Saturday, January 4, 2014

ಪ್ರತಿಮನೆಯ ಅಂಗಳದಲ್ಲಿ ಒಂದು ಗೆರೆ ಎಳೆಯಲಾಗುತ್ತದೆ..............

 ದಿಲ್ಲಿಯಲ್ಲಿ ಬಸ್ಸೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದು ಕೊಲೆ ನಡೆದಾಗ ಆರೆಸ್ಸೆಸ್ ನಾಯಕರೊಬ್ಬರು ‘ಇಂಡಿಯಾದಲ್ಲಿ ಮಾತ್ರ ಅತ್ಯಾಚಾರ ನಡೆಯುತ್ತದೆ. ಭಾರತದಲ್ಲಿ ನಡೆಯುವುದಿಲ್ಲ’ ಎಂಬ ಹೇಳಿಕೆ ನೀಡಿದಾಗ, ಪತ್ರಕರ್ತ ಎಂಜಲು ಕಾಸಿ ನಡೆಸಿದ ಸಂದರ್ಶನ. ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

‘‘ಭಾರತದಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ. ಅತ್ಯಾಚಾರಗಳು ನಡೆಯುವುದು ಇಂಡಿಯಾದಲ್ಲಿ’’ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಗವತಿಕೆ ಕೇಳಿದ್ದೇ, ಪತ್ರಕರ್ತ ಎಂಜಲು ಕಾಸಿಗೆ ಗೊಂದಲವಾಯಿತು. ಹಾಗಾದರೆ ಈ ‘ಭಾರತ’ ಎನ್ನುವ ದೇಶ ಯಾವ ಖಂಡದಲ್ಲಿದೆ? ಎಂದು ಕೊಲಂಬಸ್‌ನಂತೆ ಪೆನ್ನು, ಜೋಳಿಗೆಯ ಜೊತೆಗೆ ಹುಡುಕಾಡಲು ಹೊರಟ. ತನ್ನ ತುಂಡು ಪೇಪರನ್ನು ದೋಣಿಯಾಗಿಸಿ, ಕೈಯಲ್ಲಿರುವ ಪೆನ್ನನ್ನೇ ಹುಟ್ಟಾಗಿ ಬಳಸಿ ಇಡೀ ಹಿಂದೂ ಮಹಾಸಾಗರವನ್ನು ಜಾಲಾಡಿದರೂ ಭಾರತ ಸಿಗದೇ ಸುಸ್ತಾಗಿ, ನೇರ ಭಾಗವತ್ ಮನೆಯ ಬಾಗಿಲನ್ನು ತಟ್ಟಿದ.
‘‘ಸಾರ್, ಅತ್ಯಾಚಾರಗಳೇ ನಡೆಯದ ಈ ಭಾರತ ಎನ್ನುವ ದೇಶ ಎಲ್ಲಿದೆ ಸಾರ್?’’ ಎಂಬ ಪ್ರಶ್ನೆ ಕೇಳಿದ್ದೇ, ಈತ ಪತ್ರಕರ್ತ ಎಂಜಲು ಕಾಸಿ ಎನ್ನುವುದು ಭಾಗವತ್‌ಗೆ ಅರ್ಥವಾಯಿತು. ಇಂತಹ ತಲೆಗೆಟ್ಟ ಪ್ರಶ್ನೆಗಳನ್ನು ಕಾಸಿಯಲ್ಲದೆ ಇನ್ನಾರು ಕೇಳಲು ಸಾಧ್ಯ? ಎಂಬುದು ಅವರಿಗೆ ಗೊತ್ತಿತ್ತು. ‘‘ಎಲ್ಲೆಲ್ಲ ಹೆಣ್ಣು ಮಕ್ಕಳು ಅತ್ಯಾಚಾರದ ವಿರುದ್ಧ ಧ್ವನಿಯೆತ್ತುತ್ತಾರೋ, ಅದೆಲ್ಲ ಇಂಡಿಯ ಅಲ್ಲ. ಎಲ್ಲಿ, ಅತ್ಯಾಚಾರಕ್ಕೊಳಗಾಗಿಯೂ ಮಾನ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕೂರುತ್ತಾರೋ ಅದೆಲ್ಲ ಭಾರತ’’ ಎಂದು ವ್ಯಾಖ್ಯಾನಿಸಿದ ಭಾಗವತ್ ಟಪ್ಪ್ ಎಂದು ಬಾಗಿಲು ಹಾಕಿದರು.
ಕಾಸಿ ಮತ್ತೆ ಬಾಗಿಲು ತಟ್ಟಿದ. ಭಾಗವತ್ ತನ್ನ ಲಾಠಿಯೊಂದಿಗೆ ಬಾಗಿಲು ತೆರೆದರು. ಲಾಠಿ ನೋಡಿದ್ದೆ ಕಾಸಿ ಸಣ್ಣಗೆ ಕಂಪಿಸಿದ. ಅದರೂ ಧೈರ್ಯವನ್ನು ಒಟ್ಟು ಸೇರಿಸಿ ಕೇಳಿದ ‘‘ಸಾರ್...ಭಾರತ ಇಂಡಿಯಾ ಆಗುವ ಮೊದಲು ಇಲ್ಲಿ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲವೆ ಸಾರ್?’’
‘‘ಇಲ್ಲ ಇಲ್ಲ ಇಲ್ಲ...ಮೊಗಲರು, ಬ್ರಿಟಿಷರ ಸಂಸ್ಕೃತಿಯಿಂದಾಗಿ ಭಾರತದಲ್ಲಿ ಅತ್ಯಾಚಾರ ಜಾರಿಗೆ ಬಂತು....’’ ಭಾಗವತ್ ಮೀಸೆಯ ಮೇಲೆ ಕೈ ಹಾಕಿ ನುಡಿದರು.
‘‘ದೇವದಾಸಿ ಪದ್ಧತಿ ಅಂತಾ ಇತ್ತಲ್ಲ ಸಾರ್...ಅದು ಭಾರತದಲ್ಲಿದ್ದದ್ದೋ ಇಂಡಿಯಾದಲ್ಲೋ....’’ ಕಾಸಿ ಮೆಲ್ಲಗೆ ಕೇಳಿದ.
ಭಾಗವತ್ ಕನಲಿ ಕೆಂಡವಾದರು ‘‘ದೇವದಾಸಿ ಪದ್ಧತಿ ಭಾರತದ ಸಂಸ್ಕೃತಿಯಾಗಿತ್ತು. ಹಿಂದೆ ದೇವದಾಸಿ ಪದ್ಧತಿಯಂತಹ ಹತ್ತು ಹಲವು ಸಂಸ್ಕೃತಿಗಳಿದ್ದುದರಿಂದ ಅತ್ಯಾಚಾರ ಕಡಿಮೆಯಾಗಿತ್ತು....ಈಗಲೂ ಭಾರತೀಯ ಸಂಸ್ಕೃತಿಯುಳ್ಳ ಹಳ್ಳಿಗಳಲ್ಲಿ ಅತ್ಯಾಚಾರದ ಸುದ್ದಿ ಕೇಳುತ್ತದೆಯೆ? ಭಾರತದಲ್ಲಿ ಅತ್ಯಾಚಾರ ಆಗಲು ಸಾಧ್ಯವಿಲ್ಲ...’’
‘‘ಹಳ್ಳಿಯಲ್ಲಿ ಈಗಲೂ ಜಮೀನ್ದಾರರು, ಶ್ರೀಮಂತರು, ಕೆಳ ಜಾತಿಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರಲ್ಲ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.
‘‘ನೋಡ್ರಿ...ಅದನ್ನು ಅತ್ಯಾಚಾರ ಎಂದು ಕರೆಯಬಾರದು. ಹೆಣ್ಣು ಮಕ್ಕಳು ಹಾಗೆಲ್ಲ ಮಾತನಾಡುವುದೇ ಭಾರತೀಯ ಸಂಸ್ಕೃತಿಗೆ ವಿರುದ್ಧ. ಹಳ್ಳಿಯಲ್ಲಿ ಅತ್ಯಾಚಾರ ನಡೆದರೂ ಅದು ಈ ರೀತಿ ಸುದ್ದಿಯಾಗುವುದಿಲ್ಲ. ಯಾಕೆ ಗೊತ್ತಾ? ಭಾರತೀಯ ಹೆಣ್ಣು ಮಕ್ಕಳಿಗೆ ಮಾನವೇ ಪ್ರಾಣ. ಮೇಲ್ವರ್ಣೀಯರು ಅತ್ಯಾಚಾರ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳುವುದು ಭಾರತದ ಧರ್ಮ. ಸಂಸ್ಕೃತಿ. ಇಂಡಿಯಾದಲ್ಲಿ ಮಾತ್ರ ಒಂದು ಅತ್ಯಾಚಾರವಾದಾಕ್ಷಣ ಬೊಬ್ಬೆ ಹೊಡೆಯುತ್ತಾರೆ. ಎಷ್ಟೊಂದು ಕ್ಯಾಂಡಲ್‌ಗಳು ವೇಸ್ಟ್ ಆದವು. ಆ ಕ್ಯಾಂಡಲ್‌ಗಳನ್ನು ಬಳಸಿಕೊಂಡು ಅದೆಷ್ಟೋ ಮುಸಲರ ಮನೆಗಳಿಗೆ ಬೆಂಕಿಕೊಡಲು ಉಪಯೋಗಿಸಬಹುದಿತ್ತು...’’
‘‘ಸಾರ್...ಸತಿಪದ್ಧತಿ ಭಾರತದಲ್ಲಿತ್ತೋ ಇಂಡಿಯಾದಲ್ಲಿತ್ತೋ?’’ ಕಾಸಿ ಭಾಗವತರ ಚೆಡ್ಡಿ ಎಳೆಯಲು ಯತ್ನಿಸಿದ.
‘‘ಎಂಥಾ ಮಾತೂಂತ ಆಡ್ತೀರ್ರಿ....ಮುಸಲರು ಅತ್ಯಾಚಾರ ಮಾಡಿದರೂಂತ ಅವರು ಬೆಂಕಿಗೆ ಹಾರ್ತಾ ಇದ್ದರು...ಗಂಡ ಸತ್ತ ಮೇಲೆ ಹೆಂಡತಿ ಒಬ್ಬಳೇ ಉಳಿದರೆ ಅವಳನ್ನು ಮುಸಲರು, ಬ್ರಿಟಿಷರು ಬಿಡ್ತಿದ್ದರೇನ್ರಿ...ಅದಕ್ಕೆ ಬೆಂಕಿಗೆ ಹಾರಿ ಸಾಯ್ತ ಇದ್ದರು. ಇದು ಭಾರತೀಯ ಸಂಸ್ಕೃತಿ. ಇಂದು ಗಂಡ ಸತ್ತರೆ ಬೆಂಕಿಗೆ ಹಾರುವ ಹೆಣ್ಣು ಮಕ್ಕಳೇ ಇಲ್ಲ...ಆದುದರಿಂದಲೇ ಈ ಅತ್ಯಾಚಾರಗಳು ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದ್ದರೆ ಈ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲ...’’
‘‘ಗುಜರಾತ್ ಭಾರತದಲ್ಲಿದೆಯೋ ಇಂಡಿಯಾದಲ್ಲಿದೆಯೋ?’’ ಕಾಸಿ ಮತ್ತೊಂದು ಪ್ರಶ್ನೆ ಒಗೆದ.
‘‘ಗುಜರಾತ್ ಅಪ್ಪಟ ಭಾರತದಲ್ಲಿದೆ’’
‘‘ಆದ್ರೆ...ಅಲ್ಲಿ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಯಿತಲ್ಲ....?’’
‘‘ಅದು ಅತ್ಯಾಚಾರವಲ್ಲ ಕಣ್ರೀ...ಭಾರತದ ದಿಗ್ವಿಜಯ...ನಮ್ಮ ಆತ್ಮಾಭಿಮಾನದ ಸಂಕೇತ....’’ ಭಾಗವತರು ತನ್ನ ಕೈಯಲ್ಲಿದ್ದ ಲಾಠಿಯನ್ನೊಮ್ಮೆ ತಿರುಗಿಸಿದರು.
‘‘ಸಾರ್...ಇಂಡಿಯಾವನ್ನು ಮತ್ತೆ ಭಾರತವನ್ನಾಗಿಸುವುದು ಹೇಗೆ ಸಾರ್?’’ ಕಾಸಿ ಕೇಳಿದ.
‘‘ಬಹಳ ಸುಲಭ. ಮೊದಲು ಮನು ಸಂವಿಧಾನ ಜಾರಿಗೆ ಬರಬೇಕು. ಸತಿ ಪದ್ಧತಿ, ದೇವದಾಸಿ ಪದ್ಧತಿ, ಅನುಷ್ಠಾನಕ್ಕೆ ತರಬೇಕು. ಈ ಮೂಲಕ ಅತ್ಯಾಚಾರವನ್ನು ತಪ್ಪಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಅತ್ಯಾಚಾರಗಳು ನಡೆಯುತ್ತಿದ್ದರೂ ಅದು ಮಾಧ್ಯಮಗಳಲ್ಲಿ ಸುದ್ದಿಯಾಗೂದಿಲ್ಲ. ಅದನ್ನು ಅತ್ಯಾಚಾರಕ್ಕೊಳಗಾದ ನಗರ ಪ್ರದೇಶದ ಹೆಣ್ಣುಮಕ್ಕಳೂ ಪಾಲಿಸಬೇಕು. ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳು ಯಾವಕಾರಣಕ್ಕೂ ಪೊಲೀಸ್ ಕೇಸು ದಾಖಲಿಸಕೂಡದು. ಹೆಣ್ಣು ಮಕ್ಕಳು ಇಂಗ್ಲಿಷ್ ಕಲಿಯಬಾರದು...ಬರೇ ಸಂಸ್ಕೃತ ಮಾತ್ರ ಕಲಿಯಬೇಕು...ಆಗ ಅತ್ಯಾಚಾರದ ಸಂಖ್ಯೆ ಕಡಿಮೆಯಾಗುತ್ತದೆ...ಮಾತು ಮಾತಿಗೆ ರೇಪ್ ರೇಪ್ ಎಂದು ಬೊಬ್ಬಿಟ್ಟು ಭಾರತವನ್ನು ಇಂಡಿಯಾ ಮಾಡಬಾರದು....’’
‘‘ರೇಪ್‌ನ್ನು ಮತ್ತೆ ಹೇಗೆ ಕರೆಯಬೇಕು ಸಾರ್....?’’
ಭಾಗವತ್ ಈಗ ಹಸನ್ಮುಖರಾದರು ‘‘ನೋಡ್ರಿ...ರೇಪ್ ಮಾಡಿದವರು ಮೇಲ್ವರ್ಣೀಯರು, ರೇಪ್‌ಗೊಳಗಾದವರು ಕೆಳವರ್ಣದ ಜನರಾದರೆ ಅದನ್ನು ರೇಪ್ ಎಂದು ಭಾರತದಲ್ಲಿ ಕರೆಯುವುದಿಲ್ಲ. ಯಾಕೆಂದರೆ ಕೆಳಜಾತಿಯನ್ನು ಅನುಭವಿಸುವುದು ಮೇಲ್ಜಾತಿಯವರ ಹಕ್ಕು ಎಂದು ಮನು ಹೇಳಿದ್ದಾನೆ. ಅದರ ವಿರುದ್ಧ ಧ್ವನಿಯೆತ್ತುವುದೆಂದರೆ ಭಾರತೀಯ ಸಂಸ್ಕೃತಿಯ ವಿರುದ್ಧ ಧ್ವನಿಯೆತ್ತುವುದು ಎಂದು ಅರ್ಥ. ಹಾಗೆಯೇ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದರೆ ಅದನ್ನು ಭಾರತೀಯರ ಆತ್ಮಾಭಿಮಾನದ ಸಂಕೇತವಾಗಿ ಪರಿಗಣಿಸಲಾಗುವುದು....ಅತ್ಯಾಚಾರಕ್ಕೊಳಗಾದ ಯಾವುದೇ ಹೆಣ್ಣುಮಕ್ಕಳು ಅದನ್ನು ಬಹಿರಂಗಪಡಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ....ಅವರು ಬೆಂಕಿಯ ಕುಂಡಕ್ಕೆ ಹಾಕಿ ತಮ್ಮ ಮಾನವನ್ನು, ಪಾತಿವ್ರತ್ಯವನ್ನು ಪರೀಕ್ಷೆ ಮಾಡಬಹುದು....ಹಾಗೆಯೇ ಭಾರತದ ಎಲ್ಲ ಮನೆಗಳ ಅಂಗಳದಲ್ಲಿ ಆರೆಸ್ಸೆಸ್‌ನ ಪರವಾಗಿ ಒಂದು ಗೆರೆಯನ್ನು ಎಳೆಯಲಾಗುವುದು...’’
‘‘ಯಾಕೆ ಸಾರ್? ಹೆಣ್ಣು ಮಕ್ಕಳು ಕುಂಟೆ ಬಿಲ್ಲೆ ಆಡುವುದಕ್ಕಾ??’’
‘‘ಅದು ಲಕ್ಷ್ಣಣ ರೇಖೆ ಕಣ್ರೀ. ರಾಮಾಯಣದಲ್ಲಿ ಸೀತೆಗೆ ಲಕ್ಷಣ ಎಳೆದ ರೇಖೆಯನ್ನು ಎಲ್ಲರ ಮನೆಯ ಅಂಗಳದಲ್ಲಿ ಎಳೆಯಲಾಗುವುದು. ಅದನ್ನು ದಾಟಿ ಹೊರಗೆ ಬಂದರೆ, ಆಕೆಗೆ ಯಾವುದೇ ಅನ್ಯಾಯವಾದರೂ ಅವಳೇ ಹೊಣೆಯಾಗುತ್ತಾಳೆ. ಲಕ್ಷ್ಮಣ ರೇಖೆ ದಾಟಿದೆ ಸೀತೆಗೆ ಏನೆಲ್ಲ ಗತಿಯಾಯಿತೋ, ಅದನ್ನು ಅನುಭವಿಸಲು ಭಾರತದ ಮಹಿಳೆಯರು ಸಿದ್ಧರಾಗಬೇಕು...ಯಾರಿಗಾದರೂ ಭಿಕ್ಷೆ ಕೊಡುವುದಿದ್ದರೂ ಆ ಮೂರು ಗೆರೆಯ ಒಳಗೆ ನಿಂತು ಭಿಕ್ಷೆ ಕೊಡಬೇಕು...’’
‘‘ಯಾರಾದರೂ ಮನೆಯೊಳಗೇ ಬಂದು ಅತ್ಯಾಚಾರ ಮಾಡಿದರೆ?’’ ಕಾಸಿ ಕೇಳಿದ.
‘‘ಸೀತೆ ಮಾಡಿದ ಹಾಗೆ ಬೆಂಕಿ ಕುಂಡಕ್ಕೆ ಹಾರಿ ಎಲ್ಲ ಹೆಣ್ಣು ಮಕ್ಕಳು ತಮ್ಮ ಪಾತಿವ್ರತ್ಯವನ್ನು ಸಾಬೀತು ಪಡಿಸಬೇಕು....’’
‘‘ಸಾರ್, ನಿಮ್ಮ ಭಾರತದಲ್ಲಿ ಸಾಮೂಹಿಕವಾಗಿ ಬಸ್‌ನಲ್ಲಿ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಏನು ಶಿಕ್ಷೆ ಸಾರ್?’’
 ‘‘ಭಾರತೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಮಹಿಳೆಯರಿಗೆ ಪಾಠ ಕಲಿಸಿದ್ದಕ್ಕಾಗಿ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ...’’ ಎಂದದ್ದೇ ಪತ್ರಕರ್ತ ಎಂಜಲು ಕಾಸಿ, ಬದುಕಿದೆಯಾ ಬಡ ಜೀವ ಎಂದು ಭಾರತದಿಂದ ಇಂಡಿಯಾದ ಕಡೆಗೆ ಓಡತೊಡಗಿದ.

No comments:

Post a Comment