Tuesday, March 31, 2015

ಪೂಜೆಯಿಂದ ಅಸ್ಸಾಂನಲ್ಲಿ ರಕ್ತದ ಮಳೆಯಾಗಿದೆ...!

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮಳೆಗಾಗಿ ಪೂಜೆ ಮಾಡಲು ಸರಕಾರದಿಂದ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿದರು. ಈ ಹಿನ್ನೆಲೆಯಲ್ಲಿ ರವಿವಾರ -ಜುಲೈ -29-2012 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೊಡೆ ಹಿಡಿದುಕೊಂಡು ಉಡುಪಿಯಲ್ಲಿ ಓಡಾಡುತ್ತಿದ್ದರು. ಬಹುಶಃ ಬಿಸಿಲಿಗಾಗಿ ಕೊಡೆ ಹಿಡಿದಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಪತ್ರಕರ್ತ ಎಂಜಲು ಕಾಸಿ ಮೆಲ್ಲಗೆ ಆ ಕೊಡೆಯಲ್ಲಿ ಸೇರಿಕೊಂಡ ‘‘ಸಾರ್ ನಾನು ಸಾರ್...ಪತ್ರಕರ್ತ ಎಂಜಲು ಕಾಸಿ...ತುಂಬಾ ಬಿಸಿಲಲ್ವಾ ಸಾರ್...’’
ಖೋಟಾ ಶ್ರೀನಿವಾಸ ಪೂಜಾರಿಯವರು ಸಿಟ್ಟಾದರು ‘‘ಎಂತ ಬಿಸಿಲು ನಿಮ್ಮ ಕರ್ಮ. ಇದು ಬಿಸಿಲ, ಮಳೆಯಲ್ಲವಾ? ಮಳೆಗಾಗಿ ಕೋಟ್ಯಂತರ ಖರ್ಚು ಮಾಡಿ ಪೂಜೆ ಮಾಡಿದ್ದೇವೆ. ಹೊರಗಡೆ ಧಾರಾಕಾರ ಮಳೆ ಸುರೀತಾ ಉಂಟು... ನೀವು ಬಿಸಿಲು ಎಂದು ಹೇಳುತ್ತೀರಾಲ್ಲ...ಮಂಡೆ ಸರಿ ಇಲ್ವಾ....’’ ಒದ್ದೆ ಹಣೆಯನ್ನು ಒರೆಸಿಕೊಂಡರು. ಹನಿಗಳು ಪಟಪಟನೆ ತೊಟ್ಟಿಕ್ಕಿತು. ಅವರ ಅಂಗಿ, ಲುಂಗಿ ಕೂಡ ಒದ್ದೆಯಾಗಿತ್ತು.
‘‘ಸಾರ್ ಅದು ಮಳೆಹನಿಯಲ್ಲ, ಬೆವರ ಹನಿ ಸಾರ್...’’ ಕಾಸಿ ಗೊಂದಲದಲ್ಲಿ ಹೇಳಿದ.
‘‘ಎಂತ ಮಾರ್ರೆ...ಬಿಜೆಪಿ ಸರಕಾರವನ್ನು ಹೀಗೂ ಟೀಕಿಸುವುದಾ...ಪೂಜಾರಿಗಳು ಮಳೆ ಬರುತ್ತದೆ ಎಂದ ಮೇಲೆ ಮುಗಿಯಿತು...’’ ಖೋಟಾ ನುಡಿದರು.
‘‘ಯಾವ ಪೂಜಾರಿ ಸಾರ್? ಜನಾರ್ದನ ಪೂಜಾರಿಯ?’’ ಕಾಸಿ ಕೇಳಿದ.
‘‘ನಿಮಗೆಂತ ತಲೆಕೆಟ್ಟಿದೆಯಾ? ಅವರು ಬರೇ ಬಿಲ್ಲವರಿಗೆ ಮಾತ್ರ ಪೂಜಾರಿ. ನಾನು ದೇವಸ್ಥಾನದ ಪೂಜಾರಿಗಳ ವಿಷಯ ಹೇಳಿದ್ದು. ಅವರಿಗೆ ದುಡ್ಡಿನ ಮಳೆ ಸುರಿದಿದ್ದೇವೆ. ಅದಕ್ಕಾಗಿ ಪೂಜೆ ಮಾಡಿದ್ದಾರೆ. ಆದುದರಿಂದ ಮಳೆ ಬರಲೇ ಬೇಕು. ಅದಕ್ಕಾಗಿಯೇ ಅಲ್ಲವಾ ನಾನು ಕೊಡೆ ಹಿಡಿದು ತಿರುಗಾಡುತ್ತಿರುವುದು...ಸರಕಾರಿ ಪೂಜೆಗಾಗಿ ಮಾತ್ರ ಹಣಕೊಟ್ಟದ್ದಲ್ಲ...ಜೋರಾಗಿ ಮಳೆ ಬರುತ್ತದಲ್ಲ...ಅದಕ್ಕಾಗಿ ಕೊಡೆಯನ್ನು ಕೂಡ ಇಡೀ ರಾಜ್ಯದ ಪೂಜಾರಿಗಳಿಗೆ ವಿತರಣೆ ಮಾಡಿದ್ದೇನೆ....’’
‘‘ಸಾರ್ ನೀವು ಪೂಜಾರಿಗಳು ಅನ್ನುವಾಗ ಸ್ವಲ್ಪ ಗೊಂದಲ...ನೀವು ಕೂಡ ಪೂಜಾರಿ ಅಲ್ಲವಾ...’’ ಕಾಸಿ ಹಲ್ಲು ಕಿರಿದ.
‘‘ನಿಮ್ಮ ತಲೆ...ನಾನು ಹೇಳುವುದು ಕೃಷ್ಣ ಮಠದ ಪೂಜಾರಿಗಳ ಬಗ್ಗೆ....ಅವರ ದೇವಸ್ಥಾನದ ಪೂಜಾರಿಗಳು. ನಾವು ಬರೇ ಖಾಲಿ ಪೂಜಾರಿಗಳು...ಬರೇ ಪೂಜಾರಿಗಳಿಗೆ ಮಾತ್ರ ಕೊಡೆ ಕೊಡುವುದಕ್ಕೆ ನಾನೇನು ಜಾತೀವಾದಿಯಲ್ಲ...’’
‘‘ಸಾರ್ ಕೊಡೆ ಮಡಚಿ ಸಾರ್. ಮಳೆಯಲ್ಲೇ ನೆಂದು ಹೋಗುವ...’’ ಕಾಸಿ ಸಲಹೆ ನೀಡಿದ.
‘‘ಹೌದಲ್ಲ...ಮಳೆಯಲ್ಲಿ ನೆನೆದುಕೊಂಡು ಹೋಗುವುದಕ್ಕೆ ತುಂಬಾ ಕುಸಿಯಾಗುತ್ತದೆ’’ ಎನ್ನುತ್ತಾ ಕೊಡೆ ಮಡಚುವುದಕ್ಕೆ ಮುಂದಾದರು. ಆದರೆ ಅಷ್ಟರಲ್ಲಿ ಬಿಸಿಲ ಝಳ ಅವರ ನೆತ್ತಿಯ ಮೇಲೆ ಹೊಡೆಯಿತು ‘‘ಓಹ್ ಮಳೆ ಭಾರೀ ಜೋರುಂಟು ಮಾರ್ರೆ...ಒಟ್ಟಿನಲ್ಲಿ ನಮ್ಮ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿದ್ದರಿಂದ ಇದೊಂದು ಒಳ್ಳೆದಾಯಿತು ನೋಡಿ....’’
‘‘ಸಾರ್...ಹಾಗಾದರೆ ಮೋಡ ಬಿತ್ತನೆಗೂ ಈ ಮಳೆ ಪೂಜೆಗೂ ಏನು ವ್ಯತ್ಯಾಸ?’’ ಕಾಸಿ ಕೇಳಿದ.
‘‘ಯತ್ಯಾಸ ಎಂತದು ಮಣ್ಣು...ಅದರಲ್ಲಿ ವಿಜ್ಞಾನಿಗಳಿಗೆ ಹಣ ಹೋಗ್ತದೆ...ಇದರಲ್ಲಿ ಪಾಪ ಪೂಜಾರಿಗಳಿಗೆ ಅಂದರೆ ದೇವಸ್ತಾನದ ಪೂಜಾರಿಗಳಿಗೆ ಹೋಗ್ತದೆ. ಅಷ್ಟೇ ವ್ಯತ್ಯಾಸ. .’’
‘‘ಸಾರ್...ಮಳೆಗಾಗಿ ಸರಕಾರಿ ಪೂಜೆ ಮಾಡಿದ ಎಲ್ಲ ಪೂಜಾರಿಗಳು ತಮ್ಮನ್ನು ಸರಕಾರಿ ನೌಕರರೆಂದು ಗುರುತಿಸಬೇಕು ಎಂದು ಕೇಳುತ್ತಿದ್ದಾರಂತೆ ಹೌದಾ?’’ ಕಾಸಿ ಚುಚ್ಚಿದ.
‘‘ಕೇಳಿದರೆ ಕೇಳಲಿ ಮಾರಾಯರೆ...ನಿಮ್ಮದೇನು ಗಂಟು ಹೋಯಿತು? ಪೂಜೆಯೂ ಸರಕಾರಿ ಕೆಲಸವೇ ಅಲ್ಲವಾ....ಸರಕಾರಿ ಕೆಲಸ ದೇವರ ಕೆಲಸ ಅಂದ ಮೇಲೆ ದೇವರ ಕೆಲಸ ಸರಕಾರಿ ಕೆಲಸ ಅಲ್ಲವಾ? ಆದುದರಿಂದ ಇನ್ನು ಮುಂದೆ ನಾವು ದೇವಸ್ಥಾನದ ಎಲ್ಲ ಪೂಜಾರಿಗಳನ್ನು ಸರಕಾರಿ ನೌಕರರೆಂದು ನೇಮಕ ಮಾಡುತ್ತೇವೆ...ಅವರ ಕೆಲಸವನ್ನು ಶೀಘ್ರದಲ್ಲೇ ಖಾಯಂ ಮಾಡುವ ಉದ್ದೇಶ ಉಂಟು...’’
‘‘ಸಾರ್...ಹಾಲಾಡಿ...ಶ್ರೀನಿವಾಸ ಶೆಟ್ಟಿ....’’ ಎಂದು ಕಾಸಿ ಬಾಯಿತೆರೆದದ್ದೇ ಖೋಟಾ ಶ್ರೀನಿವಾಸರು ಸಿಟ್ಟಾದರು ‘‘ಅವರು ಹಾಲಾಡಿಯಲ್ಲ, ನನ್ನ ಪಾಲಿಗೆ ಹಾಳಾಡಿ...ಅವರ ವಿಷಯ ಯಾಕೆ ಈಗ?’’
‘‘ಅವರು ಕುಂದಾಪುರದ ವಾಜಪೇಯಿಯಂತೆ ಹೌದಾ?’’
‘‘ಅದಕ್ಕೆ ನಾನೇನು ಮಾಡುವುದು? ಬೇಕಾದರೆ ಅವರನ್ನು ಪ್ರಧಾನಮಂತ್ರಿ ಮಾಡಲಿ. ನಾನೇನು ಬೇಡ ಅನ್ನುತ್ತೇನಾ? ಸಚಿವ ಸ್ಥಾನ ಸಿಗಲಿಲ್ಲ ಅಂತ ಅವರು ನನ್ನ ಮೇಲೆ ಕಾರ್ಗಿಲ್ ಯುದ್ಧ ಮಾಡುವುದು ಸರಿಯ?’’
‘‘ಸಚಿವ ಸ್ಥಾನ ಸಿಗಬೇಕಾದರೆ ಪ್ರಭಾಕರ ಭಟ್ಟರ ಕಾಲು ಹಿಡಿಯುವುದು ಅನಿವಾರ್ಯವಂತೆ...ನೀವೇನಾದರೂ ಹಿಡಿದಿದ್ದೀರಾ...?’’ ಕಾಸಿ ಮೆಲ್ಲಗೆ ಬುದ್ಧಿ ತೋರಿಸಿದ.
‘‘ನನಗೆ ಸಿಟ್ಟು ಬರುತ್ತದೆ...ಭಟ್ಟರ ಕಾಲು ಹಿಡಿದರೆ ಅದರಲ್ಲಿ ನಮಗೆ ಪುಣ್ಯ ಉಂಟು ಗೊತ್ತುಂಟ. ಒಂದು ವೇಳೆ ನಾವು ಕಾಲು ಮುಟ್ಟಲು ಹಿಂದೇಟು ಹಾಕಿದರೆ ಅದು ಅಸ್ಪಶತೆ ಆಗುವುದಿಲ್ಲವಾ...ಭಟ್ಟರು ಅಂತ ನಾವು ಕಾಲು ಮುಟ್ಟದೆ ಭೇದಭಾವ ತೋರಿಸುವುದಕ್ಕಾಗುತ್ತದ? ಅದು ಜಾತೀಯವಾದವಲ್ಲವ?’’
‘‘ನಿಮ್ಮ ಮುಂದಿನ ಕಾರ್ಯಕ್ರಮಗಳು ಏನೇನು ಎನ್ನುವುದನ್ನು ಹೇಳುತ್ತೀರಾ....’’
‘‘ಕಾರ್ಯಕ್ರಮ ತುಂಬಾ ಉಂಟು ಮಾರೆಯರೆ...ಆದರೆ ದೊಡ್ಡ ತಲೆಬಿಸಿಯೆಂದರೆ ಸರಕಾರ ಎಷ್ಟರವರೆಗೆ ಉಳಿಯುತ್ತದೆ ಎಂದು ಗೊತ್ತಿಲ್ಲ...ತುಂಬಾ ಪೂಜೆ ಕಾರ್ಯಕ್ರಮ ಮಾಡ್ಲಿಕ್ಕೆ ಉಂಟು. ಮುಖ್ಯವಾಗಿ ನಮ್ಮ ಸರಕಾರಕ್ಕೆ ಯಾರೋ ಮಾಟ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಒಂದು ಆದೇಶ ಹೊರಡಿಸುತ್ತೇನೆ...ಆಮೇಲೆ, ಹಾಲಾಡಿಯವರು ಪಕ್ಷದಲ್ಲೇ ಉಳಿದು, ಪ್ರಭಾಕರ ಭಟ್ಟರತ್ರ ಕ್ಷಮೆಯಾಚಿಸಬೇಕು ಎಂದು ಎಲ್ಲ ದೇವಾಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದೇನೆ. ಅದು ಸ್ವಲ್ಪ ಮಟ್ಟಿಗೆ ಪ್ರಯೋಜನಕ್ಕೆ ಬಂದಿದೆ...ಈಗ ಮೊದಲಿನ ಹಾಗೆ ಅವರು ಮಂಡೆಬೆಚ್ಚದಿಂದ ಮಾತನಾಡುವುದಿಲ್ಲ...ರೈತರ ಆತ್ಮಹತ್ಯೆ ತಡೆಯುವುದಕ್ಕೆ, ರಾಜ್ಯದಲ್ಲಿ ಬಡತನ ನಿವಾರಣೆ ಮಾಡುವುದಕ್ಕೆ ಪೂಜೆ ಮಾಡುವ ಕಾರ್ಯಕ್ರಮ ಉಂಟು. ಅದಕ್ಕಾಗಿ ಎಲ್ಲ ದೇವಸ್ಥಾನಗಳಿಗೆ ಕೆಲವು ಕೋಟಿ ಬಿಡುಗಡೆ ಮಾಡಬೇಕೂಂತ ಉಂಟು...’’
‘‘ಬಿಜೆಪಿಯ ವರಿಷ್ಠರಿಗೆ, ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸಬಹುದಲ್ಲ ಸಾರ್?’’
‘‘ಮೊದಲು ಪತ್ರಕರ್ತರ ಮಂಡೆ ಸರಿಯಾಗಲಿ ಅಂತ ಪೂಜೆ ಮಾಡಿಸ್ಲಿಕ್ಕೆ ಉಂಟು. ಬಳಿಕ ನಮ್ಮ ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸ್ತೇನೆ...ಆಗಬಹುದಾ...?’’ ಎಂದು ಒಮ್ಮೆಲೆ ಖೋಟಾ ಸಚಿವರು ಸಿಟ್ಟಾಗಿ ತನ್ನ ಕೊಡೆಯನ್ನು ಮಡಿಚಿದರು.
ಅಷ್ಟರಲ್ಲಿ ಯಾರದೋ ಫೋನ್ ಬಂತು. ಅದರಲ್ಲಿ ಮಾತನಾಡಿದ್ದೆ ಪೂಜಾರಿಯವರು ಖುಷಿಯಾದರು ‘‘ನೋಡ್ರಿ ಕಾಶಿಯವರೆ...ಮಳೆಯಾಗಿದೆ...ನಮ್ಮ ಪೂಜೆಯಿಂದ ಈಶಾನ್ಯ ಭಾರತದ ಅಸ್ಸಾಂನಲ್ಲಿ ಭಾರೀ ರಕ್ತದ ಮಳೆಯಾಗಿದೆ...ಇನ್ನೇನು ಅದು ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆಯಂತೆ...’’
ಆ ಗುಡುಗಿಗೆ ಪತ್ರಕರ್ತ ಕಾಸಿ ನಿಂತಲ್ಲೇ ಸಣ್ಣಗೆ ನಡುಗಿದ.
ರವಿವಾರ - ಜುಲೈ -29-2012

No comments:

Post a Comment