Sunday, April 6, 2014

ನೀಲೇಕಣಿಯವರ ಹೆಸರಲ್ಲಿ ನಾಟಕ ಬರೀತೀನಿ ಕಣ್ರಿ....

ವಾರ್ತಾ ಭಾರತಿ ದೈನಿಕದ ರವಿವಾರ - ಏಪ್ರಿಲ್ -06-2014 ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಮಧ್ಯಾಹ್ನದ ಬಿಸಿಲು ಜಾಸ್ತಿಯಾಯಿತು ಎಂದು ಪತ್ರಕರ್ತ ಎಂಜಲು ಕಾಸಿ ಮನೆಯಲ್ಲಿ ತಣ್ಣಗೆ ಮಲಗಿದ್ದ. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಗಿ ಎದ್ದು ಬಾಗಿಲು ತೆರೆದರೆ ಗಿರೀಶ್ ಕಾರ್ನಾಡ್ ನಿಂತ್ಕೊಂಡಿದ್ದಾರೆ. ‘‘ಸಾರ್ ನೀವಾ....?’’ ಎಂದು ಕಾಸಿ ರೋಮಾಂಚನಗೊಂಡ.
‘‘ಅರೇ ಕಾಸಿಯವರೇ, ನಿಮ್ಮ ಮನೇನಾ ಇದು... ನಿಮ್ಮಲ್ಲಿ ಎಷ್ಟು ಜನ ಇದ್ದಾರೆ...’’ ಎಂದು ಕೇಳಿದರು.
ಕಾಸಿಗೆ ಗೊಂದಲವಾಯಿತು. ತಮ್ಮ ನಾಟಕಕ್ಕೆ ಜನ ಸೇರಿಸುವುದಕ್ಕಾಗಿ ಬಂದಿದ್ದಾರೆಯೇ ಎಂಬ ಅನುಮಾನದಿಂದ ‘‘ಸಾರ್...ನಾನು ನನ್ನ ಹೆಂಡತಿ ಸೂಸಿ ಸಾರ್. ಇಬ್ಬರು ಬರ್ತೇವೆ ಸಾರ್...ನಾಟಕ ಎಲ್ಲಿ ಇಟ್ಟಿದ್ದೀರಿ ಸಾರ್?’’ ಕೇಳಿದ.
‘‘ನಾಟಕ ಅಲ್ಲ ಕಣ್ರೀ...ಮತ ಕೇಳೋದಕ್ಕೆ ಬಂದಿದ್ದೇನೆ...’’ ಎಂದು ಕಾಸಿಗೆ ಶಾಕ್ ಕೊಟ್ಟು ಬಿಟ್ಟರು.
‘‘ಸಾರ್ ಓಟಿಗೆ ನಿಂತಿದ್ದೀರಾ...?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಇಲ್ಲ ಕಣ್ರೀ...ನೀಲೇಕಣಿಯವರ ಪರವಾಗಿ ಓಟಿಗೆ ಇಳಿದಿದ್ದೇನೆ...’’ ಕಾರ್ನಾಡ್ ಸ್ಪಷ್ಟೀಕರಣ ನೀಡಿದರು.
ಕಾಸಿ ಮತ್ತೂ ರೋಮಾಂಚನಗೊಂಡ ‘‘ಹೌದಾ ಸಾರ್...ಶೂಟಿಂಗ್ ಇಲ್ವಾ ಸಾರ್...ಬಾಲಿವುಡ್‌ನಲ್ಲಿ ಇತ್ತೀಚೆಗೆ ನೀವು ಬಿಸಿ ನಟರಲ್ವಾ ಸಾರ್. ಅದನ್ನು ಬಿಟ್ಟು ಶೂಟಿಂಗ್‌ಗೆ ಬಂದಿದ್ದೀರಾ...’’
 ‘‘ನಾನೀಗ ಬಾಲಿವುಡ್‌ನಲ್ಲಿ ತುಂಬಾ ತುಂಬಾ ಬಿಸಿ ಕಣ್ರೀ...ಸಲ್ಮಾನ್‌ಖಾನ್ ಜೊತೆಗೆ ‘ಏಕ್ ಥಾ ಟೈಗರ್’ನಲ್ಲಿ ನಟಿಸಿದ ಬಳಿಕ ನನಗೆ ಸಿಕ್ಕಾಬಟ್ಟೆ ಡಿಮ್ಯಾಂಡ್ ಬರ್ತಾ ಇದೆ. ಸಲ್ಮಾನ್ ಖಾನ್ ಬದಲಿಗೆ ನನ್ನನ್ನೇ ಹಾಕೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ ಶರ್ಟ್ ಬಿಚ್ಚಿ ಎದೆ ತೋರಿಸೋದಕ್ಕೆ ತುಸು ನಾಚಿಕೆ ಕಣ್ರೀ...ಆಫರ್‌ನೆಲ್ಲ ಸಲ್ಮಾನ್‌ಖಾನ್‌ಗೆ ಬಿಟ್ಟುಕೊಟ್ಟೆ...ಇದೀಗ ನೀಲೇಕಣಿಯವರು ಕೆಲವು ದಿನದ ಕಾಲ್‌ಶೀಟ್ ಕೇಳಿದ್ದಾರೆ. ಆದ್ದರಿಂದ ನನ್ನ ಶೂಟಿಂಗನ್ನು ಬಾಲಿವುಡ್‌ನಿಂದ ಬೆಂಗಳೂರಿಗೆ ವರ್ಗಾಯಿಸಿದ್ದೇನೆ...’’
 ಕಾಸಿಗೆ ತಕ್ಷಣ ತಾನು ಶರ್ಟ್ ಹಾಕಿಕೊಳ್ಳದೇ ಇರುವುದು ನೆನಪಿಗೆ ಬಂತು. ಒಳ ಹೋದವನೇ ಶರ್ಟ್ ಹಾಕಿಕೊಂಡು ಬಂದು ಕಾರ್ನಾಡರ ಇಂಟರ್ಯೂ ಮಾಡಲು ಶುರು ಮಾಡಿದ.
‘‘ಸಾರ್...ಬಾಲಿವುಡ್‌ನಲ್ಲಿ ನಿಮ್ಮ ರೆಮ್ಯುನರೇಷನ್ ತುಂಬಾ ಜಾಸ್ತಿಯಾಗಿದೆಯಲ್ಲ... ನಿಮ್ಮ ಕಾಲ್‌ಶೀಟ್‌ನ ರೇಟ್ ಎಷ್ಟು ಸಾರ್?’’ ಕಾಸಿ ಕೇಳಿ ಬಿಟ್ಟ.
ಕಾರ್ನಾಡ್‌ಗೆ ಮುಜುಗರವಾಯಿತು ‘‘ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಕಣ್ರೀ...ಒಟ್ಟಾರೆಯಾಗಿ ನೀಲೇಕಣಿಯವರು ಗೆಲ್ಲಬೇಕು. ಅದಕ್ಕಾಗಿ ಪ್ರಚಾರಕ್ಕಿಳಿದಿದ್ದೇನೆ...’’
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ನೀಲೇಕಣಿ ಯವರನ್ನೇ ಯಾಕೆ ಆರಿಸಿದ್ರಿ. ಅವರಲ್ಲಿ ಅದೇನು ವೈಶಿಷ್ಟವನ್ನು ಕಂಡ್ರೀ ಸಾರ್?’’
‘‘ನೋಡಿ ಕಾಸಿಯವ್ರೇ...ನನಗೆ ತುಘಲಕ್ ನಾಟಕ ಬರೆಯಲು ಸ್ಫೂರ್ತಿಯೇ ನೀಲೇಕಣಿಯವರು. ಅವರಿಲ್ಲದಿದ್ದರೆ ನಾನು ತುಘಲಕ್ ನಾಟಕವನ್ನು ಬರೆಯುತ್ತಿರಲಿಲ್ಲ’’
ಕಾಸಿಗೆ ಗೊಂದಲವಾಯಿತು ‘‘ಅದು ಹೇಗೆ ಸಾರ್?’’ ಕೇಳಿದ.
‘‘ನೋಡ್ರಿ...ತುಘಲಕ್ ಏನು ಮಾಡಿದ? ಚಿನ್ನ, ತಾಮ್ರದ ನಾಣ್ಯದ ಬದಲಿಗೆ ಚರ್ಮದ ನಾಣ್ಯಗಳನ್ನು ಜಾರಿಗೆ ತಂದ. ಒಂದು ಕ್ರಾಂತಿಯನ್ನೇ ಮಾಡಿದ. ಇದೀಗ ನೀಲೇಕಣಿಯವರು ಏನು ಮಾಡಿದರು? ರೇಷನ್ ಕಾರ್ಡ್ ಬದಲು ಆಧಾರ್‌ಕಾರ್ಡ್ ತಂದರು. ತುಘಲಕ್‌ನ ಮುಂದಾಲೋಚನೆ ನಮ್ಮ ನೀಲೇಕಣಿಯವರಿಗಿದೆ...’’ ಕಾರ್ನಾಡರು ವಿವರಿಸಿದರು.
ಕಾಸಿಗೂ ಹೌದೆನಿಸಿತು ‘‘ಆದರೆ ತುಘಲಕ್‌ನ ಚರ್ಮದ ನಾಣ್ಯಗಳನ್ನೆಲ್ಲ ತೆಂಗಿನ ಬುಡಕ್ಕೆ ಗೊಬ್ಬರವಾಗಿ ಬಳಸಲಾಯಿತಂತಲ್ಲ ಸಾರ್...’’ ಕಾಸಿ ಅನುಮಾನವೊಂದನ್ನು ಮುಂದಿಟ್ಟ.
‘‘ಬಳಸಿದರೇನಾಯಿತು...ಒಳ್ಳೆಯದೇ ಆಯಿತು. ತುಘಲಕ್‌ನ ರಾಜ್ಯದಲ್ಲಿ ತೆಂಗಿನ ಗಿಡದ ಫಸಲು ಜಾಸ್ತಿಯಾಯಿತು. ಮರಗಳು ಹೆಚ್ಚು ಹೆಚ್ಚು ಫಲವನ್ನು ಕೊಟ್ಟ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಯಿತು..’’ ಕಾರ್ನಾಡ್ ಇತಿಹಾಸದ ಸೂಕ್ಷ್ಮಗಳನ್ನು ವಿವರಿಸಿದರು.
ಕಾಸಿ ಮತ್ತೆ ರೋಮಾಂಚನಗೊಂಡ. ತುಘಲಕ್‌ನ ಕಾಲದ ಈ ಘಟನೆಯನ್ನು ಯಾರೂ ವಿವರಿಸಿರಲಿಲ್ಲ. ‘‘ಸಾರ್...ಅಂದರೆ ನೀಲೇಕಣಿಯವರು ಮಾಡಿಸಿಕೊಟ್ಟಿರುವ ಆಧಾರ್‌ಕಾರ್ಡ್‌ಗಳಿಗೆ ತೆಂಗಿನ ಮರದ ಬುಡವೇ ಗತಿಯಾ?’’
ಕಾರ್ನಾಡರು ಸಿಟ್ಟಾದರು ‘‘ಅದರಿಂದ ಏನಾಯಿತು. ತೆಂಗಿನ ಬುಡಕ್ಕೆ ಹಾಕಿದರೆ ಫಸಲು ಜಾಸ್ತಿಯಾಗುತ್ತದೆ. ಎಕ್ಸ್‌ಪೋರ್ಟ್ ಜಾಸ್ತಿಯಾಗಿ ವಿದೇಶಿ ವಿನಿಮಯ ಹೆಚ್ಚಳವಾಗುತ್ತದೆ. ದೇಶದ ಆರ್ಥಿಕ ಬಿಕ್ಕಟ್ಟು ಸುಧಾರಣೆಯಾಗುತ್ತದೆ...’’ ಎನ್ನುತ್ತಾ ಭಾರತದ ಇಡೀ ಅರ್ಥವ್ಯವಸ್ಥೆಯನ್ನು ಕುಳಿತಲ್ಲೇ ಬುಡಮೇಲು ಗೊಳಿಸತೊಡಗಿದರು.
ಕಾಸಿಯ ತಲೆ ಗಿರ್ರೆಂದು ತಿರುಗತೊಡಗಿತು ‘‘ಹಾಗಾದ್ರೆ...ತೆಂಗಿನ ಮರದ ಫಸಲನ್ನು ಹೆಚ್ಚಿಸಲು ಈ ಆಧಾರ್ ಕಾರ್ಡ್ ಮಾಡಲಾಗಿದೆಯೇ ಸಾರ್...’’ ಕೇಳಿದ.
‘‘ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು....ಆಧಾರ್ ಒಂದು ಬಹುಪಯೋಗಿ ಕಾರ್ಡ್. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಬಹುದು ಎನ್ನುವುದಕ್ಕಾಗಿ ನಾನು ಹೇಳಿದೆ...’’
ಕಾಸಿಯ ಅನುಮಾನ ಮುಗಿಯಲಿಲ್ಲ ‘‘ಹಾಗಲ್ಲ ಸಾರ್...ಆಧಾರ್ ಕಾರ್ಡ್ ಪ್ಲಾಸ್ಟಿಕ್ ಸಾರ್. ಅದನ್ನು ಗೊಬ್ಬರವಾಗಿ ಬಳಸುವುದು ಹೇಗೆ...’’
‘‘ನೋಡ್ರಿ...ಅದನ್ನು ಹೇಗೆ ಬಳಸಬಹುದು ಎನ್ನುವುದರ ಸರ್ವ ಉಪಾಯ ನೀಲೇಕಣಿಯಲ್ಲಿದೆ. ನೀವು ಅವರನ್ನು ಮತಹಾಕಿ ಗೆಲ್ಲಿಸಿದರೆ ಆಧಾರನ್ನು ಯಾವ ರೀತಿಯಲ್ಲೆಲ್ಲ ಬಳಸಬಹುದು ಎನ್ನುವುದನ್ನು ನಿಮಗೆ ಹೇಳಿಕೊಡುತ್ತಾರೆ. ತುಘಲಕ್ ಮಾಡಿದ್ದ ರೀತಿಯಲ್ಲೇ ಆಧಾರ್ ಕಾರ್ಡನ್ನು ಮುಂದೆ ರೂಪಾಯಿಯ ಬದಲಿಗೆ ಕರೆನ್ಸಿಯ ರೂಪದಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ನೀಲೇಕಣಿಯವರು ಸಂಶೋಧನೆ ನಡೆಸುತ್ತಿದ್ದಾರೆ. ಆ ಸಂಶೋಧನೆ ಯಶಸ್ವಿಯಾಗಬೇಕಾದರೆ ನೀವೆಲ್ಲ ನೀಲೇಕಣಿಯವರನ್ನು ಗೆಲ್ಲಿಸಬೇಕು...’’
ಕಾರ್ನಾಡ್ ಅವರ ಮಾತಿನಿಂದ ಕಾಸಿಗೆ ಖುಷಿಯಾಯಿತು ‘‘ಸಾರ್... ತುಘಲಕ್ ಥರ ಈ ನೀಲೇಕಣಿಯವರು ರಾಜಧಾನಿಯನ್ನು ಬದಲಿಸುವ ಸಾಧ್ಯತೆ ಇದೆಯಾ...’’ ಕೇಳಿದ.
‘‘ಯಾರಲ್ಲೂ ಹೇಳಬೇಡಿ. ಸ್ಕೂಪ್ ಸುದ್ದಿ ಇದು. ಗುಟ್ಟಾಗಿರಲಿ. ನೀಲೇಕಣಿ ಗೆದ್ದರೆ ರಾಜಧಾನಿಯನ್ನು ದಿಲ್ಲಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಾರಂತೆ. ದಿಲ್ಲಿಯಲ್ಲಿದ್ದವರೆಲ್ಲ ಬೆಂಗಳೂರಿಗೆ ವಲಸೆ ಬರ್ಬೇಕಾಗತ್ತೆ. ಸುಪ್ರೀಂಕೋರ್ಚು, ಸಂಸತ್‌ಭವನ, ರಾಷ್ಟ್ರಪತಿ ಭವನ ಎಲ್ಲವನ್ನು ಬುಡ ಸಮೇತ ಎತ್ತಿ ಬೆಂಗಳೂರಿಗೆ ವರ್ಗಾಯಿಸುವ ಪ್ಲಾನ್ ಇದೆ. ನನ್ನ ತುಘಲಕ್ ನಾಟಕದಲ್ಲಿ ಬರುವ ದೃಶ್ಯವೊಂದರಿಂದ ಅವರು ಸ್ಫೂರ್ತಿ ಪಡೆದು ಈ ನಿರ್ಧಾರವನ್ನು ಮಾಡಿದ್ದಾರೆ. ಮುಖ್ಯವಾಗಿ ನೀವು ನಿಮ್ಮ ಪತ್ನಿ ಸೂಸಿ ಅವರು ನೀಲೇಕಣಿಯವರಿಗೆ ಮತ ನೀಡಬೇಕು. ನೀವು ಗೆಲ್ಲಿಸಿದರೆ ಇದೆಲ್ಲ ಸಾಧಿಸಲು ಸಾಧ್ಯ. ಮುಖ್ಯವಾಗಿ ಅವರು ಗೆದ್ದರೆ ಅವರ ಹೆಸರಿನಲ್ಲಿ ನಾಟಕವೊಂದು ಬರೆಯಬೇಕು ಎಂದಿದ್ದೇನೆ. ‘ಟಿಪ್ಪು ಸುಲ್ತಾನನ ಕನಸುಗಳು’ ಇದ್ದಂತೆಯೇ ‘ನೀಲೇಕಣಿಯವರ ಕನಸುಗಳು’ ಎಂಬ ನಾಟಕವನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಸಬೇಕು ಎಂದಿದ್ದೇನೆ...’’
‘‘ನೀಲೇಕಣಿಯವರ ಕನಸುಗಳು ನಾಟಕ ಈಗಾಗಲೇ ಬಿಡುಗಡೆಯಾಗಿದೆ ಸಾರ್....ಚುನಾವಣಾ ಪ್ರಣಾಳಿಕೆಯನ್ನೇ ನಾಟಕವನ್ನಾಗಿ ಮರು ಪ್ರಿಂಟ್ ಮಾಡಿದರೆ ಆಯಿತು ಸಾರ್...ನಿಮಗೆ ಕೆಲಸ ಸುಲಭವಾಯಿತು....’’ ಕಾಸಿ ಸಲಹೆ ನೀಡಿದ್ದೇ....ಕಾರ್ನಾಡರು ‘‘ಬಾಲಿವುಡ್‌ನಿಂದ ಫೋನ್ ಬಂದಿದೆ...ಈಗ ಬಂದೆ...’’ ಎನ್ನುತ್ತಾ ತಮ್ಮ ಕಾರು ಹತ್ತಿ ರೊಂಯ್ಯನೆ ಹೊರಟರು.

No comments:

Post a Comment