Monday, March 17, 2014

ಮೋದಿ ಜೊತೆಗೆ ಜಾಫರ್ ಶರೀಫ್ ಡಿನ್ನರ್!

 
ಮಾರ್ಚ್ ೧೬ ರವಿವಾರ ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ 

ಮಧ್ಯಾಹ್ನದ ಹೊತ್ತಿಗೆ ಪತ್ರಕರ್ತ ಎಂಜಲು ಕಾಸಿಯ ಹೊಟ್ಟೆ ಚುರ್ರ್‌ ಅಂತು. ರಾಜಕೀಯ ರ್ಯಾಲಿಗಳ ಹಿಂದೆ ಹೋಗಿ ಹೋಗಿ ಆತ ಸುಸ್ತಾಗಿದ್ದ. ನೇರವಾಗಿ ಒಂದು ಹೊಟೇಲನ್ನು ಹೊಕ್ಕು, ವೈಟರ್‌ನನ್ನು ಕರೆದು ಊಟಕ್ಕೆ ಆರ್ಡರ್ ಮಾಡಿದ. ಅಷ್ಟರಲ್ಲಿ ವೈಟರ್ ಕೇಳಿದ ‘‘ಸಾರ್...ಯಾರ ಜೊತೆಗೆ...ಮೋದಿ ಜೊತೆಗೆ ಊಟ ಮಾಡ್ತೀರಾ...ಕೇಜ್ರಿವಾಲ್ ಜೊತೆಗೆ ಊಟ ಮಾಡ್ತೀರಾ...ರಾಹುಲ್ ಜೊತೆಗೆ ಊಟ ಮಾಡ್ತೀರಾ?’’ ಕಾಸಿಗೆ ಅರ್ಥವಾಗಲಿಲ್ಲ. ‘‘ಅಂದ್ರೆ...’’ ಎಂದು ಕೇಳಬೇಕೆನ್ನುವಾಗಲೇ ವೈಟರ್ ಉತ್ತರಿಸಿದ ‘‘ಇದೆಲ್ಲ ಚುನಾವಣಾ ಸ್ಪೆಶಲ್ ಸಾರ್.
ಈಗಾಗಲೇ ಬೇರೆ ಬೇರೆ ಪಕ್ಷದ ನಾಯಕರು ಇಷ್ಟು ರೂಪಾಯಿ ಕೊಟ್ರೆ ನಮ್ಮ ನಾಯಕರ ಜೊತೆಗೆ ಊಟ ಮಾಡಬಹುದು...ಕಾಫಿ ಕುಡಿಯಬಹು...ಎಂದು ಘೋಷಣೆ ಮಾಡಿದ್ದಾರೆ. ಇದೀಗ ನಾವೇ ಅವರೆಲ್ಲರಿಂದ ಗುತ್ತಿಗೆ ಪಡೆದಿದ್ದೇವೆ...ನಿಮಗೆ ಯಾರ ಜೊತೆಗೆ ಊಟ ಮಾಡಬೇಕೋ ಅವರ ಜೊತೆಗೆ ನಾವು ವ್ಯವಸ್ಥೆ ಮಾಡು ತ್ತೇವೆ....’’
ಕಾಸಿಗೆ ಕುತೂಹಲವಾಯಿತು. ‘‘ಹಾಗಾದ್ರೆ ರಾಹುಲ್ ಜೊತೆಗೆ ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡ್ತೀರಾ...’’
ವೈಟರ್ ಬರೆದುಕೊಳ್ಳಲಾರಂಭಿಸಿದ ‘‘ಖಂಡಿತಾ ವ್ಯವಸ್ಥೆ ಮಾಡುವ. ಬರೇ ರಾಹುಲ್ ಮಾತ್ರವ, ಅಥವಾ ನೆಂಜಿಕೊಳ್ಳುವುದಕ್ಕೆ ಇತರ ಪುಡಿ ಕಾಂಗ್ರೆಸ್ಸಿಗರೂ ಜೊತೆಗೆ ಬೇಕಾ...’’ ಕಾಸಿಗೆ ಅರ್ಥವಾಗಲಿಲ್ಲ. ಮತ್ತೆ ವೈಟರ್ ವಿವರಿಸಿದ ‘‘ಸಾರ್...ರಾಹುಲ್ ಜೊತೆಗೆ ದಿಗ್ವಿಜಯ್ ಸಿಂಗ್ ಇದ್ದರೆ ಊಟದ ಬಿಲ್ ಜಾಸ್ತಿಯಾಗತ್ತೆ. ಲೋಕಲ್ ಪುಡಿ ರಾಜಕಾರಣಿಗಳಿಗೆ ಯಾವುದೇ ಚಾರ್ಜ್ ಬೀಳಲ್ಲ...’’

‘‘ಬರೇ ರಾಹುಲ್ ಜೊತೆಗೆ ಊಟಕ್ಕೆ ಎಷ್ಟಾಗತ್ತೆ....?’’ ಕಾಸಿ ಮುಗ್ಧವಾಗಿ ಕೇಳಿದ.
‘‘ಸಾರ್ ರಾಹುಲ್ ಜೊತೆಗೆ ಊಟ ಮಾಡುವುದಾದರೆ ನೀವು ಬಿಲ್‌ನ್ನು ಡಾಲರ್ ಮೂಲಕ ಪಾವತಿಸಬೇಕಾಗತ್ತೆ. ಬೇಕಾದ್ರೆ... ಸ್ವಿಸ್‌ನಲ್ಲಿರುವ ಅವರ ಅಕೌಂಟಿಗೆ ಹಾಕಿದರೂ ನಡೆಯುತ್ತದೆ. ಒಂದು ಹೊತ್ತಿನ ಊಟಕ್ಕೆ ಎರಡು ಕೋಟಿ ರೂಪಾಯಿ. ಮೂರು ಹೊತ್ತಿನ ಊಟಕ್ಕೆ ರಿಯಾಯಿತಿ ಇದೆ...’’
ಕಾಸಿಗೆ ತಲೆ ಗಿರ್ರೆಂದು ತಿರುಗಿತು. ಕಿಸೆಯಲ್ಲಿ ಬರೇ 30 ರೂಪಾಯಿ ಇಟ್ಟುಕೊಂಡು ಊಟಕ್ಕೆ ಕುಳಿತವನಲ್ಲಿ ಒಂದು ಊಟಕ್ಕೆ ಎರಡು ಕೋಟಿ ರೂಪಾಯಿ ಎಂದರೆ ಏನಾಗಬಹುದು ಪಾಪ!
‘‘ರೀ...ಬೇಡಾ...ರಾಹುಲ್ ಸಹವಾಸವೇ ಬೇಡ. ನನಗೆ ಆಮ್ ಆದ್ಮಿ ಕೇಜ್ರಿವಾಲ್ ಜೊತೆಗಿನ ಊಟ ಕೊಡಿ...’’ ಮೂವತ್ತು ರೂಪಾಯಿಯ ಪ್ಲೇಟ್ ಊಟ ಇನ್ನಷ್ಟು ಕಡಿಮೆಗೆ ಸಿಗಬಹುದು ಎಂದು ಕಾಸಿ ಭಾವಿಸಿದ. ಆಮ್ ಆದ್ಮಿಯಲ್ವೆ?
ವೈಟರ್ ಸಲಹೆ ನೀಡಿದ ‘‘ಸಾರ್...ಅದು ಆಮ್ ಆದ್ಮಿ ಸಾರ್. ಚುನಾವಣೆಯ ಹೊತ್ತಿನಲ್ಲಿ ಆಮ್ ಆದ್ಮಿಗಳ ಬೆಲೆ ಏಕಾಏಕಿ ಹೆಚ್ಚುತ್ತೆ. ಅವರ ಜೊತೆ ಊಟ ತುಂಬಾ ಕ್ವಾಸ್ಟ್ಲಿ ಸಾರ್. ಮೊನ್ನೆ ಬಿಜೆಪಿಯ ಎಲ್. ಕೆ. ಅಡ್ವಾಣಿಯವರೇ ಕೇಜ್ರಿವಾಲ್ ಊಟಕ್ಕೆ ಬುಕ್ ಮಾಡಿದ್ರು. ಆದರೆ ಈವರೆಗೂ ಕೇಜ್ರಿವಾಲ್ ಅವಕಾಶ ಕೊಟ್ಟಿಲ್ಲ. ಸೋನಿಯಾಗಾಂಧಿಗೂ ಕೇಜ್ರಿವಾಲ್ ಊಟ ಅಂದ್ರೆ ಒಳಗೊಳಗೆ ಇಷ್ಟ. ಆದರೆ ತುಂಬಾ ಡಿಮಾಂಡ್ ಸಾರ್. ನಿಮಗೆ ಅದರ ತಂಟೆ ಬೇಡ’’
ಕಾಸಿಗೆ ಕುತೂಹಲವಾಯಿತು. ‘‘ಅಲ್ಲರೀ... ಎಲ್ಲರೂ ಕೇಜ್ರಿವಾಲ್ ಜೊತೆಗಿನ ಊಟವನ್ನು ಯಾಕೆ ಇಷ್ಟ ಪಡ್ತಾ ಇದ್ದಾರೆ? ಅದರಲ್ಲೇನಿದೆ ವಿಶೇಷ?’’
 ‘‘ಅದು ಹೊಸ ರುಚಿ ಕಾಲಂನಲ್ಲಿ ಬಂದಿರೋ ಸ್ಪೆಶಲ್ ಊಟ. ವಿದೇಶದಿಂದಲೂ ಅದಕ್ಕೆ ಒಳಗೊಳಗೆ ಡಿಮ್ಯಾಂಡ್ ಇದೆಯಂತೆ. ಅಷ್ಟೇ ಅಲ್ಲ, ತೆಳುವಾಗಿ ಆ ಊಟದ ಮೇಲೆ ಕೇಸರಿಯನ್ನು ಸವರಿರುತ್ತಾರೆ. ಒಳಗೆ ದಲಿತ, ಶ್ರೀಸಾಮಾನ್ಯ ಎಂದೆಲ್ಲ ಬೇರೆ ಬೇರೆ ಮಸಾಲೆಗಳಿವೆ. ಸಂಪೂರ್ಣ ಎಸಿ ರೂಂನಲ್ಲೇ ಆಮ್ ಆದ್ಮಿ ಊಟ ನಡೆಯೋದು. ದಲಿತರಿಗಾಗಿ ದೇವನೂರು ಮಸಾಲೆ ಅರೆದು ತಯಾರಿಸಿದ ಊಟ ಅದು. ಐಟಿ ಕಂಪೆನಿಯ ಹುಡುಗರಿಗೆ ಬೇಕಾದ ಫಾಸ್ಟ್‌ಫುಡ್ ಐಟಂಗಳೂ ಅದರಲ್ಲಿವೆ. ರೈತರಿಗೆ ಬೇಕಾದ ಕಡ್ಲೆಕಾಯಿ ಬೀಜಗಳನ್ನೂ ಬರೋಬರಿ ಸೇರಿಸಲಾಗುತ್ತದೆ. ಈ ಕಾರಣದಿಂದ ಕೇಜ್ರಿವಾಲ್ ಊಟಕ್ಕೆ ವಿಶೇಷ ಬೇಡಿಕೆ. ನಿಮಗೆ ಬೇಕಾದರೆ ವ್ಯವಸ್ಥೆ ಮಾಡಿಕೊಡುವ. ಆದರೆ ಬಿಲ್ ನೋಡಿ ಬೆಚ್ಚಿ ಬೀಳಬಾರದು...’’
ಕಾಸಿ ಕುಳಿತಲ್ಲೇ ಹಣೆ ಒರೆಸಿಕೊಂಡ. ವೈಟರ್ ಮತ್ತೊಂದು ಸಲಹೆ ನೀಡಿದ ‘‘ಸಾರ್...ಬೇಕಾದರೆ ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬಹುದು...’’
‘‘ಊಟದ ಹೊತ್ತಲ್ಲಿ ಯಾರಾದರೂ ಚಹಾ ಕುಡೀತಾರ...ಹೋಗ್ಲಿ...ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬೇಕಾದರೆ ಎಷ್ಟಾಗುತ್ತದೆ...’’
‘‘ಬರೇ ಕಡಿಮೆ ಸಾರ್...ಒಂದು ಚಹಾಕ್ಕೆ ಎರಡು ಲಕ್ಷ ರೂಪಾಯಿ ಆಗುತ್ತದೆ. ಅದು ನಿಮ್ಮ ಖಾತೆಗೇ ಹೋಗಿ ಬೀಳುತ್ತದೆ. ಆಮ್ ಆದ್ಮಿ ಅಂದರೆ ನೀವೇ ಅಲ್ಲವೆ? ಅವರು ಪ್ರಧಾನಿಯಾದರೆ ನಿಮಗೇ ಅಲ್ಲವೆ ಲಾಭ?’’ ವೈಟರ್ ಸಮಜಾಯಿಶಿ ಹೇಳಿದ.
ಕಾಸಿ ತನ್ನ ಜೇಬಲ್ಲಿರುವ 30 ರೂಪಾಯಿಯನ್ನು ಮತ್ತೊಮ್ಮೆ ಮುಟ್ಟಿ ನೋಡಿ ಹೇಳಿದ ‘‘ಕೇಜ್ರಿವಾಲ್ ಸಹವಾಸವೇ ಬೇಡ. ನನಗೆ ನರೇಂದ್ರ ಮೋದಿ ಜೊತೆ ಊಟ ಮಾಡಲು ಸಾಧ್ಯವೆ?’’
‘‘ಇಲ್ಲ ಸಾರ್. ನರೇಂದ್ರ ಮೋದಿಯ ಜೊತೆಗೆ ಊಟ ಮಾಡಲು ಜಾಫರ್ ಶರೀಫ್ ಅವರು ಬುಕ್ ಮಾಡಿದ್ದಾರೆ. ಇವತ್ತು ರಾತ್ರಿಯ ಸ್ಪೆಶಲ್ ಬಿರಿಯಾನಿಗಾಗಿ ಈಗಾಗಲೇ ಎರಡು ಕೊಬ್ಬಿದ ಅಲ್ಪಸಂಖ್ಯಾತ ಕುರಿಗಳನ್ನು ಹಲಾಲ್ ಮಾಡಲಾಗಿದೆ. ನರೇಂದ್ರ ಮೋದಿಯ ಜೊತೆಗೆ ಜಾಫರ್ ಶರೀಫ್ ಇಫ್ತಾರ್ ಕೂಟವನ್ನು ಮಾಡಿದ್ದಾರೆ...’’
ಕಾಸಿ ಬೆಚ್ಚಿ ಬಿದ್ದ. ಅರೆ! ರಮಝಾನ್ ತಿಂಗಳೇ ಬಂದಿಲ್ಲ. ಇಫ್ತಾರ್ ಕೂಟವೇ? ‘‘ಇಫ್ತಾರ್ ಕೂಟ ಮಾಡುವುದು ರಮಝಾನ್‌ನ ಉಪವಾಸದ ಸಂದರ್ಭ ದಲ್ಲಿ ಅಲ್ಲವೆ?’’ ತನ್ನ ಪ್ರಶ್ನೆಯನ್ನು ಮುಂದಿಟ್ಟ.
ವೈಟರ್ ಹಲ್ಲು ಕಿರಿದ. ‘‘ಟಿಕೆಟ್ ಕೊಡದೇ ಕಾಂಗ್ರೆಸ್‌ನೋರು ಜಾಫರ್ ಶರೀಫ್ ಅವರನ್ನು ಉಪವಾಸ ಕೆಡವಿದ್ದಾರೆ ಸಾರ್. ಅದರ ಸಿಟ್ಟಿನಲ್ಲಿ ಅವರು ನರೇಂದ್ರ ಮೋದಿ ಜೊತೆಗೆ ಇಫ್ತಾರ್ ಕೂಟ ಇಟ್ಕೊಂಡಿದ್ದಾರೆ ಸಾರ್. ಟಿಕೆಟ್ ಕೊಡದೇ ಇದ್ದರೆ ನಾನು ಮಕ್ಕಾಕ್ಕೆ ಹೋಗ್ತೇನೆ ಎಂದು ಜಾಫರ್ ಶರೀಫ್ ಅನೌನ್ಸ್ ಮಾಡಿದ್ದರು ಸಾರ್. ಕಾಟ ತಪ್ಪಿತು ಎಂದು ಕಾಂಗ್ರೆಸ್‌ನೋರು ಟಿಕೆಟ್ ಕೊಡಲಿಲ್ಲ. ಈಗ ಹೇಳಿದಂತೆ ಮಕ್ಕಾಕ್ಕೆ ಹೋಗದೆ ಗುಜರಾತ್‌ನಲ್ಲಿ ಮೋದಿ ಜೊತೆಗೆ ಊಟ ಮಾಡ್ತೇನೆ ಎಂದು ಕಾಂಗ್ರೆಸ್‌ನೋರಿಗೆ ಬೆದರಿಕೆ ಹಾಕ್ತಾ ಇದ್ದಾರೆ ಸಾರ್...ನಿಮಗೆ ನರೇಂದ್ರ ಮೋದಿ ತಂಟೆ ಬೇಡ ಸಾರ್. ಅಡ್ವಾಣಿಯವರ ಜೊತೆಗೆ ನೀವು ಊಟ ಮಾಡುವುದಾದರೆ ಫ್ರೀಯಾಗಿ ಮಾಡಬಹುದು...ಆದರೆ ಅವರ ಊಟದ ಬಿಲ್‌ನ್ನು ನೀವು ಪಾವತಿಸಬೇಕಾಗುತ್ತದೆ...’’
ಅಡ್ವಾಣಿಯಾದರೂ ಫ್ರೀಯಾಗಿ ಸಿಕ್ಕಿದರಲ್ಲಾ ಎಂದು ಕಾಸಿ ಸಂತೋಷಗೊಂಡ ‘‘ಹಾಗಾದ್ರೆ ಫ್ರೀಯಾಗಿ ಯಾರ್ಯಾರ ಜೊತೆಗೆ ಊಟ ಮಾಡಬಹುದು ಹೇಳಿ...’’
 ವೈಟರ್ ಪಟ್ಟಿಯನ್ನು ಓದಿ ಹೇಳಿದ ‘‘ದೇವೆಗೌಡರ ಜೊತೆಗೆ ಫ್ರೀಯಾಗಿ ರಾಗಿ ಮುದ್ದೆ ತಿನ್ನಬಹುದು. ವಾಟಾಳ್ ನಾಗರಾಜ್ ಜೊತೆಗೆ ಸೇರಿ ಫ್ರೀಯಾಗಿ ಸೆಗಣಿ ತಿನ್ನಬಹುದು. ಕುಮಾರಸ್ವಾಮಿ ಮಣ್ಣಿನ ಮೊಮ್ಮಗನಾಗಿರುವುದರಿಂದ ಅವರ ಜೊತೆಗೆ ಫ್ರೀಯಾಗಿ ಮಣ್ಣು ತಿನ್ನಬಹುದು...ಮೈಸೂರಿನ ಅಭ್ಯರ್ಥಿ ಪತ್ರಕರ್ತ ಪ್ರತಾಪ ಸಿಂಹನ ಜೊತೆಗೆ ಸೇರಿ ಫ್ರೀಯಾಗಿ ನರೇಂದ್ರ ಮೋದಿಯ ಅಭಿವೃದ್ಧಿಯ ಬೂಟು ನೆಕ್ಕಬಹುದು... ಪುತ್ತೂರಿನ ಸದಾನಂದ ಗೌಡರ ಜೊತೆಗೆ ಕುಳಿತು ಫ್ರೀಯಾಗಿ ಸುಬ್ರಹ್ಮಣ್ಯದಲ್ಲಿ ಎಂಜಲು ಸೇವೆ ಮಾಡಬಹುದು...’’
ಹೀಗೆಲ್ಲ ಫ್ರೀ ಐಟಂಗಳನ್ನು ವೈಟರ್ ಹೇಳು ತ್ತಿದ್ದಂತೆಯೇ ಎಂಜಲು ಕಾಸಿ ಅಲ್ಲಿಂದ ಎದ್ದು ಓಡ ತೊಡಗಿದ. ಅವನಿಗೆ ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆಗೆ ಅಂಬಲಿ ಕುಡಿಯುವ ಮನಸ್ಸಾಗಿತ್ತು.

ಕಾರ್ಟೂನ್-ಪಿ ಮಹಮ್ಮದ್-ಕೃಪೆ-ವಿ.ಕ. 

No comments:

Post a Comment