Sunday, January 12, 2014

ನಾನು ಒಡೆದದ್ದು ಅಸಮಾನತೆಯ ಗೋಡೆ....

ವಿಧಾನ ಸೌಧದ ಗೋಡೆ ಡೆದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರ ಆಂಜನೇಯ ಅವರ ಸಂದರ್ಶನವನ್ನು ಪತ್ರಕರ್ತ ಎಂಜಲು ಕಾಸಿ ಮಾಡಿದ್ದಾನೆ. ಜನವರಿ -12-2014 ರ ವಾರ್ತಾ ಭಾರತಿ ಪತ್ರಿಕೆಯಲ್ಲಿ ಈ ಬುಡಬುಡಿಕೆ ಪ್ರಕಟವಾಗಿದೆ 

ತಗ್ಗಿ ಬಗ್ಗಿ ಪತ್ರಕರ್ತ ಎಂಜಲು ಕಾಸಿ ಕಚೇರಿಯೊಳಗೆ ನುಗ್ಗಿದ್ದು ನೋಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಗರಂ ಆದರು ‘‘ಏನ್ರೀ...ಗೋಡೆ ಒಡೆದಿರುವುದನ್ನು ವಿಚಾರಿಸೋದಕ್ಕೆ ಕಚೇರಿಗೆ ಬಂದ್ರಾ...’’ 

‘‘ಹಾಗಲ್ಲ ಸಾರ್...’’ ಎಂದು ಎಂಜಲು ಕಾಸಿ ಮುಜುಗರದಿಂದ ನಿಂತಲ್ಲೇ ಕಾಲಲ್ಲಿ ಉಂಗುರ ಬರೆಯತೊಡಗಿದ. 
‘‘ಹಾಗೂ ಇಲ್ಲ, ಈಗೂ ಇಲ್ಲ....ಒಂದಿನಾದ್ರೂ ನನ್ನ ಸಾಧನೆಯನ್ನು ಬರೆಯೋದಕ್ಕೆ ಈ ಇಲಾಖೆಗೆ ನುಗ್ಗಿದ್ದೀರಾ...ಇದೀಗ ಗೋಡೆ ಒಡೆದಿರುವುದು ಗೊತ್ತಾದದ್ದೇ ಸರಣಿಯೋಪಾದಿಯಲ್ಲಿ ಪತ್ರಕರ್ತರು ನುಗ್ಗುತ್ತಿದ್ದಾರೆ....’’

ಕಾಸಿ ಹಲ್ಲು ಕಿರಿಯುತ್ತಾ ಕೇಳಿದ ‘‘ಹಾಗಾದ್ರೆ ಗೋಡೆ ಒಡೆದಿರುವುದು ನಿಜಾನಾ ಸಾರ್...?’’
ಆಂಜನೇಯ ಭುಜ ಕುಲುಕಿ ಹೇಳಿದರು ‘‘ಹೌದ್ರಿ...ನಾನು ಗೋಡೆ ಒಡೆದಿದ್ದೇನೆ...ಸಮಾಜ ಕಲ್ಯಾಣ ಸಚಿವನಾಗಿ ಏನನ್ನು ಮಾಡಬೇಕೋ ಅದನ್ನೇ ಮಾಡಿದ್ದೇನೆ...’’

ಕಾಸಿ ನಿಂತಲ್ಲೇ ಬೆಚ್ಚಿ ಬಿದ್ದ ‘‘ಸಾರ್...ಸಮಾಜ ಕಲ್ಯಾಣ ಸಚಿವರ ಕೆಲಸ ಗೋಡೆ ಒಡೆಯುವುದಾ ಸಾರ್?’’
‘‘ಹೌದ್ರಿ...ನಾನು ಒಡೆದಿರುವುದು ಅಸಮಾನತೆಯ ಗೋಡೆಯನ್ನು....ಸಮಾಜ ಕಲ್ಯಾಣ ಸಚಿವನಾಗಿ ಸಮಾಜದಲ್ಲಿ ಜಾತಿ, ಭೇದಗಳು ಇರಬಾರದು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ಗೋಡೆಯನ್ನು ಒಡೆದಿದ್ದೇನೆ...’’
ಕಾಸಿಗೆ ಯಾರೋ ತನ್ನ ತಲೆಯ ಮೇಲೆ ಸುತ್ತಿಗೆಯಿಂದ ಒಡೆದಂತಾಯಿತು...‘‘ಅದು ಅಸಮಾನತೆಯ ಗೋಡೆ ಸಾರ್...ಆದರೆ ಇದು ವಿಧಾನಸೌಧದ ಗೋಡೆ ಸಾರ್...’’ ಗೊಂದಲದಿಂದ ಕಾಸಿ ಕೇಳಿದ.

‘‘ಯಾವ ಗೋಡೆಯಾದ್ರೂ ಸಮಾಜದೊಳಗೆ ಇರಬಾರದು ಕಣ್ರೀ...ದುರ್ಬಲ ಜಾತಿಗೆ ಈ ಗೋಡೆಗಳು ಒಂದು ಸಮಸ್ಯೆಯಾಗಿ ಕಾಡುತ್ತಿವೆ. ಆದುದರಿಂದ ಗೋಡೆ ಕಂಡಲ್ಲೆಲ್ಲ ಅದನ್ನು ಒಡೆಯುವುದಕ್ಕೆ ಆದೇಶ ನೀಡಬೇಕೆಂದಿದ್ದೇನೆ... ಸಮಾಜದ ಎಲ್ಲಾ ಗೋಡೆಗಳು ಅಳಿತು ಹೊಸ ಕಲ್ಯಾಣ ರಾಜ್ಯವೊಂದನ್ನು ನಾನು ಕಟ್ಟಬೇಕೆಂದಿದ್ದೇನೆ... ಅದಕ್ಕೆಂದೇ ನಾನು ವಿಧಾನಸೌಧದ ಗೋಡೆಯಿಂದಲೇ ಆರಂಭಿಸಿದ್ದೇನೆ....’’

‘‘ಅಂದ್ರೆ ವಿಧಾನಸೌಧದ ಗೋಡೆಯಲ್ಲಿ ಅಸಮಾನತೆ ಇದೆ ಎಂದು ಹೇಳುತ್ತೀರಾ ಸಾರ್?’’ ಕಾಸಿ ತನ್ನ ಪೆನ್ನಿನ ತುದಿಯನ್ನು ಹರಿತ ಮಾಡತೊಡಗಿದ. 

‘‘ಮತ್ತೇನು? ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕೋಣೆ. ಇತರ ಇಲಾಖೆಗಳಿಗೆ ದೊಡ್ಡ ಕಚೇರಿ ಎಂದರೆ ಏನರ್ಥ? ಅಸಮಾನತೆ ತಾನೆ? ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಲ್ಲಿ ಅಸಮಾನತೆ ಎಂದರೆ ಅದು ಇಡೀ ಸಮಾಜದ ಅಸಮಾನತೆಯನ್ನು ಸೂಚಿಸುತ್ತದೆ.ಆದುದರಿಂದ ನನ್ನ ಕಚೇರಿಯ ಗೋಡೆಯನ್ನು ಒಡೆದು ಅದನ್ನು ವಿಸ್ತರಿಸುವುದಕ್ಕೆ ಹೊರಟೆ. ಇದೊಂದು ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕಣ್ರೀ...ಆದ್ರೇ ಇದನ್ನೇ ದೊಡ್ಡದು ಮಾಡಿಕೊಂಡು, ಅಪಾರ್ಥ ಮಾಡಿಕೊಂಡು ಪತ್ರಕರ್ತರು ಏನೇನೆಲ್ಲ ಬರೀತಿದ್ದಾರೆ....’’ ಕಾಸಿ ಮಾತ್ರ ಆಂಜನೇಯರ ಬೆನ್ನು ಬಿಡಲಿಲ್ಲ ‘‘ಹಾಗಲ್ಲ ಸಾರ್...ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ...’’

ಆಂಜನೇಯರು ಮತ್ತೆ ಗರಂ ಆದರು. ‘‘ಅವರು ಹನುಮಂತಯ್ಯ. ನಾನು ಆಂಜನೇಯ. ಹೆಸರಲ್ಲೇನು ವ್ಯತ್ಯಾಸ ಇಲ್ಲಾರೀ...ಇಬ್ಬರೂ ಒಂದೆ. ಇಬ್ಬರ ಹೆಸರೂ ಯ ಅಕ್ಷರದಲ್ಲೇ ಕೊನೆಯಾಗುತ್ತೆ. ಯ ಅಂದರೆ ನ್ಯಾಯ ಅಂತ ಅರ್ಥ. ಅಲ್ಲಾರೀ...ಹನುಮಂತಯ್ಯ ವಿಧಾನಸೌಧ ಕಟ್ಟುವಾಗ ಸಮಾಜಕಲ್ಯಾಣ ಇಲಾಖೆ ಅಂತ ಸಣ್ಣ ಕೋಣೆಯೇನಾದ್ರೂ ಕಟ್ಟಿದ್ದಾರಾ? ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕಚೇರಿ ಕೊಡಿ ಎಂದು ಉಯಿಲು ಬರೆಸಿ ಹೋಗಿದ್ದಾರಾ? ಹನುಮಂತಯ್ಯ ಕಟ್ಟಿದ್ದು ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ. ಈ ಆಂಜನೇಯ ಕೆಡವಿದ್ದು ಕೂಡ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ...’’

ಯಾವುದೋ ಬಂಡಾಯ ಕವಿತೆ ಕೇಳಿದಂತೆ ಪತ್ರಕರ್ತ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಇನ್ನೇನೇನು ಒಡೆಯಬೇಕು ಅಂತ ಇದ್ದೀರಿ ಸಾರ್?’’ ಕಾಸಿ ಖುಷಿಯಿಂದ ಕೇಳಿದ.

 ‘‘ಸಮಾಜ ಕಲ್ಯಾಣ ಇಲಾಖೆಗೆ ಕೊಕ್ಕೆ ಇಡುವ ಅಧಿಕಾರಿಗಳ ಕಾಲನ್ನು ಒಡೆಯಬೇಕು ಎಂದಿದ್ದೇನೆ. ಹಾಗೆಯೇ ಬಾಯಿಗೆ ಬಂದಂತೆ ಬರೆಯುವ ಪತ್ರಕರ್ತರ ತಲೆ ಒಡೆಯಬೇಕು ಎಂದಿದ್ದೇನೆ...’’ ಎನ್ನುತ್ತಾ ಕಾಸಿಯನ್ನು ಕಣ್ಣಗಲಿಸಿ ನೋಡಿದರು.

ಕಾಸಿ ನಿಂತಲ್ಲೇ ಗದ್ದರ್ ಹಾಡು ಕೇಳಿದವನಂತೆ ನಡುಗಿದ. ‘‘ಸಾರ್...ಗೋಡೆ ಬಿಟ್ಟು ತಲೆಯನ್ನು ಒಡೆಯೋದಕ್ಕೆ ಸಿದ್ಧರಾಗಿದ್ದೀರಲ್ಲ ಸಾರ್...’’ 

‘‘ತಲೆಯಿರುವವರು ಗೋಡೆ ಕಟ್ಟುತ್ತಾರೆ. ಅದಕ್ಕಾಗಿ ಮೊದಲು ತಲೆ ಒಡೆದು ಅನಂತರ ಗೋಡೆ ಒಡೆದರೆ ಒಳ್ಳೆಯದು ಎಂಬ ತೀರ್ಮಾಣಕ್ಕೆ ಬಂದಿದ್ದೇನೆ...’’ ಆಂಜನೇಯ ಸ್ಪಷ್ಟವಾಗಿ ನುಡಿದರು. ಎಂಜಲು ಕಾಸಿ ತನ್ನ ತಲೆಯನ್ನೊಮ್ಮೆ ಸವರಿಕೊಂಡು ಕೇಳಿದ ‘‘ಆದರೂ...ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಸಾರ್?’’

‘‘ಹಾಗಾದರೆ, ಗೋಡೆಯ ಬಗ್ಗೆ ತಲೆ ಬಿಸಿ ಮಾಡಿಕೊಳ್ಳದೆ ಕಲ್ಯಾಣ ಇಲಾಖೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ...’’ ಆಂಜನೇಯರು ಆರ್ಡರ್ ಕೊಟ್ಟರು. ಬರೇ ಗೋಡೆಗಳ ಬಗ್ಗೆ ಮಾತ್ರ ಪ್ರಶ್ನೆ ಸಿದ್ಧ ಪಡಿಸಿಕೊಂಡು ಬಂದಿದ್ದ ಎಂಜಲು ಕಾಸಿ ಕಕ್ಕಾ ಬಿಕ್ಕಿಯಾದ. ಆದರೂ ಪ್ರಶ್ನೆ ಕೇಳ ತೊಡಗಿದ ‘‘ಸರ್, ಗೋಡೆ ಕೆಡವಿದ್ದಕ್ಕೆ ಸಿದ್ದರಾಮಯ್ಯ ತುಂಬಾ ಸಿಟ್ಟಾಗಿದ್ದಾರಂತೆ...ಹೌದಾ?’’

‘‘ಹೌದೌದು. ಶ್ಯಾನೆ ಸಿಟ್ಟಾಗಿದ್ರು. ನನ್ನನ್ನು ಬಿಟ್ಟು ನೀವೊಬ್ರೆ ಯಾಕೆ ಗೋಡೆ ಕೆಡವಿದ್ರಿ ಎಂದು ಸಿಟ್ಟಾದ್ರು. ಅಹಿಂದ, ಅಸಮಾನತೆ ಇತ್ಯಾದಿ ಗೋಡೆಗಳನ್ನು ಕೆಡಹುವಾಗ ಸಿದ್ದರಾಮಯ್ಯ ಅವರ ಜೊತೆ ಒಂದು ಮಾತು ಹೇಳಬೇಕಾಗಿತ್ತು. ಅದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಗೋಡೆ ಕೆಡಹುವಾಗ ಸಿದ್ದರಾಮಯ್ಯ ಅವರ ಕೈಯಲ್ಲಿ ಗುದ್ದಲಿ ಪೂಜೆ ಮಾಡಿಸಿ ಹೊರಡುತ್ತೇನೆ....’’

‘‘ಸಾರ್...ನೀವು ಗೋಡೆ ಕೆಡವಲು ವಾಸ್ತು ಕಾರಣ ಅಂತ ಹೇಳ್ತಾರೆ ಹೌದಾ?’’ ಕಾಸಿ ಕೇಳಿದ.
‘‘ಹೇಳುವವರನ್ನು ಕರೆದುಕೊಂಡು ಬನ್ನಿ. ನಿರ್ಮಾಣ ಮಾಡಿದ ಹೊಸ ಗೋಡೆಯ ಮೇಲೆ ಅವರನ್ನು ತೂಗು ಹಾಕ್ತೇನೆ....’’ ಆಂಜನೇಯ ಮತ್ತೆ ಗರಂ ಆದದ್ದು ಕಂಡು ಕಾಸಿ ಮೆಲ್ಲ ಅಲ್ಲಿಂದ ಕಾಲ್ತೆಗೆದ.


ಅಷ್ಟರಲ್ಲಿ ಹೊರಗಡೆ ಆಂಜನೇಯರ ಪಿಎಯನ್ನು ನೋಡಿದ್ದೇ ಕಾಸಿ ಅವನನ್ನು ಇಂಟರ್ಯೂ ಮಾಡಲು ಹೊರಟ ‘‘ಸಾರ್...ಅದೇ ಸಾಹೇಬ್ರ ಗೋಡೆ ಕೆಡವಿದ್ರಲ್ಲ...ಅದರ ಬಗ್ಗೆ...ನಿಮಗೇನಾದ್ರೂ ಗೊತ್ತಾ...’’

ಪಿಎ ತಣ್ಣಗೆ ಹೇಳಿದ ‘‘ಹಂಗೇನಿಲ್ಲ. ಸಾಹೇಬರು ಎಂದಿನಂತೆ ಕಚೇರಿಗೆ ಬಂದಿದ್ದರು. ಆದರೆ ಕಚೇರಿ ಬಾಗಿಲ ಬೀಗದ ಕೀ ಕಾಣಿಯಾಗಿತ್ತು. ತುಂಬಾ ಹುಡುಕಾಡಿದ್ರೂ ಸಿಗಲಿಲ್ಲ. ಆದರೆ ಕೆಲಸದ ವಿಷಯದಲ್ಲಿ ಸಾಹೇಬರು ಸ್ಟ್ರಿಕ್ಟು. ಬಾಗಿಲು ಮುರಿದು ಹೋದರೆ ತಪ್ಪಾಗತ್ತೆ ಅಂತ, ಗೋಡೆ ಒಡೆಯೋದಕ್ಕೆ ಹೇಳಿದ್ರು. ಹಾಗೆ...ಗೋಡೆ ಒಡೆದು ಒಳ ಹೋಗಿ ಸಾಹೇಬ್ರು ಕೆಲಸ ಮಾಡ ತೊಡಗಿದ್ರು...ಅದನ್ನೇ ಪತ್ರಕರ್ತರು ಇಷ್ಟು ರಾದ್ಧಾಂತ ಮಾಡ್ತಾ ಇದ್ದಾರೆ....’’
ಅಷ್ಟರಲ್ಲಿ ಒಳಗಿನಿಂದ ಆಂಜನೇಯರ ಧ್ವನಿ ಕೇಳಿಸಿತು ‘‘ಅಂದ ಹಾಗೆ ನನ್ನ ಶಾಸಕರ ಭವನದ ಬೀಗದ ಕೈ ಕಾಣ್ತಾ ಇಲ್ಲಾ....ಸ್ವಲ್ಪ ಬಂದು ಇಲ್ಲಿ ಹುಡುಕ್ರೋ...’’ ಎನ್ನುತ್ತಿದ್ದ ಹಾಗೆಯೇ ಆಂಜನೇಯರ ಪಿಎ ಶಾಸಕ ಭವನದ ಗೋಡೆ ಒಡೆಯಲು ಗುದ್ದಲಿ ಹುಡುಕ ತೊಡಗಿದ.

No comments:

Post a Comment