದ. ಅರೇ! ನಲವತ್ತು ರಾಜ್ಯಗಳು ಯಾವಾಗ ಸೃಷ್ಟಿಯಾಯಿತು? ಕಾಸಿಗೆ ಅಚ್ಚರಿಯಾಯಿತು ‘‘ಮಗನೇ ದೇಶದಲ್ಲಿ 40 ರಾಜ್ಯ ಅಂತ ಯಾರು ಹೇಳಿಕೊಟ್ಟಿರೋದು....’’
‘‘ಅಪ್ಪಾ ಮೋದಿ ಗೆದ್ದರೆ ಪಕ್ಕದ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಭಾರತಕ್ಕೆ ಸೇರತ್ತೆ ಎಂದು ಮೇಷ್ಟ್ರು ಹೇಳುತ್ತಿದ್ದರು. ಆ ಲೆಕ್ಕದಲ್ಲಿ ಭಾರತದ ರಾಜ್ಯಗಳು ಜಾಸ್ತಿ ಆಗಿವೆ ಅಪ್ಪ. ಇವತ್ತು ಮೋದಿ ಗೆದ್ದಿರೋದರಿಂದ ಪಾಕಿಸ್ತಾನ ‘‘ನಮ್ಮನ್ನು ಭಾರತಕ್ಕೆ ಸೇರಿಸ್ಕೊಳ್ಳಿ’’ ಅಂತ ಘೋಷಿಸಿದೆ....’’
‘‘ಹೌದಾ...’’ ಎಂದು ಒಳ ಹೋಗಿ ಮನೆಯ ಕಪಾಟು ತೆರೆದು ನೋಡಿದರೆ ಅದರ ತುಂಬಾ ರಾಶಿ ರಾಶಿ ನೋಟುಗಳು....‘‘ಸೂಸಿ....’’ ಮತ್ತೆ ಕಾಸಿ ಚೀರಿದ.
ಸೂಸಿ ಓಡಿ ಬಂದಳು. ‘‘ಏನ್ರೀ...ಅದು...’’ ಕೇಳಿದಳು.
ಕಾಸಿ ತೆರೆದ ಕಾಪಾಟಿನ ಮುಂದೆ ಸ್ತಂಭೀಭೂತನಾಗಿ ನಿಂತಿದ್ದ. ಸೂಸಿಗೆ ಅರ್ಥವಾಯಿತು ‘‘ಓ ಅದಾ...ನಿಮಗೆ ಇನ್ನೂ ವಿಷಯ ಗೊತ್ತಿಲ್ವಾ....ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣವನ್ನೆಲ್ಲ ಅಲ್ಲಿನ ಬ್ಯಾಂಕಿನ ಮ್ಯಾನೇಜರ್‌ಗಳು ನರೇಂದ್ರ ಮೋದಿಯ ಪಾದ ಬುಡಕ್ಕೆ ತಂದು ಸುರಿದಿದ್ದಾರಂತೆ...ಅದನ್ನು ಮೋದಿಯವರು ಇಡೀ ದೇಶಕ್ಕೆ ಹಂಚಿದ್ದಾರೆ. ನಮ್ಮ ಪಾಲಿನದ್ದನ್ನು ಈಗಷ್ಟೇ ಬಿಜೆಪಿಯ ಸ್ಥಳೀಯ ಮುಖಂಡರು ತಂದು ಕೊಟ್ಟರು...ಇದರಲ್ಲಿ ನಮ್ಮ ಪಾಲಿನ ಹತ್ತು ಕೋಟಿ ರೂಪಾಯಿ ಇದೆ ಗೊತ್ತಾ...’’
ಕಾಸಿಗೆ ತಲೆ ಗಿರ್ರೆಂದಿತು. ನೇರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಮನೆಯ ಹೊರಗೆ ಬರುವಷ್ಟರಲ್ಲಿ ಒಂದಿಷ್ಟು ಜನ ಸಾಲು ಸಾಲಾಗಿ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದರು. ‘‘ಯಾರ್ರೀ ನೀವು? ಯಾಕೆ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದೀರಿ?’’ ಕಾಸಿ ಕೇಳಿದ.
‘‘ನಾವು ಬಾಂಗ್ಲಾ ವಲಸಿಗರು. ಮೋದಿ ಗೆದ್ದಿದ್ದಾರಲ್ಲ. ಅವರು ನಮಗೆ ಗಡುವು ನೀಡಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ಮೊದಲು ನಾವೆಲ್ಲ ಬಾಂಗ್ಲಾಕ್ಕೆ ವಾಪಾಸ್ ಹೋಗುತ್ತಿದ್ದೇವೆ....ಬೇಗ ಟ್ರೈನ್ ಹಿಡೀಬೇಕು...’’
ಬ್ಲಾಂಗ್ಲಾ ದೇಶಿಯರೆಲ್ಲ ವಲಸೆ ಹೋಗಿರುವುದರಿಂದ ಬೆಂಗಳೂರು ಬಣ ಬಣ ಅನ್ನುತ್ತಿತ್ತು. ಎಲ್ಲಿ ನೋಡಿದರೂ ಖಾಲಿ ಖಾಲಿ ಜಾಗ. ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಬಹುದು....ಕಾಸಿ ರೋಮಾಂಚನಗೊಂಡ.
‘‘ಮಗನಿಗೆ ಹೊಸ ಅಟ್ಲಾಸ್ ತಂದು ಕೊಡಬೇಕು. ಈಗ ಇರುವ ಭಾರತದಲ್ಲಿ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಬೇರೆ ಬೇರೆ ಇವೆ. ಇನ್ನು ಮುಂದೆ ಅಖಂಡ ಭಾರತವಾಗಿರುವುದರಿಂದ ಅಟ್ಲಾಸ್ ಬದಲಿಸಬೇಕಾಗುತ್ತದೆ...’’ ಎಂದು ಯೋಚಿಸಿ ಅಟ್ಲಾಸ್ ಅಂಗಡಿಗೆ ಹೋಗಿ ಮೋದಿ ಸರಕಾರದ ಅಟ್ಲಾಸ್ ಪುಸ್ತಕ ತೆಗೆದುಕೊಂಡ.
  ಮನೆಗೆ ವಾಪಾಸ್ ಬಂದು ಟಿವಿ ಆನ್ ಮಾಡಿ ಕ್ರಿಕೆಟ್ ನೋಡಿದರೆ ಅಲ್ಲಿ ಭಾರತೀಯ ಆಟಗಾರರು ಲಕ್ಷಾಂತರ ರನ್ ಮಾಡಿದ್ದಾರೆ. ಮತ್ತು ಧೋನಿ ಹೇಳುತ್ತಿದ್ದಾನೆ ‘‘ನಾವು ಬರೇ ಹತ್ತು ಓವರ್‌ನಲ್ಲಿ ಒಂದು ಲಕ್ಷ ರನ್ ಮಾಡಲು ಮೋದಿ ಅಲೆಯೇ ಕಾರಣ. ಮುಂದಿನ ದಿನಗಳಲ್ಲಿ ನಾವು ಕೋಟ್ಯಂತರ ರನ್‌ಗಳನ್ನು ಮಾಡಲಿದ್ದೇವೆ. ಬಿಸಿಸಿಐ ಅಧ್ಯಕ್ಷರಾಗಿ ಅಮಿತ್ ಶಾ ಏನಾದರೂ ಆಯ್ಕೆಯಾದರೆ, ರನ್ನಿನ ಹೊಳೆಯಲ್ಲಿ ದೇಶವನ್ನು ಮುಳುಗಿಸಲಿದ್ದೇವೆ. ರನ್‌ಗಳನ್ನೇ ಅಮೆರಿಕ, ಚೀನಾ, ಇಂಗ್ಲೆಂಡ್‌ಗಳಿಗೆ ಮಾರಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ...’’
ಬಾಯಗಲಿಸಿ ಕಾಸಿ ಅದನ್ನೇ ನೋಡಿದ. ಮಧ್ಯಾಹ್ನ ನೋಡಿದರೆ ಸೂಸಿ ಬಿರಿಯಾನಿ ಮಾಡಿದ್ದಳು. ನೋಡಿದರೆ ರನ್‌ಗಳ ಬಿರಿಯಾನಿ.! ‘‘ಹೌದು ಕಣ್ರೀ...ಕ್ರಿಕೆಟ್‌ನಲ್ಲಿ ಈ ಭಾರಿ ಧೋನಿ ಸಂಗ್ರಹಿಸಿದ ರನ್‌ಗಳಿಂದ ಬಿರಿಯಾನಿ ಮಾಡಿದ್ದೇನೆ ರುಚಿ ನೋಡಿ ಹೇಳಿ...ರಾತ್ರಿಗೆ ವಿರಾಟ್ ಕೊಹ್ಲಿ ಅವರು ಸಂಗ್ರಹಿಸಿದ ರನ್‌ಗಳಿಂದ ಪಲಾವ್ ಮಾಡಲಿದ್ದೇನೆ....’’ ಕಾಸಿ ಬಟ್ಟಲನ್ನೇ ಅಚ್ಚರಿಯಿಂದ ನೋಡಿದ.
‘‘ಅಕ್ಕಿಯಿಂದ ಏನಾದರೂ ಐಟಂ ಮಾಡಬಾರದೆ...?’’ ಕಾಸಿ ಪತ್ನಿಗೆ ಕೇಳಿದ. ‘‘ಪ್ರಿಂಟರ್ ಸರಿಯಿಲ್ಲ ಕಣ್ರೀ...’’ ಸೂಸಿ ಉತ್ತರಿಸಿದಳು. ಪ್ರಿಂಟರ್‌ಗೂ ಅಕ್ಕಿಗೂ ಏನು ಸಂಬಂಧ?
‘‘ಅದೇ ಕಣ್ರೀ...ಮೋದಿ ಅಭಿವೃದ್ಧಿಯಲ್ಲಿ ಅಕ್ಕಿ ಗದ್ದೆಯಲ್ಲಿ ಬೆಳೆಯೋದಿಲ್ಲ. ಕಂಪ್ಯೂಟರ್‌ನಲ್ಲಿ ಕ್ಲಿಕ್ ಮಾಡಿದ್ರೆ ಪ್ರಿಂಟರ್‌ನಲ್ಲಿ ದರದರಾಂತ ಅಕ್ಕಿ ಸುರಿಯತ್ತೆ...ಪ್ರಿಂಟರ್ ಸರಿಯಾದ ತಕ್ಷಣ ನಿಮಗೆ ಬೇಕಾದ ಅಕ್ಕಿಯಿಂದ ಬೇಕಾದ ರೊಟ್ಟಿ ಮಾಡಿ ಕೊಡುವಾ...’’
‘‘ಅಕ್ಕಿ ಕಂಪ್ಯೂಟರ್‌ನಲ್ಲಿ ಮಾಡೋದಾದ್ರೆ...ದೇಶದ ರೈತರೆಲ್ಲ ಏನು ಮಾಡುತ್ತಿದ್ದಾರೆ...’’ ಕಾಸಿ ಕೇಳಿದ.
‘‘ಮಾಡೋದೇನು...ರೈತರನ್ನೆಲ್ಲ ನಮ್ಮ ಮೋದಿ ಸಾಹೇಬ್ರು ಪ್ರತಿ ಊರಿನ ಮಧ್ಯೆ ನಿಲ್ಲಿಸಿದ್ದಾರೆ....’’
‘‘ಅಂದ್ರೆ...ಊರು ಕಾಯೋಕಾ?’’
‘‘ಊರು ಕಾಯೋದೇನು ಬಂತು ಮಣ್ಣು...ಯಾವಾಗ ಮೋದಿ ಆಯ್ಕೆಯಾದರೋ ಆಗಲೇ ಅಳಿದುಳಿತ ರೈತರೆಲ್ಲ ನೇಣು ಹಾಕಿಕೊಂಡರು. ಮೋದಿ ಅಭಿವೃದ್ಧಿಯ ಭಾರತದಲ್ಲಿ ರೈತರಿರೋದು ಅವಮಾನ ಅಲ್ವಾ? ಅದಕ್ಕೆ. ರೈತರ ತ್ಯಾಗಕ್ಕಾಗಿ ಪ್ರತಿ ಊರಿನ ಮಧ್ಯೆ ಒಬ್ಬೊಬ್ಬ ರೈತರ ಬೃಹತ್ ಉಕ್ಕಿನ ಪ್ರತಿಮೆಯನ್ನು ಮೋದಿ ನಿರ್ಮಿಸಲಿದ್ದಾರೆ. ಹಾಗೆಯೇ ದಿಲ್ಲಿಯಲ್ಲಿ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ದೊಡ್ಡ ರೈತನ ಪ್ರತಿಮೆಯನ್ನು ನಿರ್ಮಿಸಲಿದ್ದಾರಂತೆ. ಈ ಪ್ರತಿಮೆಗೆ ಗುಜರಾತ್‌ನ ಅದಾನಿ ಮತ್ತು ಮುಂಬಯಿಯ ಅಂಬಾನಿ ದುಡ್ಡು ಹಾಕ್ತಾರಂತೆ....’’
ಸ್ವಲ್ಪ ಹೊತ್ತು ತಡೆದು ಸೂಸಿ ಹೇಳಿದಳು ‘‘ನೋಡ್ರಿ...ಬೇಗ ಬೇಗ ಊಟ ಮಾಡಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಪಾಕಿಸ್ತಾನದ ಜೊತೆಗೆ ಮೋದಿ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ಎಲ್ಲವನ್ನೂ ನೇರ ಪ್ರಸಾರ ಮಾಡುತ್ತಾರೆ...ದೇಶದ ಎಲ್ಲೇ ಕೋಮುಗಲಭೆ ನಡೆದರೂ ಅದನ್ನು ಮೋದಿ ಆಡಳಿತದಲ್ಲಿ ನೇರ ಪ್ರಸಾರವಂತೆ...ಟಿವಿ ಸೀರಿಯಲ್ ನೋಡಿ ಬೋರ್ ಹೊಡೆದಿದೆ. ಇನ್ನೇನಿದ್ದರೂ ಯುದ್ಧ, ಗಲಭೆಗಳನ್ನೇ ಲೈವ್ ಆಗಿ ನೋಡಿ ಮಜಾ ಪಡೆಯಬಹುದು...’’
ಕಾಸಿ ತನ್ನೆರಡು ಕಿವಿಗಳನ್ನು ಮುಚ್ಚಿ ‘‘ನಿಲ್ಲಿಸೂ.....’’ ಚೀರಿದ. ಅಷ್ಟರಲ್ಲಿ ಪತ್ನಿ ಕೂಗೋದು ಕೇಳಿಸಿತು ‘‘ಬೆಳಗಾಯಿತು ಎದ್ದೇಳ್ರೀ....ಅದೇನು ನಿದ್ದೆ ಕಣ್ಣಲ್ಲಿ ನಿಲ್ಲಿಸು ಅಂತ ಬೊಬ್ಬೆ ಹೊಡೀತೀರಿ...ಬನ್ನಿ...ಇವತ್ತು ಮೇ 16. ಫಲಿತಾಂಶ ಇನ್ನೇನು ಹೊರ ಬೀಳತ್ತೆ’’
ಕಾಸಿ ಕಣ್ಣು ಬಿಟ್ಟ ‘‘ಹಾಗಾದ್ರೆ...ನಾನು ನೋಡಿದ್ದು, ಕೇಳಿದ್ದು ಎಲ್ಲ ಕನಸಾ?’’ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಪತ್ನಿ ಸೂಸಿ ಜೋರಾಗಿ ಕೂಗಿ ಹೇಳಿದಳು ‘‘ರೀ...ಮೋದಿಗೆ ಎಲ್ಲ ಕಡೆ ವಿಜಯ ಸಾಧಿಸ್ತಾ ಇದ್ದಾರೆ...’’

Saturday, May 10, 2014

ನೀವು ಸೂಟ್‌ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...

 ಪತ್ರಕರ್ತ ಎಂಜಲು ಕಾಸಿಗೆ ಇದು ಕಷ್ಟಕಾಲ. ಯಾಕೆಂದರೆ ಆತನ ಐದು ವರ್ಷದ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದ ಸಮಯ ಬಂದಿದೆ. ಹಲವು ಶಾಲೆಗಳಿಗೆ ಈಗಾಗಲೇ ಭೇಟಿ ಮಾಡಿ ಬಸವಳಿದಿದ್ದ. ಮುಖ್ಯವಾಗಿ ಪತ್ರಕರ್ತ ಎಂಜಲು ಕಾಸಿಯ ದೊಡ್ಡ ಸಮಸ್ಯೆಯೇ ಅವನಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ತನಗೆ ಗೊತ್ತಿರುವ ಕನ್ನಡದಲ್ಲಿ ಅದೆಷ್ಟೋ ಇಂಟರ್ಯೂಗಳನ್ನು ಮಾಡಿದ ಪತ್ರಕರ್ತ ಎಂಜಲು ಕಾಸಿ ಇದೀಗ ತಾನೇ ಇಂಟರ್ಯೂ ಬರೆಯಬೇಕಾದ ಪರಿಸ್ಥಿತಿ.
ಅದು ಹೇಗೋ ಒಂದು ಖಾಸಗಿ ಶಾಲೆಯಲ್ಲಿ ಕಾಂಪೌಂಡ್‌ನೊಳಗೆ ಪ್ರವೇಶ ಸಿಕ್ಕಿತು. ರ್ಯಾಪಿಡೆಕ್ಸ್ ಪುಸ್ತಕದ ಸಹಾಯದಿಂದ ಹರುಕು ಮುರುಕು ಇಂಗ್ಲಿಷ್ ಕಲಿತು, ಶಾಲೆಯ ವಾಚ್‌ಮೆನ್ ಜೊತೆಗೆ ಇಂಗ್ಲಿಷ್‌ನಲ್ಲಿ ಅನುಮತಿ ಕೇಳಿದ್ದ. ಇಂಗ್ಲಿಷ್ ಕಿವಿಗೆ ಬಿದ್ದದ್ದೇ ವಾಚ್‌ಮ್ಯಾನ್ ತಕ್ಷಣ ಒಳಗೆ ಬಿಟ್ಟ. ಬರೇ ಕಾಂಪೌಂಡ್ ದಾಟಿದರೆ ಮುಗಿಯುತ್ತದೆಯೆ, ಜಗಲಿ ಹತ್ತಬೇಕು. ಅಲ್ಲಿಂದ ಶಾಲೆಯ ಒಳಗೆ ಪ್ರವೇಶ ಪಡೆಯಬೇಕು. ಅಲ್ಲಿಂದ ಪ್ರಿನ್ಸಿಪಾಲ್ ರೂಂ ಮುಟ್ಟಬೇಕು. ಇಷ್ಟೆಲ್ಲ ಸಾಹಸವನ್ನು ಅದು ಹೇಗೋ ಮಾಡಿ ಮುಗಿಸಿದ. ಅಷ್ಟರಲ್ಲಿ ಪ್ರಿನ್ಸಿಪಾಲ್ ತಮ್ಮ ಅಮೆರಿಕನ್ ಇಂಗ್ಲಿಷ್‌ನಲ್ಲಿ ಒದರಿದರು ‘‘ಮಿ. ಕಾಸಿ....ನಿಮಗೆ ಇಂಗ್ಲಿಷ್ ಬಂದರೆ ಸಾಲದು. ನಿಮಗೆ ಕನ್ನಡ ಗೊತ್ತಿರಬಾರದು. ನಮ್ಮ ಶಾಲೆಯ ಒಬ್ಬ ಎಲ್‌ಕೆಜಿ ವಿದ್ಯಾರ್ಥಿಯ ತಂದೆಗೆ ಕನ್ನಡ ಗೊತ್ತಿದೆ ಎನ್ನುವುದು ನಮ್ಮ ಶಾಲೆಗೆ ಶೇಮ್ ಶೇಮ್ ಪಪ್ಪಿ ಶೇಮ್...ಗೊತ್ತಾ?’’
 ಕಾಸಿ ಹಣೆ ಒರೆಸಿಕೊಂಡು, ತನ್ನ ರ್ಯಾಪಿಡೆಕ್ಸ್ ಇಂಗ್ಲಿಷ್‌ನಲ್ಲಿ ಹೇಳಿದ ‘‘ನನಗೆ ಕನ್ನಡ ಗೊತ್ತೇ ಇಲ್ಲ. ಕನ್ನಡ ಯಾವ ರಾಜ್ಯದ ಭಾಷೆ ಎನ್ನುವುದೂ ಗೊತ್ತಿಲ್ಲ...’’
ಪ್ರಿನ್ಸಿಪಾಲರಿಗೆ ಖುಷಿಯಾಯಿತು. ‘‘ನಿಮ್ಮ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದರೆ ನೀವು ಪರೀಕ್ಷೆ ಬರೆದು ಪಾಸಾಗಬೇಕು. ಹಾಗಾದಲ್ಲಿ ಮಾತ್ರ...’’
ಎಲ್ಲ ಪರೀಕ್ಷೆಗಳು ಮುಗಿಯಿತು ಎಂದರೆ ಇದೀಗ ಮತ್ತೆ ಹೊಸದಾಗಿ ಪರೀಕ್ಷೆ ಶುರುವಾಗಿದೆಯಲ್ಲ ಎಂದು ಕಾಸಿ ಕಂಗಾಲಾದ. ‘‘ಸಾರ್...ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅಂತ...ನನ್ನ ಮಗನನ್ನು ಸೇರಿಸಬೇಕಾದರೆ ನನಗೆ ಯಾಕೆ ಬರೆ?’’
ಪ್ರಿನ್ಸಿಪಾಲ್ ಕಾಸಿಯ ಹರುಕು ಮುರುಕು ಇಂಗ್ಲಿಷ್‌ನ್ನು ಮೆಚ್ಚಿಕೊಂಡರು. ‘‘ನೋಡಿ...ಪರೀಕ್ಷೆ ನಿಮಗೆ ಮಾತ್ರ ಅಲ್ಲ, ನಿಮ್ಮ ಮಗುವಿಗೂ ಪರೀಕ್ಷೆಯಿದೆ. ಮೊದಲು ನಿಮಗೆ ಪರೀಕ್ಷೆ ಇರತ್ತೆ. ಅದರಲ್ಲಿ ನೀವು ಡಿಸ್ಟಿಂಕ್ಷನ್ ಪಡೆದರೆ, ಮತ್ತೆ ನಿಮ್ಮ ಪತ್ನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತದೆ. ಅವರೂ ಕೂಡ ಅದರಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದರೆ ಮತ್ತೆ ನಿಮ್ಮ ಮಗುವಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ನಿಮ್ಮ ಮಗು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದರೆ ಬಳಿಕ ನೀವು ನೀಡುವ ಸೂಟ್‌ಕೇಸ್ ಭಾರವನ್ನು ತೂಕ ಮಾಡಲಾಗುತ್ತದೆ. ಅದು ನಿಮ್ಮ ಮಗುವಿನ ಭಾರಕ್ಕೆ ಸರಿಯಾಗಿದ್ದರೆ ನಿಮ್ಮ ಮಗುವಿಗೆ ಎಲ್‌ಕೆಜಿಯಲ್ಲಿ ಅಡ್ಮಿಶನ್ ನೀಡಲಾಗುತ್ತದೆ...’’
‘‘ಮಗು ಇನ್ನೂ ಶಾಲೆಗೆ ಸೇರಿಯೇ ಇಲ್ಲ...ಪರೀಕ್ಷೆ ಯಾವುದರ ಬಗ್ಗೆ?’’ ಕಾಸಿ ಅಚ್ಚರಿಯಿಂದ ಕೇಳಿದ.
ಪ್ರಿನ್ಸಿಪಾಲ್ ನಕ್ಕ ‘‘ನಿಮಗಿನ್ನೂ ಇದರ ಬಗ್ಗೆ ಏನೂ ಗೊತ್ತಿಲ್ಲ ಎಂದಾಯಿತು. ಹೀಗೆ ಆದರೆ ನೀವು ಪರೀಕ್ಷೆ ಪಾಸಾದ ಹಾಗೆಯೆ. ನೋಡಿ...ನಿಮ್ಮ ಮಗುವಿಗೆ ಹತ್ತನೆ ತರಗತಿಯ ಹತ್ತು ಪ್ರಶ್ನೆಗಳು, ಪಿಯುಸಿಯ 12 ಪ್ರಶ್ನೆಗಳು ಮತ್ತು ಸ್ನಾತಕೋತ್ತರ ಪದವಿಯ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ನಿಮ್ಮ ಮಗು ಸಲೀಸಾಗಿ ಉತ್ತರಿಸಿದರೆ ಎಲ್‌ಕೆಜಿಗೆ ಸೇರಿಸಲಾಗುತ್ತದೆ...’’
‘‘ಇನ್ನೂ ಎಲ್‌ಕೆಜಿಗೆ ಸೇರುವ ಮಗುವಿಗೆ ಸ್ನಾತಕೋತ್ತರ ಪದವಿಯ ಪ್ರಶ್ನೆಯೆ?’’ ಕಾಸಿ ಸಿಡಿಲು ಬಡಿದ ಮರದಂತಾದ.
‘‘ಹೌದು ಕಣ್ರೀ...ನಮ್ಮ ಶಾಲೆ ಅತ್ಯುತ್ತಮ ಫಲಿತಾಂಶಕ್ಕೆ ಹೆಸರಾಗಿರುವ ಶಾಲೆ. ಹತ್ತು ರ್ಯಾಂಕುಗಳನ್ನು ಪಡೆದಿರುವ ಶಾಲೆ. ಎಲ್ಲ ಮಕ್ಕಳೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿರುವ ಶಾಲೆ...ಆದುದರಿಂದ ಇಷ್ಟೆಲ್ಲ ಪ್ರಶ್ನೆಗಳಿಗೆ ನಿಮ್ಮ ಮಗು ಸರಿಯಾದ ಉತ್ತರ ಬರೆಯಲೇ ಬೇಕು. ಆಗ ಮಾತ್ರ ಸೀಟು ಸಿಗುತ್ತೆ...’’ ಪ್ರಿನ್ಸಿಪಾಲ್ ಸ್ಪಷ್ಟವಾಗಿ ನುಡಿದರು.
‘‘ಅಲ್ಲ ಸಾರ್...ಎಲ್‌ಕೆಜಿಗೆ ಸೇರುವ ಮಗು ಉತ್ತರ ಬರೆಯುವುದು ಹೇಗೆ...?’’ ಕಾಸಿ ಕಂಗಾಲಾಗಿ ಕೇಳಿದ.
‘‘ಅದು ನಮಗೆ ಗೊತ್ತಿಲ್ಲ. ನಮ್ಮ ಕಾನ್ವೆಂಟ್‌ನಲ್ಲಿ ನಿಮಗೆ ಸೀಟು ಸಿಗಬೇಕಾದರೆ ನಿಮ್ಮ ಮಗು ಪಾಸಾಗಲೇ ಬೇಕು. ನೀವು ನಿಮ್ಮ ಮಗುವಿಗೆ ಟ್ಯೂಶನ್ ಕೊಡಿಸಿ. ಪರೀಕ್ಷೆಗೆ ಬೇಕಾದ ತಯಾರಿಯನ್ನು ಮಗುವಿಗೆ ಒಂದು ವರ್ಷ ಇರುವಾಗಲೇ ಮಾಡಿಸಬೇಕು. ಈಗ ಬಂದು ಏನು ಮಾಡುವುದು ಎಂದು ಕೇಳಿದರೆ ಹೇಗೆ? ನಮ್ಮ ಶಾಲೆಯಲ್ಲಿ ಪ್ರವೇಶ ಸಿಗಲಿಲ್ಲ ಎಂದರೆ ಕಸದ ಬುಟ್ಟಿ ಇದ್ದೇ ಇದೆಯಲ್ಲ...’’ ಪ್ರಿನ್ಸಿಪಾಲರು ಆಕ್ರೋಶದಿಂದ ಹೇಳಿದರು.
‘‘ಕಸದ ಬುಟ್ಟಿ....’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಸರಕಾರಿ ಶಾಲೆ. ನಮ್ಮ ಶಾಲೆಗಳಲ್ಲಿ ರಿಜೆಕ್ಟ್ ಆಗಿರುವ ಮಾಲುಗಳನ್ನು ಎಸೆಯುವುದಕ್ಕಿರುವ ಕಸದ ಬುಟ್ಟಿಯೇ ಸರಕಾರಿ ಶಾಲೆ. ಅದಕ್ಕೆ ತೆಗೆದುಕೊಂಡು ಹಾಕಿ...’’ ಪ್ರಿನ್ಸಿಪಾಲರು ದಾರಿ ತೋರಿಸಿದರು.
ಕಾಸಿ ಆತಂಕಗೊಂಡ. ‘‘ಸಾರ್...ಮಗುವಿಗೆ ಹೊರಗೆ ಟ್ಯೂಶನ್ ಕೊಡೋದಾದ್ರೆ....ಶಾಲೆಗೆ ಯಾಕೆ ಸೇರಿಸೋದು...?’’
‘‘ನೋಡ್ರಿ...ದಡ್ಡ ಮಕ್ಕಳನ್ನು ನಾವು ಸೇರಿಸಿಕೊಳ್ಳಲ್ಲ. ಕಲಿತ ಮಕ್ಕಳನ್ನು ಮಾತ್ರ ತೆಗೆದುಕೊಳ್ಳೋದು. ನಮ್ಮ ಶಾಲೆಯ ಸರ್ಟಿಫಿಕೇಟ್ ಸಿಗಬೇಕಾದರೆ ನಿಮ್ಮ ಮಗು ಈಗಾಗಲೇ ಎಲ್ಲ ತಿಳ್ಕೊಂಡಿರಬೇಕು....ಇಂಗ್ಲಿಷ್ ಮಾಧ್ಯಮ ಎಂದರೆ ಸುಮ್ಮಗಾಗಲ್ಲ....ಅಂದ ಹಾಗೆ...ಮಗು ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನೀವು ಸೂಟ್‌ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...’’
ಕಾಸಿ ನಿಂತ ನೆಲ ಕಂಪಿಸಿತು ‘‘ಸಾರ್ ಅದ್ಯಾವುದು...ಸೂಟ್‌ಕೇಸ್ ಪರೀಕ್ಷೆ...’’
ಪ್ರಿನ್ಸಿಪಾಲರು ವಿವರಿಸತೊಡಗಿದರು ‘‘ನೋಡ್ರಿ...ನಮ್ಮ ತಕ್ಕಡಿಯೊಂದಿದೆ. ಅದರಲ್ಲಿ ನೀವು, ನಿಮ್ಮ ಹೆಂಡತಿ ಮತ್ತು ನಿಮ್ಮ ಮಗು ಕುಳಿತುಕೊಳ್ಳಬೇಕು. ಮತ್ತು ಇನ್ನೊಂದು ತಟ್ಟೆಯಲ್ಲಿ ನಿಮ್ಮ ಭಾರದ ಸೂಟ್‌ಕೇಸ್ ಇಡಬೇಕು...’’
‘‘ಸೂಟ್‌ಕೇಸ್‌ನ್ನು ಏನು ಮಾಡುತ್ತೀರಿ ಸಾರ್...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಸೂಟ್‌ಕೇಸನ್ನು ನಿಮಗೇ ವಾಪಾಸ್ ಕೊಡುತ್ತೇವೆ. ಅದರೊಳಗಿರುವ ಹಣವನ್ನು ನಾವು ತೆಗೆದುಕೊಳ್ಳುತ್ತೇವೆ...’’ ಪ್ರಿನ್ಸಿಪಾಲರು ವಿವರಿಸಿದರು.
‘‘ಅಂದರೆ ಸೂಟ್‌ಕೇಸ್‌ನೊಳಗೆ ನಮ್ಮಷ್ಟು ಭಾರ ತೂಗುವ ನೋಟುಗಳನ್ನು ಇಡಬೇಕೋ...’’ ಕಾಸಿ ಒಮ್ಮೆಲೆ ಎದ್ದು ನಿಂತ.
‘‘ಹೂಂ...ಎಲ್ಲವೂ ಒಂದು ಸಾವಿರ ರೂಪಾಯಿಯ ನೋಟಾಗಿರಬೇಕು....’’ ಪ್ರಿನ್ಸಿಪಾಲರು ಒತ್ತಿ ಹೇಳಿದರು.
ಕಾಸಿ ಎದ್ದು ನಿಂತ ‘‘ಸಾರ್ ಬರುತ್ತೇನೆ....ನಮಸ್ಕಾರ’’ ಅಚ್ಚ ಕನ್ನಡದಲ್ಲಿ ಹೇಳಿದ.
ಪ್ರಿನ್ಸಿಪಾಲ್ ಸಿಟ್ಟಾದರು ‘‘ಏನ್ರೀ...ನಿಮಗೆ ಕನ್ನಡ ಬರುತ್ತೆ. ನಿಮ್ಮ ಮಗುವನ್ನು ಸೇರಿಸಿಕೊಳ್ಳೋದಕ್ಕೆ ಆಗಲ್ಲ...ಗೆಟ್ ಔಟ್...’’
ಕಾಸಿ ಹೇಳಿದ ‘‘ಹೌದು. ನನಗೆ ಕನ್ನಡ ಬರುತ್ತೆ. ಈವರೆಗೆ ನನಗೆ ಕನ್ನಡ ಬರದ್ದಕ್ಕೆ ನನ್ನ ಬಗ್ಗೆ ಕೀಳರಿಮೆ ಇತ್ತು. ಇವತ್ತು ನಿಮ್ಮನ್ನು ನೋಡಿದ ಬಳಿಕ ನನಗೆ ಕನ್ನಡ ಬರತ್ತೆ, ಇಂಗ್ಲಿಷ್ ಬರಲ್ಲ ಎಂದು ಹೆಮ್ಮೆಯಾಗತ್ತೆ...’’ ಎಂದು ಅಂಗಳ ತಲುಪಿದ. ಅಲ್ಲಿ ನೋಡಿದರೆ ಅಂಗಳದಲ್ಲಿ ಬಿಸಿಲಲ್ಲಿ ಒಬ್ಬ ಬಡಪಾಯಿ ಮಹಿಳೆ ಭಿಕ್ಷೆ ಬೇಡುತ್ತಿತ್ತು. ‘‘ಏನಮ್ಮ...ಈ ಬಿಸಿಲಲ್ಲಿ ಕೂತು ಭಿಕ್ಷೆ ಬೇಡುತ್ತೀಯಲ್ಲ...’’ ಕಾಸಿ ಕೇಳಿದ.
‘‘ಮೊನ್ನೆ ಮೊನ್ನೆ ಆ ಶಾಲೆಯ ಜಗಳಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದೆ ಕಣಪ್ಪ....ಇದೀಗ ಸುಪ್ರೀಂಕೋರ್ಟ್ ಆದೇಶ ಆಗಿದೆ. ಜಗಳಿಯಲ್ಲೂ ಕೂರಬಾರದು. ಬೇಕಾದರೆ ಅಂಗಳದಲ್ಲಿ ಕೂತು ಭಿಕ್ಷೆ ಬೇಡಬಹುದು ಅಂತ...’’ ಮಹಿಳೆ ಹೇಳಿತು.
‘‘ಯಾರಮ್ಮ ನೀನು?’’ ಕಾಸಿ ಕೇಳಿದ.
‘‘ಇನ್ಯಾರೂ ಅಂತ ತಿಳ್ಕಂಡೆ? ನಾನಪ್ಪ ನಿನ್ನ ತಾಯಿ ಕನ್ನಡಮ್ಮ....’’