Saturday, November 30, 2013

‘ಎರಡು ನ್ಯಾನೋ ಕಾರಿದ್ದರೆ ಅವರು ಅತಿ ಬಡವರು’

(ಈ ಬುಡಬುಡಿಕೆ ಜನವರಿ, 13, 2008ರಲ್ಲಿ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪಶ್ಚಿಮಬಂಗಾಳದಲ್ಲಿ ಟಾಟಾ ನ್ಯಾನೋ ಕಾರು ವಿವಾದವೆದ್ದಾಗ, ಭೂಮಿ ಬಿಡಲು ಒಪ್ಪದ ರೈತರ ಮೇಲೆ ಅಲ್ಲಿನ ಕಮ್ಯುನಿಸ್ಟ್ ಸರಕಾರ ಗುಂಡು ಹಾರಿಸಿದಾಗ ಬರೆದದ್ದು. ಸುಮ್ಮಗೆ ಹಳೆಯದನ್ನೊಮ್ಮೆ ನೆನಪಿಸುವುದಕ್ಕಾಗಿ....ಇಲ್ಲಿ ಕಾಗೆ ಹಾರಿಸಿದ್ದೇನೆ....)


‘ಕ್ರಾಂತಿ’ ‘ಕ್ರಾಂತಿ’ ‘ಕ್ರಾಂತಿ’ ಹೀಗೆ ಪತ್ರಿಕೆಗಳಲೆಲ್ಲಾ ಕ್ರಾಂತಿಯ ತಲೆ ಬರಹಗಳು ಕಾಣಿಸಿಕೊಂಡದ್ದೇ ಮಲೆನಾಡಿನ ಕಾಡಿನಲ್ಲಿ ಅವಿತುಕೊಂಡಿದ್ದ ನಕ್ಸಲೀಯರೆಲ್ಲ ಕಂಗಾಲಾದರು. ನಕಲಿ ಎನ್‌ಕೌಂಟರ್ ಭಯದಿಂದ ನಾವಿಲ್ಲಿ ಅಲುಗಾಡದೆ ಕಾಡಿನಲ್ಲಿ ದಿಗ್ಭಂಧನಕ್ಕೊಳಗಾಗಿರುವಾಗ ನಾಡಿನಲ್ಲಿ ಕ್ರಾಂತಿ ಮಾಡುತ್ತಿರುವವರು ಯಾರಾಗಿರಬಹುದು? ನಮ್ಮ ಹೆಸರಿನಲ್ಲಿ ಮತ್ತೆ ಯಾರಾದರೂ ಮನೆಗಳಿಗೆ ನುಗ್ಗಿದರೋ? ಅಥವಾ ನಮ್ಮಿಂದ ಸಿಡಿದವರು ಹೊಸತಾಗಿ ಗುಂಪು ಕಟ್ಟಿ ಬಂಡವಾಳ ಶಾಹಿಗಳ ವಿರುದ್ಧ ಕೋವಿ ಎತ್ತಿರಬಹುದೋ, ನಮ್ಮ ಹೆಸರಿನಲ್ಲಿ ಬೇರೆಯಾರಾದರೂ ಪತ್ರಿಕಾ ಹೇಳಿಕೆ ನೀಡಿರಬಹುದೋ... ಹೀಗೆ ಸಾವಿರಾರು ಪ್ರಶ್ನೆಗಳು ಅವರನ್ನು ಕಾಡಿತು. ಅಷ್ಟರಲ್ಲಿ ಒಬ್ಬಾತ ನುಡಿದ ‘‘ಇದು ಬೇರೆ ಕ್ರಾಂತಿ ಸಂಗಾತಿಗಳೇ... ಪತ್ರಿಕೆಗಳು ಬರೆಯುತ್ತಿರುವುದು ಮಾವೋ ಕ್ರಾಂತಿಯ ಬಗ್ಗೆಯಲ್ಲ...’’
ನಕ್ಸಲ್ ನಾಯಕನಿಗೆ ಅರ್ಥವಾಗಲಿಲ್ಲ. ‘‘ಕಾರ್ಲ್ ಮಾರ್ಕ್ಸ್‌ವಾದಿಗಳ ಕ್ರಾಂತಿಯ ಬಗ್ಗೆ ಬರೆದಿದ್ದಾರೆಯೆ?’’
ಸಂಗಾತಿ ನುಡಿದ ‘‘ಇದು ಕಾರ್ಲ್ ಮಾರ್ಕ್ಸ್‌ವಾದಿಗಳ ಬಗ್ಗೆ ಅಲ್ಲ... ಕಾರ್ ಮಾರ್ಕ್ಸ್‌ವಾದಿಗಳ ಬಗ್ಗೆ....’’
ನಾಯಕನಿಗೆ ತಲೆ ಬಿಸಿಯಾಯಿತು. ‘‘ಅದು ಯಾವುದು ಕಾರ್ ಮಾರ್ಕ್ಸ್‌ವಾದಿಗಳು... ಮಾರ್ಕ್ಸ್‌ವಾದಿಗಳ ಇನ್ನೊಂದು ಗುಂಪೇ ? ಯಾರದರ ನಾಯಕ?’’
ಸಂಗಾತಿ ವಿವರಿಸಿದ ‘‘ ಈ ಗುಂಪು ಕ್ರಾಂತಿ ಮಾಡಲು ಹೊರಟಿರುವುದು ಕೋವಿಯಲ್ಲಲ್ಲ. ಕಾಮ್ರೇಡ್.. ಕಾರ್‌ನಲ್ಲಿ. ಈ ಕಾರ್ ಕ್ರಾಂತಿಗೆ ಕಾರ್ಲ್‌ಮಾಕ್ಸ್ ಬೆಂಬಲವಿದೆಯಂತೆ. ಇನ್ನು ಮುಂದೆ ಕಾರ್ಲ್‌ಮಾಕ್ಸ್ ಎನ್ನುವ ಹೆಸರನ್ನು ಕಾರಲ್ಲಿ ಮಾರ್ಕ್ಸ್ ಎಂದು ತಿದ್ದಿ ಓದಲಾಗುವುದೆಂದು ಪಶ್ಚಿಮಬಂಗಾಳದ ಕಮ್ಯುನಿಷ್ಟ್ ನಾಯಕರು ಹೇಳಿಕೆ ನೀಡಿದ್ದಾರೆ.’’
ನಾಯಕನಿಗೆ ಅರ್ಥವಾಗಲಿಲ್ಲ ‘‘ ರಸ್ತೆ ಅಪಘಾತದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ಗಮನಿಸಿದರೆ, ನಮ್ಮ ಕೋವಿಗಿಂತ ಕಾರೇ ಹಿಂಸೆಗೆ ಹೆಚ್ಚು ಅನುಕೂಲ. ಆದುದರಿಂದ ನಮ್ಮ ಪಶ್ಚಿಮ ಬಂಗಾಳದ ಸಂಗಾತಿಗಳು ಕ್ರಾಂತಿಗೆ ಕಾರನ್ನು ಬಳಸಲು ಹೊರಟಿರಬೇಕು...’’
ಸಂಗಾತಿ ನುಡಿದ ‘‘ಬಡವರ ಕೈಗೆಟಕುವ ದರದಲ್ಲಿ ಕಾರನ್ನು ಉತ್ಪಾದಿಸುತ್ತಿದ್ದಾರಂತೆ. ಈ ಕಾರಿಗೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಬೆಂಬಲ ನೀಡಿದ್ದಾರೆ. ಬಡವರಿಗೆ ಕಾರು ಎಟಕುತ್ತದೆ ಎಂದ ಮೇಲೆ ಅದು ಕ್ರಾಂತಿಯೇ ತಾನೆ... ಇದೀಗ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಬದಲಿಗೆ ಸಿಪಿಐ(ಟಿ) ಎಂದು ಕರೆಯಲಾಗುತ್ತದೆಯಂತೆ...’’
‘‘ಟಿ ಎಂದರೆ?’’
‘‘ಟಿ ಎಂದರೆ ಟಾಟಾ ಅಂತ. ಇನ್ನು ಮುಂದೆ ಸಿಪಿಐಎಂ ಟಾಟಾ...’’
‘‘ಹಾಗಾದರೆ ಮಾರ್ಕ್ಸ್...’’
‘‘ಅವನಿಗೆ ಈಗಾಗಲೇ ಟಾಟಾ ಹೇಳಿಯಾಗಿದೆ...ಅವರ ಸ್ಥಾನದಲ್ಲಿ ಟಾಟಾವನ್ನೇ ಶಾಶ್ವತವಾಗಿ ನಿಲ್ಲಿಸಲಾಗುತ್ತದೆಯಂತೆ...’’
                ***
ರತನ್ ಟಾಟಾ ಬೆಳಗ್ಗೆ ಎದ್ದಾಗ ಅವರ ಪುಟ್ಟ ಮೊಮ್ಮಗಳು ಏನೋ ಬರೆಯುತ್ತಿದ್ದಳು. ಟಾಟಾ ಮೆಲ್ಲಗೆ ಮೊಮ್ಮಗಳ ಹತ್ತಿರ ಹೋಗಿ’’ ಪುಟ್ಟಿ ಏನು ಬರೆಯುತ್ತಿದ್ದೀಯಮ್ಮ...?’’ ಎಂದು ಕೇಳಿದರು.
ಪುಟ್ಟಿ ಹೇಳಿದಳು ‘‘ಕತೆ ಬರೆಯುತ್ತಿದ್ದೇನೆ ತಾತಾ...’’
‘‘ಯಾರ ಕತೆ ಪುಟ್ಟಿ?’’
‘‘ಬಡವರ ಕತೆ ತಾತಾ’’
ಟಾಟಾಗೆ ಖುಷಿಯಾಯಿತು. ತನ್ನ ಹಾಗೆಯೇ ಈಕೆಯೂ ಬಡವರ ಕುರಿತಂತೆ ಆಲೋಚಿಸುವುದು ನೋಡಿದರೆ, ನನ್ನ ಮೊಮ್ಮಗಳು ದೊಡ್ಡ ಉದ್ಯಮಿಯಾಗುವುದು ಗ್ಯಾರಂಟಿ ಅನ್ನಿಸಿತು. ‘‘ಇಲ್ಲಿ ಕೊಡಮ್ಮ ನಾನೊಮ್ಮೆ ಓದಿ ಕೊಡುತ್ತೇನೆ’’ ಎಂದರು. ಪುಟ್ಟಿ ಕೊಟ್ಟಳು.
‘‘ಒಂದಾನೊಂದು ಊರಿನಲ್ಲಿ ಒಬ್ಬ ದಟ್ಟ ದರಿದ್ರ ಬಡವನಿದ್ದ. ಅವನು ಅದೆಷ್ಟು ಬಡವನಾಗಿದ್ದ ಎಂದರೆ ಓಡಾಡುವದಕ್ಕೆ ಅವನಲ್ಲಿ ಒಂದೇ ಒಂದು ‘ನ್ಯಾನೋ’ ಕಾರು ಇತ್ತು. ಅವರ ಮನೆ ಅದೆಷ್ಟು ಸಣ್ಣದಾಗಿತ್ತು ಎಂದರೆ, ಅಲ್ಲಿ ಒಂದು ಹೂವಿನ ಗಾರ್ಡನ್ ಕೂಡಾ ಇದ್ದಿರಲ್ಲಿಲ್ಲ. ಮನೆಗೆ ಎಸಿ ಕೂಡ ಇದ್ದಿರಲಿಲ್ಲ. ಪಾಪ ಅವನ ಮಕ್ಕಳಿಗೆ ಓದುವುದಕ್ಕೆ ಮನೆಯಲ್ಲಿ ರೀಡಿಂಗ್ ರೂಮ್ ಕೂಡಾ ಇದ್ದಿರಲಿಲ್ಲ. ಆ ಬಡವನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಆಳು ಕೂಡಾ ಇದ್ದಿರಲಿಲ್ಲ. ಆದುದರಿಂದ ಬಡವನ ಹೆಂಡತಿಯೇ ಅಡುಗೆ ಕೆಲಸ ಮಾಡಬೇಕಾಗಿತ್ತು....’’
 ಟಾಟಾಗೆ ಕತೆ ಓದುತ್ತಾ ಓದುತ್ತಾ ಕಣ್ಣೀರು ಉಕ್ಕಿ ಬಂತು. ಈ ದೇಶದಲ್ಲಿ ಬಡವರು ಎಷ್ಟು ಕಷ್ಟ ಪಡುತ್ತಿದ್ದಾರೆ ಅನ್ನಿಸಿತು. ತನ್ನ ಮೊಮ್ಮಗಳು ಬಡವರ ಬಗ್ಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ಅಚ್ಚರಿಯೂ ಆಯಿತು. ತನ್ನ ಮೊಮ್ಮಗಳ ಹೆಸರಿನಲ್ಲಿ ಕಡಿಮೆ ದರಕ್ಕೆ ಫ್ರಿಜ್ಜು, ಕಡಿಮೆ ಬೆಲೆಯ ಎಸಿ ಇತ್ಯಾದಿಗಳನ್ನು ಅತಿ ಬಡವರಿಗಾಗಿ ಸಿದ್ಧಗೊಳಿಸುವ ನಿರ್ಧಾರವನ್ನು ಅದಾಗಲೇ ಅವರು ತೆಗೆದುಕೊಂಡಾಗಿತ್ತು.
                ***
ರಾಜ್ಯದಲ್ಲಿ ನ್ಯಾನೋ ಕಾರು ಬಿಡುಗಡೆಯಾದದ್ದೇ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದರು. ಎಂಜಲು ಕಾಸಿ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾದ. ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯ ಮಜಾ ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಸಿಗುತ್ತಿರಲಿಲ್ಲ. ಮುಖ್ಯವಾಗಿ ರಾಜ್ಯಪಾಲರು ತರಿಸುವ ಟೀ ಜೊತೆಗಿರುವ ಇಡ್ಲಿಯ ಚಟ್ನಿ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅದಲ್ಲದೆ, ಮುಖ್ಯಮಂತ್ರಿಗಳಾದರೆ, ಪಕ್ಕಕ್ಕೆ ಕರೆದು ನೂರೋ ಇನ್ನೂರೋ ಕಿಸೆಗೆ ತಳ್ಳಿಬಿಡುತ್ತಿದ್ದರು. ಆ ಸೌಜನ್ಯವೂ ರಾಜ್ಯಪಾಲರಲ್ಲಿರಲಿಲ್ಲ. ಆದರೂ ಸಂಪಾದಕ ಒತ್ತಡದಿಂದಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ. ರಾಜ್ಯಪಾಲರು ಅದಾಗಲೇ ಪತ್ರಿಕಾಗೋಷ್ಠಿಯನ್ನು ಆರಂಭಿಸಿ ಬಿಟ್ಟಿದ್ದರು. ಅವರ ಮುಖದಲ್ಲಿ ಸಂಭ್ರಮ ಕುಣಿಯುತ್ತಿತ್ತು.
‘‘ರಾಜ್ಯದ ಬಡವರ ಪಾಲಿಗೆ ಇದೊಂದು ಸುದಿನ. ನನ್ನ ಆಳ್ವಿಕೆಯಲ್ಲಿ ಇಂತಹ ದಿನವೊಂದು ಬಂದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನ್ಯಾನೋ ಕಾರು ಬಿಡುಗಡೆಗೊಂಡಿರುವುದರಿಂದ ದೂರ ದೂರದ ಹಳ್ಳಿಗಳಿಂದ ಜನತಾದರ್ಶನಕ್ಕೆ ಬರುವ ಬಡವರಿಗೆ ತುಂಬಾ ಅನುಕೂಲವಾಗಲಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಲು ಈ ನ್ಯಾನೋ ಕಾರಿನಲ್ಲೇ ಆಗಮಿಸಬಹುದು. ಹಾಗೆಯೇ ಜನತಾದರ್ಶನಕ್ಕೆಂದು ಬಂದವರು ತಮ್ಮ ಕೆಲಸ ಮುಗಿದ ಬಳಿಕ ಬೆಂಗಳೂರನ್ನು ಸುತ್ತಾಡಿಕೊಂಡೂ ಹೋಗಬಹುದು. ಇನ್ನು ಮುಂದೆ ನ್ಯಾನೋ ಕಾರು ಯಾರೆಲ್ಲಾ ಹೊಂದಿದ್ದಾರೋ ಅವರನ್ನೆಲ್ಲ ಬಡತನ ರೇಖೆಗಿಂತ ಕೆಳಗಿನವರೆಂದು ಗುರುತಿಸಲಾಗುತ್ತದೆ. ಬಡವರೊಂದೂ, ಬಡತನ ರೇಖೆಗಿಂತ ಕೆಳಗಿನವರೆಂದೂ ಗುರುತಿಸಬೇಕಾದರೆ ಅವರು ಕಡ್ಡಾಯವಾಗಿ ‘ನ್ಯಾನೋ’ ಕಾರನ್ನು ಹೊಂದಿರಬೇಕಾಗುತ್ತದೆ. ಯಾರೆಲ್ಲ ನ್ಯಾನೋ ಕಾರು ಹೊಂದಿಲ್ಲವೋ ಅವರ ಹಸಿರು ಕಾರ್ಡನ್ನು ಹಿಂದಕ್ಕೆ ಪಡೆಯಲಾಗುತ್ತದೆ...’’
ಸಾಲ ಸೋಲ ಮಾಡಿಯಾದರೂ ನ್ಯಾನೋ ಕಾರು ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿತು ಎಂಜಲು ಕಾಸಿಗೆ. ಇಲ್ಲವಾದರೆ ಅವನ ಮನೆಯ ಹಸಿರು ಕಾರ್ಡು ವಜಾ ಆಗುವ ಅಪಾಯವಿತ್ತು. ಅದನ್ನು ನೆನೆಸಿಕೊಂಡೇ ಕೇಳಿದ ‘‘ಒಂದು ವೇಳೆ ಕೆಲವರಲ್ಲಿ ಎರಡು ನ್ಯಾನೋ ಕಾರು ಇದ್ದರೆ...’’
ರಾಜ್ಯಪಾಲರಲ್ಲಿ ಉತ್ತರ ಸಿದ್ಧವಿತ್ತು. ‘‘ನೋಡಿ, ಒಂದು ನ್ಯಾನೋ ಕಾರು ಇದ್ದರೆ ಅವರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಎರಡು ನ್ಯಾನೋ ಕಾರು ಇದ್ದರೆ ಅವರನ್ನು ಅತಿ ಬಡವರು ಎಂದು ಗುರುತಿಸಲಾಗುತ್ತದೆ. ಅಂತವರನ್ನು ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ನಾವು ಗುರುತಿಸುತ್ತೇವೆ...’’
‘‘ನ್ಯಾನೋ ಕಾರು ಇಲ್ಲದೇ ಇದ್ದರೆ...’’
ರಾಜ್ಯಪಾಲರು ಕಡ್ಡಿ ಮುರಿದಂತೆ ಹೇಳಿದರು ‘‘ಯಾರಲ್ಲೆಲ್ಲಾ ಬಡವರಿಗಾಗಿ ತಯಾರಿಸಿರುವ ನ್ಯಾನೋ ಕಾರು ಇಲ್ಲವೋ ಅವರನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮತ್ತು ಅವರ ಮೇಲೆ ತೆರಿಗೆಗಳನ್ನು ಹಾಕಲಾಗುತ್ತದೆ. ಆದುದರಿಂದ ಇನ್ನೂ ಎರಡು ತಿಂಗಳ ಒಳಗಾಗಿ ಎಲ್ಲ ಬಡವರು ನ್ಯಾನೋ ಕಾರುಗಳನ್ನು ಕೊಂಡು ತಾವು ಬಡವರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ’’ ಎನ್ನುತ್ತಾ ಎದ್ದು ನಿಂತರು. ಅಷ್ಟರಲ್ಲಿ ಶೀರ, ಉಪ್ಪಿಟ್ಟು ಹಿಡಿದುಕೊಂಡು ಬಂದರು. ಎಂಜಲು ಕಾಸಿ ಎಂಜಲು ಸುರಿಸುತ್ತಾ ಆ ಕಡೆಗೆ ತಿರುಗಿದ.
(ಜನವರಿ, 13, 2008, ರವಿವಾರ)

ನನ್ನವರೇ ನನ್ನನ್ನು ಸದನದ ಬಾವಿಗೆ ನೂಕಿದ್ರೂ....

ಯಾರೋ ಬಾವಿಯೊಳಗಿಂದ ಕಾಪಾಡಿ ಕಾಪಾಡಿ ಎಂದು ಕೂಗಿದಂತಾಯಿತು.
ಅರೇ! ಬಾವಿಯೊಳಗಿಂದ ಯಾರೋ ಕೂಗಿದಂತೆ ಕೇಳುತ್ತಿದೆ. ಯಾರಿದು? ಪರಿಚಿತ ಧ್ವನಿ. ಪತ್ರಕರ್ತ ಎಂಜಲು ಕಾಸಿ ತಲೆಕೆರೆದುಕೊಂಡ. ಅತ್ತಿತ್ತ ನೋಡಿದರೆ, ದೂರದ ಸದನದ ಬಾವಿಯಲ್ಲಿ ಕೂತು ಯಡಿಯೂರಪ್ಪ ‘‘ಕಾಪಾಡಿ ಕಾಪಾಡಿ’ ಎಂದು ಕೂಗುತ್ತಿದ್ದಾರೆ. ಸದನದಲ್ಲೇ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಇದ್ದರೂ ಯಾರೂ ಅವರನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡುತ್ತಿಲ್ಲ.
ಬಾವಿಯ ಮೇಲಿನಿಂದಲೇ ನಿಂತು ಪತ್ರಕರ್ತ ಎಂಜಲು ಕಾಸಿ ಕೇಳಿದ ‘‘ಸಾರ್...ಏನಿದು ನೀವಿಲ್ಲಿ? ಸದನದಲ್ಲಿ ಚರ್ಚೆ ನಡೆಸುವುದು ಬಿಟ್ಟು ಬಾವಿಯೊಳಗೆ ಬಿದ್ದು ಬಿಟ್ಟಿದ್ದೀರಲ್ಲ? ಯಾರು ಸಾರ್ ನೂಕಿದ್ದು?’’
ಯಡಿಯೂರಪ್ಪ ಅಲ್ಲಿಂದಲೇ ಸಿಟ್ಟಾದರು ‘‘ನಾನಿಲ್ಲಿ ಬಾವಿಗೆ ಬಿದ್ದಿದ್ದೇನೆ...ನೀನು ಮೇಲೆ ನಿಂತು ಕಷ್ಟ ಸುಖ ಮಾತನಾಡ್ತಾ ಇದ್ದೀಯ? ಮೊದಲು ನನ್ನನ್ನು ಮೇಲೆತ್ತುವ ಪ್ರಯತ್ನ ಮಾಡು...ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಹೇಳ್ತೇನೆ...’’
‘‘ಬಾವಿಗೆ ಹಗ್ಗ ಇಳಿಸಲಾ ಸಾರ್?’’ ಕಾಸಿ ಅವಸರದಿಂದ ಕೇಳಿದ.
‘‘ಅಂಬರೀಷ್ ಹಗ್ಗ ಇಳಿಸಿದರು. ಆಗಲೇ ನಾನು ಮೇಲೆ ಹತ್ತಲಿಲ್ಲ. ಇನ್ನು ಚಿಲ್ಲರೆ ಪತ್ರಕರ್ತ ನೀನು ಹಗ್ಗ ಇಳಿಸಿದರೆ ಮೇಲೆ ಹತ್ತುತ್ತೀನಾ?’’ ಯಡಿಯೂರಪ್ಪ ಕೇಳಿದರು.
‘‘ಹಾಗಾದರೆ ದೊಡ್ಡ ಪತ್ರಕರ್ತ ತರುಣ್ ತೇಜ್‌ಪಾಲ್‌ರನ್ನು ಕರೆಸ್ಲಾ ಸಾರ್...?’’ ಕಾಸಿ ವ್ಯಂಗ್ಯದಿಂದ ಕೇಳಿದ.
‘‘ಅವನು ನನಗಿಂತ ದೊಡ್ಡ ಬಾವಿಗೆ ಬಿದ್ದಿದ್ದಾನೆ. ನನ್ನನ್ನು ಅವನು ಮೇಲೆತ್ತುವುದು ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಹಗ್ಗ ಇಳಿಸಿದ್ರೆ ಮೇಲೆ ಬರುತ್ತೇನೆ...,’’ ಯಡಿಯೂರಪ್ಪ ಸದನದ ಬಾವಿಯಿಂದಲೇ ಕೂಗಿ ಹೇಳಿದರು.
‘‘ಸಾರ್...ಅದಿರ್ಲಿ, ಬಾವಿಗೆ ಯಾಕೆ ಹಾರಿದ್ರಿ...?’’ ಕಾಸಿ ಕೇಳಿದ.
‘‘ಅದೇರಿ, ಹಳೇ ಸಮಸ್ಯೆ...ಮದುವೆ ಪ್ರಾಬ್ಲೆಮ್ಮು...’’ ಯಡಿಯೂರಪ್ಪ ಹೇಳಿದರು.
‘‘ಶೋಭಕ್ಕ ಏನಾದ್ರು ಅಂದ್ರಾ ಸಾರ್...ಅಥವಾ ವರದಕ್ಷಿಣೆ ಸಮಸ್ಯೆನಾ ಸಾರ್?’’ ಕಾಸಿ ಮೆಲ್ಲಗೆ ಕೇಳಿದ.
‘‘ಏನ್ರಿ ಹಾಗಂದ್ರೆ...?’’
‘‘ಅದೇ ಸಾರ್...ವರದಕ್ಷಿಣೆ ಕಡಿಮೆ ಆಯಿತು ಅಂತ ಸೊಸೆಯನ್ನು ಬಾವಿಗೆ ನೂಕ್ತಾರಲ್ಲ...ಹಂಗೇನಾದ್ರೂ ನೂಕಿದ್ರಾ ಸಾರ್?’’
‘‘ನನ್ನನ್ನು ನನ್ನವರೇ ಬಾವಿಗೆ ನೂಕಿದ್ರು ಕಣ್ರೀ...ಬಿಜೆಪಿ ಎನ್ನೋ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದೇನೆ ಕಣ್ರೀ...’’ ಎನ್ನುತ್ತಾ ಅಳತೊಡಗಿದರು.
‘‘ಜೋರಾಗಿ ಅಳಬೇಡಿ ಸಾರ್...ಬಾವಿಯಲ್ಲಿ ನೀರು ತುಂಬಿ ನೀವು ಮುಳುಗಿ ಬಿಟ್ಟೀರಿ...’’ ಕಾಸಿ ಸಮಾಧಾನ ಮಾಡಿದ.
‘‘ಇದು ಪಾಳು ಬಾವಿ ಕಣ್ರೀ...ಅದಕ್ಕೆ ಹಾರಿದ್ದೇನೆ. ಶಾದಿ ಭಾಗ್ಯದಲ್ಲಿ ಕೆಜೆಪಿಗೂ ಒಂದು ಪಾಲು ಕೊಡ ಬೇಕು ಎಂದು ಬಾವಿಗೆ ಬಿದ್ದಿದ್ದೇನೆ. ಈಗ ನೋಡಿದ್ರೆ... ಯಾರೂ ನನ್ನನ್ನು ಮೇಲೆ ಎತ್ತುತ್ತಾ ಇಲ್ಲ...ಇದು ನ್ಯಾಯವೇನ್ರಿ...’’
‘‘ಪರವಾಗಿಲ್ಲ ಸಾರ್..ಪಾಳು ಬಾವಿ ತಾನೆ... ಅಧಿವೇಶನ ಮುಗಿಯುವವರೆಗೆ ಅದರೊಳಗೆ ನೆಮ್ಮದಿ ಯಿಂದ ನಿದ್ದೆ ಮಾಡಿ. ಯಾರೂ ನೋಡೋಲ್ಲ...’’
‘‘ಆದ್ರೆ ಹೊರಗಡೆ ರೈತನೊಬ್ಬ ನಾನು ಬಾವಿಗೆ ಬಿದ್ದುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಕಣ್ರೀ...ಆದ್ರೂ ಸಿದ್ದರಾಮಯ್ಯ ನನ್ನನ್ನು ಮೇಲೆತ್ತೋದಕ್ಕೆ ಮುಂದೆ ಬಂದಿಲ್ಲ. ನಿರ್ದಯಿ ಕಣ್ರೀ...ಒಂದಿಷ್ಟು ಕರುಣೆ ಇಲ್ಲ ಕಣ್ರೀ...’’ ಎನ್ನುತ್ತಾ ‘‘ದಯೆಯೇ ಧರ್ಮದ ಮೂಲವಯ್ಯ, ನೀನಾರವ ನೀನಾರವ ಎನ್ನದಿರು, ನೀ ನಮ್ಮವ...’’ ಎನ್ನುವ ವಚನವನ್ನು ಬಾವಿಯಲ್ಲಿ ಕೂತು ಹಾಡತೊಡಗಿದರು.
‘‘ಆದರೆ ಹೊರಗಡೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಬ್ಬುಬೆಲೆ ಸರಿಯಾಗಿ ಸಿಗ್ತಾ ಇಲ್ಲ ಎನ್ನುವ ಕಾರಣಕ್ಕಾಗಿ ಸಾರ್...’’ ಎಂಜಲು ಕಾಸಿ ತಿದ್ದಿದ.
ಯಡಿಯೂರಪ್ಪ ಸಿಟ್ಟಾದರು ‘‘ಏನ್ರಿ...ಸಿದ್ದರಾಮಯ್ಯ ಜೊತೆಗೆ ನೀವು ರಾಜಕೀಯ ಮಾಡ್ತಾ ಇದ್ದೀರಾ... ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಅಭಿಮಾನಿ ಕಬ್ಬು ಬೆಳೆಗಾರ...ಎರಡೂ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ...ಒಂದು ಕಬ್ಬಿಗೆ ಬೆಂಬಲ ಬೆಲೆ. ಇನ್ನೊಂದು ಯಡಿಯೂರಪ್ಪಗೆ ಬೆಂಬಲ ಬೆಲೆ....’’
‘‘ನಿಮಗೆ ಕನಿಷ್ಠ ಬೆಂಬಲ ಬೆಲೆ ಎಷ್ಟು ಸಿಗಬೇಕು... ಸಾರ್?’’ ಕಾಸಿ ಕೇಳಿದ.
ಯಡಿಯೂರಪ್ಪ ಆಲೋಚಿಸಿ ಹೇಳಿದರು ‘‘ನೋಡ್ರಿ...ನನ್ನ ಗರಿಷ್ಠ ಬೆಂಬಲ ಬೆಲೆ ಮುಖ್ಯಮಂತ್ರಿ ಸ್ಥಾನ. ಕನಿಷ್ಠ ಬೆಂಬಲ ಬೆಲೆ ವಿರೋಧ ಪಕ್ಷ ಸ್ಥಾನ. ಆದರೆ ಬಿಜೆಪಿಯೋರು ನನ್ನ ದುಡಿಮೆಗೆ ತಕ್ಕ ಬೆಂಬಲ ನೀಡದೆ ನನ್ನನ್ನು ಸದನದ ಬಾವಿಗೆ ತಳ್ಳಿ ಬಿಟ್ಟರು. ಇದರ ಪರಿಣಾಮವಾಗಿ ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ತಾ ಇದ್ದಾರೆ. ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ಳುವುದನ್ನು ತಡೆಯಬೇಕಾದರೆ ಯಡಿಯೂರಪ್ಪ ಅವರಿಗೆ ಕನಿಷ್ಠ ಬೆಂಬಲ ಬೆಲೆಯೊಂದನ್ನು ಎಲ್ಲರೂ ಸೇರಿ ಘೋಷಿಸಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ. ಹಾಗೆಯೇ ನಾನು ಬಾವಿಯಿಂದ ಮೇಲೆ ಬಂದು ಕುರ್ಚಿಯಲ್ಲಿ ಕೂರುವುದಕ್ಕೆ ಸಾಧ್ಯ....’’
‘‘ಸಾರ್...ರೈತರಿಗೆ ಬೆಂಬಲ ಬೆಲೆ ಸಿಗುವ ಸಾಧ್ಯತೆ ಯಿದೆ. ಆದರೆ ನಿಮಗೆ ಅದೇನಾದರೂ ಬೆಂಬಲ ಬೆಲೆ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ...’’ ಕಾಸಿ ಮೆಲ್ಲಗೆ ಯಡಿಯೂರಪ್ಪರನ್ನು ಹೆದರಿಸಿದ.
‘‘ಅದು ಯಾಕೆ ಕೊಡುವುದಿಲ್ಲವಂತೆ? ನನ್ನ ಪರವಾಗಿ ಇಡೀ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟನೆ ಮಾಡ್ತಾರೆ ನೆನಪಿಡಿ....’’
‘‘ಸಾರ್...ನಿಮಗಾಗಿ ರೈತರು ಯಾಕೆ ಪ್ರತಿಭಟನೆ ಮಾಡಬೇಕು? ನೀವು ತಾನೆ ರೈತರಿಗೆ ಗುಂಡಿಟ್ಟಿರು ವುದು...ಅಂತ ಮುಖ್ಯಮಂತ್ರಿ ಕೇಳ್ತಾ ಇದ್ದಾರೆ...’’ ಕಾಸಿ ಮೆಲ್ಲಗೆ ಚಿವುಟಿದ.
‘‘ನಾನು ಗುಂಡಿಕ್ಕುವುದಾದರೆ ರೈತರಿಗಲ್ಲ, ನೇರವಾಗಿ ಸಿದ್ದರಾಮಯ್ಯ, ಈಶ್ವರಪ್ಪ, ಎಲ್. ಕೆ. ಅಡ್ವಾಣಿ ಇವರಿಗೆಲ್ಲ ಗುಂಡಿಕ್ಕುತ್ತಿದ್ದೆ. ಅಂದು ಗುಂಡಿಕ್ಕದ ಫಲವಾಗಿ ಇಂದು ನನ್ನನ್ನು ಈ ಸ್ಥಿತಿಗೆ ತಂದು ಹಾಕಿದ್ದಾರೆ... ಬಿಡುವುದಿಲ್ಲ...ಇಂದು ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...ನಾಳೆ ಭತ್ತ ಬೆಳೆಗಾರ...ನಾಡಿದ್ದು ಅಡಿಕೆ ಬೆಳೆಗಾರ...ಹೀಗೆ ಎಲ್ಲರೂ ನನಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯ ಏನು ಮಾಡುತ್ತಾರೋ ನೋಡೋಣ...’’ ಯಡಿಯೂರಪ್ಪ ಬಾವಿಯೊಳಗಿಂದಲೇ ಶಪಥ ಹಾಕಿದರು.
ಅಷ್ಟರದಲ್ಲಿ ದೂರದಿಂದ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ, ಅನಂತಕುಮಾರ್ ಮೊದಲಾದವರು ಸದನದ ಬಾವಿಯ ಕಡೆಗೆ ಬರುವುದನ್ನು ಕಾಸಿ ನೋಡಿ ಕೂಗಿ ಹೇಳಿದ ‘‘ಸಾರ್ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಎಲ್ಲರೂ ಈ ಬಾವಿಯ ಕಡೆಗೆ ಧಾವಿಸಿ ಬರುತ್ತಿದ್ದಾರೆ....’’
ಯಡಿಯೂರಪ್ಪ ಬಾವಿಯೊಳಗಿಂದಲೇ ಖುಷಿ ಯಾದರು ‘‘ಗೊತ್ತಿತ್ತು. ಬರದೇ ಎಲ್ಲಿಗೆ ಹೋಗುತ್ತಾರೆ? ನನ್ನನ್ನು ಮೇಲೆ ಎತ್ತುವುದಕ್ಕೆ ಬರುತ್ತಿದ್ದಾರೆ ಹ್ಹಹ್ಹ...’’ ಎಂದು ನಗ ತೊಡಗಿದರು.
ಕಾಸಿ ಮತ್ತಷ್ಟು ಗಾಬರಿಯಿಂದ ಹೇಳಿದ ‘‘ಸಾರ್ ಅವರ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲಿದೆ ಸಾರ್...ನೀವು ಬಿದ್ದ ಬಾವಿಗೆ ಕಲ್ಲು ಹಾಕುವುದಕ್ಕೆ ಬರುತ್ತಿರಬೇಕು...’’
ಯಡಿಯೂರಪ್ಪ ‘‘ದ್ರೋಹಿಗಳು... ದ್ರೋಹಿಗಳು... ನಾನು ಬಾವಿಗೆ ಬಿದ್ದಿದ್ದರೆ ಎತ್ತೋದು ಬಿಟ್ಟು ಕಲ್ಲು ಹಾಕೋದಕ್ಕೆ ಬರುತ್ತಿದ್ದಾರೆ...’’ ಎಂದವರೇ ತಾವೇ ತಾವಾಗಿ ಸರಸರನೇ ಬಾವಿ ಏರಿ ಹೋಗಿ, ಸದನದ ಕುರ್ಚಿಯಲ್ಲಿ ಕುಳಿತುಕೊಂಡರು.
‘‘ಛೆ ಸ್ವಲ್ಪದರಲ್ಲಿ ಮಿಸ್ಸಾಗಿ ಹೋಯಿತು...’’ ಎಂದು ಸಿದ್ದರಾಯಮ್ಯ, ಈಶ್ವರಪ್ಪಾದಿಗಳು ಕೈ ಕೈ ಹಿಸುಕಿಕೊಂಡರು.