Friday, May 15, 2015

ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆ.ಜಿ. ತ್ರಿಶೂಲ...!

2008 ರಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾದಾಗ ಬರೆದ ಬುಡಬುಡಿಕೆ. ಎಪ್ರಿಲ್ 20, 2008 ರವಿವಾರದ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವಿವಿಧ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಇದೀಗ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಸಮಯ. ಇಲ್ಲಿ ಕೆಲವು ‘ಪರದೇಶಿಕ ಪಕ್ಷ’ಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಇಲ್ಲಿದೆ.

ಕರ್ನಾಟಕ ಸಾರಾಯಿ ಪಕ್ಷ
ಉಳಿದ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇದ್ದುದರಿಂದ, ಚುನಾವಣೆಯಲ್ಲಿ ಅಖಿಲ ಕರ್ನಾಟಕ ಸಾರಾಯಿ ಪಕ್ಷವೆಂಬ ಪ್ರಾದೇಶಿಕ ಪಕ್ಷವನ್ನು ರಚಿಸಲಾಗಿದೆ. ಈ ನಾಡಿನ ಶೋಷಿತ ವರ್ಗವಾದ ಕುಡುಕರಿಂದಲೇ ರಚನೆಗೊಂಡಿರುವ ಈ ಪಕ್ಷಕ್ಕೆ ಮಲ್ಯ, ಬಂಗಾರಪ್ಪ, ಹೆ.ಛೆ.ಶೆಟ್ಟಿ ಮೊದಲಾದವರು ದುಡ್ಡು ಹಾಕಿದ್ದಾರೆ ಎನ್ನುವುದು ಬರೇ ಗಾಳಿ ಸುದ್ದಿ ಎನ್ನಲಾಗಿದೆ. ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ.
1.ಅಧಿಕಾರ ಹಿಡಿದಾಕ್ಷಣ ಸಾರಾಯಿ ನಿಷೇಧ ಹಿಂದಕ್ಕೆ.
2. ಎಲ್ಲ ರೇಷನ್ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಸಾರಾಯಿ ವಿತರಣೆ. ಸೇಂದಿಯನ್ನು ಉಚಿತವಾಗಿ ರೇಷನ್ ಅಂಗಡಿಗಳಲ್ಲಿ ವಿತರಿಸಲು ಯೋಜನೆ. ಈ ಯೋಜನೆಗೆ ‘ತಾಳೆಯ ಭಾಗ್ಯ’ ಎಂದು ಹೆಸರಿಡಲಾಗುವುದು.
3.ಈಗಾಗಲೇ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆ ಇದೆ. ಸಂಜೆ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಾರಾಯಿ ತೊಟ್ಟೆಯನ್ನು ನೀಡುವ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಒತ್ತಡ ರಹಿತ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲಾಗುತ್ತದೆ.
4.ವತ್ತಿಪರ ಶಿಕ್ಷಣಕ್ಕೆ ಆದ್ಯತೆ. ಶಾಲೆಗಳಲ್ಲಿ ಸಾರಾಯಿ ತಯಾರಿಕೆ, ಸಾರಾಯಿ ಭಟ್ಟಿ ಇಳಿಸುವುದು ಮೊದಲಾದ ವಿಷಯಗಳ ಕುರಿತಂತೆ ತರಬೇತಿ, ಸಾರಾಯಿ ತರಬೇತಿಗಾಗಿ ರಾಜ್ಯದ ವಿವಿಧೆಡೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ.
5.ಮನೆ ಮನೆಗಳಲ್ಲಿ ಸಾರಾಯಿ ತಯಾರಿಕಾ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಗಳ ನಿವಾರಣೆ.
6.ಜಿ.ಪಿ.ರಾಜರತ್ನಂ ಅವರ ‘ಹೆಂಡ, ಹೆಡ್ತಿ...’ ಪದ್ಯವನ್ನು ನಾಡಗೀತೆಯನ್ನಾಗಿ ಮಾಡಲಾಗುವುದು.

7. ಧರ್ಮದ ಅಮಲು, ಜಾತಿಯ ಅಮಲು ಇತ್ಯಾದಿಗಳನ್ನು ಅಳಿಸಿ ಹಾಕಿ, ಅಮಲನ್ನು ಜಾತ್ಯತೀತಗೊಳಿಸಲಾಗುತ್ತದೆ. ಮದ್ಯತೀತ ನಾಡನ್ನು ಕಟ್ಟಿ, ಎಲ್ಲ ಜಾತಿ, ಧರ್ಮಗಳನ್ನು ಒಂದೇ ಅಮಲಿನಡಿಯಲ್ಲಿ ತರಲಾಗುತ್ತದೆ. ಸಾರಾಯಿ ಪಕ್ಷದಲ್ಲಿ ಟಿಕೆಟ್ ನೀಡಲು ಅರ್ಹತೆಯೇ ಮಾನದಂಡವಾಗಿರುತ್ತದೆ. ಹೆಚ್ಚು ಹೆಚ್ಚು ಸಾರಾಯಿ ಕುಡಿದು ದಾಖಲೆ ಸ್ಥಾಪಿಸಿದವರಿಗೆ ಮೊದಲ ಆದ್ಯತೆ. ಪಕ್ಷದ ಟಿಕೆಟ್‌ಗೆ ಅರ್ಜಿ ಹಾಕುವಾಗ, ತಮ್ಮ ಸುಟ್ಟು ಹೋಗಿರುವ ಕರುಳು, ಗಂಟಲು ಇತ್ಯಾದಿಗಳನ್ನು ಅರ್ಜಿಯ ಜೊತೆಗೆ ಲಗ್ಗತ್ತಿಸಬಹುದು.
****
ಹರಹರಾ ಮಂಕೇಶ್ವರ ಪಕ್ಷ
ತಮ್ಮ ಎನ್ನಡ ಪಕ್ಷದಿಂದ ಓಟಿಗೆ ನಿಂತು ಠೇವಣಿ ಕಳೆದುಕೊಂಡ ಬಳಿಕ ಮಂಕೇಶ್ವರರು ಸ್ಥಾಪಿಸಿದ ನೂತನ ಪಕ್ಷ ಇದು. ಅದರ ಪ್ರಣಾಳಿಕೆ ಕೆಳಗಿನಂತಿದೆ.
1.ಹೊಸ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನು ಮಾರುಕಟ್ಟೆಗೆ ತಂದು, ಪತ್ರಿಕೆಯ ಜೊತೆಗೆ ಓದುಗರಿಗೆ ಒಂದು ರೂಪಾಯಿಯನ್ನು ಕೊಡುವುದು.
2.ಪತ್ರಿಕೆಯನ್ನು ಓದುವುದಕ್ಕಲ್ಲದೆ ಇನ್ನಿತರ ಕೆಲಸಗಳಿಗೂ ಬಳಸಲು ಅನುಕೂಲಾವಾಗುವಂತೆ ರೂಪಿಸಿ, ನಂಬರ್ 1 ಎಂದೆನಿಸಿಕೊಳ್ಳುವುದು. ಮುಖ್ಯವಾಗಿ ನಂ.2 ಮೊದಲಾದ ಬೆಳಗ್ಗಿನ ಕೆಲಸಗಳ ಸಂದರ್ಭದಲ್ಲಿ ಬಳಸಲು ಪತ್ರಿಕೆ ಉಪಯೋಗವಾದರೆ, ಸರ್ಕ್ಯುಲೇಶನ್ ಇನ್ನಷ್ಟು ಹೆಚ್ಚುತ್ತದೆ. ಊಟದ ಬಳಿಕ ಕೈ ಶುಚಿಗೊಳಿಸಲು ಬೆವರೊರೆಸಿಕೊಳ್ಳಲು ಪತ್ರಿಕೆಗಳನ್ನು ಪರಿಣಾಮಕಾರಿಯಾಗಿ ಹೊರತರುವುದು. ಈ ಮೂಲಕ ಕರ್ನಾಟಕದಲ್ಲಿ ಪತ್ರಿಕಾ ಕ್ರಾಂತಿಯನ್ನು ಮಾಡುವುದು.
3.ಮಧ್ಯಾಹ್ನ, ರಾತ್ರಿಯ ಊಟಕ್ಕೆ ಪತ್ರಿಕೆಗಳನ್ನೇ ಬೇಯಿಸಿ ತಿನ್ನುವುದು. ಅದಕ್ಕಾಗಿ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನೇ ಒಂದು ರೂಪಾಯಿಗೆ ಒಂದು ಕೆಜಿಯಂತೆ ನೀಡಲು ಯೋಜನೆ. ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಪತ್ರಿಕೆಗಳನ್ನೇ ಪರ್ಯಾಯವಾಗಿ ಬಳಸಲು ಯೋಜನೆ. ಉರುವಲಾಗಿ ಪತ್ರಿಕೆಗಳನ್ನು ಸಬ್ಸಿಡಿಯಲ್ಲಿ ವಿತರಣೆ.

4. ನಾಡಿನಲ್ಲಿ ‘ಭಯೋತ್ಪಾದನೆ’ಗಾಗಿ ಪತ್ರಿಕೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ. ಹೆಚ್ಚು ಉತ್ಪಾದನೆ ಮಾಡಿ ನಾಡಿನ ಉದ್ದಗಲಕ್ಕೆ ರಫ್ತು ಮಾಡಲು ಅವಕಾಶ. ಇದಕ್ಕಾಗಿ ತನ್ನ ‘ಮಂಕೇಶ್ವರ’ ಪತ್ರಿಕೆಯಿಂದ ವಿಶೇಷ ಕಾರ್ಖಾನೆ. ಭಯ ಉತ್ಪಾದನೆಯ ಕುರಿತಂತೆ ಅರ್ಹ ‘ಜನಿವಾರ’ ಪತ್ರಕರ್ತರಿಗೆ ಸ್ವ ಉದ್ಯೋಗ ತರಬೇತಿ, ಬಳಿಕ ಅವರಿಗೆ ಮಂಕೇಶ್ವರ ಪತ್ರಿಕೆಯಲ್ಲೇ ಕೆಲಸ. ಪಕ್ಷದಲ್ಲಿ ಟಿಕೆಟ್ ಸಿಗಬೇಕಾದರೆ ಅನುಭವ, ಹಿರಿತನ ಮುಖ್ಯವಾಗುತ್ತದೆ. ಮಂಕೇಶ್ವರ ಪತ್ರಿಕೆಯಲ್ಲಿ ಸರ್ಕ್ಯುಲೇಶನ್, ಜಾಹೀರಾತು ವಿಭಾಗದಲ್ಲಿ ಅಧಿಕ ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ಟಿಕೇಟು ನೀಡಲಾಗುತ್ತದೆ. ಚುನಾವಣೆಯಲ್ಲಿ ಸೋತರೂ, ಮಂಕೇಶ್ವರ ಬಸ್‌ಗಳಲ್ಲಿ ಓಡಾಡುವಾಗ ಸೋತ ಅಭ್ಯರ್ಥಿಗಳು ಟಿಕೆಟ್ ತೆಗೆಯ ಬೇಕೆಂದಿಲ್ಲ. ಚುನಾವಣೆಗೆ ನಿಲ್ಲುವುದಕ್ಕೆ ಠೇವಣಿ ಕಟ್ಟಲು ಪಕ್ಷ ಶೇ.5ರ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಠೇವಣಿ ಕಳೆದುಕೊಂಡರೆ ಪಕ್ಷಾಧ್ಯಕ್ಷರು ಜವಾಬ್ದಾರರಲ್ಲ.
***
ಬೇತಾಳ್ ಪಕ್ಷ
 ಖನ್ನಡದ ಉಟ್ಟು ಓರಾಟಗಾರ ಬೇತಾಳ್ ನಾಗರಾಜ್ ಸ್ಥಾಪಿಸಿರುವ ಈ ಪಕ್ಷದ ಪ್ರಣಾಳಿಕೆ ಕೆಳಗಿನಂತಿದೆ.
1.ಸರಕಾರ ಅಸ್ತಿತ್ವಕ್ಕೆ ಬಂದರೆ ಬೆಂಗಳೂರು ನಗರಗಳಲ್ಲಿ ವಾಹನಗಳಿಗೆ ನಿಷೇಧ. ಎಮ್ಮೆ, ಕೋಣಗಳ ಮೂಲಕವೇ ಸಾರಿಗೆ ವ್ಯವಸ್ಥೆ.
2.ವಿವಿಧ ನಾಯಕರ ಪ್ರತಿಕತಿಗಳು ಸಬ್ಸಿಡಿಯಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ. ಪ್ರತಿಕತಿಗಳನ್ನು ಸುಟ್ಟು ಹಾಕಲು ಬೇಕಾದ ಸೀಮೆ ಎಣ್ಣೆಯನ್ನು ಓರಾಟಗಾರಿಗೆ ಪಡಿತರ ಕಾರ್ಡ್‌ಗಳ ಮೂಲಕ ಒದಗಿಸುವ ವ್ಯವಸ್ಥೆ.
3.ಪ್ರತಿದಿನ ಎರಡು ಗಂಟೆಗಳ ಕಾಲ ಎಲ್ಲ ಪ್ರತಿಭಟನೆಗಳಿಗೂ ರಸ್ತೆಗಳು ಮುಕ್ತ.
4.ಪ್ರತಿಭಟನೆಗಳ ಗುತ್ತಿಗೆಯನ್ನು ವಿದೇಶಿ ಕಂಪೆನಿಗಳಿಗೆ ಹರಾಜು ಮೂಲಕ ರಾಜ್ಯ ಬೊಕ್ಕಸಕ್ಕೆ ಹಣ.
5. ಪ್ರತಿ ಜಿಲ್ಲೆಯಲ್ಲಿ ಯುವಕ-ಯುವತಿಯರಿಗೆ ಪ್ರತಿಕತಿಗಳ ತಯಾರಿಕೆ ತರಬೇತಿ. ಈ ಮೂಲಕ ಗುಡಿ ಕೈಗಾರಿಕೆಗಳ ಅಭಿವದ್ಧಿ.
***
ಹೊಡಿ-ಬಡಿ-ಕೊಲ್ಲು ಪಕ್ಷ
ಇತ್ತೀಚೆಗೆ ಸಮಾನ ಮನಸ್ಕರು ಒಂದಾಗಿ ‘ಹೊಡಿಬಡಿಕೊಲ್ಲು ಪಕ್ಷ’ವನ್ನು ಕಟ್ಟಿದ್ದಾರೆ. ಬೇರೆ ಗುಂಪುಗಳಾಗಿ ‘ಹೊ-ಬ-ಕೊ’ ಮಾಡಿದಾಗ ಜನರು ತಿರುಗಿ ತದಕಲು ಶುರು ಮಾಡಿದುದರಿಂದ ಎಲ್ಲ ಹೊಡಿ ಬಡಿ ಕೊಲ್ಲು ಮನಸ್ಕರು ಒಂದಾಗಿ ಈ ಪಕ್ಷವನ್ನು ಕಟ್ಟಿದ್ದಾರೆ. ಅವರ ಪ್ರಣಾಳಿಕೆ ಕೆಳಗಿನಂತಿದೆ.
1. ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆಜಿ ತ್ರಿಶೂಲ, ಕತ್ತಿ, ಚಾಕು ಇತ್ಯಾದಿ ವಿತರಣೆ. ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲು ಗರಿಷ್ಠ ಸೀಮೆ ಎಣ್ಣೆ ನೀಡುವ ವ್ಯವಸ್ಥೆ. ‘ಕೇಸರಿ ಕಾರ್ಡ್’ನವರಿಗೆ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ನೀಡಲಾಗುತ್ತದೆ.
2.ಕನ್ನಡದ ಹೆಸರಿನಲ್ಲಿ ಅತ್ಯಧಿಕ ಅಂಗಡಿಗಳನ್ನು ಲೂಟಿ ಮಾಡಿದಾತನಿಗೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ, ಕರ್ನಾಟಕ ರತ್ನ ಮೊದಲಾದ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.
3. ಕಾರಾಗಹಗಳಲ್ಲಿ ಆಮೂಲಾಗ್ರ ಬದಲಾವಣೆ. ಎಲ್ಲ ಜೈಲು ಕೋಣೆಗಳನ್ನು ಹವಾನಿಂಯತ್ರಿತಗೊಳಿಸಲಾಗುವುದು. ಕೈದಿಗಳಿಗೆ ಉಚಿತ ಮೊಬೈಲ್‌ಗಳ ವ್ಯವಸ್ಥೆ. ಇದಕ್ಕೆ ಬೇಕಾದ ಸಿಮ್ ಕಾರ್ಡ್‌ಗಲಿಗಾಗಿ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಹಣ ಮೀಸಲು.
4.ಕೋಮುಗಲಭೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ, ಕಟ್ಟಡ ಕೆಡವುದು ಹೇಗೆ ಎನ್ನುವುದರ ಕುರಿತಂತೆ ಯುವಕರಿಗೆ ಗೋಡ್ಸೆ ರೋಜ್‌ಗಾರ್ ಯೋಜನೆಯಡಿಯಲ್ಲಿ ತರಬೇತಿ.
5. ಅತ್ಯಂತ ಹೆಚ್ಚು ಕೊಲೆಗಳನ್ನು ಮಾಡಿದಾತನಿಗೆ ಕುಂಬ್ಲೆ ಸುಂದರರಾವ್ ಹೆಸರಿನಲ್ಲಿ ಶ್ರೇಷ್ಠ ಕೊಲಾವಿದ ಪ್ರಶಸ್ತಿ.
         (ಎಪ್ರಿಲ್ 20, 2008 ರವಿವಾರ)

No comments:

Post a Comment