Monday, March 30, 2015

ನರಕದಲ್ಲೊಂದು ಸ್ವಚ್ಛತಾ ಆಂದೋಲನ!

ನರೇಂದ್ರ ಮೋದಿ ಸ್ವಚ್ಚತಾ ಆಂದೋಲನಕ್ಕೆ ಇಳಿದ ಸಂದರ್ಭದಲ್ಲಿ ಶನಿವಾರ - ಅಕ್ಟೋಬರ್ -18-2014ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ನರೇಂದ್ರ ಮೋದಿ, ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶಶಿ ತರೂರ್, ಸಾನಿಯಾ ಮಿರ್ಝಾ ಎಲ್ಲರೂ ಬೀದಿಗಿಳಿದು ಕಸ ಗುಡಿಸುತ್ತಿರುವುದನ್ನು ಮೇಲಿನಿಂದ ನೋಡಿದ ಮಹಾತ್ಮಾ ಗಾಂಧೀಜಿಗೆ ಫುಲ್ ಕಂಫ್ಯೂಶನ್. ಎಲ್ಲರೂ ತನ್ನ ಭಾವಚಿತ್ರದ ಜೊತೆಗೆ ಪೊರಕೆ ಹಿಡಿದುಕೊಂಡಿದ್ದಾರಲ್ಲ ಎಂದುಕೊಂಡು ಭಯಭೀತರಾದರು. ಸಾರ್ವಜನಿಕವಾಗಿ ನನಗೆ ಪೊರಕೆ ಸೇವೆ ಮಾಡುವ ಉದ್ದೇಶವೇನಾದರೂ ಇದೆಯಾ...ಎಂದು ಸ್ವರ್ಗಲೋಕದಿಂದ ತನ್ನ ದೂತರಿಗೆ ಕರೆ ಕಳುಹಿಸಿದರು ‘‘ಇವತ್ತಿನ ಹರಿಜನ ಸಂಚಿಕೆ ಒಂದನ್ನು ಭೂಲೋಕದಿಂದ ಹಿಡಿದುಕೊಂಡು ಬನ್ನಿ. ನಿಜವಾದ ವಿಷಯವೇನು ಎನ್ನುವುದು ನನಗೆ ತಿಳಿಯ ಬೇಕಾಗಿದೆ....’’
ದೂತ ವಿಷಾದದ ನಗೆ ನಕ್ಕು ಹೇಳಿದ ‘‘ಬಾಪೂಜಿ... ನಿಮ್ಮ ಹರಿಜನ ಪತ್ರಿಕೆ ಸ್ವಾತಂತ್ರ ಸಿಗುವ ಮೊದಲೇ ನಿಂತು ಹೋಗಿದೆ ಗೊತ್ತಿದೆಯಲ್ಲ...ಈಗ ಏನಿದ್ದರೂ ನಂ.1, ನಂ.2 ಪತ್ರಿಕೆಗಳದ್ದೇ ಕಾರುಬಾರು...ಎಲ್ಲ ಪುಕ್ಕಟೆ ಹಂಚುತ್ತಾರೆ...ನಮ್ಮ ನರಕಕ್ಕೆ ಎಲ್ಲ ದಿನ ಪತ್ರಿಕೆಗಳೂ ಪೂರೈಸಲಾಗುತ್ತದೆ. ಪುಕ್ಕಟೆಯಾಗಿ....’’
 ‘ಹೇ ರಾಮ್...’ ಎಂದು ನಿಟ್ಟುಸಿರಿಟ್ಟ ಗಾಂಧೀಜಿ ‘‘ಸರಿ...ಯಾರಿಂದಾದರೂ ಒಂದು ಪತ್ರಿಕೆ ತನ್ನಿ...’’ ಎಂದು ಹೇಳಿದರು. ದೂತ ತಕ್ಷಣವೇ ನರಕಕ್ಕೆ ಹೋಗಿ ಒಂದಿಷ್ಟು ದಿನ ಪತ್ರಿಕೆಗಳನ್ನು ತಂದ...‘‘ಯಾರೂ ಪತ್ರಿಕೆಗಳನ್ನು ಕೊಡಲು ಒಪ್ಪಲಿಲ್ಲ ಬಾಪೂಜಿ. ಆದರೆ ಗಾಂಧೀಜಿಗೆ ಎಂದು ಗೊತ್ತಾದ ಕೂಡಲೇ ನಾಥೂರಾಂ ಗೋಡ್ಸೆ ತನ್ನಲ್ಲಿದ್ದ ಪತ್ರಿಕೆಯನ್ನು ತಕ್ಷಣ ಕೊಟ್ಟ...ನರಕಕ್ಕೆ ಸಂಬಂಧಿಸಿ ಯಾವುದೇ ವರದಿಗಳನ್ನು ಅವರು ನೇರವಾಗಿ ಭೂಲೋಕದ ಪತ್ರಿಕೆಗಳಿಗೆ ತಲುಪಿಸುತ್ತಾರೆ..ಕ್ಯಾಮರಾಮ್ಯಾನ್ ಸಾವರ್ಕರ್ ಜೊತೆಗೆ ವರದಿಗಾರ ನಾಥೂರಾಂ ಗೋಡ್ಸೆ...ಎಂದು ಈಗ ದಿನಾ ಟೀವಿಯಲ್ಲಿ ಸುದ್ದಿಗಳು ಬರುತ್ತಿರುತ್ತವೆ...ಇವತ್ತು ನರಕಲೋಕವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದಾರೆ ಸಾವರ್ಕರ್...ಗಾಂಧಿಜಯಂತಿ ದಿನ ಭೂಲೋಕದಲ್ಲಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನ ಮಾಡುತ್ತಿದ್ದಾರಂತೆ...ಅದರ ಪರವಾಗಿ ನರಕಲೋಕವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾಥೂರಾಂ ಗೋಡ್ಸೆ ಮತ್ತು ಬಳಗ ಇಳಿದಿದೆ. ನೀವು ಅದರ ಉದ್ಘಾಟನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಬರೇ ಫೋಟೋಕ್ಕೆ ನಾಥೂರಾಂ ಜೊತೆಗೆ ಒಂದು ಭಂಗಿಯನ್ನು ನೀಡಿದರೆ ಸಾಕಂತೆ. ಗುಡಿಸಬೇಕಾಗಿಲ್ಲ ಅಂತೆ. ಬಾಪೂಜಿ ಇದು ಒಳ್ಳೆಯ ಅವಕಾಶ. ಈಗ ಅವರದೇ ಸರಕಾರ ಇರೋದು. ಹೋಗಿ ನರಕದ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಬನ್ನಿ...’’
‘‘ಹೇ ರಾಮ್...ಮೊದಲು ನಾಥೂರಾಂ ಗೋಡ್ಸೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿ. ಅಂತರಂಗವನ್ನು ಶುಚಿಗೊಳಿಸಲಿ. ಅವನು ನನ್ನನ್ನು ಕೊಂದು ಹಾಕಿದ್ದಕ್ಕೆ ನನಗೆ ಬೇಸರವಿಲ್ಲ. ನನ್ನ ಆಲೋಚನೆಗಳನ್ನು ಕೊಂದು ಹಾಕಲು ಅವನಿಗೆ ಸಾಧ್ಯವಿಲ್ಲ. ನನ್ನ ಆಶ್ರಮದಲ್ಲಿ ಹಿಂಸೆಯನ್ನು ಮಾಡಿದ್ದಕ್ಕಾಗಿ ಮಾತ್ರ ನನಗೆ ದುಃಖವಿದೆ. ಆದುದರಿಂದ ಆ ಹಿಂಸೆಗಾಗಿ ಅವನು ಪಶ್ಚಾತಾಪ ಪಟ್ಟು ಮರಳಿದರೆ ನಾನು ಗೋಡ್ಸೆಯ ಜೊತೆಗೆ ಕೈ ಜೋಡಿಸಿ ನರಕದಲ್ಲಿರುವ ಬ್ರಾಹ್ಮಣರ ಅಗ್ರಹಾರವನ್ನು ಶುಚಿಗೊಳಿಸಲು ಸಿದ್ಧನಿದ್ದೇನೆ. ಭಾರತದಲ್ಲಿರುವ ದಲಿತರನ್ನು ಅತ್ಯಂತ ಹೀನಯವಾಗಿ ಶೋಷಣೆ ಮಾಡಿದವರಿಗಾಗಿ ಇರುವ ನರಕದ ಅತ್ಯಂತ ಕೊಳಚೆ ಪೀಡಿತವಾಗಿರುವ ಅಗ್ರಹಾರ ಅದು. ಮೊದಲು ಗೋಡ್ಸೆ ತನ್ನ ಮನಸ್ಸನ್ನು ಪರಿವರ್ತನೆಗೊಳಿಸಲಿ. ಅಂತರಂಗವನ್ನು ಸ್ವಚ್ಛಗೊಳಿಸಲು. ನಾವಿಬ್ಬರು ಜೊತೆಯಾಗಿ ನರ ದಲ್ಲಿರುವ ಅಗ್ರಹಾರಗಳನ್ನು ಶುಚಿಗೊಳಿಸಿ ಅದರಿಂದ ಅವರನ್ನು ಮುಕ್ತಗೊಳಿಸುವೆವು...’’
ಸ್ವರ್ಗದ ದೂತನಿಗೆ ನಗು ಬಂತು ‘‘ಬಾಪೂಜಿ. ಅವರಿಗೆ ನಿಮ್ಮ ಜೊತೆಗೆ ಒಂದು ಫೋಟೋ ಹೊಡೆಸಿಕೊಂಡು ಅದನ್ನು ಭೂಲೋಕಕ್ಕೆ ತುರ್ತಾಗಿ ಕಳುಹಿಸಬೇಕಾಗಿದೆಯಂತೆ. ಭಾರತದಲ್ಲೀಗ ನೀವು ಮತ್ತು ಗೋಡ್ಸೆ ಭಾಯಿ ಭಾಯಿ. ಎರಡು ಸಿದ್ದಾಂತಗಳ ನಡುವೆ ಒಂದು ಸೇತುವೆ ಕಟ್ಟುವ ಕೆಲಸ ನಡೆದಿದೆ...ನಿಮ್ಮ ಫೋಟೋ ಒಂದು ಇದ್ದರೆ ರಾಜಕೀಯವಾಗಿ ಅವರಿಗೆ ತುಂಬಾ ಲಾಭವಾಗುತ್ತದೆ...’’
‘‘ಹೇ ರಾಮ್...’’ ಗಾಂಧೀಜಿ ಮತ್ತೆ ನೊಂದು ಕೊಂಡರು. ‘‘ನರಕದಲ್ಲಿ ಇಷ್ಟು ಸಮಯ ನರಳಿ ದರೂ ಆತನ ಮನಸ್ಸು ಬದಲಾಗಲಿಲ್ಲ. ಬರೇ ಹಿಂಸೆಯ ಶಿಕ್ಷೆಯಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅವರನ್ನೆಲ್ಲ ನಾನು ಬದಲಾವಣೆ ಮಾಡುತ್ತೇನೆ ಎಂದು ಯಮರಾಜನ ಬಳಿ ಹೇಳಿದೆ. ಆದರೆ ಅದಕ್ಕೆ ಯಮರಾಜ ಒಪ್ಪಲಿಲ್ಲ...ಬರೇ ಅಹಿಂಸೆಯಿಂದ ಒಬ್ಬನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಮರಾಜರು ತಿಳಿದಿದ್ದಾರೆ...ಇರಲಿ. ಭಾರತದಲ್ಲಿ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್ ಮೊದಲಾದವರೆಲ್ಲ ಬೀದಿಯಲ್ಲಿ ಏನು ಮಾಡುತ್ತಿದ್ದಾರೆ...’’ ಬಾಪೂಜಿ ಕೇಳಿದರು.
‘‘ಅವರೆಲ್ಲ ಸ್ವಚ್ಛತಾ ಆಂದೋಲನದ ಪರವಾಗಿ ಫೋಟೋಗಳಿಗೆ ಭಂಗಿ ನೀಡುತ್ತಿದ್ದಾರೆ....’’ ದೂತ ಹೇಳಿದ.
‘‘ಅಂದರೆ...ಅವರೆಲ್ಲ ರಸ್ತೆ ಗುಡಿಸುತ್ತಾರೆಯೇ... ಭಾರತವನ್ನು ಸ್ವಚ್ಛಗೊಳಿಸುತ್ತಾರೆಯೆ?’’ ಬಾಪೂಜಿ ಆಸೆಯಿಂದ ಕೇಳಿದರು.
ದೂತ ನಕ್ಕ ‘‘ಬಾಪೂಜಿ, ಅವರೆಲ್ಲ ಇಡೀ ಭಾರತದ ಸಂಪನ್ಮೂಲವನ್ನು, ಬಡವರನ್ನು ಗುಡಿಸಿ ಸ್ವಚ್ಛಗೊಳಿಸುವ ಯೋಜನೆ ಹಾಕಿದ್ದಾರೆ. ಅದಕ್ಕಾಗಿ ಕೆಲವು ಸಂಚುಗಳನ್ನು ಹಾಕಿದ್ದಾರೆ. ಅದರ ಭಾಗವಾಗಿ ಈಗ ಗುಡಿಸುವ ನಾಟಕ ಮಾಡುತ್ತಿದ್ದಾರೆ...’’
‘‘ಆದರೆ ಮೋದಿಯವರು ಒಂದು ಬೀದಿಯನ್ನು ಗುಡಿಸುವ ಹಾಗೆ ಕಾಣುತ್ತಿದೆಯಲ್ಲ...’’ ಗಾಂಧಿ ಮೇಲಿ ನಿಂದಲೇ ದಿಲ್ಲಿಯ ಒಂದು ಬೀದಿಯನ್ನು ನೋಡುತ್ತಾ ಕೇಳಿದರು.
 ‘‘ಅವರು ಗುಡಿಸುವುದಕ್ಕಾಗಿಯೇ ಅಲ್ಲಿ ವಿಶೇಷ ಕಸಗಳನ್ನು ತಂದು ಹಾಕಲಾಗಿದೆ ಬಾಪೂಜಿ. ಹಾಗೆಯೇ ಅವರಿಗಾಗಿ ವಿಶೇಷ ಕೈಗವಚ, ವಿಶೇಷ ಕಸಬರಿಕೆಗಳನ್ನು ಒದಗಿಸಲಾಗಿದೆ. ಟಿವಿಯವರಿಗಾಗಿ ಮತ್ತು ಪತ್ರಿಕೆ ಗಳಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ...’’
 ‘‘ಆತ್ಮ ಪರಿವರ್ತನೆಯಾಗದೆ ಕೇವಲ ನಾಟಕಕ್ಕಾಗಿ ಈ ರೀತಿ ಮಾಡಿದರೆ ದೇಶ ಉದ್ಧಾರ ಸಾಧ್ಯವೆ...ಅದಿರಲಿ. ಗ್ರಾಮೀಣ ಪ್ರದೇಶದಲ್ಲಿರುವ ಭಂಗಿ ಸಮುದಾಯದ ಜನರು ಏನು ಮಾಡುತ್ತಿದ್ದಾರೆ...’’
‘‘ಅವರಿನ್ನೂ ಮಲ ಹೊರುತ್ತಲೇ ಇದ್ದಾರೆ. ರಸ್ತೆ ಗುಡಿಸುತ್ತಲೇ ಇದ್ದಾರೆ...’’ ದೂತ ಹೇಳಿದ.
‘‘ನಿಜಕ್ಕೂ ಈ ದೇಶವನ್ನು ಸ್ವಚ್ಛಗೊಳಿಸುತ್ತಿರುವವರು ಅವರಲ್ಲವೆ? ಅವರ ಚಿತ್ರಗಳನ್ನು ಯಾಕೆ ಪತ್ರಿಕೆಗಳು ಹಾಕುತ್ತಿಲ್ಲ...?’’ ಗಾಂಧೀಜಿ ಅಚ್ಚರಿಯಿಂದ ಕೇಳಿದರು.
 ‘‘ಅಯ್ಯೋ...ಇವರೆಲ್ಲ ಸೇರಿ ಅಕ್ಟೋಬರ್ 2ನ್ನು ಯಾಕೆ ಇಷ್ಟು ಕ್ರೂರವಾಗಿ ಆಚರಿಸುತ್ತಿದ್ದಾರೆ. ನನ್ನನ್ನು ಒಂದು ಬಾರಿ ಗೋಡ್ಸೆ ಕೊಂದು ಮುಗಿಸಿದ್ದಾನೆ. ಆದರೆ ಇವರೆಲ್ಲ ಮತ್ತೆ ಮತ್ತೆ ಕೊಂದು ಹಾಕಲು ಅಕ್ಟೋಬರ್ 2ನ್ನು ಬಳಸುತ್ತಿದ್ದಾರಲ್ಲ...’’ ಎಂದು ಗಾಂಧೀಜಿ ಸ್ವರ್ಗದಲ್ಲಿರುವ ತನ್ನ ಆಶ್ರಮದ ನೆಲದಲ್ಲಿ ಕುಸಿದು ಬಿದ್ದರು. ಅಷ್ಟರಲ್ಲಿ ಅವರ ಕೋಣೆಯ ಟಿವಿಯನ್ನು ದೂತ ಆನ್ ಮಾಡಿದ. ಅದರಲ್ಲಿ ಗೋಡ್ಸೆ ವರದಿಯನ್ನು ಬಿತ್ತರಿಸುತ್ತಿದ್ದ. ‘‘ಇದೀಗ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮ ನರಕದಲ್ಲಿ ಯಶಸ್ವಿಯಾಗಿ ನಡೆಯಿತು. ನರಕದಲ್ಲಿರುವ ಶೋಷಿತ ಸಮುದಾಯವಾಗಿರುವ ಬ್ರಾಹ್ಮಣ ಅಗ್ರಹಾರವನ್ನು ಸ್ವಚ್ಛತಾ ಆಂದೋಲನದ ಪರವಾಗಿ ಗುಡಿಸುವ ಕಾರ್ಯಕ್ರಮ ಜರಗುತ್ತಿದೆ. ಈ ಸ್ವಚ್ಛತಾ ಆಂದೋಲನದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮವನ್ನು ಮಹಾತ್ಮಗಾಂಧೀಜಿಯವರೇ ಖುದ್ದಾಗಿ ಬಂದು ಉದ್ಘಾಟಿಸುವುದರಲ್ಲಿದ್ದರು. ಆದರೆ ತುರ್ತಾಗಿ ನೆಹರೂ ಅವರ ಜೊತೆಗೆ ಮೀಟಿಂಗ್ ಇದ್ದುದರಿಂದ ಅವರು ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಪ್ಪಟ ಗಾಂಧೀವಾದಿಯಾಗಿರುವ ಗೋಲ್ವಾಲ್ಕರ್ ಅವರು ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿದರು. ಈ ಸ್ವಚ್ಛತಾ ಆಂದೋಲನದಲ್ಲಿ ಸಿಖ್ ಮುಖಂಡರಾಗಿರುವ ಬಿಂದ್ರನ್‌ವಾಲೆ ಕೂಡ ಭಾಗವಹಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದ ಉಸಾಮಬಿನ್ ಲಾದೆನ್ ಅವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ. ಕ್ಯಾಮರಾಮೇನ್ ಸಾವರ್ಕರ್ ಜೊತೆಗೆ ನಾಥೂರಾಂ ಗೋಡ್ಸೆ....ನರಕದಿಂದ...’’
ಅಷ್ಟರಲ್ಲಿ ಪತ್ರಕರ್ತ ಎಂಜಲು ಕಾಸಿಗೆ ಎಚ್ಚರ ವಾಯಿತು. ತಾನು ಈವರೆಗೆ ನೋಡಿದ್ದು ವಾಸ್ತವವೋ, ಕನಸೋ ಎಂಬ ಗೊಂದಲ ಇನ್ನೂ ಅವನೊಳಗಿತ್ತು. ಟಿವಿ ಆನ್ ಮಾಡಿದ.ನೋಡಿದರೆ ಅದರಲ್ಲಿ ‘‘ಸಚಿನ್, ಅನಿಲ್ ಅಂಬಾನಿ ಮೊದಲಾದವರೆಲ್ಲ ಕಸ ಗುಡಿಸುವ ವರದಿ’’ ಬಿತ್ತರವಾಗುತ್ತಿತ್ತು. 
ಅಕ್ಟೋಬರ್ -18-2014

No comments:

Post a Comment