Sunday, January 19, 2014

ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿ

 
ಇದು 19 ಜನವರಿ 2014ರ ಬುಡಬುಡಿಕೆ. ಪತ್ರಕರ್ತ  ಎಂಜಲು ಕಾಸಿ, ಮಹಾಕವಿ ವೀರಪ್ಪ ಮೊಯ್ಲಿಯನ್ನು ಸಂಧಿಸಿದಾಗ ಸಂಭವಿಸಿದ ಸಿಲಿಂಡರ್ ಸ್ಫೋಟ.

ಆಧಾರ್ ಕಾರ್ಡ್ ಇದ್ದರೆ ಮಾತ್ರ ಸಿಲಿಂಡರ್, ಸಿಲಿಂಡರ್ ಇದ್ದರೆ ಮಾತ್ರ ಆಧಾರ್ ಕಾರ್ಡ್, 7 ಸಬ್ಸಿಡಿ ಸಿಲಿಂಡರ್, 12 ಸಬ್ಸಿಡಿ ಸಿಲಿಂಡರ್ ಹೀಗೆಲ್ಲ ಗ್ಯಾಸ್ ಮುಗಿದ ಖಾಲಿ ಸಿಲಿಂಡರ್‌ನಂತೆ ಸಚಿವ ವೀರಪ್ಪ ಮೊಯ್ಲಿಯವರು ಸದ್ದು ಮಾಡುತ್ತಿರುವಾಗ, ಪತ್ರಕರ್ತ ಎಂಜಲು ಕಾಸಿ ಮೊಯ್ಲಿಯವರ ಮನೆಯ ಬಾಗಿಲನ್ನು ತಟ್ಟಿದ. ಅವನೇನೂ ಈ ಬಾರಿ ಅವರ ಇಂಟರ್ಯೂಗೆಂದು ಹೋಗಿರಲಿಲ್ಲ. ಅವರ ಇಂಟರ್ಯೂ ಮಾಡಬೇಕಾದರೆ ಅವರ ಮಗ ಹರ್ಷಕುಮಾರನ ಇಂಟರ್ಯೂನ್ನೂ ಅವರು ಫ್ರೀ ಆಗಿ ಕೊಡುತ್ತಿದ್ದುದ ರಿಂದ ಇಂಟರ್ಯೂ ರಗಳೆ ಬೇಡ ಎಂದು ಸುಮ್ಮನಾಗಿದ್ದ.

ಅನಿಲ ಸಿಲಿಂಡರ್‌ಗೆ ಆಧಾರ್ ಅಗತ್ಯವೇ, ನಿಜಕ್ಕೂ ಸಬ್ಸಿಡಿ ರೂಪದಲ್ಲಿ ಎಷ್ಟು ಸಿಲಿಂಡರ್ ಸಿಗುತ್ತವೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಸಚಿವರ ಮನೆಯ ಬಾಗಿಲನ್ನು ತಟ್ಟಿದ್ದ. ದಕ್ಷಿಣಕನ್ನಡದ ಯಾವುದೋ ಯುನಿರ್ವಸಿಟಿಯ ವಿದ್ವಾಂಸರು ಬಾಗಿಲು ತೆಗೆದು ಕಣ್ಣಗಲಿಸಿ ನೋಡಿ ‘‘ಸಾಹೇಬರು ಬಿಸಿಯಾಗಿ ದ್ದಾರೆ’’ ಎಂದು ಬಾಗಿಲು ಮುಚ್ಚಲು ನೋಡಿದರು. ಪತ್ರಕರ್ತ ಎಂಜಲು ಕಾಸಿ ತನ್ನ ಹಳೆಯ ಹರಿದ ಐಡೆಂಟಿಟಿ ಕಾರ್ಡ್ ತೋರಿಸಿದಾಕ್ಷಣ ವಿದ್ವಾಂಸರು ಹಲ್ಲು ಬಿಟ್ರು ‘‘ನೀವಾ ಮಾರ್ರೆ...ನಾನು ಗೊತ್ತಾಗ ಲಿಲ್ಲವಾ...ಹಂಪಿ ಯುನಿವರ್ಸಿಟಿ...ಮೊಯ್ಲಿ ಸಾಹೇಬರು ಒಳಗೆ ಮಹಾಕಾವ್ಯ ಬರೀತಾ ಇದ್ದಾರೆ....’’

ಮಹಾಕಾವ್ಯ ಎಂದಾಕ್ಷಣ ಎಂಜಲು ಕಾಸಿ ಬೆವರ ತೊಡಗಿದ. ಹಿಂದೊಮ್ಮೆ ತಮ್ಮ ಮಹಾಕಾವ್ಯವನ್ನು ಅರ್ಧಗಂಟೆ ಆತನ ಮುಂದೆ ಓದಿದ್ದರು. ‘‘ಸಾರ್ ನಾನು ಮತ್ತೆ ಬರ್ತೇನೆ ಆಗದಾ?’’ ಕಾಸಿ ಕೇಳಿದ. ವಿದ್ವಾಂಸರು ಅಷ್ಟರಲ್ಲೇ ಅವನನ್ನು ಎಳೆದುಕೊಂಡು ಹೋಗಿ ವೀರಪ್ಪ ಮೊಯ್ಲಿಯವರ ಮುಂದೆ ನಿಲ್ಲಿಸಿದರು. 

ಸಚಿವರನ್ನು ಕಂಡದ್ದೇ ಸಬ್ಸಿಡಿ ಸಿಲಿಂಡರ್ ಕಂಡ ಶ್ರೀಸಾಮಾನ್ಯನಂತೆ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್...ಮಹಾಕಾವ್ಯ ಬರೆಯುತ್ತಿದ್ದೀರಂತೆ...’’

ಮಹಾಕವಿಗಳು ನಿಧಾನಕ್ಕೆ ತಲೆಯೆತ್ತಿದರು. ನೋಡಿದರೆ ಅವರ ಪಕ್ಕದಲ್ಲೇ ಅವರ ಬೆನ್ನಿಗಂಟಿ ಒಂದು ಮಗುವೂ ಇತ್ತು. ಅವರ ಸುಪುತ್ರ ಹರ್ಷ ಕುಮಾರ ಇವನೇ ಇರಬೇಕು ಎಂದು ಕಾಸಿ ಅರ್ಥ ಮಾಡಿ ಕೊಂಡ. ‘‘ಹೌದು...ಇದು ಹೊಸ ಮಹಾ ಕಾವ್ಯ... ತುಂಬಾ ಸಂಶೋಧನೆ ಮಾಡಿ ಬರೆಯುತ್ತಾ ಇದ್ದೇನೆ...’’ ಎಂದು ಹಣೆಯ ಬೆವರು ಒರೆಸಿಕೊಂಡರು.
‘‘ಕಾವ್ಯದ ಹೆಸರೇನು ಸಾರ್? ಮಹಾಭಾರತಾನೋ, ರಾಮಾಯಣಾನೋ?’’ ಕಾಸಿ ಆಸಕ್ತಿಯನ್ನು ನಟಿಸಿದ.

‘‘ಮಹಾಕಾವ್ಯದ ಹೆಸರು ಶ್ರೀಹರ್ಷಚರಿತೆ ಅಂತ... ಈಗಾಗಲೇ ಈ ಕಾವ್ಯ ಬರೆಯಲು ರಾಜಮಾತೆ ಸೋನಿಯಾ ಗಾಂಧಿಯ ಆಶೀರ್ವಾದ ವನ್ನೂ, ರಾಜಕುವರ ರಾಹುಲ್‌ಗಾಂಧಿಯವರ ಅನುಮತಿ ಯನ್ನು ಪಡೆದಿದ್ದೇನೆ...’’ ಮೊಯ್ಲಿಯವರು ಉದ್ಗರಿಸಿದರು.
‘‘ರಾಜ ಹರ್ಷವರ್ಧನನ ಕುರಿತಂತೆ ಕಾವ್ಯ ಬರೆಯುತ್ತಿದ್ದೀರಾ ಸಾರ್?’’ ಕಾಸಿ ಭಯ ಭಕ್ತಿಯಿಂದ ಕೇಳಿದ.

‘‘ಇಲ್ಲ ಕಣ್ರೀ...ನನ್ನ ಮಗ ಹರ್ಷಮೊಯ್ಲಿಯ ಕುರಿತಂತೆ ಮಹಾಕಾವ್ಯ ಬರೆಯುತ್ತಾ ಇದ್ದೇನೆ... ಮುಂದಿನ ಚುನಾವಣೆಯಲ್ಲಿ ನಿಲ್ಲುವ ಸಂದರ್ಭದಲ್ಲಿ ಅವನ ಸಾಧನೆ, ಇತಿಹಾಸ, ಬದುಕು, ತ್ಯಾಗ, ಬಲಿದಾನ...ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಜನಜನಿತ ವಾಗಬೇಕು ಎನ್ನುವ ಕಾರಣದಿಂದ..."ಎನ್ನುತ್ತಾ ಕಾವ್ಯವನ್ನು ಓದತೊಡಗಿದರು....ಅಮೆರಿಕದೊಳ್ ವಿದ್ಯಾರ್ಜನೆ ಯಂಗೈದು, ಲಂಡನ್‌ನೊಳ್ ಅಪರಿಮಿತ ದಿಗ್ವಿಜಯಂಗಳ್ ಮೆರೆದು ಇಂತುಂ ಶ್ರೀಹರ್ಷ ಮೊಯ್ಲಿ ಮಂಗಳೂರಿಂಗೆ ವಿಜಯಂಗೈದಂ...’’
ಕಾಸಿಗೆ ಉಸಿರುಗಟ್ಟಿದಂತಾಗಿ...ಕೇಳಿದ ‘‘ಸಾರ್... ಈ ಕಾವ್ಯವನ್ನೂ ನೀವೇ ಬರೀತೀರಾ, ಅಥವಾ ಹಿಂದಿನ ಹಾಗೆ...’’ ಕೇಳಿದ.

ಮೊಯ್ಲಿ ಒಮ್ಮೆಲೆ ರೇಗಿದರು ‘‘ಏನ್ರಿ ಅದು ಹಿಂದಿನ ಹಾಗೆ, ಮುಂದಿನ ಹಾಗೆ...ಏನೋ ವಿವೇಕ ರೈಗಳು ನನ್ನ ಕಾವ್ಯಕ್ಕೆ ಮುನ್ನುಡಿ ಬರೆದ ಒಂದೇ ತಪ್ಪಿಗೆ ಇಡೀ ಕಾವ್ಯವನ್ನೇ ಅವರು ಬರೆದುಕೊಟ್ಟರು ಎಂದೆಲ್ಲ ಗಾಸಿಪ್ ಹಬ್ಬಿಸಿ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ನನ್ನ ಮಾನವನ್ನು ಹರಾಜು ಹಾಕಿದಿರಿ...ನನ್ನ ಮಗನ ಚರಿತೆಯನ್ನು ನಾನಲ್ಲದೆ ಇನ್ಯಾರ್ರೀ ಬರೀತಾರೆ...’’
ಅದೂ ಹೌದು ಅನ್ನಿಸಿತು ‘‘ಸಾರ್ ಅದೇನೋ ಸರಿ. ಆದರೆ ನಮಗೆಲ್ಲ ಇತಿಹಾಸದ ಹರ್ಷ ಗೊತ್ತು ಸಾರ್. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಹರ್ಷ ವೆನ್ನುವುದನ್ನು ನೋಡದೆ ತುಂಬಾ ಸಮಯ ಆಯ್ತು ಸಾರ್...ಗ್ಯಾಸ್ ಇದ್ರೆ ಆಧಾರ್ ಇಲ್ಲ...ಆಧಾರ್ ಇದ್ರೆ ಸಬ್ಸಿಡಿ ಇಲ್ಲ...’’

‘‘ಅದಕ್ಕಾಗಿಯೇ ನನ್ನ ಮಗ ಹರ್ಷ ವಿಜಯಂಗೈಯು ತ್ತಿದ್ದಾನೆ...ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹರ್ಷ, ಸಂತೋಷದ ಹೊನಲೇ ಹರಿಯುತ್ತದೆ...’’ ಎಂದು ಮೊಯ್ಲಿ ಹಸನ್ಮುಖಿಯಾದರು.
‘‘ಸಾರ್...ನಿಮ್ಮ ಮಹಾಕಾವ್ಯವನ್ನು ಓದಿದ ಜನರೇ ಸಿಟ್ಟಿಗೆದ್ದು ನಿಮಗೆ ಮತ ಹಾಕಲಿಲ್ಲ ಎಂಬ ಗಾಳಿ ಸುದ್ದಿ ಇದೆ. ಇದೀಗ ಈ ಹೊಸ ಕಾವ್ಯವನ್ನು ಜನರು ಸ್ವೀಕರಿಸುತ್ತಾರೆಯೇ...’’ ಕಾಸಿ ಅನುಮಾನದಿಂದ ಕೇಳಿದ.

‘‘ಯಾರ್ರೀ ಹೇಳಿದ್ದು? ನನ್ನ ಮಹಾಕಾವ್ಯ ಮೆಚ್ಚಿ ವೀರಕವಿ ಎಂದು ಬಿರುದು ಕೊಟ್ಟು ಪೇಜಾವರಶ್ರೀ ಶಾಲು ಹೊದಿಸಿದರು ಗೊತ್ತುಂಟೋ...’’ ಮೊಯ್ಲಿ ಸವಾಲು ಹಾಕಿದರು.
‘‘ಟೋಪಿ ಹಾಕುವ ಬದಲು ಶಾಲು ಹೊದಿಸಿದ್ರು ಎಂದು ಉಡುಪಿಯ ವೈದಿಕ ಜನರು ಕೃಷ್ಣಮಠದ ಉನ್ನತ ಪಂಕ್ತಿಯಲ್ಲಿ ಭೂರಿ ಭೋಜನವುಂಡು ನಗುತ್ತಿದ್ದರು ಸಾರ್...’’ ಎಂದು ಮತ್ತೆ ಮೊಯ್ಲಿಯನ್ನು ಚುಚ್ಚಿದ.
‘‘ನಾನು ನನ್ನ ಮಗನ ಕುರಿತಂತೆ ಬರೆಯುತ್ತಿರುವ ಶ್ರೀ ಹರ್ಷ ಚರಿತೆ ಮಹಾಕಾವ್ಯ ಕರಾವಳಿಯಲ್ಲಿ ಈಗಾಗಲೇ ಸುದ್ದಿಯಲ್ಲಿದೆ...ಈಗಾಗಲೇ ಎಲ್ಲ ಪತ್ರಿಕೆಗಳಲ್ಲಿ ಈ ಕಾವ್ಯದ ಆಯ್ದ ಭಾಗಗಳು ಪ್ರಕಟಗೊಂಡಿವೆ ಗೊತ್ತುಂಟಾ...’’ ಮೊಯ್ಲಿ ಮತ್ತೆ ಸವಾಲು ಹಾಕಿದರು.

‘‘ಸಾರ್ ಅದು ಜಾಹೀರಾತು ಅಲ್ವಾ?’’ ಕಾಸಿ ಅಚ್ಚರಿಯಿಂದ ಕೇಳಿದ. ‘‘ಜಾಹೀರಾತಲ್ಲ ನಿಮ್ಮ ಬೊಜ್ಜ...ಈ ಕಾವ್ಯ ವರ್ತಮಾನ ಕಾಲಕ್ಕೆ ತುಂಬಾ ಬೆಲೆ ಬಾಳುತ್ತದೆ ಎಂದು ವಿದ್ವಾಂಸರೆಲ್ಲ ಹೇಳುತ್ತಿ ದ್ದಾರೆ...ಅಲ್ಲವೇನ್ರಿ...?’’ ಎಂದು ಹಂಪಿ ಯುನಿವರ್ಸಿಟಿಯ ವಿದ್ವಾಂಸರಿಗೆ ಕೇಳಿದರು.
‘‘ಖಂಡಿತ ಸಾರ್...ಕುಮಾರವ್ಯಾಸನ ಭಾಮಿನಿ ಮತ್ತು ಹರಿಹರನ ರಗಳೆ ಛಂದಸ್ಸಿನಲ್ಲಿ ಬರೆಯಲಾದ ಅಪರೂಪದ ಕಾವ್ಯ ಇದು...ಇದರಲ್ಲಿರುವ ಮಾತ್ರೆ ಗಳು, ಗಣಗಳು...ಬಹಳ ವಿಶಿಷ್ಟವಾದುದು...’’
ಕಾಂಗ್ರೆಸ್‌ನಲ್ಲಿ ಆರೆಸ್ಸೆಸ್‌ನ ಗಣಗಳಿಗೆ ಏನು ಪಾತ್ರ? ಕಾಸಿಗೆ ಅರ್ಥವಾಗಲಿಲ್ಲ. ಒಳಗೊಳಗೆ ಚುನಾವಣಾ ಒಪ್ಪಂದವಾಗಿದೆಯೋ ಎಂದು ತಲೆ ತುರಿಸಿದ ‘‘ಸಾರ್, ಈ ಆರೆಸ್ಸೆಸ್ ಗಣಗಳು ಇದ್ದಲ್ಲಿ ರಗಳೆಗಳಿರುವುದು ಸಹಜವೇ ಸಾರ್....’’ ಕಾಸಿ ಕೂಡ ರಗಳೆ ಛಂದಸ್ಸಿನ ಕುರಿತಂತೆ ತನ್ನ ಪ್ರೌಢಿಮೆಯನ್ನು ಮೆರೆದ.

‘‘ರಗಳೆಯಲ್ಲ, ನಿಮ್ಮ ಬೊಜ್ಜ. ಅದು ಚಡ್ಡಿಗಳ ಗಣ ಅಲ್ಲ...ಇದು ನಮ್ಮ ಕವಿಗಳ ಗಣ...’’ ಮೊಯ್ಲಿ ಬೆಚ್ಚದಿಂದ ಹೇಳಿದರು.
‘‘ಓಹೋ ಹಾಗದರೆ ಇದು ಕಾಂಗ್ರೆಸ್‌ನ ಭಾರತ ಸೇವಾ ದಳದ ಗಣಗಳಾಗಿರಬೇಕು’’ ಎಂದು ಕಾಸಿ ಅರ್ಥವಾದವನಂತೆ ತಲೆಯಾಡಿಸಿದ. ‘‘ಆದರೆ ಸಾರ್...ನೀವು ಮೂರು ಸಾರಿ ಸೋತ ಆ ಪಾಳು ಬಿದ್ದ ಮಂಗಳೂರಿನ ಬಾವಿಗೆ ನಿಮ್ಮ ಮಗನನ್ನು ತಳ್ಳುವುದು ಸರಿಯಾ...’’ ಈ ಪ್ರಶ್ನೆಗೆ ಮೊಯ್ಲಿ ಮತ್ತೆ ಬೆಚ್ಚ ಆದರು.

‘‘ನೀವು ಹೀಗೆಲ್ಲ ಮಾತನಾಡಬಾರದು...ನನ್ನ ಮಗ ಅಮೆರಿಕದಲ್ಲಿ ಹುಟ್ಟಿ, ಲಂಡನ್‌ನಲ್ಲಿ ಅಂಬೆಗಾಲಿಕ್ಕಿ, ಪ್ಯಾರಿಸ್‌ನಲ್ಲಿ ತೊದಲು ಹೆಜ್ಜೆ ಇಟ್ಟು ಬೆಳೆದವನು. ಇವನು ಮಂಗಳೂರಿನಲ್ಲಿ ಬಂದು ಓಟಿಗೆ ನಿಲ್ಲುವುದೇ ದೊಡ್ಡದು. ನೀವೆಲ್ಲ ಓಟು ಹಾಕಿ ಅವನಿಗೆ ಕೃತಜ್ಞತೆ ಯನ್ನು ಸಲ್ಲಿಸಬೇಕು...ನನ್ನ ಕಾವ್ಯದ ಮೊದಲ ಅಧ್ಯಾಯದಲ್ಲೇ ಅವನ ಬಾಲಲೀಲೆಗಳನ್ನು ಬಣ್ಣಿಸಿದ್ದೇನೆ. ಇದು ಚಂಪೂಕಾವ್ಯದಲ್ಲಿದೆ. ಓದಲೇ...’’ ಎಂದು ಕೇಳಿದರು.

‘‘ಸಾರ್...ಗೋದಾಮಿನಲ್ಲಿ ಸ್ಟಾಕಿರುವ ನಿಮ್ಮ ಹಿಂದಿನ ಮಹಾಕಾವ್ಯಗಳ ಪ್ರತಿಗಳನ್ನೆಲ್ಲ ಕಡಲುಕೊರೆತ ತಡೆಯುವುದಕ್ಕೆ ಕಡಲಿಗೆ ಸುರಿದು ಮೊಯ್ಲಿ ಕಾವ್ಯದ ಹಿರಿಮೆಯನ್ನು ಮೇಲೆತ್ತಲಿದ್ದೇವೆ ಎಂದು ಜನಾರ್ದನ ಪೂಜಾರಿ ಅಲ್ಲಲ್ಲಿ ಹೇಳಿ ತಮಾಷೆ ಮಾಡುತ್ತಾರೆ ಸಾರ್...ಹೀಗಿರುವಾಗ ನಿಮ್ಮ ಹೊಸ ಕಾವ್ಯದ ಗತಿ ಏನು ಸಾರ್?’’

‘‘ಪ್ರಭಾಕರ ಭಟ್ಟರನ್ನು ತಬ್ಬಿಕೊಂಡ ಮೇಲೆ ಪೂಜಾರಿಯವರಿಗೆ ಸ್ವಲ್ಪ ಜಂಬ ಬಂದ ಹಾಗೆ ಇದೆ... ನಾನೂ ಬಿಡುವುದಿಲ್ಲ...ಹರ್ಷ ಚರಿತೆ ಮಹಾಕಾವ್ಯಕ್ಕೆ ಎಸ್.ಎಲ್.ಭೈರಪ್ಪರತ್ರ ಮುನ್ನುಡಿ ಬರೆಸುತ್ತೇನೆ... ಚಿದಾನಂದ ಮೂರ್ತಿಯವರಲ್ಲಿ ಸಂಶೋಧನೆ ಮಾಡಿಸಿ, ಹರ್ಷ ಮೊಯ್ಲಿಯ ಎಲ್ಲ ವೈಭವಗಳ ಶಾಸನಗಳನ್ನು ಮಂಗಳೂರಿನಲ್ಲಿ ಮೈಲುಕಲ್ಲುಗಳಂತೆ ನೆಡುತ್ತೇನೆ...’’ ಮೊಯ್ಲಿಯವರು ಸಿಟ್ಟಿನಿಂದ ಹೇಳಿದರು.

‘‘ಸಾರ್ ನಿಮ್ಮ ಮಗ ಅದೇನೋ ಗ್ರಾಮೀಣ ಜನರ ಬದುಕನ್ನು ಹಸನು ಮಾಡಿದ್ದಾರಂತಲ್ಲ ಸಾರ್... ಆ ಗ್ರಾಮ ಯಾವ ದೇಶದಲ್ಲಿರುವುದು ಸಾರ್.. ಅಮೆರಿಕದಲ್ಲೋ, ಲಂಡನ್‌ನಲ್ಲೋ...’’
ಕಾಸಿಯ ಪ್ರಶ್ನೆಗೆ ಮೊಯ್ಲಿಯವರು ಸಿಲಿಂಡರ್‌ನಂತೆ ಸ್ಫೋಟಿಸಿದರು ‘‘ಹಿಡಿಯಿರಿ ಅವನನ್ನು. ಅವನ ಕೈ ಕಾಲು ಕಟ್ಟಿ ಅವನ ಕಿವಿಗೆ ಒಂದು ಗಂಟೆ ನನ್ನ ಮಹಾಕಾವ್ಯವನ್ನು ಓದಿ ಹೇಳಿ.ರಿ...’’ ಎಂದು ಆದೇಶಿಸಿ ದರು. ಆದರೆ ಕಾಸಿಗೆ ಅದು ‘‘ಕಾದ ಸೀಸವನ್ನು ಸುರಿಯಿರಿ’’ ಎಂಬಂತೆ ಕೇಳಿ, ಈ ಸಬ್ಸಿಡಿಯೂ ಬೇಡ, ಸಿಲಿಂಡರೂ ಬೇಡ ಎಂದು ಅಲ್ಲಿಂದ ಓಡ ತೊಡಗಿದ.

No comments:

Post a Comment