ಚೀನಾದಿಂದ ಹಿಂದಿರುಗಿದ ಯಡಿಯೂರಪ್ಪ ವಿಮಾನದಿಂದ ಕೆಳಗಿಳಿಯುತ್ತಿದ್ದ ಹಾಗೆಯೇ ವಿಮಾನ ದೊಳಗಿಂದ ಅವರ ಹಿಂದೆಯೇ ಸಂಪುಟ ಸಚಿವರು ದೊಡ್ಡ ಗೋಣಿಚೀಲವನ್ನು ಜಾಗರೂಕತೆಯಿಂದ ಕೆಳಗಿಳಿಸ ತೊಡಗಿದರು.
ಯಡಿಯೂರಪ್ಪರನ್ನು ವಿಮಾನ ನಿಲ್ದಾಣದಲ್ಲೇ ಭೇಟಿಯಾಗಿ ಚೀನ ಅನುಭವಗಳ ಕುರಿತು ಇಂಟರ‍್ಯೂ ಮಾಡಲೆಂದು ಕಾದು ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿ ಆ ಗೋಣಿ ಚೀಲವನ್ನು ಅಚ್ಚರಿಗಣ್ಣಿನಿಂದ ನೋಡುತ್ತಿದ್ದ. ಇತರರನ್ನು ಮುಟ್ಟಲು ಬಿಡದೆ, ಸ್ವತಃ ಸಚಿವ ಕಟ್ಟಾ ಸುಬ್ರಹ್ಮಣ್ಯಂ ಮತ್ತು ಪುತ್ರ ರಾಘವೇಂದ್ರ ಅವರೇ ಜಾಗರೂಕತೆಯಿಂದ ವಿಮಾನದಿಂದ ಇಳಿಸಿ, ತರುತ್ತಿದ್ದರು. ಮಧ್ಯದಲ್ಲಿ ಆಗಾಗ “ಮೆಲ್ಲ...ಮೆಲ್ಲ...” ಎಂದು ಶೋಭಾ ಕರಂದ್ಲಾಜೆ ಸಚಿವರಿಗೆ ಜಾಗರೂಕತೆಯನ್ನು ಹೇಳುತ್ತಿದ್ದರು. ಗೋಣಿ ಚೀಲವನ್ನು ಅಷ್ಟೂ ಜಾಗರೂಕತೆಯಿಂದ ತರುತ್ತಿರುವುದನ್ನು ನೋಡಿ ಕಾಸಿಗೆ ಒಳಗೊಳಗೆ ಖುಷಿಯಾಯಿತು. “ಬಹುಶಃ ಚೀನದಿಂದ ಬರುವಾಗ ಪತ್ರಕರ್ತರಿಗೆ ಗಿಫ್ಟುಗಳನ್ನು ಹೊತ್ತು ತಂದಿರಬಹುದು” ಎಂದು ಮನದಲ್ಲಿ ಮಂಡಿಗೆ ಮೆಲ್ಲ ತೊಡಗಿದ.
ಯಡಿಯೂರಪ್ಪ ಎದುರಾದುದೇ ಕಾಸಿ ಕೇಳಿಯೇ ಬಿಟ್ಟ “ಸಾರ್...ಅದೇನು ಸಾರ್ ಗೋಣಿ ಚೀಲದಲ್ಲಿ...”
ಆ ಪ್ರಶ್ನೆಗೆ ಯಡಿಯೂರಪ್ಪ ಯಾಕೋ ನಾಚಿ ನೀರಾದರು.“ನನಗೆ ಹೇಳೋದಕ್ಕೆ ನಾಚಿಕೆ ಯಾಗತ್ತೆ... ಶೋಭಾಳನ್ನು ಕೇಳಿ” ಎಂದರು.
ಕಾಸಿಗೆ ಅಚ್ಚರಿಯಾಯಿತು. ನಾಚಿಕೆಯಾಗುವಂತಹದ್ದು ಆ ಚೀಲ ದಲ್ಲಿ ಅದೇನಿರಬಹುದು? ಪತ್ರಕರ್ತನ ಕುತೂಹಲದಿಂದ ನಿಂತಲ್ಲೇ ಗಡಗಡ ನಡುಗತೊಡಗಿದ. ಅಷ್ಟರಲ್ಲಿ ಶೋಭಾ ಆಗಮನವಾಯಿತು. “ಮೇಡಂ ಮೇಡಂ...ಗೋಣಿ ಚೀಲದೊಳಗೆ ಏನಿದೆ?”
ಶೋಭಾ ಕೂಡ ಅಷ್ಟೇ ತೀವ್ರವಾಗಿ ಕಂಪಿಸುತ್ತಾ ನುಡಿದರು “ಜ್ಞಾನ ಕಣ್ರೀ...ಆ ಚೀಲದೊಳಗೆ ಜ್ಞಾನ ಇದೆ ಕಣ್ರೀ...”
ಕಾಸಿಗೆ ಅರ್ಥವಾಗಲಿಲ್ಲ. ಸಾಧಾರಣವಾಗಿ ಜ್ಞಾನವೆನ್ನುವುದು ತಲೆಯೊಳಗಿರುತ್ತದೆ. ಆದರೆ ಸದ್ಯಕ್ಕೆ ಆ ತಲೆಯೊಳಗೆ ಈ ನಾಡಿನ ರೈತರ ಗೊಬ್ಬರಗಳೆಲ್ಲ ಸ್ಟಾಕಿರುವುದರಿಂದ ರೈತರು ಗೊಬ್ಬರಕ್ಕಾಗಿ ಹಾಹಾಕಾರ ಮಾಡುತ್ತಿದ್ದಾರೆ. ಆದರೆ, ತಲೆಯಲ್ಲಿರಬೇಕಾದ ‘ಜ್ಞಾನ’ ಗೋಣಿ ಚೀಲದಲ್ಲಿ ತುಂಬಿಸಿ ತರಲು ಕಾರಣವೇನು?
ಜಗತ್ತಿನ ಎಲ್ಲ ಉತ್ಪಾದನೆಗಳನ್ನೂ ‘ಮೇಡಿನ್ ಚೈನಾ’ ಹೆಸರಲ್ಲಿ ಚೀನದಲ್ಲಿ ಮಾಡುತ್ತಾರಂತೆ. ‘ಜ್ಞಾನ’ವನ್ನು ಕೂಡ ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರ? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಮೇಲೆ ಒಂದಾಗಿ ಹುಟ್ಟತೊಡಗಿತು.
“ಮೇಡಂ...ಚೀನದಿಂದ ಬರುವಾಗ ಜ್ಞಾನವನ್ನು ದುಡ್ಡುಕೊಟ್ಟು ತಂದ್ರಾ?” ಕಾಸಿ ಕೇಳಿದ.
ಶೋಭಾ ಸಿಟ್ಟಾದರು. “ಜ್ಞಾನವನ್ನು ಹಾಗೆ ದುಡ್ಡುಕೊಟ್ಟು ತರೋಕೆ ಆಗುತ್ತೇನ್ರಿ...?” ಕೇಳಿದರು.
ಕಾಸಿಗೆ ಅರ್ಥವಾಗಲಿಲ್ಲ “ಮತ್ತೆ, ಆ ಗೋಣಿ ಚೀಲದಲ್ಲಿ....”
ಶೋಭಾ ಸಂಭ್ರಮದಿಂದ ಹೇಳಿದರು “ಚೀನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ‘ಜ್ಞಾನೋದಯ’ ಆಯ್ತು ಕಣ್ರೀ. ಆ ಜ್ಞಾನವನ್ನು ನಾವು ಗೋಣಿ ಚೀಲದಲ್ಲಿ ತುಂಬಿಸಿ ತಂದಿದ್ದೇವೆ. ಅದನ್ನೆಲ್ಲ ನಾಡಿನ ಜನತೆಗೆ ಹಂಚಲಿದ್ದೇವೆ...”
ಕಾಸಿ ಮುಗ್ಧವಾಗಿ ಕೇಳಿದ “ಅಂದರೆ, ಅವರು ಈವರೆಗೆ ಅಜ್ಞಾನಿಯಾಗಿದ್ದರಾ...?”
ಶೋಭಾ ಒಂದು ಕ್ಷಣ ಕಾಸಿಯನ್ನು ದುರುಗುಟ್ಟಿ ನೋಡಿ, ಬಳಿಕ ಸಾವಾಧಾನವಾಗಿ ಸ್ಪಷ್ಟೀಕರಣ ನೀಡಿದರು “ನೋಡ್ರಿ? ಇದು ವಿಶೇಷವಾದ ಜ್ಞಾನ...ಚೀನ ಪ್ರವಾಸದ ಕುರಿತಂತೆ ವಿರೋಧ ಪಕ್ಷದವರೆಲ್ಲ ಟೀಕಿಸಿ ದರಲ್ಲ? ಆದರೆ, ನೋಡಿ...ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರಿಗೆ ಚೀನದಲ್ಲಿ ಜ್ಞಾನೋದಯವಾಗಿದೆ....”
ಕಾಸಿಗೆ ಕುತೂಹಲವಾಯಿತು. ಗೋಣಿ ಚೀಲವನ್ನೇ ನೋಡುತ್ತಾ ಕೇಳಿದ “ಜ್ಞಾನ ನೋಡೋದಕ್ಕೆ ಹೇಗಿದೆ ಮೇಡಂ?”
ಶೋಭಾ ಬಳುಕುತ್ತಾ ಹೇಳಿದರು “ಯಡಿಯೂರಪ್ಪ ಅವರ ಮಗ ರಾಘವೇಂದ್ರರ ಹಾಗೆ ಮುದ್ದು ಮುದ್ದಾಗಿದೆ...”
ಕಾಸಿ ಕಣ್ಣು ಇಷ್ಟಗಲ ಮಾಡಿ “ಅಂದ್ರೆ ಜ್ಞಾನಕ್ಕೆ ರಾಘವೇಂದ್ರ ಅವರ ಹಾಗೆ ಮೀಸೇನೂ ಇದೆಯ ಮೇಡಂ...”
ಶೋಭಾ ಮತ್ತೆ ಗರಂ ಆದರು. ಆದರೂ ಸಹನೆಯಿಂದ ನುಡಿದರು “ಈಗಷ್ಟೇ ಉದಯವಾಗಿದೆ. ಮೀಸೆ Uಸೆ ಇರೋಲ್ಲ ಅನ್ನೋದು ಗೊತ್ತಿಲ್ವೇನ್ರಿ ನಿಮಗೆ? ಗಲ್ಲ, ಹಣೆ ಎಲ್ಲ ರಾಘವೇಂದ್ರ ಥರ ಇದೆ. ಕಣ್ಣು ಮಾತ್ರ ನನ್ನ ಹಾಗೆ...ಹಲ್ಲು ಸದಾನಂದ ಗೌಡರ ಹಾಗೆ....ಹೊಟ್ಟೆ ರೆಡ್ಡಿಗಳ ಹಾಗೆ ಇದೆ...”
ಕಾಸಿಗೆ ತುಂಬಾ ಖುಷಿಯಾಯಿತು “ಮೇಡಂ...ಈ ಜ್ಞಾನೋದಯ ಆದದ್ದು ಹೇಗೆ ಮೇಡಂ...?”
ಶೋಭಾ ಅವರು ತಮ್ಮ ಚೀನ ಪ್ರವಾಸವನ್ನು ವಿವರಿಸತೊಡಗಿದರು. “ನಾವು ಚೀನದ ಬೇರೆ ಬೇರೆ ಕೃಷಿಯ ಕುರಿತಂತೆ ವಿವಿಧ ಹೊಟೇಲ್‌ಗಳಲ್ಲಿ ಅಧ್ಯಯನ ನಡೆಸುತ್ತಿದ್ದೆವು. ಮೊದಲು ಕೋಳಿ ಸಾಕಣೆಯ ಬಗ್ಗೆ ತಿಳಿದುಕೊಳ್ಳಲು ಬೇರೆ ಬೇರೆ ರೀತಿಯ ಕೋಳಿ ಐಟಂಗಳ ಆರ್ಡರ್ ಮಾಡಿದೆವು. ಕೋಳಿ ಫ್ರೈ, ಟಿಕ್ಕಾ, ತಂದೂರಿ...ಹೀಗೆ...ಎಲ್ಲವನ್ನು ಅಧ್ಯ ಯನ ಮಾಡಿದೆವು. ಎರಡನೆ ದಿನ ಹಂದಿ ಉದ್ಯಮದ ಬಗ್ಗೆ ತಿಳಿದುಕೊಳ್ಳಲು ವಿವಿಧ ಹಂದಿ ಐಟಂಗಳನ್ನು ತರಿಸಿದೆವು. ಹೀಗೆ...ಬೇರೆ ಬೇರೆ ಹೊತ್ತಲ್ಲಿ ಕುರಿ, ಆಡು, ಫಿಶ್ ಹೀಗೆ ವಿವಿಧ ಕೃಷಿಗಳ ಕುರಿತಂತೆ ಅಧ್ಯಯನ ನಡೆಸಿದೆವು. ಹಾಗೆಯೇ ವಿವಿಧ ಬೀಚ್‌ಗಳಲ್ಲಿ ಕುಳಿತು ರೈತರ ಬಗ್ಗೆ ಚರ್ಚೆಗಳನ್ನು ನಡೆಸಿದೆವು. ಚೀನದ ವಿವಿಧ ನಗರಗಳಲ್ಲಿ ಶಾಪಿಂಗ್ ನಡೆಸಿ ರೈತರ ಬೆಳೆಗಳಿಗೆ ಯಾವ ರೀತಿಯ ದರ ಇದೆ ಎಂದು ತಿಳಿದುಕೊಂಡೆವು. ಆ ಬಳಿಕ ಕೃಷಿ ಸಚಿವರನ್ನು ಭೇಟಿಯಾಗಿ ಅವರಿಗೆ ಕೆಲವು ಸಲಹೆಗಳನ್ನು ನಾವು ನೀಡಿದೆವು...”
“ನೀವು ಚೀನ ಕೃಷಿ ಸಚಿವರಿಗೆ ಸಲಹೆಗಳನ್ನು ನೀಡಿದಿರ?” ಕಾಸಿ ಅನುಮಾನದಿಂದ ಕೇಳಿದ.
“ಹೌದು ಕಣ್ರೀ. ಅಲ್ಲಿನ ಕೃಷಿ ಸಚಿವರು ಅನನುಭವಿಗಳು. ನಾಡಿನ ಕೃಷಿಕರ ಹಣವನ್ನು ಹೇಗೆ ನಮ್ಮ ಸ್ವಂತ ಜಮೀನಿನ ಕೃಷಿಗೆ ಬಳಸಬಹುದು ಎನ್ನುವುದನ್ನು ಅವರಿಗೆ ಹೇಳಿಕೊಟ್ಟೆವು. ರೈತರ ಹಣವನ್ನು ಹೇಗೆ ವೈಯಕ್ತಿಕವಾಗಿ ನಾವು ಸದ್ಬಳಕೆ ಮಾಡಬಹುದು ಎನ್ನುವುದನ್ನು ವಿವರಿಸಿದೆವು. ನಾಡಿನ ರೈತರ ಹಣದಿಂದ ಹೇಗೆ ಮನೆಯ ಕೃಷಿ ಭೂಮಿಯನ್ನು, ತೋಟವನ್ನು ವಿಸ್ತರಿಸಬಹುದು ಎನ್ನುವುದರ ಕುರಿತಂತೆಯೂ ಅವರಿಗೆ ಮಾಹಿತಿ ನೀಡಿದೆವು. ಇದಕ್ಕೆ ಪ್ರತಿಯಾಗಿ ಅವರು ನಮ್ಮ ರೈತರಿಗೆ ಕೆಲವನ್ನು ನೀಡಿದರು...”
“ನಾಡಿನ ಕೃಷಿಕರಿಗಾಗಿ ಅವರೇನನ್ನು ನೀಡಿದರು ಮೇಡಂ?” ಕಾಸಿ ಕೇಳಿದ
ಶೋಭಾ ಮೇಡಂ ನುಡಿದರು “ಗೊಬ್ಬರ, ಬಿತ್ತನೆ ಬೀಜ ಕೇಳಿ ಪ್ರತಿಭಟನೆ ನಡೆಸುವ ರೈತರ ಮೇಲೆ ಹಾರಿಸುವುದಕ್ಕಾಗಿ ತಿಯಾನೈನ್ ಚೌಕ್‌ನಲ್ಲಿ ಬಳಸಿದ್ದ ಕೋವಿಗಳನ್ನು ಕರ್ನಾಟಕಕ್ಕೆ ಪೂರೈಸುವ ಭರವಸೆಯನ್ನು ನೀಡಿದರು. ಚೈನಾ ನಿರ್ಮಿತ ಲಾಠಿಗಳನ್ನು, ಪೊಲೀಸರಿಗೆ ಬೂಟುಗಳನ್ನು ನೀಡುವ ಭರವಸೆ ನೀಡಿದರು. ಹಾಗೆಯೇ ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ನಮಗೆ ನೀಡಿದ್ದಾರೆ. ಈಗಾಗಲೇ ಗಡಿ ಭಾಗದಲ್ಲಿ ಭಾರತದ ಭೂಮಿಯನ್ನು ಒತ್ತುವರಿ ಮಾಡಿ ಅಪಾರ ಅನುಭವವಿರುವುದರಿಂದ ನಮಗೆ ಅವರ ತರಬೇತಿಯಿಂದ ಬಹಳ ಪ್ರಯೋಜನ ವಾಗಿದೆ. ಅದನ್ನೆಲ್ಲ ನಾವು ಆಡಳಿತದಲ್ಲಿ ಸದ್ಬಳಕೆ ಮಾಡಲಿದ್ದೇವೆ...”
ಕಾಸಿಯ ಕಣ್ಣು ಮತ್ತೆ ಗೋಣಿ ಚೀಲದತ್ತ ಹೊರಳಿತು “ಮೇಡಂ... ಯಡಿಯೂರಪ್ಪ ಅವರಿಗೆ ಜ್ಞಾನೋದಯ ಹೇಗಾಯಿತು ಎಂದು ಹೇಳೇ ಇಲ್ಲ...”
ಶೋಭಾ ಅವರು ವಿವರಿಸತೊಡಗಿದರು “ಕೈಯಲ್ಲಿ ವಿಸ್ಕಿಯ ಕಮಂಡಲ ಹಿಡಿದು ಚೀನಾದ ಹೊಟೇಲೊಂದರ ಕೋಣೆಯಲ್ಲಿ ಏಸಿಯ ಅಡಿಯಲ್ಲಿ ಕುಳಿತು ಅವರು ಧ್ಯಾನ ಮಾಡುತ್ತಿದ್ದರು. ಮೊದಲ ಪೆಗ್ಗಿಗೆ ಏನೂ ಸಂಭವಿಸಿರಲಿಲ್ಲ. ಎರಡನೆ ಪೆಗ್ಗಿಗೆ ಅದೇನೋ ಕಿಟಕಿಯ ಬಳಿ ಸುಳಿದಂತಾಯಿತು. ಬಾಟ್ಲಿ ಖಾಲಿಯಾದದ್ದೇ...ಯಡಿಯೂರಪ್ಪ ಒಮ್ಮೆಲೆ “ಜ್ಞಾನೋದಯ ವಾಯಿತು...” ಎಂದು ಘೋಷಿಸಿದರು” ಕಿಟಕಿಯ ಬಳಿಯಲ್ಲಿ ನೋಡುತ್ತೇವೆ ಏನೋ ತಲೆ ಕಾಣುತ್ತಿದೆ....ತಕ್ಷಣ ಅದು ಜ್ಞಾನ ಎನ್ನುವುದು ಅರಿವಾಯಿತು. ಕಿಟಕಿಯಿಂದ ಎಳೆದು ಜ್ಞಾನವನ್ನು ಗೋಣಿ ಚೀಲದೊಳಗೆ ಹಾಕಿ ತೆಗೆದುಕೊಂಡು ಬಂದೆವು. ಮುಂದಿನ ದಸರಾದಲ್ಲಿ ಈ ಜ್ಞಾನವನ್ನು ಪ್ರವಾಸಿಗರಿಗೆ ಪ್ರದರ್ಶಿಸಲಿದ್ದೇವೆ...”
ಅಷ್ಟರಲ್ಲಿ ಗೋಣಿ ಚೀಲ ಅಲುಗಾಡಿದಂತಾ ಯಿತು. ಕಾಸಿ ಕುತೂಹಲದಿಂದ “ಮೇಡಂ, ಸ್ವಲ್ಪ ಚೀಲ ಬಿಚ್ಚಿದರೆ ನಾನೂ ಜ್ಞಾನದ ಮುಖ ನೋಡಿ ಕೃತಾರ್ಥನಾಗಬಹುದಿತ್ತು...”
ಯಡಿಯೂರಪ್ಪ ಮಗ ರಾಘವೇಂದ್ರರಿಗೆ ಕಾಸಿಯ ಕುರಿತಂತೆ ಯಾಕೋ ಪ್ರೀತಿ ಉಕ್ಕಿತು “ಸ್ವಲ್ಪ ತೋರಿಸೋಣ ಮೇಡಂ...” ಎನ್ನುತ್ತಾ ಗೋಣಿ ಚೀಲ ಬಿಚ್ಚಿದರು.
ಬಿಚ್ಚಿದ್ದೇ ಅದರೊಳಗಿಂದ ಬಿಳಿ ವಸ್ತ್ರ ಧರಿಸಿದ ಚೀನಿ ತರುಣನೊಬ್ಬ ಹೊರ ಹಾರಿ, ಏದುಸಿರು ಬಿಟ್ಟು ಇಂಗ್ಲಿಷ್‌ನಲ್ಲಿ ಯದ್ವಾತದ್ವಾ ಬೈಯ ತೊಡಗಿದ “ನಾನೂ ನಿಮ್ಮ ಹೊಟೇಲ್‌ನ ವೈಟರ್ ಕಣ್ರೀ...ಸುಮ್ಮನೆ ಕುತೂಹಲದಿಂದ ನಿಮ್ಮ ಕೋಣೆಗೆ ಕಿಟಕಿಯಿಂದ ಇಣಿಕಿದ್ದಕ್ಕೆ ನೀವು ನನ್ನನ್ನು ಗೋಣಿ ಚೀಲದಲ್ಲಿ ಹಾಕಿ ತಂದು ಬಿಡೋದಾ...? ನಿಮ್ಮ ಮೇಲೆ ಚೀನ ಅಧ್ಯಕ್ಷರಿಗೆ ದೂರು ಕೊಟ್ಟು ಭಾರತದ ವಿರುದ್ಧ ಯುದ್ಧ ಸಾರುವ ಹಾಗೆ ಮಾಡ್ತೀನಿ....” ಎಂದು ತನ್ನ ಚೀನಾ ಯುದ್ಧ ಕಲೆಯನ್ನು ಪ್ರದರ್ಶಿಸ ತೊಡಗಿದ. ಗೋಣಿ ಚೀಲವನ್ನು ಬಿಟ್ಟು ಯಡಿಯೂರಪ್ಪ ಸಹಚರರು ‘ಬದುಕಿದರೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿ ಜೀವಿಸಬಹುದು” ಎಂದು ಓಡತೊಡಗಿದರು.
(ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚೀನ ಪ್ರವಾಸದ ಹಿನ್ನೆಲೆಯಲ್ಲಿ ಬರೆದಿರುವುದು. ರವಿವಾರ ಸೆಪ್ಟಂಬರ್ ೧೩, ೨೦೦೯ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ)
No comments:
Post a Comment