Sunday, May 25, 2014

ಕಾಂಗ್ರೆಸ್ ಆತ್ಮ ಎಲ್ಲಿದೆ? ಹುಡುಕಿ ಕೊಡಿ!

ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ರವಿವಾರ ಮೇ ೨೫ ರಂದು ಪ್ರಕಟವಾದ ಬುಡಬುಡಿಕೆ

ದಿಲ್ಲಿ ಕಾಂಗ್ರೆಸ್‌ನೊಳಗೆ ಕಲರವ. ಸೋತ ಸಂಭ್ರಮವನ್ನು ಆಚರಿಸಿಕೊಳ್ಳಲು ‘ಆತ್ಮಾವಲೋಕನ ಸಭೆ’ಯನ್ನು ಸೋನಿಯಾಗಾಂಧಿ ಕರೆದಿರುವುದು ಗೊತ್ತಾಗಿ, ಮೇಡಂ ಅವರ ಪ್ರಮಾಣ ವಚನ ಸಭೆಯೋ ಎಂಬಂತೆ ಸೋತ ಕಾಂಗ್ರೆಸ್ ಮುಖಂಡರೆಲ್ಲ ಮೀಸೆಯ ಮಣ್ಣನ್ನು ಕೊಡವಿಕೊಂಡು ಸಭೆಗೆ ಹಾಜರಾದರು. ‘ಬಹುಶಃ 50 ಸೀಟ್ ಸಿಕ್ಕಿದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮನ್ನು ಕರೆದಿರಬಹುದು’’ ಎಂದು ದಿಗ್ಗಿ, ಕಪಿಲ್, ಅಝಾದ್ ಮೊದಲಾದವರೆಲ್ಲ ಗರಿಗರಿ ಖಾದಿಯನ್ನು ತೊಟ್ಟು ಹಾಜರಾಗಿದ್ದರು. ರಾಹುಲ್ ಅಂತೂ ಫಲಿತಾಂಶದಿಂದ ರೋಮಾಂಚನಗೊಂಡಿದ್ದರು. ಇಷ್ಟು ಸ್ಥಾನಗಳಾದರೂ ಸಿಕ್ಕಿದೆ ಎಂದರೆ ಅದರ ಅರ್ಥ ಇನ್ನೂ ನಮ್ಮ ಮೇಲೆ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದಲ್ಲವೆ? ಇದನ್ನು ನಾವು ಆಚರಿಸಬೇಕು. ಈ ಆಚರಣೆಗಾಗಿ ಅಮೆರಿಕ, ಲಂಡನ್, ಜರ್ಮನ್, ಫ್ರಾನ್ಸ್ ಪ್ರಧಾನಿಗಳಿಗೆ ಆಹ್ವಾನ ನೀಡಬೇಕು ಎಂದು ತಾಯಿಗೆ ಸಲಹೆ ನೀಡಿದ್ದ. ‘‘ಸುಮ್ಮನೆ ಹಿತ್ತಲಲ್ಲಿ ಹೋಗಿ ಆಟ ಆಡ್ಕೊಂಡಿರು. ಕಿರಿ ಕಿರಿ ಮಾಡ್ಬೇಡ...’’ ಎಂದು ಸೋನಿಯಾ ಮಗನ ತಲೆಗೆ ಎರಡು ಮೊಟಕಿದ್ದರು. ಆಟ ಆಡಲು ಕಾಂಗ್ರೆಸ್‌ನ್ನು ಕೊಡಬಾರದಿತ್ತು...ಎಲ್ಲವನ್ನೂ ಮುರಿದಿಕ್ಕಿದ್ದಾನೆ ಎಂದು ಸೋನಿಯಾ ಗೊಣಗಿದರು.
ಅಂತೂ ಆತ್ಮಾವಲೋಕನ ಸಭೆ ಆರಂಭವಾಯಿತು. ಅಷ್ಟರಲ್ಲಿ ಸೋನಿಯಾಗಾಂಧಿ ಮಾತು ಆರಂಭಿಸಿದರು ‘‘ಕಾಂಗ್ರೆಸ್ ತನ್ನ ಸೋಲಿನ ಕುರಿತಂತೆ ಆತ್ಮ ಅವಲೋಕನ ಮಾಡಲು ಈ ಸಭೆಯನ್ನು ಕರೆದಿದೆ...ಮೊತ್ತ ಮೊದಲು ನಾವು ಕಾಂಗ್ರೆಸ್‌ನ ಆತ್ಮವನ್ನು ಅವಲೋಕನ ಮಾಡಬೇಕು... ಮಿ. ದ್ವಿಗ್ವಿಜಯ್ ಸಿಂಗ್...ಎಲ್ಲಿದೆ ಕಾಂಗ್ರೆಸ್‌ನ ಆತ್ಮ. ಅದನ್ನು ಸಭೆಯ ಮುಂದೆ ತನ್ನಿ...’’
ಆಗಷ್ಟೇ ಹನಿಮೂನ್ ಮುಗಿಸಿಕೊಂಡು ಬಂದಿದ್ದ ದಿಗ್ವಿಜಯ್ ಕಂಗಾಲಾದರು. ‘‘ಆತ್ಮ...ಅದೂ ಅದೂ...ನಾನು ಕಾಂಗ್ರೆಸ್‌ಗೆ ಕಾಲಿಡುವಾಗಲೇ ಅದನ್ನು ರಾಜೀವ್‌ಗಾಂಧಿಯವರ ಕೈಗೆ ಕೊಟ್ಟಿದ್ದೆ. ಅದು ನಿಮ್ಮ ತಿಜೋರಿಯಲ್ಲಿ ಭದ್ರವಾಗಿರಬೇಕು...’’
ಸೋನಿಯಾ ಮೇಡಂ ಸಿಟ್ಟಾದರು ‘‘ನಾನು ಕೇಳುತ್ತಾ ಇರುವುದು ನಿಮ್ಮ ಮೆದುಳಿನ ಬಗ್ಗೆ ಅಲ್ಲ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ ಎಂದು ಕೇಳುತ್ತಿದ್ದೇನೆ. ತಿಜೋರಿಯಲ್ಲಿರುವುದು ನಿಮ್ಮ ಮೆದುಳು ಮಾತ್ರ. ಇಡೀ ಕಾಂಗ್ರೆಸ್ ಮುಖಂಡರ ಮೆದುಳು ನನ್ನ ತಿಜೋರಿಯಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ? ರಾಹುಲ್‌ನ ಕೈಗೆ ಸಿಗದ ಹಾಗೆ ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ಕೊಟ್ಟಿದ್ದೆನಲ್ಲ...ಇದೀಗ ನೋಡಿ...ಆತ್ಮಾವಲೋಕನ ಮಾಡಲು ಕರೆದ ಸಭೆಯಲ್ಲಿ ಕಾಂಗ್ರೆಸ್‌ನ ಆತ್ಮವೇ ಕಾಣುತ್ತಿಲ್ಲ....ಆತ್ಮ ಇಲ್ಲದೆ ಆತ್ಮಾವಲೋಕನ ನಡೆಸುವುದು ಹೇಗೆ?’’
‘‘ಮೇಡಂ...ನನಗೆ ವೀರಪ್ಪ ಮೊಯ್ಲಿಯವರ ಮೇಲೆಯೇ ಡೌಟು. ಕಾಂಗ್ರೆಸ್‌ನ ಆತ್ಮವನ್ನು ಅಂಬಾನಿಗೆ ಮಾರಿ ಅವರು ಚಿಕ್ಕಬಳ್ಳಾಪುರದಲ್ಲಿ ಗೆದ್ದದ್ದು ಅಂತ ನನ್ನ ಗೂಢಚಾರರು ಹೇಳಿದ್ದಾರೆ...’’
‘‘ನೀವು ಯಾರು? ಯಾವ ಲೋಕಸಭೆಯ ಎಂಪಿ ನೀವು?’’
‘‘ಅದೇ ಮೇಡಂ...ಎರಡು ಲಕ್ಷ ಓಟಿನಲ್ಲಿ ಸೋಲಿಸಿದ್ದು...’’
‘‘ಎರಡು ಲಕ್ಷ ಅಂತರದಲ್ಲಿ ಸೋಲಿಸಿದ್ದೇ...ಯಾರನ್ನು ಎಲ್ಲಿ?’’
‘‘ಅದೇ ಮೇಡಂ...ಮಂಗಳೂರಿನಲ್ಲಿ...ಎರಡು ಲಕ್ಷ ಓಟಿಗೆ ಸೋತದ್ದು ನಾನೇ...ಇಂದಿರಾಗಾಂಧಿಯ ಕಾಲದಲ್ಲಿ ನಾನು ಸಾಲಮೇಳಕ್ಕೆ ಫೇಮಸ್...ನಾನೇ ಜನಾರ್ದನಪೂಜಾರಿ...’’
ಸೋನಿಯಾಗೆ ಸಿಟ್ಟು ಒತ್ತರಿಸಿ ಬಂತು ‘‘ಇವರನ್ನು ಯಾರು ಒಳಗೆ ಬಿಟ್ಟದ್ದು...ತಕ್ಷಣ ಹೊರಗೆ ಹಾಕಿ....’’ ಎಂದದ್ದೇ ತಡ....ಭಾರತ ಸೇವಾದಳದ ಕಾರ್ಯಕರ್ತರು ಅವರನ್ನು ಎಳೆದುಕೊಂಡು ಹೋದರು.
‘‘ಆತ್ಮ ಎಲ್ಲಿದೆ...ಆತ್ಮ ಎಲ್ಲಿದೆ...ತಕ್ಷಣ ಉತ್ತರಿಸಿ. ಇಲ್ಲದಿದ್ದರೆ ಎಲ್ಲರನ್ನೂ ವಜಾ ಮಾಡಬೇಕಾಗುತ್ತದೆ...’’
‘‘ಅಣು ಒಪ್ಪಂದದ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಮನಮೋಹನ್ ಸಿಂಗ್ ಕಾಂಗ್ರೆಸ್‌ನ ಆತ್ಮವನ್ನು ಅಲ್ಲೇ ಬಿಟ್ಟು ಬಂದಿರಬೇಕು...ನೀವು ಒಮ್ಮೆ ಒಬಾಮ ಅವರಿಗೆ ಫೋನ್ ಮಾಡಿ ನೋಡಿ....’’ ಯಾರೋ ಆರೋಪಿಸಿದರು.
‘‘ಬಹುಶಃ ಕಲ್ಲಿದ್ದಲು ಗಣಿಯ ಒಳಗೆ ಇಣುಕಿ ನೋಡುವಾಗ ಅದರೊಳಗೆ ಬಿದ್ದಿರುವ ಸಾಧ್ಯತೆಯೇ ಜಾಸ್ತಿ...ಮನಮೋಹನ್ ಸಿಂಗ್ ಅವರನ್ನು ಒಮ್ಮೆ ಗಣಿಯ ಒಳಗೆ ಇಳಿಸಿ ನೋಡಿದರೆ ಸಿಕ್ಕಿದರೂ ಸಿಕ್ಕಬಹುದು...’’ ಅಯ್ಯರ್ ಹೇಳಿದರು.
‘‘ನನಗೆ ತಿಳಿದಿರುವ ಮಟ್ಟಿಗೆ ಅದನ್ನು ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದಲ್ಲಿ ಮುಲಾಯಂ ಜೊತೆ ಸೇರಿ ಬಿರಿಯಾನಿ ಮಾಡಿ ತಿಂದಿರಬೇಕು....’’
ಸಲ್ಮಾನ್ ಖುರ್ಷಿದ್ ಸಿಟ್ಟಾದರು ‘‘ನಾನು ಬಿರಿಯಾನಿ ಮಾಡಿದ್ದು ಮುಝಫ್ಫರ್ ನಗರದ ಅಲ್ಪಸಂಖ್ಯಾತ ಕುರಿಗಳನ್ನು ಕಡಿದು. ಕಾಂಗ್ರೆಸ್ ಆತ್ಮವನ್ನು ಬಿರಿಯಾನಿ ಮಾಡಿ ತಿನ್ನುವಷ್ಟು ಇನ್ನೂ ಕೆಟ್ಟು ಹೋಗಿಲ್ಲ....ಇಂದಿನ ಸಭೆಗೆ ಗೈರು ಹಾಜರಾಗಿದ್ದಾರಲ್ಲ ಚಿದಂಬರಂ...ಅವರಲ್ಲಿ ಕೇಳಿ...ಅವರು ಫೈನಾನ್ಸ್ ಮಿನಿಸ್ಟರಾಗಿದ್ದಾಗ ಕಾಂಗ್ರೆಸ್‌ನ ಆತ್ಮವನ್ನು ಒತ್ತೆಯಿಟ್ಟು ವಿಶ್ವಬ್ಯಾಂಕ್‌ನಿಂದ ಸಾಲ ತಂದಿರುವ ಸಾಧ್ಯತೆಯೂ ಇದೆ...’’
‘‘ಮೇಡಂ...ಅಸ್ಸಾಂನಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಗೊಗೊಯಿ ಶಿಲುಬೇಗೇರಿಸಿರುವ ಬಗ್ಗೆ ದಟ್ಟವಾಗಿ ವದಂತಿ ಹಬ್ಬಿದೆ. ಒಮ್ಮೆ ಅವರಲ್ಲಿ ವಿಚಾರಿಸಿ ನೋಡಿದರೂ ಆಗಬಹುದು...’’ ಇನ್ಯಾರೋ ಇನ್ನೊಂದು ಸಲಹೆ ನೀಡಿದರು.
‘‘ಯಾವುದಕ್ಕೂ ಪ್ರಿಯಾಂಕಾ ಮೇಡಮ್ ಅವರಲ್ಲೂ ವಿಚಾರಿಸುವುದು ಒಳ್ಳೆಯದು. ರಾಬರ್ಟ್ ವಾದ್ರಾ ಅವರ ತಿಜೋರಿಯಲ್ಲಿ ಹುಡುಕಿದರೆ ಕೆಲವೊಮ್ಮೆ ಸಿಕ್ಕಿದರೂ ಸಿಕ್ಕಿತು...’’ ಸೋನಿಯಾಗೆ ಅದು ಯಾರೋ ಭಿನ್ನಮತೀಯ ಎನ್ನುವುದು ಗೊತ್ತಾಗಿ ಬಿಟ್ಟಿತು. ಉತ್ತರಿಸುವುದಕ್ಕೇ ಹೋಗಲಿಲ್ಲ.
‘‘ನಾಡಿದ್ದು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಹುಡುಕೋಣ....ಅಲ್ಲಿ ಸಿಕ್ಕಿದರೂ ಸಿಕ್ಕೀತು...’’ ಇನ್ಯಾರೋ ತಲೆಗೆಟ್ಟ ಸಲಹೆ ನೀಡಿದರು. ವೀರಪ್ಪ ಮೊಯ್ಲಿ ಮಾತ್ರ ಇಂತಹ ಸಲಹೆ ನೀಡಲು ಸಾಧ್ಯ ಎಂದು ಸೋನಿಯಾ ಅರ್ಥ ಮಾಡಿಕೊಂಡರು.
‘‘ಪ್ರಧಾನಿ ಮೋದಿಗೆ ಹುಡುಕಿಕೊಡಲು ಮನವಿ ಸಲ್ಲಿಸೋಣ...’’ ಮಗದೊಬ್ಬ ಸಲಹೆ ನೀಡಿದರು. ಇದು ಮೈಸೂರಿನ ಎಚ್. ವಿಶ್ವನಾಥ್ ಇರಬೇಕು ಎಂದು ಸೋನಿಯಾ ಊಹಿಸಿದರು.
‘‘ಬೇಡ ಮೇಡಂ...ನಾವೆಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡೋಣ....ನಮ್ಮ ಕಾಂಗ್ರೆಸ್‌ನ ಆತ್ಮವನ್ನು ಮೋದಿ ಬಳಗ ಕದ್ದುಕೊಂಡಿದೆ. ಆದುದರಿಂದ ಮೋದಿ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸೋಣ....’’ ಸೋನಿಯಾ ಸಿಟ್ಟಿನಿಂದ ತಲೆಯೆತ್ತಿ ನೋಡಿದರೆ ದಿಗ್ವಿಜಯ್ ಸಿಂಗ್. ಸೋನಿಯಾ ನಿಟ್ಟುಸಿರಿಟ್ಟು.
ಅಷ್ಟರಲ್ಲಿ ‘‘ಮೇಡಂ...’’ ಎಂಬ ಸದ್ದು. ಇಡೀ ಸಭೆ ಬೆಚ್ಚಿ ಬಿದ್ದಿತು. ಮನಮೋಹನ್ ಸಿಂಗ್ ಬಾಯಿ ತೆರೆದಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಅರೆ! ಮನಮೋಹನ್ ಸಿಂಗ್ ಮಾತನಾಡುತ್ತಿದ್ದಾರೆ....ಮೊತ್ತ ಮೊದಲ ಬಾರಿಗೆ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮಾತನಾಡಲು ಬಿಟ್ಟರು ‘‘ಮೇಡಂ...ಕಾಂಗ್ರೆಸ್‌ನ ಆತ್ಮ ಈಗ ಅಲ್ಲ 1992ರಲ್ಲೇ ಕಾಣೆಯಾಗಿದೆ....’’
‘‘ಹೌದಾ...ಹೇಗೆ...’’
‘‘ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೈಯಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಜೋಪಾನ ಮಾಡಲು ನೀವೇ ತಾನೆ ಕೊಟ್ಟದ್ದು? ಆದರೆ ಬಾಬರೀ ಮಸೀದಿ ಆ ಆತ್ಮದ ಮೇಲೆ ಬಿದ್ದು ಬಿಟ್ಟಿತು. ಅದೀಗ ಕಾಣೆಯಾಗಿದೆ. ಬಾಬರೀ ಮಸೀದಿಯ ಧೂಳಿನಲ್ಲಿ ನಾವು ಆ ಆತ್ಮವನ್ನು ಹುಡುಕಬೇಕಾಗಿದೆ...’’

ರವಿವಾರ - ಮೇ -25-2014

No comments:

Post a Comment