Sunday, January 19, 2014

ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿ

 
ಇದು 19 ಜನವರಿ 2014ರ ಬುಡಬುಡಿಕೆ. ಪತ್ರಕರ್ತ  ಎಂಜಲು ಕಾಸಿ, ಮಹಾಕವಿ ವೀರಪ್ಪ ಮೊಯ್ಲಿಯನ್ನು ಸಂಧಿಸಿದಾಗ ಸಂಭವಿಸಿದ ಸಿಲಿಂಡರ್ ಸ್ಫೋಟ.

ಆಧಾರ್ ಕಾರ್ಡ್ ಇದ್ದರೆ ಮಾತ್ರ ಸಿಲಿಂಡರ್, ಸಿಲಿಂಡರ್ ಇದ್ದರೆ ಮಾತ್ರ ಆಧಾರ್ ಕಾರ್ಡ್, 7 ಸಬ್ಸಿಡಿ ಸಿಲಿಂಡರ್, 12 ಸಬ್ಸಿಡಿ ಸಿಲಿಂಡರ್ ಹೀಗೆಲ್ಲ ಗ್ಯಾಸ್ ಮುಗಿದ ಖಾಲಿ ಸಿಲಿಂಡರ್‌ನಂತೆ ಸಚಿವ ವೀರಪ್ಪ ಮೊಯ್ಲಿಯವರು ಸದ್ದು ಮಾಡುತ್ತಿರುವಾಗ, ಪತ್ರಕರ್ತ ಎಂಜಲು ಕಾಸಿ ಮೊಯ್ಲಿಯವರ ಮನೆಯ ಬಾಗಿಲನ್ನು ತಟ್ಟಿದ. ಅವನೇನೂ ಈ ಬಾರಿ ಅವರ ಇಂಟರ್ಯೂಗೆಂದು ಹೋಗಿರಲಿಲ್ಲ. ಅವರ ಇಂಟರ್ಯೂ ಮಾಡಬೇಕಾದರೆ ಅವರ ಮಗ ಹರ್ಷಕುಮಾರನ ಇಂಟರ್ಯೂನ್ನೂ ಅವರು ಫ್ರೀ ಆಗಿ ಕೊಡುತ್ತಿದ್ದುದ ರಿಂದ ಇಂಟರ್ಯೂ ರಗಳೆ ಬೇಡ ಎಂದು ಸುಮ್ಮನಾಗಿದ್ದ.

ಅನಿಲ ಸಿಲಿಂಡರ್‌ಗೆ ಆಧಾರ್ ಅಗತ್ಯವೇ, ನಿಜಕ್ಕೂ ಸಬ್ಸಿಡಿ ರೂಪದಲ್ಲಿ ಎಷ್ಟು ಸಿಲಿಂಡರ್ ಸಿಗುತ್ತವೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಸಚಿವರ ಮನೆಯ ಬಾಗಿಲನ್ನು ತಟ್ಟಿದ್ದ. ದಕ್ಷಿಣಕನ್ನಡದ ಯಾವುದೋ ಯುನಿರ್ವಸಿಟಿಯ ವಿದ್ವಾಂಸರು ಬಾಗಿಲು ತೆಗೆದು ಕಣ್ಣಗಲಿಸಿ ನೋಡಿ ‘‘ಸಾಹೇಬರು ಬಿಸಿಯಾಗಿ ದ್ದಾರೆ’’ ಎಂದು ಬಾಗಿಲು ಮುಚ್ಚಲು ನೋಡಿದರು. ಪತ್ರಕರ್ತ ಎಂಜಲು ಕಾಸಿ ತನ್ನ ಹಳೆಯ ಹರಿದ ಐಡೆಂಟಿಟಿ ಕಾರ್ಡ್ ತೋರಿಸಿದಾಕ್ಷಣ ವಿದ್ವಾಂಸರು ಹಲ್ಲು ಬಿಟ್ರು ‘‘ನೀವಾ ಮಾರ್ರೆ...ನಾನು ಗೊತ್ತಾಗ ಲಿಲ್ಲವಾ...ಹಂಪಿ ಯುನಿವರ್ಸಿಟಿ...ಮೊಯ್ಲಿ ಸಾಹೇಬರು ಒಳಗೆ ಮಹಾಕಾವ್ಯ ಬರೀತಾ ಇದ್ದಾರೆ....’’

ಮಹಾಕಾವ್ಯ ಎಂದಾಕ್ಷಣ ಎಂಜಲು ಕಾಸಿ ಬೆವರ ತೊಡಗಿದ. ಹಿಂದೊಮ್ಮೆ ತಮ್ಮ ಮಹಾಕಾವ್ಯವನ್ನು ಅರ್ಧಗಂಟೆ ಆತನ ಮುಂದೆ ಓದಿದ್ದರು. ‘‘ಸಾರ್ ನಾನು ಮತ್ತೆ ಬರ್ತೇನೆ ಆಗದಾ?’’ ಕಾಸಿ ಕೇಳಿದ. ವಿದ್ವಾಂಸರು ಅಷ್ಟರಲ್ಲೇ ಅವನನ್ನು ಎಳೆದುಕೊಂಡು ಹೋಗಿ ವೀರಪ್ಪ ಮೊಯ್ಲಿಯವರ ಮುಂದೆ ನಿಲ್ಲಿಸಿದರು. 

ಸಚಿವರನ್ನು ಕಂಡದ್ದೇ ಸಬ್ಸಿಡಿ ಸಿಲಿಂಡರ್ ಕಂಡ ಶ್ರೀಸಾಮಾನ್ಯನಂತೆ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್...ಮಹಾಕಾವ್ಯ ಬರೆಯುತ್ತಿದ್ದೀರಂತೆ...’’

ಮಹಾಕವಿಗಳು ನಿಧಾನಕ್ಕೆ ತಲೆಯೆತ್ತಿದರು. ನೋಡಿದರೆ ಅವರ ಪಕ್ಕದಲ್ಲೇ ಅವರ ಬೆನ್ನಿಗಂಟಿ ಒಂದು ಮಗುವೂ ಇತ್ತು. ಅವರ ಸುಪುತ್ರ ಹರ್ಷ ಕುಮಾರ ಇವನೇ ಇರಬೇಕು ಎಂದು ಕಾಸಿ ಅರ್ಥ ಮಾಡಿ ಕೊಂಡ. ‘‘ಹೌದು...ಇದು ಹೊಸ ಮಹಾ ಕಾವ್ಯ... ತುಂಬಾ ಸಂಶೋಧನೆ ಮಾಡಿ ಬರೆಯುತ್ತಾ ಇದ್ದೇನೆ...’’ ಎಂದು ಹಣೆಯ ಬೆವರು ಒರೆಸಿಕೊಂಡರು.
‘‘ಕಾವ್ಯದ ಹೆಸರೇನು ಸಾರ್? ಮಹಾಭಾರತಾನೋ, ರಾಮಾಯಣಾನೋ?’’ ಕಾಸಿ ಆಸಕ್ತಿಯನ್ನು ನಟಿಸಿದ.

‘‘ಮಹಾಕಾವ್ಯದ ಹೆಸರು ಶ್ರೀಹರ್ಷಚರಿತೆ ಅಂತ... ಈಗಾಗಲೇ ಈ ಕಾವ್ಯ ಬರೆಯಲು ರಾಜಮಾತೆ ಸೋನಿಯಾ ಗಾಂಧಿಯ ಆಶೀರ್ವಾದ ವನ್ನೂ, ರಾಜಕುವರ ರಾಹುಲ್‌ಗಾಂಧಿಯವರ ಅನುಮತಿ ಯನ್ನು ಪಡೆದಿದ್ದೇನೆ...’’ ಮೊಯ್ಲಿಯವರು ಉದ್ಗರಿಸಿದರು.
‘‘ರಾಜ ಹರ್ಷವರ್ಧನನ ಕುರಿತಂತೆ ಕಾವ್ಯ ಬರೆಯುತ್ತಿದ್ದೀರಾ ಸಾರ್?’’ ಕಾಸಿ ಭಯ ಭಕ್ತಿಯಿಂದ ಕೇಳಿದ.

‘‘ಇಲ್ಲ ಕಣ್ರೀ...ನನ್ನ ಮಗ ಹರ್ಷಮೊಯ್ಲಿಯ ಕುರಿತಂತೆ ಮಹಾಕಾವ್ಯ ಬರೆಯುತ್ತಾ ಇದ್ದೇನೆ... ಮುಂದಿನ ಚುನಾವಣೆಯಲ್ಲಿ ನಿಲ್ಲುವ ಸಂದರ್ಭದಲ್ಲಿ ಅವನ ಸಾಧನೆ, ಇತಿಹಾಸ, ಬದುಕು, ತ್ಯಾಗ, ಬಲಿದಾನ...ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಜನಜನಿತ ವಾಗಬೇಕು ಎನ್ನುವ ಕಾರಣದಿಂದ..."ಎನ್ನುತ್ತಾ ಕಾವ್ಯವನ್ನು ಓದತೊಡಗಿದರು....ಅಮೆರಿಕದೊಳ್ ವಿದ್ಯಾರ್ಜನೆ ಯಂಗೈದು, ಲಂಡನ್‌ನೊಳ್ ಅಪರಿಮಿತ ದಿಗ್ವಿಜಯಂಗಳ್ ಮೆರೆದು ಇಂತುಂ ಶ್ರೀಹರ್ಷ ಮೊಯ್ಲಿ ಮಂಗಳೂರಿಂಗೆ ವಿಜಯಂಗೈದಂ...’’
ಕಾಸಿಗೆ ಉಸಿರುಗಟ್ಟಿದಂತಾಗಿ...ಕೇಳಿದ ‘‘ಸಾರ್... ಈ ಕಾವ್ಯವನ್ನೂ ನೀವೇ ಬರೀತೀರಾ, ಅಥವಾ ಹಿಂದಿನ ಹಾಗೆ...’’ ಕೇಳಿದ.

ಮೊಯ್ಲಿ ಒಮ್ಮೆಲೆ ರೇಗಿದರು ‘‘ಏನ್ರಿ ಅದು ಹಿಂದಿನ ಹಾಗೆ, ಮುಂದಿನ ಹಾಗೆ...ಏನೋ ವಿವೇಕ ರೈಗಳು ನನ್ನ ಕಾವ್ಯಕ್ಕೆ ಮುನ್ನುಡಿ ಬರೆದ ಒಂದೇ ತಪ್ಪಿಗೆ ಇಡೀ ಕಾವ್ಯವನ್ನೇ ಅವರು ಬರೆದುಕೊಟ್ಟರು ಎಂದೆಲ್ಲ ಗಾಸಿಪ್ ಹಬ್ಬಿಸಿ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ನನ್ನ ಮಾನವನ್ನು ಹರಾಜು ಹಾಕಿದಿರಿ...ನನ್ನ ಮಗನ ಚರಿತೆಯನ್ನು ನಾನಲ್ಲದೆ ಇನ್ಯಾರ್ರೀ ಬರೀತಾರೆ...’’
ಅದೂ ಹೌದು ಅನ್ನಿಸಿತು ‘‘ಸಾರ್ ಅದೇನೋ ಸರಿ. ಆದರೆ ನಮಗೆಲ್ಲ ಇತಿಹಾಸದ ಹರ್ಷ ಗೊತ್ತು ಸಾರ್. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಹರ್ಷ ವೆನ್ನುವುದನ್ನು ನೋಡದೆ ತುಂಬಾ ಸಮಯ ಆಯ್ತು ಸಾರ್...ಗ್ಯಾಸ್ ಇದ್ರೆ ಆಧಾರ್ ಇಲ್ಲ...ಆಧಾರ್ ಇದ್ರೆ ಸಬ್ಸಿಡಿ ಇಲ್ಲ...’’

‘‘ಅದಕ್ಕಾಗಿಯೇ ನನ್ನ ಮಗ ಹರ್ಷ ವಿಜಯಂಗೈಯು ತ್ತಿದ್ದಾನೆ...ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹರ್ಷ, ಸಂತೋಷದ ಹೊನಲೇ ಹರಿಯುತ್ತದೆ...’’ ಎಂದು ಮೊಯ್ಲಿ ಹಸನ್ಮುಖಿಯಾದರು.
‘‘ಸಾರ್...ನಿಮ್ಮ ಮಹಾಕಾವ್ಯವನ್ನು ಓದಿದ ಜನರೇ ಸಿಟ್ಟಿಗೆದ್ದು ನಿಮಗೆ ಮತ ಹಾಕಲಿಲ್ಲ ಎಂಬ ಗಾಳಿ ಸುದ್ದಿ ಇದೆ. ಇದೀಗ ಈ ಹೊಸ ಕಾವ್ಯವನ್ನು ಜನರು ಸ್ವೀಕರಿಸುತ್ತಾರೆಯೇ...’’ ಕಾಸಿ ಅನುಮಾನದಿಂದ ಕೇಳಿದ.

‘‘ಯಾರ್ರೀ ಹೇಳಿದ್ದು? ನನ್ನ ಮಹಾಕಾವ್ಯ ಮೆಚ್ಚಿ ವೀರಕವಿ ಎಂದು ಬಿರುದು ಕೊಟ್ಟು ಪೇಜಾವರಶ್ರೀ ಶಾಲು ಹೊದಿಸಿದರು ಗೊತ್ತುಂಟೋ...’’ ಮೊಯ್ಲಿ ಸವಾಲು ಹಾಕಿದರು.
‘‘ಟೋಪಿ ಹಾಕುವ ಬದಲು ಶಾಲು ಹೊದಿಸಿದ್ರು ಎಂದು ಉಡುಪಿಯ ವೈದಿಕ ಜನರು ಕೃಷ್ಣಮಠದ ಉನ್ನತ ಪಂಕ್ತಿಯಲ್ಲಿ ಭೂರಿ ಭೋಜನವುಂಡು ನಗುತ್ತಿದ್ದರು ಸಾರ್...’’ ಎಂದು ಮತ್ತೆ ಮೊಯ್ಲಿಯನ್ನು ಚುಚ್ಚಿದ.
‘‘ನಾನು ನನ್ನ ಮಗನ ಕುರಿತಂತೆ ಬರೆಯುತ್ತಿರುವ ಶ್ರೀ ಹರ್ಷ ಚರಿತೆ ಮಹಾಕಾವ್ಯ ಕರಾವಳಿಯಲ್ಲಿ ಈಗಾಗಲೇ ಸುದ್ದಿಯಲ್ಲಿದೆ...ಈಗಾಗಲೇ ಎಲ್ಲ ಪತ್ರಿಕೆಗಳಲ್ಲಿ ಈ ಕಾವ್ಯದ ಆಯ್ದ ಭಾಗಗಳು ಪ್ರಕಟಗೊಂಡಿವೆ ಗೊತ್ತುಂಟಾ...’’ ಮೊಯ್ಲಿ ಮತ್ತೆ ಸವಾಲು ಹಾಕಿದರು.

‘‘ಸಾರ್ ಅದು ಜಾಹೀರಾತು ಅಲ್ವಾ?’’ ಕಾಸಿ ಅಚ್ಚರಿಯಿಂದ ಕೇಳಿದ. ‘‘ಜಾಹೀರಾತಲ್ಲ ನಿಮ್ಮ ಬೊಜ್ಜ...ಈ ಕಾವ್ಯ ವರ್ತಮಾನ ಕಾಲಕ್ಕೆ ತುಂಬಾ ಬೆಲೆ ಬಾಳುತ್ತದೆ ಎಂದು ವಿದ್ವಾಂಸರೆಲ್ಲ ಹೇಳುತ್ತಿ ದ್ದಾರೆ...ಅಲ್ಲವೇನ್ರಿ...?’’ ಎಂದು ಹಂಪಿ ಯುನಿವರ್ಸಿಟಿಯ ವಿದ್ವಾಂಸರಿಗೆ ಕೇಳಿದರು.
‘‘ಖಂಡಿತ ಸಾರ್...ಕುಮಾರವ್ಯಾಸನ ಭಾಮಿನಿ ಮತ್ತು ಹರಿಹರನ ರಗಳೆ ಛಂದಸ್ಸಿನಲ್ಲಿ ಬರೆಯಲಾದ ಅಪರೂಪದ ಕಾವ್ಯ ಇದು...ಇದರಲ್ಲಿರುವ ಮಾತ್ರೆ ಗಳು, ಗಣಗಳು...ಬಹಳ ವಿಶಿಷ್ಟವಾದುದು...’’
ಕಾಂಗ್ರೆಸ್‌ನಲ್ಲಿ ಆರೆಸ್ಸೆಸ್‌ನ ಗಣಗಳಿಗೆ ಏನು ಪಾತ್ರ? ಕಾಸಿಗೆ ಅರ್ಥವಾಗಲಿಲ್ಲ. ಒಳಗೊಳಗೆ ಚುನಾವಣಾ ಒಪ್ಪಂದವಾಗಿದೆಯೋ ಎಂದು ತಲೆ ತುರಿಸಿದ ‘‘ಸಾರ್, ಈ ಆರೆಸ್ಸೆಸ್ ಗಣಗಳು ಇದ್ದಲ್ಲಿ ರಗಳೆಗಳಿರುವುದು ಸಹಜವೇ ಸಾರ್....’’ ಕಾಸಿ ಕೂಡ ರಗಳೆ ಛಂದಸ್ಸಿನ ಕುರಿತಂತೆ ತನ್ನ ಪ್ರೌಢಿಮೆಯನ್ನು ಮೆರೆದ.

‘‘ರಗಳೆಯಲ್ಲ, ನಿಮ್ಮ ಬೊಜ್ಜ. ಅದು ಚಡ್ಡಿಗಳ ಗಣ ಅಲ್ಲ...ಇದು ನಮ್ಮ ಕವಿಗಳ ಗಣ...’’ ಮೊಯ್ಲಿ ಬೆಚ್ಚದಿಂದ ಹೇಳಿದರು.
‘‘ಓಹೋ ಹಾಗದರೆ ಇದು ಕಾಂಗ್ರೆಸ್‌ನ ಭಾರತ ಸೇವಾ ದಳದ ಗಣಗಳಾಗಿರಬೇಕು’’ ಎಂದು ಕಾಸಿ ಅರ್ಥವಾದವನಂತೆ ತಲೆಯಾಡಿಸಿದ. ‘‘ಆದರೆ ಸಾರ್...ನೀವು ಮೂರು ಸಾರಿ ಸೋತ ಆ ಪಾಳು ಬಿದ್ದ ಮಂಗಳೂರಿನ ಬಾವಿಗೆ ನಿಮ್ಮ ಮಗನನ್ನು ತಳ್ಳುವುದು ಸರಿಯಾ...’’ ಈ ಪ್ರಶ್ನೆಗೆ ಮೊಯ್ಲಿ ಮತ್ತೆ ಬೆಚ್ಚ ಆದರು.

‘‘ನೀವು ಹೀಗೆಲ್ಲ ಮಾತನಾಡಬಾರದು...ನನ್ನ ಮಗ ಅಮೆರಿಕದಲ್ಲಿ ಹುಟ್ಟಿ, ಲಂಡನ್‌ನಲ್ಲಿ ಅಂಬೆಗಾಲಿಕ್ಕಿ, ಪ್ಯಾರಿಸ್‌ನಲ್ಲಿ ತೊದಲು ಹೆಜ್ಜೆ ಇಟ್ಟು ಬೆಳೆದವನು. ಇವನು ಮಂಗಳೂರಿನಲ್ಲಿ ಬಂದು ಓಟಿಗೆ ನಿಲ್ಲುವುದೇ ದೊಡ್ಡದು. ನೀವೆಲ್ಲ ಓಟು ಹಾಕಿ ಅವನಿಗೆ ಕೃತಜ್ಞತೆ ಯನ್ನು ಸಲ್ಲಿಸಬೇಕು...ನನ್ನ ಕಾವ್ಯದ ಮೊದಲ ಅಧ್ಯಾಯದಲ್ಲೇ ಅವನ ಬಾಲಲೀಲೆಗಳನ್ನು ಬಣ್ಣಿಸಿದ್ದೇನೆ. ಇದು ಚಂಪೂಕಾವ್ಯದಲ್ಲಿದೆ. ಓದಲೇ...’’ ಎಂದು ಕೇಳಿದರು.

‘‘ಸಾರ್...ಗೋದಾಮಿನಲ್ಲಿ ಸ್ಟಾಕಿರುವ ನಿಮ್ಮ ಹಿಂದಿನ ಮಹಾಕಾವ್ಯಗಳ ಪ್ರತಿಗಳನ್ನೆಲ್ಲ ಕಡಲುಕೊರೆತ ತಡೆಯುವುದಕ್ಕೆ ಕಡಲಿಗೆ ಸುರಿದು ಮೊಯ್ಲಿ ಕಾವ್ಯದ ಹಿರಿಮೆಯನ್ನು ಮೇಲೆತ್ತಲಿದ್ದೇವೆ ಎಂದು ಜನಾರ್ದನ ಪೂಜಾರಿ ಅಲ್ಲಲ್ಲಿ ಹೇಳಿ ತಮಾಷೆ ಮಾಡುತ್ತಾರೆ ಸಾರ್...ಹೀಗಿರುವಾಗ ನಿಮ್ಮ ಹೊಸ ಕಾವ್ಯದ ಗತಿ ಏನು ಸಾರ್?’’

‘‘ಪ್ರಭಾಕರ ಭಟ್ಟರನ್ನು ತಬ್ಬಿಕೊಂಡ ಮೇಲೆ ಪೂಜಾರಿಯವರಿಗೆ ಸ್ವಲ್ಪ ಜಂಬ ಬಂದ ಹಾಗೆ ಇದೆ... ನಾನೂ ಬಿಡುವುದಿಲ್ಲ...ಹರ್ಷ ಚರಿತೆ ಮಹಾಕಾವ್ಯಕ್ಕೆ ಎಸ್.ಎಲ್.ಭೈರಪ್ಪರತ್ರ ಮುನ್ನುಡಿ ಬರೆಸುತ್ತೇನೆ... ಚಿದಾನಂದ ಮೂರ್ತಿಯವರಲ್ಲಿ ಸಂಶೋಧನೆ ಮಾಡಿಸಿ, ಹರ್ಷ ಮೊಯ್ಲಿಯ ಎಲ್ಲ ವೈಭವಗಳ ಶಾಸನಗಳನ್ನು ಮಂಗಳೂರಿನಲ್ಲಿ ಮೈಲುಕಲ್ಲುಗಳಂತೆ ನೆಡುತ್ತೇನೆ...’’ ಮೊಯ್ಲಿಯವರು ಸಿಟ್ಟಿನಿಂದ ಹೇಳಿದರು.

‘‘ಸಾರ್ ನಿಮ್ಮ ಮಗ ಅದೇನೋ ಗ್ರಾಮೀಣ ಜನರ ಬದುಕನ್ನು ಹಸನು ಮಾಡಿದ್ದಾರಂತಲ್ಲ ಸಾರ್... ಆ ಗ್ರಾಮ ಯಾವ ದೇಶದಲ್ಲಿರುವುದು ಸಾರ್.. ಅಮೆರಿಕದಲ್ಲೋ, ಲಂಡನ್‌ನಲ್ಲೋ...’’
ಕಾಸಿಯ ಪ್ರಶ್ನೆಗೆ ಮೊಯ್ಲಿಯವರು ಸಿಲಿಂಡರ್‌ನಂತೆ ಸ್ಫೋಟಿಸಿದರು ‘‘ಹಿಡಿಯಿರಿ ಅವನನ್ನು. ಅವನ ಕೈ ಕಾಲು ಕಟ್ಟಿ ಅವನ ಕಿವಿಗೆ ಒಂದು ಗಂಟೆ ನನ್ನ ಮಹಾಕಾವ್ಯವನ್ನು ಓದಿ ಹೇಳಿ.ರಿ...’’ ಎಂದು ಆದೇಶಿಸಿ ದರು. ಆದರೆ ಕಾಸಿಗೆ ಅದು ‘‘ಕಾದ ಸೀಸವನ್ನು ಸುರಿಯಿರಿ’’ ಎಂಬಂತೆ ಕೇಳಿ, ಈ ಸಬ್ಸಿಡಿಯೂ ಬೇಡ, ಸಿಲಿಂಡರೂ ಬೇಡ ಎಂದು ಅಲ್ಲಿಂದ ಓಡ ತೊಡಗಿದ.

Sunday, January 12, 2014

ನಾನು ಒಡೆದದ್ದು ಅಸಮಾನತೆಯ ಗೋಡೆ....

ವಿಧಾನ ಸೌಧದ ಗೋಡೆ ಡೆದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರ ಆಂಜನೇಯ ಅವರ ಸಂದರ್ಶನವನ್ನು ಪತ್ರಕರ್ತ ಎಂಜಲು ಕಾಸಿ ಮಾಡಿದ್ದಾನೆ. ಜನವರಿ -12-2014 ರ ವಾರ್ತಾ ಭಾರತಿ ಪತ್ರಿಕೆಯಲ್ಲಿ ಈ ಬುಡಬುಡಿಕೆ ಪ್ರಕಟವಾಗಿದೆ 

ತಗ್ಗಿ ಬಗ್ಗಿ ಪತ್ರಕರ್ತ ಎಂಜಲು ಕಾಸಿ ಕಚೇರಿಯೊಳಗೆ ನುಗ್ಗಿದ್ದು ನೋಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಗರಂ ಆದರು ‘‘ಏನ್ರೀ...ಗೋಡೆ ಒಡೆದಿರುವುದನ್ನು ವಿಚಾರಿಸೋದಕ್ಕೆ ಕಚೇರಿಗೆ ಬಂದ್ರಾ...’’ 

‘‘ಹಾಗಲ್ಲ ಸಾರ್...’’ ಎಂದು ಎಂಜಲು ಕಾಸಿ ಮುಜುಗರದಿಂದ ನಿಂತಲ್ಲೇ ಕಾಲಲ್ಲಿ ಉಂಗುರ ಬರೆಯತೊಡಗಿದ. 
‘‘ಹಾಗೂ ಇಲ್ಲ, ಈಗೂ ಇಲ್ಲ....ಒಂದಿನಾದ್ರೂ ನನ್ನ ಸಾಧನೆಯನ್ನು ಬರೆಯೋದಕ್ಕೆ ಈ ಇಲಾಖೆಗೆ ನುಗ್ಗಿದ್ದೀರಾ...ಇದೀಗ ಗೋಡೆ ಒಡೆದಿರುವುದು ಗೊತ್ತಾದದ್ದೇ ಸರಣಿಯೋಪಾದಿಯಲ್ಲಿ ಪತ್ರಕರ್ತರು ನುಗ್ಗುತ್ತಿದ್ದಾರೆ....’’

ಕಾಸಿ ಹಲ್ಲು ಕಿರಿಯುತ್ತಾ ಕೇಳಿದ ‘‘ಹಾಗಾದ್ರೆ ಗೋಡೆ ಒಡೆದಿರುವುದು ನಿಜಾನಾ ಸಾರ್...?’’
ಆಂಜನೇಯ ಭುಜ ಕುಲುಕಿ ಹೇಳಿದರು ‘‘ಹೌದ್ರಿ...ನಾನು ಗೋಡೆ ಒಡೆದಿದ್ದೇನೆ...ಸಮಾಜ ಕಲ್ಯಾಣ ಸಚಿವನಾಗಿ ಏನನ್ನು ಮಾಡಬೇಕೋ ಅದನ್ನೇ ಮಾಡಿದ್ದೇನೆ...’’

ಕಾಸಿ ನಿಂತಲ್ಲೇ ಬೆಚ್ಚಿ ಬಿದ್ದ ‘‘ಸಾರ್...ಸಮಾಜ ಕಲ್ಯಾಣ ಸಚಿವರ ಕೆಲಸ ಗೋಡೆ ಒಡೆಯುವುದಾ ಸಾರ್?’’
‘‘ಹೌದ್ರಿ...ನಾನು ಒಡೆದಿರುವುದು ಅಸಮಾನತೆಯ ಗೋಡೆಯನ್ನು....ಸಮಾಜ ಕಲ್ಯಾಣ ಸಚಿವನಾಗಿ ಸಮಾಜದಲ್ಲಿ ಜಾತಿ, ಭೇದಗಳು ಇರಬಾರದು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ಗೋಡೆಯನ್ನು ಒಡೆದಿದ್ದೇನೆ...’’
ಕಾಸಿಗೆ ಯಾರೋ ತನ್ನ ತಲೆಯ ಮೇಲೆ ಸುತ್ತಿಗೆಯಿಂದ ಒಡೆದಂತಾಯಿತು...‘‘ಅದು ಅಸಮಾನತೆಯ ಗೋಡೆ ಸಾರ್...ಆದರೆ ಇದು ವಿಧಾನಸೌಧದ ಗೋಡೆ ಸಾರ್...’’ ಗೊಂದಲದಿಂದ ಕಾಸಿ ಕೇಳಿದ.

‘‘ಯಾವ ಗೋಡೆಯಾದ್ರೂ ಸಮಾಜದೊಳಗೆ ಇರಬಾರದು ಕಣ್ರೀ...ದುರ್ಬಲ ಜಾತಿಗೆ ಈ ಗೋಡೆಗಳು ಒಂದು ಸಮಸ್ಯೆಯಾಗಿ ಕಾಡುತ್ತಿವೆ. ಆದುದರಿಂದ ಗೋಡೆ ಕಂಡಲ್ಲೆಲ್ಲ ಅದನ್ನು ಒಡೆಯುವುದಕ್ಕೆ ಆದೇಶ ನೀಡಬೇಕೆಂದಿದ್ದೇನೆ... ಸಮಾಜದ ಎಲ್ಲಾ ಗೋಡೆಗಳು ಅಳಿತು ಹೊಸ ಕಲ್ಯಾಣ ರಾಜ್ಯವೊಂದನ್ನು ನಾನು ಕಟ್ಟಬೇಕೆಂದಿದ್ದೇನೆ... ಅದಕ್ಕೆಂದೇ ನಾನು ವಿಧಾನಸೌಧದ ಗೋಡೆಯಿಂದಲೇ ಆರಂಭಿಸಿದ್ದೇನೆ....’’

‘‘ಅಂದ್ರೆ ವಿಧಾನಸೌಧದ ಗೋಡೆಯಲ್ಲಿ ಅಸಮಾನತೆ ಇದೆ ಎಂದು ಹೇಳುತ್ತೀರಾ ಸಾರ್?’’ ಕಾಸಿ ತನ್ನ ಪೆನ್ನಿನ ತುದಿಯನ್ನು ಹರಿತ ಮಾಡತೊಡಗಿದ. 

‘‘ಮತ್ತೇನು? ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕೋಣೆ. ಇತರ ಇಲಾಖೆಗಳಿಗೆ ದೊಡ್ಡ ಕಚೇರಿ ಎಂದರೆ ಏನರ್ಥ? ಅಸಮಾನತೆ ತಾನೆ? ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಲ್ಲಿ ಅಸಮಾನತೆ ಎಂದರೆ ಅದು ಇಡೀ ಸಮಾಜದ ಅಸಮಾನತೆಯನ್ನು ಸೂಚಿಸುತ್ತದೆ.ಆದುದರಿಂದ ನನ್ನ ಕಚೇರಿಯ ಗೋಡೆಯನ್ನು ಒಡೆದು ಅದನ್ನು ವಿಸ್ತರಿಸುವುದಕ್ಕೆ ಹೊರಟೆ. ಇದೊಂದು ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕಣ್ರೀ...ಆದ್ರೇ ಇದನ್ನೇ ದೊಡ್ಡದು ಮಾಡಿಕೊಂಡು, ಅಪಾರ್ಥ ಮಾಡಿಕೊಂಡು ಪತ್ರಕರ್ತರು ಏನೇನೆಲ್ಲ ಬರೀತಿದ್ದಾರೆ....’’ ಕಾಸಿ ಮಾತ್ರ ಆಂಜನೇಯರ ಬೆನ್ನು ಬಿಡಲಿಲ್ಲ ‘‘ಹಾಗಲ್ಲ ಸಾರ್...ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ...’’

ಆಂಜನೇಯರು ಮತ್ತೆ ಗರಂ ಆದರು. ‘‘ಅವರು ಹನುಮಂತಯ್ಯ. ನಾನು ಆಂಜನೇಯ. ಹೆಸರಲ್ಲೇನು ವ್ಯತ್ಯಾಸ ಇಲ್ಲಾರೀ...ಇಬ್ಬರೂ ಒಂದೆ. ಇಬ್ಬರ ಹೆಸರೂ ಯ ಅಕ್ಷರದಲ್ಲೇ ಕೊನೆಯಾಗುತ್ತೆ. ಯ ಅಂದರೆ ನ್ಯಾಯ ಅಂತ ಅರ್ಥ. ಅಲ್ಲಾರೀ...ಹನುಮಂತಯ್ಯ ವಿಧಾನಸೌಧ ಕಟ್ಟುವಾಗ ಸಮಾಜಕಲ್ಯಾಣ ಇಲಾಖೆ ಅಂತ ಸಣ್ಣ ಕೋಣೆಯೇನಾದ್ರೂ ಕಟ್ಟಿದ್ದಾರಾ? ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕಚೇರಿ ಕೊಡಿ ಎಂದು ಉಯಿಲು ಬರೆಸಿ ಹೋಗಿದ್ದಾರಾ? ಹನುಮಂತಯ್ಯ ಕಟ್ಟಿದ್ದು ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ. ಈ ಆಂಜನೇಯ ಕೆಡವಿದ್ದು ಕೂಡ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ...’’

ಯಾವುದೋ ಬಂಡಾಯ ಕವಿತೆ ಕೇಳಿದಂತೆ ಪತ್ರಕರ್ತ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಇನ್ನೇನೇನು ಒಡೆಯಬೇಕು ಅಂತ ಇದ್ದೀರಿ ಸಾರ್?’’ ಕಾಸಿ ಖುಷಿಯಿಂದ ಕೇಳಿದ.

 ‘‘ಸಮಾಜ ಕಲ್ಯಾಣ ಇಲಾಖೆಗೆ ಕೊಕ್ಕೆ ಇಡುವ ಅಧಿಕಾರಿಗಳ ಕಾಲನ್ನು ಒಡೆಯಬೇಕು ಎಂದಿದ್ದೇನೆ. ಹಾಗೆಯೇ ಬಾಯಿಗೆ ಬಂದಂತೆ ಬರೆಯುವ ಪತ್ರಕರ್ತರ ತಲೆ ಒಡೆಯಬೇಕು ಎಂದಿದ್ದೇನೆ...’’ ಎನ್ನುತ್ತಾ ಕಾಸಿಯನ್ನು ಕಣ್ಣಗಲಿಸಿ ನೋಡಿದರು.

ಕಾಸಿ ನಿಂತಲ್ಲೇ ಗದ್ದರ್ ಹಾಡು ಕೇಳಿದವನಂತೆ ನಡುಗಿದ. ‘‘ಸಾರ್...ಗೋಡೆ ಬಿಟ್ಟು ತಲೆಯನ್ನು ಒಡೆಯೋದಕ್ಕೆ ಸಿದ್ಧರಾಗಿದ್ದೀರಲ್ಲ ಸಾರ್...’’ 

‘‘ತಲೆಯಿರುವವರು ಗೋಡೆ ಕಟ್ಟುತ್ತಾರೆ. ಅದಕ್ಕಾಗಿ ಮೊದಲು ತಲೆ ಒಡೆದು ಅನಂತರ ಗೋಡೆ ಒಡೆದರೆ ಒಳ್ಳೆಯದು ಎಂಬ ತೀರ್ಮಾಣಕ್ಕೆ ಬಂದಿದ್ದೇನೆ...’’ ಆಂಜನೇಯ ಸ್ಪಷ್ಟವಾಗಿ ನುಡಿದರು. ಎಂಜಲು ಕಾಸಿ ತನ್ನ ತಲೆಯನ್ನೊಮ್ಮೆ ಸವರಿಕೊಂಡು ಕೇಳಿದ ‘‘ಆದರೂ...ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಸಾರ್?’’

‘‘ಹಾಗಾದರೆ, ಗೋಡೆಯ ಬಗ್ಗೆ ತಲೆ ಬಿಸಿ ಮಾಡಿಕೊಳ್ಳದೆ ಕಲ್ಯಾಣ ಇಲಾಖೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ...’’ ಆಂಜನೇಯರು ಆರ್ಡರ್ ಕೊಟ್ಟರು. ಬರೇ ಗೋಡೆಗಳ ಬಗ್ಗೆ ಮಾತ್ರ ಪ್ರಶ್ನೆ ಸಿದ್ಧ ಪಡಿಸಿಕೊಂಡು ಬಂದಿದ್ದ ಎಂಜಲು ಕಾಸಿ ಕಕ್ಕಾ ಬಿಕ್ಕಿಯಾದ. ಆದರೂ ಪ್ರಶ್ನೆ ಕೇಳ ತೊಡಗಿದ ‘‘ಸರ್, ಗೋಡೆ ಕೆಡವಿದ್ದಕ್ಕೆ ಸಿದ್ದರಾಮಯ್ಯ ತುಂಬಾ ಸಿಟ್ಟಾಗಿದ್ದಾರಂತೆ...ಹೌದಾ?’’

‘‘ಹೌದೌದು. ಶ್ಯಾನೆ ಸಿಟ್ಟಾಗಿದ್ರು. ನನ್ನನ್ನು ಬಿಟ್ಟು ನೀವೊಬ್ರೆ ಯಾಕೆ ಗೋಡೆ ಕೆಡವಿದ್ರಿ ಎಂದು ಸಿಟ್ಟಾದ್ರು. ಅಹಿಂದ, ಅಸಮಾನತೆ ಇತ್ಯಾದಿ ಗೋಡೆಗಳನ್ನು ಕೆಡಹುವಾಗ ಸಿದ್ದರಾಮಯ್ಯ ಅವರ ಜೊತೆ ಒಂದು ಮಾತು ಹೇಳಬೇಕಾಗಿತ್ತು. ಅದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಗೋಡೆ ಕೆಡಹುವಾಗ ಸಿದ್ದರಾಮಯ್ಯ ಅವರ ಕೈಯಲ್ಲಿ ಗುದ್ದಲಿ ಪೂಜೆ ಮಾಡಿಸಿ ಹೊರಡುತ್ತೇನೆ....’’

‘‘ಸಾರ್...ನೀವು ಗೋಡೆ ಕೆಡವಲು ವಾಸ್ತು ಕಾರಣ ಅಂತ ಹೇಳ್ತಾರೆ ಹೌದಾ?’’ ಕಾಸಿ ಕೇಳಿದ.
‘‘ಹೇಳುವವರನ್ನು ಕರೆದುಕೊಂಡು ಬನ್ನಿ. ನಿರ್ಮಾಣ ಮಾಡಿದ ಹೊಸ ಗೋಡೆಯ ಮೇಲೆ ಅವರನ್ನು ತೂಗು ಹಾಕ್ತೇನೆ....’’ ಆಂಜನೇಯ ಮತ್ತೆ ಗರಂ ಆದದ್ದು ಕಂಡು ಕಾಸಿ ಮೆಲ್ಲ ಅಲ್ಲಿಂದ ಕಾಲ್ತೆಗೆದ.


ಅಷ್ಟರಲ್ಲಿ ಹೊರಗಡೆ ಆಂಜನೇಯರ ಪಿಎಯನ್ನು ನೋಡಿದ್ದೇ ಕಾಸಿ ಅವನನ್ನು ಇಂಟರ್ಯೂ ಮಾಡಲು ಹೊರಟ ‘‘ಸಾರ್...ಅದೇ ಸಾಹೇಬ್ರ ಗೋಡೆ ಕೆಡವಿದ್ರಲ್ಲ...ಅದರ ಬಗ್ಗೆ...ನಿಮಗೇನಾದ್ರೂ ಗೊತ್ತಾ...’’

ಪಿಎ ತಣ್ಣಗೆ ಹೇಳಿದ ‘‘ಹಂಗೇನಿಲ್ಲ. ಸಾಹೇಬರು ಎಂದಿನಂತೆ ಕಚೇರಿಗೆ ಬಂದಿದ್ದರು. ಆದರೆ ಕಚೇರಿ ಬಾಗಿಲ ಬೀಗದ ಕೀ ಕಾಣಿಯಾಗಿತ್ತು. ತುಂಬಾ ಹುಡುಕಾಡಿದ್ರೂ ಸಿಗಲಿಲ್ಲ. ಆದರೆ ಕೆಲಸದ ವಿಷಯದಲ್ಲಿ ಸಾಹೇಬರು ಸ್ಟ್ರಿಕ್ಟು. ಬಾಗಿಲು ಮುರಿದು ಹೋದರೆ ತಪ್ಪಾಗತ್ತೆ ಅಂತ, ಗೋಡೆ ಒಡೆಯೋದಕ್ಕೆ ಹೇಳಿದ್ರು. ಹಾಗೆ...ಗೋಡೆ ಒಡೆದು ಒಳ ಹೋಗಿ ಸಾಹೇಬ್ರು ಕೆಲಸ ಮಾಡ ತೊಡಗಿದ್ರು...ಅದನ್ನೇ ಪತ್ರಕರ್ತರು ಇಷ್ಟು ರಾದ್ಧಾಂತ ಮಾಡ್ತಾ ಇದ್ದಾರೆ....’’
ಅಷ್ಟರಲ್ಲಿ ಒಳಗಿನಿಂದ ಆಂಜನೇಯರ ಧ್ವನಿ ಕೇಳಿಸಿತು ‘‘ಅಂದ ಹಾಗೆ ನನ್ನ ಶಾಸಕರ ಭವನದ ಬೀಗದ ಕೈ ಕಾಣ್ತಾ ಇಲ್ಲಾ....ಸ್ವಲ್ಪ ಬಂದು ಇಲ್ಲಿ ಹುಡುಕ್ರೋ...’’ ಎನ್ನುತ್ತಿದ್ದ ಹಾಗೆಯೇ ಆಂಜನೇಯರ ಪಿಎ ಶಾಸಕ ಭವನದ ಗೋಡೆ ಒಡೆಯಲು ಗುದ್ದಲಿ ಹುಡುಕ ತೊಡಗಿದ.

Wednesday, January 8, 2014

ಹುಂಜ ಮೊಟ್ಟೆ ಇಡುತ್ತಾ ಸಾರ್...?

 ಬಿಜೆಪಿ - ಜೆಡಿಎಸ್ ಜೊತೆಯಾಗಿ ಸರಕಾರ ನಡೆಸುತ್ತಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಸಖತ್ ಸುದ್ದಿಯಾಗ ತೊಡಗಿತು. ಆ ಸಂದರ್ಭದಲ್ಲಿ(ಆಗಸ್ಟ್ 5, 2007ರಂದು ) ಈ ಬುಡಬುಡಿಕೆ ಬರೆಯಲಾಗಿದೆ. ಕಳವಾದ ಕೋಳಿಯ ಬೆನ್ನು ಹತ್ತಿದ ಪತ್ರಕರ್ತ ಎಂಜಲು ಕಾಸಿಯ ಸ್ಕೂಪ್ ಸುದ್ದಿ ಇಲ್ಲಿದೆ.

 ಏಕಾಎಕಿ ಮುಖ್ಯಮಂತ್ರಿಗೆ ದೇವನೂರು ಮಹಾದೇವನವರ ಕಾದಂಬರಿ ‘ಒಡಲಾಳ’ದ ದಲಿತ ಮುದುಕಿ ಸಾಕವ್ವನ ಮನೆಯಲ್ಲಿ ವಾಸ್ತವ್ಯ ಹೂಡಿದರೆ ಹೇಗೆ ಅನಿಸಿತು. ತಕ್ಷಣ ಪತ್ರಿಕಾಗೋಷ್ಠಿ ಕರೆದರು. ವಾಸ್ತವ್ಯಕ್ಕೆ ಮೊದಲೆ ದಲಿತ ಕವಿ ಸಿದ್ದಲಿಂಗಯ್ಯನವರು ಮುಖ್ಯಮಂತ್ರಿಯನ್ನು ಅಭಿನಂಧಿಸಿದರು. ದಲಿತೆ ಸಾಕವ್ವನ ಗುಡಿಸಲಲ್ಲಿ ಮುಖ್ಯಮಂತ್ರಿಯ ವಾಸ್ತವ್ಯ ಎನ್ನುವ ಸುದ್ದಿಯನ್ನು ಪತ್ರಿಕೆಗಳು ‘ಧಾಂ... ಧೂಂ...’ ಎಂದು ಬರೆದವು. ಅಂತೂ ಇಂತೂ ಸಾಕವ್ವನ ಫೋಟೊ ಕೂಡ ಪತ್ರಿಕೆಯಲ್ಲಿ ಪ್ರಕಟವಾಯಿತು. ಕೊನೆಗೂ ಮಖ್ಯಮಂತ್ರಿಯವರ ಬಳಗ ಸಾಕವ್ವನ ಮನೆಯಲ್ಲಿ ಮಲಗಿ ಬೆಂಗಳೂರಿನ ಅಶೋಕ ಹೋಟೆಲ್‌ನಿಂದ ತಂದ ಊಟ ಉಂಡು, ಬೆಳ್ಳಂಬೆಳಗ್ಗೆ ಎದ್ದು ಬೆಂಗಳೂರು ಸೇರಿತು. ತಾತ್ಕಾಲಿಕವಾಗಿ ಆ ಗುಡಿಸಲು ಸೇರಿದ್ದ ವಿದ್ಯುತ್ ಬಲ್ಬು, ಫ್ಯಾನ್, ಮಂಚ ಕೂಡ ಅವರ ಹಿಂದೆಯೇ ಬೆಂಗಳೂರು ಸೇರಿದವು. ಅಂದು ಬೆಳಗ್ಗೆ ಸೂರ್ಯ ಮೂಡುವ ಹೊತ್ತಿಗೆ ಅಜ್ಜಿ ಸಾಕವ್ವ ಕೋಳಿ ಗೂಡಿಗೆ ಹೋಗಿ ಬಾಗಿಲು ತೆಗೆಯುತ್ತಾಳೆ. ಎದೆಯೇ ಬಾಯಿಗೆ ಬಂದಂತಾಯಿತು. ಸಾಕವ್ವನ ಹುಂಜ ಅಲ್ಲಿರಲಿಲ್ಲ. ‘ಲಬೋ.. ಲಬೋ...’ ಎಂದು ಬಾಯಿ ಬಡೆದು ಕೊಳ್ಳುತ್ತಾ ತನ್ನ ಮಕ್ಕಳು ಮತ್ತು ಸೊಸೆಯಂದಿರನ್ನು ಕರೆಯ ತೊಡಗಿದಳು. ‘‘ಬನ್ರಪ್ಪೋ ಬನ್ರೊ... ಆ ಮನೆ ಹಾಳಾ ಮುಖ್ಯಮಂತ್ರಿ ನನ್ನ ಮನೆ ಕೋಳಿ ಕದ್ಕೊಂಡು ಹೋಗಿದ್ದಾನಪ್ಪೋ ... ಬನ್ರೋ...’’ ಎಂದು ಮುಖ್ಯಮಂತ್ರಿಗೆ ಹಿಡಿಶಾಪ ಹಾಕಹತ್ತಿದಳು.
 ಎಲ್ಲರೂ ಅವರ ಸುತ್ತ ಸೇರಿದರು. ಕೆಲವರು ಅತ್ತಿತ್ತ ಹುಡುಕಾಡ ತೊಡಗಿದರು. ಸಾಕವ್ವ ಮಾತ್ರ ಬಂದವರಲ್ಲಿ ಗೋಳು ಹೇಳ ತೊಡಗಿದಳು. ‘‘ರಾತ್ರಿ ಊಟದ ಹೊತ್ತಿಗೇ ಆ ಮುಖ್ಯಮಂತ್ರಿಗೆ ಆ ನನ್ ಕೋಳಿ ಮೇಲೆ ಒಂದು ಕಣ್ಣಿತ್ತು. ಬೆಳಗ್ಗೆ ಯಾವುದೇ ಸುದ್ದಿಲ್ಲದೇ ಆ ವಯ್ಯ ಹೋಂಟೋದಾಗ್ಲೆ ನನ್ಗೆ ಅನುಮಾನ ಬಂದಿತ್ತು... ಹೋಗಿ ಕೋಳಿ ಗೂಡು ನೋಡಿದ್ರೆ ಅನುಮಾನ ನಿಜವಾಯಿತು... ಅಯ್ಯೋ... ನನ್ನ ಬಂಗಾರದಂತಾ ಕೋಳಿನಾ ಕದ್ಕೊಂಡು ಹೋಗಿ ಬಿಟ್ನೇ... ನಾನೇನ್ಮಾಡ್ಲಿ...’’ ಎಂದು ಎದೆ ಬಡಿದು ಅಳತೊಡಗಿದಳು. ಅಷ್ಟರಲ್ಲಿ ಅಲ್ಲಿಗೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆಗಮಿಸಿದರು. ಅವರಲ್ಲಿ ಎಡ-ಬಲ ಅಂತ ಎರಡು ಗುಂಪು ಇತ್ತು ಸಾಕವ್ವನ ಎಡ ಮತ್ತು ಬಲಭಾಗದಲ್ಲಿ ಅವರು ನಿಂತು ‘ಸಾಕವ್ವನ ಕೋಳಿ ಕದ್ದ ಮುಖ್ಯಮಂತ್ರಿಗೆ ದಿಕ್ಕಾರ... ಮರಳಿಸಿ... ಮರಳಿಸಿ... ಸಾಕವ್ವನ ಕೋಳಿ ಮರಳಿಸಿ ... ಎಂದು ಕೂಗ ತೊಡಗಿದರು. ತನ್ನ ಕೋಳಿಗಾಗಿ ಇಷ್ಟು ಜನರು ಒಂದಾಗಿರುವುದು ನೋಡಿ ಸಾಕವ್ವನಿಗೆ ಅಚ್ಚರಿ, ಸಂತೋಷ ಎರಡೂ ಆಯಿತು. ತಕ್ಷಣ ಪತ್ರಿಕಾಗೋಷ್ಠಿ ಕರೆಯಾಯಿತು.

ಪತ್ರಕರ್ತ ಎಂಜಲು ಕಾಸಿ ತರಾತುರಿಯಿಂದ ಜೋಲಿಗೆಯನ್ನು ಹೆಗಲಿಗೇರಿಸಿ ದಲಿತರ ಕೇರಿಗೆ ಹೋದ. ಅಲ್ಲಿ ನೋಡಿದರೆ ಅವನಂತಹ ಒಂದೆರಡು ಪತ್ರಕರ್ತರು ಮಾತ್ರ ಇದ್ದರು. ಕನ್ನಡದ ಹೆಚ್ಚಿನ ಪತ್ರಕರ್ತರು ಜನಿವಾರದ ಜನ ಆಗಿರುವುದರಿಂದ ಅವರಿಗೆ ಆ ಕೇರಿಗೆ ಕಾಲಿಡುವಂತಿಲ್ಲ. ಆದುದರಿಂದ ಅವರಾರು ಅಲ್ಲಿರಲಿಲ್ಲ. ಸಾಕವ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡತೊಡಗಿದಳು ‘‘ಅವನ ಮನೆ ಹಾಳಾಗ... ಕೈ ಸೇದೋಗ... ಬಂಗಾರದ ಜುಟ್ಟು ಇರುವ ನನ್ನ ಹೂಂಜಾನ ಕದ್ಕೊಂಡು ಹೋದ್ನಲ್ಲಾ... ಅವನ ಹೊಟ್ಟೆ ಸಿಡಿದೋಗ’’ ಎಂಜಲು ಕಾಸಿ ಎಲ್ಲವನ್ನು ನೋಟ್ ಮಾಟ್ಕೊಂಡ.

ನಾಡಿನಾದ್ಯಂತ ಸಾಕವ್ವನ ಕೋಳಿ ಸುದ್ದಿಯಾಯಿತು. ವಿವಿಧ ಗಣ್ಯರು, ವಿರೋಧ ಪಕ್ಷದ ನಾಯಕರು ಈ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಎಂಜಲು ಕಾಸಿ ಎಲ್ಲ ನಾಯಕರ ಹಿಂದೆ ಅಭಿಪ್ರಾಯಕ್ಕಾಗಿ ಅಲೆದಾಡ ತೊಡಗಿದ.

 ***
ಎಂಜಲು ಕಾಸಿ ಕಾಂಗ್ರೆಸ್ ಮುಖಂಡ ಖರ್ಗೆಯನ್ನು ಭೇಟಿ ಮಾಡಿದಾಗ ಅವರು ಸಖತ್ ಗರಂ ಆಗಿದ್ರು. ‘‘ಅದು ಬರೀ ಕೋಳಿಯಾಗಿರಲಿಲ್ಲ. ಅದೊಂದು ದಲಿತ ಕೋಳಿಯಾಗಿತ್ತು. ಅದನ್ನು ಕದ್ದುಕೊಂಡು ಹೋಗಿದ್ದಾರೆ ಎನ್ನುವುದು ನಿಜಕ್ಕೂ ಖಂಡನಾರ್ಹ. ಮೊನ್ನೆ ಕುಮಾರಸ್ವಾಮಿ ಮನೇಲಿ ನಡೆದ ಬಿಜೆಪಿ-ಜೆಡಿಎಸ್ ಸಭೆಯಲ್ಲಿ ಆ ಕೋಳಿಯನ್ನು ಸಾರು ಮಾಡಿ ಎಲ್ಲರಿಗೂ ಬಡಿಸಲಾಗಿದೆ. ಕೋಳಿಯ ತೊಡೆಯನ್ನು ಯಡಿಯೂರಪ್ಪನವರೇ ತಿಂದಿದ್ದಾರೆ. ಎನ್ನುವ ಮಾಹಿತಿ ನನಗೆ ದೊರೆತಿದೆ. ಆದ್ದರಿಂದ ಸಾಕವ್ವನ ಕೋಳಿಯನ್ನು ಕದಿರುವುದು ಬರೇ ಕುಮಾರಸ್ವಾಮಿ ಮಾತ್ರ ಅಲ್ಲ, ಇಡೀ ಸರಕಾರವೇ ಇದರಲ್ಲಿ ಭಾಗಿಯಾಗಿದೆ. ಪೋಲಿಸರ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ. ಆದ್ದರಿಂದ ಸರಕಾರ ತಕ್ಷಣ ರಾಜೀನಾಮೆ ನೀಡಬೇಕು... ’’ ಎಂದವರು ಗುಡುಗಿದರು.
ಎಂಜಲು ಕಾಸಿ ಖರ್ಗೆಯ ಬಾಯಿಯಿಂದ ಬಿದ್ದಿದ್ದನ್ನು ಜೋಲಿಗೆಯಲ್ಲಿ ತುಂಬಿ ಅಲ್ಲಿಂದ ನೇರವಾಗಿ ವಾಟಳ್ ನಾಗರಾಜ್ ಮನೆಗೆ ತೆರಳಿದ. ಮನೆಯೊಳಗಿಂದ ವಾಟಳ್ ನಾಗರಾಜ್ ಬೊಬ್ಬಿಡುತ್ತಿರುವುದು ಬೀದಿಗೆ ಕೇಳಿಸುತ್ತಿತ್ತು. ಮನೆಯಂಗಳದಲ್ಲೇ ಕೇಳಿದ್ದನ್ನು ಕಾಸಿ ನೋಟ್ ಮಾಡಿಕೊಂಡ. ‘‘ಅದು ಕನ್ನಡದ ಕೋಳಿಯಾಗಿತ್ತು. ಆ ಕೋಳಿ ಬೆಳಗ್ಗೆ ಬರೇ ಕೂಗುತ್ತಿರಲಿಲ್ಲ. ಬೆಳಗ್ಗೆದ್ದು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿತ್ತು ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ಆ ಕೋಳಿಯನ್ನು ಕದ್ದು, ನೆರೆಯ ಕರುನಾನಿಧಿಯವರಿಗೆ ಕಬಾಬ್ ಮಾಡುವುದಕ್ಕೆಂದು ಕೊಟ್ಟಿದ್ದಾರೆ ಎನ್ನುವುದರ ಕುರಿತಂತೆ ನನಗೆ ಸುಳಿವು ದೊರಕಿದೆ. ಆ ಕೋಳಿಯನ್ನು ಮರಳಿ ಕರ್ನಾಟಕಕ್ಕೆ ಒಪ್ಪಿಸಲೇಬೇಕು. ಇದಕ್ಕಾಗಿ ನಾನು ಸಹಸ್ರಾರು ಕೋಳಿಗಳನ್ನು ಮುಂದಿಟ್ಟು ಧರಣಿಯನ್ನು ಹಮ್ಮಿಕೊಳ್ಳಲಿದ್ದೇನೆ ...’’
  ಸಾಕಷ್ಟಾಯಿತು ಎಂದು ಅಲ್ಲಿಂದ ನೇರವಾಗಿ ಕಾಸಿ ಧರಂ ಸಿಂಗ್‌ರಲ್ಲಿಗೆ ಓಡಿದ. ಕಾಸಿಯನ್ನು ನೋಡಿದ್ದೆ ಅವರು ತಾನು ತಿನ್ನುತ್ತಿದ್ದ ಕೋಳಿ ಪ್ರೈಯನ್ನು ಮೆಲ್ಲಗೆ ಮುಚ್ಚಿಟ್ಟರು. ಆದರೆ ಕಾಸಿಗೆ ಪರಿಮಳದಿಂದಲೇ ಅಲ್ಲೇನಿದೆ ಎನ್ನುವುದು ಮನವರಿಕೆಯಾಯಿತು. ಧರಂ ಹೇಳಿದರು "ನೋಡ್ರಿ...ದೇವರಾಣೆ ಹೇಳುತ್ತಿದ್ದೇನೆ...ಇದು ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಕೋಳಿಯಲ್ಲ. ನಾನೇ ಮನೆಯಲ್ಲಿ ಸಾಕಿರುವ ಕೋಳಿ ಇದು. ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಸಾಕವ್ವನ ಕೋಳಿ ಆಸುಪಾಸಿನಲ್ಲಿ ತುಂಬಾ ಹೆಸರರು ಪಡೆದಿತ್ತು ಕಣ್ರಿ. ನಾಡಿಗೆಲ್ಲ ಅದೇ ಕೋಳಿಯಿಂದ ಮೊಟ್ಟೆ ಸಪ್ಲೈ ಆಗುತ್ತಿತ್ತು. ಆ ಕೋಳಿ ಮೊಟ್ಟೆಯನ್ನೇ ಎಲ್ಲಾ ಶಾಲೆಗಳಿಗೆ ಬಿಸಿಯೂಟ ಜೊತೆಗೆ ಕೊಡಬೇಕು ಎಂದು ನಿರ್ಧರಿಸಿದ್ದೆವು. ಅದನ್ನು ತಪ್ಪಿಸುವುದಕ್ಕಾಗಿಯೇ ಆ ಕೋಳಿಯನ್ನು ಕುಮಾರಸ್ವಾಮಿಯವರು ಕದ್ದಿದ್ದಾರೆ... ರಾಜ್ಯದಲ್ಲಿ ಮೊಟ್ಟೆಯ ಅಭಾವ ಕಾಣಿಸಿಕೊಳ್ಳಲಿದೆ... ಕುಮಾರಸ್ವಾಮಿಯವರು ಆ ಕೋಳಿಯನ್ನು ಸಾಕವ್ವನಿಗೆ ಮರಳಿಸಲೇ ಬೇಕು... ಇಲ್ಲದಿದ್ದರೆ ಮೊಟ್ಟೆ ಉದ್ಯಮ ಸಂಪೂರ್ಣ ಕುಸಿಯಲಿದೆ.’’

 ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್... ಆದರೆ ಕಾಣೆಯಾದ ಕೋಳಿ ಹುಂಜ ಆಗಿತ್ತಲ್ಲ, ಹುಂಜ ಮೊಟ್ಟೆ ಇಡುತ್ತಾ ಸಾರ್...’’ ಧರಂ ಗರಂ ಆದರು ‘‘ಹುಂಜ ಮೊಟ್ಟೆ ಇಡುತ್ತಾ ಇಲ್ಲವೋ ಎಂಬುದು ತನಿಖೆಯಿಂದಷ್ಟೆ ಗೊತ್ತಾಗುತ್ತೆ ಕೆಲವು ವೇಳೆ ಅದು ಮೊಟ್ಟೆಯಿಡುವ ಹುಂಜ ಆಗಿರುವ ಸಾಧ್ಯತೆಯಿದೆ. ಏನೇ ಆಗಲಿ ಒಟ್ಟಿನಲ್ಲಿ ತನಿಖೆಯಾಗಬೇಕು... ಅಷ್ಟೆ ಅಲ್ಲ ಮುಖ್ಯಮಂತ್ರಿ ಎಲ್ಲೆಲ್ಲಾ ವಾಸ್ತವ್ಯ ಹೂಡಿದ್ದಾರೋ, ಅಲ್ಲಿ ಚೆಂಬು, ಚಪ್ಪಲಿ, ದುಡ್ಡು ಇತ್ಯಾದಿ ಕಳವಾಗಿದೆ. ಒಟ್ಟಿನಲ್ಲಿ ಸಿಬಿಐ ತನೆಖೆ ನಡೆಯಲೇಬೇಕು’’.
ಕಾಸಿ ಅಲ್ಲಿಂದ ನೇರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಲಿತ ಕವಿ ಸಿದ್ದಲಿಂಗಯ್ಯನವರಲ್ಲಿಗೆ ಓಡಿದ. ಸಿದ್ದಲಿಂಗಯ್ಯ ಗರಿಗರಿ ಬಟ್ಟೆ ತೊಟ್ಟು ಕೊಂಡಿದ್ದರು. ಆಗಷ್ಟೆ ಫೂಜೆ ಮುಗಿಸಿ, ಹಣೆಯಲ್ಲಿ ಕುಂಕುಮ ಧರಿಸಿಕೊಂಡಿದ್ದರು. ಕಾಸಿಯನ್ನು ಕಂಡಂತೆಯೇ ಭಯ ಭಕ್ತಿಯಲ್ಲಿ ‘‘ ತಗೊಳ್ಳಿ ಪ್ರಸಾದ’’ ಎಂದು ನೀಡಿದರು. ಕಾಸಿ ಅದನ್ನು ಗಬಕ್ಕನೆ ನುಂಗಿದ. ‘‘ನನಗೆ ಗೊತ್ತು. ನೀವು ಕುಮಾರಸ್ವಾಮಿ ಕದ್ದ ಕೋಳಿಯ ಕುರಿತು ಅಭಿಪ್ರಾಯ ಕೇಳಲು ಬಂದಿದ್ದೀರಿ ಅಂತ.  ಇತ್ತೀಚೆಗೆ ದಲಿತರ ಕಾನೂನು ದುರ್ಬಳಕೆಯಾಗುತ್ತಿದೆ. ದಲಿತರು ಸುಮ್ಮಸುಮ್ಮನೆ ಮೇಲ್ಜಾತಿಯ ಮುಗ್ದರ ಮೇಲೆ ಆ ಕಾನೂನನ್ನು ಬಳಸುತ್ತಿದ್ದಾರೆ. ಸಾಕವ್ವ ಕೋಳಿಯನ್ನು ಸಾಕುತ್ತಿದ್ದಳೋ ಇಲ್ಲವೋ ಎಂಬುದನ್ನು ನಾವು ಪತ್ತೆ ಮಾಡಬೇಕು. ಯಾಕೆಂದರೆ ದಲಿತರು ಸಸ್ಯಹಾರಿಗಳು...’’
ಕಾಸಿಯ ತಲೆಯ ಮೇಲೆ ಧಿಂ ಅಂದಿತು. ‘‘ಸಾರ್ ದಲಿತರು ಸಸ್ಯಾಹಾರಿಗಳೇ ...?’’ ಕೇಳಿದ. ‘‘ಹೂಂ. ನನ್ನ ಮನೆಯಲ್ಲಿ ಕೋಳಿ, ಮಾಂಸ ಇತ್ಯಾದಿಗಳನ್ನು ತಪ್ಪಿಯೂ ಬಳಸುತ್ತಿರಲಿಲ್ಲ. ದಲಿತರು ಮಾಂಸಹಾರಿಗಳಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನನ್ನ ಮನೆಯಲ್ಲಿ ಅಮ್ಮ ಬದನೆಕಾಯಿ ಗೊಜ್ಜು ತಿಳಿಸಾರು ಅದೆಷ್ಟೋ ಚೆನ್ನಾಗಿ ಮಾಡುತ್ತಿದ್ದಳು ಎಂದರೆ ಬ್ರಾಹ್ಮಣರು ಕೂಡ ಊಟ ಮಾಡಿ ಹೋಗುತ್ತಿದ್ದರು. ಹಿಂದೆ ಮೇಲ್ಜಾತಿ ಮತ್ತು ದಲಿತರ ನಡುವೆ ಅದೆಷ್ಟು ಹೊಂದಾಣಿಕೆಯಿತ್ತು ಎಂದರೆ...ಛೇ..! ಈಗ ದಲಿತರು ತುಂಬಾ ಕೆಟ್ಟು ಹೋಗಿದ್ದಾರೆ... ಮೊನ್ನೆ ಪೇಜಾವರಶ್ರೀಗಳು ಸಿಕ್ಕಿದ್ದರು. ಅವರಿಗೆ ನಾನೆಂದರೆ ತುಂಬಾ ಪ್ರೀತಿ...’’
ಕಾಸಿ ‘‘ ಸಾರ್ ಈಗ ಬಂದಿದೆ ...’’ ಎಂದವನೇ ಅಲ್ಲಿಂದ ಓಡಿ ನೇರ ದೇವನೂರು ಮಹಾದೇವನವರ ಮನೆಗೆ ಬಂದ. ನೋಡಿದರೇ ಮಹಾದೇವರು ತಂಬಾ ವರ್ಷಗಳ ಬಳಿಕ ಪೆನ್ನು ಕಾಗದ ಹಿಡಿದು ಕೂತಿದ್ದರು. ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್ ಹೊಸ ಕಾದಂಬರಿ ಬರೀತಾ ಇದ್ದಿರಾ ಸಾರ್...?’’ ಮಹಾದೇವ ಗಂಭೀರವಾಗಿ ನುಡಿದರು. ‘‘ಹೂಂ..ಈ ಹಿಂದೆ ಸಾಕವ್ವನ ಕೋಳಿಯನ್ನು ಪೊಲೀಸರು ಕದ್ಕೊಂಡು ಹೋದಾಗ ‘ಒಡಲಾಳ’ ಕಾದಂಬರಿ ಬರೆದಿದ್ದೆ. ಈಗ ಮುಖ್ಯಮಂತ್ರಿ ಕದ್ದಿದ್ದಾರೆ ಎಂದ ಮೇಲೆ ಬರೆಯದೇ ಇರೋಕ್ಕಾಗುತ್ತಾ...’’
ಅಲ್ಲಿಂದ ನೇರವಾಗಿ ಕಾಸಿ ಕುಮಾರಸ್ವಾಮಿಯ ಮನೆಗೆ ತೆರಳಿದ. ಅವರು ತಲೆ ಮೇಲೆ ಕೈಯಿಟ್ಟು ಕೂತಿದ್ದರು. ಕಾಸಿಯನ್ನು ಕಂಡದ್ದೇ ಹೇಳತೊಡಗಿದರು ‘‘ಅಪ್ಪಾಜಿಯಾಣೆ.. ನಾನು ಕದ್ದಿಲ್ಲ...ಯಡಿಯೂರಪ್ಪನವರ ಸಹವಾಸ ಬಳಿಕ ನಾನು ನಾನ್‌ವೆಜ್ ತಿನ್ನುವುದನ್ನೇ ಬಿಟ್ಟಿದ್ದೇನೆ... ಹೀಗಿರುವಾಗ ನಾನ್ಯಾಕೆ ಕೋಳಿಯನ್ನು ಕದೀಲಿ. ನನ್ನೊಟ್ಟಿಗೆ ಇಕ್ಬಾಲ್ ಅನ್ಸಾರಿ, ಮೀರಾಜುದ್ದೀನ್ ಪಟೇಲ್ ಕೂಡ ಇದ್ರು. ಅವರೇನಾದ್ರೂ ಕದ್ಕೊಂಡು ಹೋಗಿ ಬಿರಿಯಾನಿ ಮಾಡಿ ತಿಂದ್ರಾ ಎನ್ನುವ ಅನುಮಾನ ನನಗಿದೆ. ಸಾಬ್ರನ್ನ ನಂಬೋಕಾಗಲ್ಲ. ಏನಾದ್ರೂ ತನಿಖೆಯಲ್ಲಿ ಗೊತ್ತಾಗುತ್ತೆ....’’
 ಕಾಸಿ ಅಲ್ಲಿಂದ ಹೊರಡುವಷ್ಟರಲ್ಲಿ ಸುದ್ದಿ ಸಿಕ್ಕಿತ್ತು. ಸಾಕವ್ವನ ಕೋಳಿಯ ಹೆಣ ಚಿಕ್ಕಮಗಳೂರಿನ ಕಾಡಿನ ಸಮೀಪ ಬಿದ್ದಿದೆ, ಎನ್ನುವುದು. ಕಾಸಿಯಾದಿ ಪತ್ರಕರ್ತರು ಅತ್ತ ದಾವಿಸಿದರು. ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪತ್ರಿಕಾಗೋಷ್ಠಿ ಕರೆದು ಇಡೀ ಪ್ರಕರಣವನ್ನು ಮುಗಿಸಿದರು. ‘‘ಸಾಕವ್ವನ ಕೋಳಿಗೆ ನಕ್ಸಲೀಯರ ಜೊತೆ ಸಂಪರ್ಕವಿತ್ತು. ಅದು ಪೊಲೀಸರ ಮೇಲೆ ಗುಂಡೆಸೆದಾಗ ಪೊಲೀಸರು ಪ್ರತಿಯಾಗಿದರ ಮೇಲೆ ಗುಂಡೆಸೆದರು. ಈ ಎನ್‌ಕೌಂಟರ್‌ನಲ್ಲಿ ಕೋಳಿ ಸತ್ತು ಹೋಗಿದೆ. ಇಬ್ಬರು ಪೊಲೀಸರಿಗೆ ಗಾಯವಾಗಿದೆ...’’
ಇದರ ಬೆನ್ನಿಗೇ ಗೃಹಸಚಿವ ಎಂ.ಪಿ. ಪ್ರಕಾಶಕರು ಕರೆ ನೀಡಿದರು ‘‘ ನಕ್ಸಲೀಯರು ಶಸ್ತ್ರಾಸ್ತ್ರ ಕೆಳಗಿಟ್ಟರೆ ಮಾತುಕತೆಗೆ ಸಿದ್ದ....’’

Sunday, January 5, 2014

ಯಾರ ಜೊತೆಯಲಿ ಮಲಗಲಮ್ಮಾ....?

 ಜನವರಿ 5, 2014ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ

ತನ್ನ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಯಡಿಯೂರಪ್ಪ ಕೊನೆಗೂ ತನ್ನ ತಾಯಿಯ ಮನೆಗೆ ಬಂದರು. ಮೋದಿ ಎಂಬ ಕೊಳೆತ ಕುಂಬಳ ಕಾಯಿ ಯನ್ನು ಇಟ್ಟುಕೊಂಡು ಬಿಜೆಪಿ ಎಂಬ ತಾಯಿ ಕಾಯುತ್ತಿದ್ದಳು.

‘‘ಬಂದೆಯಾ ಮಗನೇ....ಬಾ ಬಾ...ನಿನ್ನ ತೆಂಗಿನಕಾಯಿಗಾಗಿ ನಾನು ಕಾದು ಕುಳಿತಿದ್ದೆ...’’ ಎಂದು ಮಾತೃಪಕ್ಷವಾದ ಬಿಜೆಪಿ ಯಡಿಯೂರಪ್ಪರನ್ನೂ ಅವರ ನಾಲ್ಕು ತೆಂಗಿನ ಕಾಯಿಯನ್ನು ಮಡಿಲಲ್ಲಿಟ್ಟು ಜೋ ಜೋ ಹಾಡತೊಡಗಿತು.

ಅಷ್ಟರಲ್ಲಿ ಯಡಿಯೂರಪ್ಪ ನುಡಿದರು ‘‘ಅಮ್ಮಾ... ಇದರಲ್ಲಿ ಎರಡು ತೆಂಗಿನ ಕಾಯಿ ಕೆಟ್ಟು ಹೋಗಿದೆ. ಆದರೆ ಮೋದಿ ಎಂಬ ಕೊಳೆತ ಕುಂಬಳಕಾಯಿಗೆ, ಈ ಕೆಟ್ಟು ಹೋದ ತೆಂಗಿನಕಾಯಿ ಹಾಕಿದರೆ ರುಚಿ ಹೆಚ್ಚಾಗು ತ್ತದೆ ಎಂದು ಶೋಭಾ ಅವರು ಹೇಳಿದ್ದಾರೆ...’’

ತಾಯಿ ಮನೆ ಬಿಟ್ಟು ಹೋದ ಮಗನನ್ನು ಕುಳ್ಳಿರಿಸಿ ಉಪಚಾರ ಮಾಡತೊಡಗಿದಳು ‘‘ಮಗನೇ... ಕೆಟ್ಟದ್ದಾದರೂ ನಡೆಯುತ್ತದೆ...ಹುಳ ಬಂದದ್ದಾರೂ ನಡೆಯುತ್ತದೆ. ಖಾಲಿ ಗೆರಟೆಯಾದರೂ ಸರಿ. ಸದ್ಯಕ್ಕೆ ಪಲ್ಯ ಮಾಡುವಾಗ ತೆಂಗಿನ ಕಾಯಿಯ ಲೆಕ್ಕ ಸರಿ ಸಿಕ್ಕಿದರೆ ಸಾಕು...’’

‘‘ಅಮ್ಮಾ...ನಿನ್ನನ್ನು ತೊರೆದು ಹೋದುದಕ್ಕೆ ನನ್ನನ್ನು ಕ್ಷಮಿಸಿ ಬಿಡು. ತುತ್ತು ಕೊಟ್ಟವಳು ಕೊನೆಯವರೆಗೆ, ಮುತ್ತುಕೊಟ್ಟವಳು ಮನೆಯವರೆಗೆ ಎನ್ನುವ ಗಾದೆ ಮಾತನ್ನು ಮರೆತು ನಾನು ಮನೆ ಬಿಟ್ಟು ಹೋದೆ. ಇದೀಗ ಮೋದಿಯೆಂಬ ಕುಂಬಳಕಾಯಿಯ ಸಾರಿಗೆ ತೆಂಗಿನ ಕಾಯಿಯ ಕೊರತೆ ಬಿದ್ದುದು ತಿಳಿದು ನನಗೆ ಬೇಜಾರಾಯಿತು. ನನ್ನಿಂದಾಗಿ ಈ ಕುಂಬಳಕಾಯಿ ಕಸದ ತೊಟ್ಟಿಗೆ ಬೀಳುವುದು ಬೇಡ ಎಂದು ನನ್ನ ತೆಂಗಿನ ಕಾಯಿಯ ಜೊತೆಗೆ ಮಾತೃಪಕ್ಷಕ್ಕೆ ಮರಳಿದ್ದೇನೆ....ಅಮ್ಮಾ ನನ್ನ ಕೋಣೆ ಎಲ್ಲಿದೆ...ನಾನು ಸ್ವಲ್ಪ ನನ್ನ ಕೋಣೆಯಲ್ಲಿ ವಿಶ್ರಾಂತಿ ತೆಗೆಯುತ್ತೇನೆ...’’

ತಾಯಿ ಬೇಜಾರಿನಿಂದ ಹೇಳಿದಳು ‘‘ಮಗನೇ ಬಂದದ್ದು ಹೇಗೂ ಬಂದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೋ.. ನಿನ್ನ ಕೋಣೆಯಲ್ಲಿ ಸದ್ಯಕ್ಕೆ ನನ್ನ ನಡು ಮಗ ಶೆಟ್ಟರ್ ಮಲಗಿದ್ದಾನೆ...ನೀನಿಲ್ಲದ ಇಷ್ಟು ದಿವಸ ಈ ಮನೆಯನ್ನು ಕಾಪಾಡಿದ್ದು ಅವನೇ ಅಲ್ಲವೆ. ಈಗ ಅವನನ್ನು ನಿನ್ನ ಕೋಣೆಯಿಂದ ಹೊರಗೆ ಹಾಕಿದರೆ ಅವನಿಗೆ ಬೇಜಾರಾದೀತು..’’

‘‘ಸರಿ. ಹಾಗಾದರೆ ನಾನು ನಿನ್ನ ಜೊತೆಯೇ ಮಲಗುತ್ತೇನೆ...ಅಮ್ಮನ ತೊಡೆಯಲ್ಲಿ ತಲೆಯಿಟ್ಟು ಮಲಗದೆ ತುಂಬಾ ದಿವಸವಾಯಿತು...’’ ಯಡಿಯೂರಪ್ಪ ಅಡ್ಜಸ್ಟ್ ಮಾಡಲು ತಯಾರಾದರು.

‘‘ಅಯ್ಯೋ ಮಗನೆ...ನನ್ನ ಜೊತೆ ಪಾಪು ಅನಂತಕುಮಾರ್ ಮಲಗುತ್ತಿದ್ದಾನೆ. ಏನು ತಿಳಿಯದ ಹಸುಗೂಸು ಅವನು. ಇನ್ನೂ ಮೊಲೆ ಹಾಲು ಬಿಟ್ಟಿಲ್ಲ. ಅಂಬೆಗಾಲಿಕ್ಕಿಕೊಂಡು ಪಕ್ಷಕ್ಕೆ ಭಾರವಾಗಿ ನಡೆಯು ತ್ತಿದ್ದಾನೆ. ನೀನು ಬಂದೆ ಎಂದು ಅವನನ್ನು ಹೊರಗೆ ಹಾಕುವುದಕ್ಕೆ ಆಗೋದಿಲ್ಲ ಮಗನೇ...ಸ್ವಲ್ಪ ಅಡ್ಜಸ್ಟ್ ಮಾಡಿಕೋ...ದಿಲ್ಲಿಯ ಅಡ್ವಾಣಿ ತಾತನಿಗೆ ಅವನೆಂದರೆ ತುಂಬಾ ಪ್ರೀತಿ. ಅವನನ್ನು ಜೊತೆಗೆ ಮಲಗಿಸಿಕೊಳ್ಳದೇ ಇದ್ದರೆ ಇಡೀ ರಾತ್ರಿ ಅತ್ತು ರಂಪಾಟ ಮಾಡುತ್ತಾನೆ...’’

ಯಡಿಯೂರಪ್ಪ ತಲೆತುರಿಸಿದರು. ಹಾಗಾದರೆ ಎಲ್ಲಿ ಮಲಗುವುದು? ‘‘ಅಮ್ಮಾ ಹಾಗಾದರೆ...ಮನೆಯ ಚಾವಡಿಯಲ್ಲೇ ಮಲಗುತ್ತೇನೆ....ಆಗದೆ...?’’

ತಾಯಿಗೆ ಮತ್ತೂ ಬೇಜಾರಾಯಿತು. ಪಾಪ ಮನೆ ಬಿಟ್ಟು ಹೋದ ಮಗ ತಿರುಗಿ ಬಂದಿದ್ದಾನೆ. ಆದರೆ ಮಲಗುವುದಕ್ಕೆ ಜಾಗವಿಲ್ಲ ‘‘ಮಗನೇ, ಚಾವಡಿಯಲ್ಲಿ ಮಲಗಬಹುದಿತ್ತು. ಆದರೆ ಸುರೇಶ್ ಕುಮಾರ್ ಮಲಗಿದ್ದಾನಪ್ಪ. ಹಿರಿಯರು. ಸಜ್ಜನರು ಬೇರೆ. ಆರೆಸ್ಸೆಸ್‌ನ್ನು ಚಡ್ಡಿಯಾಗಿಯೂ, ಲಂಗೋಟಿ ಯಾಗಿಯೂ, ಜನಿವಾರವಾಗಿಯೂ ಧರಿಸಿಕೊಂಡ ವರು. ಅವರನ್ನು ಹೊರಗೆ ಮಲಗಿಸುವುದಕ್ಕೆ ಆಗುತ್ತದೆಯೆ? ಅದೂ ಅಲ್ಲದೆ, ಮನೆಯ ಹಿರಿಯರು. ಬೆಳಗ್ಗೆ ಎದ್ದು ಕಿಟಕಿ ಬಾಗಿಲು, ತೆಗೆದು, ವೀರಸಾವರ್ಕರ್‌ಗೆ ಆರತಿ ಬೆಳಗಿ, ಸದಾ ವತ್ಸಲೆ ಎಂದು ಹಾಡಬೇಕಾದವರು...’’

ಯಡಿಯೂರಪ್ಪ ತನ್ನ ತೆಂಗಿನಕಾಯಿಯಿಂದ ಸಿಟ್ಟಲ್ಲಿ ಒಮ್ಮೆ ತಲೆಚಚ್ಚಿಕೊಂಡರು. ಅಷ್ಟರಲ್ಲಿ ಬಿಜೆಪಿ ಎಂಬ ಮಾತೆಗೆ ನೋವಾಯಿತು. ‘‘ಅಯ್ಯೋ ಮಗನೆ, ಅಷ್ಟು ಜೋರಾಗಿ ತೆಂಗಿನ ಕಾಯಿಯಿಂದ ತಲೆ ಚಚ್ಚಿಕೊಳ್ಳಬೇಡ. ತೆಂಗಿನಕಾಯಿ ಹೋಳಾಗಿ ಬಿಟ್ಟೀತು. ಮೋದಿ ಎಂಬ ಕುಂಬಳಕಾಯಿಯನ್ನು ಸಾಂಬಾರು ಮಾಡಬೇಕಾದರೆ ಆ ತೆಂಗಿನಕಾಯಿ ಬೇಕೇ ಬೇಕು. ಒಂದು ವೇಳೆ ನಿನಗೆ ತಲೆ ಚಚ್ಚಿಕೊಳ್ಳಲೇ ಬೇಕಾದರೆ, ಹೊರಗಡೆ ಕಲ್ಲಿದೆ. ಅದರಲ್ಲಿ ಚಚ್ಚಿಕೋ...’’ ಎಂದು ಮಗನನ್ನು ಸಮಾಧಾನಿಸಿದರು.
ತಾಯಿಗೆ ತನ್ನ ಮೇಲೆ ಇರುವ ಪ್ರೀತಿಯನ್ನು ನೆನೆದು ಯಡಿಯೂರಪ್ಪ ಗದ್ಗದಿತರಾದರು ‘‘ಅಮ್ಮಾ ಹಾಗಾದರೆ ನಾನು ಅಂಗಳದಲ್ಲಿ ಮಲಗಲೇ....’’

ತಾಯಿಗೆ ಮಗನ ಮೇಲೆ ಪ್ರೀತಿ ಉಕ್ಕಿ ಬಂತು. ಆದರೇನು ಮಾಡುವುದು...‘‘ಮಗನೇ...ಅಂಗಳದಲ್ಲಿ ಪುತ್ತೂರಿನ ಗೌಡರು ಮಲಗಿದ್ದಾರೆ. ದೇವೇಗೌಡರಿಗೆ ಪ್ರತಿಯಾಗಿ ನಮ್ಮಲ್ಲಿರುವುದು ಒಂದೇ ಒಂದು ಗೌಡ. ಅವರನ್ನು ಬಿಟ್ಟು ಬಿಡುವುದಕ್ಕೆ ಆಗುತ್ತದೆಯೆ? ಅವರನ್ನು ಎಬ್ಬಿಸಿದರೆ, ಅವರು ದೇವೇಗೌಡರ ಜೊತೆ ಕೈ ಜೋಡಿಸಿ ನಮ್ಮ ಮನೆಯನ್ನು ಕೆಡವಿ ಹಾಕಲೂ ಬಹುದು. ಮಂಗಳೂರಿನವರಲ್ಲವೆ? ಮೀನು ತಿಂದ ತಲೆ. ನಂಬಲಿಕ್ಕಾಗುವುದಿಲ್ಲ...’’

ಯಡಿಯೂರಪ್ಪ ಚಿಂತಾಕ್ರಾಂತರಾದರು. ಮಾತೃ ಪಕ್ಷಕ್ಕೆ ಮರಳಿ ಆಗಿದೆ. ಕಣ್ಣೀರು ಸುರಿಸಿ ಆಗಿದೆ. ಇನ್ನೂ ಎಲ್ಲಾದರೂ ಸರಿ. ಮಲಗಲೇ ಬೇಕಲ್ಲ? ‘‘ಅಮ್ಮ ನಾನು ಮನೆಯ ಹಿಂದಿರುವ ದನದ ಕೊಟ್ಟಿಗೆಯಲ್ಲಿ ಮಲಗಲೇ?’’

ತನ್ನ ಮಗನ ತ್ಯಾಗ ಬಲಿದಾನಕ್ಕೆ ಮಾತೃಪಕ್ಷದ ಕಣ್ಣಿನಿಂದ ಕಣ್ಣೀರು ದಳ ದಳನೆ ಸುರಿಯತೊಡಗಿತು ‘‘ಅಯ್ಯೋ ಮಗನೆ. ಅಪರೂಪಕ್ಕೆ ಮನೆಗೆ ಮತ್ತೆ ಮರಳಿ ಬಂದಿದ್ದೀಯ. ಅಷ್ಟೇ ಅಲ್ಲ, ಬರುವಾಗ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಬಂದಿದ್ದೀಯ...ಆದರೆ ನಿನಗೆ ಮಲಗುವುದಕ್ಕೆ ಜಾಗ ಕೊಡಲು ನನಗೆ ಸಾಧ್ಯವಿಲ್ಲದಾಯಿತೆ...ಮಗನೆ, ನಿನ್ನನ್ನು ಕೊಟ್ಟಿಗೆಯಲ್ಲಿ ಮಲಗಿಸಬಹುದಿತ್ತು. ಆದರೆ ನಿನಗೇ ಗೊತ್ತಲ್ಲ, ತಲೆ ತಲಾಂತರದಿಂದ ನಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಈಶ್ವರಪ್ಪ ಮಲಗಿಕೊಂಡು ಬಂದಿದ್ದಾನೆ. ಈಗ ನಿನಗಾಗಿ ಅವನನ್ನು ಎಬ್ಬಿಸುವುದು ಸರಿಯೆ? ಅದೂ ಅಲ್ಲದೆ ಸೆಗಣಿಯ ವಾಸನೆಯ ಜೊತೆಗೆ ಮಲಗಿ ಮಲಗೀ ಅವನಿಗೆ ಅಭ್ಯಾಸವಾಗಿ ಹೋಗಿದೆ. ಅದೂ ಅಲ್ಲದೆ ಮನು ಸಂವಿಧಾನ ಅವನಿಗೆ ಕೊಟ್ಟಿರುವ ಮೀಸಲಾತಿ ಅದು. ಅದನ್ನು ಕಿತ್ತುಕೊಂಡರೆ ಹಿಂದುಳಿದ ವರ್ಗಗಳ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಆರೆಸ್ಸೆಸ್ ನವರಿಗೂ ಬೇಜಾರಾಗುತ್ತದೆ.....’’

ಯಡಿಯೂರಪ್ಪ ತಾಯಿಯ ಕೈಯನ್ನು ಹಿಡಿದು ಕೊಂಡು ಗಳಗಳನೆ ಅಳತೊಡಗಿದರು ‘‘ಹಾಗಾದರೆ ಯಾರ ಜೊತೆಗೆ ಮಲಗಲಮ್ಮ?’’ ಎಂದು ಪುಣ್ಯಕೋಟಿಯ ಜೊತೆಗೆ ಅದರ ಕರು ಕೇಳಿದ ಹಾಗೆ ಕೇಳಿದರು.

‘‘ಓ ಅಲ್ಲಿ ಮೂಲೆಯಲ್ಲಿ ಒಂದು ತೆಂಗಿನ ಮರ ಇದೆ. ಅದರ ಬುಡದಲ್ಲಿ ಸ್ವಲ್ಪ ಜಾಗ ಇದೆ. ಅಲ್ಲಿ ಮಲಗು. ಮುಂದೆ ನಿನಗೆ ಬೇರೆ ಒಳ್ಳೆಯ ವ್ಯವಸ್ಥೆಯನ್ನು ಮಾಡುವ. ನಿನ್ನ ಕೋಣೆಯನ್ನು ಬಿಟ್ಟು ಕೊಡಲು ಶೆಟ್ಟರ್‌ಗೆ ಮನವೊಲಿಸುತ್ತೇನೆ...ಈ ತಾಯಿಯ ಜೊತೆಗೆ ಬೇಜಾರು ಮಾಡದೆ ಅಲ್ಲಿ ಹೋಗು ಮಲಗು ಮಗು...’’ ಮಾತೃ ಪಕ್ಷ ಸಲಹೆ ನೀಡಿತು.

ಯಡಿಯೂರಪ್ಪ ಕೋಲೆ ಬಸವನಂತೆ ತಲೆಯಾಡಿಸಿ, ತನ್ನ ನಾಲ್ಕು ತೆಂಗಿನ ಕಾಯಿಯ ಜೊತೆಗೆ ಮಲಗಲು ಹೊರಟರು.
ಅಷ್ಟರಲ್ಲಿ ಮಾತೃಪಕ್ಷ ಹೇಳಿತು ‘‘ಮಗನೇ...ನೀನು ಹೋಗಿ ಮಲಗು. ಆದರೆ ಆ ತೆಂಗಿನ ಕಾಯಿಗಳನ್ನು ಓ ಅಲ್ಲಿ ಒಳಗೆ ಇಟ್ಟು ಹೋಗು. ಯಾಕೆಂದರೆ ಹೊರಗಡೆ ನೀನು ಇಟ್ಟುಕೊಂಡರೆ ಕಾಂಗ್ರೆಸ್‌ನವರು ಕಾಯ್ತೆ ಇದ್ದಾರೆ, ನಿನ್ನ ತೆಂಗಿನ ಕಾಯಿ ಕದಿಯಲು...’’

ಯಡಿಯೂರಪ್ಪ ತೆಂಗಿನ ಕಾಯಿಗಳನ್ನು ತಾಯಿಗೆ ಒಪ್ಪಿಸಿ ತೆಂಗಿನ ಮರದ ಬುಡದಲ್ಲಿ ಗುಮ್ಮನೆ ಮಲಗಿಕೊಂಡರು.
ಯಡಿಯೂರಪ್ಪ ಹೊರ ನಡೆದದ್ದೇ ಒಳಗಿರುವ ಶೆಟ್ಟರ್, ಅನಂತು, ಗೌಡ, ಈಶ್ವರಪ್ಪ ಎಲ್ಲ ಒಟ್ಟಾಗಿ ಮನೆಯ ಬಾಗಿಲ ಚಿಲಕವನ್ನು ಭದ್ರ ಪಡಿಸಿ, ಕುಂಬಳ ಕಾಯಿ ಸಾಂಬಾರು ಮಾಡಲು ಸಿದ್ಧತೆ ನಡೆಸಿದರು.

ರವಿವಾರ - ಜನವರಿ -05-2014

Saturday, January 4, 2014

ಪ್ರತಿಮನೆಯ ಅಂಗಳದಲ್ಲಿ ಒಂದು ಗೆರೆ ಎಳೆಯಲಾಗುತ್ತದೆ..............

 ದಿಲ್ಲಿಯಲ್ಲಿ ಬಸ್ಸೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದು ಕೊಲೆ ನಡೆದಾಗ ಆರೆಸ್ಸೆಸ್ ನಾಯಕರೊಬ್ಬರು ‘ಇಂಡಿಯಾದಲ್ಲಿ ಮಾತ್ರ ಅತ್ಯಾಚಾರ ನಡೆಯುತ್ತದೆ. ಭಾರತದಲ್ಲಿ ನಡೆಯುವುದಿಲ್ಲ’ ಎಂಬ ಹೇಳಿಕೆ ನೀಡಿದಾಗ, ಪತ್ರಕರ್ತ ಎಂಜಲು ಕಾಸಿ ನಡೆಸಿದ ಸಂದರ್ಶನ. ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

‘‘ಭಾರತದಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ. ಅತ್ಯಾಚಾರಗಳು ನಡೆಯುವುದು ಇಂಡಿಯಾದಲ್ಲಿ’’ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಗವತಿಕೆ ಕೇಳಿದ್ದೇ, ಪತ್ರಕರ್ತ ಎಂಜಲು ಕಾಸಿಗೆ ಗೊಂದಲವಾಯಿತು. ಹಾಗಾದರೆ ಈ ‘ಭಾರತ’ ಎನ್ನುವ ದೇಶ ಯಾವ ಖಂಡದಲ್ಲಿದೆ? ಎಂದು ಕೊಲಂಬಸ್‌ನಂತೆ ಪೆನ್ನು, ಜೋಳಿಗೆಯ ಜೊತೆಗೆ ಹುಡುಕಾಡಲು ಹೊರಟ. ತನ್ನ ತುಂಡು ಪೇಪರನ್ನು ದೋಣಿಯಾಗಿಸಿ, ಕೈಯಲ್ಲಿರುವ ಪೆನ್ನನ್ನೇ ಹುಟ್ಟಾಗಿ ಬಳಸಿ ಇಡೀ ಹಿಂದೂ ಮಹಾಸಾಗರವನ್ನು ಜಾಲಾಡಿದರೂ ಭಾರತ ಸಿಗದೇ ಸುಸ್ತಾಗಿ, ನೇರ ಭಾಗವತ್ ಮನೆಯ ಬಾಗಿಲನ್ನು ತಟ್ಟಿದ.
‘‘ಸಾರ್, ಅತ್ಯಾಚಾರಗಳೇ ನಡೆಯದ ಈ ಭಾರತ ಎನ್ನುವ ದೇಶ ಎಲ್ಲಿದೆ ಸಾರ್?’’ ಎಂಬ ಪ್ರಶ್ನೆ ಕೇಳಿದ್ದೇ, ಈತ ಪತ್ರಕರ್ತ ಎಂಜಲು ಕಾಸಿ ಎನ್ನುವುದು ಭಾಗವತ್‌ಗೆ ಅರ್ಥವಾಯಿತು. ಇಂತಹ ತಲೆಗೆಟ್ಟ ಪ್ರಶ್ನೆಗಳನ್ನು ಕಾಸಿಯಲ್ಲದೆ ಇನ್ನಾರು ಕೇಳಲು ಸಾಧ್ಯ? ಎಂಬುದು ಅವರಿಗೆ ಗೊತ್ತಿತ್ತು. ‘‘ಎಲ್ಲೆಲ್ಲ ಹೆಣ್ಣು ಮಕ್ಕಳು ಅತ್ಯಾಚಾರದ ವಿರುದ್ಧ ಧ್ವನಿಯೆತ್ತುತ್ತಾರೋ, ಅದೆಲ್ಲ ಇಂಡಿಯ ಅಲ್ಲ. ಎಲ್ಲಿ, ಅತ್ಯಾಚಾರಕ್ಕೊಳಗಾಗಿಯೂ ಮಾನ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕೂರುತ್ತಾರೋ ಅದೆಲ್ಲ ಭಾರತ’’ ಎಂದು ವ್ಯಾಖ್ಯಾನಿಸಿದ ಭಾಗವತ್ ಟಪ್ಪ್ ಎಂದು ಬಾಗಿಲು ಹಾಕಿದರು.
ಕಾಸಿ ಮತ್ತೆ ಬಾಗಿಲು ತಟ್ಟಿದ. ಭಾಗವತ್ ತನ್ನ ಲಾಠಿಯೊಂದಿಗೆ ಬಾಗಿಲು ತೆರೆದರು. ಲಾಠಿ ನೋಡಿದ್ದೆ ಕಾಸಿ ಸಣ್ಣಗೆ ಕಂಪಿಸಿದ. ಅದರೂ ಧೈರ್ಯವನ್ನು ಒಟ್ಟು ಸೇರಿಸಿ ಕೇಳಿದ ‘‘ಸಾರ್...ಭಾರತ ಇಂಡಿಯಾ ಆಗುವ ಮೊದಲು ಇಲ್ಲಿ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲವೆ ಸಾರ್?’’
‘‘ಇಲ್ಲ ಇಲ್ಲ ಇಲ್ಲ...ಮೊಗಲರು, ಬ್ರಿಟಿಷರ ಸಂಸ್ಕೃತಿಯಿಂದಾಗಿ ಭಾರತದಲ್ಲಿ ಅತ್ಯಾಚಾರ ಜಾರಿಗೆ ಬಂತು....’’ ಭಾಗವತ್ ಮೀಸೆಯ ಮೇಲೆ ಕೈ ಹಾಕಿ ನುಡಿದರು.
‘‘ದೇವದಾಸಿ ಪದ್ಧತಿ ಅಂತಾ ಇತ್ತಲ್ಲ ಸಾರ್...ಅದು ಭಾರತದಲ್ಲಿದ್ದದ್ದೋ ಇಂಡಿಯಾದಲ್ಲೋ....’’ ಕಾಸಿ ಮೆಲ್ಲಗೆ ಕೇಳಿದ.
ಭಾಗವತ್ ಕನಲಿ ಕೆಂಡವಾದರು ‘‘ದೇವದಾಸಿ ಪದ್ಧತಿ ಭಾರತದ ಸಂಸ್ಕೃತಿಯಾಗಿತ್ತು. ಹಿಂದೆ ದೇವದಾಸಿ ಪದ್ಧತಿಯಂತಹ ಹತ್ತು ಹಲವು ಸಂಸ್ಕೃತಿಗಳಿದ್ದುದರಿಂದ ಅತ್ಯಾಚಾರ ಕಡಿಮೆಯಾಗಿತ್ತು....ಈಗಲೂ ಭಾರತೀಯ ಸಂಸ್ಕೃತಿಯುಳ್ಳ ಹಳ್ಳಿಗಳಲ್ಲಿ ಅತ್ಯಾಚಾರದ ಸುದ್ದಿ ಕೇಳುತ್ತದೆಯೆ? ಭಾರತದಲ್ಲಿ ಅತ್ಯಾಚಾರ ಆಗಲು ಸಾಧ್ಯವಿಲ್ಲ...’’
‘‘ಹಳ್ಳಿಯಲ್ಲಿ ಈಗಲೂ ಜಮೀನ್ದಾರರು, ಶ್ರೀಮಂತರು, ಕೆಳ ಜಾತಿಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರಲ್ಲ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.
‘‘ನೋಡ್ರಿ...ಅದನ್ನು ಅತ್ಯಾಚಾರ ಎಂದು ಕರೆಯಬಾರದು. ಹೆಣ್ಣು ಮಕ್ಕಳು ಹಾಗೆಲ್ಲ ಮಾತನಾಡುವುದೇ ಭಾರತೀಯ ಸಂಸ್ಕೃತಿಗೆ ವಿರುದ್ಧ. ಹಳ್ಳಿಯಲ್ಲಿ ಅತ್ಯಾಚಾರ ನಡೆದರೂ ಅದು ಈ ರೀತಿ ಸುದ್ದಿಯಾಗುವುದಿಲ್ಲ. ಯಾಕೆ ಗೊತ್ತಾ? ಭಾರತೀಯ ಹೆಣ್ಣು ಮಕ್ಕಳಿಗೆ ಮಾನವೇ ಪ್ರಾಣ. ಮೇಲ್ವರ್ಣೀಯರು ಅತ್ಯಾಚಾರ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳುವುದು ಭಾರತದ ಧರ್ಮ. ಸಂಸ್ಕೃತಿ. ಇಂಡಿಯಾದಲ್ಲಿ ಮಾತ್ರ ಒಂದು ಅತ್ಯಾಚಾರವಾದಾಕ್ಷಣ ಬೊಬ್ಬೆ ಹೊಡೆಯುತ್ತಾರೆ. ಎಷ್ಟೊಂದು ಕ್ಯಾಂಡಲ್‌ಗಳು ವೇಸ್ಟ್ ಆದವು. ಆ ಕ್ಯಾಂಡಲ್‌ಗಳನ್ನು ಬಳಸಿಕೊಂಡು ಅದೆಷ್ಟೋ ಮುಸಲರ ಮನೆಗಳಿಗೆ ಬೆಂಕಿಕೊಡಲು ಉಪಯೋಗಿಸಬಹುದಿತ್ತು...’’
‘‘ಸಾರ್...ಸತಿಪದ್ಧತಿ ಭಾರತದಲ್ಲಿತ್ತೋ ಇಂಡಿಯಾದಲ್ಲಿತ್ತೋ?’’ ಕಾಸಿ ಭಾಗವತರ ಚೆಡ್ಡಿ ಎಳೆಯಲು ಯತ್ನಿಸಿದ.
‘‘ಎಂಥಾ ಮಾತೂಂತ ಆಡ್ತೀರ್ರಿ....ಮುಸಲರು ಅತ್ಯಾಚಾರ ಮಾಡಿದರೂಂತ ಅವರು ಬೆಂಕಿಗೆ ಹಾರ್ತಾ ಇದ್ದರು...ಗಂಡ ಸತ್ತ ಮೇಲೆ ಹೆಂಡತಿ ಒಬ್ಬಳೇ ಉಳಿದರೆ ಅವಳನ್ನು ಮುಸಲರು, ಬ್ರಿಟಿಷರು ಬಿಡ್ತಿದ್ದರೇನ್ರಿ...ಅದಕ್ಕೆ ಬೆಂಕಿಗೆ ಹಾರಿ ಸಾಯ್ತ ಇದ್ದರು. ಇದು ಭಾರತೀಯ ಸಂಸ್ಕೃತಿ. ಇಂದು ಗಂಡ ಸತ್ತರೆ ಬೆಂಕಿಗೆ ಹಾರುವ ಹೆಣ್ಣು ಮಕ್ಕಳೇ ಇಲ್ಲ...ಆದುದರಿಂದಲೇ ಈ ಅತ್ಯಾಚಾರಗಳು ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದ್ದರೆ ಈ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲ...’’
‘‘ಗುಜರಾತ್ ಭಾರತದಲ್ಲಿದೆಯೋ ಇಂಡಿಯಾದಲ್ಲಿದೆಯೋ?’’ ಕಾಸಿ ಮತ್ತೊಂದು ಪ್ರಶ್ನೆ ಒಗೆದ.
‘‘ಗುಜರಾತ್ ಅಪ್ಪಟ ಭಾರತದಲ್ಲಿದೆ’’
‘‘ಆದ್ರೆ...ಅಲ್ಲಿ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಯಿತಲ್ಲ....?’’
‘‘ಅದು ಅತ್ಯಾಚಾರವಲ್ಲ ಕಣ್ರೀ...ಭಾರತದ ದಿಗ್ವಿಜಯ...ನಮ್ಮ ಆತ್ಮಾಭಿಮಾನದ ಸಂಕೇತ....’’ ಭಾಗವತರು ತನ್ನ ಕೈಯಲ್ಲಿದ್ದ ಲಾಠಿಯನ್ನೊಮ್ಮೆ ತಿರುಗಿಸಿದರು.
‘‘ಸಾರ್...ಇಂಡಿಯಾವನ್ನು ಮತ್ತೆ ಭಾರತವನ್ನಾಗಿಸುವುದು ಹೇಗೆ ಸಾರ್?’’ ಕಾಸಿ ಕೇಳಿದ.
‘‘ಬಹಳ ಸುಲಭ. ಮೊದಲು ಮನು ಸಂವಿಧಾನ ಜಾರಿಗೆ ಬರಬೇಕು. ಸತಿ ಪದ್ಧತಿ, ದೇವದಾಸಿ ಪದ್ಧತಿ, ಅನುಷ್ಠಾನಕ್ಕೆ ತರಬೇಕು. ಈ ಮೂಲಕ ಅತ್ಯಾಚಾರವನ್ನು ತಪ್ಪಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಅತ್ಯಾಚಾರಗಳು ನಡೆಯುತ್ತಿದ್ದರೂ ಅದು ಮಾಧ್ಯಮಗಳಲ್ಲಿ ಸುದ್ದಿಯಾಗೂದಿಲ್ಲ. ಅದನ್ನು ಅತ್ಯಾಚಾರಕ್ಕೊಳಗಾದ ನಗರ ಪ್ರದೇಶದ ಹೆಣ್ಣುಮಕ್ಕಳೂ ಪಾಲಿಸಬೇಕು. ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳು ಯಾವಕಾರಣಕ್ಕೂ ಪೊಲೀಸ್ ಕೇಸು ದಾಖಲಿಸಕೂಡದು. ಹೆಣ್ಣು ಮಕ್ಕಳು ಇಂಗ್ಲಿಷ್ ಕಲಿಯಬಾರದು...ಬರೇ ಸಂಸ್ಕೃತ ಮಾತ್ರ ಕಲಿಯಬೇಕು...ಆಗ ಅತ್ಯಾಚಾರದ ಸಂಖ್ಯೆ ಕಡಿಮೆಯಾಗುತ್ತದೆ...ಮಾತು ಮಾತಿಗೆ ರೇಪ್ ರೇಪ್ ಎಂದು ಬೊಬ್ಬಿಟ್ಟು ಭಾರತವನ್ನು ಇಂಡಿಯಾ ಮಾಡಬಾರದು....’’
‘‘ರೇಪ್‌ನ್ನು ಮತ್ತೆ ಹೇಗೆ ಕರೆಯಬೇಕು ಸಾರ್....?’’
ಭಾಗವತ್ ಈಗ ಹಸನ್ಮುಖರಾದರು ‘‘ನೋಡ್ರಿ...ರೇಪ್ ಮಾಡಿದವರು ಮೇಲ್ವರ್ಣೀಯರು, ರೇಪ್‌ಗೊಳಗಾದವರು ಕೆಳವರ್ಣದ ಜನರಾದರೆ ಅದನ್ನು ರೇಪ್ ಎಂದು ಭಾರತದಲ್ಲಿ ಕರೆಯುವುದಿಲ್ಲ. ಯಾಕೆಂದರೆ ಕೆಳಜಾತಿಯನ್ನು ಅನುಭವಿಸುವುದು ಮೇಲ್ಜಾತಿಯವರ ಹಕ್ಕು ಎಂದು ಮನು ಹೇಳಿದ್ದಾನೆ. ಅದರ ವಿರುದ್ಧ ಧ್ವನಿಯೆತ್ತುವುದೆಂದರೆ ಭಾರತೀಯ ಸಂಸ್ಕೃತಿಯ ವಿರುದ್ಧ ಧ್ವನಿಯೆತ್ತುವುದು ಎಂದು ಅರ್ಥ. ಹಾಗೆಯೇ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದರೆ ಅದನ್ನು ಭಾರತೀಯರ ಆತ್ಮಾಭಿಮಾನದ ಸಂಕೇತವಾಗಿ ಪರಿಗಣಿಸಲಾಗುವುದು....ಅತ್ಯಾಚಾರಕ್ಕೊಳಗಾದ ಯಾವುದೇ ಹೆಣ್ಣುಮಕ್ಕಳು ಅದನ್ನು ಬಹಿರಂಗಪಡಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ....ಅವರು ಬೆಂಕಿಯ ಕುಂಡಕ್ಕೆ ಹಾಕಿ ತಮ್ಮ ಮಾನವನ್ನು, ಪಾತಿವ್ರತ್ಯವನ್ನು ಪರೀಕ್ಷೆ ಮಾಡಬಹುದು....ಹಾಗೆಯೇ ಭಾರತದ ಎಲ್ಲ ಮನೆಗಳ ಅಂಗಳದಲ್ಲಿ ಆರೆಸ್ಸೆಸ್‌ನ ಪರವಾಗಿ ಒಂದು ಗೆರೆಯನ್ನು ಎಳೆಯಲಾಗುವುದು...’’
‘‘ಯಾಕೆ ಸಾರ್? ಹೆಣ್ಣು ಮಕ್ಕಳು ಕುಂಟೆ ಬಿಲ್ಲೆ ಆಡುವುದಕ್ಕಾ??’’
‘‘ಅದು ಲಕ್ಷ್ಣಣ ರೇಖೆ ಕಣ್ರೀ. ರಾಮಾಯಣದಲ್ಲಿ ಸೀತೆಗೆ ಲಕ್ಷಣ ಎಳೆದ ರೇಖೆಯನ್ನು ಎಲ್ಲರ ಮನೆಯ ಅಂಗಳದಲ್ಲಿ ಎಳೆಯಲಾಗುವುದು. ಅದನ್ನು ದಾಟಿ ಹೊರಗೆ ಬಂದರೆ, ಆಕೆಗೆ ಯಾವುದೇ ಅನ್ಯಾಯವಾದರೂ ಅವಳೇ ಹೊಣೆಯಾಗುತ್ತಾಳೆ. ಲಕ್ಷ್ಮಣ ರೇಖೆ ದಾಟಿದೆ ಸೀತೆಗೆ ಏನೆಲ್ಲ ಗತಿಯಾಯಿತೋ, ಅದನ್ನು ಅನುಭವಿಸಲು ಭಾರತದ ಮಹಿಳೆಯರು ಸಿದ್ಧರಾಗಬೇಕು...ಯಾರಿಗಾದರೂ ಭಿಕ್ಷೆ ಕೊಡುವುದಿದ್ದರೂ ಆ ಮೂರು ಗೆರೆಯ ಒಳಗೆ ನಿಂತು ಭಿಕ್ಷೆ ಕೊಡಬೇಕು...’’
‘‘ಯಾರಾದರೂ ಮನೆಯೊಳಗೇ ಬಂದು ಅತ್ಯಾಚಾರ ಮಾಡಿದರೆ?’’ ಕಾಸಿ ಕೇಳಿದ.
‘‘ಸೀತೆ ಮಾಡಿದ ಹಾಗೆ ಬೆಂಕಿ ಕುಂಡಕ್ಕೆ ಹಾರಿ ಎಲ್ಲ ಹೆಣ್ಣು ಮಕ್ಕಳು ತಮ್ಮ ಪಾತಿವ್ರತ್ಯವನ್ನು ಸಾಬೀತು ಪಡಿಸಬೇಕು....’’
‘‘ಸಾರ್, ನಿಮ್ಮ ಭಾರತದಲ್ಲಿ ಸಾಮೂಹಿಕವಾಗಿ ಬಸ್‌ನಲ್ಲಿ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಏನು ಶಿಕ್ಷೆ ಸಾರ್?’’
 ‘‘ಭಾರತೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಮಹಿಳೆಯರಿಗೆ ಪಾಠ ಕಲಿಸಿದ್ದಕ್ಕಾಗಿ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ...’’ ಎಂದದ್ದೇ ಪತ್ರಕರ್ತ ಎಂಜಲು ಕಾಸಿ, ಬದುಕಿದೆಯಾ ಬಡ ಜೀವ ಎಂದು ಭಾರತದಿಂದ ಇಂಡಿಯಾದ ಕಡೆಗೆ ಓಡತೊಡಗಿದ.