Tuesday, December 3, 2013

ರೋಗ ವಾಸಿಯಾಗಬೇಕಾದರೆ ಸಾಯುವುದೊಂದೇ ದಾರಿ...

(ಜನವರಿ, 6, 2008ರಲ್ಲಿ ವಾರ್ತಾಭಾರತಿಗೆ ಬರೆದ ಬುಡಬುಡಿಕೆ. ಬಿಜೆಪಿ ಇನ್ನೇನು ಅಧಿಕಾರ ಹಿಡಿಯುವ ಹೊತ್ತು. ಎಂ.ಪಿ. ಪ್ರಕಾಶ್ ಜೆಡಿಎಸ್‌ನಿಂದ ಹೊರ ಬಿದ್ದ ಸಮಯ. ಸುಗುಣೇಂದ್ರ ಸ್ವಾಮೀಜಿಯ ವಿರುದ್ಧ ಪೇಜಾವರರು ಉಡುಪಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ ಹೊತ್ತು. ಇಂತಹ ಸಂದರ್ಭದಲ್ಲಿ ನಡೆದ ಒಂದು ಆರೋಗ್ಯ ಸಮಾಲೋಚನೆಯನ್ನು ನಿಮ್ಮಿಂದಿಗೆ ಹಂಚಿಕೊಂಡಿದ್ದೇನೆ. )


ಮುಕ್ತ ಸಮಾಲೋಚನೆ.
ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳಿದ್ದಾರೆ. ಇತ್ತೀಚೆಗೆ ವಿವಿಧ ಓದುಗರು ಒಂದು ಮುಕ್ತ ಸಮಾಲೋಚನೆಯನ್ನು ಏರ್ಪಡಿಸಬೇಕು ಎಂದು ಒತ್ತಾಯಿಸಿದ್ದರಿಂದ ಇಲ್ಲಿ ಕೆಲವರ ಸಮಸ್ಯೆಗಳಿಗೆ ಉತ್ತರಿಸಲಾಗಿದೆ.
ಪ್ರಶ್ನೆ:  ಇತ್ತೀಚೆಗೆ ನನಗೆ ಎಲ್ಲರಿಗೂ ವಂಚನೆ ಮಾಡಬೇಕು ಎಂದು ಮನಸ್ಸಾಗುತ್ತದೆ. ನಿನ್ನೆ ಒಂದು ಮಾತನ್ನಾಡಿದರೆ, ನಾಳೆ ಅದಕ್ಕೆ ವಿರುದ್ಧವಾದ ಮಾತನ್ನಾಡುತ್ತೇನೆ. ನಿನ್ನೆ ನೀಡಿದ ಭರವಸೆ ಇವತ್ತು ನನಗೆ ನೆನಪಿಗೆ ಬರುವುದಿಲ್ಲ. ಇದು ಕಳೆದ ಐದು ವರ್ಷಗಳಿಂದ ತೀವ್ರವಾಗಿದೆ. ನನ್ನ ಆತ್ಮೀಯರೆಲ್ಲ ನನ್ನ ಈ ವರ್ತನೆಯಿಂದ ದೂರವಾಗಿದ್ದಾರೆ. ಮಕ್ಕಳೂ ಸಿಟ್ಟಾಗಿದ್ದಾರೆ. ನನ್ನ ವಯಸ್ಸು 80 ದಾಟಿದೆ. ವಯಸ್ಸಿನ ಪರಿಣಾಮದಿಂದ ಹೀಗಾಗಿರಬಹುದೆ? ದಯವಿಟ್ಟು ಪರಿಹಾರ ಸೂಚಿಸಬೇಕು. ನನ್ನ ಕಾಟ ತಡೆಯಲಾರದೆ ನನ್ನ ಕುಟುಂಬ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ಲಾನ್ ಹಾಕುತ್ತಿದ್ದಾರೆ ಎಂದು ಇತ್ತೀಚೆಗೆ ಅನ್ನಿಸುತ್ತಿದೆ. ಇದು ನಿಜವಾಗಿರಬಹುದೇ? ಅಥವಾ ನನ್ನ ಊಹೆಯಾಗಿರಬಹುದೆ?
ವದೇ ಗೌಡ ಹಾಸನ
ಉತ್ತರ: ನಿಮ್ಮ ಕಾಯಿಲೆ ಈಗಾಗಲೇ ಆರಂಭ ಹಂತವನ್ನು ದಾಟಿ, ಉಲ್ಭಣಿಸಿದೆ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಇದು ಸದ್ಯಕ್ಕೆ ಗುಣವಾಗುವ ರೋಗ ಅಲ್ಲ. ಇದೊಂದು ಮಾನಸಿಕ ಕಾಯಿಲೆ. ‘ಸ್ವಾರ್ಥೋ ಫೋಬಿಯಾ’ವೇ ಎಲ್ಲಕ್ಕೂ ಮುಖ್ಯ ಕಾರಣವಾಗಿದೆ. ಆದಷ್ಟು ಕುಟುಂಬದಿಂದ ದೂರವಿರಿ. ಇಲ್ಲವಾದರೆ ಅವರು ನಿಮ್ಮ ಜೀವಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ. ಸ್ವಾರ್ಥೋಫೋಬಿಯಾ ಆರಂಭದಲ್ಲಿ ಕುಟುಂಬದವರಿಗೆ ಹಿತವಾಗಿಯೇ ಕಾಣುತ್ತದೆ. ಆದರೆ ನಿಧಾನಕ್ಕೆ ಅದರಿಂದ ಸಮಸ್ಯೆ ಉಂಟಾದಾಗ ಅವರು ನಿಮ್ಮನ್ನು ದ್ವೇಷಿಸಲು ಆರಂಭಿಸುತ್ತಾರೆ. ನಿಮ್ಮ ರೋಗ ಈಗ ಎರಡನೆ ಹಂತಕ್ಕೆ ಬಂದಿದೆ. ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವ ಅವರ ನಿರ್ಧಾರವನ್ನು ನೀವು ಸರಿಯಾಗಿಯೇ ಊಹಿಸಿದ್ದೀರಿ. ಅಭಿನಂದನೆಗಳು. ಈ ಕಾಯಿಲೆಗೆ ಒಂದೇ ಪರಿಹಾರವೆಂದರೆ, ಪಥ್ಯ. ದಾಹವಾದಾಗ ಅಧಿಕಾರವನ್ನು ಕುಡಿಯುವ ಅಭ್ಯಾಸವನ್ನು ನಿಲ್ಲಿಸಿ. ನೀರನ್ನೇ ಕುಡಿಯಿರಿ. ಕುಟುಂಬ ಮೋಹವನ್ನು ತೊರೆಯಿರಿ. ಜೀವನ ನಶ್ವರ ಎನ್ನುವುದನ್ನು ತಿಳಿಯಿರಿ. ತಮ್ಮ ಕಿರಿಯ ಮಗ ಸುಕುಮಾರ ಸ್ವಾಮಿ ಏನನ್ನು ಕೊಟ್ಟರೂ ತಕ್ಷಣ ತಿನ್ನಬೇಡಿ. ಮೊದಲು ಒಂದು ತುತ್ತನ್ನು ನಿಮ್ಮ ಪ್ರೀತಿಯ ಎಸ್.ವೈ.ದತ್ತಾ ಅಥವಾ ಮಿರಾಜುದ್ದೀನ್ ಪಟೇಲ್‌ರಿಗೆ ಕೊಟ್ಟು, ಅವರಿಗೆ ಏನೂ ಆಗದಿದ್ದರೆ ಬಳಿಕ ನೀವು ತಿನ್ನಿ. ನೀವೇ ಈ ಹಿಂದೆ ಘೋಷಿಸಿದಂತೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ. ಈ ರೋಗ ನಿಮಗೆ ವಾಸಿಯಾಗಬೇಕಾದರೆ ಮಡಿಯುವುದೊಂದೇ ದಾರಿ.
                ***
ಪ್ರಶ್ನೆ: ಇತ್ತೀಚೆಗೆ ನನ್ನ ಕನಸಿನಲ್ಲಿ ಭೀಕರ ಜೀವಿಗಳೆಲ್ಲಾ ಬಂದು ತೊಂದರೆ ಕೊಡುತ್ತಿದ್ದಾರೆ. ಹಿಂಬದಿಯಿಂದ ಯಾರೋ ಚೂರಿಯಿಂದ ಚುಚ್ಚಿದಂತೆ ಅನ್ನಿಸುತ್ತದೆ. ಮೊನ್ನೆ ರಾತ್ರಿ ಒಂದು ಬಾವಿಯನ್ನು ಕಂಡಿದ್ದೆ. ನಿನ್ನೆ ಹಗಲಿನಲ್ಲಿ ಅದೇ ಬಾವಿಗೆ ಹೋಗಿ ಬಿದ್ದಿದ್ದೇನೆ. ಬಾವಿಯನ್ನು ಕಂಡಾಗಲೆಲ್ಲ ಬೀಳಬೇಕೆಂದು ಆಸೆಯಾಗುತ್ತದೆ. ಇನ್ನೊಬ್ಬರ ಕೈಯಲ್ಲಿ ಟೋಪಿ ಹಾಕಿಸುವುದೆಂದರೆ ಬಹಳ ಖುಷಿ. ಜನರು ನನ್ನನ್ನು ನೋಡಿ ನಗುತ್ತಿದ್ದಾರೆ. ಬದುಕುವುದೇ ಬೇಡವೆನ್ನಿಸುತ್ತದೆ. ಆಗಾಗ ಖಿನ್ನತೆ ಆವರಿಸುತ್ತದೆ. ಯಾವ ಬಾವಿಗಾದರೂ ಬಿದ್ದು ಸಾಯೋಣ ಅನ್ನಿಸುತ್ತದೆ. ದಯವಿಟ್ಟು ನನ್ನ ಸಮಸ್ಯೆಯನ್ನು ಪರಿಹರಿಸಿ, ಚುನಾವಣೆ ಬೇರೆ ಹತ್ತಿರ ಬಂದಿದೆ. ಈಗ ನಾನೇನು ಮಾಡಲಿ?
ಯಡಿಯೂರಪ್ಪ, ಹಾಳುಬಾವಿಯೊಳಗಿಂದ, ಶಿವಮೊಗ್ಗ
ಉತ್ತರ: ನೀವು ವಾಸ್ತವವನ್ನೇ ಕನಸು ಎಂದು ಭ್ರಮಿಸುತ್ತಿದ್ದೀರಿ. ನಿಮಗೆ ಭೀಕರ ಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಕನಸಿನಲ್ಲಲ್ಲ. ವಾಸ್ತವದಲ್ಲಿ. ಕುಮಾರಸ್ವಾಮಿ, ದೇವೇಗೌಡರನ್ನು ನೆನೆದು ನೀವು ಬೆಚ್ಚುತ್ತಿದ್ದೀರಿ. ಹಿಂಬದಿಯಿಂದ ಯಾರೋ ಚೂರಿಯಿಂದ ಚುಚ್ಚಿದಂತೆ ಅನ್ನಿಸುತ್ತದೆ ಎಂದಿದ್ದೀರಿ. ನಿಜಕ್ಕೂ ನಿಮ್ಮ ಹಿಂಬದಿಯಿಂದ ಅನಂತಕುಮಾರ್ ನಿಮಗೆ ಚೂರಿಯಿಂದ ಚುಚ್ಚುತ್ತಿದ್ದಾರೆ. ನೀವು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅಷ್ಟೆ. ನೀವು ಸಾಯಬೇಕೆಂದರೆ ಯಾವುದಾದರೂ ಬಾವಿಗೆ ಬೀಳ ಬೇಕೆಂದೇ ಇಲ್ಲ. ನೀವಿಗ ಇರುವ ಬಿಜೆಪಿಯೇ ದೊಡ್ಡ ಹಾಳು ಬಾವಿ. ಇನ್ನು ಸ್ವಲ್ಪ ಕಾಲ ಅಲ್ಲಿದ್ದರೆ ನೀವು ಖಂಡಿತ ಸತ್ತು ಹೋಗುತ್ತೀರಿ. ಇಲ್ಲವಾದರೆ ಮೇಲಿನಿಂದ ಅನಂತಕುಮಾರ್ ಬಳಗ ಕಲ್ಲು ಎತ್ತಿ ಹಾಕಲು ರೆಡಿಯಾಗಿ ನಿಂತಿವೆ. ಆದುದರಿಂದ ಹೇಗೆ ಸಾಯುವುದೆಂಬ ಚಿಂತೆಯನ್ನು ಬಿಡಿ.
                ***
ಪ್ರಶ್ನೆ: ಸಾರ್ ನನ್ನ ಹೆಸರು ಪಿಂಪಿ ಪ್ರಕಾಶ. ನಾನು ಮಾಜಿ ಪ್ರಧಾನಿಗಳಾದ ವದೇಗೌಡರ ಮನೆಯಲ್ಲಿ ‘ಗೃಹ’ ಕೃತ್ಯಗಳನ್ನು ಮಾಡಿಕೊಂಡಿದ್ದೆ. ಇತ್ತೀಚೆಗೆ ಅವರ ಮಕ್ಕಳಿಗೆ ಬೇಕಾದ ಭಕ್ಷವನ್ನು ಮಾಡಿ ಬಡಿಸಲಿಲ್ಲ ಎಂದು ನನಗೆ ಬೈದರು. ಆದುದರಿಂದ ಸಿಟ್ಟಿನಿಂದ ಹೊರಗೆ ಬಂದೆ. ಸಿಟ್ಟಿನಿಂದ ಕೊಯ್ದ ಮೂಗು ಮರಳಿ ಬರುವುದಿಲ್ಲ ಎಂಬ ಹಾಗೆ ನಾನೀಗ ನಿರುದ್ಯೋಗಿಯಾಗಿದ್ದೇನೆ. ಎಲ್ಲಿಯೂ ನನಗೆ ಕೆಲಸ ಸಿಗುತ್ತಿಲ್ಲ. ನನಗೊಬ್ಬ ಮಗನೂ ಇರುವುದರಿಂದ, ಕೆಲಸವಿಲ್ಲದೆ ತುಂಬ ಕಷ್ಟವಾಗಿದೆ. ಮಗ ಊಟ ಮಾಡದೆ ತುಂಬ ದಿನಗಳಾಗಿವೆ. ದಯವಿಟ್ಟು ಒಂದು ಕೆಲಸ ಹುಡುಕಿಕೊಡುತ್ತೀರ?
ಪಿಂಪಿಪ್ರಕಾಶ, ಕ್ಯಾರ್ ಆಫ್ ಫೂಟ್‌ಪಾತ್, ಬೆಂಗಳೂರು.
ಉತ್ತರ: ನೀವು ಆರೋಗ್ಯ ಕಾಲಂನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಬರೆದಿದ್ದೀರಿ. ಆದರೂ ನಾನು ಉತ್ತರಿಸುತ್ತೇನೆ. ಆರೋಗ್ಯಕ್ಕೂ ಉದ್ಯೋಗಕ್ಕೂ ತುಂಬಾ ಸಂಬಂಧವಿದೆ. ಈಗ ನೀವು ಬಯಸಿದ ಕೆಲಸ ಸಿಗುವುದು ತುಂಬಾ ಕಷ್ಟ. ನೀವು ‘ಗೃಹ’ ಕೃತ್ಯದಲ್ಲಿ ಎಕ್ಸ್‌ಪರ್ಟ್ ಆಗಿದ್ದರೂ ಬೇರೆ ಕಡೆ ಈ ಸಂದರ್ಭದಲ್ಲಿ ಆ ಕೆಲಸ ಸಿಗಲಾರದು. ಯಾಕೆಂದರೆ ಈಗ ಎಲ್ಲರೂ ಉದ್ಯೋಗ ಹುಡುಕುತ್ತಿರುವ ಕಾಲ. ಅದಲ್ಲದೆ ನೀವು ಕಾಂಗ್ರೆಸ್ ಕಂಪೆನಿಯಲ್ಲೇ ಕೆಲಸ ಸಿಗಬೇಕು ಎಂದು ಬಯಸುತ್ತೀರಿ. ನಿಮಗೆ ಬೇರೆ ವಯಸ್ಸಾಗಿದೆ. ವಯಸ್ಸಾದ ಕುಳಗಳು ಅಲ್ಲಿ ತುಂಬಾ ಇರುವುದರಿಂದ, ನಿಮ್ಮ ಬದಲಿಗೆ ನಿಮ್ಮ ಮಗನಿಗೆ ಅಲ್ಲಿ ಕೆಲಸ ಕೊಟ್ಟಾರು. ನಿಮ್ಮ ಮಗನ ಕೆಲಸದ ಅನುಭವದ ಬಗ್ಗೆ ನೀವು ಪತ್ರದಲ್ಲಿ ಬರೆದಿಲ್ಲ. ಪ್ರಾಯ ಪೂರ್ತಿಯಾಗದಿದ್ದರೆ ಕಾಂಗ್ರೆಸ್ ಕಂಪೆನಿಯಲ್ಲಿ ಕೆಲಸ ಮಾಡಲಾಗುವುದಿಲ್ಲ. ಅದರ ಚೇರ್‌ಮೆನ್ ಮೇಡಂ ಮಗ ರಾಹುಲ್‌ಗಾಂಧಿಯನ್ನೇ ಬಾಲಕಾರ್ಮಿಕ ಎಂದು ವಿರೋಧಿ ಕಂಪೆನಿಯವರು ದೂರುತ್ತಿರುವಾಗ, ನಿಮ್ಮ ಮಗನಿಗೆ ಅಲ್ಲಿ ಕೆಲಸ ಸಿಕ್ಕಿತೆಂದು ಅನ್ನಿಸುವುದಿಲ್ಲ. ವಯಸ್ಸು ಪೂರ್ತಿಯಾಗಿದ್ದರೆ, ಕಾಂಗ್ರೆಸ್ ಕಂಪೆನಿಯಲ್ಲಿ ಬಾವುಟ ಹಿಡಿಯುವುದು, ಮೇಜು ಒರೆಸುವುದು ಮೊದಲಾದ ಕೆಲಸ ಬಾಕಿ ಇದೆಯಂತೆ. ಸದ್ಯಕ್ಕೆ ಅದನ್ನು ಮಾಡಲಿ. ಫೂಟ್‌ಫಾತಿನಲ್ಲಿ ಹೆಚ್ಚು ಸಮಯ ಕಾಲ ಕಳೆಯಬೇಡಿ. ಮುನ್ಸಿಪಾಲಿಟಿ ಲಾರಿ ಬಂದರೆ ಕಸದ ಜೊತೆಗೆ ಹಾಕಿಕೊಂಡು ಹೋದಾರು. ಸಾಧ್ಯವಾದರೆ ಮತ್ತೆ ವದೇಗೌಡರ ಮನೆಗೇ ಹೋಗಿ ಸೇರಿ. ಗೃಹಕೃತ್ಯದ ಕೆಲಸ ಮಾಡುತ್ತಾ ವದೇಗೌಡರ ರಾಗಿ ಮುದ್ದೆಯಲ್ಲಿ ವಿಷ ಬೆರೆಸಿಕೊಟ್ಟರೆ, ಅವರ ಮಗ ನಿಮಗೆ ಬಹುಮಾನವಾಗಿ ಯಾವುದಾದರೂ ಒಳ್ಳೆಯ ಹುದ್ದೆಯನ್ನು ಕೊಡಬಹುದು. ನಿಮಗೆ ಒಳ್ಳೆಯದಾಗಲಿ.
                  ***
ಪ್ರಶ್ನೆ:  ನನ್ನ ಹೆಸರು ಪಿ.ಜೇವರ ಸ್ವಾಮಿ ಎಂದು. ನಾನು ಒಂದು ಕುಡುಪಿ ಎಂಬ ಊರಿನ ಒಂದು ಪುರಾತನ ಕಂಪೆನಿಯೊಂದರಲ್ಲಿ ಬಾಸ್ ಆಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ನನ್ನ ಕುತ್ತಿಗೆ ನಡುವೆ ಒಂದು ಕುರ ಎದ್ದು ನಡೆಯುವುದಕ್ಕೆ ಕಷ್ಟವಾಗಿದೆ. ಸಾಗರವನ್ನು ಕಂಡರೆ ನನಗೆ ಭಯ. ಇತ್ತೀಚೆಗೆ ನನ್ನ ಕುತ್ತಿಗೆಯ ಕುರ ಇನ್ನಷ್ಟು ಬಾತಿದೆ. ನೋವಿನಿಂದ ಕತ್ತು ತಿರುಗಿಸುವುದಕ್ಕಾಗುತ್ತಿಲ್ಲ. ಮಾತನಾಡಲೂ ಆಗುತ್ತಿಲ್ಲ. ದಿನಾ ಕೃಷ್ಣ ಕೃಷ್ಣ ಎಂದು ಜಪಿಸಿದರೂ ಇದಕ್ಕೆ ಪರಿಹಾರ ಕಾಣುತ್ತಿಲ್ಲ. ದಯವಿಟ್ಟು ಚಿಕಿತ್ಸೆಯನ್ನು ಸೂಚಿಸಿ.
ಪಿ. ಜೇವರಸ್ವಾಮಿ, ಕುಡುಪಿ (ದಯವಿಟ್ಟು ನನ್ನ ಹೆಸರು ಊರನ್ನು ಪ್ರಕಟಿಸಬೇಡಿ)
ಉತ್ತರ: ಕುತ್ತಿಗೆ ಸುಗುಣೇಂದ್ರಿಯಗಳನ್ನು ನಿಯಂತ್ರಿಸಿದ ಪರಿಣಾಮವಾಗಿ ಈ ಕುರ ಎದ್ದಿದೆ. ಸಾಗರದ ನೀರನ್ನು ನೋಡುವಾಗ ಭಯವಾಗಲೂ ಈ ಕುರವೇ ಕಾರಣ. ಆದುದರಿಂದ ಸಾಧ್ಯವಾದಷ್ಟು ಸಾಗರದಿಂದ ದೂರವಿರಿ. ಈ ಕುರವು ಒಡೆದರೆ ನಿಮ್ಮ ಹುದ್ದೆಗೂ, ಪ್ರಾಣಕ್ಕೂ ಅಪಾಯವಿದೆ. ಆದುದರಿಂದ ಸದ್ಯಕ್ಕೆ ಕುರ ಒಡೆಯದ ಹಾಗೆ ಕಾಪಾಡಿಕೊಳ್ಳಿ. ಸಾಧ್ಯವಾದರೆ, ಶ್ರೀರಾಮ ಜನ್ಮಭೂಮಿ ತೈಲವನ್ನು ಬಳಸಿ, ಅಥವಾ ಬಾಬಾ ಬುಡಾನ್‌ಗಿರಿ ಮುಲಾಮನ್ನು ಈ ಸಂದರ್ಭದಲ್ಲಿ ಬಳಸಬಹುದು. ಆಗ ಈ ಕುರದ ನೋವು ಒಂದಿಷ್ಟು ಕಡಿಮೆಯಾಗಬಹುದು. ಕನಿಷ್ಟ ಅದು ಒಡೆಯುವ ಅಪಾಯವಾದರೂ ತಪ್ಪಬಹುದು. ಮತ್ತೆ ಮತ್ತೆ ಅದೇ ಪುನರೂರು, ಕಲ್ಕೂರ ತೈಲವನ್ನು ಬಳಸುವುದನ್ನು ನಿಲ್ಲಿಸಿ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಆ ಮದ್ದನ್ನು ಬಳಸಿದ್ದೇ ರೋಗ ಇನ್ನಷ್ಟು ಉಲ್ಭಣಿಸಲು ಕಾರಣ. ಸಾಧ್ಯವಾದರೆ, ‘ಗೋವಧಾ’ ಕ್ಯಾಪ್ಸುಲ್‌ಗಳನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ. ಸಾಧ್ಯವಾದರೆ ಕುಡುಪಿಗೆ ಬೆಂಕಿ ಹಚ್ಚಿ ಆ ಬೆಂಕಿಯ ಕಾವಿನಲ್ಲಿ ನಿಮ್ಮ ಕುರ ತನ್ನಷ್ಟಗೆ ಆರಿ ಹೋಗುವ ಸಾಧ್ಯತೆ ಇದೆ. ‘ನರೇಂದ್ರ ಮೋದಿ’ ಮುಲಾಮನ್ನು ಒಮ್ಮೆ ಬಳಸುವುದಕ್ಕೆ ಪ್ರಯತ್ನಿಸಿ.
(ಜನವರಿ, 6, 2008, ರವಿವಾರ)

No comments:

Post a Comment