ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸ ಬೇಕು ಎನ್ನುವ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ನವೆಂಬರ್ -27-2011ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ.
‘‘ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸಬೇಕು...ನನ್ನ ದೇಶವಾಗಿರುವ ರಾಲೆಗಾಂವ್‌ನಲ್ಲಿ ನಾನು ಹಾಗೆಯೇ ಮಾಡುವುದು’’ ಅಹಿಂಸಾವಾದಿ, ಗಾಂಧಿವಾದಿ ಅಣ್ಣಾ ಹಝಾರೆಯವರು ಹೀಗೊಂದು ಹೇಳಿಕೆ ನೀಡಿದ್ದೇ, ಅವರ ಸುತ್ತಮುತ್ತ ಹಗಲು ರಾತ್ರಿ ಓಡಾಡುತ್ತಿದ್ದ ಪತ್ರಕರ್ತರೆಲ್ಲ ಓಡ ತೊಡಗಿದರು. ಯಾಕೆಂದರೆ ಅದಾಗಲೇ ಸಂಜೆಯಾಗು ತ್ತಿದ್ದಂತೆಯೇ, ಬಾರ್‌ಗೆ ಹೋಗಿ ಒಂದೊಂದು ಪೆಗ್ ಏರಿಸಿ ಬಂದಿದ್ದರು. ‘ಅರೇ, ಹಗಲು ರಾತ್ರಿ ಅವರು ಉಪವಾಸ ಕೂತಾಗ ನಾವೆಲ್ಲ, ಗುಂಡು ಹಾಕಿ ಅವರ ಸುತ್ತಮುತ್ತ ಓಡಾಡಿ ವರದಿ ಮಾಡಿದ್ದರೆ, ಈಗ ನಮ್ಮ ವಿರುದ್ಧವೇ ಕಾನೂನು ತರಲು ಹೊರಟಿದ್ದಾರಲ್ಲ....ಇದು ಪತ್ರಿಕಾ ಸ್ವಾತಂತ್ರದ ಮೇಲೆ ನಡೆಸುವ ಹಲ್ಲೆ’ ಎಂದು ಪತ್ರಕರ್ತರು ಚೀರಾಡತೊಡಗಿದರು.
ಅಂದು ಸಂಜೆಯೇ ದಿಲ್ಲಿಯ ಕುಖ್ಯಾತ ಬಾರ್‌ನಲ್ಲಿ ಸಭೆ ಸೇರಿದ ಪತ್ರಕರ್ತರು ‘‘ಹೆಂಡ ಮತ್ತು ಶಾಯಿ ಒಂದೇ. ಅದರ ಮೇಲೆ ನಡೆಯುವ ಹಲ್ಲೆ, ಪತ್ರಕರ್ತರ ಸ್ವಾತಂತ್ರದ ಮೇಲೆ ನಡೆಯುವ ಹಲ್ಲೆ. ಆದುದರಿಂದ ಅಣ್ಣಾ ಹಝಾರೆಯವರು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು’’ ಎಂದು ಗುಟ್ಟಾಗಿ ನಿರ್ಣಯವನ್ನು ಮಾಡಿ, ಅದನ್ನು ಆರೆಸ್ಸೆಸ್‌ನ ಸಂಚಾಲಕರಿಗೆ ತಲುಪಿಸಿ ಹಲ್ಲು ಕಿರಿದರು.
ಜನಲೋಕಪಾಲದಲ್ಲಿ ಮಠಗಳನ್ನು ಹೊರಗಿಟ್ಟಂತೆ, ಕುಡುಕರಿಗೆ ಥಳಿಸುವ ವಿಷಯದಲ್ಲಿ ಪತ್ರಕರ್ತರನ್ನು ಹೊರಗಿಟ್ಟರೂ ಸಾಕು ಎಂದು ಆರೆಸ್ಸೆಸ್ ಮುಖಂಡರಲ್ಲಿ ಅಲವತ್ತುಕೊಳ್ಳ ತೊಡಗಿದರು. ತಮ್ಮ ಚೆಡ್ಡಿ ಸರಿಪಡಿಸಿಕೊಂಡ ಆರೆಸ್ಸೆಸ್ ಸಂಚಾಲಕರು ‘ಈ ಬಗ್ಗೆ ಅಣ್ಣಾ ಹಝಾರೆಗೆ ಮನವರಿಕೆ ಮಾಡಲಾಗುವುದು. ಪತ್ರಕರ್ತರಿಗೆ ಕುಡಿಯುವದಕ್ಕಾಗಿ ವಿಶೇಷ ಐಡೆಂಟಿಟಿ ಕಾರ್ಡ್‌ನ್ನು ಅಣ್ಣಾಹಝಾರೆಯವರ ಸಹಿ ಯೊಂದಿಗೆ ನೀಡಲಾಗುವುದು... ಥಳಿಸುವಾಗ ಈ ಕಾರ್ಡ್ ತೋರಿಸಿದರೆ ಅವರು ನಿಮ್ಮನ್ನು ಬಿಟ್ಟು ಬಿಡುತ್ತಾರೆ’’ ಎಂದರು.
ಆರೆಸ್ಸೆಸ್ ಸಂಚಾಲಕರಿಗೆ ಪತ್ರಿಕಾಸ್ವಾತಂತ್ರದ ಕುರಿತಂತೆ ಇರುವ ಗೌರವವನ್ನು ಕಂಡು ಪತ್ರಕರ್ತರೆಲ್ಲ ಹಿರಿ ಹಿರಿ ಹಿಗ್ಗಿ, ಮತ್ತೆ ಬಾರ್‌ನಲ್ಲಿ ಸಭೆ ಸೇರಿ, ಪತ್ರಿಕಾ ಸ್ವಾತಂತ್ರವನ್ನು ಗುಂಡು, ತುಂಡಿನ ಜೊತೆಗೆ ಆಚರಿಸತೊಡಗಿದರು.
***
ಇತ್ತ ದೇಶಾದ್ಯಂತ ಕುಡುಕರು ರಾಮ್‌ಲೀಲಾ ಮೈದಾನದಲ್ಲಿ ಒಂದಾದರು. ಕಿಂಗ್‌ಫಿಶರ್ ಅಮಲು ಇಳಿದ ಮಲ್ಯ, ಗಾಂಧಿವಾದದ ಟೋಪಿಯನ್ನು ತಲೆಗೇರಿಸಿಕೊಂಡು ಪ್ರವೇಶಿಸಿದರು. ಅವರೆಲ್ಲ ಅಣ್ಣಾ ಹಝಾರೆಯವರ ಗೂಂಡಾಗಿರಿಯ ವಿರುದ್ಧ ಅಹಿಂಸಾ ಸತ್ಯಾಗ್ರಹಕ್ಕೆ ಇಳಿದಿದ್ದರು. ಕರ್ನಾಟಕದಿಂದ ಮಲ್ಯ ಬಂದಿರುವುದರಿಂದ ಅವರನ್ನು ಪತ್ರಕರ್ತ ಎಂಜಲು ಕಾಸಿಯೂ ಹಿಂಬಾಲಿಸಿದ್ದ.
ನೋಡಿದರೆ ವಿವಿಧ ರಾಜ್ಯಗಳ ಅಬಕಾರಿ ಸಚಿವರುಗಳು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ರೇಣುಕಾಚಾರ್ಯರು ಹಲ್ಲುಗಿರಿದು ‘‘ಕಾಸಿಯವ್ರೇ...ಒಂದು ಫೋಟೋ ತೆಗೆದು ಕರ್ನಾಟಕದ ಎಲ್ಲ ಪತ್ರಿಕೆಗಳಿಗೆ ಕಲ್ಸಿ ಬಿಡಿ...’’ ಎಂದರು.
ಅಷ್ಟರಲ್ಲಿ ಮಲ್ಯರವರ ನೇತೃತ್ವದಲ್ಲಿ ರಘುಪತಿ ರಾಘವ ರಾಜ ರಮ್ ಎಂದು ಹಾಡು ಆರಂಭವಾಯಿತು. ಬಳಿಕ ಮಲ್ಯ ಅವರು ಎದ್ದು ನಿಂತರು. ಅವರ ಹಿಂದು ಮುಂದು, ಎಡ, ಬಲಗಳಲ್ಲಿ ಅಬಲೆಯರು, ಕಿರುಪ್ರಾಯದ ಮಾತೆಯರು ನಿಂತಿದ್ದರು. ಗಾಂಧೀಜಿಯಂತೆಯೇ ಅವರ ಹೆಗಲನ್ನು ಆಧರಿಸಿ ನಿಂತ ಮಲ್ಯ ಮಾತನಾಡತೊಡಗಿದರು.
‘‘ಕುಡುಕರೆಲ್ಲರೂ ಮೂಲಭೂತವಾಗಿ ಗಾಂಧಿವಾದಿಗಳು. ಯಾಕೆಂದರೆ ಗಾಂಧೀಜಿಯವರು ತಾವು ಸಾಯುವಾಗ ಕೊನೆಯದಾಗಿ ‘ಹೇ ರಮ್’ ಎಂದರು. ಅದರರ್ಥ ಅವರು ಸಾಯುವಾಗ ನೀರು ಕೇಳಲಿಲ್ಲ, ಬದಲಿಗೆ ರಮ್ ಕೇಳಿದರು...ಆದರೆ ಕುಟಿಲ ರಾಜಕಾರಣಿಗಳು ರಮ್ ಶಬ್ದವನ್ನು ರಾಮ್ ಎಂದು ಅಪಭ್ರಂಶಗೊಳಿಸಿ ಕೋಟ್ಯಂತರ ಗಾಂಧಿವಾದಿ ಕುಡುಕರಿಗೆ ಅನ್ಯಾಯ ಮಾಡಿದ್ದಾರೆ....
ಇಷ್ಟೇ ಅಲ್ಲ, ಪ್ರತಿದಿನ ಸಂಜೆ ಅವರು ರಮ್‌ನ ಆರಾಧಕರಾಗಿದ್ದರು. ರಘುಪತಿ ರಾಘವ ರಾಜಾ ರಮ್ ಎಂದು ಹಾಡುತ್ತಿದ್ದರು. ಆದುದರಿಂದ ನಿಜವಾದ ಗಾಂಧಿವಾದಿಗಳು ನಾವು. ಅಣ್ಣಾ ಹಜಾರೆ ಕಪಟ ಗಾಂಧೀವಾದಿಗಳು...’’
ಎಲ್ಲ ಕುಡುಕರೂ ಜೋರಾಗಿ ಚಪ್ಪಾಳೆ ತಟ್ಟಿದರು. ರಾಮ್‌ಲೀಲಾ ಮೈದಾನದಲ್ಲಿ ‘‘ಹೇ ರಮ್’’ ಘೋಷ ಮುಗಿಲು ಮುಟ್ಟಿತು.
‘‘ನಾವಿಂದು ಸತ್ಯಾಗ್ರಹಕ್ಕೆ ಕುಳಿತಿರುವ ಈ ಮೈದಾನದ ಹೆಸರು ಕೂಡ ರಮ್‌ಲೀಲಾ ಎಂದಾಗಿದೆ. ರಮ್‌ಲೀಲೆಯ ಕುರಿತಂತೆ ನಮಗೆ ತಿಳಿದಿರುವಷ್ಟು ಇನ್ಯಾರಿಗೂ ತಿಳಿದಿಲ್ಲ...ಈ ದೇಶವನ್ನು ರಮ್‌ರಾಜ್ಯವನ್ನಾಗಿ ಮಾಡಲು ಗಾಂಧೀಜಿ ಕನಸು ಕಂಡಿದ್ದರು.
ಆದರೆ ಇಂದು ಅಣ್ಣಾ ಹಝಾರೆಯವರು ಕುಡುಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಬೇಕು ಎಂದು ಹೇಳುವ ಮೂಲಕ ಗಾಂಧೀಜಿಯ ರಮ್‌ರಾಜ್ಯಕ್ಕೆ ಕಲ್ಲು ಹಾಕಿದ್ದಾರೆ....ಆದುದರಿಂದ ಗಾಂಧೀ ವಿರೋಧಿ, ಉಗ್ರವಾದಿ ಅಣ್ಣಾ ಹಝಾರೆಯನ್ನು ಬಂಧಿಸಬೇಕು. ಕುಡುಕರಿಗೆ ರಕ್ಷಣೆ ನೀಡಬೇಕು. ಕುಡಿಯಲು ಸಬ್ಸಿಡಿಯಲ್ಲಿ ಸಾಲ ನೀಡಬೇಕು....ಅದಕ್ಕಾಗಿ ಇಂದಿನಿಂದ ನಾವು ಕೇವಲ ಮದ್ಯ ಕುಡಿದು, ಆಮರಣಾಂತ ಉಪವಾಸ ಮಾಡಬೇಕೆಂದು ತೀರ್ಮಾನಿಸಿದ್ದೇವೆ...ನಾಡಿನ ಎಲ್ಲ ಸಿನೆಮಾ ನಟರು ಇದಕ್ಕೆ ಬೆಂಬಲ ನೀಡಿದ್ದಾರೆ...’’
ಮತ್ತೆ ರಮ್‌ಲೀಲಾದಲ್ಲಿ ‘ಹೇ ರಮ್’ ಘೋಷಣೆ ಮುಗಿಲು ಮುಟ್ಟಿತು. ಎಂಜಲು ಕಾಸಿ ಆ ಘೋಷಣೆಗೆ ರೋಮಾಂಚನ ಗೊಂಡು ತೂರಾಡತೊಡಗಿದ. ಕಿಂಗ್ ಫಿಶರ್ ವಿಮಾನ ಹಾರಾಡದಿದ್ದರೂ, ತಮ್ಮ ಭಾಷಣದಲ್ಲಿ ಚೆನ್ನಾಗಿಯೇ ವಿಮಾನ ಹಾರಿಸುತ್ತಿದ್ದಾರೆ ಎಂದು ಖುಷಿ ಪಟ್ಟ.
ಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಜಿನ್ ಲೋಕಪಾನ ಸಮಿತಿಯೊಂದನ್ನು ರಚಿಸಲಾಯಿತು. ಮಲ್ಯ, ಸಲ್ಮಾನ್ ಖಾನ್, ರೇಣುಕಾಚಾರ್ಯ ಮೊದಲಾದ ಗುಂಡು ಪ್ರವೀಣರನ್ನೆಲ್ಲ ಸದಸ್ಯರನ್ನಾಗಿ ಸೇರಿಸಲಾಯಿತು. ತಕ್ಷಣ ಜನಲೋಕಪಾನ ಮಸೂದೆಯೊಂದನ್ನು ಜಾರಿಗೊಳಿಸಲು ಒತ್ತಾಯಪಡಿಸಲಾಯಿತು.
ಜನಲೋಕಪಾನ ಮಸೂದೆಯ ಮುಖ್ಯಾಂಶ ಕೆಳಗಿನಂತಿವೆ.
1. ಗಾಂಧಿ ವಿರೋಧಿ ಅಣ್ಣಾ ಹಜಾರೆ ಮತ್ತು ಅವರ ಬಳಗವನ್ನು ಬಂಧಿಸಬೇಕು.
2. ಅಣ್ಣಾ ಹಜಾರೆಯವರ ಆಡಳಿತದಲ್ಲಿ ನಡೆಯುತ್ತಿರುವ ರಾಳೇಗಾಂವ್ ಸಿದ್ದಿಯನ್ನು ಅವರ ನಿರಂಕುಶ ಆಡಳಿತದಿಂದ ಬಿಡುಗಡೆಗೊಳಿಸಿ, ಅಲ್ಲಿನ ಕುಡುಕರನ್ನು ರಕ್ಷಿಸಬೇಕು. ರಾಳೇಗಾಂವ್ ಭಾರತಕ್ಕೆ ಸೇರಿದ್ದು ಎಂದು ಘೋಷಿಸಿ, ಅಲ್ಲಿ ಪ್ರತಿ ವರ್ಷ ಗುಂಡು ಪಾರ್ಟಿಯ ಜೊತೆಗೆ ಸ್ವಾತಂತ್ರ ಆಚರಣೆ ಮಾಡಲು ಅವಕಾಶ ನೀಡಬೇಕು. ಗಾಂಧಿಯ ರಮ್ ರಾಜ್ಯ ಅಲ್ಲಿ ಸ್ಥಾಪನೆಯಾಗಬೇಕು.
3. ತಕ್ಷಣ ರಾಮ್ ಲೀಲಾ ಮೈದಾನವನ್ನು ರಮ್ ಲೀಲಾ ಮೈದಾನ ಎಂದು ಘೋಷಿಸಬೇಕು.
4. ಗಾಂಧಿ ಹೇಳಿದ್ದು ‘ಹೇ ರಮ್’ ಎಂದು ಇತಿಹಾಸವನ್ನು ತಿದ್ದುಪಡಿ ಮಾಡಬೇಕು.
5. ಕುಡುಕರಿಗೆ ಕುಡಿಯುವುದಕ್ಕೆ ಸಬ್ಸಿಡಿಯಲ್ಲಿ ಸಾಲ ನೀಡಬೇಕು. ವರ್ಷಕ್ಕೊಮ್ಮೆ ಕಿಂಗ್ ಫಿಶರ್ ವಿಮಾನದಲ್ಲಿ ಪುಕ್ಕಟೆ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿ, ಮಲ್ಯರವರ ಕುಡುಕೋದ್ಯಮವನ್ನು ಮೇಲೆತ್ತಬೇಕು.
6. ಕುಡುಕರಿಗೆ ಎಲ್ಲ ರೀತಿಯಲ್ಲೂ ರಕ್ಷಣೆ ನೀಡಬೇಕು. ಪೊಲೀಸ್ ದೌರ್ಜನ್ಯದಿಂದ ಅವರನ್ನು ಕಾಪಾಡಬೇಕು. 7. ಕುಡುಕರ ಮೇಲೆ ಈವರೆಗೆ ನಡೆದ ದೌರ್ಜನ್ಯವನ್ನು ತನಿಖೆ ನಡೆಸಿ, ಒಂದು ವರದಿಯನ್ನು ತಯಾರಿಸಬೇಕು. ಅನ್ಯಾಯಕ್ಕೊಳಗಾದ ಕುಡುಕರಿಗೆ ಪರಿಹಾರವನ್ನು ನೀಡಬೇಕು.
8. ರೇಷನ್ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಅಕ್ಕಿ, ಬೇಳೆಯ ಜೊತೆಗೆ ವಿಸ್ಕಿ, ರಮ್ ಇತ್ಯಾದಿಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ವಿಶೇಷ ಕಾರ್ಡೊಂದನ್ನು ವ್ಯವಸ್ಥೆ ಮಾಡಬೇಕು.
9. ಕುಡುಕರ ಮೇಲೆ ದಾಳಿ ನಡೆಸಿದವರನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಆರೋಪಿಗಳಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು.
10. ಕುಡುಕರಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯ ಮೀಸಲಾತಿ ನೀಡಬೇಕು.
ರಾಮ್‌ಲೀಲಾ ಮೈದಾನದಲ್ಲಿ ಕುಡುಕರೆಲ್ಲ ಆಮರಣಾಂತ ಉಪವಾಸ ಕೂತದ್ದು ಗೊತ್ತಾದದ್ದೇ....ಪ್ರಧಾನಮಂತ್ರಿಗಳು ಓಡೋಡಿ ಬಂದರು. ತಕ್ಷಣ ಸಭೆ ಸೇರಿ ಜನ ಲೋಕಪಾನ ಮಸೂದೆಯನ್ನು ಜಾರಿಗೆ ತರಲು ಒಪ್ಪಲಾಯಿತು.
ಮಲ್ಯ ಸೇರಿದಂತೆ ಎಲ್ಲ ಗಾಂಧಿವಾದಿಗಳಿಗೆ ಪ್ರಧಾನಿಯವರೇ ಕೈಯಾರೆ ಬಿಯರ್ ಕುಡಿಸಿ, ಉಪವಾಸವನ್ನು ತೊರೆಯುವಂತೆ ಮಾಡಿದರು.
ನವೆಂಬರ್ -27-2011
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ವ್ಯಾಪಕ ಹಸ್ತಕ್ಷೇಪ ನಡೆದ ಸಂದರ್ಭದಲ್ಲಿ ಬರೆದ ಬುಡಬುಡಿಕೆ. ವಾರ್ತಾಭಾರತಿ ದೈನಿಕದ ಅಕ್ಟೋಬರ್ -31-2010 ರ ಸಂಚಿಕೆಯಲ್ಲಿ ಪ್ರಕಟವಾಗಿದೆ .
ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಯಿತು. ಎಂಜಲು ಕಾಸಿ ಹಿರಿ ಹಿರಿ ಹಿಗ್ಗಿದ. ಯಾಕೆಂದರೆ ಈ ಬಾರಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಎಂಜಲು ಕಾಸಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪತ್ರಕರ್ತನಾಗಿ ಎಂಜಲು ಕಾಸಿ ರಾಜಕಾರಣಿಗಳಿಗೆ ಸಲ್ಲಿಸಿದ ಸೇವೆ ಮತ್ತು ಜನರನ್ನು ರಂಜಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಉಳಿದಂತೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು:
ಎಚ್. ಡಿ. ಕುಮಾರಸ್ವಾಮಿ: ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬಿತ್ತಿ, ಇಂದು ಅದರ ಫಲವನ್ನು ರಾಜ್ಯದ ಜನರು ಉಣ್ಣುವಂತೆ ಮಾಡಿದ ಅಗ್ರಮಾನ್ಯ ಕಷಿಕ ಮಣ್ಣಿನ ಮೊಮ್ಮಗ ಕುಮಾರಸ್ವಾಮಿಯವರಿಗೆ ಈ ಬಾರಿ ಕೃಷಿ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಎಸ್. ಎಲ್. ಭೈರಪ್ಪ: ಸಾಹಿತ್ಯ ಕೃಷಿಯಲ್ಲಿ ದ್ವೇಷದ ಬೆಳೆಯನ್ನು ಬೆಳೆದು ಅದನ್ನು ಇಂದು ರಾಜ್ಯಾದ್ಯಂತ ಜನರಿಗೆ ಹಂಚಿರುವ ಸಾಧನೆಗಾಗಿ ಕಷಿ ಕ್ಷೇತ್ರದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಬಂಗಾರಪ್ಪ: ರಾಜಕೀಯ ಕೃಷಿ ಕ್ಷೇತ್ರದಲ್ಲಿ ವಿವಿಧ ಪಕ್ಷಗಳನ್ನು ಪ್ರಾಯೋಗಿಕವಾಗಿ ಬೆಳೆದು, ಅದರ ಫಲವನ್ನು ತಾನೊಬ್ಬನೇ ಉಂಡು, ಇಂದು ನಿವತ್ತರಾಗಿರುವ ಮಾಜಿ ರೈತ ಬಂಗಾರಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಬಿಬಿಎಂಪಿಯ ಅಧಿಕಾರಿಗಳಿಗೆ: ರಾಜ್ಯಾದಾದ್ಯಂತ ಕೊಳೆಗೇರಿ ಗಟಾರಗಳಲ್ಲಿ, ಕುಡಿಯುವ ನೀರುಗಳಲ್ಲಿ ವಿವಿಧ ರೀತಿಯಲ್ಲಿ ಸೊಳ್ಳೆಗಳನ್ನು, ಕ್ರಿಮಿಗಳನ್ನು ಸಾಕಿ ಪೋಷಿಸಿ, ಅದನ್ನು ಮನೆ ಮನೆಗೆ ಹಂಚಿದ್ದಕ್ಕಾಗಿ.
ರಾಜ್ಯದ ಎಲ್ಲಾ ಬ್ಯಾಂಕ್ ಮತ್ತು ಫೈನಾನ್ಸ್‌ಗಳಿಗೆ: ರೈತರ ಆತ್ಮಹತ್ಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಕ್ಕಾಗಿ.
ರೇಣುಕಾಚಾರ್ಯ: ಭಿನ್ನಮತಗಳನ್ನು ಬಿತ್ತಿ, ಅದನ್ನು ರಾಜ್ಯದ ಎಲ್ಲಾ ಪಕ್ಷಗಳಿಗೆ ಹಂಚಿದ ಸಾಧನೆಗಾಗಿ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶಸ್ತಿ:
ಜನಾರ್ದನ ರೆಡ್ಡಿ: ಹತ್ತು ಹಲವು ಆಪರೇಷನ್‌ಗಳನ್ನು ಮಾಡಿ ಬಿಜೆಪಿಯೆಂಬ ರೋಗಿಯನ್ನು ಉಳಿಸಿದ ಸಾಧನೆಗಾಗಿ.
ಸಮಾಜ ಸೇವೆ:
ಆರ್. ವಿ. ದೇಶಪಾಂಡೆ: ರಾಜ್ಯಕ್ಕೆ ಹೆಣಭಾರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ ಸಾಧನೆಗಾಗಿ.
ಮಾಜಿ ಸಚಿವ ಸುಧಾಕರ್: ಭಿಕ್ಷುಕರ ಪುನರ್ವಸತಿ ಶಿಬಿರದಲ್ಲಿ ಮಾರಕ ರೋಗ ಹಬ್ಬಿಸಿ ಅಲ್ಲಿನ ಭಿಕ್ಷುಕರನ್ನು ಸಾಮೂಹಿಕವಾಗಿ ಸಾಯಿಸಿ, ರಾಜ್ಯದಲ್ಲಿ ಭಿಕ್ಷುಕರ ಕಾಟವನ್ನು ಕಮ್ಮಿ ಮಾಡಿದ್ದಕ್ಕಾಗಿ.
ಸಂಶೋಧಕ ಚಿದಾನಂದಮೂರ್ತಿ: ಹೊಸದಾಗಿ ಯಾವುದೇ ಸಂಶೋಧನೆ ಮಾಡದೇ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದಕ್ಕಾಗಿ.
ಎಲ್ಲ ದಲಿತ ಸಂಘಟನೆಗಳಿಗೆ: ದಲಿತರ ಒಗ್ಗಟ್ಟನ್ನು ಮುರಿದು, ಅವರನ್ನು ಮತ್ತೆ ಮನುವಿನ ಬಾಯಿಗೆ ತಳ್ಳಿದ್ದಕ್ಕಾಗಿ. ಈ ಮೂಲಕ ದಲಿತರ ನಿವಾರಣೆಗೆ ಕೊಡುಗೆ ನೀಡಿದ್ದಕ್ಕಾಗಿ.
ಸಾಂಸ್ಕೃತಿಕ ಕ್ಷೇತ್ರ:
ಸಿ. ಎಂ. ಇಬ್ರಾಹೀಂ: ರಾಜಕೀಯದಲ್ಲಿ ಜೋಕರ್ ಪಾತ್ರವನ್ನು ನಿರ್ವಹಿಸಿ ಹಾಸ್ಯದ ಹೊನಲನ್ನು ಹರಿಸಿ, ಜನರನ್ನು ರಂಜಿಸಿದ್ದಕ್ಕಾಗಿ.
ಸಿದ್ದರಾಮಯ್ಯ ಮತ್ತು ಮೋಟಮ್ಮ: ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಅಮೋಘವಾಗಿ ನರ್ತಿಸಿದ್ದಕ್ಕಾಗಿ.
ಪ್ರಮೋದ್ ಮುತಾಲಿಕ್: ದರೋಡೆ, ಹಲ್ಲೆ, ಕೊಲೆ ಇತ್ಯಾದಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು, ಅದಕ್ಕಾಗಿ ಹಗಲು ರಾತ್ರಿ ದುಡಿದದ್ದಕ್ಕಾಗಿ. ಹಾಗೂ ಮುಖಕ್ಕೆ ಮಸಿ ಬಳಿಸಿಕೊಂಡದ್ದಕ್ಕಾಗಿ.
ನೀರಾವರಿ ಕ್ಷೇತ್ರ:
ಮುಖ್ಯಮಂತ್ರಿ ಯಡಿಯೂರಪ್ಪ: ಸದಾ ಅಳುತ್ತಾ ರಾಜ್ಯದ ಹಳ್ಳ ಕೊಳ್ಳಗಳನ್ನು ತುಂಬಿಸಿದ್ದಕ್ಕಾಗಿ.
ಎಲ್ಲ ಟಿ. ವಿ. ಧಾರಾವಾಹಿಗಳಿಗೆ: ಸ್ತ್ರೀ ಪ್ರಧಾನ ಧಾರಾವಾಹಿಗಳನ್ನು ಮಾಡಿ, ಎಲ್ಲ ಮಹಿಳೆಯರ ಕಣ್ಣಲ್ಲಿ ಸದಾ ನೀರು ತುಂಬಿ ತುಳುಕುವಂತೆ ಮಾಡಿದುದಕ್ಕಾಗಿ. ರಾಜ್ಯದ ನೀರಿನ ಬರವನ್ನು ಕಡಿಮೆ ಮಾಡಿದುದಕ್ಕಾಗಿ.
ಸಾಹಿತ್ಯಕ್ಷೇತ್ರ:
ವೀರಪ್ಪ ಮೊಯ್ಲಿ: ಇತ್ತೀಚೆಗೆ ಯಾವುದೇ ಕಾದಂಬರಿಗಳನ್ನು ಬರೆಯದೇ ದಿಲ್ಲಿ ರಾಜಕೀಯದಲ್ಲಿ ಮಗ್ನರಾಗಿರುವುದಕ್ಕಾಗಿ.
ವಿಜ್ಞಾನ ಕ್ಷೇತ್ರ:
ಜೋತಿಷ್ಯ, ಪುನರ್ಜನ್ಮ, ಭೂತ, ಪಿಶಾಚಿ ಮೊದಲಾದ ವೈಜ್ಞಾನಿಕ ಸಂಗತಿಗಳನ್ನು ಪಸರಿಸುತ್ತಿರುವುದಕ್ಕಾಗಿ ಎಲ್ಲ ಕನ್ನಡ ಚಾನೆಲ್‌ಗಳಿಗೆ.
ಮಾಟ ಮಂತ್ರಗಳನ್ನು ಮಾಡಿ ಈ ರಾಜ್ಯದ ಕ್ಷೇಮವನ್ನು ಕಾಪಾಡಿದ ಎಲ್ಲ ಮಂತ್ರವಾದಿಗಳಿಗೆ.
ರಾಜಕೀಯ ಕ್ಷೇತ್ರ:
ಕಟ್ಟಾ ಸುಬ್ರಹ್ಮಣ್ಯ ನಾಯ್ಡು: ಹಲವು ಭ್ರಷ್ಟಾಚಾರಗಳನ್ನು ಮಾಡಿಯೂ ಇನ್ನೂ ಸಚಿವ ಸಂಪುಟದಲ್ಲಿ ಉಳಿದು ರಾಜಕಾರಣಿಗಳಿಗೆ ಮಾದರಿಯಾದುದಕ್ಕೆ.
ಬಾಬಾಬುಡಾನ್‌ಗಿರಿಯ ಸೂಫಿ ಹಾಗೂ ದತ್ತ್ತಾತ್ರೇಯರಿಗೆ: ರಾಜಕೀಯದಲ್ಲಿ ಕೆಲವು ರಾಜಕಾರಣಿಗಳಿಗೆ ರಾಜಕೀಯ ಭವಿಷ್ಯವನ್ನು ರೂಪಿಸಿದ್ದಕ್ಕಾಗಿ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮದ ನೇತತ್ವವನ್ನು ವಹಿಸಿ ಇನ್ನಷ್ಟು ರಾಜಕಾರಣಿಗಳ ಹುಟ್ಟಿಗೆ ಕಾರಣವಾಗಲಿರುವುದಕ್ಕಾಗಿ.
ಉದ್ಯಮ ಕ್ಷೇತ್ರ:
ಎಲ್ಲ ಶಾಸಕರಿಗೆ: ರಾಜಕೀಯ ಕ್ಷೇತ್ರದಲ್ಲಿ ಹಲವು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಮಾಡಿ, ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದುದಕ್ಕೆ.
ಸಿನಿಮಾ ಕ್ಷೇತ್ರ:
ನಿರ್ದೇಶಕ ಸಾಯಿ ಪ್ರಕಾಶ್: ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕಾಗಿ.
ದೇವೇಗೌಡ: ಅತ್ಯುತ್ತಮವಾಗಿ ವಿವಿಧ ರಾಜಕೀಯ ಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ. ಹಿರಿಯ ಪೋಷಕ ನಟ ಎಂಬ ಕಾರಣಕ್ಕಾಗಿ.
ಪ್ರೇಕ್ಷಕ ವರ್ಗಕ್ಕೆ: ಕಳಪೆ ಕನ್ನಡ ಚಿತ್ರಗಳನ್ನು ನೋಡದೇ ಇದ್ದುದಕ್ಕೆ ಹಾಗೂ ಪೋಷಿಸದೇ ಇದ್ದುದಕ್ಕೆ.
ರಾಘವೇಂದ್ರ ರಾಜಕುಮಾರ್: ಚಿತ್ರಗಳಲ್ಲಿ ನಟಿಸದೇ ಇದ್ದುದಕ್ಕೆ.
ಯಕ್ಷಗಾನ ಕ್ಷೇತ್ರ:
ಕುಂಬಳೆ ಸುಂದರರಾವ್: ಸುರತ್ಕಲ್ ಗಲಭೆಯಲ್ಲಿ ರಾಕ್ಷಸ ವೇಷವನ್ನು ಧರಿಸಿ, ತಮ್ಮ ಅಪಾರ ಕಲಾ ಪ್ರೌಢಿಮೆಯನ್ನು ಮೆರೆದುದಕ್ಕೆ. ಉಳಿದ ಮರಿ ರಾಕ್ಷಸ ವೇಷಧಾರಿಗಳಿಗೆ ಮಾರ್ಗದರ್ಶಿಯಾದುದಕ್ಕೆ.
ಅಕ್ಟೋಬರ್ -31-2010
ಯುಪಿಎ ಸರಕಾರ ದೇಶವನ್ನು ಆಳುತ್ತಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಬರೆದ ಬುಡಬುಡಿಕೆ. ಜುಲೈ -11-2010 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗದ್ದೆಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರು. ಪತ್ನಿ ಮನಮೋಹಿನಿ ತಂಬಿಗೆ ತುಂಬಾ ಕೋಕಾಕೋಲಾ ಪಾನೀಯ ಮತ್ತು ನೆಂಜಿಕೊಳ್ಳುವುದಕ್ಕೆ ಪಾಪ್‌ಕಾರ್ನ್ ತಂದು ಕೊಟ್ಟರು.
ಮನಮೋಹಿನಿ ವಯ್ಯರದಿಂದ ಕೇಳಿದಳು ‘‘ಈ ಸರ್ತಿ ಯಾವ ಬೆಳೆ ಹಾಕಿದ್ದೀರಿ....’’
‘‘ರಾಗಿ, ಗೋದಿ, ಟೋಮೆಟೋ, ಆಲುಗಡ್ಡೇ ಬೆಳೆದು ಸಾಕಾಯ್ತು. ಅದಕ್ಕೆ ಕೆಳಗಿನ ಗದ್ದೆಯಲ್ಲಿ ಬ್ಯಾಟ್‌ಗಳನ್ನು ನೆಟ್ಟಿದ್ದೇನೆ. ಮೇಲಿನ ಗದ್ದೆಯ ತುಂಬಾ ರನ್‌ಗಳ ಬೀಜವನ್ನು ಬಿತ್ತಿದ್ದೇನೆ...ಈ ಬಾರಿ ಒಳ್ಳೆಯ ಬೆಳೆ ಬರಬಹುದು ಎನ್ನುವುದು. ನಿರೀಕ್ಷೆ...’’ ಶರದ್ ಪವಾರ್ ಟವೆಲ್‌ನಿಂದ ಮುಖ ಒರೆಸಿ ಕೊಳ್ಳುತ್ತಾ ನುಡಿದರು.
ಮನಮೋಹಿನಿ ಕೇಳಿದಳು ‘‘ಬೆಳೆ ಬೆಳೆಸುವುದಕ್ಕೆ ಗೊಬ್ಬರಕ್ಕೇನು ಮಾಡ್ತೀರಿ...’’
ಪವಾರ್ ನುಡಿದರು.‘‘ಈಗಾಗಲೇ ಪೆಪ್ಸಿ, ಕೋಲಾ ಕಂಪೆನಿಗಳೊಂದಿಗೆ ಮಾತನಾಡಿದ್ದೇನೆ. ಒಂದೇ ತಿಂಗಳಲ್ಲಿ ಒಳ್ಳೆಯ ಬ್ಯಾಟ್‌ಗಳ ಫಸಲುಗಳನ್ನು ನೀಡುವ ಹಾಗೆ ಉತ್ತಮ ಗೊಬ್ಬರಗಳನ್ನು ಅವರು ಒದಗಿಸುತ್ತಾರಂತೆ....’’
‘‘ಹೊಲ ಉಳುವುದಕ್ಕೆ ಎತ್ತುಗಳು ಬೇಕಲ್ಲ...ಏನು ಮಾಡುತ್ತೀರಿ...’’ ಮನಮೋಹಿನಿ ಕೇಳಿದಳು.
ಶರದ್ ಪವಾರ್ ಯಾವುದೇ ಆತಂಕವಿಲ್ಲದೆ ನುಡಿದರು ‘‘ಅದಕ್ಕೇನಾಗಬೇಕು. ಎತ್ತುಗಳ ಬದಲಿಗೆ ದೇಶದ ರೈತರನ್ನೇ ಹೂಡಿ ಗದ್ದೆ ಉತ್ತರೆ ಆಯಿತು. ಬೇಕಾದಷ್ಟು ರೈತರು ಇನ್ನೂ ಆತ್ಮಹತ್ಯೆ ಮಾಡದೇ ಉಳಿದಿದ್ದಾರೆ. ಅವರನ್ನು ನೊಗಕ್ಕೆ ಕಟ್ಟಿ ಚಾಟಿಯಿಂದ ಎರಡು ಬಾರಿಸಿದರೆ, ಸಂಜೆಯೊಳಗೆ ಇಡೀ ಗದ್ದೆಯನ್ನು ಅಚ್ಚುಕಟ್ಟಾಗಿ ಉತ್ತು ಕೊಡುತ್ತಾರೆ...’’ ತನ್ನ ಗಂಡನ ಜಾಣತನಕ್ಕೆ ಮನಮೋಹನಿಗೆ ಸಂತೋಷ ಉಕ್ಕಿ ಬಂದು ಜಾನಪದ ಗೀತೆಯನ್ನು ಹಾಡುತ್ತಾ... ರಾಗಿ ಬೀಸುವ ಕಲ್ಲಿಗೆ ಒಂದಿಷ್ಟು ರನ್ನುಗಳನ್ನು ಹಾಕಿ ಬೀಸತೊಡಗಿದಳು...
‘‘ಮುಂಜಾನೆ ಎದ್ದು ಯಾರ್ಯಾರ ನೆನೆಯಲಿ
ತೆಂಡೂಲ್ಕರ ನಿನ್ನ ನೆನೆದೇನಾ! ತೆಂಡೂಲ್ಕರಾ ನಿನ್ನ
ನೆನೆದಾನ ನನ್ನೆಜಮಾನ ಐಸಿಸಿ ಅಧ್ಯಕ್ಷ ಆದಾನ...’’
ಎನ್ನುತ್ತಾ ಒರಳು ಕಲ್ಲಿಗೆ ಒಂದಿಷ್ಟು ಸಿಕ್ಸರ್‌ಗಳನ್ನು, ಫೋರ್‌ಗಳನ್ನು ಹಾಕಿ ಒನಕೆಯಿಂದ ಕುಟ್ಟುತ್ತಾ ಹಾಡತೊಡಗಿದಳು...
‘‘ಇವನೇ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು...
ಈಗ ಮಾತ್ರ ಆಲದ ಮರದಲ್ಲಿ ನೇಣು ಹಾಕಿ ಮಡಿವನು...’’ ಹೀಗೆ ಜಾನಪದ ಗೀತೆಯನ್ನು ಹಾಡುತ್ತಾ ಅಡುಗೆಗೆ ತಯಾರು ಮಾಡಿದಳು.
ಹಿತ್ತಲಿಗೆ ಹೋಗಿ ಬೆಳೆಸಿದ್ದ ಬಗೆ ಬಗೆಯ ತರಕಾರಿಗಳನ್ನು ನೋಡಿದಳು. ಹಸನಾಗಿ ಬೆಳೆದ ಒಂದೆರಡು ಬೌಂಡರಿಗಳನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದು ಅಡುಗೆಗೆ ಸಾಂಬಾರು ಮಾಡಳು ಹೊರಟಳು. ಗಂಡ ಗದ್ದೆಯಲ್ಲಿ ದುಡಿದು ಬಂದಿದ್ದಾನೆ. ಆತನಿಗೆ ಬಿಸಿ ಬಿಸಿ ಅನ್ನ, ಸಾಂಬಾರು ನೀಡಬೇಕಲ್ಲ. ಅದಕ್ಕಾಗಿ ಬೌಂಡರಿಯನ್ನು ಚೆನ್ನಾಗಿ ಹಚ್ಚಿ ಅದನ್ನು ಮಡಕೆಗೆ ಹಾಕಿದಳು. ಪಲ್ಯಕ್ಕೆ ಏನು ಮಾಡುವುದು? ಎಂದು ಯೋಚಿಸಿದಳು. ಆಗಷ್ಟೇ ಮಾರುಕಟ್ಟೆಯಿಂದ ಕೊಂಡು ತಂದಿದ್ದ ಒಂದಿಷ್ಟು ಸ್ಪಿನ್ನರ್‌ಗಳಿದ್ದವು. ಅವುಗಳನ್ನು ಹಚ್ಚಿ, ಪಲ್ಯ ಮಾಡಿ ಬಡಿಸುವುದು ಎಂದು ಮನಮೋಹಿನಿ ಯೋಚಿಸಿದಳು. ಅಂತೂ ತುಸು ಹೊತ್ತಲ್ಲೇ, ರನ್ನುಗಳಿಂದ ಮಾಡಿದ ಬಿಸಿ ಬಿಸಿ ಅನ್ನ ಸಿದ್ಧವಾಯಿತು. ಬೌಂಡರಿಗಳಿಂದ ಮಾಡಿದ ಸಾಂಬಾರ್ ಮತ್ತು ಸ್ಪಿನ್ನರ್‌ಗಳಿಂದ ಮಾಡಿದ ಪಲ್ಯದ ಘಮಘಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ, ಶರದ್ ಪವಾರ್ ಊಟಕ್ಕೆ ಅಣಿಯಾದರು.
ಗಂಡ ಊಟಕ್ಕೆ ಕುಳಿತಾಗ ಪತ್ನಿ ಮನಮೋಹಿನಿ ಮೆಲ್ಲ ಮಾತಿಗೆಳೆದಳು ‘‘ಮನೆಯಲ್ಲಿ ರನ್‌ಗಳ ಸಂಗ್ರಹ ಮುಗಿಯುತ್ತಾ ಬಂದಿದೆ...ಪೇಟೆಯಲ್ಲಿ ಒಳ್ಳೆಯ ಕ್ವಾಲಿಟಿಯ ರನ್‌ಗಳಿದ್ದರೆ ಎರಡು ಮುಡಿ ತೆಗೆದುಕೊಂಡು ಬನ್ನಿ...’’
ಘಮಘಮಿಸುವ ರನ್‌ಗಳನ್ನು ಉಣ್ಣುತ್ತಾ ಪವಾರ್ ನುಡಿದರು ‘‘ನೋಡು...ಕೃಷಿ ಸಚಿವರ ಮನೆಯಲ್ಲೇ ಊಟಕ್ಕೆ ರನ್‌ಗಳಿಲ್ಲ ಎಂದರೆ ದೇಶ ನಕ್ಕೀತು. ಸಚಿನ್ ತೆಂಡೂಲ್ಕರ್ ಕೈಯಲ್ಲಿ ಹೇಳಿದ್ದೇನೆ....ಅವನು ಈಗಾಗಲೇ ಸಂಗ್ರಹಿಸಿಟ್ಟಿರುವ ರನ್‌ಗಳಿಂದ ಒಂದು ಹತ್ತು ಮುಡಿ ರನ್‌ಗಳನ್ನು ಕಳುಹಿಸುತ್ತಾನಂತೆ... ಹಾಗೆಯೇ ಪದಾರ್ಥಕ್ಕೆ, ಗೊಜ್ಜಿಗೆ ಒಂದಿಷ್ಟು ಸ್ಪಿನ್ನುಗಳನ್ನು, ಗೂಗ್ಲಿಗಳನ್ನು ಕಳುಹಿಸುವುದಕ್ಕೆ ಕುಂಬ್ಳೆ, ಪಠಾಣ್‌ಗಳ ಕೈಯಲ್ಲಿ ಹೇಳಿದ್ದೇನೆ...ಅವರು ಕಳುಹಿಸಬಹುದು....’’
ಅಷ್ಟರಲ್ಲಿ ತಟ್ಟನೆ ನೆನಪಾಗಿ ಮನಮೋಹಿನಿ ನುಡಿದಳು ‘‘ಎಲ್ಲಾದರೂ ಸಿಕ್ಕಿದರೆ ಮಿಡಿ ಸಿಕ್ಸರ್‌ಗಳು ಸಿಕ್ಕಿದರೆ ತನ್ನಿ...ಉಪ್ಪಿನಕಾಯಿ ಹಾಕುವುದಕ್ಕೆ ಆದೀತು...ರನ್‌ಗಳ ಗಂಜಿ ಮಾಡಿದರೆ ಅದನ್ನು ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿಯ ಜೊತೆ ಉಣ್ಣುವುದಕ್ಕೆ ಭಾರೀ ಚೆನ್ನಾಗಿರುತ್ತದೆ...ಸಾಂಬಾರ್, ಪಲ್ಯ ಯಾವುದೂ ಬೇಕಾಗಿಲ್ಲ...ಈ ಉಪ್ಪಿನ ಕಾಯಿ ಇದ್ದರೆ...’’
ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿ! ಶರದ್ ಪವಾರ್ ಅವರ ಬಾಯಿಯಲ್ಲಿ ನೀರೂರಿತು ‘‘ಸರಿ..ಸರಿ...ಹರ್ಬಜನ್ ಸಿಂಗ್‌ಗೆ ಹೇಳುತ್ತೇನೆ...ಅವನತ್ರ ಒಂದಿಷ್ಟು ಸಿಕ್ಸರ್‌ಗಳು ಸ್ಟಾಕಿದೆ ಅಂತ ಕೇಳಿದ್ದೇನೆ.... ಕಳುಹಿಸಬಹುದು...’’
ಮನಮೋಹಿನಿ, ಮನೆಯ ವಿಷಯ ಬಿಟ್ಟು ದೇಶದ ವಿಷಯ ಮಾತನಾಡತೊಡಗಿದಳು ‘‘ಹಗಳಿರುಳೂ ನೀವು ಗದ್ದೆಯಲ್ಲಿ ದುಡಿಯುತ್ತೀರಿ. ಮನೆಯ ಹಿತ್ತಲಿನ ಗದ್ದೆಯಲ್ಲಿ ಬ್ಯಾಟ್‌ಗಳ ನಾಟಿ ಚೆನ್ನಾಗಿ ಆಗಿದೆ. ರನ್‌ಗಳು ಈಗಾಗಲೇ ಮೊಳಕೆ ಬರುವುದಕ್ಕೆ ಆರಂಭಿಸಿವೆ. ಆದರೂ ನೀವು ಕೃಷಿ ಸಚಿವ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಊರವರು ಆಡಿಕೊಳ್ಳುತ್ತಿದ್ದಾರಲ್ಲ....’’
ಶರದ್ ಪವಾರ್ ಒಮ್ಮೆಲೆ ಸಿಟ್ಟಾದರು. ‘‘ಊರವರ ಮಾತಿಗೆ ನೀನೇಕೆ ತಲೆಕೆಡಿಸಿ ಕೊಳ್ಳುತ್ತಿ. ಅವರು ಸಾವಿರ ಆಡುತ್ತಾರೆ....’’ ಎಂದವರೇ ಊಟ ಬಿಟ್ಟು ಎದ್ದರು. ಮನ ಮೋಹಿನಿ ಆತಂಕದಿಂದ ‘‘ಅರೇ! ಊರವರ ಸಿಟ್ಟನ್ನು ಊಟದ ಮೇಲೆ ಯಾಕೆ ತೀರಿಸಿ ಕೊಳ್ಳುತ್ತೀರಿ...ಜನ ಆಡುತ್ತಾರೆ ಎಂದೆ ಅಷ್ಟೇ...’’
ಶರದ್ ಪವಾರ್ ಗಂಭೀರವಾಗಿ ಹೇಳಿದರು ‘‘ಈ ರೈತರು ಕೃಷಿ ಸಚಿವ ಹೇಳಿದ್ದನ್ನು ಯಾವತ್ತಾದರೂ ಸರಿಯಾಗಿ ಪಾಲಿಸಿದ್ದಾರ? ದೂರು ಮಾತ್ರ ನನಗೆ. ಭತ್ತ, ಗೋದಿ, ಟೊಮೆಟೋ ಬೆಳೆಯುವುದನ್ನು ನಿಲ್ಲಿಸಲಿ. ನನ್ನ ಹಾಗೆ ರನ್‌ಗಳನ್ನು ಉತ್ಪಾದಿಸಲಿ. ಗದ್ದೆಗಳಲ್ಲಿ ಬ್ಯಾಟ್ ಗಳನ್ನು ನೆಟ್ಟು ಫಸಲುಗಳನ್ನು ತೆಗೆಯಲಿ. ಅಂತಾರಾಷ್ಟ್ರೀಯ ಮಾರುಕಟ್ಟೆ ಇರುವ ಬೆಳೆಗಳು ಇವು. ಅದು ಬಿಟ್ಟು ಇನ್ನೂ ಓಬಿರಾಯನ ಕಾಲದ ಭತ್ತ, ಗೋದಿ ಬೆಳೆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿ ಯಾಗದೆ ಇನ್ನೇನಾಗುತ್ತದೆ? ಹಳ್ಳಿಗಳಲ್ಲಿ ರೈತರ ಕೈಯಲ್ಲಿ ಭೂಮಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಾ ಇದೆ....ಇಂದು ನಮ್ಮ ಯುವಕರು ಕ್ರಿಕೆಟ್ ಆಡಬೇಕೆಂದರೆ ಒಂದು ಸರಿಯಾದ ಮೈದಾನ ಇಲ್ಲ. ಅವರಿಗೆ ಅನುಕೂಲ ವಾಗುವಂತೆ ಮೈದಾನಗಳನ್ನು ಒದಗಿಸಿಕೊಡುವ ಎಂದರೆ ಅದಕ್ಕೆ ಈ ರೈತರು ಭೂಮಿಯನ್ನು ಕೊಡಬೇಕಲ್ಲ...ದೇಶದ ಹಿತಕ್ಕಾಗಿ...ದೇಶದ ಕೃಷಿಯ ಹಿತಕ್ಕಾಗಿ ಈ ರೈತರ ಕೈಯಿಂದ ಭೂಮಿಯನ್ನು ನಾವು ಪೊಲೀಸರನ್ನು ಮುಂದಿಟ್ಟುಕೊಂಡು ಮನವೊಲಿಸಿ ತೆಗೆದು ಕೊಂಡರೆ ಅದಕ್ಕೆ ಈ ನಕ್ಸಲೈಟರು ಅಡ್ಡಿ ಮಾಡುತ್ತಾರೆ. ನಡು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಹೋಗಲಿ...ಈ ರೈತರ ಕೈಯಲ್ಲಿ ಇಷ್ಟು ಅಮೂಲ್ಯವಾದ ಮೈದಾನಗಳಿವೆಯಲ್ಲ... ತಾವಾದರೂ ಕ್ರಿಕೆಟ್ ಆಡುತ್ತಾರ... ಅದೂ ಇಲ್ಲ. ಹೀಗಾದರೆ ಈ ದೇಶದಲ್ಲಿ ರನ್‌ಗಳ ಉತ್ಪಾದನೆ ಹೆಚ್ಚುವುದು ಹೇಗೆ? ನಿನಗೆ ಗೊತ್ತಾ? ಈ ದೇಶದಲ್ಲಿ ಪ್ರತಿ ದಿನ ಐದು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ...ನಮ್ಮ ರೈತರು ಸೋಮಾರಿಗಳ ಹಾಗೆ ಟೊಮೆಟೋ, ಭತ್ತ ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಅವರು ಈ ಭೂಮಿಯನ್ನೆಲ್ಲ ನಮಗೆ ಕೊಟ್ಟರೆ ನಾವಾದರೂ ರನ್‌ಗಳ ಬೆಳೆ ಬೆಳೆಯುತ್ತಿದ್ದೆವು. ಈ ದೇಶದ ಹಸಿವನ್ನು ನಿವಾರಿಸುತ್ತಿದ್ದೆವು....’’ ಎಂದು ಒಂದೇ ಸಮನೆ ಮಾತನಾಡತೊಡಗಿದರು
ಕೃಷಿಯ ಕುರಿತಂತೆ ತನ್ನ ಗಂಡನ ಕಾಳಜಿಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮನಮೋಹಿನಿಯ ಎದೆ ತುಂಬಿ ಬಂತು. ಕೃಷಿಯ ಕುರಿತಂತೆ ಇಷ್ಟೆಲ್ಲ ತಲೆಕೆಡಿಸಿ ಕೊಂಡರೂ ತನ್ನ ಗಂಡನ ಕುರಿತಂತೆ ಬೇಡದ ಮಾತುಗಳನ್ನಾಡುತ್ತಾರಲ್ಲ ಊರಜನರು ಎಂದು ಸಿಟ್ಟು ಉಕ್ಕಿ ಬಂತು. ಆಕೆ ಗಂಡನನ್ನು ಸಮಾಧಾನಿಸಿದರು. ‘‘ಹೋಗಲಿ...ಊರ ಜನರ ಮಾತು ಕೇಳಿ ನೀವು ತಲೆ ಬಿಸಿ ಮಾಡುವುದು ಬೇಡ...ನಾನು ರಾತ್ರಿ ಅಡುಗೆಗೆ ಸಿದ್ಧತೆ ಮಾಡುತ್ತೇನೆ...ರಾತ್ರಿ ರನ್‌ಗಳ ಬಿರಿಯಾನಿ ಮಾಡೋಣ....’’ ಎಂದರು.
ಜುಲೈ -11-2010
ಪ್ರಧಾನಿ ನರೇಂದ್ರ ಮೋದಿಯವರು "ಎರಡನೇ ಹಸಿರು ಕ್ರಾಂತಿ ತುರ್ತಾಗಿ ಆಗಬೇಕಾಗಿದೆ" ಎಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ಜುಲೈ -05-2015ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿದೆ.
‘‘ಗ್ರೀನ್ ರೆವಲ್ಯೂಷನ್ ಚಾಹಿಯೇ...ಹಸಿರು ಕ್ರಾಂತಿ ನಡೆಯಲಿ...ತುರ್ತಾಗಿ ಹಸಿರುಕ್ರಾಂತಿ ನಡೆಯಲಿ...’’
ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಕರೆ ಕೊಟ್ಟಿದ್ದೇ ತ್ರಿಶೂಲ ಹಿಡಿದು ನಿಂತಿದ್ದ ಸಂಘಪರಿವಾರದ ಜನರ ಕಿವಿ ನಿಮಿರಿತು. ಅದ್ಯಾವುದೋ ರಕ್ತಕ್ರಾಂತಿಗೆ ಕರೆ ಕೊಡುತ್ತಿದ್ದಾರೆ ಎಂದು ಭಾವಿಸಿ ಅವರು ತಮ್ಮ ತಮ್ಮ ತ್ರಿಶೂಲಗಳನ್ನು ಹರಿತ ಮಾಡಿಕೊಳ್ಳತೊಡಗಿದರು. ಅದ್ಯಾವುದೋ ‘‘ಹಸಿರು..ಹಸಿರು...’’ ಎನ್ನುತ್ತಿರುವುದು ಮುಸ್ಲಿಮರನ್ನುದ್ದೇಶಿಸಿ ಹೇಳುತ್ತಿದ್ದಾರೆ...ಎಂದು ಅವರು ಭಾವಿಸಿದರು. ಹಸಿರು ಮುಸ್ಲಿಮರ ಬಣ್ಣವಾಗಿದ್ದು, ಅವರ ವಿರುದ್ಧ ಕ್ರಾಂತಿ ಮಾಡಿರಿ ಎಂದು ಕರೆ ನೀಡುತ್ತಿದ್ದಾರೆ ಎಂದು ಭಾವಿಸಿದರು. ಆದುದರಿಂದ ಅವರು ತಮ್ಮ ಪೆಟ್ರೋಲ್, ತ್ರಿಶೂಲ, ಕತ್ತಿ ಇತ್ಯಾದಿಗಳ ಜೊತೆಗೆ ಹಸಿರು ಕ್ರಾಂತಿ ಸಿದ್ಧತೆ ನಡೆಸತೊಡಗಿದರು.
ಅಷ್ಟರಲ್ಲಿ ಯಾರೋ ಹೇಳಿದರು ‘‘ಅದು ನಮ್ಮನ್ನುದ್ದೇಶಿಸಿ ಹೇಳಿದ್ದಲ್ಲವಂತೆ...ಅದು ಬೇರೆ ಕ್ರಾಂತಿಯಂತೆ....’’
‘‘ಬೇರೆ ಕ್ರಾಂತಿಯೆಂದರೆ’’...? ಇನ್ನೊಬ್ಬ ಕೇಸರಿ ಕ್ರಾಂತಿಕಾರಿ ಕೇಳಿದ.
‘‘ಅದು ಹೊಲದಲ್ಲಿ ಮಾಡುವ ಕ್ರಾಂತಿಯಂತೆ...ಹೊಲದಲ್ಲಿ ಅಕ್ಕಿ ಬೆಳೀಬೇಕಂತೆ...’’ ಮಗದೊಬ್ಬ ಉತ್ತರಿಸಿದ.
ಸ್ವಯಂ ಸೇವಕರಿಗೆ ತಲೆ ಧಿಂ ಅಂದಿತು ‘ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಹೊಲದಲ್ಲಿ ಅಕ್ಕಿ ಬೆಳೆಯುವುದೇ? ಅದೂ ನಾವು? ಹಿಂದುತ್ವದ ಶೌರ್ಯ, ವೀರ ಪರಾಕ್ರಮಗಳಿಗೆ ಇದು ಅವಮಾನವಲ್ಲವೇ?’’’ ಒಬ್ಬ ಕೇಳಿದ.
‘ಮೊಘಲರ ವಿರುದ್ಧ ಹೋರಾಡಿದ ಶಿವಾಜಿ ಅಕ್ಕಿ ಬೆಳೆದು ಕ್ರಾಂತಿ ಮಾಡಿರುವುದಲ್ಲ...ಹೀಗಿರುವಾಗ ನಾವು ಅಕ್ಕಿ ಬೆಳೆದು ಕ್ರಾಂತಿ ಮಾಡಿದರೆ ಶಿವಾಜಿಗೆ ಅವಮಾನ ಮಾಡಿದಂತಾಗುವುದಿಲ್ಲವೇ?’
‘ಇಷ್ಟಕ್ಕೂ ಅಕ್ಕಿ ಬೆಳೆಯುವುದು ಹೇಗೆ?’ ಮಗದೊಬ್ಬ ಬಜರಂಗಿ ಕೇಳಿದ.
‘‘ಅಕ್ಕಿಯನ್ನು ನಾವು ಯಾಕೆ ಬೆಳೆಯಬೇಕು? ಕೋಮುಗಲಭೆ ನಡೆದಾಗ ಅಂಗಡಿಗಳಿಗೆ ನುಗ್ಗಿ ದೋಚಿದರಾಯಿತಲ್ಲವೇ? ಅನಗತ್ಯವಾಗಿ ಇಡೀ ವರ್ಷ ಗದ್ದೆಯಲ್ಲಿ ಕೆಲಸ ಮಾಡಿ ಮೈ ಕೈ ಕೊಳಕು ಮಾಡಿಕೊಳ್ಳುವುದು ಸರಿಯೇ?’’ ಇನ್ನೊಬ್ಬ ಕುಖ್ಯಾತ ತಲೆಕೆಡಿಸಿಕೊಂಡ. ಈತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
‘‘ಇಷ್ಟಕ್ಕೂ ಈಗ ಅಕ್ಕಿ ಯಾಕೆ ಬೇಕು? ದೇಶಕ್ಕೆ ಬೇಕಾಗಿರುವುದು ಅಣುಬಾಂಬು, ಸ್ಫೋಟಕ ತ್ರಿಶೂಲ, ರಾಮಮಂದಿರ ಮೊದಲಾದವುಗಳಲ್ಲವೆ? ಇವೆಲ್ಲ ಇಲ್ಲದೇ ಇದ್ದುದರಿಂದ ಅಲ್ಲವೇ ಈ ದೇಶ ಇಷ್ಟು ಹಿಂದುಳಿದಿರುವುದು. ಅಕ್ಕಿ ಬೆಳೆಯಿರಿ ಎಂದು ಹೇಳುವುದಕ್ಕೆ ಹಿಂದುತ್ವ ಸರಕಾರ ಅಸ್ತಿತ್ವಕ್ಕೆ ಬರಬೇಕಾಗಿತ್ತೇ?’’ ಇನ್ನೊಬ್ಬ ಮುಖಂಡ ಅರ್ಥವಾಗದೆ ತಲೆಕೆರೆದುಕೊಂಡ.
‘‘ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವುದನ್ನೇ ಪರೋಕ್ಷವಾಗಿ ಹಸಿರುಕ್ರಾಂತಿ ಕರೆದಿರಬಹುದೇ?’’ ಇನ್ನೊಬ್ಬ ಹಿರಿಯ ಬಜರಂಗಿ ತಲೆ ಓಡಿಸಿದ.
ಎಲ್ಲರಿಗೂ ಹೌದು ಹೌದೆನಿಸಿತು. ಬಹುಶಃ ಬಹಿರಂಗವಾಗಿ ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ’’ ಎಂದು ಕರೆ ಕೊಟ್ಟರೆ ವಿದೇಶಾಂಗ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆ. ಆದುದರಿಂದ ನರೇಂದ್ರ ಮೋದಿಯವರು ಜಾಣತನದಿಂದ ‘ಹಸಿರು’ ಕ್ರಾಂತಿಗೆ ಕರೆಕೊಟ್ಟು, ಭಾರತೀಯ ಯೋಧರನ್ನು ಬಡಿದೆಬ್ಬಿಸಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ನರೇಂದ್ರ ಮೋದಿಯವರು ಪಾಠ ಕಲಿಸಲಿದ್ದಾರೆ ಎಂದು ಸ್ವಯಂ ಸೇವಕರಲ್ಲ ಹಿರಿಹಿರಿ ಹಿಗ್ಗಿದರು.
***
ಇತ್ತ ಎಲ್ಲ ಆರೆಸ್ಸೆಸ್ ಕಚೇರಿಗಳಲ್ಲೂ ಸಭೆ ಕರೆಯಲಾಯಿತು. ಸಾಕ್ಷಾತ್ ನರೇಂದ್ರ ಮೋದಿಯವರೇ ‘ಹಸಿರು ಕ್ರಾಂತಿ’ಗೆ ಕರೆ ಕೊಟ್ಟಿದ್ದಾರೆ ಎಂದ ಮೇಲೆ ಕೃಷಿಗೆ ತಯಾರು ನಡೆಸಲೇಬೇಕಲ್ಲವೆ? ಎಲ್ಲರೂ ತಮ್ಮ ತಮ್ಮ ಪ್ಯಾಂಟು, ಕಚ್ಚೆಗಳನ್ನು ಕಳಚಿಟ್ಟು ಲಂಗೋಟಿ ಕಾಣುವಂತೆ ದೊಗಳೆ ಚೆಡ್ಡಿಗಳನ್ನು ಧರಿಸಿ ಕೃಷಿ ಕಾರ್ಯಕ್ಕಿಳಿದರು. ಈವರೆಗೆ ಶಾಖೆಯಲ್ಲಿ ಕಬಡ್ಡಿ ಆಡಿ ಮಾತ್ರ ಗೊತ್ತಿದ್ದ ಸರಸಂಘಚಾಲಕರು ಅಕ್ಕಿ ಕ್ರಾಂತಿಯ ಕುರಿತಂತೆ ತಮ್ಮ ಗಣವೇಷಧಾರಿಗಳಿಗೆ ತರಬೇತಿ ನೀಡತೊಡಗಿದರು.
ಮೊದಲು ಗದ್ದೆಯನ್ನು ಉಳಬೇಕು...ಎನ್ನುವುದರಿಂದ ಅವರು ಆರಂಭಿಸಿದರು.
‘‘ಗದ್ದೆಯನ್ನು ಯಾವುದರಿಂದ ಉಳುವುದು?’’ ಎನ್ನುವುದೇ ಅವರ ಸಮಸ್ಯೆಯಾಯಿತು.
‘‘ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!’’ ಎಂದು ಲಾಠಿಯಿಂದ ಸರಸಂಘಚಾಲಕರು ತಲೆ ಚಚ್ಚಿಕೊಂಡರು.
‘‘ಈ ದೇಶದಲ್ಲಿ ಗೋವುಗಳನ್ನು ಪೂಜಿಸುವುದಕ್ಕೋಸ್ಕರ ಸಾಕುತ್ತಿದ್ದರು. ಯಾವಾಗ ಗೋವುಗಳನ್ನು ಇಂತಹ ಕೆಲಸಕ್ಕೆ ಬಳಸಿ ಹಿಂಸೆ ನೀಡಲಾಯಿತೋ ಅಲ್ಲಿಂದ ಭಾರತ ಪತನಗೊಳ್ಳತೊಡಗಿತು...’’ ಎಂದು ಶಾಖೆಯ ಮುಖಂಡರು ಭಾಷಣ ಮಾಡತೊಡಗಿದರು.
‘‘ಆದರೆ ನಮ್ಮ ತಾತ ಗೋವುಗಳಿಂದಲೇ ಗದ್ದೆ ಉಳುತ್ತಿದ್ದರು’’ ಶಾಖೆಗೆ ಸೇರಿದ ಹೊಸ ಹುಡುಗನೊಬ್ಬ ಅನುಮಾನದಿಂದ ಪ್ರಶ್ನಿಸಿದ.
‘‘ಅದೆಲ್ಲ ಮ್ಲೇಚ್ಛರ ಸಂಚು. ಹಿಂದೆಲ್ಲ ದಲಿತರನ್ನು ಬಳಸಿಕೊಂಡು ಗದ್ದೆ ಉಳುತ್ತಿದ್ದೆವು. ಆಗ ಇಡೀ ಭಾರತ ಸುಖ, ಸಂತೋಷದಿಂದ ತುಂಬಿ ತುಳುಕುತ್ತಿದ್ದವು. ದಲಿತರು ಸಂತೋಷದಿಂದ ನೇಗಿಲ ನೊಗವನ್ನು ಹೊತ್ತುಕೊಂಡು ಗದ್ದೆಯನ್ನು ಉಳುತ್ತಿದ್ದರು. ಆಗ ಅವರಿಗೆ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ಆದರೆ ಯಾವಾಗ ಮ್ಲೇಚ್ಛರು, ಬ್ರಿಟಿಷರು ಭಾರತಕ್ಕೆ ಬಂದರೋ ಅವರು ಉಪಾಯವಾಗಿ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದರು. ಅವರ ಉದ್ಯೋಗವನ್ನು ಕಿತ್ತುಕೊಂಡರು. ದೇವತೆಯಾಗಿದ್ದ ಗೋವುಗಳನ್ನು ಗದ್ದೆಯಲ್ಲಿ ಉಳುವುದಕ್ಕೆ ಬಳಸಿದರು. ಇದರಿಂದ ಭಾರತದಲ್ಲಿ ಕೃಷಿ ಇಳುವರಿ ಕಡಿಮೆ ಬರತೊಡಗಿತು. ಇದೀಗ ಹಸಿರುಕ್ರಾಂತಿ ಮಾಡಬೇಕಾದ ಸ್ಥಿತಿ ಬಂದಿದೆ...’’ ಎಂದು ಸರ ಸಂಘಚಾಲಕರು ಗೊಳೋ ಎಂದು ಅಳ ತೊಡಗಿದರು.
***
ನರೇಂದ್ರ ಮೋದಿಯವರು ‘‘ಹಸಿರು ಕ್ರಾಂತಿ...ತಕ್ಷಣ ಹಸಿರು ಕ್ರಾಂತಿ...’’ ಬೊಬ್ಬಿಟ್ಟದ್ದೇ ತಡ, ಸಾಕ್ಷಾತ್ ಶ್ರೀಮತಿ ಇಂದಿರಾಗಾಂಧಿಯೇ ಮೋದಿಯ ರೂಪದಲ್ಲಿ ಅವತಾರ ಎತ್ತಿದ್ದಾರೆ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಮನವರಿಕೆಯಾಯಿತು. ರಾಜಪಥದಲ್ಲಿ ಯೋಗ ಮಾಡಿ ಮರಳುತ್ತಿರುವ ಮೋದಿಯನ್ನು ಅದು ಹೇಗೋ ಅವನು ಭೇಟಿ ಮಾಡಿ, ಸಂದರ್ಶನ ಮಾಡ ತೊಡಗಿದ.
‘‘ಸಾರ್...ಹಸಿರು ಕ್ರಾಂತಿಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ....?’’
‘‘ನೋಡಿ...ರೈತರೆಲ್ಲ ಬಹಳ ಸೋಮಾರಿಗಳಾಗಿದ್ದಾರೆ. ಈ ಕುರಿತಂತೆ ನಾಡಿನ ಚಿಂತಕರು, ಕವಿಗಳು, ಬೃಹತ್ ಕಾದಂಬರಿಕಾರರು, ಜ್ಞಾನಪೀಠಿಗಳು, ಜ್ಞಾನಪೀಠ ವಂಚಿತರು ಎಲ್ಲರೂ ಚಿಂತೆಗೊಳಗಾಗಿದ್ದಾರೆ. ರೈತರು ಸೋಮಾರಿಗಳಾಗಿರುವುದೇ ನಮ್ಮ ಕೃಷಿ ಹಿಂದುಳಿಯಲು ಕಾರಣ. ಆದ್ದರಿಂದ, ರೈತರನ್ನು ಬಡಿದೆಬ್ಬಿಸಲು ಬೇಕಾದ ಎಲ್ಲ ಕ್ರಮಗಳನ್ನು ನಾವು ಮಾಡಿದ್ದೇವೆ...ಈಗಾಗಲೇ ಇದಕ್ಕಾಗಿ ವಿಶೇಷ ಪೊಲೀಸರನ್ನು, ಮಿಲಿಟರಿಯನ್ನು ನೇಮಿಸಬೇಕೆಂದಿದ್ದೇವೆ...ಅವರು ಸೋಮಾರಿಗಳಾಗಿ ಉಂಡು ಮಲಗದಂತೆ ನೋಡಿಕೊಂಡು ಚೆನ್ನಾಗಿ ದುಡಿಸಿ, ದೇಶದಲ್ಲಿ ಹಸಿರು ಕ್ರಾಂತಿಯನ್ನುಂಟು ಮಾಡುವುದು ನಮ್ಮ ಗುರಿ...’’
‘‘ಇದಕ್ಕಾಗಿ ವಿಶೇಷ ಹಣವನ್ನು ಬಿಡುಗಡೆ ಮಾಡಿದ್ದೀರಾ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಮಾಡಿದ್ದೇವೆ. ಈಗಾಗಲೇ ದೇಶದಲ್ಲಿರುವ ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಸಾವಯವ ಕೃಷಿ ಯೋಜನೆಗಾಗಿ ಹಲವಾರು ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಅವರೆಲ್ಲ ಕೃಷಿಕರಿಗೆ ಸಾವಯವ ಗೊಬ್ಬರ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ ಅನಿಲ್ ಅಂಬಾನಿ, ಅಧಾನಿಯಂತಹ ಶ್ರೇಷ್ಠಾತಿಶ್ರೇಷ್ಠ ಕೃಷಿಕರಿಗೆ ಬೇಕಾಗುವ ಭೂಮಿಯನ್ನು ಸೋಮಾರಿ ರೈತರಿಂದ ಕಿತ್ತು ಕೊಡುವ ಯೋಜನೆಯೂ ಇದೆ. ಸೋಮಾರಿ ರೈತರೇ ಭೂಮಿ ಬಿಟ್ಟು ತೊಲಗಿ, ದುಡ್ಡಿದ್ದವನೇ ಭೂಮಿಯ ಒಡೆಯ ಮೊದಲಾದ ಘೋಷಣೆ, ಯೋಜನೆಗಳನ್ನು ಶೀಘ್ರ ಜಾರಿಗೆ ತರಲಿದ್ದೇವೆ...’’ ಎನ್ನುತ್ತಿದ್ದಂತೆಯೇ ಪತ್ರಕರ್ತ ಕಾಸಿಯ ಕಣ್ಣ ಮುಂದೆ ಯಾಕೋ ಹಸಿರಿನ ಬದಲಿಗೆ ಕೆಂಪು ಬಣ್ಣ ಆವರಿಸಿಕೊಳ್ಳತೊಡಗಿತು. ‘‘ಈಗ ಬಂದೆ ಸಾರ್...’’ ಎಂದವನೇ ಅಲ್ಲಿಂದ ನೇರವಾಗಿ ಬೆಂಗಳೂರಿನ ಬಸ್ ಹತ್ತಿದ.
ಜುಲೈ -05-2015
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಬರೆದ ಬುಡ ಬುಡಿಕೆ. ಸೆಪ್ಟೆಂಬರ್ 18, 2005 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ.
‘‘ಹಲೋ...’’
‘‘ಹ್ಯಾಂಗಿದ್ದೀಯ ದೇವು....’’
‘‘ಹಲೋ....ಯಾರು ಮಾತಾಡ್ತಾ ಇರೋದು?’’
‘‘ನೀನೇ ಹೇಳು ನೋಡೋಣ...ನಾನ್ಯಾರು?’’
‘‘ಹಿಂಗೆ ನಿದ್ದೆಯಿಂದ ನನ್ನನ್ನು ಎಬ್ಬಿಸಿ ತೊಂದರೆ ಕೊಡೋದು ನೋಡಿದ್ರೆ ನೀನು ಆ ಕುರುಬ ಸಿದ್ಧರಾಮಯ್ಯನೇ ಇರ್ಬೇಕು...’’
‘‘ಛೇಛೇ...ಸಿದ್ಧರಾಮಯ್ಯ ಫೋನ್ ಮಾಡೋದಾಗಿದ್ರೆ ಅಹಿಂದ ಯಾಕೆ ಹುಟ್ತಾ ಇತ್ತು? ಅವರು ಫೋನ್ ಮಾಡ್ತ ಇಲ್ಲ ಅಂತಾ ತಾನೆ ಅವರನ್ನು ನೀವು ಹೊರಗೆ ಹಾಕಿದ್ರಿ. ಸರಿಯಾಗಿ ಯೋಚ್ನೆ ಮಾಡು...ನೀನೇ ಹೇಳು...ನೀನು ನನ್ನನ್ನು ನೋಡಿದೀಯ. ಪ್ರೀತಿಯಿಂದ ಮಾತಾನಾಡಿದ್ದೀಯ...’’
‘‘ಪ್ರೀತಿಯಿಂದ ಮಾತನಾಡಿದ್ದೀನಾ. ಹಂಗಾದ್ರೆ ನೀನು ನನ್ನ ಮಗ ಕುಮಾರ ಸ್ವಾಮೀನೇ ಆಗಿರ್ಬೇಕು?’’
‘‘ಯಾವಾಗ ನೋಡಿದ್ರೂ ಮಕ್ಕಳ ಜಪ ಮಾಡ್ಕಂತೀಯಲ್ಲ. ಜಗತ್ತಿನಲ್ಲಿ ಯಾರಿಗೂ ಹುಟ್ಟದ ಮಕ್ಳು ನಿಂಗೆ ಹುಟ್ಟಿದ್ಯಾ... ಕೆಲವು ಕ್ಲೂ ಕೊಡ್ತೀನಿ ಓಕೇನಾ...?’’
‘‘ಕ್ಲೂ ಕೊಡ್ತೀಯ, ಹಂಗಾದ್ರೆ ನೀನು ಕರೋಡ್ಪತಿ ಅಮಿತಾಬಚ್ಚನ್ನೇ ಇರ್ಬೇಕು...ಕರೆಕ್ಟ್ ತಾನೆ...’’
‘‘ನಿಂಗೆ ಜನರಲ್ ನಾಲೆಜ್ಜು ಇಲ್ಲ ಅನ್ನೋದು ಲೋಕಕ್ಕೇ ಗೊತ್ತು. ಇನ್ನು ಅಮಿತಾಬ್‌ಗೆ ಗೊತ್ತಿರಾಕಿಲ್ವ?ಅವನ್ಯಾಕೆ ಫೋನ್ ಮಾಡ್ತಾನೆ ಬಿಡು’’
‘‘ಸರಿ ಬಿಡು ಹಂಗಾದ್ರೆ ಕ್ಲೂ ಕೊಡು...’’
‘‘ಚುನಾವಣೆ ಹೊತ್ತಲ್ಲಿ ನಾನು ನಿಂಗೆ ಬೇಕೇ ಬೇಕು...’’
‘‘ಹಂಗಾದ್ರೆ ಹಾಸನದ ಯಾವುದೋ ಗಲ್ಲಿಯ ಪುಂಡ ಪಟಾಲಾಂನ ಜನ ಇರ್ಬೇಕು. ಈಗ ಯಾಕೆ ಫೋನ್ ಮಾಡ್ತಿದ್ದೀಯಾ? ಚುನಾವಣೆ ಎನೌನ್ಸ್ ಆಗಿಲ್ವಲ್ಲ. ಹಂಗೇನಾದ್ರು ಎನೌನ್ಸ್ ಆದ್ರೆ ನಾನೇ ಹೇಳಿ ಕಳುಹಿಸ್ತೀನಿ, ಫೋನ್ ಮಡಗು...’’
‘‘ತಥ್ ನಿನ್ನ...ಮಾತೆತ್ತಿದ್ರೆ ನಿನ್ನ ರಾಜಕೀಯ ವರಸೆ ತೋರುಸ್ತೀಯಲ್ಲ... ಅವ್ನಲ್ರೀ ನಾನು...’’
‘‘ಅಲ್ವಾ? ಹಂಗಾರೆ... ಬೇರೇನಾದ್ರೂ ಕ್ಲೂ ಕೊಡು....’’
‘‘ನಾನಿಲ್ಲ ಅಂದ್ರೆ ನೀನಿಲ್ಲ...ಈಗ ಹೇಳು ನೋಡೋಣ ನಾನ್ಯಾರೂ...’’
‘‘ಈಗ ಗೊತ್ತಾಯ್ತು ಬಿಡಿ....ಮೊದಲೇ ಹೇಳೋಕಾಗಲ್ವೇನ್ರಿ....ನೀವು ಬೆಳ್ತಂಗಡಿಯಲ್ಲಿ ಕಳೆದ ಬಾರಿ ಚಂಡಿಕಾ ಹೋಮ ಮಾಡಿದ್ರಲ್ಲಾ...ಆ ಕಡೆ ಭಟ್ರಲ್ವಾ’’
‘‘ಅಲ್ಲರೀ....’’
‘‘ಹಂಗಾದ್ರೆ...ಕಳೆದ ತಿಂಗಳು ಕೊಲ್ಲೂರಿನಲ್ಲಿ ನನಗೆ ಒಂದು ತಾಯತ ಕೊಟ್ರಲ್ಲಾ ಆ ಜೋಯಿಸರಲ್ವಾ...’’
‘‘ಛೆ...ಛೆ..ಛೆ.. ಅಲ್ಲಾರೀ...’’
‘‘ಹಂಗಾದ್ರೆ ಸಾವಿರ ಕಂಟಕಗಳಿವೆ ಅಂತ ಕಳೆದವಾರ ನನ್ನ ಮನೇಲಿ ಹೋಮ ಮಾಡಿದ್ರಲ್ಲಾ... ಆ ಭಟ್ರಲ್ವಾ...’’
‘‘ಊ...ಹುಂ..ಅಲ್ವೇ ಅಲ್ಲಾ...’’
‘‘ಹಂಗಾದ್ರೆ ಕಳೆದ ಬಾರಿ ಸಿದ್ದರಾಮಯ್ಯರಿಗೆ ಮಾಟ ಮಾಡಿ ನನ್ನಿಂದ 1,201 ರೂಪಾಯಿ ಇಸ್ಕೊಂಡ್ರಲ್ಲಾ...ಆ ಮಂತ್ರವಾದಿಯಿರ್ಬೇಕು...’’
‘‘ತಥ್...
‘‘ಅದೂ ಅಲ್ಲಾಂತದ್ರೆ...ಹಾಂ ಗೊತ್ತಾಯ್ತು ಬಿಡಿ, ಮೂರು ದಿನದ ಹಿಂದೆ, ಸಿದ್ಧರಾಮಯ್ಯ, ಜಾಲಪ್ಪ ಸೇರಿ ನನ್ಗೂ ನನ್ನ ಮಕ್ಕಳಿಗೂ ಮಾಟ ಮಾಡಿದ್ದಾರೆ...ತೆಗೀತೀನಿ ಅಂತ ಬಂದ್ರಲ್ಲ ಅವ್ರೇ ತಾನೇ...’’
‘‘ನೀ ಇದೇ ತರ ಮಾತಾಡ್ತಾ ಇದ್ರೆ...ಫೋನ್‌ನಲ್ಲೇ ನಿನ್ಗೆ ಚಚ್ಚಿ ಬಿಡ್ತೀನಿ...’’
‘‘ಅಲ್ರೀ...ನೀವಿಲ್ಲದೇ ಇದ್ರೆ ನಾನಿಲ್ಲ ಅಂತ ಹೇಳ್ತೀರಿ...ಮತ್ತೆ ಜೋಯಿಸರ, ಭಟ್ಟರಾ, ಮಂತ್ರವಾದಿಗಳಾ, ಗಿಣಿಶಾಸ್ತ್ರದೋನಾ ಅಂತ ಕೇಳಿದ್ರೆ ಅಲ್ಲಾಂತ ಹೇಳ್ತೀರಿ... ಇದೇನ್ರಿ ಅನ್ಯಾಯಾ....ಒಳ್ಳೆ...ಆ ಅಹಿಂದದೋರು ಕಾಡಿದ ಹಾಗೆ ಕಾಡ್ತಿದ್ದೀರಲ್ರೀ...’’
‘‘ಇನ್ನೊಂದು ಕ್ಲೂ ಕೊಡ್ತೀನಿ. ನನ್ನ ಅಶೀರ್ವಾದದಿಂದ್ಲೆ ನಿನ್ನ ಸರಕಾರ ನಡೀತಾ ಇದೆ...’’
‘‘ಛೆ...ನಿಮ್ ವಾಯ್ಸು ಸೋನಿಯಾ ಮೇಡಂ ಥರ ಇಲ್ವಲ್ರೀ... ನಿಮ್ದು ಒಳ್ಳೆ... ರಾಜಕುಮಾರ್ ಫಿಲ್ಮಲ್ಲಿ ವಜ್ರಮುನಿ ವಾಯ್ಸು ಕೇಳ್ದಂಗೆ ಕೇಳತ್ತೆ...ಏನ್ ಮೇಡಂ...ವಾಯ್ಸು ಬದಲಾಗಿ ಬಿಟ್ಟಿದೆ... ದಿಲ್ಲೀಲಿ ಹವಾಮಾನ ಚೆನ್ನಾಗಿಲ್ವ... ನನ್ನ ಹಾಗೆ ನಿಮ್ಗೂ ಭಿನ್ನಮತೀಯ ವೈರಸ್ ಕಾಟಾನಾ...’’
‘‘ನಾನು ಸೋನಿಯಾ ಮೇಡಂ ಅಲ್ಲಾರೀ....’’
‘‘ನಿಮ್ ಆಶೀರ್ವಾದದಿಂದ್ಲೇ ಸರಕಾರ ನಡೀತಾ ಇದೆ ಅಂತ ಹೇಳ್ತೀರಿ...ಮತ್ತೆ ಸೋನಿಯಾ ಗಾಂಧಿ ಅಲ್ಲಾಂತ ಹೇಳ್ತೀರಲ್ಲಾ...?’’
‘‘ನನ್ನ ಮನೆಗೆ ಬಂದಿದ್ದೀರಿ. ಹೆಂಗಿದ್ದೀಯ ಅಂತ ನನ್ನ ತಲೆ ಸವರಿದ್ರಿ. ನೆನಪು ಮಾಡ್ಕೊಳ್ಳಿ...ನನ್ನ ಸಣ್ಣ ಮಗನ ಕೆನ್ನೆ ಹಿಂಡಿ ನೂರು ರೂಪಾಯಿ ನೋಟು ಕೊಟ್ರಿ....’’
‘‘ಹಂಗಾದ್ರೆ ನೀನು ರೇವಣ್ಣನ ಬೀಗರ ಕಡೆಯೋನು ಇರ್ಬೇಕು. ಹೆಂಗಿದ್ದೀಯಪ್ಪ... ಮನೇಲೆಲ್ವಾ ಸೌಕ್ಯವೆ? ಮಳೆ ಬೆಳೇಲ್ಲಾ ಹೆಂಗದೆ?’’
‘‘ನಿಮ್ಮ ರೇವಣ್ಣನ ಬೀಗ ನೆಗೆದು ಬಿದ್‌ಹೋದ. ಅಲ್ರೀ...ಇಷ್ಟು ಕ್ಲೂ ಕೊಟ್ರು ನಿಂಗೆ ಗೊತ್ತಾಗ್ಲಿಲ್ಲ ಅಂದ್ರೇನೂ....ನಾನು ಇದ್ದಾದ್ರೂ ಏನು ಪ್ರಯೋಜನ... ಅಯ್ಯೋ...’’
‘‘ರೀ...ಇನ್ನೂ ಒಂದಿಷ್ಟು ಚಾನ್ಸು ಕೊಡ್ರಿ....’’
‘‘ಹಾಂ...ಅದೇ...ನಾನು ಅದೆಷ್ಟು ಚಾನ್ಸು ಕೊಟ್ಟಿದ್ದೀನಿ ಗೊತ್ತ ನಿಮ್ಗೆ...ನಿಮ್ ಪಕ್ಸ ಒಡ್ದು ನುಚ್ಚು ನೂರು ಆದ್ರೂನು ಮತ್ತೆ ಮತ್ತೆ ಚಾನ್ಸು ಕೊಟ್ಟೆ....ನಾನು ಚಾನ್ಸು ಕೊಟ್ಟಿದ್ರಿಂದಾನೇ ಕಳೆದ ಬಾರಿ ಮತ್ತೆ ಗೆದ್ದು ಬಂದ್ರಿ.... ಹೋಗ್ಲಿ.... ದೇಹಲಕ್ಷಣ ಹೇಳ್ತೀನಿ ಕೇಳು...ನೋಡಿ...ನಾನು ಕರ್ರಗಿದ್ದೇನೆ..’’
‘‘ಹಂಗಾದ್ರೆ ನೀವು ಖರ್ಗೇನೆ..’’
‘‘ಬಡಕಲಾಗಿದ್ದೇನ್ರಿ....’’
‘‘ಅರೆ...ಹಂಗಾದ್ರೆ ನೀವು ಎಂ.ಪಿ ಪ್ರಕಾಸು...ನೀವ್ಯಾಕ್ರಿ ಇಷ್ಟೊತ್ನಾಗೆ ಫೋನು ಮಾಡ್ತಿದ್ದೀರಿ....’’
‘‘ಅಲ್ರೀ....ನೀರು ನೀರು ಅಂತ ಸಾಯ್ತ ಇದ್ದೇನ್ರಿ....’’
‘‘ಹಂಗಾದ್ರೆ...ನೀನು ತಮಿಳುನಾಡು ಜಯಲಲಿತಾ ಇರ್ಬೇಕು...ಜೀವ ಹೋದ್ರು ನಿಂಗೆ ಕಾವೇರಿ ನೀರು ಕೊಡಾಕಿಲ್ಲ...’’
‘‘ತಥ್ ನಿನ್ನ...ಇನ್ನೂ ನಿಂಗೆ ಗೊತ್ತಾಗಿಲ್ವಾ...ನೋಡಯ್ಯ ಸಾಲ ಗೀಲಾಂತ ಬಡ್ಡಿ ಕಟ್ಟದೆ ಒದ್ದಾಡ್ತಿದ್ದೀನಿ...’’
‘‘ಬಡ್ಡಿ ಕಟ್ಟೋಕಾಗ್ದೆ ದೇಶ ವಿಶ್ವ ಬ್ಯಾಂಕ್ ಹೇಳಿದಲ್ಲೆಲ್ಲಾ ಸಹಿ ಹಾಕ್ತಾ ಇದೇ. ಹಂಗಾದ್ರೆ ನೀನು ಭಾರತಮಾತೇನೇ ಇರ್ಬೇಕು...ಯಕಮ್ಮ ಈ ಅಪರಾತ್ರೀಲಿ ಫೋನ್ ಮಾಡಿ ಗಂಡಸಿನ ವಾಯ್ಸಲ್ಲಿ ಮಾತಾಡ್ತ ಇದ್ದೀಯ....’’
‘‘ನನ್ ಕರ್ಮ...ಭಾರತಮಾತೆಯ ನಾಲಗೆ ಕತ್ತರಿಸಿ, ಕೈ ಕಾಲು ಕಟ್ಟಿ ವಿದೇಶಿಯರಿಗೆ ಮಾರಿದ ಮೇಲೆ, ಅವಳೆಲ್ಲಿಂದ ಫೋನ್ ಮಾಡ್ಬೇಕು?ಇನ್ನೂ ಗೊತ್ತಾಗಿಲ್ವಾ...’’
‘‘ಇಲ್ಲಾರಿ...’’
‘‘ಗೊತ್ತಾಗ್ಲೇ ಇಲ್ವಾ...’’
‘‘ಊ...ಹುಂ....
‘‘ಮಗ್ನೆ...ಮುಂದಿನ ಚುನಾವಣೆಯ ಹೊತ್ತಿನಲ್ಲಿ ನಮ್ಮೂರಿಗೆ ಬರ್ತೀಯಲ್ಲ, ಆಗ ಗೊತ್ತಾಗತ್ತೆ ನಾನ್ಯಾರೂಂತ...’’
ಫೋನನ್ನು ದಡಾಲ್ಲನೆ ಕುಕ್ಕಿದ ಸದ್ದು. ಯಾರು ಪೋನು ಮಾಡಿರಬಹುದು ಎಂದು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ರು ಗೌಡ್ರು.
ಸೆಪ್ಟೆಂಬರ್ 18, 2005
2008 ರಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾದಾಗ ಬರೆದ ಬುಡಬುಡಿಕೆ. ಎಪ್ರಿಲ್ 20, 2008 ರವಿವಾರದ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ವಿವಿಧ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಇದೀಗ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಸಮಯ. ಇಲ್ಲಿ ಕೆಲವು ‘ಪರದೇಶಿಕ ಪಕ್ಷ’ಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಇಲ್ಲಿದೆ.
ಕರ್ನಾಟಕ ಸಾರಾಯಿ ಪಕ್ಷ
ಉಳಿದ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇದ್ದುದರಿಂದ, ಚುನಾವಣೆಯಲ್ಲಿ ಅಖಿಲ ಕರ್ನಾಟಕ ಸಾರಾಯಿ ಪಕ್ಷವೆಂಬ ಪ್ರಾದೇಶಿಕ ಪಕ್ಷವನ್ನು ರಚಿಸಲಾಗಿದೆ. ಈ ನಾಡಿನ ಶೋಷಿತ ವರ್ಗವಾದ ಕುಡುಕರಿಂದಲೇ ರಚನೆಗೊಂಡಿರುವ ಈ ಪಕ್ಷಕ್ಕೆ ಮಲ್ಯ, ಬಂಗಾರಪ್ಪ, ಹೆ.ಛೆ.ಶೆಟ್ಟಿ ಮೊದಲಾದವರು ದುಡ್ಡು ಹಾಕಿದ್ದಾರೆ ಎನ್ನುವುದು ಬರೇ ಗಾಳಿ ಸುದ್ದಿ ಎನ್ನಲಾಗಿದೆ. ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ.
1.ಅಧಿಕಾರ ಹಿಡಿದಾಕ್ಷಣ ಸಾರಾಯಿ ನಿಷೇಧ ಹಿಂದಕ್ಕೆ.
2. ಎಲ್ಲ ರೇಷನ್ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಸಾರಾಯಿ ವಿತರಣೆ. ಸೇಂದಿಯನ್ನು ಉಚಿತವಾಗಿ ರೇಷನ್ ಅಂಗಡಿಗಳಲ್ಲಿ ವಿತರಿಸಲು ಯೋಜನೆ. ಈ ಯೋಜನೆಗೆ ‘ತಾಳೆಯ ಭಾಗ್ಯ’ ಎಂದು ಹೆಸರಿಡಲಾಗುವುದು.
3.ಈಗಾಗಲೇ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆ ಇದೆ. ಸಂಜೆ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಾರಾಯಿ ತೊಟ್ಟೆಯನ್ನು ನೀಡುವ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಒತ್ತಡ ರಹಿತ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲಾಗುತ್ತದೆ.
4.ವತ್ತಿಪರ ಶಿಕ್ಷಣಕ್ಕೆ ಆದ್ಯತೆ. ಶಾಲೆಗಳಲ್ಲಿ ಸಾರಾಯಿ ತಯಾರಿಕೆ, ಸಾರಾಯಿ ಭಟ್ಟಿ ಇಳಿಸುವುದು ಮೊದಲಾದ ವಿಷಯಗಳ ಕುರಿತಂತೆ ತರಬೇತಿ, ಸಾರಾಯಿ ತರಬೇತಿಗಾಗಿ ರಾಜ್ಯದ ವಿವಿಧೆಡೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ.
5.ಮನೆ ಮನೆಗಳಲ್ಲಿ ಸಾರಾಯಿ ತಯಾರಿಕಾ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಗಳ ನಿವಾರಣೆ.
6.ಜಿ.ಪಿ.ರಾಜರತ್ನಂ ಅವರ ‘ಹೆಂಡ, ಹೆಡ್ತಿ...’ ಪದ್ಯವನ್ನು ನಾಡಗೀತೆಯನ್ನಾಗಿ ಮಾಡಲಾಗುವುದು.
7. ಧರ್ಮದ ಅಮಲು, ಜಾತಿಯ ಅಮಲು ಇತ್ಯಾದಿಗಳನ್ನು ಅಳಿಸಿ ಹಾಕಿ, ಅಮಲನ್ನು ಜಾತ್ಯತೀತಗೊಳಿಸಲಾಗುತ್ತದೆ. ಮದ್ಯತೀತ ನಾಡನ್ನು ಕಟ್ಟಿ, ಎಲ್ಲ ಜಾತಿ, ಧರ್ಮಗಳನ್ನು ಒಂದೇ ಅಮಲಿನಡಿಯಲ್ಲಿ ತರಲಾಗುತ್ತದೆ. ಸಾರಾಯಿ ಪಕ್ಷದಲ್ಲಿ ಟಿಕೆಟ್ ನೀಡಲು ಅರ್ಹತೆಯೇ ಮಾನದಂಡವಾಗಿರುತ್ತದೆ. ಹೆಚ್ಚು ಹೆಚ್ಚು ಸಾರಾಯಿ ಕುಡಿದು ದಾಖಲೆ ಸ್ಥಾಪಿಸಿದವರಿಗೆ ಮೊದಲ ಆದ್ಯತೆ. ಪಕ್ಷದ ಟಿಕೆಟ್‌ಗೆ ಅರ್ಜಿ ಹಾಕುವಾಗ, ತಮ್ಮ ಸುಟ್ಟು ಹೋಗಿರುವ ಕರುಳು, ಗಂಟಲು ಇತ್ಯಾದಿಗಳನ್ನು ಅರ್ಜಿಯ ಜೊತೆಗೆ ಲಗ್ಗತ್ತಿಸಬಹುದು.
****
ಹರಹರಾ ಮಂಕೇಶ್ವರ ಪಕ್ಷ
ತಮ್ಮ ಎನ್ನಡ ಪಕ್ಷದಿಂದ ಓಟಿಗೆ ನಿಂತು ಠೇವಣಿ ಕಳೆದುಕೊಂಡ ಬಳಿಕ ಮಂಕೇಶ್ವರರು ಸ್ಥಾಪಿಸಿದ ನೂತನ ಪಕ್ಷ ಇದು. ಅದರ ಪ್ರಣಾಳಿಕೆ ಕೆಳಗಿನಂತಿದೆ.
1.ಹೊಸ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನು ಮಾರುಕಟ್ಟೆಗೆ ತಂದು, ಪತ್ರಿಕೆಯ ಜೊತೆಗೆ ಓದುಗರಿಗೆ ಒಂದು ರೂಪಾಯಿಯನ್ನು ಕೊಡುವುದು.
2.ಪತ್ರಿಕೆಯನ್ನು ಓದುವುದಕ್ಕಲ್ಲದೆ ಇನ್ನಿತರ ಕೆಲಸಗಳಿಗೂ ಬಳಸಲು ಅನುಕೂಲಾವಾಗುವಂತೆ ರೂಪಿಸಿ, ನಂಬರ್ 1 ಎಂದೆನಿಸಿಕೊಳ್ಳುವುದು. ಮುಖ್ಯವಾಗಿ ನಂ.2 ಮೊದಲಾದ ಬೆಳಗ್ಗಿನ ಕೆಲಸಗಳ ಸಂದರ್ಭದಲ್ಲಿ ಬಳಸಲು ಪತ್ರಿಕೆ ಉಪಯೋಗವಾದರೆ, ಸರ್ಕ್ಯುಲೇಶನ್ ಇನ್ನಷ್ಟು ಹೆಚ್ಚುತ್ತದೆ. ಊಟದ ಬಳಿಕ ಕೈ ಶುಚಿಗೊಳಿಸಲು ಬೆವರೊರೆಸಿಕೊಳ್ಳಲು ಪತ್ರಿಕೆಗಳನ್ನು ಪರಿಣಾಮಕಾರಿಯಾಗಿ ಹೊರತರುವುದು. ಈ ಮೂಲಕ ಕರ್ನಾಟಕದಲ್ಲಿ ಪತ್ರಿಕಾ ಕ್ರಾಂತಿಯನ್ನು ಮಾಡುವುದು.
3.ಮಧ್ಯಾಹ್ನ, ರಾತ್ರಿಯ ಊಟಕ್ಕೆ ಪತ್ರಿಕೆಗಳನ್ನೇ ಬೇಯಿಸಿ ತಿನ್ನುವುದು. ಅದಕ್ಕಾಗಿ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನೇ ಒಂದು ರೂಪಾಯಿಗೆ ಒಂದು ಕೆಜಿಯಂತೆ ನೀಡಲು ಯೋಜನೆ. ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಪತ್ರಿಕೆಗಳನ್ನೇ ಪರ್ಯಾಯವಾಗಿ ಬಳಸಲು ಯೋಜನೆ. ಉರುವಲಾಗಿ ಪತ್ರಿಕೆಗಳನ್ನು ಸಬ್ಸಿಡಿಯಲ್ಲಿ ವಿತರಣೆ.
4. ನಾಡಿನಲ್ಲಿ ‘ಭಯೋತ್ಪಾದನೆ’ಗಾಗಿ ಪತ್ರಿಕೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ. ಹೆಚ್ಚು ಉತ್ಪಾದನೆ ಮಾಡಿ ನಾಡಿನ ಉದ್ದಗಲಕ್ಕೆ ರಫ್ತು ಮಾಡಲು ಅವಕಾಶ. ಇದಕ್ಕಾಗಿ ತನ್ನ ‘ಮಂಕೇಶ್ವರ’ ಪತ್ರಿಕೆಯಿಂದ ವಿಶೇಷ ಕಾರ್ಖಾನೆ. ಭಯ ಉತ್ಪಾದನೆಯ ಕುರಿತಂತೆ ಅರ್ಹ ‘ಜನಿವಾರ’ ಪತ್ರಕರ್ತರಿಗೆ ಸ್ವ ಉದ್ಯೋಗ ತರಬೇತಿ, ಬಳಿಕ ಅವರಿಗೆ ಮಂಕೇಶ್ವರ ಪತ್ರಿಕೆಯಲ್ಲೇ ಕೆಲಸ. ಪಕ್ಷದಲ್ಲಿ ಟಿಕೆಟ್ ಸಿಗಬೇಕಾದರೆ ಅನುಭವ, ಹಿರಿತನ ಮುಖ್ಯವಾಗುತ್ತದೆ. ಮಂಕೇಶ್ವರ ಪತ್ರಿಕೆಯಲ್ಲಿ ಸರ್ಕ್ಯುಲೇಶನ್, ಜಾಹೀರಾತು ವಿಭಾಗದಲ್ಲಿ ಅಧಿಕ ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ಟಿಕೇಟು ನೀಡಲಾಗುತ್ತದೆ. ಚುನಾವಣೆಯಲ್ಲಿ ಸೋತರೂ, ಮಂಕೇಶ್ವರ ಬಸ್‌ಗಳಲ್ಲಿ ಓಡಾಡುವಾಗ ಸೋತ ಅಭ್ಯರ್ಥಿಗಳು ಟಿಕೆಟ್ ತೆಗೆಯ ಬೇಕೆಂದಿಲ್ಲ. ಚುನಾವಣೆಗೆ ನಿಲ್ಲುವುದಕ್ಕೆ ಠೇವಣಿ ಕಟ್ಟಲು ಪಕ್ಷ ಶೇ.5ರ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಠೇವಣಿ ಕಳೆದುಕೊಂಡರೆ ಪಕ್ಷಾಧ್ಯಕ್ಷರು ಜವಾಬ್ದಾರರಲ್ಲ.
***
ಬೇತಾಳ್ ಪಕ್ಷ
ಖನ್ನಡದ ಉಟ್ಟು ಓರಾಟಗಾರ ಬೇತಾಳ್ ನಾಗರಾಜ್ ಸ್ಥಾಪಿಸಿರುವ ಈ ಪಕ್ಷದ ಪ್ರಣಾಳಿಕೆ ಕೆಳಗಿನಂತಿದೆ.
1.ಸರಕಾರ ಅಸ್ತಿತ್ವಕ್ಕೆ ಬಂದರೆ ಬೆಂಗಳೂರು ನಗರಗಳಲ್ಲಿ ವಾಹನಗಳಿಗೆ ನಿಷೇಧ. ಎಮ್ಮೆ, ಕೋಣಗಳ ಮೂಲಕವೇ ಸಾರಿಗೆ ವ್ಯವಸ್ಥೆ.
2.ವಿವಿಧ ನಾಯಕರ ಪ್ರತಿಕತಿಗಳು ಸಬ್ಸಿಡಿಯಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ. ಪ್ರತಿಕತಿಗಳನ್ನು ಸುಟ್ಟು ಹಾಕಲು ಬೇಕಾದ ಸೀಮೆ ಎಣ್ಣೆಯನ್ನು ಓರಾಟಗಾರಿಗೆ ಪಡಿತರ ಕಾರ್ಡ್‌ಗಳ ಮೂಲಕ ಒದಗಿಸುವ ವ್ಯವಸ್ಥೆ.
3.ಪ್ರತಿದಿನ ಎರಡು ಗಂಟೆಗಳ ಕಾಲ ಎಲ್ಲ ಪ್ರತಿಭಟನೆಗಳಿಗೂ ರಸ್ತೆಗಳು ಮುಕ್ತ.
4.ಪ್ರತಿಭಟನೆಗಳ ಗುತ್ತಿಗೆಯನ್ನು ವಿದೇಶಿ ಕಂಪೆನಿಗಳಿಗೆ ಹರಾಜು ಮೂಲಕ ರಾಜ್ಯ ಬೊಕ್ಕಸಕ್ಕೆ ಹಣ.
5. ಪ್ರತಿ ಜಿಲ್ಲೆಯಲ್ಲಿ ಯುವಕ-ಯುವತಿಯರಿಗೆ ಪ್ರತಿಕತಿಗಳ ತಯಾರಿಕೆ ತರಬೇತಿ. ಈ ಮೂಲಕ ಗುಡಿ ಕೈಗಾರಿಕೆಗಳ ಅಭಿವದ್ಧಿ.
***
ಹೊಡಿ-ಬಡಿ-ಕೊಲ್ಲು ಪಕ್ಷ
ಇತ್ತೀಚೆಗೆ ಸಮಾನ ಮನಸ್ಕರು ಒಂದಾಗಿ ‘ಹೊಡಿಬಡಿಕೊಲ್ಲು ಪಕ್ಷ’ವನ್ನು ಕಟ್ಟಿದ್ದಾರೆ. ಬೇರೆ ಗುಂಪುಗಳಾಗಿ ‘ಹೊ-ಬ-ಕೊ’ ಮಾಡಿದಾಗ ಜನರು ತಿರುಗಿ ತದಕಲು ಶುರು ಮಾಡಿದುದರಿಂದ ಎಲ್ಲ ಹೊಡಿ ಬಡಿ ಕೊಲ್ಲು ಮನಸ್ಕರು ಒಂದಾಗಿ ಈ ಪಕ್ಷವನ್ನು ಕಟ್ಟಿದ್ದಾರೆ. ಅವರ ಪ್ರಣಾಳಿಕೆ ಕೆಳಗಿನಂತಿದೆ.
1. ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆಜಿ ತ್ರಿಶೂಲ, ಕತ್ತಿ, ಚಾಕು ಇತ್ಯಾದಿ ವಿತರಣೆ. ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲು ಗರಿಷ್ಠ ಸೀಮೆ ಎಣ್ಣೆ ನೀಡುವ ವ್ಯವಸ್ಥೆ. ‘ಕೇಸರಿ ಕಾರ್ಡ್’ನವರಿಗೆ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ನೀಡಲಾಗುತ್ತದೆ.
2.ಕನ್ನಡದ ಹೆಸರಿನಲ್ಲಿ ಅತ್ಯಧಿಕ ಅಂಗಡಿಗಳನ್ನು ಲೂಟಿ ಮಾಡಿದಾತನಿಗೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ, ಕರ್ನಾಟಕ ರತ್ನ ಮೊದಲಾದ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.
3. ಕಾರಾಗಹಗಳಲ್ಲಿ ಆಮೂಲಾಗ್ರ ಬದಲಾವಣೆ. ಎಲ್ಲ ಜೈಲು ಕೋಣೆಗಳನ್ನು ಹವಾನಿಂಯತ್ರಿತಗೊಳಿಸಲಾಗುವುದು. ಕೈದಿಗಳಿಗೆ ಉಚಿತ ಮೊಬೈಲ್‌ಗಳ ವ್ಯವಸ್ಥೆ. ಇದಕ್ಕೆ ಬೇಕಾದ ಸಿಮ್ ಕಾರ್ಡ್‌ಗಲಿಗಾಗಿ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಹಣ ಮೀಸಲು.
4.ಕೋಮುಗಲಭೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ, ಕಟ್ಟಡ ಕೆಡವುದು ಹೇಗೆ ಎನ್ನುವುದರ ಕುರಿತಂತೆ ಯುವಕರಿಗೆ ಗೋಡ್ಸೆ ರೋಜ್‌ಗಾರ್ ಯೋಜನೆಯಡಿಯಲ್ಲಿ ತರಬೇತಿ.
5. ಅತ್ಯಂತ ಹೆಚ್ಚು ಕೊಲೆಗಳನ್ನು ಮಾಡಿದಾತನಿಗೆ ಕುಂಬ್ಲೆ ಸುಂದರರಾವ್ ಹೆಸರಿನಲ್ಲಿ ಶ್ರೇಷ್ಠ ಕೊಲಾವಿದ ಪ್ರಶಸ್ತಿ.
(ಎಪ್ರಿಲ್ 20, 2008 ರವಿವಾರ)
ಮಂಗಳಗ್ರಹದಲ್ಲಿ ಮಹಿಳೆಯನ್ನು ಹೋಲುವ ಚಿತ್ರವೊಂದನ್ನು ಉಪಗ್ರಹವೊಂದು ತೆಗೆದಾಗ, "ಮಂಗಳ ಗ್ರಹದಲ್ಲಿ ಮಹಿಳೆ'' ಎಂದು ಮಾಧ್ಯಮಗಳಲ್ಲಿ ಬಾರೀ ಚರ್ಚೆಯಾಯಿತು. ಫೆಬ್ರವರಿ 17, 2008ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ.
ಮಂಗಳ ಗ್ರಹದಲ್ಲಿ ‘ಮಹಿಳೆ’ಯೊಬ್ಬಳಿದ್ದಾಳೆನ್ನುವ ಸಂಗತಿ ಭೂಮಿಯ ಜನರಿಗೆ ಸಾಕಷ್ಟು ಅಹ್ಲಾದವನ್ನು ನೀಡಿದ್ದು, ಮಂಗಳ ಗ್ರಹದ ಕುರಿತಂತೆ ಆಸಕ್ತಿಯನ್ನು ತೀವ್ರವಾಗುವಂತೆ ಮಾಡಿತು. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಈ ಸುದ್ದಿ ಕೇಳಿದ್ದೇ, ತಕ್ಷಣ ಖಗೋಳ ವಿಜ್ಞಾನಿಗಳಿಗೆ ಫೋನಾಯಿಸಿ, ‘‘ಆಕೆಯ ವಯಸ್ಸೆಷ್ಟಿರಬಹುದು? ಮದುವೆಯಾಗಿದೆಯೇ? ಆಕೆಯ ಮೊಬೈಲ್ ನಂಬರ್ ಸಿಕ್ಕುವ ಚಾನ್ಸ್ ಇದೆಯೇ? ತಕ್ಷಣ ನನಗೆ ಮಂಗಳ ಗ್ರಹಕ್ಕೊಂದು ಟಿಕೆಟ್ ಮಾಡಿ’’ ಎಂದರು.
ಸಿಕ್ಕರೂ ಸಿಕ್ಕಬಹುದು ಎಂದು ಯುವಕರೆಲ್ಲ ಕ್ರಿಕೆಟ್, ಸಿನಿಮಾ ಇತ್ಯಾದಿಗಳನ್ನೆಲ್ಲಾ ಬಿಟ್ಟು ಮಂಗಳಗ್ರಹದ ಅಧ್ಯಯನಕ್ಕೆ ತೊಡಗಿದರು. ಆ ಮಂಗಳಗ್ರಹದ ಹುಡುಗಿಯ ಜೊತೆಗೆ ಚಾಟಿಂಗ್‌ಗೆ ಪ್ರಯತ್ನಿಸಿದರು. ಗೂಗಲ್‌ಗೆ ಹೋಗಿ ‘ಮಂಗಳಾ’ ಎಂದು ಹುಡುಕುವುದಕ್ಕೆ ಶುರು ಹಚ್ಚಿದರು. ಚಾಟಿಂಗ್ ರೂಂಗೆ ಹೋಗಿ, ಮಂಗಳಾ ಎಂದು ಹೆಸರಿರುವ ಹುಡುಗಿಯರನ್ನೆಲ್ಲ ‘ನೀನಿರುವುದು ಮಂಗಳ ಗ್ರಹದಲ್ಲಿಯ?’ ಎಂದು ಆಸೆಯಿಂದ ಕೇಳತೊಡಗಿದರು. ಮಂಗಳದಲ್ಲಿ ‘ಮಹಿಳೆಯ ಚಿತ್ರ’ ಕಂಡುದರಿಂದ ಆ ಗ್ರಹವನ್ನು ನೋಡುವುದಕ್ಕೆ ಕ್ಯೂನಲ್ಲಿ ಜನ ನಿಂತರು. ಅಮೆರಿಕ ಮಂಗಳ ಗ್ರಹವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಿತು.
ಇದೇ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೂ ಆ ಗ್ರಹದ ಮೇಲೆ ಆಸಕ್ತಿ ಹೆಚ್ಚಿತು. ಪೊಟೊದಲ್ಲಿ ಕಂಡ ಮಹಿಳೆ ‘ಬುಡಕಟ್ಟು ಮಹಿಳೆ’ಯ ತರಹ ಕಂಡುದರಿಂದ ಕ್ರಿಶ್ಚಿಯನ್ ಪಾದ್ರಿಗಳು ಶಿಲುಬೆಯ ಜೊತೆಗೆ ಮಂಗಳ ಗ್ರಹಕ್ಕೆ ಹೊರಟರು. ಪಾದ್ರಿಗಳು ಹೊರಟಿರುವುದನ್ನು ಕಂಡದ್ದೇ ಒರಿಸ್ಸಾದ ಸಂಘಪರಿವಾರದ ಕಾರ್ಯಕರ್ತರು ತ್ರಿಶೂಲ ಹಿಡಿದು ಅವರ ಹಿಂದೆಯೇ ಹೊರಟರು.
ಭಾರತದ ಮುಸ್ಲಿಮರೆಲ್ಲ ಹಣ ಸಂಗ್ರಹಿಸಿ ಅಲ್ಲೊಂದು ಮಸೀದಿ ಕಟ್ಟುವುದು ಎಂದು ತೀರ್ಮಾನಿಸಿದರು. ಮಂಗಳ ಗ್ರಹದ ಮಹಿಳೆ ಮಸೀದಿಗೆ ಬರಬಹುದೋ, ಬೇಡವೋ ಎನ್ನುವ ಕುರಿತಂತೆ ಮುಸ್ಲಿಮರೊಳಗೇ ಭಿನ್ನಮತ ಸಷ್ಟಿಯಾಯಿತು. ಕೊನೆಗೂ ಅಮತಶಿಲೆಯನ್ನು ಹಾಸಿ ಒಂದು ಮಸೀದಿಯನ್ನು ಕಟ್ಟಿದರು. ಇನ್ನೇನು ಅದರೊಳಗೆ ಪ್ರಾರ್ಥನೆ ಮಾಡಬೇಕು ಎನ್ನುವಷ್ಟರಲ್ಲಿ ಸಂಘಪರಿವಾರದ ನಾಯಕರು ತಕರಾರು ತೆಗೆದರು. ಈ ಮಸೀದಿಯನ್ನು ಮಂಗಳ ಗ್ರಹದ ಪುರಾತನ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಮಂಗಳ ಗ್ರಹದಾದ್ಯಂತ ರಥಯಾತ್ರೆ ಆರಂಭಿಸಿದರು.
‘‘ಇದಕ್ಕೆ ನಿಮ್ಮಲ್ಲಿ ಸಾಕ್ಷಿಯೇನಿದೆ?’’ ಮುಸ್ಲಿಂ ಮುಖಂಡರು ಕೇಳಿದರು. ಪ್ರಗತಿಪರರು ಅವರ ಜೊತೆ ನಿಂತರು.
‘‘ಸೀತೆ ಹುಟ್ಟಿದ್ದು ಮಂಗಳಗ್ರಹದಲ್ಲಿ. ಉಪಗ್ರಹವೊಂದು ಮೊತ್ತ ಮೊದಲು ತೆಗೆದ ಮಂಗಳಗ್ರಹದ ಮಹಿಳೆಯ ಚಿತ್ರ ರಾಮಾಯಣದ ಸೀತೆಯ ಚಿತ್ರವಾಗಿದೆ’’. ಎಂದು ಸಂಘ ಪರಿವಾರದ ನಾಯಕರು ವಾದಿಸಿದರು.
‘‘ರಾಮಾಯಣಕ್ಕೂ ಮಂಗಳಗ್ರಹಕ್ಕೂ ಏನು ಸಂಬಂಧ’’ ಎಂದು ಕಮ್ಯುನಿಷ್ಟ್ ಇತಿಹಾಸ ತಜ್ಞರು ಕೇಳಿ ತಮಾಷೆ ಮಾಡತೊಡಗಿದ್ದರು.
ಸಂಘಪರಿವಾರದ ಇತಿಹಾಸ ತಜ್ಞರು ತಕ್ಷಣ ಎಚ್ಚರವಾದರು. ಬೆಂಗಳೂರಿನಿಂದ ತಕ್ಷಣ ಚಿದಾನಂದಮೂರ್ತಿಗೆ ಬುಲಾವ್ ಹೋಯಿತು. ಅವರು ಸಂಶೋಧನೆ ಮಾಡಿದರು. ‘‘ರಾಮಾಯಣ ‘ಮಂಗ’ಗಳಿಂದ ಈ ಗ್ರಹಕ್ಕೆ ‘ಮಂಗ’ಳ ಎಂಬ ಹೆಸರು ಬಂತು. ಮಂಗಗಳ ಗ್ರಹ ಮಂಗಳ ಗ್ರಹ’’ ಎಂದು ಚಿದಾನಂದ ಮೂರ್ತಿ ಕಂಡು ಹಿಡಿದರು. ಸಂಘಪರಿವಾರದ ನಾಯಕರು ಮಂಗಗಳಂತೆ ಕುಣಿದಾಡಿದರು.
‘‘ಹಾಗಾದ್ರೆ ಸೇತು ಸಮುದ್ರಂನ ಕತೆಯೇನು?’’ ಎಂದು ಕೇಳಿದರು ಕೆಲವರು.
‘‘ಮಂಗಗಳು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಸೇತುವೆ ಕಟ್ಟಿದವು. ಈಗಲೂ ಅದರ ಪಳೆಯುಳಿಕೆ ಇದೆ...’’ ಎಂದರು. ‘‘ತೇತ್ರಾಯುಗದಲ್ಲಿ ಮತ್ತು ದ್ವಾಪರಯುಗದಲ್ಲಿ ಮಂಗಳ ಮತ್ತು ಭೂಮಿಯ ನಡುವೆ ಈ ಸೇತುವೆಯಲ್ಲೇ ಎಲ್ಲರೂ ಓಡಾಡುತ್ತಿದ್ದರು...’’
‘‘ಎಲ್ಲಿದೆ ತೋರಿಸಿ... ಅದರ ಪಳೆಯುಳಿಕೆಯನ್ನು...’’ ಎಂದು ಕಮ್ಯುನಿಷ್ಟರು ಕೇಳಿದರು.
‘‘ಅದು ಬರಿ ಕಣ್ಣಿಗೆ ಕಾಣುವುದಿಲ್ಲ. ನಮ್ಮದೇ ವಿಶೇಷ ವಿಜ್ಞಾನಿಯೊಬ್ಬರು ಅದರ ಬಗ್ಗೆ ಅಧ್ಯಯನ ನಡೆಸಿದ್ದಾರೆ...’’ ಎಂದರು.
ಚಿದಾನಂದ ಮೂರ್ತಿ ಮಂಗಳದಲ್ಲಿ ಒಂದು ಸೈಟ್ ಮಾಡಿ ಸೆಟ್ಲಾದದ್ದೇ, ಒಬ್ಬಂಟಿಯಾಗಿ ಬದುಕುವುದಕ್ಕೆ ಬೋರಾಯಿತು. ಒಂದು ಮದುವೆಯಾದರೆ ಏನು? ಎಂದು ಯೋಚಿಸಿದರು. ಮಂಗಳ ಗ್ರಹದಲ್ಲಿ ತಕ್ಕ ಜೋಡಿ ಇಲ್ಲ ಅನ್ನಿಸಿತು. ಕೊನೆಗೆ ಅವರು ಎಸ್.ಎಲ್. ಭೈರಪ್ಪನವರನ್ನು ಆಹ್ವಾನಿಸಿದರು. ಅವರಿಬ್ಬರು ಜೊತೆಯಾಗಿ ಸುಖ ಸಂಸಾರ ನಡೆಸತೊಡಗಿದರು. ಭೈರಪ್ಪರು ಮಂಗಳ ಗ್ರಹಕ್ಕೆ ಬಂದವರೇ, ಅಲ್ಲಿನ ಪ್ರತೀ ಅವಶೇಷವನ್ನು ನೋಡಿ ಕಣ್ಣೀರು ಸುರಿಸತೊಡಗಿದರು. ಅದೆಲ್ಲವೂ ಔರಂಗಜೇಬನ ದಾಳಿಯಿಂದ ಅಳಿದುಳಿದ ಅವಶೇಷದಂತೆ ಅವರಿಗೆ ಕಂಡಿತು. ಅಲ್ಲಿ ಔರಂಗಜೇಬ್ ಏನನ್ನೆಲ್ಲ ಪುಡಿ ಮಾಡಿದ್ದಾನೆ. ಎಷ್ಟು ದೇವಸ್ಥಾನ ಒಡೆದಿದ್ದಾನೆ ಎನ್ನುವುದನ್ನೆಲ್ಲ ‘ಹಧ್ಯಯನ’ ನಡೆಸಿ ಬರೆಯತೊಡಗಿದರು. ಆ ಕಾದಂಬರಿಗೆ ‘ಆ ವಣ’ ಎಂದು ಹೆಸರಿಟ್ಟರು. ಉಪಗಹದಲ್ಲಿ ಕಂಡ ಮಂಗಳಗಹದ ಮೊದಲ ಮಹಿಳೆಯನ್ನೇ ತನ್ನ ಕಥಾನಾಯಕಿಯನ್ನಾಗಿಸಿದರು. ಆ ಮಹಿಳೆ ‘ಮಾಂಸ’ ತಿನ್ನುತ್ತಿರಲಿಲ್ಲ. ಸಾಬರನ್ನು ಮುಟ್ಟುತ್ತಿರಲಿಲ್ಲ...’’ ಎಂದೆಲ್ಲ ವರ್ಣಿಸಿದರು.
‘ಆ ವಣ’ ಮಂಗಳ ಗ್ರಹವನ್ನು ಗಬ್ಬೆಬ್ಬಿಸುತ್ತಿದ್ದ ಹಾಗೆಯೇ, ಕೋಮು ಸೌಹಾರ್ದ ವೇದಿಕೆಯ ತಂಡ ಅತ್ತ ಧಾವಿಸಿತು. ‘ಆ ವಣ’ದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತು. ಅವರನ್ನು ಕಂಡದ್ದೇ ‘ಮಂಗಳಗಹದಲ್ಲಿ ನಕ್ಸಲೈಟ್‌ಗಳು’ ಎಂದು ಪತ್ರಿಕೆಗಳು ಬರೆಯತೊಡಗಿದವು. ತಕ್ಷಣ ಬಿದರಿಗೆ ಬುಲಾವ್ ಹೋಯಿತು. ಬಿದರಿ ತನ್ನ ನಕ್ಸಲ್ ಸ್ಕ್ವಾಡ್ ಜೊತೆಗೆ ಹೊರಟೇ ಬಿಟ್ಟರು. ಬಿದರಿಯ ಹಿಂದೆ ಎಲ್ಲ ಪತ್ರಕರ್ತರು ಹೊರಟು ಬಿಟ್ಟರು.
ಅಷ್ಟರಲ್ಲಿ ಮಂಗಳ ಗಹ ತನ್ನ ಕೈ ತಪ್ಪುತ್ತದೆ ಎನ್ನುವುದು ಅಮೆರಿಕ ಮನಗಂಡಿತು. ‘‘ಮಂಗಳ ಗ್ರಹದಲ್ಲಿ ಉಸಾಮಬಿನ್ ಲಾದೆನ್ ಅಡಗಿದ್ದಾನೆ...’’ ಎಂದು ತನ್ನ ಸೈನ್ಯವನ್ನೆಲ್ಲ ತಂದು ಅಲ್ಲಿ ನಿಲ್ಲಿಸಿತು. ಅಲ್ಲಿಗೆ ಮಂಗಳ ಗ್ರಹದ ‘ಗ್ರಹ’ಚಾರ ಸಂಪೂರ್ಣ ಕೆಟ್ಟಿತು.
***
ಬೆಂಗಳೂರಿನಲ್ಲಿ ಕಂಡ ಕಂಡ ರಾಜಕಾರಣಿಗಳ ಹಿಂದೆ ಸುತ್ತುತ್ತಿದ್ದ ಪತ್ರಕರ್ತ ಎಂಜಲು ಕಾಸಿಯನ್ನು ಸಂಪಾದಕರು ನೇರ ಮಂಗಳಗ್ರಹಕ್ಕೆ ವರ್ಗಾವಣೆ ಮಾಡಿಬಿಟ್ಟರು. ಕಾಸಿ ಮಂಗಳಗ್ರಹದಲ್ಲಿ ‘ಸ್ಕೂಪ’ನ್ನು ಹುಡುಕತೊಡಗಿದ. ಉಪಗ್ರಹ ಮೊತ್ತ ಮೊದಲ ಬಾರಿ ತೆಗೆದ ಮಹಿಳೆಯ ಚಿತ್ರ ಅವನ ನೆನಪಲ್ಲಿತ್ತು. ಆ ಮಹಿಳೆಯನ್ನು ಹುಡುಕಿ ತೆಗೆದು ಆಕೆಯ ಇಂಟರ್ಯೂ ಮಾಡಿದರೆ ಹೇಗೆ? ಎಂದು ಹೊಳೆದದ್ದೇ, ಮಂಗಳ ಗ್ರಹದ, ಗುಡ್ಡ, ಕುಳಿ ಯಾವುದನ್ನೂ ಬಿಡದೇ ಹುಡುಕಾಡ ತೊಡಗಿದ. ಹೀಗೆ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆಯೇ ಗುಡ್ಡದ ಕೊನೆಗೆ ತಲೆಗೆದರಿದ ಒಂದು ಹೆಂಗಸು ಏನನ್ನೋ ಯೋಚಿಸುತ್ತಾ ಕುಳಿತ್ತಿತ್ತು. ನೋಡಿದರೆ, ಅದೇ ಹೆಂಗಸು! ಉಪಗ್ರಹ ತೆಗೆದ ಪೋಟೊದಲ್ಲಿದ್ದ ಹೆಂಗಸು ಅದಾಗಿತ್ತು!
ಕಾಸಿ ಇಂಟರ್ಯೂಗೆ ರೆಡಿಯಾದ. ‘‘ಯಾರಮ್ಮಾ ನೀನು’’!
ಹೆಂಗಸು ಕಾಸಿಯನ್ನು ನೋಡಿದ್ದೇ ‘‘ನೀನು ಇಲ್ಲಿಗೂ ಬಂದೆಯಾ?’’ ಎಂದಿತು.
ಕಾಸಿಗೆ ಅಚ್ಚರಿ. ‘‘ಅರೆ! ಈ ಹೆಂಗಸಿಗೆ ನನ್ನ ಪರಿಚಯವಿದೆ’’ ‘‘ನಿನಗೆ ನನ್ನ ಪರಿಚಯವಿದೆಯೇ?’’ ಕೇಳಿದ.
‘‘ಇಲ್ಲದೇ ಏನು? ನಿನ್ನದು ಮಾತ್ರ ಅಲ್ಲ. ಭೂಮಿಯಿಂದ ಇಲ್ಲಿಗೆ ಬಂದಿರುವ ಎಲ್ಲರ ಪರಿಚಯವೂ ಇದೆ’’
‘‘ಅದು ಹೇಗೆ?’’
ಮಹಿಳೆ ನಿಟ್ಟುಸಿರಿಟ್ಟು ಹೇಳಿದಳು ‘‘ನಾನು ಕೂಡಾ ಭೂಮಿಯವಳೇ?’’
ಕಾಸಿ ಅಚ್ಚರಿಯಿಂದ ನೋಡತೊಡಗಿದ. ಮಹಿಳೆ ಹೇಳಿದಳು ‘‘ಭೂಮಿಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯದಿಂದ ಪಾರಾಗಿ ಬದುಕಿದೆಯಾ ಬಡ ಜೀವವೇ ಎಂದು ಈ ಮಂಗಳ ಗ್ರಹದಲ್ಲಿ ಬಂದು ಒಂದಿಷ್ಟು ನೆಮ್ಮದಿಯಿಂದ ಇದ್ದೆ. ಆದರೆ ಅಷ್ಟರಲ್ಲಿ ಆ ಬೋ... ಮಗಂದು... ಉಪಗ್ರಹ ನನ್ನ ಚಿತ್ರ ತೆಗೆದು ಕಳುಹಿಸಿತು. ಈಗ ನೋಡಿದರೆ ಇಲ್ಲಿಗೂ ಬಂದು ನನ್ನನ್ನು ಕಾಡುತ್ತಿದ್ದಾರೆ...ಇನ್ನು ಬುಧ ಗ್ರಹವೋ, ಶನಿಗ್ರಹವೋ ಹುಡುಕಬೇಕು... ಈ ಶನಿಗಳಿಂದ ಪಾರಾಗುವುದಕ್ಕೆ...’’
ಕಾಸಿ ಕೇಳಿದ ‘‘ನಿನ್ನ ಹೆಸರೇನಮ್ಮ?’’
ಹೆಂಗಸು ಕಾಸಿಯನ್ನು ದುರುಗುಟ್ಟಿ ನೋಡಿ ಹೇಳಿತು ‘‘ಅದ್ಯಾವ ಸೀಮೆಯ ಪತ್ರಕರ್ತನೋ ನೀನು... ಇನ್ನೂ ಗೊತ್ತಾಗಲಿಲ್ಲವೇ ನಾನು ಯಾರೆಂದು? ನಾನೇ ಭಾರತ ಮಾತೆ. ಅಲ್ಲಿಂದ ಪಾರಾಗಿ ಇಲ್ಲಿ ಮಂಗಳ ಗ್ರಹದಲ್ಲಿ ಸ್ವಲ್ಪ ಸಮಯ ನೆಮ್ಮದಿಯಿಂದ ಇದ್ದೆ. ಇನ್ನು ಅದೂ ಸಾಧ್ಯವಿಲ್ಲ...’’
‘‘ಭಾರತ ಮಾತೆ’’ ಎಂಬ ಶಬ್ದ ಕೇಳಿದ್ದೇ... ಯಾರೋ ಓಡೋಡಿ ಬಂದಂತಾಯ್ತು. ಕಾಸಿ ತಿರುಗಿ ನೋಡಿದರೆ ಚಿತ್ರ ಕಲಾವಿದ ಎಂ.ಎಫ್.ಹುಸೇನರು ಕೈಯಲ್ಲಿ ಕುಂಚ ಹಿಡಿದು ಓಡೋಡಿ ಬರುತ್ತಿದ್ದರು. ಹುಸೇನರನ್ನು ನೋಡಿದ್ದೇ... ‘‘ಅಯ್ಯೋ... ನನ್ನ ಅಳಿದುಳಿದ ಮಾನವನ್ನು ತೆಗೆಯಲು ಇವನೂ ಬಂದಿದ್ದಾನಲ್ಲಪ್ಪ...’’ ಎಂದು ಭಾರತ ಮಾತೆ ಸೆರಗಿನಿಂದ ಎದೆಯನ್ನು ಮುಚ್ಚಿಕೊಂಡು ಓಡತೊಡಗಿದಳು.
(ಫೆಬ್ರವರಿ 17, 2008, ರವಿವಾರ)