ನರೇಂದ್ರ ಮೋದಿ ಸ್ವಚ್ಚತಾ ಆಂದೋಲನಕ್ಕೆ ಇಳಿದ ಸಂದರ್ಭದಲ್ಲಿ ಶನಿವಾರ - ಅಕ್ಟೋಬರ್ -18-2014ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ
ನರೇಂದ್ರ ಮೋದಿ, ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶಶಿ ತರೂರ್, ಸಾನಿಯಾ ಮಿರ್ಝಾ ಎಲ್ಲರೂ ಬೀದಿಗಿಳಿದು ಕಸ ಗುಡಿಸುತ್ತಿರುವುದನ್ನು ಮೇಲಿನಿಂದ ನೋಡಿದ ಮಹಾತ್ಮಾ ಗಾಂಧೀಜಿಗೆ ಫುಲ್ ಕಂಫ್ಯೂಶನ್. ಎಲ್ಲರೂ ತನ್ನ ಭಾವಚಿತ್ರದ ಜೊತೆಗೆ ಪೊರಕೆ ಹಿಡಿದುಕೊಂಡಿದ್ದಾರಲ್ಲ ಎಂದುಕೊಂಡು ಭಯಭೀತರಾದರು. ಸಾರ್ವಜನಿಕವಾಗಿ ನನಗೆ ಪೊರಕೆ ಸೇವೆ ಮಾಡುವ ಉದ್ದೇಶವೇನಾದರೂ ಇದೆಯಾ...ಎಂದು ಸ್ವರ್ಗಲೋಕದಿಂದ ತನ್ನ ದೂತರಿಗೆ ಕರೆ ಕಳುಹಿಸಿದರು ‘‘ಇವತ್ತಿನ ಹರಿಜನ ಸಂಚಿಕೆ ಒಂದನ್ನು ಭೂಲೋಕದಿಂದ ಹಿಡಿದುಕೊಂಡು ಬನ್ನಿ. ನಿಜವಾದ ವಿಷಯವೇನು ಎನ್ನುವುದು ನನಗೆ ತಿಳಿಯ ಬೇಕಾಗಿದೆ....’’
ದೂತ ವಿಷಾದದ ನಗೆ ನಕ್ಕು ಹೇಳಿದ ‘‘ಬಾಪೂಜಿ... ನಿಮ್ಮ ಹರಿಜನ ಪತ್ರಿಕೆ ಸ್ವಾತಂತ್ರ ಸಿಗುವ ಮೊದಲೇ ನಿಂತು ಹೋಗಿದೆ ಗೊತ್ತಿದೆಯಲ್ಲ...ಈಗ ಏನಿದ್ದರೂ ನಂ.1, ನಂ.2 ಪತ್ರಿಕೆಗಳದ್ದೇ ಕಾರುಬಾರು...ಎಲ್ಲ ಪುಕ್ಕಟೆ ಹಂಚುತ್ತಾರೆ...ನಮ್ಮ ನರಕಕ್ಕೆ ಎಲ್ಲ ದಿನ ಪತ್ರಿಕೆಗಳೂ ಪೂರೈಸಲಾಗುತ್ತದೆ. ಪುಕ್ಕಟೆಯಾಗಿ....’’
‘ಹೇ ರಾಮ್...’ ಎಂದು ನಿಟ್ಟುಸಿರಿಟ್ಟ ಗಾಂಧೀಜಿ ‘‘ಸರಿ...ಯಾರಿಂದಾದರೂ ಒಂದು ಪತ್ರಿಕೆ ತನ್ನಿ...’’ ಎಂದು ಹೇಳಿದರು. ದೂತ ತಕ್ಷಣವೇ ನರಕಕ್ಕೆ ಹೋಗಿ ಒಂದಿಷ್ಟು ದಿನ ಪತ್ರಿಕೆಗಳನ್ನು ತಂದ...‘‘ಯಾರೂ ಪತ್ರಿಕೆಗಳನ್ನು ಕೊಡಲು ಒಪ್ಪಲಿಲ್ಲ ಬಾಪೂಜಿ. ಆದರೆ ಗಾಂಧೀಜಿಗೆ ಎಂದು ಗೊತ್ತಾದ ಕೂಡಲೇ ನಾಥೂರಾಂ ಗೋಡ್ಸೆ ತನ್ನಲ್ಲಿದ್ದ ಪತ್ರಿಕೆಯನ್ನು ತಕ್ಷಣ ಕೊಟ್ಟ...ನರಕಕ್ಕೆ ಸಂಬಂಧಿಸಿ ಯಾವುದೇ ವರದಿಗಳನ್ನು ಅವರು ನೇರವಾಗಿ ಭೂಲೋಕದ ಪತ್ರಿಕೆಗಳಿಗೆ ತಲುಪಿಸುತ್ತಾರೆ..ಕ್ಯಾಮರಾಮ್ಯಾನ್ ಸಾವರ್ಕರ್ ಜೊತೆಗೆ ವರದಿಗಾರ ನಾಥೂರಾಂ ಗೋಡ್ಸೆ...ಎಂದು ಈಗ ದಿನಾ ಟೀವಿಯಲ್ಲಿ ಸುದ್ದಿಗಳು ಬರುತ್ತಿರುತ್ತವೆ...ಇವತ್ತು ನರಕಲೋಕವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದಾರೆ ಸಾವರ್ಕರ್...ಗಾಂಧಿಜಯಂತಿ ದಿನ ಭೂಲೋಕದಲ್ಲಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನ ಮಾಡುತ್ತಿದ್ದಾರಂತೆ...ಅದರ ಪರವಾಗಿ ನರಕಲೋಕವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾಥೂರಾಂ ಗೋಡ್ಸೆ ಮತ್ತು ಬಳಗ ಇಳಿದಿದೆ. ನೀವು ಅದರ ಉದ್ಘಾಟನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಬರೇ ಫೋಟೋಕ್ಕೆ ನಾಥೂರಾಂ ಜೊತೆಗೆ ಒಂದು ಭಂಗಿಯನ್ನು ನೀಡಿದರೆ ಸಾಕಂತೆ. ಗುಡಿಸಬೇಕಾಗಿಲ್ಲ ಅಂತೆ. ಬಾಪೂಜಿ ಇದು ಒಳ್ಳೆಯ ಅವಕಾಶ. ಈಗ ಅವರದೇ ಸರಕಾರ ಇರೋದು. ಹೋಗಿ ನರಕದ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಬನ್ನಿ...’’
‘‘ಹೇ ರಾಮ್...ಮೊದಲು ನಾಥೂರಾಂ ಗೋಡ್ಸೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿ. ಅಂತರಂಗವನ್ನು ಶುಚಿಗೊಳಿಸಲಿ. ಅವನು ನನ್ನನ್ನು ಕೊಂದು ಹಾಕಿದ್ದಕ್ಕೆ ನನಗೆ ಬೇಸರವಿಲ್ಲ. ನನ್ನ ಆಲೋಚನೆಗಳನ್ನು ಕೊಂದು ಹಾಕಲು ಅವನಿಗೆ ಸಾಧ್ಯವಿಲ್ಲ. ನನ್ನ ಆಶ್ರಮದಲ್ಲಿ ಹಿಂಸೆಯನ್ನು ಮಾಡಿದ್ದಕ್ಕಾಗಿ ಮಾತ್ರ ನನಗೆ ದುಃಖವಿದೆ. ಆದುದರಿಂದ ಆ ಹಿಂಸೆಗಾಗಿ ಅವನು ಪಶ್ಚಾತಾಪ ಪಟ್ಟು ಮರಳಿದರೆ ನಾನು ಗೋಡ್ಸೆಯ ಜೊತೆಗೆ ಕೈ ಜೋಡಿಸಿ ನರಕದಲ್ಲಿರುವ ಬ್ರಾಹ್ಮಣರ ಅಗ್ರಹಾರವನ್ನು ಶುಚಿಗೊಳಿಸಲು ಸಿದ್ಧನಿದ್ದೇನೆ. ಭಾರತದಲ್ಲಿರುವ ದಲಿತರನ್ನು ಅತ್ಯಂತ ಹೀನಯವಾಗಿ ಶೋಷಣೆ ಮಾಡಿದವರಿಗಾಗಿ ಇರುವ ನರಕದ ಅತ್ಯಂತ ಕೊಳಚೆ ಪೀಡಿತವಾಗಿರುವ ಅಗ್ರಹಾರ ಅದು. ಮೊದಲು ಗೋಡ್ಸೆ ತನ್ನ ಮನಸ್ಸನ್ನು ಪರಿವರ್ತನೆಗೊಳಿಸಲಿ. ಅಂತರಂಗವನ್ನು ಸ್ವಚ್ಛಗೊಳಿಸಲು. ನಾವಿಬ್ಬರು ಜೊತೆಯಾಗಿ ನರ ದಲ್ಲಿರುವ ಅಗ್ರಹಾರಗಳನ್ನು ಶುಚಿಗೊಳಿಸಿ ಅದರಿಂದ ಅವರನ್ನು ಮುಕ್ತಗೊಳಿಸುವೆವು...’’
ಸ್ವರ್ಗದ ದೂತನಿಗೆ ನಗು ಬಂತು ‘‘ಬಾಪೂಜಿ. ಅವರಿಗೆ ನಿಮ್ಮ ಜೊತೆಗೆ ಒಂದು ಫೋಟೋ ಹೊಡೆಸಿಕೊಂಡು ಅದನ್ನು ಭೂಲೋಕಕ್ಕೆ ತುರ್ತಾಗಿ ಕಳುಹಿಸಬೇಕಾಗಿದೆಯಂತೆ. ಭಾರತದಲ್ಲೀಗ ನೀವು ಮತ್ತು ಗೋಡ್ಸೆ ಭಾಯಿ ಭಾಯಿ. ಎರಡು ಸಿದ್ದಾಂತಗಳ ನಡುವೆ ಒಂದು ಸೇತುವೆ ಕಟ್ಟುವ ಕೆಲಸ ನಡೆದಿದೆ...ನಿಮ್ಮ ಫೋಟೋ ಒಂದು ಇದ್ದರೆ ರಾಜಕೀಯವಾಗಿ ಅವರಿಗೆ ತುಂಬಾ ಲಾಭವಾಗುತ್ತದೆ...’’
‘‘ಹೇ ರಾಮ್...’’ ಗಾಂಧೀಜಿ ಮತ್ತೆ ನೊಂದು ಕೊಂಡರು. ‘‘ನರಕದಲ್ಲಿ ಇಷ್ಟು ಸಮಯ ನರಳಿ ದರೂ ಆತನ ಮನಸ್ಸು ಬದಲಾಗಲಿಲ್ಲ. ಬರೇ ಹಿಂಸೆಯ ಶಿಕ್ಷೆಯಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅವರನ್ನೆಲ್ಲ ನಾನು ಬದಲಾವಣೆ ಮಾಡುತ್ತೇನೆ ಎಂದು ಯಮರಾಜನ ಬಳಿ ಹೇಳಿದೆ. ಆದರೆ ಅದಕ್ಕೆ ಯಮರಾಜ ಒಪ್ಪಲಿಲ್ಲ...ಬರೇ ಅಹಿಂಸೆಯಿಂದ ಒಬ್ಬನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಮರಾಜರು ತಿಳಿದಿದ್ದಾರೆ...ಇರಲಿ. ಭಾರತದಲ್ಲಿ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್ ಮೊದಲಾದವರೆಲ್ಲ ಬೀದಿಯಲ್ಲಿ ಏನು ಮಾಡುತ್ತಿದ್ದಾರೆ...’’ ಬಾಪೂಜಿ ಕೇಳಿದರು.
‘‘ಅವರೆಲ್ಲ ಸ್ವಚ್ಛತಾ ಆಂದೋಲನದ ಪರವಾಗಿ ಫೋಟೋಗಳಿಗೆ ಭಂಗಿ ನೀಡುತ್ತಿದ್ದಾರೆ....’’ ದೂತ ಹೇಳಿದ.
‘‘ಅಂದರೆ...ಅವರೆಲ್ಲ ರಸ್ತೆ ಗುಡಿಸುತ್ತಾರೆಯೇ... ಭಾರತವನ್ನು ಸ್ವಚ್ಛಗೊಳಿಸುತ್ತಾರೆಯೆ?’’ ಬಾಪೂಜಿ ಆಸೆಯಿಂದ ಕೇಳಿದರು.
ದೂತ ನಕ್ಕ ‘‘ಬಾಪೂಜಿ, ಅವರೆಲ್ಲ ಇಡೀ ಭಾರತದ ಸಂಪನ್ಮೂಲವನ್ನು, ಬಡವರನ್ನು ಗುಡಿಸಿ ಸ್ವಚ್ಛಗೊಳಿಸುವ ಯೋಜನೆ ಹಾಕಿದ್ದಾರೆ. ಅದಕ್ಕಾಗಿ ಕೆಲವು ಸಂಚುಗಳನ್ನು ಹಾಕಿದ್ದಾರೆ. ಅದರ ಭಾಗವಾಗಿ ಈಗ ಗುಡಿಸುವ ನಾಟಕ ಮಾಡುತ್ತಿದ್ದಾರೆ...’’
‘‘ಆದರೆ ಮೋದಿಯವರು ಒಂದು ಬೀದಿಯನ್ನು ಗುಡಿಸುವ ಹಾಗೆ ಕಾಣುತ್ತಿದೆಯಲ್ಲ...’’ ಗಾಂಧಿ ಮೇಲಿ ನಿಂದಲೇ ದಿಲ್ಲಿಯ ಒಂದು ಬೀದಿಯನ್ನು ನೋಡುತ್ತಾ ಕೇಳಿದರು.
‘‘ಅವರು ಗುಡಿಸುವುದಕ್ಕಾಗಿಯೇ ಅಲ್ಲಿ ವಿಶೇಷ ಕಸಗಳನ್ನು ತಂದು ಹಾಕಲಾಗಿದೆ ಬಾಪೂಜಿ. ಹಾಗೆಯೇ ಅವರಿಗಾಗಿ ವಿಶೇಷ ಕೈಗವಚ, ವಿಶೇಷ ಕಸಬರಿಕೆಗಳನ್ನು ಒದಗಿಸಲಾಗಿದೆ. ಟಿವಿಯವರಿಗಾಗಿ ಮತ್ತು ಪತ್ರಿಕೆ ಗಳಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ...’’
‘‘ಆತ್ಮ ಪರಿವರ್ತನೆಯಾಗದೆ ಕೇವಲ ನಾಟಕಕ್ಕಾಗಿ ಈ ರೀತಿ ಮಾಡಿದರೆ ದೇಶ ಉದ್ಧಾರ ಸಾಧ್ಯವೆ...ಅದಿರಲಿ. ಗ್ರಾಮೀಣ ಪ್ರದೇಶದಲ್ಲಿರುವ ಭಂಗಿ ಸಮುದಾಯದ ಜನರು ಏನು ಮಾಡುತ್ತಿದ್ದಾರೆ...’’
‘‘ಅವರಿನ್ನೂ ಮಲ ಹೊರುತ್ತಲೇ ಇದ್ದಾರೆ. ರಸ್ತೆ ಗುಡಿಸುತ್ತಲೇ ಇದ್ದಾರೆ...’’ ದೂತ ಹೇಳಿದ.
‘‘ನಿಜಕ್ಕೂ ಈ ದೇಶವನ್ನು ಸ್ವಚ್ಛಗೊಳಿಸುತ್ತಿರುವವರು ಅವರಲ್ಲವೆ? ಅವರ ಚಿತ್ರಗಳನ್ನು ಯಾಕೆ ಪತ್ರಿಕೆಗಳು ಹಾಕುತ್ತಿಲ್ಲ...?’’ ಗಾಂಧೀಜಿ ಅಚ್ಚರಿಯಿಂದ ಕೇಳಿದರು.
‘‘ಅಯ್ಯೋ...ಇವರೆಲ್ಲ ಸೇರಿ ಅಕ್ಟೋಬರ್ 2ನ್ನು ಯಾಕೆ ಇಷ್ಟು ಕ್ರೂರವಾಗಿ ಆಚರಿಸುತ್ತಿದ್ದಾರೆ. ನನ್ನನ್ನು ಒಂದು ಬಾರಿ ಗೋಡ್ಸೆ ಕೊಂದು ಮುಗಿಸಿದ್ದಾನೆ. ಆದರೆ ಇವರೆಲ್ಲ ಮತ್ತೆ ಮತ್ತೆ ಕೊಂದು ಹಾಕಲು ಅಕ್ಟೋಬರ್ 2ನ್ನು ಬಳಸುತ್ತಿದ್ದಾರಲ್ಲ...’’ ಎಂದು ಗಾಂಧೀಜಿ ಸ್ವರ್ಗದಲ್ಲಿರುವ ತನ್ನ ಆಶ್ರಮದ ನೆಲದಲ್ಲಿ ಕುಸಿದು ಬಿದ್ದರು. ಅಷ್ಟರಲ್ಲಿ ಅವರ ಕೋಣೆಯ ಟಿವಿಯನ್ನು ದೂತ ಆನ್ ಮಾಡಿದ. ಅದರಲ್ಲಿ ಗೋಡ್ಸೆ ವರದಿಯನ್ನು ಬಿತ್ತರಿಸುತ್ತಿದ್ದ. ‘‘ಇದೀಗ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮ ನರಕದಲ್ಲಿ ಯಶಸ್ವಿಯಾಗಿ ನಡೆಯಿತು. ನರಕದಲ್ಲಿರುವ ಶೋಷಿತ ಸಮುದಾಯವಾಗಿರುವ ಬ್ರಾಹ್ಮಣ ಅಗ್ರಹಾರವನ್ನು ಸ್ವಚ್ಛತಾ ಆಂದೋಲನದ ಪರವಾಗಿ ಗುಡಿಸುವ ಕಾರ್ಯಕ್ರಮ ಜರಗುತ್ತಿದೆ. ಈ ಸ್ವಚ್ಛತಾ ಆಂದೋಲನದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮವನ್ನು ಮಹಾತ್ಮಗಾಂಧೀಜಿಯವರೇ ಖುದ್ದಾಗಿ ಬಂದು ಉದ್ಘಾಟಿಸುವುದರಲ್ಲಿದ್ದರು. ಆದರೆ ತುರ್ತಾಗಿ ನೆಹರೂ ಅವರ ಜೊತೆಗೆ ಮೀಟಿಂಗ್ ಇದ್ದುದರಿಂದ ಅವರು ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಪ್ಪಟ ಗಾಂಧೀವಾದಿಯಾಗಿರುವ ಗೋಲ್ವಾಲ್ಕರ್ ಅವರು ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿದರು. ಈ ಸ್ವಚ್ಛತಾ ಆಂದೋಲನದಲ್ಲಿ ಸಿಖ್ ಮುಖಂಡರಾಗಿರುವ ಬಿಂದ್ರನ್‌ವಾಲೆ ಕೂಡ ಭಾಗವಹಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದ ಉಸಾಮಬಿನ್ ಲಾದೆನ್ ಅವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ. ಕ್ಯಾಮರಾಮೇನ್ ಸಾವರ್ಕರ್ ಜೊತೆಗೆ ನಾಥೂರಾಂ ಗೋಡ್ಸೆ....ನರಕದಿಂದ...’’
ಅಷ್ಟರಲ್ಲಿ ಪತ್ರಕರ್ತ ಎಂಜಲು ಕಾಸಿಗೆ ಎಚ್ಚರ ವಾಯಿತು. ತಾನು ಈವರೆಗೆ ನೋಡಿದ್ದು ವಾಸ್ತವವೋ, ಕನಸೋ ಎಂಬ ಗೊಂದಲ ಇನ್ನೂ ಅವನೊಳಗಿತ್ತು. ಟಿವಿ ಆನ್ ಮಾಡಿದ.ನೋಡಿದರೆ ಅದರಲ್ಲಿ ‘‘ಸಚಿನ್, ಅನಿಲ್ ಅಂಬಾನಿ ಮೊದಲಾದವರೆಲ್ಲ ಕಸ ಗುಡಿಸುವ ವರದಿ’’ ಬಿತ್ತರವಾಗುತ್ತಿತ್ತು.
ಅಕ್ಟೋಬರ್ -18-2014
ನರೇಂದ್ರ ಮೋದಿ ಧರಿಸಿದ ಲಕ್ಷಾಂತರ ಬೆಲೆಯ ಸೂಟು ಕೋಟ್ಯಂತರ ಬೆಲೆಗೆ ಹರಾಜಾದ ಹಿನ್ನೆಲೆಯಲ್ಲಿ ರವಿವಾರ - ಫೆಬ್ರವರಿ -22-2015 ರ ವಾರ್ತಾ ಭಾರತಿ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ.
ಹರಾಜು...ಹರಾಜು...ಹರಾಜು...
ದೇಶದಲ್ಲೆಲ್ಲ ಹರಾಜಿನದ್ದೇ ಸುದ್ದಿ. ಬೆಳಗ್ಗೆ ಸುದ್ದಿಯ ವಾಸನೆ ಹಿಡಿದು ಓಡಾಡುತ್ತಿದ್ದ ಎಂಜಲು ಕಾಸಿಗೆ ಈ ಹರಾಜು ಸುದ್ದಿ ಕೇಳಿ ಅಚ್ಚರಿಯಾಯಿತು. ಅರೆ! ಈ ದೇಶದಲ್ಲಿ ಯಾವುದನ್ನು ಹರಾಜಿಗಿಟ್ಟಿದ್ದಾರೆ?
ಗಾಂಧಿಯನ್ನು ಹರಾಜಿಗಿಟ್ಟಾಯಿತು. ನೆಹರೂವನ್ನು ಹರಾಜಿಗಿಟ್ಟಾಯಿತು. ನೇತಾಜಿಯನ್ನು ಹರಾಜಿಗಿಟ್ಟಾಯಿತು. ವಿವೇಕಾನಂದರನ್ನು ಹರಾಜಿಗಿಟ್ಟಾಯಿತು. ದೇಶದ ನ್ಯಾಯಾಲಯವನ್ನು ಹರಾಜು ಕೂಗಿದ್ದಾಯಿತು. ರಕ್ಷಣಾ ಇಲಾಖೆ, ಕೃಷಿ, ಚಿಲ್ಲರೆ ಅಂಗಡಿಗಳು ಎಲ್ಲವನ್ನೂ ವಿದೇಶಿಯರಿಗೆ ಹರಾಜು ಹಾಕಿ ಪ್ರಧಾನಿ ಮೋದಿಯವರು ದೇಶವನ್ನು ಶ್ರೀಮಂತಗೊಳಿಸಿರುವಾಗ ಇನ್ನು ಈ ದೇಶದಲ್ಲಿ ಹರಾಜಿಗೆ ಉಳಿದಿರುವುದಾದರೂ ಏನು ಎನ್ನುವ ಸಮಸ್ಯೆ ಎಂಜಲು ಕಾಸಿಯನ್ನು ಕಾಡತೊಡಗಿತು. ಕುತೂಹಲದಿಂದ ಕಿವಿ ನಿಮಿರಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿರುವ ಕೋಟು ಕೋಟ್ಯಂತರ ರೂಪಾಯಿಗೆ ಹರಾಜಾಗುತ್ತಿರುವುದು ಗೊತ್ತಾಗಿಬಿಟ್ಟಿತು. ಇಡೀ ದೇಶ ಆ ಕೋಟಿಗಾಗಿ ಹರಾಜು ನಿಂತಿರುವುದಾಗಿ ಟಿವಿ ವಾಹಿನಿಯೊಂದು ಒದರುತ್ತಿತ್ತು. ಕಾಸಿ ತಾನು ಧರಿಸಿದ ಹಳೆಯ ತೇಪೆ ಹಾಕಿದ ಜುಬ್ಬಾವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟ. ಸರಿ. ಆದದ್ದಾಗಲಿ ಎಂದು ನೇರವಾಗಿ ಹರಾಜು ನಡೆಯುವಲ್ಲಿಗೇ ಹೋದ. ನೋಡಿದರೆ ಭಾರೀ ದೊಡ್ಡ ಸಂತೆ. ಸಂತೆಯ ಮಧ್ಯೆ ನಿಂತು ಅಮಿತ್ ಶಾ ಮೋದಿಯನ್ನು ಕೋಟನ್ನು ಹಿಡಿದುಕೊಂಡು ಹರಾಜು ಕೂಗುತ್ತಿದ್ದಾರೆ.
‘‘ಆಯಿಯೇ...ಆಯಿಯೇ...ಇದು ದೇಶದ ಅತ್ಯಂತ ಆತ್ಮಾಭಿಮಾನದ ಕೋಟು. ಸ್ವತಃ ಅಮೆರಿಕದ ಒಬಾಮ ಅವರು ಇದನ್ನು ಅಪ್ಪಿಕೊಂಡಿದ್ದು, ಅವರ ಬೆವರಿನ ವಾಸನೆ ಇನ್ನೂ ಹಾಗೇ ಘಮಘಮಿಸುತ್ತಿದೆ...ಹರಾಜು ಕೂಗಿ...ದೇಶದ ಮಾನ ಉಳಿಸಿ...ದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿ...ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ...’’
ಸೇರಿದ ಜನರೆಲ್ಲ ತಮ್ಮ ತಮ್ಮ ಭೂಮಿಯನ್ನು, ಗೂಡಂಗಡಿಗಳನ್ನು, ಕಾಡನ್ನು, ನದಿಯನ್ನು, ಕಡಲನ್ನು ಒತ್ತೆಯಿಟ್ಟು ನರೇಂದ್ರ ಮೋದಿಯ ಕೋಟಿಗೆ ಹರಾಜು ಕೂಗುತ್ತಿದ್ದರು. ಅದೆಷ್ಟು ಸಂಪತ್ತು ತಂದು ಸುರಿದರೂ ನರೇಂದ್ರ ಮೋದಿಯ ಕೋಟಿನ ಬೆಲೆಗೆ ಅದು ಸಮಗಟ್ಟುತ್ತಿಲ್ಲ. ರೈತರ ಪತ್ನಿಯರೆಲ್ಲ ತಮ್ಮ ಕೊರಳಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಅಮಿತ್ ಶಾಗೆ ಕೊಟ್ಟರು. ಎಲ್ಲವನ್ನೂ ಕಿತ್ತು ಕಿತ್ತು ಅಮಿತ್ ಶಾ ತಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದರು. ಆದರೂ ಕೋಟಿನ ಬೆಲೆ ಏರುತ್ತಲೇ ಇತ್ತು. ಅಮಿತ್ ಷಾ ಮತ್ತೆ ಘೋಷಣೆ ಕೂಗತೊಡಗಿದರು ‘‘ಈ ಕೋಟು ಭಾರತದ ಆತ್ಮಾಭಿಮಾನದ ಸಂಕೇತ...ಬನ್ನಿ...ಇದನ್ನು ಕೊಂಡುಕೊಳ್ಳಿ...ಹರಾಜು ಕೂಗಿ...ಇಂದು ಈ ದೇಶದ ಮಾನವನ್ನು ಕಾಪಾಡಬೇಕಾದರೆ ಈ ಕೋಟು ಅತ್ಯಗತ್ಯ. ನಿಮ್ಮ ಮಾನ ಮಾತ್ರ ಅಲ್ಲ...ಪ್ರಾಣವನ್ನೂ ತೆತ್ತು ಹರಾಜು ಕೂಗಿ....’’
ಎಂದದ್ದೇ ತಡ...ದೇಶದ ಹಲವೆಡೆ ಕೋಮುಗಲಭೆಗಳನ್ನು ನಡೆಸಿ ತಲೆಬುರುಡೆಗಳನ್ನು ರಾಶಿರಾಶಿಯಾಗಿ ಅಮಿತ್ ಶಾ ಮುಂದೆ ಸುರಿಯಲಾಯಿತು. ಆದರೂ ಕೋಟಿನ ಬೆಲೆ ಸರಿಗಟ್ಟಲಾಗುತ್ತಿಲ್ಲ. ನೂರಾರು ಮನೆಗಳಿಗೆ ಬೆಂಕಿ ಹಚ್ಚಿ, ಅದರ ಬೂದಿಯನ್ನು ತಂದು ಅಮಿತ್ ಶಾ ಮುಂದೆ ನೀಡಲಾಯಿತು. ಊಹೂಂ...ಅದೇನಿದ್ದರೂ ಕೋಟಿನ ಬೆಲೆಯನ್ನು ಸರಿಗಟ್ಟಲಾಗುವುದಿಲ್ಲ. ವಲ್ಲಭಭಾಯಿ ಪಟೇಲ್ ಪ್ರತಿಮೆಗೆಂದು ತಂದ ಕಬ್ಬಿಣವನ್ನೆಲ್ಲ ಅಲ್ಲಿ ಸುರಿಯಲಾಯಿತು. ಎಲ್ಲವೂ ಕೋಟಿನ ಮುಂದೆ ನಗಣ್ಯವಾದವು. ಈ ದೇಶದ ಅದಿರುಗಳನ್ನು, ಹಸಿರುಗಳನ್ನು, ಮರಳುಗಳನ್ನು...ಹೀಗೆ ಯಾವುದಕ್ಕೂ ನರೇಂದ್ರ ಮೋದಿಯವರ ಸೂಟು ಸರಿಗಟ್ಟುತ್ತಿಲ್ಲ.
ಅಷ್ಟರಲ್ಲಿ ಅಲ್ಲಿಗೆ ಅಂಬಾನಿ, ಅದಾನಿಗಳಾದಿಯಾಗಿ ನಿಜ ದೇಶಭಕ್ತರ ಪ್ರವೇಶವಾಯಿತು. ನರೇಂದ್ರ ಮೋದಿಯವರ ಸೂಟಿಗೆ ಸರಿಯಾದ ಬೆಲೆ ನೀಡುವವರಿಲ್ಲದೆ ದೇಶದ ಮಾನ ಹರಾಜಾಗುತ್ತಿರುವುದನ್ನು ಕಂಡು ತಕ್ಷಣ ಅವರು ಮಧ್ಯೆ ಪ್ರವೇಶಿಸಿದರು. ಅಂಬಾನಿ, ಅದಾನಿ ಸೂಟಿನ ಮೇಲೆ ಕೈ ಸ್ಪರ್ಶ ಮಾಡಿದ್ದೇ ಸೂಟು ಧನ್ಯವಾಯಿತು. ತಕ್ಷಣ ಅಮಿತ್ ಷಾ ಅವರು ಸೂಟಿಗಾಗಿ ದೇಶದ ಜನರು ಕೊಟ್ಟ ಎಲ್ಲ ಸಂಪತ್ತನ್ನು ಅಂಬಾನಿ, ಅದಾನಿಯಾದಿಗಳಿಗೆ ಒಪ್ಪಿಸಿ, ಸೂಟಿನ ಮರ್ಯಾದೆ ಉಳಿಸಿದ್ದಕ್ಕೆ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು.
ಮೇಲಿನ ಎಲ್ಲ ದೃಶ್ಯಗಳನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ನೇರವಾಗಿ ಅಮಿತ್ ಷಾ ಬಳಿಗೆ ಹಾರಿದ. ‘‘ಸಾರ್...ಇನ್ನು ಹರಾಜು ಹಾಕುವುದಕ್ಕೆ ಬೇರೇನೇನು ಇದೆ...’’ ಕಾಸಿ ಕೇಳಿದ.
ಅಮಿತ್ ಶಾ ಅವರು ತಮ್ಮ ಗಡ್ಡ ನೇವರಿಸುತ್ತಾ ಹೇಳಿದರು ‘‘ನೋಡ್ರಿ...ನಾವು ಗಾಂಧಿಯ ಚರಕವನ್ನು ಹರಾಜು ಹಾಕಿದೆವು. ಆದರೆ ಅದು ಒಂದು ರೂಪಾಯಿಯೂ ಬೆಲೆ ಬಾಳಲಿಲ್ಲ. ದೇಶ ಸಂಕಷ್ಟದಲ್ಲಿದೆ ಎಂದು ವಲ್ಲಭಭಾಯಿ, ವಿವೇಕಾನಂದರನ್ನೂ ಹರಾಜು ಹಾಕಿದೆವು. ಆದರೂ ವಿಶೇಷ ಬೆಲೆ ದಕ್ಕಲಿಲ್ಲ. ದೇಶದ ಅಭಿವೃದ್ಧಿಗೆ ದುಡ್ಡು ಸಾಲುವುದಿಲ್ಲ ಎಂದು ನಮ್ಮ ಸಂವಿಧಾನ, ನ್ಯಾಯಾಂಗ, ರಕ್ಷಣಾ ಇಲಾಖೆ ಎಲ್ಲವನ್ನೂ ಹರಾಜು ಹಾಕಿದೆವು. ಆದರೂ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದಷ್ಟು ದುಡ್ಡು ನಮಗೆ ಸಿಗಲಿಲ್ಲ. ಇದೀಗ ನರೇಂದ್ರ ಮೋದಿಯವರು ತಮ್ಮ ದೇಶಕ್ಕಾಗಿ ತಾವು ಧರಿಸಿದ ಕೋಟನ್ನೇ ಹರಾಜು ಹಾಕಿದ್ದಾರೆ...ಇದೀಗ ಇದಕ್ಕೆ ಭಾರೀ ಬೆಲೆ ಬಂದಿದೆ. ಇದರಿಂದಾಗಿ ನಮ್ಮ ಅಂಬಾನಿ, ಅದಾನಿ ಮೊದಲಾದವರು ಸಂತೋಷಗೊಂಡಿದ್ದಾರೆ. ದೇಶದ ಜನರು ತಮ್ಮ ತಮ್ಮ ಸಂಪತ್ತು, ಸೊತ್ತುಗಳನ್ನು ಈ ಸೂಟಿಗಾಗಿ ಒಪ್ಪಿಸಿರುವುದು ಅಂಬಾನಿಯವರಿಗೆ ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯವರು ಹಾಕಿದ ಇತರ ವಸ್ತ್ರ ಗಳನ್ನೂ ಹರಾಜು ಹಾಕಲಿದ್ದೇವೆ...’’
‘‘ಅಂದರೆ ಮೋದಿಯವರು ಇನ್ನು ಮುಂದೆ ವಸ್ತ್ರ ವಿಲ್ಲದೆಯೇ ವಿದೇಶ ಪ್ರಯಾಣ ಮಾಡಲಿದ್ದಾರೆಯೇ?’’ ಕಾಸಿ ಆತಂಕದಿಂದ ಕೇಳಿದ. ‘‘ಅವರಿಗೆ ವಸ್ತ್ರ ದ ಅಗತ್ಯವೇನೂ ಇಲ್ಲ. ಆದರೂ ಅವರು ಧರಿಸಿ ಎಸೆದ ವಸ್ತ್ರಗಳಿಗೆ ದೇಶವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹರಾಜಿನಲ್ಲಿ ಅದು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಇದರಿಂದಾಗಿ ದೇಶ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುತ್ತದೆ. ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದಕ್ಕಾಗಿ ನರೇಂದ್ರ ಮೋದಿಜಿ ಬಟ್ಟೆ ಧರಿಸುತ್ತಾರೆ. ಇನ್ನು ಮುಂದೆ ನರೇಂದ್ರ ಮೋದಿಯವರು ಧರಿಸಿ ಎಸೆದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಈ ಮೂಲಕ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಯೋಜನೆಯನ್ನು ಹಾಕಿಕೊಂಡಿದ್ದೇವೆ...’’
‘‘ಮುಂದೆ ಮೋದಿಯ ಯಾವ್ಯಾವ ರಿಸುಗಳನ್ನು ಹರಾಜು ಹಾಕಲಿದ್ದೀರಿ ಸಾರ್...’’ ಕಾಸಿ ಕೇಳಿದ.
‘‘ಮುಖ್ಯವಾಗಿ ಅವರ ಒಳಚೆಡ್ಡಿ ಮತ್ತು ಒಳಅಂಗಿಗಳಿಗೂ ಭಾರೀ ಬೇಡಿಕೆ ಇದೆ. ಅವರ ಒಳಚೆಡ್ಡಿ ಪುರಾತನ ಕಾಲದಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಧರಿಸಿರುವುದರಿಂದ ಅದು ಒಳಗೇ ಬಲವಾಗಿ ಅಂಟಿಕೊಂಡಿರುವ ಸಾಧ್ಯತೆ ಇದೆ. ಶಸಚಿಕಿತ್ಸೆಯ ಮೂಲಕ ಅವರ ದೇಹದಿಂದ ಅವರ ಒಳಚೆಡ್ಡಿಯನ್ನು ಬೇರ್ಪಡಿಸಿ ಅದನ್ನು ಹರಾಜು ಹಾಕಬೇಕು ಎಂದಿದ್ದೇವೆ...ಹಾಗೆಯೇ ಅವರು ಧರಿಸಿರುವ ಕೌಪೀನಕ್ಕೆ ಅಮೆರಿಕದ ಎನ್‌ಆರ್‌ಐಗಳು ಭಾರೀ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಹರಾಜಿನಲ್ಲಿ ಕೊಂಡು ದೇಶವನ್ನು ಉದ್ಧರಿಸುವ ಮಹಾ ಕನಸನ್ನು ಅವರು ಹೊಂದಿದ್ದಾರೆ....’’
ಅಷ್ಟರಲ್ಲಿ ಯಾರೋ ಒಂದು ಕೆಂಪು ಬಟ್ಟೆಯನ್ನು ಹಿಡಿದುಕೊಂಡು ಬಂದರು ‘‘ನೋಡಿ...ಇಲ್ಲಿ ಮೋದಿಯವರ ಕುರ್ಚಿಯನ್ನು ಒರೆಸುವ ಬಟ್ಟೆ ಇದೆ...ಇದನ್ನು ಹರಾಜು ಹಾಕಿ ಬಿಡಿ...’’
ಆ ಬಟ್ಟೆ ಕೆಂಪಗಿತ್ತು. ಅಮಿತ್ ಶಾ ಅದನ್ನು ಮೂಸಿ ನೋಡಿದರು ‘‘ಈ ಬಟ್ಟೆ ರಕ್ತದ ಪರಿಮಳ ಬರುತ್ತಿದೆಯಲ್ಲ...’’ ಎಂದು ಬಟ್ಟೆ ತಂದುಕೊಟ್ಟವನ ಮುಖ ನೋಡಿದರು.
ನೋಡಿದರೆ ಆಮ್ ಆದ್ಮಿ ನಾಯಕ ಕೇಜ್ರಿವಾಲ್. ‘‘ಅದು ಗುಜರಾತ್ ಹತ್ಯಾಕಾಂಡದ ರಕ್ತ. ಅವರು ಕುಳಿತ ಕುರ್ಚಿಯಲ್ಲಿ ಅಂಟಿದ್ದ ರಕ್ತವನ್ನು ಶುಚಿ ಮಾಡಿದ ಬಟ್ಟೆ ಇದು...’’ ಎನ್ನುತ್ತಾ ಕೇಜ್ರಿವಾಲ್ ಹಲ್ಲು ಕಿರಿದರು.
ಭೂತವನ್ನು ಕಂಡವರಂತೆ ಅಮಿತ್ ಶಾ ಕೈಯಲ್ಲಿದ್ದ ಕೆಂಪು ಬಟ್ಟೆಯನ್ನು ಎಸೆದವರೇ ‘‘ಅಂಬಾನೀಜಿ ಕಂಹಾಹೇ... ಅಧಾನಿಜೀ ಕಂಹಾಹೇ...’’ ಎನ್ನುತ್ತಾ ಸಂತೆಯಲ್ಲಿ ಹುಡುಕ ತೊಡಗಿದರು.
ರವಿವಾರ - ಫೆಬ್ರವರಿ -22-2015

ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ರವಿವಾರ ಮೇ ೨೫ ರಂದು ಪ್ರಕಟವಾದ ಬುಡಬುಡಿಕೆ
ದಿಲ್ಲಿ ಕಾಂಗ್ರೆಸ್‌ನೊಳಗೆ ಕಲರವ. ಸೋತ ಸಂಭ್ರಮವನ್ನು ಆಚರಿಸಿಕೊಳ್ಳಲು ‘ಆತ್ಮಾವಲೋಕನ ಸಭೆ’ಯನ್ನು ಸೋನಿಯಾಗಾಂಧಿ ಕರೆದಿರುವುದು ಗೊತ್ತಾಗಿ, ಮೇಡಂ ಅವರ ಪ್ರಮಾಣ ವಚನ ಸಭೆಯೋ ಎಂಬಂತೆ ಸೋತ ಕಾಂಗ್ರೆಸ್ ಮುಖಂಡರೆಲ್ಲ ಮೀಸೆಯ ಮಣ್ಣನ್ನು ಕೊಡವಿಕೊಂಡು ಸಭೆಗೆ ಹಾಜರಾದರು. ‘ಬಹುಶಃ 50 ಸೀಟ್ ಸಿಕ್ಕಿದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮನ್ನು ಕರೆದಿರಬಹುದು’’ ಎಂದು ದಿಗ್ಗಿ, ಕಪಿಲ್, ಅಝಾದ್ ಮೊದಲಾದವರೆಲ್ಲ ಗರಿಗರಿ ಖಾದಿಯನ್ನು ತೊಟ್ಟು ಹಾಜರಾಗಿದ್ದರು. ರಾಹುಲ್ ಅಂತೂ ಫಲಿತಾಂಶದಿಂದ ರೋಮಾಂಚನಗೊಂಡಿದ್ದರು. ಇಷ್ಟು ಸ್ಥಾನಗಳಾದರೂ ಸಿಕ್ಕಿದೆ ಎಂದರೆ ಅದರ ಅರ್ಥ ಇನ್ನೂ ನಮ್ಮ ಮೇಲೆ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದಲ್ಲವೆ? ಇದನ್ನು ನಾವು ಆಚರಿಸಬೇಕು. ಈ ಆಚರಣೆಗಾಗಿ ಅಮೆರಿಕ, ಲಂಡನ್, ಜರ್ಮನ್, ಫ್ರಾನ್ಸ್ ಪ್ರಧಾನಿಗಳಿಗೆ ಆಹ್ವಾನ ನೀಡಬೇಕು ಎಂದು ತಾಯಿಗೆ ಸಲಹೆ ನೀಡಿದ್ದ. ‘‘ಸುಮ್ಮನೆ ಹಿತ್ತಲಲ್ಲಿ ಹೋಗಿ ಆಟ ಆಡ್ಕೊಂಡಿರು. ಕಿರಿ ಕಿರಿ ಮಾಡ್ಬೇಡ...’’ ಎಂದು ಸೋನಿಯಾ ಮಗನ ತಲೆಗೆ ಎರಡು ಮೊಟಕಿದ್ದರು. ಆಟ ಆಡಲು ಕಾಂಗ್ರೆಸ್‌ನ್ನು ಕೊಡಬಾರದಿತ್ತು...ಎಲ್ಲವನ್ನೂ ಮುರಿದಿಕ್ಕಿದ್ದಾನೆ ಎಂದು ಸೋನಿಯಾ ಗೊಣಗಿದರು.
ಅಂತೂ ಆತ್ಮಾವಲೋಕನ ಸಭೆ ಆರಂಭವಾಯಿತು. ಅಷ್ಟರಲ್ಲಿ ಸೋನಿಯಾಗಾಂಧಿ ಮಾತು ಆರಂಭಿಸಿದರು ‘‘ಕಾಂಗ್ರೆಸ್ ತನ್ನ ಸೋಲಿನ ಕುರಿತಂತೆ ಆತ್ಮ ಅವಲೋಕನ ಮಾಡಲು ಈ ಸಭೆಯನ್ನು ಕರೆದಿದೆ...ಮೊತ್ತ ಮೊದಲು ನಾವು ಕಾಂಗ್ರೆಸ್‌ನ ಆತ್ಮವನ್ನು ಅವಲೋಕನ ಮಾಡಬೇಕು... ಮಿ. ದ್ವಿಗ್ವಿಜಯ್ ಸಿಂಗ್...ಎಲ್ಲಿದೆ ಕಾಂಗ್ರೆಸ್‌ನ ಆತ್ಮ. ಅದನ್ನು ಸಭೆಯ ಮುಂದೆ ತನ್ನಿ...’’
ಆಗಷ್ಟೇ ಹನಿಮೂನ್ ಮುಗಿಸಿಕೊಂಡು ಬಂದಿದ್ದ ದಿಗ್ವಿಜಯ್ ಕಂಗಾಲಾದರು. ‘‘ಆತ್ಮ...ಅದೂ ಅದೂ...ನಾನು ಕಾಂಗ್ರೆಸ್‌ಗೆ ಕಾಲಿಡುವಾಗಲೇ ಅದನ್ನು ರಾಜೀವ್‌ಗಾಂಧಿಯವರ ಕೈಗೆ ಕೊಟ್ಟಿದ್ದೆ. ಅದು ನಿಮ್ಮ ತಿಜೋರಿಯಲ್ಲಿ ಭದ್ರವಾಗಿರಬೇಕು...’’
ಸೋನಿಯಾ ಮೇಡಂ ಸಿಟ್ಟಾದರು ‘‘ನಾನು ಕೇಳುತ್ತಾ ಇರುವುದು ನಿಮ್ಮ ಮೆದುಳಿನ ಬಗ್ಗೆ ಅಲ್ಲ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ ಎಂದು ಕೇಳುತ್ತಿದ್ದೇನೆ. ತಿಜೋರಿಯಲ್ಲಿರುವುದು ನಿಮ್ಮ ಮೆದುಳು ಮಾತ್ರ. ಇಡೀ ಕಾಂಗ್ರೆಸ್ ಮುಖಂಡರ ಮೆದುಳು ನನ್ನ ತಿಜೋರಿಯಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ? ರಾಹುಲ್‌ನ ಕೈಗೆ ಸಿಗದ ಹಾಗೆ ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ಕೊಟ್ಟಿದ್ದೆನಲ್ಲ...ಇದೀಗ ನೋಡಿ...ಆತ್ಮಾವಲೋಕನ ಮಾಡಲು ಕರೆದ ಸಭೆಯಲ್ಲಿ ಕಾಂಗ್ರೆಸ್‌ನ ಆತ್ಮವೇ ಕಾಣುತ್ತಿಲ್ಲ....ಆತ್ಮ ಇಲ್ಲದೆ ಆತ್ಮಾವಲೋಕನ ನಡೆಸುವುದು ಹೇಗೆ?’’
‘‘ಮೇಡಂ...ನನಗೆ ವೀರಪ್ಪ ಮೊಯ್ಲಿಯವರ ಮೇಲೆಯೇ ಡೌಟು. ಕಾಂಗ್ರೆಸ್‌ನ ಆತ್ಮವನ್ನು ಅಂಬಾನಿಗೆ ಮಾರಿ ಅವರು ಚಿಕ್ಕಬಳ್ಳಾಪುರದಲ್ಲಿ ಗೆದ್ದದ್ದು ಅಂತ ನನ್ನ ಗೂಢಚಾರರು ಹೇಳಿದ್ದಾರೆ...’’
‘‘ನೀವು ಯಾರು? ಯಾವ ಲೋಕಸಭೆಯ ಎಂಪಿ ನೀವು?’’
‘‘ಅದೇ ಮೇಡಂ...ಎರಡು ಲಕ್ಷ ಓಟಿನಲ್ಲಿ ಸೋಲಿಸಿದ್ದು...’’
‘‘ಎರಡು ಲಕ್ಷ ಅಂತರದಲ್ಲಿ ಸೋಲಿಸಿದ್ದೇ...ಯಾರನ್ನು ಎಲ್ಲಿ?’’
‘‘ಅದೇ ಮೇಡಂ...ಮಂಗಳೂರಿನಲ್ಲಿ...ಎರಡು ಲಕ್ಷ ಓಟಿಗೆ ಸೋತದ್ದು ನಾನೇ...ಇಂದಿರಾಗಾಂಧಿಯ ಕಾಲದಲ್ಲಿ ನಾನು ಸಾಲಮೇಳಕ್ಕೆ ಫೇಮಸ್...ನಾನೇ ಜನಾರ್ದನಪೂಜಾರಿ...’’
ಸೋನಿಯಾಗೆ ಸಿಟ್ಟು ಒತ್ತರಿಸಿ ಬಂತು ‘‘ಇವರನ್ನು ಯಾರು ಒಳಗೆ ಬಿಟ್ಟದ್ದು...ತಕ್ಷಣ ಹೊರಗೆ ಹಾಕಿ....’’ ಎಂದದ್ದೇ ತಡ....ಭಾರತ ಸೇವಾದಳದ ಕಾರ್ಯಕರ್ತರು ಅವರನ್ನು ಎಳೆದುಕೊಂಡು ಹೋದರು.
‘‘ಆತ್ಮ ಎಲ್ಲಿದೆ...ಆತ್ಮ ಎಲ್ಲಿದೆ...ತಕ್ಷಣ ಉತ್ತರಿಸಿ. ಇಲ್ಲದಿದ್ದರೆ ಎಲ್ಲರನ್ನೂ ವಜಾ ಮಾಡಬೇಕಾಗುತ್ತದೆ...’’
‘‘ಅಣು ಒಪ್ಪಂದದ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಮನಮೋಹನ್ ಸಿಂಗ್ ಕಾಂಗ್ರೆಸ್‌ನ ಆತ್ಮವನ್ನು ಅಲ್ಲೇ ಬಿಟ್ಟು ಬಂದಿರಬೇಕು...ನೀವು ಒಮ್ಮೆ ಒಬಾಮ ಅವರಿಗೆ ಫೋನ್ ಮಾಡಿ ನೋಡಿ....’’ ಯಾರೋ ಆರೋಪಿಸಿದರು.
‘‘ಬಹುಶಃ ಕಲ್ಲಿದ್ದಲು ಗಣಿಯ ಒಳಗೆ ಇಣುಕಿ ನೋಡುವಾಗ ಅದರೊಳಗೆ ಬಿದ್ದಿರುವ ಸಾಧ್ಯತೆಯೇ ಜಾಸ್ತಿ...ಮನಮೋಹನ್ ಸಿಂಗ್ ಅವರನ್ನು ಒಮ್ಮೆ ಗಣಿಯ ಒಳಗೆ ಇಳಿಸಿ ನೋಡಿದರೆ ಸಿಕ್ಕಿದರೂ ಸಿಕ್ಕಬಹುದು...’’ ಅಯ್ಯರ್ ಹೇಳಿದರು.
‘‘ನನಗೆ ತಿಳಿದಿರುವ ಮಟ್ಟಿಗೆ ಅದನ್ನು ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದಲ್ಲಿ ಮುಲಾಯಂ ಜೊತೆ ಸೇರಿ ಬಿರಿಯಾನಿ ಮಾಡಿ ತಿಂದಿರಬೇಕು....’’
ಸಲ್ಮಾನ್ ಖುರ್ಷಿದ್ ಸಿಟ್ಟಾದರು ‘‘ನಾನು ಬಿರಿಯಾನಿ ಮಾಡಿದ್ದು ಮುಝಫ್ಫರ್ ನಗರದ ಅಲ್ಪಸಂಖ್ಯಾತ ಕುರಿಗಳನ್ನು ಕಡಿದು. ಕಾಂಗ್ರೆಸ್ ಆತ್ಮವನ್ನು ಬಿರಿಯಾನಿ ಮಾಡಿ ತಿನ್ನುವಷ್ಟು ಇನ್ನೂ ಕೆಟ್ಟು ಹೋಗಿಲ್ಲ....ಇಂದಿನ ಸಭೆಗೆ ಗೈರು ಹಾಜರಾಗಿದ್ದಾರಲ್ಲ ಚಿದಂಬರಂ...ಅವರಲ್ಲಿ ಕೇಳಿ...ಅವರು ಫೈನಾನ್ಸ್ ಮಿನಿಸ್ಟರಾಗಿದ್ದಾಗ ಕಾಂಗ್ರೆಸ್‌ನ ಆತ್ಮವನ್ನು ಒತ್ತೆಯಿಟ್ಟು ವಿಶ್ವಬ್ಯಾಂಕ್‌ನಿಂದ ಸಾಲ ತಂದಿರುವ ಸಾಧ್ಯತೆಯೂ ಇದೆ...’’
‘‘ಮೇಡಂ...ಅಸ್ಸಾಂನಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಗೊಗೊಯಿ ಶಿಲುಬೇಗೇರಿಸಿರುವ ಬಗ್ಗೆ ದಟ್ಟವಾಗಿ ವದಂತಿ ಹಬ್ಬಿದೆ. ಒಮ್ಮೆ ಅವರಲ್ಲಿ ವಿಚಾರಿಸಿ ನೋಡಿದರೂ ಆಗಬಹುದು...’’ ಇನ್ಯಾರೋ ಇನ್ನೊಂದು ಸಲಹೆ ನೀಡಿದರು.
‘‘ಯಾವುದಕ್ಕೂ ಪ್ರಿಯಾಂಕಾ ಮೇಡಮ್ ಅವರಲ್ಲೂ ವಿಚಾರಿಸುವುದು ಒಳ್ಳೆಯದು. ರಾಬರ್ಟ್ ವಾದ್ರಾ ಅವರ ತಿಜೋರಿಯಲ್ಲಿ ಹುಡುಕಿದರೆ ಕೆಲವೊಮ್ಮೆ ಸಿಕ್ಕಿದರೂ ಸಿಕ್ಕಿತು...’’ ಸೋನಿಯಾಗೆ ಅದು ಯಾರೋ ಭಿನ್ನಮತೀಯ ಎನ್ನುವುದು ಗೊತ್ತಾಗಿ ಬಿಟ್ಟಿತು. ಉತ್ತರಿಸುವುದಕ್ಕೇ ಹೋಗಲಿಲ್ಲ.
‘‘ನಾಡಿದ್ದು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಹುಡುಕೋಣ....ಅಲ್ಲಿ ಸಿಕ್ಕಿದರೂ ಸಿಕ್ಕೀತು...’’ ಇನ್ಯಾರೋ ತಲೆಗೆಟ್ಟ ಸಲಹೆ ನೀಡಿದರು. ವೀರಪ್ಪ ಮೊಯ್ಲಿ ಮಾತ್ರ ಇಂತಹ ಸಲಹೆ ನೀಡಲು ಸಾಧ್ಯ ಎಂದು ಸೋನಿಯಾ ಅರ್ಥ ಮಾಡಿಕೊಂಡರು.
‘‘ಪ್ರಧಾನಿ ಮೋದಿಗೆ ಹುಡುಕಿಕೊಡಲು ಮನವಿ ಸಲ್ಲಿಸೋಣ...’’ ಮಗದೊಬ್ಬ ಸಲಹೆ ನೀಡಿದರು. ಇದು ಮೈಸೂರಿನ ಎಚ್. ವಿಶ್ವನಾಥ್ ಇರಬೇಕು ಎಂದು ಸೋನಿಯಾ ಊಹಿಸಿದರು.
‘‘ಬೇಡ ಮೇಡಂ...ನಾವೆಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡೋಣ....ನಮ್ಮ ಕಾಂಗ್ರೆಸ್‌ನ ಆತ್ಮವನ್ನು ಮೋದಿ ಬಳಗ ಕದ್ದುಕೊಂಡಿದೆ. ಆದುದರಿಂದ ಮೋದಿ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸೋಣ....’’ ಸೋನಿಯಾ ಸಿಟ್ಟಿನಿಂದ ತಲೆಯೆತ್ತಿ ನೋಡಿದರೆ ದಿಗ್ವಿಜಯ್ ಸಿಂಗ್. ಸೋನಿಯಾ ನಿಟ್ಟುಸಿರಿಟ್ಟು.
ಅಷ್ಟರಲ್ಲಿ ‘‘ಮೇಡಂ...’’ ಎಂಬ ಸದ್ದು. ಇಡೀ ಸಭೆ ಬೆಚ್ಚಿ ಬಿದ್ದಿತು. ಮನಮೋಹನ್ ಸಿಂಗ್ ಬಾಯಿ ತೆರೆದಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಅರೆ! ಮನಮೋಹನ್ ಸಿಂಗ್ ಮಾತನಾಡುತ್ತಿದ್ದಾರೆ....ಮೊತ್ತ ಮೊದಲ ಬಾರಿಗೆ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮಾತನಾಡಲು ಬಿಟ್ಟರು ‘‘ಮೇಡಂ...ಕಾಂಗ್ರೆಸ್‌ನ ಆತ್ಮ ಈಗ ಅಲ್ಲ 1992ರಲ್ಲೇ ಕಾಣೆಯಾಗಿದೆ....’’
‘‘ಹೌದಾ...ಹೇಗೆ...’’
‘‘ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೈಯಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಜೋಪಾನ ಮಾಡಲು ನೀವೇ ತಾನೆ ಕೊಟ್ಟದ್ದು? ಆದರೆ ಬಾಬರೀ ಮಸೀದಿ ಆ ಆತ್ಮದ ಮೇಲೆ ಬಿದ್ದು ಬಿಟ್ಟಿತು. ಅದೀಗ ಕಾಣೆಯಾಗಿದೆ. ಬಾಬರೀ ಮಸೀದಿಯ ಧೂಳಿನಲ್ಲಿ ನಾವು ಆ ಆತ್ಮವನ್ನು ಹುಡುಕಬೇಕಾಗಿದೆ...’’
ರವಿವಾರ - ಮೇ -25-2014
ವಾರ್ತಾ ಭಾರತಿ ಕನ್ನಡ ದೈನಿಕದ ಮೇ ೧೮ ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ
ಅಂದು ಪತ್ರಕರ್ತ ಎಂಜಲು ಕಾಸಿ ಎಂದಿಗಿಂತ ತುಸು ಬೇಗ ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಎದ್ದಿದ್ದ. ಅಂದಿನ ಬೆಳಗ್ಗೆ ಎಂದಿನಂತಿಲ್ಲ ಅನ್ನಿಸಿತು. ಅನುಮಾನ ಬಂದು, ಸೀದಾ ಅಂಗಳಕ್ಕೆ ಬಂದ. ಮೇಲೆ ನೋಡಿದರೆ ಮಾವಿನ ಮರದಲ್ಲಿ ಹಲಸಿನ ಗಾತ್ರದಷ್ಟು ದೊಡ್ಡ ಮಾವುಗಳು ನೇತಾಡುತ್ತಿದ್ದವು. ಕಾಸಿ ಬೆಚ್ಚಿ ಬಿದ್ದ. ಅರೆ! ಹಲಸಿನ ಗಾತ್ರ ಮಾವು! ಜೋರಾಗಿ ಹೆಂಡತಿಯನ್ನು ರಕ್ಷಣೆಗೆಂದು ಕೂಗಿದ ‘‘ಸೂಸಿ...ಸೂಸಿ...ಇಲ್ಲಿ ಬಾ...ಬೇಗ ಬಾ...’’
ಸೂಸಿ ಒಳಗಿನಿಂದ ಓಡಿ ಬಂದಳು ‘‘ಏನಾಯ್ತು...?’’ ಅಚ್ಚರಿಯಿಂದ ಕೇಳಿದಳು.
‘‘ಆಗುವುದೇನು, ಮರದಲ್ಲಿ ನೋಡು?’’ ಎಂದು ಕೇಳಿದ.
ಸೂಸಿ ನಿಟ್ಟುಸಿರಿಟ್ಟಳು ‘‘ಅಷ್ಟೇಯ? ನಿಮಗಿನ್ನೂ ಗೊತ್ತಿಲ್ಲವಾ? ಪತ್ರಕರ್ತರಾಗಿ ಹತ್ತು ಗಂಟೆಗೆ ಎದ್ದರೆ ನಿಮಗೆ ಗೊತ್ತಾಗೋದು ಹೇಗೆ? ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ...ಅಭೂತಪೂರ್ವವಾಗಿ ನರೇಂದ್ರ ಮೋದಿ ಗೆದ್ದಿದ್ದಾರೆ. ಆದುದರಿಂದ ಇವತ್ತಿನಿಂದ ಮಾವಿನ ಕಾಯಿಗಳೆಲ್ಲ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ...’’ ಸೂಸಿ ಹೇಳಿದಳು.
‘‘ಅಲ್ಲ ಕಣೆ...ಅದಕ್ಕೂ ಇದಕ್ಕೂ ಏನು ಸಂಬಂಧ...’’ ಕಾಸಿ ಕೇಳಿದ.
‘‘ಅಭಿವೃದ್ಧಿ ಕಣ್ರೀ....ಅಭಿವೃದ್ಧಿ. ಮೋದಿ ಅಧಿಕಾರಕ್ಕೆ ಬಂದದ್ದೇ ಅಭಿವೃದ್ಧಿ ಆಗ್ತಾ ಇದೆ...ಇದೀಗ ಗೆದ್ದದ್ದಷ್ಟೇ. ಅಷ್ಟರಲ್ಲಿ ಮಾವು ಹೆದರಿ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ. ನಮ್ಮ ಹೆಂಟೆ ಪಾಪ ರುಬ್ಬು ಕಲ್ಲಿನಷ್ಟು ದೊಡ್ಡ ಮೊಟ್ಟೆ ಇಟ್ಟು ಸತ್ತೇ ಹೋಗಿದೆ...ಎಲ್ಲ ಮೋದಿ ಮಹಾತ್ಮೆ ಕಣ್ರೀ....’’
ಕಾಸಿ ವಿಸ್ಮಯಗೊಂಡ. ಆಕಾಶವನ್ನು ನೋಡಿದರೆ ಅಲ್ಲಿ ಕೇಸರಿ ಸೂರ್ಯ. ಮನೆಯ ಮುಂದೆ ನೋಡಿದರೆ ವಿಮಾನ ನಿಲ್ದಾಣ...ಮೆಟ್ರೋರೈಲು ಕಣ್ಮುಂದೆಯೇ ಧಡ್ ಧಡ್ ಎಂದು ಹೋಗುತ್ತಿದೆ...’’
ಒಳಗೆ ಬಂದ. ಅಷ್ಟರಲ್ಲಿ ಎಂಟು ವರ್ಷದ ಮಗ ಭಾರತದಲ್ಲಿ 40 ರಾಜ್ಯಗಳಿವೆ....’’ ಎಂದು ಓದುತ್ತಿದ್ದ. ಅರೇ! ನಲವತ್ತು ರಾಜ್ಯಗಳು ಯಾವಾಗ ಸೃಷ್ಟಿಯಾಯಿತು? ಕಾಸಿಗೆ ಅಚ್ಚರಿಯಾಯಿತು ‘‘ಮಗನೇ ದೇಶದಲ್ಲಿ 40 ರಾಜ್ಯ ಅಂತ ಯಾರು ಹೇಳಿಕೊಟ್ಟಿರೋದು....’’
‘‘ಅಪ್ಪಾ ಮೋದಿ ಗೆದ್ದರೆ ಪಕ್ಕದ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಭಾರತಕ್ಕೆ ಸೇರತ್ತೆ ಎಂದು ಮೇಷ್ಟ್ರು ಹೇಳುತ್ತಿದ್ದರು. ಆ ಲೆಕ್ಕದಲ್ಲಿ ಭಾರತದ ರಾಜ್ಯಗಳು ಜಾಸ್ತಿ ಆಗಿವೆ ಅಪ್ಪ. ಇವತ್ತು ಮೋದಿ ಗೆದ್ದಿರೋದರಿಂದ ಪಾಕಿಸ್ತಾನ ‘‘ನಮ್ಮನ್ನು ಭಾರತಕ್ಕೆ ಸೇರಿಸ್ಕೊಳ್ಳಿ’’ ಅಂತ ಘೋಷಿಸಿದೆ....’’
‘‘ಹೌದಾ...’’ ಎಂದು ಒಳ ಹೋಗಿ ಮನೆಯ ಕಪಾಟು ತೆರೆದು ನೋಡಿದರೆ ಅದರ ತುಂಬಾ ರಾಶಿ ರಾಶಿ ನೋಟುಗಳು....‘‘ಸೂಸಿ....’’ ಮತ್ತೆ ಕಾಸಿ ಚೀರಿದ.
ಸೂಸಿ ಓಡಿ ಬಂದಳು. ‘‘ಏನ್ರೀ...ಅದು...’’ ಕೇಳಿದಳು.
ಕಾಸಿ ತೆರೆದ ಕಾಪಾಟಿನ ಮುಂದೆ ಸ್ತಂಭೀಭೂತನಾಗಿ ನಿಂತಿದ್ದ. ಸೂಸಿಗೆ ಅರ್ಥವಾಯಿತು ‘‘ಓ ಅದಾ...ನಿಮಗೆ ಇನ್ನೂ ವಿಷಯ ಗೊತ್ತಿಲ್ವಾ....ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣವನ್ನೆಲ್ಲ ಅಲ್ಲಿನ ಬ್ಯಾಂಕಿನ ಮ್ಯಾನೇಜರ್‌ಗಳು ನರೇಂದ್ರ ಮೋದಿಯ ಪಾದ ಬುಡಕ್ಕೆ ತಂದು ಸುರಿದಿದ್ದಾರಂತೆ...ಅದನ್ನು ಮೋದಿಯವರು ಇಡೀ ದೇಶಕ್ಕೆ ಹಂಚಿದ್ದಾರೆ. ನಮ್ಮ ಪಾಲಿನದ್ದನ್ನು ಈಗಷ್ಟೇ ಬಿಜೆಪಿಯ ಸ್ಥಳೀಯ ಮುಖಂಡರು ತಂದು ಕೊಟ್ಟರು...ಇದರಲ್ಲಿ ನಮ್ಮ ಪಾಲಿನ ಹತ್ತು ಕೋಟಿ ರೂಪಾಯಿ ಇದೆ ಗೊತ್ತಾ...’’
ಕಾಸಿಗೆ ತಲೆ ಗಿರ್ರೆಂದಿತು. ನೇರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಮನೆಯ ಹೊರಗೆ ಬರುವಷ್ಟರಲ್ಲಿ ಒಂದಿಷ್ಟು ಜನ ಸಾಲು ಸಾಲಾಗಿ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದರು. ‘‘ಯಾರ್ರೀ ನೀವು? ಯಾಕೆ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದೀರಿ?’’ ಕಾಸಿ ಕೇಳಿದ.
‘‘ನಾವು ಬಾಂಗ್ಲಾ ವಲಸಿಗರು. ಮೋದಿ ಗೆದ್ದಿದ್ದಾರಲ್ಲ. ಅವರು ನಮಗೆ ಗಡುವು ನೀಡಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ಮೊದಲು ನಾವೆಲ್ಲ ಬಾಂಗ್ಲಾಕ್ಕೆ ವಾಪಾಸ್ ಹೋಗುತ್ತಿದ್ದೇವೆ....ಬೇಗ ಟ್ರೈನ್ ಹಿಡೀಬೇಕು...’’
ಬ್ಲಾಂಗ್ಲಾ ದೇಶಿಯರೆಲ್ಲ ವಲಸೆ ಹೋಗಿರುವುದರಿಂದ ಬೆಂಗಳೂರು ಬಣ ಬಣ ಅನ್ನುತ್ತಿತ್ತು. ಎಲ್ಲಿ ನೋಡಿದರೂ ಖಾಲಿ ಖಾಲಿ ಜಾಗ. ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಬಹುದು....ಕಾಸಿ ರೋಮಾಂಚನಗೊಂಡ.
‘‘ಮಗನಿಗೆ ಹೊಸ ಅಟ್ಲಾಸ್ ತಂದು ಕೊಡಬೇಕು. ಈಗ ಇರುವ ಭಾರತದಲ್ಲಿ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಬೇರೆ ಬೇರೆ ಇವೆ. ಇನ್ನು ಮುಂದೆ ಅಖಂಡ ಭಾರತವಾಗಿರುವುದರಿಂದ ಅಟ್ಲಾಸ್ ಬದಲಿಸಬೇಕಾಗುತ್ತದೆ...’’ ಎಂದು ಯೋಚಿಸಿ ಅಟ್ಲಾಸ್ ಅಂಗಡಿಗೆ ಹೋಗಿ ಮೋದಿ ಸರಕಾರದ ಅಟ್ಲಾಸ್ ಪುಸ್ತಕ ತೆಗೆದುಕೊಂಡ.
ಮನೆಗೆ ವಾಪಾಸ್ ಬಂದು ಟಿವಿ ಆನ್ ಮಾಡಿ ಕ್ರಿಕೆಟ್ ನೋಡಿದರೆ ಅಲ್ಲಿ ಭಾರತೀಯ ಆಟಗಾರರು ಲಕ್ಷಾಂತರ ರನ್ ಮಾಡಿದ್ದಾರೆ. ಮತ್ತು ಧೋನಿ ಹೇಳುತ್ತಿದ್ದಾನೆ ‘‘ನಾವು ಬರೇ ಹತ್ತು ಓವರ್‌ನಲ್ಲಿ ಒಂದು ಲಕ್ಷ ರನ್ ಮಾಡಲು ಮೋದಿ ಅಲೆಯೇ ಕಾರಣ. ಮುಂದಿನ ದಿನಗಳಲ್ಲಿ ನಾವು ಕೋಟ್ಯಂತರ ರನ್‌ಗಳನ್ನು ಮಾಡಲಿದ್ದೇವೆ. ಬಿಸಿಸಿಐ ಅಧ್ಯಕ್ಷರಾಗಿ ಅಮಿತ್ ಶಾ ಏನಾದರೂ ಆಯ್ಕೆಯಾದರೆ, ರನ್ನಿನ ಹೊಳೆಯಲ್ಲಿ ದೇಶವನ್ನು ಮುಳುಗಿಸಲಿದ್ದೇವೆ. ರನ್‌ಗಳನ್ನೇ ಅಮೆರಿಕ, ಚೀನಾ, ಇಂಗ್ಲೆಂಡ್‌ಗಳಿಗೆ ಮಾರಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ...’’
ಬಾಯಗಲಿಸಿ ಕಾಸಿ ಅದನ್ನೇ ನೋಡಿದ. ಮಧ್ಯಾಹ್ನ ನೋಡಿದರೆ ಸೂಸಿ ಬಿರಿಯಾನಿ ಮಾಡಿದ್ದಳು. ನೋಡಿದರೆ ರನ್‌ಗಳ ಬಿರಿಯಾನಿ.! ‘‘ಹೌದು ಕಣ್ರೀ...ಕ್ರಿಕೆಟ್‌ನಲ್ಲಿ ಈ ಭಾರಿ ಧೋನಿ ಸಂಗ್ರಹಿಸಿದ ರನ್‌ಗಳಿಂದ ಬಿರಿಯಾನಿ ಮಾಡಿದ್ದೇನೆ ರುಚಿ ನೋಡಿ ಹೇಳಿ...ರಾತ್ರಿಗೆ ವಿರಾಟ್ ಕೊಹ್ಲಿ ಅವರು ಸಂಗ್ರಹಿಸಿದ ರನ್‌ಗಳಿಂದ ಪಲಾವ್ ಮಾಡಲಿದ್ದೇನೆ....’’ ಕಾಸಿ ಬಟ್ಟಲನ್ನೇ ಅಚ್ಚರಿಯಿಂದ ನೋಡಿದ.
‘‘ಅಕ್ಕಿಯಿಂದ ಏನಾದರೂ ಐಟಂ ಮಾಡಬಾರದೆ...?’’ ಕಾಸಿ ಪತ್ನಿಗೆ ಕೇಳಿದ. ‘‘ಪ್ರಿಂಟರ್ ಸರಿಯಿಲ್ಲ ಕಣ್ರೀ...’’ ಸೂಸಿ ಉತ್ತರಿಸಿದಳು. ಪ್ರಿಂಟರ್‌ಗೂ ಅಕ್ಕಿಗೂ ಏನು ಸಂಬಂಧ?
‘‘ಅದೇ ಕಣ್ರೀ...ಮೋದಿ ಅಭಿವೃದ್ಧಿಯಲ್ಲಿ ಅಕ್ಕಿ ಗದ್ದೆಯಲ್ಲಿ ಬೆಳೆಯೋದಿಲ್ಲ. ಕಂಪ್ಯೂಟರ್‌ನಲ್ಲಿ ಕ್ಲಿಕ್ ಮಾಡಿದ್ರೆ ಪ್ರಿಂಟರ್‌ನಲ್ಲಿ ದರದರಾಂತ ಅಕ್ಕಿ ಸುರಿಯತ್ತೆ...ಪ್ರಿಂಟರ್ ಸರಿಯಾದ ತಕ್ಷಣ ನಿಮಗೆ ಬೇಕಾದ ಅಕ್ಕಿಯಿಂದ ಬೇಕಾದ ರೊಟ್ಟಿ ಮಾಡಿ ಕೊಡುವಾ...’’
‘‘ಅಕ್ಕಿ ಕಂಪ್ಯೂಟರ್‌ನಲ್ಲಿ ಮಾಡೋದಾದ್ರೆ...ದೇಶದ ರೈತರೆಲ್ಲ ಏನು ಮಾಡುತ್ತಿದ್ದಾರೆ...’’ ಕಾಸಿ ಕೇಳಿದ.
‘‘ಮಾಡೋದೇನು...ರೈತರನ್ನೆಲ್ಲ ನಮ್ಮ ಮೋದಿ ಸಾಹೇಬ್ರು ಪ್ರತಿ ಊರಿನ ಮಧ್ಯೆ ನಿಲ್ಲಿಸಿದ್ದಾರೆ....’’
‘‘ಅಂದ್ರೆ...ಊರು ಕಾಯೋಕಾ?’’
‘‘ಊರು ಕಾಯೋದೇನು ಬಂತು ಮಣ್ಣು...ಯಾವಾಗ ಮೋದಿ ಆಯ್ಕೆಯಾದರೋ ಆಗಲೇ ಅಳಿದುಳಿತ ರೈತರೆಲ್ಲ ನೇಣು ಹಾಕಿಕೊಂಡರು. ಮೋದಿ ಅಭಿವೃದ್ಧಿಯ ಭಾರತದಲ್ಲಿ ರೈತರಿರೋದು ಅವಮಾನ ಅಲ್ವಾ? ಅದಕ್ಕೆ. ರೈತರ ತ್ಯಾಗಕ್ಕಾಗಿ ಪ್ರತಿ ಊರಿನ ಮಧ್ಯೆ ಒಬ್ಬೊಬ್ಬ ರೈತರ ಬೃಹತ್ ಉಕ್ಕಿನ ಪ್ರತಿಮೆಯನ್ನು ಮೋದಿ ನಿರ್ಮಿಸಲಿದ್ದಾರೆ. ಹಾಗೆಯೇ ದಿಲ್ಲಿಯಲ್ಲಿ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ದೊಡ್ಡ ರೈತನ ಪ್ರತಿಮೆಯನ್ನು ನಿರ್ಮಿಸಲಿದ್ದಾರಂತೆ. ಈ ಪ್ರತಿಮೆಗೆ ಗುಜರಾತ್‌ನ ಅದಾನಿ ಮತ್ತು ಮುಂಬಯಿಯ ಅಂಬಾನಿ ದುಡ್ಡು ಹಾಕ್ತಾರಂತೆ....’’
ಸ್ವಲ್ಪ ಹೊತ್ತು ತಡೆದು ಸೂಸಿ ಹೇಳಿದಳು ‘‘ನೋಡ್ರಿ...ಬೇಗ ಬೇಗ ಊಟ ಮಾಡಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಪಾಕಿಸ್ತಾನದ ಜೊತೆಗೆ ಮೋದಿ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ಎಲ್ಲವನ್ನೂ ನೇರ ಪ್ರಸಾರ ಮಾಡುತ್ತಾರೆ...ದೇಶದ ಎಲ್ಲೇ ಕೋಮುಗಲಭೆ ನಡೆದರೂ ಅದನ್ನು ಮೋದಿ ಆಡಳಿತದಲ್ಲಿ ನೇರ ಪ್ರಸಾರವಂತೆ...ಟಿವಿ ಸೀರಿಯಲ್ ನೋಡಿ ಬೋರ್ ಹೊಡೆದಿದೆ. ಇನ್ನೇನಿದ್ದರೂ ಯುದ್ಧ, ಗಲಭೆಗಳನ್ನೇ ಲೈವ್ ಆಗಿ ನೋಡಿ ಮಜಾ ಪಡೆಯಬಹುದು...’’
ಕಾಸಿ ತನ್ನೆರಡು ಕಿವಿಗಳನ್ನು ಮುಚ್ಚಿ ‘‘ನಿಲ್ಲಿಸೂ.....’’ ಚೀರಿದ. ಅಷ್ಟರಲ್ಲಿ ಪತ್ನಿ ಕೂಗೋದು ಕೇಳಿಸಿತು ‘‘ಬೆಳಗಾಯಿತು ಎದ್ದೇಳ್ರೀ....ಅದೇನು ನಿದ್ದೆ ಕಣ್ಣಲ್ಲಿ ನಿಲ್ಲಿಸು ಅಂತ ಬೊಬ್ಬೆ ಹೊಡೀತೀರಿ...ಬನ್ನಿ...ಇವತ್ತು ಮೇ 16. ಫಲಿತಾಂಶ ಇನ್ನೇನು ಹೊರ ಬೀಳತ್ತೆ’’
ಕಾಸಿ ಕಣ್ಣು ಬಿಟ್ಟ ‘‘ಹಾಗಾದ್ರೆ...ನಾನು ನೋಡಿದ್ದು, ಕೇಳಿದ್ದು ಎಲ್ಲ ಕನಸಾ?’’ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಪತ್ನಿ ಸೂಸಿ ಜೋರಾಗಿ ಕೂಗಿ ಹೇಳಿದಳು ‘‘ರೀ...ಮೋದಿಗೆ ಎಲ್ಲ ಕಡೆ ವಿಜಯ ಸಾಧಿಸ್ತಾ ಇದ್ದಾರೆ...’’
ಪತ್ರಕರ್ತ ಎಂಜಲು ಕಾಸಿಗೆ ಇದು ಕಷ್ಟಕಾಲ. ಯಾಕೆಂದರೆ ಆತನ ಐದು ವರ್ಷದ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದ ಸಮಯ ಬಂದಿದೆ. ಹಲವು ಶಾಲೆಗಳಿಗೆ ಈಗಾಗಲೇ ಭೇಟಿ ಮಾಡಿ ಬಸವಳಿದಿದ್ದ. ಮುಖ್ಯವಾಗಿ ಪತ್ರಕರ್ತ ಎಂಜಲು ಕಾಸಿಯ ದೊಡ್ಡ ಸಮಸ್ಯೆಯೇ ಅವನಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ತನಗೆ ಗೊತ್ತಿರುವ ಕನ್ನಡದಲ್ಲಿ ಅದೆಷ್ಟೋ ಇಂಟರ್ಯೂಗಳನ್ನು ಮಾಡಿದ ಪತ್ರಕರ್ತ ಎಂಜಲು ಕಾಸಿ ಇದೀಗ ತಾನೇ ಇಂಟರ್ಯೂ ಬರೆಯಬೇಕಾದ ಪರಿಸ್ಥಿತಿ.
ಅದು ಹೇಗೋ ಒಂದು ಖಾಸಗಿ ಶಾಲೆಯಲ್ಲಿ ಕಾಂಪೌಂಡ್‌ನೊಳಗೆ ಪ್ರವೇಶ ಸಿಕ್ಕಿತು. ರ್ಯಾಪಿಡೆಕ್ಸ್ ಪುಸ್ತಕದ ಸಹಾಯದಿಂದ ಹರುಕು ಮುರುಕು ಇಂಗ್ಲಿಷ್ ಕಲಿತು, ಶಾಲೆಯ ವಾಚ್‌ಮೆನ್ ಜೊತೆಗೆ ಇಂಗ್ಲಿಷ್‌ನಲ್ಲಿ ಅನುಮತಿ ಕೇಳಿದ್ದ. ಇಂಗ್ಲಿಷ್ ಕಿವಿಗೆ ಬಿದ್ದದ್ದೇ ವಾಚ್‌ಮ್ಯಾನ್ ತಕ್ಷಣ ಒಳಗೆ ಬಿಟ್ಟ. ಬರೇ ಕಾಂಪೌಂಡ್ ದಾಟಿದರೆ ಮುಗಿಯುತ್ತದೆಯೆ, ಜಗಲಿ ಹತ್ತಬೇಕು. ಅಲ್ಲಿಂದ ಶಾಲೆಯ ಒಳಗೆ ಪ್ರವೇಶ ಪಡೆಯಬೇಕು. ಅಲ್ಲಿಂದ ಪ್ರಿನ್ಸಿಪಾಲ್ ರೂಂ ಮುಟ್ಟಬೇಕು. ಇಷ್ಟೆಲ್ಲ ಸಾಹಸವನ್ನು ಅದು ಹೇಗೋ ಮಾಡಿ ಮುಗಿಸಿದ. ಅಷ್ಟರಲ್ಲಿ ಪ್ರಿನ್ಸಿಪಾಲ್ ತಮ್ಮ ಅಮೆರಿಕನ್ ಇಂಗ್ಲಿಷ್‌ನಲ್ಲಿ ಒದರಿದರು ‘‘ಮಿ. ಕಾಸಿ....ನಿಮಗೆ ಇಂಗ್ಲಿಷ್ ಬಂದರೆ ಸಾಲದು. ನಿಮಗೆ ಕನ್ನಡ ಗೊತ್ತಿರಬಾರದು. ನಮ್ಮ ಶಾಲೆಯ ಒಬ್ಬ ಎಲ್‌ಕೆಜಿ ವಿದ್ಯಾರ್ಥಿಯ ತಂದೆಗೆ ಕನ್ನಡ ಗೊತ್ತಿದೆ ಎನ್ನುವುದು ನಮ್ಮ ಶಾಲೆಗೆ ಶೇಮ್ ಶೇಮ್ ಪಪ್ಪಿ ಶೇಮ್...ಗೊತ್ತಾ?’’
ಕಾಸಿ ಹಣೆ ಒರೆಸಿಕೊಂಡು, ತನ್ನ ರ್ಯಾಪಿಡೆಕ್ಸ್ ಇಂಗ್ಲಿಷ್‌ನಲ್ಲಿ ಹೇಳಿದ ‘‘ನನಗೆ ಕನ್ನಡ ಗೊತ್ತೇ ಇಲ್ಲ. ಕನ್ನಡ ಯಾವ ರಾಜ್ಯದ ಭಾಷೆ ಎನ್ನುವುದೂ ಗೊತ್ತಿಲ್ಲ...’’
ಪ್ರಿನ್ಸಿಪಾಲರಿಗೆ ಖುಷಿಯಾಯಿತು. ‘‘ನಿಮ್ಮ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದರೆ ನೀವು ಪರೀಕ್ಷೆ ಬರೆದು ಪಾಸಾಗಬೇಕು. ಹಾಗಾದಲ್ಲಿ ಮಾತ್ರ...’’
ಎಲ್ಲ ಪರೀಕ್ಷೆಗಳು ಮುಗಿಯಿತು ಎಂದರೆ ಇದೀಗ ಮತ್ತೆ ಹೊಸದಾಗಿ ಪರೀಕ್ಷೆ ಶುರುವಾಗಿದೆಯಲ್ಲ ಎಂದು ಕಾಸಿ ಕಂಗಾಲಾದ. ‘‘ಸಾರ್...ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅಂತ...ನನ್ನ ಮಗನನ್ನು ಸೇರಿಸಬೇಕಾದರೆ ನನಗೆ ಯಾಕೆ ಬರೆ?’’
ಪ್ರಿನ್ಸಿಪಾಲ್ ಕಾಸಿಯ ಹರುಕು ಮುರುಕು ಇಂಗ್ಲಿಷ್‌ನ್ನು ಮೆಚ್ಚಿಕೊಂಡರು. ‘‘ನೋಡಿ...ಪರೀಕ್ಷೆ ನಿಮಗೆ ಮಾತ್ರ ಅಲ್ಲ, ನಿಮ್ಮ ಮಗುವಿಗೂ ಪರೀಕ್ಷೆಯಿದೆ. ಮೊದಲು ನಿಮಗೆ ಪರೀಕ್ಷೆ ಇರತ್ತೆ. ಅದರಲ್ಲಿ ನೀವು ಡಿಸ್ಟಿಂಕ್ಷನ್ ಪಡೆದರೆ, ಮತ್ತೆ ನಿಮ್ಮ ಪತ್ನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತದೆ. ಅವರೂ ಕೂಡ ಅದರಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದರೆ ಮತ್ತೆ ನಿಮ್ಮ ಮಗುವಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ನಿಮ್ಮ ಮಗು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದರೆ ಬಳಿಕ ನೀವು ನೀಡುವ ಸೂಟ್‌ಕೇಸ್ ಭಾರವನ್ನು ತೂಕ ಮಾಡಲಾಗುತ್ತದೆ. ಅದು ನಿಮ್ಮ ಮಗುವಿನ ಭಾರಕ್ಕೆ ಸರಿಯಾಗಿದ್ದರೆ ನಿಮ್ಮ ಮಗುವಿಗೆ ಎಲ್‌ಕೆಜಿಯಲ್ಲಿ ಅಡ್ಮಿಶನ್ ನೀಡಲಾಗುತ್ತದೆ...’’
‘‘ಮಗು ಇನ್ನೂ ಶಾಲೆಗೆ ಸೇರಿಯೇ ಇಲ್ಲ...ಪರೀಕ್ಷೆ ಯಾವುದರ ಬಗ್ಗೆ?’’ ಕಾಸಿ ಅಚ್ಚರಿಯಿಂದ ಕೇಳಿದ.
ಪ್ರಿನ್ಸಿಪಾಲ್ ನಕ್ಕ ‘‘ನಿಮಗಿನ್ನೂ ಇದರ ಬಗ್ಗೆ ಏನೂ ಗೊತ್ತಿಲ್ಲ ಎಂದಾಯಿತು. ಹೀಗೆ ಆದರೆ ನೀವು ಪರೀಕ್ಷೆ ಪಾಸಾದ ಹಾಗೆಯೆ. ನೋಡಿ...ನಿಮ್ಮ ಮಗುವಿಗೆ ಹತ್ತನೆ ತರಗತಿಯ ಹತ್ತು ಪ್ರಶ್ನೆಗಳು, ಪಿಯುಸಿಯ 12 ಪ್ರಶ್ನೆಗಳು ಮತ್ತು ಸ್ನಾತಕೋತ್ತರ ಪದವಿಯ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ನಿಮ್ಮ ಮಗು ಸಲೀಸಾಗಿ ಉತ್ತರಿಸಿದರೆ ಎಲ್‌ಕೆಜಿಗೆ ಸೇರಿಸಲಾಗುತ್ತದೆ...’’
‘‘ಇನ್ನೂ ಎಲ್‌ಕೆಜಿಗೆ ಸೇರುವ ಮಗುವಿಗೆ ಸ್ನಾತಕೋತ್ತರ ಪದವಿಯ ಪ್ರಶ್ನೆಯೆ?’’ ಕಾಸಿ ಸಿಡಿಲು ಬಡಿದ ಮರದಂತಾದ.
‘‘ಹೌದು ಕಣ್ರೀ...ನಮ್ಮ ಶಾಲೆ ಅತ್ಯುತ್ತಮ ಫಲಿತಾಂಶಕ್ಕೆ ಹೆಸರಾಗಿರುವ ಶಾಲೆ. ಹತ್ತು ರ್ಯಾಂಕುಗಳನ್ನು ಪಡೆದಿರುವ ಶಾಲೆ. ಎಲ್ಲ ಮಕ್ಕಳೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿರುವ ಶಾಲೆ...ಆದುದರಿಂದ ಇಷ್ಟೆಲ್ಲ ಪ್ರಶ್ನೆಗಳಿಗೆ ನಿಮ್ಮ ಮಗು ಸರಿಯಾದ ಉತ್ತರ ಬರೆಯಲೇ ಬೇಕು. ಆಗ ಮಾತ್ರ ಸೀಟು ಸಿಗುತ್ತೆ...’’ ಪ್ರಿನ್ಸಿಪಾಲ್ ಸ್ಪಷ್ಟವಾಗಿ ನುಡಿದರು.
‘‘ಅಲ್ಲ ಸಾರ್...ಎಲ್‌ಕೆಜಿಗೆ ಸೇರುವ ಮಗು ಉತ್ತರ ಬರೆಯುವುದು ಹೇಗೆ...?’’ ಕಾಸಿ ಕಂಗಾಲಾಗಿ ಕೇಳಿದ.
‘‘ಅದು ನಮಗೆ ಗೊತ್ತಿಲ್ಲ. ನಮ್ಮ ಕಾನ್ವೆಂಟ್‌ನಲ್ಲಿ ನಿಮಗೆ ಸೀಟು ಸಿಗಬೇಕಾದರೆ ನಿಮ್ಮ ಮಗು ಪಾಸಾಗಲೇ ಬೇಕು. ನೀವು ನಿಮ್ಮ ಮಗುವಿಗೆ ಟ್ಯೂಶನ್ ಕೊಡಿಸಿ. ಪರೀಕ್ಷೆಗೆ ಬೇಕಾದ ತಯಾರಿಯನ್ನು ಮಗುವಿಗೆ ಒಂದು ವರ್ಷ ಇರುವಾಗಲೇ ಮಾಡಿಸಬೇಕು. ಈಗ ಬಂದು ಏನು ಮಾಡುವುದು ಎಂದು ಕೇಳಿದರೆ ಹೇಗೆ? ನಮ್ಮ ಶಾಲೆಯಲ್ಲಿ ಪ್ರವೇಶ ಸಿಗಲಿಲ್ಲ ಎಂದರೆ ಕಸದ ಬುಟ್ಟಿ ಇದ್ದೇ ಇದೆಯಲ್ಲ...’’ ಪ್ರಿನ್ಸಿಪಾಲರು ಆಕ್ರೋಶದಿಂದ ಹೇಳಿದರು.
‘‘ಕಸದ ಬುಟ್ಟಿ....’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಸರಕಾರಿ ಶಾಲೆ. ನಮ್ಮ ಶಾಲೆಗಳಲ್ಲಿ ರಿಜೆಕ್ಟ್ ಆಗಿರುವ ಮಾಲುಗಳನ್ನು ಎಸೆಯುವುದಕ್ಕಿರುವ ಕಸದ ಬುಟ್ಟಿಯೇ ಸರಕಾರಿ ಶಾಲೆ. ಅದಕ್ಕೆ ತೆಗೆದುಕೊಂಡು ಹಾಕಿ...’’ ಪ್ರಿನ್ಸಿಪಾಲರು ದಾರಿ ತೋರಿಸಿದರು.
ಕಾಸಿ ಆತಂಕಗೊಂಡ. ‘‘ಸಾರ್...ಮಗುವಿಗೆ ಹೊರಗೆ ಟ್ಯೂಶನ್ ಕೊಡೋದಾದ್ರೆ....ಶಾಲೆಗೆ ಯಾಕೆ ಸೇರಿಸೋದು...?’’
‘‘ನೋಡ್ರಿ...ದಡ್ಡ ಮಕ್ಕಳನ್ನು ನಾವು ಸೇರಿಸಿಕೊಳ್ಳಲ್ಲ. ಕಲಿತ ಮಕ್ಕಳನ್ನು ಮಾತ್ರ ತೆಗೆದುಕೊಳ್ಳೋದು. ನಮ್ಮ ಶಾಲೆಯ ಸರ್ಟಿಫಿಕೇಟ್ ಸಿಗಬೇಕಾದರೆ ನಿಮ್ಮ ಮಗು ಈಗಾಗಲೇ ಎಲ್ಲ ತಿಳ್ಕೊಂಡಿರಬೇಕು....ಇಂಗ್ಲಿಷ್ ಮಾಧ್ಯಮ ಎಂದರೆ ಸುಮ್ಮಗಾಗಲ್ಲ....ಅಂದ ಹಾಗೆ...ಮಗು ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನೀವು ಸೂಟ್‌ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...’’
ಕಾಸಿ ನಿಂತ ನೆಲ ಕಂಪಿಸಿತು ‘‘ಸಾರ್ ಅದ್ಯಾವುದು...ಸೂಟ್‌ಕೇಸ್ ಪರೀಕ್ಷೆ...’’
ಪ್ರಿನ್ಸಿಪಾಲರು ವಿವರಿಸತೊಡಗಿದರು ‘‘ನೋಡ್ರಿ...ನಮ್ಮ ತಕ್ಕಡಿಯೊಂದಿದೆ. ಅದರಲ್ಲಿ ನೀವು, ನಿಮ್ಮ ಹೆಂಡತಿ ಮತ್ತು ನಿಮ್ಮ ಮಗು ಕುಳಿತುಕೊಳ್ಳಬೇಕು. ಮತ್ತು ಇನ್ನೊಂದು ತಟ್ಟೆಯಲ್ಲಿ ನಿಮ್ಮ ಭಾರದ ಸೂಟ್‌ಕೇಸ್ ಇಡಬೇಕು...’’
‘‘ಸೂಟ್‌ಕೇಸ್‌ನ್ನು ಏನು ಮಾಡುತ್ತೀರಿ ಸಾರ್...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಸೂಟ್‌ಕೇಸನ್ನು ನಿಮಗೇ ವಾಪಾಸ್ ಕೊಡುತ್ತೇವೆ. ಅದರೊಳಗಿರುವ ಹಣವನ್ನು ನಾವು ತೆಗೆದುಕೊಳ್ಳುತ್ತೇವೆ...’’ ಪ್ರಿನ್ಸಿಪಾಲರು ವಿವರಿಸಿದರು.
‘‘ಅಂದರೆ ಸೂಟ್‌ಕೇಸ್‌ನೊಳಗೆ ನಮ್ಮಷ್ಟು ಭಾರ ತೂಗುವ ನೋಟುಗಳನ್ನು ಇಡಬೇಕೋ...’’ ಕಾಸಿ ಒಮ್ಮೆಲೆ ಎದ್ದು ನಿಂತ.
‘‘ಹೂಂ...ಎಲ್ಲವೂ ಒಂದು ಸಾವಿರ ರೂಪಾಯಿಯ ನೋಟಾಗಿರಬೇಕು....’’ ಪ್ರಿನ್ಸಿಪಾಲರು ಒತ್ತಿ ಹೇಳಿದರು.
ಕಾಸಿ ಎದ್ದು ನಿಂತ ‘‘ಸಾರ್ ಬರುತ್ತೇನೆ....ನಮಸ್ಕಾರ’’ ಅಚ್ಚ ಕನ್ನಡದಲ್ಲಿ ಹೇಳಿದ.
ಪ್ರಿನ್ಸಿಪಾಲ್ ಸಿಟ್ಟಾದರು ‘‘ಏನ್ರೀ...ನಿಮಗೆ ಕನ್ನಡ ಬರುತ್ತೆ. ನಿಮ್ಮ ಮಗುವನ್ನು ಸೇರಿಸಿಕೊಳ್ಳೋದಕ್ಕೆ ಆಗಲ್ಲ...ಗೆಟ್ ಔಟ್...’’
ಕಾಸಿ ಹೇಳಿದ ‘‘ಹೌದು. ನನಗೆ ಕನ್ನಡ ಬರುತ್ತೆ. ಈವರೆಗೆ ನನಗೆ ಕನ್ನಡ ಬರದ್ದಕ್ಕೆ ನನ್ನ ಬಗ್ಗೆ ಕೀಳರಿಮೆ ಇತ್ತು. ಇವತ್ತು ನಿಮ್ಮನ್ನು ನೋಡಿದ ಬಳಿಕ ನನಗೆ ಕನ್ನಡ ಬರತ್ತೆ, ಇಂಗ್ಲಿಷ್ ಬರಲ್ಲ ಎಂದು ಹೆಮ್ಮೆಯಾಗತ್ತೆ...’’ ಎಂದು ಅಂಗಳ ತಲುಪಿದ. ಅಲ್ಲಿ ನೋಡಿದರೆ ಅಂಗಳದಲ್ಲಿ ಬಿಸಿಲಲ್ಲಿ ಒಬ್ಬ ಬಡಪಾಯಿ ಮಹಿಳೆ ಭಿಕ್ಷೆ ಬೇಡುತ್ತಿತ್ತು. ‘‘ಏನಮ್ಮ...ಈ ಬಿಸಿಲಲ್ಲಿ ಕೂತು ಭಿಕ್ಷೆ ಬೇಡುತ್ತೀಯಲ್ಲ...’’ ಕಾಸಿ ಕೇಳಿದ.
‘‘ಮೊನ್ನೆ ಮೊನ್ನೆ ಆ ಶಾಲೆಯ ಜಗಳಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದೆ ಕಣಪ್ಪ....ಇದೀಗ ಸುಪ್ರೀಂಕೋರ್ಟ್ ಆದೇಶ ಆಗಿದೆ. ಜಗಳಿಯಲ್ಲೂ ಕೂರಬಾರದು. ಬೇಕಾದರೆ ಅಂಗಳದಲ್ಲಿ ಕೂತು ಭಿಕ್ಷೆ ಬೇಡಬಹುದು ಅಂತ...’’ ಮಹಿಳೆ ಹೇಳಿತು.
‘‘ಯಾರಮ್ಮ ನೀನು?’’ ಕಾಸಿ ಕೇಳಿದ.
‘‘ಇನ್ಯಾರೂ ಅಂತ ತಿಳ್ಕಂಡೆ? ನಾನಪ್ಪ ನಿನ್ನ ತಾಯಿ ಕನ್ನಡಮ್ಮ....’’
ವಾರ್ತಾಭಾರತಿ ದೈನಿಕದರವಿವಾರ - ಏಪ್ರಿಲ್ -13-2014ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ
ವಿಶೇಷ ಸುದ್ದಿ ಏನು ಇಲ್ಲ ಎಂದು ಸಂಪಾದಕೀಯ ವಿಭಾಗದಲ್ಲಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಕುಳಿತಿರಲಾಗಿ, ಅದೇ ಹೊತ್ತಿಗೆ ಸಂಪಾದಕರ ಕರೆಯೂ ಮರಣದ ಗಂಟೆಯಂತೆ ಬಾರಿಸಿತು ‘‘ಏನ್ರೀ...ಡೆಡ್ ಲೈನ್ ಹೊತ್ತಾಯಿತು...ಇನ್ನೂ ಲೀಡ್ ಸುದ್ದಿ ಬಂದಿಲ್ಲ....’’
‘‘ವಿಶೇಷ ಸುದ್ದಿ ಏನೂ ಇಲ್ಲ ಸಾರ್....ಇಂಟರ್ಯೂ ಮಾಡೋಣ ಅಂದ್ರೆ ಚುನಾವಣಾ ಆಯೋಗ ಬಿಡ್ತಾ ಇಲ್ಲ ಸಾರ್....’’ ಕಾಸಿ ತಡಬಡಿಸಿ ಉತ್ತರಿಸಿದ.
‘‘ಗುಪ್ತಚರ ಇಲಾಖೆಗೆ ಫೋನ್ ಮಾಡ್ರಿ... ಯಾಸಿನ್ ಭಟ್ಕಳನ ಕುರಿತಂತೆ ಏನಾದ್ರೂ ಸುದ್ದಿ ಇದ್ದೇ ಇರತ್ತೇ...ಅದನ್ನು ಅವರು ಗುಪ್ತವಾಗಿ ನಿಮ್ಮಿಂದಿಗೆ ಹಂಚಿಕೊಳ್ಳುತ್ತಾರೆ....’’ ಸಂಪಾದಕರು ಸಲಹೆ ನೀಡಿದ್ದೇ...ಪತ್ರಕರ್ತ ಎಂಜಲು ಕಾಸಿ ಗುಪ್ತಚರ ಇಲಾಖೆಗೆ ಫೋನ್ ಮಾಡಿದ.
ಅತ್ತಲಿಂದ ಮಾತು ಬಾಂಬಿನಂತೆ ತೂರಿ ಬಂತು ‘‘ಹಲೋ...ಇಂಟೆಲಿಜೆಂಟ್ಸ್ ವಿಭಾಗ...ಗುಪ್ತ್ ಚರ ಇಲಾಖೆ...ಯಾಸಿನ್ ಭಟ್ಕಳ ಮಾತಾಡ್ತಾ ಇದ್ದೇನೆ....ನಿಮಗೇನು ಬೇಕು...’’
ಕಾಸಿಯ ಮೈಯೆಲ್ಲ ಕಂಪಿಸಿತು ‘‘ಸಾರ್...ನೀವು ಯಾಸಿನ್ ಭಟ್ಕಳ ಅವ್ರಾ...ನೀವು ಗುಪ್ತಚರ ಇಲಾಖೆಯಲ್ಲಿ ಕುಳಿತು ಅದೇನು ಮಾಡ್ತಾ ಇದ್ದೀರಿ ಸಾರ್...’’ ಅಚ್ಚರಿಯಿಂದ ಕೇಳಿದ.
‘‘ನಾನು ಗುಪ್ತಚರ ಇಲಾಖೆಯ ಪತ್ರಿಕಾವಕ್ತಾರ ಕಣ್ರೀ....ಎಲ್ಲ ಪತ್ರಿಕೆಗಳಿಗೆ ಗುಪ್ತವಾಗಿ ನನ್ನ ಕುರಿತ ಸುದ್ದಿಗಳನ್ನು ಹಂಚುವುದೇ ನನ್ನ ಕೆಲಸ. ಇತ್ತೀಚೆಗೆ ಸುದ್ದಿಸಂಸ್ಥೆಗಳೆಲ್ಲ ಸುದ್ದಿಗಳಿಲ್ಲದೆ ಬರಗಾಲ ಎದುರಿಸುತ್ತಿದೆ. ಆದುದರಿಂದ ಸರಕಾರವೇ ನನ್ನನ್ನು ಪ್ರತಿ ದಿನ ಮುಖ್ಯ ಸುದ್ದಿಯನ್ನು ಕೊಡಲು ಗುಪ್ತಚರ ಇಲಾಖೆಯಲ್ಲಿ ನೇಮಕ ಮಾಡಿದೆ...ಲೀಡ್ ಸುದ್ದಿ ಇಲ್ಲದೆ ಕಂಗಾಲಾಗಿರುವ ಪತ್ರಿಕೆಗಳಿಗೆ ಸುದ್ದಿ ಹಂಚುವುದೇ ನನ್ನ ಕೆಲಸ ಕಣ್ರೀ...ಹೇಳಿ...ನಿಮಗೆ ಯಾವ ಥರ ಸುದ್ದಿ ಬೇಕು? ಲೀಡ್ ಸುದ್ದಿ ಬೇಕೋ...ಚುನಾವಣಾ ಸುದ್ದಿ ಬೇಕೋ...ಹವಾಮಾನ ಸುದ್ದಿ ಬೇಕೋ...ಒಳಗಿನ ಪುಟಕ್ಕೆ ತುಂಬಿಸಲು ಸುದ್ದಿ ಬೇಕೋ...ಮ್ಯಾಗಸಿನ್‌ಗೆ ವರ್ಣರಂಜಿತ ಲೇಖನ ಬೇಕೋ...ಅದೇನೇ ಬೇಕಾದರೂ ನಾನು ಕೊಡುತ್ತೇನೆ...’’
ಕಾಸಿಯ ಹೆಗಲ ಮೇಲಿರುವ ಭಾರವೆಲ್ಲ ಇಳಿದಂತಾಯಿತು ‘‘ಸಾರ್...ಫ್ರಂಟ್ ಪೇಜ್‌ಗೆ ಮುಖ್ಯ ಸುದ್ದಿ ಇಲ್ಲಾ ಸಾರ್...ಏನಾದರೂ...ಕೊಡಿ...’’
‘‘ಇದು ಮೂಲವ್ಯಾಧಿಯ ಸುದ್ದಿ...ಆದುದರಿಂದ ಸ್ವಲ್ಪ ಜಾಗರೂಕತೆಯಿಂದ ಮೂಲಗಳಿಂದ ಎಂದು ಬಳಸಿ ಈ ಸುದ್ದಿಯನ್ನು ನೀವು ನೀಡಬೇಕಾಗುತ್ತದೆ’’ ಯಾಸಿನ್ ಭಟ್ಕಳ ಹೇಳಿದ.
‘‘ಖಂಡಿತಾ ಸಾರ್...ನಾವು ಮೂಲ ವ್ಯಾಧಿ ಸುದ್ದಿಗಳನ್ನು ಮಾತ್ರ ಹಾಕೋದು ಸಾರ್. ಮೂಲಗಳಿಂದ ತಿಳಿದು ಬಂದಿದೆ, ಮೂಲಗಳು ತಿಳಿಸಿವೆ, ಮೂಲದಿಂದ ಬಂದಿದೆ...ಮುಖ್ಯವಾಗಿ ನಮಗೆ ಗುಪ್ತಚರ ಇಲಾಖೆಯ ಮೂಲವ್ಯಾಧಿ ಎಂದರೆ ತುಂಬಾ ಇಷ್ಟ ಸಾರ್...’’ ಕಾಸಿ ಹೇಳಿದ.
‘‘ಸರಿ ಹಾಗಾದರೆ ಬರೆದುಕೊಳ್ಳಿ...ನಾಗಸಾಕಿ, ಹಿರೋಷಿಮಾ ಸ್ಫೋಟದಲ್ಲಿ ತನ್ನ ಕೈವಾಡ ಇರುವುದು ನಿಜ ಎನ್ನುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಈ ಸ್ಫೋಟ ನಡೆಸುವ ಒಂದು ದಿನದ ಹಿಂದೆ ಉಸಾಮ ಬಿನ್ ಜೊತೆಗೆ ಮಾತುಕತೆ ನಡೆಸಿದ ಭಟ್ಕಳ್, ಅಂತಹದೇ ಸ್ಫೋಟವನ್ನು ಗುಜರಾತ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ....’’
‘‘ಸಾರ್...ಅದ್ಭುತ ಸುದ್ದಿಸಾರ್...ಇದು ನಿಜವಾ ಸಾರ್...?’’ ಕಾಸಿ ರೋಮಾಂಚನದಿಂದ ಕೇಳಿದ.
‘‘ನಿಮಗೆ ನಿಜ ಬೇಕಾ, ಸುದ್ದಿ ಬೇಕಾ?’’ ಆ ಕಡೆಯಿಂದ ಭಟ್ಕಳ್ ಕೇಳಿದ. ‘‘ನಿಜ ಯಾರಿಗೆ ಬೇಕು ಸಾರ್? ನಮಗೆ ಸುದ್ದಿ ಬೇಕು...ನಿಮ್ಮ ಕುರಿತಂತೆ ಇನ್ನಷ್ಟು ಗುಪ್ತಚರ ಮೂಲಗಳನ್ನು ನಮ್ಮ ಕಡೆಗೆ ಬಿಟ್ಟುಬಿಡಿ ಸಾರ್...ನಾವು ಬದ್ಕೋತೀವಿ...’’ ಕಾಸಿ ಅಂಗಲಾಚಿದ.
‘‘ಇಂದು ವಾತಾವರಣ ತೀವ್ರ ಬಿಸಿಯೇರಿದ್ದು, ಇದರಲ್ಲಿ ತನ್ನ ಕೈವಾಡವಿರುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಆ ಕಡೆಯಿಂದ ಭಟ್ಕಳ್ ಹೇಳಿದ.
‘‘ಸಾರ್...ಇದು ಹವಾಮಾನ ವರದಿ ಕಾಲಂನಲ್ಲಿ ಹಾಕ್ಕೋಬಹುದು ಸಾರ್...ನಮಗೆ ಫ್ರಂಟ್ ಪೇಜ್ ಸುದ್ದಿ ಬೇಕು ಸಾರ್...’’
‘‘ನೋಡಿ...ನೀವು ಪಿಟಿಐ ಸಹಿತ ವಿವಿಧ ಸುದ್ದಿ ಸಂಸ್ಥೆಗಳಿಗೆ ಸದಸ್ಯರಾಗುವಂತೆ ನಿಮ್ಮ ಹತ್ತಿರದ ಆರೆಸ್ಸೆಸ್ ಕಚೇರಿಗೆ ಸದಸ್ಯರಾಗಿ ಅಥವಾ ನಿಮ್ಮ ಪತ್ರಿಕೆಗಳ ಹೆಸರನ್ನು ಅಲ್ಲಿ ನಮೂದಿಸಿ. ನಾವು ಎಲ್ಲರಿಗೂ ಕರೆದು ಸುದ್ದಿಗಳನ್ನು ಕೊಡಲು ಸಾಧ್ಯವಿಲ್ಲ. ಆರೆಸ್ಸೆಸ್ ಕಚೇರಿಯಿಂದಲೇ ಜೆರಾಕ್ಸ್ ಕಾಪಿಗಳು ಬೇಕಾದಷ್ಟು ಸಿಗುತ್ತವೆ. ಅಲ್ಲಿಂದಲೇ ಸಿಗುತ್ತದೆ...ನೀವು ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ....’’
‘‘ಆದರೆ ಆರೆಸ್ಸೆಸ್ ಕಚೇರಿಯವರು ಕೊಡೋದಕ್ಕಿಂತ ಇಂಟೆಲಿಜೆನ್ಸ್ ಕಚೇರಿ ಕೊಟ್ಟರೇನೇ ಅದಕ್ಕೆ ವ್ಯಾಲ್ಯೂ ಜಾಸ್ತಿ ಸಾರ್...’’ ಕಾಸಿ ಫೋನ್‌ನಲ್ಲೇ ಹಲ್ಲು ಕಿರಿದ.
‘‘ಯಾರು ಕೊಟ್ರೆ ನಿಮಗೇನ್ರೀ...ನೀವು ಮೂಲವ್ಯಾಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ....ಗುಪ್ತಚರ ಮೂಲಗಳು ಎಂದೇ ಬರೆಯಿರಿ. ‘‘ಮೋದಿಯ ವಿರುದ್ಧ ಸೊಳ್ಳೆಗಳ ಮೂಲಕ ಮಾರಕ ರೋಗವನ್ನು ಹಂಚಿ, ಹತ್ಯೆಗೆ ಯಾಸಿನ್ ಭಟ್ಕಳ ಸಂಚು ರೂಪಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಬರೆಯಿರಿ....’’
‘‘ಸಾರ್...ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದು ಕಣ್ರೀ...ಆ ಸೊಳ್ಳೆಗಳಿಗೆ ಇಂಡಿಯನ್ ಮುಜಾಹಿದ್‌ನ ಮೂಲಕ ತರಬೇತಿ ಕೊಡಿಸಿ, ಅದನ್ನು ಮೋದಿಯ ಬಳಿಗೆ ಕಳುಹಿಸಿ ಅದರಿಂದ ಕಚ್ಚಿಸುವ ಒಂದು ದೊಡ್ಡ ಸಂಚನ್ನು ಯಾಸಿನ್ ಭಟ್ಕಳ್ ರೂಪಿಸಿದ್ದ. ಭಟ್ಕಳ್ ಬಂಧನದಿಂದ ಅದು ವಿಫಲವಾಯಿತು ಎಂದು ಗುಪ್ತಚರ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ....’’
‘‘ಸಾರ್... ಯಾಸಿನ್ ಭಟ್ಕಳ್ ಬಂಧನದ ಬಳಿಕ ಆ ಸೊಳ್ಳೆಗಳು ಏನಾಯಿತು ಸಾರ್? ಅವುಗಳನ್ನು ಬಂಧಿಸಲಿಲ್ಲವೆ?’’
‘‘ಅವುಗಳ ಹುಡುಕಾಟ ತೀವ್ರವಾಗಿದೆ. ಕೆಲವು ಸೊಳ್ಳೆಗಳು ತಪ್ಪಿಸಿಕೊಂಡು ಪಾಕಿಸ್ತಾನ ಸೇರಿವೆ. ಇನ್ನು ಕೆಲವು ಭಟ್ಕಳದಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ. ಅದನ್ನು ಬಂಧಿ ಸಲು ವ್ಯಾಪಕ ಕಾರ್ಯಾಚರಣೆ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಭಟ್ಕಳ್ ಆ ಕಡೆಯಿಂದ ಸ್ಕೂಪ್ ಸುದ್ದಿಯನ್ನು ಹೇಳಿದ.
ಕಾಸಿಗೆ ತುಂಬಾ ಖುಷಿಯಾಯಿತು ‘‘ಸಾರ್...ಒಂದಿಷ್ಟು ಕೃಷಿ ಮಾಹಿತಿಯನ್ನು ನೀಡಿ ಸಾರ್...’’
‘‘ಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ರೋಗ ಬರಲು ಯಾಸಿನ್ ಭಟ್ಕಳ್ ರೂಪಿಸಿದ ಸಂಚೇ ಕಾರಣ ಎನ್ನುವುದು ಯಾಸಿನ್ ಭಟ್ಕಳ್ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಟೊಮೆಟೋ ಬೆಲೆ ಇಳಿಯುವುದಕ್ಕಾಗಿ ಭಟ್ಕಳ್ ಪಾಕಿಸ್ತಾನಿ ಕೃಷಿಕರ ಜೊತೆಗೆ ಸೇರಿ ಸಂಚು ರೂಪಿಸಿದ್ದು, ಇದರಿಂದಾಗಿ ಕೃಷಿಕರ ಮೂಲಕ ಸರಕಾರದ ವಿರುದ್ಧ ದಂಗೆ ಎಬ್ಬಿಸುವುದು ಭಟ್ಕಳ್ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ...’’ ಕಾಸಿ ಎಲ್ಲವನ್ನೂ ನೋಟ್ ಮಾಡಿಕೊಂಡ. ‘‘ಸಾರ್...ಈ ತಾವು ಪತ್ರಿಕೋದ್ಯಮದಲ್ಲಿ ಯಾವುದಾದರೂ ಡಿಗ್ರಿ ಮಾಡಿದ್ದೀರಾ...’’ ಕಾಸಿ ಅನಗತ್ಯ ಪ್ರಶ್ನೆಯೊಂದನ್ನು ಕೇಳಿದ.
‘‘ಹಾಗೇನಿಲ್ಲ ಕಣ್ರೀ...ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರಿಂದ ಇಂತಹ ಮೂಲವ್ಯಾಧಿ ಸುದ್ದಿಗಳು ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಮೂಲವ್ಯಾಧಿ ಪತ್ರಿಕೋದ್ಯಮದ ಬಗ್ಗೆ ಅಪಾರ ಅನುಭವ ಇರಬೇಕಾಗುತ್ತದೆ. ಗುಪ್ತಚರ ಇಲಾಖೆಗಳ ಮೂಲಗಳನ್ನು ಹುಡುಕಿಕೊಂಡು ಅಲ್ಲಿರುವ ಕೆಲವು ಜನಿವಾರದ ಮೂಲಗಳನ್ನು ಪತ್ತೆ ಹಚ್ಚಿ, ಅವರಿಂದ ಕೆಲವು ದೊಗಳೆ ಚಡ್ಡಿ ಮೂಲಗಳನ್ನು ಗುರುತಿಸಿ, ಆ ಚಡ್ಡಿಯೊಳಗೆ ಸುದ್ದಿಗಳನ್ನು ತಮ್ಮದಾಗಿಸಿಕೊಳ್ಳಲು ಅಪಾರ ಅನುಭವ ಬೇಕು ಕಣ್ರೀ...ಯಾವುದಕ್ಕೂ ನೀವು ನಾಳೆಯಿಂದ ಕಚೇರಿಯ ಪಕ್ಕದಲ್ಲಿರುವ ಶಾಖೆಗೆ ಬನ್ನಿ. ಅಲ್ಲಿ ನಾನೇ ನಿಮಗೆ ಇದರ ಕುರಿತಂತೆ ಪಾಠ ಹೇಳಿಕೊಡುತ್ತೇನೆ....’’ ಎಂದದ್ದೇ ಆ ಕಡೆಯಿಂದ ಫೋನ್ ಕಡಿಯಿತು.
‘‘ಸಾರ್...ಮುಖಪುಟಕ್ಕೆ ಲೀಡ್ ಸುದ್ದಿ ಸಿಕ್ಕಿತು...’’ ಎಂದು ಎಂಜಲು ಕಾಸಿ ಸಂಪಾದಕರ ಕೊಠಡಿಯೆಡೆಗೆ ಧಾವಿಸಿದ.

ವಾರ್ತಾ ಭಾರತಿ ದೈನಿಕದ ರವಿವಾರ - ಏಪ್ರಿಲ್ -06-2014 ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ
ಮಧ್ಯಾಹ್ನದ ಬಿಸಿಲು ಜಾಸ್ತಿಯಾಯಿತು ಎಂದು ಪತ್ರಕರ್ತ ಎಂಜಲು ಕಾಸಿ ಮನೆಯಲ್ಲಿ ತಣ್ಣಗೆ ಮಲಗಿದ್ದ. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಗಿ ಎದ್ದು ಬಾಗಿಲು ತೆರೆದರೆ ಗಿರೀಶ್ ಕಾರ್ನಾಡ್ ನಿಂತ್ಕೊಂಡಿದ್ದಾರೆ. ‘‘ಸಾರ್ ನೀವಾ....?’’ ಎಂದು ಕಾಸಿ ರೋಮಾಂಚನಗೊಂಡ.
‘‘ಅರೇ ಕಾಸಿಯವರೇ, ನಿಮ್ಮ ಮನೇನಾ ಇದು... ನಿಮ್ಮಲ್ಲಿ ಎಷ್ಟು ಜನ ಇದ್ದಾರೆ...’’ ಎಂದು ಕೇಳಿದರು.
ಕಾಸಿಗೆ ಗೊಂದಲವಾಯಿತು. ತಮ್ಮ ನಾಟಕಕ್ಕೆ ಜನ ಸೇರಿಸುವುದಕ್ಕಾಗಿ ಬಂದಿದ್ದಾರೆಯೇ ಎಂಬ ಅನುಮಾನದಿಂದ ‘‘ಸಾರ್...ನಾನು ನನ್ನ ಹೆಂಡತಿ ಸೂಸಿ ಸಾರ್. ಇಬ್ಬರು ಬರ್ತೇವೆ ಸಾರ್...ನಾಟಕ ಎಲ್ಲಿ ಇಟ್ಟಿದ್ದೀರಿ ಸಾರ್?’’ ಕೇಳಿದ.
‘‘ನಾಟಕ ಅಲ್ಲ ಕಣ್ರೀ...ಮತ ಕೇಳೋದಕ್ಕೆ ಬಂದಿದ್ದೇನೆ...’’ ಎಂದು ಕಾಸಿಗೆ ಶಾಕ್ ಕೊಟ್ಟು ಬಿಟ್ಟರು.
‘‘ಸಾರ್ ಓಟಿಗೆ ನಿಂತಿದ್ದೀರಾ...?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಇಲ್ಲ ಕಣ್ರೀ...ನೀಲೇಕಣಿಯವರ ಪರವಾಗಿ ಓಟಿಗೆ ಇಳಿದಿದ್ದೇನೆ...’’ ಕಾರ್ನಾಡ್ ಸ್ಪಷ್ಟೀಕರಣ ನೀಡಿದರು.
ಕಾಸಿ ಮತ್ತೂ ರೋಮಾಂಚನಗೊಂಡ ‘‘ಹೌದಾ ಸಾರ್...ಶೂಟಿಂಗ್ ಇಲ್ವಾ ಸಾರ್...ಬಾಲಿವುಡ್‌ನಲ್ಲಿ ಇತ್ತೀಚೆಗೆ ನೀವು ಬಿಸಿ ನಟರಲ್ವಾ ಸಾರ್. ಅದನ್ನು ಬಿಟ್ಟು ಶೂಟಿಂಗ್‌ಗೆ ಬಂದಿದ್ದೀರಾ...’’
‘‘ನಾನೀಗ ಬಾಲಿವುಡ್‌ನಲ್ಲಿ ತುಂಬಾ ತುಂಬಾ ಬಿಸಿ ಕಣ್ರೀ...ಸಲ್ಮಾನ್‌ಖಾನ್ ಜೊತೆಗೆ ‘ಏಕ್ ಥಾ ಟೈಗರ್’ನಲ್ಲಿ ನಟಿಸಿದ ಬಳಿಕ ನನಗೆ ಸಿಕ್ಕಾಬಟ್ಟೆ ಡಿಮ್ಯಾಂಡ್ ಬರ್ತಾ ಇದೆ. ಸಲ್ಮಾನ್ ಖಾನ್ ಬದಲಿಗೆ ನನ್ನನ್ನೇ ಹಾಕೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ ಶರ್ಟ್ ಬಿಚ್ಚಿ ಎದೆ ತೋರಿಸೋದಕ್ಕೆ ತುಸು ನಾಚಿಕೆ ಕಣ್ರೀ...ಆಫರ್‌ನೆಲ್ಲ ಸಲ್ಮಾನ್‌ಖಾನ್‌ಗೆ ಬಿಟ್ಟುಕೊಟ್ಟೆ...ಇದೀಗ ನೀಲೇಕಣಿಯವರು ಕೆಲವು ದಿನದ ಕಾಲ್‌ಶೀಟ್ ಕೇಳಿದ್ದಾರೆ. ಆದ್ದರಿಂದ ನನ್ನ ಶೂಟಿಂಗನ್ನು ಬಾಲಿವುಡ್‌ನಿಂದ ಬೆಂಗಳೂರಿಗೆ ವರ್ಗಾಯಿಸಿದ್ದೇನೆ...’’
ಕಾಸಿಗೆ ತಕ್ಷಣ ತಾನು ಶರ್ಟ್ ಹಾಕಿಕೊಳ್ಳದೇ ಇರುವುದು ನೆನಪಿಗೆ ಬಂತು. ಒಳ ಹೋದವನೇ ಶರ್ಟ್ ಹಾಕಿಕೊಂಡು ಬಂದು ಕಾರ್ನಾಡರ ಇಂಟರ್ಯೂ ಮಾಡಲು ಶುರು ಮಾಡಿದ.
‘‘ಸಾರ್...ಬಾಲಿವುಡ್‌ನಲ್ಲಿ ನಿಮ್ಮ ರೆಮ್ಯುನರೇಷನ್ ತುಂಬಾ ಜಾಸ್ತಿಯಾಗಿದೆಯಲ್ಲ... ನಿಮ್ಮ ಕಾಲ್‌ಶೀಟ್‌ನ ರೇಟ್ ಎಷ್ಟು ಸಾರ್?’’ ಕಾಸಿ ಕೇಳಿ ಬಿಟ್ಟ.
ಕಾರ್ನಾಡ್‌ಗೆ ಮುಜುಗರವಾಯಿತು ‘‘ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಕಣ್ರೀ...ಒಟ್ಟಾರೆಯಾಗಿ ನೀಲೇಕಣಿಯವರು ಗೆಲ್ಲಬೇಕು. ಅದಕ್ಕಾಗಿ ಪ್ರಚಾರಕ್ಕಿಳಿದಿದ್ದೇನೆ...’’
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ನೀಲೇಕಣಿ ಯವರನ್ನೇ ಯಾಕೆ ಆರಿಸಿದ್ರಿ. ಅವರಲ್ಲಿ ಅದೇನು ವೈಶಿಷ್ಟವನ್ನು ಕಂಡ್ರೀ ಸಾರ್?’’
‘‘ನೋಡಿ ಕಾಸಿಯವ್ರೇ...ನನಗೆ ತುಘಲಕ್ ನಾಟಕ ಬರೆಯಲು ಸ್ಫೂರ್ತಿಯೇ ನೀಲೇಕಣಿಯವರು. ಅವರಿಲ್ಲದಿದ್ದರೆ ನಾನು ತುಘಲಕ್ ನಾಟಕವನ್ನು ಬರೆಯುತ್ತಿರಲಿಲ್ಲ’’
ಕಾಸಿಗೆ ಗೊಂದಲವಾಯಿತು ‘‘ಅದು ಹೇಗೆ ಸಾರ್?’’ ಕೇಳಿದ.
‘‘ನೋಡ್ರಿ...ತುಘಲಕ್ ಏನು ಮಾಡಿದ? ಚಿನ್ನ, ತಾಮ್ರದ ನಾಣ್ಯದ ಬದಲಿಗೆ ಚರ್ಮದ ನಾಣ್ಯಗಳನ್ನು ಜಾರಿಗೆ ತಂದ. ಒಂದು ಕ್ರಾಂತಿಯನ್ನೇ ಮಾಡಿದ. ಇದೀಗ ನೀಲೇಕಣಿಯವರು ಏನು ಮಾಡಿದರು? ರೇಷನ್ ಕಾರ್ಡ್ ಬದಲು ಆಧಾರ್‌ಕಾರ್ಡ್ ತಂದರು. ತುಘಲಕ್‌ನ ಮುಂದಾಲೋಚನೆ ನಮ್ಮ ನೀಲೇಕಣಿಯವರಿಗಿದೆ...’’ ಕಾರ್ನಾಡರು ವಿವರಿಸಿದರು.
ಕಾಸಿಗೂ ಹೌದೆನಿಸಿತು ‘‘ಆದರೆ ತುಘಲಕ್‌ನ ಚರ್ಮದ ನಾಣ್ಯಗಳನ್ನೆಲ್ಲ ತೆಂಗಿನ ಬುಡಕ್ಕೆ ಗೊಬ್ಬರವಾಗಿ ಬಳಸಲಾಯಿತಂತಲ್ಲ ಸಾರ್...’’ ಕಾಸಿ ಅನುಮಾನವೊಂದನ್ನು ಮುಂದಿಟ್ಟ.
‘‘ಬಳಸಿದರೇನಾಯಿತು...ಒಳ್ಳೆಯದೇ ಆಯಿತು. ತುಘಲಕ್‌ನ ರಾಜ್ಯದಲ್ಲಿ ತೆಂಗಿನ ಗಿಡದ ಫಸಲು ಜಾಸ್ತಿಯಾಯಿತು. ಮರಗಳು ಹೆಚ್ಚು ಹೆಚ್ಚು ಫಲವನ್ನು ಕೊಟ್ಟ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಯಿತು..’’ ಕಾರ್ನಾಡ್ ಇತಿಹಾಸದ ಸೂಕ್ಷ್ಮಗಳನ್ನು ವಿವರಿಸಿದರು.
ಕಾಸಿ ಮತ್ತೆ ರೋಮಾಂಚನಗೊಂಡ. ತುಘಲಕ್‌ನ ಕಾಲದ ಈ ಘಟನೆಯನ್ನು ಯಾರೂ ವಿವರಿಸಿರಲಿಲ್ಲ. ‘‘ಸಾರ್...ಅಂದರೆ ನೀಲೇಕಣಿಯವರು ಮಾಡಿಸಿಕೊಟ್ಟಿರುವ ಆಧಾರ್‌ಕಾರ್ಡ್‌ಗಳಿಗೆ ತೆಂಗಿನ ಮರದ ಬುಡವೇ ಗತಿಯಾ?’’
ಕಾರ್ನಾಡರು ಸಿಟ್ಟಾದರು ‘‘ಅದರಿಂದ ಏನಾಯಿತು. ತೆಂಗಿನ ಬುಡಕ್ಕೆ ಹಾಕಿದರೆ ಫಸಲು ಜಾಸ್ತಿಯಾಗುತ್ತದೆ. ಎಕ್ಸ್‌ಪೋರ್ಟ್ ಜಾಸ್ತಿಯಾಗಿ ವಿದೇಶಿ ವಿನಿಮಯ ಹೆಚ್ಚಳವಾಗುತ್ತದೆ. ದೇಶದ ಆರ್ಥಿಕ ಬಿಕ್ಕಟ್ಟು ಸುಧಾರಣೆಯಾಗುತ್ತದೆ...’’ ಎನ್ನುತ್ತಾ ಭಾರತದ ಇಡೀ ಅರ್ಥವ್ಯವಸ್ಥೆಯನ್ನು ಕುಳಿತಲ್ಲೇ ಬುಡಮೇಲು ಗೊಳಿಸತೊಡಗಿದರು.
ಕಾಸಿಯ ತಲೆ ಗಿರ್ರೆಂದು ತಿರುಗತೊಡಗಿತು ‘‘ಹಾಗಾದ್ರೆ...ತೆಂಗಿನ ಮರದ ಫಸಲನ್ನು ಹೆಚ್ಚಿಸಲು ಈ ಆಧಾರ್ ಕಾರ್ಡ್ ಮಾಡಲಾಗಿದೆಯೇ ಸಾರ್...’’ ಕೇಳಿದ.
‘‘ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು....ಆಧಾರ್ ಒಂದು ಬಹುಪಯೋಗಿ ಕಾರ್ಡ್. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಬಹುದು ಎನ್ನುವುದಕ್ಕಾಗಿ ನಾನು ಹೇಳಿದೆ...’’
ಕಾಸಿಯ ಅನುಮಾನ ಮುಗಿಯಲಿಲ್ಲ ‘‘ಹಾಗಲ್ಲ ಸಾರ್...ಆಧಾರ್ ಕಾರ್ಡ್ ಪ್ಲಾಸ್ಟಿಕ್ ಸಾರ್. ಅದನ್ನು ಗೊಬ್ಬರವಾಗಿ ಬಳಸುವುದು ಹೇಗೆ...’’
‘‘ನೋಡ್ರಿ...ಅದನ್ನು ಹೇಗೆ ಬಳಸಬಹುದು ಎನ್ನುವುದರ ಸರ್ವ ಉಪಾಯ ನೀಲೇಕಣಿಯಲ್ಲಿದೆ. ನೀವು ಅವರನ್ನು ಮತಹಾಕಿ ಗೆಲ್ಲಿಸಿದರೆ ಆಧಾರನ್ನು ಯಾವ ರೀತಿಯಲ್ಲೆಲ್ಲ ಬಳಸಬಹುದು ಎನ್ನುವುದನ್ನು ನಿಮಗೆ ಹೇಳಿಕೊಡುತ್ತಾರೆ. ತುಘಲಕ್ ಮಾಡಿದ್ದ ರೀತಿಯಲ್ಲೇ ಆಧಾರ್ ಕಾರ್ಡನ್ನು ಮುಂದೆ ರೂಪಾಯಿಯ ಬದಲಿಗೆ ಕರೆನ್ಸಿಯ ರೂಪದಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ನೀಲೇಕಣಿಯವರು ಸಂಶೋಧನೆ ನಡೆಸುತ್ತಿದ್ದಾರೆ. ಆ ಸಂಶೋಧನೆ ಯಶಸ್ವಿಯಾಗಬೇಕಾದರೆ ನೀವೆಲ್ಲ ನೀಲೇಕಣಿಯವರನ್ನು ಗೆಲ್ಲಿಸಬೇಕು...’’
ಕಾರ್ನಾಡ್ ಅವರ ಮಾತಿನಿಂದ ಕಾಸಿಗೆ ಖುಷಿಯಾಯಿತು ‘‘ಸಾರ್... ತುಘಲಕ್ ಥರ ಈ ನೀಲೇಕಣಿಯವರು ರಾಜಧಾನಿಯನ್ನು ಬದಲಿಸುವ ಸಾಧ್ಯತೆ ಇದೆಯಾ...’’ ಕೇಳಿದ.
‘‘ಯಾರಲ್ಲೂ ಹೇಳಬೇಡಿ. ಸ್ಕೂಪ್ ಸುದ್ದಿ ಇದು. ಗುಟ್ಟಾಗಿರಲಿ. ನೀಲೇಕಣಿ ಗೆದ್ದರೆ ರಾಜಧಾನಿಯನ್ನು ದಿಲ್ಲಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಾರಂತೆ. ದಿಲ್ಲಿಯಲ್ಲಿದ್ದವರೆಲ್ಲ ಬೆಂಗಳೂರಿಗೆ ವಲಸೆ ಬರ್ಬೇಕಾಗತ್ತೆ. ಸುಪ್ರೀಂಕೋರ್ಚು, ಸಂಸತ್‌ಭವನ, ರಾಷ್ಟ್ರಪತಿ ಭವನ ಎಲ್ಲವನ್ನು ಬುಡ ಸಮೇತ ಎತ್ತಿ ಬೆಂಗಳೂರಿಗೆ ವರ್ಗಾಯಿಸುವ ಪ್ಲಾನ್ ಇದೆ. ನನ್ನ ತುಘಲಕ್ ನಾಟಕದಲ್ಲಿ ಬರುವ ದೃಶ್ಯವೊಂದರಿಂದ ಅವರು ಸ್ಫೂರ್ತಿ ಪಡೆದು ಈ ನಿರ್ಧಾರವನ್ನು ಮಾಡಿದ್ದಾರೆ. ಮುಖ್ಯವಾಗಿ ನೀವು ನಿಮ್ಮ ಪತ್ನಿ ಸೂಸಿ ಅವರು ನೀಲೇಕಣಿಯವರಿಗೆ ಮತ ನೀಡಬೇಕು. ನೀವು ಗೆಲ್ಲಿಸಿದರೆ ಇದೆಲ್ಲ ಸಾಧಿಸಲು ಸಾಧ್ಯ. ಮುಖ್ಯವಾಗಿ ಅವರು ಗೆದ್ದರೆ ಅವರ ಹೆಸರಿನಲ್ಲಿ ನಾಟಕವೊಂದು ಬರೆಯಬೇಕು ಎಂದಿದ್ದೇನೆ. ‘ಟಿಪ್ಪು ಸುಲ್ತಾನನ ಕನಸುಗಳು’ ಇದ್ದಂತೆಯೇ ‘ನೀಲೇಕಣಿಯವರ ಕನಸುಗಳು’ ಎಂಬ ನಾಟಕವನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಸಬೇಕು ಎಂದಿದ್ದೇನೆ...’’
‘‘ನೀಲೇಕಣಿಯವರ ಕನಸುಗಳು ನಾಟಕ ಈಗಾಗಲೇ ಬಿಡುಗಡೆಯಾಗಿದೆ ಸಾರ್....ಚುನಾವಣಾ ಪ್ರಣಾಳಿಕೆಯನ್ನೇ ನಾಟಕವನ್ನಾಗಿ ಮರು ಪ್ರಿಂಟ್ ಮಾಡಿದರೆ ಆಯಿತು ಸಾರ್...ನಿಮಗೆ ಕೆಲಸ ಸುಲಭವಾಯಿತು....’’ ಕಾಸಿ ಸಲಹೆ ನೀಡಿದ್ದೇ....ಕಾರ್ನಾಡರು ‘‘ಬಾಲಿವುಡ್‌ನಿಂದ ಫೋನ್ ಬಂದಿದೆ...ಈಗ ಬಂದೆ...’’ ಎನ್ನುತ್ತಾ ತಮ್ಮ ಕಾರು ಹತ್ತಿ ರೊಂಯ್ಯನೆ ಹೊರಟರು.