“ಸಚ್ ಕಾ ಸಾಮ್ನಾ’ ಎಂಬ ಸ್ಟಾರ್ ಪ್ಲಸ್‌ನ ರಿಯಾಲಿಟಿ ಶೋ ಸಕ್ಸಸ್ ಆಗಿರುವುದು ಕಂಡು, ತಾನೂ ಕೂಡ ಇಂತಹದೊಂದು ಕಾರ್ಯಕ್ರಮವನ್ನು ಟಿ.ವಿ.ಗಳಲ್ಲಿ ನಡೆಸಿಕೊಟ್ಟರೆ ಹೇಗೆ ಎಂದು ಪತ್ರಕರ್ತ ಎಂಜಲು ಕಾಸಿ ಯೋಚಿಸತೊಡಗಿದ. ಪತ್ರಕರ್ತನಾಗಿ ಸಿಕ್ಕ ಸಿಕ್ಕವರಿಂದ ತಪರಾಕಿ ತಿಂದು ಬೋರಾಗಿದ್ದ ಎಂಜಲು ಕಾಸಿಗೆ ಒಂದು ಚೇಂಜ್ ಬೇಕಿತ್ತು. ಈ ಹಿನ್ನೆಲೆಯಲ್ಲಿ ಟಿ.ವಿಯೊಂದರಲ್ಲಿ ಆಂಕರ್ ಆಗಿ ಸೇರಿಕೊಂಡೇ ಬಿಟ್ಟ. ಸತ್ಯದ ತಲೆಯ ಮೇಲೆ ಹೊಡೆಯುವಂತೆ, ಸಚ್ ಕಾ ಸಾಮ್ನಾ ಕಾರ್ಯಕ್ರಮವನ್ನು ಯಥಾವತ್ ಕಾಪಿ ಹೊಡೆದು, ‘ನಗ್ನ ಸತ್ಯ’ ಎಂದು ತನ್ನ ಕಾರ್ಯಕ್ರಮಕ್ಕೆ ಹೆಸರು ಕೊಟ್ಟ. ಕಾರ್ಯಕ್ರಮದ ಪ್ರಕಾರ, ಕೇಳಿದ ಸುಮಾರು ೨೫ ಪ್ರಶ್ನೆಗಳಲ್ಲಿ ಎಲ್ಲಕ್ಕೂ ಸರಿ ಉತ್ತರಿಸಿದವನಿಗೆ ಬಹುಮಾನ. ಹೇಳಿದ್ದು ಸುಳ್ಳೋ, ಸತ್ಯವೋ ಎನ್ನುವುದನ್ನು ‘ಪಾಲಿಗ್ರಾಫ್’ ಮೂಲಕ ಮೊದಲು ಪರೀಕ್ಷಿಸಲಾಗುತ್ತದೆ. ಅದೇನು ಅದೃಷ್ಟ ಮಾಡಿದ್ದನೋ, ಕಾರ್ಯಕ್ರಮದ ಮೊದಲ ಅತಿಥಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಮಿಸಿದರು.
***
ಎಂಜಲು ಕಾಸಿ ಹಲ್ಲು ಕಿರಿಯುತ್ತಾ, ಸತ್ಯವನ್ನು ನಗ್ನಗೊಳಿಸಲು ಆರಂಭಿಸಿದ “ಸಾರ್, ಇಲ್ಲಿ ತಲಾ ಐದರ ಹಾಗೆ ೨೫ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲ ಐದು ಪ್ರಶ್ನೆಗಳಿಗೆ ಸತ್ಯ ಉತ್ತರಿಸಿದರೆ ನಿಮಗೆ ೫ ಚೀಲ ರಸಗೊಬ್ಬರವನ್ನು ನೀಡಲಾಗುತ್ತದೆ. ಆದರೆ ಇನ್ನೂ ಐದು ಪ್ರಶ್ನೆಗಳಿಗೆ ಸುಳ್ಳು ಹೇಳದೆ ನಿಜ ಉತ್ತರಿಸಿದರೆ ಎರಡು ಕೆ.ಜಿ. ತೊಗರಿ ಬೇಳೆಯನ್ನು ಬಹುಮಾನವಾಗಿ ಕೊಡಲಾಗುತ್ತದೆ. ಆದರೆ ಒಂದೇ ಒಂದು ಪ್ರಶ್ನೆಗೆ ಸುಳ್ಳು ಉತ್ತರ ನೀಡಿದರೂ, ಹಿಂದಿನ ಐದು ಚೀಲ ಗೊಬ್ಬರವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೂರನೆ ಹಂತದಲ್ಲಿ ಮತ್ತೆ ಹತ್ತು ಪ್ರಶ್ನೆ. ಈ ಹತ್ತು ಪ್ರಶ್ನೆಗಳಿಗೆ ಉತ್ತರಿಸಿದರೆ ಐದು ಚೀಲ ಗೊಬ್ಬರ, ಎರಡು ಕೆ.ಜಿ. ತೊಗರಿ ಬೇಳೆಯ ಜೊತೆಗೆ ಐದು ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತದೆ. ಕೊನೆಯ ಐದು ಪ್ರಶ್ನೆಗಳಿಗೂ ನಿಜ ಹೇಳಿದರೆ ಮೇಲಿನ ಎಲ್ಲ ವಸ್ತುಗಳ ಜೊತೆಗೆ, ತುಂಬಾ ಬೆಲೆಬಾಳುವ ಐದು ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತೆ. ನೀವು ಹೇಳಿದ್ದು ಸತ್ಯವೋ, ಸುಳ್ಳೋ ಎನ್ನುವುದನ್ನು ಪಾಲಿಗ್ರಾಪ್ ಮೆಶಿನ್ ಹೇಳುತ್ತದೆ. ಇಲ್ಲಿ ಕುಟುಂಬದ ಸದಸ್ಯರೂ ಉಪಸ್ಥಿತರಿದ್ದಾರೆ. ಅವರ ಮುಂದೆ ನೀವು ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸತ್ಯ ಹೇಳುವುದಕ್ಕೆ ಸಿದ್ಧರಿದ್ದೀರಾ?” ಕಾಸಿ ಕೇಳಿದ.
ಯಡಿಯೂರಪ್ಪ ನಗುತ್ತಾ ಹೇಳಿದರು “ಸತ್ಯವೇ ನಮ್ಮ ತಂದೆ ತಾಯಿ, ಸತ್ಯವೇ ನಮ್ಮ ಬಂಧು ಬಳಗ ಎಂದು ಸರ್ವಜ್ಞ ಹೇಳಲಿಲ್ಲವೆ ಕಾಸಿಯವರೆ? ಸರ್ವಜ್ಞ ಹಾಗೆ ಹೇಳಿರುವುದೇ ನಮ್ಮ ಹಿರಿಯರ ಕುರಿತಂತೆ. ಸತ್ಯ ಹೇಳುವುದಕ್ಕೆ ನಾನು ಸಿದ್ಧ” ಎಂದರು. ಕಾಸಿಗೆ ಗೊಂದಲವಾಯಿತು. ಸತ್ಯವೇ ನಮ್ಮ ತಂದೆ ತಾಯಿ ಎಂಬ ಹಾಡನ್ನು ಸರ್ವಜ್ಞ ಹೇಳಿರುವುದು ನಿಜವೇ? ಸರ್ವಜ್ಞನ ವಚನಗಳಲ್ಲಿ ಈ ಸಾಲುಗಳನ್ನು ಕೇಳಿದ ನೆನಪಿಲ್ಲವಲ್ಲ?
ಕಾಸಿ ಗೊಂದಲದ ಜೊತೆಗೇ ಪ್ರಶ್ನೋತ್ತರವನ್ನು ಆರಂಭಿಸಿದ.
“ಯಡಿಯೂರಪ್ಪನವರೇ, ಮೊದಲ ಹಂತ ದಲ್ಲಿ ೫ ಪ್ರಶ್ನೆಗಳನ್ನು ಕೇಳುತ್ತೇನೆ. ಈ ಐದು ಪ್ರಶ್ನೆಗಳಿಗೂ ಸತ್ಯವನ್ನೇ ಹೇಳಿದರೆ ಐದು ಚೀಲ ಗೊಬ್ಬರ ನಿಮಗೆ. ಸತ್ಯ ಹೇಳುವುದಕ್ಕೆ ಮೊದಲು ಇಲ್ಲಿ ಬಂದಿರುವ ನಿಮ್ಮ ಕುಟುಂಬ ಸದಸ್ಯರ ಪರಿಚಯ ಮಾಡಿಕೊಳ್ಳೋಣ”
ಅಷ್ಟರಲ್ಲಿ ಅಲ್ಲಿದ್ದ ಕುಟುಂಬ ಸದಸ್ಯರು ಒಬ್ಬೊಬ್ಬರೇ ತಮ್ಮ ಪರಿಚಯ ಮಾಡಿಕೊಳ್ಳತೊ ಡಗಿದರು “ನಾನು ರಾಘವೇಂದ್ರ. ಯಡಿಯೂರಪ್ಪನವರ ಮಗ” “ನಾನು ಶೋಭಾ. ಯಡಿಯೂರಪ್ಪನವರ ಕುಟುಂಬದ ಸದಸ್ಯೆ...” ಎನ್ನುತ್ತಾ ನಾಚಿ ಕೊಂಡರು. “ನಾನು ಅನಂತಕುಮಾರ್. ಯಡಿಯೂರಪ್ಪನವರ ಚಡ್ಡಿ ದೋಸ್ತ್” ಎನ್ನುತ್ತಾ ನಕ್ಕರು. ಮತ್ತೊಂದು ಹುಡುಗಿ ಎದ್ದು ನಿಂತು ಹೇಳಿತು “ನಾನು, ಯಡಿಯೂರಪ್ಪನವರ ಅಣ್ಣನ ಮಗಳು... ಯಡಿಯೂರಪ್ಪ ನನಗೆ ಚಿಕ್ಕಪ್ಪ ಆಗ್ಬೇಕು.”
ಕಾಸಿಗೆ ಅಚ್ಚರಿಯಾಯಿತು. ನನಗೆ ಗೊತ್ತಿಲ್ಲದ ಯಡಿಯೂರಪ್ಪನವರ ಅಣ್ಣ ಯಾರು? ಯಡಿಯೂರಪ್ಪ ನಕ್ಕರು “ಅವರು ಕರುಣಾನಿಧಿಯ ಮಗಳು. ನಾವಿಬ್ಬರು ಅಣ್ಣ ತಮ್ಮ ಆದುದರಿಂದ, ಕರುಣಾನಿಧಿಯ ಮಗಳು ನನಗೆ ಸಂಬಂಧಿಯಾಗುತ್ತಾಳಲ್ಲ...”
ಕಾಸಿ ಪ್ರಶ್ನೆ ಕೇಳಲು ಆರಂಭಿಸಿದ.
“ಮೊದಲ ಪ್ರಶ್ನೆ. ನಿಮ್ಮ ಹೆಸರು ಯಡಿಯೂರಪ್ಪ. ಇದು ನಿಜವೋ, ಸುಳ್ಳೋ...”
ಯಡಿಯೂರಪ್ಪ ತಲೆ ತುರಿಸಿ ಯೋಚಿಸಿ ಉತ್ತರಿಸಿದರು “ಇದು ನಿಜ”
ಪಾಲಿಗ್ರಾಫ್ ತಕ್ಷಣ ಹೇಳಿತು “ಈ ಉತ್ತರ ಸತ್ಯ”
ಯಡಿಯೂರಪ್ಪ ಬೆವರೊರೆಸಿಕೊಂಡರು. ಹೆಮ್ಮೆಯಿಂದ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದರು. ಯಡಿಯೂರಪ್ಪ ಹೇಳಿದ ಮೊತ್ತ ಮೊದಲ ಸತ್ಯವನ್ನು ಕೇಳಿ ಗ್ಯಾಲರಿಯಲ್ಲಿ ಕುಳಿತ ಬಿಜೆಪಿ ಸದಸ್ಯರೆಲ್ಲ ಭಾವುಕರಾಗಿ ಒಂದೇ ಸಮನೆ ಚಪ್ಪಾಳೆ ತಟ್ಟಿದರು.
ಕಾಸಿ ಹೇಳಿದ “ಅಭಿನಂದನೆಗಳು ಯಡಿಯೂರಪ್ಪನವರೆ. ನೀವು ಹೇಳಿದ್ದು ಸತ್ಯ ಎಂದು ಪಾಲಿಗ್ರಾಪ್ ಮೂಲಕ ಸಾಬೀತಾಗಿದೆ. ಐದು ಚೀಲ ಗೊಬ್ಬರಕ್ಕೆ ಇನ್ನು ನಾಲ್ಕೇ ನಾಲ್ಕು ಪ್ರಶ್ನೆಗಳು ಬಾಕಿ ಉಳಿದಿವೆ. ಒಂದು ವೇಳೆ ಈ ಐದೂ ಪ್ರಶ್ನೆಗಳನ್ನು ಗೆದ್ದರೆ ಸಿಕ್ಕುವ ಐದು ಚೀಲ ಗೊಬ್ಬರವನ್ನು ಏನು ಮಾಡುತ್ತೀರಿ ಯಡಿಯೂರಪ್ಪನವರೆ?”
ಯಡಿಯೂರಪ್ಪ ಹೇಳಿದರು “ನನ್ನ ಅಣ್ಣನ ಮಗಳು ಬಂದಿದ್ದಾಳೆ. ತಮಿಳು ನಾಡಿನಲ್ಲಿ ಅಣ್ಣನಿಗೆ ಸ್ವಲ್ಪ ಗೊಬ್ಬರ ಕೊರತೆಯಿದೆಯಂತೆ. ಅವಳ ಕೈಯಲ್ಲಿ ಅಣ್ಣನಿಗೆ ಕೊಟ್ಟು ಕಳುಹಿಸುತ್ತೇನೆ”
ಕಾಸಿ ‘ನಗ್ನ ಸತ್ಯ’ವನ್ನು ಮುಂದುವರಿಸಿದ. ಈಗ ಎರಡನೆ ಪ್ರಶ್ನೆ. “ನೀವು ಕರ್ನಾಟಕದ ಮುಖ್ಯಮಂತ್ರಿ ಹೌದೇ?”
ಭಯಂಕರ ಪ್ರಶ್ನೆಯಾಗಿ ಕಂಡಿತು. ವರಿಷ್ಠರು ಯಾವ ಕ್ಷಣದಲ್ಲೂ ತನ್ನನ್ನು ಕೆಳಗಿಳಿಸುವ ಸಾಧ್ಯತೆಯಿರುವುದರಿಂದ, ಕಳೆದ ಐದು ನಿಮಿಷದಿಂದ ತಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೋ ಇಲ್ಲವೋ ಎನ್ನುವುದು ಅವರಿಗೆ ಸ್ಪಷ್ಟವಿರಲಿಲ್ಲ. ಅನಂತಕುಮಾರ್‌ರ ಮುಖವನ್ನೊಮ್ಮೆ ನೋಡಿದರು. ಅಲ್ಲಿ, ಇನ್ನೂ ಪ್ರೇತಕಳೆಯಿದ್ದುದು ಕಂಡು ನೆಮ್ಮದಿಯಿಂದ ಹೇಳಿದರು “ಹೌದು. ನಿಜ”
ಕಾಸಿಗೆ ಅಚ್ಚರಿಯಾಯಿತು. ಇಷ್ಟು ಕಷ್ಟದ ಪ್ರಶ್ನೆಯನ್ನೂ ಉತ್ತರಿಸಿದರಲ್ಲ. “ನಿಮ್ಮ ಪ್ರಶ್ನೆ ನಿಜವೋ, ಸುಳ್ಳೋ ಎನ್ನುವುದನ್ನು ಪಾಲಿಗ್ರಾಫ್ ಮೂಲಕ ನೋಡೋಣ...”
ಪಾಲಿಗ್ರಾಪ್ ಹೇಳಿತು “ಈ ಉತ್ತರ ಸತ್ಯ”
ಯಡಿಯೂರಪ್ಪ ನಿರಾಳವಾಗಿ ನಿಟ್ಟುಸಿರಿಟ್ಟರು. ಕಾಸಿ ಅಚ್ಚರಿಯಿಂದ ಕೇಳಿದ “ಸಾರ್...ಇಷ್ಟು ಗ್ಯಾರಂಟಿಯಾಗಿ ಹೇಳಲು ನಿಮಗೆ ಹೇಗೆ ಸಾಧ್ಯವಾಯಿತು...”
ಯಡಿಯೂರಪ್ಪ ನಕ್ಕು ಹೇಳಿದರು “ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರೆ, ಅನಂತಕುಮಾರ್ ಇಲ್ಲೇಕೆ ಕುಳಿತಿರುತ್ತಿದ್ದರು. ತಕ್ಷಣ, ಇಲ್ಲಿಂದ ಓಡಿ, ಮುಖ್ಯಮಂತ್ರಿ ಸ್ಥಾನ ಏರುತ್ತಿದ್ದರು” ಗ್ಯಾಲರಿಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.
ಕಾಸಿ ಮುಂದುವರಿಸಿದ “ಈಗ ಮೂರನೆ ಪ್ರಶ್ನೆ. ಸರ್ವಜ್ಞ ಮತ್ತು ತಿರುವಳ್ಳುವರ್ ಲಿಂಗಾಯತರು ಎನ್ನುವ ಕಾರಣಕ್ಕೆ ಅವರ ಪ್ರತಿಮೆಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ನೀವು ಸ್ಥಾಪಿಸಲು ಮುಂದಾದಿರಿ. ನಿಜವೇ?”
ಯಡಿಯೂರಪ್ಪ ಸ್ವಲ್ಪವೂ ಅಂಜದೆ ಹೇಳಿದರು “ನಿಜ”
ಪಾಲಿಗ್ರಾಫ್ ತಕ್ಷಣ ಉತ್ತರಿಸಿತು “ಈ ಉತ್ತರ ಸತ್ಯ”
ಕಾಸಿಗೆ ಅಚ್ಚರಿಯಾಯಿತು. “ಸರ್ವಜ್ಞ, ತಿರುವಳ್ಳುವರ್ ಲಿಂಗಾಯತರು ಎನ್ನುವುದು ನಿಮಗೆ ಹೇಗೆ ಗೊತ್ತು?”
ಯಡಿಯೂರಪ್ಪ ನಿರಾಳವಾಗಿ ಉತ್ತರಿಸಿದರು “ಲಿಂಗಾಯತರಲ್ಲದಿದ್ದರೆ ಏನಾಯಿತು? ಯಾರಾದರೂ ಸಂಶೋಧಕರನ್ನು ನೇಮಿಸಿ, ಅವರು ಲಿಂಗಾಯತರು ಎನ್ನುವುದನ್ನು ಕಂಡು ಹಿಡಿದರೆ ಆಯಿತು”
ಕಾಸಿ ತನ್ನ ಪ್ರಶ್ನೆಯನ್ನು ಮುಂದುವರಿಸಿದ “ಇದು ಕೊನೆಯ ಪ್ರಶ್ನೆ. ಈ ಪ್ರಶ್ನೆಗೆ ನಿಜ ಹೇಳಿದರೆ ಐದು ಚೀಲ ಗೊಬ್ಬರ ನಿಮ್ಮದು. ನಿಮ್ಮ ಎದುರುಗಡೆ ಇರುವ ಶೋಭಾ ಕರಂದ್ಲಾಜೆಯವರನ್ನು ಉಪಮುಖ್ಯಮಂತ್ರಿ ಮಾಡುವ ಇಚ್ಛೆ ನಿಮ್ಮ ಮನದಾಳದಲ್ಲಿದೆ. ಇದು ನಿಜವೋ ಸುಳ್ಳೋ.....”
ಅಷ್ಟರಲ್ಲಿ ಗ್ಯಾಲರಿಯಲ್ಲಿ ದಡಬಡ ಸದ್ದು. ಯಡಿಯೂರಪ್ಪ ಏನು ಉತ್ತರಿಸುತ್ತಾರೆ ಎಂದು ಆತಂಕದಿಂದ ರೆಡ್ಡಿಗಳು ಎದ್ದು ನಿಂತರು. ದಿಲ್ಲಿಯಿಂದ ವರಿಷ್ಠರು ವಿಮಾನ ಹತ್ತಿಯೇ ಬಿಟ್ಟರು. ಯಡಿಯೂರಪ್ಪ ಕಂಗಾಲಾಗಿ ಹೇಳಿದರು “ಗೊಬ್ಬರವನ್ನು ನೀವೇ ಇಟ್ಟುಕೊಳ್ಳಿ. ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಿಲ್ಲ” ಎಂದವರೇ ಬದುಕಿದೆಯಾ ಬಡಜೀವ ಎಂದು ಓಡತೊಡಗಿದರು. ಐದು ಚೀಲ ಗೊಬ್ಬರ ಲಾಭ ಆಯಿತು ಎಂದು ಕಾಸಿಗೆ ತುಂಬಾ ಸಂತೋಷವಾಯಿತು.
***
ಅಷ್ಟರಲ್ಲಿ ‘ನಗ್ನ ಸತ್ಯ’ ರಿಯಾಲಿಟಿ ಶೋದಲ್ಲಿ ಸತ್ಯ ಹೇಳಲು ಇನ್ನೊಬ್ಬ ಹಿರಿಯ ವ್ಯಕ್ತಿ ಬಂದರು. ನೋಡಿದರೆ ಮಾಜಿ ಪ್ರಧಾನಿ ದೇವೇಗೌಡರು. ಬಂದವರೇ ಕುರ್ಚಿಯಲ್ಲಿ ಕುಳಿತು ನಿಟ್ಟುಸಿರಿಟ್ಟು ಕಾಸಿಗೆ ಹೇಳಿದರು “ನಾನು ಸತ್ಯ ಹೇಳುವುದಕ್ಕೆ ಬಂದಿದ್ದೇನೆ....”
ಅಷ್ಟರಲ್ಲೇ ಪಾಲಿಗ್ರಾಫ್ ಮೆಶಿನ್ ದೊಡ್ಡ ದನಿಯಲ್ಲಿ ಅರಚತೊಡಗಿತು “ಸುಳ್ಳು ಸುಳ್ಳು ಸುಳ್ಳು ಸುಳ್ಳು.........”
(ರವಿವಾರ ಆಗಸ್ಟ್ ೧೬, ೨೦೦೯ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟ)
No comments:
Post a Comment