Thursday, July 23, 2015

ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿ!

ಯುಪಿಎ ಸರಕಾರ ದೇಶವನ್ನು ಆಳುತ್ತಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಬರೆದ ಬುಡಬುಡಿಕೆ. ಜುಲೈ -11-2010 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗದ್ದೆಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರು. ಪತ್ನಿ ಮನಮೋಹಿನಿ ತಂಬಿಗೆ ತುಂಬಾ ಕೋಕಾಕೋಲಾ ಪಾನೀಯ ಮತ್ತು ನೆಂಜಿಕೊಳ್ಳುವುದಕ್ಕೆ ಪಾಪ್‌ಕಾರ್ನ್ ತಂದು ಕೊಟ್ಟರು.
ಮನಮೋಹಿನಿ ವಯ್ಯರದಿಂದ ಕೇಳಿದಳು ‘‘ಈ ಸರ್ತಿ ಯಾವ ಬೆಳೆ ಹಾಕಿದ್ದೀರಿ....’’
 ‘‘ರಾಗಿ, ಗೋದಿ, ಟೋಮೆಟೋ, ಆಲುಗಡ್ಡೇ ಬೆಳೆದು ಸಾಕಾಯ್ತು. ಅದಕ್ಕೆ ಕೆಳಗಿನ ಗದ್ದೆಯಲ್ಲಿ ಬ್ಯಾಟ್‌ಗಳನ್ನು ನೆಟ್ಟಿದ್ದೇನೆ. ಮೇಲಿನ ಗದ್ದೆಯ ತುಂಬಾ ರನ್‌ಗಳ ಬೀಜವನ್ನು ಬಿತ್ತಿದ್ದೇನೆ...ಈ ಬಾರಿ ಒಳ್ಳೆಯ ಬೆಳೆ ಬರಬಹುದು ಎನ್ನುವುದು. ನಿರೀಕ್ಷೆ...’’ ಶರದ್ ಪವಾರ್ ಟವೆಲ್‌ನಿಂದ ಮುಖ ಒರೆಸಿ ಕೊಳ್ಳುತ್ತಾ ನುಡಿದರು.
ಮನಮೋಹಿನಿ ಕೇಳಿದಳು ‘‘ಬೆಳೆ ಬೆಳೆಸುವುದಕ್ಕೆ ಗೊಬ್ಬರಕ್ಕೇನು ಮಾಡ್ತೀರಿ...’’
ಪವಾರ್ ನುಡಿದರು.‘‘ಈಗಾಗಲೇ ಪೆಪ್ಸಿ, ಕೋಲಾ ಕಂಪೆನಿಗಳೊಂದಿಗೆ ಮಾತನಾಡಿದ್ದೇನೆ. ಒಂದೇ ತಿಂಗಳಲ್ಲಿ ಒಳ್ಳೆಯ ಬ್ಯಾಟ್‌ಗಳ ಫಸಲುಗಳನ್ನು ನೀಡುವ ಹಾಗೆ ಉತ್ತಮ ಗೊಬ್ಬರಗಳನ್ನು ಅವರು ಒದಗಿಸುತ್ತಾರಂತೆ....’’
‘‘ಹೊಲ ಉಳುವುದಕ್ಕೆ ಎತ್ತುಗಳು ಬೇಕಲ್ಲ...ಏನು ಮಾಡುತ್ತೀರಿ...’’ ಮನಮೋಹಿನಿ ಕೇಳಿದಳು.
ಶರದ್ ಪವಾರ್ ಯಾವುದೇ ಆತಂಕವಿಲ್ಲದೆ ನುಡಿದರು ‘‘ಅದಕ್ಕೇನಾಗಬೇಕು. ಎತ್ತುಗಳ ಬದಲಿಗೆ ದೇಶದ ರೈತರನ್ನೇ ಹೂಡಿ ಗದ್ದೆ ಉತ್ತರೆ ಆಯಿತು. ಬೇಕಾದಷ್ಟು ರೈತರು ಇನ್ನೂ ಆತ್ಮಹತ್ಯೆ ಮಾಡದೇ ಉಳಿದಿದ್ದಾರೆ. ಅವರನ್ನು ನೊಗಕ್ಕೆ ಕಟ್ಟಿ ಚಾಟಿಯಿಂದ ಎರಡು ಬಾರಿಸಿದರೆ, ಸಂಜೆಯೊಳಗೆ ಇಡೀ ಗದ್ದೆಯನ್ನು ಅಚ್ಚುಕಟ್ಟಾಗಿ ಉತ್ತು ಕೊಡುತ್ತಾರೆ...’’ ತನ್ನ ಗಂಡನ ಜಾಣತನಕ್ಕೆ ಮನಮೋಹನಿಗೆ ಸಂತೋಷ ಉಕ್ಕಿ ಬಂದು ಜಾನಪದ ಗೀತೆಯನ್ನು ಹಾಡುತ್ತಾ... ರಾಗಿ ಬೀಸುವ ಕಲ್ಲಿಗೆ ಒಂದಿಷ್ಟು ರನ್ನುಗಳನ್ನು ಹಾಕಿ ಬೀಸತೊಡಗಿದಳು...
‘‘ಮುಂಜಾನೆ ಎದ್ದು ಯಾರ್ಯಾರ ನೆನೆಯಲಿ
ತೆಂಡೂಲ್ಕರ ನಿನ್ನ ನೆನೆದೇನಾ! ತೆಂಡೂಲ್ಕರಾ ನಿನ್ನ
ನೆನೆದಾನ ನನ್ನೆಜಮಾನ ಐಸಿಸಿ ಅಧ್ಯಕ್ಷ ಆದಾನ...’’
ಎನ್ನುತ್ತಾ ಒರಳು ಕಲ್ಲಿಗೆ ಒಂದಿಷ್ಟು ಸಿಕ್ಸರ್‌ಗಳನ್ನು, ಫೋರ್‌ಗಳನ್ನು ಹಾಕಿ ಒನಕೆಯಿಂದ ಕುಟ್ಟುತ್ತಾ ಹಾಡತೊಡಗಿದಳು...
‘‘ಇವನೇ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು...
ಈಗ ಮಾತ್ರ ಆಲದ ಮರದಲ್ಲಿ ನೇಣು ಹಾಕಿ ಮಡಿವನು...’’ ಹೀಗೆ ಜಾನಪದ ಗೀತೆಯನ್ನು ಹಾಡುತ್ತಾ ಅಡುಗೆಗೆ ತಯಾರು ಮಾಡಿದಳು.
ಹಿತ್ತಲಿಗೆ ಹೋಗಿ ಬೆಳೆಸಿದ್ದ ಬಗೆ ಬಗೆಯ ತರಕಾರಿಗಳನ್ನು ನೋಡಿದಳು. ಹಸನಾಗಿ ಬೆಳೆದ ಒಂದೆರಡು ಬೌಂಡರಿಗಳನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದು ಅಡುಗೆಗೆ ಸಾಂಬಾರು ಮಾಡಳು ಹೊರಟಳು. ಗಂಡ ಗದ್ದೆಯಲ್ಲಿ ದುಡಿದು ಬಂದಿದ್ದಾನೆ. ಆತನಿಗೆ ಬಿಸಿ ಬಿಸಿ ಅನ್ನ, ಸಾಂಬಾರು ನೀಡಬೇಕಲ್ಲ. ಅದಕ್ಕಾಗಿ ಬೌಂಡರಿಯನ್ನು ಚೆನ್ನಾಗಿ ಹಚ್ಚಿ ಅದನ್ನು ಮಡಕೆಗೆ ಹಾಕಿದಳು. ಪಲ್ಯಕ್ಕೆ ಏನು ಮಾಡುವುದು? ಎಂದು ಯೋಚಿಸಿದಳು. ಆಗಷ್ಟೇ ಮಾರುಕಟ್ಟೆಯಿಂದ ಕೊಂಡು ತಂದಿದ್ದ ಒಂದಿಷ್ಟು ಸ್ಪಿನ್ನರ್‌ಗಳಿದ್ದವು. ಅವುಗಳನ್ನು ಹಚ್ಚಿ, ಪಲ್ಯ ಮಾಡಿ ಬಡಿಸುವುದು ಎಂದು ಮನಮೋಹಿನಿ ಯೋಚಿಸಿದಳು. ಅಂತೂ ತುಸು ಹೊತ್ತಲ್ಲೇ, ರನ್ನುಗಳಿಂದ ಮಾಡಿದ ಬಿಸಿ ಬಿಸಿ ಅನ್ನ ಸಿದ್ಧವಾಯಿತು. ಬೌಂಡರಿಗಳಿಂದ ಮಾಡಿದ ಸಾಂಬಾರ್ ಮತ್ತು ಸ್ಪಿನ್ನರ್‌ಗಳಿಂದ ಮಾಡಿದ ಪಲ್ಯದ ಘಮಘಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ, ಶರದ್ ಪವಾರ್ ಊಟಕ್ಕೆ ಅಣಿಯಾದರು.
ಗಂಡ ಊಟಕ್ಕೆ ಕುಳಿತಾಗ ಪತ್ನಿ ಮನಮೋಹಿನಿ ಮೆಲ್ಲ ಮಾತಿಗೆಳೆದಳು ‘‘ಮನೆಯಲ್ಲಿ ರನ್‌ಗಳ ಸಂಗ್ರಹ ಮುಗಿಯುತ್ತಾ ಬಂದಿದೆ...ಪೇಟೆಯಲ್ಲಿ ಒಳ್ಳೆಯ ಕ್ವಾಲಿಟಿಯ ರನ್‌ಗಳಿದ್ದರೆ ಎರಡು ಮುಡಿ ತೆಗೆದುಕೊಂಡು ಬನ್ನಿ...’’
  ಘಮಘಮಿಸುವ ರನ್‌ಗಳನ್ನು ಉಣ್ಣುತ್ತಾ ಪವಾರ್ ನುಡಿದರು ‘‘ನೋಡು...ಕೃಷಿ ಸಚಿವರ ಮನೆಯಲ್ಲೇ ಊಟಕ್ಕೆ ರನ್‌ಗಳಿಲ್ಲ ಎಂದರೆ ದೇಶ ನಕ್ಕೀತು. ಸಚಿನ್ ತೆಂಡೂಲ್ಕರ್ ಕೈಯಲ್ಲಿ ಹೇಳಿದ್ದೇನೆ....ಅವನು ಈಗಾಗಲೇ ಸಂಗ್ರಹಿಸಿಟ್ಟಿರುವ ರನ್‌ಗಳಿಂದ ಒಂದು ಹತ್ತು ಮುಡಿ ರನ್‌ಗಳನ್ನು ಕಳುಹಿಸುತ್ತಾನಂತೆ... ಹಾಗೆಯೇ ಪದಾರ್ಥಕ್ಕೆ, ಗೊಜ್ಜಿಗೆ ಒಂದಿಷ್ಟು ಸ್ಪಿನ್ನುಗಳನ್ನು, ಗೂಗ್ಲಿಗಳನ್ನು ಕಳುಹಿಸುವುದಕ್ಕೆ ಕುಂಬ್ಳೆ, ಪಠಾಣ್‌ಗಳ ಕೈಯಲ್ಲಿ ಹೇಳಿದ್ದೇನೆ...ಅವರು ಕಳುಹಿಸಬಹುದು....’’
ಅಷ್ಟರಲ್ಲಿ ತಟ್ಟನೆ ನೆನಪಾಗಿ ಮನಮೋಹಿನಿ ನುಡಿದಳು ‘‘ಎಲ್ಲಾದರೂ ಸಿಕ್ಕಿದರೆ ಮಿಡಿ ಸಿಕ್ಸರ್‌ಗಳು ಸಿಕ್ಕಿದರೆ ತನ್ನಿ...ಉಪ್ಪಿನಕಾಯಿ ಹಾಕುವುದಕ್ಕೆ ಆದೀತು...ರನ್‌ಗಳ ಗಂಜಿ ಮಾಡಿದರೆ ಅದನ್ನು ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿಯ ಜೊತೆ ಉಣ್ಣುವುದಕ್ಕೆ ಭಾರೀ ಚೆನ್ನಾಗಿರುತ್ತದೆ...ಸಾಂಬಾರ್, ಪಲ್ಯ ಯಾವುದೂ ಬೇಕಾಗಿಲ್ಲ...ಈ ಉಪ್ಪಿನ ಕಾಯಿ ಇದ್ದರೆ...’’
ಮಿಡಿ ಸಿಕ್ಸರ್‌ಗಳ ಉಪ್ಪಿನಕಾಯಿ! ಶರದ್ ಪವಾರ್ ಅವರ ಬಾಯಿಯಲ್ಲಿ ನೀರೂರಿತು ‘‘ಸರಿ..ಸರಿ...ಹರ್ಬಜನ್ ಸಿಂಗ್‌ಗೆ ಹೇಳುತ್ತೇನೆ...ಅವನತ್ರ ಒಂದಿಷ್ಟು ಸಿಕ್ಸರ್‌ಗಳು ಸ್ಟಾಕಿದೆ ಅಂತ ಕೇಳಿದ್ದೇನೆ.... ಕಳುಹಿಸಬಹುದು...’’
ಮನಮೋಹಿನಿ, ಮನೆಯ ವಿಷಯ ಬಿಟ್ಟು ದೇಶದ ವಿಷಯ ಮಾತನಾಡತೊಡಗಿದಳು ‘‘ಹಗಳಿರುಳೂ ನೀವು ಗದ್ದೆಯಲ್ಲಿ ದುಡಿಯುತ್ತೀರಿ. ಮನೆಯ ಹಿತ್ತಲಿನ ಗದ್ದೆಯಲ್ಲಿ ಬ್ಯಾಟ್‌ಗಳ ನಾಟಿ ಚೆನ್ನಾಗಿ ಆಗಿದೆ. ರನ್‌ಗಳು ಈಗಾಗಲೇ ಮೊಳಕೆ ಬರುವುದಕ್ಕೆ ಆರಂಭಿಸಿವೆ. ಆದರೂ ನೀವು ಕೃಷಿ ಸಚಿವ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಊರವರು ಆಡಿಕೊಳ್ಳುತ್ತಿದ್ದಾರಲ್ಲ....’’
ಶರದ್ ಪವಾರ್ ಒಮ್ಮೆಲೆ ಸಿಟ್ಟಾದರು. ‘‘ಊರವರ ಮಾತಿಗೆ ನೀನೇಕೆ ತಲೆಕೆಡಿಸಿ ಕೊಳ್ಳುತ್ತಿ. ಅವರು ಸಾವಿರ ಆಡುತ್ತಾರೆ....’’ ಎಂದವರೇ ಊಟ ಬಿಟ್ಟು ಎದ್ದರು. ಮನ ಮೋಹಿನಿ ಆತಂಕದಿಂದ ‘‘ಅರೇ! ಊರವರ ಸಿಟ್ಟನ್ನು ಊಟದ ಮೇಲೆ ಯಾಕೆ ತೀರಿಸಿ ಕೊಳ್ಳುತ್ತೀರಿ...ಜನ ಆಡುತ್ತಾರೆ ಎಂದೆ ಅಷ್ಟೇ...’’
ಶರದ್ ಪವಾರ್ ಗಂಭೀರವಾಗಿ ಹೇಳಿದರು ‘‘ಈ ರೈತರು ಕೃಷಿ ಸಚಿವ ಹೇಳಿದ್ದನ್ನು ಯಾವತ್ತಾದರೂ ಸರಿಯಾಗಿ ಪಾಲಿಸಿದ್ದಾರ? ದೂರು ಮಾತ್ರ ನನಗೆ. ಭತ್ತ, ಗೋದಿ, ಟೊಮೆಟೋ ಬೆಳೆಯುವುದನ್ನು ನಿಲ್ಲಿಸಲಿ. ನನ್ನ ಹಾಗೆ ರನ್‌ಗಳನ್ನು ಉತ್ಪಾದಿಸಲಿ. ಗದ್ದೆಗಳಲ್ಲಿ ಬ್ಯಾಟ್ ಗಳನ್ನು ನೆಟ್ಟು ಫಸಲುಗಳನ್ನು ತೆಗೆಯಲಿ. ಅಂತಾರಾಷ್ಟ್ರೀಯ ಮಾರುಕಟ್ಟೆ ಇರುವ ಬೆಳೆಗಳು ಇವು. ಅದು ಬಿಟ್ಟು ಇನ್ನೂ ಓಬಿರಾಯನ ಕಾಲದ ಭತ್ತ, ಗೋದಿ ಬೆಳೆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿ ಯಾಗದೆ ಇನ್ನೇನಾಗುತ್ತದೆ? ಹಳ್ಳಿಗಳಲ್ಲಿ ರೈತರ ಕೈಯಲ್ಲಿ ಭೂಮಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಾ ಇದೆ....ಇಂದು ನಮ್ಮ ಯುವಕರು ಕ್ರಿಕೆಟ್ ಆಡಬೇಕೆಂದರೆ ಒಂದು ಸರಿಯಾದ ಮೈದಾನ ಇಲ್ಲ. ಅವರಿಗೆ ಅನುಕೂಲ ವಾಗುವಂತೆ ಮೈದಾನಗಳನ್ನು ಒದಗಿಸಿಕೊಡುವ ಎಂದರೆ ಅದಕ್ಕೆ ಈ ರೈತರು ಭೂಮಿಯನ್ನು ಕೊಡಬೇಕಲ್ಲ...ದೇಶದ ಹಿತಕ್ಕಾಗಿ...ದೇಶದ ಕೃಷಿಯ ಹಿತಕ್ಕಾಗಿ ಈ ರೈತರ ಕೈಯಿಂದ ಭೂಮಿಯನ್ನು ನಾವು ಪೊಲೀಸರನ್ನು ಮುಂದಿಟ್ಟುಕೊಂಡು ಮನವೊಲಿಸಿ ತೆಗೆದು ಕೊಂಡರೆ ಅದಕ್ಕೆ ಈ ನಕ್ಸಲೈಟರು ಅಡ್ಡಿ ಮಾಡುತ್ತಾರೆ. ನಡು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಹೋಗಲಿ...ಈ ರೈತರ ಕೈಯಲ್ಲಿ ಇಷ್ಟು ಅಮೂಲ್ಯವಾದ ಮೈದಾನಗಳಿವೆಯಲ್ಲ... ತಾವಾದರೂ ಕ್ರಿಕೆಟ್ ಆಡುತ್ತಾರ... ಅದೂ ಇಲ್ಲ. ಹೀಗಾದರೆ ಈ ದೇಶದಲ್ಲಿ ರನ್‌ಗಳ ಉತ್ಪಾದನೆ ಹೆಚ್ಚುವುದು ಹೇಗೆ? ನಿನಗೆ ಗೊತ್ತಾ? ಈ ದೇಶದಲ್ಲಿ ಪ್ರತಿ ದಿನ ಐದು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ...ನಮ್ಮ ರೈತರು ಸೋಮಾರಿಗಳ ಹಾಗೆ ಟೊಮೆಟೋ, ಭತ್ತ ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಅವರು ಈ ಭೂಮಿಯನ್ನೆಲ್ಲ ನಮಗೆ ಕೊಟ್ಟರೆ ನಾವಾದರೂ ರನ್‌ಗಳ ಬೆಳೆ ಬೆಳೆಯುತ್ತಿದ್ದೆವು. ಈ ದೇಶದ ಹಸಿವನ್ನು ನಿವಾರಿಸುತ್ತಿದ್ದೆವು....’’ ಎಂದು ಒಂದೇ ಸಮನೆ ಮಾತನಾಡತೊಡಗಿದರು
ಕೃಷಿಯ ಕುರಿತಂತೆ ತನ್ನ ಗಂಡನ ಕಾಳಜಿಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮನಮೋಹಿನಿಯ ಎದೆ ತುಂಬಿ ಬಂತು. ಕೃಷಿಯ ಕುರಿತಂತೆ ಇಷ್ಟೆಲ್ಲ ತಲೆಕೆಡಿಸಿ ಕೊಂಡರೂ ತನ್ನ ಗಂಡನ ಕುರಿತಂತೆ ಬೇಡದ ಮಾತುಗಳನ್ನಾಡುತ್ತಾರಲ್ಲ ಊರಜನರು ಎಂದು ಸಿಟ್ಟು ಉಕ್ಕಿ ಬಂತು. ಆಕೆ ಗಂಡನನ್ನು ಸಮಾಧಾನಿಸಿದರು. ‘‘ಹೋಗಲಿ...ಊರ ಜನರ ಮಾತು ಕೇಳಿ ನೀವು ತಲೆ ಬಿಸಿ ಮಾಡುವುದು ಬೇಡ...ನಾನು ರಾತ್ರಿ ಅಡುಗೆಗೆ ಸಿದ್ಧತೆ ಮಾಡುತ್ತೇನೆ...ರಾತ್ರಿ ರನ್‌ಗಳ ಬಿರಿಯಾನಿ ಮಾಡೋಣ....’’ ಎಂದರು.
 ಜುಲೈ -11-2010

No comments:

Post a Comment