Monday, April 20, 2015

ಆಹಾ...ಮುತಾಲಿಕ್ ಮದುವೆಯಂತೆ...!!

ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹಣ ಪಡೆದು ಗಲಭೆ ನಡೆಸುವ  ಕೃತ್ಯ  ತೆಹಲ್ಕಾ ಕಾರ್ಯಾಚರಣೆಯಲ್ಲಿ ಬಯಲಾದಾಗ ಮೇ -30-2010 ರಲ್ಲಿ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ  ಬುಡಬುಡಿಕೆ. 

ಮುಖಕ್ಕೆ ಮೆತ್ತಿದ ಮಸಿಯನ್ನು ಉಜ್ಜಿ ಉಜ್ಜಿ ಸುಸ್ತಾಗಿ ಬಚ್ಚಲು ಮನೆಯಲ್ಲಿ ಉಸ್ಸೆಂದು ಬಿದ್ದುಕೊಂಡರು ಪ್ರಮೋದ್ ಮುತಾಲಿಕ್. ಇತ್ತೀಚೆಗೆ ತನ್ನ ಯಾರು ಭೇಟಿಯಾಗಲು ಬಂದರೂ ಅವರಲ್ಲಿ ಗುಪ್ತ ಕ್ಯಾಮರಾ ಇರಬಹುದೆಂದು ಭಾವಿಸಿ, ಮಾತನಾಡುವುದಕ್ಕೆ ಭಯ ಪಡುತ್ತಿದ್ದರು. ಒಂದೆಡೆ ಪ್ರಸಾದ್ ಅತ್ತಾವರ ಜೈಲಲ್ಲಿದ್ದಾನೆ. ಮತ್ತೊಂದೆಡೆ ತನ್ನ ಶಿಷ್ಯರೆಲ್ಲ ದರೋಡೆ, ಪಿಕ್‌ಪಾಕೆಟ್ ಮೊದಲಾದ ಆರೋಪದಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ.
ತೆಹಲ್ಕಾ ಸ್ಟಿಂಗ್ ಆಪರೇಷನ್ ಬಳಿಕ, ಯಾವ ಕೆಲಸ ಮಾಡುವುದಕ್ಕೂ ಭಯ. ಮನೆಯಲ್ಲಿ ಕೆಲಸವಿಲ್ಲದೆ ಒಂಟಿಯಾಗಿ ಬಿದ್ದುಕೊಂಡಿದ್ದ ಮುತಾಲಿಕರಿಗೆ ಒಬ್ಬಂಟಿತನ ಕಾಡತೊಡಗಿತು. ನೇರವಾಗಿ ಹೋಗಿ ಕನ್ನಡಿ ಮುಂದೆ ನಿಂತರು. ತೀರಾ ಮುದುಕನಾಗಿಲ್ಲ ಎಂದು ತುಸು ಸಮಾಧಾನವಾಯಿತು. ಒಮ್ಮೆಲೆ ಅವರಿಗೆ ‘ಅರೆ! ನಾನು ಇಲ್ಲಿಯವರೆಗೆ ಮದುವೆಯೇ ಆಗಿಲ್ಲವಲ್ಲ, ಒಂದು ಮದುವೆಯಾದರೆ ಹೇಗೆ?’ ಎಂಬ ಆಲೋಚನೆ ಬಂತು.
ಆದರೆ ಕರ್ನಾಟಕದಲ್ಲಿ ಈಗಾಗಲೇ ಹೆಣ್ಣು ಹೆತ್ತವರ ವಿರೋಧ ಕಟ್ಟಿಕೊಂಡುದರಿಂದ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ಆಲೋಚನೆ ಬಂತು. ಪತ್ರಿಕೆಯಲ್ಲಿ ಒಂದು ಜಾಹೀರಾತು ಕೊಟ್ಟು ನೋಡಿದರೆ ಹೇಗೆ? ಎಂಬ ಆಲೋಚನೆ ಬಂತು. ಮರುದಿನವೇ ‘ಕೇಸರಿ ಲಂಗೋಟಿ’ ಪತ್ರಿಕೆಯಲ್ಲಿ ಜಾಹೀರಾತು ನೀಡಿಯೇ ಬಿಟ್ಟರು.
"ವಧು ಬೇಕಾಗಿದೆ".
ಅಂತಾರಾಷ್ಟ್ರೀಯ ದೇಶಪ್ರೇಮಿ ‘ಯುವಕ’ನಿಗೆ ವಧು ಬೇಕಾಗಿದೆ. ದೇಶಸೇವೆ ಮಾಡುತ್ತಾ ಮದುವೆಯಾಗುವುದನ್ನು ಮರೆತೇ ಹೋಗಿದ್ದ ಯುವಕನೊಬ್ಬನಿಗೆ, ದೇಶಪ್ರೇಮಿ ಯುವತಿಯೊಬ್ಬಳು ಮದುವೆಯಾಗುವುದಕ್ಕೆ ಬೇಕಾಗಿದ್ದಾಳೆ. ಯುವತಿ ದೇಶಪ್ರೇಮಿ ಯಾಗಿರಬೇಕು. 20 ವರ್ಷ ದೊಳಗಿನವಳಾಗಿರಬೇಕು. ಯಾವುದಾದರೂ ಉದ್ಯೋಗದಲ್ಲಿದ್ದರೆ ಒಳ್ಳೆಯದು. ವಿಶೇಷ ವರದಕ್ಷಿಣೆಯ ಅಗತ್ಯವಿಲ್ಲ.
ತಿಂಗಳ ಸಂಬಳದಲ್ಲಿ ಕಂತಿನಲ್ಲಿ ಹಫ್ತಾ ನೀಡಿದರೆ ಸಾಕು. ಅದನ್ನು ರಾಮಸೇನೆಯ ಕಾರ್ಯಕರ್ತರು ಪ್ರತಿ ವಾರ ಬಂದು ವಸೂಲು ಮಾಡಿಕೊಂಡು ಹೋಗುತ್ತಾರೆ. ಮುಖತಃ ಸಂದರ್ಶನದ ಸಂದರ್ಭದಲ್ಲಿ ಇನ್ನಿತರ ವಿವರಗಳನ್ನು ನೀಡಲಾಗುತ್ತದೆ. ವರನನ್ನು ಸಂಪರ್ಕಿಸಬೇಕಾದ ವಿಳಾಸ: ವಿರಾಮಸೇನೆ, ಸೋಮಾರಿ ಕಟ್ಟೆಯ ಬಳಿ, ಕ್ರಿಮಿನಲ್ ವಿಲ್ಲಾ, ಬಳ್ಳಾರಿ ಜೈಲು ಮಾರ್ಗ, ಕರಿ ನಾಟಕ ರಾಜ್ಯ’’
*                               *                          *
ಕೊನೆಗೂ ಮುತಾಲಿಕ್‌ಗೆ ತಕ್ಕ ವಧುವನ್ನು ಹುಡುಕಿಕೊಂಡು ಬಂದ, ಪತ್ರಕರ್ತ ಎಂಜಲು ಕಾಸಿ ಫೋಟೋವನ್ನು ಮುತಾಲಿಕ್ ಮುಂದಿಟ್ಟು ಹೇಳ ತೊಡಗಿದ ‘‘ಸಾರ್, ಹುಡುಗಿಯದು ದೇಶಪ್ರೇಮಿ ಕುಟುಂಬ ಸಾರ್. ಹುಡುಗಿಯ ತಾತ ಸುತ್ತಮುತ್ತಲಿನ ಗಲ್ಲಿಯಲ್ಲೆಲ್ಲ ಫೇಮಸ್ಸು. ಹುಡುಗಿಯರೆಲ್ಲ ಆತನನ್ನು ಕಂಡರೆ ಹೆದರಿ ಮನೆಯಲ್ಲಿ ಅವಿತು ಕೂರ್ತಿದ್ದರಂತೆ. ಹುಡುಗಿಯ ತಂದೆ ಅಕ್ಕಪಕ್ಕದಲ್ಲಿ ದರೋಡೆ ಗಿರೋಡೆ ಮಾಡಿ ಹಲವು ಬಾರಿ ಜೈಲು ಸೇರಿ ದೇಸಪ್ರೇಮಿ ಎಂದು ಗುರುತಿಸ್ಕೊಂಡೋರು ಸಾರ್.
ದುಡ್ಡು ಕೊಟ್ರೆ ಏನು ಮಾಡುವುದಕ್ಕೂ ಸಿದ್ಧ ಅಂತೆ. ಹುಡುಗೀನೂ ಬಜಾರಿಯಂತೆ. ಬಾಯಿ ತೆರೆದರೆ ಸೂ...ಮಗ... ಬೋ...ಮಗ ಎನ್ನುವುದನ್ನು ಸೊಗಸಾಗಿ ಹೇಳ್ತಾಳಂತೆ. ನಿಮಗೆ ಹೊಂದಿಕೆಯಾಗುವ ಮರ್ಯಾದಸ್ಥರ ಕುಟುಂಬ ಸಾರ್. ಮುಂದುವರಿಯೋಣ ಸಾರ್...’’
ಮುತಾಲಿಕರಿಗೆ ಕೊನೆಗೂ ಖುಷಿಯಾಯಿತು. ಒಂದು ದೇಸಪ್ರೇಮಿ ಹುಡುಗಿಗೆ ಲೈಫು ಕೊಟ್ಟಂಗಾಯ್ತು ಎಂದು ಕನ್ನಡಿಯ ಮುಂದೆ ನಿಂತು ಸಿಂಗರಿಸಿ, ಹಣೆಗೆ ಕೆಂಪು ಕುಂಕುಮ ಬಳಿದುಕೊಂಡರು. ಆದರೆ, ಮುಖಕ್ಕೆ ಅಂಟಿದ್ದ ಕಪ್ಪು ಮಸಿಯನ್ನು ಕಂಡು ತುಸು ಖೇದವಾಯ್ತು. ಆದರೆ, ದೇಸಕ್ಕಾಗಿ ಇದೆಲ್ಲ ಅನುಭವಿಸಬೇಕಾಗುತ್ತದೆ ಎಂದು ನಿಟ್ಟುಸಿರಿಟ್ಟು ಪತ್ರಕರ್ತ ಎಂಜಲು ಕಾಸಿಯ ಜೊತೆ ಹೆಣ್ಣು ನೋಡುವುದಕ್ಕೆ ಹೊರಟೇ ಬಿಟ್ಟರು.
*                           *                            *
ಹೆಣ್ಣಿನ ತಂದೆ ಕೇಳಿದರು ‘‘ನಿಮ್ಮ ಜೊತೆಗೆ ನಿಮ್ಮ ಫ್ಯಾಮಿಲಿಯೋರು ಯಾರು ಬರ್ಲಿಲ್ವೆ?’’ ಆ ಪ್ರಶ್ನೆಗೆ ಮುತಾಲಿಕ್ ನಾಚಿ ನೆಲ ನೋಡತೊಡಗಿದರು. ಎಂಜಲು ಕಾಸಿ ಹೇಳಿದ ‘‘ಅವರ ಫ್ಯಾಮಿಲಿ ಎಲ್ಲ ಜೈಲಿನೊಳಗಿದ್ದಾರೆ ಸಾರ್. ಸದ್ಯಕ್ಕೆ ಈಗ ಇವರೊಬ್ಬರೆ’’
ಹೆಣ್ಣಿನ ತಂದೆಗೆ ಅದನ್ನು ಕೇಳಿ ಸಂತೋಷವಾಯಿತು ‘‘ಅಂದರೆ ನಿಮ್ಮದು ಕೂಡ ನಮ್ಮ ಹಾಗೆ ದೇಶಪ್ರೇಮಿ ಫ್ಯಾಮಿಲಿ ಅಂದಂಗಾಯ್ತು. ವರೋಪಚಾರ ಅಂತ ಕೊಡ್ಲಿಕೆ ವಿಶೇಷವಾಗಿ ನನ್ನಲ್ಲೇನೂ ಇಲ್ಲ. ನನ್ನ ಜೀವನವೆಲ್ಲ ದೇಶಸೇವೆಗೆ ಮುಡಿಪಾಗಿದ್ದುದರಿಂದ ನನ್ನಲ್ಲಿರುವ ಸಂಪತ್ತು ಕೂಡ ಅದೇ ಆಗಿದೆ...’’
ಕಾಸಿ ಮಧ್ಯ ಬಾಯಿ ಹಾಕಿದ ‘‘ಪರವಾಗಿಲ್ಲ ಪರವಾಗಿಲ್ಲ...ಎಲ್ಲ ಮದುಮಗನಿಗೆ ಗೊತ್ತಿದೆ...’’ ಹೆಣ್ಣಿನ ತಂದೆ ಮುಂದುವರಿಸಿದರು ‘‘ಆದರೂ ವರದಕ್ಷಿಣೆಯಾಗಿ ಒಂದಿಪ್ಪತ್ತೈದು ಬಾಂಬು, ಒಂದೈವತ್ತು ತಲವಾರು, ನಾಲ್ಕು ಪಿಸ್ತೂಲು ಮತ್ತು ಇಪ್ಪತ್ತೈದು ಚಾಕು, ಚೂರಿಗಳನ್ನು ಕೊಡುವುದಕ್ಕೆ ನನ್ನಿಂದ ಸಾಧ್ಯವಿದೆ’’
ಮುತಾಲಿಕರಿಗೆ ತುಂಬಾ ತುಂಬಾ ಸಂತೋಷವಾಯಿತು. ಎರಡು ಕುಟುಂಬಗಳು ಸೇರಿ ತುಂಬಾ ತುಂಬಾ ದೇಸಸೇವೆ ಮಾಡಬಹುದು ಎನ್ನಿಸಿತು.
ಎಂಜಲು ಕಾಸಿ ಕೇಳಿದ ‘‘ಸಾರ್...ಹುಡುಗಿಗೆ ಏನಾದರೂ ಕೆಲಸ ಇದ್ದರೆ...ಹುಡುಗ ಯಾವ ಅಂಜಿಕೆಯೂ ಇಲ್ಲದೆ ದೇಸ ಸೇವೆ ಮಾಡಬಹುದು. ಹೊತ್ತು ಹೊತ್ತಿಗೆ ಹುಡುಗ ಊಟ ಮಾಡ್ಬೇಕಲ್ಲ....’’
ಹುಡುಗಿಯ ತಂದೆ ಹೇಳಿದರು ‘‘ಹಾಗೇನಿಲ್ಲ...ನಮ್ಮ ಹುಡುಗಿಗೆ ನೂರಾರು ಕೆಲಸ ಇದೆ. ಆಕೆ ಗಲ್ಲಿಯ ನಳ್ಳಿ ಪಕ್ಕ ನಿಂತು ಬಾಯಿ ತೆರೆದರೆ ಉಳಿದೋರೆಲ್ಲ ಓಡಿ ಹೋಗ್ತಾರೆ. ಮಾನ ಮಾರ್ಯದೆಗೆ ತುಂಬಾ ಬೆಲೆ ಕೊಡ್ತಾಳೆ. ಅದಕ್ಕಾಗಿ ಮಾನ ಮರ್ಯಾದೆಯನ್ನೆಲ್ಲ ಮನೆಯ ಪೆಟ್ಟಿಗೆಯೊಳಗೆ ಇಟ್ಟು ಬೀಗ ಹಾಕಿದ್ದಾಳೆ’’
ಅಷ್ಟರಲ್ಲಿ ಹುಡುಗಿ ತಟ್ಟೆಯಲ್ಲಿ ನಾಲ್ಕು ಗ್ಲಾಸ್ ವಿಸ್ಕಿಯನ್ನು ಇಟ್ಟು ನಾಚುತ್ತಾ ಬಂದಳು. ಎಲ್ಲರಿಗೂ ವಿಸ್ಕಿ ಗ್ಲಾಸನ್ನು ಕೊಟ್ಟಳು. ಮುತಾಲಿಕ್ ಹಲ್ಲು ಬಿಟ್ಟು ಹೇಳಿದರು ‘‘ಹಾಡು ಹಾಡುವುದಕ್ಕೆ ಬರುತ್ತೇನಮ್ಮ?’’
ಹುಡುಗಿ ಗಂಟಲು ಸರಿಪಡಿಸಿ ಹಾಡುವುದಕ್ಕೆ ಶುರು ಹಚ್ಚಿದಳು ‘‘ಹೊಡಿ ಮಗ...ಹೊಡಿಮಗ...ಹೊಡಿಮಗ...ಹೊಡಿಮಗ ಬಿಡಬೇಡ ಅವನ್ನ....’’
ಆಕೆಯ ಹಾಡಿನಲ್ಲಿ ಭಾರತೀಯ ಸಂಸ್ಕೃತಿ ತುಂಬಿ ತುಳುಕುತ್ತಿರುವುದನ್ನು ಕಂಡು ಮುತಾಲಿಕ್‌ಗೆ ಭಾರೀ ಭಾರೀ ಸಂತೋಷವಾಯಿತು. ‘‘ಸಂತೋಷ ಸಂತೋಷ’’
ಹುಡುಗಿಯ ತಂದೆ ಹೇಳಿದರು ‘‘ಮದುವೆ ಅದ್ದೂರಿಯಾಗಿ ನಡೀಬೇಕು. ಕನಿಷ್ಠ ನೂರು ಮನೆಗಳಿಗೆ ಬೆಂಕಿ ಬೀಳ್ಬೇಕು. ಇನ್ನೂರು ಅಂಗಡಿಗಳು ಲೂಟಿಯಾಗಬೇಕು. ನನ್ನ ಮಗಳ ಮದುವೆ ಅಂದ ಮೇಲೆ ಒಂದಿಪ್ಪತ್ತು ಮುಸಲರು ಆಸ್ಪತ್ರೆಯಲ್ಲಿ ಮಲಗಿರ್ಬೇಕು....’’
ಮುತಾಲಿಕರ ಸಂತೋಷಕ್ಕೆ ಪಾರವೇ ಇಲ್ಲ ‘‘ಅದಕ್ಕೇನಂತೆ. ನನ್ನ ಕುಟುಂಬದವರನ್ನೆಲ್ಲ ಜೈಲಿನಿಂದ ಜಾಮೀನಿನ ಮೇಲೆ ಬಿಡಿಸ್ಕೋತೀನಿ. ಎಲ್ಲವನ್ನು ಸಾಂಗವಾಗಿ ಮಾಡ್ತಾರೆ. ದೇಸದ ಹೊರಗೂ ಕೆಲವು ಕುಖ್ಯಾತ ದೇಸಪ್ರೇಮಿಗಳು ಇದ್ದಾರೆ. ನನ್ನ ಮದುವೆಗೆ ಅವರನ್ನೂ ಕರೆಸೋಣವಂತೆ...’’
‘‘ಮೀಡಿಯಾದವರು ಮದುವೆಗೆ ಬರೋದು ಬೇಡವೇ...ಅದಕ್ಕೆ ಏನು ವ್ಯವಸ್ಥೆ ಮಾಡುತ್ತೀರಾ?’’ ಹೆಣ್ಣಿನ ತಂದೆ ಕೇಳಿದರು.
ಮುತಾಲಿಕ್ ನಗುತ್ತಾ ಹೇಳಿದರು ‘‘ನನ್ನ ಮದುವೆ ಅಂದ ಮೇಲೆ ಮೀಡಿಯಾದವರನ್ನು ಕರೀಬೇಕೂಂತಿಲ್ಲ. ಅವರಾಗಿಯೇ ಗುಪ್ತ ಕ್ಯಾಮರಾ ಇಟ್ಕೊಂಡು ಬಂದೇ ಬರ್ತಾರೆ. ತೆಹಲ್ಕಾದವರು ಬರುತ್ತಾರೆ, ಟೈಮ್ಸ್‌ನವರು ಬರುತ್ತಾರೆ....’’
‘‘ಅಳಿಯಂದಿರೇ...ಪ್ರಸ್ಥ ಎಲ್ಲಿ ಇಟ್ಕೊಳ್ಳೋಣ...’’ ಮುತಾಲಿಕ್ ಹೇಳಿದರು ‘‘ಒಂದೋ ಬಳ್ಳಾರಿ ಜೈಲಿನಲ್ಲಿ...ಇಲ್ಲಾ ಗುಲ್ಬರ್ಗ ಜೈಲಿನಲ್ಲಿ ಇಟ್ಕೊಳ್ಳೋಣ....ಬಳ್ಳಾರಿ ಜೈಲಿನಲ್ಲಿ ನನ್ನ ಬಂಧುಗಳು ತುಂಬಾ ಇರೋದ್ರಿಂತ ಅಲ್ಲೇ ಪ್ರಸ್ಥ ಇಟ್ಕೊಳ್ಳೋದು ಚೆನ್ನಾಗಿರತ್ತೆ....’’
ಎಲ್ಲರಿಗೂ ಸಂತೃಪ್ತಿಯಾಯಿತು. ಸಾಧಾರಣವಾಗಿ ಪತ್ರಕರ್ತ ಎಂಜಲು ಕಾಸಿ ರಾಜಕಾರಣಿಗಳು ಮತ್ತು ಸನ್ಯಾಸಿಗಳು, ಕ್ರಿಮಿನಲ್‌ಗಳು ಮತ್ತು ರಾಜಕಾರಣಿಗಳ ನಡುವೆ ದಲ್ಲಾಳಿ ಕೆಲಸ ಮಾಡುತ್ತಿದ್ದ. ಇದೀಗ ಮೊದಲ ಬಾರಿ ವಧೂ-ವರರ ನಡುವೆ ದಲ್ಲಾಳಿ ಕೆಲಸ ಮಾಡಿ ಯಶಸ್ವಿಯಾಗಿದ್ದು ಆತನಿಗೆ ಸಂತೋಷ ತಂದಿತ್ತು.
ಮುತಾಲಿಕರ ಬಳಿಗೆ ಬಂದ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್, ನನ್ನ ಕಮಿಶನ್ನೂ....’’ ಮುತಾಲಿಕರು ಹೇಳಿದರು ‘‘ನನ್ನ ಸಿಷ್ಯರು ಬೇಗ ಜೈಲಿಂದ ಹೊರಗೆ ಬರ್ತಾರೆ. ಅವರೇ ನಿನ್ನ ಕಮಿಷನ್ನೂ ಕೊಡ್ತಾರೆ...ಜೈ ಶ್ರೀರಾಂ...’’ ಎಂದು ಮದುಮಗನ ಸಂಭ್ರಮದಲ್ಲಿ ಹೆಣ್ಣಿನ ಮನೆಯಿಂದ ಹೊರಗೆ ಕಾಲಿಟ್ಟರು.
ರವಿವಾರ - ಮೇ -30-2010

No comments:

Post a Comment