Sunday, December 22, 2013

ಎರಡು ಶಾಲು ಜಾಸ್ತಿ ಉಂಟಂತೆ...ಬರ್ತೀರಾ ಮೂಡುಬಿದಿರೆಗೆ?

 ನುಡಿಸಿರಿ ಸಾಹಿತಿಗಳನ್ನು ಪತ್ರಕರ್ತ ಎಂಜಲು ಕಾಸಿ  ವಿಶೇಷ ಸಂದರ್ಶನವೊಂದನ್ನು ಮಾಡಿದ್ದಾರೆ.  ಇದು ಚೇಳಯ್ಯ ಅವರ  ವಾರ್ತಾಭಾರತಿಯ ಇಂದಿನ  ಬುಡಬುಡಿಕೆ ಅಂಕಣ

ಕರ್ನಾಟಕದ ಸಾಯಿತಿಗಳೆಲ್ಲ ತಲೆಗೆ ಮುಂಡಾಸು ಕಟ್ಟಿ, ಮೂಡುಬಿದಿರೆಯ ಬಸ್ ಹತ್ತುವುದನ್ನು ಕಂಡು ಪತ್ರಕರ್ತ ಎಂಜಲು ಕಾಸಿ ಚುರುಕಾದ. ಎಲ್ಲರ ಬಾಯಲ್ಲೂ ಸಿರಿ, ಸಿರಿ... ಕೇಳಿ ಬರುತ್ತಿತ್ತು. ಕುತೂಹಲದಿಂದ ಅವನೂ ಬಸ್ಸೇರಿದ. ಸಾಯಿತಿಗಳೆಲ್ಲ ಗರಿ ಗರಿ ಬಟ್ಟೆ ಹಾಕಿಕೊಂಡು, ಸ್ವರಚಿತ ಕವಿತೆಗಳನ್ನು ವಾಚಿಸುತ್ತಿದ್ದರು. ‘‘ಸಾಗುವ ಸಾಗುವ
ಮುಂದೆ ಮುಂದೆ ಸಾಗುವ
ಆಳ್ವರ ನುಡಿಸಿರಿಯಲ್ಲಿ
ಒಟ್ಟಾಗಿ ಸೇರುವ
ಶಾಲು ಹೊದಿಸಿಕೊಂಡು
ಸನ್ಮಾನ ಸ್ವೀಕರಿಸುವ
ಭೂರಿ ಭೋಜನವನ್ನು ಉಂಡು
ಆಳ್ವರನ್ನು ಭಜಿಸುವ’’
ನೋಡಿದರೆ ಯಾರೋ ಬಂಡಾಯ ಕವಿ. ಕಾಸಿಗೆ ಕುತೂಹಲವಾಯಿತು ‘‘ಸಾರ್, ನೀವು ಬಂಡಾಯ ಕವಿಯಲ್ವ...ಇದು ಯಾವ ಪ್ರಾಕಾರಕ್ಕೆ ಸೇರಿದ ಕವಿತೆ ಸಾರ್’’ ಬಂಡಾಯ ಕವಿಗಳು ಒಮ್ಮೆ ಬಸ್ಸಿನ ಹೊರಗಿರುವ ಆಕಾಶ ನೋಡಿ ಹೇಳಿದರು ‘‘ಇದು ಬಂಡಾಯ ಕವಿತೆ ಕಣ್ರೀ...ಮೂಡುಬಿದಿರೆಯಲ್ಲಿ ಮೋಹನ್ ಆಳ್ವರು ನಡೆಸುವ ಬಂಡಾಯ ಸಾಹಿತ್ಯಕ್ಕೆ ನಾವು ಕೈ ಜೋಡಿಸಲು ಹೊರಟಿದ್ದೇವೆ....ಮೇಲಿನ ಕವಿತೆ ಯನ್ನು ನಾನು ವಾಚಿಸಲಿದ್ದೇನೆ...’’

ಕಾಸಿಗೆ ತಲೆ ಬಿಸಿಯಾಯಿತು ‘‘ಸಾರ್ ಇದರಲ್ಲಿ ಬಂಡಾಯವೇನಿದೆ?’’ ‘‘ಸಾಹಿತಿಗಳ ಬಂಡಾಯ ಕಣ್ರೀ...ಬಂಡಾಯ ಸಾಹಿತ್ಯದ ವಿರುದ್ಧ ನಮ್ಮ ಬಂಡಾಯ... ಆದುದರಿಂದ ಇದೂ ಒಂದು ರೀತಿಯಲ್ಲಿ ಬಂಡಾಯವೇ....ಈ ಬಂಡಾಯದ ನೇತೃತ್ವವನ್ನು ಆಳ್ವರು ವಹಿಸಿಕೊಳ್ಳಲಿದ್ದಾರೆ...ಆಳ್ವರ ಕ್ರಾಂತಿ ಚಿರಾಯುವಾಗಲಿ...’’
‘‘ಸಾರ್...ಈ ಆಳ್ವರು ಯಾವ ವರ್ಗದ ಸಾಹಿತಿ ಸಾರ್...ಅವರೇನಾದ್ರೂ ಸಾಹಿತ್ಯ ಬರೆದಿದ್ದಾರಾ...’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ಪಂಪ ವಿಕ್ರಮಾರ್ಜುನ ವಿಜಯ ಬರೆದ ಹಾಗೆ...ರತ್ನಾಕರ ವರ್ಣಿ ಭರತೇಶ ವೈಭವ ಬರೆದ ಹಾಗೆ ನಾನು ಆಳ್ವೇಶ ವೈಭವ ಎನ್ನುವ ಕಾವ್ಯವನ್ನು ಬರೆಯಲಿದ್ದೇನೆ...ಒಂದಾನೊಂದು ಕಾಲದಲ್ಲಿ ಆಳ್ವರು ಬರೆದಿದ್ದಾರೆನ್ನಲಾದ ಕಾವ್ಯಗಳಿಗಾಗಿ ಸಂಶೋಧನೆ ನಡೆಯಲಿದೆ...ಹಾಗೆಯೇ ಆಳ್ವಾಸ್ ನುಡಿಸಿರಿ ಮತ್ತು ಬಂಡಾಯ ಹೊಸ ಒಲವುಗಳು ಎಂಬುದರ ಕುರಿತಂತೆ ವಿದ್ಯಾರ್ಥಿಗಳು ಥೀಸಿಸ್ ಬರೆಯಲಿದ್ದಾರೆ....’’

‘‘ಸಾರ್ ಆಳ್ವರಿಗೆ ಸಂಘಪರಿವಾರದ ಜೊತೆಗೆ ನಂಟಿದೆಯಂತೆ ಹೌದಾ?’’ ಕಾಸಿ ಕೇಳಿದ.
ಬಂಡಾಯ ಸಾಹಿತಿ ಅದರ ಸೂಕ್ಷ್ಮಗಳನ್ನು ವಿವರಿಸಿದರು ‘‘ಅದು ಸಾಹಿತ್ಯಕ ನಂಟು ಕಣ್ರಿ. ಸಂತುಲಿತವಾದ ಸಮಾಜದಲ್ಲಿ ಸೂಕ್ಷ್ಮಜ್ಞರಾಗಿರು ವಾಗ ಇದೆಲ್ಲ ಅತ್ಯಗತ್ಯ ಕಣ್ರೀ...’’

ಕಾಸಿ ಬೆಚ್ಚಿ ಬಿದ್ದ ‘‘ಸಂತುಲಿತವಾದ ಸಮಾಜದಲ್ಲಿ ಸೂಕ್ಷ್ಮಜ್ಞರಾಗಿರುವಾಗ ಅಂದರೆ ಏನು ಸಾರ್... ಅದನ್ನು ಕನ್ನಡಕ್ಕೆ ಅನುವಾದಿಸಿ ಸಾರ್...’’‘‘ನಿಮಗೆ ಅದೆಲ್ಲ ಅರ್ಥ ಆಗುವುದಿಲ್ಲ. ಅದು ಸಾಹಿತ್ಯಕ ನೆಲೆಯ ಭಾಷೆ. ಅದು ಆಳ್ವರಿಗೆ ಅರ್ಥವಾಗುತ್ತದೆ. ನೀವು ನುಡಿಸಿರಿಯಲ್ಲಿ ಭಾಗವಹಿಸಿ. ಬೇಕಾದರೆ ನಿಮಗೂ ಒಂದು ಸನ್ಮಾನ ಮಾಡುತ್ತಾರೆ... ಎರಡು ಶಾಲು ಜಾಸ್ತಿ ಬಿದ್ದಿದೆಯಂತೆ. ನಿಮಗೂ ಹೊದಿಸುತ್ತಾರೆ...ಆದರೆ ಆಳ್ವರನ್ನು ವರ್ಣಿಸಿ, ಬಣ್ಣಿಸಿ ಒಂದು ಲೇಖನವನ್ನು ಬರೆದು ನಿಮ್ಮ ಬರಹವನ್ನು ಮೊದಲು ಸಾರ್ಥಕ ಪಡಿಸಿಕೊಳ್ಳಬೇಕು...’’ ‘‘ಸಾರ್...ನರೇಂದ್ರ ಮೋದಿ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ನುಡಿಸಿರಿಯಲ್ಲಿ ಭಾಗವಹಿಸಿದ್ದಾರಲ್ಲ...’’

‘‘ಉಪನ್ಯಾಸದ ಸಂದರ್ಭದಲ್ಲಿ ನಿದ್ದೆ ಹೋಗಿರುವ ಜನರನ್ನು ಎಬ್ಬಿಸುವುದಕ್ಕಾಗಿ ಸೂಲಿಬೆಲೆಯವರನ್ನು ಕರೆಸಲಾಗಿದೆ. ಮುಖ್ಯವಾಗಿ ಸೂಲಿಬೆಲೆಯವರು ‘ಜಾಗೋ ಭಾರತ್’ ಚಳವಳಿ ಮಾಡಿ ನಿದ್ದೆ ಹೋದ ಹಲವರನ್ನು ಸಭೆಗಳಲ್ಲಿ ಎಬ್ಬಿಸಿದ್ದಾರೆ. ಸಮ್ಮೇಳನದಲ್ಲಿ ನಿದ್ದೆ ಮಾಡುವುದಕ್ಕಾಗಿಯೇ ಸಾಕಷ್ಟು ಜನ ಬರುತ್ತಾರೆ. ಅವರನ್ನು ‘ಜಾಗೋ’ ಎಂದು ಮೈಕ್‌ನಲ್ಲಿ ಕರೆದು ಎಬ್ಬಿಸುವ ಕೆಲಸವನ್ನು ಸೂಲಿಬೆಲೆಯವರಿಗೆ ಒಪ್ಪಿಸಲಾಗಿದೆ. ಇದನ್ನೇ ಅಪಾರ್ಥ ಮಾಡಿಕೊಂಡು ಪಾಪ, ನಮ್ಮ ಆಳ್ವರ ಮಗುವಿನಂತಹ ಮನಸ್ಸನ್ನು ನೋಯಿಸು ತ್ತಿದ್ದಾರೆ...’’

ಕಾಸಿಗೆ ನಿಜಕ್ಕೂ ಬೇಜಾರಾಯಿತು. ‘‘ಸಾರ್...ಈ ಬಾರಿ ಸಾಹಿತಿಗಳೆಲ್ಲಾ ಆಳ್ವಾಸ್ ನುಡಿಸಿರಿಯಲ್ಲಿ ಯಾವ ನಿರ್ಣಯಗಳನ್ನು ಮಾಡಲಿದ್ದಾರೆ?’’ ಕುತೂಹಲದಿಂದ ಕೇಳಿದ. ‘‘ನಿರ್ಣಯಗಳನ್ನು ಈಗಾಗಲೇ ನಾವು ಮಾಡಿ ಆಗಿದೆ. ನೋಡಿ ಇಲ್ಲಿದೆ...’’ ಎಂದು ಸಾಹಿತಿಗಳು ನಿರ್ಣಯಗಳ ಪಟ್ಟಿಯನ್ನು ಕೊಟ್ಟರು. ಎಂಜಲು ಕಾಸಿ ಓದತೊಡಗಿದ.
1. ಆಳ್ವರು ಈಗಾಗಲೇ ಕನ್ನಡ ನಾಡು ನುಡಿಗಾಗಿ ದುಡಿದು 80 ಕೋಟಿ ರೂಪಾಯಿ ಸಾಲದಲ್ಲಿದ್ದಾರೆ. ಸಾಹಿತಿಗಳಿಗಾಗಿ ಸಾಲ ಮಾಡಿರುವ ಅವರ ಸಾಲ ವನ್ನು ಸರಕಾರ ತಕ್ಷಣ ಮನ್ನಾ ಮಾಡಬೇಕು.
2. ಕನ್ನಡದ ಮನೆಗಾಗಿ ತಾವು ಸಾಲ ಸೋಲ ಮಾಡಿ ಬಾಡಿಗೆ ಮನೆಯಲ್ಲಿರುವುದರಿಂದ ತಕ್ಷಣ ಅವರಿಗೆ ಹತ್ತು ಎಕರೆ ಭೂಮಿಯಲ್ಲಿ ದೊಡ್ಡದೊಂದು ಜನತಾ ಮನೆಯನ್ನು ಕಟ್ಟಿಕೊಡ ಬೇಕು.
3. ನುಡಿಸಿರಿಗಾಗಿ ಜನರು ವಿಶೇಷ ಕಂದಾಯವನ್ನು ಆಳ್ವರಿಗೆ ಪ್ರತಿ ವರ್ಷ ಸಲ್ಲಿಸಬೇಕು.
4. ನುಡಿಸಿರಿಯನ್ನು ನಾಡಹಬ್ಬವಾಗಿ ಪರಿವರ್ತಿಸಿ, ದಸರಾದಂತೆ ಆಳ್ವರನ್ನು ಜಂಬೂ ಸವಾರಿಯಲ್ಲಿ ಮೆರವಣಿಗೆ ಮಾಡಿಸಬೇಕು.
5. ಸಾಹಿತಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅವರನ್ನು ಹೊರಲು ಸರಕಾರವು ನೂರು ಹೊಸ ಪಲ್ಲಕ್ಕಿಯನ್ನು ಕೊಡುಗೆಯಾಗಿ ನೀಡಬೇಕು.
6. ಆಳ್ವರು ಬಿಟ್ಟ ಎಂಜಲೆಲೆಯಲ್ಲಿ ನಾಡಿನ ಎಲ್ಲ ಸಾಹಿತಿಗಳೂ ಕಡ್ಡಾಯವಾಗಿ ಮಡೆಸ್ನಾನ ಮಾಡಬೇಕು. ಹಾಗೆ ಮಾಡದವರನ್ನು ಸಾಹಿತ್ಯವಲಯದಿಂದ ದೂರವಿಡಬೇಕು.
7. ಆಳ್ವರ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿಯನ್ನು ನೀಡಬೇಕು.
ಹೀಗೆ....ಎಂಜಲು ಕಾಸಿ ಒಂದೊಂದಾಗಿ ಓದುತ್ತಿರಲಾಗಿ ಬಸ್‌ನ ಕಂಡಕ್ಟರ್ ‘‘ರೈಟ್...ಪೋಯಿ...ಮೂಡುಬಿದಿರೆ...’’ ಎಂದು ವಿಸಿಲ್ ಊದಿದ.
ಬದುಕಿದೆಯಾ ಬಡ ಜೀವ ಎಂದು ಪತ್ರಕರ್ತ ಎಂಜಲು ಕಾಸಿ ಬಸ್ಸಿನ ಕಿಟಕಿಯಿಂದ ಹಾರಿ ಓಡತೊಡಗಿದ.

ರವಿವಾರ - ಡಿಸೆಂಬರ್-22-2013

1 comment:

  1. chelayya adbuthavaagi baredu nannannu nageyalli mulugisidirallaaa

    ReplyDelete