Saturday, May 9, 2015

ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ...!

ಈ ಬುಡಬುಡಿಕೆ  ಮೇ 4, 2008 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಈ ಬಾರಿ ಪಿಯುಸಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಫೇಲಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ, ಪಾಲಕರ ಮೇಲೆ ವಿದ್ಯಾರ್ಥಿಗಳು ಸೇಡು ತೀರಿಸಿಕೊಂಡ ವರದಿಯನ್ನು ಓದಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಆತನಿಗೆ ಆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಒಮ್ಮೆ ನೋಡಬೇಕೆನ್ನಿಸಿತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯೊಂದು ಅದು ಹೇಗೋ ಪತ್ರಕರ್ತ ಎಂಜಲು ಕಾಸಿಯ ಕೈ ಸೇರಿತು. ವಿದ್ಯಾರ್ಥಿಯೊಬ್ಬ ಕೆಲವು ಪ್ರಶ್ನೆಗೆ ಉತ್ತರಿಸಿದ ರೀತಿ ಕುತೂಹಲಕರವಾಗಿದ್ದುದರಿಂದ ಅದನ್ನು ಇಲ್ಲಿ ನೀಡಲಾಗಿದೆ.
1. ‘ಕ್ರಿಕೆಟ್’ ಇದರ ಕುರಿತಂತೆ ಐದು ವಾಕ್ಯಗಳಿಗೆ ಮೀರದಂತೆ ಉತ್ತರ ಬರೆಯಿರಿ.
ಕ್ರಿಕೆಟ್ ಒಂದು ಆಕರ್ಷಣೀಯ ಆಟ. ಇದನ್ನು ಬಯಲಿನಲ್ಲಿ ಕ್ಯಾಬರೆ ನರ್ತಕಿಯರು ಆಡುತ್ತಾರೆ. ಅವರಿಗೆ ಚಿಯರ್‌ಗರ್ಲ್ಸ್ ಎಂದು ಕರೆಯಲಾಗುತ್ತದೆ. ಶಾರುಕ್ ಖಾನ್ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ವಿಜಯ್ ಮಲ್ಯ, ಪ್ರೀತಿ ಝಿಂಟಾ ಮೊದಲಾದವರು ಭಾರತದ ಉಳಿದ ಅತ್ಯುತ್ತಮ ಆಟಗಾರರು. ಈ ಆಟಗಾರರು ಪೆವಿಲಿಯನ್‌ನಲ್ಲಿ ಕುಳಿತು ಆಡುತ್ತಿರುವಾಗ ಅದನ್ನು ನೋಡಲೆಂದು ಸಾವಿರಾರು ಜನರು ನೆರೆಯುತ್ತಾರೆ. ವಿರಾಮದ ಸಂದರ್ಭದಲ್ಲಿ ಸಚಿನ್, ಗಂಗುಲಿ ಮೊದಲಾದವರು ಮೈದಾನದ ಮಧ್ಯೆ ಬಾಲ್, ಬ್ಯಾಟ್‌ಗಳ ಮೂಲಕ ಪ್ರೇಕ್ಷಕರಿಗೆ ಬೇಜಾರಾಗದಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಗೆ ಭಾರೀ ಹಣವನ್ನು ಕೊಟ್ಟು ಹರಾಜಿನಲ್ಲಿ ಕೊಂಡುಕೊಳ್ಳಲಾಗಿದೆ.
2. ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವೇನು? ಬೆಲೆಯೇರಿಕೆಯನ್ನು ಹೇಗೆ ತಡೆಯಬಹುದು?
ಇತ್ತೀಚೆಗೆ ಬಡವರು ಹೆಚ್ಚು ಹೆಚ್ಚು ಊಟ ಮಾಡಲು ತೊಡಗಿರುವುದೇ ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವಾಗಿದೆ. ಮೊದಲು ಬಡವರು ಎರಡು ದಿನಕ್ಕೊಮ್ಮೆ ಉಣ್ಣುತ್ತಿದ್ದರು. ಇದೀಗ ಅವರು ದಿನಕ್ಕೊಮ್ಮೆ ಉಣ್ಣುವುದಕ್ಕೆ ತೊಡಗಿದ್ದಾರೆ. ಅವರ ವರಮಾನ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದುದರಿಂದ ಬಡವರ ವರಮಾನ ಹೆಚ್ಚದಂತೆ ನೋಡಿಕೊಂಡರೆ ಬೆಲೆಯೇರಿಕೆಯನ್ನೂ ತಡೆಯಬಹುದಾಗಿದೆ. ಬಡವರು ಆದಷ್ಟು ಕಡಿಮೆ ಊಟ ಮಾಡುವಂತೆ ಅವರಿಗೆ ತಿಳಿ ಹೇಳಬೇಕು. ಉಳಿತಾಯವನ್ನು ಕಲಿಸಬೇಕು. ಕನಿಷ್ಠ ಅವರು ವಾರಕ್ಕೊಮ್ಮೆ ಊಟ ಮಾಡುವಂತಾದರೆ ಬೆಲೆಯಿಳಿಕೆಯಾಗಿ ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ಬರುತ್ತದೆ. ದೇಶ ಅಭಿವದ್ಧಿಯಾಗುತ್ತದೆ. ಅವರು ತಮ್ಮ ಹಣವನ್ನು ಆಹಾರ ಧಾನ್ಯಗಳಿಗೆ ವ್ಯಯ ಮಾಡದೆ, ಉಳಿತಾಯ ಮಾಡಿ ಅದರಿಂದ ನ್ಯಾನೋ ಕಾರುಗಳನ್ನು, ಕಂಪ್ಯೂಟರ್‌ಗಳನ್ನು ಕೊಂಡುಕೊಳ್ಳಬೇಕು. ಮೊಬೈಲ್‌ಗಳನ್ನು ಕೊಳ್ಳಬೇಕು. ಈ ಮೂಲಕ, ದೇಶದ ಮುಖ್ಯ ವಾಹಿನಿಯಲ್ಲಿ ಒಂದಾಗಬೇಕು.
2. ನಕ್ಸಲೀಯರ ಕುರಿತಂತೆ ಐದು ವಾಕ್ಯಗಳನ್ನು ಬರೆಯಿರಿ.
ಉತ್ತರ: ನಕ್ಸಲೀಯರು ಎನ್ನುವುದು ಕಾಡು ಪ್ರಾಣಿಗಳ ಹೆಸರು. ತಲೆಯಲ್ಲಿ ಎರಡು ಕೊಂಬು, ಭೀಕರ ಕೋರೆ ಹಲ್ಲುಗಳಿರುವ ಈ ಕಾಡು ಪ್ರಾಣಿಗಳು ಹುಲಿ, ಚಿರತೆ, ಕರಡಿಗಳಂತೆ ಕಾಡಿನಲ್ಲಿ ಹುಟ್ಟಿ ನಾಡಿದ ಅಮಾಯಕ ಜನರಿಗೆ ತೊಂದರೆ ಕೊಡುತ್ತದೆ. ಆದುದರಿಂದ ಈ ಪ್ರಾಣಿಗಳ ನಿಯಂತ್ರಣಕ್ಕೆ ಸರಕಾರ ಈಗಾಗಲೇ ಕೋಟಿಗಟ್ಟಲೆ ರೂಪಾಯಿಗಳನ್ನು ವೆಚ್ಚ ಮಾಡಿದೆ. ಆದರೂ ಇವುಗಳ ಸಂತಾನೋತ್ಪತ್ತಿ ಅಧಿಕವಾಗುತ್ತಾ ಹೋಗುತ್ತಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ನಕ್ಸಲೀಯ ಪ್ರಾಣಿಗಳು ಡೈನೋಸರ್ ಕಾಲಕ್ಕೆ ಸೇರಿದವುಗಳು ಎನ್ನಲಾಗಿದೆ. ‘ಜುರಾಸಿಕ್ ಪಾರ್ಕ್’ನಿಂದ ತಪ್ಪಿಸಿಕೊಂಡು ಬಂದ ಈ ಕ್ರೂರ ಪ್ರಾಣಿಗಳು ಕಾಡುಗಳನ್ನು ಸೇರಿರಬಹುದು ಎಂದು ಸರಕಾರ ಸಂಶಯ ವ್ಯಕ್ತಪಡಿಸಿದೆ. ಇವುಗಳು ಮಾಂಸಹಾರಿಗಳು. ಶ್ರೀಮಂತ ವ್ಯಕ್ತಿಗಳ ಮಾಂಸವೆಂದರೆ ಇವುಗಳಿಗೆ ಬಹಳ ಇಷ್ಟ. ತುಪ್ಪ, ಬೆಣ್ಣೆ ಮತ್ತು ಬಡವರ ರಕ್ತ ಕುಡಿದ ಈ ಶ್ರೀಮಂತ ವ್ಯಕ್ತಿಗಳ ಮಾಂಸ ತುಂಬಾ ರುಚಿಯಾಗಿರುತ್ತವೆ.
 ಒಮ್ಮೆ ಇದರ ರುಚಿ ಹಿಡಿದ ಈ ಪ್ರಾಣಿಗಳು ಮತ್ತೆ ಮತ್ತೆ ನಾಡಿಗೆ ಬಂದು ಅವರನ್ನು ಎಳೆದುಕೊಂಡು ಹೋಗುತ್ತದೆ ಎನ್ನಲಾಗಿದೆ. ನಾಡಿನಲ್ಲಿರುವ ‘ಬಡವರು’ ಎನ್ನುವ ಕೆಲ ಬಡಕಲು ಪ್ರಾಣಿಗಳ ವರ್ಣಸಂಕರವಾಗಿಯೂ ಈ ನಕ್ಸಲ್ ಪ್ರಾಣಿಗಳು ಹುಟ್ಟಿರಬಹುದು ಎಂದು ಸರಕಾರ ನಂಬಿದೆ. ಇದಕ್ಕಾಗಿ ಈಗಾಗಲೇ ವಿಜ್ಞಾನಿಗಳನ್ನು ಅಧ್ಯಯನಕ್ಕಾಗಿ ನೇಮಿಸಿ ಅದಕ್ಕೊಂದು ಪ್ರಾಧಿಕಾರವನ್ನೂ ರಚಿಸಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಾಧ್ಯವಾದಷ್ಟು ಬಡವರನ್ನು ಬಂಧಿಸಿ ಗುಂಡಿಟ್ಟುಕೊಳ್ಳುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ.
4. ‘ವಿಶೇಷ ಆರ್ಥಿಕ ವಲಯ’ ದೇಶದ ಅಭಿವದ್ಧಿಗೆ ನೀಡುವ ಕಾಣಿಕೆಗಳು ಯಾವುವು?
 ‘ವಿಶೇಷ ಆರ್ಥಿಕ ವಲಯ’ ದೇಶದ ಬಡತನ, ರೈತರ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ. ರೈತನಿಗೆ ಬೀಜಕೊಳ್ಳುವ, ಗೊಬ್ಬರ ಹಾಕುವ, ಗದ್ದೆಗಳಲ್ಲಿ ದುಡಿಯುವ ಶ್ರಮವನ್ನು ಇಲ್ಲವಾಗಿಸುತ್ತದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ಕಿತ್ತುಕೊಂಡ ಮೇಲೆ ರೈತ ಗೊಬ್ಬರ, ಬೀಜಗಳನ್ನು ಕೊಂಡುಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಈ ಮೂಲಕ ಈ ದೇಶದ ರೈತರ ಬಹುದೊಡ್ಡ ಸಮಸ್ಯೆ ಇಲ್ಲವಾಗುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಸೆಝ್ ವಿರುದ್ಧ ಪ್ರತಿಭಟನೆ ಮಾಡಿದರೆ ಸರಕಾರವೇ ರೈತರನ್ನು ಗುಂಡು ಹಾಕಿ ಕೊಲ್ಲುತ್ತದೆ. ಆದುದರಿಂದ ರೈತರ ಆತ್ಮಹತ್ಯೆ ಸಮಸ್ಯೆ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆತ್ಮಹತ್ಯೆಗೆ ಬಳಸುವ ವಿಷಕ್ಕೆ ತೆರಬೇಕಾದ ಹಣ ಉಳಿತಾಯವಾಗಿ ರೈತ ಕುಟುಂಬ ಶ್ರೀಮಂತವಾಗುತ್ತದೆ. ಆಹಾರದ ಬೆಲೆ ಅಧಿಕವಾಗಿ ಬಡವರು ಊಟ ಮಾಡದೇ ಸಾಯಬೇಕಾಗುತ್ತದೆ. ಈ ಮೂಲಕ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗುತ್ತದೆ.

5. ಸಂವಿಧಾನದ ಕುರಿತಂತೆ ಕೆಲವು ವಾಕ್ಯಗಳನ್ನು ಬರೆಯಿರಿ? ಈ ದೇಶದಲ್ಲಿ ಹಲವು ಬಾರಿ ಕೊಲೆಗೀಡಾಗಿರುವ ವ್ಯಕ್ತಿಯ ಹೆಸರು ಸಂವಿಧಾನ. ಈತನಿಗೆ ಇರಿದರೆ, ತದುಕಿದರೆ ಅದು ಅಪರಾಧವಾಗುವುದಿಲ್ಲ. ಆದುದರಿಂದ ಯಾರು ಬೇಕಾದರೂ ಈತನ ಮೇಲೆ ಹಲ್ಲೆ ನಡೆಸಬಹುದಾಗಿದೆ. ಇವನನ್ನು ಮಾರಾಣಾಂತಿಕವಾಗಿ ಇರಿದವರನ್ನು ಈ ದೇಶದ ಉಪಪ್ರಧಾನಿಯಾಗಿ ಮಾಡಿ ಗೌರವಿಸಲಾಗುತ್ತದೆ. ಅಥವಾ ಯಾವುದಾದರೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಈತನ ತಾತನನ್ನು ಗುಂಡಿಟ್ಟು ಕೊಲ್ಲಲಾಯಿತು. ಈತನ ಅಪ್ಪನನ್ನು ಇನ್ನೊಂದು ಧರ್ಮಕ್ಕೆ ಓಡಿಸಲಾಯಿತು. ಈತನ ಮಕ್ಕಳನ್ನು ಇದೀಗ ಹಂತಹಂತವಾಗಿ ಕೊಂದು ಹಾಕುವ ಯೋಜನೆಯೊಂದನ್ನು ರೂಪಿಸಲಾಗಿದೆ.
6. ‘ಗೋವಿನ ಹಾಡು’ ಪದ್ಯದ ನೀತಿಯನ್ನು ಬರೆಯಿರಿ.
 ಗೋವಿನ ಹಾಡು ಪದ್ಯದಲ್ಲಿ ಪುಣ್ಯಕೋಟಿಯ ಒಂದು ಬ್ರಾಹ್ಮಣ ಜಾತಿಯ ಹಸುವಾಗಿರುತ್ತದೆ. ಅದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ದಲಿತ ಜಾತಿಗೆ ಸೇರಿದ ಹುಲಿಯೊಂದು ಎದುರಾಗುತ್ತದೆ. ಹುಲ್ಲು ತಿಂದು ಮಾರ್ಯದೆಯಲ್ಲಿ ಬದುಕಬೇಕಾದ ಹುಲಿ ಈ ಹಸುವನ್ನು ತಿನ್ನುವ ದುರಾಲೋಚನೆಯನ್ನು ಮಾಡುತ್ತದೆ. ದುರಾಲೋಚನೆಗಾಗಿ ಅದು ಸಾವನ್ನಪ್ಪಬೇಕಾಗುತ್ತದೆ. ಬ್ರಾಹ್ಮಣರನ್ನು ಕಾಡಿಸುವ ಎಲ್ಲರ ಸ್ಥಿತಿಯೂ ಇದೇ ಆಗಿರುತ್ತದೆ ಎನ್ನುವುದೇ ಈ ಕವಿತೆಯ ಪಾಠವಾಗಿದೆ.
ಹುಲಿ ಮಾಂಸವನ್ನು ತಿನ್ನುವುದು ತಪ್ಪು. ಅದು ಹುಲ್ಲನ್ನು ತಿನ್ನಬೇಕು. ಒಂದು ವೇಳೆ ಹಸುವನ್ನು ತಿನ್ನುವ ಯೋಚನೆ ಮಾಡಿದರೂ ಅದಕ್ಕಾಗಿ ತನ್ನ ಪ್ರಾಣವನ್ನು ತೆರಬೇಕು. ದನ ಹುಲಿಯ ಪ್ರಾಣವನ್ನು ತೆಗೆದರೆ ಅದರಲ್ಲಿ ತಪ್ಪೇನೂ ಇಲ್ಲ. ಇದೇ ಗೋವಿನ ಹಾಡು ಪದ್ಯದ ನೀತಿ ಪಾಠ.
ಎಲ್ಲವನ್ನು ಓದಿದ ಎಂಜಲು ಕಾಸಿಗೆ ಆಶ್ಚರ್ಯವಾಯಿತು. ‘ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ. ಮತ್ಯಾಕೆ ಈ ವಿದ್ಯಾರ್ಥಿಗಳು ಫೇಲಾದರು ಎಂದು ತಲೆ ತುರಿಸತೊಡಗಿದ.
(ಮೇ 4, 2008 ರವಿವಾರ)

No comments:

Post a Comment