Sunday, May 10, 2015

ನಾನೇ ಮೂತ್ರ ಸುರಿದು ಬೆಳೆಸಿದ ಪಕ್ಷ!


ನನ್ನ ಮೂತ್ರವನ್ನು ತೋಟಕ್ಕೆ ಗೊಬ್ಬರವಾಗಿ ಬಳಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ 10-5-2015ರ ರವಿವಾರ  ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಸಚಿವ ನಿತಿನ್ ಗಡ್ಕರಿಯ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅದಾಗಷ್ಟೇ ಹಿಂದುಗಡೆಯಿರುವ ತೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಒಳ ಬಂದಿದ್ದ ಗಡ್ಕರಿಯವರು ಕಿಟಕಿಯಿಂದ ಇಣುಕಿ ನೋಡಿದರು. ನೋಡಿದರೆ ಪತ್ರಕರ್ತ ಎಂಜಲು ಕಾಸಿ.
ಬಾಗಿಲು ತೆಗೆದದ್ದೇ ‘‘ಏನ್ರೀ...ಇಂಟರ್ಯೂ ಮಾಡಲು ಬಂದಿದ್ದೀರಾ...’’ ಎಂದು ಕೇಳಿದರು.
‘‘ಇಲ್ಲಾ ಸಾರ್...ಮೂತ್ರ ಮಾಡುವುದಕ್ಕೆ ಬಂದಿದ್ದೇನೆ....ನಿಮ್ಮ ತೋಟಕ್ಕೆ ನೀವು ಮೂತ್ರವನ್ನೇ ಬಳಸುತ್ತಿದ್ದೀರಿ ಎಂದು ಗೊತ್ತಾಯಿತು. ಕರ್ನಾಟಕದ ಮಂತ್ರಿಗಳನ್ನು ಇಂಟರ್ಯೂ ಮಾಡಲು ಬಂದಿದ್ದೆ. ಮೂತ್ರ ವಿಸರ್ಜನೆ ಮಾಡಲು ಎಲ್ಲೂ ಶೌಚಾಲಯ ಸಿಗಲಿಲ್ಲ. ಯಾರೋ ನಿಮ್ಮ ಮನೆ ತೋರಿಸಿದರು...’’ ಎಂದು ಹಲ್ಲು ಗಿಂಜಿದ. ‘‘ಬನ್ನಿ...ಬನ್ನಿ...ನನ್ನ ತೋಟ ನಿಮ್ಮನ್ನೇ ಕಾಯುತ್ತಿದೆ...ಇಡೀ ದಿಲ್ಲಿಯ ಜನರೆಲ್ಲ ನನ್ನ ತೋಟವನ್ನೇ ಸುಲಭ ಶೌಚಾಲಯ ಮಾಡಿದ್ದಾರೆ...ಶುಚಿತ್ವಕ್ಕಾಗಿ ಪ್ರಧಾನಿಯವರು ಬಿಡುಗಡೆ ಮಾಡಿದ ಅನುದಾನದಲ್ಲಿ ಒಂದು ಭಾಗವನ್ನು ನಾನು ನನ್ನ ತೋಟಕ್ಕೆ ಹಾಕಿದ್ದೇನೆ...ಸುಲಭ ಶೌಚಾಲಯವೂ ಆಯಿತು...ಸುಲಭದಲ್ಲಿ ತೋಟವೂ ಆಯಿತು...ಇನ್ನು ಮುಂದೆ ಶೌಚಾಲಯಕ್ಕಾಗಿ ಮೀಸಲಿರುವ ಹಣವನ್ನು ಆಯಾ ಊರಿನಲ್ಲಿರುವ ಅಡಿಕೆ ತೋಟದ ಮಾಲಕರಿಗೆ ವಿತರಿಸಲಾಗುತ್ತದೆ. ಆಯಾ ಊರಿನ ಜನರು ಅವರ ತೋಟದಲ್ಲೇ ಮೂತ್ರ ಮತ್ತು ಇನ್ನಿತರ ವಿಸರ್ಜನೆಯನ್ನು ಮಾಡಿ ತೋಟಕ್ಕೆ ಗೊಬ್ಬರ ಒದಗಿಸಬೇಕು. ಹಾಗೆಯೇ ಎರಡೂ ಕಾರ್ಯವೂ ಆದಂತಾಯಿತು. ರೈತರ ಗದ್ದೆಗೆ ಗೊಬ್ಬರ ಪೂರೈಸುವ ಬದಲು ಅವರ ಗದ್ದೆ ತೋಟಗಳನ್ನೆಲ್ಲ ಸುಲಭ ಶೌಚಾಲಯ ಮಾಡುವ ಯೋಜನೆ ನನ್ನ ಬಳಿ ಇದೆ. ಪ್ರಧಾನಿಯವರೂ ಇದಕ್ಕೆ ಸಮ್ಮತಿ ನೀಡಿದ್ದಾರೆ...ಹೀಗೆ ಪ್ರತಿ ಊರಲ್ಲೂ ವಿಶಾಲ ಶೌಚಾಲಯ ನಿರ್ಮಾಣ ಮಾಡಿದಂತಾಗುತ್ತದೆ....’’
ಇದ್ದಕ್ಕಿದ್ದಂತೆಯೇ ಗಡ್ಕರಿಯ ಹಿತ್ತಲಿನಿಂದ ದುರ್ವಾಸನೆ ಮೂಗಿಗೆ ಬಡಿಯಿತು. ಎಂಜಲು ಕಾಸಿ ಮೂಗು ಮುಚ್ಚಿಕೊಂಡೇ ಸಂದರ್ಶನ ಮಾಡತೊಡಗಿದ ‘‘ಸಾರ್...ನಿಮ್ಮ ಮೂತ್ರವನ್ನೇ ಗೊಬ್ಬರವಾಗಿ ಬಳಸುವುದನ್ನು ನೀವು ಕಂಡು ಹಿಡಿದದ್ದು ಹೇಗೆ ಸಾರ್?’’
‘‘ನಾನದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೇ ಪ್ರಯೋಗ ಮಾಡುತ್ತಾ ಬಂದೆ. ಕೊನೆಗೂ ಒಳ್ಳೆಯ ಲಿತಾಂಶ ಸಿಕ್ಕಿತು. ಇದೀಗ ನನ್ನ ಲಿತಾಂಶವನ್ನು ಘೋಷಿಸಿದ್ದೇನೆ.....’’
‘‘ನೀವು ಅದನ್ನು ಹೇಗೆ, ಎಲ್ಲಿ ಪ್ರಯೋಗ ಮಾಡಿದಿರಿ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡ್ರಿ...ನಮ್ಮ ಬಿಜೆಪಿ ಅನ್ನೋ ತೋಟ ಅದೇನು ಗೊಬ್ಬರ ಹಾಕಿದ್ರೂ ಸರಿಯಾಗಿ ಬೆಳೀತಾ ಇರ್ಲಿಲ್ಲ.....ರಾಮಜನ್ಮಭೂಮಿ ಗೊಬ್ಬರ ಹಾಕಿಯಾಯಿತು. ಗುಜರಾತ್ ಹತ್ಯಾಕಾಂಡ ಗೊಬ್ಬರ ಹಾಕಿ ಆಯಿತು...ಮುಂಬಯಿ ಗಲಭೆ ಗೊಬ್ಬರ...ಹೀಗೆ ಹಾಕದ ಗೊಬ್ಬರಗಳೇ ಇಲ್ಲ....ಬಳಿಕ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು ನೋಡಿ. ನಾನು ಹೊಸ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದೆ. ಪ್ರತಿ ದಿನ ನನ್ನ ಮೂತ್ರವನ್ನೆಲ್ಲ ಸಂಗ್ರಹಿಸಿ, ಗೊಬ್ಬರ ರೂಪದಲ್ಲಿ ಬಳಸಿದೆ. ಬರೇ ಒಂದೆರಡು ವರ್ಷಗಳಲ್ಲಿ ಬಿಜೆಪಿ ವಿಶ್ವದೆತ್ತರ ಬೆಳೆದು ನಿಂತು ಇದೀಗ ಮೋದಿ ಪ್ರಧಾನಿಯಾಗಿ, ಕಾಂಗ್ರೆಸ್ ಮೂಲೆಗುಂಪಾಗಿ ಬಿಟ್ಟಿದೆ....’’ ಗಡ್ಕರಿ ಗುಟ್ಟನ್ನು ಬಿಚ್ಚಿಟ್ಟರು.
‘‘ಅಂದರೆ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯುವುದಕ್ಕೆ ನಿಮ್ಮ ಗೊಬ್ಬರವೇ ಕಾರಣ ಎನ್ನುತ್ತೀರಾ?’’ ಕಾಸಿ ಅನುಮಾನದಿಂದ ಮತ್ತೆ ಕೇಳಿದ.
‘‘ಯಾಕ್ರೀ ಅನುಮಾನ?’’ ಗಡ್ಕರಿ ಸಿಟ್ಟಿನಿಂದ ಕೇಳಿದರು.
‘‘ಮತ್ಯಾಕೆ ಸಾರ್ ನಿಮ್ಮನ್ನು ಪಕ್ಷದಿಂದ ಕೆಳಗಿಳಿಸಿದರು? ನಿಮ್ಮನ್ನು ಕೆಳಗಿಳಿಸಿ ರಾಜ್‌ನಾಥ್ ಸಿಂಗ್‌ನನ್ನು ಯಾಕೆ ಪಕ್ಷಾಧ್ಯಕ್ಷ ಮಾಡಿದರು?’’ ಕಾಸಿ ಗೊಂದಲದಿಂದ ಕೇಳಿದ. ‘‘ನೋಡ್ರಿ...ಮೂತ್ರವನ್ನು ಗೊಬ್ಬರವಾಗಿ ಬಳಸುವಾಗ ಒಂದಿಷ್ಟು ದುರ್ವಾಸನೆ ಬರುವುದು ಸಹಜ. ಆದರೆ ಅದನ್ನು ಮುಂದಿಟ್ಟುಕೊಂಡು ‘ನನ್ನ ಅವ್ಯವಹಾರದ ದುರ್ವಾಸನೆ’ ಎಂದು ಆರೋಪಿಸಿದರು. ನಾನು ಮೂತ್ರ ಮಾಡಿ ಬೆಳೆಸಿದ ಪಕ್ಷದ ನಾಯಕ ಸ್ಥಾನದಿಂದ ನನ್ನನ್ನು ಕೆಳಗಿಳಿಸಿಬಿಟ್ಟರು. ಆದರೂ ತೋಟ ತುಂಬಾ ಚೆನ್ನಾಗಿ ಬೆಳೆದು ಇದೀಗ ಆ ತೋಟದ ಲವನ್ನು ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಅನುಭವಿಸುತ್ತಿದ್ದಾರೆ. ಮೂತ್ರ ಮಾಡಿದ ನನ್ನನ್ನು ಕಡೆಗಣಿಸಿದ್ದಾರೆ...’’
ಕಾಸಿಗೆ ತುಂಬಾ ಬೇಜಾರಾಯಿತು. ಆದರೂ ಮೂತ್ರದಿಂದಲೇ ಬಿಜೆಪಿ ಯೆನ್ನುವ ಮರ ಮುಗಿಲೆತ್ತರ ಬೆಳೆದಿದೆ ಎನ್ನುವುದು ಅವನಲ್ಲಿ ರೋಮಾಂಚನವನ್ನು ತರಿಸಿತು ‘‘ಸಾರ್...ಇನ್ನು ಈ ಮೂತ್ರದಿಂದ ಏನೇನು ಬೆಳೆಸುವುದೆಂದು ಮಾಡಿದ್ದೀರಿ?’’
ಗಡ್ಕರಿ ತನ್ನ ಯೋಜನೆಯನ್ನು ಮುಂದಿಟ್ಟರು ‘‘ಈ ದೇಶದ ಗದ್ದೆಗಳಿಗೆ, ತೋಟಗಳಿಗೆ ಮೂತ್ರವನ್ನೇ ಗೊಬ್ಬರವಾಗಿ ವಿತರಿಸಬೇಕು ಎಂದು ಮಾಡಿದ್ದೇವೆ...’’
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಇಡೀ ದೇಶಕ್ಕೆ ನೀವೊಬ್ಬರೇ ಮೂತ್ರವನ್ನು ಪೂರೈಸುತ್ತೀರಾ? ಅಷ್ಟೂ ಮೂತ್ರವನ್ನು ವಿಸರ್ಜಿಸಲು ನಿಮ್ಮಿಂದ ಸಾಧ್ಯವೆ?’’
ಗಡ್ಕರಿ ಸ್ಪಷ್ಟನೆ ನೀಡಿದರು ‘‘ಬರೇ ನನ್ನ ಮೂತ್ರ ಮಾತ್ರವಲ್ಲ....ಇಡೀ ಸಚಿವ ಸಂಪುಟದ ಪ್ರಮುಖರು ಮತ್ತು ಸಂಸದರ ಮೂತ್ರಗಳನ್ನು ಸಂಗ್ರಹಿಸಿ ಅದನ್ನು ದೇಶಕ್ಕೆ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ....’’
‘‘ಇದಕ್ಕೆ ಎಲ್ಲ ಸಂಸದರೂ ಸಮ್ಮತಿಸಿದ್ದಾರಾ ಸಾರ್?’’ ಕಾಸಿಗೆ ಮತ್ತೆ ಅನುಮಾನ ಹತ್ತಿತು.
‘‘ನರೇಂದ್ರ ಮೋದಿಯವರು ತಕ್ಷಣ ಸಮ್ಮತಿಸಿದರು. ಈಗಾಗಲೇ ಬಿಜೆಪಿಯೊಳಗೆ ಕೆಲವು ಸ್ವಾಮೀಜಿಗಳ, ಸಾ್ವಗಳ ವೇಷದಲ್ಲಿರುವ ಸಂಸದರು ಕಂಡ ಕಂಡಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ನರೇಂದ್ರ ಮೋದಿಯವರ ಗಮನಕ್ಕೂ ಬಂದಿದೆ. ಭಾಷಣದ ಹೆಸರಿನಲ್ಲಿ, ಪತ್ರಿಕಾ ಹೇಳಿಕೆಯ ಹೆಸರಿನಲ್ಲಿ ಬಾಯಿಯಿಂದಲೂ ಮೂತ್ರ ವಿಸರ್ಜನೆ ಮಾಡುವ ಸಾಮರ್ಥ್ಯವನ್ನು ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇವರ ಈ ಸಾಮರ್ಥ್ಯ ಬಿಜೆಪಿಯ ಪರಿಸರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವುದರಿಂದ ಎಲ್ಲರೂ ಬಿಜೆಪಿ ಕಾಂಪೌಂಡ್‌ನೊಳಗೆ ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಈ ವಿಸರ್ಜನೆಯನ್ನೆಲ್ಲ ಸಂಗ್ರಹಿಸಿ ದೇಶದಲ್ಲಿರುವ ತೋಟ, ಗದ್ದೆಗಳಿಗೆ ವಿತರಿಸಿದರೆ ಗೊಬ್ಬರಕ್ಕೆ ಗೊಬ್ಬರವೂ ಆಯಿತು. ನಮ್ಮ ಫಸಲೂ ಜಾಸ್ತಿಯಾಗುತ್ತದೆ...’’
‘‘ಸಾರ್...ಹೀಗಾದಲ್ಲಿ ನರೇಂದ್ರ ಮೋದಿಯವರ ಶುಚಿತ್ವದ ಆಂದೋಲನದ ಗತಿ?’’ ಕಾಸಿ ಆತಂಕದಿಂದ ಕೇಳಿದ.
‘‘ಶುಚಿತ್ವ ಆಂದೋಲನ ಯಶಸ್ವಿಯಾಗಿ ನಡೆಯುತ್ತದೆ. ನಾವು ಪೂರೈಸಿದ ಮೂತ್ರಕ್ಕೆ ಬದಲಿಯಾಗಿ ಶುಚಿತ್ವಕ್ಕಾಗಿ ಬಿಡುಗಡೆ ಮಾಡಿದ ಹಣವನ್ನೆಲ್ಲ ಸಮಾನವಾಗಿ ಹಂಚಿಕೊಳ್ಳುತ್ತೇವೆ...ಹಾಗೆಯೇ ಈ ಗೊಬ್ಬರಕ್ಕೆ ‘ದೇಶಪ್ರೇಮಿ’ ಎಂದು ನಾಮಕರಣ ಮಾಡಿದ್ದೇವೆ...ನಮ್ಮ ಆಸಕ್ತಿಯನ್ನು ಕಂಡ ಅಮೆರಿಕದ ಅಧ್ಯಕ್ಷ ಒಬಾಮ ಅವರು ಕೂಡ ತಮ್ಮ ಅಮೂಲ್ಯ ಮೂತ್ರವನ್ನು ಕಳುಹಿಸಿಕೊಡುತ್ತೇನೆ...ಪ್ರತಿಯಾಗಿ ನಿಮ್ಮ ದೇಶದಲ್ಲಿ ವ್ಯರ್ಥವಾಗಿ ಬಿದ್ದಿರುವ ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ನಮಗೆ ಕಳುಹಿಸಿಕೊಡಿ ಎಂದಿದ್ದಾರೆ...ಈ ಒಪ್ಪಂದಕ್ಕೆ ಶೀಘ್ರ ಮೋದಿಯವರು ಸಹಿ ಹಾಕಲಿದ್ದಾರೆ...’’ ಇನ್ನೂ ಇಲ್ಲಿ ನಿಂತರೆ ಒಬಾಮನ ಮೂತ್ರಕ್ಕೆ ಬದಲಿಯಾಗಿ ತನ್ನನ್ನೇ ಕಳುಹಿಸಿಕೊಡಬಹುದು ಎಂದು ಕಾಸಿಗೆ ಭಯವಾಯಿತು. ‘‘ಸಾರ್ ಹೊರಟೆ...’’ ಎಂದ ಕಾಸಿ.
‘‘ನಿಲ್ರೀ...ಎಳೆನೀರು ಕುಡಿದುಕೊಂಡು ಹೋಗಿ. ನನ್ನದೇ ಮನೆಯ ತೋಟದ ಎಳೆನೀರು...ತುಂಬಾ ರುಚಿ ಯಾಗಿದೆ...ನಾನೇ ಗೊಬ್ಬರ ಹಾಕಿ ಸಾಕಿದ ಮರ...’’ ಎನ್ನುತ್ತಿದ್ದಂತೆಯೇ ಕಾಸಿಗೆ ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಓಡ ತೊಡಗಿದ. 
೧೦.೫.೨೦೧೫

No comments:

Post a Comment