Sunday, March 2, 2014

ಕೋಪ ಬಂದರೆ ಅರಬೀಸಮುದ್ರವನ್ನೇ ತಿರುಗಿಸುತ್ತೇನೆ ಗೊತ್ತುಂಟಾ?

ಶಿವನು ತಲೆಯ ಮೇಲೆ ಗಂಗೆಯನ್ನು ಕಟ್ಟಿಕೊಂಡಂತೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ತಲೆಯ ಮೇಲೆ ನೇತ್ರಾವತಿ ನದಿಯನ್ನು ಕಟ್ಟಿ, ತೊಡೆಯ ಮೇಲೆ ತನ್ನ ಪುತ್ರ ಹರ್ಷ ಮೊಯ್ಲಿಯನ್ನು ಕುಳ್ಳಿರಿಸಿ ತಪಸ್ಸು ಗೈಯುತಿರುವಾಗ ವಿಶ್ವಾಮಿತ್ರನ ಮುಂದೆ ಮೇನಕೆ ಹಾಜರಾಗುವಂತೆ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿ ಹಾಜರಾದ.
‘‘ಸಾರ್, ನೀವು ನೇತ್ರಾವತಿಯನ್ನು ತಿರುಗಿಸುತ್ತೀ ರಂತೆ ಹೌದಾ?’’ ಕೇಳಿದ.

‘‘ಹೌದ್ರಿ...ನಾನೇ ಮಂಗಳೂರಿಗೆ ಬೇಡಚ ಎಂದ ಮೇಲೆ, ನನ್ನೊಟ್ಟಿಗೆ ನೇತ್ರಾವತಿಯನ್ನೂ ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮೂರು ಸರ್ತಿ ಮಂಗಳೂರಿನಲ್ಲಿ ಓಟಿಗೆ ನಿಂತೆ. ಸೋತೆ. ನಾನೆ ಬೇಡ ವೆಂದ ಮೇಲೆ, ನಾನು ಈ ನೇತ್ರಾವತಿಯನ್ನು ಮಂಗಳೂರಿನವರಿಗೆ ಬಿಡುತ್ತೇನ...ಅದಕ್ಕೇ ಅದನ್ನು ನಾನು ನನ್ನ ನೆತ್ತಿಯ ಮೇಲೆ ಕಟ್ಟಿಕೊಂಡು ತಿರುಗಾಡುತ್ತಿದ್ದೇನೆ...’’

‘‘ಸಾರ್...ಈ ನೇತ್ರಾವತಿಯನ್ನು ಮಂಗಳೂರಿಗೆ ಬಿಟ್ಟು ಬಿಡಬೇಕಾದರೆ ಏನು ಮಾಡಬೇಕು ಸಾರ್...’’ ಎಂಜಲು ಕಾಸಿ ರಾಜಿ ಪಂಚಾತಿಗೆಗೆ ಇಳಿದ. ಕೋಪ ತಾಪದಿಂದ ಇದ್ದ ವೀರಪ್ಪ ಮೊಯ್ಲಿಯವರು ಈಗ ಶಾಂತರಾದರು. ಮೆಲ್ಲಗೆ ಹಸನ್ಮುಖರಾಗಿ ತನ್ನ ಸುಪುತ್ರ ಹರ್ಷಮೊಯ್ಲಿಯ ಕಡೆಗೆ ನೋಡಿದರು. ‘‘ಹೋಗಲಿ. ನೀವು ಹೇಳಿದ್ದೀರಿ ಎಂದು ಇನ್ನೊಂದು ಅವಕಾಶ ಕೊಡುವೆ. ನನ್ನ ಬದಲಿಗೆ ಹರ್ಷ ಮೊಯ್ಲಿಯನ್ನು ಗೆಲ್ಲಿಸಿದರೆ ಈ ನೇತ್ರಾವತಿಯನ್ನು ಮಂಗಳೂರಿಗೇ ಬಿಟ್ಟು ಬಿಡುತ್ತೇನೆ. ಇಲ್ಲವಾದರೆ ನನ್ನ ಲುಂಗಿಗೆ ಬೆಲ್ಟಿನಂತೆ ನೇತ್ರಾವತಿಯನ್ನು ಕಟ್ಟಿಕೊಂಡು ಸೀದಾ ದಿಲ್ಲಿಗೆ ಹೋಗುತ್ತೇನೆ ಅಷ್ಟೇ...’’

‘‘ಸಾರ್...ಹರ್ಷ ಮೊಯ್ಲಿ ಏನು ಸಾಧನೆ ಮಾಡಿದ್ದಾ ರೆಂದು ಅವರನ್ನು ಜನರು ಗೆಲ್ಲಿಸಬೇಕು ಸಾರ್...?’’ ಎಂಜಲು ಕಾಸಿ ಕೇಳಿದ.
‘‘ನನ್ನ ಮಗನಾಗಿ ಹುಟ್ಟಿರುವುದು ಸಣ್ಣ ಸಾಧನೆ ಯೇನ್ರಿ...ಆ ಸಾಧನೆಗಾಗಿ ಮಂಗಳೂರಿನ ಜನರು ಈ ನನ್ನ ಸುಪುತ್ರನನ್ನು ಗೆಲ್ಲಿಸಿ ಎಂಪಿ ಮಾಡಿಸಬೇಕು. ಉಳಿ ದಂತೆ ಅವನನ್ನು ಮಿನಿಸ್ಟರ್ ಮಾಡುವ ಹೊಣೆಯನ್ನು ಬೇಕಾದರೆ ನಾನು ಹೊತ್ತುಕೊಳ್ಳುತ್ತೇನೆ...’’ ಮೊಯ್ಲಿ ಭರವಸೆ ನೀಡಿದರು.
‘‘ಸಾರ್...ಅವರನ್ನು ಮಂಗಳೂರಿನ ಜನರು ಆಯ್ಕೆ ಮಾಡಿದರೆ ನದಿ ತಿರುವು ಯೋಜನೆ ಕೈ ಬಿಡುತ್ತೀರಾ ಸಾರ್..?’’ ಕಾಸಿ ಮತ್ತೊಮ್ಮೆ ಖಚಿತ ಪಡಿಸಲು ಕೇಳಿಕೊಂಡ.
‘‘ಖಂಡಿತಾ ಕೈ ಬಿಡುತ್ತೇವೆ ಕಣ್ರೀ...ಬದಲಿಗೆ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳುತ್ತೇವೆ...’’ ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಅದೆರಡೂ ಒಂದೇ ಅಂತಲ್ವಾ ಸಾರ್...ಹೆಸರು ಬೇರೆ ಬೇರೆ...’’
ಮೊಯ್ಲಿ ಸಿಟ್ಟಾದರು. ‘‘ನೇತ್ರಾವತಿ ಹೊಳೆಯನ್ನೂ ಮುಟ್ಟಬೇಡಿ...ಎತ್ತಿನ ಹೊಳೆಯನ್ನೂ ಮುಟ್ಟಬೇಡಿ ಎಂದರೆ ಹೇಗೆ...ಮಂಗಳೂರಿನವರು ಶಾಂತ ಸ್ವಭಾವದವರು. ಹೊಳೆ ಹರಿದು ಸಮುದ್ರಕ್ಕೆ ಸೇರಿ ವೇಸ್ಟ್ ಆಗ್ಬಾರ್ದು ನೋಡಿ...ಅದಕ್ಕಾಗಿ...’’
‘‘ಸಾರ್...ಈ ನದಿ ತಿರುವಿನ ಮೂಲಕ ನೇತ್ರಾವತಿಯ ಮತಗಳನ್ನೆಲ್ಲ ಚಿಕ್ಕ ಬಳ್ಳಾಪುರ ಕಡೆಗೆ ತಿರುಗಿಸುವ ಉಪಾಯ ಏನಾದರೂ ಉಂಟಾ ಸಾರ್...’’ ಕಾಸಿ ಕೇಳಿದ.
‘‘ನೋಡ್ರಿ ಈ ಯೋಜನೆಯ ಮೂಲಕ ಬಿಡುಗಡೆ ಯಾಗುವ ಹಣವನ್ನು ನಾವು ತಿರುವು ಯೋಜನೆಯ ಮೂಲಕ ತಿರುಗಿಸಿ ಎಲ್ಲ ಶಾಸಕರಿಗೆ, ಎಂಪಿಗಳಿಗೆ ಹಂಚುವುದು ನಮ್ಮ ಗುರಿ. ಆಗ ಎಲ್ಲ ಪ್ರದೇಶದ ಜನ ಪ್ರತಿನಿಧಿಗಳಿಗೂ ನ್ಯಾಯ ಸಿಕ್ಕಿದಂತಾಗುತ್ತದೆ. ಇಲ್ಲದಿ ದ್ದರೆ ಎಲ್ಲ ಕಡಲಿಗೆ ಸೇರಿ ವೇಸ್ಟಾಗುತ್ತದೆ...’’ ವೀರಪ್ಪ ಮೊಯ್ಲಿ ಯೋಜನೆಯ ಉದ್ದೇಶವನ್ನು ವಿವರಿಸಿದರು.
‘‘ಸಾರ್...ನೇತ್ರಾವತಿಯನ್ನು ತಿರುಗಿಸುವ ಭರದಲ್ಲಿ ನಿಮ್ಮ ಮಗ ಹರ್ಷಮೊಯ್ಲಿಯ ಭವಿಷ್ಯವೂ ಅದರ ಜೊತೆಗೆ ಕೊಚ್ಚಿ ಸಮುದ್ರ ಸೇರಿದರೆ...’’ ಕಾಸಿ ಅನುಮಾನದಿಂದ ಕೇಳಿದ.
‘‘ಅಪಶಕುನ ಮಾತನಾಡಬೇಡಿ ಕಾಸಿಯವ್ರೆ... ನಾನು ಅದಕ್ಕೆ ಅಲ್ಲವಾ ನೇತ್ರಾವತಿಯನ್ನು ನೆತ್ತಿಗೆ ಕಟ್ಟಿಕೊಂಡು ತಿರುಗಾಡುವುದು. ಅವನನ್ನು ನಾನು ನೇರವಾಗಿ ನದಿಗೆ ಇಳಿಸುವುದಿಲ್ಲ. ನನ್ನ ಹೆಗಲ ಮೇಲೆ ಕುಳ್ಳಿರಿಸಿ ನಾನೇ ಚುನಾವಣೆಯೆಂಬ ನದಿಗೆ ಇಳಿಯು ತ್ತೇನೆ...’’ ಮೊಯ್ಲಿ ಹೇಳಿದರು.
‘‘ಸಾರ್ ತಂದೆ ಮಗ ಒಟ್ಟಿಗೆ ಕೊಚ್ಚಿಕೊಂಡು ಹೋದರೆ...’’ ಕಾಸಿಯ ಅನುಮಾನ ಮುಗಿಯಲಿಲ್ಲ.
‘‘ಕೊಚ್ಚಿಕೊಂಡು ಹೋಗಲಿಕ್ಕೆ...ಈ ನೇತ್ರಾವತಿ ಯಲ್ಲಿ ನೀರು ಎಷ್ಟುಂಟು? ಬರೇ ಮೊಣಕಾಲಿನವರೆಗೆ ಮಾತ್ರವಲ್ಲವ? ನನ್ನನ್ನು ಮೂರು ಬಾರಿ ಸೋಲಿಸಿದ ಮಂಗಳೂರಿನ ಜನರು ಕುಡಿಯುವುದಕ್ಕೆ ನೀರಿಲ್ಲದೆ ನನ್ನ ಹೆಸರು ಕರೆಯಬೇಕು...ಅಷ್ಟು ಮಾಡದಿದ್ದರೆ ನೋಡಿ...’’ ಎಂದು ತನ್ನ ಹೆಗಲಿನ ಶಾಲನ್ನು ಕೊಡವಿ ಕೊಂಡರು.
‘‘ಆದರೆ ಈ ಬಾರಿ ಜನಾರ್ದನ ಪೂಜಾರಿಯನ್ನು ಗೆದ್ದ ಬಳಿಕ ಬಿಜೆಪಿಯನ್ನು ಎದುರಿಸುವಂತಹ ಸ್ಥಿತಿ ಇದೆ. ಪೂಜಾರಿಯ ಎದುರುಗಡೆ ಹರ್ಷ ಮೊಯ್ಲಿ ಗೆಲ್ಲಬಹುದಾ?’’ ಕಾಸಿ ಕೇಳಿದ.
‘‘ನನ್ನ ಮಗ ಹುಷಾರಿದ್ದಾನೆ. ಅವನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿದ್ದಾನೆ ಗೊತ್ತುಂಟಾ...ನಿಮಗೊಂದು ಕತೆ ಹೇಳ್ತೇನೆ. ಒಮ್ಮೆ ನನ್ನ ಮಗನ ಜೊತೆಗೆ ನಾನು ಹೇಳಿದೆ. ನೀನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿ ಬರಬೇಕು ಅಂತಾ...ಆಗ ಅವನೇನು ಹೇಳಿದ ಗೊತ್ತುಂಟಾ? ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವೆ ಎಂದ...’’ ಎನ್ನುತ್ತಾ ತೊಡೆಯ ಮೇಲಿರುವ ಮಗನ ಮುಖನ್ನು ಮೆಚ್ಚುಗೆಯಿಂದ ನೋಡಿದರು.
‘‘ಸಾರ್...ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವುದು ಆಗುವ ಹೋಗುವ ವಿಷಯವಾ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಅದಕ್ಕೆ ಹೇಳಿದ್ದು. ನನ್ನ ಮಗ ಅಮೆರಿಕದಲ್ಲಿ ಓದಿ ಬಂದಿದ್ದರೂ, ಭಾರತದ ಐಡಿಯಾ ಹೊಂದಿದ್ದಾನೆ. ಅವನು ನನಗೆ ಎರಡು ಸುತ್ತು ಬಂದು ಹೇಳಿದ. ‘ತಂದೆಯೇ...ನಿನಗೆ ಎರಡು ಸುತ್ತು ಬಂದರೆ ಇಡೀ ಮಂಗಳೂರು ಸುತ್ತಿದ ಪುಣ್ಯ ಸಿಗುತ್ತದೆ ಎಂದು ಯಾವುದೋ ಮಹಾಕಾವ್ಯದಲ್ಲಿ ಓದಿದ್ದೇ...’ ಎಂದು. ಹಾಗೆ ಎರಡೇ ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬಂದ...’’
ಕಾಸಿಗೆ ತಲೆ ಗಿರ್ರೆಂದಿತು. ‘‘ಹಾಗಾದರೆ ಇಡೀ ದೇಶವನ್ನು ಸುತ್ತಿ ಬರುವುದು ಹೇಗೆ ಸಾರ್?’’ ಕಾಸಿ ತಲೆ ತುರಿಸುತ್ತಾ ಕೇಳಿದ.
ಮೊಯ್ಲಿ ನಗುತ್ತಾ ಉತ್ತರಿಸಿದರು ‘‘ಅದು ಭಾರೀ ಸುಲಭ. ರಾಹುಲ್‌ಗಾಂಧಿಯನ್ನು ಎರಡು ಸುತ್ತು ಸುತ್ತಿದರೆ ಆಯಿತು...’’
ಕಾಸಿ ಈಗ ಬೆಚ್ಚಿ ಬಿದ್ದ ‘‘ಸಾರ್...ಹಾಗಾದರೆ ಇಡೀ ವಿಶ್ವವನ್ನು ಸುತ್ತುವುದು ಹೇಗೆ ಸಾರ್?’’
‘‘ಅದು ಮತ್ತಷ್ಟು ಸುಲಭ. ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಒಟ್ಟಿಗೆ ನಿಲ್ಲಿಸಿ ಎರಡು ಸುತ್ತು ಸುತ್ತಿದರೆ ಇಡೀ ವಿಶ್ವವನ್ನು ಸುತ್ತಿದ ಪುಣ್ಯ ಸಿಗುತ್ತದೆ ಗೊತ್ತುಂಟಾ... ನನ್ನ ಮಗ ಇಡೀ ವಿಶ್ವವನ್ನು ಈಗಾಗಲೇ ಹಲವು ಬಾರಿ ಸುತ್ತಿ ಬಂದಿದ್ದಾನೆ...’’ ಎನ್ನುತ್ತಾ ಮೀಸೆಯ ಮೇಲೆ ಕೈಯಾಡಿಸಿದರು.
‘‘ಸಾರ್...ಹಾಗಾದ್ರೆ...ಮಂಗಳಗ್ರಹಕ್ಕೆ ಒಂದು ಸುತ್ತು ಬರುವುದು ಹೇಗೆ ಸಾರ್...’’ ಕಾಸಿ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ.
‘‘ಮಂಗಳಗ್ರಹಕ್ಕೆ ಸುತ್ತು ಬರುವುದು ಯಂತಕ್ಕೆ? ನಿನ್ನ ಬೊಜ್ಜ ಮಾಡುವುದಕ್ಕಾ? ನನ್ನ ಮಗನನ್ನು ತಮಾಷೆ ಮಾಡಿದರೆ ಉಂಟಲ್ಲಾ....ನಾನು ಸುಮ್ಮನಿರಲಿಕ್ಕಿಲ್ಲ...ನನ್ನ ಮಗನನ್ನು ಮಂಗಳೂರಿನಲ್ಲಿ ಗೆಲ್ಲಿಸದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ. ನೇತ್ರಾವತಿ ಮಾತ್ರವಲ್ಲ, ಇಡೀ ಅರಬೀ ಸಮುದ್ರವನ್ನೇ ತಿರುಗಿಸುವ ಯೋಜನೆ ಹಾಕಿ ಬಿಡುತ್ತೇನೆ....’’ ಮೊಯ್ಲಿ ಶಪಥ ಮಾಡಿದರು.
‘‘ಅರಬೀ ಸಮುದ್ರವನ್ನು ತಿರುಗಿಸುವ ಬದಲು, ಈ ರಾಜಕಾರಣಿಗಳನ್ನೆಲ್ಲ ಮತದಾರರು ಅರಬೀ ಸಮುದ್ರದ ಕಡೆಗೆ ತಿರುಗಿಸಿದರೆ ಏನು ಮಾಡುತ್ತೀರಿ ಸಾರ್?’’ ಕಾಸಿ ಕೇಳಿದ್ದೇ...ಮೊಯ್ಲಿ ಗ್ಯಾಸ್ ಸಿಲಿಂಡರ್‌ನಂತೆ ಒಮ್ಮೆಲೆ ಸ್ಫೋಟಿಸಿದರು ‘‘ಯಾರಲ್ಲಿ...ಇವನನ್ನು ಹಿಡಿದು ಇವನ ಬಾಯಿಗೆ ನೂರರ ಹತ್ತು ನೋಟನ್ನು ತುರುಕಿ ಕಳುಹಿಸಿ. ಇನ್ನು ಮುಂದೆ ಇವನು ಎಲ್ಲಿಯೂ ನನ್ನ ವಿರುದ್ಧ ಬಾಯಿ ತೆರೆಯಬಾರದು’’
ಕಾಸಿ ರೋಮಾಂಚನಗೊಂಡು ಬಾಯಿ ಅಗಲಿಸಿ ಕೂತ.

1 comment: