Wednesday, January 8, 2014

ಹುಂಜ ಮೊಟ್ಟೆ ಇಡುತ್ತಾ ಸಾರ್...?

 ಬಿಜೆಪಿ - ಜೆಡಿಎಸ್ ಜೊತೆಯಾಗಿ ಸರಕಾರ ನಡೆಸುತ್ತಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಸಖತ್ ಸುದ್ದಿಯಾಗ ತೊಡಗಿತು. ಆ ಸಂದರ್ಭದಲ್ಲಿ(ಆಗಸ್ಟ್ 5, 2007ರಂದು ) ಈ ಬುಡಬುಡಿಕೆ ಬರೆಯಲಾಗಿದೆ. ಕಳವಾದ ಕೋಳಿಯ ಬೆನ್ನು ಹತ್ತಿದ ಪತ್ರಕರ್ತ ಎಂಜಲು ಕಾಸಿಯ ಸ್ಕೂಪ್ ಸುದ್ದಿ ಇಲ್ಲಿದೆ.

 ಏಕಾಎಕಿ ಮುಖ್ಯಮಂತ್ರಿಗೆ ದೇವನೂರು ಮಹಾದೇವನವರ ಕಾದಂಬರಿ ‘ಒಡಲಾಳ’ದ ದಲಿತ ಮುದುಕಿ ಸಾಕವ್ವನ ಮನೆಯಲ್ಲಿ ವಾಸ್ತವ್ಯ ಹೂಡಿದರೆ ಹೇಗೆ ಅನಿಸಿತು. ತಕ್ಷಣ ಪತ್ರಿಕಾಗೋಷ್ಠಿ ಕರೆದರು. ವಾಸ್ತವ್ಯಕ್ಕೆ ಮೊದಲೆ ದಲಿತ ಕವಿ ಸಿದ್ದಲಿಂಗಯ್ಯನವರು ಮುಖ್ಯಮಂತ್ರಿಯನ್ನು ಅಭಿನಂಧಿಸಿದರು. ದಲಿತೆ ಸಾಕವ್ವನ ಗುಡಿಸಲಲ್ಲಿ ಮುಖ್ಯಮಂತ್ರಿಯ ವಾಸ್ತವ್ಯ ಎನ್ನುವ ಸುದ್ದಿಯನ್ನು ಪತ್ರಿಕೆಗಳು ‘ಧಾಂ... ಧೂಂ...’ ಎಂದು ಬರೆದವು. ಅಂತೂ ಇಂತೂ ಸಾಕವ್ವನ ಫೋಟೊ ಕೂಡ ಪತ್ರಿಕೆಯಲ್ಲಿ ಪ್ರಕಟವಾಯಿತು. ಕೊನೆಗೂ ಮಖ್ಯಮಂತ್ರಿಯವರ ಬಳಗ ಸಾಕವ್ವನ ಮನೆಯಲ್ಲಿ ಮಲಗಿ ಬೆಂಗಳೂರಿನ ಅಶೋಕ ಹೋಟೆಲ್‌ನಿಂದ ತಂದ ಊಟ ಉಂಡು, ಬೆಳ್ಳಂಬೆಳಗ್ಗೆ ಎದ್ದು ಬೆಂಗಳೂರು ಸೇರಿತು. ತಾತ್ಕಾಲಿಕವಾಗಿ ಆ ಗುಡಿಸಲು ಸೇರಿದ್ದ ವಿದ್ಯುತ್ ಬಲ್ಬು, ಫ್ಯಾನ್, ಮಂಚ ಕೂಡ ಅವರ ಹಿಂದೆಯೇ ಬೆಂಗಳೂರು ಸೇರಿದವು. ಅಂದು ಬೆಳಗ್ಗೆ ಸೂರ್ಯ ಮೂಡುವ ಹೊತ್ತಿಗೆ ಅಜ್ಜಿ ಸಾಕವ್ವ ಕೋಳಿ ಗೂಡಿಗೆ ಹೋಗಿ ಬಾಗಿಲು ತೆಗೆಯುತ್ತಾಳೆ. ಎದೆಯೇ ಬಾಯಿಗೆ ಬಂದಂತಾಯಿತು. ಸಾಕವ್ವನ ಹುಂಜ ಅಲ್ಲಿರಲಿಲ್ಲ. ‘ಲಬೋ.. ಲಬೋ...’ ಎಂದು ಬಾಯಿ ಬಡೆದು ಕೊಳ್ಳುತ್ತಾ ತನ್ನ ಮಕ್ಕಳು ಮತ್ತು ಸೊಸೆಯಂದಿರನ್ನು ಕರೆಯ ತೊಡಗಿದಳು. ‘‘ಬನ್ರಪ್ಪೋ ಬನ್ರೊ... ಆ ಮನೆ ಹಾಳಾ ಮುಖ್ಯಮಂತ್ರಿ ನನ್ನ ಮನೆ ಕೋಳಿ ಕದ್ಕೊಂಡು ಹೋಗಿದ್ದಾನಪ್ಪೋ ... ಬನ್ರೋ...’’ ಎಂದು ಮುಖ್ಯಮಂತ್ರಿಗೆ ಹಿಡಿಶಾಪ ಹಾಕಹತ್ತಿದಳು.
 ಎಲ್ಲರೂ ಅವರ ಸುತ್ತ ಸೇರಿದರು. ಕೆಲವರು ಅತ್ತಿತ್ತ ಹುಡುಕಾಡ ತೊಡಗಿದರು. ಸಾಕವ್ವ ಮಾತ್ರ ಬಂದವರಲ್ಲಿ ಗೋಳು ಹೇಳ ತೊಡಗಿದಳು. ‘‘ರಾತ್ರಿ ಊಟದ ಹೊತ್ತಿಗೇ ಆ ಮುಖ್ಯಮಂತ್ರಿಗೆ ಆ ನನ್ ಕೋಳಿ ಮೇಲೆ ಒಂದು ಕಣ್ಣಿತ್ತು. ಬೆಳಗ್ಗೆ ಯಾವುದೇ ಸುದ್ದಿಲ್ಲದೇ ಆ ವಯ್ಯ ಹೋಂಟೋದಾಗ್ಲೆ ನನ್ಗೆ ಅನುಮಾನ ಬಂದಿತ್ತು... ಹೋಗಿ ಕೋಳಿ ಗೂಡು ನೋಡಿದ್ರೆ ಅನುಮಾನ ನಿಜವಾಯಿತು... ಅಯ್ಯೋ... ನನ್ನ ಬಂಗಾರದಂತಾ ಕೋಳಿನಾ ಕದ್ಕೊಂಡು ಹೋಗಿ ಬಿಟ್ನೇ... ನಾನೇನ್ಮಾಡ್ಲಿ...’’ ಎಂದು ಎದೆ ಬಡಿದು ಅಳತೊಡಗಿದಳು. ಅಷ್ಟರಲ್ಲಿ ಅಲ್ಲಿಗೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆಗಮಿಸಿದರು. ಅವರಲ್ಲಿ ಎಡ-ಬಲ ಅಂತ ಎರಡು ಗುಂಪು ಇತ್ತು ಸಾಕವ್ವನ ಎಡ ಮತ್ತು ಬಲಭಾಗದಲ್ಲಿ ಅವರು ನಿಂತು ‘ಸಾಕವ್ವನ ಕೋಳಿ ಕದ್ದ ಮುಖ್ಯಮಂತ್ರಿಗೆ ದಿಕ್ಕಾರ... ಮರಳಿಸಿ... ಮರಳಿಸಿ... ಸಾಕವ್ವನ ಕೋಳಿ ಮರಳಿಸಿ ... ಎಂದು ಕೂಗ ತೊಡಗಿದರು. ತನ್ನ ಕೋಳಿಗಾಗಿ ಇಷ್ಟು ಜನರು ಒಂದಾಗಿರುವುದು ನೋಡಿ ಸಾಕವ್ವನಿಗೆ ಅಚ್ಚರಿ, ಸಂತೋಷ ಎರಡೂ ಆಯಿತು. ತಕ್ಷಣ ಪತ್ರಿಕಾಗೋಷ್ಠಿ ಕರೆಯಾಯಿತು.

ಪತ್ರಕರ್ತ ಎಂಜಲು ಕಾಸಿ ತರಾತುರಿಯಿಂದ ಜೋಲಿಗೆಯನ್ನು ಹೆಗಲಿಗೇರಿಸಿ ದಲಿತರ ಕೇರಿಗೆ ಹೋದ. ಅಲ್ಲಿ ನೋಡಿದರೆ ಅವನಂತಹ ಒಂದೆರಡು ಪತ್ರಕರ್ತರು ಮಾತ್ರ ಇದ್ದರು. ಕನ್ನಡದ ಹೆಚ್ಚಿನ ಪತ್ರಕರ್ತರು ಜನಿವಾರದ ಜನ ಆಗಿರುವುದರಿಂದ ಅವರಿಗೆ ಆ ಕೇರಿಗೆ ಕಾಲಿಡುವಂತಿಲ್ಲ. ಆದುದರಿಂದ ಅವರಾರು ಅಲ್ಲಿರಲಿಲ್ಲ. ಸಾಕವ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡತೊಡಗಿದಳು ‘‘ಅವನ ಮನೆ ಹಾಳಾಗ... ಕೈ ಸೇದೋಗ... ಬಂಗಾರದ ಜುಟ್ಟು ಇರುವ ನನ್ನ ಹೂಂಜಾನ ಕದ್ಕೊಂಡು ಹೋದ್ನಲ್ಲಾ... ಅವನ ಹೊಟ್ಟೆ ಸಿಡಿದೋಗ’’ ಎಂಜಲು ಕಾಸಿ ಎಲ್ಲವನ್ನು ನೋಟ್ ಮಾಟ್ಕೊಂಡ.

ನಾಡಿನಾದ್ಯಂತ ಸಾಕವ್ವನ ಕೋಳಿ ಸುದ್ದಿಯಾಯಿತು. ವಿವಿಧ ಗಣ್ಯರು, ವಿರೋಧ ಪಕ್ಷದ ನಾಯಕರು ಈ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಎಂಜಲು ಕಾಸಿ ಎಲ್ಲ ನಾಯಕರ ಹಿಂದೆ ಅಭಿಪ್ರಾಯಕ್ಕಾಗಿ ಅಲೆದಾಡ ತೊಡಗಿದ.

 ***
ಎಂಜಲು ಕಾಸಿ ಕಾಂಗ್ರೆಸ್ ಮುಖಂಡ ಖರ್ಗೆಯನ್ನು ಭೇಟಿ ಮಾಡಿದಾಗ ಅವರು ಸಖತ್ ಗರಂ ಆಗಿದ್ರು. ‘‘ಅದು ಬರೀ ಕೋಳಿಯಾಗಿರಲಿಲ್ಲ. ಅದೊಂದು ದಲಿತ ಕೋಳಿಯಾಗಿತ್ತು. ಅದನ್ನು ಕದ್ದುಕೊಂಡು ಹೋಗಿದ್ದಾರೆ ಎನ್ನುವುದು ನಿಜಕ್ಕೂ ಖಂಡನಾರ್ಹ. ಮೊನ್ನೆ ಕುಮಾರಸ್ವಾಮಿ ಮನೇಲಿ ನಡೆದ ಬಿಜೆಪಿ-ಜೆಡಿಎಸ್ ಸಭೆಯಲ್ಲಿ ಆ ಕೋಳಿಯನ್ನು ಸಾರು ಮಾಡಿ ಎಲ್ಲರಿಗೂ ಬಡಿಸಲಾಗಿದೆ. ಕೋಳಿಯ ತೊಡೆಯನ್ನು ಯಡಿಯೂರಪ್ಪನವರೇ ತಿಂದಿದ್ದಾರೆ. ಎನ್ನುವ ಮಾಹಿತಿ ನನಗೆ ದೊರೆತಿದೆ. ಆದ್ದರಿಂದ ಸಾಕವ್ವನ ಕೋಳಿಯನ್ನು ಕದಿರುವುದು ಬರೇ ಕುಮಾರಸ್ವಾಮಿ ಮಾತ್ರ ಅಲ್ಲ, ಇಡೀ ಸರಕಾರವೇ ಇದರಲ್ಲಿ ಭಾಗಿಯಾಗಿದೆ. ಪೋಲಿಸರ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ. ಆದ್ದರಿಂದ ಸರಕಾರ ತಕ್ಷಣ ರಾಜೀನಾಮೆ ನೀಡಬೇಕು... ’’ ಎಂದವರು ಗುಡುಗಿದರು.
ಎಂಜಲು ಕಾಸಿ ಖರ್ಗೆಯ ಬಾಯಿಯಿಂದ ಬಿದ್ದಿದ್ದನ್ನು ಜೋಲಿಗೆಯಲ್ಲಿ ತುಂಬಿ ಅಲ್ಲಿಂದ ನೇರವಾಗಿ ವಾಟಳ್ ನಾಗರಾಜ್ ಮನೆಗೆ ತೆರಳಿದ. ಮನೆಯೊಳಗಿಂದ ವಾಟಳ್ ನಾಗರಾಜ್ ಬೊಬ್ಬಿಡುತ್ತಿರುವುದು ಬೀದಿಗೆ ಕೇಳಿಸುತ್ತಿತ್ತು. ಮನೆಯಂಗಳದಲ್ಲೇ ಕೇಳಿದ್ದನ್ನು ಕಾಸಿ ನೋಟ್ ಮಾಡಿಕೊಂಡ. ‘‘ಅದು ಕನ್ನಡದ ಕೋಳಿಯಾಗಿತ್ತು. ಆ ಕೋಳಿ ಬೆಳಗ್ಗೆ ಬರೇ ಕೂಗುತ್ತಿರಲಿಲ್ಲ. ಬೆಳಗ್ಗೆದ್ದು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿತ್ತು ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ಆ ಕೋಳಿಯನ್ನು ಕದ್ದು, ನೆರೆಯ ಕರುನಾನಿಧಿಯವರಿಗೆ ಕಬಾಬ್ ಮಾಡುವುದಕ್ಕೆಂದು ಕೊಟ್ಟಿದ್ದಾರೆ ಎನ್ನುವುದರ ಕುರಿತಂತೆ ನನಗೆ ಸುಳಿವು ದೊರಕಿದೆ. ಆ ಕೋಳಿಯನ್ನು ಮರಳಿ ಕರ್ನಾಟಕಕ್ಕೆ ಒಪ್ಪಿಸಲೇಬೇಕು. ಇದಕ್ಕಾಗಿ ನಾನು ಸಹಸ್ರಾರು ಕೋಳಿಗಳನ್ನು ಮುಂದಿಟ್ಟು ಧರಣಿಯನ್ನು ಹಮ್ಮಿಕೊಳ್ಳಲಿದ್ದೇನೆ ...’’
  ಸಾಕಷ್ಟಾಯಿತು ಎಂದು ಅಲ್ಲಿಂದ ನೇರವಾಗಿ ಕಾಸಿ ಧರಂ ಸಿಂಗ್‌ರಲ್ಲಿಗೆ ಓಡಿದ. ಕಾಸಿಯನ್ನು ನೋಡಿದ್ದೆ ಅವರು ತಾನು ತಿನ್ನುತ್ತಿದ್ದ ಕೋಳಿ ಪ್ರೈಯನ್ನು ಮೆಲ್ಲಗೆ ಮುಚ್ಚಿಟ್ಟರು. ಆದರೆ ಕಾಸಿಗೆ ಪರಿಮಳದಿಂದಲೇ ಅಲ್ಲೇನಿದೆ ಎನ್ನುವುದು ಮನವರಿಕೆಯಾಯಿತು. ಧರಂ ಹೇಳಿದರು "ನೋಡ್ರಿ...ದೇವರಾಣೆ ಹೇಳುತ್ತಿದ್ದೇನೆ...ಇದು ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಕೋಳಿಯಲ್ಲ. ನಾನೇ ಮನೆಯಲ್ಲಿ ಸಾಕಿರುವ ಕೋಳಿ ಇದು. ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಸಾಕವ್ವನ ಕೋಳಿ ಆಸುಪಾಸಿನಲ್ಲಿ ತುಂಬಾ ಹೆಸರರು ಪಡೆದಿತ್ತು ಕಣ್ರಿ. ನಾಡಿಗೆಲ್ಲ ಅದೇ ಕೋಳಿಯಿಂದ ಮೊಟ್ಟೆ ಸಪ್ಲೈ ಆಗುತ್ತಿತ್ತು. ಆ ಕೋಳಿ ಮೊಟ್ಟೆಯನ್ನೇ ಎಲ್ಲಾ ಶಾಲೆಗಳಿಗೆ ಬಿಸಿಯೂಟ ಜೊತೆಗೆ ಕೊಡಬೇಕು ಎಂದು ನಿರ್ಧರಿಸಿದ್ದೆವು. ಅದನ್ನು ತಪ್ಪಿಸುವುದಕ್ಕಾಗಿಯೇ ಆ ಕೋಳಿಯನ್ನು ಕುಮಾರಸ್ವಾಮಿಯವರು ಕದ್ದಿದ್ದಾರೆ... ರಾಜ್ಯದಲ್ಲಿ ಮೊಟ್ಟೆಯ ಅಭಾವ ಕಾಣಿಸಿಕೊಳ್ಳಲಿದೆ... ಕುಮಾರಸ್ವಾಮಿಯವರು ಆ ಕೋಳಿಯನ್ನು ಸಾಕವ್ವನಿಗೆ ಮರಳಿಸಲೇ ಬೇಕು... ಇಲ್ಲದಿದ್ದರೆ ಮೊಟ್ಟೆ ಉದ್ಯಮ ಸಂಪೂರ್ಣ ಕುಸಿಯಲಿದೆ.’’

 ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್... ಆದರೆ ಕಾಣೆಯಾದ ಕೋಳಿ ಹುಂಜ ಆಗಿತ್ತಲ್ಲ, ಹುಂಜ ಮೊಟ್ಟೆ ಇಡುತ್ತಾ ಸಾರ್...’’ ಧರಂ ಗರಂ ಆದರು ‘‘ಹುಂಜ ಮೊಟ್ಟೆ ಇಡುತ್ತಾ ಇಲ್ಲವೋ ಎಂಬುದು ತನಿಖೆಯಿಂದಷ್ಟೆ ಗೊತ್ತಾಗುತ್ತೆ ಕೆಲವು ವೇಳೆ ಅದು ಮೊಟ್ಟೆಯಿಡುವ ಹುಂಜ ಆಗಿರುವ ಸಾಧ್ಯತೆಯಿದೆ. ಏನೇ ಆಗಲಿ ಒಟ್ಟಿನಲ್ಲಿ ತನಿಖೆಯಾಗಬೇಕು... ಅಷ್ಟೆ ಅಲ್ಲ ಮುಖ್ಯಮಂತ್ರಿ ಎಲ್ಲೆಲ್ಲಾ ವಾಸ್ತವ್ಯ ಹೂಡಿದ್ದಾರೋ, ಅಲ್ಲಿ ಚೆಂಬು, ಚಪ್ಪಲಿ, ದುಡ್ಡು ಇತ್ಯಾದಿ ಕಳವಾಗಿದೆ. ಒಟ್ಟಿನಲ್ಲಿ ಸಿಬಿಐ ತನೆಖೆ ನಡೆಯಲೇಬೇಕು’’.
ಕಾಸಿ ಅಲ್ಲಿಂದ ನೇರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಲಿತ ಕವಿ ಸಿದ್ದಲಿಂಗಯ್ಯನವರಲ್ಲಿಗೆ ಓಡಿದ. ಸಿದ್ದಲಿಂಗಯ್ಯ ಗರಿಗರಿ ಬಟ್ಟೆ ತೊಟ್ಟು ಕೊಂಡಿದ್ದರು. ಆಗಷ್ಟೆ ಫೂಜೆ ಮುಗಿಸಿ, ಹಣೆಯಲ್ಲಿ ಕುಂಕುಮ ಧರಿಸಿಕೊಂಡಿದ್ದರು. ಕಾಸಿಯನ್ನು ಕಂಡಂತೆಯೇ ಭಯ ಭಕ್ತಿಯಲ್ಲಿ ‘‘ ತಗೊಳ್ಳಿ ಪ್ರಸಾದ’’ ಎಂದು ನೀಡಿದರು. ಕಾಸಿ ಅದನ್ನು ಗಬಕ್ಕನೆ ನುಂಗಿದ. ‘‘ನನಗೆ ಗೊತ್ತು. ನೀವು ಕುಮಾರಸ್ವಾಮಿ ಕದ್ದ ಕೋಳಿಯ ಕುರಿತು ಅಭಿಪ್ರಾಯ ಕೇಳಲು ಬಂದಿದ್ದೀರಿ ಅಂತ.  ಇತ್ತೀಚೆಗೆ ದಲಿತರ ಕಾನೂನು ದುರ್ಬಳಕೆಯಾಗುತ್ತಿದೆ. ದಲಿತರು ಸುಮ್ಮಸುಮ್ಮನೆ ಮೇಲ್ಜಾತಿಯ ಮುಗ್ದರ ಮೇಲೆ ಆ ಕಾನೂನನ್ನು ಬಳಸುತ್ತಿದ್ದಾರೆ. ಸಾಕವ್ವ ಕೋಳಿಯನ್ನು ಸಾಕುತ್ತಿದ್ದಳೋ ಇಲ್ಲವೋ ಎಂಬುದನ್ನು ನಾವು ಪತ್ತೆ ಮಾಡಬೇಕು. ಯಾಕೆಂದರೆ ದಲಿತರು ಸಸ್ಯಹಾರಿಗಳು...’’
ಕಾಸಿಯ ತಲೆಯ ಮೇಲೆ ಧಿಂ ಅಂದಿತು. ‘‘ಸಾರ್ ದಲಿತರು ಸಸ್ಯಾಹಾರಿಗಳೇ ...?’’ ಕೇಳಿದ. ‘‘ಹೂಂ. ನನ್ನ ಮನೆಯಲ್ಲಿ ಕೋಳಿ, ಮಾಂಸ ಇತ್ಯಾದಿಗಳನ್ನು ತಪ್ಪಿಯೂ ಬಳಸುತ್ತಿರಲಿಲ್ಲ. ದಲಿತರು ಮಾಂಸಹಾರಿಗಳಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನನ್ನ ಮನೆಯಲ್ಲಿ ಅಮ್ಮ ಬದನೆಕಾಯಿ ಗೊಜ್ಜು ತಿಳಿಸಾರು ಅದೆಷ್ಟೋ ಚೆನ್ನಾಗಿ ಮಾಡುತ್ತಿದ್ದಳು ಎಂದರೆ ಬ್ರಾಹ್ಮಣರು ಕೂಡ ಊಟ ಮಾಡಿ ಹೋಗುತ್ತಿದ್ದರು. ಹಿಂದೆ ಮೇಲ್ಜಾತಿ ಮತ್ತು ದಲಿತರ ನಡುವೆ ಅದೆಷ್ಟು ಹೊಂದಾಣಿಕೆಯಿತ್ತು ಎಂದರೆ...ಛೇ..! ಈಗ ದಲಿತರು ತುಂಬಾ ಕೆಟ್ಟು ಹೋಗಿದ್ದಾರೆ... ಮೊನ್ನೆ ಪೇಜಾವರಶ್ರೀಗಳು ಸಿಕ್ಕಿದ್ದರು. ಅವರಿಗೆ ನಾನೆಂದರೆ ತುಂಬಾ ಪ್ರೀತಿ...’’
ಕಾಸಿ ‘‘ ಸಾರ್ ಈಗ ಬಂದಿದೆ ...’’ ಎಂದವನೇ ಅಲ್ಲಿಂದ ಓಡಿ ನೇರ ದೇವನೂರು ಮಹಾದೇವನವರ ಮನೆಗೆ ಬಂದ. ನೋಡಿದರೇ ಮಹಾದೇವರು ತಂಬಾ ವರ್ಷಗಳ ಬಳಿಕ ಪೆನ್ನು ಕಾಗದ ಹಿಡಿದು ಕೂತಿದ್ದರು. ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್ ಹೊಸ ಕಾದಂಬರಿ ಬರೀತಾ ಇದ್ದಿರಾ ಸಾರ್...?’’ ಮಹಾದೇವ ಗಂಭೀರವಾಗಿ ನುಡಿದರು. ‘‘ಹೂಂ..ಈ ಹಿಂದೆ ಸಾಕವ್ವನ ಕೋಳಿಯನ್ನು ಪೊಲೀಸರು ಕದ್ಕೊಂಡು ಹೋದಾಗ ‘ಒಡಲಾಳ’ ಕಾದಂಬರಿ ಬರೆದಿದ್ದೆ. ಈಗ ಮುಖ್ಯಮಂತ್ರಿ ಕದ್ದಿದ್ದಾರೆ ಎಂದ ಮೇಲೆ ಬರೆಯದೇ ಇರೋಕ್ಕಾಗುತ್ತಾ...’’
ಅಲ್ಲಿಂದ ನೇರವಾಗಿ ಕಾಸಿ ಕುಮಾರಸ್ವಾಮಿಯ ಮನೆಗೆ ತೆರಳಿದ. ಅವರು ತಲೆ ಮೇಲೆ ಕೈಯಿಟ್ಟು ಕೂತಿದ್ದರು. ಕಾಸಿಯನ್ನು ಕಂಡದ್ದೇ ಹೇಳತೊಡಗಿದರು ‘‘ಅಪ್ಪಾಜಿಯಾಣೆ.. ನಾನು ಕದ್ದಿಲ್ಲ...ಯಡಿಯೂರಪ್ಪನವರ ಸಹವಾಸ ಬಳಿಕ ನಾನು ನಾನ್‌ವೆಜ್ ತಿನ್ನುವುದನ್ನೇ ಬಿಟ್ಟಿದ್ದೇನೆ... ಹೀಗಿರುವಾಗ ನಾನ್ಯಾಕೆ ಕೋಳಿಯನ್ನು ಕದೀಲಿ. ನನ್ನೊಟ್ಟಿಗೆ ಇಕ್ಬಾಲ್ ಅನ್ಸಾರಿ, ಮೀರಾಜುದ್ದೀನ್ ಪಟೇಲ್ ಕೂಡ ಇದ್ರು. ಅವರೇನಾದ್ರೂ ಕದ್ಕೊಂಡು ಹೋಗಿ ಬಿರಿಯಾನಿ ಮಾಡಿ ತಿಂದ್ರಾ ಎನ್ನುವ ಅನುಮಾನ ನನಗಿದೆ. ಸಾಬ್ರನ್ನ ನಂಬೋಕಾಗಲ್ಲ. ಏನಾದ್ರೂ ತನಿಖೆಯಲ್ಲಿ ಗೊತ್ತಾಗುತ್ತೆ....’’
 ಕಾಸಿ ಅಲ್ಲಿಂದ ಹೊರಡುವಷ್ಟರಲ್ಲಿ ಸುದ್ದಿ ಸಿಕ್ಕಿತ್ತು. ಸಾಕವ್ವನ ಕೋಳಿಯ ಹೆಣ ಚಿಕ್ಕಮಗಳೂರಿನ ಕಾಡಿನ ಸಮೀಪ ಬಿದ್ದಿದೆ, ಎನ್ನುವುದು. ಕಾಸಿಯಾದಿ ಪತ್ರಕರ್ತರು ಅತ್ತ ದಾವಿಸಿದರು. ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪತ್ರಿಕಾಗೋಷ್ಠಿ ಕರೆದು ಇಡೀ ಪ್ರಕರಣವನ್ನು ಮುಗಿಸಿದರು. ‘‘ಸಾಕವ್ವನ ಕೋಳಿಗೆ ನಕ್ಸಲೀಯರ ಜೊತೆ ಸಂಪರ್ಕವಿತ್ತು. ಅದು ಪೊಲೀಸರ ಮೇಲೆ ಗುಂಡೆಸೆದಾಗ ಪೊಲೀಸರು ಪ್ರತಿಯಾಗಿದರ ಮೇಲೆ ಗುಂಡೆಸೆದರು. ಈ ಎನ್‌ಕೌಂಟರ್‌ನಲ್ಲಿ ಕೋಳಿ ಸತ್ತು ಹೋಗಿದೆ. ಇಬ್ಬರು ಪೊಲೀಸರಿಗೆ ಗಾಯವಾಗಿದೆ...’’
ಇದರ ಬೆನ್ನಿಗೇ ಗೃಹಸಚಿವ ಎಂ.ಪಿ. ಪ್ರಕಾಶಕರು ಕರೆ ನೀಡಿದರು ‘‘ ನಕ್ಸಲೀಯರು ಶಸ್ತ್ರಾಸ್ತ್ರ ಕೆಳಗಿಟ್ಟರೆ ಮಾತುಕತೆಗೆ ಸಿದ್ದ....’’

No comments:

Post a Comment