Sunday, May 18, 2014

ಅಕ್ಕಿಯನ್ನು ಇನ್ನು ಕಂಪ್ಯೂಟರ್‌ನಲ್ಲೇ ಬೆಳೆಯೋದು....

 ವಾರ್ತಾ ಭಾರತಿ ಕನ್ನಡ ದೈನಿಕದ ಮೇ ೧೮ ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಅಂದು ಪತ್ರಕರ್ತ ಎಂಜಲು ಕಾಸಿ ಎಂದಿಗಿಂತ ತುಸು ಬೇಗ ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಎದ್ದಿದ್ದ. ಅಂದಿನ ಬೆಳಗ್ಗೆ ಎಂದಿನಂತಿಲ್ಲ ಅನ್ನಿಸಿತು. ಅನುಮಾನ ಬಂದು, ಸೀದಾ ಅಂಗಳಕ್ಕೆ ಬಂದ. ಮೇಲೆ ನೋಡಿದರೆ ಮಾವಿನ ಮರದಲ್ಲಿ ಹಲಸಿನ ಗಾತ್ರದಷ್ಟು ದೊಡ್ಡ ಮಾವುಗಳು ನೇತಾಡುತ್ತಿದ್ದವು. ಕಾಸಿ ಬೆಚ್ಚಿ ಬಿದ್ದ. ಅರೆ! ಹಲಸಿನ ಗಾತ್ರ ಮಾವು! ಜೋರಾಗಿ ಹೆಂಡತಿಯನ್ನು ರಕ್ಷಣೆಗೆಂದು ಕೂಗಿದ ‘‘ಸೂಸಿ...ಸೂಸಿ...ಇಲ್ಲಿ ಬಾ...ಬೇಗ ಬಾ...’’
ಸೂಸಿ ಒಳಗಿನಿಂದ ಓಡಿ ಬಂದಳು ‘‘ಏನಾಯ್ತು...?’’ ಅಚ್ಚರಿಯಿಂದ ಕೇಳಿದಳು.
‘‘ಆಗುವುದೇನು, ಮರದಲ್ಲಿ ನೋಡು?’’ ಎಂದು ಕೇಳಿದ.
ಸೂಸಿ ನಿಟ್ಟುಸಿರಿಟ್ಟಳು ‘‘ಅಷ್ಟೇಯ? ನಿಮಗಿನ್ನೂ ಗೊತ್ತಿಲ್ಲವಾ? ಪತ್ರಕರ್ತರಾಗಿ ಹತ್ತು ಗಂಟೆಗೆ ಎದ್ದರೆ ನಿಮಗೆ ಗೊತ್ತಾಗೋದು ಹೇಗೆ? ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ...ಅಭೂತಪೂರ್ವವಾಗಿ ನರೇಂದ್ರ ಮೋದಿ ಗೆದ್ದಿದ್ದಾರೆ. ಆದುದರಿಂದ ಇವತ್ತಿನಿಂದ ಮಾವಿನ ಕಾಯಿಗಳೆಲ್ಲ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ...’’ ಸೂಸಿ ಹೇಳಿದಳು.
‘‘ಅಲ್ಲ ಕಣೆ...ಅದಕ್ಕೂ ಇದಕ್ಕೂ ಏನು ಸಂಬಂಧ...’’ ಕಾಸಿ ಕೇಳಿದ.
‘‘ಅಭಿವೃದ್ಧಿ ಕಣ್ರೀ....ಅಭಿವೃದ್ಧಿ. ಮೋದಿ ಅಧಿಕಾರಕ್ಕೆ ಬಂದದ್ದೇ ಅಭಿವೃದ್ಧಿ ಆಗ್ತಾ ಇದೆ...ಇದೀಗ ಗೆದ್ದದ್ದಷ್ಟೇ. ಅಷ್ಟರಲ್ಲಿ ಮಾವು ಹೆದರಿ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ. ನಮ್ಮ ಹೆಂಟೆ ಪಾಪ ರುಬ್ಬು ಕಲ್ಲಿನಷ್ಟು ದೊಡ್ಡ ಮೊಟ್ಟೆ ಇಟ್ಟು ಸತ್ತೇ ಹೋಗಿದೆ...ಎಲ್ಲ ಮೋದಿ ಮಹಾತ್ಮೆ ಕಣ್ರೀ....’’
ಕಾಸಿ ವಿಸ್ಮಯಗೊಂಡ. ಆಕಾಶವನ್ನು ನೋಡಿದರೆ ಅಲ್ಲಿ ಕೇಸರಿ ಸೂರ್ಯ. ಮನೆಯ ಮುಂದೆ ನೋಡಿದರೆ ವಿಮಾನ ನಿಲ್ದಾಣ...ಮೆಟ್ರೋರೈಲು ಕಣ್ಮುಂದೆಯೇ ಧಡ್ ಧಡ್ ಎಂದು ಹೋಗುತ್ತಿದೆ...’’
ಒಳಗೆ ಬಂದ. ಅಷ್ಟರಲ್ಲಿ ಎಂಟು ವರ್ಷದ ಮಗ ಭಾರತದಲ್ಲಿ 40 ರಾಜ್ಯಗಳಿವೆ....’’ ಎಂದು ಓದುತ್ತಿದ್ದ. ಅರೇ! ನಲವತ್ತು ರಾಜ್ಯಗಳು ಯಾವಾಗ ಸೃಷ್ಟಿಯಾಯಿತು? ಕಾಸಿಗೆ ಅಚ್ಚರಿಯಾಯಿತು ‘‘ಮಗನೇ ದೇಶದಲ್ಲಿ 40 ರಾಜ್ಯ ಅಂತ ಯಾರು ಹೇಳಿಕೊಟ್ಟಿರೋದು....’’
‘‘ಅಪ್ಪಾ ಮೋದಿ ಗೆದ್ದರೆ ಪಕ್ಕದ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಭಾರತಕ್ಕೆ ಸೇರತ್ತೆ ಎಂದು ಮೇಷ್ಟ್ರು ಹೇಳುತ್ತಿದ್ದರು. ಆ ಲೆಕ್ಕದಲ್ಲಿ ಭಾರತದ ರಾಜ್ಯಗಳು ಜಾಸ್ತಿ ಆಗಿವೆ ಅಪ್ಪ. ಇವತ್ತು ಮೋದಿ ಗೆದ್ದಿರೋದರಿಂದ ಪಾಕಿಸ್ತಾನ ‘‘ನಮ್ಮನ್ನು ಭಾರತಕ್ಕೆ ಸೇರಿಸ್ಕೊಳ್ಳಿ’’ ಅಂತ ಘೋಷಿಸಿದೆ....’’
‘‘ಹೌದಾ...’’ ಎಂದು ಒಳ ಹೋಗಿ ಮನೆಯ ಕಪಾಟು ತೆರೆದು ನೋಡಿದರೆ ಅದರ ತುಂಬಾ ರಾಶಿ ರಾಶಿ ನೋಟುಗಳು....‘‘ಸೂಸಿ....’’ ಮತ್ತೆ ಕಾಸಿ ಚೀರಿದ.
ಸೂಸಿ ಓಡಿ ಬಂದಳು. ‘‘ಏನ್ರೀ...ಅದು...’’ ಕೇಳಿದಳು.
ಕಾಸಿ ತೆರೆದ ಕಾಪಾಟಿನ ಮುಂದೆ ಸ್ತಂಭೀಭೂತನಾಗಿ ನಿಂತಿದ್ದ. ಸೂಸಿಗೆ ಅರ್ಥವಾಯಿತು ‘‘ಓ ಅದಾ...ನಿಮಗೆ ಇನ್ನೂ ವಿಷಯ ಗೊತ್ತಿಲ್ವಾ....ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣವನ್ನೆಲ್ಲ ಅಲ್ಲಿನ ಬ್ಯಾಂಕಿನ ಮ್ಯಾನೇಜರ್‌ಗಳು ನರೇಂದ್ರ ಮೋದಿಯ ಪಾದ ಬುಡಕ್ಕೆ ತಂದು ಸುರಿದಿದ್ದಾರಂತೆ...ಅದನ್ನು ಮೋದಿಯವರು ಇಡೀ ದೇಶಕ್ಕೆ ಹಂಚಿದ್ದಾರೆ. ನಮ್ಮ ಪಾಲಿನದ್ದನ್ನು ಈಗಷ್ಟೇ ಬಿಜೆಪಿಯ ಸ್ಥಳೀಯ ಮುಖಂಡರು ತಂದು ಕೊಟ್ಟರು...ಇದರಲ್ಲಿ ನಮ್ಮ ಪಾಲಿನ ಹತ್ತು ಕೋಟಿ ರೂಪಾಯಿ ಇದೆ ಗೊತ್ತಾ...’’
ಕಾಸಿಗೆ ತಲೆ ಗಿರ್ರೆಂದಿತು. ನೇರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಮನೆಯ ಹೊರಗೆ ಬರುವಷ್ಟರಲ್ಲಿ ಒಂದಿಷ್ಟು ಜನ ಸಾಲು ಸಾಲಾಗಿ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದರು. ‘‘ಯಾರ್ರೀ ನೀವು? ಯಾಕೆ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದೀರಿ?’’ ಕಾಸಿ ಕೇಳಿದ.
‘‘ನಾವು ಬಾಂಗ್ಲಾ ವಲಸಿಗರು. ಮೋದಿ ಗೆದ್ದಿದ್ದಾರಲ್ಲ. ಅವರು ನಮಗೆ ಗಡುವು ನೀಡಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ಮೊದಲು ನಾವೆಲ್ಲ ಬಾಂಗ್ಲಾಕ್ಕೆ ವಾಪಾಸ್ ಹೋಗುತ್ತಿದ್ದೇವೆ....ಬೇಗ ಟ್ರೈನ್ ಹಿಡೀಬೇಕು...’’
ಬ್ಲಾಂಗ್ಲಾ ದೇಶಿಯರೆಲ್ಲ ವಲಸೆ ಹೋಗಿರುವುದರಿಂದ ಬೆಂಗಳೂರು ಬಣ ಬಣ ಅನ್ನುತ್ತಿತ್ತು. ಎಲ್ಲಿ ನೋಡಿದರೂ ಖಾಲಿ ಖಾಲಿ ಜಾಗ. ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಬಹುದು....ಕಾಸಿ ರೋಮಾಂಚನಗೊಂಡ.
‘‘ಮಗನಿಗೆ ಹೊಸ ಅಟ್ಲಾಸ್ ತಂದು ಕೊಡಬೇಕು. ಈಗ ಇರುವ ಭಾರತದಲ್ಲಿ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಬೇರೆ ಬೇರೆ ಇವೆ. ಇನ್ನು ಮುಂದೆ ಅಖಂಡ ಭಾರತವಾಗಿರುವುದರಿಂದ ಅಟ್ಲಾಸ್ ಬದಲಿಸಬೇಕಾಗುತ್ತದೆ...’’ ಎಂದು ಯೋಚಿಸಿ ಅಟ್ಲಾಸ್ ಅಂಗಡಿಗೆ ಹೋಗಿ ಮೋದಿ ಸರಕಾರದ ಅಟ್ಲಾಸ್ ಪುಸ್ತಕ ತೆಗೆದುಕೊಂಡ.
  ಮನೆಗೆ ವಾಪಾಸ್ ಬಂದು ಟಿವಿ ಆನ್ ಮಾಡಿ ಕ್ರಿಕೆಟ್ ನೋಡಿದರೆ ಅಲ್ಲಿ ಭಾರತೀಯ ಆಟಗಾರರು ಲಕ್ಷಾಂತರ ರನ್ ಮಾಡಿದ್ದಾರೆ. ಮತ್ತು ಧೋನಿ ಹೇಳುತ್ತಿದ್ದಾನೆ ‘‘ನಾವು ಬರೇ ಹತ್ತು ಓವರ್‌ನಲ್ಲಿ ಒಂದು ಲಕ್ಷ ರನ್ ಮಾಡಲು ಮೋದಿ ಅಲೆಯೇ ಕಾರಣ. ಮುಂದಿನ ದಿನಗಳಲ್ಲಿ ನಾವು ಕೋಟ್ಯಂತರ ರನ್‌ಗಳನ್ನು ಮಾಡಲಿದ್ದೇವೆ. ಬಿಸಿಸಿಐ ಅಧ್ಯಕ್ಷರಾಗಿ ಅಮಿತ್ ಶಾ ಏನಾದರೂ ಆಯ್ಕೆಯಾದರೆ, ರನ್ನಿನ ಹೊಳೆಯಲ್ಲಿ ದೇಶವನ್ನು ಮುಳುಗಿಸಲಿದ್ದೇವೆ. ರನ್‌ಗಳನ್ನೇ ಅಮೆರಿಕ, ಚೀನಾ, ಇಂಗ್ಲೆಂಡ್‌ಗಳಿಗೆ ಮಾರಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ...’’
ಬಾಯಗಲಿಸಿ ಕಾಸಿ ಅದನ್ನೇ ನೋಡಿದ. ಮಧ್ಯಾಹ್ನ ನೋಡಿದರೆ ಸೂಸಿ ಬಿರಿಯಾನಿ ಮಾಡಿದ್ದಳು. ನೋಡಿದರೆ ರನ್‌ಗಳ ಬಿರಿಯಾನಿ.! ‘‘ಹೌದು ಕಣ್ರೀ...ಕ್ರಿಕೆಟ್‌ನಲ್ಲಿ ಈ ಭಾರಿ ಧೋನಿ ಸಂಗ್ರಹಿಸಿದ ರನ್‌ಗಳಿಂದ ಬಿರಿಯಾನಿ ಮಾಡಿದ್ದೇನೆ ರುಚಿ ನೋಡಿ ಹೇಳಿ...ರಾತ್ರಿಗೆ ವಿರಾಟ್ ಕೊಹ್ಲಿ ಅವರು ಸಂಗ್ರಹಿಸಿದ ರನ್‌ಗಳಿಂದ ಪಲಾವ್ ಮಾಡಲಿದ್ದೇನೆ....’’ ಕಾಸಿ ಬಟ್ಟಲನ್ನೇ ಅಚ್ಚರಿಯಿಂದ ನೋಡಿದ.
‘‘ಅಕ್ಕಿಯಿಂದ ಏನಾದರೂ ಐಟಂ ಮಾಡಬಾರದೆ...?’’ ಕಾಸಿ ಪತ್ನಿಗೆ ಕೇಳಿದ. ‘‘ಪ್ರಿಂಟರ್ ಸರಿಯಿಲ್ಲ ಕಣ್ರೀ...’’ ಸೂಸಿ ಉತ್ತರಿಸಿದಳು. ಪ್ರಿಂಟರ್‌ಗೂ ಅಕ್ಕಿಗೂ ಏನು ಸಂಬಂಧ?
‘‘ಅದೇ ಕಣ್ರೀ...ಮೋದಿ ಅಭಿವೃದ್ಧಿಯಲ್ಲಿ ಅಕ್ಕಿ ಗದ್ದೆಯಲ್ಲಿ ಬೆಳೆಯೋದಿಲ್ಲ. ಕಂಪ್ಯೂಟರ್‌ನಲ್ಲಿ ಕ್ಲಿಕ್ ಮಾಡಿದ್ರೆ ಪ್ರಿಂಟರ್‌ನಲ್ಲಿ ದರದರಾಂತ ಅಕ್ಕಿ ಸುರಿಯತ್ತೆ...ಪ್ರಿಂಟರ್ ಸರಿಯಾದ ತಕ್ಷಣ ನಿಮಗೆ ಬೇಕಾದ ಅಕ್ಕಿಯಿಂದ ಬೇಕಾದ ರೊಟ್ಟಿ ಮಾಡಿ ಕೊಡುವಾ...’’
‘‘ಅಕ್ಕಿ ಕಂಪ್ಯೂಟರ್‌ನಲ್ಲಿ ಮಾಡೋದಾದ್ರೆ...ದೇಶದ ರೈತರೆಲ್ಲ ಏನು ಮಾಡುತ್ತಿದ್ದಾರೆ...’’ ಕಾಸಿ ಕೇಳಿದ.
‘‘ಮಾಡೋದೇನು...ರೈತರನ್ನೆಲ್ಲ ನಮ್ಮ ಮೋದಿ ಸಾಹೇಬ್ರು ಪ್ರತಿ ಊರಿನ ಮಧ್ಯೆ ನಿಲ್ಲಿಸಿದ್ದಾರೆ....’’
‘‘ಅಂದ್ರೆ...ಊರು ಕಾಯೋಕಾ?’’
‘‘ಊರು ಕಾಯೋದೇನು ಬಂತು ಮಣ್ಣು...ಯಾವಾಗ ಮೋದಿ ಆಯ್ಕೆಯಾದರೋ ಆಗಲೇ ಅಳಿದುಳಿತ ರೈತರೆಲ್ಲ ನೇಣು ಹಾಕಿಕೊಂಡರು. ಮೋದಿ ಅಭಿವೃದ್ಧಿಯ ಭಾರತದಲ್ಲಿ ರೈತರಿರೋದು ಅವಮಾನ ಅಲ್ವಾ? ಅದಕ್ಕೆ. ರೈತರ ತ್ಯಾಗಕ್ಕಾಗಿ ಪ್ರತಿ ಊರಿನ ಮಧ್ಯೆ ಒಬ್ಬೊಬ್ಬ ರೈತರ ಬೃಹತ್ ಉಕ್ಕಿನ ಪ್ರತಿಮೆಯನ್ನು ಮೋದಿ ನಿರ್ಮಿಸಲಿದ್ದಾರೆ. ಹಾಗೆಯೇ ದಿಲ್ಲಿಯಲ್ಲಿ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ದೊಡ್ಡ ರೈತನ ಪ್ರತಿಮೆಯನ್ನು ನಿರ್ಮಿಸಲಿದ್ದಾರಂತೆ. ಈ ಪ್ರತಿಮೆಗೆ ಗುಜರಾತ್‌ನ ಅದಾನಿ ಮತ್ತು ಮುಂಬಯಿಯ ಅಂಬಾನಿ ದುಡ್ಡು ಹಾಕ್ತಾರಂತೆ....’’
ಸ್ವಲ್ಪ ಹೊತ್ತು ತಡೆದು ಸೂಸಿ ಹೇಳಿದಳು ‘‘ನೋಡ್ರಿ...ಬೇಗ ಬೇಗ ಊಟ ಮಾಡಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಪಾಕಿಸ್ತಾನದ ಜೊತೆಗೆ ಮೋದಿ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ಎಲ್ಲವನ್ನೂ ನೇರ ಪ್ರಸಾರ ಮಾಡುತ್ತಾರೆ...ದೇಶದ ಎಲ್ಲೇ ಕೋಮುಗಲಭೆ ನಡೆದರೂ ಅದನ್ನು ಮೋದಿ ಆಡಳಿತದಲ್ಲಿ ನೇರ ಪ್ರಸಾರವಂತೆ...ಟಿವಿ ಸೀರಿಯಲ್ ನೋಡಿ ಬೋರ್ ಹೊಡೆದಿದೆ. ಇನ್ನೇನಿದ್ದರೂ ಯುದ್ಧ, ಗಲಭೆಗಳನ್ನೇ ಲೈವ್ ಆಗಿ ನೋಡಿ ಮಜಾ ಪಡೆಯಬಹುದು...’’
ಕಾಸಿ ತನ್ನೆರಡು ಕಿವಿಗಳನ್ನು ಮುಚ್ಚಿ ‘‘ನಿಲ್ಲಿಸೂ.....’’ ಚೀರಿದ. ಅಷ್ಟರಲ್ಲಿ ಪತ್ನಿ ಕೂಗೋದು ಕೇಳಿಸಿತು ‘‘ಬೆಳಗಾಯಿತು ಎದ್ದೇಳ್ರೀ....ಅದೇನು ನಿದ್ದೆ ಕಣ್ಣಲ್ಲಿ ನಿಲ್ಲಿಸು ಅಂತ ಬೊಬ್ಬೆ ಹೊಡೀತೀರಿ...ಬನ್ನಿ...ಇವತ್ತು ಮೇ 16. ಫಲಿತಾಂಶ ಇನ್ನೇನು ಹೊರ ಬೀಳತ್ತೆ’’
ಕಾಸಿ ಕಣ್ಣು ಬಿಟ್ಟ ‘‘ಹಾಗಾದ್ರೆ...ನಾನು ನೋಡಿದ್ದು, ಕೇಳಿದ್ದು ಎಲ್ಲ ಕನಸಾ?’’ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಪತ್ನಿ ಸೂಸಿ ಜೋರಾಗಿ ಕೂಗಿ ಹೇಳಿದಳು ‘‘ರೀ...ಮೋದಿಗೆ ಎಲ್ಲ ಕಡೆ ವಿಜಯ ಸಾಧಿಸ್ತಾ ಇದ್ದಾರೆ...’’

1 comment: