Sunday, April 13, 2014

ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?

 ವಾರ್ತಾಭಾರತಿ ದೈನಿಕದರವಿವಾರ - ಏಪ್ರಿಲ್ -13-2014ರ ಸಂಚಿಕೆಯಲ್ಲಿ  ಪ್ರಕಟವಾದ ಬುಡಬುಡಿಕೆ 

ವಿಶೇಷ ಸುದ್ದಿ ಏನು ಇಲ್ಲ ಎಂದು ಸಂಪಾದಕೀಯ ವಿಭಾಗದಲ್ಲಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಕುಳಿತಿರಲಾಗಿ, ಅದೇ ಹೊತ್ತಿಗೆ ಸಂಪಾದಕರ ಕರೆಯೂ ಮರಣದ ಗಂಟೆಯಂತೆ ಬಾರಿಸಿತು ‘‘ಏನ್ರೀ...ಡೆಡ್ ಲೈನ್ ಹೊತ್ತಾಯಿತು...ಇನ್ನೂ ಲೀಡ್ ಸುದ್ದಿ ಬಂದಿಲ್ಲ....’’
‘‘ವಿಶೇಷ ಸುದ್ದಿ ಏನೂ ಇಲ್ಲ ಸಾರ್....ಇಂಟರ್ಯೂ ಮಾಡೋಣ ಅಂದ್ರೆ ಚುನಾವಣಾ ಆಯೋಗ ಬಿಡ್ತಾ ಇಲ್ಲ ಸಾರ್....’’ ಕಾಸಿ ತಡಬಡಿಸಿ ಉತ್ತರಿಸಿದ.
‘‘ಗುಪ್ತಚರ ಇಲಾಖೆಗೆ ಫೋನ್ ಮಾಡ್ರಿ... ಯಾಸಿನ್ ಭಟ್ಕಳನ ಕುರಿತಂತೆ ಏನಾದ್ರೂ ಸುದ್ದಿ ಇದ್ದೇ ಇರತ್ತೇ...ಅದನ್ನು ಅವರು ಗುಪ್ತವಾಗಿ ನಿಮ್ಮಿಂದಿಗೆ ಹಂಚಿಕೊಳ್ಳುತ್ತಾರೆ....’’ ಸಂಪಾದಕರು ಸಲಹೆ ನೀಡಿದ್ದೇ...ಪತ್ರಕರ್ತ ಎಂಜಲು ಕಾಸಿ ಗುಪ್ತಚರ ಇಲಾಖೆಗೆ ಫೋನ್ ಮಾಡಿದ.
ಅತ್ತಲಿಂದ ಮಾತು ಬಾಂಬಿನಂತೆ ತೂರಿ ಬಂತು ‘‘ಹಲೋ...ಇಂಟೆಲಿಜೆಂಟ್ಸ್ ವಿಭಾಗ...ಗುಪ್ತ್ ಚರ ಇಲಾಖೆ...ಯಾಸಿನ್ ಭಟ್ಕಳ ಮಾತಾಡ್ತಾ ಇದ್ದೇನೆ....ನಿಮಗೇನು ಬೇಕು...’’
ಕಾಸಿಯ ಮೈಯೆಲ್ಲ ಕಂಪಿಸಿತು ‘‘ಸಾರ್...ನೀವು ಯಾಸಿನ್ ಭಟ್ಕಳ ಅವ್ರಾ...ನೀವು ಗುಪ್ತಚರ ಇಲಾಖೆಯಲ್ಲಿ ಕುಳಿತು ಅದೇನು ಮಾಡ್ತಾ ಇದ್ದೀರಿ ಸಾರ್...’’ ಅಚ್ಚರಿಯಿಂದ ಕೇಳಿದ.
‘‘ನಾನು ಗುಪ್ತಚರ ಇಲಾಖೆಯ ಪತ್ರಿಕಾವಕ್ತಾರ ಕಣ್ರೀ....ಎಲ್ಲ ಪತ್ರಿಕೆಗಳಿಗೆ ಗುಪ್ತವಾಗಿ ನನ್ನ ಕುರಿತ ಸುದ್ದಿಗಳನ್ನು ಹಂಚುವುದೇ ನನ್ನ ಕೆಲಸ. ಇತ್ತೀಚೆಗೆ ಸುದ್ದಿಸಂಸ್ಥೆಗಳೆಲ್ಲ ಸುದ್ದಿಗಳಿಲ್ಲದೆ ಬರಗಾಲ ಎದುರಿಸುತ್ತಿದೆ. ಆದುದರಿಂದ ಸರಕಾರವೇ ನನ್ನನ್ನು ಪ್ರತಿ ದಿನ ಮುಖ್ಯ ಸುದ್ದಿಯನ್ನು ಕೊಡಲು ಗುಪ್ತಚರ ಇಲಾಖೆಯಲ್ಲಿ ನೇಮಕ ಮಾಡಿದೆ...ಲೀಡ್ ಸುದ್ದಿ ಇಲ್ಲದೆ ಕಂಗಾಲಾಗಿರುವ ಪತ್ರಿಕೆಗಳಿಗೆ ಸುದ್ದಿ ಹಂಚುವುದೇ ನನ್ನ ಕೆಲಸ ಕಣ್ರೀ...ಹೇಳಿ...ನಿಮಗೆ ಯಾವ ಥರ ಸುದ್ದಿ ಬೇಕು? ಲೀಡ್ ಸುದ್ದಿ ಬೇಕೋ...ಚುನಾವಣಾ ಸುದ್ದಿ ಬೇಕೋ...ಹವಾಮಾನ ಸುದ್ದಿ ಬೇಕೋ...ಒಳಗಿನ ಪುಟಕ್ಕೆ ತುಂಬಿಸಲು ಸುದ್ದಿ ಬೇಕೋ...ಮ್ಯಾಗಸಿನ್‌ಗೆ ವರ್ಣರಂಜಿತ ಲೇಖನ ಬೇಕೋ...ಅದೇನೇ ಬೇಕಾದರೂ ನಾನು ಕೊಡುತ್ತೇನೆ...’’
ಕಾಸಿಯ ಹೆಗಲ ಮೇಲಿರುವ ಭಾರವೆಲ್ಲ ಇಳಿದಂತಾಯಿತು ‘‘ಸಾರ್...ಫ್ರಂಟ್ ಪೇಜ್‌ಗೆ ಮುಖ್ಯ ಸುದ್ದಿ ಇಲ್ಲಾ ಸಾರ್...ಏನಾದರೂ...ಕೊಡಿ...’’
‘‘ಇದು ಮೂಲವ್ಯಾಧಿಯ ಸುದ್ದಿ...ಆದುದರಿಂದ ಸ್ವಲ್ಪ ಜಾಗರೂಕತೆಯಿಂದ ಮೂಲಗಳಿಂದ ಎಂದು ಬಳಸಿ ಈ ಸುದ್ದಿಯನ್ನು ನೀವು ನೀಡಬೇಕಾಗುತ್ತದೆ’’ ಯಾಸಿನ್ ಭಟ್ಕಳ ಹೇಳಿದ.
‘‘ಖಂಡಿತಾ ಸಾರ್...ನಾವು ಮೂಲ ವ್ಯಾಧಿ ಸುದ್ದಿಗಳನ್ನು ಮಾತ್ರ ಹಾಕೋದು ಸಾರ್. ಮೂಲಗಳಿಂದ ತಿಳಿದು ಬಂದಿದೆ, ಮೂಲಗಳು ತಿಳಿಸಿವೆ, ಮೂಲದಿಂದ ಬಂದಿದೆ...ಮುಖ್ಯವಾಗಿ ನಮಗೆ ಗುಪ್ತಚರ ಇಲಾಖೆಯ ಮೂಲವ್ಯಾಧಿ ಎಂದರೆ ತುಂಬಾ ಇಷ್ಟ ಸಾರ್...’’ ಕಾಸಿ ಹೇಳಿದ.
‘‘ಸರಿ ಹಾಗಾದರೆ ಬರೆದುಕೊಳ್ಳಿ...ನಾಗಸಾಕಿ, ಹಿರೋಷಿಮಾ ಸ್ಫೋಟದಲ್ಲಿ ತನ್ನ ಕೈವಾಡ ಇರುವುದು ನಿಜ ಎನ್ನುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಈ ಸ್ಫೋಟ ನಡೆಸುವ ಒಂದು ದಿನದ ಹಿಂದೆ ಉಸಾಮ ಬಿನ್ ಜೊತೆಗೆ ಮಾತುಕತೆ ನಡೆಸಿದ ಭಟ್ಕಳ್, ಅಂತಹದೇ ಸ್ಫೋಟವನ್ನು ಗುಜರಾತ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ....’’
‘‘ಸಾರ್...ಅದ್ಭುತ ಸುದ್ದಿಸಾರ್...ಇದು ನಿಜವಾ ಸಾರ್...?’’ ಕಾಸಿ ರೋಮಾಂಚನದಿಂದ ಕೇಳಿದ.
‘‘ನಿಮಗೆ ನಿಜ ಬೇಕಾ, ಸುದ್ದಿ ಬೇಕಾ?’’ ಆ ಕಡೆಯಿಂದ ಭಟ್ಕಳ್ ಕೇಳಿದ. ‘‘ನಿಜ ಯಾರಿಗೆ ಬೇಕು ಸಾರ್? ನಮಗೆ ಸುದ್ದಿ ಬೇಕು...ನಿಮ್ಮ ಕುರಿತಂತೆ ಇನ್ನಷ್ಟು ಗುಪ್ತಚರ ಮೂಲಗಳನ್ನು ನಮ್ಮ ಕಡೆಗೆ ಬಿಟ್ಟುಬಿಡಿ ಸಾರ್...ನಾವು ಬದ್ಕೋತೀವಿ...’’ ಕಾಸಿ ಅಂಗಲಾಚಿದ.
‘‘ಇಂದು ವಾತಾವರಣ ತೀವ್ರ ಬಿಸಿಯೇರಿದ್ದು, ಇದರಲ್ಲಿ ತನ್ನ ಕೈವಾಡವಿರುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಆ ಕಡೆಯಿಂದ ಭಟ್ಕಳ್ ಹೇಳಿದ.
‘‘ಸಾರ್...ಇದು ಹವಾಮಾನ ವರದಿ ಕಾಲಂನಲ್ಲಿ ಹಾಕ್ಕೋಬಹುದು ಸಾರ್...ನಮಗೆ ಫ್ರಂಟ್ ಪೇಜ್ ಸುದ್ದಿ ಬೇಕು ಸಾರ್...’’
‘‘ನೋಡಿ...ನೀವು ಪಿಟಿಐ ಸಹಿತ ವಿವಿಧ ಸುದ್ದಿ ಸಂಸ್ಥೆಗಳಿಗೆ ಸದಸ್ಯರಾಗುವಂತೆ ನಿಮ್ಮ ಹತ್ತಿರದ ಆರೆಸ್ಸೆಸ್ ಕಚೇರಿಗೆ ಸದಸ್ಯರಾಗಿ ಅಥವಾ ನಿಮ್ಮ ಪತ್ರಿಕೆಗಳ ಹೆಸರನ್ನು ಅಲ್ಲಿ ನಮೂದಿಸಿ. ನಾವು ಎಲ್ಲರಿಗೂ ಕರೆದು ಸುದ್ದಿಗಳನ್ನು ಕೊಡಲು ಸಾಧ್ಯವಿಲ್ಲ. ಆರೆಸ್ಸೆಸ್ ಕಚೇರಿಯಿಂದಲೇ ಜೆರಾಕ್ಸ್ ಕಾಪಿಗಳು ಬೇಕಾದಷ್ಟು ಸಿಗುತ್ತವೆ. ಅಲ್ಲಿಂದಲೇ ಸಿಗುತ್ತದೆ...ನೀವು ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ....’’
‘‘ಆದರೆ ಆರೆಸ್ಸೆಸ್ ಕಚೇರಿಯವರು ಕೊಡೋದಕ್ಕಿಂತ ಇಂಟೆಲಿಜೆನ್ಸ್ ಕಚೇರಿ ಕೊಟ್ಟರೇನೇ ಅದಕ್ಕೆ ವ್ಯಾಲ್ಯೂ ಜಾಸ್ತಿ ಸಾರ್...’’ ಕಾಸಿ ಫೋನ್‌ನಲ್ಲೇ ಹಲ್ಲು ಕಿರಿದ.
‘‘ಯಾರು ಕೊಟ್ರೆ ನಿಮಗೇನ್ರೀ...ನೀವು ಮೂಲವ್ಯಾಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ....ಗುಪ್ತಚರ ಮೂಲಗಳು ಎಂದೇ ಬರೆಯಿರಿ. ‘‘ಮೋದಿಯ ವಿರುದ್ಧ ಸೊಳ್ಳೆಗಳ ಮೂಲಕ ಮಾರಕ ರೋಗವನ್ನು ಹಂಚಿ, ಹತ್ಯೆಗೆ ಯಾಸಿನ್ ಭಟ್ಕಳ ಸಂಚು ರೂಪಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಬರೆಯಿರಿ....’’
‘‘ಸಾರ್...ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದು ಕಣ್ರೀ...ಆ ಸೊಳ್ಳೆಗಳಿಗೆ ಇಂಡಿಯನ್ ಮುಜಾಹಿದ್‌ನ ಮೂಲಕ ತರಬೇತಿ ಕೊಡಿಸಿ, ಅದನ್ನು ಮೋದಿಯ ಬಳಿಗೆ ಕಳುಹಿಸಿ ಅದರಿಂದ ಕಚ್ಚಿಸುವ ಒಂದು ದೊಡ್ಡ ಸಂಚನ್ನು ಯಾಸಿನ್ ಭಟ್ಕಳ್ ರೂಪಿಸಿದ್ದ. ಭಟ್ಕಳ್ ಬಂಧನದಿಂದ ಅದು ವಿಫಲವಾಯಿತು ಎಂದು ಗುಪ್ತಚರ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ....’’
‘‘ಸಾರ್... ಯಾಸಿನ್ ಭಟ್ಕಳ್ ಬಂಧನದ ಬಳಿಕ ಆ ಸೊಳ್ಳೆಗಳು ಏನಾಯಿತು ಸಾರ್? ಅವುಗಳನ್ನು ಬಂಧಿಸಲಿಲ್ಲವೆ?’’
‘‘ಅವುಗಳ ಹುಡುಕಾಟ ತೀವ್ರವಾಗಿದೆ. ಕೆಲವು ಸೊಳ್ಳೆಗಳು ತಪ್ಪಿಸಿಕೊಂಡು ಪಾಕಿಸ್ತಾನ ಸೇರಿವೆ. ಇನ್ನು ಕೆಲವು ಭಟ್ಕಳದಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ. ಅದನ್ನು ಬಂಧಿ ಸಲು ವ್ಯಾಪಕ ಕಾರ್ಯಾಚರಣೆ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಭಟ್ಕಳ್ ಆ ಕಡೆಯಿಂದ ಸ್ಕೂಪ್ ಸುದ್ದಿಯನ್ನು ಹೇಳಿದ.
ಕಾಸಿಗೆ ತುಂಬಾ ಖುಷಿಯಾಯಿತು ‘‘ಸಾರ್...ಒಂದಿಷ್ಟು ಕೃಷಿ ಮಾಹಿತಿಯನ್ನು ನೀಡಿ ಸಾರ್...’’

‘‘ಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ರೋಗ ಬರಲು ಯಾಸಿನ್ ಭಟ್ಕಳ್ ರೂಪಿಸಿದ ಸಂಚೇ ಕಾರಣ ಎನ್ನುವುದು ಯಾಸಿನ್ ಭಟ್ಕಳ್ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಟೊಮೆಟೋ ಬೆಲೆ ಇಳಿಯುವುದಕ್ಕಾಗಿ ಭಟ್ಕಳ್ ಪಾಕಿಸ್ತಾನಿ ಕೃಷಿಕರ ಜೊತೆಗೆ ಸೇರಿ ಸಂಚು ರೂಪಿಸಿದ್ದು, ಇದರಿಂದಾಗಿ ಕೃಷಿಕರ ಮೂಲಕ ಸರಕಾರದ ವಿರುದ್ಧ ದಂಗೆ ಎಬ್ಬಿಸುವುದು ಭಟ್ಕಳ್ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ...’’ ಕಾಸಿ ಎಲ್ಲವನ್ನೂ ನೋಟ್ ಮಾಡಿಕೊಂಡ. ‘‘ಸಾರ್...ಈ ತಾವು ಪತ್ರಿಕೋದ್ಯಮದಲ್ಲಿ ಯಾವುದಾದರೂ ಡಿಗ್ರಿ ಮಾಡಿದ್ದೀರಾ...’’ ಕಾಸಿ ಅನಗತ್ಯ ಪ್ರಶ್ನೆಯೊಂದನ್ನು ಕೇಳಿದ.
‘‘ಹಾಗೇನಿಲ್ಲ ಕಣ್ರೀ...ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರಿಂದ ಇಂತಹ ಮೂಲವ್ಯಾಧಿ ಸುದ್ದಿಗಳು ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಮೂಲವ್ಯಾಧಿ ಪತ್ರಿಕೋದ್ಯಮದ ಬಗ್ಗೆ ಅಪಾರ ಅನುಭವ ಇರಬೇಕಾಗುತ್ತದೆ. ಗುಪ್ತಚರ ಇಲಾಖೆಗಳ ಮೂಲಗಳನ್ನು ಹುಡುಕಿಕೊಂಡು ಅಲ್ಲಿರುವ ಕೆಲವು ಜನಿವಾರದ ಮೂಲಗಳನ್ನು ಪತ್ತೆ ಹಚ್ಚಿ, ಅವರಿಂದ ಕೆಲವು ದೊಗಳೆ ಚಡ್ಡಿ ಮೂಲಗಳನ್ನು ಗುರುತಿಸಿ, ಆ ಚಡ್ಡಿಯೊಳಗೆ ಸುದ್ದಿಗಳನ್ನು ತಮ್ಮದಾಗಿಸಿಕೊಳ್ಳಲು ಅಪಾರ ಅನುಭವ ಬೇಕು ಕಣ್ರೀ...ಯಾವುದಕ್ಕೂ ನೀವು ನಾಳೆಯಿಂದ ಕಚೇರಿಯ ಪಕ್ಕದಲ್ಲಿರುವ ಶಾಖೆಗೆ ಬನ್ನಿ. ಅಲ್ಲಿ ನಾನೇ ನಿಮಗೆ ಇದರ ಕುರಿತಂತೆ ಪಾಠ ಹೇಳಿಕೊಡುತ್ತೇನೆ....’’ ಎಂದದ್ದೇ ಆ ಕಡೆಯಿಂದ ಫೋನ್ ಕಡಿಯಿತು.
‘‘ಸಾರ್...ಮುಖಪುಟಕ್ಕೆ ಲೀಡ್ ಸುದ್ದಿ ಸಿಕ್ಕಿತು...’’ ಎಂದು ಎಂಜಲು ಕಾಸಿ ಸಂಪಾದಕರ ಕೊಠಡಿಯೆಡೆಗೆ ಧಾವಿಸಿದ.

1 comment:

  1. ಚೇಳಯ್ಯರವರೇ, ಸೊಳ್ಳೆಯ ಕಾಟ ತುಂಬಾ ಉತ್ತಮವಾಗಿದೆ. ಎಂಜಲು ಕಾಸಿ ಚುನಾವಣೆ ಸಮಯದಲ್ಲಿ ಎಂಜಲು ಸುರಿಸದಿದ್ದರೆ ಸಾಕು..?

    ReplyDelete