Sunday, March 23, 2014

ಅವರು ನಮಸ್ಕಾರ ಮಾಡಿದರು ಅಂತ, ನಾನು ಚೂರಿ ಹಾಕುವುದಾ...

ಮಾರ್ಚ್ 23 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ಮಲೇಶ್ಯಾ ವಿಮಾನ ಕಾಣೆಯಾಗಿರುವುದು ಮತ್ತು ಭಾರತದಲ್ಲಿ ಚುನಾವಣೆ ಘೋಷಣೆಯಾಗಿರುವುದು ಒಟ್ಟೊಟ್ಟಿಗೆ ಆಗಿರುವುದು ಪತ್ರಕರ್ತ ಎಂಜಲು ಕಾಸಿಗೆ ತಲೆ ತುರಿಕೆ ತಂದಿತು. ಚುನಾವಣೆಗೂ ವಿಮಾನಕ್ಕೂ ಸಂಬಂಧ ಇದ್ದರೂ ಇದ್ದೀತು ಎಂದು ಅಭಿಪ್ರಾಯ ಸಂಗ್ರಹಿಸಲು ರಾಜಕೀಯ ಮುಖಂಡರ ಮನೆ ಬಾಗಿಲನ್ನು ತಟ್ಟಲು ಧಾವಿಸಿದ.

ನೇರವಾಗಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಮನೆಯ ಬಾಗಿಲನ್ನು ತಟ್ಟಿದ. ಭದ್ರತೆಯ ಕಾರಣಕ್ಕಾಗಿ ಕಾಸಿಯನ್ನು ಮನೆಯ ಒಳಗೆ ಬಿಡಲಿಲ್ಲ. ಹೊರಗಿನಿಂದಲೇ ಕಾಸಿ ಪ್ರಶ್ನೆ ಕೇಳಿದ ‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾಗಿದೆ...’’ ಎಂದದ್ದೇ ತಡ. ಒಳಗಿನಿಂದ ನರೇಂದ್ರ ಮೋದಿ ಮಾತನಾಡತೊಡಗಿದರು ‘‘ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಇಂದು ಮಲೇಶ್ಯಾ ವಿಮಾನ ಕಾಣೆಯಾಗುತ್ತಲೇ ಇರಲಿಲ್ಲ. ಯುಪಿಎ ಸರಕಾರ ಮತ್ತು ಸೋನಿಯಾಗಾಂಧಿಯೇ ಈ ವಿಮಾನ ಕಾಣೆಯಾಗಲು ಮುಖ್ಯ ಕಾರಣ. ಮುಂದಿನ ಚುನಾವಣೆಯಲ್ಲಿ ನಾನು ಪ್ರಧಾನಮಂತ್ರಿಯಾದರೆ, ಈ ವಿಮಾನವನ್ನು ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಮಾಡಿಕೊಡುತ್ತೇನೆ....’’

ಕಾಸಿ ರೋಮಾಂಚನಗೊಂಡ ‘‘ಸಾರ್ ಈಗ್ಲೇ ಪತ್ತೆ ಮಾಡಿ ಕೊಡಬಹುದಲ್ಲ....ಚುನಾವಣೆಯಲ್ಲಿ ನಿಮ್ಮ ಇಮೇಜು ಹೆಚ್ಚುತ್ತದೆ...’’ ಮೋದಿಗೆ ಸಲಹೆ ನೀಡಿದ. ‘‘ಈಗ ಪತ್ತೆ ಮಾಡಿಕೊಟ್ಟರೆ ಅದರ ಲಾಭವನ್ನೆಲ್ಲ ಯುಪಿಎ ಸರಕಾರ ತನ್ನದಾಗಿಸಿಕೊಳ್ಳುತ್ತದೆ. ಇಂದು ಇಡೀ ವಿಶ್ವ ನಾನು ಪ್ರಧಾನಿಯಾಗುವುದನ್ನು ಕಾಯು ತ್ತಿದೆ. ನಾನು ಪ್ರಧಾನಿಯಾದರೆ ಮಾತ್ರ ಮಲೇಶ್ಯಾ ವಿಮಾನ ಪತ್ತೆಯಾಗಲು ಸಾಧ್ಯ...’’ ಪತ್ರಕರ್ತ ಎಂಜಲು ಕಾಸಿ ವಿಮಾನ ಸಿಕ್ಕಿಯೇ ಬಿಟ್ಟಿತು ಎಂಬಂತೆ ಸಂಭ್ರಮದಿಂದ ನೋಟ್ ಮಾಡಿಕೊಂಡು ಅಲ್ಲಿಂದ ನೇರವಾಗಿ ರಾಹುಲ್‌ಗಾಂಧಿಯ ಮನೆಯ ಬಾಗಿಲು ತಟ್ಟಿದ. ಕಾಸಿಯನ್ನು ಕಂಡದ್ದೇ ವೀರಪ್ಪ ಮೊಯ್ಲಿಯವರು ಗುರಾಯಿಸಿದರು. ಎಲ್ಲಿ, ನೇತ್ರಾವತಿ ನದಿ ತಿರುವು ಬಗ್ಗೆ ಪ್ರಶ್ನೆ ಕೇಳುವುದಕ್ಕೆ ಬಂದಿದ್ದಾನೋ ಎಂದು ಹೆದರಿ ‘‘ಏನಾಗಬೇಕು...ಹೇಳಿ...’’ ಎಂದರು.

‘‘ಅದೇ ಸಾರ್. ಮಲೇಶ್ಯಾದಲ್ಲಿ ವಿಮಾನ ಕಾಣೆಯಾ ಗಿದೆ...’’ ಕಾಸಿ ಪ್ರಶ್ನೆಯನ್ನು ಆರಂಭಿಸಿದ್ದೇ ಮೊಯ್ಲಿ ಮಾತನಾಡತೊಡಗಿದರು ‘‘ಮಲೇಶ್ಯಾದಲ್ಲಿ ವಿಮಾನ ಕಾಣೆಯಾಗಿರುವುದಕ್ಕೂ ನದಿ ತಿರುವಿಗೂ ಯಾವ ಸಂಬಂಧವೂ ಇಲ್ಲ. ನಮ್ಮದು ನೇತ್ರಾವತಿ ತಿರುವು ಯೋಜನೆ ಅಲ್ಲ...ಎತ್ತಿನ ಹೊಳೆ ಯೋಜನೆ....’’ ಕಾಸಿಗೆ ಅರ್ಥವಾಗಲಿಲ್ಲ ‘‘ಅಲ್ಲ ಸಾರ್...ಮಲೇಶ್ಯಾ ದಲ್ಲಿ ವಿಮಾನ ಕಾಣೆಯಾಗಿದೆ ನಿಮ್ಮ ಅಭಿಪ್ರಾಯ...’’ ಮೊಯ್ಲಿ ಮತ್ತಷ್ಟು ಸ್ಪಷ್ಟೀಕರಣ ನೀಡಿದರು ‘‘ನೋಡ್ರಿ...ಬಹುಶಃ ವಿಮಾನದ ಸಿಲಿಂಡರ್‌ನ ಗ್ಯಾಸ್ ಮುಗಿದಿರಬೇಕು. ಆಧಾರ್ ಕಾರ್ಡ್ ಇದ್ದರೆ ನಾವು ಮಲೇಶ್ಯಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುವುದಕ್ಕೆ ಸಿದ್ಧ...’’

ಕಾಸಿಗೆ ಏನೇನೂ ಅರ್ಥವಾಗಲಿಲ್ಲ. ಏನು ಕೇಳಿದರೂ ಅದಕ್ಕೆ ಸಿಲಿಂಡರ್‌ಗಳನ್ನು ಜೋಡಿಸುತ್ತಿದ್ದಾರಲ್ಲ ಎಂದು ಆತ ಕಂಗಾಲಾದ ‘‘ಸಾರ್...ಮಲೇಶ್ಯಾದ ವಿಮಾನ...’’ ಎಂದು ಮತ್ತೆ ಬಾಯಿ ತೆರೆಯುವಷ್ಟರಲ್ಲಿ ಮೊಯ್ಲಿ ಹೇಳತೊಡಗಿದರು ‘‘ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ಒಂದು ಅಧ್ಯಾಯ ಇದೆ....ನಾನು ಇತ್ತೀಚೆಗೆ ಬರೆದ ಕಾವ್ಯದ ಒಂದು ಭಾಗ....’’ ಎಂದು ಕಾವ್ಯ ಓದಲು ಶುರು ಹಚ್ಚುವಷ್ಟರಲ್ಲಿ ಕಾಸಿ ಅಲ್ಲಿಂದ ಓಡಿ ಯಡಿಯೂರಪ್ಪರ ಮನೆಯನ್ನು ಮುಟ್ಟಿದ.

‘‘ಏನ್ರೀ ಓಡ್ಕೊಂಡು ಬರ್ತಾ ಇದ್ದೀರಾ? ಜೆಡಿಎಸ್‌ನೋರು ಟಿಕೆಟ್ ಕೊಡ್ತೇನೆ ಎಂದು ಏನಾದ್ರೂ ಅಟ್ಟಿಸಿಕೊಂಡು ಬಂದ್ರಾ...’’ ಯಡಿಯೂರಪ್ಪ ಕಾಸಿಯನ್ನು ಜೋಕು ಮಾಡಿದರು.
ಎಂಜಲು ಕಾಸಿ ನಾಚಿಕೊಂಡ ‘‘ಸಾರ್...ಮಲೇಶ್ಯಾ ವಿಮಾನ ಕಾಣೆಯಾಗಿರುವುದರ ಬಗ್ಗೆ ನಿಮ್ಮ ಅನ್ನಿಸಿಕೆ...’’
ಯಡಿಯೂರಪ್ಪ ಸಿಟ್ಟಾದರು ‘‘ನಾನು ಕಾಣೆಯಾಗಿರುವ ನನ್ನ ಕೆಜೆಪಿ ವಿಮಾನವನ್ನು ಹುಡುಕ್ತಾ ಇದ್ದೇನೆ...ನೀವು...’’
‘‘ಹಾಗಲ್ಲ ಸಾರ್...ನೀವು ಮಾಜಿ ಮುಖ್ಯಮಂತ್ರಿ. ನಿಮ್ಮ ಅನ್ನಿಸಿಕೆ ಬಹಳ ಮುಖ್ಯ’’ ಕಾಸಿ ಒತ್ತಾಯಿಸಿದ.
‘‘ಮಲೇಶ್ಯಾ ವಿಮಾನ ಏನು ಬಂತು. ನನ್ನನ್ನು ಐದು ವರ್ಷ ಮುಖ್ಯಮಂತ್ರಿ ಮಾಡಿದ್ದಿದ್ದರೆ ವಿಧಾನಸೌಧ ವನ್ನೇ ಮಾಯ ಮಾಡಿ ತೋರಿಸ್ತಿದ್ದೆ. ಇಂದು ವಿಮಾನ ಮಾಯ ಆಗಿರೋದರಿಂದ ಮಲೇಶ್ಯ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ನಾವು ಕೂಡ ಇದೇ ಥರ ಮಾಯ ಮಾಡುವುದಕ್ಕೆ ಕಲಿಯಬೇಕು. ಅದೇನೋ ಒಂದಿಷ್ಟು ಭೂಮಿಯನ್ನು ಮಾಯ ಮಾಡಿದೆ ಎಂದು ಲೋಕಾಯುಕ್ತರು ಏನೇನೋ ಆರೋಪ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಟ್ಟರು. ಈಗ ಮಲೇಶ್ಯದಲ್ಲಿ ವಿಮಾನವೇ ಮಾಯ ಆಗಿದೆ. ಇದ ಕ್ಕಾಗಿ ಅಲ್ಲಿಯ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಅಧಿಕಾರದಿಂದ ಕೆಳಗಿಳಿದ ಸುದ್ದಿಯನ್ನು ನೀವೇನಾದರೂ ಕೇಳಿದ್ದೀರಾ? ಇಲ್ಲವಲ್ಲ?....’’ ಯಡಿಯೂರಪ್ಪರ ಉತ್ತರ ಕೇಳಿದ್ದೇ ಕಾಸಿ ಥಟ್ಟನೆ ಅಲ್ಲಿಂದ ಮಾಯ ಆಗಿ ದೇವೇಗೌಡರ ಮುಂದೆ ಬಂದು ನಿಂತ.
ಕಾಸಿಯನ್ನು ಕಂಡದ್ದೇ ದೇವೇಗೌಡರು ಸಿಟ್ಟಾದರು. ‘‘ಸಿದ್ದರಾಮಯ್ಯನ ಎಂಜಲು ತಿಂದು ನನ್ನ ಬಳಿ ತಲೆಗೆಟ್ಟ ಪ್ರಶ್ನೆ ಕೇಳೋದಕ್ಕೆ ಬಂದಿದ್ದೀಯಾ? ಅದೇನು ಕೇಳಬೇಕೋ ಕೇಳು...’’
‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾ ಗಿದೆ....ಇನ್ನೂ ಸಿಕ್ಕಿಲ್ಲ...’’ ಕಾಸಿ ಕಾಲಿನ ಹೆಬ್ಬೆರಳಲ್ಲಿ ಉಂಗುರ ಬರೆಯುತ್ತಾ ಪ್ರಶ್ನಿಸಿದ.
‘‘ನೋಡ್ರಿ...ನಾನು ಪ್ರಧಾನಿಯಾಗಿದ್ದಿದ್ರೆ ಇಂದು ಮಲೇಶ್ಯಾದ ವಿಮಾನ ಕೆಲವೇ ದಿನಗಳಲ್ಲಿ ಪತ್ತೆಯಾಗಿರುತ್ತಿತ್ತು. ಕೇರಳದ ಹಲವು ಮಂತ್ರವಾದಿಗಳು ನನಗೆ ಗೊತ್ತಿದ್ದಾರೆ. ಅವರನ್ನು ಕಳುಹಿಸಿಕೊಟ್ಟು ಸಮಸ್ಯೆ ಬಗೆ ಹರಿಸುತ್ತಿದ್ದೆ. ನಮ್ಮ ದೇಶದ ಖ್ಯಾತಿಯೂ ಹೆಚ್ಚುತ್ತಿತ್ತು. ಆದರೆ ಇಲ್ಲಿ ನೋಡಿದ್ರೆ ಸಿದ್ದರಾಮಯ್ಯ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರ್ತಾನಂತೆ....ಮಂತ್ರವಾದಿಗಳನ್ನು ಜೈಲಿಗೆ ಹಾಕ್ತಾನಂತೆ...ನನ್ನ ಪ್ರಾಣ ಇರುವವರೆಗೆ ಅದಕ್ಕೆ ಅವಕಾಶ ಕೊಡೋದಿಲ್ಲ.’’
ಕಾಸಿ ಅಲ್ಲಿಂದ ಮೆಲ್ಲನೆ ಎದ್ದು ನೇರವಾಗಿ ವಾಟಾಳ್ ನಾಗರಾಜ್ ಬಳಿಗೆ ಓಡಿದ. ‘‘ಸಾರ್...ವಿಮಾನ ಕಾಣೆಯಾಗಿದೆ...ಇನ್ನೂ ಸಿಕ್ಕಿಲ್ಲ...’’
ವಾಟಾಳ್ ತನ್ನ ಟೋಪಿ ಧರಿಸಿ ಅಣಿಯಾದರು ‘‘ಇದನ್ನು ಇಷ್ಟು ತಡವಾಗಿ ಬಂದು ಹೇಳ್ತೀರಲ್ಲಾರೀ... ನಾಳೇನೇ ಧರಣಿ ಮಾಡ್ತೀನಿ...ವಿಮಾನ ನಿಲ್ದಾಣಕ್ಕೆ ಹೋಗಿ ಧರಣಿ ಮಾಡ್ತೇನೆ....ವಿಮಾನ ಹೋಗದ ಹಾಗೆ ರಸ್ತೆ ತಡೆ ಮಾಡ್ತೇನೆ....’’
ಕಾಸಿ ಅಲ್ಲಿಂದ ನೇರವಾಗಿ ಮಂಗಳೂರಿಗೆ ಧಾವಿಸಿದ. ನೋಡಿದರೆ ಜನಾರ್ದನ ಪೂಜಾರಿ! ‘‘ಸಾರ್...ವಿಮಾನ ಅಪಹರಣ ಆಗಿದೆ...ಇನ್ನೂ ಸಿಕ್ಕಿಲ್ಲ...’’
ಜನಾರ್ದನ ಪೂಜಾರಿ ಬೆಚ್ಚ ಆದರು ‘‘ಎಂತದು ಅದು ಸಿಗಲಿಕ್ಕೆ ಗೋಳಿ ಬಜೆಯ? ಇಷ್ಟರವರೆಗೆ ಹೋದಲ್ಲೆಲ್ಲ ಪ್ರಭಾಕರಭಟ್ಟರು ಅಡ್ಡ ಬರ್ತಾ ಇದ್ದರು. ಅವರು ನಮಸ್ಕಾರ ಮಾಡುವಾಗ ನಾನು ನಮಸ್ಕಾರ ಮಾಡುವುದು ತಪ್ಪಾ? ನಾನೆಂತ ಪ್ರಭಾಕರ ಭಟ್ಟರಿಗೆ ಚೂರಿ ಹಾಕಬೇಕಾ? ನನ್ನ ಬೆನ್ನಿನಲ್ಲಿ ನೋಡಿ? ಇಪ್ಪತ್ತು ಚೂರಿ ಉಂಟು. ಎಲ್ಲ ಚೂರಿ ಕಳೆದ ಬಾರಿ ಎಲೆಕ್ಷನ್‌ನಲ್ಲಿ ನಮ್ಮವರು ಹಾಕಿದ್ದು. ಈ ಬಾರಿ ಚೂರಿ ಹಾಕುವ ಹಾಗೆ ಇಲ್ಲ....’’
‘‘ಯಾಕೆ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಚೂರಿ ಹಾಕಲಿಕ್ಕೆ ಬೆನ್ನಿನಲ್ಲಿ ಜಾಗ ಎಲ್ಲಿ ಉಂಟು? ಈ ಬಾರಿ ಹಾಕುವವರು ಇದ್ದರೆ ಎದೆಗೇ ಹಾಕಬೇಕು. ವಿಮಾನ ಮಾಯ ಆಗುವುದರ ಬಗ್ಗೆ ನೀವು ಮಾತನಾಡ್ತೀರಿ...ನಮ್ಮ ನೇತ್ರಾವತಿ ನದಿ ಮಾಯ ಆಗುವುದರ ತಲೆಬಿಸಿಯಲ್ಲಿ ನಾನಿ ದ್ದೇನೆ....ನಾನು ಓಟಿಗೆ ನಿಲ್ಲಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಮೊಯ್ಲಿಯವರು ನೇತ್ರಾವತಿಯನ್ನು ಮಾಯ ಮಾಡ್ತಾರಂತೆ...ಇಡೀ ಮಂಗಳೂರನ್ನೇ ಮಾಯ ಮಾಡ್ತಾರಂತೆ...ನಾನು ಜೀವದಲ್ಲಿದ್ದರೆ ಬಿಡುವುದಿಲ್ಲ....’’ ಅಷ್ಟರಲ್ಲಿ ಪೂಜಾರಿ ಪಕ್ಕಕ್ಕೆ ದೃಷ್ಟಿ ಹಾಯಿಸಿದ್ದೇ ಓಡ ತೊಡಗಿದರು. ಕಾಸಿಯೂ ಹೆದರಿ ಅವರೊಟ್ಟಿಗೆ ಓಡತೊಡಗಿದ ‘‘ಎಂತಾಯಿತು ಸಾರ್...ಯಾಕೆ ಓಡ್ತಾ ಇದ್ದೀರಿ...’’ ಕಾಸಿ ಗಾಬರಿಯಿಂದ ಕೇಳಿದ.
‘‘ಅದೇ ಕಲ್ಲಡ್ಕದ ಪ್ರಭಾಕರ ಭಟ್ಟರು ಬರುತ್ತಿ ದ್ದಾರೆ. ಅವರು ಬಂದು ಇನ್ನು ನಮಸ್ಕಾರ ಹಾಕಿದರೆ ಮಂಗಳೂರಿನ ಬ್ಯಾರಿಗಳನ್ನು ಸಮಾಧಾನ ಮಾಡುವುದು ಯಾರು? ಇತ್ತೀಚೆಗೆ ಈ ಪ್ರಭಾಕರ ಭಟ್ಟರ ಕಾಟದಿಂದ ಬೀದಿಗಿಳಿಯುವುದೇ ಕಷ್ಟವಾಗಿದೆ ಮಾರ್ರೆ....ಹೋದಲ್ಲೆಲ್ಲ ಅಡ್ಡ ಬಂದು ನನಗೆ ಒಂದು ನಮಸ್ಕಾರ ಹಾಕಿ ಹೋಗುವುದು. ಇದು ಪೆದಂಬಲ್ವಾ....ನಾನು ಏನು ಮಾಡುವುದು? ಅವರು ನಮಸ್ಕಾರ ಹಾಕಿದರು ಅಂತ ಅವರಿಗೆ ಚೂರಿ ಹಾಕ್ಲಿಕ್ಕೆ ಆಗ್ತದಾ? ಅದು ನಮ್ಮ ಸಂಸ್ಕೃತಿಯಾ....’’ ಎಂದು ಏದುಸಿರು ಬಿಡುತ್ತಾ ಕೇಳಿದರು.

No comments:

Post a Comment