Sunday, October 11, 2009

ಜ್ಞಾನಕ್ಕೆ ರಾಘವೇಂದ್ರ ಅವರ ಹಾಗೆ ಮೀಸೇನೂ ಇದೆಯ ಮೇಡಂ...?

ಚೀನಾದಿಂದ ಹಿಂದಿರುಗಿದ ಯಡಿಯೂರಪ್ಪ ವಿಮಾನದಿಂದ ಕೆಳಗಿಳಿಯುತ್ತಿದ್ದ ಹಾಗೆಯೇ ವಿಮಾನ ದೊಳಗಿಂದ ಅವರ ಹಿಂದೆಯೇ ಸಂಪುಟ ಸಚಿವರು ದೊಡ್ಡ ಗೋಣಿಚೀಲವನ್ನು ಜಾಗರೂಕತೆಯಿಂದ ಕೆಳಗಿಳಿಸ ತೊಡಗಿದರು.

ಯಡಿಯೂರಪ್ಪರನ್ನು ವಿಮಾನ ನಿಲ್ದಾಣದಲ್ಲೇ ಭೇಟಿಯಾಗಿ ಚೀನ ಅನುಭವಗಳ ಕುರಿತು ಇಂಟರ‍್ಯೂ ಮಾಡಲೆಂದು ಕಾದು ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿ ಆ ಗೋಣಿ ಚೀಲವನ್ನು ಅಚ್ಚರಿಗಣ್ಣಿನಿಂದ ನೋಡುತ್ತಿದ್ದ. ಇತರರನ್ನು ಮುಟ್ಟಲು ಬಿಡದೆ, ಸ್ವತಃ ಸಚಿವ ಕಟ್ಟಾ ಸುಬ್ರಹ್ಮಣ್ಯಂ ಮತ್ತು ಪುತ್ರ ರಾಘವೇಂದ್ರ ಅವರೇ ಜಾಗರೂಕತೆಯಿಂದ ವಿಮಾನದಿಂದ ಇಳಿಸಿ, ತರುತ್ತಿದ್ದರು. ಮಧ್ಯದಲ್ಲಿ ಆಗಾಗ “ಮೆಲ್ಲ...ಮೆಲ್ಲ...” ಎಂದು ಶೋಭಾ ಕರಂದ್ಲಾಜೆ ಸಚಿವರಿಗೆ ಜಾಗರೂಕತೆಯನ್ನು ಹೇಳುತ್ತಿದ್ದರು. ಗೋಣಿ ಚೀಲವನ್ನು ಅಷ್ಟೂ ಜಾಗರೂಕತೆಯಿಂದ ತರುತ್ತಿರುವುದನ್ನು ನೋಡಿ ಕಾಸಿಗೆ ಒಳಗೊಳಗೆ ಖುಷಿಯಾಯಿತು. “ಬಹುಶಃ ಚೀನದಿಂದ ಬರುವಾಗ ಪತ್ರಕರ್ತರಿಗೆ ಗಿಫ್ಟುಗಳನ್ನು ಹೊತ್ತು ತಂದಿರಬಹುದು” ಎಂದು ಮನದಲ್ಲಿ ಮಂಡಿಗೆ ಮೆಲ್ಲ ತೊಡಗಿದ.

ಯಡಿಯೂರಪ್ಪ ಎದುರಾದುದೇ ಕಾಸಿ ಕೇಳಿಯೇ ಬಿಟ್ಟ “ಸಾರ್...ಅದೇನು ಸಾರ್ ಗೋಣಿ ಚೀಲದಲ್ಲಿ...”
ಆ ಪ್ರಶ್ನೆಗೆ ಯಡಿಯೂರಪ್ಪ ಯಾಕೋ ನಾಚಿ ನೀರಾದರು.“ನನಗೆ ಹೇಳೋದಕ್ಕೆ ನಾಚಿಕೆ ಯಾಗತ್ತೆ... ಶೋಭಾಳನ್ನು ಕೇಳಿ” ಎಂದರು.
ಕಾಸಿಗೆ ಅಚ್ಚರಿಯಾಯಿತು. ನಾಚಿಕೆಯಾಗುವಂತಹದ್ದು ಆ ಚೀಲ ದಲ್ಲಿ ಅದೇನಿರಬಹುದು? ಪತ್ರಕರ್ತನ ಕುತೂಹಲದಿಂದ ನಿಂತಲ್ಲೇ ಗಡಗಡ ನಡುಗತೊಡಗಿದ. ಅಷ್ಟರಲ್ಲಿ ಶೋಭಾ ಆಗಮನವಾಯಿತು. “ಮೇಡಂ ಮೇಡಂ...ಗೋಣಿ ಚೀಲದೊಳಗೆ ಏನಿದೆ?”
ಶೋಭಾ ಕೂಡ ಅಷ್ಟೇ ತೀವ್ರವಾಗಿ ಕಂಪಿಸುತ್ತಾ ನುಡಿದರು “ಜ್ಞಾನ ಕಣ್ರೀ...ಆ ಚೀಲದೊಳಗೆ ಜ್ಞಾನ ಇದೆ ಕಣ್ರೀ...”
ಕಾಸಿಗೆ ಅರ್ಥವಾಗಲಿಲ್ಲ. ಸಾಧಾರಣವಾಗಿ ಜ್ಞಾನವೆನ್ನುವುದು ತಲೆಯೊಳಗಿರುತ್ತದೆ. ಆದರೆ ಸದ್ಯಕ್ಕೆ ಆ ತಲೆಯೊಳಗೆ ಈ ನಾಡಿನ ರೈತರ ಗೊಬ್ಬರಗಳೆಲ್ಲ ಸ್ಟಾಕಿರುವುದರಿಂದ ರೈತರು ಗೊಬ್ಬರಕ್ಕಾಗಿ ಹಾಹಾಕಾರ ಮಾಡುತ್ತಿದ್ದಾರೆ. ಆದರೆ, ತಲೆಯಲ್ಲಿರಬೇಕಾದ ‘ಜ್ಞಾನ’ ಗೋಣಿ ಚೀಲದಲ್ಲಿ ತುಂಬಿಸಿ ತರಲು ಕಾರಣವೇನು?

ಜಗತ್ತಿನ ಎಲ್ಲ ಉತ್ಪಾದನೆಗಳನ್ನೂ ‘ಮೇಡಿನ್ ಚೈನಾ’ ಹೆಸರಲ್ಲಿ ಚೀನದಲ್ಲಿ ಮಾಡುತ್ತಾರಂತೆ. ‘ಜ್ಞಾನ’ವನ್ನು ಕೂಡ ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರ? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಮೇಲೆ ಒಂದಾಗಿ ಹುಟ್ಟತೊಡಗಿತು.
“ಮೇಡಂ...ಚೀನದಿಂದ ಬರುವಾಗ ಜ್ಞಾನವನ್ನು ದುಡ್ಡುಕೊಟ್ಟು ತಂದ್ರಾ?” ಕಾಸಿ ಕೇಳಿದ.
ಶೋಭಾ ಸಿಟ್ಟಾದರು. “ಜ್ಞಾನವನ್ನು ಹಾಗೆ ದುಡ್ಡುಕೊಟ್ಟು ತರೋಕೆ ಆಗುತ್ತೇನ್ರಿ...?” ಕೇಳಿದರು.
ಕಾಸಿಗೆ ಅರ್ಥವಾಗಲಿಲ್ಲ “ಮತ್ತೆ, ಆ ಗೋಣಿ ಚೀಲದಲ್ಲಿ....”

ಶೋಭಾ ಸಂಭ್ರಮದಿಂದ ಹೇಳಿದರು “ಚೀನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ‘ಜ್ಞಾನೋದಯ’ ಆಯ್ತು ಕಣ್ರೀ. ಆ ಜ್ಞಾನವನ್ನು ನಾವು ಗೋಣಿ ಚೀಲದಲ್ಲಿ ತುಂಬಿಸಿ ತಂದಿದ್ದೇವೆ. ಅದನ್ನೆಲ್ಲ ನಾಡಿನ ಜನತೆಗೆ ಹಂಚಲಿದ್ದೇವೆ...”
ಕಾಸಿ ಮುಗ್ಧವಾಗಿ ಕೇಳಿದ “ಅಂದರೆ, ಅವರು ಈವರೆಗೆ ಅಜ್ಞಾನಿಯಾಗಿದ್ದರಾ...?”

ಶೋಭಾ ಒಂದು ಕ್ಷಣ ಕಾಸಿಯನ್ನು ದುರುಗುಟ್ಟಿ ನೋಡಿ, ಬಳಿಕ ಸಾವಾಧಾನವಾಗಿ ಸ್ಪಷ್ಟೀಕರಣ ನೀಡಿದರು “ನೋಡ್ರಿ? ಇದು ವಿಶೇಷವಾದ ಜ್ಞಾನ...ಚೀನ ಪ್ರವಾಸದ ಕುರಿತಂತೆ ವಿರೋಧ ಪಕ್ಷದವರೆಲ್ಲ ಟೀಕಿಸಿ ದರಲ್ಲ? ಆದರೆ, ನೋಡಿ...ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರಿಗೆ ಚೀನದಲ್ಲಿ ಜ್ಞಾನೋದಯವಾಗಿದೆ....”
ಕಾಸಿಗೆ ಕುತೂಹಲವಾಯಿತು. ಗೋಣಿ ಚೀಲವನ್ನೇ ನೋಡುತ್ತಾ ಕೇಳಿದ “ಜ್ಞಾನ ನೋಡೋದಕ್ಕೆ ಹೇಗಿದೆ ಮೇಡಂ?”
ಶೋಭಾ ಬಳುಕುತ್ತಾ ಹೇಳಿದರು “ಯಡಿಯೂರಪ್ಪ ಅವರ ಮಗ ರಾಘವೇಂದ್ರರ ಹಾಗೆ ಮುದ್ದು ಮುದ್ದಾಗಿದೆ...”
ಕಾಸಿ ಕಣ್ಣು ಇಷ್ಟಗಲ ಮಾಡಿ “ಅಂದ್ರೆ ಜ್ಞಾನಕ್ಕೆ ರಾಘವೇಂದ್ರ ಅವರ ಹಾಗೆ ಮೀಸೇನೂ ಇದೆಯ ಮೇಡಂ...”

ಶೋಭಾ ಮತ್ತೆ ಗರಂ ಆದರು. ಆದರೂ ಸಹನೆಯಿಂದ ನುಡಿದರು “ಈಗಷ್ಟೇ ಉದಯವಾಗಿದೆ. ಮೀಸೆ Uಸೆ ಇರೋಲ್ಲ ಅನ್ನೋದು ಗೊತ್ತಿಲ್ವೇನ್ರಿ ನಿಮಗೆ? ಗಲ್ಲ, ಹಣೆ ಎಲ್ಲ ರಾಘವೇಂದ್ರ ಥರ ಇದೆ. ಕಣ್ಣು ಮಾತ್ರ ನನ್ನ ಹಾಗೆ...ಹಲ್ಲು ಸದಾನಂದ ಗೌಡರ ಹಾಗೆ....ಹೊಟ್ಟೆ ರೆಡ್ಡಿಗಳ ಹಾಗೆ ಇದೆ...”

ಕಾಸಿಗೆ ತುಂಬಾ ಖುಷಿಯಾಯಿತು “ಮೇಡಂ...ಈ ಜ್ಞಾನೋದಯ ಆದದ್ದು ಹೇಗೆ ಮೇಡಂ...?”

ಶೋಭಾ ಅವರು ತಮ್ಮ ಚೀನ ಪ್ರವಾಸವನ್ನು ವಿವರಿಸತೊಡಗಿದರು. “ನಾವು ಚೀನದ ಬೇರೆ ಬೇರೆ ಕೃಷಿಯ ಕುರಿತಂತೆ ವಿವಿಧ ಹೊಟೇಲ್‌ಗಳಲ್ಲಿ ಅಧ್ಯಯನ ನಡೆಸುತ್ತಿದ್ದೆವು. ಮೊದಲು ಕೋಳಿ ಸಾಕಣೆಯ ಬಗ್ಗೆ ತಿಳಿದುಕೊಳ್ಳಲು ಬೇರೆ ಬೇರೆ ರೀತಿಯ ಕೋಳಿ ಐಟಂಗಳ ಆರ್ಡರ್ ಮಾಡಿದೆವು. ಕೋಳಿ ಫ್ರೈ, ಟಿಕ್ಕಾ, ತಂದೂರಿ...ಹೀಗೆ...ಎಲ್ಲವನ್ನು ಅಧ್ಯ ಯನ ಮಾಡಿದೆವು. ಎರಡನೆ ದಿನ ಹಂದಿ ಉದ್ಯಮದ ಬಗ್ಗೆ ತಿಳಿದುಕೊಳ್ಳಲು ವಿವಿಧ ಹಂದಿ ಐಟಂಗಳನ್ನು ತರಿಸಿದೆವು. ಹೀಗೆ...ಬೇರೆ ಬೇರೆ ಹೊತ್ತಲ್ಲಿ ಕುರಿ, ಆಡು, ಫಿಶ್ ಹೀಗೆ ವಿವಿಧ ಕೃಷಿಗಳ ಕುರಿತಂತೆ ಅಧ್ಯಯನ ನಡೆಸಿದೆವು. ಹಾಗೆಯೇ ವಿವಿಧ ಬೀಚ್‌ಗಳಲ್ಲಿ ಕುಳಿತು ರೈತರ ಬಗ್ಗೆ ಚರ್ಚೆಗಳನ್ನು ನಡೆಸಿದೆವು. ಚೀನದ ವಿವಿಧ ನಗರಗಳಲ್ಲಿ ಶಾಪಿಂಗ್ ನಡೆಸಿ ರೈತರ ಬೆಳೆಗಳಿಗೆ ಯಾವ ರೀತಿಯ ದರ ಇದೆ ಎಂದು ತಿಳಿದುಕೊಂಡೆವು. ಆ ಬಳಿಕ ಕೃಷಿ ಸಚಿವರನ್ನು ಭೇಟಿಯಾಗಿ ಅವರಿಗೆ ಕೆಲವು ಸಲಹೆಗಳನ್ನು ನಾವು ನೀಡಿದೆವು...”
“ನೀವು ಚೀನ ಕೃಷಿ ಸಚಿವರಿಗೆ ಸಲಹೆಗಳನ್ನು ನೀಡಿದಿರ?” ಕಾಸಿ ಅನುಮಾನದಿಂದ ಕೇಳಿದ.

“ಹೌದು ಕಣ್ರೀ. ಅಲ್ಲಿನ ಕೃಷಿ ಸಚಿವರು ಅನನುಭವಿಗಳು. ನಾಡಿನ ಕೃಷಿಕರ ಹಣವನ್ನು ಹೇಗೆ ನಮ್ಮ ಸ್ವಂತ ಜಮೀನಿನ ಕೃಷಿಗೆ ಬಳಸಬಹುದು ಎನ್ನುವುದನ್ನು ಅವರಿಗೆ ಹೇಳಿಕೊಟ್ಟೆವು. ರೈತರ ಹಣವನ್ನು ಹೇಗೆ ವೈಯಕ್ತಿಕವಾಗಿ ನಾವು ಸದ್ಬಳಕೆ ಮಾಡಬಹುದು ಎನ್ನುವುದನ್ನು ವಿವರಿಸಿದೆವು. ನಾಡಿನ ರೈತರ ಹಣದಿಂದ ಹೇಗೆ ಮನೆಯ ಕೃಷಿ ಭೂಮಿಯನ್ನು, ತೋಟವನ್ನು ವಿಸ್ತರಿಸಬಹುದು ಎನ್ನುವುದರ ಕುರಿತಂತೆಯೂ ಅವರಿಗೆ ಮಾಹಿತಿ ನೀಡಿದೆವು. ಇದಕ್ಕೆ ಪ್ರತಿಯಾಗಿ ಅವರು ನಮ್ಮ ರೈತರಿಗೆ ಕೆಲವನ್ನು ನೀಡಿದರು...”
“ನಾಡಿನ ಕೃಷಿಕರಿಗಾಗಿ ಅವರೇನನ್ನು ನೀಡಿದರು ಮೇಡಂ?” ಕಾಸಿ ಕೇಳಿದ

ಶೋಭಾ ಮೇಡಂ ನುಡಿದರು “ಗೊಬ್ಬರ, ಬಿತ್ತನೆ ಬೀಜ ಕೇಳಿ ಪ್ರತಿಭಟನೆ ನಡೆಸುವ ರೈತರ ಮೇಲೆ ಹಾರಿಸುವುದಕ್ಕಾಗಿ ತಿಯಾನೈನ್ ಚೌಕ್‌ನಲ್ಲಿ ಬಳಸಿದ್ದ ಕೋವಿಗಳನ್ನು ಕರ್ನಾಟಕಕ್ಕೆ ಪೂರೈಸುವ ಭರವಸೆಯನ್ನು ನೀಡಿದರು. ಚೈನಾ ನಿರ್ಮಿತ ಲಾಠಿಗಳನ್ನು, ಪೊಲೀಸರಿಗೆ ಬೂಟುಗಳನ್ನು ನೀಡುವ ಭರವಸೆ ನೀಡಿದರು. ಹಾಗೆಯೇ ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ನಮಗೆ ನೀಡಿದ್ದಾರೆ. ಈಗಾಗಲೇ ಗಡಿ ಭಾಗದಲ್ಲಿ ಭಾರತದ ಭೂಮಿಯನ್ನು ಒತ್ತುವರಿ ಮಾಡಿ ಅಪಾರ ಅನುಭವವಿರುವುದರಿಂದ ನಮಗೆ ಅವರ ತರಬೇತಿಯಿಂದ ಬಹಳ ಪ್ರಯೋಜನ ವಾಗಿದೆ. ಅದನ್ನೆಲ್ಲ ನಾವು ಆಡಳಿತದಲ್ಲಿ ಸದ್ಬಳಕೆ ಮಾಡಲಿದ್ದೇವೆ...”

ಕಾಸಿಯ ಕಣ್ಣು ಮತ್ತೆ ಗೋಣಿ ಚೀಲದತ್ತ ಹೊರಳಿತು “ಮೇಡಂ... ಯಡಿಯೂರಪ್ಪ ಅವರಿಗೆ ಜ್ಞಾನೋದಯ ಹೇಗಾಯಿತು ಎಂದು ಹೇಳೇ ಇಲ್ಲ...”
ಶೋಭಾ ಅವರು ವಿವರಿಸತೊಡಗಿದರು “ಕೈಯಲ್ಲಿ ವಿಸ್ಕಿಯ ಕಮಂಡಲ ಹಿಡಿದು ಚೀನಾದ ಹೊಟೇಲೊಂದರ ಕೋಣೆಯಲ್ಲಿ ಏಸಿಯ ಅಡಿಯಲ್ಲಿ ಕುಳಿತು ಅವರು ಧ್ಯಾನ ಮಾಡುತ್ತಿದ್ದರು. ಮೊದಲ ಪೆಗ್ಗಿಗೆ ಏನೂ ಸಂಭವಿಸಿರಲಿಲ್ಲ. ಎರಡನೆ ಪೆಗ್ಗಿಗೆ ಅದೇನೋ ಕಿಟಕಿಯ ಬಳಿ ಸುಳಿದಂತಾಯಿತು. ಬಾಟ್ಲಿ ಖಾಲಿಯಾದದ್ದೇ...ಯಡಿಯೂರಪ್ಪ ಒಮ್ಮೆಲೆ “ಜ್ಞಾನೋದಯ ವಾಯಿತು...” ಎಂದು ಘೋಷಿಸಿದರು” ಕಿಟಕಿಯ ಬಳಿಯಲ್ಲಿ ನೋಡುತ್ತೇವೆ ಏನೋ ತಲೆ ಕಾಣುತ್ತಿದೆ....ತಕ್ಷಣ ಅದು ಜ್ಞಾನ ಎನ್ನುವುದು ಅರಿವಾಯಿತು. ಕಿಟಕಿಯಿಂದ ಎಳೆದು ಜ್ಞಾನವನ್ನು ಗೋಣಿ ಚೀಲದೊಳಗೆ ಹಾಕಿ ತೆಗೆದುಕೊಂಡು ಬಂದೆವು. ಮುಂದಿನ ದಸರಾದಲ್ಲಿ ಈ ಜ್ಞಾನವನ್ನು ಪ್ರವಾಸಿಗರಿಗೆ ಪ್ರದರ್ಶಿಸಲಿದ್ದೇವೆ...”

ಅಷ್ಟರಲ್ಲಿ ಗೋಣಿ ಚೀಲ ಅಲುಗಾಡಿದಂತಾ ಯಿತು. ಕಾಸಿ ಕುತೂಹಲದಿಂದ “ಮೇಡಂ, ಸ್ವಲ್ಪ ಚೀಲ ಬಿಚ್ಚಿದರೆ ನಾನೂ ಜ್ಞಾನದ ಮುಖ ನೋಡಿ ಕೃತಾರ್ಥನಾಗಬಹುದಿತ್ತು...”
ಯಡಿಯೂರಪ್ಪ ಮಗ ರಾಘವೇಂದ್ರರಿಗೆ ಕಾಸಿಯ ಕುರಿತಂತೆ ಯಾಕೋ ಪ್ರೀತಿ ಉಕ್ಕಿತು “ಸ್ವಲ್ಪ ತೋರಿಸೋಣ ಮೇಡಂ...” ಎನ್ನುತ್ತಾ ಗೋಣಿ ಚೀಲ ಬಿಚ್ಚಿದರು.

ಬಿಚ್ಚಿದ್ದೇ ಅದರೊಳಗಿಂದ ಬಿಳಿ ವಸ್ತ್ರ ಧರಿಸಿದ ಚೀನಿ ತರುಣನೊಬ್ಬ ಹೊರ ಹಾರಿ, ಏದುಸಿರು ಬಿಟ್ಟು ಇಂಗ್ಲಿಷ್‌ನಲ್ಲಿ ಯದ್ವಾತದ್ವಾ ಬೈಯ ತೊಡಗಿದ “ನಾನೂ ನಿಮ್ಮ ಹೊಟೇಲ್‌ನ ವೈಟರ್ ಕಣ್ರೀ...ಸುಮ್ಮನೆ ಕುತೂಹಲದಿಂದ ನಿಮ್ಮ ಕೋಣೆಗೆ ಕಿಟಕಿಯಿಂದ ಇಣಿಕಿದ್ದಕ್ಕೆ ನೀವು ನನ್ನನ್ನು ಗೋಣಿ ಚೀಲದಲ್ಲಿ ಹಾಕಿ ತಂದು ಬಿಡೋದಾ...? ನಿಮ್ಮ ಮೇಲೆ ಚೀನ ಅಧ್ಯಕ್ಷರಿಗೆ ದೂರು ಕೊಟ್ಟು ಭಾರತದ ವಿರುದ್ಧ ಯುದ್ಧ ಸಾರುವ ಹಾಗೆ ಮಾಡ್ತೀನಿ....” ಎಂದು ತನ್ನ ಚೀನಾ ಯುದ್ಧ ಕಲೆಯನ್ನು ಪ್ರದರ್ಶಿಸ ತೊಡಗಿದ. ಗೋಣಿ ಚೀಲವನ್ನು ಬಿಟ್ಟು ಯಡಿಯೂರಪ್ಪ ಸಹಚರರು ‘ಬದುಕಿದರೆ, ಜೆಡಿ‌ಎಸ್‌ನೊಂದಿಗೆ ಮೈತ್ರಿ ಮಾಡಿ ಜೀವಿಸಬಹುದು” ಎಂದು ಓಡತೊಡಗಿದರು.

(ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚೀನ ಪ್ರವಾಸದ ಹಿನ್ನೆಲೆಯಲ್ಲಿ ಬರೆದಿರುವುದು. ರವಿವಾರ ಸೆಪ್ಟಂಬರ್ ೧೩, ೨೦೦೯ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ)

ನಾನು ಸತ್ಯ ಹೇಳುವುದಕ್ಕೆ ಬಂದಿದ್ದೇನೆ......

“ಸಚ್ ಕಾ ಸಾಮ್ನಾ’ ಎಂಬ ಸ್ಟಾರ್ ಪ್ಲಸ್‌ನ ರಿಯಾಲಿಟಿ ಶೋ ಸಕ್ಸಸ್ ಆಗಿರುವುದು ಕಂಡು, ತಾನೂ ಕೂಡ ಇಂತಹದೊಂದು ಕಾರ್ಯಕ್ರಮವನ್ನು ಟಿ.ವಿ.ಗಳಲ್ಲಿ ನಡೆಸಿಕೊಟ್ಟರೆ ಹೇಗೆ ಎಂದು ಪತ್ರಕರ್ತ ಎಂಜಲು ಕಾಸಿ ಯೋಚಿಸತೊಡಗಿದ. ಪತ್ರಕರ್ತನಾಗಿ ಸಿಕ್ಕ ಸಿಕ್ಕವರಿಂದ ತಪರಾಕಿ ತಿಂದು ಬೋರಾಗಿದ್ದ ಎಂಜಲು ಕಾಸಿಗೆ ಒಂದು ಚೇಂಜ್ ಬೇಕಿತ್ತು. ಈ ಹಿನ್ನೆಲೆಯಲ್ಲಿ ಟಿ.ವಿಯೊಂದರಲ್ಲಿ ಆಂಕರ್ ಆಗಿ ಸೇರಿಕೊಂಡೇ ಬಿಟ್ಟ. ಸತ್ಯದ ತಲೆಯ ಮೇಲೆ ಹೊಡೆಯುವಂತೆ, ಸಚ್ ಕಾ ಸಾಮ್ನಾ ಕಾರ್ಯಕ್ರಮವನ್ನು ಯಥಾವತ್ ಕಾಪಿ ಹೊಡೆದು, ‘ನಗ್ನ ಸತ್ಯ’ ಎಂದು ತನ್ನ ಕಾರ್ಯಕ್ರಮಕ್ಕೆ ಹೆಸರು ಕೊಟ್ಟ. ಕಾರ್ಯಕ್ರಮದ ಪ್ರಕಾರ, ಕೇಳಿದ ಸುಮಾರು ೨೫ ಪ್ರಶ್ನೆಗಳಲ್ಲಿ ಎಲ್ಲಕ್ಕೂ ಸರಿ ಉತ್ತರಿಸಿದವನಿಗೆ ಬಹುಮಾನ. ಹೇಳಿದ್ದು ಸುಳ್ಳೋ, ಸತ್ಯವೋ ಎನ್ನುವುದನ್ನು ‘ಪಾಲಿಗ್ರಾಫ್’ ಮೂಲಕ ಮೊದಲು ಪರೀಕ್ಷಿಸಲಾಗುತ್ತದೆ. ಅದೇನು ಅದೃಷ್ಟ ಮಾಡಿದ್ದನೋ, ಕಾರ್ಯಕ್ರಮದ ಮೊದಲ ಅತಿಥಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಮಿಸಿದರು.

***
ಎಂಜಲು ಕಾಸಿ ಹಲ್ಲು ಕಿರಿಯುತ್ತಾ, ಸತ್ಯವನ್ನು ನಗ್ನಗೊಳಿಸಲು ಆರಂಭಿಸಿದ “ಸಾರ್, ಇಲ್ಲಿ ತಲಾ ಐದರ ಹಾಗೆ ೨೫ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲ ಐದು ಪ್ರಶ್ನೆಗಳಿಗೆ ಸತ್ಯ ಉತ್ತರಿಸಿದರೆ ನಿಮಗೆ ೫ ಚೀಲ ರಸಗೊಬ್ಬರವನ್ನು ನೀಡಲಾಗುತ್ತದೆ. ಆದರೆ ಇನ್ನೂ ಐದು ಪ್ರಶ್ನೆಗಳಿಗೆ ಸುಳ್ಳು ಹೇಳದೆ ನಿಜ ಉತ್ತರಿಸಿದರೆ ಎರಡು ಕೆ.ಜಿ. ತೊಗರಿ ಬೇಳೆಯನ್ನು ಬಹುಮಾನವಾಗಿ ಕೊಡಲಾಗುತ್ತದೆ. ಆದರೆ ಒಂದೇ ಒಂದು ಪ್ರಶ್ನೆಗೆ ಸುಳ್ಳು ಉತ್ತರ ನೀಡಿದರೂ, ಹಿಂದಿನ ಐದು ಚೀಲ ಗೊಬ್ಬರವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೂರನೆ ಹಂತದಲ್ಲಿ ಮತ್ತೆ ಹತ್ತು ಪ್ರಶ್ನೆ. ಈ ಹತ್ತು ಪ್ರಶ್ನೆಗಳಿಗೆ ಉತ್ತರಿಸಿದರೆ ಐದು ಚೀಲ ಗೊಬ್ಬರ, ಎರಡು ಕೆ.ಜಿ. ತೊಗರಿ ಬೇಳೆಯ ಜೊತೆಗೆ ಐದು ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತದೆ. ಕೊನೆಯ ಐದು ಪ್ರಶ್ನೆಗಳಿಗೂ ನಿಜ ಹೇಳಿದರೆ ಮೇಲಿನ ಎಲ್ಲ ವಸ್ತುಗಳ ಜೊತೆಗೆ, ತುಂಬಾ ಬೆಲೆಬಾಳುವ ಐದು ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತೆ. ನೀವು ಹೇಳಿದ್ದು ಸತ್ಯವೋ, ಸುಳ್ಳೋ ಎನ್ನುವುದನ್ನು ಪಾಲಿಗ್ರಾಪ್ ಮೆಶಿನ್ ಹೇಳುತ್ತದೆ. ಇಲ್ಲಿ ಕುಟುಂಬದ ಸದಸ್ಯರೂ ಉಪಸ್ಥಿತರಿದ್ದಾರೆ. ಅವರ ಮುಂದೆ ನೀವು ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸತ್ಯ ಹೇಳುವುದಕ್ಕೆ ಸಿದ್ಧರಿದ್ದೀರಾ?” ಕಾಸಿ ಕೇಳಿದ.
ಯಡಿಯೂರಪ್ಪ ನಗುತ್ತಾ ಹೇಳಿದರು “ಸತ್ಯವೇ ನಮ್ಮ ತಂದೆ ತಾಯಿ, ಸತ್ಯವೇ ನಮ್ಮ ಬಂಧು ಬಳಗ ಎಂದು ಸರ್ವಜ್ಞ ಹೇಳಲಿಲ್ಲವೆ ಕಾಸಿಯವರೆ? ಸರ್ವಜ್ಞ ಹಾಗೆ ಹೇಳಿರುವುದೇ ನಮ್ಮ ಹಿರಿಯರ ಕುರಿತಂತೆ. ಸತ್ಯ ಹೇಳುವುದಕ್ಕೆ ನಾನು ಸಿದ್ಧ” ಎಂದರು. ಕಾಸಿಗೆ ಗೊಂದಲವಾಯಿತು. ಸತ್ಯವೇ ನಮ್ಮ ತಂದೆ ತಾಯಿ ಎಂಬ ಹಾಡನ್ನು ಸರ್ವಜ್ಞ ಹೇಳಿರುವುದು ನಿಜವೇ? ಸರ್ವಜ್ಞನ ವಚನಗಳಲ್ಲಿ ಈ ಸಾಲುಗಳನ್ನು ಕೇಳಿದ ನೆನಪಿಲ್ಲವಲ್ಲ?
ಕಾಸಿ ಗೊಂದಲದ ಜೊತೆಗೇ ಪ್ರಶ್ನೋತ್ತರವನ್ನು ಆರಂಭಿಸಿದ.
“ಯಡಿಯೂರಪ್ಪನವರೇ, ಮೊದಲ ಹಂತ ದಲ್ಲಿ ೫ ಪ್ರಶ್ನೆಗಳನ್ನು ಕೇಳುತ್ತೇನೆ. ಈ ಐದು ಪ್ರಶ್ನೆಗಳಿಗೂ ಸತ್ಯವನ್ನೇ ಹೇಳಿದರೆ ಐದು ಚೀಲ ಗೊಬ್ಬರ ನಿಮಗೆ. ಸತ್ಯ ಹೇಳುವುದಕ್ಕೆ ಮೊದಲು ಇಲ್ಲಿ ಬಂದಿರುವ ನಿಮ್ಮ ಕುಟುಂಬ ಸದಸ್ಯರ ಪರಿಚಯ ಮಾಡಿಕೊಳ್ಳೋಣ”
ಅಷ್ಟರಲ್ಲಿ ಅಲ್ಲಿದ್ದ ಕುಟುಂಬ ಸದಸ್ಯರು ಒಬ್ಬೊಬ್ಬರೇ ತಮ್ಮ ಪರಿಚಯ ಮಾಡಿಕೊಳ್ಳತೊ ಡಗಿದರು “ನಾನು ರಾಘವೇಂದ್ರ. ಯಡಿಯೂರಪ್ಪನವರ ಮಗ” “ನಾನು ಶೋಭಾ. ಯಡಿಯೂರಪ್ಪನವರ ಕುಟುಂಬದ ಸದಸ್ಯೆ...” ಎನ್ನುತ್ತಾ ನಾಚಿ ಕೊಂಡರು. “ನಾನು ಅನಂತಕುಮಾರ್. ಯಡಿಯೂರಪ್ಪನವರ ಚಡ್ಡಿ ದೋಸ್ತ್” ಎನ್ನುತ್ತಾ ನಕ್ಕರು. ಮತ್ತೊಂದು ಹುಡುಗಿ ಎದ್ದು ನಿಂತು ಹೇಳಿತು “ನಾನು, ಯಡಿಯೂರಪ್ಪನವರ ಅಣ್ಣನ ಮಗಳು... ಯಡಿಯೂರಪ್ಪ ನನಗೆ ಚಿಕ್ಕಪ್ಪ ಆಗ್ಬೇಕು.”
ಕಾಸಿಗೆ ಅಚ್ಚರಿಯಾಯಿತು. ನನಗೆ ಗೊತ್ತಿಲ್ಲದ ಯಡಿಯೂರಪ್ಪನವರ ಅಣ್ಣ ಯಾರು? ಯಡಿಯೂರಪ್ಪ ನಕ್ಕರು “ಅವರು ಕರುಣಾನಿಧಿಯ ಮಗಳು. ನಾವಿಬ್ಬರು ಅಣ್ಣ ತಮ್ಮ ಆದುದರಿಂದ, ಕರುಣಾನಿಧಿಯ ಮಗಳು ನನಗೆ ಸಂಬಂಧಿಯಾಗುತ್ತಾಳಲ್ಲ...”
ಕಾಸಿ ಪ್ರಶ್ನೆ ಕೇಳಲು ಆರಂಭಿಸಿದ.
“ಮೊದಲ ಪ್ರಶ್ನೆ. ನಿಮ್ಮ ಹೆಸರು ಯಡಿಯೂರಪ್ಪ. ಇದು ನಿಜವೋ, ಸುಳ್ಳೋ...”
ಯಡಿಯೂರಪ್ಪ ತಲೆ ತುರಿಸಿ ಯೋಚಿಸಿ ಉತ್ತರಿಸಿದರು “ಇದು ನಿಜ”
ಪಾಲಿಗ್ರಾಫ್ ತಕ್ಷಣ ಹೇಳಿತು “ಈ ಉತ್ತರ ಸತ್ಯ”
ಯಡಿಯೂರಪ್ಪ ಬೆವರೊರೆಸಿಕೊಂಡರು. ಹೆಮ್ಮೆಯಿಂದ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದರು. ಯಡಿಯೂರಪ್ಪ ಹೇಳಿದ ಮೊತ್ತ ಮೊದಲ ಸತ್ಯವನ್ನು ಕೇಳಿ ಗ್ಯಾಲರಿಯಲ್ಲಿ ಕುಳಿತ ಬಿಜೆಪಿ ಸದಸ್ಯರೆಲ್ಲ ಭಾವುಕರಾಗಿ ಒಂದೇ ಸಮನೆ ಚಪ್ಪಾಳೆ ತಟ್ಟಿದರು.

ಕಾಸಿ ಹೇಳಿದ “ಅಭಿನಂದನೆಗಳು ಯಡಿಯೂರಪ್ಪನವರೆ. ನೀವು ಹೇಳಿದ್ದು ಸತ್ಯ ಎಂದು ಪಾಲಿಗ್ರಾಪ್ ಮೂಲಕ ಸಾಬೀತಾಗಿದೆ. ಐದು ಚೀಲ ಗೊಬ್ಬರಕ್ಕೆ ಇನ್ನು ನಾಲ್ಕೇ ನಾಲ್ಕು ಪ್ರಶ್ನೆಗಳು ಬಾಕಿ ಉಳಿದಿವೆ. ಒಂದು ವೇಳೆ ಈ ಐದೂ ಪ್ರಶ್ನೆಗಳನ್ನು ಗೆದ್ದರೆ ಸಿಕ್ಕುವ ಐದು ಚೀಲ ಗೊಬ್ಬರವನ್ನು ಏನು ಮಾಡುತ್ತೀರಿ ಯಡಿಯೂರಪ್ಪನವರೆ?”
ಯಡಿಯೂರಪ್ಪ ಹೇಳಿದರು “ನನ್ನ ಅಣ್ಣನ ಮಗಳು ಬಂದಿದ್ದಾಳೆ. ತಮಿಳು ನಾಡಿನಲ್ಲಿ ಅಣ್ಣನಿಗೆ ಸ್ವಲ್ಪ ಗೊಬ್ಬರ ಕೊರತೆಯಿದೆಯಂತೆ. ಅವಳ ಕೈಯಲ್ಲಿ ಅಣ್ಣನಿಗೆ ಕೊಟ್ಟು ಕಳುಹಿಸುತ್ತೇನೆ”
ಕಾಸಿ ‘ನಗ್ನ ಸತ್ಯ’ವನ್ನು ಮುಂದುವರಿಸಿದ. ಈಗ ಎರಡನೆ ಪ್ರಶ್ನೆ. “ನೀವು ಕರ್ನಾಟಕದ ಮುಖ್ಯಮಂತ್ರಿ ಹೌದೇ?”
ಭಯಂಕರ ಪ್ರಶ್ನೆಯಾಗಿ ಕಂಡಿತು. ವರಿಷ್ಠರು ಯಾವ ಕ್ಷಣದಲ್ಲೂ ತನ್ನನ್ನು ಕೆಳಗಿಳಿಸುವ ಸಾಧ್ಯತೆಯಿರುವುದರಿಂದ, ಕಳೆದ ಐದು ನಿಮಿಷದಿಂದ ತಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೋ ಇಲ್ಲವೋ ಎನ್ನುವುದು ಅವರಿಗೆ ಸ್ಪಷ್ಟವಿರಲಿಲ್ಲ. ಅನಂತಕುಮಾರ್‌ರ ಮುಖವನ್ನೊಮ್ಮೆ ನೋಡಿದರು. ಅಲ್ಲಿ, ಇನ್ನೂ ಪ್ರೇತಕಳೆಯಿದ್ದುದು ಕಂಡು ನೆಮ್ಮದಿಯಿಂದ ಹೇಳಿದರು “ಹೌದು. ನಿಜ”
ಕಾಸಿಗೆ ಅಚ್ಚರಿಯಾಯಿತು. ಇಷ್ಟು ಕಷ್ಟದ ಪ್ರಶ್ನೆಯನ್ನೂ ಉತ್ತರಿಸಿದರಲ್ಲ. “ನಿಮ್ಮ ಪ್ರಶ್ನೆ ನಿಜವೋ, ಸುಳ್ಳೋ ಎನ್ನುವುದನ್ನು ಪಾಲಿಗ್ರಾಫ್ ಮೂಲಕ ನೋಡೋಣ...”
ಪಾಲಿಗ್ರಾಪ್ ಹೇಳಿತು “ಈ ಉತ್ತರ ಸತ್ಯ”

ಯಡಿಯೂರಪ್ಪ ನಿರಾಳವಾಗಿ ನಿಟ್ಟುಸಿರಿಟ್ಟರು. ಕಾಸಿ ಅಚ್ಚರಿಯಿಂದ ಕೇಳಿದ “ಸಾರ್...ಇಷ್ಟು ಗ್ಯಾರಂಟಿಯಾಗಿ ಹೇಳಲು ನಿಮಗೆ ಹೇಗೆ ಸಾಧ್ಯವಾಯಿತು...”
ಯಡಿಯೂರಪ್ಪ ನಕ್ಕು ಹೇಳಿದರು “ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರೆ, ಅನಂತಕುಮಾರ್ ಇಲ್ಲೇಕೆ ಕುಳಿತಿರುತ್ತಿದ್ದರು. ತಕ್ಷಣ, ಇಲ್ಲಿಂದ ಓಡಿ, ಮುಖ್ಯಮಂತ್ರಿ ಸ್ಥಾನ ಏರುತ್ತಿದ್ದರು” ಗ್ಯಾಲರಿಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.
ಕಾಸಿ ಮುಂದುವರಿಸಿದ “ಈಗ ಮೂರನೆ ಪ್ರಶ್ನೆ. ಸರ್ವಜ್ಞ ಮತ್ತು ತಿರುವಳ್ಳುವರ್ ಲಿಂಗಾಯತರು ಎನ್ನುವ ಕಾರಣಕ್ಕೆ ಅವರ ಪ್ರತಿಮೆಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ನೀವು ಸ್ಥಾಪಿಸಲು ಮುಂದಾದಿರಿ. ನಿಜವೇ?”
ಯಡಿಯೂರಪ್ಪ ಸ್ವಲ್ಪವೂ ಅಂಜದೆ ಹೇಳಿದರು “ನಿಜ”
ಪಾಲಿಗ್ರಾಫ್ ತಕ್ಷಣ ಉತ್ತರಿಸಿತು “ಈ ಉತ್ತರ ಸತ್ಯ”
ಕಾಸಿಗೆ ಅಚ್ಚರಿಯಾಯಿತು. “ಸರ್ವಜ್ಞ, ತಿರುವಳ್ಳುವರ್ ಲಿಂಗಾಯತರು ಎನ್ನುವುದು ನಿಮಗೆ ಹೇಗೆ ಗೊತ್ತು?”
ಯಡಿಯೂರಪ್ಪ ನಿರಾಳವಾಗಿ ಉತ್ತರಿಸಿದರು “ಲಿಂಗಾಯತರಲ್ಲದಿದ್ದರೆ ಏನಾಯಿತು? ಯಾರಾದರೂ ಸಂಶೋಧಕರನ್ನು ನೇಮಿಸಿ, ಅವರು ಲಿಂಗಾಯತರು ಎನ್ನುವುದನ್ನು ಕಂಡು ಹಿಡಿದರೆ ಆಯಿತು”

ಕಾಸಿ ತನ್ನ ಪ್ರಶ್ನೆಯನ್ನು ಮುಂದುವರಿಸಿದ “ಇದು ಕೊನೆಯ ಪ್ರಶ್ನೆ. ಈ ಪ್ರಶ್ನೆಗೆ ನಿಜ ಹೇಳಿದರೆ ಐದು ಚೀಲ ಗೊಬ್ಬರ ನಿಮ್ಮದು. ನಿಮ್ಮ ಎದುರುಗಡೆ ಇರುವ ಶೋಭಾ ಕರಂದ್ಲಾಜೆಯವರನ್ನು ಉಪಮುಖ್ಯಮಂತ್ರಿ ಮಾಡುವ ಇಚ್ಛೆ ನಿಮ್ಮ ಮನದಾಳದಲ್ಲಿದೆ. ಇದು ನಿಜವೋ ಸುಳ್ಳೋ.....”

ಅಷ್ಟರಲ್ಲಿ ಗ್ಯಾಲರಿಯಲ್ಲಿ ದಡಬಡ ಸದ್ದು. ಯಡಿಯೂರಪ್ಪ ಏನು ಉತ್ತರಿಸುತ್ತಾರೆ ಎಂದು ಆತಂಕದಿಂದ ರೆಡ್ಡಿಗಳು ಎದ್ದು ನಿಂತರು. ದಿಲ್ಲಿಯಿಂದ ವರಿಷ್ಠರು ವಿಮಾನ ಹತ್ತಿಯೇ ಬಿಟ್ಟರು. ಯಡಿಯೂರಪ್ಪ ಕಂಗಾಲಾಗಿ ಹೇಳಿದರು “ಗೊಬ್ಬರವನ್ನು ನೀವೇ ಇಟ್ಟುಕೊಳ್ಳಿ. ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಿಲ್ಲ” ಎಂದವರೇ ಬದುಕಿದೆಯಾ ಬಡಜೀವ ಎಂದು ಓಡತೊಡಗಿದರು. ಐದು ಚೀಲ ಗೊಬ್ಬರ ಲಾಭ ಆಯಿತು ಎಂದು ಕಾಸಿಗೆ ತುಂಬಾ ಸಂತೋಷವಾಯಿತು.

***
ಅಷ್ಟರಲ್ಲಿ ‘ನಗ್ನ ಸತ್ಯ’ ರಿಯಾಲಿಟಿ ಶೋದಲ್ಲಿ ಸತ್ಯ ಹೇಳಲು ಇನ್ನೊಬ್ಬ ಹಿರಿಯ ವ್ಯಕ್ತಿ ಬಂದರು. ನೋಡಿದರೆ ಮಾಜಿ ಪ್ರಧಾನಿ ದೇವೇಗೌಡರು. ಬಂದವರೇ ಕುರ್ಚಿಯಲ್ಲಿ ಕುಳಿತು ನಿಟ್ಟುಸಿರಿಟ್ಟು ಕಾಸಿಗೆ ಹೇಳಿದರು “ನಾನು ಸತ್ಯ ಹೇಳುವುದಕ್ಕೆ ಬಂದಿದ್ದೇನೆ....”
ಅಷ್ಟರಲ್ಲೇ ಪಾಲಿಗ್ರಾಫ್ ಮೆಶಿನ್ ದೊಡ್ಡ ದನಿಯಲ್ಲಿ ಅರಚತೊಡಗಿತು “ಸುಳ್ಳು ಸುಳ್ಳು ಸುಳ್ಳು ಸುಳ್ಳು.........”

(ರವಿವಾರ ಆಗಸ್ಟ್ ೧೬, ೨೦೦೯ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟ)

ಚೆನ್ನಾಗಿದೆ. ಆದರೆ ಇನ್ನಷ್ಟು ಸ್ಟ್ರಾಂಗ್ ಆಗಬೇಕಾಗಿದೆ...!

ಆಚಾರ್ಯ ಕಂಪೆನಿಯಿಂದ ಹೊರಬಿದ್ದ ಹೊಸ ತಂಪು ಪಾನೀಯ ‘ಕೋಕಾ ಕಾಲ’ವನ್ನು ಯಡಿಯೂರಪ್ಪ ಉದ್ಘಾಟನೆ ಮಾಡಿದ್ದೇ, ಒಂದು ಗುಟುಕು ಬಾಯಿಗಿಟ್ಟು ಚಪ್ಪರಿಸಿ “ಅದ್ಭುತವಾಗಿದೆ!” ಎಂದರು. ಉದ್ಘಾಟನೆಯಾದುದಷ್ಟೇ, ಬಿಜೆಪಿ, ಸಂಘ ಪರಿವಾರದ ನಾಯಕರು ‘ಕೋಕಾ-ಕಾಲ’ ಬಾಟಲಿಗಾಗಿ ಒಬ್ಬರ ಮೇಲೆ ಒಬ್ಬರು ಬೀಳ ತೊಡಗಿದರು.

“ಎಲ್ಲರೂ ಸಾಲಾಗಿ ನಿಂತು, ಕೋಕಾ ಕಾಲ ಬಾಟಲಿಯನ್ನು ಪಡೆಯಬೇಕು. ಈ ತಂಪು ಪಾನೀಯ ಬಿಡುಗಡೆಯಲ್ಲಿ ಪತ್ರಕರ್ತರ ಪಾಲು ದೊಡ್ಡದಿರುವುದರಿಂದ ಮೊದಲು ಅವರು ಸೇವಿಸಿ, ಉಳಿದುದನ್ನು ಪಕ್ಷದ ಸಚಿವರು, ಶಾಸಕರು ಕುಡಿಯಬೇಕು...” ಆಚಾರ್ಯರು ಸಮಾರಂಭದಲ್ಲಿ ಮದು ಮಗನಂತೆ ಓಡಾಡುತ್ತಿದ್ದರು. ಪತ್ರಕರ್ತ ಎಂಜಲು ಕಾಸಿ ಆಚಾರ್ಯರ ಇಂಟರ‍್ಯೂಗಾಗಿ ಅವರ ಹಿಂದೆಯೇ ಓಡಾಡುತ್ತಿದ್ದ. ಆದರೆ ಅವರು ಕೈಗೆ ಸಿಗುತ್ತಿರಲಿಲ್ಲ. ಮೂರು ಮೂರು ಬಾಟಲು ಕೋಕಾ ಕಾಲವನ್ನು ಕುಡಿದ ಕಾರಣ, ಆಚಾರ್ಯರು ಶೌಚಾಲಯದೆಡೆಗೆ ಧಾವಿಸಿದಾಗ ಶೌಚಾಲಯದ ಬಾಗಿಲಿಗೆ ಅಡ್ಡ ನಿಂತ ಪತ್ರಕರ್ತ ಕಾಸಿ, ಅಲ್ಲೇ ಇಂಟರ‍್ಯೂ ಮಾಡಿದ. ಆಚಾರ್ಯರು ಅನಿವಾರ್ಯವಾಗಿ ಉತ್ತರಿಸಲೇ ಬೇಕಾಯಿತು.

“ಸಾರ್...ಈಗಾಗಲೇ ಕೋಕಾ ಕೋಲಾ ಇರುವಾಗ ನಿಮ್ಮ ತಂಪು ಪಾನೀಯ ಮಾರ್ಕೆಟ್‌ನಲ್ಲಿ ಹಣ ಮಾಡುತ್ತದೆ ಎಂದು ಹೇಳುತ್ತೀರಾ?”
ಆಚಾರ್ಯರು ಸಿಡುಕುತ್ತಾ ಹೇಳಿದರು “ಹಣ ಮಾಡದೇ ಇದ್ದರೂ, ಮತಗಳನ್ನಂತೂ ದೋಚು ತ್ತದೆ. ಮುಖ್ಯವಾಗಿ ಇದು ಅಪ್ಪಟ ಸ್ವದೇಶಿ ಪಾನೀಯ. ನಮ್ಮ ಆರೆಸ್ಸೆಸ್ ಕಚೇರಿಯಲ್ಲಿ ಹಲವು ಶತಮಾನಗಳಿಂದ ನಡೆಸಿದ ಸಂಶೋಧನೆಯ ಫಲ, ಈ ಕೋಕಾ ಕಾಲ. ಹಲವು ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ ಈ ಕೋಕಾವನ್ನು ನಾಡು ಒಕ್ಕೊರಲಿನಲ್ಲಿ ಸ್ವೀಕರಿಸುತ್ತದೆ ಎನ್ನುವ ಭರವಸೆ ನನಗಿದೆ”.
“ಸಾರ್, ವಿರೋಧ ಪಕ್ಷದ ನಾಯಕರಾರೂ ಕಾಣುತ್ತಿಲ್ಲವಲ್ಲ. ಇದು ನಿಮ್ಮ ಬ್ರಾಂಡ್‌ನ ಕುರಿತಂತೆ ತಪ್ಪು ಅಭಿಪ್ರಾಯವನ್ನು ಬಿತ್ತುವುದಿಲ್ಲವೇ?”
ಆಚಾರ್ಯರು ಕಾಸಿಯ ರೆಟ್ಟೆ ಹಿಡಿದು ವೇದಿಕೆಯ ಹಿಂಬದಿಗೆ ಎಳೆದೊಯ್ದರು. ನೋಡಿದರೆ, ಅಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿಯಾದಿಯಾಗಿ ಜೆಡಿ‌ಎಸ್- ಕಾಂಗ್ರೆಸ್ ನಾಯಕರೆಲ್ಲ ಹೆಗಲಿಗೆ ಕೈ ಹಾಕಿ ಆಚಾರ್ಯ ಕಂಪೆನಿಯ ಕೋಕಾಕಾಲವನ್ನು ಸವಿಯುತ್ತಿದ್ದರು.

ಕಾಸಿ ಅಚ್ಚರಿಯಿಂದ ಆ ಅದ್ಭುತವನ್ನು ನೋಡಿದ. ಆಚಾರ್ಯರು ತಮ್ಮ ಬೆನ್ನ ಹಿಂದೆ ಅದೃಶ್ಯವಾಗಿ ನೇತಾಡುತ್ತಿದ್ದ ಚಾಣಕ್ಯ ಜುಟ್ಟನ್ನೊಮ್ಮೆ ಸವರಿಕೊಂಡು ಹೇಳಿದರು “ನೋಡ್ರೀ...ಈ ಕೋಕಾ ಕಾಲಕ್ಕೆ ವಿರೋಧ ಪಕ್ಷದೋರೂ ಶೇರು ಹಾಕಿದ್ದಾರೆ. ನಾವೆಲ್ಲ ಜೊತೆಗೆ ಸೇರಿ ಈ ಪ್ರಾಡಕ್ಟನ್ನು ಮಾರ್ಕೆಟ್‌ಗೆ ಬಿಟ್ಟಿದ್ದೀವಿ. ಇದರಲ್ಲಿ ಬಂದ ಲಾಭವನ್ನು ಫಿಫ್ಟಿ-ಫಿಫ್ಟಿ ಹಂಚಿಕೊಳ್ಳುತ್ತೀವಿ”
“ಕೋಕಾ ಕಾಲದಿಂದ ಸಮಾಜಕ್ಕೆ ಹಾನಿಯಿದೆ ಎಂದು ಹೇಳುತ್ತಿದ್ದಾರೆ...” ಕಾಸಿ ಆತಂಕದಿಂದ ಕೇಳಿದ.

“ನೋಡ್ರೀ...ಸಮಾಜಕ್ಕೆ ಹಾನಿಯಾಗದೆ ಉದ್ಯಮಗಳು ಲಾಭ ಪಡೆಯುವುದು ಹೇಗೆ? ಉದ್ಯಮಗಳು ಲಾಭದಾಯಕವಾಗಿ ನಡೆಯಬೇಕೂ ಅಂತಂದ್ರೆ ಸಮಾಜ ಆ ಹಾನಿಯನ್ನು ಸಹಿಸಿಕೊಳ್ಳಬೇಕು. ಉದ್ಯಮ ಲಾಭದಾಯಕವಾಗಿ ನಡೆದರೆ ತಾನೇ ದೇಶ ಅಭಿವೃದ್ಧಿಯತ್ತ ಸಾಗುವುದು. ಆದರೆ ಈ ತಂಪು ಪಾನೀಯದಿಂದ ಮುಸಲರಿಗಷ್ಟೇ ಒಂದಿಷ್ಟು ಹಾನಿಯಾಗಬಹುದು. ಸಮಾಜಕ್ಕೆ ಯಾವ ಹಾನಿಯೂ ಆಗಲ್ಲ. ಮುಸಲರು ಈ ಹಾನಿಯನ್ನು ಸಹಿಸಿಕೊಂಡು ತಾವು ಉಗ್ರರಲ್ಲ, ದೇಶಪ್ರೇಮಿಗಳು ಎನ್ನುವುದನ್ನು ಸಾಬೀತು ಪಡಿಸಬೇಕು...” ಶೌಚಾಲಯದ ಗೋಡೆಗೆ ಒರಗಿ ಆಚಾರ್ಯರು ಕರೆಕೊಟ್ಟರು.
“ಮುಸಲರ ಮನೆ, ಮಠ, ಮಕ್ಕಳನ್ನು ಬೀದಿಗೆ ತಳ್ಳಿ, ಈ ಕೋಕಾ ಕಾಲ ಘಟಕವನ್ನು ಸ್ಥಾಪಿಸುತ್ತಿದ್ದೀರಿ ಅನ್ನೋ ಆರೋಪ ಇದೆ. ಹೌದಾ ಸಾರ್?”
“ಅಲ್ರೀ...ಮುಸಲರ ಮನೆ ಮಠಗಳನ್ನು ಬೀದಿ ತಳ್ಳದೆ ಈ ಕೋಕಾ ಕಾಲವನ್ನು ಇಷ್ಟು ರುಚಿಯಾಗಿ ತಯಾರಿಸುವುದು ಸಾಧ್ಯವಿತ್ತೇನ್ರೀ...ಮುಸಲರ ಕಣ್ಣೀರಿನಿಂದಲೇ ಈ ಕೋಕಾ ಕಾಲ ಐಟಂ ತಯಾರಿಸಲಾಗಿದೆ ಕಣ್ರೀ...ಮುಂದಿನ ದಿನಗಳಲ್ಲಿ ಈ ಕೋಕಾಗೆ ಅತ್ಯಧಿಕ ಬೇಡಿಕೆ ಇರುವುದರಿಂದ, ಮುಸಲರ ಕಣ್ಣೀರಿಗೂ ಅತ್ಯಧಿಕ ಬೇಡಿಕೆ ಇದೆ. ಈ ಕಣ್ಣೀರನ್ನು ಸಂಗ್ರಹಿಸಿ ಪೂರೈಸುವ ಕೆಲಸವನ್ನು ಮಾಡುವುದಾಗಿ ಕಾಂಗ್ರೆಸ್ ಮತ್ತು ಜೆಡಿ‌ಎಸ್ ನಾಯಕರು ಭರವಸೆ ನೀಡಿದ್ದಾರೆ. ನಮ್ಮದೇನಿದ್ದರೂ ಕೋಕಾ ತಯಾರಿಸುವ ಕೆಲಸ ಮಾತ್ರ. ಆದುದರಿಂದ ಭವಿಷ್ಯದಲ್ಲಿ ಮುಸಲರು ಕಣ್ಣೀರಲ್ಲಿ ಕೈತೊಳೆಯುವ ಹಾಗೆ ಮಾಡುವುದು ನಮ್ಮ ಉದ್ದೇಶ. ಉಳ್ಳಾಲದ ಕಡಲಿನಲ್ಲಿದ್ದ ಉಪ್ಪು ನೀರನ್ನು ಸಂಪೂರ್ಣ ಖಾಲಿ ಮಾಡಿ, ಅಲ್ಲಿ ಮುಸಲರ ಕಣ್ಣೀರನ್ನು ಸ್ಟಾಕಿಡಬೇಕು ಎಂದು ಸರಕಾರ ನಿರ್ಧರಿಸಿದೆ...”
“ಈ ಕೋಕಾ ಕಾಲಕ್ಕೆ ಯಾವ ರೀತಿಯಲ್ಲಿ ಮಾರ್ಕೆಟ್ ಮಾಡಬೇಕು ಅಂತ ಇದ್ದೀರಿ ಸಾರ್?”
“ನೋಡ್ರೀ...ಎಲ್ಲ ಪೊಲೀಸ್ ಠಾಣೆಗಳಲ್ಲೂ ಕಡ್ಡಾಯವಾಗಿ ಕೋಕಾ ಕಾಲದ ಬಳಕೆಯಿರಬೇಕು. ವಿವಿಧ ಸಂಘಪರಿವಾರ ಕಚೇರಿಗಳಲ್ಲಿ, ಪತ್ರಿಕೆಗಳ ಕಚೇರಿಗಳಲ್ಲಿಯೂ ಈ ಕೋಕಾಗಳ ಮಾರುಕಟ್ಟೆಯನ್ನು ವಿಸ್ತರಿಸಿದ್ದೇವೆ. ಪತ್ರಿಕೆಗಳು ಕೋಕಾ ಕಾಲಕ್ಕೆ ಹೆಚ್ಚು ಪ್ರಚಾರ ನೀಡುವ ಭರವಸೆ ನೀಡಿವೆ. ಅವರಿಗೆ ಸರಕಾರಿ ಜಾಹೀರಾತುಗಳನ್ನು ನೀಡುವ ಕುರಿತಂತೆಯೂ ಒಪ್ಪಂದವಾಗಿದೆ...”
“ಈ ಕೋಕಾ ತಂಪು ಪಾನೀಯಕ್ಕೆ ಮನೆ, ಮಠ ತ್ಯಾಗ ಮಾಡುವ ಮುಸಲರಿಗೆ ಏನು ಲಾಭ ಇದೆ ಸಾರ್...?”
ಆಚಾಯರು ಕಾಸಿಯ ಬೆನ್ನು ತಟ್ಟಿದರು “ನೋಡ್ರೀ...ಅದಕ್ಕಾಗಿ ಮುಸಲರಿಗೆ ಕೆಲವು ಸವಲತ್ತುಗಳನ್ನು ನೀಡಬೇಕೆಂದು ನಾವು ನಿರ್ಧರಿಸಿದ್ದೇವೆ. ಬಿಜೆಪಿ ಅಲ್ಪಸಂಖ್ಯಾತರ ಪರವಾಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಕೋಕಾ ಕಾಲಕ್ಕೆ ಸಹಕರಿಸಿದ ಎಲ್ಲ ಮುಸಲರನ್ನು ಬಳ್ಳಾರಿ ಜೈಲಿನಲ್ಲಿಟ್ಟು ಪುಕ್ಕಟೆ ಊಟ ಹಾಕಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜೈಲುಗಳನ್ನು ವಿಸ್ತರಿಸುವ ಕೆಲಸಕ್ಕೆ ಈಗಾಗಲೇ ಸರಕಾರ ಮುಂದಾಗಿದೆ. ಅದಕ್ಕಾಗಿ ಹಣವನ್ನೂ ಮೀಸಲಿಟ್ಟಿದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಜೈಲುಗಳಿಗೆ ಮೀಸಲಿಟ್ಟ ಹಣಕ್ಕಿಂತಲೂ ಹೆಚ್ಚು ಹಣವನ್ನು ನಾವು ಮೀಸಲಿಡಲಿದ್ದೇವೆ. ಸ್ವಾತಂತ್ರೋತ್ಸವ, ಗಣರೋಜ್ಯೋತ್ಸವದ ಸಂದರ್ಭದಲ್ಲಿ ಅವರಿಗೆ ಜೈಲಿನಲ್ಲಿ ಹಣ್ಣು ಹಂಪಲು ವಿತರಣೆಯೂ ನಡೆಯುತ್ತದೆ. ಜೈಲಿನಲ್ಲಿ ಅವರಿಗೆ ಯೋಗ ಕಲಿಸುವ ಏರ್ಪಾಡೂ ಮಾಡಲಾಗುತ್ತದೆ...”

ಹೀಗೆ ಅಲ್ಪಸಂಖ್ಯಾತರಿಗಾಗಿ ಸಿದ್ಧಪಡಿಸಲಾಗಿರುವ ಸೌಲಭ್ಯಗಳ ಪಟ್ಟಿ ಕೇಳಿ ಕಾಸಿ ರೋಮಾಂಚನ ಗೊಂಡ.
“ಅಲ್ಲ ಸಾರ್...ಈ ಕೋಕಾ ಕಾಲ ಕಂಪೆನಿಯಲ್ಲಿ ಮುಸ್ಲಿಂ ಶಾಸಕರು, ಸಚಿವರು ಶೇರು ಹಾಕಿದ್ದಾರ ಸಾರ್...?”
ಆಚಾರ್ಯರು ತುಟಿಯ ಮರೆಯಲ್ಲೇ ನಕ್ಕು, ಕಾಸಿಯನ್ನು ವೇದಿಕೆಯ ಹಿಂಭಾಗದ ಒಂದು ಮೂಲೆಗೆ ಕರೆದೊಯ್ದರು. ಅಲ್ಲಿ ನೋಡಿದರೆ ಕುಡಿದು ಬಿಟ್ಟ ಕೋಕಾ ಕಾಲದ ಬಾಟಲಿಗಳನ್ನು ಗುಡ್ಡೆ ಹಾಕಿ ಯಾರೋ ಇಬ್ಬರು ತೊಳೆಯುತ್ತಿದ್ದರು. ಕಾಸಿ ಇನ್ನಷ್ಟು ಹತ್ತಿರ ಹೋಗಿ ನೋಡಿದರೆ, ಅದು ಉಳ್ಳಾಲದ ಶಾಸಕರು ಮತ್ತು ವಕ್ಫ್ ಸಚಿವರು. ಆಚಾರ್ಯರು ಹೇಳಿದರು “ಕೋಕಾ ಕಾಲ ಬಾಟಲಿಗಳನ್ನು ತೊಳೆದು ಮತ್ತೆ ಅದಕ್ಕೆ ಪಾನೀಯ ತುಂಬಿಸುವ ಕೆಲಸವನ್ನು ಇವರಿಬ್ಬರಿಗೆ ವಹಿಸಿದ್ದೇವೆ. ಹಾಗೆಯೇ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ತರುವ ಕೆಲಸವನ್ನೂ ಇವರಿಗೇ ವಹಿಸಿದ್ದೇವೆ. ಒಂದು ಬಾಟಲಿಗೆ ಇಷ್ಟೂ ಅಂತ ಕಮಿಶನ್ ನೀಡಲಾಗುತ್ತದೆ. ಅವರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ”

ಕಾಸಿ ಮೆಲ್ಲ ಉಳ್ಳಾಲದ ಶಾಸಕರತ್ತ ಬಾಗಿ ಕೇಳಿದ “ಸಾರ್..ಈ ಕೋಕಾ ಕಾಲದ ಬಗ್ಗೆ ನಿಮ್ಮ ಅನ್ನಿಸಿಕೆಯೇನು?”
ಬಾಟಲಿ ತೊಳೆಯುತ್ತಿದ್ದ ಶಾಸಕರು ಕಾಸಿಯತ್ತ ನೋಡಿ ಹಲ್ಲು ಕಿರಿದರು. ಪಕ್ಕದಲ್ಲೇ ಯಾರೋ ಅರ್ಧ ಕುಡಿದು ಬಿಟ್ಟ ಬಾಟಲಿಯನ್ನು ಎತ್ತಿ ಬಾಯಿಗೆ ಸುರಿದು ಚಪ್ಪರಿಸಿ ಹೇಳಿದರು “ಚೆನ್ನಾಗಿದೆ. ಆದರೆ ಇನ್ನಷ್ಟು ಸ್ಟ್ರಾಂಗ್ ಆಗಬೇಕಾಗಿದೆ...”

(ರಾಜ್ಯ ಸರಕಾರ ಉಗ್ರರ ವಿರುದ್ಧ ಕೋಕಾ ಕಾಯ್ದೆಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ. ರವಿವಾರ ಆಗಸ್ಟ್ ೨, ೨೦೦೯ರ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....

ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....

ಸುತ್ತೂರು ಮಠದಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ಮತ್ತು ಸಚಿವರ ಚಿಂತನ ಮತ್ತು ಮಂಥನ ಭರ್ಜರಿಯಾಗಿ ನಡೆಯುತ್ತಿತ್ತು. ಬದನೆಕಾಯಿ ಗೊಜ್ಜುವಿಗೆ ಇನ್ನೊಂದಿಷ್ಟು ಉಪ್ಪು ಕಡಿಮೆ ಬಿದ್ದಿದ್ದರೆ, ತಿಳಿಸಾರಿಗೆ ಹುಳಿ ಸರಿಯಾಗಿ ಬಿದ್ದಿದ್ದರೆ ಮಂಥನ ಸಂಪೂರ್ಣ ಯಶಸ್ವಿಯಾ ಗುತ್ತಿತ್ತು ಎನ್ನುವುದು ಅನಂತಕುಮಾರ್‌ರ ಖಾಸಗಿ ಅಭಿಪ್ರಾಯ ಎಂದು ಬಿಜೆಪಿ ರಾಜ್ಯಾ ಧ್ಯಕ್ಷರು ಪತ್ರಕರ್ತ ಎಂಜಲು ಕಾಸಿಗೆ ಫೋನಿನ ಮೂಲಕವೇ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದರು. ತಿಳಿಸಾರು ಮತ್ತು ಗೊಜ್ಜಿಗಾಗಿ ವಿಶೇಷ ಅಡಿಗೆ ಯವರನ್ನು ಮಠಕ್ಕೆ ತರಿಸಲಾಗಿತ್ತು. ಗೊಜ್ಜು ವಿನಲ್ಲಿ ಯಾರೋ ಭಿನ್ನಮತೀಯರು ಅಡುಗೆ ಭಟ್ಟರ ಕಣ್ಣು ತಪ್ಪಿಸಿ ಉಪ್ಪು ಜಾಸ್ತಿ ಹಾಕಿರಬೇಕು ಎನ್ನುವುದು ಅವರ ಸ್ಪಷ್ಟನೆಯಾಗಿತ್ತು. ಕೊನೆಯ ದಿನ ಸಚಿವರೆಲ್ಲರೂ ಲಂಗೋಟಿ ಧಾರಿಗಳಾಗಿ ಸಭಾಂಗಣವನ್ನು ಸೇರಿದರು. ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಯಡಿಯೂರಪ್ಪಾದಿಯಾಗಿ ಎಲ್ಲ ಸಚಿವರಿಗೆ ಯೋಗ ಕಲಿಸಲಾರಂಭಿಸಿ ದರು.

ಮೋದಿ ವಿವರಿಸಿದರು “ಯೋಗವೆನ್ನುವುದು ಅತ್ಯಂತ ಪುರಾತನವಾದುದು. ರಾಜ ಕೀಯದ ಎಲ್ಲ ಸಮಸ್ಯೆಗಳಿಗೆ ಯೋಗ ದಲ್ಲಿ ಉತ್ತರವಿದೆ. ಆದುದರಿಂದ ಯಾವ ಯಾವ ಸಮಸ್ಯೆಗಳಿಗೆ ಯಾವ ಯಾವ ಆಸನಗಳನ್ನು ನಾವು ಮಾಡಬೇಕು ಎನ್ನು ವುದನ್ನು ನಾನಿಲ್ಲಿ ವಿವರಿಸಲಿದ್ದೇನೆ...”
ಆಸನ ಎನ್ನುವಾಗ ಯಡಿಯೂರಪ್ಪ ರಿಗೆ ತಮ್ಮ ಮುಖ್ಯಮಂತ್ರಿ ಕುರ್ಚಿ ನೆನಪಾಯಿತು. ಅನಂತಕುಮಾರ್ ಪಕ್ಕ ದಲ್ಲೇ ಇರುವುದು ನೋಡಿ ಸಮಾಧಾನ ವಾಯಿತು.

ಮೋದಿ ಮುಂದುವರಿಸಿದರು. “ಪಕ್ಷ ದೊಳಗೆ ಆರೆಸ್ಸೆಸ್ ಸಿಕ್ಕಾಪಟ್ಟೆ ಮೂಗು ತೂರಿಸುವಾಗ ಮಾಡಬೇಕಾದ ಆಸನ ಯಾವುದು ಎನ್ನುವುದನ್ನು ನಾನಿಲ್ಲಿ ನಿಮಗೆ ಹೇಳಿಕೊಡುತ್ತೇನೆ... ಮೊದಲು ಸೊಂಟವನ್ನು ನಿಧಾನಕ್ಕೆ ಬಗ್ಗಿಸ ಬೇಕು... ಆ ಮೇಲೆ ಎರಡೂ ಕೈಗಳನ್ನು ಜೋಡಿಸಿ ತಲೆಯ ಮೇಲಕ್ಕೆ ಕೊಂಡೊಯ್ಯಬೇಕು... ಬಳಿಕ ಮೂಗನ್ನು ನಿಧಾನಕ್ಕೆ ನೆಲದ ಬಳಿಗೆ ತರಬೇಕು...ಬಳಿಕ ಮೂಗನ್ನು ನೆಲಕ್ಕೆ ಉಜ್ಜುತ್ತಾ ಸಾಷ್ಟಾಂಗವೆರಗ ಬೇಕು...ಈ ಆಸನಕ್ಕೆ ಬಗ್ಗಾಸನ ಅಥವಾ ಸಾಷ್ಟಾಂಗಾಸನ ಎಂದು ಹೆಸರು. ಆರೆಸ್ಸೆಸ್ ಸಮಸ್ಯೆ ಕಾಡಿದಾಗಲೆಲ್ಲ ದಿನಕ್ಕೆ ಮೂರು ಹೊತ್ತು ಈ ಆಸನವನ್ನು ಮಾಡಿ. ಸಮಸ್ಯೆ ನಿವಾರಣೆಯಾಗುತ್ತದೆ....”
ಸಚಿವರೆಲ್ಲ ಆ ಆಸನವನ್ನು ಹಂತಹಂತವಾಗಿ ಮಾಡತೊಡಗಿದರು.

ಮೋದಿ ಮುಂದುವರಿಸಿದರು “ಕೋಮು ಗಲಭೆಗಳು, ಚರ್ಚ್ ಮೇಲೆ ದಾಳಿ, ದಲಿತರ ಮೇಲೆ ನಿರಂತರ ದಾಳಿ ನಡೆದಾಗ ಮಾಡ ಬೇಕಾದ ಆಸನವನ್ನು ನಾನು ಈಗ ಹೇಳಿ ಕೊಡುತ್ತೇನೆ. ಬಿಜೆಪಿಯ ಸರಕಾರವಿರುವಾಗ ಈ ಆಸನ ಮುಖ್ಯಮಂತ್ರಿ ಮತ್ತು ಸಚಿವರಿಗೆ ಅತ್ಯಗತ್ಯ ಬೀಳುತ್ತದೆ....ಮೊದಲು ನಿಧಾನಕ್ಕೆ ಕಣ್ಣನ್ನು ಮುಚ್ಚಬೇಕು. ಈಗ ನಾಭಿಯಿಂದ ‘ಓಂ..’ ಎಂಬ ಉದ್ಗಾರವನ್ನು ನಿಧಾನಕ್ಕೆ ಎಳೆದು ಕೊಳ್ಳಬೇಕು. ಆ ಬಳಿಕ ಕೈಗಳನ್ನು ಅಗಲಿಸಿ ಎರಡೂ ಕೈಗಳ ತೋರು ಬೆರಳುಗಳನ್ನು ಕಿವಿಯ ಎರಡೂ ತೂತುಗಳ ಬಳಿ ತಂದು ಒತ್ತಿ ಹಿಡಿಯ ಬೇಕು...ಹೊರಗಿನ ಗದ್ದಲ, ಚೀತ್ಕಾರ ಯಾವ ಕಾರಣಕ್ಕೂ ಕಿವಿಯ ತೂತಿನೊಳಗೆ ಹೋಗ ದಂತೆ ಜಾಗರೂಕತೆ ವಹಿಸಬೇಕು. ಇಷ್ಟಾದರೆ ಯೋಗದ ಅರ್ಧ ಹಂತ ಮುಕ್ತಾಯವಾ ಯಿತು. ಬಾಯಿಯಲ್ಲಿ ನಿಧಾನಕ್ಕೆ ಶಾಂತಿ, ಸೌಹಾರ್ದ ಮಂತ್ರಗಳನ್ನು ಉಚ್ಚರಿಸಿ. ಸುಮಾರು ಹೊತ್ತು ಹೀಗೇ ಇರಿ. ಬಳಿಕ ಮೆಲ್ಲಗೆ ನೆಲದಲ್ಲಿ ಹಾಸಿರುವ ತನಿಖಾ ಆಯೋಗದ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ...ಹೀಗೆ ಮಾಡುತ್ತಿದ್ದರೆ ಮಾನವ ಹಕ್ಕು ಆಯೋಗದಂತಹ ಬೆನ್ನುನೋವುಗಳು ಸಂಪೂರ್ಣ ವಾಸಿಯಾಗುತ್ತವೆ. ಈ ಯೋಗಕ್ಕೆ ಕಿವುಡು-ಕುರುಡಾಸನ ಎಂದು ಹೆಸರು. ಈ ಆಸನವನ್ನು ಮಾಡಿ ಮುಗಿಸಿದ ಬಳಿಕ ಒಂದು ಲೋಟ ಹಾಲಿಗೆ ಕೇಸರಿಯನ್ನು ಕಲಸಿ ಕುಡಿಯಬೇಕು...”

ಸಚಿವರೆಲ್ಲ ಈ ಆಸನವನ್ನು ಸುಲಭವಾಗಿ ಮಾಡಿ ಮುಗಿಸಿದರು. ತನಗಿಂತಲೂ ತುಂಬಾ ಚೆನ್ನಾಗಿ ಈ ಯೋಗವನ್ನು ಮಾಡುತ್ತಿದ್ದಾರೆ ಎಂದು ಮೋದಿಗೆ ತುಂಬಾ ಸಂತೋಷವಾ ಯಿತು. ಅವರು ತಮ್ಮ ಯೋಗ ಪಾಠವನ್ನು ಮುಂದುವರಿಸಿದರು. “ಇದು ಬಹುಮುಖ್ಯ ವಾದ ಆಸನ. ಭಾರೀ ಮಳೆ ಸುರಿದು ನೆರೆ ಬಂದು ಜನರು ಕೊಚ್ಚಿ ಹೋಗುವಾಗ ಸಚಿ ವರು ಮಾಡಬೇಕಾದ ಆಸನ ಇದು...ನೆರೆಯಲ್ಲಿ ಮುಳುಗದೇ ತೇಲುವುದು ಹೇಗೆ ಎನ್ನುವುದನ್ನು ಈ ಯೋಗ ಸಚಿವರಿಗೆ, ಮುಖ್ಯಮಂತ್ರಿಯ ವರಿಗೆ ಕಲಿಸಿಕೊಡುತ್ತದೆ...ಮೊದಲು ಕಲಿಸಿದ ಕಿವುಡು-ಕುರುಡಾಸನವನ್ನು ಈ ಸಂದರ್ಭದಲ್ಲಿ ಮಾಡಬಹುದಾದರೂ, ಅದು ಕೆಲವೊಮ್ಮೆ ದೇಹದ ಸೂಕ್ಷ್ಮ ಭಾಗಗಳಿಗೆ ಧಕ್ಕೆ ತರುವ ಅಪಾಯವಿದೆ. ಆದುದರಿಂದ ತುಸು ಬೇರೆ ಯಾದ ಆಸನ ಇದಕ್ಕೆ ಅಗತ್ಯವಿದೆ...ಮೊದಲು ಬಲ ಮತ್ತು ಎಡದ ಕೈಯನ್ನು ತೆಗೆದು ತಲೆಯ ಮೇಲೆ ಇಟ್ಟುಕೊಳ್ಳಿ...ನಿಧಾನಕ್ಕೆ ಕಣ್ಣಿಂದ ಎರಡು ಹನಿಯನ್ನು ಉದುರಿಸಿ...ಬಳಿಕ ಪರಿಹಾರ... ಪರಿಹಾರ...ಕೋಟಿ...ಮಂಜೂರು ಎಂಬ ಮಂತ್ರವನ್ನು ನಿಧಾನಕ್ಕೆ ಪಠಿಸಿ. ಬಿಡುಗಡೆಯಾದ ಹಣವನ್ನೆಲ್ಲ ನಿಧಾನಕ್ಕೆ ಹೊಟ್ಟೆಯೊಳಗಡೆ ತೆಗೆದುಕೊಳ್ಳಿ...ಬಳಿಕ ಕೇಂದ್ರದತ್ತ ಮುಖ ಮಾಡಿ ಸುದೀರ್ಘ ನಿಟ್ಟುಸಿರನ್ನು ಬಿಡಿ...ಈ ಆಸನಕ್ಕೆ ಹಣವೃಷ್ಟಿಯಾಸನ ಅಥವಾ ನುಂಗಾ ಸನ ಎಂದು ಹೆಸರು. ಇದನ್ನು ನೆರೆಯ ಸಂದರ್ಭದಲ್ಲಿ ಮಾತ್ರವಲ್ಲ, ಬರದ ಸಂದರ್ಭದಲ್ಲೂ ಮಾಡಬಹುದು. ಬರ, ನೆರೆ ಮೊದಲಾದ ಹೊಟ್ಟೆನೋವಿಗೆ ಈ ಆಸನ ದಿವ್ಯ ಔಷಧ...”

ಸಚಿವರೆಲ್ಲ ಯಶಸ್ವಿಯಾಗಿ ನುಂಗಾಸನವನ್ನು ಮುಗಿಸಿದ ಬಳಿಕ ಮೋದಿ ಮತ್ತೆ ಮುಂದುವರಿ ದರು “ರೈತರು ಬೀಜ, ಗೊಬ್ಬರ ಕೇಳಿದಾಗ ಮಾಡುವ ಆಸನವನ್ನು ನಾನು ಈಗ ಹೇಳಿ ಕೊಡುತ್ತೇನೆ...ಇದು ಕಿವುಡು-ಕುರುಡಾಸನ ದೊಂದಿಗೆ ಸಂಬಂಧವಿರುವ ಆಸನವಾಗಿದೆ. ನಿಮ್ಮ ತೋರು ಬೆರಳನ್ನು ನಿಧಾನಕ್ಕೆ ಮುಂದಕ್ಕೆ ತನ್ನಿ. ಈಗ ಕೇಂದ್ರದ ಕಡೆಗೆ ಅದನ್ನು ತಿರುಗಿಸಿ... ಹೀಗೆ ಮಾಡುತ್ತಲೇ ಇರಿ...ಬಳಿಕ ಕಣ್ಣನ್ನು ಪೊಲೀಸರೆಡೆಗೆ ಕೇಂದ್ರೀಕರಿಸಿ...ಕಣ್ಣಲ್ಲಿ ಮೂರು ಬಾರಿ ಸನ್ನೆ ಮಾಡಿ...ಬಳಿಕ ಕಿವಿಯನ್ನು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಳ್ಳಿ...ಪಾದವನ್ನು ಮೇಲೆತ್ತಿ ಮೆಲ್ಲಗೆ ರೈತರ ತಲೆಯ ಮೇಲೆ ಇಟ್ಟು ಗಟ್ಟಿ ಯಾಗಿ ಒತ್ತಿ....ಇದೀಗ ಎಲ್ಲೋ ಗುಂಡಿನ ಸದ್ದುಗಳು ಕೇಳಿಸಿದಂತಾಗುತ್ತದೆ...ಮನಸ್ಸನ್ನು ಮತ್ತೆ ನಿಯಂತ್ರಣದಲ್ಲಿಟ್ಟು ಹಾಗೆಯೇ ಶವದ ಹಾಗೆ ಮಲಗಿ ಬಿಡಿ...ಈ ಯೋಗಾಸನಕ್ಕೆ ಶವಾಸನ ಎಂದು ಹೆಸರು. ಶವಾಸನದಿಂದ ರಾಜಕೀಯದ ಹಲವು ಸಮಸ್ಯೆಗಳು ಪರಿಹಾರ ವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಶವಗಳು ಬಿದ್ದಾಗಲೂ ಇದೇ ಆಸನವನ್ನು ಮಾಡುತ್ತಾ ಇರಿ...ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....”
ಸಚಿವರೆಲ್ಲರೂ ಶವಾಸನವನ್ನು ಯಶಸ್ವಿ ಯಾಗಿ ಮಾಡಿದರು. ಮುಖದಲ್ಲಿ ಪ್ರೇತಕಳೆ ಇದ್ದುದರಿಂದ ಅವರಿಗೆ ಶವಾಸನ ಮಾಡುವುದು ಸುಲಭವಾಯಿತು.

ಮೋದಿ ಮುಂದಿನ ಆಸನವನ್ನು ಕಲಿಸಲು ಆರಂಭಿಸಿದರು “ಇದು ಮುಖ್ಯವಾಗಿ ಮುಖ್ಯ ಮಂತ್ರಿಗಳು ಮಾಡಬಹುದಾದ ಆಸನ. ಪಕ್ಷ ದೊಳಗೆ ಭಿನ್ನಮತ ಎದ್ದಾಗ ಈ ಆಸನವನ್ನು ಮಾಡಬೇಕು. ಮೊದಲು ತಮ್ಮ ಸಮುದಾ ಯದ ಸ್ವಾಮೀಜಿಯನ್ನು ನೆನೆಯಿರಿ....ಮತ್ತೆ ಮೆಲ್ಲಗೆ ಅವರೆಡೆಗೆ ಬಗ್ಗಿ. ಇದಾದ ಬಳಿಕ ಸಚಿವ ಸಂಪುಟವನ್ನು ನಿಧಾನಕ್ಕೆ ವಿಸ್ತರಿಸಿ. ಸಾಧ್ಯ ವಾದಷ್ಟೂ ವಿಸ್ತರಿಸುತ್ತಲೇ ಹೋಗಿ...ದಿಲ್ಲಿಯ ಕಡೆಗೆ ಮುಖಮಾಡಿ...ಶಿಸ್ತುಕ್ರಮ ಮಂತ್ರವನ್ನು ಹತ್ತು ಬಾರಿ ಪಠಿಸಿ...ಈ ಆಸನಕ್ಕೆ ಉಚ್ಚಾಟ ನಾಸನ ಎಂದು ಹೆಸರು...”
ಅಷ್ಟರಲ್ಲಿ ಮೆಲ್ಲಗೆ ಜಗದೀಶ್ ಶೆಟ್ಟರು ಏದುಸಿರು ಬಿಟ್ಟು ಕೇಳಿದರು “ಸಾರ್... ಇರುವ ಮುಖ್ಯಮಂತ್ರಿಯನ್ನು ಕೆಳಗಿಳಿಸು ವುದಕ್ಕೆ ಯಾವುದಾದರೂ ಆಸನ ಇದೆಯೋ ಎಂದು ಹೇಳುತ್ತೀರಾ...”
ಒಮ್ಮೆಲೆ ಸಭಾಂಗಣದಲ್ಲಿ ಕಲರವ ಎದ್ದಿತ್ತು. ಯಡಿಯೂರಪ್ಪ ರೌದ್ರಾಸನವನ್ನು ಪ್ರಯೋಗಿಸಿದರೆ, ಈಶ್ವರಪ್ಪವರು ಟೀಕಾಸನ ವನ್ನು ಮಾಡತೊಡಗಿದರು. ಅನಂತ ಕುಮಾರ್ ‘ವರಿಷ್ಠರ ಓಲೈಕಾಸನ’ ಮಾಡು ವುದಕ್ಕಾರಂಭಿಸಿದರು. ರೆಡ್ಡಿ ಸಹೋದರರು ‘ಬೆಂಬಲ ವಾಪಾಸಾಸನ’ವನ್ನು ಮಾಡ ತೊಡಗಿದರು. ಅಷ್ಟರಲ್ಲಿ ಯಾರೋ ದೂರ ದಿಂದ ನೀರು ನೀರು ಎಂದು ಬೊಬ್ಬೊ ಹೊಡೆ ಯತೊಡಗಿದರು. ಎಲ್ಲರೂ ಒಮ್ಮೆಲೆ ತಮ್ಮ ಆಸನಗಳನ್ನು ಬದಲಿಸಿ ಶವಾಸನ ಮಾಡಿದರು.
ಮೋದಿ ಕೇಳಿದರು ‘ಅದೇನದು ನೀರು ನೀರು ಅನ್ನುತ್ತಾರಲ್ಲ...”
ಯಡಿಯೂರಪ್ಪ ಹೇಳಿದರು “ಬಹುಶಃ ಚಂದ್ರಲೋಕದಲ್ಲಿ ನೀರು ಸಿಕ್ಕಿತಲ್ಲ...ಇಸ್ರೋದ ವಿಜ್ಞಾನಿಗಳು ಸಂತೋಷದಿಂದ ನೀರು ಸಿಕ್ಕಿತು ಎಂದು ಚೀರುತ್ತಿರಬೇಕು...”
ಅಷ್ಟರಲ್ಲಿ ಉತ್ತರ ಕರ್ನಾಟಕದ ನೆರೆ ನೀರು ಸುತ್ತೂರು ಮಠಕ್ಕೆ ಒಂದು ಸುತ್ತು ಹಾಕಿ ಚಿಂತನ ಮಂಥನ ಸಂಭಾಂಗಣವನ್ನು ಪ್ರವೇಶಿಸಿತು.
ಎಲ್ಲರೂ ಗಾಬರಿಯಾಗಿ ಮೋದಿಯತ್ತ ನೋಡಿ ಹೇಳಿದರು “ಈಗ ಇದರಿಂದ ಪಾರಾ ಗಲು ಯಾವ ಆಸನವಿದೆ ಮೋದಿಯವರೆ...”
ನೀರನ್ನು ನೋಡಿದ್ದೇ ಮೋದಿ ಕೇಳಿದರು “ನಿಮಗೆ ಈಜು ಬರುತ್ತದೆಯೇ?”
ಎಲ್ಲರು ಒಕ್ಕೊರಲಲ್ಲಿ ಹೇಳಿದರು “ಇಲ್ಲ”
“ಹಾಗಾದರೆ...ಈ ನೀರಿನಲ್ಲಿ ನಿಧಾನಕ್ಕೆ ಮುಳುಗಿ...ಎರಡು ದಿನಗಳ ಬಳಿಕ ತನ್ನಷ್ಟಕ್ಕೇ ಈ ನೀರಿನಲ್ಲಿ ತೇಲುವುದಕ್ಕೆ ಆರಂಭಿಸು ತ್ತೀರಿ...ಈ ಶವಾಸನದಿಂದ ನಿಜವಾದ ಶಾಂತಿ, ನೆಮ್ಮದಿ ಸಿಗುತ್ತದೆ...ನಿಮಗಲ್ಲ ಈ ನಾಡಿನ ಜನತೆಗೆ....” ಎನ್ನುತ್ತಾ ನೀರಿಗೆ ಧುಮುಕಿ ಈಜುತ್ತಾ ಗುಜರಾತ್ ಸೇರಿದರು.

(ಸುತ್ತೂರು ಮಠದಲ್ಲಿ ರಾಜ್ಯದ ಸಂಪುಟ ಸಚಿವರಿಗಾಗಿ ಮೋದಿಯ ನೇತೃತ್ವದಲ್ಲಿ ನಡೆದ ‘ಚಿಂತನ-ಮಂಥನ’ ಶಿಬಿರದ ಹಿನ್ನೆಲೆಯಲ್ಲಿ ಬರೆದಿರುವುದು. ರವಿವಾರ ಅಕ್ಟೋಬರ್ ೪, ೨೦೦೯ರ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟ.)